About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Wednesday, November 30, 2011

ಸಂಪ್ರದಾಯಗಳು, ವಿಜ್ಞಾನ ಹಾಗೂ ಧಾರ್ಮಿಕತೆ

ಓದುವ ಮುನ್ನ ವಿ.ಸೂ. ಈ ಲೇಖನ ಬರೆದದ್ದು ಸಂಪ್ರದಾಯಸ್ಥರ ಮನನೋಯಿಸುವ ಉದ್ದೇಶದಿಂದ ಬರೆದದ್ದಲ್ಲ, ದಯವಿಟ್ಟು ತಪ್ಪುತಿಳಿದುಕೊಳ್ಳಬೇಡಿ. ಆಚಾರಗಳ ಬಗ್ಗೆ ಆಳವಾಗಿ ಗೊತ್ತಿರುವವರು ಅವುಗಳನ್ನು ಸತ್ವ-ಸತ್ಯಗಳ ಬುನಾದಿಯ ಮೇಲೆ ಆಚರಿಸಿಕೊಂಡಿದ್ದರೆ ಅಂಥವರ ಮೇಲೆ ನನಗೆ ಅಗೌರವ ಇಲ್ಲ.
ದೊಡ್ಡವನಾಗುತ್ತಾ ಸಾಗಿದಂತೆ, ಬುದ್ಧಿ ಬೆಳೆದಂತೆ ಇತರ ಹಲವು ಮಕ್ಕಳಂತೆ ನಾನು ಕೂಡ ಸಾಂಪ್ರದಾಯಿಕತೆ, ಆಚಾರ, ವೈಜ್ಞಾನಿಕತೆ, ಮೂಢನಂಬಿಕೆ, ಧಾರ್ಮಿಕತೆ, ಇವೆಲ್ಲದರಲ್ಲಿ ಜನರ ವರ್ತನೆ/ನಿಲುವು/ಪಾತ್ರ ಇತ್ಯಾದಿಗಳ ಬಗ್ಗೆ ಗಾಢವಾಗಿ ಆಲೋಚನೆ ಮಾಡಿದ್ದೇನೆ, ಚರ್ಚಿಸಿದ್ದೇನೆ, ಕೊನೆಗೆ ನನ್ನದೇ ಆದ ನಿಲುವನ್ನು ಬೆಳೆಸಿಕೊಂಡಿದ್ದೇನೆ. ಆರೆಂಟು ವರ್ಷಗಳ ಹಿಂದೆಯೇ ಒಮ್ಮೆ ಈ ಬಗ್ಗೆ ನನ್ನ ಅಂತರ್ಜಾಲ ತಾಣದಲ್ಲಿ ಬರೆದಿದ್ದೆ. ಈಗ ಅದನ್ನು ಇನ್ನೂ ವಿಶದೀಕರಿಸಿ ಹೆಚ್ಚು ಸ್ಪಷ್ಟರೂಪದಲ್ಲಿ ಬರೆಯಬೇಕು ಎಂದನಿಸಿತು, ಹೀಗಾಗಿ ಈ ಲೇಖನ ನಿಮ್ಮ ಮುಂದಿದೆ.

ನಮ್ಮ ಹಳೆಯ ಸಂಪ್ರದಾಯಗಳು ವೈಜ್ಞಾನಿಕವೇ? ಅಲ್ಲವೇ? ಇದು ಕಳೆದ ಕೆಲವು ತಲೆಮಾರುಗಳಿಂದ ಚರ್ಚೆಯಾಗುತ್ತಲೇ ಬಂದಿರುವ ವಿಷಯ. ನನ್ನ ಅನಿಸಿಕೆಗಳನ್ನೂ ವ್ಯಕ್ತಪಡಿಸಬಯಸುತ್ತೇನೆ.

ಮೊದಲಿಗೆ, ಜನರ ನಿಲುವಿನ ಬಗ್ಗೆ ಒಂದೆರಡು ಮಾತು

ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಅನೇಕರಿಗೆ ಆಸ್ತಿಕತೆ, ಇನ್ನು ಕೆಲವರಿಗೆ ನಾಸ್ತಿಕತೆ ಸರಿ ಹೋಗುತ್ತದೆ. ಹಾಗೆಂದು ಇವರೀರ್ವರೂ ತಮ್ಮ ಪಾಡಿಗೆ ಇರುತ್ತಾರೋ, ಇಲ್ಲ. ಒಂದೇ ಸಮಾಜದಲ್ಲಿ ಬದುಕುವುದರಿಂದ ವ್ಯತ್ಯಸ್ಥ ನಂಬಿಕೆಗಳು ಚರ್ಚೆಗಳನ್ನೂ, ಇನ್ನು ಕೆಲವೊಮ್ಮೆ ಜಗಳಗಳನ್ನೂ ಹುಟ್ಟು ಹಾಕುತ್ತಲೇ ಇರುತ್ತವೆ.

·         ಧಾರ್ಮಿಕ ಸಂಪ್ರದಾಯಗಳೊಂದಿಗೆ ಬೆಳೆದು ಬಂದ ಮೂಢನಂಬಿಕೆಗಳು, ಅಸಹನಾ ಮನೋಭಾವ ಇತ್ಯಾದಿಗಳನ್ನು ಕಂಡರೆ ನಾಸ್ತಿಕರು, ವೈಜ್ಞಾನಿಕ ಮನೋಭಾವದವರು ಉರಿದುಬೀಳುತ್ತಾರೆ, ಹಾಗೂ ತಮ್ಮ ಪಾಡಿಗೆ ತಮಗೆ ಸರಿ ಕಂಡ ಮೌಲ್ಯಗಳೊಂದಿಗೆ ಮುನ್ನಡೆಯುತ್ತಾರೆ
·         ಆದರೆ ಕೆಲವೊಮ್ಮೆ ಬಾಲಿಶವಾದ ಹಠಮಾರಿತನದಿಂದ ಸಂಪ್ರದಾಯದ ಒಳ್ಳೆಯ ಅಂಶಗಳನ್ನು ಕೂಡ ತಿರಸ್ಕರಿಸಿ ಸಾಮಾಜಿಕ ಒಗ್ಗಟ್ಟಿಗೆ ಸವಾಲಾಗುತ್ತಾರೆ

·         ಆಸ್ತಿಕರು ದೇವರ ಹೆಸರಿನಲ್ಲಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡುತ್ತಾರೆ
·         ಆದರೆ ತಾವು ಬಹುಸಂಖ್ಯಾಕರಾಗಿರುವುದರಿಂದ ನಾಸ್ತಿಕರನ್ನು ಕಡೆಗಣಿಸುವುದು, ಅವಹೇಳನ ಮಾಡುವುದು, ಕೀಳಾಗಿ ಕಾಣುವುದು ಇತ್ಯಾದಿ ಮಾಡುತ್ತಾರೆ. ಬಹುಸಂಖ್ಯಾತರಾಗಿರುವುದರಿಂದ ಅವರಿಗೆ ತಾವು ಮಾಡುವುದೇ ಸರಿ ಎಂಬ ಬಲವಾದ ನಂಬುಗೆ ಇರುತ್ತದೆ ಹಾಗೂ ಈ ವಿಶ್ವಾಸ ಅತಿಯಾಗಿ ಬೆಳೆದು, ಹೊಸ/ಬೇರೆ ಚಿಂತನೆಗಳನ್ನು ಅನುಮಾನ/ತಿರಸ್ಕಾರದ ದೃಷ್ಟಿಯಲ್ಲಿ ನೋಡುವಂತೆ ಪ್ರೇರೇಪಿಸುತ್ತದೆ.

ಒಟ್ಟಿನಲ್ಲಿ ಈ ಜನರು ಪರಸ್ಪರ ವಿಶ್ವಾಸವನ್ನು ತಾಳುವುದು, ಅಭಿಪ್ರಾಯಗಳನ್ನು ಗೌರವಿಸುವುದು, ಸೌಹಾರ್ದತೆಯಿಂದ ಬಾಳುವುದು ಯಾವಾಗ ಎಂಬುದೊಂದು ಸಮಸ್ಯೆ.

ವೈಜ್ಞಾನಿಕ ಮನೋಭಾವದವರೆಲ್ಲರೂ ನಾಸ್ತಿಕರೇ?

ಹೆಚ್ಚಾಗಿ ನಾಸ್ತಿಕತೆಗೂ ವೈಜ್ಞಾನಿಕ ಮನೋಭಾವಕ್ಕೂ ಒಳ್ಳೆಯ ಜೊತೆಯಾಗುತ್ತದೆ, ಆದರೆ ಇದು ಒಂಥರಾ ಏಕಮುಖವಾದ ಸಂಬಂಧ; ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ನಾಸ್ತಿಕರೆಲ್ಲರೂ ಹೆಚ್ಚಾಗಿ ವೈಜ್ಞಾನಿಕ ಮನೋಭಾವವುಳ್ಳವರೇ ಆಗಿರುತ್ತಾರೆ ಎನ್ನಬಹುದು, ಆದರೆ ವೈಜ್ಞಾನಿಕ ಮನೋಭಾವವುಳ್ಳವರಲ್ಲಿ ಧಾರ್ಮಿಕರಾಗಿರುವವರೂ ಅನೇಕರಿರುತ್ತಾರೆ.

ಸಂಪ್ರದಾಯಗಳ ಗುಣಧರ್ಮಗಳು

 ‘ಸಂಪ್ರದಾಯ’, ‘ಆಚಾರ’ ಎಂದರೆ ಏನು? ಇವುಗಳನ್ನು ಸ್ವಲ್ಪ ಭೂತಕನ್ನಡಿಯೊಂದಿಗೆ ನೊಡೋಣ ಬನ್ನಿ. ನನಗೆ ಕಂಡಂತೆ ಹಳೆಯ ಸಂಪ್ರದಾಯಗಳಲ್ಲಿ ಈ ಕೆಳಗಿನ ನಾಲ್ಕು ಗುಣಧರ್ಮಗಳು (Properties) ಅಡಕವಾಗಿವೆ:

೧) ಸದಾಚಾರ ಅಥವಾ ಸಾಂಕೇತಿಕ ಮಹತ್ವ
೨) ಧಾರ್ಮಿಕ ಮಹತ್ವ ಮತ್ತಿತರ ನಂಬುಗೆಗಳು*
೩) ವೈಜ್ಞಾನಿಕ ಒಳಿತುಗಳು
೪) ಅವೈಜ್ಞಾನಿಕತೆ ಅಥವಾ ಕೆಡುಕುಗಳು

* ಇದರಲ್ಲಿ ಜ್ಯೋತಿಷ್ಯ ಶಾಸ್ತ್ರಾಧಾರಿತ, ವಾಸ್ತು ಇತ್ಯಾದಿ ನಂಬುಗೆಗಳು ಕೂಡ ಬರಬಹುದು; ವೈಜ್ಞಾನಿಕವಾಗಿ ಕಡಿಮೆ ಒಪ್ಪಿಗೆ ದೊರೆತಿರುವುದರಿಂದ ಇದನ್ನು ನಂಬುಗೆ ಎಂಬ ವಿಭಾಗಕ್ಕೆ ಸೇರಿಸುತ್ತಿದ್ದೇನೆ.

‘ಗುಣಧರ್ಮಗಳ ಸಮ್ಮೇಳನ’ ಹಾಗೂ ಅದರ ಅವಗಣನೆ

ದಯವಿಟ್ಟು ಗಮನಿಸಿ, ನಾನು ಮೇಲೆ ಹೇಳಿದ ೪ ಅಂಶಗಳು ಸಂಪ್ರದಾಯ/ಆಚಾರಗಳನ್ನು ಸಾರಾಸಾಗಟಾಗಿ ಏಕೈಕ ಅಂಶದಡಿಯಲ್ಲಿ ವರ್ಗೀಕರಿಸಲು ಆಧಾರವಲ್ಲ. ಅವು ಯಾವುದೇ ಸಂಪ್ರದಾಯವನ್ನು ಅಥವಾ ಆಚಾರವನ್ನು ಒಟ್ಟಾಗಿ ವಿವರಿಸುವ ಗುಣಧರ್ಮಗಳು. ಹೆಚ್ಚಿನ ಆಚಾರಗಳಲ್ಲಿ ಮೇಲೆ ಹೇಳಿದ ಗುಣಧರ್ಮಗಳಲ್ಲಿ ಒಂದಕ್ಕಿಂತ ಹೆಚ್ಚು ಕೂಡ ಜೊತೆಜೊತೆಯಾಗಿ ತಳುಕು ಹಾಕಿಕೊಂಡಿರುವುದನ್ನು ನಾವು ಕಾಣಬಹುದು.

ಆದರೆ ದುರದೃಷ್ಟವಶಾತ್ ಅನೇಕರು ಈ ಬಗ್ಗೆ ಚರ್ಚಿಸುವಾಗ ಈ ಗುಣಧರ್ಮಗಳನ್ನು ಶುದ್ಧ ವರ್ಗೀಕರಣಕ್ಕೆಂದು ಉಪಯೋಗಿಸಿ ಅವುಗಳ ಸಮ್ಮಿಳಿತ ರೂಪವನ್ನು ಅರಿತುಕೊಳ್ಳಲು, ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಒಂದೋ ವೈಜ್ಞಾನಿಕ, ಇಲ್ಲವೋ ಅವೈಜ್ಞಾನಿಕ, ಅದೂ ಅಲ್ಲದಿದ್ದರೆ ಬರೀ ಸದಾಚಾರ ಅಥವಾ ಕೇವಲ ಧಾರ್ಮಿಕ ಮಹತ್ವವುಳ್ಳದ್ದು - ಈ ರೀತಿಯ ಕಟ್ಟುನಿಟ್ಟಿನ ವರ್ಗೀಕರಣಕ್ಕೆ ಹೊರಟಾಗ ಚರ್ಚೆಗಳು ಅನಗತ್ಯವಾಗಿ ಬಿಸಿಯಾಗುತ್ತವೆ. ಒಂದೇ ಆಚಾರದಲ್ಲಿ ಸದಾಚಾರದ ಅಂಶಗಳೂ ಇರಬಹುದು, ವೈಜ್ಞಾನಿಕವಾದ ಅಂಶಗಳೂ ಇರಬಹುದು, ಮತ್ತು ಕೆಲವು ಅವೈಜ್ಞಾನಿಕ ವಿಷಯಗಳೂ ಇರಬಹುದು ಎಂಬುದನ್ನು ಒಪ್ಪಿಕೊಳ್ಳುವ ದೊಡ್ಡ ಗುಣ ಎರಡೂ ಕಡೆಯವರಲ್ಲಿದ್ದರೆ ಆಗ ಎಷ್ಟೋ ಚರ್ಚೆಗಳು ಹೆಚ್ಚು ಲಾಭದಾಯಕವಾಗಬಲ್ಲವು ಎಂದು ನಾನು ಅಭಿಪ್ರಾಯಪಡುತ್ತೇನೆ.

‘ನಂಬಿಕೆ’ಯ ಪ್ರಭಾವ

ಹೆಚ್ಚಿನ ಸಂಪ್ರದಾಯಗಳ ಜೊತೆಗೆ ಒಂದಲ್ಲ ಒಂದು ‘ದೇವರು’ ಕೂಡ ಸಂಬಂಧ ಕಲ್ಪಿಸಿರುವುದು ಸರ್ವೇಸಾಮಾನ್ಯ. ಅಂತಹ ಸಂದರ್ಭದಲ್ಲಿ ನಂಬುಗೆ ಉಳ್ಳವರು ಅರ್ಥಾತ್ ಆಸ್ತಿಕರು ಆ ಸಂಪ್ರದಾಯಗಳಲ್ಲಿರಬಹುದಾದ ವೈಜ್ಞಾನಿಕ ತಳಹದಿಯನ್ನು ಮರೆತು ಕುರುಡಾಗಿ ಪಾಲಿಸತೊಡಗುತ್ತಾರೆ. ಅತ್ತ ದೇವರ ಮೇಲಿನ ನಂಬುಗೆಯನ್ನು ತಿರಸ್ಕರಿಸುವ ನಾಸ್ತಿಕರು ಕೂಡ ಹೆಚ್ಚು ತಾಳ್ಮೆ ತೋರಿಸದೆಯೇ ಇಂತಹ ಆಚಾರಗಳನ್ನು ಅಸಡ್ಡೆಯಿಂದ ತಳ್ಳಿಹಾಕುತ್ತಾರೆ. ಜ್ಯೋತಿಷ್ಯ ಶಾಸ್ತ್ರಕ್ಕೂ, ವಾಸ್ತುವಿಗೂ ಇದೇ ಸಮಸ್ಯೆ ಇದೆ.

ಮಾತ್ರವಲ್ಲ, ಅನುಕೂಲಶಾಸ್ತ್ರ ಮಾಡುವುದಕ್ಕೋಸ್ಕರ ಸಂಪ್ರದಾಯವಾದಿಗಳು ಸಂಪ್ರದಾಯದ ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲಗೊಳಿಸಿದಾಗ ಅದು ಇದ್ದಬದ್ದ ವೈಜ್ಞಾನಿಕತೆಯನ್ನೂ ಕಳೆದುಕೊಂಡು ಬೆತ್ತಲಾಗುತ್ತದೆ, ಆಗ ಆಸ್ತಿಕರು ನಾಸ್ತಿಕರ ಮುಂದೆ ಇನ್ನೂ ಹೆಚ್ಚು ಬೆಲೆ ಕಳೆದುಕೊಳ್ಳುತ್ತಾರೆ.

ಇಲ್ಲಿ ಎರಡೂ ಕಡೆಯವರು ತಮ್ಮ ಕೂಪದಿಂದ ಹೊರಬಂದು ಆಚಾರವನ್ನು ಹೊಸ ದೃಷ್ಟಿಯಿಂದ ನೋಡಲು ಯತ್ನಿಸಿದರೆ ಸತ್ಯಸಂಗತಿಗಳು (ನಿಜವಾದ ವೈಜ್ಞಾನಿಕ ಸತ್ಯಗಳು, ಅವು ಇರುವುದು ಹೌದೆಂದಾದರೆ) ಹೊರಬರುವ ಸಾಧ್ಯತೆಗಳು ಹೆಚ್ಚು. ನಂಬುಗೆ ಬಿಟ್ಟರೆ ಬೇರೆ ಆಧಾರವಿಲ್ಲದಿದ್ದರೂ ಅದರಲ್ಲಿ ವೈಜ್ಞಾನಿಕ ಆಧಾರಗಳು ಇರಲೂ ಬಹುದು ಎಂಬ ಮುಕ್ತ ಮನಸ್ಸಿನೊಂದಿಗೆ ಆಧುನಿಕ ಮನೋಭಾವದವರು ಹೊರಟರೆ ಅವರಿಗೇ ಅದರಿಂದ ಮುಂದೆ ಪ್ರಯೋಜನಗಳೂ ಸಿಗಬಹುದೇನೋ. ಅದೇ ರೀತಿ ತಮ್ಮ ಕುರುಡು ನಂಬಿಕೆಯನ್ನು ಯಾರಾದರೂ ಗೇಲಿ ಮಾಡಿದರೆ ಕೋಪಿಸಿಕೊಳ್ಳುವ ಬದಲು ಆತ್ಮವಿಮರ್ಶೆ, ಸಂಶೋಧನೆಯತ್ತ ಆಸ್ತಿಕರು ಮನಸ್ಸು ಹೊರಳಿಸಿದರೆ ಉತ್ತಮ.

ತಪ್ಪು ಕಲ್ಪನೆಗಳ, ಮೂಢನಂಬಿಕೆಗಳ ಜನನ

ಬರೀ ಸದಾಚಾರ ಎಂದುಬಿಟ್ಟರೆ ನಮ್ಮ ಕ್ರಮ, ಸಂಸ್ಕೃತಿ ನಶಿಸಿ ಹೋಗಬಹುದೇ? ಕೆಲವರ ಭೀತಿ ಏನೆಂದರೆ ತಮ್ಮ ಕೆಲವೊಂದು ಕ್ರಮಗಳಲ್ಲಿ ನಿಜವಾಗಿ ಇರುವುದು ಬರೀ ಸದಾಚಾರವಾದರೂ ಕೂಡ ಅದನ್ನು ದೇವರ ಹೆಸರಿನೊಂದಿಗೆ ತಳುಕು ಹಾಕಿದರೆ, ಹಾಗೂ ಜನರಲ್ಲಿ ಭೀತಿ ಹುಟ್ಟಿಸಿದರೆ ಆ ಕ್ರಮ ನಮ್ಮ ಮಧ್ಯೆ ಉಳಿಯುವ, ಬೆಳೆಯುವ ಸಾಧ್ಯತೆ ಹೆಚ್ಚು, ಇಲ್ಲವಾದರೆ ಯುವಜನತೆಯ ಅವಗಣನೆಗೆ/ಉದಾಸೀನತೆಗೆ ತುತ್ತಾಗಿ ನಶಿಸಿ ಹೋಗಬಹುದು, ಎಂದು. ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ.

ಚಿಕ್ಕಂದಿನಲ್ಲಿ ನಮಗೆ ಹೆಚ್ಚಿನ ಎಲ್ಲಾ ಹಿರಿಯರು ಹೇಳುತ್ತಿದ್ದರು: “ಪುಸ್ತಕವನ್ನು ತುಳಿದರೆ ನಮಸ್ಕಾರ ಮಾಡಬೇಕು, ಇಲ್ಲದಿದ್ದರೆ ವಿದ್ಯಾದೇವತೆಯ ಶಾಪ ಸಿಗುತ್ತದೆ” ಎಂದು. ಈ ಕ್ರಮ ಅನೇಕರು ಎಷ್ಟು ಅತಿರೇಕಕ್ಕೆ ತೆಗೆದುಕೊಂಡು ಹೋಗುತ್ತಾರೆ ಎಂದರೆ ಅಪ್ಪಿತಪ್ಪಿಯೂ ಒಮ್ಮೆ ಕಾಲು ತಾಕಿದರೆ ಪ್ರತಿಯಾಗಿ ಕಿವಿ-ಗಲ್ಲ ಮುಟ್ಟಿ ನಮಸ್ಕಾರ ಮಾಡದಿದ್ದರೆ ಅವರಿಗೆ ಭೀತಿಯುಂಟಾಗುತ್ತದೆ, ತೀವ್ರವಾಗಿ ಇರುಸುಮುರುಸುಂಟಾಗುತ್ತದೆ, ಯಾಕೆ? ವಿದ್ಯಾದೇವತೆಯ ಶಾಪ ತಟ್ಟಿದರೆ ಏನು ಗತಿ?

ಪುಸ್ತಕದ ಬಗ್ಗೆ ಗೌರವವಿರಿಸಿಕೊಳ್ಳಬೇಕು, ಅವಗಣನೆ ಸಲ್ಲದು ಎಂಬ ಸದಾಚಾರದಿಂದ ಶುರುವಾದ ಈ ಕ್ರಮ ಜನರ ಮನಸ್ಸನ್ನು ಎಷ್ಟು ಆವರಿಸುತ್ತದೆ ಎಂದರೆ ಅದನ್ನು ವಿಕೃತಿ ಅಥವಾ mental block ಎಂದು ವರ್ಗೀಕರಿಸಿದರೆ ತಪ್ಪಿಲ್ಲ ಎಂದು ನನಗೆ ಕಾಣುತ್ತದೆ.

ನಾನು ಬುದ್ಧಿ ಬೆಳೆದಂತೆ ಪರಿವರ್ತನೆಗೊಳ್ಳುತ್ತಾ ಸಾಗಿ ಈಗ ಯಾವ ಸ್ಥಿತಿ ಮುಟ್ಟಿದ್ದೇನೆಂದರೆ ಪುಸ್ತಕ ಇರುವುದು ಜ್ಞಾನಾರ್ಜನೆಗೆ, ಅದನ್ನು ಚೆಂದಕ್ಕೆ ಇಟ್ಟುಕೊಳ್ಳಬೇಕು, ಗೌರವಿಸಬೇಕು ಸರಿ. ಆದರೆ ಅಗತ್ಯ ಬಂದಾಗ ತಲೆದಿಂಬಾಗಿ ಉಪಯೋಗಿಸಿದರೂ, ಅಥವಾ ದಪ್ಪ ಪುಸ್ತಕವಾದರೆ ಎತ್ತರಕ್ಕೇರಲೂ ಉಪಯೋಗಿಸುವುದರಿಂದ ಏನೂ ತೊಂದರೆ ಇಲ್ಲ. ಪುಸ್ತಕವನ್ನು ಓದುವುದೇ ಅದಕ್ಕೆ ಸಲ್ಲುವ ಅತ್ಯಂತ ದೊಡ್ಡ ಪೂಜೆ, ಹೊರತು ಕ್ಷಣಮಾತ್ರದ ನಮಸ್ಕಾರ ಅಲ್ಲ. ಹೀಗಿರುವ ಮನಸ್ಥಿತಿ ಬರಲು ಸಮಯ ಹಿಡಿದಿದೆ, ರಾತ್ರೋರಾತ್ರಿ ಬದಲಾದದ್ದಲ್ಲ.

ಮೊದಮೊದಲಿಗೆ ಸದಾಚಾರವನ್ನುಳಿಸಲು ಕೆಲವರು ಜನರಲ್ಲಿ ತಪ್ಪು ಕಲ್ಪನೆ ಮೂಡಿಸಿರಬಹುದು, ಆದರೆ ನಿಧಾನವಾಗಿ ಇಂತಹ mental blockಗಳು ಇಡೀ ಸಮಾಜವನ್ನಾವರಿಸುತ್ತದೆ. ಇಂತಹ mental blockಗಳಿಂದ ಹೊರಬರುವುದು ಸುಲಭವಲ್ಲ. ಕೆಲವೊಮ್ಮೆ ಇಂತಹ ಕೆಲವು ಕಟ್ಟಳೆಗಳು ತಮಾಷೆಯಾಗಿ ಕಂಡು ಅವನ್ನು ತಳ್ಳಿಹಾಕಲು ಮನಸ್ಸು ಹಿಂಜರಿಯುವುದಿಲ್ಲ, ಆದರೆ ‘ಪರಿಣಾಮ’ಗಳ ತೀವ್ರತೆ ಹೆಚ್ಚಿದಂತೆ ಮನಸ್ಸು ಹಿಂಜರಿಯುವುದೂ ಹೆಚ್ಚು, ಕಾಕತಾಳೀಯವಾಗಿ ಒಂದೆರಡು ಪರಿಣಾಮಗಳು ಉದಾಹರಣೆ ರೂಪದಲ್ಲಿ ಕಂಡುಬಂದರಂತೂ ಮುಗಿದೇ ಹೋಯಿತು ಬಿಡಿ.

ಇನ್ನು ಕೆಲವು ಆಚಾರಗಳು ಯಾವುದೇ ಉದ್ದೇಶದಿಂದಲ್ಲ, ನಿಜಕ್ಕೂ ಪೆದ್ದು ಪೆದ್ದಾಗಿ ಹುಟ್ಟಿ ಬಂದಿರುತ್ತವೆ – ಶ್ರಾದ್ಧದ ಬೆಕ್ಕಿನ ಕಥೆಯ ಹಾಗೆ. ಇವೆಲ್ಲವನ್ನೂ ಒಟ್ಟಾಗಿ ನಾವು ಸಾಮಾನ್ಯವಾಗಿ ಮೂಢನಂಬಿಕೆಗಳು ಎಂದು ಹೇಳುವುದು.

ದುಃಖಕರ ವಿಷಯವೆಂದರೆ ನನ್ನಂತೆಯೇ ಅನೇಕ ಜನರು ಇಂತಹ ಅನಗತ್ಯ ಮಾನಸಿಕ ಸಂಕೋಲೆಗಳಿಂದ ಹೊರ ಬಂದು ಮುಕ್ತವಾಗಿ ಆಲೋಚಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ, ಅನೇಕರು ಇಂತಹ ಅನೇಕ ಸಂಕೋಲೆಗಳಿಂದ ಮುಕ್ತರಾಗುವುದೇ ಇಲ್ಲ, ಅಮೂಲ್ಯವಾದ ಸಮಯ-ಶಕ್ತಿ ಇವುಗಳಲ್ಲಿ ವ್ಯಯವಾಗುತ್ತಲೇ ಇರುತ್ತದೆ. ಇದೆಲ್ಲದರ ಬದಲು ಜೀವನದ ಮೌಲ್ಯಗಳು ಸರಳ-ಸುಂದರವಾಗಿದ್ದರೆ ಎಷ್ಟು ಚೆನ್ನ ಎಂದು ಅನಿಸಿತ್ತಲೇ ಇರುತ್ತದೆ.

ಇನ್ನೂ ಕೆಲವು ಉದಾಹರಣೆಗಳು:

‘ಬೆಕ್ಕು ಅಡ್ಡ ಬಂದರೆ ವಿಘ್ನ’ ಎಂಬುದನ್ನು ಈಗ ಅನೇಕರು ಹಾಸ್ಯವೆಂದು ಪರಿಗಣಿಸುತ್ತಾರೆ, ಆದರೆ ಅನೇಕರ ಜೀವನದಲ್ಲಿ ಹಾಸುಹೊಕ್ಕಾಗಿ ಇನ್ನೂ ಮೆರೆಯುತ್ತಿರುವ ಹಲವು ಉದಾಹರಣೆಗಳನ್ನು ಕೊಡಬಹುದು.
- ನಿನಗಿಂತ ದೊಡ್ಡವರಿಗೆ ಕಾಲು ತಾಕಿದರೆ ನಿನ್ನ ಕಾಲಿನಲ್ಲಿ ಹುಳುವಾಗುತ್ತದೆ, ತಪ್ಪಿಸಬೇಕಾದರೆ ನಮಸ್ಕಾರ ಮಾಡಬೇಕು
- ದುಡ್ಡನ್ನು ತುಳಿಯಬಾರದು
- ಎಡಗೈಯಲ್ಲಿ ದುಡ್ಡು ಕೊಡಬಾರದು
- ಇತರರು ನಮಗೆ ಕೊಟ್ಟದ್ದನ್ನು ಎಡಗೈಯಲ್ಲಿ ತೆಗೆದುಕೊಳ್ಳಬಾರದು
- ಎಡಗೈಯ ಮೂಲಕ ಇರಿಸಿದ ವಸ್ತು ಕಾಣೆಯಾಗುತ್ತದೆ
- ಕೈ-ಕಾಲಿಂದ ಉಗುರು ಕಿತ್ತ ಮೇಲೆ ಅದನ್ನು ಯಾರಿಗೂ ಸಿಗದ ಜಾಗಕ್ಕೆ ಹಾಕಬೇಕು, ಅದನ್ನು ಯಾರಾದರೂ ತುಳಿದು ಬಿಟ್ಟರೆ ಅವರು ನಿನ್ನ ವೈರಿಗಳಾಗುತ್ತಾರೆ

ತಪ್ಪುದಾರಿಗೆಳೆಯುವುದಲ್ಲ ಉದ್ದೇಶ, ತುಂಟ ಮಕ್ಕಳನ್ನು ಅಂಕೆಯಲ್ಲಿಡುವ ಅಸ್ತ್ರ, ಅಷ್ಟೆ:

ಬಹುಷಃ ಈ ಭೀತಿವಾದ ಅನೇಕ ಮನೆಗಳಲ್ಲಿ ಇನ್ನೂ ಎಳೆಯದರಲ್ಲಿಯೇ ಶುರುವಾಗುತ್ತದೆ: ಊಟ ಮಾಡದಿದ್ದರೆ ಕಳ್ಳ ಬಂದು ಎತ್ತಿಕೊಂಡು ಹೋಗುತ್ತಾನೆ, ಹಾಗೆ ಮಾಡದಿದ್ದರೆ ಡಾಕ್ಟ್ರು ಸೂಜಿ ಚುಚ್ಚುತ್ತಾರೆ, ಭೂತ-ರಾಕ್ಷಸ ಕಾಟ ಕೊಡುತ್ತಾನೆ ಎಂದಿತ್ಯಾದಿ ಹೆದರಿಸಿ ಎಳೆಯರನ್ನು ಬಗ್ಗಿಸುವುದು ಕೂಡ ಬಹುಷಃ ನಮಗೆ ತಂದುಕೊಡುವುದು ಕೇವಲ ತಾತ್ಕಾಲಿಕ ವಿಜಯ. ದೂರಗಾಮಿ ದೃಷ್ಟಿಯಿಂದ ನೋಡಿದರೆ ಇದು ಅಂತಹ ಎಳೆಯರನ್ನು ವಿಕೃತಗೊಳಿಸುತ್ತದೆ ಎಂದು ನನಗನಿಸುತ್ತದೆ. ಹಠಮಾರಿ ಮಕ್ಕಳನ್ನು ಈ ರೀತಿಯಲ್ಲಲ್ಲದೆ ಹತೋಟಿಯಲ್ಲಿಡುವುದು ಕಷ್ಟಕರ ಎಂದು ನೀವು ಹೇಳಿದರೆ ಅದಕ್ಕೆ ಮನೋತಜ್ಞರು ಬೇರೆಯೇ ಉತ್ತರಗಳನ್ನು ಕೊಡಬಹುದು.

ಹೊಸ ಫ್ಯಾಷನ್: ಕಾಲ್ಪನಿಕ ವೈಜ್ಞಾನಿಕತೆ: ಆಧಾರಗಳಿಲ್ಲದೇ ವೈಜ್ಞಾನಿಕ ಎಂಬ ಬಿರುದು ಕೊಡುವುದು

ನಮ್ಮ ಸಂಪ್ರದಾಯಗಳಲ್ಲಿ ವೈಜ್ಞಾನಿಕ ಸತ್ಯಗಳಿರುವಂಥವು ಎಷ್ಟೋ ಇವೆ, ಇದು ಹೆಮ್ಮೆಯ ಸಂಗತಿಯೇ ಸರಿ, ಆದರೆ ತಪ್ಪು ಉದಾಹರಣೆಗಳ ಮೂಲಕ ವಿಜೃಂಭಿಸುತ್ತಿರುವ ಆಚಾರಗಳ ಜೊತೆ ಅಂಥ ನೈಜ ಬೆಲೆಯುಳ್ಳ ಆಚಾರಗಳೂ ಹೊಳಪನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.

ದೇವರು-ಭೂತದ ಜೊತೆ ಸಂಪ್ರದಾಯ/ಆಚಾರಗಳನ್ನು ತಳುಕು ಹಾಕಿದರೆ ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ ಎಂದು ಇತ್ತೀಚೆಗೆ ಕೆಲವರು ವಿಜ್ಞಾನದ ಜೊತೆಗೆ ಇಲ್ಲದ ಸಂಬಂಧ ಕಲ್ಪಿಸಲು ಶುರುಮಾಡಿದ್ದಾರೆ, ಅನೇಕರಿಗೆ ಹಾಗೆ ಮಾಡುವುದು ಒಂದು ಫ್ಯಾಷನ್ ಕೂಡ ಆಗಿಬಿಟ್ಟಿದೆ. ಇನ್ನು ಕೆಲವರಿಗೆ ಹಾಗೆ ಮಾಡದಿದ್ದರೆ ಕೀಳರಿಮೆ ಬರುತ್ತದೆ ಎಂಬ ಅವ್ಯಕ್ತ ಭಯ ಅರ್ಥಾತ್ ತಮ್ಮ ಸಂಪ್ರದಾಯ ಅವೈಜ್ಞಾನಿಕವಾಗಿಯೂ ಇರಬಹುದು ಎಂಬುದನ್ನು ಒಪ್ಪಿಕೊಳ್ಳಲು ಕೀಳರಿಮೆ ಇರುವುದು. ಒಟ್ಟಿನಲ್ಲಿ ವೈಜ್ಞಾನಿಕ ಆಧಾರಗಳಿಲ್ಲದೆಯೇ ಸುಮ್ಮಸುಮ್ಮನೆ ವೈಜ್ಞಾನಿಕತೆಯ ಲೇಪನ ಕೊಡುವುದು ಬಹಳ ಗಂಡಾಂತಕಾರಿ ವಿಷಯ.


ಕೆಲವೊಮ್ಮೆ ಸಂಪ್ರದಾಯದಲ್ಲಿ ಅಡಕವಾಗಿರುವ ವೈಜ್ಞಾನಿಕತೆಯನ್ನು ವಿವರಿಸಲು ಮಾಡಲು ಕೆಲವರು ಮಾಡುವ ಪ್ರಯತ್ನದಲ್ಲಿ ದುದುದ್ದೇಶ ಇರುವುದಿಲ್ಲ, ಆದರೂ ಅವರ ವಿವರಣೆಗಳಲ್ಲಿ ಬಲವಾದ ವೈಜ್ಞಾನಿಕ ಆಧಾರಗಳು ಇರುವುದಿಲ್ಲ. ಒಂದು ಉದಾಹರಣೆ ಇಲ್ಲಿದೆ ನೋಡಿ.

ಹಾಗೆಂದು ಸದಾಚಾರಗಳನ್ನು ತ್ಯಜಿಸಬೇಕೇ?

ಖಂಡಿತಾ ಇಲ್ಲ, ಆದರೆ ತಪ್ಪು ಕಾರಣಗಳ ಮೂಲಕ ಅವುಗಳನ್ನು ಎಳೆಯರ ತಲೆಯಲ್ಲಿ ತುಂಬುವ ಬದಲು ಇದ್ದ ಕಾರಣವನ್ನು ನೇರವಾಗಿಯೇ ಹೇಳಬೇಕು. ವ್ಯವಸ್ಥಿತ ರೀತಿಯಲ್ಲಿ ಸದಾಚಾರದ ಪ್ರಾಮುಖ್ಯತೆಯನ್ನು ಅವರಿಗೆ ತಿಳಿಹೇಳಿ ಮುಂದೆ ಚಿಂತನಾಶೀಲ ಹಾಗೂ ಉತ್ತಮ ಪ್ರಜೆಗಳನ್ನಾಗಿಸಲು ನಾವು ಪ್ರಯತ್ನ ಮಾಡಬೇಕು. ಹಾಗೂ ಒಳ್ಳೆಯ ಮಾತಿಗೆ ಬಗ್ಗದಿದ್ದರೆ ಕೊನೆಗೆ ತಕ್ಕ ದಂಡ ಸರಿಯಾದ ಪರಿಣಾಮ ಖಂಡಿತಾ ಬೀರುತ್ತದೆ.

ಪಾಶ್ಚಾತ್ಯ ಸಂಸ್ಕೃತಿಯ ಕೆಟ್ಟ ಅಂಶಗಳನ್ನು ಮಾತ್ರ ನೊಡಿ ಮೂಗು ಮುರಿವ ನಾವು ಅಲ್ಲಿಯ ಕೆಲವು ಒಳ್ಳೆಯ ಅಂಶಗಳನ್ನು ಗಮನಿಸುವುದೇ ಇಲ್ಲ. ಕಸಕಡ್ಡಿ ಎಲ್ಲೆಂದರಲ್ಲಿ ಎಸೆಯಬಾರದು, ಇತರರನ್ನು ನಗುಮುಖದಿಂದ ಮಾತನಾಡಿಸಬೇಕು ಎಂಬ ಗುಣಗಳನ್ನು ಎಳೆಯದರಲ್ಲಿಯೇ ಅಲ್ಲಿನ ಮಕ್ಕಳಿಗೆ ಬಹಳ ವ್ಯವಸ್ಥಿತವಾಗಿ ಕಲಿಸುತ್ತಾರೆ, ನಮ್ಮಲ್ಲಿ ಆ ರೀತಿಯ ಅಭ್ಯಾಸಗಳನ್ನು ಕಲಿಸುವವರ ಸಂಖ್ಯೆ ಇನ್ನೂ ಬಹಳ ಕಡಿಮೆ. ಆದರೆ ಅರ್ಥ ಗೊತ್ತಿಲ್ಲದೇ ಧಾರ್ಮಿಕ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಕಲಿಸುವವರ ಸಂಖ್ಯೇ ಎಷ್ಟೋ ಜಾಸ್ತಿ.

ವಿಜ್ಞಾನ + ಕಾನೂನು = ಸದಾಚಾರ?

ವೈಜ್ಞಾನಿಕ ಸತ್ಯಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಹಾಗೂ ಅದನ್ನು ಸರಿಯಾಗಿ ಉಪಯೋಗಿಸುವ ಉತ್ತಮ ಮನಸ್ಸು ಸಮಾಜದ ಎಲ್ಲರಿಗೂ ಇದೆಯೇ? ಇಲ್ಲ. ಹಾಗೆಂದು ವಿಜ್ಞಾನವನ್ನು ಜನರಿಂದ ಮರೆಮಾಚಿ ಅವರಲ್ಲಿ ತಪ್ಪು ಕಲ್ಪನೆ ತುಂಬಬೇಕೇ? ಅದೂ ಅಲ್ಲ. ಒಂದು ಆಸಕ್ತಿದಾಯಕವಾದ ಉದಾಹರಣೆಯನ್ನು ತೆಗೆದುಕೊಳ್ಳೋಣ.

ನಮ್ಮ ಬಳಿ ವೈಜ್ಞಾನಿಕವಾದ ಲಿಂಗಪತ್ತೆ ತಂತ್ರಜ್ಞಾನವಿದೆ. ಆದರೆ ಹೆಣ್ಣು ಭ್ರೂಣಹತ್ಯೆಯನ್ನು ತಡೆಯುವುದಕ್ಕೋಸ್ಕರ ನಾವು ಈ ತಂತ್ರಜ್ಞಾನವನ್ನು ಕಾನೂನುಬಾಹಿರ ಮಾಡಿದ್ದೇವೆ. ಇಲ್ಲಿ ಕಾರ್ಯಸಾಧನೆ ಮಾಡುವುದಕ್ಕೋಸ್ಕರ ಯಾವುದೇ ರೀತಿಯ ಅವೈಜ್ಞಾನಿಕ ನಂಬಿಕೆಗಳನ್ನು ಜನರ ತಲೆಗೆ ತೂರಲು ಪ್ರಯತ್ನ ಮಾಡಲಿಲ್ಲ, ಬದಲಾಗಿ ಕಾನೂನಿನ ಮೂಲಕ ಅದರ ದುರುಪಯೋಗವಾಗದಂತೆ ಪ್ರಯತ್ನ ಮಾಡುತ್ತಿದ್ದೇವೆ. ಇದೇ ಸರಿಯಾದ ದಾರಿ, ಮುಚ್ಚುಮರೆ ಇಲ್ಲದ ನೇರ ದಾರಿ.

ಸರಿಯಾದ ದಾರಿ ಸುಲಭದ್ದಲ್ಲ

ನನ್ನದೇ ಒಂದು ಉದಾಹರಣೆ ತೆಗೆದುಕೊಳ್ಳೋಣ. ಚಿಕ್ಕಂದಿನಲ್ಲಿ ನನಗೆ ಒಮ್ಮೊಮ್ಮೆ ಪ್ರಜ್ವಲಿಸುವ ಸೂರ್ಯನನ್ನು ಬಲವಂತವಾಗಿ ಕಣ್ಣೆವೆಗಳನ್ನು ತೆರೆದಿಟ್ಟ ಕಣ್ಣುಗಳಿಂದ ನೋಡುವ ಕೆಟ್ಟ ಚಟ ಇತ್ತು, ಇದೊಂದು ಹುಚ್ಚು ಸಾಹಸ. ಮೊದಲು ಕುಕ್ಕುತ್ತಿದ್ದ ಕಣ್ಣು ನಿಧಾನಕ್ಕೆ ತುಸು ಒಗ್ಗಿ ಸೂರ್ಯ ಒಂದು ಚಿಕ್ಕ ಗೋಲಿಯ ಹಾಗೆ ಕಾಣುತ್ತಿದ್ದ ರೀತಿ ನನಗೆ ಮುದ ಕೊಡುತ್ತಿತ್ತು, ಏನೋ ಅದ್ಭುತವಾದದ್ದನ್ನು ನೋಡಿದ ಭಾವನೆ. ಆದರೆ ಅಮ್ಮ ಯಾವತ್ತೂ ಹೇಳುತ್ತಿದ್ದರು, ಅದು ಕಣ್ಣಿಗೆ ಹಾಳು ಎಂದು. ನನ್ನ ಪ್ರತಿ ಪ್ರಶ್ನೆ - ‘ಯಾಕೆ ಕೆಟ್ಟದು? ವಿವರಿಸು ನೋಡುವಾ?’ ಎಂದು. ಪಾಪ ಅಮ್ಮ, ವೈಜ್ಞಾನಿಕವಾಗಿ ಒಂದು ಮಿತಿಗಿಂತ ವಿವರಿಸಲು ಅವಳಿಂದ ಸಾಧ್ಯವಿತ್ತೇ? ಇಲ್ಲ. ಆದರೆ ನಾನು ಅಷ್ಟು ಅರ್ಥಮಾಡಿಕೊಳ್ಳುವಷ್ಟು ಪ್ರೌಢಿಮೆ ತೋರಿಸಲಿಲ್ಲ. ಅದೃಷ್ಟವಶಾತ್ ನನ್ನ ಕಣ್ಣಿಗೆ ಅದರಿಂದ ದೊಡ್ಡ ತೊಂದರೆ ಆಗಲಿಲ್ಲ! ಇಂತಹ ಸಂದರ್ಭದಲ್ಲಿ ಏನೋ ಒಂದು ಇಲ್ಲದ ಕಾರಣ ಹುಟ್ಟಿಸಿ ಮಕ್ಕಳನ್ನು ಮರುಳು ಮಾಡುವ ಆಸೆ ಅಮ್ಮಂದಿರಿಗಾದರೆ ಅದನ್ನು ತಪ್ಪೆಂದು ಹೇಳಲಾರೆ. ಸರಿಯಾದ ದಾರಿ ಸುಲಭದ್ದಲ್ಲ.

ಆದರೆ ಇಂತಹ ವಿಷಯದಲ್ಲಿ ಹೆಚ್ಚಿನ ಮಕ್ಕಳಿಗೆ ಇನ್ಯಾವುದೋ ಸುಳ್ಳಿನ ಮೂಲಕ ಹೇಳಲು ಯತ್ನಿಸಿದರೆ ತಾತ್ಕಾಲಿಕ ಜಯ ಸಿಗಬಹುದೇನೋ! ಉದಾ: ಗ್ರಹಣದ ವಿಷಯದಲ್ಲಿ ನೋಡಿ – ಮೂಢನಂಬಿಕೆಗಳು ಬಹುಷಃ ಎಷ್ಟೋ ಕುರುಡು ನಂಬಿಕೆಯ ಜನರ ಕಣ್ಣು ಉಳಿಸಿರಲೂ ಬಹುದು, ಆದರೆ ಕೆಲವು ವೈಜ್ಞಾನಿಕ ಮನೋಭಾವದ ಕುತೂಹಲಿಗಳು ಕೇವಲ ಸತ್ಯ ಪರೀಕ್ಷೆ ಮಾಡುವುದಕ್ಕೋಸ್ಕರ ಸಂಪ್ರದಾಯವನ್ನು ಧಿಕ್ಕರಿಸಿ ಮುನ್ನುಗ್ಗಿ ತಮ್ಮ ಕಣ್ಣನ್ನು ಕಳೆದುಕೊಂಡಿರಲೂ ಬಹುದು, ಅಲ್ಲಿ ತಪ್ಪು ಯಾರದ್ದು? ವೈಜ್ಞಾನಿಕ ಸತ್ಯವನ್ನು ಬದಿಗಿಟ್ಟ ಸಂಪ್ರದಾಯವಾದಿಗಳದ್ದೇ ಅಥವಾ ಕಣ್ಣು ಕಳೆದುಕೊಂಡ ವೈಜ್ಞಾನಿಕ ಮನೋಭಾವದವರದ್ದೇ?

ಇನ್ನೊಂದು ಕಥೆ ಓದಿ. ಒಂದು ಕಡೆ ಎರಡು ರೈಲು ಹಳಿಗಳಿದ್ದುವಂತೆ, ಅಲ್ಲಿಗೆ ಒಂದು ಮಕ್ಕಳ ದಂಡು ಬಂತು, ಆಡಲೆಂದು. ಆ ಗುಂಪಲ್ಲಿ ಒಬ್ಬ ಜಾಣನಿದ್ದ, ಅವನಿಗೆ ಗೊತ್ತಿತ್ತು ಅನುಪಯುಕ್ತ ಹಳಿ ಯಾವುದೆಂದು, ಅವನು ಅಲ್ಲಿಯೇ ಆಡುತ್ತಿರುವಾಗ ಉಳಿದವರೆಲ್ಲರೂ ಅವನನ್ನು ಅಣಕ ಮಾಡಿ ರೈಲು ಹೋಗುವ ಹಳಿಯಲ್ಲಿ ಆಟವಾಡತೊಡಗಿದರು, ಅವರ ಪ್ರಕಾರ ಅನುಪಯುಕ್ತ ಹಳಿ ತಾವು ಆಯ್ಕೆ ಮಾಡಿದ್ದಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ರೈಲು ಬಂತು, ಆಟದಲ್ಲಿ ಮುಳುಗಿದ ಮಕ್ಕಳಿಗೆ ಗಮನವಿರಲಿಲ್ಲ. ರೈಲು ಚಾಲಕ ದೂರದಿಂದಲೇ ಹಳಿಯ ಮೇಲಿರುವ ಮಕ್ಕಳನ್ನು ಗಮನಿಸಿ ಬ್ರೇಕ್ ಹಾಕಲಾರಂಭಿಸಿದ, ಆದರೆ ಸಾಕಾಗಲಿಲ್ಲ. ಕೊನೆಯ ಹಂತಕ್ಕೆ ಬಂದಾಗ ರೈಲು ಚಾಲಕನ ಬಳಿ ಆಯ್ಕೆಯಿತ್ತು - ಸರಿಯಾದ ಹಳಿಯ ಮೇಲೆ ಹೋಗಿ ಹತ್ತಾರು ಬಾಲಕರನ್ನು ಬಲಿ ತೆಗೆದುಕೊಳ್ಳಲೇ ಅಥವಾ ಅನುಪಯುಕ್ತ ಹಳಿಯ ಕಡೆಗೆ ತಿರುಗಿಸಿ ಒಬ್ಬ ಬಾಲಕನ ಬಲಿ ತೆಗೆದುಕೊಳ್ಳಲೇ ಎಂದು. ರೈಲು ಬರುವುದು ಗೊತ್ತಿದ್ದರೂ ಕೂಡ ತಾನಿರುವ ಹಳಿಯ ಮೇಲೆ ಬರಲಾರದು ಎಂಬ ಭರವಸೆ ಬುದ್ಧಿವಂತ ಹುಡುಗನಿಗಿತ್ತು, ಹೀಗಾಗಿ ಅವನು ನಿಶ್ಚಿಂತೆಯಿಂದಿದ್ದ, ಆದರೆ ಕೊನೆಗೆ ಅವನೇ ಸತ್ತ, ಉಳಿದ ಹುಡುಗರು ತಾವು ಅಂದುಕೊಂಡದ್ದು ಸರಿ ಎಂಬಂತೆ ನಕ್ಕರು. ತಾನು ಸರಿಯಾದ ನಿರ್ಧಾರ ತೆಗೆದುಕೊಂಡರೂ ಕೂಡ ತಪ್ಪು ನಿರ್ಧಾರ ತೆಗೆದುಕೊಂಡ ಸುತ್ತಮುತ್ತಲಿನವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದಾಗಿ ಅವನು ತನ್ನ ಜೀವವನ್ನೇ ತೆರಬೇಕಾಯಿತು. ನಮ್ಮ ದೇಶದಲ್ಲಿ ಈ ರೀತಿಯ ಕಥೆಗಳು ವಿವಿಧ ರೂಪದಲ್ಲಿ ಸಿಗುತ್ತಲೇ ಇರುತ್ತವೆ. ಪ್ರಜ್ಞಾವಂತಿಕೆ ತೋರಿಸಿದವರನ್ನು ತಮಾಷೆ ಮಾಡುವುದು, ಬಯ್ಯುವುದು, ಥಳಿಸುವುದು, ಕೊಲ್ಲುವುದು ಇತ್ಯಾದಿ ನಡೆಯುತ್ತಲೇ ಇರುತ್ತವೆ. ಇದು ನಿಂತರೇನೇ ನಮ್ಮ ದೇಶ ಮುಂದೆ ಬರಲು ಸಾಧ್ಯ.

ಸಾರಾಂಶ

ತಪ್ಪುಕಲ್ಪನೆಗಳ ಹಾಗೂ ಮೂಢನಂಬಿಕೆಗಳ ಮೂಲಕ ತಾತ್ಕಾಲಿಕ ಜಯ/ಸದಾಚಾರ ಸಾಧ್ಯ, ಆದರೆ ದೂರಗಾಮಿ ದೃಷ್ಟಿಯಿಂದ ನೋಡಿದರೆ ಅದರಲ್ಲಿ ಒಳಿತಿಗಿಂತ ಕೆಡುಕುಗಳೇ ಹೆಚ್ಚು. ಹೀಗಾಗಿ ಯಾವುದೇ ಆಚಾರವಿರಲಿ, ಸಂಪ್ರದಾಯವಿರಲಿ, ಅದರ ಸತ್ಯಾಸತ್ಯತೆಯನ್ನು ಸರಿಯಾದ ರೀತಿಯಲ್ಲಿ ಅರಿತುಕೊಳ್ಳುವುದು ಹಾಗೂ ಮುಚ್ಚುಮರೆ ಇಲ್ಲದ ನೇರ ರೀತಿಯಲ್ಲಿ ಮುಂದಿನ ಜನಾಂಗಕ್ಕೆ ದಾಟಿಸುವುದು - ಇದು ಸುಲಭವಲ್ಲದಿದ್ದರೂ ಸಮಗ್ರ ಹಿತಕ್ಕೆ ಅತ್ಯಂತ ಒಳ್ಳೆಯ ದಾರಿ.

ನನ್ನ ವೈಯಕ್ತಿಕ ನಂಬುಗೆ, ಆದ್ಯತೆಗಳ ಬಗ್ಗೆ ಒಂದಿಷ್ಟು

ಸಂಪ್ರದಾಯ, ಆಚಾರ, ವೈಜ್ಞಾನಿಕತೆ ಹಾಗೂ ಧಾರ್ಮಿಕತೆ – ಇವುಗಳ ಮಧ್ಯೆ ಇರುವ ಸಂಬಂಧ, ಜನರ ನಿಲುವುಗಳು, ಯಾವುದು ನಮ್ಮ ಸಮಗ್ರ ಹಿತಕ್ಕೆ ಉತ್ತಮ ಎನ್ನುವುದರ ಬಗ್ಗೆ ಬರೆದೆ. ಕೆಲವು ಮಾನಸಿಕ ಸಂಕೋಲೆಗಳಿಂದ ನಾನು ಹೇಗೆ ಹೊರಬಂದೆ ಎಂಬುದರ ಬಗ್ಗೆಯೂ ಒಂದಷ್ಟು ಬರೆದೆ. ಆದರೆ ಈ ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿ ಬೆಳೆದು ಬಂದ ನಾನು ಈ ಕೆಳಗಿನ ವಿಷಯಗಳ ಬಗ್ಗೆ ಬರೆಯದಿದ್ದರೆ ಲೇಖನ ಅಪೂರ್ಣವಾಗಿಯೇ ಇರುತ್ತದೆ. ಇದು ಈಗಾಗಲೇ ಸಾಕಷ್ಟು ದೀರ್ಘವಾಗಿರುವುದರಿಂದ ಇದನ್ನು ಪ್ರತ್ಯೇಕ ಲೇಖನದಲ್ಲಿ ಬರೆಯುತ್ತೇನೆ, ಇಲ್ಲಿ ಕೊಂಡಿಯನ್ನು ಮಾತ್ರ ಕೊಡುತ್ತೇನೆ.

- ನಾನೇಕೆ ಜನಿವಾರ ಹಾಕುವುದಿಲ್ಲ?
- ಜ್ಯೋತಿಷ್ಯಶಾಸ್ತ್ರ, ಜಾತಕ – ದುಷ್ಟ ವಿಜ್ಞಾನವೇ?
- ವಾಸ್ತುಶಾಸ್ತ್ರ, ನಾನು ಕಂಡಂತೆ
- ನಾನು ಮತ್ತೆ ಧಾರ್ಮಿಕತೆ


ಈ ಬಗ್ಗೆ ನಾನು ಬರೆದ ಇನ್ನೊಂದು ಲೇಖನ:

3 comments:

ಕೃಷ್ಣ ಶಾಸ್ತ್ರಿ - Krishna Shastry said...

ವಿ.ಸೂ. ಈ ಪ್ರತಿಕ್ರಿಯೆಯನ್ನು ಕಳಿಸಿದವರಿಗೆ ನೇರವಾಗಿ ಬ್ಲಾಗಿನಲ್ಲಿ ಬರೆಯಲು ಇಷ್ಟವಿರಲಿಲ್ಲ, ನನಗೆ ನೇರವಾಗಿ ಕಳುಹಿಸಿದರು, ಅವರ ಅನುಮತಿಯೊಂದಿಗೆ ಹೆಸರು ಹಾಕದೇ ಪ್ರತಿಕ್ರಿಯೆಯನ್ನು ಮಾತ್ರ ಹಾಕುತ್ತಿದ್ದೇನೆ.

ಇತ್ತೀಚೆಗೆ ಒಬ್ಬ ಆಸ್ತಿಕರ ಜೊತೆ ನನಗೆ ದೀರ್ಘ ಚರ್ಚೆ ನಡೆಯಿತು. ಹೋಮ, ಯಜ್ಞ ಇತ್ಯಾದಿಗಳು ವೈಜ್ಞಾನಿಕ ಎಂಬುದು ಅವರ ವಾದವಾಗಿತ್ತು. ಇತ್ತೀಚೆಗೆ ನಡೆದ ಯಜ್ಞದಿಂದಾಗಿ ವಾತಾವರಣದಲ್ಲಿ ಆದ ಬದಲಾವಣೆಯನ್ನು ಅವರು ಉದಾಹರಣೆಯಾಗಿ ಕೊಟ್ಟರು. ಇನ್ನೂ ಹೆಚ್ಚಿನ ಬಲವಾದ ವೈಜ್ಞಾನಿಕ ಪುರಾವೆ ಕೇಳಿದಾಗ ‘ಹಾಗೆಂದು ವಾರ್ತಾಪತ್ರಿಕೆಯಲ್ಲಿ ಬಂದಿತ್ತು, ಅಷ್ಟು ಪುರಾವೆ ಧಾರಾಳವಾಯಿತು’ ಎಂದುಬಿಟ್ಟರು! ಹೀಗಿದೆ ನೋಡಿ ನಮ್ಮ ವೈಜ್ಞಾನಿಕ ಮನೋಭಾವನೆ.

ಜನರು ಬಹಳ ಅಮೂರ್ತ (abstract), ಅಸ್ಪಷ್ಟ ಪುರಾವೆಗಳಿಗೆ ಒಪ್ಪಿಕೊಂಡುಬಿಡುತ್ತಾರೆ, ಹಾಗೂ ಅದು ವೈಜ್ಞಾನಿಕ ಪುರಾವೆ ಎಂದು ತಲೆದೂಗುತ್ತಾರೆ. ಇಂತಹ ವಿಷಯದಲ್ಲಿ ನಮ್ಮವರ ಜೊತೆ ಚರ್ಚೆ ಮಾಡುವುದು ಭಯಂಕರ ಕಷ್ಟ ಎಂದು ನಾನು ಕಂಡುಕೊಂಡ ವಿಚಾರ (ನನ್ನ ಹೆತ್ತವರನ್ನೂ ಸೇರಿಸಿ).

ಕುಂಬಳಕಾಯಿ ಕೊರೆದರೆ ಅಪ್ಪ-ಅಮ್ಮನ ಜೀವಕ್ಕೆ ಕಂಟಕ ಇದೆಯಂತೆ, ಹಾಗಾಗಿ ಅಪ್ಪ-ಅಮ್ಮ ಇರುವವರು ಕುಂಬಳಕಾಯಿ ಕೊರೆಯಬಾರದಂತೆ. ಇದನ್ನು ಅಮ್ಮನ ತಲೆಯಿಂದ ತೆಗೆದೊಗೆಯಲು ನನ್ನಿಂದ ಸಾಧ್ಯವಿದ್ದ ಪ್ರಯತ್ನಗಳನ್ನೆಲ್ಲಾ ಮಾಡಿ ಸೋತಿದ್ದೇನೆ. ಬೇಕಾದಷ್ಟು ನಿಜಜೀವನದ ದೃಷ್ಟಾಂತಗಳನ್ನು ಕೊಟ್ಟರೂ ಕೂಡ ಅಮ್ಮನಿಗೆ ಇನ್ನೂ ನಂಬಿಕೆ ಬರಲಿಲ್ಲ!

Shankara Bhat said...

ದೇವರು ಒಂದು ಜಾಣ ಸುಂದರ ಕಲ್ಪನೆ,ಮಕ್ಕಳ ಪ್ರಶ್ನೆಗಳಿಗೆ ಸುಲಭದಲ್ಲಿ ಉತ್ತರಿಸಬಹುದು.ಉದಾ:ಅಮ್ಮನಾನೆಲ್ಲಿಂದಬಂದೆ,ಅಜ್ಜಿ ಸತ್ತಮೇಲೆ ಎಲ್ಲಿಗೆಹೋದರು;ಒಂದೇ ಉತ್ತರ "ದೇವರು"ದೊಡ್ಡವರಾದ ಮೇಲೆ ತಿಳಿದುಕೊಳ್ಳುತ್ತಾರೆ,ತೊಂದರೆಯಿಲ್ಲ.ನಮಗೆಲ್ಲಾ 'ದೇವರು'ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ,ಆದರೆ ನಮ್ಮ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಸರಿಯಲ್ಲ.ಎಶ್ಟೋ ಮಂದಿ ದೇವರಿಂದಲೇ ತಮ್ಮಬದುಕನ್ನು ಸಾಗಿಸುತ್ತಾರೆ.ಸಂಕಟ ಬಂದಾಗ ದೇವರ ಮೇಲೆ ಹಾಕಿ ನಿರಾಳ ವಾಗಿರುತ್ತಾರೆ.ಹೀಗೆ ದೇವರಿಂದ ತಂಬಾ ಲಾಭವಿದೆ.ದೇವರು,ನಂಬಿಕೆ,ಆಚರಣೆ,ಪೂಜೆ,ತೀರ್ತ,ಜನಿವಾರ,ಇತ್ಯಾದಿಗಳೇಜೀವನವಲ್ಲ ಇವು ಜೀವನದ ಒಂದು ಸಣ್ಣ ಅಂಶ ಅಶ್ಟೇ.ನಿಮ್ಮಮುಖ್ಯವಾದ ಜೀವನಕ್ಕೆ ತೊಂದರೆಯಾಗದಂತೆ ಹೊಂದಾಣಿಕೆ ಮಾಡಿಕೊಳ್ಳಿ.ಎಲ್ಲರನ್ನೂ ತಿದ್ದಲು ಪ್ರಯತ್ನಿಸುವುದು.....?

ಕೃಷ್ಣ ಶಾಸ್ತ್ರಿ - Krishna Shastry said...

ಶಂಕರ ಭಟ್ಟರೇ, ಪ್ರತಿಕ್ರಿಯೆಗೆ ಧನ್ಯವಾದಗಳು. ಇದು ದೇವರ ವಿರುದ್ಧ ಬರೆದ ಲೇಖನ ಅಲ್ಲ. ಸಂಪ್ರದಾಯಗಳನ್ನು ವಿಶ್ಲೇಷಿಸುವ ಪ್ರಯತ್ನ, ಅವುಗಳನ್ನು ಹೇಗೆ ವಸ್ತುನಿಷ್ಠವಾಗಿ ಪ್ರಚುರಪಡಿಸಿದರೆ ಒಳಿತು ಎಂಬುದರ ಬಗ್ಗೆ ನನ್ನ ಅನಿಸಿಕೆಗಳು, ಅಷ್ಟೆ. ತಾರ್ಕಿಕ ಎಂದು ಕಂಡರೆ ಜನ ಒಪ್ಪುತ್ತಾರೆ, ಉಳಿದವರು ಬಿಡುತ್ತಾರೆ :-)

ಇನ್ನು ದೇವರ ವಿಷಯದಲ್ಲಿ: ಖಂಡಿತಾ ದೇವರು ಎಂಬುದು ಒಂದು ಸುಂದರ ಕಲ್ಪನೆ, ಕೆಲವು ಸಲ ಪ್ರಯೋಜನಕಾರಿ. ಆದರೆ ನಂಬಿಕೆ ಮತ್ತು ಸಂಪ್ರದಾಯಗಳನ್ನು ಕಲಸುಮೇಲೋಗರ ಮಾಡಿದರೆ ಅನೇಕ ತೊಂದರೆಗಳು ಹುಟ್ಟುತ್ತವೆ ಎಂದು ನನ್ನನಿಸಿಕೆ ಅಷ್ಟೆ.

Post a Comment