About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Wednesday, November 30, 2011

ಮಂಗಳಾರತಿ ಮತ್ತು ತೀರ್ಥದ ಹಿಂದೆ ಇರುವ ವಿಜ್ಞಾನ

ಓದುವ ಮುನ್ನ ವಿ.ಸೂ. ಈ ಲೇಖನ ಬರೆದದ್ದು ಸಂಪ್ರದಾಯಸ್ಥರ ಮನನೋಯಿಸುವ ಉದ್ದೇಶದಿಂದ ಬರೆದದ್ದಲ್ಲ, ದಯವಿಟ್ಟು ತಪ್ಪುತಿಳಿದುಕೊಳ್ಳಬೇಡಿ. ಆಚಾರಗಳ ಬಗ್ಗೆ ಆಳವಾಗಿ ಗೊತ್ತಿರುವವರು ಅವುಗಳನ್ನು ಸತ್ವ-ಸತ್ಯಗಳ ಬುನಾದಿಯ ಮೇಲೆ ಆಚರಿಸಿಕೊಂಡಿದ್ದರೆ ಅಂಥವರ ಮೇಲೆ ನನಗೆ ಅಗೌರವ ಇಲ್ಲ.

ಈ ಲೇಖನ ಮಂಗಳಾರತಿ ಮತ್ತು ತೀರ್ಥ ಎಂಬ ಲೇಖನಕ್ಕೆ ಪ್ರತಿಕ್ರಿಯೆ.

ನಮಸ್ತೆ,

ಸಂಪ್ರದಾಯದ ಹಿಂದೆ ಇರುವ ವೈಜ್ಞಾನಿಕತೆಯನ್ನು ವಿವರಿಸುವ ಉತ್ತಮ ಪ್ರಯತ್ನ/ಉದ್ದೇಶ ಇಲ್ಲಿ ಕಾಣುತ್ತಿದ್ದೇನೆ. ಆದರೆ ಇದನ್ನು ಓದುವಾಗ ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ, ಮುಕ್ತವಾಗಿ ಹೇಳುತ್ತಿದ್ದೇನೆ, ತಪ್ಪು ತಿಳಿಯಬೇಡಿ.

ಇದರಲ್ಲಿ ನಿಜಕ್ಕೂ ವೈಜ್ಞಾನಿಕತೆ ಎಷ್ಟಿದೆ?

ನಮ್ಮ ಹಳೆಯ ಸಂಪ್ರದಾಯದಲ್ಲಿರಬಹುದಾದ ವೈಜ್ಞಾನಿಕತೆಯನ್ನು ಹುಡುಕಿ ಎತ್ತಿ ತೋರಿಸುವ ನಿಮ್ಮ ಸದುದ್ದೇಶವನ್ನು ನಾನು ಖಂಡಿತಾ ಗೌರವಿಸುತ್ತೇನೆ. ಆದರೆ ಇದನ್ನು ‘ವೈಜ್ಞಾನಿಕ ಸಾಧ್ಯತೆ’ಗಳು ಎನ್ನಬಹುದೇ ಹೊರತು ನಿಜವಾಗಿ ವೈಜ್ಞಾನಿಕ ಎನಿಸಿಕೊಳ್ಳಲು ಇನ್ನೂ ಹೆಚ್ಚಿನ ಅಧ್ಯಯನ, ಆಧಾರಗಳು ಬೇಕು. ಭಾವನಾತ್ಮಕ ಮನಸ್ಥಿತಿ ‘ಕಾಲ್ಪನಿಕ ವೈಜ್ಞಾನಿಕತೆ’ಯನ್ನು ಹುಟ್ಟುಹಾಕಿ ಆ ಮೂಲಕ ಸಂಪ್ರದಾಯವನ್ನು ಎತ್ತಿಹಿಡಿಯುವ ಅಪಾಯವನ್ನು ನಾವು ಮರೆಯಬಾರದು.

೧) ಶಿಲೆಗಳ ಖನಿಜಾಂಶ - ಒಪ್ಪತಕ್ಕ ಮಾತು, ಆದರೆ ಎಷ್ಟು ಖನಿಜಗಳು ನಿಜವಾಗಿ ನೀರಿಗೆ ಸೇರುತ್ತವೆ? ಮತ್ತೆ ಅವುಗಳ ಶಕ್ತಿ? ಅಂತಹ ಶಕ್ತಿಗಳಿಗೆ ವೈಜ್ಞಾನಿಕ ಆಧಾರ ಇದೆಯೇ?
೨) ಹಾಲು ಹಾಕಿದ ತೀರ್ಥ ಶುದ್ಧ ತೀರ್ಥವೇ ಅಲ್ಲ ಎಂದಿರಿ - ಇದರ ಆಧಾರ/ಹಿನ್ನೆಲೆ ಏನು? ವೈಜ್ಞಾನಿಕವೋ ಅಥವಾ ಧಾರ್ಮಿಕ ಕಾರಣವೋ? ಕುತೂಹಲದಿಂದ ಕೇಳುತ್ತಿದ್ದೇನೆ.
೩) ಘಂಟಾನಿನಾದ - ಅಯಾನಿಕ್ ತರಂಗ - ರೋಗನಿರೋಧಕ ಶಕ್ತಿ: ಇದಕ್ಕೂ ವೈಜ್ಞಾನಿಕ ಆಧಾರಗಳಿವೆಯೇ? ಇವು ದೇಹಕ್ಕೆ ಬೇಕಾಗುವ ಯಾವ ಸತ್ವಗಳನ್ನು ಒದಗಿಸುತ್ತವೆ? (ಇಲ್ಲಿ ನೀವು ಶಂಖನಾದ ಹಾಗೂ ಮಂತ್ರೋಚ್ಛಾರದ ಬಗ್ಗೆ ಹೇಳದೇ ಇದ್ದದ್ದು ಸ್ವಲ್ಪ ಆಶ್ಚರ್ಯವಾಯಿತು)
೪) ತುಳಸಿಯ ಔಷಧೀಯ ಗುಣ - ಒಪ್ಪತಕ್ಕ ಮಾತು, ಆದರೆ ಅಷ್ಟು ಕಡಿಮೆ ಪ್ರಮಾಣದಲ್ಲಿ ಅದರಿಂದ ಏನಾದರೂ ಪ್ರಯೋಜನ ಇದೆಯೇ?
೫) ಆರತಿ/ದೀಪ – ಏಕಾಗ್ರತೆ: ಸೈದ್ಧಾಂತಿಕವಾಗಿ ಒಪ್ಪತಕ್ಕ ವಿಚಾರ. ಆದರೆ ತುಪ್ಪದಲ್ಲಿ ಅದ್ದಿದ ಬತ್ತಿಗೂ ಎಣ್ಣೆಯಲ್ಲಿ ಅದ್ದಿದ ಬತ್ತಿಗೂ ವ್ಯತ್ಯಾಸವಿದೆಯೇ? ತುಪ್ಪವನ್ನು ವಿಶೇಷವಾಗಿ ಬರೆದದ್ದನ್ನು ನೋಡಿ ಕೇಳುತ್ತಿದ್ದೇನೆ.
೬) ಆರತಿ – ನರವ್ಯೂಹ: ಅಂಗೈ ಬಿಸಿಯಾದಾಗ ಯಾವ ನರವ್ಯೂಹ ಹೇಗೆ ಕ್ರಿಯಾಶಾಲಿಯಾಗುತ್ತದೆ? ಇದರ ಪ್ರಯೋಜನವೇನು? ಅದರಿಂದ ಕುಡಿಯುವ ತೀರ್ಥ ಏನೂ ಬದಲಾಗುವುದಿಲ್ಲ, ಅಲ್ಲವೇ? ಮನಸ್ಸು ಚುರುಕಾಗುತ್ತದೆ ಎಂದೇ?
೭) ಆರತಿ – ರೋಗಾಣು ನಾಶ: ಅಂಗೈ ಬಿಸಿ ಆಗಿ ರೋಗಾಣು ಸಾಯುವುದು - ಇದರಲ್ಲಿ ಹುರುಳಿದೆ ಎಂದನಿಸುತ್ತದೆ, ಆದರೆ ಸಂಶೋಧನಾತ್ಮಕ ವಿವರಗಳ ಬಲ ಇದ್ದರೆ ಒಳಿತು.
೮) ಟೈಲ್ಸ್, ಎಗ್ಸಾಸ್ಟ್ ಫ್ಯಾನ್ - ಇವುಗಳಿಂದ ಏನು ತೊಂದರೆ ಇದೆ?

ಒಟ್ಟಿನಲ್ಲಿ ಇವೆಲ್ಲಾ ಸತ್ಯ ಎಂದರೂ ಕೂಡ ಇಂದು ನಮಗೆ ತೀರ್ಥ ಸಿಗುವ ಹೆಚ್ಚಿನ ಸ್ಥಳಗಳಲ್ಲಿ ಈ ಎಲ್ಲಾ ಅಂಶಗಳನ್ನು ಸರಿಯಾಗಿ ಪರಿಗಣಿಸಿದ ‘ಶುದ್ಧ’ ತೀರ್ಥ ಸಿಗುವುದಿಲ್ಲ ಎಂಬ ಮಾತನ್ನು ಖಂಡಿತಾ ಒಪ್ಪುತ್ತೇನೆ. ವಸ್ತುಸ್ಥಿತಿ ಹೀಗಿರುವಾಗ ಅಶುದ್ಧ ತೀರ್ಥದ ಅಪಾಯಗಳನ್ನು ಕೂಡ ನಾವು ವಿಶ್ಲೇಷಿಸಬೇಕಲ್ಲವೇ?

ತೀರ್ಥ ಪರಿಶುದ್ಧವಲ್ಲದಿದ್ದರೆ ಅಪಾಯ ಏನು? ಅಶುದ್ಧತೆಯ ಸಾಧ್ಯತೆಗಳೆಷ್ಟು?

ಈಗ ಈ ವಿಷಯವನ್ನು ಇನ್ನೊಂದು ರೀತಿಯಿಂದ ವಿಶ್ಲೇಷಿಸೋಣ. ಈ ಮೇಲೆ ಹೇಳಿದ ಅಂಶಗಳಲ್ಲಿ ಒಂದು ಅಥವಾ ಹೆಚ್ಚಿನ ವಿಷಯಗಳು ಏರುಪೇರಾದರೆ ದೋಷ ಏನಿರಬಹುದು? ನನ್ನ ಅನಿಸಿಕೆಗಳು ಇಂತಿವೆ:
- ನೀರು ಉತ್ತಮವಾಗಿರದಿದ್ದರೆ ಆರೋಗ್ಯಕ್ಕೆ ಖಂಡಿತಾ ಅಪಾಯ
- ದೇವರ ಶಿಲೆಯನ್ನು ತೊಳೆಯುವವರು ಶುಚಿಯಾಗಿರದಿದ್ದರೆ ಆರೋಗ್ಯಕ್ಕೆ ಅಪಾಯ
- ಕೊಳಕು ಕೈಯಿಂದ ತೀರ್ಥ ತೆಗೆದುಕೊಂಡರೆ ಆರೋಗ್ಯಕ್ಕೆ ಖಂಡಿತಾ ಅಪಾಯ (ಎಲ್ಲರೂ ಆರತಿಗೆ ಸರಿಯಾಗಿ ಕೈ ಒಡ್ಡುವುದು ಅಪ್ರಾಯೋಗಿಕ)
- ಉಳಿದ ತೀರ್ಥವನ್ನು ತಲೆಮಂಡೆಗೆ/ಕೂದಲಿಗೆ ಉಜ್ಜಿ ನಂತರ ಅದೇ ಕೈಯಲ್ಲಿ ಪುನಃ ಪ್ರಸಾದ ತೆಗೆದುಕೊಂಡು ತಿನ್ನುವುದೂ ಅಪಾಯ
- ಶಿಲೆ ಉತ್ತಮವಾಗಿರದಿದ್ದರೆ ದೊಡ್ಡ ದೋಷ ಇರಲಾರದೇನೋ, ಪ್ರಯೋಜ ಇರಲಾರದು, ಅಷ್ಟೆ
- ತುಳಸಿ ಎಲೆಯಲ್ಲಿ ಕ್ರಿಮಿಕೀಟ ಇದ್ದರೆ ಆರೋಗ್ಯ ಕೆಡಬಹುದೋ?
- ಶಂಖನಾದ/ಘಂಟಾನಿನಾದದಲ್ಲಿ/ಮಂತ್ರೋಚ್ಛಾರದಲ್ಲಿ ಹೆಚ್ಚುಕಡಿಮೆ ಆದರೆ ಭೀಕರವಾದ ಅಯಾನಿಕ್ ತರಂಗಗಳು ಉತ್ಪತ್ತಿಯಾಗಿ ನಮಗೆ ಅಪಾಯ ಉಂಟುಮಾಡುವ ಅಥವಾ ನಮ್ಮ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆಯೇ? (ಗದ್ದಲದ ವಾತಾವರಣವೂ ಇವುಗಳನ್ನು ಏರುಪೇರು ಮಾಡಬಹುದಲ್ಲವೇ?)

ಇಂದಿನ ದಿನಗಳಲ್ಲಿ ತೀರ್ಥ ಸೇವಿಸುವುದು ಎಷ್ಟು ಸುರಕ್ಷಿತ?

ಈಗ ಮೇಲೆ ಹೇಳಿದ್ದರ ಆಧಾರದಲ್ಲಿ ಪುನಃ ಒಂದು ಸಮಗ್ರ ದೃಷ್ಟಿಯಿಂದ ಈ ಸಂಪ್ರದಾಯದ ಒಟ್ಟಾರೆ ಗುಣಾವಗುಣಗಳನ್ನು ವಿಶ್ಲೇಷಿಸೋಣ:
- ಸಂಪ್ರದಾಯದ ಹಿಂದೆ ಇರುವ ವೈಜ್ಞಾನಿಕ ಸತ್ಯದ ಬಗ್ಗೆ, ಪ್ರಯೋಜನದ ನಿಖರ ಪ್ರಮಾಣದ ಬಗ್ಗೆ ಇನ್ನೂ ಸಂಶೋಧನೆ ಆಗಬೇಕಿದೆ ಎಂದು ಕಾಣುತ್ತದೆ. ನೀವು ಹೇಳಿದ್ದರಲ್ಲಿ ಉತ್ತಮ ಊಹೆಗಳಿವೆ, ಆದರೆ ಬಲವಾದ ವೈಜ್ಞಾನಿಕ ಆಧಾರಗಳಿಗಾಗಿ ಇನ್ನೂ ಅಧ್ಯಯನ ನಡೆಯಬೇಕಷ್ಟೆ ಎಂದು ತೋರುತ್ತದೆ.
- ಅನೇಕ ಅಂಶಗಳನ್ನು ವೈಜ್ಞಾನಿಕ ಎಂದು ಒಪ್ಪಿಕೊಂಡರೂ ಕೂಡ, ಹೆಚ್ಚಿನ ಕಡೆ ಎಲ್ಲಾ ಅಂಶಗಳ ಅನುಷ್ಠಾನ ಬಹಳ ಕಷ್ಟ ಎಂಬುದೂ ನಾವು ನಿತ್ಯವೂ ಕಾಣುವ ಮಾತು, ಹೀಗಾಗಿ ಅನಾರೋಗ್ಯಕರ ಅಂಶಗಳು ತಲೆ ಹಾಕುವ ಸಾಧ್ಯತೆಗಳು ಸಾಕಷ್ಟು ಹೆಚ್ಚು

ಒಟ್ಟಿನಲ್ಲಿ, ಪರಿಶುದ್ಧವಾದ ತೀರ್ಥವನ್ನು ತೆಗೆದುಕೊಂಡರೆ ಅದರಿಂದ ಆಗಬಹುದಾದ ಪ್ರಯೋಜನ, ಅದು ಪರಿಶುದ್ಧವಾಗಿರುವುದರ ಸಾಧ್ಯತೆ, ಪರಿಶುದ್ಧವಾಗಿಲ್ಲದಿದ್ದರೆ ಇರುವ ಅಪಾಯ - ಇವೆಲ್ಲವನ್ನೂ ತೂಗಿ ನೋಡಿದರೆ ತೀರ್ಥ ತೆಗೆದುಕೊಳ್ಳುವುದು ಅಪಾಯಕಾರಿ ಎಂದು ಪರಿಗಣಿಸಿದರೆ ತಪ್ಪಿಲ್ಲ, ಅಲ್ಲವೇ? ಒಂದಾನೊಂದು ಕಾಲದಲ್ಲಿ ಸಮಸ್ಯೆಗಳಿಗಿಂತ ಪ್ರಯೋಜನ ಮೇಲಿತ್ತೇನೋ? ಆದರೆ ಈಗ ಹಾಗಿಲ್ಲ ಎಂದು ನನ್ನ ಅನಿಸಿಕೆ.

ಆದರೆ ಮತ್ತೊಂದು ರೀತಿಯಲ್ಲಿ ನೋಡಿದರೆ, ಒಂದು ಸಣ್ಣ ಚಮಚದಲ್ಲಿ ತುಸುವೇ ಸೇವಿಸುವ ‘ಅಶುದ್ಧ’ ತೀರ್ಥದಿಂದ ಅಂಥಾ ದೊಡ್ಡ ಅಪಾಯವೂ ಇಲ್ಲವೇನೋ, ಅದಕ್ಕೇ ನಾನು ದೊಡ್ಡದಾಗಿ ವಿರೋಧಿಸಲು ಮುಂದಾಗುವುದಿಲ್ಲ. ಇದೇ ರೀತಿ ನೋಡಿದರೆ ಅಲ್ಪ ಪ್ರಮಾಣದಲ್ಲಿ ಸೇವಿಸುವ ‘ಶುದ್ಧ’ ತೀರ್ಥದಿಂದಲೂ ಎಷ್ಟು ಪ್ರಯೋಜನವಿದೆ ಗೊತ್ತಿಲ್ಲ.

ವಿಜ್ಞಾನ-ಸಂಪ್ರದಾಯ-ಧರ್ಮ - ಇವುಗಳ ಮಧ್ಯೆ ಎಷ್ಟು ಸಂಬಂಧ ಇದ್ದರೆ ಉತ್ತಮ?

ಹಾಸುಹೊಕ್ಕಾದ ಸಂಪ್ರದಾಯವನ್ನು ತ್ಯಜಿಸಲು ಸಮಾಜ ಸುಲಭವಾಗಿ ಒಪ್ಪುವುದಿಲ್ಲ, ಅದರಲ್ಲೂ ದೇವರೊಂದಿಗೆ ಸಂಬಂಧ ಕಲ್ಪಿಸಿದರೆ ಮುಗಿದೇ ಹೋಯಿತು. ಉದಾ: ಅನಾರೋಗ್ಯಕರ ಎಂದು ಕಂಡಲ್ಲಿ ನಾವು ತೀರ್ಥವನ್ನು ನಿರಾಕರಿಸಿದರೆ ಧಾರ್ಮಿಕರ ಕೆಂಗಣ್ಣಿಗೆ ತುತ್ತಾಗುವುದು ಸಹಜ. ಹೀಗಾಗಿ ವಿಜ್ಞಾನವನ್ನೂ ದೇವರನ್ನೂ ತುಸು ದೂರ ದೂರವೇ ಇಟ್ಟರೆ ಒಳಿತೇನೋ?

ವಿಜ್ಞಾನ ಸದಾಚಾರವನ್ನು ಹುಟ್ಟು ಹಾಕಲಿ, ಧಾರ್ಮಿಕ ಆಚರಣೆಗಳನ್ನಲ್ಲ. ಉದಾ: ಖನಿಜಾಂಶ, ತುಳಸಿ ಇತ್ಯಾದಿಗಳ ಬೆಲೆಯನ್ನರಿತು ಅವನ್ನೊಳಗೊಂಡ ಉತ್ತಮವಾದ ‘ಆರೋಗ್ಯ ಪೇಯ’ವನ್ನು ಶುಚಿಯಾದ ಗ್ಲಾಸಿನಲ್ಲಿ ಬಂದವರಿಗೆ ಕುಡಿಯಲು ಕೊಟ್ಟರೆ ಅದೇ ಉತ್ತಮವೇನೋ? ಹೀಗೆ ಮಾಡುವುದರಿಂದ ಇಂತಹ ಪೇಯವನ್ನು ಕೊಡುವ ಸಂಪ್ರದಾಯವನ್ನು ಪ್ರತಿಬಾರಿಯೂ ಪಾಲಿಸಲೇ ಬೇಕಾದ ಅನಿವಾರ್ಯತೆ ಇರುವುದಿಲ್ಲ. ಸಮಯ-ಸಾಮಗ್ರಿಗಳು ಹೊಂದಿ ಬಂದಾಗ ಕೊಟ್ಟರಾಯ್ತು, ಸಾಮಗ್ರಿಗಳು-ಸನ್ನಿವೇಶ-ಸ್ಥಳ ಅನಾರೋಗ್ಯಕರ ಎಂದು ಕಂಡು ಬಂದರೆ ಬಿಟ್ಟರಾಯ್ತು, ಸರಳ.

ಇನ್ನು ಕೊನೆಯದಾಗಿ ಸದಾಚಾರ, ಮನಸ್ಸು, ನಂಬಿಕೆಗಳ ಪಾತ್ರ: ‘ಪರಿಣಾಮ’, ‘ಫಲಿತಾಂಶ’ಗಳಲ್ಲಿ ಇವುಗಳ ಪಾತ್ರ ಏನು? ಎಷ್ಟು? ಇದು ಅತ್ಯಂತ ಕಷ್ಟಕರವಾದದ್ದು, ಕೊನೆಯಿಲ್ಲದ ಟಾಪಿಕ್. ಇದು ಅವರವರಿಗೆ ಬಿಟ್ಟದ್ದು.

ನಿಮ್ಮ ಗಮನಕ್ಕೆ: ಈ ವಿಷಯದಲ್ಲಿ ನಾನು ಬರೆದ ಇನ್ನೂ ಎರಡು ಲೇಖನಗಳಿವೆ:

6 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಚಿಂತನಾತ್ಮಕ ಬರಹ...ಯೋಚನೆಗೆ ಹಚ್ಚುತ್ತೆ..ಯೋಚಿಸುವ ಮನಸ್ಸಿರುವವರಿಗೆ ಮಾತ್ರ...

Anonymous said...

ಈ ರೀತಿಯ ಅಶುಧ್ಧ ತೀರ್ತ ಕುಡಿದು ಎಷ್ಟು ಮಂದಿ ಸತ್ತರು ಎಂಬುದನ್ನೂ ತಾವು ವಿವರಿಸಿದ್ದರೆ ಚೆನ್ನಾಗಿತ್ತು... >

Anonymous said...

ಗೊ೦ದಲಮಯ ಜಗತ್ತು..ಯಾವುದನ್ನೂ ವೈಜ್ನಾನಿಕ ಇಲ್ಲದೆ ನ೦ಬಬಾರದು ಅ೦ದುಕೊ೦ಡರೂ ಅದು ಅಸಾಧ್ಯ...

Subrahmanya said...

ಕೃಷ್ಣಶಾಸ್ತ್ರಿಗಳೆ,

ಆ ಲೇಖನವನ್ನು ನಾನು ಬರೆದದ್ದು ಮೊದಮೊದಲು ನಾನು ಬ್ಲಾಗ್ ಬರೆಯಲು ಆರಂಭಿಸಿದಾಗ :), ಹಾಗಾಗಿ ತುಂಬ ಚಿಕ್ಕದಾಗಿ ವಿವರಿಸಿದ್ದೇನೆ. ಆಗಿನ್ನೂ ಎಷ್ಟು ಬರೆಯಬೇಕು/ಬಾರದು ಎನ್ನುವ ಅರಿವು ನನಗಿರಲಿಲ್ಲ. ಇರಲಿ, ಇನ್ನು ನಿಮ್ಮ ಪ್ರಶ್ನೆಗಳಿ ಉತ್ತರಿಸುವ ಸಾಹಸ ಮಾಡುತ್ತೇನೆ. ಇದೇನು ಅಂತಿಮವಲ್ಲ, ತಪ್ಪಿದ್ದರೆ ನೀವೂ ತಿದ್ದಿ.

೧) ಇಲ್ಲಿ ಶಕ್ತಿ ಎನ್ನುವುದು ನಂಬಿಕೆ. ಹರಿಯುವ ನೀರು ತನ್ನ ಜೊತೆ ಮಿನರಲ್ ಗಳನ್ನು ತರುವುದು ಪ್ರಮಾಣೀಕೃತವಾಗಿರುವ ಸಂಗತಿಯೇ ಅಲ್ಲವೆ. ಸಹ್ಯಾದ್ರಿಯ ಲೋಹದದಿರ ಕಣಿವೆಗಳಲ್ಲಿ ಹರಿದುಬರುವ ತುಂಗೆಯ ನೀರು ’ತುಂಗಾ ಪಾನ’ ವೆಂದೇ ಪ್ರಸಿದ್ದವಾದುದು. ಖನಿಜಾಂಶಗಳು ಇರುತ್ತದೆ. ಅದು ಪ್ರಕೃತಿ. ಎಷ್ಟು ಇರುತ್ತದೆ ಎಂದರೆ...ಮನುಷ್ಯ ಪ್ರಕೃತಿಯನ್ನು ಎಷ್ಟು ಹಾಳು ಮಾಡಿದ್ದಾನೆ/ ಮಾಡುತ್ತಿದ್ದಾನೆ ಎನ್ನುವುದನ್ನೂ ಗಣಿಸಬೇಕಾಗುತ್ತದೆ. ನಾವು ಮಾಡಿರುವ ಕರ್ಮಕಾಂಡಾಕ್ಕೆ ಪ್ರಕಿತಿಯು ಹೊಣೆಯಾಗಲಾರದು.

೨)ಬರೀ ಹಾಲಲ್ಲ , ಹಾಲು ಮೊಸರು ತುಪ್ಪ ಜೇನುತುಪ್ಪ ಸಕ್ಕರೆ ಪಂಚಾಮೃತ. ಮೂರೂ ಸೇರಿದರೆ ಕೊಬ್ಬಿನ ಗುಡಾಣವೇ ಆಗುತ್ತದೆ ಎನ್ನುವುದು ವಿಜ್ಞಾನದ ಪಾಠವೆ ಆಗಿದೆ. ಮೊಸರು ಹುಳಿಯಾಗಿ ಅಸಿಡಿಗೆ ದಾರಿಯಾಗುತ್ತದೆ. ಹೀಗೆ ಇನ್ನೂ ಬಹಳಷ್ಟು ಇದೆ. ವೇದಗಳೇ ನಮಗೆ ಪರಮ ಪ್ರಮಾಣವಾಗಿರುವುದರಿಂದ ಅಲ್ಲಿ’ ಆಪ’ ಕ್ಕೇ ಪ್ರಾತಿನಿಧ್ಯವಿರುವುದು ಕಂಡು ಬರುತ್ತದೆ. ಗಂಗಾಜಲಮುತ್ತಮಂ !. (ಈಗ ಕೆಟ್ಟಿರೋದಕ್ಕೆ ಭಾಗೀರತಿಯನ್ನು ಹೊಣೆ ಮಾಡಬೇಡಿ ಸ್ವಾಮಿ, ಕೆಡಿಸಿರೋದು ನಾವೆ !).

೩)ಲೋಹಗಳು ಅಯಾನುಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ಅದನ್ನು ಬ್ಯಾಕ್ಟೀರಿಯಾ ವಿರುಧ್ಧವಾಗಿ ಬಳಸಬಹುದು (ಈಗಿನ ಎಷ್ಟೋ ’ಮಾತ್ರೆ’ ಗಳಲ್ಲಿ ಬಳಕೆಯಾಗುತ್ತಲೇ ಇದೆ) ಎನ್ನುವುದು ವೈಜ್ಞಾನಿಕವಾಗಿಯೇ ಪ್ರಮಾಣವಾಗಿರುವುದು. ಇನ್ನು ಮಂತ್ರೋಚ್ಚಾರಣೆಯು ಪಾವಿತ್ರ್ಯತೆಯನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ನೆಮ್ಮದಿಗೂ ಕಾರಣವಾಗುತ್ತದೆ ಎಂದು ಒಪ್ಪಬಹುದು. ಇದನ್ನು ಬಿಟ್ಟಿಲ್ಲ. ಮೊದಲೇ ಹೇಳಿದಂತೆ ಮೊದಮೊದಲ ಬರಹ :).

Subrahmanya said...

ಇವೆಲ್ಲವನ್ನೂ ಸಮಾಧಾನದಿಂದ ನೋಡಬೇಕಾಗಿದೆ ಅಷ್ಟೆ. ಗೊಂದಲಗಳು ಯಾವುದರಲ್ಲಿ ಇಲ್ಲ ?. ತಿಂದರೆ ಆರೋಗ್ಯ, ಅತಿಯಾಗಿ ತಿಂದರೆ ಅನಾರೋಗ್ಯ. ಹಾಗಾಗಿ ತಿನ್ನುವುದನ್ನೇ ವಿರೋಧಿಸಲು ಆಗುವುದಿಲ್ಲ. ತಿಳಿದು ತಿನ್ನಬೇಕಾದಷ್ಟನ್ನು ತಿನ್ನೋಣ ಅಲ್ಲವೆ ?.

ಧನ್ಯವಾದಗಳು

ಕೃಷ್ಣ ಶಾಸ್ತ್ರಿ - Krishna Shastry said...

ಸುಬ್ರಹ್ಮಣ್ಯ ಅವರೇ, ನಿಮ್ಮ ಮುಕ್ತ ಪ್ರತಿಕ್ರಿಯೆಗೆ ಧನ್ಯವಾದಗಳು.

ನಾನು ಹೇಳುವುದೂ ಅಂತಿಮ ಎಂಬ ಹಠ ನನಗಿಲ್ಲ, ಆದರೆ ‘ವೈಜ್ಞಾನಿಕ’ ಎನ್ನಲು ಅನೇಕ ಮಾನದಂಡಗಳಿವೆ, ಅವನ್ನು ಪರಿಗಣಿಸದೆಯೇ ವೈಜ್ಞಾನಿಕ ಎಂದು ಹೇಳಿದರೆ ಅದು ಅನರ್ಥಕ್ಕೀಡುಮಾಡುತ್ತದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಿಮ್ಮ ಉದ್ದೇಶ ಒಳ್ಳೆಯದಿರಬಹುದು, ಅದರ ಬಗ್ಗೆ ನನ್ನ ಆಕ್ಷೇಪವಿಲ್ಲ, ಬದಲಾಗಿ ಮೆಚ್ಚುಗೆ ಇದೆ.

ತಪ್ಪು ತಿಳಿದುಕೊಳ್ಳಬೇಡಿ, ನೀವು ನಿಮ್ಮ ಲೇಖನವನ್ನು ಅಮೂಲಾಗ್ರವಾಗಿ ಪುನರ್-ಪರಿಶೀಲಿಸಿ ತಿದ್ದುವುದು ಉತ್ತಮ ಎಂದು ನನ್ನ ಅಭಿಪ್ರಾಯ.

Post a Comment