About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Wednesday, November 30, 2011

ಸಂಪ್ರದಾಯಗಳು ಮತ್ತು ನಾನು

ಓದುವ ಮುನ್ನ ವಿ.ಸೂ. ಈ ಲೇಖನ ಬರೆದದ್ದು ಸಂಪ್ರದಾಯಸ್ಥರ ಮನನೋಯಿಸುವ ಉದ್ದೇಶದಿಂದ ಬರೆದದ್ದಲ್ಲ, ದಯವಿಟ್ಟು ತಪ್ಪುತಿಳಿದುಕೊಳ್ಳಬೇಡಿ. ಆಚಾರಗಳ ಬಗ್ಗೆ ಆಳವಾಗಿ ಗೊತ್ತಿರುವವರು ಅವುಗಳನ್ನು ಸತ್ವ-ಸತ್ಯಗಳ ಬುನಾದಿಯ ಮೇಲೆ ಆಚರಿಸಿಕೊಂಡಿದ್ದರೆ ಅಂಥವರ ಮೇಲೆ ನನಗೆ ಅಗೌರವ ಇಲ್ಲ.

ಈ ಮೊದಲಿನ ಲೇಖನದಲ್ಲಿ (ಸಂಪ್ರದಾಯಗಳು, ವಿಜ್ಞಾನ ಹಾಗೂ ಧಾರ್ಮಿಕತೆ) ನಾನು ಈ ಕೆಳಗಿನ ವಿಷಯಗಳ ಬಗ್ಗೆ ಬರೆದೆ:
- ಸಂಪ್ರದಾಯದ ಗುಣಧರ್ಮಗಳು, ಅದನ್ನು ಹೇಗೆ ವಿಶ್ಲೇಷಿಸಬಹುದು
- ಸಂಪ್ರದಾಯದ ಮೇಲೆ ಧಾರ್ಮಿಕತೆಯ ಪ್ರಭಾವ ಹಾಗೂ ಅದರಿಂದಾಗುವ ಅಪಾಯ
- ಸದಾಚಾರವನ್ನು ಹೇಗೆ ಎತ್ತಿಹಿಡಿದರೆ ನಮಗೆ ಒಳಿತು (ವಿಜ್ಞಾನ + ಕಾನೂನು)

ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿ ಬೆಳೆದ ನಾನು ಅನೇಕ ಸಂಪ್ರದಾಯಗಳನ್ನು ಕಂಡಿದ್ದೇನೆ. ಆದರೆ ಅದೃಷ್ಟವಶಾತ್ ನಮ್ಮ ಮನೆಯಲ್ಲಿ ವೈಚಾರಿಕತೆಗೆ ಸಂಪೂರ್ಣ ಸ್ವಾತಂತ್ರ್ಯ ಇತ್ತು, ಹೀಗಾಗಿ ನನ್ನದೇ ನಿಲುವುಗಳನ್ನು ಬೆಳೆಸಿಕೊಂಡು ಬರಲು ಸಾಧ್ಯವಾಯಿತು. ಈ ಲೇಖನದಲ್ಲಿ ನಾನು ಕೆಲವು ಮುಖ್ಯ ಸಂಪ್ರದಾಯಗಳ ಬಗ್ಗೆ ನನ್ನ ವೈಯಕ್ತಿಕ ನಿಲುವುಗಳನ್ನು ಬರೆಯುತ್ತಿದ್ದೇನೆ. ಬ್ರಾಹ್ಮಣರು ಶುಚಿಗೆ ಕೊಡುವ ಆದ್ಯತೆ, ಊಟ ಇತ್ಯಾದಿಗಳಲ್ಲಿ ವ್ಯವಸ್ಥಿತವಾಗಿ ನಡೆಸುವ ರೀತಿನೀತಿ ಇತ್ಯಾದಿಗಳ ಬಗ್ಗೆ ನನಗೆ ಹೆಮ್ಮೆ ಇದೆ, ಆದರೆ ಇಲ್ಲಿ ಹೇಳಿದ ಕೆಲವು ಸಂಪ್ರದಾಯಗಳ ಬಗ್ಗೆ ಆ ಭಾವನೆ ಇಲ್ಲ.

ನಾನೇಕೆ ಜನಿವಾರ ಧರಿಸುವುದಿಲ್ಲ?

ನಾನು ಹುಟ್ಟಿನಿಂದ ಬ್ರಾಹ್ಮಣ, ಉಪನಯನ ಸಂಸ್ಕಾರವಾಗಿದೆ. ಚಿಕ್ಕಂದಿನಲ್ಲಿ ದೇವರ ಬಗ್ಗೆ ಅತೀವವಾದ ಭಕ್ತಿಭಾವವೂ ಇತ್ತು. ಆಗೆಲ್ಲಾ ಸಂಪ್ರದಾಯಗಳನ್ನು ಹಾಗೂ ಆಚಾರಗಳನ್ನು ಸಿಕ್ಕಾಪಟ್ಟೆ ಪ್ರಶ್ನಿಸುತ್ತಿರಲಿಲ್ಲ, ಅವುಗಳು ಅರ್ಥವಾಗದಿದ್ದರೂ ಕೂಡ. ೮ನೇ ತರಗತಿಯ ಬೇಸಿಗೆ ರಜೆಯಲ್ಲಿ ಮಧೂರು ದೇವಸ್ಥಾನದಲ್ಲಿ ವೇದಪಾಠ ಶಾಲೆಗೂ ಹೋಗಿದ್ದೇನೆ. ಆದರೆ ಈಗ ಜನಿವಾರವನ್ನೂ ಧರಿಸುವುದಿಲ್ಲ, ಊಟ ಮಾಡುವಾಗ ಕೈನೀರೂ ತೆಗೆದುಕೊಳ್ಳುವುದಿಲ್ಲ, ಯಾಕೆ? ಏನಾಯಿತು?

ಮೊದಲು ಜನಿವಾರ ಏಕೆ ಧರಿಸಬೇಕು ಎಂಬುದನ್ನು ತಿಳಿಯಲು ಪ್ರಯತ್ನ ಮಾಡೋಣ. ಅದಕ್ಕೆ ಸಂಬಂಧಪಟ್ಟಂತೆ ಸಿಕ್ಕಿದ ಒಂದು ಲೇಖನ ಇಲ್ಲಿದೆ ನೋಡಿ, ವಿ. ಆರ್. ಭಟ್ ಎಂಬವರು ಬರೆದ ‘ರಕ್ಷಾಬಂಧನ ಮತ್ತು ಉಪಾಕರ್ಮ’ ಎಂಬ ಬ್ಲಾಗ್ ಲೇಖನ.

ಈ ಲೇಖನಕ್ಕೆ ಪ್ರತಿಕ್ರಿಯೆ ಬರೆಯುವ ಮೂಲಕ ಜನಿವಾರದ ಬಗ್ಗೆ ನನ್ನದೇ ನಿಲುವುಗಳನ್ನು ಸ್ಪಷ್ಟಪಡಿಸಬಯಸುತ್ತೇನೆ. ಜನಿವಾರ ಹಾಗೂ ಅದಕ್ಕೆ ಸಂಬಂಧಪಟ್ಟ ಆಚರಣೆಗಳ ಬಗ್ಗೆ ಮನಸ್ಸಲ್ಲೇಳುವ ಹಲವು ಪ್ರಶ್ನೆಗಳಲ್ಲಿ ಕೆಲವು ಇಂತಿವೆ:

- ಹುಡುಗಿಯರಿಗೇಕೆ ಜನಿವಾರ ಇಲ್ಲ?
- ಬ್ರಹ್ಮೋಪದೇಶ ಕೊಡುವ ಅರ್ಹತೆ ತಂದೆಗಿದ್ದಷ್ಟೇ ತಾಯಿಗೇಕಿಲ್ಲ?
- ಯಾರಾದರೂ ಹೆತ್ತರೆ ಅಥವಾ ಸತ್ತರೆ, ಜನಿವಾರ ಬದಲಾಯಿಸುವುದರಲ್ಲಿ ಏನು ಅರ್ಥ ಇದೆ? ಇಲ್ಲಿ ಅಶೌಚ ಎಂದರೆ ಏನು?
- ಶರೀರದಲ್ಲಿ ಏನೇನೋ ಕಾಸ್ಮಿಕ್ ರೇಡಿಯೇಷನ್ ಆಗುತ್ತದೆ ಎಂದೆಲ್ಲಾ ಭಟ್ಟರು ಬರೆದಿದ್ದಾರೆ, ಇದಕ್ಕೆ ಏನಾದರೂ ಸ್ವಲ್ಪ ಮಟ್ಟಿಗೆಯಾದರೂ ವೈಜ್ಞಾನಿಕ ಪುರಾವೆಯಿದೆಯೇ? ಇದೆ ಎಂದಾದರೆ ಪುನಃ ಕೇಳುತ್ತೇನೆ: ಹುಡುಗಿಯರಿಗೇಕಿಲ್ಲ ಜನಿವಾರ?
- ಇತರ ವರ್ಣದವರಿಗೂ ಜನಿವಾರ ಹಾಕಲು ಪ್ರೋತ್ಸಾಹಿಸಬೇಕಲ್ಲವೇ? ಅವರಿಗೆ ಜನಿವಾರದ ಪ್ರಯೋಜನಗಳು ದೊರೆಯಬಾರದೆಂದು ಬ್ರಾಹ್ಮಣರು ನಿರ್ಧರಿಸಿದ್ದಾರೆಯೇ? ಇಲ್ಲ ಎಂದಾದಲ್ಲಿ ಯಾಕೆ ‘ಯೋಗ್ಯತಾ ಆಧಾರ’ದಲ್ಲಿ (ಅಂದರೆ ಹುಟ್ಟಿನಿಂದ ಬಂದ ಜಾತಿಯ ಆಧಾರದಲ್ಲಿ ಅಲ್ಲ) ಉಪನಯನ ಮಾಡುವ ಕ್ರಮ ಎಲ್ಲಿಯೂ ಕಂಡುಬರುವುದಿಲ್ಲ?

ಈ ಮೇಲೆ ಹೇಳಿದ ಅಸಮಾನತೆಗಳಿಗೆ ಕಾರಣ ಪುರೋಹಿತಶಾಹೀ ಹಾಗೂ ಪುರುಷ ಪ್ರಧಾನ ಸಮಾಜದ ಅಧಿಕಾರ ಚಲಾವಣೆ, ಮತ್ತಿನ್ನೇನಿಲ್ಲ ಎಂದೆನಿಸುವುದಿಲ್ಲವೇ? ಇಂತಹ ಅಸಮಾನತೆಗಳಿರುವ ತನಕ ನನಗೆ ಜನಿವಾರದ ಬಗ್ಗೆ ಗೌರವ ಮೂಡುವುದು ಕಷ್ಟ. ಜಪ-ತಪಗಳಿಂದ ಪ್ರಯೋಜನಗಳಿಲ್ಲ ಎಂದಲ್ಲ, ಆದರೆ ಅಸಮಾನತೆ ಮನಸ್ಸನ್ನು ಮುದುಡಿಹಾಕುತ್ತದೆ.

ವಿ. ಆರ್. ಭಟ್ಟರು ಇನ್ನೊಂದು ವಿಷಯದ ಬಗ್ಗೆ ಬರೆದಿದ್ದಾರೆ, ಲೋಪದೋಷ, ಗ್ರಹಚಾರ ಇತ್ಯಾದಿಗಳ ಬಗ್ಗೆ. ಇದನ್ನು ನಾನು ಕಟುವಾಗಿ ವಿರೋಧಿಸುತ್ತೇನೆ, ಇದು ಮೂಢನಂಬಿಕೆಗಳ ಸಾಲಿಗೆ ಸೇರಿಸಬೇಕಾದದ್ದು; ಇಲ್ಲವಾದರೆ ಸರಿಯಾದ ವೈಜ್ಞಾನಿಕ ಪುರಾವೆಗಳನ್ನು ಕೊಡಬೇಕು. ಪುರೋಹಿತಶಾಹೀ ವರ್ಗದವರು ಇಂಥದ್ದನ್ನು ಹೇಳಿ ಹೇಳಿ ಜನರನ್ನು ಮರುಳು ಮಾಡುತ್ತಾ ಬಂದಿದ್ದಾರೆ. ಇಲ್ಲಿರುವುದು ಬರೀ ನಂಬಿಕೆಯ ಪ್ರಶ್ನೆ ಅಲ್ಲ - ‘ಇದು ಅವೈಜ್ಞಾನಿಕವಾಗಿ ಜನರಲ್ಲಿ mental block ಹಾಗೂ ಭೀತಿಯನ್ನು ಹುಟ್ಟಿಸುವ ಪ್ರಯತ್ನ’ ಎಂದು ನಾನು ಖಡಾಖಂಡಿತವಾಗಿ ಹೇಳುತ್ತೇನೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಕೆಲವೊಂದು ಕ್ರಮಗಳನ್ನು, ತತ್ವಗಳನ್ನು ಪಾಲಿಸುವುದರಿಂದ ಪ್ರಯೋಜನಗಳಿರಬಹುದು - ಅಂತಹ ಒಳಿತುಗಳನ್ನು ನಂಬಿಕೆಯಿರುವವರು ಹಾಗೂ ವೈಜ್ಞಾನಿಕವಾಗಿ ವಿಚಾರ ಮಾಡುವವರು ಬೇರೆ ಬೇರೆ ರೀತಿ ವಿವರಿಸಬಹುದು. ಆದರೆ ಕೆಡುಕುಗಳ ಬಗ್ಗೆ ಹೇಳುವಾಗ ಮಾತ್ರ ಬಹಳ ಜಾಗ್ರತೆ ಬೇಕು. ಅದನ್ನು ಪಾಲಿಸದೇ ಇದ್ದರೆ ಹೀಗಾಗುತ್ತದೆ, ಇದನ್ನು ನಿಲ್ಲಿಸಿದರೆ ಆ ದೋಷ ಬರುತ್ತದೆ ಎಂದಿತ್ಯಾದಿ ಮಾತುಗಳನ್ನು ವೈಜ್ಞಾನಿಕ ಪುರಾವೆಗಳಿಲ್ಲದೆ ಹೇಳುವುದು ಬಹಳ ಬೇಸರದ ಸಂಗತಿ. ಇಲ್ಲಿ ನಂಬಿಕೆಗಿಂತ ಜಾಸ್ತಿ ಯಾರ್ಯಾರದ್ದೋ ಹಿತಾಸಕ್ತಿಗಳು ಎದ್ದು ಕಾಣುತ್ತವೆ. ಒಮ್ಮೆ ಆಲೋಚನೆ ಮಾಡಿ ನೋಡಿ - ನೀವು ನಂಬುವ ದೇವರು ಅಷ್ಟೆಲ್ಲಾ ಕಟುವೇ? ದೇವರನ್ನು ತಂದೆ-ತಾಯಿಗೆ ಸಮಾನವಾಗಿ ಕಾಣುತ್ತೇವೆ - ತಂದೆ-ತಾಯಿಯರ ಮುಖ್ಯ ಗುಣ ಕ್ಷಮೆ ಹಾಗೂ ಪ್ರೀತಿ, ದಂಡನೆ ಹಾಗೂ ಕೋಪ ಅಲ್ಲ.

ವೈಯಕ್ತಿಕವಾಗಿ ನನಗೆ ಜನಿವಾರವು ಧಾರ್ಮಿಕತೆಯ ಇತರ ಅನೇಕಾನೇಕ ಸಂಕೇತಗಳಂತೆ ಒಂದು mental block ಅಷ್ಟೆ. ನನ್ನ ಜೀವನ ನಿಯಮ ಸರಳ - ಮಾನವೀಯತೆಯಿಂದ ಬದುಕುವುದು. ಈ ಸರಳ ನಿಯಮದ ಪರಿಧಿಯಲ್ಲೇ ಸಾಧಿಸುವುದು ಬಹಳಷ್ಟಿದೆ, ಅದಕ್ಕಿಂತ ಮಿಗಿಲಾಗಿ ಧಾರ್ಮಿಕ ವಿಧಿ ವಿಧಾನಗಳಿಗೆ ಹೆಚ್ಚಿನ ಜಾಗ, ಸಮಯ ಇಲ್ಲ ನನ್ನ ಬಳಿ. ಧಾರ್ಮಿಕತೆ ತಪ್ಪೆಂದು ಸಾರಾಸಾಗಟಾಗಿ ನಾನು ತಳ್ಳಿಹಾಕ್ಕುತ್ತಿಲ್ಲ, ನಂಬಿಕೆ ಇರುವವರಿಗೆ ಈ ಆಚಾರದಲ್ಲಿ ಉತ್ತಮ ಅಂಶಗಳಿರಬಹುದು. ಆದರೆ ನಂಬಿಕೆಯ ಸುತ್ತ ಹೆಣೆದ ಕೆಲವು ವಿಷಯಗಳು ಮನುಷ್ಯರನ್ನು ಹಿಂಡಿ ಹಿಪ್ಪೆ ಮಾಡುವುದಕ್ಕೆ ನನ್ನ ವಿರೋಧವಿದೆ, ಅದನ್ನು ನೋಡುವಾಗ ಮನಸ್ಸಿಗೆ ಬೇಸರವಾಗುತ್ತದೆ.

ಜನಿವಾರ ಮಾತ್ರವಲ್ಲ, ಒಟ್ಟಾರೆ ವೈದಿಕ ವಿಧಿ ವಿಧಾನಗಲೇ ಅನೇಕ ಸಲ ಹಾಸ್ಯಾಸ್ಪದವಾಗಿ ತೋರುತ್ತವೆ. ಎಲ್ಲದಕ್ಕೂ ಸುಲಭ ಸೂತ್ರಗಳಿರುತ್ತವೆ, ‘ಪರಿಹಾರ’ಗಳಿರುತ್ತವೆ, ತಾವು ಸ್ವತಃ ಮಂತ್ರಗಳನ್ನು ಹೇಳಬೇಕಾಗಿಯೇ ಇಲ್ಲ, ಮಂತ್ರ ಹೇಳುತ್ತಿರುವಾಗ ಪುರೋಹಿತರನ್ನು ಮುಟ್ಟಿಕೊಂಡು ಅಲ್ಲಲ್ಲಿ ‘ಮಮ’ ಎಂದುಬಿಟ್ಟರೆ ಸಾಕು. ಗೊತ್ತಿಲ್ಲದ ಸಂಸ್ಕೃತ ಭಾಷೆಯಲ್ಲಿ ಏನೇನೋ ಹೇಳಿ ಸಾಮಾನ್ಯರಿಗೆ ಏನೂ ಅರ್ಥವಾಗದಂತೆ ಜರುಗಿಸುವ ಕ್ರಮಗಳಿಂದ ಏನು ಲಾಭ? ಇಂತಹ ಕ್ರಮಗಳಿಂದ ಪ್ರಜ್ಞಾವಂತರ ಮನಸ್ಸು ಗೆಲ್ಲಲು ಸಾಧ್ಯವೇ?

ಇನ್ನೊಂದು ಅಸಹ್ಯಕರ ವಿಷಯವೆಂದರೆ ಕೆಟ್ಟ ಕೆಲಸ ಮಾಡುವವರು ಅನೇಕ ಧಾರ್ಮಿಕ ವಿಧಿಗಳ ಪೋಷಕರಾಗಿರುವುದು. ಭ್ರಷ್ಟರಾಗಿರುವವರನೇಕರು ತೋರಿಸುವ ಭಕ್ತಿ, ಅವರು ನಡೆಸುವ ಯಜ್ಞ-ಯಾಗಾದಿಗಳು, ಅವರಿಗೆ ಸಮಾಜದಲ್ಲಿ ಸಿಗುವ ಮಾನ್ಯತೆ, ಅವರನ್ನು ಓಲೈಸುವ ಧಾರ್ಮಿಕ ಮುಖಂಡರು - ಇದೆಲ್ಲಾ ನೋಡುವಾಗ ಧಾರ್ಮಿಕತೆಯೊಂದಿಗೆ ತಳುಕು ಹಾಕಿದ ಯಾವುದೇ ಸಂಪ್ರದಾಯ ನಮಗೆ ತಕ್ಕುದ್ದಲ್ಲ, ಅವುಗಳಿಂದ ವಿಮುಖವಾಗುವುದೇ ಒಳಿತು ಎಂದು ಕಾಣುತ್ತದೆ. ಏಕೆಂದರೆ ಅಲ್ಲಿ ‘ಸದಾಚಾರ’ ಎಂಬ ಪದಕ್ಕೆ ಅರ್ಥವೇ ಇಲ್ಲದಾಗುತ್ತದೆ.

ನಿಮಗೆಲ್ಲರಿಗೂ ನನ್ನ ಸಂದೇಶ - ಜೀವನವನ್ನು ಸರಳವಾಗಿಡೋಣ - ಧಾರ್ಮಿಕತೆಯನ್ನು ಪೂರ್ತಿ ಬಿಟ್ಟುಬಿಡಿ ಎಂದೇನೂ ನಾನು ಹೇಳುತ್ತಿಲ್ಲ, ನಂಬಿಕೆಗೆ ಅದರದ್ದೇ ಆದ ಪ್ರಯೋಜನಗಳಿವೆ. ಆದರೆ ಕಾಣದ ದೇವತೆಗಳು ಯಾವುದನ್ನು ಇಷ್ಟಪಡುತ್ತಾರೆ, ಯಾವಾಗ ಕೋಪಿಸಿಕೊಳ್ಳುತ್ತಾರೆ ಎಂದು ಕಂಡಾಬಟ್ಟೆ ತಲೆಬಿಸಿ ಮಾಡುವ ಬದಲು ಮಾನವೀಯತೆಯಿಂದ, ಸಮಾನತೆಯೊಂದಿಗೆ ಬಾಳೋಣ. ಅದು ಬಹಳ ಸರಳ ಹಾಗೂ ಶ್ರೇಷ್ಠ ಧರ್ಮ, ಅದನ್ನೇ ಪಾಲಿಸದೆ ಇನ್ನುಳಿದ ಯಾವ ಧಾರ್ಮಿಕ ವಿಧಿಗಳನ್ನು ಮಾಡಿದರೆ ಏನು ಪ್ರಯೋಜನ?

ಆಚಾರಗಳ ಬಗ್ಗೆ ಆಳವಾಗಿ ಗೊತ್ತಿರುವವರು ಅವುಗಳನ್ನು ಸತ್ವ-ಸತ್ಯಗಳ ಬುನಾದಿಯ ಮೇಲೆ ಆಚರಿಸಿಕೊಂಡಿದ್ದರೆ ಅಂಥವರ ಮೇಲೆ ನನಗೆ ಅಗೌರವ ಇಲ್ಲ. ಆದರೆ ವೈಯಕ್ತಿಕವಾಗಿ ನನಗೆ ವೈದಿಕ ಆಚಾರಕ್ಕಿಂತ ಹೆಚ್ಚು ಇಷ್ಟ ಮಾನವೀಯ ಮೌಲ್ಯಗಳು, ಅದು ನನ್ನ ಹೃದಯಕ್ಕೆ ಹೆಚ್ಚು ಹತ್ತಿರ. ಕೋಳಿ ತಿನ್ನುವ ಬ್ರಾಹ್ಮಣನಿಗಿಂತ ಸಸ್ಯಾಹಾರಿ ಶೂದ್ರ ಮೇಲು, ಲಂಚ ತಿನ್ನುವ ಬ್ರಾಹ್ಮಣನಿಗಿಂತ ಮೈಮುರಿದು ಕೂಲಿ ಮಾಡುವ ಶೂದ್ರ ಮೇಲು ಎಂದು ಹೇಳುವವನು ನಾನು.

ಕಷ್ಟದಲ್ಲಿರುವ ಮನುಷ್ಯರ ಪರವಾಗಿ ಕೆಲಸ ಮಾಡಿ, ಹೋರಾಡಿ - ಪರಿತ್ಯಕ್ತ ವೃದ್ಧ-ವೃದ್ಧೆಯರು, ಅನಾಥ ಮಕ್ಕಳು, ದೌರ್ಜನ್ಯಕ್ಕೊಳಗಾದ ಮಹಿಳೆಯರು, ರೋಗಗ್ರಸ್ಥ ಬಡವರು, ಪ್ರಾಕೃತಿಕ ವಿಕೋಪದಿಂದ ಝರ್ಝರಿತರಾದವರು, ಬುದ್ಧಿಮಾಂದ್ಯರು, ಅನಕ್ಷರಸ್ಥರು - ಹೀಗೆ ಈ ವಿಭಾಗ ಬಹಳ ದೊಡ್ಡದಿದೆ, ಮುಗಿಯಲಾರದಷ್ಟು ಕೆಲಸಗಳಿವೆ. ಕಷ್ಟದಲ್ಲಿರುವ ಮನುಷ್ಯರು ಮಾತ್ರವಲ್ಲ, ಸ್ವಾರ್ಥಿ ಮನುಷ್ಯರ ತುಳಿತಕ್ಕೊಳಗಾಗಿ ಸಂಕಟದಲ್ಲಿರುವ ಪ್ರಾಣಿಗಳ ಬಗ್ಗೆ, ಪರಿಸರದ ಬಗ್ಗೆ ಆಲೋಚನೆ ಮಾಡಿ, ಹೋರಾಡಿ.

ಜ್ಯೋತಿಷ್ಯ ಶಾಸ್ತ್ರ, ಜಾತಕ - ದುಷ್ಟ ವಿಜ್ಞಾನವೇ?

ಜ್ಯೋತಿಷ್ಯ, ಜಾತಕ - ಇವುಗಳಲ್ಲಿ ವಿಜ್ಞಾನವಿದೆಯೇ ಇಲ್ಲವೇ? ನನಗೆ ಗೊತ್ತಿಲ್ಲ. ನಂಬುವುದಿಲ್ಲ ಎನ್ನುವುದಕ್ಕಿಂತ ಇವುಗಳಿಂದ ದೂರವಿರಲು ನಾನು ಪ್ರಯತ್ನ ಮಾಡುತ್ತೇನೆ ಎನ್ನುವುದು ಹೆಚ್ಚು ಸಮಂಜಸವೇನೋ! ಏಕೆ? ಏಕೆಂದರೆ ಸಾಕಷ್ಟು ವಿಚಾರ ಮಾಡಿದ ಬಳಿಕ ನಾನು ಇವನ್ನು ‘ದುಷ್ಟ’ ಎಂದು ವರ್ಗೀಕರಿಸಿದ್ದೇನೆ. ಇವು ಜೀವನವನ್ನು ಸರಳ-ಸುಂದರವಾಗಿಡುವುದಿಲ್ಲ, ಬದಲಾಗಿ ಅನೇಕ ರೀತಿಯಲ್ಲಿ ನಮ್ಮನ್ನು ಹಿಂಡಿ ಹಾಕುತ್ತವೆ ಎಂದು ನನಗನಿಸುತ್ತದೆ.

ವಾದಕ್ಕೆಂದು ಇದರಲ್ಲಿ ಏನೋ ವಿಜ್ಞಾನ ಇದೆ ಎಂದೇ ಪರಿಗಣಿಸೋಣ. ಆದರೂ ಇದನ್ನು ನಾವು ಒಟ್ಟಾಗಿ ವಿರೋಧಿಸಬೇಕು ಎಂದು ನನ್ನ ಅಭಿಪ್ರಾಯ. ಅಚ್ಚರಿಯಾಯಿತೇ?! ಮುಂದೆ ಓದಿ.

ನನ್ನ ಪ್ರಕಾರ ಇದು ವಿಜ್ಞಾನವಾಗಿದ್ದರೂ ಅನೇಕ ಕೆಟ್ಟ ಅಂಶಗಳನ್ನೊಳಗೊಂಡಿದೆ:
- ಮನುಷ್ಯ-ಮನುಷ್ಯರ ಮಧ್ಯೆ ಅಸಮಾನತೆಯನ್ನು ಹೆಚ್ಚಿಸುತ್ತದೆ (ಅವನ ಜಾತಕ ಶ್ರೇಷ್ಠ, ಇವನದ್ದು ಕೆಳ ಮಟ್ಟದ್ದು ಇತ್ಯಾದಿ ಭಾವನೆಗಳು)
- ಜೀವನದ ಸರಳ-ಸುಂದರ ಖುಷಿಗಳನ್ನು ಕೊಲ್ಲುತ್ತದೆ (ಉದಾ: ಎಲ್ಲರಿಗೂ ಅನುಕೂಲವಾಗುವ ಸಮಯದಲ್ಲಿ ಸಮಾರಂಭವನ್ನು ಇಟ್ಟುಕೊಳ್ಳುವ ಬದಲು ರಾಹುಕಾಲ ಇತ್ಯಾದಿ ನೋಡಿಕೊಂಡು ಅನೇಕರಿಗೆ ಇರುಸುಮುರುಸುಂಟುಮಾಡುವ ದಿನ/ಸಮಯದಲ್ಲಿರಿಸುವುದು, ಪ್ರೀತಿಸುವವರನ್ನು ವಿವಾಹವಾಗಲು ಬಿಡದೇ ಇರುವುದು)
- ಇದರ ಹಿಂದಿನ ವಿಜ್ಞಾನ ಗೊತ್ತಿದೆ ಎಂದು ಹೇಳಿಕೊಳ್ಳುವ ವಂಚಕರು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಾರೆ
- ಶಾಂತಿ, ಸಮಾಧಾನ, ಪರಿಹಾರ, ದೋಷ ನಿವಾರಣೆ ಎಂದು ಮುಂತಾಗಿ ಹೇಳಿ ಹಣ ಕೀಳುವ trend ಬೆಳೆಯುತ್ತದೆ
- ಅರೆ-ಬರೆ ಜ್ಞಾನದಿಂದ ವಿಕೃತ ಮೂಢನಂಬಿಕೆಗಳು ಬೆಳೆಯುತ್ತವೆ

ಇತ್ತೀಚೆಗೆ ಒಬ್ಬ ನೋಬೆಲ್ ಪ್ರಶಸ್ತಿ ವಿಜೇತ ವಂಶವಾಹೀ ವಿಜ್ಞಾನಿ/ಸಂಶೋಧಕ ಹೇಳಿದ್ದರು: ಆಫ್ರಿಕಾದವರು ಸಂಗೀತಕ್ಷೇತ್ರದಲ್ಲಿ ಬಲ, ಆದರೆ ಅವರಿಗೆ ಬುದ್ಧಿ ಸ್ವಲ್ಪ ಕಮ್ಮಿ ಎಂದು. ಅಸಮಾನತೆ, ಬೇಧ-ಭಾವವನ್ನು ಹುಟ್ಟುಹಾಕುವ ಅಂತಹ ಹೇಳಿಕೆಯನ್ನು ಬಲವಾದ ವೈಜ್ಞಾನಿಕ ಆಧಾರವಿಲ್ಲದೇ ಕೊಟ್ಟಿದ್ದರಿಂದಾಗಿ ಅವರು ಭಾರೀ ಬೆಲೆಯನ್ನೇ ತೆರಬೇಕಾಯಿತು, ತಮ್ಮ ನೌಕರಿಯನ್ನೂ ಕಳೆದುಕೊಂಡು ಎಲ್ಲರ ಟೀಕೆಗೆ ಗುರಿಯಾಗಬೇಕಾಯಿತು.

ಇಲ್ಲಿ ನೀವು ಕೇಳಬಹುದು, ವೈಜ್ಞಾನಿಕತೆಯನ್ನು ಏತಕ್ಕೆ ಮರೆಮಾಚುತ್ತೀರಿ? ಕಷ್ಟಗಳಿದ್ದರೂ ಸತ್ಯವನ್ನು ಇದ್ದ ಹಾಗೆ ಒಪ್ಪಿಕೊಂಡು ಮುನ್ನಡೆಯುವುದೇ ಸರಿಯಾದ ದಾರಿಯಲ್ಲವೇ ಎಂದು.

ಇತರ ಮನುಷ್ಯರ ಅಥವಾ ಇನ್ಯಾವುದೋ ಜೀವಿಗಳ ಉತ್ತಮ ಗುಣಗಳನ್ನು ನಮಗೆ ಕಂಡ ರೀತಿಯಲ್ಲಿ ವಿಶ್ಲೇಷಿಸುವುದು, ಅವರ ಚರಿತ್ರೆಯ ಆಧಾರದಲ್ಲಿ ಅವರ ಭವಿಷ್ಯವನ್ನು ಊಹಿಸುವುದು ಎಲ್ಲವೂ ಪರವಾಗಿಲ್ಲ. ಆದರೆ ಜಾತಕ ಏನು ಹೇಳುತ್ತದೆ ಎಂದು ನೋಡಲು ಶುರುಮಾಡಿದಾಕ್ಷಣ ಅನೂಹ್ಯ ಕ್ಲಿಷ್ಟಕರ ವಿಷಯಗಳು ಧುತ್ತೆಂದು ನಮ್ಮ ಮುಂದೆ ಬಂದುಬಿಡುತ್ತವೆ. ಇಲ್ಲಿ ವಿಶ್ಲೇಷಣೆ ವೈಜ್ಞಾನಿಕ ಪರಿಧಿಯನ್ನೂ ಮೀರಿ ಅಸಮಾನತೆಯ ವಿಷದ ಬೀಜಗಳನ್ನು ನಮ್ಮಲ್ಲಿ ಹುಟ್ಟು ಹಾಕುತ್ತವೆ. ಮೊದಲಿನ ಲೇಖನದಲ್ಲಿ ಹೇಳಿದಂತೆ ಯಾವ ವಿಜ್ಞಾನವನ್ನು ನಾವು ಉಪಯೋಗಿಸಬೇಕು, ಯಾವುದನ್ನು ಜನರಿಂದ ದೂರ ಇಡಬೇಕು ಎನ್ನುವುದನ್ನು ಕಾನೂನಿನ ಮೂಲಕ ಸಾಧಿಸಬೇಕು, ಆಗಲೇ ‘ಸದಾಚಾರ’ ಸಾಧ್ಯ.

ಕುತೂಹಲಕಾರಿಯಾದ ವಿಷಯವೆಂದರೆ ಇಂದಿನ ವಂಶವಾಹೀ ವಿಜ್ಞಾನ ಮುಂದುವರೆಯುತ್ತಿರುವ ರೀತಿ. ಮೇಲೆ ಹೇಳಿದ ವಿಜ್ಞಾನಿಯನ್ನು ನಮಗೆ ದಮನಿಸಲು ಸಾಧ್ಯವಾಗಿರಬಹುದು. ಆದರೆ ಮುಂದೊಂದು ದಿನ ಅಸಮಾನತೆಗಳನ್ನು ಹುಟ್ಟುಹಾಕುವ ಸಿದ್ಧಾಂತಗಳು ವೈಜ್ಞಾನಿಕ ಆಧಾರಗಳೊಂದಿಗೇ ನಮ್ಮೆದುರು ಬಂದು ನಿಲ್ಲಬಹುದು. ಹಾಗಾಗದಿರಲೆಂದು ನಾನು ಪ್ರಾರ್ಥಿಸುತ್ತೇನೆ. ಹಿಂದೆ ಜಾತಕ, ಜ್ಯೋತಿಷ್ಯಗಳು ಮಾನವಕುಲವನ್ನು ಹೇಗೆ ಕಂಗೆಡಿಸಿವೆಯೋ ಅದೇ ರೀತಿ ಈ ತಂತ್ರಜ್ಞಾನ ಕೂಡ ಮಾಡಬಹುದು. ಈ ರೀತಿ ವಿಜ್ಞಾನ ಹೇಗೆ ಜನಸಾಮಾನ್ಯನನ್ನು ಹಿಂಸಿಸಬಹುದು ಎಂಬುದರ ಬಗ್ಗೆ ಭವಿಷ್ಯತ್ ಚಿತ್ರಣದೊಂದಿಗೆ ಅನೇಕ ಕಾದಂಬರಿ-ಕಥೆಗಳೂ, ಹಾಲಿವುಡ್ ಸಿನೇಮಾಗಳೂ ಬಂದಿವೆ ಎಂಬುದನ್ನು ನೀವು ಗಮನಿಸಬಹುದು.

ಇದೆಲ್ಲಾ ಸರಿ, ಆದರೆ ನಿಜವಾಗಿ ಜಾತಕ, ಜ್ಯೋತಿಷ್ಯಕ್ಕೆ ನಿಜಕ್ಕೂ ವೈಜ್ಞಾನಿಕ ಆಧಾರವಿದೆಯೇ? ನನಗೆ ತಿಳಿದ ಮಟ್ಟಿಗೆ ಇದುವರೆಗೆ ಯಾರೂ ಯಾವ ಆಧಾರಗಳನ್ನೂ ನೀಡಿಲ್ಲ. ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆ ಅಗತ್ಯವಿಲ್ಲ, ಬದಲಾಗಿ ನಾವು ದೂರವಿರುವುದೇ ಒಳಿತು ಎಂಬುದು ನನ್ನ ವೈಯಕ್ತಿಕ ನಿರ್ಧಾರವಿರಬಹುದು, ಆದರೆ ಎಲ್ಲರೊ ಹೀಗೆ ಆಲೋಚಿಸುವುದಿಲ್ಲ. ಕುರುಡಾಗಿ ನಂಬುವವರೂ ಬೇಕಾದಷ್ಟು ಇರುತ್ತಾರೆ. ಅಂಥವರನ್ನು ಗಮನದಲ್ಲಿರಿಸಿಕೊಂಡು ನೋಡಿದರೆ ಬಹುಷಃ ಹೆಚ್ಚಿನ ಸಂಶೋಧನೆ ನಡೆಸುವುದು ಉತ್ತಮ ಎಂದು ಕೆಲವರಿಗೆ ಕಾಣಬಹುದು. ಆದರೆ ಕುರುಡು ನಂಬಿಕೆ ಇರುವವರು ಹಾಗೂ ಢೋಂಗಿ ಜ್ಞಾನವನ್ನು ಪ್ರದರ್ಶಿಸುವವರು - ಇಂತವರಿಂದಾಗಿ ಇದಕ್ಕೆ ಒಂದು ಮೂಢನಂಬಿಕೆ ಎಂಬ ಸ್ಥಾನ ಇದ್ದರೆ ಅದುವೇ ನಮ್ಮೆಲ್ಲರ ಸರಳ-ಸುಂದರ-ಸಮಾನ ಜೀವನಕ್ಕೆ ಒಳಿತು ಎಂದು ನಾನು ಅಭಿಪ್ರಾಯ ಪಡುತ್ತೇನೆ!

ವಾಸ್ತುಶಾಸ್ತ್ರ, ನಾನು ಕಂಡಂತೆ

ನಮ್ಮ ವಾಸ್ತುಶಾಸ್ತ್ರದಲ್ಲಿ ಕೆಲವು ಉತ್ತಮ ವೈಜ್ಞಾನಿಕ ಅಂಶಗಳಿವೆಯೇನೋ, ಆದರೆ ದುರದೃಷ್ಟವಶಾತ್ ಅನೇಕ ‘ನಂಬುಗೆ’ಗಳೂ ತಳುಕುಹಾಕಿಕೊಂಡಿರುವುದರಿಂದಲೂ, ಅವನ್ನು ವೈಜ್ಞಾನಿಕವಾಗಿ ವಿವರಿಸಲು ಸಾಧ್ಯವಿಲ್ಲದೇ ಇರುವರಿಂದಲೂ, ಅವು ಹೇಗೆ ಜನಸಾಮಾನ್ಯರ ಜೀವನವನ್ನು ಹಿಂಡಿ ಹಾಕುತ್ತವೆ ಎಂಬುದನ್ನು ಗಮನಿಸಿರುವುದರಿಂದಲೂ ನನಗೆ ಆ ಬಗ್ಗೆ ಹೆಚ್ಚಿನ ಗೌರವ ಇಲ್ಲ. ತಮ್ಮ ಸಮಸ್ಯೆಗಳ ಹಿಂದೆ ಮನೆಯ ವಾಸ್ತು ಇದೆ ಎಂದು ನಂಬುವವರನ್ನು ಕಂಡರೆ ಅನುಕಂಪ ಮೂಡುತ್ತದೆ ಹೊರತು ಇನ್ನೇನೂ ಇಲ್ಲ. ನಾನಂತೂ ಜೀವನವನ್ನು ಸರಳ ನಿಯಮಗಳ ಆಧಾರದಲ್ಲಿ ಮುಂದೆಯೂ ನಡೆಸುವ ಯೋಜನೆ ಹಾಕಿಕೊಂಡಿದ್ದೇನೆ.

ಹಾಗೆಂದು ವಾಸ್ತುಶಾಸ್ತ್ರವನ್ನು ಪೂರ್ತಿಯಾಗಿ ತಳ್ಳಿ ಹಾಕುತ್ತೇನೆ ಎಂದಲ್ಲ, ಕೆಲವೊಮ್ಮೆ ವಾಸ್ತುಶಾಸ್ತ್ರದ ನಿರ್ದೇಶನದಲ್ಲಿ ಸಾಮಾನ್ಯ ಜ್ಞಾನ ಕೂಡ ಕಾಣುತ್ತದೆ, ಅಂಥದ್ದನ್ನು ಒಪ್ಪಿಕೊಳ್ಳಲು ನನಗೇನೂ ಆಧುನಿಕತೆಯ ಹೆಮ್ಮೆ ಅಡ್ಡಬರುವುದಿಲ್ಲ :-)

ನಾನು ಮತ್ತು ಧಾರ್ಮಿಕತೆ

ಮೊದಲೊಂದು ಚಿಕ್ಕ ಪೀಠಿಕೆ: ಧರ್ಮ ಎಂದರೆ ನನಗೆ ತಿಳಿದ ಪ್ರಕಾರ ಮಾಡತಕ್ಕದ್ದು, ಪಾಲಿಸತಕ್ಕದ್ದು ಎಂದು, ಇದು ಒಂದು ಸೂಕ್ಷ್ಮವಾದ ವಿಚಾರ. ದೊಡ್ಡ ದೊಡ್ಡ ಜ್ಞಾನಿಗಳೂ ಅನೇಕ ಸಲ ಸಂದಿಗ್ಧತೆ, ದ್ವಂದ್ವಗಳನ್ನೆದುರಿಸುವಂತೆ ಮಾಡುವ ಒಂದು ವಿಶಿಷ್ಟವಾದ ವಿಚಾರ ಇದು. ಸಾರ್ವಕಾಲಿಕವಾದ ಮಹಾಭಾರದ ಒಂದು ಉದಾಹರಣೆಯನ್ನೇ ತೆಗೆದುಕೊಳ್ಳಿ. ಸ್ವತಃ ಯಮಧರ್ಮರಾಯನ ಮಗನಾದ ಯುದಿಷ್ಠಿರನು ಶರಶೈಯೆಯಲ್ಲಿರುವ ಭೀಷ್ಮನಿಂದ ರಾಜಧರ್ಮವನ್ನು ಹೇಳಿಸಿಕೊಂಡ. ಹಾಗೆಂದು ಅದುವರೆಗೆ ಅವನ ತಮ್ಮಂದಿರು ಪ್ರತಿ ಹೆಜ್ಜೆಯಲ್ಲಿಯೂ ಅಂತಿಮ ನಿರ್ಧಾರಕ್ಕಾಗಿ ಅಣ್ಣನನ್ನು ನಂಬಿದ್ದು ತಪ್ಪೇ? ಭೀಷ್ಮನಿಂದ ಉಪದೇಶ ಸಿಕ್ಕಿದ ಮಾತ್ರಕ್ಕೆ ಯುದಿಷ್ಠಿರ ಸಂಪೂರ್ಣನಾದನೇ? ಭೀಷ್ಮ ಹೇಳಿದ್ದೆಲ್ಲಾ ಒಪ್ಪುವಂತ ಮಾತೇ? ಧರ್ಮರಾಯನಲ್ಲಿದ್ದ ನಿಸರ್ಗದತ್ತವಾದ ಧರ್ಮಕ್ಕಿಂದ ಭೀಷ್ಮನ ಅನುಭವಮೂಲದ ಜ್ಞಾನ ಹೆಚ್ಚಾಯಿತೇ? ಇದಕ್ಕೆಲ್ಲಾ ಉತ್ತರ ಕೊಡುವುದರಲ್ಲಿ ಅರ್ಥ ಇಲ್ಲ. ಯಾಕೆಂದರೆ ಇದಮಿತ್ಥಂ ಅಂತ ಹೇಳುವ ಯಾವ ಧರ್ಮವೂ ಇಲ್ಲ. ನಾವು ಸಂದರ್ಭೋಚಿತವಾಗಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರತಿಯೊಬ್ಬನಲ್ಲಿಯೂ ಇದರ ಬಗ್ಗೆ ಇರುವ ಪರಿಕಲ್ಪನೆಯು ವಿಶಿಷ್ಟವಾಗಿರುತ್ತದೆ, ಕಾಲಕಾಲಕ್ಕೆ ಬದಲಾಗುತ್ತಾ ಸಾಗುತ್ತದೆ, ಕೆಲವೊಮ್ಮೆ ನಿಧಾನವಾಗಿ, ಕೆಲವೊಮ್ಮೆ ವೇಗವಾಗಿ - ಕೇಳಿ/ಓದಿ ಬಂದ ಜ್ಞಾನ, ಅನುಭವ, ಆಸೆ-ಆಕಾಂಕ್ಷೆ, ಕುತೂಹಲ - ಇತ್ಯಾದಿಗಳು ಈ ಬದಲಾವಣೆಗೆ ಕಾರಣೀಭೂತವಾಗುತ್ತವೆ.

ಆದರೆ ಧಾರ್ಮಿಕತೆ ಎಂದಾಕ್ಷಣ ಇಂದು ನಮ್ಮೆಲ್ಲರ ಮನಸ್ಸಿನಲ್ಲಿ ಮೂಡುವುದು ‘ದೇವರು’ ಎಂಬ ಪರಿಕಲ್ಪನೆಯೊಂದಿಗೆ ಹೆಣೆಯಲ್ಪಟ್ಟ ಜೀವನಕ್ರಮ, ಅದನ್ನೇ ಸಾಮಾನ್ಯವಾಗಿ ಧಾರ್ಮಿಕತೆ ಎನ್ನುತ್ತೇವೆ ನಾವು. ಧರ್ಮ ಹಾಗೂ ಧಾರ್ಮಿಕತೆ ಎಂಬ ಪದಗಳಲ್ಲಿರುವ ಅಗಾಧ ವ್ಯತ್ಯಾಸಕ್ಕೆ ಕಾರಣವೇನು? ತಿಳಿದವರು ಹೇಳಬೇಕಾಗಿ ವಿನಂತಿ.

ನಾನು ಆಸ್ತಿಕನೇ/ನಾಸ್ತಿಕನೇ? ಎರಡೂ ಅಲ್ಲ – ಇದರ ವಿಷಯದಲ್ಲಿ ಅಭಿಪ್ರಾಯವಿಲ್ಲದವನು ಎಂಬುದು ಹೆಚ್ಚು ಸಮಂಜಸವಾಗುತ್ತದೆ.  ಚಿಕ್ಕಂದಿನಲ್ಲಿ ತೀವ್ರವಾದ ದೈವ ಭಕ್ತಿ ಇತ್ತು, ಆದರೆ ‘ದೇವರು’ ಅನ್ನುವ ಸಿದ್ಧಾಂತದ ಬಗ್ಗೆ ನನ್ನ ದೃಷ್ಟಿಕೋನ ಕಾಲಕ್ರಮೇಣ ಬದಲಾಯಿತು, ಸಾಂಪ್ರದಾಯಿಕತೆಯಿಂದ ದೂರ ಸರಿಯಿತು, ಅಷ್ಟೆ. ಬಹುಜನರು ಪಾಲಿಸುವ ದೈವಪೂಜೆಯನ್ನು ನಾನೇನೂ ಕೀಳು ಭಾವನೆಯಿಂದ ನೋಡುವುದಿಲ್ಲ. ಯಾಕೆಂದರೆ ‘ದೇವರು’ ಅನ್ನುವ ಸುಂದರವಾದ ಪರಿಕಲ್ಪನೆ ಒಂದು ಅದ್ಭುತ ಎಂದೇ ನಾನು ಪರಿಗಣಿಸುತ್ತೇನೆ. ಎಲ್ಲಾ ಪ್ರಯತ್ನಗಳೂ ಮಾಡಿ ಮುಗಿದ ಮೇಲೆ ಆಧಾರಸ್ಥಂಭವಾಗಿ ನಿಲ್ಲುವ, ನಿರೀಕ್ಷೆಗಳೊಂದಿಗೆ ಕಳೆಯುವ ಉದ್ವೇಗದ ಕ್ಷಣಗಳಲ್ಲಿ ಅನೇಕರಿಗೆ ಧೈರ್ಯಕೊಡುವ ಒಂದು ಶಕ್ತಿ. ಒಟ್ಟಿನಲ್ಲಿ ‘ದೇವರು’ ಅನೇಕರ ಜೀವನದಲ್ಲಿ ಧನಾತ್ಮಕವಾದ ಬದಲಾವಣೆಗಳನ್ನು ತರಲು ಸಹಾಯಮಾಡುವ ಒಂದು ಅಂಶ. ನನ್ನ ಮನಸ್ಸೇಕೋ ಆ ಭಾವನೆಯನ್ನು ಮೀರಿ ಹೋಗಿದೆ, ಅಷ್ಟೆ.

ಹಾಗಾದರೆ ಸಂಪ್ರದಾಯಗಳ ಇತರ ಸಾಮಾಜಿಕ ಅಂಶಗಳನ್ನು ನೋಡಿಯಾದರೂ ಅವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದಲ್ಲವೇ ಎಂದು ನೀವು ಕೇಳುತ್ತಿದ್ದೀರಾ? ಇಲ್ಲಿ ನನ್ನ ‘ವೀಗನಿಸಂ’ ಹಾಗೂ ಇತರರಿಗೆ ಅದರ ಬಗ್ಗೆ ಇರುವ ಸೀಮಿತವಾದ ಅರಿವು ಅಡ್ಡ ಬರುತ್ತದೆ. ನಮ್ಮಲ್ಲಿ ಕ್ಷೀರೋತ್ಪನ್ನವು ತೀರಾ ಮಾಮೂಲು ಅಲ್ಲವೇ? ದೇವರ ಪೂಜೆಯಲ್ಲಂತೂ ಅದು ವಿಶೇಷವಾದ ಸ್ಥಾನವನ್ನು ಪಡೆದಿದೆ. ಈಗ ನನ್ನಂತಹ ವೀಗನ್ ಅಂತಹ ಕಡೆ ಹೋಗಿ ‘ದೇವರ ಪ್ರಸಾದ’ವನ್ನು ತಿರಸ್ಕರಿಸಿದರೆ? ಇದು ಎಷ್ಟು ಜನರಿಗೆ ಕೋಪ, ಮುಜುಗರವನ್ನು ತರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ? ಒಟ್ಟಿನಲ್ಲಿ ನನ್ನ ಮತ್ತು ಸಂಪ್ರದಾಯಸ್ಥರ ವಿಚಾರಧಾರೆಗಳಲ್ಲಿ ಕಂಡುಬರುವ ವ್ಯತ್ಯಾಸದಿಂದಾಗಿ (ನನಗೆ ಅಥವಾ ಉಳಿದವರಿಗೆ :-)) ಎದ್ದು ಬರುವ ಕೆಲವು ಮುಜುಗರದ ಸನ್ನಿವೇಶಗಳನ್ನು ಅಥವಾ ಅಸಹನೀಯ ವಾತಾವರಣವನ್ನು ತಪ್ಪಿಸಲು ನಾನು ಧಾರ್ಮಿಕ ಚಟುವಟಿಕೆಗಳಿಂದಲೇ ಸ್ವಲ್ಪ ದೂರ ಇರುತ್ತೇನೆ.

ಸಾರಾಂಶ

ವಿಜ್ಞಾನ ಸರ್ವಸ್ವವೇ? ಅಲ್ಲ. ಆಸ್ತಿಕತೆಗೆ ಬೆಲೆಯೇ ಇಲ್ಲವೇ? ಇದೆ, ಅನಗತ್ಯವಾದ ರೀತಿಯಲ್ಲಿ ತಪ್ಪು ಕಲ್ಪನೆ ಮೂಡಿಸುವ ಅಂಶಗಳನ್ನು ತೆಗೆದರೆ ಆಸ್ತಿಕತೆಯಲ್ಲಿ ಉತ್ತಮ ಅಂಶಗಳಿವೆ ಎಂದು ನನಗೆ ಕಾಣುತ್ತದೆ. ನಂಬಿಕೆ/ವೈಜ್ಞಾನಿಕತೆ ಇವೆರಡರ ಮಧ್ಯೆ ಗೆರೆ ಎಳೆಯುವಾಗ ಜಾಗರೂಕರಾಗಿದ್ದುಕೊಂಡು ಪ್ರತಿಯೊಬ್ಬರೂ ವಿವೇಕಯುತವಾದ ನಿರ್ಧಾರವನ್ನು ತೆಗೆದುಕೊಳ್ಳಲಿ ಎಂದು ನಾನು ಹಾರೈಸುವೆ. ಮಾತ್ರವಲ್ಲ, ಮನುಷ್ಯಪ್ರಯತ್ನ ಮಾಡಿದ ಮೇಲೆಯೇ ದೇವರ ಮೇಲಿನ ನಂಬಿಕೆ ಇಡುವಂತೆ ಹಾಗೂ ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇಡುವಂತೆ ಜನರನ್ನು ಪ್ರೇರೇಪಿಸಿದರೆ ಉತ್ತಮ ಎಂದು ನನ್ನನಿಸಿಕೆ.


ಈ ಬಗ್ಗೆ ನಾನು ಬರೆದ ಇನ್ನೊಂದು ಲೇಖನ:
ಮಂಗಳಾರತಿ ಮತ್ತು ತೀರ್ಥದ ಹಿಂದೆ ಇರುವ ವಿಜ್ಞಾನ

8 comments:

Shankara Bhat said...

ಹಾಗಾದರೆ ಸಂಪ್ರದಾಯಗಳ ಇತರ ಸಾಮಾಜಿಕ ಅಂಶಗಳನ್ನು ನೋಡಿಯಾದರೂ ಅವುಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದಲ್ಲವೇ ಎಂದು ನೀವು ಕೇಳುತ್ತಿದ್ದೀರಾ? ಇಲ್ಲಿ ನನ್ನ ‘ವೀಗನಿಸಂ’ ಹಾಗೂ ಇತರರಿಗೆ ಅದರ ಬಗ್ಗೆ ಇರುವ ಸೀಮಿತವಾದ ಅರಿವು ಅಡ್ಡ ಬರುತ್ತದೆ. ನಮ್ಮಲ್ಲಿ ಕ್ಷೀರೋತ್ಪನ್ನವು ತೀರಾ ಮಾಮೂಲು ಅಲ್ಲವೇ? ದೇವರ ಪೂಜೆಯಲ್ಲಂತೂ ಅದು ವಿಶೇಷವಾದ ಸ್ಥಾನವನ್ನು ಪಡೆದಿದೆ. ಈಗ ನನ್ನಂತಹ ವೀಗನ್ ಅಂತಹ ಕಡೆ ಹೋಗಿ ‘ದೇವರ ಪ್ರಸಾದ’ವನ್ನು ತಿರಸ್ಕರಿಸಿದರೆ? ಇದು ಎಷ್ಟು ಜನರಿಗೆ ಕೋಪ, ಮುಜುಗರವನ್ನು ತರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ? ಒಟ್ಟಿನಲ್ಲಿ ನನ್ನ ಮತ್ತು ಸಂಪ್ರದಾಯಸ್ಥರ ವಿಚಾರಧಾರೆಗಳಲ್ಲಿ ಕಂಡುಬರುವ ವ್ಯತ್ಯಾಸದಿಂದಾಗಿ (ನನಗೆ ಅಥವಾ ಉಳಿದವರಿಗೆ :-)) ಎದ್ದು ಬರುವ ಕೆಲವು ಮುಜುಗರದ ಸನ್ನಿವೇಶಗಳನ್ನು ಅಥವಾ ಅಸಹನೀಯ ವಾತಾವರಣವನ್ನು ತಪ್ಪಿಸಲು ನಾನು ಧಾರ್ಮಿಕ ಚಟುವಟಿಕೆ ಗಳಲ್ಲಿ ಭಾಗವಹಿಸುತ್ತೇನೆ.(ಉಳಿದಂತೆ ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಹಮತವಿದೆ).

ಕೃಷ್ಣ ಶಾಸ್ತ್ರಿ - Krishna Shastry said...

ಶಂಕರ ಭಟ್ಟರೇ, "..... ತಪ್ಪಿಸಲು ನಾನು ಧಾರ್ಮಿಕ ಚಟುವಟಿಕೆಗಳಿಂದಲೇ ಸ್ವಲ್ಪ ದೂರ ಇರುತ್ತೇನೆ" ಎಂದು ನನ್ನ ಲೇಖನದಲ್ಲಿ ಬರೆದಿದ್ದೆ. ಅದನ್ನು ನೀವು "..... ತಪ್ಪಿಸಲು ನಾನು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತೇನೆ" (ಉಳಿದಂತೆ ಸಹಮತವಿದೆ) ಎಂದು ತಿದ್ದಿದ್ದೀರಿ. ಅಂದರೆ ನೀವು ಹೇಳುವುದು ಭಾಗವಹಿಸಬೇಕು ಎಂದೇ? ಸ್ಪಷ್ಟವಾಗಲಿಲ್ಲ.

ಕರವೀರ said...

ಎಲ್ಲಾ ವಿಷಯಗಳಿಗೂ ವೈಜ್ಞಾನಿಕ ಆಧಾರ ಕೇಳುವ ನೀವು ಮನುಷ್ಯನ ಭಾವನೆ ಗಳನ್ನು ವೈಜ್ಞಾನಿಕವಾಗಿ ವಿವರಿಸಲು ಸಾಧ್ಯವೇ..?
ಜನಿವಾರ ಬಿಟ್ಟ ನಿಮಗೆ ಶಾಸ್ತ್ರಿ,ಹಾಗೂ ಕೃಷ್ಣ ಹೆಸರಿನ ಹಂಗೇಕೆ?
ಕೃಷ್ಣನನ್ನು ಎಂದಾದರೂ ಕಂಡಿದ್ದೀರಾ..ಕಣ್ಣಿಗೆ ಕಾಣುವ ಯಾವುದಾದರೂ ಹೆಸರಿಟ್ಟುಕೊಳ್ಳಬಹುದಲ್ಲವೇ...?

ಕೃಷ್ಣ ಶಾಸ್ತ್ರಿ - Krishna Shastry said...

ಕರವೀರ ಅವರೇ, ಪ್ರತಿಕ್ರಿಯೆಗೆ ಧನ್ಯವಾದಗಳು. ಎಲ್ಲಾ ವಿಷಯಗಳಿಗೂ ವೈಜ್ಞಾನಿಕ ಆಧಾರ ಬೇಕೆಂದೇನಿಲ್ಲ, ಭಾವನೆಗಳಿಗೆ, ನಂಬಿಕೆಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಆದರೆ ಈ ಭಾವನೆಗಳು mental block ಆದರೆ ಅದರಿಂದ ನಷ್ಟವೇ ಹೆಚ್ಚು ಎಂದು ನಾನು ಕಂಡ ವಿಚಾರ. ಸಮಯ/ಶಕ್ತಿ/ಹಣ ಎಲ್ಲವೂ ವ್ಯರ್ಥವಾಗಿ ಪೋಲಾಗುತ್ತದೆ.

ಇದರೊಂದಿಗೇ ತಮ್ಮ ನಂಬಿಕೆಗಳನ್ನು ಇನ್ನೊಬ್ಬರ ಮೇಲೆ ಹೇರುವವರು, ವೈಜ್ಞಾನಿಕ ಆಧಾರ ಇಲ್ಲದೇ ಇರುವಲ್ಲಿಯೂ ಕಾಲ್ಪನಿಕ ವೈಜ್ಞಾನಿಕತೆಯ ಮೂಲಕ ಜನರನ್ನು ತಪ್ಪುದಾರಿಗೆಳೆಯುವವರು - ಇಂಥವರು ನನ್ನಂಥವರನ್ನು ಸಂಪ್ರದಾಯಗಳಿಂದ ಇನ್ನೂ ದೂರ ತಳ್ಳುತ್ತಾರೆ, ಅಷ್ಟೆ.

ಇನ್ನು ಹೆಸರಿನ ಬಗ್ಗೆ: ಎಲ್ಲರೂ ತಮ್ಮ ಹೆಸರನ್ನು ಬದಲಾಯಿಸುವುದು ಹಂಗಿರುವ ಕಾರಣದಿಂದಲೇ? ಖಂಡಿತಾ ಅಲ್ಲ, ತಮ್ಮ ಹೆಸರನ್ನು ಇಷ್ಟಪಡದವರು ಎಷ್ಟೋ ಜನ ಇರುತ್ತಾರೆ, ಆದರೆ ಬದಲಾಯಿಸದೇ ಇರಲು ನೂರು ಕಾರಣಗಳಿರುತ್ತವೆ. ಹೀಗಾಗಿ ನೀವು ಇಲ್ಲೇ ಎಡವಿದ್ದೀರಿ ಎಂದು ಹೇಳಿದರೆ ಬೇಜಾರು ಮಾಡಿಕೊಳ್ಳಬೇಡಿ.

ವೈಯಕ್ತಿಕವಾಗಿ ನನಗೆ ನನ್ನ ಹೆಸರಿನ ಬಗ್ಗೆ ಅತಿಯಾದ ವ್ಯಾಮೋಹ ಅಥವಾ ಹಂಗಿಲ್ಲ, ಅಭ್ಯಾಸ ಬಲದಿಂದ ಕೆಲವರಿಗೆ ತಮ್ಮ ಹೆಸರು ಆಪ್ಯಾಯಮಾನವಾಗಿ ಕಾಣುತ್ತದೆ, ಇದು ಸಹಜ, ನನ್ನ ಹೆಸರನ್ನು ನಾನೇ ಇಟ್ಟುಕೊಂಡದ್ದೇನಲ್ಲ, ಅಲ್ಲವೇ?! ಇಟ್ಟವರಿಗೂ ಇಂದಿನ ತನಕ ಈ ಹೆಸರು ಹಿಡಿದು ಕರೆದವರಿಗೂ ಅನೇಕರಿಗೆ ಇದೇ ನನ್ನ ಗುರುತು, ಹೀಗಾಗಿ ಹೆಸರು ಬದಲಾಯಿಸಬೇಕೆಂಬ ಬಲವಾದ ಇಚ್ಛೆಯೂ ಮೂಡಿಬರಲಿಲ್ಲ, ಹೆಸರಿನಲ್ಲೇನಿದೆ? ಬಹುಷಃ ಅತ್ಯಂತ ದೌರ್ಜನ್ಯದಿಂದ ಕೂಡಿದ ಅತಿಕ್ರೂರ ಕುಟುಂಬ/ವಂಶವೊಂದರಿಂದ ಬಂದಿದ್ದರೆ ನಾಚಿಕೆಯಾಗಿ ಬದಲಾಯಿಸುವ ಇಚ್ಛೆ ಮೂಡುತ್ತಿತ್ತೋ ಏನೋ! ಮಾತ್ರವಲ್ಲ, ಪ್ರಾಯೋಗಿಕ ಕಾರಣಗಳಿಂದ ಬದಲಾಯಿಸುವುದರಿಂದ ಅನೇಕ ತೊಂದರೆಗಳೂ ಇವೆ, ಯಾಕೆ ಸುಮ್ಮನೆ?

Shankara Bhat said...

ಶಾಸ್ತ್ರೀಜಿ,
ನನ್ನಅಭಿಪ್ರಾಯದಂತೆ ನಾವು ಈ ಸಮಾಜದಲ್ಲಿಬದುಕುವುದು ನಮಗಾಗಿ ಮತ್ತುನಮ್ಮವರಿಗಾಗಿ,ಜೊತೆಗೆ ಈ ಸಮಾಜಕ್ಕಾಗಿ ಸಹ;ನಮ್ಮವೈಯಕ್ತಿಕ ಬದುಕಿನ ಜೊತೆ ಗೆ ಈಸಮಾಜದಲ್ಲಿನಾವು ಬದುಕುತ್ತಿರುವಾಗ ಎಲ್ಲರ ಭಾವನೆಗಳನ್ನುಅರ್ಥಮಾಡಿ ಕೊಳ್ಳಬೇಕು.ಎಷ್ಟ್ಟೋಸಲ ನಾವುಅನಿವಾರ್ಯವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ
ಭಾಗವಹಿಸಬೇಕಾಗಿಬರುತ್ತದೆ ಆಗ ನಮ್ಮವರ್ತನೆಯಿಂದ ಜೊತೆಗಿದ್ದವರಿಗೆ ಮುಜುಗರವಾಗದಿರಲೆಂದು ನಮ್ಮ ಮನಸ್ಸಿಗೆ ವಿರುದ್ದವಾಗಿ ನಡೆಯುವ ಅನಿವಾರ್ಯತೆ ಬರುತ್ತದೆ.

ಕೃಷ್ಣ ಶಾಸ್ತ್ರಿ - Krishna Shastry said...

ಶಂಕರ ಭಟ್ಟರೇ, ನಾನು ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗುವುದೇ ಇಲ್ಲ ಎಂದಲ್ಲ :-) ಆದರ ಸಕ್ರಿಯವಾಗಿ ಭಾಗವಹಿಸುವುದಿಲ್ಲ ಎಂದು ಹೇಳುತ್ತಿದ್ದೇನೆ. ಮಾತ್ರವಲ್ಲ, ಪರಿಸ್ಥಿತಿ ತೀರಾ ಇಕ್ಕಟ್ಟಿಗೆ ಹೋಗುವ ಲಕ್ಷಣ ಇದ್ದರೆ ತಪ್ಪಿಸಿಕೊಳ್ಳುವುದರಲ್ಲಿ ಏನೂ ತಪ್ಪಿಲ್ಲ, ಅಲ್ಲವೇ?

ನೀವು ಸಸ್ಯಾಹಾರಿಗಳೆಂದುಕೊಳ್ಳಿ, ಮಾಂಸಾಹಾರಿ ಊಟ ಇರುವಲ್ಲಿ ನಿಮ್ಮನ್ನು ಔತಣಕ್ಕೆ ಕರೆಯುತ್ತಾರೆ. ಅಲ್ಲಿ ಸಾಲಾಗಿ ಕುಳಿತು ಬಡಿಸುವಾಗ ನೀವು ಬೇಡ ಬೇಡ ಎಂದರೂ ನಿಮ್ಮ ತಟ್ಟೆಗೆ ಸ್ವಲ್ಪ ಕೋಳಿ ಸಾರು ಬೀಳುತ್ತದೆ ಎಂದಿಟ್ಟುಕೊಳ್ಳಿ, ಏನು ಮಾಡುತ್ತೀರಿ? ಮುಂದಿನ ಸಲ ಅಂತಹ ವಾತಾವರಣವನ್ನೇ ತುಸು ದೂರ ಇಡುತ್ತೀರಿ, ಅಥವಾ ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ/ಆಯ್ಕೆ ಹಾಗೂ ಇತರರ ಸಂತಸದ ವಾತಾವರಣ ಇವ್ಯಾವಕ್ಕೂ ಧಕ್ಕೆ ಬರುವುದಿಲ್ಲ ಎಂಬ ವಿಶ್ವಾಸ ಇದ್ದರೆ ಅಂತಹ ಸಮಾರಂಭಗಳಿಗೆ ಹೋಗುತ್ತೀರಿ (ಉದಾ: ಬಫೆ ಇದ್ದರೆ).

ಅಂತೆಯೇ, ನಾನು ವೀಗನ್ ಆಗಿರುವುದರಿಂದ ನನಗೆ ಹಾಲು-ತುಪ್ಪ ಇತ್ಯಾದಿ ವರ್ಜ್ಯ. ಹಾಲು ಹಾಕಿದ ತೀರ್ಥ, ತುಪ್ಪ ಹಾಕಿದ ಪ್ರಸಾದ ಇತ್ಯಾದಿ ನಾನು ಸೇವಿಸುವುದಿಲ್ಲ. ಬೇಡ ಎಂದರೆ ಅನೇಕರಿಗೆ ದಿಗ್ಭ್ರಮೆ, ಕೋಪ, ಬೇಸರ ಇತ್ಯಾದಿ ಆಗುತ್ತದೆ. ಕೆಲವು ಕಡೆ ವಿನಯದಿಂದ ‘ನನಗೆ ಹೂ ಪ್ರಸಾದ ಮಾತ್ರ ಕೊಡಿ’ ಎಂದು ಕೇಳಿ ಪರಿಸ್ಥಿತಿಯನ್ನು ಹೇಗೋ ಸಂಭಾಳಿಸಿಕೊಳ್ಳುತ್ತೇನೆ. ಅಂತಹ ಸಂದರ್ಭಗಳಲ್ಲಿ ಅವರು ಆಶ್ಚರ್ಯದಿಂದ/ವಿಚಿತ್ರ ದೃಷ್ಟಿಯಿಂದ ನನ್ನನ್ನು ನೋಡಿ ಗಲಿಬಿಲಿಯೊಂದಿಗೆ ಮುಂದೆ ಹೋಗುತ್ತಾರೆ.

ಇದೇ ರೀತಿ ಊಟಕ್ಕೆ ಕೂತಾಗಲೂ ಅಷ್ಟೆ. ನಮ್ಮಲ್ಲಿ ಮೊದಲು ಪಾಯಸ ಬಡಿಸುತ್ತಾರೆ, ದೇವರ ನೈವೇದ್ಯ ಎಂದು - ಅದನ್ನು ಬೇಡ ಎಂದರೆ ದೊಡ್ಡ ರಾದ್ಧಾಂತವಾಗುತ್ತದೆ. ಆದರೆ ನನಗೆ ಅದನ್ನು ಎಲೆಯಲ್ಲಿ ಹಾಕಿಕೊಳ್ಳುವುದು ಮಾಂಸ ಹಾಕಿದ್ದಕ್ಕೆ ಸಮ, ನಾನು ನಂಬುವ ತತ್ವಗಳಿಗೆ ವಿರುದ್ಧ. ಅದಕ್ಕೇ, ಆದಷ್ಟೂ ನಾನು ಬಫೆ ಇದ್ದಲ್ಲಿ ಮಾತ್ರ ಹೋಗಲು ಇಷ್ಟಪಡುತ್ತೇನೆ.

ಏನು ಮಾಡಲಿ, ಅನೇಕರು ಸಹಿಷ್ಣುಗಳಾಗಿದ್ದರೆ ಪರಿಸ್ಥಿತಿ ಬೇರೆ ಇರುತ್ತಿತ್ತು. ಕೆಲವು ಕಡೆ ಇರುತ್ತಾರೆ, ಇಲ್ಲವೆಂದಲ್ಲ, ಅಂತಲ್ಲಿ ಹೋಗುತ್ತೇನೆ. ನಿಧಾನವಾಗಿ ಈ ರೀತಿಯ ವಿಚಾರಧಾರೆಗಳನ್ನು ಸಮಾಜ ಒಪ್ಪಿಕೊಳ್ಳಲು ಶುರುಮಾಡಿದರೆ ಆಗ ಎಲ್ಲರೂ ಪರಸ್ಪರ ಗೌರವದಿಂದ ಭಾಗವಹಿಸಬಹುದು.

Shankara Bhat said...

ಇದೇ ರೀತಿ ಊಟಕ್ಕೆ ಕೂತಾಗಲೂ ಅಷ್ಟೆ. ನಮ್ಮಲ್ಲಿ ಮೊದಲು ಪಾಯಸ ಬಡಿಸುತ್ತಾರೆ, ದೇವರ ನೈವೇದ್ಯ ಎಂದು - ಅದನ್ನು ಬೇಡ ಎಂದರೆ ದೊಡ್ಡ ರಾದ್ಧಾಂತವಾಗುತ್ತದೆ. ಆದರೆ ನನಗೆ ಅದನ್ನು ಎಲೆಯಲ್ಲಿ ಹಾಕಿಕೊಳ್ಳುವುದು ಮಾಂಸ ಹಾಕಿದ್ದಕ್ಕೆ ಸಮ, ನಾನು ನಂಬುವ ತತ್ವಗಳಿಗೆ ವಿರುದ್ಧ.
ಶಾಸ್ತ್ರಿಜೀ,
ಯಾಕಿಸ್ಟು ರೊಚ್ಚು. ಮಾಂಸ ಹಾಕಿದ್ದಕ್ಕೆ ಸಮ ಅನ್ನುತ್ತೀರಿ..!ಅದೂ ಆಹಾರ ತಾನೆ?ಎಲ್ಲದನ್ನೂ ವಿರೋಧಿಸುವ ಮನೋಭಾವ ಬಿಟ್ಟುಬಿಡಿ.ನೆಮ್ಮದಿಯಾಗಿರುತ್ತೀರಿ.ಇದೆಯಲ್ಲಾ ಅನುಭವದ ನುಡಿ,"ಲೋಕದ ಡೊಂಕ ನೀವೇಕೆ ತಿದ್ದುವಿರಿ......

ಕೃಷ್ಣ ಶಾಸ್ತ್ರಿ - Krishna Shastry said...

ಅರೆ ಶಂಕರ ಭಟ್ಟರೇ! ಇದರಲ್ಲಿ ರೊಚ್ಚೆಲ್ಲಿಂದ ಬಂತು?! ನಾನು ಇದ್ದ ಸಂಗತಿ ಹೇಳಿದ್ದಷ್ಟೆ. ಇದು ಬೇಸರದ ಮಾತು. ನಿಮ್ಮ ಎಲೆಗೆ ಮಾಂಸ ಹಾಕಿದರೆ ‘ಅದೂ ಆಹಾರ ತಾನೇ’ ಎಂದು ಹೇಳಿ ಬೇಸರ ಮಾಡಿಕೊಳ್ಳದೆಯೇ ಬದಿಗೆ ಇಡುತ್ತೀರಾ? (ನೀವು ಮಾಂಸ ತಿನ್ನುವುದಿಲ್ಲ ಎಂದು ಊಹಿಸಿ ಹೇಳುತ್ತಿದ್ದೇನೆ). ಎಲ್ಲವನ್ನೂ ವಿರೋಧಿಸುತ್ತೇನೆ ಎಂದು ಏತಕ್ಕೆ ಭಾವಿಸುತ್ತೀರಿ? ಬಡಿಸುವ ಎಷ್ಟೋ ಪದಾರ್ಥಗಳನ್ನು ಇಷ್ಟಪಟ್ಟೇ ತಿನ್ನುತ್ತೇನೆ :-)

ಲೋಕದ ಡೊಂಕಿನ ಬಗ್ಗೆ ಬರೆದಿರಿ, ಹಾಗಿದ್ದರೆ ಡೊಂಕು ಎಂದು ನೀವು ಒಪ್ಪಿಕೊಳ್ಳುತ್ತಿದ್ದೀರಾ?! ಇರಲಿ, ನಾನು ನನಗೆ ಸಂಬಂಧಪಡದ ಡೊಂಕಿನ ಉಸಾಬರಿಗೆ ಹೋಗುತ್ತಿಲ್ಲ, ನಾನು ಆಗಾಗ ಎದುರಿಸುವ ಅಡೆತಡೆಗಳಿದ್ದರೆ ಅದರ ವಿರುದ್ಧ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುವುದು ಸಹಜ, ಅಲ್ಲವೇ?

ಹಾಗೂ ನಾನು ಪ್ರತಿಬಾರಿ ತಿದ್ದಲು ಹೋಗುತ್ತೇನೆಯೇ? ಇಲ್ಲವಲ್ಲಾ? ಈ ವಿರೋಧ-ತಿದ್ದುಪಡಿ ಎಲ್ಲಾ ಬೇಡ ಎಂದೇ ನಾನು ಧಾರ್ಮಿಕ ಚಟುವಟಿಕೆಗಳಿಂದ ಸ್ವಲ್ಪ ದೂರ ಇರುತ್ತೇನೆ ಎಂದು ಹೇಳಿದ್ದಲ್ಲವೇ? ಮರೆತುಬಿಟ್ಟಿರಾ? :-)

Post a Comment