ಗಮನಿಸಿ: ಈ ಕೆಳಗಿನ ಲೇಖನ ದಕ್ಷಿಣ ಕನ್ನಡದ ಹವ್ಯಕ ಕನ್ನಡದಲ್ಲಿದೆ. ಸಾಮಾನ್ಯ ಬಳಕೆಯಲ್ಲಿರುವ ಕನ್ನಡದಲ್ಲಿ ಓದಬೇಕಾದರೆ ಈ ಕೊಂಡಿಯನ್ನು ಕ್ಲಿಕ್ಕಿಸಿರಿ
ಪೀಠಿಕೆ
ಗೋ ಹೇಳಿದ್ರೆ ನಿಂಗಳ ಮನಸ್ಸಿಲ್ಲಿ ಮೊದಲು ಹುಟ್ಟುವ ಭಾವನೆ ಎಂತದು? ದೇವರು ಹೇಳಿಯೋ, ಅಮ್ಮ ಹೇಳಿಯೋ ಅಥವಾ ಒಂದು ಗುಲಾಮ ಪ್ರಾಣಿ ಹೇಳಿಯೋ? ನಾವು ಲೆಕ್ಕಕ್ಕೆ ದನವ ದೇವರು, ಅಮ್ಮ ಹೇಳಿ ಪೂಜಿಸುವ ಪಂಗಡಕ್ಕೆ ಸೇರಿದವು. ಮಾತ್ರವಲ್ಲ ನಮ್ಮಲ್ಲಿ ಸುಮಾರು ಜನ ದನಂಗಳ ಸಾಂಕುತ್ತವು, ಅದಕ್ಕಿಂತಲೂ ಹೆಚ್ಚಾಗಿ, ನಮ್ಮಲ್ಲಿ ಹೆಚ್ಚಿನವು ದಿನನಿತ್ಯವೂ ಹಾಲು ಮತ್ತೆ ಅದರ ಉತ್ಪನ್ನಂಗಳ ಧಾರಾಳವಾಗಿ ಉಪಯೋಗಿಸುವವೇ. ಹಾಂಗಾಗಿ ಇದು ಪ್ರತಿಯೊಬ್ಬ ಹವ್ಯಕನೂ ಓದೆಕ್ಕಾದ ಲೇಖನ - ಓದಿದ ನಂತರ ಆತ್ಮವಿಮರ್ಶೆ ಮಾಡಲೇ ಬೇಕಾದ ವಿಚಾರ ಇದರಲ್ಲಿ ಇದ್ದು.
ಎಲ್ಲದಕ್ಕಿಂತ ಮೊದಲು ಕಾಳಿದಾಸ ಬರೆದ ಈ ಶ್ಲೋಕವ ಓದಿ ಹೊಸ ವಿಷಯಂಗಳ ಬಗ್ಗೆ ಮುಕ್ತಮನಸ್ಕರಾಗಿ ಹೇಳಿ ವಿನಂತಿಸುತ್ತೆ.
ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ
ಸಂತಃ ಪರೀಕ್ಷ್ಯಾನ್ಯತರದ್ಭಜಂತಿ
ಮೂಢಃ ಪರಪ್ರತ್ಯಯನೆಯಬುದ್ಧಿಃ
ಸಣ್ಣ ಇಪ್ಪಗ ಕಲ್ತ ಸಂಸ್ಕೃತ ಶ್ಲೋಕಂಗಳಲ್ಲಿ ಈಗಲೂ ನೆನಪ್ಪಿಪ್ಪ ಅತ್ಯುತ್ತಮವಾದದ್ದೊಂದು ಇದು. ಅಕ್ಷರಶಃ ಅಲ್ಲದ್ದರೂ, ಈ ಶ್ಲೋಕದ ಅರ್ಥ ಸುಮಾರು ಹೀಂಗೆ ಬತ್ತು, ತಪ್ಪಿದ್ದರೆ ದಯವಿಟ್ಟು ತಿದ್ದಿ.
ಹಳತ್ತು ಹೇಳಿದ ಮಾತ್ರಕ್ಕೆ ಎಲ್ಲವೂ ಒಳ್ಳೆಯದು ಹೇಳಿ ಅಲ್ಲ
ಹೊಸತ್ತು ಹೇಳಿದ ಮಾತ್ರಕ್ಕೆ ಎಲ್ಲವೂ ಕೆಟ್ಟದು ಹೇಳಿಯೂ ಅಲ್ಲ
ಬುದ್ಧಿವಂತರು ತಾವೇ ಪರೀಕ್ಷಿಸಿ ಒಳ್ಳೆದರ ತೆಕ್ಕೋಳ್ತವು
ಮೂಢರು ಬೇರೆಯವು ಹೇಳಿದ್ದರ ಅಂಧವಾಗಿ ಅನುಕರಣೆ ಮಾಡ್ತವು
ನಾವು ದನಂಗಳ ನಿಜಕ್ಕೂ ಪೂಜ್ಯರೂಪಲ್ಲಿ ನೋಡ್ತಾ? ಅಪ್ಪು ಹೇಳಿಯಾದ್ರೆ, ದನಂಗಳ ನಿತ್ಯವೂ ಹಿಂಸೆ ಮಾಡುವ ಅಮಾನವೀಯ ಪದ್ಧತಿಗೊ ಮೊದಲಾಣಂದ ಹೆಚ್ಚೇ ಆಯಿದು ಹೊರತು ಕಮ್ಮಿ ಆಯಿದಿಲ್ಲೆ, ಎಂತದಕ್ಕೆ? ಅಪ್ಪಾ?!! ಎಲ್ಲಿದ್ದು ಹಿಂಸೆ ಹೇಳಿ ಆಶ್ಚರ್ಯ ಆತಾ? ದಯಮಾಡಿ ಮುಂದೆ ಓದಿ ಹೇಳಿ ವಿನಂತಿ.
ಒಂದು ಕ್ಷಣ ಗಂಭೀರವಾಗಿ ಈ ಕೆಳ ಬರೆದ ಪದ್ಧತಿಗಳ ಓದಿ ನೋಡಿ:
- ಜೀವನ ಪೂರ್ತಿ ಹಟ್ಟಿಲಿ ಕಟ್ಟಿ ಹಾಕುದು
- ಮೂಗಿಂಗೆ ದಾರ ಹಾಕುದು
- ಗಂಡು ಕರುಗಳ ಕೊಲ್ಲುದು ಅಥವಾ ಮಾರುದು (ಮತ್ತಿನ್ನಾರಿಂಗೆ, ಕಟುಕರಿಂಗೆ)
- ಕರು ಮತ್ತೆ ದನವ ದೂರ ದೂರ ಕಟ್ಟಿಮಡುಗುದು (ಅಮ್ಮ ಮಗು ಎಷ್ಟು ಅನ್ಯೋನ್ಯವಾಗಿ ಇರೆಕು, ಬೇಡ ಹೇಳುಲೆ ನಾವು ಯಾರು?)
- ಕೃತಕ ಗರ್ಭಧಾರಣೆ ಮಾಡುದು (ಲೈಂಗಿಕ ಸ್ವಾತಂತ್ರ್ಯಹರಣ)
- ಇನ್ನೂ ಒಂದೆರಡು ಸರ್ತಿ ಕರವಲೆ ಬಾಕಿ ಇಪ್ಪಗ ಮಾರಿ ಕೊಂದ ‘ಪಾಪ’ ಬಯಿಂದಿಲ್ಲೆ ಹೇಳಿ ಗ್ರೆಹಿಶಿ ಸಮಾಧಾನಲ್ಲಿ ಇಪ್ಪದು
- ಇಲ್ಲಿಯ ಹವಾಮಾನಲ್ಲಿ ಸಂಕಟಪಡ್ತು ಹೇಳಿ ಗೊಂತಿದ್ದರುದೇ ಬೇರೆ ಕಡೆಂದ ದನದ ತಳಿಯ ತಂದು ಉಪಯೋಗಿಸುದು
- ಹಾಲು ಹೆಚ್ಚು ಬಪ್ಪಲೆ ಹೇಳಿ ಹಾರ್ಮೋನ್ ಇಂಜೆಕ್ಷನ್ ಕೊಡುದು
- ಹಾಲು ಕರವ ಯಂತ್ರಂಗಳುದೇ ಬಯಿಂದು ಅಲ್ಲದಾ?
- ಹಸಿ ಹುಲ್ಲಿನ ಬದ್ಲು ಬೈಹುಲ್ಲು ಹಾಕುದೂ ಕ್ರೌರ್ಯ ಹೇಳಿ ಒಬ್ಬರು ಕೃಷಿಕರು ಎನಗೆ ತಿಳಿಸಿಹೇಳಿದ್ದವು
ಹುಡುಕಿದರೆ ಇನ್ನುದೇ ಸಿಕ್ಕುತ್ತು, ಆದರೆ ಸದ್ಯಕ್ಕೆ ಇಷ್ಟು ಸಾಕು. ಹೋರಿಗಳ ಕಥೆಗೆ ಹೋದರೆ ಇನ್ನೂ ಎಂತೆಲ್ಲ ಇದ್ದು.
ಇದೆಲ್ಲಾ ಹವ್ಯಕರಲ್ಲಿಯೂ ಹೆಚ್ಚಿನವು ಮಾಡುವ ಸಂಗತಿಗೊ, ಅಲ್ಲದಾ? ಒಂದು ಕ್ಷಣ ಆಲೋಚನೆ ಮಾಡಿ ನೋಡಿ, ಇದೆಲ್ಲಾ ಎಷ್ಟು ಕ್ರೂರ ಹೇಳಿ. ಸೀದಾ ಬಡಿವದು, ಕೊಲ್ಲುದು ಮಾತ್ರ ಕ್ರೌರ್ಯ ಅಲ್ಲ, ಬಹುಷಃ ದಿನನಿತ್ಯವೂ ಅಪ್ಪ ಹಿಂಸೆ ಅದಕ್ಕಿಂತಲೂ ಒಂದು ಕೈ ಮೇಲೆ. ಮತ್ತೊಂದು ಮುಖ್ಯವಾದ ವಿಚಾರ: ಇದರಲ್ಲಿ ದನ ಸಾಕುವವರದ್ದು ಎಷ್ಟು ಪಾತ್ರ ಇದ್ದೋ ಅಷ್ಟೇ ದೊಡ್ಡ ಪಾತ್ರ ಉಪಯೋಗಿಸುವವರದ್ದು ಕೂಡ.
ದೇವರಿಂಗೆ ಭ್ರಷ್ಟ ನೈವೇದ್ಯದ ಸಮರ್ಪಣೆ?
ವಸ್ತುಸ್ಥಿತಿ ಹೀಂಗಿಪ್ಪಗ, ನಾವು ತಿಂಬದು ಬಿಡಿ (ಅದರ ಬಗ್ಗೆ ಮತ್ತೆ ಬರತ್ತೆ), ಈ ಹಾಲು ತುಪ್ಪ ಇತ್ಯಾದಿಗಳ ನಾವು ದೈವ ಕಾರ್ಯಕ್ಕೆ ಉಪಯೋಗಿಸುವಾಗಲೂ ಹಿಂದೆ ಮುಂದೆ ನೋಡ್ತಿಲ್ಲೆ, ಒಂದು ಚೂರೂ ಪಾಪಪ್ರಜ್ಞೆ ಕಾಡ್ತಿಲ್ಲೆ, ಇದರ ದೇವರು ಮೆಚ್ಚುವನಾ? ಪುಣ್ಯ ಸಿಕ್ಕುಗಾ? ನಿಂಗಳೇ ಹೇಳಿ.
ಎಂತದಕ್ಕೆ ಈ ಮೌನ? ಅಸಡ್ಡೆ?
ಎನಗೆ ಈ ಮೌನ ಅಸಹನೀಯವಾಗಿ ಕಾಣ್ತು, ಆದರೆ ಈ ಮೌನಕ್ಕೆ ಹಲವಾರು ಕಾರಣಂಗೊ ಕಾಣ್ತು ಕೂಡ, ಎನಗೆ ಕಂಡ ಕೆಲವುದರ ಇಲ್ಲಿ ವಿವರಿಸುಲೆ ಪ್ರಯತ್ನ ಮಾಡ್ತೆ:
ಹಳೇ ಸಂಪ್ರದಾಯಕ್ಕೆ ಕಟ್ಟು ಬಿದ್ದು... ಎಲ್ಲರೂ ಕೆಟ್ಟ ಮನಸ್ಸಿನವು ಹೇಳಿ ಅಲ್ಲ, ಇದು ಕಾಲದ ಪ್ರವಾಹದೊಟ್ಟಿಂಗೆ ನಿಧಾನಕ್ಕೆ ಬೆಳೆದು ಬಂದ ಸಂಪ್ರದಾಯ, ಹೀಂಗಾಗಿ ಹೆಚ್ಚಿನವು ಸಾಂಕುವ ವಿಷಯದ ಬಗ್ಗೆಯಾಗಲೀ, ಉಪಯೋಗಿಸುವ ವಿಷಯದ ಬಗ್ಗೆಯಾಗಲೀ ಆಲೋಚನೆಯೇ ಮಾಡಿರ್ತವಿಲ್ಲೆ. ಮತ್ತೆ ನಮ್ಮಲ್ಲಿ ಪ್ರಶ್ನಿಸುವವರ ಜೋರು ಮಾಡುವ, ತಮಾಷೆ ಮಾಡುವ ಸಂಪ್ರದಾಯವೂ ಇದ್ದನ್ನೆ?!
ಧಾರ್ಮಿಕತೆ: ಗೋವು, ಹಾಲು ಮತ್ತೆ ಅದರ ಉತ್ಪನ್ನಂಗಳ ದೈವ ಕಾರ್ಯಕ್ಕೆ ಉಪಯೋಗಿಸುತ್ತಾ ಬಂದ ಜನಕ್ಕೆ ಅದರ ಬಿಡುವ ಬಗ್ಗೆ ಕಲ್ಪನೆ ಕೂಡ ಬತ್ತಿಲ್ಲೆ, ಅದರ ಮೂಲದ ಬಗ್ಗೆ ಆಲೋಚನೆ ಮಾಡೆಕ್ಕು ಹೇಳಿ ಕಾಣ್ತೇ ಇಲ್ಲೆ. ಧಾರ್ಮಿಕ ವಿಧಿಗಳ ನೆಡಶುಲೆ ಈಗ ಮೊದಲಾಣಂದ ಜಾಸ್ತಿ ಕಷ್ಟ ಆವ್ತು - ಸುಮಾರು ಹೊಸ ಅಡಚಣೆಗೊ ಇದ್ದು - ಜಾಗೆ, ಸಮಯ, ಸಾಮಗ್ರಿಗೊ ಇತ್ಯಾದಿ... ಅದರೆಡಿಲಿ ಈ ಸಾಮಗ್ರಿಗಳ ಮೂಲವನ್ನೂ ಹುಡುಕಿಯೊಂಡು, ಆಲೋಚನೆ ಮಾಡಿಗೊಂಡು ಕೂದರೆ ಅಪ್ಪಲೆ-ಹೋಪಲೆ ಇದ್ದಾ?! ಎಲ್ಲರ ಗಮನವೂ ‘ಲೋಪ’ ಆಗದ್ದ ಹಾಂಗೆ ‘ಕ್ರಿಯೆ’ ಮಾಡುದು ಹೇಂಗೆ ಹೇಳುದರ ಬಗ್ಗೆಯೇ ಹೊರತು ಆ ‘ಆಚಾರ’ದ ಹಿಂದೆ ಇಪ್ಪ ‘ವಿಚಾರ’ದ ಮೇಲೆ ಅಲ್ಲ, ‘ದಯೆಯೇ ಧರ್ಮದ ಮೂಲ’ ಹೇಳುವ ಸರಳ ಸತ್ಯದ ಕಡೆಂಗೆ ಅಲ್ಲ. ಇಲ್ಲಿ ಅವಕಾಶವಾದಿ ಪುರೋಹಿತರ ಪಾತ್ರವೊ ಇಕ್ಕು, ಆದರೆ ಆನು ಎಲ್ಲರನ್ನುದೇ ಆ ವಿಭಾಗಕ್ಕೆ ಖಂಡಿತಾ ಸೇರ್ಸುತ್ತಿಲ್ಲೆ.
ಆಶೆ: ಈ ವಿಷಯಕ್ಕೆ ಬಂದಪ್ಪಗ ಮನುಷ್ಯಂಗೆ ಮಿತಿಯೇ ಇಲ್ಲೆ ಹೇಳುದು ಈಗ ಎಂದೆಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿ ಕಾಣ್ತು, ಅಲ್ಲದಾ? ಬಳಕೆದಾರನ ಗುರಿ ಎಂತದು? ಆದಷ್ಟೂ ಕಡಮ್ಮೆ ಕ್ರಯಲ್ಲಿ, ಆದಷ್ಟೂ ಸುಲಭವಾಗಿ ಹಾಲು ಕೈಗೆ ಸಿಕ್ಕೆಕ್ಕು. ಸಾಂಕುವವನ ಗುರಿ ಎಂತದು? ಆದಷ್ಟೂ ಕಡಮ್ಮೆ ಕ್ರಯಲ್ಲಿ, ಆದಷ್ಟೂ ಕೆಲಸ ಕಮ್ಮಿ ಮಾಡಿಗೊಂಡು ಹೆಚ್ಚು ಹೆಚ್ಚು ಉತ್ಪಾದಿಸೆಕ್ಕು. ಇವೆರಡರ ಮಧ್ಯೆ ಬೇರೆಲ್ಲಾ ಗೌಣ ಆವ್ತು.
ಆಶೆಯ ಬಗ್ಗೆ ಮತ್ತೊಂದು ವಿಷಯ: ಎಷ್ಟೆಷ್ಟೋ ಸಾವಿರ, ಲಕ್ಷ ರೂಪಾಯಿ ಎಲ್ಲೆಲ್ಲಿಯೋ ಖರ್ಚು ಮಾಡ್ತು ನಾವು, ಆದರೆ ದನಂಗಳ ಮೇಲೆ ಖರ್ಚು ಮಾಡ್ಲೆ ತಯಾರಿಲ್ಲೆ ನಾವು. ಮದುವೆ-ಉಪನಯನಕ್ಕೆ ಸಾವಿರ ಜನರ ದಿನಿಗೇಳಿ ಲಕ್ಷಗಟ್ಟಲೆ ಖರ್ಚು ಮಾಡ್ಲೆ ನವಗೆ ಏನೂ ತೊಂದರೆ ಇಲ್ಲೆ; ಕಾರು, ಡಿಶ್ ಟಿ.ವಿ., ಇನ್ವರ್ಟರ್, ಕಂಪ್ಯೂಟರ್ ಹೀಂಗೆ ಅನೇಕಾನೇಕ ಹೊಸ ವಸ್ತುಗಳ ಖರೀದಿ ಮಾಡುಲುದೇ ಹಿಂದೆ ಮುಂದೆ ನೋಡದ್ದ ಕೃಷಿಕರು ಸುಮಾರು ಜನ ಇದ್ದವು - ಒಂದು ಕಡೆ ತಮ್ಮ ಜೀವನ ಹೆಚ್ಚು ಹೆಚ್ಚು ಸುಖಕರವಾಗಿಯೊಂಡು ಇಪ್ಪಗ ಇನ್ನೊಂದು ಕಡೆ ದೇವರು, ಅಮ್ಮ ಹೇಳಿಯೆಲ್ಲಾ ನಾವು ಹೇಳುವ ದನದ ಜೀವನ ದುಸ್ಥಿತಿಯ ಕಡೆಂಗೆ ಹೋಯಿದು ಹೇಳಿ ನಮಗೆ ಕಾಣ್ತಿಲ್ಲೆ, ಅದು ವಿಪರ್ಯಾಸ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೆಲವು ವಿಷಯಂಗಳ ಬಗ್ಗೆ ನವಗೆ ನಿಜವಾಗಿ ಎಷ್ಟು ಕಾಳಜಿ ಇದ್ದು ಹೇಳುದರ ಮೇಲೆ ನಮ್ಮ ನಿರ್ಧಾರಂಗೊ ಇರ್ತು.
ಟೈಮೇ ಇಲ್ಲೆ: ಮತ್ತೆ, ಇಂದ್ರಾಣ ನಾಗಾಲೋಟದ ಜೀವನಲ್ಲಿ ಇದರ ಬಗ್ಗೆ ಆಲೋಚನೆ ಮಾಡುಲುದೇ ಆರಿಂಗೆ ಪುರ್ಸೊತ್ತಿದ್ದು?!! ಉದಿಯಪ್ಪಗ ಆಪೀಸಿಂಗೆ ಹೆರಡುವಾಗ ಗಡಿಬಿಡಿಲಿ ಕುಡಿವ ಒಂದು ಗ್ಲಾಸ್ ಕಾಪಿಯಾದಿಕ್ಕು, ಸರ್ಕಸ್ ಮಾಡಿ ಇಡೀ ಸಂಸಾರವ ಪಾರ್ಕಿಂಗೆ ಕರ್ಕೊಂಡು ಹೋದಪ್ಪಗ ತಿಂಬ ಐಸ್‍ಕ್ರೀಂ ಆದಿಕ್ಕು - ಸುಮಾರು ಸಲ ತಿಂಬದರ ಬಗ್ಗೆ ಹೆಚ್ಚು ಆಲೋಚನೆ ಮಾಡುಲೆ ಪುರ್ಸೊತ್ತಿಲ್ಲೆ, ಮತ್ತೆ ಇದೇ ಅಭ್ಯಾಸ ಪುರ್ಸೊತ್ತು ಇಪ್ಪಗ ಕೂಡ ಮುಂದುವರೆತ್ತು. ‘ವೆಜಿಟೇರಿಯನ್’ ಆದರೆ ಸಾಕು, ಅದ್ರಲ್ಲಿ ಇನ್ನೆಂತ ಒಳ್ಳೆದು-ಕೆಟ್ಟದು ನೋಡುಲೆ ಇಲ್ಲೆ ಹೇಳಿ ಹೆಚ್ಚಿನವರ ಭಾವನೆ ಇರ್ತು, ಅಲ್ಲದಾ?
ದನ ಹೇಳಿದ್ರೆ ಎಂತದು? ಹೀಂಗೆ ಜನ ಕೇಳುವ ದಿನ ದೂರ ಇಲ್ಲೆ. ಸದ್ಯಕ್ಕೆ ದಾರಿಕರೆಲಿ ಬೇಕಾಬಿಟ್ಟಿ ಇಪ್ಪ ದನಂಗಳಿಂದಾಗಿ ಸುಮಾರು ಜನಕ್ಕೆ ದನ ಹೇಳಿದ್ರೆ ಎಂತ ಹೇಳಿ ರಜ್ಜ ಗೊಂತಿದ್ದು, ಆದರೆ ಅದರ ಉಪಯೋಗ ಪಡಕ್ಕೊಂಬವರಲ್ಲಿ ಎಷ್ಟು ಜನಕ್ಕೆ ದನದ ನಿಜವಾದ ಪರಿಚಯ ಇದ್ದು? ಅವಕ್ಕೆ ಈ ಜೀವಿಗಳ ಹತ್ತರೆಂದ ನೋಡಿಯೇ ಗೊಂತಿರ್ತಿಲ್ಲೆ, ಹೆಚ್ಚಿನವಕ್ಕೆ ಹಾಲು ಪ್ಯಾಕೇಟಿಲ್ಲಿ ಸಿಕ್ಕುತ್ತು, ಅವಕ್ಕೆ ಮೂಲದ ಬಗ್ಗೆ ಆಲೋಚನೆ ಬಪ್ಪದು ದುಸ್ಸಾಧ್ಯ. ಋಷಿ ಮೂಲ, ನದಿ ಮೂಲ ಹೇಳಿದ ಹಾಂಗೆ ಹಾಲಿನ ಮೂಲವುದೇ ಭಾಸವಪ್ಪ ಕಾಲ ದೂರ ಇಲ್ಲೆ.
ಅಜ್ಞಾನ: ಕೆಲವೊಮ್ಮೆ ಅಜ್ಞಾನದ ಮೂಲ ಧಾರ್ಮಿಕ ಅಥವಾ ಸಾಮಾಜಿಕ ಸಂಪ್ರದಾಯಂಗಳ ವಿರೋಧಿಸುಲೆ ಮನಸ್ಸು/ಧೈರ್ಯ ಇಲ್ಲದ್ದೆ ಇಪ್ಪದರಲ್ಲಿರ್ತು - ಆದರೆ ಅದು ಒಂದು ನೆಪ ಮಾತ್ರ ಹೇಳುವಷ್ಟು ಸಣ್ಣ ಕಾರಣ. ಅಜ್ಞಾನಕ್ಕೆ ಮುಖ್ಯ ಕಾರಣ ಹೊಸತ್ತರ ಬಗ್ಗೆ ಉದಾಸಿನ, ಸಂಶಯ, ಹೆದರಿಕೆ - ಕೆಲವೊಮ್ಮೆ ಹೊಸ ಮಾಹಿತಿಯ ಅಲಭ್ಯತೆ. ಮೊದಲಾಣ ಕಾಲಲ್ಲಿ ಕಟ್ಟಿಗೆ ಹೊಗೆಯ ತಿಂದೊಂಡು ಹೆಮ್ಮಕ್ಕೊ ಅಡಿಗೆ ಮಾಡಿಗೊಂಡು ಇತ್ತಿದ್ದವು, ಅದರರ್ಥ ಅದು ಆರೋಗ್ಯಕ್ಕೆ ಒಳ್ಳೆದು ಹೇಳಿಯೋ? ಇನ್ನೂ ಹಾಂಗಿಪ್ಪ ಸುಮಾರು ಉದಾಹರಣೆಗೊ ಸಿಕ್ಕುಗು. ಹಾಲಿಲ್ಲಿ ನಮ್ಮ ದೇಹಕ್ಕೆ ಒಳ್ಳೆದಿಪ್ಪ ಕೆಲವು ಅಂಶಂಗೊ ಖಂಡಿತಾ ಇದ್ದು, ಆದರೆ ಕೆಟ್ಟದಿಪ್ಪ ಅಂಶಂಗೊ ಇದ್ದಾ ಹೇಳಿ ಆರಾದ್ರುದೇ ಆಲೋಚನೆ ಮಾಡಿದ್ದೀರೊ? ಈಗ ವಿಜ್ಞಾನ ಬಹಳ ಮುಂದುವರೆದ್ದು, ಪ್ರತಿಯೊಂದು ವಸ್ತುವಿಲ್ಲಿ ನಿಜವಾಗಿ ಇಪ್ಪ ರಾಸಾಯನಿಕ ಗುಣಂಗೊ ಎಂತದು, ಅದು ನಮ್ಮ ದೇಹಕ್ಕೆ ಒಳ್ಳೆಯದೋ ಕೆಟ್ಟದೋ ಇತ್ಯಾದಿ ವಿಷಯಂಗಳ ಬಗ್ಗೆ ನಿತ್ಯವೂ ಸಂಶೋಧನೆ ನೆಡತ್ತಾ ಇದ್ದು. ಹಾಂಗಾದ್ರೆ ಹಾಲು ಯಾವ ವಿಭಾಗಕ್ಕೆ ಸೇರ್ತು? ಅದಕ್ಕಿಂತಲೂ ಉತ್ತಮವಾದ ಪರ್ಯಾಯ ಆಹಾರ ಇದ್ದೋ? ಹೀಂಗೆಲ್ಲಾ ಆಲೋಚನೆ ಮಾಡುವವು ಬಹಳ ಕಮ್ಮಿ; ಸಾಂಪ್ರದಾಯಿಕ ಆಹಾರಲ್ಲಿ ಒಳ್ಳೆಯದು ಮಾತ್ರ ಇಕ್ಕಷ್ಟೆ, ಹಾಳು ಇಪ್ಪಲೆ ಸಾಧ್ಯವೇ ಇಲ್ಲೆ ಹೇಳುವ ಭ್ರಮೆಲಿ ಇದ್ದುಗೊಂಡು ಹೆಚ್ಚಿನ ಮಾಹಿತಿ ಪಡಕ್ಕೊಂಬ ಶ್ರಮ ತೆಕ್ಕೋಳದ್ದೆ ಕೂರ್ತವು ಸುಮಾರು ಜನ. ಈಗಾಣ ವಿಜ್ಞಾನಿಗೊಕ್ಕೆ ಎಂತ ಸರಿ ಗೊಂತಿಲ್ಲೆ, ಹಾಲು-ತುಪ್ಪಲ್ಲಿಪ್ಪ ಅದ್ಭುತ ಗುಣಂಗಳ ಬಗ್ಗೆ ಉದಾಸೀನತೆ ತೋರ್ಸುತ್ತವು, ಮೊದಲಾಣವಕ್ಕಾದರೆ ಜಾಸ್ತಿ ಗೊಂತಿತ್ತಿದ್ದು ಹೇಳಿ ಹೇಳುವವು ಕೂಡ ಪರ್ಯಾಯ ವಸ್ತುಗಳ ಬಗ್ಗೆ ಓದದ್ದೇ ಕೂರ್ತವು. ಹಳತ್ತಕ್ಕೆ ಸಮ ಹೊಸತ್ತಿಪ್ಪಲೆ ಸಾಧ್ಯವೇ ಇಲ್ಲೆ ಹೇಳುವ ಭ್ರಮೆಯೇ ಇದಕ್ಕೆ ಕಾರಣ. ಇದೇ ರೀತಿ ಸೆಗಣಿ ಗೊಬ್ಬರದ ಬಗ್ಗೆಯೂ ಹೇಳುಲಕ್ಕು, ಅದು ಖಂಡಿತಾ ಒಳ್ಳೆಯದೇ, ಆದರೆ ಮಾನವೀಯ ಪರ್ಯಾಯಂಗೊ ಇದ್ದರೆ?
ಅಸಡ್ಡೆ, ಕೃತಕ ಅಸಹಾಯಕತೆ: ಎಲ್ಲದಕ್ಕಿಂತ ಮುಖ್ಯವಾಗಿ, ಅಲ್ಲಿ-ಇಲ್ಲಿ ಆಲೋಚನೆ-ಮಾತುಕತೆ ಬಂದರೂ ಅದಕ್ಕೆ ಆರೋ ಹಾರಿಕೆಯ/ತಮಾಷೆಯ ಉತ್ತರ ಕೊಡ್ತವು ಅಥವಾ ‘ಇದೆಲ್ಲಾ ನಮ್ಮ ಕೈಲಿ ಸರಿ ಮಾಡ್ಲೆ ಎಡಿಗಾಗದ್ದ ವಿಷಯ’ ಹೇಳಿ ಉಳಿದವರೂ ಕೈ ಚೆಲ್ಲುವ ಹಾಂಗೆ ಮಾಡ್ತವು.
ಸಂಕ್ಷಿಪ್ತವಾಗಿ ಹೇಳ್ತರೆ, ಜನ ಸಂಪ್ರದಾಯ-ಧಾರ್ಮಿಕತೆ-ಆಶೆ-ಅಜ್ಞಾನ-ಹೆದರಿಕೆ-ಸಂಶಯ-ಉದಾಸಿನ ಈ ಎಲ್ಲದರ ಮಧ್ಯೆ ಮುಳುಗಿ ಹೋಗಿ ಪಾಪದ ದನ-ಎತ್ತುಗಳ ಮೇಲೆ ದೌರ್ಜನ್ಯ ಮುಂದುವರೆಸುತ್ತಾ ಹೋವ್ತವು.
ಕೊಲ್ಲದ್ದ ಮಾತ್ರಕ್ಕೆ ಹಿಂಸೆ ಇಲ್ಲೆ ಹೇಳಿಯೋ?
ಇದು ‘ಮಧ್ಯಮ’ರ ಕಥೆ. ಕೆಲವರು ‘ಎಂಗೊ ಕಟುಕರಿಂಗೆ ಮಾರ್ತಿಲ್ಲೆ, ಸಾಯುವಲ್ಲಿಯವರೆಂಗುದೇ ನೋಡಿಯೋಳ್ತೆಯೋಂ’ ಹೇಳಿ ಸಮಾಧಾನ ಪಟ್ಟುಗೊಳ್ತವು, ಆದರೆ ಮೇಲೆ ಹೇಳಿದ ಅಂಶಂಗಳಲ್ಲಿ ಉಳಿದಂತೆ ಹೆಚ್ಚು ಕಡಮ್ಮೆ ಬೇರೆ ಎಲ್ಲಾ ವಿಧದ ಕ್ರೌರ್ಯವನ್ನೂ ತೋರ್ಸುತ್ತವು ಹೇಳುದರ ಸರಿಯಾಗಿ ಅರ್ಥ ಮಾಡಿಗೊಳ್ತವಿಲ್ಲೆ.
ಮುಂದೆ ಎಂತ ಕಥೆ? ಆಲೋಚನೆ ಮಾಡಿ
ವ್ಯಾಪಾರೀಕರಣ ಬೆಳೆತ್ತಾ ಇಪ್ಪ ರೀತಿ ನೋಡಿದರೆ ಒಟ್ಟಾರೆ ಸ್ಥಿತಿ ಇನ್ನುದೇ ಹಾಳಪ್ಪ ಸಾಧ್ಯತೆ ನಿಚ್ಚಳವಾಗಿದ್ದು. ಆದರೂ ರಜ್ಜ ಆಶಾವಾದಿಯಾಗಿ ನಿಂಗಳಲ್ಲಿ ಕೆಲವರಾದರೂ ಈ ಬಗ್ಗೆ ಆಲೋಚನೆ ಮಾಡಿ ಈ ಕ್ರೌರ್ಯವ, ದೌರ್ಜನ್ಯವ ಕಡಮ್ಮೆ ಮಾಡುಲೆ ಪ್ರಯತ್ನ ಮಾಡುವಿ ಹೇಳಿ ನಂಬುತ್ತೆ.
ಒಂದು ಕಡೆಲಿ ದನವ ದೇವರು, ಅಮ್ಮ ಹೇಳಿಯೆಲ್ಲಾ ಪೂಜೆ ಮಾಡಿ ಇನ್ನೊಂದು ಕಡೆ ಕ್ರೂರವಾಗಿ ನೆಡಶಿಕೊಂಬ ನಾವು ‘ನಿಜವಾಗಿ ಕ್ರೌರ್ಯ ಹೇಳಿದರೆ ಎಂತ’, ‘ದನದ ಯಾವ ಸ್ವಾತಂತ್ರ್ಯ, ಹಕ್ಕುಗಳ ನಾವು ಕಸಿದುಕೊಳ್ತಾ ಇದ್ದು’ ಇತ್ಯಾದಿ ವಿಷಯಗಳ ಬಗ್ಗೆ ರಜ್ಜ ಆಲೋಚನೆ ಮಾಡಿ ಆತ್ಮವಿಮರ್ಶೆ ಮಾಡಿಕೊಳ್ಳೆಕ್ಕು ಹೇಳಿ ಎನ್ನ ಅಭಿಪ್ರಾಯ. ಬಹುಷಃ ಹೆಚ್ಚಿನವು ಈಗ ಮಾಡ್ತಾ ಇಪ್ಪದು ಆತ್ಮವಿಮರ್ಶೆ ಅಲ್ಲ, ಆತ್ಮವಂಚನೆ. ತಡವಾದರೂ ಕೂಡ, ಈಗಲಾದರೂ ಬದಲಪ್ಪಲಕ್ಕನ್ನೆ? ತಪ್ಪು ದಾರಿಯ ಬಿಟ್ಟು ಸರಿ ದಾರಿಲಿ ನಡವದರಲ್ಲಿ ಸಣ್ಣತನ ಇಲ್ಲೆ, ಅಲ್ಲದಾ?
ದನ ಸಾಂಕುವವರಲ್ಲಿ ಕೆಲವರಿಂಗೆ ಸಾಕಷ್ಟು ಅಂತಃಕರುಣೆ ಇರ್ತು, ತಮ್ಮ ಇತಿಮಿತಿಗಳ ಒಳ ಚೆಂದಕ್ಕೆ ನೋಡಿಗೊಂಬಲೆ ಪ್ರಯತ್ನ ಮಾಡ್ತವು; ಅಂತವರಲ್ಲಿ ಒಂದು ವಿನಂತಿ: ನಿಂಗೊ ಈಗ ತೋರ್ಸುವ ಪ್ರೀತಿಯ ಬರೀ ಲೊಟ್ಟೆ ಹೇಳಿ ಆನು ಅವಹೇಳನ ಮಾಡ್ತಾ ಇಲ್ಲೆ, ಆದರೆ ಇನ್ನೂ ಆಳಕ್ಕೆ ಇಳಿದು ಆಲೋಚನೆ ಮಾಡಿ, ಕೆಲವು ವಿಷಯಲ್ಲಿ ನಿಂಗೊ ಗೊಂತಿದ್ದುಕೊಂಡೋ/ಗೊಂತಿಲ್ಲದ್ದೆಯೋ ಎಸಗುವ ದೌರ್ಜನ್ಯವ ಕಡಮ್ಮೆ ಮಾಡುಲೆ ಅಥವಾ ಇಲ್ಲದ್ದ ಹಾಂಗೆ ಮಾಡುಲೆ ಪ್ರಯತ್ನ ಮಾಡಿ; ಅಂಬಗ ನಿಂಗಳ ಪ್ರೀತಿಗೆ ಇನ್ನುದೇ ಒಂದು ಸುಂದರವಾದ ರೂಪ ಬಕ್ಕು.
ನವಗೆ ಹಾಲು ನಿಜಕ್ಕೂ ಬೇಕಾ? ಅದಕ್ಕೆ ಉತ್ತಮವಾದ ಸಸ್ಯಜನ್ಯ ಪರ್ಯಾಯ ಆಹಾರ ಇದ್ದಾ? ಇದ್ದು ಹೇಳಿ ಸಂಶೋಧನೆ ಮಾಡಿದ ಎಷ್ಟೋ ಜನ ಹೇಳ್ತವು. ಅಂತರ್ಜಾಲಲ್ಲಿ ಇದರ ಬಗ್ಗೆ ಹುಡುಕಿ ನೋಡಿ, ನಿಂಗೊಗೆ ಬೇಕಾದಷ್ಟು ಮಾಹಿತಿ ಸಿಕ್ಕುತ್ತು, ಇದರ ಪರ-ವಿರೋಧ ಲೇಖನಂಗಳ ಓದಿ ನಿಂಗಳೇ ನಿರ್ಧಾರ ಮಾಡಿ.
ಸರಿಯಪ್ಪಾ, ಆರೋಗ್ಯದ ದೃಷ್ಟಿಲಿ ನಿಂಗೊಗೆ ಇನ್ನುದೇ ನಂಬಿಕೆ ಬಯಿಂದಿಲ್ಲೆ ಹೇಳಿಯೇ ಮಡಿಕ್ಕೊಂಬ, ಆದರೆ ಹೋಮಕ್ಕೆ ತುಪ್ಪ ಸುರಿವದರ ನಿಲ್ಸುಲಕ್ಕನ್ನೆ ಕಡೇಪಕ್ಷ. ಅದಕ್ಕೂ ಎಂತದಕ್ಕೆ ಅಷ್ಟೆಲ್ಲಾ ಮುಜುಗರ? ಅಲ್ಲದಾ? ಮಾತ್ರವಲ್ಲ, ದನಂಗೊ ಚೆಂದಕ್ಕೆ ಬದುಕುವ ಹಾಂಗೆ ಕೂಡ ಮಾಡುಲೆ ಪ್ರಯತ್ನ ಮಾಡುಲಕ್ಕನ್ನೆ?
ಒಟ್ಟಾರೆ ದನಂಗಳ ಸಾಕುದು ಎಂತದಕ್ಕೆ? ಅದರ ಉತ್ಪನ್ನಂಗೊ ನವಗೆ ಬೇಕು ಹೇಳಿ, ಅಲ್ಲದಾ? ಆ ಅಗತ್ಯವನ್ನೇ ಕಡಮ್ಮೆ ಮಾಡಿದರೆ ಅಥವಾ ಕಡೇಂಗೆ ಬೇಡ ಹೇಳಿ ಮಾಡಿದರೆ ಹೇಂಗೆ? ಅದು ನಿಜವಾದ ಪರಿಹಾರ ಈ ಸಮಸ್ಯೆಗೆ. ಬಿಡುದು ಸುಲಭ ಅಲ್ಲ ಹೇಳಿ ಗೊಂತಿದ್ದು, ಮಾನವೀಯತೆಯೊಟ್ಟಿಂಗೆ ದನ ಸಾಂಕುದು ಸುಲಭ ಅಲ್ಲ ಹೇಳಿಯೂ ಗೊಂತಿದ್ದು, ಅದಕ್ಕೇ ಆನು ಹೇಳ್ತಾ ಇಪ್ಪದು - ಒಮ್ಮೆಗೇ ಸಾಧ್ಯ ಆಗದ್ದರೆ ಹಂತ ಹಂತವಾಗಿ ದನದ ಉತ್ಪನ್ನಂಗಳ ಬಿಡುವಾಂ ಹೇಳಿ. ನಮ್ಮ ಸ್ವಾರ್ಥ ಕಡಮ್ಮೆ ಆದ ಹಾಂಗೆ ಸ್ವಾಭಾವಿಕವಾಗಿ ನವಗೆ ದನಂಗಳ ಅಗತ್ಯವೂ, ಅವಕ್ಕೆ ಕಷ್ಟವೂ ಕಡಮ್ಮೆ ಆವ್ತು.
ಒಂದು ಕಡೆಲಿ ನಮ್ಮ ಅಗತ್ಯ, ಆಶೆ, ಸಂಪ್ರದಾಯ, ಅಹಂಭಾವ – ಇನ್ನೊಂದು ಕಡೆಲಿ ದನ, ಎತ್ತುಗಳ ಕಷ್ಟ: ಇವೆರಡರ ತೂಗಿ ನೋಡಿ. ಕೊನೆಗೂ ನಿಂಗೊ ನಮ್ಮ ಸ್ವಾರ್ಥವೇ ಮುಖ್ಯ, ಎನಗೆ ಐಸ್‍ಕ್ರೀಂ ತಿನ್ನದ್ದೆ ಇಪ್ಪಲೆ ಸಾಧ್ಯವೇ ಇಲ್ಲ, ಆನು ಹೋಮಕ್ಕೆ ತುಪ್ಪವನ್ನೇ ಸುರಿಯುವೆ, ಹಾಲು-ಮೊಸರು-ಬೆಣ್ಣೆ-ತುಪ್ಪ-ಮಜ್ಜಿಗೆ-ಕಾಪಿ-ಚಾ ಇಲ್ಲದ್ದೆ ಒಂದು ದಿನವೂ ಕಳವಲೆ ತಯಾರಿಲ್ಲೆ ಹೇಳಿಯೆಲ್ಲಾ ಗ್ರೆಹಿಶಿದರೆ ಸರಿ, ಅದು ನಿಂಗೊ ಆಯ್ದುಕೊಂಡ ಮಾರ್ಗ. ‘ಕಲ್ಲ ನಾಗರಕ್ಕೆ ಹಾಲೆರೆದು ದಿಟ ನಾಗರಕ್ಕೆ ಕಲ್ಲೆಸೆವ’ ಪಂಗಡಕ್ಕೆ ಸೇರಿದ ಹಾಂಗೆ ಆ ಮಾರ್ಗ. ಅದು ಮನವರಿಕೆಯಾದ ಮೇಲೆಯೂ ಹಾಂಗಿಪ್ಪ ಹೋಮಂದ ಪುಣ್ಯ ಸಿಕ್ಕುತ್ತು ಹೇಳಿ ನಿಂಗೊ ಗ್ರೆಹಿಶಿದರೆ ಅಥವಾ ದನವ ಎಂಗೊ ಪ್ರೀತಿಂದ ನೋಡಿಕೊಳ್ತಾ ಇದ್ದೆಯೋಂ ಹೇಳಿ ಹೇಳಿದರೆ ಎನಗೆ ನೆಗೆ ಬತ್ತು, ಅಷ್ಟೆ.
ಪುರೋಹಿತ ವರ್ಗಕ್ಕೆ ಒಂದು ಸಂದೇಶ: ದುರದೃಷ್ಟವಶಾತ್ ನಿಂಗಳಲ್ಲಿಯೂ ಇದರ ಬಗ್ಗೆ ಹೆಚ್ಚು ಆಲೋಚನೆ ಮಾಡಿದವು ಇದ್ದ ಹಾಂಗೆ ಕಾಣ್ತಿಲ್ಲೆ. ಗಡಿಬಿಡಿ, ಅಹಂಕಾರ, ಅಜ್ಞಾನ ಇತ್ಯಾದಿಗಳಿಂದ ಪ್ರೇರೇಪಿತರಾದ ಜನಂಗಳುದೇ ನಿಂಗಳ ಮೇಲೆ ಸಾಕಷ್ಟು ಒತ್ತಡ ಹೇರ್ತವು ಹೇಳಿಯೂ ಗೊಂತಿದ್ದು. ಆದರೂ ಇದೆಲ್ಲದರ ಸಾಧ್ಯವಾದಷ್ಟೂ ಮೆಟ್ಟಿ ನಿಂದು ಈ ಅಹಿಂಸೆಯ ಪಥಲ್ಲಿ ನೆಡವಲೆ ನಿಂಗೊ ಜನರ ಪ್ರೇರೇಪಿಸಿದರೆ ಅತ್ಯಂತ ಸಂತೋಷ. ದಯವಿಟ್ಟು ಆಲೋಚನೆ ಮಾಡಿ ನೋಡಿ, ಇದು ಖಂಡಿತವಾಗಿಯೊ ದೇವರು ಮೆಚ್ಚುವ ಮಹಾಕಾರ್ಯ.
ಇದರ ಈಗಾಗಳೇ ಅರ್ಥ ಮಾಡಿಗೊಂಡು ಮಾನವೀಯ ದಿಕ್ಕಿಲ್ಲಿ ನೆಡವವಕ್ಕೆ, ಆಲೋಚನೆ ಮಾಡುವವಕ್ಕೆ ಒಂದು ಸಂದೇಶ - ನಿಂಗಳ ಪ್ರಯತ್ನ ಮುಂದುವರೆಸಿ, ಉಳಿದವರನ್ನೂ ಈ ಅಹಿಂಸಾ ಕ್ರಾಂತಿಲಿ ಸೇರಿಸಿಕೊಂಡು ಮುಂದುವರೆಯಿರಿ.
ಇತಿ,
ಕೃಷ್ಣ ಶಾಸ್ತ್ರಿ.
ವಿ.ಸೂ. ಇದಕ್ಕೆ ಸಂಬಂಧಪಟ್ಟ ಹಾಂಗೆ ಆನು ಬರೆದ ಇನ್ನೆರಡು ಲೇಖನಂಗೊ ಇದ್ದು, ದಯಮಾಡಿ ಸಮಯ ಸಿಕ್ಕಿದಪ್ಪಗ ನೋಡಿ:
ಪ್ರಶ್ನೋತ್ತರಂಗೊ
ಎಂಗೊ ನಿರ್ಮಲ ಮನಸ್ಸಿಂದ ಪೂಜ್ಯ ರೂಪಲ್ಲಿ ನೋಡುವ ಗೋವಿನ ನಿಂಗೊ ಗುಲಾಮ ಹೇಳಿ ಅವಹೇಳನ ಮಾಡಿದ್ದು ನೋಡಿ ಬಹಳ ಬೇಜಾರಾತು, ಇದು ಸರಿಯಾ?
ಈ ಲೇಖನಲ್ಲಿಪ್ಪದು ಅವಹೇಳನವೂ ಅಲ್ಲ, ಅಪಹಾಸ್ಯವೂ ಅಲ್ಲ. ಕಟು ಸತ್ಯದ ಬಗ್ಗೆ ಆಲೋಚನೆ ಮಾಡುಲೆ ನಿಂಗಳ ಪ್ರೇರೇಪಿಸುವ ಒಂದು ಪ್ರಯತ್ನ, ಅಷ್ಟೆ. ಲೇಖನದ ಶೀರ್ಷಿಕೆ ವ್ಯಂಗ್ಯಭರಿತವಾದದ್ದು, ಒಪ್ಪುತ್ತೆ; ಆದರೆ ಆಳವಾಗಿ ನೋಡಿದಪ್ಪಗ ಅದುವೇ ಸತ್ಯ ಕಾಣ್ತು, ಇಂದು ಗೋವುಗಳ ಸುಮಾರು ಜನ ಸಾಕುವ ರೀತಿ ನೋಡಿದರೆ ದೇವರು ಹೇಳಿ ಹೇಳುದಕ್ಕಿಂತಲೂ ಗುಲಾಮ ಹೇಳುದೇ ಹೆಚ್ಚು ಸೂಕ್ತ ಹೇಳಿ ಕಾಣ್ತು.
ಈ ಲೇಖನಲ್ಲಿ ಬರೆದ ಅನೇಕ ಕೆಟ್ಟ ಕ್ರಮಂಗಳ ಈಗಾಣ ಕಾಲಲ್ಲಿ ನಿಂಗೊ ಅನುಸರಿಸುತ್ತಿಲ್ಲೆ ಹೇಳಿ ಹೇಳಿದರೆ ಎನಗೆ ನಂಬುಲೆ ಕಷ್ಟ ಆವ್ತು, ಆದರೆ ಅಪ್ಪು ಹೇಳಿಯಾದರೆ ನಿಂಗಳ ಜೀವನಕ್ರಮವ ಆನು ಹೆಚ್ಚು ತಿಳಿವಲೆ ಉತ್ಸುಕನಾಗಿದ್ದೆ. ಅಷ್ಟಾಗಿಯೂ ಬಹುಸಂಖ್ಯಾಕರ ಮಟ್ಟಿಂಗೆ ಹೇಳುವುದಾದರೆ ದನ ನಿಜಕ್ಕೂ ಗುಲಾಮ ಸ್ಥಾನಲ್ಲಿದ್ದು ಹೇಳಿ ಎನ್ನ ಖಚಿತವಾದ ಅಭಿಪ್ರಾಯ.
‘ಕಲ್ಲನಾಗರ ಕಂಡರೆ ಹಾಲನೆರೆಯೆಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ’ ಹೇಳಿ ತುಂಬಾ ಹಿಂದೆಯೇ ಆಸ್ತಿಕರ ಪೊಳ್ಳು ಭಕ್ತಿಯ ಬಸವಣ್ಣ ಎತ್ತಿ ತೋರ್ಸಿದ್ದರ ನಾವು ಇಲ್ಲಿ ಸ್ಮರಿಸುಲಕ್ಕು.
ಒಟ್ಟಾರೆ ಆನು ಕೇಳುದು ಎಂತ ಹೇಳಿದ್ರೆ – ನಿಂಗೊ ಗೋವಿನ ದೇವರು ಹೇಳಿ ಹೇಳೆಡಿ ಹೇಳಿ ಅಲ್ಲ, ಆದರೆ ಆ ಸ್ಥಾನಕ್ಕೆ ತಕ್ಕ ಹಾಂಗೆ ಗೋವಿನ ನಡೆಶಿಯೊಳ್ತಾ ಇದ್ದಿರಾ ಹೇಳಿ.
ನವಗೆ ಪೂಜ್ಯವಾದ ವೇದ-ಪುರಾಣ ಇತ್ಯಾದಿ ಯಾವುದರಲ್ಲಿಯೂ ಗವ್ಯೋತ್ಪನ್ನ ವರ್ಜ್ಯ ಹೇಳಿ ಇಲ್ಲೆಯನ್ನೆ? ಮಾತ್ರವಲ್ಲ ಹಾಲು-ತುಪ್ಪ ಇತ್ಯಾದಿಗಳ ಉಪಯೋಗವ ಅನೇಕ ವಿಧಿಗಳಲ್ಲಿ ನಿರ್ದೇಶಿಸಿದ್ದವು – ಅಂಬಗ ಅದರ ಬಿಡಿ ನಿಂಗೊ ಹೇಳುದು ಎಷ್ಟು ಸರಿ?
ಚಾರಿತ್ರಿಕವಾಗಿ ನೋಡಿದರೆ, ಮೊದಲು ಮನುಷ್ಯಂಗೆ ದನ ಮೊದಲಾದ ಪ್ರಾಣಿಗಳಿಂದ ಅನೇಕ ಪ್ರಯೋಜನಂಗೊ ಕಂಡು ಬಂತು, ಹಾಂಗಾಗಿ ಮನುಷ್ಯರು ದನ-ಎತ್ತುಗಳ ಸಾಕುಪ್ರಾಣಿಗಳಾಗಿ ಉಪಯೋಗಿಸುಲೆ ಶುರುಮಾಡಿದವು. ಕೃತಜ್ಞತೆಲಿ ಅದರಂದ ಅಪ್ಪ ಉಪಕಾರವ ಚೆಂದಕ್ಕೆ ಗುರುತಿಸಿ, ದೇವರು ಹೇಳುವ ಬಿರುದನ್ನೂ ಕೊಟ್ಟವು, ವಿಧಿಗಳಲ್ಲಿ ಗವ್ಯೋತ್ಪನ್ನಂಗೊಕ್ಕೆ ಶ್ರೇಷ್ಠವಾದ ಸ್ಥಾನವನ್ನೂ ಕೊಟ್ಟವು. ಗವ್ಯೋತ್ಪನ್ನಂಗೊಕ್ಕೆ ಅನೇಕ ಒಳ್ಳೆ ಗುಣಂಗಳುದೇ ಇದ್ದು, ಇದು ವೈಜ್ಞಾನಿಕ ಸತ್ಯ ಹೇಳುವ ಅಭಿಪ್ರಾಯ ಕೂಡ ಅನೇಕರಲ್ಲಿ ಇದ್ದು.
ಆದರೆ ಒಟ್ಟಾರೆ ಅಂದ್ರಾಣ ಕಾಲಲ್ಲಿ ದನಂಗಳ ಮೇಲೆ ದೌರ್ಜನ್ಯ ಕಡಮ್ಮೆ ಇತ್ತಿದ್ದು, ಮಾತ್ರವಲ್ಲ ಇದ್ದ ಕ್ರೌರ್ಯ ಹೆಚ್ಚಾಗಿ ಅಗತ್ಯಂಗಳ ಪೂರೈಸುವ ಮಟ್ಟಿಂಗೆ ಮಾತ್ರ ಸೀಮಿತವಾಗಿತ್ತಿದ್ದು. ಒಟ್ಟಾರೆ ಕ್ರೌರ್ಯ ಕಡಮ್ಮೆ ಇದ್ದದರಂದಾಗಿಯೂ, ಸಹನೆ-ಪ್ರೀತಿ-ಅಗತ್ಯ ಹೆಚ್ಚು ಇದ್ದದರಂದಾಗಿಯೂ ದನ ಸಾಕುದು ತಪ್ಪು ಹೇಳುವ ಭಾವನೆ ಹೆಚ್ಚಾಗಿ ಆರಿಂಗುದೇ ಬಯಿಂದಿಲ್ಲೆ.
ಆದರೆ ಹಿಂದೂ ಧರ್ಮ ಹೇಂಗೆ ಬೆಳೆದ್ದದು, ಉಳಿದ್ದದು ಹೇಳಿ ನಿಂಗಳೇ ಆಲೋಚನೆ ಮಾಡಿ ನೋಡಿ. ಕಾಲ ಉರುಳಿದ ಹಾಂಗೆ ಶ್ರೇಷ್ಠ ಆಲೋಚನೆಗಳ ಒಪ್ಪಿಯೊಂಡು ಹೆಚ್ಚು ಉದಾತ್ತವಾಗಿ ಬೆಳೆದ ಹಿರಿಮೆ ಇದ್ದು ನಮ್ಮ ಧರ್ಮಕ್ಕೆ. ನಚಿಕೇತನ ಹಾಂಗಿಪ್ಪ ಧೀರರು ಆಚಾರಲ್ಲಿಪ್ಪ ವ್ಯಂಗ್ಯವ ಪ್ರಶ್ನಿಸುಲೆ ಹಿಂದೆ ಮುಂದೆ ನೋಡಿದ್ದವಿಲ್ಲೆ, ಅಂತಹವರ ಗೌರವಿಸುತ್ತು ನಾವು. ವೈದಿಕ ಧರ್ಮವ ಧಿಕ್ಕರಿಸಿ ಹುಟ್ಟಿದ ಬೌದ್ಧ, ಜೈನ ಧರ್ಮಂಗಳ ಗೌರವಿಸುಲೆ ಕಲ್ತಿದು ನಾವು. ಹಾಂಗಿಪ್ಪಗ ಹಿಂದಾಣವು ಹೇಳಿದ್ದವು ಹೇಳಿ ಹಳೇ ಆಚಾರಂಗಳ ಚೂರೂ ಬದಲಿಸುಲೆ ತಯಾರಿಲ್ಲೆ ಹೇಳಿದರೆ ಅದು ಸರಿಯೋ? ಬೇರೆ ಎಷ್ಟೋ ವಿಷಯಂಗಳಲ್ಲಿ ಅನುಕೂಲಶಾಸ್ತ್ರ ಮಾಡುಲೆ ತಯಾರಿಪ್ಪ ನಾವು ಈ ವಿಷಯಲ್ಲಿ ಎಂತದಕ್ಕೆ ಹಠ ಹಿಡಿವದು?
ನಮ್ಮತ್ರೆ ಹೋಮ ಮಾಡುಲೆ ಪೈಸೆ ಇಲ್ಲದ್ರೆ ಕದ್ದು ತಂದ ಪೈಸೆಲಿ ಮಾಡಿದ್ರೆ ಫಲ ಸಿಕ್ಕುಗೋ? ಹಾಂಗೆಯೇ, ಕ್ರೂರ-ದೌರ್ಜನ್ಯಗಳ ಮೂಲಂದ ಬಂದ ಗವ್ಯೋತ್ಪನ್ನ ನಿಜಕ್ಕೂ ಸಮರ್ಪಣಾಯೋಗ್ಯ ಹೇಳಿ ನಿಂಗೊ ಭಾವಿಸುತ್ತೀರೋ? ಆಚಾರ ದೊಡ್ಡದೋ ಅಥವಾ ಆಚಾರದ ಹಿಂದೆ ಇಪ್ಪ ವಿಚಾರ ದೊಡ್ಡದೋ? ಇದು ನಿಂಗೊಗೆ ನಿಂಗಳೇ ಉತ್ತರಿಸೆಕ್ಕಾದ ಪ್ರಶ್ನೆ.
ಹಳೇ ಕಾಲದ ಬಗ್ಗೆ ಇನ್ನೊಂದು ಮಾತು ನಿಂಗಳ ಗಮನಕ್ಕೆ: ಒಂದು ಸಂಸ್ಕೃತ ಶ್ಲೋಕದ ತುಣುಕು ಓದಿ - ‘ಪರೋಪಕಾರಾಯ ದುಹಂತಿ ಗಾವಃ’ (ಗೋವುಗಳು ಪರೋಪಕಾರಕ್ಕಾಗಿ ಹಾಲನ್ನು ಕೊಡುತ್ತವೆ) – ಇಲ್ಲಿ ಪರೋಪಕಾರವ ಎತ್ತಿ ಹಿಡಿವ ಪ್ರಯತ್ನಲ್ಲಿ ಮನುಷ್ಯನ ಸ್ವಾರ್ಥ ಕೂಡ ನಯವಾಗಿ ಮುಚ್ಚಿ ಹೋದ್ದದು ಕಾಣ್ತು.
ಹೋಮಕ್ಕೆ ತುಪ್ಪದ ಬದಲು ಎಂತ ಹಾಕುದು? ಕ್ರಿಯೆಗಳಲ್ಲಿ ಹಾಲಿನ ಬದಲು ಎಂತ ಉಪಯೋಗಿಸುದು?
ತುಪ್ಪದ ಬದಲು ಎಂತಾದ್ರೂ ಹಾಕುವ ಅನಿವಾರ್ಯತೆ ಇದ್ದಾ? ಹಾಂಗೂ ಬೇಕಾದ್ರೆ ವನಸ್ಪತಿ ತುಪ್ಪ ಹಾಕಿದ್ರೆ ನಡೆವಲೂ ಸಾಕು, ಪ್ರಯೋಗ ಮಾಡಿ ನೋಡೆಕ್ಕು. ಹಾಲಿನ ಬದಲು ಸುಲಭವಾಗಿ ಕಾಯಿ ಹಾಲನ್ನೇ ಬಳಸುಲಕ್ಕು. ಅದೂ ಅಲ್ಲದ್ರೆ ಬೇರೆ ರೀತಿಯ ಸಸ್ಯಮೂಲದ ಹಾಲುಗೊ ಸಿಕ್ಕುತ್ತು.
ಹಾಂಗೆ ನೋಡುತ್ತಾ ಹೋದರೆ ಹೋಮಕ್ಕೆ ಸುರಿವದೆಲ್ಲವೂ ವ್ಯರ್ಥ, ಅದರ ಬದಲು ದಾನ ಮಾಡಿದರೆ ಒಳ್ಳೆದೇನೋ?
ಆರಾದ್ರುದೇ ಹಾಂಗಿಪ್ಪ ನಿಲುವು ತೆಕ್ಕೊಂಡರೆ ವೈಯಕ್ತಿಕವಾಗಿ ಎನ್ನ ಬೆಂಬಲ ಖಂಡಿತಾ ಇಕ್ಕು. ಆದರೆ ಇಲ್ಲಿ ಆನು ಗೋವಿನ ಮೇಲೆ ಅಪ್ಪ ದೌರ್ಜನ್ಯದ ಮೇಲೆ ವಿಶೇಷವಾದ ಗಮನ ಕೊಟ್ಟು ಅದರ ಬಳಕೆಯ ನಿಲ್ಸುವ ಬಗ್ಗೆ ಒತ್ತಿ ಹೇಳ್ತಾ ಇಪ್ಪದು, ಅಷ್ಟೆ. ಅದರರ್ಥ ಆನು ಬೇರೆ ವಸ್ತುಗಳ ಹೋಮಕ್ಕೆ ಸುರಿವದರ ಸಮರ್ಥಿಸುತ್ತೆ ಹೇಳಿ ಅಲ್ಲ.
ನಮ್ಮಂದಲೂ (ಹವ್ಯಕರಿಂದಲೂ) ಎಷ್ಟೋ ಹೆಚ್ಚಿನ ಕ್ರೌರ್ಯ ಮಾಡುವವು ಇದ್ದವು, ಆದರೆ ನಿಂಗೊ ಹವ್ಯಕರ ಮಾತ್ರ ಎಂತದಕ್ಕೆ ಟೀಕೆ ಮಾಡುದು?
ನಮ್ಮಲ್ಲಿ (ಹವ್ಯಕರಲ್ಲಿ) ಹಾಲಿನ ಉತ್ಪನ್ನಂಗಳ ಬಳಕೆ ಕಂಡಾಬಟ್ಟೆ ಹೇಂಗಿದ್ದರೂ ಇದ್ದಲ್ಲದಾ, ಹಾಂಗಾಗಿ ಹವ್ಯಕ ಭಾಷೆಲಿ ಬರವಾಗ ಮಾತ್ರ ಹಾಂಗೆ ಬರದ್ದದಷ್ಟೆ – ಇದರರ್ಥ ಇಲ್ಲಿ ಹೇಳಿದ ದೌರ್ಜನ್ಯಂಗಳ ಹವ್ಯಕರು ಮಾತ್ರ ಮಾಡ್ತವು ಹೇಳಿಯೋ, ಹವ್ಯಕರು ಉಳಿದವಕ್ಕಿಂತ ಹೆಚ್ಚು ಮಾಡ್ತವು ಹೇಳಿಯೂ ಖಂಡಿತಾ ಅಲ್ಲ. ಸಾಮಾನ್ಯ ಕನ್ನಡಲ್ಲಿ ಬರದ್ದದು ಎಲ್ಲರಿಂಗೂ ಅನ್ವಯ ಅಪ್ಪ ಹಾಂಗೆ.
ಮಾತ್ರ ಅಲ್ಲ, ನಾವು ಈ ವಿಷಯಲ್ಲಿ ಒಂದು ಕ್ರಾಂತಿ ಮಾಡಿ ಉಳಿದವಕ್ಕೆ ದಾರಿ ತೋರ್ಸುಲಾಗ ಹೇಳಿ ಎಂತ ಇಲ್ಲೆಯನ್ನೆ?!
ಎಂಗೊ ಹಟ್ಟಿಲಿ ಸಾಕಿದ ದನಂಗೊಕ್ಕೆ ಸರಿಯಾಗಿ ತಿಂಬಲೆ ಹಾಕುತ್ತಿಯೋಂ, ರೋಗ ಬಂದಪ್ಪಗ ಆರೈಕೆ ಮಾಡ್ತೆಯೋಂ, ಅವಕ್ಕೆ ಅಂಥಾ ಕಷ್ಟ ಆದ ಹಾಂಗೆ ಕಾಣ್ತಿಲ್ಲೆ ಅನ್ನೆ? ಮಾತ್ರವಲ್ಲ, ಅವಕ್ಕೆ ಎಂಗಳ ಹತ್ರೆ ಒಳ್ಳೆ ಪ್ರೀತಿ ಇದ್ದು. ಅದಕ್ಕೆ ಎಂತ ಹೇಳ್ತಿ?
ನಿಂಗೊ ಹಟ್ಟಿಲಿ ದನ ಸಾಂಕುವ ಹಾಂಗೆಯೇ ಪಂಜರಲ್ಲಿ ಅಥವಾ ಗಾಜಿನ ಮನೆಲಿ ನಾಯಿ-ಹಕ್ಕಿ-ಎಲಿ-ಹಾವು-ಕೀಟ ಇತ್ಯಾದಿಗಳ ಸಾಂಕುವವು ಎಷ್ಟೋ ಜನ ಇದ್ದವು. ಆ ಜೀವಿಗೊಕ್ಕೆ ತಿಂಬಲೆ ಹಾಕಿದ್ರೆ ಅವು ತಿಂದೇ ತಿಂತವು. ಆ ಜೀವಿಗೊ ಪ್ರತಿಯಾಗಿ ಪ್ರೀತಿಯನ್ನೂ ತೋರ್ಸುತ್ತವು. ಹಾಂಗೆ ಸಾಕುವ ಪ್ರಕ್ರಿಯೆ ಸರಿ ಹೇಳಿಯೋ? ಅಲ್ಲ ಹೇಳಿ ಈಗ ಹೆಚ್ಚಿನವು ಒಪ್ಪುತ್ತವು.
ಹಿಂದಾಣ ಕಾಲಲ್ಲಿ ಸರಪಳಿ ಹಾಕಿದ ಗುಲಾಮರುದೇ ಸರಿಯಾಗಿ ತಿಂಬಲೆ ಹಾಕಿದರೆ ದಷ್ಟಪುಷ್ಟ ಇತ್ತಿದ್ದವು, ಸುಮಾರು ಜೀತದಾಳುಗೊ ಕೂಡ ‘ಧಣಿಗಳೇ’ ಹೇಳಿ ಪ್ರೀತಿ-ಗೌರವ ತೋರ್ಸಿಯೊಂಡು ಇತ್ತಿದ್ದವು, ಹಾಂಗಾಗಿ ಜೀತ ಸರಿ ಹೇಳಿಯೋ? ಇದುದೇ ಸರಿಯಲ್ಲ ಹೇಳಿ ಎಲ್ಲರೂ ಒಪ್ಪುವ ಮಾತು.
ಈ ಸಾಕಿದ ಪ್ರಾಣಿಗೊಕ್ಕೆ ಲೋಕ ನೋಡಿ ಗೊಂತಿಪ್ಪದು ಅಷ್ಟೆಯೇ – ಈ ಪ್ರೀತಿ ಅನಿವಾರ್ಯತೆಲಿ ಬೆಳೆದ ಪ್ರೀತಿ. ಹಶು ಹೊಟ್ಟೆಯ ಅಗತ್ಯಂಗಳ ತೀರ್ಸುವ ಆಹಾರಮೂಲಂಗಳ ಮೇಲೆ ತೋರ್ಸುವ ಪ್ರೀತಿ – ಪಂಜರಲ್ಲಿಪ್ಪ ಗಿಳಿಯೂ ಈ ಪ್ರೀತಿಯ ತೋರ್ಸುತ್ತು, ಬೇಕಾದ್ರೆ ಯಜಮಾನನ ಖುಷಿ ಪಡಿಶುಲೆ ಸರ್ಕಸ್ಸೂ ಮಾಡ್ತು.
ಎಲ್ಲಾ ಜೀವಿಗಳಲ್ಲಿಪ್ಪ ಅದ್ಭುತ ಹಾಂಗೂ ಮೂಲಭೂತ ಗುಣ ‘ಜೀವನಾಸಕ್ತಿ’ – ಜೀವ ಉಳಿದರೆ ಮತ್ತೆ ಉಳಿದ್ದದೆಲ್ಲಾ ಹೇಳುವ ಮೂಲಮಂತ್ರ ರಕ್ತಲ್ಲಿ ಇದ್ದು. ಈ ಜೀವ ಉಳಿಶುಲೆ ಎಂತ ಸಹಾಯ ಸಿಕ್ಕುತ್ತೋ ಅದರ ಮೇಲೆ ಪ್ರೀತಿ ಹುಟ್ಟುದು ಸಹಜ ಗುಣ.
ಕೆಲವರು ದನವ ಸಾಕುವ ಬಗ್ಗೆ ಉಳಿದವರಂದ ಹೆಚ್ಚು ಕಾಳಜಿ-ಪ್ರೀತಿ ತೋರ್ಸುತ್ತವು - ದನವ ಮೇಯ್ಶುಲೆ ಹೇಳಿಯೇ ರಜ್ಜ ಜಾಗೆ ಪ್ರತ್ಯೇಕ ಮಡಿಗಿ, ಅವುಗಳ ಇಡೀ ದಿನ ಹಟ್ಟಿಲಿ ಕಟ್ಟಿ ಹಾಕದ್ದೆ ಸಾಧ್ಯವಾದಷ್ಟೂ ಪ್ರೀತಿಲಿ ಸಾಕುವವರತ್ರ ಆನು ಮಾತಾಡಿದ್ದೆ, ಅವರ ಹಾಂಗಿಪ್ಪವರ ಆನು ಸಾರಾಸಾಗಟಾಗಿ ತಳ್ಳಿ ಹಾಕಿದ್ದಿಲ್ಲೆ. ನಿಜವಾದ ಪ್ರೀತಿ-ಗೌರವದ ಬಗ್ಗೆ ಎನಗೂ ಗೌರವ ಇದ್ದು. ಇದೇ ರೀತಿ ನಿಂಗೊಗೆ ನಿಂಗೊ ಸಾಕುವ ರೀತಿ ಸಾಕಷ್ಟು ಮಾನವೀಯ ಹೇಳಿ ಕಾಂಬಲೂ ಸಾಕು. ಆನು ಅದರ ಅವಹೇಳನ ಮಾಡ್ತಿಲ್ಲೆ, ಆದರೆ ಗೊಂತಿಲ್ಲದ್ದೇ ನಿಂಗೊ ಮಾಡುವ ದೌರ್ಜನ್ಯಂಗಳ ಬಗ್ಗೆ ಆಲೋಚನೆ ಮಾಡಿ, ನಿಂಗಳಲ್ಲಿಪ್ಪ ಸ್ವಾರ್ಥವ ತೂಗಿ ನೋಡಿ ಹೇಳಿ ಕೇಳಿಗೊಳ್ತೆ.
ಹಟ್ಟಿಲಿ ಸಾಂಕದ್ದೆ ಗುಡ್ಡೆಗೆ ಬಿಟ್ಟ ದನಂಗೊಕ್ಕುದೇ ನಮ್ಮ ಮೇಲೆ ಪ್ರೀತಿ ಇರ್ತನ್ನೆ? ಅವು ರಾತ್ರಿ ಹಟ್ಟಿಗೆ ಬತ್ತವನ್ನೆ?
‘ಸುಲಭ ಆಹಾರ’, ‘ಸುಲಭ ರಕ್ಷಣೆ’ ಕೂಡ ಕೆಲವೊಮ್ಮೆ ಪ್ರಾಣಿಗೊಕ್ಕೆ ನಮ್ಮ ಹತ್ರೆ ಪ್ರೀತಿ ಹುಟ್ಟುವ ಹಾಂಗೆ ಮಾಡ್ತು; ಆದರೆ ವನ್ಯಜೀವಿಗೊಕ್ಕೆ ಧಾರಾಳವಾಗಿ ಸುಲಭ ಆಹಾರ ಕೊಡುದು ಅಷ್ಟು ಒಳ್ಳೆ ಅಭ್ಯಾಸ ಅಲ್ಲ. ದಿನವೆಲ್ಲಾ ಮೇಯ್ದ ದನಂಗೊ ರಾತ್ರಿ ಹಟ್ಟಿಗೆ ಬಪ್ಪದೂ ಹೀಂಗೆಯೇ – ಇದು ಕೃತಕವಾದ ಪ್ರಕ್ರಿಯೆ, ನೈಸರ್ಗಿಕ ಅಲ್ಲ.
ನಿಜವಾಗಿ sustainable ಹೇಳಿ ಭರವಸೆ ಇದ್ದರೆ ರಜ್ಜ ಮಟ್ಟಿಂಗೆ ಸಂಬಂಧ ಬೆಳೆಶುದು ತಪ್ಪಲ್ಲ, ತಕ್ಕಮಟ್ಟಿನ ಸ್ನೇಹಸಂಬಂಧ ನವಗೆ ಪ್ರಾಣಿಗಳ ಹೆಚ್ಚು ತಿಳ್ಕೊಂಬಲೆ ಸಹಾಯ ಮಾಡ್ತು, ಪ್ರಕೃತಿಯೊಟ್ಟಿಂಗೆ ನಮ್ಮ ಸಂಬಂಧವ ಗಟ್ಟಿ ಮಾಡ್ತು. ಆದರೆ ಅದು ಕೊನೆಗೆ ‘ಕೊಲೆ ಪ್ರೀತಿ’ ಆಗಿ, ಆ ಪ್ರಾಣಿಗೊಕ್ಕೆ ಇಲ್ಲದ್ದ ಆಶೆ ಹುಟ್ಟಿಶಿ, ಸುಖ ಕೊಟ್ಟು ಕೊನೆಗೆ ಕಷ್ಟ ಅಪ್ಪ ಹಾಂಗೆ ಆದ್ರೆ ಅದು ದುರಂತ (ಹೆಚ್ಚಿನ ಸಲ ಹಾಂಗೆಯೇ ಅಪ್ಪದು).
ಮಾತ್ರವಲ್ಲ, ದನಂಗೊಕ್ಕೆ ನಮ್ಮ ಮೇಲೆ ಪ್ರೀತಿ ಇಪ್ಪದರ ಹಿಂದೆ ಇಪ್ಪದು ಸುಲಭ ಆಹಾರ, ಸುಲಭ ರಕ್ಷಣೆಯ ಆಮಿಷ ಮಾತ್ರ ಅಲ್ಲ – ಈ ಪ್ರೀತಿಯ ಹಿಂದೆ ಬಲ ಪ್ರಯೋಗ, ತರಬೇತಿ ಕೂಡ ಇರ್ತು – ಎಲ್ಲಿಗೋ ತಪ್ಪಿಸಿಯೊಂಡು ಹೋದ ದನಂಗಳ ಬಲಪ್ರಯೋಗ ಮಾಡಿ ನಮ್ಮ ಹಟ್ಟಿಗೆ ಬಪ್ಪ ಹಾಂಗೆ ಮಾಡ್ತಿಲ್ಲೆಯೋ? ಹಾಂಗೆ ಅವರ ತರಬೇತುಗೊಳಿಸಿದರೆ ಅವಕ್ಕೆ ಅದರಂದ ಹೆರ ಬಪ್ಪಲೆ ಕಷ್ಟ ಆವ್ತು, ಸರ್ಕಸ್ಸಿಲ್ಲಿ ಸಿಂಹ ಕಿಚ್ಚಿನ ಬಳೆಯ ಮಧ್ಯೆ ಹಾರಿದ ಹಾಂಗೆ. ಕೊನೆಗೆ ‘ಇದೇ ಜೀವನ’ ಹೇಳಿ ಮನಸ್ಸಿಂಗೆ ಕಾಂಬಗ ಆ ಸೀಮಿತ ವಲಯಲ್ಲಿ ಇಪ್ಪವರ ಮಧ್ಯೆ ಪ್ರೀತಿ ಹುಟ್ಟುದೂ ಸಹಜವೇ.
ಸಾಕುದು ಹೇಳಿದ್ರೆ ಗುಲಾಮಗಿರಿ ಆವ್ತಿಲ್ಲೆ, ಅಲ್ಲದಾ? ಎಂಗೊಗೆ ದನಂಗೊ ಹೇಳಿದ್ರೆ ತುಂಬಾ ಪ್ರೀತಿ ಇದ್ದು.
ಪೆಟ್ಟುಕೊಟ್ಟುಗೊಂಡು, ಆಹಾರ ಕೊಡದ್ದೆ ಸೊರಗಿಸುವ ಕ್ರಿಯೆ ಮಾತ್ರ ಅಲ್ಲ ಗುಲಾಮಗಿರಿ. ಎಲ್ಲಾ ರೀತಿಲಿಯುದೇ ಸ್ವಾತಂತ್ರ್ಯಹರಣ ಮಾಡಿದ್ರೆ ಅದು ಖಂಡಿತಾ ಗುಲಾಮಗಿರಿಯೇ.
ನಿಂಗೊಗೆ ದುರಾಶೆ ಇಲ್ಲೆ ಹೇಳಿಯೇ ಮಡಿಕ್ಕೊಂಬ, ಲೇಖನಲ್ಲಿ ಬರೆದ ಅನೇಕ ಕ್ರೌರ್ಯಂಗಳ ನಿಂಗೊ ತೋರ್ಸುತ್ತಿಲ್ಲೆ ಹೇಳಿ ಮಡಿಕ್ಕೊಂಬ. ಹಾಂಗಾದ್ರೂ ಕೂಡ ‘ಸಾಕುದು’ ಹೇಳುವ ಪ್ರಕ್ರಿಯೆಯೇ ಕೃತಕ ಹೇಳುದರ ನೆಂಪು ಮಡಿಕ್ಕೊಳ್ಳಿ (ಮೇಲಾಣ ಪ್ರಶ್ನೆಗೆ ಬರೆದ ಉತ್ತರವನ್ನೂ ಓದಿ)
ನಿಂಗೊ ತೋರ್ಸುವ ಪ್ರೀತಿ ನಿಜಕ್ಕೂ ಪ್ರಾಣಿಯ ಒಳಿತಿಂಗೋ ಅಥವಾ ನಿಂಗಳ ಸ್ವಾರ್ಥಸಾಧನೆ ಆವ್ತು ಹೇಳಿಯೋ? ಪ್ರಾಣಿಗಳ ಸಹಜಧರ್ಮವ ಪಾಲಿಸುಲೆ ಬಿಡುದು, ಸಹಜ ಪರಿಸರಲ್ಲಿ ಬಿಡುದು ನಿಜವಾದ ಪ್ರಾಣಿಪ್ರೀತಿ. ಕಷ್ಟಲ್ಲಿಪ್ಪ ತರತರದ ವನ್ಯಮೃಗಂಗಳ (ಹುಲಿ-ಹಾವು-ಅಳಿಲು-ಪಕ್ಷಿ ಇತ್ಯಾದಿ), ಅವುಗಳ ಮರಿಗಳ ಸಾಕುವ ವನ್ಯಪ್ರೇಮಿಗೊ ಇರ್ತವು – ಆದರೆ ನಿಧಾನವಾಗಿ ಅವು ತಮ್ಮ ವ್ಯಾಮೋಹವ, ಹೆದರಿಕೆಯ ಬಿಟ್ಟು ಆ ಪ್ರಾಣಿಗೊ ಶಕ್ತರಾದಪ್ಪಗ ಅವುಗಳ ಪುನಃ ಕಾಡಿಂಗೆ ಬಿಡ್ತವು – ಎಂತದಕ್ಕೆ ಹೇಳಿದರೆ ಅವು ಪ್ರಾಣಿಗಳ ಸಹಜಧರ್ಮವ ಗೌರವಿಸುತ್ತವು.
ದನಂಗಳ ವಿಷಯಕ್ಕೆ ಬಂದಪ್ಪಗ ಮನುಷ್ಯನ ಅಗತ್ಯ, ಅನಿವಾರ್ಯತೆ ಕೂಡ ಬತ್ತು. ಹಾಂಗೆ ದನಂಗಳ ಯಾವುದೋ ವನ್ಯಜೀವಿಗೆ ಸಮಾನವಾಗಿ ಪರಿಗಣಿಸುಲೆ ಎಡ್ತಿಲ್ಲೆ, ಅಲ್ಲದಾ?
ಗುಲಾಮಗಿರಿಯಾಗಲೀ ಅಥವಾ ಪಂಜರಲ್ಲಿಪ್ಪ ಹಕ್ಕಿಯಾಗಲೀ – ಹೀಂಗಿಪ್ಪಲ್ಲಿ ಸ್ವತಂತ್ರವಾಗಿ ಬದುಕುವ ಪಂಗಡವೂ ನಮ್ಮ ಕಣ್ಣ ಮುಂದೆ ಶತಮಾನಂದ ಇದ್ದದ್ರಂದಾಗಿ ಅವರ ಸ್ವಾತಂತ್ರ್ಯದ ಪರಿಕಲ್ಪನೆ ಸುಲಭವಾಗಿ ಜೀರ್ಣಮಾಡುಲೆ ಮನುಷ್ಯಂಗೆ ಎಡಿಗಾತು. ಆದರೆ ದನಂಗೊ ಮನುಷ್ಯನ ಜೀವನಲ್ಲಿ ಹಾಸುಹೊಕ್ಕಾಗಿ ಹೋಯ್ದು, ಶತಮಾನಂದ ನಾವು ಅದರ ಮೂಲಕ ನಮ್ಮ ಎಷ್ಟೋ ಅಗತ್ಯಂಗಳನ್ನುದೇ ಪೂರೈಸಿಯೊಂಡಿದು. ಈ ಪ್ರಕ್ರಿಯೆಲಿ ದನ ಒಂದು ಸಾಕುಪ್ರಾಣಿಯಾಗಿ ನಮ್ಮ ಕಣ್ಣಮುಂದೆ ಬೆಳೆದು ಬಯಿಂದು. ದನಕ್ಕೆ ವನ್ಯಜೀವಿಯಾಗಿ ಬದುಕುಲೆ ಸಾಧ್ಯವೇ ಇಲ್ಲೆ ಹೇಳುವ ಭ್ರಮೆ ಬಯಿಂದು ನವಗೆ. ಆದರೆ ವಸ್ತುಸ್ಥಿತಿ ಎಂತ ಹೇಳಿದ್ರೆ ಇಂದಿಂಗುದೇ ದನಕ್ಕೆ ವನ್ಯಮೃಗವಾಗಿ ಬದುಕುಲೆ ಸಾಧ್ಯ ಇದ್ದು – ಕಾಡೆಮ್ಮೆ ಎಲ್ಲಾ ಬದುಕುವ ಹಾಂಗೆ. ಈ ನಿಜವ ನಾವು ಎಷ್ಟು ಬೇಗ ಒಪ್ಪಿಗೊಳ್ತೋ ಬಹುಷಃ ಅಷ್ಟು ಒಳ್ಳೆದು ಗೋವುಗೊಕ್ಕೆ.
ಇನ್ನು ಮನುಷ್ಯನ ಅಗತ್ಯದ ವಿಷಯ: ಅನೂಹ್ಯವಾಗಿ ಬೆಳೆದ ವಿಜ್ಞಾನ ನವಗೆ ಎಷ್ಟೋ ಹೊಸ ದಾರಿಗಳ ತೋರ್ಸಿದ್ದು, ಅದರ ಕಡೆಂಗೆ ನೋಡದ್ದೆಯೇ ಗವ್ಯೋತ್ಪನ್ನಂಗಳೇ ಗತಿ ಹೇಳುವ ಅನಿವಾರ್ಯತೆಯ ಗಟ್ಟಿ ಹಿಡಿವದರ ಬಿಡಿ, ಹೊಸ ದಿಕ್ಕಿಲ್ಲಿ ನೆಡವಲೆ ಪ್ರಯತ್ನ ಮಾಡಿ, ನಿಧಾನವಾಗಿಯಾದರೂ ಸರಿ.
ಉಪಯೋಗಿಸುದರ ನಿಲ್ಸುದು ಹೇಳಿಯೇ ಮಡಿಕ್ಕೊಂಬ; ಆದರೆ ಈಗ ಕೋಟಿಗಟ್ಟಲೆ ದನಂಗೊ ಇದ್ದವನ್ನೆ, ಅದರ ಎಂತ ಮಾಡುದು? ಅವಕ್ಕೆಲ್ಲಾ ವಾಸಿಸುಲೆ ನೈಸರ್ಗಿಕ ಪರಿಸರ ಇದ್ದೋ?
ಸಮಸ್ಯೆಯ ಒಪ್ಪಿಗೊಂಬದು ಪರಿಹಾರದ ದಿಕ್ಕಿಲ್ಲಿ ಮೊದಲನೆಯ ಹೆಜ್ಜೆ. ಮನುಷ್ಯ ಎಷ್ಟೋ ಶತಮಾನಂದ ಮಾಡಿದ ತಪ್ಪಿನ ಒಪ್ಪಿಗೊಂಬದ್ರ ಒಟ್ಟಿಂಗೆ ಅದರ ರಾತ್ರೋರಾತ್ರಿ ಸರಿ ಮಾಡುಲೆ ಎಡಿಯ ಹೇಳುವ ಸತ್ಯವನ್ನೂ ನಾವು ಒಪ್ಪಿಗೊಂಬ. ಗೋವುಗಳ ಕೃತಕ ಸಂಖ್ಯೆಯ ಕಡಮ್ಮೆ ಮಾಡುದು, ಅವಕ್ಕೆ ನೈಸರ್ಗಿಕ ಪರಿಸರ ಒದಗಿಸುದು – ಇದೆಲ್ಲಾ ನಮ್ಮ ತಪ್ಪಿನ ಸರಿ ಮಾಡುವ ದಿಕ್ಕಿಲ್ಲಿ ನಾವು ತೆಕ್ಕೋಳೆಕ್ಕಾದ ಜವಾಬ್ದಾರಿಗೊ. ಇದರ ಬಗ್ಗೆ ಹೆಚ್ಚು ಅಧ್ಯಯನ, ಸಂಶೋಧನೆ ಮಾಡೆಕ್ಕು, ಧನ ವಿನಿಯೋಗಿಸೆಕ್ಕು.
ಆದರೆ ಸ್ವಾರ್ಥಿ ಮನುಷ್ಯಕುಲ ಇಷ್ಟೆಲ್ಲಾ ಮಾಡುಗೋ? ಬಹುಷಃ ಇಲ್ಲೆ. ಹಾಂಗಾಗಿ ಕಡೇಪಕ್ಷ ನಿಧಾನವಾಗಿಯಾದರೂ ದನದ ಉತ್ಪನ್ನಂಗಳ ಕಡಮ್ಮೆ ಉಪಯೋಗಿಸುವ ದಿಕ್ಕಿಲ್ಲಿ ನಡೆದರೆ ಈ ಬದಲಾವಣೆ ಸಹಜವಾಗಿ ಅಕ್ಕು – ಎಂತದಕ್ಕೆ ಹೇಳಿದರೆ ಆರ್ಥಿಕವಾಗಿ ಉಪಯುಕ್ತ ಅಲ್ಲದ್ರೆ ಸಹಜವಾಗಿ ಜನ ಅದ್ರ ಸಾಂಕುದ್ರ ನಿಲ್ಸುತ್ತವು.
ದನಂಗಳ ಸಾಕುಲಾಗ ಹೇಳಿ ಕಾನೂನು ಇಲ್ಲೆ ಅನ್ನೆ?
ಕಾನೂನು ಬಪ್ಪಲೆ ಸಮಯ ಹಿಡಿತ್ತು, ಅದಕ್ಕೆ ಉನ್ನತ ಮಟ್ಟದ ಆಲೋಚನೆಗಳೂ ಬೇಕು. ಈಗ ಮಂಗ-ಹಾವು-ಕರಡಿ ಹೀಂಗೆ ಅನೇಕ ಪ್ರಾಣಿಗಳ ಪ್ರದರ್ಶನ ವಸ್ತುಗಳಾಗಿ ಉಪಯೋಗಿಸುಲಾಗ ಹೇಳಿ ಕಾನೂನು ಬಯಿಂದನ್ನೆ, ಎಂತದಕ್ಕೆ? ಪ್ರಾಣಿಗೊ ಹಾಂಗೆ ಬದುಕುದು ಅನೈಸರ್ಗಿಕ, ಅಸಹಜ, ದೌರ್ಜನ್ಯಪೀಡಿತ ಹೇಳುವ ಭಾವನೆ ಕೊನೆಗೂ ಮನುಷ್ಯ ಒಪ್ಪಿದ ಕಾರಣ ಅವಂಗೆ ಆ ಮನೋರಂಜನೆಯ ತ್ಯಾಗ ಮಾಡುಲೆ ಸಾಧ್ಯ ಆತು. ಸರ್ಕಸ್ಸಿಲ್ಲಿಪ್ಪವಕ್ಕುದೇ ಕೆಲವಕ್ಕೆ ತಾವು ಪ್ರಾಣಿಗಳ ಪ್ರೀತಿಲಿ ನೋಡಿಗೋಳ್ತೆಯೋಂ ಹೇಳುವ ಭಾವನೆ ಇರ್ತು, ಅಂತಃಕರುಣೆ ಇರ್ತು, ಆದರೆ ಒಟ್ಟಾರೆ ನೋಡಿದರೆ ದೌರ್ಜನ್ಯ ಇಪ್ಪದರ ಮನಗಂಡ ಮನುಷ್ಯ ಹೊಸ ಕಾನೂನು ಮಾಡಿದಂ.
ಮನುಷ್ಯನ ಸ್ವಾರ್ಥಕ್ಕೆ ಮಿತಿ ಇಲ್ಲೆ, ಒಬ್ಬರು-ಇಬ್ಬರು ಉನ್ನತ ನೈತಿಕತೆ ಮಡಿಕ್ಕೊಂಡು ಸಾಕಿದರೂ ಕೂಡ ಅದು ಅಲ್ಲಿಗೇ ನಿಲ್ತಿಲ್ಲೆ, ಹೆಚ್ಚು ಲಾಭದ ಆಶೆಲಿ ಉಳಿದವರಿಂದ ದೌರ್ಜನ್ಯ ಶುರು ಆಗಿಯೇ ಆವ್ತು. ಹೀಂಗಾಗಿ ನಿಧಾನಕ್ಕೆ ಹಿತಾಸಕ್ತಿಗಳ ರಕ್ಷಿಸುಲೆ ಕಾನೂನುಗಳೇ ಬರೆಕಷ್ಟೆ. ಹಾಂಗೆಯೇ ನಿಧಾನಕ್ಕೆ ಗೋವುಗಳ ವಿಷಯಲ್ಲಿಯುದೇ ಕಠಿಣ ಕಾನೂನು ಬರೆಕು, ಒಂದು ದಿನ ಬಕ್ಕು ಹೇಳಿ ಎನಗೆ ನಂಬಿಕೆ ಇದ್ದು. ಆದರೆ ತಪ್ಪು ಕೆಲಸವ ನಿಲ್ಸುಲೆ ಕಾನೂನು ಬಪ್ಪಲ್ಲಿಯವರೆಂಗೆ ಕಾಯೆಕ್ಕು ಹೇಳಿ ಇಲ್ಲೆ ಅನ್ನೆ?
ದನಂಗಳ ಸುಮ್ಮನೆ ಬಿಟ್ಟರೆ, ಸರಿಯಾಗಿ ರಕ್ಷಣೆ ಮಾಡದ್ರೆ ಕೆಟ್ಟ ಮನುಷ್ಯರು ಎತ್ತಿಗೊಂಡು ಹೋವ್ತವು, ಹೀಂಗಾಗಿ ಇಷ್ಟ ಇಲ್ಲದ್ರುದೇ ಕಟ್ಟಿಯೇ ಹಾಕೆಕಾವ್ತು. ಎಂತ ಮಾಡಲಿ?
ಈ ಸಮಸ್ಯೆಯ ಮೂಲ ನಿಂಗೊ ದನದ ಉತ್ಪನ್ನಂಗಳ ಮೇಲೆ ಅವಲಂಬಿತವಾಗಿಪ್ಪದು. ಮೂಲ ಸಮಸ್ಯೆಗೆ ಪರಿಹಾರ ಕಂಡುಹುಡುಕುಲೆ ಶುರುಮಾಡಿದರೆ ಈ ಸಮಸ್ಯೆ ಇರ್ತೇ ಇಲ್ಲೆ, ಎಂತದಕ್ಕೆ ಹೇಳಿದರೆ ದನ ಸಾಕುವ ಪ್ರಶ್ನೆಯೇ ಬತ್ತಿಲ್ಲೆ!
ಚೂರೂ ಕರುಣೆ ಇಲ್ಲದ್ದೆ ಕಡಿದು ತಿಂಬವರ ವಿರುದ್ಧ ಮಾತಾಡುದು ಬಿಟ್ಟು ಕಷ್ಟಲ್ಲಿದ್ದು ದನ ಸಾಂಕುವವರ ಬಗ್ಗೆ ನಿಂಗೊ ಮಾತಾಡುದು ಸರಿಯಾ?
ಆನು ಕೊಂದು ತಿಂಬವರ ಸಮರ್ಥಿಸುತ್ತಾ ಇಲ್ಲೆ. ಆದರೆ ಈಗ ಸುಮಾರು ಜನ ಸಾಂಕುವ ರೀತಿ ಕೊಲ್ಲುವುದಕ್ಕಿಂತಲೂ ಹೆಚ್ಚು ಕ್ರೂರ, ಅದರ ಬಗ್ಗೆ ಹೆಚ್ಚಿನವು ಆಲೋಚನೆ ಮಾಡದ್ದೆ ಕೂರ್ತವು, ಅಥವಾ ಕಂಡರೂ ಕಾಣದ್ದ ಹಾಂಗೆ ಸುಮ್ಮನೆ ಕೂರ್ತವು ಹೇಳುವುದನ್ನೇ ಆನು ಒತ್ತಿ ಹೇಳುಲೆ ಇಷ್ಟ ಪಡ್ತೆ. ತಾವು ಸ್ವತಃ ಸಾಕದ್ದೆ ಕ್ರೂರ ಮೂಲಂದ ಹಾಲಿನ ಪಡೆದು ಉಪಯೋಗಿಸುವವರದ್ದು ಕೂಡ ತುಂಬಾ ನಿರ್ದಯ ವ್ಯವಹಾರ.
ಇನ್ನು, ಅಂತಃಕರುಣೆ ಇದ್ದುದೇ ಅಸಹಾಯಕತೆ ಅಥವಾ ಕಷ್ಟಲ್ಲಿದ್ದುಕೊಂಡು ದನ ಸಾಕುವವರ ಬಗ್ಗೆ: ‘ಹಾಂಗಿಪ್ಪ ಕಷ್ಟಲ್ಲಿಪ್ಪವು ಕ್ರೌರ್ಯವ ಮುಂದುವರೆಸಿಕೊಂಡು ಹೋಗಲಿ, ತೊಂದರೆ ಇಲ್ಲೆ ಅಥವಾ ಎಂತ ಮಾಡ್ಲೂ ಸಾಧ್ಯ ಇಲ್ಲೆ’ ಹೇಳುವ ಮನೋಭಾವ ಮಡಿಕ್ಕೊಂಬ ಬದಲು, ಸಾಂಕುವ ಪ್ರಕ್ರಿಯೆ ಅಸಹಜ, ಅನೈಸರ್ಗಿಕ, ಕ್ರೂರ ಹೇಳಿ ಮೊದಲು ಒಪ್ಪಿಕೊಂಬ. ಮತ್ತೆ ನಿಧಾನಕ್ಕೆ ಸಮಸ್ಯೆಂದ ಹೆರಬಪ್ಪ ಬಗ್ಗೆ ಕೆಲಸ ಮಾಡುಲಕ್ಕು. ಸಾಂಕುದುದೇ ಮತ್ತೆ ಹಾಲು-ತುಪ್ಪ ಇತ್ಯಾದಿಗಳ ಸೇವಿಸುದುದೇ ಕಮ್ಮಿ ಆದರೆ ಸಹಜವಾಗಿ ಮಾಂಸಕ್ಕೆ ಕ್ರಯ ಜಾಸ್ತಿ ಆಗಿ ನಿಧಾನಕ್ಕೆ ಬಳಕೆ ಕಡಮ್ಮೆ ಅಕ್ಕು ಹೇಳಿ ಕೂಡ ಆಶಿಸುಲಕ್ಕು.
ಅಲ್ಲಾ, ಚೆಂದಕ್ಕೆ ಸಾಂಕುದು ಹೇಂಗೆ ಹೇಳಿ ಆಲೋಚನೆ ಮಾಡಿದ್ರೆ ಸಾಕಲ್ಲದಾ? ಪೂರ್ತಿ ಬಿಡುವ ಬಗ್ಗೆ ಎಂತದಕ್ಕೆ ಆಲೋಚನೆ ಮಾಡುದು?
ಈ ಮಧ್ಯಮ ಮಾರ್ಗ ಚೆಂದಕ್ಕೆ ಯಾವತ್ತೂ ನಿಲ್ತಿಲ್ಲೆ, ಚೆಂದಕ್ಕೆ ಸಾಕುವ ಪ್ರತಿಯೊಬ್ಬನ ಲೆಕ್ಕಕ್ಕೂ ಇನ್ನೈದು ಜನ ಕ್ರೂರವಾಗಿ ಸಾಕುವವು ಇರ್ತವು. ಹೀಂಗಾಗಿ ಸಾಕುವುದನ್ನೇ ಖಂಡಿಸಿದರೆ ಎಂತಾದರೂ ಪ್ರಗತಿ ಅಪ್ಪಲೂ ಅಕ್ಕು.
ಮಾತ್ರವಲ್ಲ ಚೆಂದಕ್ಕೆ ಸಾಕುದು ಹೇಳುದೇ ಒಂದು ಪ್ರಶ್ನಾರ್ಹ ಪ್ರಕ್ರಿಯೆ. ಇದು ಅನೈಸರ್ಗಿಕ ಮತ್ತೆ ಗೋವಿನ ಸಹಜಧರ್ಮಕ್ಕೆ ವಿರುದ್ಧ.
ದನದ ಸೆಗಣಿ ಒಳ್ಳೆ ಗೊಬ್ಬರ, ಆನು ದನ ಸಾಕುದರ ನಿಲ್ಸಿದರೆ ಇನ್ಯಾವುದೋ ರಾಸಾಯನಿಕ ಗೊಬ್ಬರ ಹಾಕೆಕಾದ ಪ್ರಸಂಗ ಬತ್ತಿಲ್ಲೆಯೋ? ಎತ್ತಿನ ಬದಲು ಟ್ರ್ಯಾಕ್ಟರ್ ಬಳಸಿದರೆ ಅದು ಕೂಡ ಪರಿಸರ ವಿರೋಧಿ ಅಲ್ಲದೋ?
ಒಳ್ಳೆ ಪ್ರಶ್ನೆ. ಪರಿಸರ ಪ್ರೇಮ ಖಂಡಿತವಾಗಿಯೂ ಬಹಳ ಮುಖ್ಯವಾದ ಸಂಗತಿ. ಅನೇಕ ಅಸಹಜತೆಲಿ ಬೆಳೆದು ಬಂದ ಸಮಾಜಲ್ಲಿ ದ್ವಂದ್ವಂಗೊ ಎದುರಪ್ಪದು ಸಹಜ, ರಾತ್ರೋರಾತ್ರಿ ಸಹಜತೆಗೆ ಮರಳಿ ಹೋಪದು, ಎಲ್ಲಾ ರೀತಿಲಿಯುದೇ ಸರಿ ಇಪ್ಪದು ಕಷ್ಟ. ಆದರೆ ನಿಧಾನವಾಗಿಯಾದರೂ ಸರಿಯಾದ ದಿಕ್ಕಿಲ್ಲಿ ಪ್ರಯತ್ನ ಮಾಡಿದರೆ ಉತ್ತಮ.
ಪುನಃ ಇಲ್ಲಿ ಆನು ಎತ್ತುವ ವಿಷಯ ಎಂತ ಹೇಳಿದ್ರೆ ಮನುಷ್ಯ ಗುಲಾಮರ ಬಳಕೆಯ ಬಗ್ಗೆ ನಿಂಗೊ ಆಲೋಚನೆ ಮಾಡಿ ನೋಡಿ. ಅವರ ಬಳಕೆ ಎಷ್ಟೋ ಕಡೆ ಯಂತ್ರಂಗಳ/ರಾಸಾಯನಿಕಂಗಳ ಬಳಕೆಗಿಂತ ಹೆಚ್ಚು ಪರಿಸರಸ್ನೇಹಿ ಆಗಿ ಕಾಂಬಲೂ ಸಾಕು. ಹಾಂಗೆ ಹೇಳಿ ಅದರ ಸರಿ ಹೇಳ್ತಾ ನಾವು? ಇಲ್ಲೆ. ಗೋವು ಬರೀ ಒಂದು ಪ್ರಾಣಿ ಹೇಳುವ ಕಾರಣಂದ ಅಲ್ಲದಾ ನಾವು ಅಧಿಕಾರ ಚಲಾಯಿಸುದು, ಉಪಯೋಗ ಪಡಕ್ಕೊಂಬದು?
ಬೇರೆ ನೈಸರ್ಗಿಕ ವಿಧಾನಂಗಳ ಉಪಯೋಗಿಸಿ ಕೃಷಿ ಮಾಡುಲೆ ಪ್ರಯತ್ನ ಮಾಡಿ ಹೇಳುದು ಎನ್ನ ಸಲಹೆ. ಹಾಂಗುದೇ ಗೋವಿಲ್ಲದ್ದೆ ಗತಿಯೇ ಇಲ್ಲೆ ಹೇಳಿ ಕಂಡ್ರೆ ಕಡೇಪಕ್ಷ ಅದರ ಬಳಕೆಯ ಹಂತ ಹಂತವಾಗಿ ಕಡಮ್ಮೆ ಮಾಡುಲೆ, ಬೇರೆ ಪರಿಸರ ಸ್ನೇಹೀ ವಿಧಾನಂಗಳ ಎತ್ತಿ ಹಿಡಿವಲೆ ಈ ಕ್ರಾಂತಿಲಿ ಕೈ ಜೋಡಿಸಿ. ಈ ಬಗ್ಗೆ ಈಗಾಗಲೇ ನಡೆದ ಸಂಶೋಧನೆಗಳ ತಿಳ್ಕೊಂಬಲೆ ಪ್ರಯತ್ನ ಮಾಡಿ ಇನ್ನೂ ಮುಂದೆ ಹೋಪಲೆ ಎಡಿಗಾದಷ್ಟು ಸಹಾಯ ಮಾಡಿ.
ಗವ್ಯೋತ್ಪನ್ನಂಗೊಕ್ಕೆ ಅದ್ಭುತ ಔಷಧೀಯ ಗುಣಂಗೊ ಇದ್ದು ಹೇಳಿ ಆನು ನಂಬುತ್ತೆ. ಅಂಬಗ ಅದರ ಹೇಂಗೆ ಬಿಡುದು?
ಹಾಂಗಿಪ್ಪ ಗುಣ ಇದ್ದೋ ಇಲ್ಲೆಯೋ, ಆದರೆ ಇಲ್ಲಿ ನಿಂಗೊ ನಿಂಗಳ ಅಗತ್ಯವನ್ನೇ ಎತ್ತಿ ಹಿಡಿಯುತ್ತಾ ಇದ್ದಿ ಹೇಳಿ ಆತು, ಅಲ್ಲದಾ?
ಇರಲಿ, ನಿಂಗೊಗೆ ಗೋವುಗಳ ಹಿತಾಸಕ್ತಿಲಿ ನಿಜವಾದ ಆಸಕ್ತಿ ಇದ್ದರೆ ಈ ವಿಷಯಲ್ಲಿ ಕೂಡ ನಿಂಗೊ ಕ್ರೌರ್ಯ-ದೌರ್ಜನ್ಯ ಕಡಮ್ಮೆ ಇಪ್ಪ ಇತರ ಮೂಲಂಗಳ ಬಗ್ಗೆ ಆಲೋಚನೆ ಮಾಡಿಯೊಂಡು ನಿಧಾನಕ್ಕೆ ಬದಲಪ್ಪದು ಒಳ್ಳೆಯದು. ಹಾಂಗಿಪ್ಪ ಮೂಲಂಗಳ ಮೂಲಕ ಉತ್ತಮ ಆರೋಗ್ಯ ಖಂಡಿತಾ ಸಾಧ್ಯ ಹೇಳಿ ಎನಗೆ ನಂಬಿಕೆ ಇದ್ದು.
ಈ ನಿಟ್ಟಿಲ್ಲಿ ಡೈರಿ ಸಂಘಂಗಳ ಪಾತ್ರ ಎಂತದು?
ದಯವಿಟ್ಟು ಕೆ.ಎಮ್.ಎಫ್.ನ Vision & Mission ಮತ್ತೆ Objectives ಓದಿ ನೋಡಿ:
http://www.kmfnandini.coop/
ಅದರಲ್ಲಿ ಉದ್ದಕ್ಕೂ ಹೇಂಗೆ ಹಾಲು ಉತ್ಪಾದಕರಿಂಗೆ ಹೆಚ್ಚು ಹೆಚ್ಚು ಒಳ್ಳೆದಪ್ಪ ಹಾಂಗೆ ಮಾಡುದು ಹೇಳಿ ವಿವರ್ಸಿದ್ದವು. ಖಂಡಿತಾ ತಪ್ಪಲ್ಲ, ಆದರೆ ಅದರಲ್ಲಿ ಎಲ್ಲಿಯಾದರೂ ನಿಂಗೊಗೆ ದನದ ಬಗ್ಗೆ ಕಾಳಜಿ ಕಾಣ್ತೋ?
ಇದರಲ್ಲಿ ಒಂದು ಕಡೆ To compete with MNCs and Private Dairies with better quality of milk and milk products and in the process sustain invincibility of cooperatives. ಹೇಳಿ ಹೇಳ್ತವು.
http://www.kmfnandini.coop/
ಅದರಲ್ಲಿ ಉದ್ದಕ್ಕೂ ಹೇಂಗೆ ಹಾಲು ಉತ್ಪಾದಕರಿಂಗೆ ಹೆಚ್ಚು ಹೆಚ್ಚು ಒಳ್ಳೆದಪ್ಪ ಹಾಂಗೆ ಮಾಡುದು ಹೇಳಿ ವಿವರ್ಸಿದ್ದವು. ಖಂಡಿತಾ ತಪ್ಪಲ್ಲ, ಆದರೆ ಅದರಲ್ಲಿ ಎಲ್ಲಿಯಾದರೂ ನಿಂಗೊಗೆ ದನದ ಬಗ್ಗೆ ಕಾಳಜಿ ಕಾಣ್ತೋ?
ಇದರಲ್ಲಿ ಒಂದು ಕಡೆ To compete with MNCs and Private Dairies with better quality of milk and milk products and in the process sustain invincibility of cooperatives. ಹೇಳಿ ಹೇಳ್ತವು.
ಗಮನಿಸಿ: ವಿದೇಶೀಯರೊಟ್ಟಿಂಗೆ ಸ್ಫರ್ಧಿಸುವಾಗ ಅವರ ಕಟುಕ ಹೃದಯದೊಟ್ಟಿಂಗೆ ಸ್ಫರ್ಧಿಸುಲೆ ಎಷ್ಟು ಸಾಧ್ಯ ಇದ್ದು? ಈ ಲೇಖನಲ್ಲಿ ಶುರುವಿಂಗೆ ಬರೆದ ಅಂಶಗಳ ಅಳವಡಿಸದ್ದೆ ಹಾಲಿನ ಉತ್ಪನ್ನವ ಸತತ-ಲಾಭಕರ ಉದ್ಯಮ ಮಾಡುಲೆ ಬಹಳ ಕಷ್ಟ ಇದ್ದು. ಅಥವಾ ಇನ್ನೊಂದು ರೀತಿಲಿ ಹೇಳುದಾದ್ರೆ ಡೈರಿ ಉದ್ಯಮಲ್ಲಿ ಕ್ರೌರ್ಯ ಹೆಚ್ಚು ಆಗಿಯೋಂಡೇ ಹೋವ್ತು.
ರಾಷ್ಟ್ರೀಯ ಮಟ್ಟದ ಡೈರಿ ಅಭಿವೃದ್ಧಿ ಬೋರ್ಡ್‍ನ ಧ್ಯೇಯ ಕೂಡ ಓದಿ: http://www.nddb.org/perspective.html ಇದರಲ್ಲಿ ಕೂಡ ದನದ ಬಗ್ಗೆ ವಿಶೇಷ ಕಾಳಜಿ ಇಲ್ಲೆ. ಲಾಭ, ಹೆಚ್ಚು ಉತ್ಪಾದನೆ - ಅಷ್ಟೆ.
ರಾಷ್ಟ್ರೀಯ ಮಟ್ಟದ ಡೈರಿ ಅಭಿವೃದ್ಧಿ ಬೋರ್ಡ್‍ನ ಧ್ಯೇಯ ಕೂಡ ಓದಿ: http://www.nddb.org/perspective.html ಇದರಲ್ಲಿ ಕೂಡ ದನದ ಬಗ್ಗೆ ವಿಶೇಷ ಕಾಳಜಿ ಇಲ್ಲೆ. ಲಾಭ, ಹೆಚ್ಚು ಉತ್ಪಾದನೆ - ಅಷ್ಟೆ.
ಇನ್ನು ಬಳಕೆದಾರನ ದೃಷ್ಟಿಲಿ ನೋಡಿದರೆ, ನೀಟಾಗಿ ಪ್ಯಾಕೇಟಿಲ್ಲಿ ಬಪ್ಪ ಉತ್ಪನ್ನವ ಆಸ್ವಾದಿಸುವ/ಉಪಯೋಗಿಸುವ ಇಂದ್ರಾಣ ಕಾಲದ ಬಳಕೆದಾರಂಗೆ ಅದರ ಹಿಂದೆ ಎಂತೆಲ್ಲಾ ಕ್ರೌರ್ಯ, ಅನ್ಯಾಯ ಇದ್ದು ಹೇಳಿ ಗೊಂತಪ್ಪದು ಬಹಳ ಕಷ್ಟ. ಅದಕ್ಕೇ ಅಲ್ಲದಾ ಎಲ್ಲರೂ (ಎನ್ನನ್ನೂ ಸೇರಿಸಿ) ಒಂದಲ್ಲ ಒಂದು ರೀತಿಲಿ ಸರಿಮಾಡುಲೆ ಎಡಿಗಾಗದ್ದ ರೀತಿಲಿ ನಮ್ಮ ಭೂಮಿಯ ಹಾಳು ಮಾಡ್ತಾ ಇಪ್ಪದು? ಮೀನು-ಮಾಂಸ, ಹಾಲು-ಬೆಣ್ಣೆ-ತುಪ್ಪ, ಪ್ಲಾಸ್ಟಿಕ್, ಇಂಧನ, ಸಿಮೆಂಟ್, ಅನೇಕ ಲೋಹಂಗೊ, ರಾಸಾಯನಿಕಂಗೊ - ಹೀಂಗೆ ಪಟ್ಟಿ ಬೆಳೆತ್ತಾ ಹೋವ್ತು. ಈ ಎಲ್ಲದರ ಹಿಂದೆ ಪ್ರಕೃತಿ-ಪ್ರಾಣಿಗಳ ಮೇಲೆ ಅಪ್ಪ ಅನಾಚಾರ/ಕ್ರೌರ್ಯ ಮಾತ್ರ ಅಲ್ಲ, ಮನುಷ್ಯರ ಮೇಲೆ ಅಪ್ಪ ಕ್ರೌರ್ಯ ಕೂಡ ಇರ್ತು. ಹುಡುಕಿದರೆ ನಾವೆಲ್ಲರೂ ಇದರಲ್ಲಿ ಭಾಗಿ, ಆದರೆ ಒಬ್ಬರನ್ನೊಬ್ಬರು ತಿದ್ದಿಯೊಂಡು ಅರ್ಥವತ್ತಾಗಿ ಮುಂದೆ ಹೋಪಲೆ ಎಡಿಗಾದ್ರೆ ಬಹಳ ಒಳ್ಳೆಯದು.
ಪ್ರಾಣಿಗೊಕ್ಕೆ ಅಪ್ಪ ಕಷ್ಟಂಗಳ ಗಮನಿಸಿ ಅನೇಕ ರೀತಿಯ concepts ಬಯಿಂದು:
ಪ್ರಾಣಿಗೊಕ್ಕೆ ಅಪ್ಪ ಕಷ್ಟಂಗಳ ಗಮನಿಸಿ ಅನೇಕ ರೀತಿಯ concepts ಬಯಿಂದು:
Certified Organic
Free-Range: http://en.wikipedia.org/wiki/Free_range
Certified Humane: http://www.certifiedhumane.com/
Cage-Free
Free-Roaming
Vegetarian-Fed
Natural
ಯಾವುದೂ ಶೇಕಡಾ ೧೦೦% ಗ್ಯಾರಂಟಿ ಕೊಡ್ತಿಲ್ಲೆ, ಎಲ್ಲದರಲ್ಲಿಯೂ ಸಣ್ಣ ಕುಂದುಕೊರತೆಗೊ ಇದ್ದು. ಮಾತ್ರವಲ್ಲ, ಒಂದು ಬಹಳ ಮುಖ್ಯವಾದ ವಿಷಯ: ಮೇಲೆ ಹೇಳಿದ ಕೆಲವು terms ಜನರ ಭಾವನೆಗಳ ಮತ್ತೆ ಪ್ರಾಣಿಗಳ ಕಷ್ಟಂಗಳ ಗಮನಲ್ಲಿ ಮಡಿಕ್ಕೊಂಡು ಅಧಿಕೃತ ಗುಂಪುಗೊ ಹುಟ್ಟು ಹಾಕಿದ್ದು. ಆದರೆ ಇನ್ನು ಕೆಲವು ಜನರ ಮಂಗ ಮಾಡುಲೆ ಹೇಳಿ ಕಂಪನಿಗಳೇ ಹುಟ್ಟುಹಾಕಿದ್ದು! ಉದಾ: natural ಕೇಳುಲೆ ಖುಷಿ ಆವ್ತು, ಅದಕ್ಕೂ ಪ್ರಾಣಿ-ಹಿಂಸೆಗೂ ಎಂತ ಅಧಿಕೃತ ಸಂಬಂಧವೂ ಇಲ್ಲೆ. ಹಾಂಗಾಗಿ natural ಹೇಳಿ label ಇಪ್ಪ ಒಂದು ಉತ್ಪನ್ನವ ಒಬ್ಬ ತೆಕ್ಕೊಂಡ ಹೇಳಿ ಆದರೆ ಅದರ ಹಿಂದೆ ಬೇಕಾದಷ್ಟು ಪ್ರಾಣಿ-ಹಿಂಸೆ ಇಪ್ಪಲೂ ಸಾಕು, ಇಲ್ಲದ್ದಿಪ್ಪಲೂ ಸಾಕು.
ಒಟ್ಟಿನಲ್ಲಿ ವಿದೇಶಂಗಳಲ್ಲಿ ಅನೇಕ ಜನರು ತಾವು ಎಂತ ಖರೀದಿಸುತ್ತಾ ಇದ್ದು, ಅದರ ಹಿಂದೆ ಎಂತ ಸತ್ಯ ಇದ್ದು ಹೇಳಿ ತಿಳಿವಲೆ ಪ್ರಯತ್ನ ಮಾಡುತ್ತಾ ಇದ್ದವು, ಅದರ ಫಲವಾಗಿ ನಿಧಾನವಾಗಿ educated buying ಜಾಸ್ತಿ ಆವ್ತಾ ಇದ್ದು. ಆದರೆ ನಮ್ಮ ದೇಶಲ್ಲಿ ಜನರು ಬೇರೆ ಎಷ್ಟೋ ರೀತಿಲಿ ಕಷ್ಟ ಅನುಭವಿಸುತ್ತಾ ಇಪ್ಪ ಕಾರಣ ಹೀಂಗಿಪ್ಪ ಕ್ರಾಂತಿ ನಿಧಾನಕ್ಕೆ ಶುರು ಆವ್ತಾ ಇದ್ದಷ್ಟೆ.
ಸಮಯ ಸಿಕ್ಕಿಯಪ್ಪಗ Fair Trade ಹೇಳುವ conceptನ ಬಗ್ಗೆ ಕೂಡ ದಯವಿಟ್ಟು ಓದಿ:
ಈ ವಿದೇಶೀಯರಿಂಗೆ ಬೇರೆಂತ ಕೆಲಸ ಇಲ್ಲೆ, ಹೊಟ್ಟೆ ತುಂಬಿದವಕ್ಕೆ ಹೀಂಗೆಲ್ಲಾ ಮಾತಾಡುದು ಸುಲಭ, ಅಲ್ಲದಾ?
ನಿಂಗೊಗೆ ವಿದೇಶೀಯರು ಹೇಳಿದ್ದು ಅಷ್ಟಾಗಿ ಪಥ್ಯ ಆವ್ತಿಲ್ಲೆ ಹೇಳಿಯಾದರೆ ಭಾರತದ ಉದ್ದಗಲವೂ ತಿರುಗಾಡಿ ಇಡೀ ದೇಶವ, ಜನರ ಕಷ್ಟಂಗಳ ನೋಡಿದ ಗಾಂಧೀಜಿಯ ನಿಲುವು ಅರ್ಥಮಾಡಿಗೊಳ್ಳಿ. ಅಂಥಾ ಮಹಾನುಭಾವ ಕೂಡ ದನಂಗಳ ಉತ್ಪನ್ನಂಗಳ ನಾವು ಬಳಸುದರ ನಿಲ್ಸೆಕ್ಕು ಹೇಳುವ ತತ್ವಲ್ಲಿ ನಂಬಿಕೆ ಮಡಿಕ್ಕೊಂಡಿತ್ತಿದ್ದವು ಹೇಳಿ ನಿಂಗೊಗೆ ಗೊಂತಿದ್ದಾ? "The moral basis of vegetarianism" ಹೇಳಿ ಒಂದು ಪುಸ್ತಕ ಇದ್ದು, ಗಾಂಧೀಜಿಯ ನಿಲುವುಗಳ ಅರ್ಥ ಮಾಡಿಯೊಂಬಲೆ ಒಳ್ಳೆಯ ಸಣ್ಣ ಪುಸ್ತಕ ಅದು.
ನಿಜವಾಗಿ ಈ ಕ್ರೌರ್ಯವ ನಿಲ್ಸುಲೆ ನಮ್ಮಂದ ಸಾಧ್ಯ ಇದ್ದೋ? ಅಥವಾ ಪ್ರವಾಹಕ್ಕೆ ವಿರುದ್ಧ ಸುಮ್ಮನೆ ಈಜಿ ನಮ್ಮ ಶಕ್ತಿ ವ್ಯಯ ಮಾಡುದೋ?ನವಗೆ ಎಡಿಗಾದ್ದರ ನಾವು ಮಾಡುದು, ಸುಮ್ಮನೆ ಕೈ ಚೆಲ್ಲಿ ಕೂಪದರ ಬದಲು. ಮಾನವಕುಲ ಅದೆಷ್ಟೋ ಕ್ರೂರ ಪದ್ಧತಿಗಳ ಒಪ್ಪಿ ನಿಧಾನಕ್ಕೆಯಾದರೂ ಸರಿ-ತಪ್ಪುಗಳ ಮಾರ್ಗಲ್ಲಿ ಬಹಳ ಮುಂದೆ ಬಯಿಂದು. ಆದರೆ ಚಾರಿತ್ರಿಕವಾಗಿ ನೋಡಿದರೆ ಬೇಕಾದಷ್ಟು ಸಲ ಅನೇಕ ಸಮಾಜಂಗೊ ತಾವು ಕಷ್ಟಪಟ್ಟು ಸಾಧಿಸಿದ ಒಳ್ಳೆಯತನವ/ಒಗ್ಗಟ್ಟಿನ ಮರೆತು ಅಧಃಪತನವನ್ನೂ ಕಂಡಿದು. ಕೆಲವರಲ್ಲಿ ಕೆಲವೊಮ್ಮೆ ಸ್ವಾರ್ಥರಹಿತ ಮನೋಭಾವನೆ ಹುಟ್ಟುತ್ತು, ಆದರೆ ಮುಂದಾಣ ಜನಾಂಗಕ್ಕೆ ಸ್ವಾರ್ಥ ಇರ್ತಿಲ್ಲೆ ಹೇಳಿ ಹೇಳುಲೆ ಬತ್ತಿಲ್ಲೆ, ಹಾಂಗಾಗಿ ಪುನಃ ಕ್ರೌರ್ಯ ತನ್ನ ಬಲವ ತೋರ್ಸುತ್ತು. ಕುಂಬಾರಗೆ ವರುಷ ದೊಣ್ಣೆಗೆ ನಿಮಿಷ ಹೇಳುವ ಹಾಂಗೆ ಶಾಂತಿವಾದಿಗೊ ಕಷ್ಟಪಟ್ಟು ಹರಡುವ ಶಾಂತಿ-ಅಹಿಂಸೆಯ ಸಂದೇಶವ ಬಹಳ ಸುಲಭವಾಗಿ ಸ್ವಾರ್ಥಿಗೊ, ಭಯೋತ್ಪಾದಕರು ಹೊಸಕಿ ಹಾಕುತ್ತವು. ನೋಡುವಾ ನವಗೆ ಎಷ್ಟು ಮಾಡುಲೆ ಎಡ್ತು ಹೇಳಿ!
ನಿಂಗೊ ಹೇಳುದು ನೋಡಿದ್ರೆ ಎಲ್ಲಾ ಮನುಷ್ಯರು ಬಹಳ ಸುಖಲ್ಲಿ ಇದ್ದವು, ಆರಿಂಗುದೇ ಕಷ್ಟವೇ ಇಲ್ಲೆ ಹೇಳಿ ಅರ್ಥೈಸೆಕ್ಕು. ಆದ್ರೆ ಕೋಟಿಗಟ್ಟಲೆ ಮನುಷ್ಯರೇ ತರತರದ ಕಷ್ಟಲ್ಲಿ ಬದುಕಿಯೊಂಡು ಇಪ್ಪಗ ಪ್ರಾಣಿಗೊ ಯಾವ ಲೆಕ್ಕ?
ಈ ಪ್ರಶ್ನೆ ಬರೀ ಗೋವಿಂಗೆ ಸೀಮಿತವಾಗದ್ದೆ ಮನುಷ್ಯ ಪ್ರಾಣಿಗಳ ಮೇಲೆ ತೋರ್ಸುವ ಕಾಳಜಿಯನ್ನೇ ಕೆದಕುತ್ತು, ಇದಕ್ಕೆ ಉತ್ತರವಾಗಿ ನಿಂಗೊ ವೀಗನಿಸಂ ಬಗ್ಗೆ ಆನು ಬರೆದ ಲೇಖನ ಓದಿ ಹೇಳಿ ವಿನಂತಿ.
ಎಲ್ಲದಕ್ಕಿಂತ ಮುಖ್ಯ – ದೊಡ್ಡ ಕ್ರಾಂತಿಯ ಬದಿಗೆ ಮಡಿಗಿ, ವೈಯಕ್ತಿಕ ನೆಲೆಲಿ ನಿಂಗೊಗೆ ಕ್ರೂರಮೂಲಂದ ಬಂದ ಗೋವಿನ ಉತ್ಪನ್ನಂಗಳಿಂದ ಆನಂದ ತೃಪ್ತಿ ಪಡವಲೆ ಮನಸ್ಸಿದ್ದೋ ಹೇಳುದರ ನಿಂಗಳೇ ಆಲೋಚನೆ ಮಾಡೆಕ್ಕು.
ಗಮನಿಸಿ: ಇದೇ ಲೇಖನವ ದಕ್ಷಿಣ ಕನ್ನಡದ ಹವ್ಯಕ ಭಾಷೆಲಿ ಓದೆಕ್ಕಾದರೆ ಈ ಕೊಂಡಿಯ ಕ್ಲಿಕ್ಕಿಸಿ
ದನ, ನಮ್ಮ ಗುಲಾಮ ದೇವರು!
ಪೀಠಿಕೆ
ಗೋವು ಎಂದರೆ ನಿಮ್ಮ ಮನಸ್ಸಿನಲ್ಲಿ ಮೊದಲು ಹುಟ್ಟುವ ಭಾವನೆ ಏನು? ದೇವರೆಂದೋ, ಅಮ್ಮನೆಂದೋ ಅಥವಾ ಒಂದು ಗುಲಾಮ ಪ್ರಾಣಿಯೆಂದೋ? ನಮ್ಮಲ್ಲಿ ಅನೇಕರು ಲೆಕ್ಕಕ್ಕೆ ದನವನ್ನು ದೇವರು, ಅಮ್ಮ ಎಂದು ಪೂಜಿಸುತ್ತಾರೆ. ಒಂದಷ್ಟು ಜನ ದನಗಳನ್ನು ಸಾಕುತ್ತಾರೆ, ಹೆಚ್ಚಿನವರು ದಿನನಿತ್ಯವೂ ಹಾಲು ಮತ್ತೆ ಅದರ ಉತ್ಪನ್ನಗಳನ್ನು ಧಾರಾಳವಾಗಿ ಉಪಯೋಗಿಸುವವರೇ. ಆದ್ದರಿಂದ ಇದು ಇಂತಹ ಪ್ರತಿಯೊಬ್ಬನೂ ಓದಬೇಕಾದ ಲೇಖನ - ಓದಿದ ಬಳಿಕ ಆತ್ಮವಿಮರ್ಶೆ ಮಾಡಲೇಬೇಕಾದ ವಿಚಾರವಿದೆ ಇದರಲ್ಲಿ.
ಎಲ್ಲದಕ್ಕಿಂತ ಮೊದಲು ಕಾಳಿದಾಸ ಬರೆದ ಈ ಶ್ಲೋಕವನ್ನು ಓದಿ ಹೊಸ ವಿಷಯಗಳ ಬಗ್ಗೆ ಮುಕ್ತಮನಸ್ಕರಾಗಿ ಅಂತ ವಿನಂತಿಸಿಕೊಳ್ಳುತ್ತಿದ್ದೇನೆ.
ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ
ಸಂತಃ ಪರೀಕ್ಷ್ಯಾನ್ಯತರದ್ಭಜಂತಿ
ಮೂಢಃ ಪರಪ್ರತ್ಯಯನೆಯಬುದ್ಧಿಃ
ನಾನು ಸಣ್ಣವನಿರುವಾಗ ಕಲಿತ ಸಂಸ್ಕೃತ ಶ್ಕೋಕಗಳಲ್ಲಿ ಈಗಲೂ ನೆನಪಿರುವ ಅತ್ಯುತ್ತಮವಾದದ್ದೊಂದು ಇದು. ಅಕ್ಷರಶಃ ಅಲ್ಲದಿದ್ದರೂ, ಈ ಶ್ಲೋಕದ ಅರ್ಥ ಸುಮಾರು ಹೀಗೆ ಬರುತ್ತದೆ, ತಪ್ಪಿದ್ದರೆ ದಯವಿಟ್ಟು ತಿದ್ದಿ.
ಹಳೆಯದು ಅಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದು ಅಂತ ಅಲ್ಲ
ಹೊಸದು ಅಂದ ಮಾತ್ರಕ್ಕೆ ಎಲ್ಲವೂ ಕೆಟ್ಟದು ಎಂದೂ ಅಲ್ಲ
ಬುದ್ಧಿವಂತರು ತಾವೇ ಪರೀಕ್ಷಿಸಿ ಒಳ್ಳೆಯದನ್ನು ತೆಗೆದುಕೊಳ್ಳುತ್ತಾರೆ
ಮೂಢರು ಬೇರೆಯವರು ಹೇಳಿದ್ದನ್ನು ಅಂಧವಾಗಿ ಅನುಕರಣೆ ಮಾಡುತ್ತಾರೆ
ನಾವು ದನಗಳನ್ನು ನಿಜವಾಗಿಯೂ ಪೂಜ್ಯರೂಪಲ್ಲಿ ನೋಡುತ್ತೇವೆಯೇ? ಹೌದು ಅನ್ನುವುದಾದರೆ, ದನಗಳನ್ನು ನಿತ್ಯವೂ ಹಿಂಸೆ ಮಾಡುವ ಅಮಾನವೀಯ ಪದ್ಧತಿಗಳು ಮೊದಲಿಗಿಂತ ಹೆಚ್ಚೇ ಆಗಿದೆ ಹೊರತು ಕಮ್ಮಿ ಆಗಲಿಲ್ಲ, ಯಾಕೆ? ಹೌದಾ?!! ಎಲ್ಲಿದೆ ಹಿಂಸೆ ಅಂತ ಆಶ್ಚರ್ಯವಾಯಿತೇ? ದಯವಿಟ್ಟು ಮುಂದಕ್ಕೆ ಓದಿ ಎಂದು ವಿನಂತಿ.
ಒಂದು ಕ್ಷಣ ಗಂಭೀರವಾಗಿ ಈ ಕೆಳಗೆ ಬರೆದ ಪದ್ಧತಿಗಳನ್ನು ಓದಿ ನೋಡಿ:
- ಜೀವನ ಪೂರ್ತಿ ಹಟ್ಟಿಯಲ್ಲಿ ಕಟ್ಟಿ ಹಾಕುವುದು
- ಗಂಡು ಕರುಗಳನ್ನು ಕೊಲ್ಲುದು ಅಥವಾ ಮಾರುವುದು (ಮತ್ತಿನ್ಯಾರಿಗೆ, ಕಟುಕರಿಗೆ)
- ಕರು ಹಾಗೂ ದನವನ್ನು ದೂರ ದೂರ ಕಟ್ಟಿ ಇಡುವುದು (ಅಮ್ಮ ಮಗು ಎಷ್ಟು ಅನ್ಯೋನ್ಯವಾಗಿ ಇರಬೇಕು, ಬೇಡ ಅಂತ ಹೇಳಲು ನಾವು ಯಾರು?)
- ಕೃತಕ ಗರ್ಭಧಾರಣೆ ಮಾಡುವುದು (ಲೈಂಗಿಕ ಸ್ವಾತಂತ್ರ್ಯಹರಣ)
- ಇನ್ನೂ ಒಂದೆರಡು ಬಾರಿ ಕರು ಹಾಕಲು / ಹಾಲು ಕೊಡಲು ಬಾಕಿ ಇರುವಾಗ ಮಾರಿ, ಕೊಂದ ‘ಪಾಪ’ ತನಗೆ ಬರಲಿಲ್ಲ ಅಂತಂದುಕೊಂಡು ಸಮಾಧಾನಲ್ಲಿ ಇರುವುದು
- ಇಲ್ಲಿಯ ಹವಾಮಾನದಲ್ಲಿ ಸಂಕಟಪಡುತ್ತವೆ ಅಂತ ಗೊತ್ತಿದ್ದರೂ ಇತರೆಡೆಗಳಿಂದ ದನದ ತಳಿಗಳನ್ನು ತಂದು ಉಪಯೋಗಿಸುವುದು
- ಹಾಲು ಹೆಚ್ಚು ಬರಲಿ ಎಂದು ಹಾರ್ಮೋನ್ ಇಂಜೆಕ್ಷನ್ ಕೊಡುವುದು
- ಹಾಲು ಕರೆಯುವ ಯಂತ್ರಗಳು ಕೂಡ ಬಂದಿವೆ ಅಲ್ಲವೇ?
ಹುಡುಕಿದರೆ ಇನ್ನೂ ಸಿಗುತ್ತವೆ, ಆದರೆ ಸದ್ಯಕ್ಕೆ ಇಷ್ಟು ಸಾಕು. ಎತ್ತುಗಳ ವಿಷಯವನ್ನೂ ನಾನು ಸದ್ಯಕ್ಕೆ ಬಿಡುತ್ತೇನೆ.
ಈ ಮೇಲೆ ಹೇಳಿದ್ದು ಹೆಚ್ಚಿನವರು ಮಾಡುವ ಸಂಗತಿಗಳು, ಅಲ್ಲವೇ? ಒಂದು ಕ್ಷಣ ಆಲೋಚನೆ ಮಾಡಿ ನೋಡಿ, ಇದೆಲ್ಲಾ ಎಷ್ಟು ಕ್ರೂರ ಎಂದು. ನೇರವಾಗಿ ಬಡಿಯುವುದು, ಕೊಲ್ಲುವುದು ಮಾತ್ರ ಕ್ರೌರ್ಯ ಅಲ್ಲ, ಬಹುಷಃ ದಿನನಿತ್ಯವೂ ಆಗುವ ಹಿಂಸೆ ಅದಕ್ಕಿಂತಲೂ ಒಂದು ಕೈ ಮೇಲೆ. ಮತ್ತೊಂದು ಮುಖ್ಯವಾದ ವಿಚಾರ: ಇದರಲ್ಲಿ ದನ ಸಾಕುವವರದ್ದು ಎಷ್ಟು ಪಾತ್ರ ಇದೆಯೋ ಅಷ್ಟೇ ದೊಡ್ಡ ಪಾತ್ರ ಉಪಯೋಗಿಸುವವರದ್ದು ಕೂಡ.
ದೇವರಿಗೆ ಭ್ರಷ್ಟ ನೈವೇದ್ಯದ ಸಮರ್ಪಣೆ?
ವಸ್ತುಸ್ಥಿತಿ ಹೀಗಿರುವಾಗ, ನಾವು ತಿನ್ನುವುದು ಬಿಡಿ (ಅದರ ಬಗ್ಗೆ ಆಮೇಲೆ ಬರೆಯುತ್ತೇನೆ), ಈ ಹಾಲು ತುಪ್ಪ ಇತ್ಯಾದಿಗಳನ್ನು ನಾವು ದೈವ ಕಾರ್ಯಕ್ಕೆ ಉಪಯೋಗಿಸುವಾಗಲೂ ಹಿಂದೆ ಮುಂದೆ ನೋಡುವುದಿಲ್ಲ, ಒಂದು ಚೂರೂ ಪಾಪಪ್ರಜ್ಞೆ ಕಾಡುವುದಿಲ್ಲ, ಇದನ್ನು ದೇವರು ಮೆಚ್ಚುವನಾ? ಪುಣ್ಯ ಸಿಗಬಹುದಾ? ನೀವೇ ಹೇಳಿ.
ಏಕೆ ಈ ಮೌನ? ಅಸಡ್ಡೆ?
ನನಗೆ ಈ ಮೌನ ಅಸಹನೀಯವಾಗಿ ಕಾಣುತ್ತದೆ, ಆದರೆ ಈ ಮೌನಕ್ಕೆ ಹಲವಾರು ಕಾರಣಗಳು ಕೂಡ ಕಾಣುತ್ತವೆ, ನನಗೆ ಕಂಡ ಕೆಲವನ್ನು ಇಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ:
ಹಳೇ ಸಂಪ್ರದಾಯಕ್ಕೆ ಕಟ್ಟು ಬಿದ್ದು... ಎಲ್ಲರೂ ಕೆಟ್ಟ ಮನಸ್ಸಿನವರು ಎಂದೇನೂ ಅಲ್ಲ, ಇದು ಕಾಲದ ಪ್ರವಾಹದೊಂದಿಗೆ ನಿಧಾನಕ್ಕೆ ಬೆಳೆದು ಬಂದ ಸಂಪ್ರದಾಯ, ಹೀಗಾಗಿ ಹೆಚ್ಚಿನವರು ಸಾಕುವ ವಿಷಯದ ಬಗ್ಗೆಯಾಗಲೀ, ಉಪಯೋಗಿಸುವ ವಿಷಯದ ಬಗ್ಗೆಯಾಗಲೀ ಆಲೋಚನೆಯೇ ಮಾಡಿರುವುದಿಲ್ಲ. ಮತ್ತೆ ನಮ್ಮಲ್ಲಿ ಪ್ರಶ್ನಿಸುವವರನ್ನು ದಬಾಯಿಸುವ, ತಮಾಷೆ ಮಾಡುವ ಸಂಪ್ರದಾಯವೂ ಇದೆಯಲ್ಲಾ?!
ಧಾರ್ಮಿಕತೆ: ಗೋವು, ಹಾಲು ಮತ್ತೆ ಅದರ ಉತ್ಪನ್ನಗಳನ್ನು ದೈವ ಕಾರ್ಯಕ್ಕೆ ಉಪಯೋಗಿಸುತ್ತಾ ಬಂದ ಜನರಿಗೆ ಅದನ್ನು ಬಿಡುವ ಬಗ್ಗೆ ಕಲ್ಪನೆ ಕೂಡ ಬರುವುದಿಲ್ಲ, ಅದರ ಮೂಲದ ಬಗ್ಗೆ ಆಲೋಚನೆ ಮಾಡಬೇಕು ಎಂದು ತೋಚುವುದೇ ಇಲ್ಲ. ಧಾರ್ಮಿಕ ವಿಧಿಗಳನ್ನು ನಡೆಸಲು ಈಗ ಮೊದಲಿಗಿಂತ ಜಾಸ್ತಿ ಕಷ್ಟ ಆಗುತ್ತಿದೆ - ಸುಮಾರು ಹೊಸ ಅಡಚಣೆಗಳಿವೆ - ಜಾಗ, ಸಮಯ, ಸಾಮಗ್ರಿಗಳು ಇತ್ಯಾದಿ... ಅದರೊಂದಿಗೆ ಈ ಸಾಮಗ್ರಿಗಳ ಮೂಲವನ್ನೂ ಹುಡುಕಿಕೊಂಡು, ಆಲೋಚನೆ ಮಾಡಿಕೊಂಡು ಕೂತರೆ ‘ಆಗ್ಲಿಕ್ಕೆ-ಹೋಗ್ಲಿಕ್ಕೆ ಉಂಟಾ’?! ಎಲ್ಲರ ಗಮನವೂ ‘ಲೋಪ’ ಆಗದ ಹಾಗೆ ‘ಕ್ರಿಯೆ’ ಮಾಡುವುದು ಹೇಗೆ ಹೇಳುದರ ಬಗ್ಗೆಯೇ ಹೊರತು ಆ ‘ಆಚಾರ’ದ ಹಿಂದೆ ಇರುವ ‘ವಿಚಾರ’ದ ಮೇಲೆ ಅಲ್ಲ, ‘ದಯೆಯೇ ಧರ್ಮದ ಮೂಲ’ ಎನ್ನುವ ಸರಳ ಸತ್ಯದ ಕಡೆಗೆ ಅಲ್ಲ. ಇಲ್ಲಿ ಅವಕಾಶವಾದಿ ಪುರೋಹಿತರ ಪಾತ್ರವೂ ಇರಬಹುದು, ಆದರೆ ನಾನು ಎಲ್ಲರನ್ನೂ ಆ ವಿಭಾಗಕ್ಕೆ ಖಂಡಿತಾ ಸೇರಿಸುವುದಿಲ್ಲ.
ಆಸೆ: ಈ ವಿಷಯಕ್ಕೆ ಬರುವಾಗ ಮನುಷ್ಯನಿಗೆ ಮಿತಿಯೇ ಇಲ್ಲ ಎನ್ನುವುದು ಈಗ ಎಂದೆಂದಿಗಿಂತಲೂ ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ, ಅಲ್ಲವೇ? ಬಳಕೆದಾರನ ಗುರಿ ಏನು? ಆದಷ್ಟೂ ಕಡಿಮೆ ಖರ್ಚಿನಲ್ಲಿ, ಆದಷ್ಟೂ ಸುಲಭವಾಗಿ ಹಾಲು ಕೈಗೆ ಸಿಗಬೇಕು. ಸಾಕುವವನ ಗುರಿ ಏನು? ಆದಷ್ಟೂ ಕಡಿಮೆ ಖರ್ಚಿನಲ್ಲಿ, ಆದಷ್ಟೂ ಕೆಲಸ ಕಮ್ಮಿ ಮಾಡಿಕೊಂಡು ಹೆಚ್ಚು ಹೆಚ್ಚು ಉತ್ಪಾದಿಸಬೇಕು. ಇವೆರಡರ ಮಧ್ಯೆ ಬೇರೆಲ್ಲಾ ಗೌಣವಾಗುತ್ತವೆ.
ಆಸೆಯ ಬಗ್ಗೆ ಮತ್ತೊಂದು ವಿಷಯ: ಎಷ್ಟೆಷ್ಟೋ ಸಾವಿರ, ಲಕ್ಷ ರೂಪಾಯಿ ಎಲ್ಲೆಲ್ಲಿಯೋ ಖರ್ಚು ಮಾಡುತ್ತೇವೆ ನಾವು, ಆದರೆ ದನಗಳ ಮೇಲೆ ಖರ್ಚು ಮಾಡಲು ತಯಾರಿಲ್ಲ. ಮದುವೆ-ಉಪನಯನಕ್ಕೆ ಸಾವಿರಾರು ಜನರನ್ನು ಆಹ್ವಾನಿಸಿ ಲಕ್ಷಗಟ್ಟಲೆ ಖರ್ಚು ಮಾಡಲು ನಮಗೆ ಏನೂ ತೊಂದರೆ ಇಲ್ಲ; ಕಾರು, ಡಿಶ್ ಟಿ.ವಿ., ಇನ್ವರ್ಟರ್, ಕಂಪ್ಯೂಟರ್ ಹೀಗೆ ಅನೇಕಾನೇಕ ಹೊಸ ವಸ್ತುಗಳ ಖರೀದಿ ಮಾಡಲು ಕೂಡ ಹಿಂದೆ ಮುಂದೆ ನೋಡದೇ ಇರುವ ಕೃಷಿಕರು ಸುಮಾರು ಜನ ಇದ್ದಾರೆ - ಒಂದು ಕಡೆ ನಮ್ಮ ಜೀವನ ಹೆಚ್ಚು ಹೆಚ್ಚು ಸುಖಕರವಾಗಿಕೊಂಡು ಸಾಗುತ್ತಾ ಇರುವಾಗ ಇನ್ನೊಂದು ಕಡೆ ದೇವರು, ಅಮ್ಮ ಎಂದೆಲ್ಲಾ ನಾವು ಹೇಳುವ ದನದ ಜೀವನ ದುಸ್ಥಿತಿಯ ಕಡೆಗೆ ಹೋಗಿದೆ ಎಂದು ನಮಗೆ ಕಾಣುವುದಿಲ್ಲ, ಅದು ವಿಪರ್ಯಾಸ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೆಲವು ವಿಷಯಗಳ ಬಗ್ಗೆ ನಮಗೆ ನಿಜವಾಗಿ ಎಷ್ಟು ಕಾಳಜಿ ಇದೆ ಎನ್ನುವುದರ ಮೇಲೆ ನಮ್ಮ ನಿರ್ಧಾರಗಳು ಇರುತ್ತವೆ.
ಟೈಮೇ ಇಲ್ಲ: ಅದಲ್ಲದೆ, ಇಂದಿನ ನಾಗಾಲೋಟದ ಜೀವನದಲ್ಲಿ ಇದರ ಬಗ್ಗೆ ಆಲೋಚನೆ ಮಾಡಲು ಕೂಡ ಯಾರಿಗೆ ವ್ಯವಧಾನವಿದೆ?!! ಬೆಳಿಗ್ಗೆ ಆಪೀಸಿಗೆ ಹೊರಡುವಾಗ ಗಡಿಬಿಡಿಯಲ್ಲಿ ಕುಡಿಯುವ ಒಂದು ಗ್ಲಾಸ್ ಕಾಪಿಯಿರಬಹುದು, ಸರ್ಕಸ್ ಮಾಡಿ ಇಡೀ ಸಂಸಾರವನ್ನು ಪಾರ್ಕಿಗೆ ಕರೆದುಕೊಂಡು ಹೋದಾಗ ತಿನ್ನುವ ಐಸ್‍ಕ್ರೀಂ ಇರಬಹುದು - ತಿನ್ನುವುದರ ಬಗ್ಗೆ ಹೆಚ್ಚು ಆಲೋಚನೆ ಮಾಡಲು ಅನೇಕ ಬಾರಿ ಸಮಯವಿರುವುದಿಲ್ಲ, ಬಳಿಕ ಇದೇ ಅಭ್ಯಾಸ ಸಮಯ ಇರುವಾಗ ಕೂಡ ಮುಂದುವರೆಯುತ್ತದೆ. ‘ವೆಜಿಟೇರಿಯನ್’ ಆದರೆ ಸಾಕು, ಅದರಲ್ಲಿ ಇನ್ನೇನು ಒಳ್ಳೆದು-ಕೆಟ್ಟದು ನೋಡಲು ಇಲ್ಲ ಎಂದು ಹೆಚ್ಚಿನವರ ಭಾವನೆ ಇರುತ್ತದೆ, ಅಲ್ಲವೇ?
ದನ ಎಂದರೆ ಏನು? ಹೀಗೆ ಜನರು ಕೇಳುವ ದಿನ ದೂರ ಇಲ್ಲ. ಸದ್ಯಕ್ಕೆ ದಾರಿಬದಿಯಲ್ಲಿ ಬೇಕಾಬಿಟ್ಟಿ ಇರುವ ದನಗಳಿಂದಾಗಿ ಸುಮಾರು ಜನಕ್ಕೆ ದನ ಎಂದರೆ ಏನು ಎಂದು ಸ್ವಲ್ಪ ಗೊತ್ತಿದೆ, ಆದರೆ ಅದರ ಉಪಯೋಗ ಪಡೆಯುವವರಲ್ಲಿ ಎಷ್ಟು ಜನಕ್ಕೆ ದನದ ನಿಜವಾದ ಪರಿಚಯ ಇದೆ? ಅವರಿಗೆ ಈ ಜೀವಿಗಳನ್ನು ಸಮೀಪದಿಂದ ನೋಡಿಯೇ ಗೊತ್ತಿರುವುದಿಲ್ಲ, ಹೆಚ್ಚಿನವರಿಗೆ ಹಾಲು ಪ್ಯಾಕೇಟಿನಲ್ಲಿ ಸಿಗುತ್ತದೆ, ಅವರಿಗೆ ಮೂಲದ ಬಗ್ಗೆ ಆಲೋಚನೆ ಬರುವುದು ದುಸ್ಸಾಧ್ಯ. ಋಷಿ ಮೂಲ, ನದಿ ಮೂಲ ಎಂದಂತೆ ಹಾಲಿನ ಮೂಲ ಕೂಡ ಎಂದು ಭಾಸವಾಗುವ ಕಾಲ ದೂರ ಇಲ್ಲ.
ಅಜ್ಞಾನ: ಕೆಲವೊಮ್ಮೆ ಅಜ್ಞಾನದ ಮೂಲ ಧಾರ್ಮಿಕ ಅಥವಾ ಸಾಮಾಜಿಕ ಸಂಪ್ರದಾಯಗಳನ್ನು ವಿರೋಧಿಸಲು ಮನಸ್ಸು/ಧೈರ್ಯ ಇಲ್ಲದೇ ಇರುವುದರಲ್ಲಿರುತ್ತದೆ - ಆದರೆ ಅದು ಒಂದು ನೆಪ ಮಾತ್ರ ಎಂದು ಹೇಳುವಷ್ಟು ಸಣ್ಣ ಕಾರಣ. ಅಜ್ಞಾನಕ್ಕೆ ಮುಖ್ಯ ಕಾರಣ ಹೊಸದರ ಬಗ್ಗೆ ಉದಾಸೀನತೆ, ಸಂಶಯ, ಹೆದರಿಕೆ - ಕೆಲವೊಮ್ಮೆ ಹೊಸ ಮಾಹಿತಿಯ ಅಲಭ್ಯತೆ. ಮೊದಲಿನ ಕಾಲದಲ್ಲಿ ಕಟ್ಟಿಗೆ ಹೊಗೆಯನ್ನು ತಿನ್ನುತ್ತಾ ಮಹಿಳೆಯರು ಅಡಿಗೆ ಮಾಡುತ್ತಿದ್ದರು, ಅದರರ್ಥ ಅದು ಆರೋಗ್ಯಕ್ಕೆ ಒಳ್ಳೆಯದು ಎಂದೋ? ಇನ್ನೂ ಹಾಗಿರುವ ಅನೇಕ ಉದಾಹರಣೆಗಳು ಸಿಗಬಹುದು. ಹಾಲಿನಲ್ಲಿ ನಮ್ಮ ದೇಹಕ್ಕೆ ಒಳ್ಳೆಯದಿರುವ ಕೆಲವು ಅಂಶಗಳು ಖಂಡಿತಾ ಇವೆ, ಆದರೆ ಕೆಟ್ಟದನ್ನುಂಟುಮಾಡುವ ಅಂಶಗಳು ಕೂಡ ಇವೆಯೇ ಎಂದು ಯಾರಾದರೂ ಆಲೋಚನೆ ಮಾಡಿದ್ದೀರೊ? ಈಗ ವಿಜ್ಞಾನ ಬಹಳ ಮುಂದುವರೆದಿದೆ, ಪ್ರತಿಯೊಂದು ವಸ್ತುವಿನಲ್ಲಿ ನಿಜವಾಗಿ ಇರುವ ರಾಸಾಯನಿಕ ಗುಣಗಳು ಯಾವುವು, ಅದು ನಮ್ಮ ದೇಹಕ್ಕೆ ಒಳ್ಳೆಯದೋ ಕೆಟ್ಟದೋ ಇತ್ಯಾದಿ ವಿಷಯಗಳನ್ನು ಬಗ್ಗೆ ನಿತ್ಯವೂ ಸಂಶೋಧನೆ ನಡೆಯುತ್ತಾ ಇದೆ. ಹಾಗಿದ್ದಲ್ಲಿ ಹಾಲು ಯಾವ ವಿಭಾಗಕ್ಕೆ ಸೇರುತ್ತದೆ? ಅದಕ್ಕಿಂತಲೂ ಉತ್ತಮವಾದ ಪರ್ಯಾಯ ಆಹಾರ ಇದೆಯೋ? ಹೀಗೆಲ್ಲಾ ಆಲೋಚನೆ ಮಾಡುವವರು ವಿರಳ; ಸಾಂಪ್ರದಾಯಿಕ ಆಹಾರದಲ್ಲಿ ಒಳ್ಳೆಯದು ಮಾತ್ರ ಇರಬಹುದಷ್ಟೆ, ಹಾಳು ಇರಲು ಸಾಧ್ಯವೇ ಇಲ್ಲ ಎನ್ನುವ ಭ್ರಮೆಯಲ್ಲಿರುತ್ತಾ ಹೆಚ್ಚಿನ ಮಾಹಿತಿ ಪಡೆಯುವ ಶ್ರಮ ತೆಗೆದುಕೊಳ್ಳದೆ ಇರುತ್ತಾರೆ ಅನೇಕರು. ಈಗಿನ ವಿಜ್ಞಾನಿಗಳಿಗೆ ಏನೂ ಸರಿಯಾಗಿ ಗೊತ್ತಿಲ್ಲ, ಹಾಲು-ತುಪ್ಪದಲ್ಲಿರುವ ಅದ್ಭುತ ಗುಣಗಳ ಬಗ್ಗೆ ಉದಾಸೀನತೆ ತೋರಿಸುತ್ತಾರೆ, ಮೊದಲಿನವರಿಗಾದರೆ ಜಾಸ್ತಿ ತಿಳಿದಿತ್ತು ಅಂತ ಹೇಳುವವರು ಕೂಡ ಪರ್ಯಾಯ ವಸ್ತುಗಳ ಬಗ್ಗೆ ಓದದೇ ಸುಮ್ಮನಿರುತ್ತಾರೆ. ಹಳೆಯದಕ್ಕೆ ಸಮವಾಗಿ ಹೊಸದಿರಲು ಸಾಧ್ಯವೇ ಇಲ್ಲ ಎನ್ನುವ ಭ್ರಮೆಯೇ ಇದಕ್ಕೆ ಕಾರಣ. ಇದೇ ರೀತಿ ಸೆಗಣಿ ಗೊಬ್ಬರದ ಬಗ್ಗೆಯೂ ಹೇಳಬಹುದು. ಅದು ಖಂಡಿತಾ ಒಳ್ಳೆಯದೇ, ಆದರೆ ಮಾನವೀಯ ಪರ್ಯಾಯಗಳು ಇದ್ದರೆ?
ಅಸಡ್ಡೆ, ಕೃತಕ ಅಸಹಾಯಕತೆ: ಎಲ್ಲದಕ್ಕಿಂತ ಮುಖ್ಯವಾಗಿ, ಅಲ್ಲಿ-ಇಲ್ಲಿ ಆಲೋಚನೆ-ಮಾತುಕತೆ ಬಂದರೂ ಅದಕ್ಕೆ ಯಾರೋ ಹಾರಿಕೆಯ/ತಮಾಷೆಯ ಉತ್ತರ ಕೊಡುತ್ತಾರೆ ಅಥವಾ ‘ಇದೆಲ್ಲಾ ನಮ್ಮ ಕೈಲಿ ಸರಿ ಮಾಡಲು ಸಾಧ್ಯವಿಲ್ಲದ ವಿಷಯ’ ಎಂದು ಉಳಿದವರೂ ಕೈ ಚೆಲ್ಲುವ ಹಾಗೆ ಮಾಡುತ್ತಾರೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಜನರು ಸಂಪ್ರದಾಯ-ಧಾರ್ಮಿಕತೆ-ಆಸೆ-ಅಜ್ಞಾನ-ಹೆದರಿಕೆ-ಸಂಶಯ-ಉದಾಸೀನತೆ ಈ ಎಲ್ಲದರ ಮಧ್ಯೆ ಮುಳುಗಿ ಹೋಗಿ ಪಾಪದ ದನ-ಎತ್ತುಗಳ ಮೇಲೆ ದೌರ್ಜನ್ಯ ಮುಂದುವರೆಸುತ್ತಾ ಹೋಗುತ್ತಾರೆ.
ಕೊಲ್ಲದಿದ್ದ ಮಾತ್ರಕ್ಕೆ ಹಿಂಸೆ ಇಲ್ಲ ಎಂದೋ?
ಇದು ‘ಮಧ್ಯಮ’ರ ಕಥೆ. ಕೆಲವರು ‘ನಾವು ಕಟುಕರಿಗೆ ಮಾರುವುದಿಲ್ಲ, ಸಾಯುವ ತನಕವೂ ನೋಡಿಕೊಳ್ಳುತ್ತೇವೆ’ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ, ಆದರೆ ಮೇಲೆ ಹೇಳಿದ ಅಂಶಗಳಲ್ಲಿ ಉಳಿದಂತೆ ಹೆಚ್ಚು ಕಡಿಮೆ ಬೇರೆ ಎಲ್ಲಾ ವಿಧದ ಕ್ರೌರ್ಯವನ್ನೂ ತೋರಿಸುತ್ತಿದ್ದೇವೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ.
ಮುಂದೆ ಏನು ಕಥೆ? ಆಲೋಚನೆ ಮಾಡಿ
ವ್ಯಾಪಾರೀಕರಣ ಬೆಳೆಯುತ್ತಾ ಇರುವ ರೀತಿ ನೋಡಿದರೆ ಒಟ್ಟಾರೆ ಸ್ಥಿತಿ ಇನ್ನೂ ಹಾಳಾಗುವ ಸಾಧ್ಯತೆ ನಿಚ್ಚಳವಾಗಿದೆ. ಆದರೂ ಸ್ವಲ್ಪ ಆಶಾವಾದಿಯಾಗಿ ನಿಮ್ಮಲ್ಲಿ ಕೆಲವರಾದರೂ ಈ ಬಗ್ಗೆ ಆಲೋಚನೆ ಮಾಡಿ ಈ ಕ್ರೌರ್ಯವನ್ನು, ದೌರ್ಜನ್ಯವನ್ನು ಕಡಿಮೆ ಮಾಡಲು ಪ್ರಯತ್ನ ಮಾಡುವಿರಿ ಎಂದು ನಂಬುತ್ತೇನೆ.
ಒಂದು ಕಡೆಯಲ್ಲಿ ದನವನ್ನು ದೇವರು, ಅಮ್ಮ ಎಂದೆಲ್ಲಾ ಪೂಜೆ ಮಾಡಿ ಇನ್ನೊಂದು ಕಡೆ ಕ್ರೂರವಾಗಿ ನಡೆಸಿಕೊಳ್ಳುವ ನಾವು ‘ನಿಜವಾಗಿ ಕ್ರೌರ್ಯ ಎಂದರೆ ಏನು’, ‘ದನದ ಯಾವ ಸ್ವಾತಂತ್ರ್ಯ, ಹಕ್ಕುಗಳನ್ನು ನಾವು ಕಸಿದುಕೊಳ್ಳುತ್ತಾ ಇದ್ದೇವೆ’ ಇತ್ಯಾದಿ ವಿಷಯಗಳ ಬಗ್ಗೆ ಸ್ವಲ್ಪ ಆಲೋಚನೆ ಮಾಡಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ನನ್ನ ಅಭಿಪ್ರಾಯ. ಬಹುಷಃ ಹೆಚ್ಚಿನವರು ಈಗ ಮಾಡುತ್ತಾ ಇರುವದು ಆತ್ಮವಿಮರ್ಶೆ ಅಲ್ಲ, ಆತ್ಮವಂಚನೆ. ತಡವಾದರೂ ಕೂಡ, ಈಗಲಾದರೂ ಬದಲಾಗಬಹುದಲ್ಲಾ? ತಪ್ಪು ದಾರಿಯನ್ನು ಬಿಟ್ಟು ಸರಿ ದಾರಿಯಲ್ಲಿ ನಡೆಯುವುದರಲ್ಲಿ ಸಣ್ಣತನ ಇಲ್ಲ, ಅಲ್ಲವೇ?
ದನ ಸಾಕುವವರಲ್ಲಿ ಕೆಲವರಿಗೆ ಸಾಕಷ್ಟು ಅಂತಃಕರುಣೆ ಇರುತ್ತದೆ, ತಮ್ಮ ಇತಿಮಿತಿಗಳ ಒಳಗೆ ಚೆನ್ನಾಗಿಯೇ ನೋಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ; ಅಂಥವರಲ್ಲಿ ಒಂದು ವಿನಂತಿ: ನೀವು ಈಗ ತೋರಿಸುವ ಪ್ರೀತಿಯನ್ನು ಬರೀ ಸುಳ್ಳು ಎಂದು ನಾನು ಅವಹೇಳನ ಮಾಡುತ್ತಾ ಇಲ್ಲ, ಆದರೆ ಇನ್ನೂ ಆಳಕ್ಕೆ ಇಳಿದು ಆಲೋಚನೆ ಮಾಡಿ, ಕೆಲವು ವಿಷಯಗಳಲ್ಲಿ ನೀವು ಗೊತ್ತಿದ್ದೋ/ಗೊತ್ತಿಲ್ಲದೆಯೋ ಎಸಗುವ ದೌರ್ಜನ್ಯವನ್ನು ಕಡಿಮೆ ಮಾಡಲು ಅಥವಾ ಇಲ್ಲದೇ ಇರುವ ಹಾಗೆ ಮಾಡಲು ಪ್ರಯತ್ನ ಮಾಡಿ; ಆಗ ನಿಮ್ಮ ಪ್ರೀತಿಗೆ ಇನ್ನೂ ಒಂದು ಸುಂದರವಾದ ರೂಪ ಬರಬಹುದು.
ನಮಗೆ ಹಾಲು ನಿಜವಾಗಿಯೂ ಬೇಕಾ? ಅದಕ್ಕೆ ಉತ್ತಮವಾದ ಸಸ್ಯಜನ್ಯ ಪರ್ಯಾಯ ಆಹಾರ ಇದೆಯೇ? ಇದೆ ಎಂದು ಸಂಶೋಧನೆ ಮಾಡಿದ ಎಷ್ಟೋ ಜನ ಹೇಳುತ್ತಾರೆ. ಅಂತರ್ಜಾಲಲ್ಲಿ ಇದರ ಬಗ್ಗೆ ಹುಡುಕಿ ನೋಡಿ, ನಿಮಗೆ ಬೇಕಾದಷ್ಟು ಮಾಹಿತಿ ಸಿಗುತ್ತದೆ, ಇದರ ಪರ-ವಿರೋಧ ಲೇಖನಗಳನ್ನು ಓದಿ ನೀವೇ ನಿರ್ಧಾರ ಮಾಡಿ.
ಸರಿಯಪ್ಪಾ, ಆರೋಗ್ಯದ ದೃಷ್ಟಿಯಲ್ಲಿ ನಿಮಗೆ ಇನ್ನು ಕೂಡ ನಂಬಿಕೆ ಬರಲಿಲ್ಲ ಅಂತವೇ ಪರಿಗಣಿಸೋಣ, ಆದರೆ ಹೋಮಕ್ಕೆ ತುಪ್ಪವನ್ನು ಸುರಿಯುವುದನ್ನು ನಿಲ್ಲಿಸಬಹುದಲ್ಲವೇ ಕಡೇಪಕ್ಷ. ಅದಕ್ಕೂ ಏತಕ್ಕೆ ಅಷ್ಟೆಲ್ಲಾ ಮುಜುಗರ? ಅಲ್ಲವೇ? ಮಾತ್ರವಲ್ಲ, ದನಗಳು ಚೆನ್ನಾಗಿ ಬದುಕುವ ಹಾಗೆ ಕೂಡ ಮಾಡಲು ಪ್ರಯತ್ನ ಮಾಡಬಹುದಲ್ಲಾ?
ಒಟ್ಟಿನಲ್ಲಿ ದನಗಳನ್ನು ಸಾಕುವುದು ಯಾಕಾಗಿ? ಅದರ ಉತ್ಪನ್ನಗಳು ನಮಗೆ ಬೇಕು ಎಂದು, ಅಲ್ಲವೇ? ಆ ಅಗತ್ಯವನ್ನೇ ಕಡಿಮೆ ಮಾಡಿದರೆ ಅಥವಾ ಕೊನೆಗೆ ಬೇಡ ಎಂದು ಮಾಡಿದರೆ ಹೇಗೆ? ಅದು ನಿಜವಾದ ಪರಿಹಾರ ಈ ಸಮಸ್ಯೆಗೆ. ಬಿಡುವುದು ಸುಲಭ ಅಲ್ಲ ಎಂದು ಗೊತ್ತಿದೆ, ಮಾನವೀಯತೆಯೊಂದಿಗೆ ದನ ಸಾಕುವುದು ಸುಲಭ ಅಲ್ಲ ಎಂದೂ ಗೊತ್ತಿದೆ, ಅದಕ್ಕೇ ನಾನು ಹೇಳುತ್ತಾ ಇರುವದು – ಒಂದೇ ಬಾರಿಗೆ ಸಾಧ್ಯ ಆಗದಿದ್ದರೆ ಹಂತ ಹಂತವಾಗಿ ದನದ ಉತ್ಪನ್ನಗಳನ್ನು ಬಿಡುವಾ ಎಂದು. ನಮ್ಮ ಸ್ವಾರ್ಥ ಕಡಿಮೆ ಆದ ಹಾಗೆ ಸ್ವಾಭಾವಿಕವಾಗಿ ನಮಗೆ ದನಗಳ ಅಗತ್ಯವೂ, ಅವಕ್ಕೆ ಕಷ್ಟವೂ ಕಡಿಮೆ ಆಗುತ್ತದೆ.
ನಮ್ಮ ಅಹಂಭಾವ, ಆಸೆ, ಸಂಪ್ರದಾಯ - ದನ, ಎತ್ತುಗಳ ಕಷ್ಟ: ಇವೆರಡನ್ನೂ ತೂಗಿ ನೋಡಿ. ಕೊನೆಗೂ ನೀವು ನಮ್ಮ ಸ್ವಾರ್ಥವೇ ಮುಖ್ಯ, ನನಗೆ ಐಸ್‍ಕ್ರೀಂ ತಿನ್ನದೇ ಇರಲು ಸಾಧ್ಯವೇ ಇಲ್ಲ, ನಾನು ಹೋಮಕ್ಕೆ ತುಪ್ಪವನ್ನೇ ಸುರಿಯುವೆ, ಹಾಲು-ಮೊಸರು-ಬೆಣ್ಣೆ-ತುಪ್ಪ-ಮಜ್ಜಿಗೆ-ಕಾಪಿ-ಚಾ ಇಲ್ಲದೆ ಒಂದು ದಿನವೂ ಕಳೆಯಲು ತಯಾರಿಲ್ಲ ಎಂದೆಲ್ಲಾ ಅಂದುಕೊಂಡರೆ ಸರಿ, ಅದು ನೀವು ಆಯ್ದುಕೊಂಡ ಮಾರ್ಗ. ‘ಕಲ್ಲ ನಾಗರಕ್ಕೆ ಹಾಲೆರೆದು ದಿಟ ನಾಗರಕ್ಕೆ ಕಲ್ಲೆಸೆವ’ ಪಂಗಡಕ್ಕೆ ಸೇರಿದ ಹಾಗೆ ಆ ಮಾರ್ಗ. ಅದು ಮನವರಿಕೆಯಾದ ಮೇಲೆಯೂ ಅಂತಹ ಹೋಮದಿಂದ ಪುಣ್ಯ ಸಿಗುತ್ತದೆ ಎಂದು ನೀವು ಅಂದುಕೊಂಡರೆ ಅಥವಾ ದನವನ್ನು ನಾವು ಪ್ರೀತಿಯಿಂದ ನೋಡಿಕೊಳ್ಳುತ್ತಾ ಇದ್ದೇವೆ ಎಂದು ಹೇಳಿದರೆ ನನಗೆ ನಗು ಬರುತ್ತದೆ, ಅಷ್ಟೆ.
ಪುರೋಹಿತ ವರ್ಗಕ್ಕೆ ಒಂದು ಸಂದೇಶ: ದುರದೃಷ್ಟವಶಾತ್ ನಿಮ್ಮಲ್ಲಿಯೂ ಇದರ ಬಗ್ಗೆ ಹೆಚ್ಚು ಆಲೋಚನೆ ಮಾಡಿದವರು ಇದ್ದ ಹಾಗೆ ಕಾಣುವುದಿಲ್ಲ. ಗಡಿಬಿಡಿ, ಅಹಂಕಾರ, ಅಜ್ಞಾನ ಇತ್ಯಾದಿಗಳಿಂದ ಪ್ರೇರೇಪಿತರಾದ ಜನಗಳು ಕೂಡ ನಿಮ್ಮ ಮೇಲೆ ಸಾಕಷ್ಟು ಒತ್ತಡ ಹೇರುತ್ತಾರೆ ಎಂದೂ ಗೊತ್ತಿದೆ. ಆದರೂ ಇವೆಲ್ಲವನ್ನೂ ಸಾಧ್ಯವಾದಷ್ಟೂ ಮೆಟ್ಟಿ ನಿಂತು ಈ ಅಹಿಂಸೆಯ ಪಥಲ್ಲಿ ನಡೆಯಲು ನೀವು ಜನರನ್ನು ಪ್ರೇರೇಪಿಸಿದರೆ ಅತ್ಯಂತ ಸಂತೋಷ. ದಯವಿಟ್ಟು ಆಲೋಚನೆ ಮಾಡಿ ನೋಡಿ, ಇದು ಖಂಡಿತವಾಗಿಯೊ ದೇವರು ಮೆಚ್ಚುವ ಮಹಾಕಾರ್ಯ.
ಇದನ್ನು ಈಗಾಗಲೇ ಅರ್ಥ ಮಾಡಿಕೊಂಡು ಮಾನವೀಯ ದಿಕ್ಕಿನಲ್ಲಿ ನಡೆಯುವವರಿಗೆ, ಆಲೋಚನೆ ಮಾಡುವವರಿಗೆ ಒಂದು ಸಂದೇಶ - ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿ, ಉಳಿದವರನ್ನೂ ಈ ಅಹಿಂಸಾ ಕ್ರಾಂತಿಯಲ್ಲಿ ಸೇರಿಸಿಕೊಂಡು ಮುಂದುವರೆಯಿರಿ.
ಇತಿ,
ಕೃಷ್ಣ ಶಾಸ್ತ್ರಿ.
ವಿ.ಸೂ. ಇದಕ್ಕೆ ಸಂಬಂಧಪಟ್ಟ ಹಾಗೆ ನಾನು ಬರೆದ ಇನ್ನೆರಡು ಲೇಖನಗಳಿವೆ, ದಯವಿಟ್ಟು ಸಮಯ ಸಿಕ್ಕಿದಾಗ ನೋಡಿ:
ಪ್ರಶ್ನೋತ್ತರಗಳು
ನಾವು ನಿರ್ಮಲ ಮನಸ್ಸಿನೊಂದಿಗೆ ಪೂಜ್ಯ ರೂಪದಲ್ಲಿ ನೋಡುವ ಗೋವನ್ನು ನೀವು ಗುಲಾಮ ಎಂದು ಹೇಳಿ ಅವಹೇಳನ ಮಾಡಿದ್ದನ್ನು ನೋಡಿ ಬಹಳ ಬೇಜಾರಾಯಿತು, ಇದು ಸರಿಯೇ?
ಈ ಲೇಖನದಲ್ಲಿರುವುದು ಅವಹೇಳನವೂ ಅಲ್ಲ, ಅಪಹಾಸ್ಯವೂ ಅಲ್ಲ. ಕಟು ಸತ್ಯದ ಬಗ್ಗೆ ಆಲೋಚನೆ ಮಾಡಲು ನಿಮ್ಮನ್ನು ಪ್ರೇರೇಪಿಸುವ ಒಂದು ಪ್ರಯತ್ನ, ಅಷ್ಟೆ. ಲೇಖನದ ಶೀರ್ಷಿಕೆ ವ್ಯಂಗ್ಯಭರಿತವಾದದ್ದು, ಒಪ್ಪುತ್ತೇನೆ; ಆದರೆ ಆಳವಾಗಿ ನೋಡಿದಾಗ ಅದುವೇ ಸತ್ಯ ಎಂದು ಗೋಚರವಾಗುತ್ತದೆ, ಇಂದು ಗೋವುಗಳನ್ನು ಅನೇಕ ಜನರು ಸಾಕುವ ರೀತಿ ನೋಡಿದರೆ ದೇವರು ಎಂದು ಹೇಳುವುದಕ್ಕಿಂತಲೂ ಗುಲಾಮ ಎಂದು ಹೇಳುವುದೇ ಹೆಚ್ಚು ಸೂಕ್ತ ಎಂದು ಕಾಣುತ್ತದೆ.
ಈ ಲೇಖನದಲ್ಲಿ ಬರೆದ ಅನೇಕ ಕೆಟ್ಟ ಕ್ರಮಗಳನ್ನು ಇಂದಿನ ಕಾಲದಲ್ಲಿ ನೀವು ಅನುಸರಿಸುವುದಿಲ್ಲ ಎಂದು ಹೇಳಿದರೆ ನನಗೆ ನಂಬಲು ಕಷ್ಟವಾಗುತ್ತದೆ, ಆದರೆ ಹೌದು ಎಂದಾದರೆ ನಿಮ್ಮ ಜೀವನಕ್ರಮವನ್ನು ನಾನು ಹೆಚ್ಚು ತಿಳಿಯಲು ಉತ್ಸುಕನಾಗಿದ್ದೇನೆ. ಅಷ್ಟಾಗಿಯೂ ಬಹುಸಂಖ್ಯಾಕರ ಮಟ್ಟಿಗೆ ಹೇಳುವುದಾದರೆ ದನ ನಿಜಕ್ಕೂ ಗುಲಾಮ ಸ್ಥಾನಲ್ಲಿದೆ ಎಂಬುದು ನನ್ನ ಖಚಿತವಾದ ಅಭಿಪ್ರಾಯ.
‘ಕಲ್ಲನಾಗರ ಕಂಡರೆ ಹಾಲನೆರೆಯೆಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ’ ಎಂದು ತುಂಬಾ ಹಿಂದೆಯೇ ಆಸ್ತಿಕರ ಪೊಳ್ಳು ಭಕ್ತಿಯನ್ನು ಬಸವಣ್ಣ ಎತ್ತಿ ತೋರಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.
ಒಟ್ಟಿನಲ್ಲಿ ನಾನು ಕೇಳುವುದು ಏನು ಎಂದರೆ – ನೀವು ಗೋವನ್ನು ದೇವರು ಎಂದು ಹೇಳಬೇಡಿ ಎಂದು ಅಲ್ಲ, ಆದರೆ ಆ ಸ್ಥಾನಕ್ಕೆ ತಕ್ಕ ಹಾಗೆ ಗೋವನ್ನು ನಡೆಸಿಕೊಳ್ಳುತ್ತಾ ಇದ್ದಿರಾ ಎಂದು.
ನಮಗೆ ಪೂಜ್ಯವಾದ ವೇದ-ಪುರಾಣ ಇತ್ಯಾದಿ ಯಾವುದರಲ್ಲಿಯೂ ಗವ್ಯೋತ್ಪನ್ನ ವರ್ಜ್ಯ ಎಂದು ಹೇಳಲಿಲ್ಲವಲ್ಲ? ಮಾತ್ರವಲ್ಲ ಹಾಲು-ತುಪ್ಪ ಇತ್ಯಾದಿಗಳ ಉಪಯೋಗವನ್ನು ಅನೇಕ ವಿಧಿಗಳಲ್ಲಿ ನಿರ್ದೇಶಿಸಿದ್ದಾರೆ – ಹಾಗಿರುವಾಗ ಅದನ್ನು ತ್ಯಜಿಸಿ ಎಂದು ನೀವು ಹೇಳುವುದು ಎಷ್ಟು ಸರಿ?
ಚಾರಿತ್ರಿಕವಾಗಿ ನೋಡಿದರೆ, ಮೊದಲು ಮನುಷ್ಯನಿಗೆ ದನ ಮೊದಲಾದ ಪ್ರಾಣಿಗಳಿಂದ ಅನೇಕ ಪ್ರಯೋಜನಗಳು ಕಂಡು ಬಂತು, ಹಾಗಾಗಿ ಮನುಷ್ಯರು ದನ-ಎತ್ತುಗಳನ್ನು ಸಾಕುಪ್ರಾಣಿಗಳಾಗಿ ಉಪಯೋಗಿಸಲು ಶುರುಮಾಡಿದರು. ಕೃತಜ್ಞತೆಯೊಂದಿಗೆ ಅವುಗಳಿಂದ ಆಗುವ ಉಪಕಾರಗಳನ್ನು ಗುರುತಿಸಿ, ದೇವರು ಎನ್ನುವ ಬಿರುದನ್ನೂ ಕೊಟ್ಟರು, ವಿಧಿಗಳಲ್ಲಿ ಗವ್ಯೋತ್ಪನ್ನಗಳಿಗೆ ಶ್ರೇಷ್ಠವಾದ ಸ್ಥಾನವನ್ನೂ ಕೊಟ್ಟರು. ಗವ್ಯೋತ್ಪನ್ನಗಳಿಗೆ ಅನೇಕ ಒಳ್ಳೆ ಗುಣಗಳೂ ಇವೆ, ಇದು ವೈಜ್ಞಾನಿಕ ಸತ್ಯ ಎನ್ನುವ ಅಭಿಪ್ರಾಯ ಕೂಡ ಅನೇಕರಲ್ಲಿದೆ.
ಆದರೆ ಒಟ್ಟಿನಲ್ಲಿ ಅಂದಿನ ಕಾಲದಲ್ಲಿ ದನಗಳ ಮೇಲೆ ದೌರ್ಜನ್ಯ ಕಡಿಮೆ ಇತ್ತು, ಮಾತ್ರವಲ್ಲ ಇದ್ದ ಕ್ರೌರ್ಯ ಹೆಚ್ಚಾಗಿ ಅಗತ್ಯಗಳನ್ನು ಪೂರೈಸುವ ಮಟ್ಟಿಗೆ ಮಾತ್ರ ಸೀಮಿತವಾಗಿತ್ತು. ಒಟ್ಟಾರೆ ಕ್ರೌರ್ಯ ಕಡಿಮೆ ಇದ್ದದರಿಂದಾಗಿಯೂ, ಸಹನೆ-ಪ್ರೀತಿ-ಅಗತ್ಯ ಹೆಚ್ಚು ಇದ್ದದರಿಂದಾಗಿಯೂ ದನ ಸಾಕುವುದು ತಪ್ಪು ಎನ್ನುವ ಭಾವನೆ ಹೆಚ್ಚಾಗಿ ಯಾರಿಗೂ ಬರಲಿಲ್ಲ.
ಆದರೆ ಹಿಂದೂ ಧರ್ಮ ಹೇಗೆ ಬೆಳೆಯಿತು, ಉಳಿಯಿತು ಎಂದು ನೀವೇ ಆಲೋಚನೆ ಮಾಡಿ ನೋಡಿ. ಕಾಲ ಉರುಳಿದಂತೆ ಶ್ರೇಷ್ಠ ಆಲೋಚನೆಗಳನ್ನು ಒಪ್ಪಿಕೊಂಡು ಹೆಚ್ಚು ಉದಾತ್ತವಾಗಿ ಬೆಳೆದ ಹಿರಿಮೆ ಇದೆ ನಮ್ಮ ಧರ್ಮಕ್ಕೆ. ನಚಿಕೇತನಂತಹ ಧೀರರು ಆಚಾರದಲ್ಲಿರುವ ವ್ಯಂಗ್ಯವನ್ನು ಪ್ರಶ್ನಿಸಲು ಹಿಂದೆ ಮುಂದೆ ನೋಡಿರಲಿಲ್ಲ, ಅಂತಹವರನ್ನು ಗೌರವಿಸುತ್ತೇವೆ ನಾವು. ವೈದಿಕ ಧರ್ಮವನ್ನು ಧಿಕ್ಕರಿಸಿ ಹುಟ್ಟಿದ ಬೌದ್ಧ, ಜೈನ ಧರ್ಮಗಳನ್ನು ಗೌರವಿಸಲು ಕಲಿತಿದ್ದೇವೆ ನಾವು. ಹಾಗಿರುವಾಗ ಹಿಂದಿನವರು ಹೇಳಿದ್ದಾರೆ ಎಂಬ ಮಾತ್ರಕ್ಕೆ ಹಳೆಯ ಆಚಾರಗಳನ್ನು ಸ್ವಲ್ಪವೂ ಬದಲಾಯಿಸಲು ತಯಾರಿಲ್ಲ ಎಂದರೆ ಅದು ಸರಿಯೇ? ಬೇರೆ ಎಷ್ಟೋ ವಿಷಯಗಳಲ್ಲಿ ಅನುಕೂಲಶಾಸ್ತ್ರ ಮಾಡಲು ತಯಾರಿರುವ ನಾವು ಈ ವಿಷಯದಲ್ಲಿ ಯಾಕಾಗಿ ಹಠ ಹಿಡಿಯುವುದು?
ನಮ್ಮ ಬಳಿ ಹೋಮ ಮಾಡಲು ಹಣಕಾಸು ಇಲ್ಲದಿದ್ದರೆ ಕದ್ದು ತಂದ ದುಡ್ಡಿನಲ್ಲಿ ಮಾಡಿದರೆ ಪುಣ್ಯ-ಫಲ ಸಿಗಬಹುದೇ? ಹಾಗೆಯೇ, ಕ್ರೂರ-ದೌರ್ಜನ್ಯಗಳ ಮೂಲದಿಂದ ಬಂದ ಗವ್ಯೋತ್ಪನ್ನ ನಿಜಕ್ಕೂ ಸಮರ್ಪಣಾಯೋಗ್ಯ ಎಂದು ನೀವು ಭಾವಿಸುತ್ತೀರಾ? ಆಚಾರ ದೊಡ್ಡದೋ ಅಥವಾ ಆಚಾರದ ಹಿಂದೆ ಇರುವ ವಿಚಾರ ದೊಡ್ಡದೋ? ಇದು ನಿಮಗೆ ನೀವೇ ಉತ್ತರಿಸಬೇಕಾದ ಪ್ರಶ್ನೆ.
ಹಳೇ ಕಾಲದ ಬಗ್ಗೆ ಇನ್ನೊಂದು ಮಾತು ನಿಮ್ಮ ಗಮನಕ್ಕೆ: ಒಂದು ಸಂಸ್ಕೃತ ಶ್ಲೋಕದ ತುಣುಕು ಓದಿ - ‘ಪರೋಪಕಾರಾಯ ದುಹಂತಿ ಗಾವಃ’ (ಗೋವುಗಳು ಪರೋಪಕಾರಕ್ಕಾಗಿ ಹಾಲನ್ನು ಕೊಡುತ್ತವೆ) – ಇಲ್ಲಿ ಪರೋಪಕಾರವನ್ನು ಎತ್ತಿ ಹಿಡಿಯುವ ಪ್ರಯತ್ನದಲ್ಲಿ ಮನುಷ್ಯನ ಸ್ವಾರ್ಥ ಕೂಡ ನಯವಾಗಿ ಮುಚ್ಚಿ ಹೋದದ್ದು ಕಾಣುತ್ತದೆ.
ಹೋಮಕ್ಕೆ ತುಪ್ಪದ ಬದಲು ಏನು ಹಾಕುವುದು? ಕ್ರಿಯೆಗಳಲ್ಲಿ ಹಾಲಿನ ಬದಲು ಏನು ಉಪಯೋಗಿಸುವುದು?
ತುಪ್ಪದ ಬದಲು ಏನಾದರೂ ಹಾಕುವ ಅನಿವಾರ್ಯತೆ ಇದೆಯಾ? ಹಾಗೂ ಬೇಕಿದ್ದರೆ ವನಸ್ಪತಿ ತುಪ್ಪ ಹಾಕಿದರೆ ಸಾಕಾಗಲೂ ಬಹುದು, ಪ್ರಯೋಗ ಮಾಡಿ ನೋಡಬೇಕು. ಹಾಲಿನ ಬದಲು ಸುಲಭವಾಗಿ ಕಾಯಿ ಹಾಲನ್ನೇ ಬಳಸಬಹುದು. ಅದೂ ಅಲ್ಲದಿದ್ದರೆ ಬೇರೆ ರೀತಿಯ ಸಸ್ಯಮೂಲದ ಹಾಲು ಸಿಗುತ್ತದೆ.
ಹಾಗೆ ನೋಡುತ್ತಾ ಹೋದರೆ ಹೋಮಕ್ಕೆ ಸುರಿಯುವುದೆಲ್ಲವೂ ವ್ಯರ್ಥ, ಅದರ ಬದಲು ದಾನ ಮಾಡಿದರೆ ಒಳ್ಳೆಯದೇನೋ?
ಯಾರಾದರೂ ಹಾಗಿರುವ ನಿಲುವು ತೆಗೆದುಕೊಂಡರೆ ವೈಯಕ್ತಿಕವಾಗಿ ನನ್ನ ಬೆಂಬಲ ಖಂಡಿತಾ ಇರುತ್ತದೆ. ಆದರೆ ಇಲ್ಲಿ ನಾನು ಗೋವಿನ ಮೇಲೆ ಆಗುವ ದೌರ್ಜನ್ಯದ ಮೇಲೆ ವಿಶೇಷವಾದ ಗಮನ ಕೊಟ್ಟು ಅದರ ಬಳಕೆಯನ್ನು ನಿಲ್ಲಿಸುವ ಬಗ್ಗೆ ಒತ್ತಿ ಹೇಳುತ್ತಾ ಇರುವುದು, ಅಷ್ಟೆ. ಅದರರ್ಥ ನಾನು ಬೇರೆ ವಸ್ತುಗಳನ್ನು ಹೋಮಕ್ಕೆ ಸುರಿವದನ್ನು ಸಮರ್ಥಿಸುತ್ತೇನೆ ಎಂದಲ್ಲ.
ನಮ್ಮಿಂದಲೂ ಎಷ್ಟೋ ಹೆಚ್ಚಿನ ಕ್ರೌರ್ಯ ಮಾಡುವವರಿದ್ದಾರೆ, ಆದರೆ ನೀವು ಹಿಂದೂಗಳನ್ನು ಮಾತ್ರ ಯಾಕೆ ಟೀಕೆ ಮಾಡುವುದು?
ನಮ್ಮಲ್ಲಿ ಹಾಲಿನ ಉತ್ಪನ್ನಗಳ ಬಳಕೆ ಹೇಗಿದ್ದರೂ ವ್ಯಾಪಕವಾಗಿ ಇದೆಯಲ್ಲವೇ, ಹೀಗಾಗಿ ಇದು ನಮಗೆ ಅನ್ವಯವಾಗುವುದಂತೂ ನಿಜ – ಇದರರ್ಥ ಇಲ್ಲಿ ಹೇಳಿದ ದೌರ್ಜನ್ಯಗಳನ್ನು ಹಿಂದೂಗಳು ಮಾತ್ರ ಮಾಡುತ್ತಾರೆ ಎಂದೋ, ಉಳಿದವರಿಗಿಂತ ಹೆಚ್ಚು ಮಾಡುತ್ತಾರೆ ಎಂದೋ ಖಂಡಿತಾ ಅಲ್ಲ.
ಮಾತ್ರವಲ್ಲ, ನಾವು ಈ ವಿಷಯದಲ್ಲಿ ಒಂದು ಕ್ರಾಂತಿ ಮಾಡಿ ಉಳಿದವರಿಗೆ ದಾರಿ ತೋರಿಸಬಾರದು ಎಂದೇನಿಲ್ಲವಲ್ಲ?!
ನಾವು ಕೊಟ್ಟಿಗೆಯಲ್ಲಿ ಸಾಕಿದ ದನಗಳಿಗೆ ಸರಿಯಾಗಿ ತಿನ್ನಲು ಹಾಕುತ್ತೇವೆ, ರೋಗ ಬಂದಾಗ ಆರೈಕೆ ಮಾಡುತ್ತೇವೆ, ಅವುಗಳಿಗೆ ಅಂಥಾ ಕಷ್ಟ ಆದ ಹಾಗೆ ಕಾಣುವುದಿಲ್ಲವಲ್ಲಾ? ಮಾತ್ರವಲ್ಲ, ಅವುಗಳಿಗೆ ನಮ್ಮ ಬಗ್ಗೆ ಒಳ್ಳೆ ಪ್ರೀತಿ ಇದೆ. ಅದಕ್ಕೆ ಏನು ಹೇಳುತ್ತೀರಿ?
ನೀವು ಕೊಟ್ಟಿಗೆಯಲ್ಲಿ ದನ ಸಾಕುವ ಹಾಗೆಯೇ ಪಂಜರದಲ್ಲಿ ಅಥವಾ ಗಾಜಿನ ಮನೆಯಲ್ಲಿ ನಾಯಿ-ಹಕ್ಕಿ-ಇಲಿ-ಹಾವು-ಕೀಟ ಇತ್ಯಾದಿಗಳನ್ನು ಸಾಕುವವರು ಎಷ್ಟೋ ಜನ ಇದ್ದಾರೆ. ಆ ಜೀವಿಗಳಿಗೆ ತಿನ್ನಲು ಹಾಕಿದರೆ ಅವು ತಿಂದೇ ತಿನ್ನುತ್ತವೆ. ಆ ಜೀವಿಗಳು ಪ್ರತಿಯಾಗಿ ಪ್ರೀತಿಯನ್ನೂ ತೋರಿಸುತ್ತವೆ. ಹಾಗೆ ಸಾಕುವ ಪ್ರಕ್ರಿಯೆ ಸರಿ ಎಂದೋ? ಅಲ್ಲ ಎಂದು ಈಗ ಹೆಚ್ಚಿನವರು ಒಪ್ಪುತ್ತಾರೆ.
ಹಿಂದಿನ ಕಾಲದಲ್ಲಿ ಸರಪಳಿ ಹಾಕಿದ ಗುಲಾಮರೂ ಸರಿಯಾಗಿ ತಿನ್ನಲು ಹಾಕಿದರೆ ದಷ್ಟಪುಷ್ಟವಾಗಿ ಇರುತ್ತಿದ್ದರು, ಅನೇಕ ಜೀತದಾಳುಗಳು ‘ಧಣಿಗಳೇ’ ಎಂದು ಪ್ರೀತಿ-ಗೌರವ ತೋರಿಸಿಕೊಂಡು ಇರುತ್ತಿದ್ದರು, ಹಾಗಾಗಿ ಜೀತ ಸರಿ ಎಂದೋ? ಇದು ಕೂಡ ಸರಿಯಲ್ಲ ಎಂದು ಎಲ್ಲರೂ ಒಪ್ಪುವ ಮಾತು.
ಈ ಸಾಕಿದ ಪ್ರಾಣಿಗಳಿಗೆ ಲೋಕ ನೋಡಿ ಗೊತ್ತಿರುವುದು ಅಷ್ಟೆಯೇ – ಈ ಪ್ರೀತಿ ಅನಿವಾರ್ಯತೆಯಲ್ಲಿ ಬೆಳೆದ ಪ್ರೀತಿ. ಹಸಿದ ಹೊಟ್ಟೆಯ ಅಗತ್ಯಗಳನ್ನು ತೀರಿಸುವ ಆಹಾರಮೂಲಗಳ ಮೇಲೆ ತೋರಿಸುವ ಪ್ರೀತಿ – ಪಂಜರದಲ್ಲಿರುವ ಗಿಳಿಯೂ ಈ ಪ್ರೀತಿಯನ್ನು ತೋರಿಸುತ್ತದೆ, ಬೇಕಾದರೆ ಯಜಮಾನನನ್ನು ಖುಷಿ ಪಡಿಸಲು ಸರ್ಕಸ್ಸೂ ಮಾಡುತ್ತದೆ.
ಎಲ್ಲಾ ಜೀವಿಗಳಲ್ಲಿರುವ ಅದ್ಭುತ ಹಾಂಗೂ ಮೂಲಭೂತ ಗುಣ ‘ಜೀವನಾಸಕ್ತಿ’ – ಜೀವ ಉಳಿದರೆ ಮತ್ತೆ ಉಳಿದದ್ದೆಲ್ಲಾ ಎಂಬ ಮೂಲಮಂತ್ರ ರಕ್ತದಲ್ಲೇ ಇರುತ್ತದೆ. ಈ ‘ಜೀವ’ವನ್ನು ಉಳಿಸಲು ಏನು ಸಹಾಯ ಸಿಗುತ್ತದೋ ಅದರ ಮೇಲೆ ಪ್ರೀತಿ ಹುಟ್ಟುವುದು ಸಹಜ ಗುಣ.
ಕೆಲವರು ದನವನ್ನು ಸಾಕುವ ಬಗ್ಗೆ ಉಳಿದವರಿಗಿಂತ ಹೆಚ್ಚು ಕಾಳಜಿ-ಪ್ರೀತಿ ತೋರಿಸುತ್ತಾರೆ - ದನವನ್ನು ಮೇಯಿಸಲೆಂದೇ ಸ್ವಲ್ಪ ಜಾಗವನ್ನು ಪ್ರತ್ಯೇಕವಾಗಿಟ್ಟು, ಅವುಗಳನ್ನು ಇಡೀ ದಿನ ಕೊಟ್ಟಿಗೆಯಲ್ಲಿ ಕಟ್ಟಿ ಹಾಕದೇ ಸಾಧ್ಯವಾದಷ್ಟೂ ಪ್ರೀತಿಯೊಂದಿಗೆ ಸಾಕುವವರ ಬಳಿ ನಾನು ಮಾತಾಡಿದ್ದೇನೆ, ಅಂತವರನ್ನು ನಾನು ಸಾರಾಸಾಗಟಾಗಿ ತಳ್ಳಿ ಹಾಕಲಿಲ್ಲ. ನಿಜವಾದ ಪ್ರೀತಿ-ಗೌರವದ ಬಗ್ಗೆ ನನಗೂ ಗೌರವ ಇದೆ. ಇದೇ ರೀತಿ ನಿಮಗೆ ನೀವು ಸಾಕುವ ರೀತಿ ಸಾಕಷ್ಟು ಮಾನವೀಯ ಎಂದು ಕಾಣಲೂ ಬಹುದು. ನಾನು ಅದನ್ನು ಅವಹೇಳನ ಮಾಡುವುದಿಲ್ಲ, ಆದರೆ ಗೊತ್ತಿಲ್ಲದೇ ನೀವು ಮಾಡುವ ದೌರ್ಜನ್ಯಗಳ ಬಗ್ಗೆ ಆಲೋಚನೆ ಮಾಡಿ, ನಿಮ್ಮಲ್ಲಿರುವ ಸ್ವಾರ್ಥವನ್ನು ತೂಗಿ ನೋಡಿ ಎಂದು ಕೇಳಿಕೊಳ್ಳುತ್ತೇನೆ.
ಕೊಟ್ಟಿಗೆಯಲ್ಲಿ ಸಾಕದೇ ಗುಡ್ಡೆಗೆ ಬಿಟ್ಟ ದನಗಳಿಗೂ ನಮ್ಮ ಮೇಲೆ ಪ್ರೀತಿ ಇರುತ್ತದೆಯಲ್ಲಾ? ಅವು ರಾತ್ರಿ ಹಟ್ಟಿಗೆ ಬರುತ್ತವೆಯಲ್ಲಾ?
‘ಸುಲಭ ಆಹಾರ’, ‘ಸುಲಭ ರಕ್ಷಣೆ’ ಕೂಡ ಕೆಲವೊಮ್ಮೆ ಪ್ರಾಣಿಗಳಿಗೆ ನಮ್ಮ ಬಳಿ ಪ್ರೀತಿ ಹುಟ್ಟುವ ಹಾಗೆ ಮಾಡುತ್ತದೆ; ಆದರೆ ವನ್ಯಜೀವಿಗಳಿಗೆ ಧಾರಾಳವಾಗಿ ಸುಲಭ ಆಹಾರ ಕೊಡುವುದು ಅಷ್ಟು ಒಳ್ಳೆಯ ಅಭ್ಯಾಸ ಅಲ್ಲ. ದಿನವೆಲ್ಲಾ ಮೇಯ್ದ ದನಗಳು ರಾತ್ರಿ ಹಟ್ಟಿಗೆ ಬರುವುದೂ ಹೀಗೆಯೇ – ಇದು ಕೃತಕವಾದ ಪ್ರಕ್ರಿಯೆ, ನೈಸರ್ಗಿಕ ಅಲ್ಲ.
ನಿಜವಾಗಿ sustainable ಎಂದು ಭರವಸೆ ಇದ್ದರೆ ಸ್ವಲ್ಪ ಮಟ್ಟಿಗೆ ಸಂಬಂಧ ಬೆಳೆಸುವುದು ತಪ್ಪಲ್ಲ, ತಕ್ಕಮಟ್ಟಿನ ಸ್ನೇಹಸಂಬಂಧ ನಮಗೆ ಪ್ರಾಣಿಗಳನ್ನು ಹೆಚ್ಚು ತಿಳಿಯಲು ಸಹಾಯ ಮಾಡುತ್ತದೆ, ಪ್ರಕೃತಿಯೊಂದಿಗೆ ನಮ್ಮ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಆದರೆ ಅದು ಕೊನೆಗೆ ‘ಕೊಲೆ ಪ್ರೀತಿ’ ಆಗಿ, ಆ ಪ್ರಾಣಿಗಳಿಗೆ ಇಲ್ಲದ ಆಸೆ ಹುಟ್ಟಿಸಿ, ಸುಖ ಕೊಟ್ಟು ಕೊನೆಗೆ ಕಷ್ಟ ಆಗುವ ಹಾಗೆ ಬದಲಾದರೆ ಅದು ದುರಂತ (ಹೆಚ್ಚಿನ ಸಲ ಹಾಗೆಯೇ ಆಗುವುದು).
ಮಾತ್ರವಲ್ಲ, ದನಗಳಿಗೆ ನಮ್ಮ ಮೇಲೆ ಪ್ರೀತಿ ಇರುವುದರ ಹಿಂದೆ ಇರುವುದು ಸುಲಭ ಆಹಾರ, ಸುಲಭ ರಕ್ಷಣೆಯ ಆಮಿಷ ಮಾತ್ರ ಅಲ್ಲ – ಈ ಪ್ರೀತಿಯ ಹಿಂದೆ ಬಲ ಪ್ರಯೋಗ, ತರಬೇತಿ ಕೂಡ ಇರುತ್ತದೆ – ಎಲ್ಲಿಗೋ ತಪ್ಪಿಸಿಕೊಂಡು ಹೋದ ದನಗಳನ್ನು ಬಲಪ್ರಯೋಗ ಮಾಡಿ ನಮ್ಮ ಕೊಟ್ಟಿಗೆಗೆ ಬರುವ ಹಾಗೆ ಮಾಡುವುದಿಲ್ಲವೇ? ಹಾಗೆ ಅವುಗಳನ್ನು ತರಬೇತುಗೊಳಿಸಿದರೆ ಅವುಗಳಿಗೆ ಅದರಿಂದ ಹೊರ ಬರಲು ಕಷ್ಟವಾಗುತ್ತದೆ, ಸರ್ಕಸ್ಸಿನಲ್ಲಿ ಸಿಂಹ ಬೆಂಕಿಯ ಬಳೆಯ ಮಧ್ಯೆ ಹಾರಿದ ಹಾಗೆ. ಕೊನೆಗೆ ‘ಇದೇ ಜೀವನ’ ಎಂದು ಮನಸ್ಸಿಗೆ ಕಾಣುವಾಗ ಆ ಸೀಮಿತ ವಲಯದಲ್ಲಿ ಇರುವವರ ಮಧ್ಯೆ ಪ್ರೀತಿ ಹುಟ್ಟುವುದೂ ಸಹಜವೇ.
ಸಾಕುವುದು ಎಂದರೆ ಗುಲಾಮಗಿರಿ ಆಗುವುದಿಲ್ಲ, ಅಲ್ಲವೇ? ನಮಗೆ ದನಗಳು ಎಂದರೆ ತುಂಬಾ ಪ್ರೀತಿ ಇದೆ.
ಪೆಟ್ಟು ಕೊಡುತ್ತಾ, ಆಹಾರ ಕೊಡದೇ ಸೊರಗಿಸುವ ಕ್ರಿಯೆ ಮಾತ್ರ ಅಲ್ಲ ಗುಲಾಮಗಿರಿ. ಎಲ್ಲಾ ರೀತಿಯಲ್ಲಿಯೂ ಸ್ವಾತಂತ್ರ್ಯಹರಣ ಮಾಡಿದರೆ ಅದು ಖಂಡಿತಾ ಗುಲಾಮಗಿರಿಯೇ.
ನಿಮಗೆ ದುರಾಸೆ ಇಲ್ಲ ಎಂದೇ ಪರಿಗಣಿಸೋಣ, ಲೇಖನದಲ್ಲಿ ಬರೆದ ಅನೇಕ ಕ್ರೌರ್ಯಗಳನ್ನು ನೀವು ತೋರಿಸುವುದಿಲ್ಲ ಎಂದು ಪರಿಗಣಿಸೋಣ. ಹಾಗಿದ್ದರೂ ಕೂಡ ‘ಸಾಕುವುದು’ ಎನ್ನುವ ಪ್ರಕ್ರಿಯೆಯೇ ಕೃತಕ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ (ಮೇಲಿನ ಪ್ರಶ್ನೆಗೆ ಬರೆದ ಉತ್ತರವನ್ನೂ ಓದಿ)
ನೀವು ತೋರಿಸುವ ಪ್ರೀತಿ ನಿಜಕ್ಕೂ ಪ್ರಾಣಿಯ ಒಳಿತಿಗೋ ಅಥವಾ ನಿಮ್ಮ ಸ್ವಾರ್ಥಸಾಧನೆ ಆಗುತ್ತದೆ ಎಂದೋ? ಪ್ರಾಣಿಗಳನ್ನು ಸಹಜಧರ್ಮವನ್ನು ಪಾಲಿಸಲು ಬಿಡುವುದು, ಸಹಜ ಪರಿಸರದಲ್ಲಿ ಬಿಡುವುದು ನಿಜವಾದ ಪ್ರಾಣಿಪ್ರೀತಿ. ಕಷ್ಟದಲ್ಲಿರುವ ತರತರದ ವನ್ಯಮೃಗಗಳನ್ನು (ಹುಲಿ-ಹಾವು-ಅಳಿಲು-ಪಕ್ಷಿ ಇತ್ಯಾದಿ), ಅವುಗಳ ಮರಿಗಳನ್ನು ಸಾಕುವ ವನ್ಯಪ್ರೇಮಿಗಳು ಇದ್ದಾರೆ – ಆದರೆ ನಿಧಾನವಾಗಿ ಅವರು ತಮ್ಮ ವ್ಯಾಮೋಹವನ್ನು, ಹೆದರಿಕೆಯನ್ನು ಬಿಟ್ಟು ಆ ಪ್ರಾಣಿಗಳು ಶಕ್ತರಾದಾಗ ಅವುಗಳನ್ನು ಪುನಃ ಕಾಡಿಗೆ ಬಿಡುತ್ತಾರೆ – ಯಾಕೆ ಎಂದರೆ ಅವರು ಪ್ರಾಣಿಗಳ ಸಹಜಧರ್ಮವನ್ನು ಗೌರವಿಸುತ್ತಾರೆ.
ದನಗಳ ವಿಷಯಕ್ಕೆ ಬಂದಾಗ ಮನುಷ್ಯನ ಅಗತ್ಯ, ಅನಿವಾರ್ಯತೆ ಕೂಡ ಬರುತ್ತದೆ. ಹಾಗೆ ದನಗಳನ್ನು ಯಾವುದೋ ವನ್ಯಜೀವಿಗೆ ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲ, ಅಲ್ಲವೇ?
ಗುಲಾಮಗಿರಿಯಾಗಲೀ ಅಥವಾ ಪಂಜರದಲ್ಲಿರುವ ಹಕ್ಕಿಯಾಗಲೀ – ಹೀಗಿರುವಲ್ಲಿ ಸ್ವತಂತ್ರವಾಗಿ ಬದುಕುವ ಪಂಗಡವೂ ನಮ್ಮ ಕಣ್ಣ ಮುಂದೆ ಶತಮಾನಗಳಿಂದ ಇದ್ದುದರಿಂದಾಗಿ ಅವುಗಳ ಸ್ವಾತಂತ್ರ್ಯದ ಪರಿಕಲ್ಪನೆ ಸುಲಭವಾಗಿ ಜೀರ್ಣಮಾಡಲು ಮನುಷ್ಯನಿಗೆ ಸಾಧ್ಯವಾಯಿತು. ಆದರೆ ದನಗಳು ಮನುಷ್ಯನ ಜೀವನದಲ್ಲಿ ಹಾಸುಹೊಕ್ಕಾಗಿ ಹೋಗಿದೆ, ಶತಮಾನಗಳಿಂದ ನಾವು ಅದರ ಮೂಲಕ ನಮ್ಮ ಎಷ್ಟೋ ಅಗತ್ಯಗಳನ್ನು ಪೂರೈಸಿಕೊಂಡಿದೇವೆ. ಈ ಪ್ರಕ್ರಿಯೆಯಲ್ಲಿ ದನ ಒಂದು ಸಾಕುಪ್ರಾಣಿಯಾಗಿ ನಮ್ಮ ಕಣ್ಣಮುಂದೆ ಬೆಳೆದು ಬಂದಿದೆ. ದನಕ್ಕೆ ವನ್ಯಜೀವಿಯಾಗಿ ಬದುಕಲು ಸಾಧ್ಯವೇ ಇಲ್ಲ ಎನ್ನುವ ಭ್ರಮೆ ಬಂದಿದೆ ನಮಗೆ. ಆದರೆ ವಸ್ತುಸ್ಥಿತಿ ಏನೆಂದರೆ ಇಂದಿಗೂ ದನಕ್ಕೆ ವನ್ಯಮೃಗವಾಗಿ ಬದುಕಲು ಸಾಧ್ಯ ಇದೆ – ಕಾಡೆಮ್ಮೆ ಮುಂತಾದವು ಬದುಕುವಂತೆ. ಈ ನಿಜವನ್ನು ನಾವು ಎಷ್ಟು ಬೇಗ ಒಪ್ಪಿಕೊಳ್ಳುತ್ತೇವೋ ಬಹುಷಃ ಅಷ್ಟು ಒಳ್ಳೆಯದು ಗೋವುಗಳಿಗೆ.
ಇನ್ನು ಮನುಷ್ಯನ ಅಗತ್ಯದ ವಿಷಯ: ಅನೂಹ್ಯವಾಗಿ ಬೆಳೆದ ವಿಜ್ಞಾನ ನಮಗೆ ಎಷ್ಟೋ ಹೊಸ ದಾರಿಗಳನ್ನು ತೋರಿಸಿದೆ, ಅದರ ಕಡೆಗೆ ನೋಡದೆಯೇ ಗವ್ಯೋತ್ಪನ್ನಗಳೇ ಗತಿ ಎನ್ನುವ ಅನಿವಾರ್ಯತೆಯನ್ನು ಗಟ್ಟಿ ಹಿಡಿಯುವುದನ್ನು ಬಿಡಿ, ಹೊಸ ದಿಕ್ಕಿನಲ್ಲಿ ನಡೆಯಲು ಪ್ರಯತ್ನ ಮಾಡಿ, ನಿಧಾನವಾಗಿಯಾದರೂ ಸರಿ.
ಉಪಯೋಗಿಸುವುದನ್ನು ನಿಲ್ಲಿಸುವುದು ಎಂದೇ ಇಟ್ಟುಕೊಳ್ಳೋಣ; ಆದರೆ ಈಗ ಕೋಟಿಗಟ್ಟಲೆ ದನಗಳು ಇವೆಯಲ್ಲಾ, ಅವನ್ನೇನು ಮಾಡುವುದು? ಅವಕ್ಕೆಲ್ಲಾ ವಾಸಿಸಲು ನೈಸರ್ಗಿಕ ಪರಿಸರ ಇದೆಯೋ?
ಸಮಸ್ಯೆಯನ್ನು ಒಪ್ಪಿಕೊಳ್ಳುವುದು ಪರಿಹಾರದ ದಿಕ್ಕಿನಲ್ಲಿ ಮೊದಲನೆಯ ಹೆಜ್ಜೆ. ಮನುಷ್ಯ ಎಷ್ಟೋ ಶತಮಾನಗಳಿಂದ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದರ ಜೊತೆಗೆ ಅದನ್ನು ರಾತ್ರೋರಾತ್ರಿ ಸರಿ ಮಾಡಲು ಸಾಧ್ಯವಿಲ್ಲ ಎಂಬ ಸತ್ಯವನ್ನೂ ನಾವು ಒಪ್ಪಿಕೊಳ್ಳೋಣ. ಗೋವುಗಳ ಕೃತಕ ಸಂಖ್ಯೆಯ ಕಡಿಮೆ ಮಾಡುವುದು, ಅವಕ್ಕೆ ನೈಸರ್ಗಿಕ ಪರಿಸರ ಒದಗಿಸುವುದು – ಇದೆಲ್ಲಾ ನಮ್ಮ ತಪ್ಪನ್ನು ಸರಿ ಮಾಡುವ ದಿಕ್ಕಿನಲ್ಲಿ ನಾವು ತೆಗೆದುಕೊಳ್ಳಬೇಕಾದ ಜವಾಬ್ದಾರಿಗಳು. ಇದರ ಬಗ್ಗೆ ಹೆಚ್ಚು ಅಧ್ಯಯನ, ಸಂಶೋಧನೆ ಮಾಡಬೇಕು, ಧನ ವಿನಿಯೋಗಿಸಬೇಕು.
ಆದರೆ ಸ್ವಾರ್ಥಿ ಮನುಷ್ಯಕುಲ ಇಷ್ಟೆಲ್ಲಾ ಮಾಡುವನೋ? ಬಹುಷಃ ಇಲ್ಲ. ಹಾಗಾಗಿ ಕಡೇಪಕ್ಷ ನಿಧಾನವಾಗಿಯಾದರೂ ದನದ ಉತ್ಪನ್ನಗಳನ್ನು ಕಡಿಮೆ ಉಪಯೋಗಿಸುವ ದಿಕ್ಕಿನಲ್ಲಿ ನಡೆದರೆ ಈ ಬದಲಾವಣೆ ಸಹಜವಾಗಿ ಆಗಬಹುದು – ಯಾಕೆ ಎಂದರೆ ಆರ್ಥಿಕವಾಗಿ ಉಪಯುಕ್ತ ಅಲ್ಲದೇ ಹೋದರೆ ಸಹಜವಾಗಿ ಜನರು ಅದನ್ನು ಸಾಕುವುದನ್ನು ನಿಲ್ಲಿಸುತ್ತಾರೆ.
ದನಗಳ ನ್ನು ಸಾಕಬಾರದು ಎಂದು ಕಾನೂನು ಇಲ್ಲ ತಾನೆ?
ಕಾನೂನು ಬರಲು ಸಮಯ ಹಿಡಿಯುತ್ತದೆ, ಅದಕ್ಕೆ ಉನ್ನತ ಮಟ್ಟದ ಆಲೋಚನೆಗಳೂ ಬೇಕು. ಈಗ ಮಂಗ-ಹಾವು-ಕರಡಿ ಹೀಗೆ ಅನೇಕ ಪ್ರಾಣಿಗಳನ್ನು ಪ್ರದರ್ಶನ ವಸ್ತುಗಳಾಗಿ ಉಪಯೋಗಿಸಬಾರದು ಎಂದು ಕಾನೂನು ಬಂದಿದೆಯಷ್ಟೆ, ಯಾಕಾಗಿ? ಪ್ರಾಣಿಗಳು ಹಾಗೆ ಬದುಕುವುದು ಅನೈಸರ್ಗಿಕ, ಅಸಹಜ, ದೌರ್ಜನ್ಯಪೀಡಿತ ಎನ್ನುವ ಭಾವನೆ ಕೊನೆಗೂ ಮನುಷ್ಯ ಒಪ್ಪಿದ ಕಾರಣ ಅವನಿಗೆ ಆ ಮನೋರಂಜನೆಯನ್ನು ತ್ಯಾಗ ಮಾಡಲು ಸಾಧ್ಯ ಆಯಿತು. ಸರ್ಕಸ್ಸಿನಲ್ಲಿರುವವರಿಗೂ ಕೆಲವರಿಗೆ ತಾವು ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಎಂಬ ಭಾವನೆ ಇರುತ್ತದೆ, ಅಂತಃಕರುಣೆ ಇರುತ್ತದೆ, ಆದರೆ ಒಟ್ಟಾರೆ ನೋಡಿದರೆ ದೌರ್ಜನ್ಯ ಇರುವದನ್ನು ಮನಗಂಡ ಮನುಷ್ಯ ಹೊಸ ಕಾನೂನು ಮಾಡಿದನು.
ಮನುಷ್ಯನ ಸ್ವಾರ್ಥಕ್ಕೆ ಮಿತಿ ಇಲ್ಲ, ಒಬ್ಬರು-ಇಬ್ಬರು ಉನ್ನತ ನೈತಿಕತೆ ಇಟ್ಟುಕೊಂಡು ಸಾಕಿದರೂ ಕೂಡ ಅದು ಅಲ್ಲಿಗೇ ನಿಲ್ಲುವುದಿಲ್ಲ, ಹೆಚ್ಚು ಲಾಭದ ಆಶೆಯಲ್ಲಿ ಉಳಿದವರಿಂದ ದೌರ್ಜನ್ಯ ಶುರು ಆಗಿಯೇ ಆಗುತ್ತದೆ. ಹೀಗಾಗಿ ನಿಧಾನಕ್ಕೆ ಹಿತಾಸಕ್ತಿಗಳನ್ನು ರಕ್ಷಿಸಲು ಕಾನೂನುಗಳೇ ಬರಬೇಕಷ್ಟೆ. ಹಾಗೆಯೇ ನಿಧಾನಕ್ಕೆ ಗೋವುಗಳ ವಿಷಯಲ್ಲಿಯೂ ಕಠಿಣ ಕಾನೂನು ಬರಬೇಕು, ಒಂದು ದಿನ ಬರುತ್ತದೆ ಎಂದು ನನಗೆ ನಂಬಿಕೆ ಇದೆ. ಆದರೆ ತಪ್ಪು ಕೆಲಸವನ್ನು ನಿಲ್ಲಿಸಲು ಕಾನೂನು ಬರುವ ತನಕ ಕಾಯಬೇಕು ಎಂದು ಇಲ್ಲ ತಾನೆ?
ದನಗಳನ್ನು ಸುಮ್ಮನೆ ಬಿಟ್ಟರೆ, ಸರಿಯಾಗಿ ರಕ್ಷಣೆ ಮಾಡದೇ ಇದ್ದರೆ ಕೆಟ್ಟ ಮನುಷ್ಯರು ಕದ್ದುಕೊಂಡು ಹೋಗುತ್ತಾರೆ, ಹೀಗಾಗಿ ಇಷ್ಟ ಇಲ್ಲದೇ ಇದ್ದರೂ ಕಟ್ಟಿಯೇ ಹಾಕಬೇಕಾಗುತ್ತದೆ. ಏನು ಮಾಡಲಿ?
ಈ ಸಮಸ್ಯೆಯ ಮೂಲ ನೀವು ದನದ ಉತ್ಪನ್ನಗಳ ಮೇಲೆ ಅವಲಂಬಿತವಾಗಿರುವುದು. ಮೂಲ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಶುರುಮಾಡಿದರೆ ಈ ಸಮಸ್ಯೆ ಇರುವುದೇ ಇಲ್ಲ, ಯಾಕೆ ಎಂದರೆ ದನ ಸಾಕುವ ಪ್ರಶ್ನೆಯೇ ಬರುವುದಿಲ್ಲ!
ಸ್ವಲ್ಪವೂ ಕರುಣೆ ಇಲ್ಲದೆ ಕಡಿದು ತಿನ್ನುವವರ ವಿರುದ್ಧ ಮಾತನಾಡುವುದು ಬಿಟ್ಟು ಕಷ್ಟದಲ್ಲಿದ್ದುಕೊಂಡು ದನ ಸಾಕುವವರ ಬಗ್ಗೆ ನೀವು ಮಾತನಾಡುವುದು ಸರಿಯಾ?
ನಾನು ಕೊಂದು ತಿನ್ನುವವರನ್ನು ಸಮರ್ಥಿಸುತ್ತಾ ಇಲ್ಲ. ಆದರೆ ಈಗ ಸುಮಾರು ಜನ ಸಾಕುವ ರೀತಿ ಕೊಲ್ಲುವುದಕ್ಕಿಂತಲೂ ಹೆಚ್ಚು ಕ್ರೂರ, ಅದರ ಬಗ್ಗೆ ಹೆಚ್ಚಿನವರು ಆಲೋಚನೆ ಮಾಡದೇ ಕೂತಿರುತ್ತಾರೆ, ಅಥವಾ ಕಂಡರೂ ಕಾಣದ ಹಾಗೆ ಸುಮ್ಮನೆ ಇರುತ್ತಾರೆ ಎಂಬುದನ್ನೇ ನಾನು ಒತ್ತಿ ಹೇಳಲು ಇಷ್ಟ ಪಡುತ್ತೇನೆ. ತಾವು ಸ್ವತಃ ಸಾಕದೆ ಕ್ರೂರ ಮೂಲದಿಂದ ಹಾಲನ್ನು ಪಡೆದು ಉಪಯೋಗಿಸುವವರದ್ದು ಕೂಡ ತುಂಬಾ ನಿರ್ದಯ ವ್ಯವಹಾರ.
ಇನ್ನು, ಅಂತಃಕರುಣೆ ಇದ್ದು ಕೂಡ ಅಸಹಾಯಕತೆ ಅಥವಾ ಕಷ್ಟಲ್ಲಿದ್ದುಕೊಂಡು ದನ ಸಾಕುವವರ ಬಗ್ಗೆ: ‘ಹಾಗಿರುವ ಕಷ್ಟದಲ್ಲಿರುವವರು ಕ್ರೌರ್ಯವನ್ನು ಮುಂದುವರೆಸಿಕೊಂಡು ಹೋಗಲಿ, ತೊಂದರೆ ಇಲ್ಲ ಅಥವಾ ಏನು ಮಾಡಲೂ ಸಾಧ್ಯ ಇಲ್ಲ’ ಎಂಬ ಮನೋಭಾವ ಇಟ್ಟುಕೊಳ್ಳುವ ಬದಲು, ಸಾಕುವ ಪ್ರಕ್ರಿಯೆ ಅಸಹಜ, ಅನೈಸರ್ಗಿಕ, ಕ್ರೂರ ಎಂದು ಮೊದಲು ಒಪ್ಪಿಕೊಳ್ಳೋಣ. ಆಮೇಲೆ ನಿಧಾನಕ್ಕೆ ಸಮಸ್ಯೆಯಿಂದ ಹೊರ ಬರುವ ಬಗ್ಗೆ ಕೆಲಸ ಮಾಡಬಹುದು. ಸಾಕುವುದೂ, ಹಾಲು-ತುಪ್ಪ ಇತ್ಯಾದಿಗಳನ್ನು ಸೇವಿಸುವುದೂ ಕಡಿಮೆಯಾದರೆ ಸಹಜವಾಗಿ ಮಾಂಸಕ್ಕೆ ಕ್ರಯ ಜಾಸ್ತಿ ಆಗಿ ನಿಧಾನಕ್ಕೆ ಬಳಕೆ ಕಡಿಮೆ ಆಗುತ್ತದೆ ಎಂದು ಕೂಡ ಆಶಿಸಬಹುದು.
ಅಲ್ಲಾ, ಚೆನ್ನಾಗಿ ಸಾಕುವುದು ಹೇಗೆ ಎಂದು ಆಲೋಚನೆ ಮಾಡಿದರೆ ಸಾಕಲ್ಲವೇ? ಪೂರ್ತಿ ಬಿಡುವ ಬಗ್ಗೆ ಯಾಕೆ ಆಲೋಚನೆ ಮಾಡಬೇಕು?
ಈ ಮಧ್ಯಮ ಮಾರ್ಗ ಯಾವತ್ತೂ ಚೆನ್ನಾಗಿ ನಿಲ್ಲುವುದಿಲ್ಲ, ಚೆನ್ನಾಗಿ ಸಾಕುವ ಪ್ರತಿಯೊಬ್ಬನ ಲೆಕ್ಕಕ್ಕೂ ಇನ್ನೈದು ಜನ ಕ್ರೂರವಾಗಿ ಸಾಕುವವರು ಇರುತ್ತಾರೆ. ಹೀಗಾಗಿ ಸಾಕುವುದನ್ನೇ ಖಂಡಿಸಿದರೆ ಏನಾದರೂ ಪ್ರಗತಿ ಆಗಲೂ ಬಹುದು.
ಮಾತ್ರವಲ್ಲ ಚೆನ್ನಾಗಿ ಸಾಕುವುದು ಎನ್ನುವುದ್ ಒಂದು ಪ್ರಶ್ನಾರ್ಹ ಪ್ರಕ್ರಿಯೆ. ಇದು ಅನೈಸರ್ಗಿಕ ಹಾಗೂ ಗೋವಿನ ಸಹಜಧರ್ಮಕ್ಕೆ ವಿರುದ್ಧ.
ದನದ ಸೆಗಣಿ ಒಳ್ಳೆ ಗೊಬ್ಬರ, ನಾನು ದನ ಸಾಕುದನ್ನು ನಿಲ್ಲಿಸಿದರೆ ಇನ್ಯಾವುದೋ ರಾಸಾಯನಿಕ ಗೊಬ್ಬರ ಹಾಕಬೇಕಾದ ಪ್ರಸಂಗ ಬರುವುದಿಲ್ಲವೇ? ಎತ್ತಿನ ಬದಲು ಟ್ರ್ಯಾಕ್ಟರ್ ಬಳಸಿದರೆ ಅದು ಕೂಡ ಪರಿಸರ ವಿರೋಧಿ ಅಲ್ಲವೇ?
ಒಳ್ಳೆ ಪ್ರಶ್ನೆ. ಪರಿಸರ ಪ್ರೇಮ ಖಂಡಿತವಾಗಿಯೂ ಬಹಳ ಮುಖ್ಯವಾದ ಸಂಗತಿ. ಅನೇಕ ಅಸಹಜತೆಯಲ್ಲಿ ಬೆಳೆದು ಬಂದ ಸಮಾಜದಲ್ಲಿ ದ್ವಂದ್ವಗಳು ಎದುರಾಗುವುದು ಸಹಜ, ರಾತ್ರೋರಾತ್ರಿ ಸಹಜತೆಗೆ ಮರಳಿ ಹೋಗುವುದು, ಎಲ್ಲಾ ರೀತಿಯಲ್ಲಿ ಸರಿಯಾಗಿ ಇರುವುದು ಕಷ್ಟ. ಆದರೆ ನಿಧಾನವಾಗಿಯಾದರೂ ಸರಿಯಾದ ದಿಕ್ಕಿನಲ್ಲಿ ಪ್ರಯತ್ನ ಮಾಡಿದರೆ ಉತ್ತಮ.
ಪುನಃ ಇಲ್ಲಿ ನಾನು ಎತ್ತುವ ವಿಷಯ ಏನು ಎಂದರೆ ಮನುಷ್ಯ ಗುಲಾಮರ ಬಳಕೆಯ ಬಗ್ಗೆ ನೀವು ಆಲೋಚನೆ ಮಾಡಿ ನೋಡಿ. ಅವರ ಬಳಕೆ ಎಷ್ಟೋ ಕಡೆ ಯಂತ್ರಗಳ/ರಾಸಾಯನಿಕಗಳ ಬಳಕೆಗಿಂತ ಹೆಚ್ಚು ಪರಿಸರಸ್ನೇಹಿ ಆಗಿ ಕಾಣಲೂ ಬಹುದು. ಹಾಗೆಂದು ಅದನ್ನು ಸರಿ ಎನ್ನುತ್ತೇವೋ ನಾವು? ಇಲ್ಲ. ಗೋವು ಬರೀ ಒಂದು ಪ್ರಾಣಿ ಹೇಳುವ ಕಾರಣದಿಂದ ಅಲ್ಲವೇ ನಾವು ಅಧಿಕಾರ ಚಲಾಯಿಸುವುದು, ಉಪಯೋಗ ಪಡೆದುಕೊಳ್ಳುವುದು?
ಬೇರೆ ನೈಸರ್ಗಿಕ ವಿಧಾನಗಳನ್ನು ಉಪಯೋಗಿಸಿ ಕೃಷಿ ಮಾಡಲು ಪ್ರಯತ್ನ ಮಾಡಿ ಎಂಬುದು ನನ್ನ ಸಲಹೆ. ಹಾಗೂ ಗೋವಿಲ್ಲದೆ ಗತಿಯೇ ಇಲ್ಲ ಎಂದು ಕಂಡರೆ ಕಡೇಪಕ್ಷ ಅದರ ಬಳಕೆಯನ್ನು ಹಂತ ಹಂತವಾಗಿ ಕಡಿಮೆ ಮಾಡಲು, ಬೇರೆ ಪರಿಸರ ಸ್ನೇಹೀ ವಿಧಾನಗಳನ್ನು ಎತ್ತಿ ಹಿಡಿಯಲು ಈ ಕ್ರಾಂತಿಯಲ್ಲಿ ಕೈ ಜೋಡಿಸಿ. ಈ ಬಗ್ಗೆ ಈಗಾಗಲೇ ನಡೆದ ಸಂಶೋಧನೆಗಳನ್ನು ತಿಳಿದುಕೊಳ್ಳಲು ಪ್ರಯತ್ನ ಮಾಡಿ ಇನ್ನೂ ಮುಂದೆ ಹೋಗಲು ಸಾಧ್ಯವಾದಷ್ಟೂ ಸಹಾಯ ಮಾಡಿ.
ಗವ್ಯೋತ್ಪನ್ನಗಳಿಗೆ ಅದ್ಭುತ ಔಷಧೀಯ ಗುಣಗಳು ಇವೆ ಎಂದು ನಾನು ನಂಬುತ್ತೇನೆ. ಹಾಗಿದ್ದಲ್ಲಿ ಅದನ್ನು ಹೇಗೆ ಬಿಡುವುದು?
ಹಾಗಿರುವ ಗುಣ ಇದೆಯೋ ಇಲ್ಲವೋ, ಆದರೆ ಇಲ್ಲಿ ನೀವು ನಿಮ್ಮ ಅಗತ್ಯವನ್ನೇ ಎತ್ತಿ ಹಿಡಿಯುತ್ತಾ ಇದ್ದೀರಿ ಎಂದು ಆಯಿತು, ಅಲ್ಲವೇ?
ಇರಲಿ, ನಿಮಗೆ ಗೋವುಗಳ ಹಿತಾಸಕ್ತಿಯಲ್ಲಿ ನಿಜವಾದ ಆಸಕ್ತಿ ಇದ್ದರೆ ಈ ವಿಷಯಲ್ಲಿ ಕೂಡ ನೀವು ಕ್ರೌರ್ಯ-ದೌರ್ಜನ್ಯ ಕಡಿಮೆ ಇರುವ ಇತರ ಮೂಲಗಳ ಬಗ್ಗೆ ಆಲೋಚನೆ ಮಾಡಿಕೊಂಡು ನಿಧಾನಕ್ಕೆ ಬದಲಾಗುವುದು ಒಳ್ಳೆಯದು. ಹಾಗಿರುವ ಮೂಲಗಳ ಮೂಲಕ ಉತ್ತಮ ಆರೋಗ್ಯ ಖಂಡಿತಾ ಸಾಧ್ಯ ಎಂದು ನನಗೆ ನಂಬಿಕೆ ಇದೆ.
ಈ ನಿಟ್ಟಿನಲ್ಲಿ ಡೈರಿ ಸಂಘಗಳ ಪಾತ್ರ ಏನು?
ದಯವಿಟ್ಟು ಕೆ.ಎಮ್.ಎಫ್.ನ Vision & Mission ಮತ್ತೆ Objectives ಓದಿ ನೋಡಿ:
http://www.kmfnandini.coop/
ಅದರಲ್ಲಿ ಉದ್ದಕ್ಕೂ ಹೇಗೆ ಹಾಲು ಉತ್ಪಾದಕರಿಗೆ ಹೆಚ್ಚು ಹೆಚ್ಚು ಒಳ್ಳೆಯದಾಗುವ ಹಾಗೆ ಮಾಡುವುದು ಎಂದು ವಿವರಿಸಿದ್ದಾರೆ. ಖಂಡಿತಾ ತಪ್ಪಲ್ಲ, ಆದರೆ ಅದರಲ್ಲಿ ಎಲ್ಲಿಯಾದರೂ ನಿಮಗೆ ದನದ ಬಗ್ಗೆ ಕಾಳಜಿ ಕಾಣುತ್ತದೆಯೇ?
ಇದರಲ್ಲಿ ಒಂದು ಕಡೆ To compete with MNCs and Private Dairies with better quality of milk and milk products and in the process sustain invincibility of cooperatives. ಎಂದು ಹೇಳುತ್ತಾರೆ.
http://www.kmfnandini.coop/
ಅದರಲ್ಲಿ ಉದ್ದಕ್ಕೂ ಹೇಗೆ ಹಾಲು ಉತ್ಪಾದಕರಿಗೆ ಹೆಚ್ಚು ಹೆಚ್ಚು ಒಳ್ಳೆಯದಾಗುವ ಹಾಗೆ ಮಾಡುವುದು ಎಂದು ವಿವರಿಸಿದ್ದಾರೆ. ಖಂಡಿತಾ ತಪ್ಪಲ್ಲ, ಆದರೆ ಅದರಲ್ಲಿ ಎಲ್ಲಿಯಾದರೂ ನಿಮಗೆ ದನದ ಬಗ್ಗೆ ಕಾಳಜಿ ಕಾಣುತ್ತದೆಯೇ?
ಇದರಲ್ಲಿ ಒಂದು ಕಡೆ To compete with MNCs and Private Dairies with better quality of milk and milk products and in the process sustain invincibility of cooperatives. ಎಂದು ಹೇಳುತ್ತಾರೆ.
ಗಮನಿಸಿ: ವಿದೇಶೀಯರೊಂದಿಗೆ ಸ್ಫರ್ಧಿಸುವಾಗ ಅವರ ಕಟುಕ ಹೃದಯದೊಂದಿಗೆ ಸ್ಫರ್ಧಿಸಲು ಎಷ್ಟು ಸಾಧ್ಯ ಇದೆ? ಈ ಲೇಖನದಲ್ಲಿ ಶುರುವಿಗೆ ಬರೆದ ಅಂಶಗಳನ್ನು ಅಳವಡಿಸದೆ ಹಾಲಿನ ಉತ್ಪನ್ನವನ್ನು ಸತತ-ಲಾಭಕರ ಉದ್ಯಮ ಮಾಡಲು ಬಹಳ ಕಷ್ಟವಿದೆ. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಡೈರಿ ಉದ್ಯಮದಲ್ಲಿ ಕ್ರೌರ್ಯ ಹೆಚ್ಚು ಆಗಿಕೊಂಡೇ ಹೋಗುತ್ತದೆ.
ರಾಷ್ಟ್ರೀಯ ಮಟ್ಟದ ಡೈರಿ ಅಭಿವೃದ್ಧಿ ಬೋರ್ಡ್‍ನ ಧ್ಯೇಯ ಕೂಡ ಓದಿ: http://www.nddb.org/perspective.html ಇದರಲ್ಲಿ ಕೂಡ ದನದ ಬಗ್ಗೆ ವಿಶೇಷ ಕಾಳಜಿ ಇಲ್ಲ. ಲಾಭ, ಹೆಚ್ಚು ಉತ್ಪಾದನೆ - ಅಷ್ಟೆ.
ರಾಷ್ಟ್ರೀಯ ಮಟ್ಟದ ಡೈರಿ ಅಭಿವೃದ್ಧಿ ಬೋರ್ಡ್‍ನ ಧ್ಯೇಯ ಕೂಡ ಓದಿ: http://www.nddb.org/perspective.html ಇದರಲ್ಲಿ ಕೂಡ ದನದ ಬಗ್ಗೆ ವಿಶೇಷ ಕಾಳಜಿ ಇಲ್ಲ. ಲಾಭ, ಹೆಚ್ಚು ಉತ್ಪಾದನೆ - ಅಷ್ಟೆ.
ಇನ್ನು ಬಳಕೆದಾರನ ದೃಷ್ಟಿಯಿಂದ ನೋಡಿದರೆ, ನೀಟಾಗಿ ಪ್ಯಾಕೇಟಿನಲ್ಲಿ ಬರುವ ಉತ್ಪನ್ನವನ್ನು ಆಸ್ವಾದಿಸುವ/ಉಪಯೋಗಿಸುವ ಇಂದಿನ ಕಾಲದ ಬಳಕೆದಾರನಿಗೆ ಅದರ ಹಿಂದೆ ಏನೆಲ್ಲಾ ಕ್ರೌರ್ಯ, ಅನ್ಯಾಯ ಇದೆ ಎಂದು ಗೊತ್ತಿರುವುದು ಬಹಳ ಕಷ್ಟ. ಅದಕ್ಕೇ ಅಲ್ಲವೇ ಎಲ್ಲರೂ (ನನ್ನನ್ನೂ ಸೇರಿಸಿ) ಒಂದಲ್ಲ ಒಂದು ರೀತಿಯಲ್ಲಿ ಸರಿಮಾಡಲು ಸಾಧ್ಯವೇ ಆಗದ ರೀತಿಯಲ್ಲಿ ನಮ್ಮ ಭೂಮಿಯನ್ನು ಹಾಳು ಮಾಡುತ್ತಾ ಇರುವುದು? ಮೀನು-ಮಾಂಸ, ಹಾಲು-ಬೆಣ್ಣೆ-ತುಪ್ಪ, ಪ್ಲಾಸ್ಟಿಕ್, ಇಂಧನ, ಸಿಮೆಂಟ್, ಅನೇಕ ಲೋಹಗಳು, ರಾಸಾಯನಿಕಗಳು - ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲದರ ಹಿಂದೆ ಪ್ರಕೃತಿ-ಪ್ರಾಣಿಗಳ ಮೇಲೆ ಆಗುವ ಅನಾಚಾರ/ಕ್ರೌರ್ಯ ಮಾತ್ರ ಅಲ್ಲ, ಮನುಷ್ಯರ ಮೇಲೆ ಆಗುವ ಕ್ರೌರ್ಯ ಕೂಡ ಇರುತ್ತದೆ. ಹುಡುಕಿದರೆ ನಾವೆಲ್ಲರೂ ಇದರಲ್ಲಿ ಭಾಗಿ, ಆದರೆ ಒಬ್ಬರನ್ನೊಬ್ಬರು ತಿದ್ದಿಕೊಂಡು ಅರ್ಥವತ್ತಾಗಿ ಮುಂದೆ ಹೋಗಲು ಸಾಧ್ಯವಾದರೆ ಬಹಳ ಒಳ್ಳೆಯದು.
ಪ್ರಾಣಿಗಳಿಗೆ ಆಗುವ ಕಷ್ಟಗಳನ್ನು ಗಮನಿಸಿ ಅನೇಕ ರೀತಿಯ concepts ಬಂದಿದೆ:
ಪ್ರಾಣಿಗಳಿಗೆ ಆಗುವ ಕಷ್ಟಗಳನ್ನು ಗಮನಿಸಿ ಅನೇಕ ರೀತಿಯ concepts ಬಂದಿದೆ:
Certified Organic
Free-Range: http://en.wikipedia.org/wiki/Free_range
Certified Humane: http://www.certifiedhumane.com/
Cage-Free
Free-Roaming
Vegetarian-Fed
Natural
ಯಾವುದೂ ಶೇಕಡಾ ೧೦೦% ಗ್ಯಾರಂಟಿ ಕೊಡುವುದಿಲ್ಲ, ಎಲ್ಲದರಲ್ಲಿಯೂ ಸಣ್ಣ ಕುಂದುಕೊರತೆಗಳಿವೆ. ಮಾತ್ರವಲ್ಲ, ಒಂದು ಬಹಳ ಮುಖ್ಯವಾದ ವಿಷಯ: ಮೇಲೆ ಹೇಳಿದ ಕೆಲವು terms ಜನರ ಭಾವನೆಗಳನ್ನು ಹಾಗೂ ಪ್ರಾಣಿಗಳ ಕಷ್ಟಗಳನ್ನು ಗಮನದಲ್ಲಿರಿಸಿಕೊಂಡು ಅಧಿಕೃತ ಗುಂಪುಗಳು ಹುಟ್ಟು ಹಾಕಿದ್ದು. ಆದರೆ ಇನ್ನು ಕೆಲವು ಜನರಿಗೆ ಟೋಪಿ ಹಾಕಲೆಂದ್ ಕಂಪನಿಗಳೇ ಹುಟ್ಟುಹಾಕಿದ್ದು! ಉದಾ: natural ಕೇಳಲು ಖುಷಿ ಆಗುತ್ತದೆ, ಅದಕ್ಕೂ ಪ್ರಾಣಿ-ಹಿಂಸೆಗೂ ಯಾವ ಅಧಿಕೃತ ಸಂಬಂಧವೂ ಇಲ್ಲ. ಹಾಗಾಗಿ natural ಎಂದು label ಇರುವ ಒಂದು ಉತ್ಪನ್ನವನ್ನು ಒಬ್ಬ ಖರೀದಿಸಿದ ಎಂದಾದರೆ ಅದರ ಹಿಂದೆ ಬೇಕಾದಷ್ಟು ಪ್ರಾಣಿ-ಹಿಂಸೆ ಇರಲೂ ಬಹುದು, ಇರದಿರಲೂ ಬಹುದು.
ಒಟ್ಟಿನಲ್ಲಿ ವಿದೇಶಗಳಲ್ಲಿ ಅನೇಕ ಜನರು ತಾವು ಏನು ಖರೀದಿಸುತ್ತಿದ್ದೇವೆ, ಅದರ ಹಿಂದೆ ಏನು ಸತ್ಯ ಇದೆ ಎಂದು ತಿಳಿಯಲು ಪ್ರಯತ್ನ ಮಾಡುತ್ತಾ ಇದ್ದಾರೆ, ಅದರ ಫಲವಾಗಿ ನಿಧಾನವಾಗಿ educated buying ಜಾಸ್ತಿ ಆಗುತ್ತಾ ಇದೆ. ಆದರೆ ನಮ್ಮ ದೇಶದಲ್ಲಿ ಜನರು ಬೇರೆ ಎಷ್ಟೋ ರೀತಿಯಲ್ಲಿ ಕಷ್ಟ ಅನುಭವಿಸುತ್ತಾ ಇರುವ ಕಾರಣ ಹೀಗಿರುವ ಕ್ರಾಂತಿ ನಿಧಾನಕ್ಕೆ ಶುರು ಆಗುತ್ತಾ ಇದೆಯಷ್ಟೆ.
ಸಮಯ ಸಿಕ್ಕಿದಾಗ Fair Trade ಎಂಬ conceptನ ಬಗ್ಗೆ ಕೂಡ ದಯವಿಟ್ಟು ಓದಿ:
ಈ ವಿದೇಶೀಯರಿಗೆ ಬೇರೆ ಏನೂ ಕೆಲಸ ಇಲ್ಲ, ಹೊಟ್ಟೆ ತುಂಬಿದವರಿಗೆ ಹೀಗೆಲ್ಲಾ ಮಾತಾಡುವುದು ಸುಲಭ, ಅಲ್ಲವೇ?
ನಿಮಗೆ ವಿದೇಶೀಯರು ಹೇಳಿದ್ದು ಅಷ್ಟಾಗಿ ಪಥ್ಯ ಆಗುವುದಿಲ್ಲ ಎಂದಾದರೆ ಭಾರತದ ಉದ್ದಗಲವೂ ತಿರುಗಾಡಿ ಇಡೀ ದೇಶವನ್ನು, ಜನರ ಕಷ್ಟಗಳನ್ನು ನೋಡಿದ ಗಾಂಧೀಜಿಯ ನಿಲುವನ್ನು ಅರ್ಥಮಾಡಿಕೊಳ್ಳಿರಿ. ಅಂಥಾ ಮಹಾನುಭಾವರು ಕೂಡ ದನಗಳ ಉತ್ಪನ್ನಗಳನ್ನು ನಾವು ಬಳಸುವುದನ್ನು ನಿಲ್ಲಿಸಬೇಕು ಎಂಬ ತತ್ವದಲ್ಲಿ ನಂಬಿಕೆ ಇರಿಸಿದ್ದರು ಎಂಬ ವಿಷಯ ನಿಮಗೆ ತಿಳಿದಿದೆಯೇ? "The moral basis of vegetarianism" ಎಂಬ ಒಂದು ಪುಸ್ತಕ ಇದೆ, ಗಾಂಧೀಜಿಯ ನಿಲುವುಗಳನ್ನು ಅರ್ಥ ಮಾಡಿಕೊಳ್ಳಲು ಒಳ್ಳೆಯ ಸಣ್ಣ ಪುಸ್ತಕ ಅದು.
ನಮಗೇನು ಸಾಧ್ಯವೋ ಅದನ್ನು ಮಾಡುವುದು, ಸುಮ್ಮನೆ ಕೈ ಚೆಲ್ಲಿ ಕೂರುವುದರ ಬದಲು. ಮಾನವಕುಲ ಅದೆಷ್ಟೋ ಕ್ರೂರ ಪದ್ಧತಿಗಳನ್ನು ಒಪ್ಪಿ ನಿಧಾನಕ್ಕೆಯಾದರೂ ಸರಿ-ತಪ್ಪುಗಳ ಮಾರ್ಗದಲ್ಲಿ ಬಹಳ ಮುಂದೆ ಬಂದಿದೆ. ಆದರೆ ಚಾರಿತ್ರಿಕವಾಗಿ ನೋಡಿದರೆ ಬೇಕಾದಷ್ಟು ಸಲ ಅನೇಕ ಸಮಾಜಗಳು ತಾವು ಕಷ್ಟಪಟ್ಟು ಸಾಧಿಸಿದ ಒಳ್ಳೆಯತನವನ್ನೂ/ಒಗ್ಗಟ್ಟನ್ನೂ ಮರೆತು ಅಧಃಪತನವನ್ನೂ ಕಂಡಿದೆ. ಕೆಲವರಲ್ಲಿ ಕೆಲವೊಮ್ಮೆ ಸ್ವಾರ್ಥರಹಿತ ಮನೋಭಾವನೆ ಹುಟ್ಟುತ್ತದೆ, ಆದರೆ ಮುಂದಿನ ಜನಾಂಗಕ್ಕೆ ಸ್ವಾರ್ಥ ಇರಲಾರದು ಎಂದು ಹೇಳಲು ಸಾಧ್ಯವಿಲ್ಲ, ಹಾಗಾಗಿ ಪುನಃ ಕ್ರೌರ್ಯ ತನ್ನ ಬಲವನ್ನು ತೋರಿಸುತ್ತದೆ. ಕುಂಬಾರಗೆ ವರುಷ ದೊಣ್ಣೆಗೆ ನಿಮಿಷ ಎನ್ನುವ ಹಾಗೆ ಶಾಂತಿವಾದಿಗಳು ಕಷ್ಟಪಟ್ಟು ಹರಡುವ ಶಾಂತಿ-ಅಹಿಂಸೆಯ ಸಂದೇಶವನ್ನು ಬಹಳ ಸುಲಭವಾಗಿ ಸ್ವಾರ್ಥಿಗಳು, ಭಯೋತ್ಪಾದಕರು ಹೊಸಕಿ ಹಾಕುತ್ತಾರೆ. ನೋಡುವಾ ನಮಗೆ ಎಷ್ಟು ಮಾಡಲು ಸಾಧ್ಯವಿದೆ ಎಂದು!
ನೀವು ಹೇಳುವುದು ನೋಡಿದರೆ ಎಲ್ಲಾ ಮನುಷ್ಯರು ಬಹಳ ಸುಖದಲ್ಲಿ ಇದ್ದಾರೆ, ಯಾರಿಗೂ ಕಷ್ಟವೇ ಇಲ್ಲ ಎಂದು ಅರ್ಥೈಸಿಕೊಳ್ಳಬೇಕು. ಆದರೆ ಕೋಟಿಗಟ್ಟಲೆ ಮನುಷ್ಯರೇ ತರತರದ ಕಷ್ಟದಲ್ಲಿ ಬದುಕಿಕೊಂಡು ಇರುವಾಗ ಪ್ರಾಣಿಗಳು ಯಾವ ಲೆಕ್ಕ?
ಈ ಪ್ರಶ್ನೆ ಬರೀ ಗೋವಿಗೆ ಸೀಮಿತವಾಗದೆ ಮನುಷ್ಯರು ಪ್ರಾಣಿಗಳ ಮೇಲೆ ತೋರಿಸುವ ಕಾಳಜಿಯನ್ನೇ ಕೆದಕುತ್ತದೆ, ಇದಕ್ಕೆ ಉತ್ತರವಾಗಿ ನೀವು ವೀಗನಿಸಂ ಬಗ್ಗೆ ನಾನು ಬರೆದ ಲೇಖನ ಓದಿ ಎಂದು ವಿನಂತಿ.
ಎಲ್ಲದಕ್ಕಿಂತ ಮುಖ್ಯ – ದೊಡ್ಡ ಕ್ರಾಂತಿಯನ್ನು ಬದಿಗಿಡಿ, ವೈಯಕ್ತಿಕ ನೆಲೆಯಲ್ಲಿ ನಿಮಗೆ ಕ್ರೂರಮೂಲದಿಂದ ಬಂದ ಗೋವಿನ ಉತ್ಪನ್ನಗಳಿಂದ ಆನಂದ-ತೃಪ್ತಿ ಪಡೆಯಲು ಮನಸ್ಸಿದೆಯೋ ಎನ್ನುವುದನ್ನು ನೀವೇ ಆಲೋಚನೆ ಮಾಡಬೇಕು.
4 comments:
ಶಾಸ್ತ್ರಿಗಳೇ...ನಿಮ್ಮ ವಿಷಯ ಮಂಡನೆ ಆಕಳ ದೌರ್ಜನ್ಯದ ಬಗ್ಗೆ ಸರಿ ಇದ್ದು...ಆದ್ರೆ ಅದ್ರ ಉತ್ಪನ್ನಗಳ ಉಪಯೋಗನೇ ಬಿದಕ್ಕು ಅನ್ನದು ಯಾಕೋ ಅತಿ ಆತೆನ? ಮಾವಿನಮರ ಹಣ್ಣು ಬಿಡದು ಅದ್ರ ವಂಶಾಭಿರುದ್ದಿಗೆ..ನಾವು ಅದ್ನ ಕೊಯ್ಲಾಗ ನಿಮ್ಪ್ರಕಾರ? ಮಲ್ಲಿಗೆ ಹೂ ಬಿಡದು ಕೂಡ ಸೃಷ್ಟಿ ಕ್ರಿಯೆಯ ಒಂದು ಭಾಗ ಅಲ್ದೋ...ಮತ್ತೆ ನಾವ್ಯಾಕೆ ಅದ್ನ ಉಪಯೋಗ್ಸಕ್ಕು? ನಿಮ್ಮ ವಾದದ ಒಂದು ಭಾಗ ಸರಿ ಇದ್ದು! ಒಳ್ಳೆದಾಗಲಿ!
~ ಆದರ್ಶ ಮಾವಿನಕುಳಿ
ಆದರ್ಶ,
ಪ್ರತಿಕ್ರಿಯೆಗೆ ಧನ್ಯವಾದಗಳು.
ಮಾವಿನ ಮರ ಹೂ ಬಿಡುದು ನಮಗಾಗಿ ಅಲ್ಲ, ಅದರ ಸ್ವಂತ ವಂಶವೃದ್ಧಿಗೆ, ಸರಿ. ಆದರೆ ಮಾವಿನ ಹಣ್ಣನ್ನು ತಿನ್ನುವ ಜೀವಿಗಳಿಂದಾಗಿ ಬೀಜಪ್ರಸಾರವಾಗುತ್ತದೆ, ಇದು ನಿಸರ್ಗ ನಿರ್ಧರಿಸಿದ ನಿಯಮ.
ಹೂಗಳ ವಿಷಯದಲ್ಲಿ ಕೂಡ ಇಂತಹ ನಿಸರ್ಗ ನಿಯಮಗಳಿರುತ್ತವೆ. ನಿಸರ್ಗ ಹೂ-ಹಣ್ಣುಗಳನ್ನು ಸುಂದರ/ರುಚಿಕರ ಮಾಡಿರುವುದೇ ಅದಕ್ಕೋಸ್ಕರ ಎಂದೂ ವಾದ ಇದೆ - ಆಕರ್ಷಣೆಗೊಳಗಾಗಿ ಬಂದ ಇತರ ಜೀವಿಗಳಿಂದಾಗಿ ಬೀಜಪ್ರಸಾರವಾಗುತ್ತದೆ ಎಂದು.
ಆದರೆ ಆಕಳ ವಿಷಯದಲ್ಲಿ ಹಾಗಲ್ಲ, ಅದರ ಉತ್ಪನ್ನಗಳ ‘ಅಗತ್ಯ’ ಮನುಷ್ಯನೇ ಮಾಡಿದ ನಿಯಮ, ನಿಸರ್ಗ ನಿಯಮವಲ್ಲ.
ದೌರ್ಜನ್ಯವನ್ನು ಸತ್ಯ ಎಂದು ಒಪ್ಪಿದ್ದೀರಿ, ಬಹಳ ಸಂತೋಷ. ಇನ್ನೂ ಆಲೋಚನೆ ಮಾಡಿ ನೋಡಿ, ಉತ್ಪನ್ನಗಳ ಬಳಕೆಯನ್ನು ನಿಲ್ಲಿಸುವವರೆಗೆ ದೌರ್ಜನ್ಯ ತಪ್ಪಿದ್ದಲ್ಲ. ಹಾಗೂ ಮೊದಲ ಹೆಜ್ಜೆಯಾಗಿ ಧಾರ್ಮಿಕ ವಿಧಿಗಳಲ್ಲಿ ನಿಲ್ಲಿಸಬಹುದಲ್ಲಾ? ಏನಂತೀರಿ?
ಶತಮಾನಗಳಿಂದ ಬಂದ ಮನಸ್ಥಿತಿಯನ್ನು ಬಿಡುವುದು ಸುಲಭವಲ್ಲ, ಆದರೆ ಆಲೋಚನೆ ಮಾಡುತ್ತಾ ಹೋದಂತೆ ಇದು ಸ್ವಾಭಾವಿಕ ಸತ್ಯವೆಂದು ಮನದಟ್ಟಾಗುತ್ತಾ ಹೋಗುತ್ತದೆ. ಹಿಂಸೆ ಇದೆ ಎಂದು ನೀವು ಒಪ್ಪಿಕೊಂಡದ್ದೇ ಒಂದು ದೊಡ್ಡ ಹೆಜ್ಜೆ, ಇದೇ ದಿಕ್ಕಿನಲ್ಲಿ ಮುಂದುವರೆದು ನೀವು ಈ ಮೂಕಪ್ರಾಣಿಗಳ ಸಂಕಟವನ್ನು ನೀಗಿಸುವಲ್ಲಿ ಹೆಜ್ಜೆಗಳನ್ನು ಇಡುವಿರಿ ಎಂದು ನಾನು ಹಾರೈಸುತ್ತೇನೆ.
ಇತಿ,
ಕೃಷ್ಣ ಶಾಸ್ತ್ರಿ.
ಎಲ್ಲವನ್ನೂ ಒಪ್ಪುದು ಕಷ್ಟ. ಇದಕ್ಕಿಂತಲೂ ಉತ್ತಮ ದಾರಿಗೊ ಇದ್ದು. ವಿಚಾರಂಗೊ ಒಳ್ಳೆದಿದ್ದು.
@Subbayya Bhat Varmudi; ಸುಬ್ಬಯ್ಯ ಭಟ್ಟ ವರ್ಮುಡಿ
ಧನ್ಯವಾದ. ಆದರೆ ಯಾವುದರ ಒಪ್ಪುಲೆ ಕಷ್ಟ? ಇದಕ್ಕಿಂತಲೂ ಉತ್ತಮ ದಾರಿಗೊ ಯಾವುವು? ರಜ್ಜ ಬಿಡಿಸಿ ಹೇಳಿದರೆ ಜಾಸ್ತಿ ಸ್ಪಷ್ಟತೆ ಇರ್ತು. ಇಲ್ಲದ್ರೆ ಇದ್ರ ಹೇಂಗೆ ಅರ್ಥೈಸಿಕೊಳ್ಳೆಕ್ಕು ಹೇಳಿ ಗೊಂತಾವ್ತಿಲ್ಲೆ.
ಇತಿ,
ಕೃಷ್ಣ ಶಾಸ್ತ್ರಿ.
Post a Comment