About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Saturday, February 6, 2016

ಬಿ.ಟಿ. ದನಗಳ ಚರಿತ್ರೆ ಹಾಗೂ ಮನುಷ್ಯನ ಹಾಲಿನ ಗೀಳು




ಪೀಠಿಕೆ

ಮೊದಲಿಗೆ, ನನ್ನ ಮತ್ತು ಅಮ್ಮನ ಮಧ್ಯೆ ಅದೆಷ್ಟೋ ಸಲ ನಡೆದ, ಇಂದಿಗೂ ಆಗೊಮ್ಮೆ-ಈಗೊಮ್ಮೆ ನಡೆಯುವ ಸಂಭಾಷಣೆಯೊಂದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ. ಹವ್ಯಕ ಕನ್ನಡದಲ್ಲಿದ್ದರೂ ನಿಮಗೆ ಅರ್ಥವಾಗಬಹುದು ಎಂದು ನಂಬಿದ್ದೇನೆ :-)

ನಾನು: ಅಲ್ಲ ಅಮ್ಮಾ, ದನದ ಹಾಲಿನ ನಾವು ತೆಕ್ಕೊಂಡು ಕುಡ್ದ್ರೆ ಕರು ಎಂತರ ಕುಡಿಯೆಕು? ನಾವು ಮಾಡುದು ತಪ್ಪಲ್ಲದಾ? ಮತ್ತೆ ಹಟ್ಟಿಲಿ ಕಟ್ಟಿ ಹಾಕುದರ ಬಗ್ಗೆ ಕೂಡ ಎನಗೆ ತುಂಬ ಬೇಜಾರಾವ್ತು.

ಅಮ್ಮ: ನಿನಗೆ ಗೊಂತಿಲ್ಲೆ, ಹಾಲು ಕರೆಯದ್ರೆ ದನಂಗೊಕ್ಕೆ ಕೆಚ್ಚಲು ಬೇನೆ ಆವ್ತು, ಮತ್ತೆ ಕರುಗಳ ಸುಮ್ಮನೆ ಬೇಕಾಬಿಟ್ಟಿ ಕುಡಿವಲೆ ಬಿಟ್ರೆ ಅವಕ್ಕೆ ಅಜೀರ್ಣ ಆವ್ತು. ಮತ್ತೆ ನೊಡು, ದನಂಗೊಕ್ಕೆ ಮನುಷ್ಯನೊಟ್ಟಿಂಗೆ ಇದ್ದು ಅಭ್ಯಾಸ ಆಯ್ದು, ಅವಕ್ಕೆ ತಮ್ಮಷ್ಟಕ್ಕೆ ಇಪ್ಪಲೆ ಎಡಿತ್ತಿಲ್ಲೆ, ನಾವು ಸಾಕದ್ರೆ ಅವಕ್ಕೆ ಬೇರೆ ಗತಿ ಇಲ್ಲೆ.

ನಾನು: ತಲೆ ಮಂಡೆ ಬುರುಡೆ. ನೀನು ಕಾಡಿಲ್ಲಿ ಯಾವುದಾದ್ರೂ ಪ್ರಾಣಿ ಅದರ ಮರಿಗೆ ಬೇಕಾದ್ದಕ್ಕಿಂತ ಹೆಚ್ಚು ಹಾಲು ಕೊಡುದ್ರ ನೋಡಿದ್ದೆಯಾ? ಈ ದನಗಳನ್ನುದೇ ಸುಮ್ಮನೆ ಬಿಟ್ಟರೆ ಅವು ತಮ್ಮ ಪಾಡಿಂಗೆ ಇಕ್ಕು, ಇದೆಲ್ಲಾ ಮಾಡುದು ನಮ್ಮ ಸ್ವಾರ್ಥಕ್ಕೋಸ್ಕರವೇ ಹೊರತು ಮತ್ತೆಂತ ಇಲ್ಲೆ.

ಅಮ್ಮ: ನಿನಗೆ ಗೊಂತಿಲ್ಲೆ, ಹೆಚ್ಚಿನವಕ್ಕೆ ಸಾಕುವ ದನಂಗಳ ಮೇಲೆ ತುಂಬಾ ಪ್ರೀತಿ ಇರ್ತು. ದನಂಗೊಕ್ಕುದೇ ಮನುಷ್ಯರ ಮೇಲೆ ಪ್ರೀತಿ ಇರ್ತು. ಇದರ ಎಲ್ಲಾ ನೀನು ಸ್ವಾರ್ಥ ಹೇಳಿ ಹೇಳುದು ಹೇಂಗೆ?

ನಾನು: ಇಂದು ಆರು ಹಾಂಗೆ ಪ್ರೀತಿ ತೋರ್ಸುತ್ತವು ಹೇಳು? ಮೇಯ್ಶುಲೆ ಕರ್ಕೊಂಡು ಹೋವ್ತವಿಲ್ಲೆ, ಇಡೀ ಜೀವಮಾನ ಹಟ್ಟಿಲಿ ಇರ್ತು, ಹೆಚ್ಚಿನ ದನವ ಕೊನೆಗೆ ಕಡಿದು ತಿಂತವು, ಗಂಡುಕರುಗಳದ್ದಂತೂ ಕಥೆ ಹೇಳಿ ಪ್ರಯೋಜನ ಇಲ್ಲೆ.

ಅಮ್ಮ: ಇಂದು ಸ್ವಾರ್ಥ ಹೆಚ್ಚಾಯ್ದು ಹೇಳಿ ಒಪ್ಪುತ್ತೆ, ಆದರೆ ನಿನ್ನ ಹಾಂಗೆ ವೀಗನ್ ಅಪ್ಪದಂತೂ solution ಅಲ್ಲ. ದನಂಗಳ ಚೆಂದಕ್ಕೆ ನೋಡಿಗೊಂಡು ಹಾಲು ಕುಡಿವಲೆ ಪ್ರಯತ್ನ ಮಾಡೆಕ್ಕಷ್ಟೆ. ಮತ್ತೆ, ನವಗೆ ಕೃಷಿಗೆ ಸೆಗಣಿ ಗೊಬ್ಬರವಾದ್ರೂ ಬೇಕೇ ಬೇಕಲ್ಲದಾ? ನೀನು ಹೇಳುದ್ರ ಎಲ್ಲಾ ಆನು ಒಪ್ಪುತ್ತಿಲ್ಲೆ.

ನಾನು: ಇದು sustainable solution ಅಲ್ಲ ಅಮ್ಮಾ, ಸರಿಯಾಗಿ analyze ಮಾಡಿ ನೋಡು, ಹಾಲು ಕುಡಿಯದ್ದಿಪ್ಪದೇ ಸರಿಯಾದ ದಾರಿ.

ಅಮ್ಮ: ಎಂತದೋ ಏನೋ. ಇಷ್ಟು ವರ್ಷ ಮನುಷ್ಯರು ದನಂಗಳೊಟ್ಟಿಂಗೆ ಎಷ್ಟೆಲ್ಲಾ ಅಭಿವೃದ್ಧಿ ಹೊಂದಿದ್ದ, ನೀನು ಹೇಳುದ್ರ ಎಲ್ಲಾ ಆನಂತೂ ಒಪ್ಪುತ್ತಿಲ್ಲೆ.

ಇಂದಿಗೂ ಅಮ್ಮ ತನ್ನ ನಿಲುವನ್ನು ಸಂಪೂರ್ಣವಾಗಿ ಬಿಟ್ಟುಕೊಡಲಿಲ್ಲ. ನಿಮ್ಮ ಪ್ರಕಾರ ಇದರಲ್ಲಿ ಯಾರು ಸರಿ, ಯಾರು ತಪ್ಪು?

ಮುಂದಕ್ಕೆ ಓದುವ ಮುನ್ನ: ಈ ಮೇಲಿನ ಸಂಭಾಷಣೆಯಲ್ಲಿ "ವೀಗನ್" ಎಂಬ ಪದಪ್ರಯೋಗ ನೋಡಿದಿರಿ. ಈ ವೀಗನ್ನರು ಎಂದರೆ ಯಾರಪ್ಪಾ ಎಂದು ಕೇಳಿದಿರಾ? ವೀಗನ್ ತತ್ವ ಎಂದರೆ ಯಾವುದೇ ಪ್ರಾಣಿಗಳನ್ನು ಅಥವಾ ಪ್ರಾಣಿಜನ್ಯ ಪದಾರ್ಥಗಳನ್ನು ಸೇವಿಸದೇ/ಬಳಸದೇ ಇರುವುದು. ಈ ಬಗ್ಗೆ ತುಸು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಈ ಇನ್ನೊಂದು ಸಂಕ್ಷಿಪ್ತ ಲೇಖನವನ್ನು ಓದಬಹುದು.

ದನಗಳ ವಿಷಯಕ್ಕೆ ಬಂದಾಗ ವೀಗನ್ನರು ಸಾಮಾನ್ಯವಾಗಿ ಮಂಡಿಸುವ ಈ ಎರಡು ವಾದಗಳನ್ನು ವಿಶ್ಲೇಷಿಸುವ ಪ್ರಯತ್ನವನ್ನು ನಾನು ಈ ಲೇಖನದಲ್ಲಿ ಮಾಡುತ್ತೇನೆ.

. ದನಗಳು ತಮ್ಮ ಕರುವಿಗೆ ಎಷ್ಟು ಬೇಕೋ ಅಷ್ಟೇ ಹಾಲನ್ನು ಉತ್ಪಾದಿಸುತ್ತವೆ, ಹೆಚ್ಚು ಉತ್ಪಾದಿಸುವುದೇ ಇಲ್ಲ
. ದನಗಳನ್ನು ಕಾಡಿನಲ್ಲಿ ಬಿಟ್ಟರೆ ಅವುಗಳು ಮನುಷ್ಯನ ಆಸರೆ-ಸಂಪರ್ಕ ಇಲ್ಲದೆ ಸ್ವತಂತ್ರವಾಗಿ ಉಳಿದು, ಬೆಳೆಯುತ್ತವೆ

ತೀರಾ ಇತ್ತೀಚೆಗಿನವರೆಗೆ ನಾನು ಕೂಡ ಮುಗ್ಧನಾಗಿ ಈ ವಾದಸರಣಿಯನ್ನು ಉಪಯೋಗಿಸುತ್ತಿದ್ದೆ. ಇದಕ್ಕೆ ವಿರುದ್ಧವಾಗಿ ಯಾರಾದರೂ ಹೈನುಗಾರಿಕೋದ್ಯಮದವರು "ನಮ್ಮ ದನ ಹೆಚ್ಚು ಹಾಲು ಕೊಡುತ್ತದೆ, ನಾವು ಕರೆಯದಿದ್ದರೆ ಅದಕ್ಕೆ ಕೆಚ್ಚಲು ನೊವಾಗುತ್ತದೆ. ಈಗ ದನಗಳಿಗೆ ಮನುಷ್ಯನ ಜೊತೆ ಇದ್ದು ಅಭ್ಯಾಸವಾಗಿದೆ, ಕಾಡಿನಲ್ಲಿ ಇರಲು ಸಾಧ್ಯವೇ ಇಲ್ಲ" ಎಂದಿತ್ಯಾದಿ ಹೇಳಿದರೆ ನನ್ನ ಪ್ರತಿವಾದಗಳು ಹೀಗೆ ಇರುತ್ತಿದ್ದುವು:

- ಕಾಡಿನಲ್ಲಿ ಜಿಂಕೆ, ಆನೆ ಅಥವಾ ಯಾವುದೇ ಸಸ್ತನಿಯು ತನ್ನ ಮರಿಗೆ ಬೇಕಾದ್ದಕಿಂತ ಹೆಚ್ಚು ಹಾಲು ಉತ್ಪಾದಿಸುತ್ತದೆಯೇ? ಯಾವುದೇ ಪ್ರಾಣಿಗೆ ಹೇಗೆ ಬದುಕಬೇಕು, ಹೇಗೆ ರಕ್ಷಣೆ ಪಡೆದುಕೊಳ್ಳಬೇಕು, ಏನನ್ನು ತಿನ್ನಬೇಕು, ಹೇಗೆ ತಮ್ಮ ವಂಶಾಭಿವೃದ್ಧಿ ಮಾಡಿಕೊಳ್ಳಬೇಕು ಎಂಬುದನ್ನು ಮನುಷ್ಯ ಹೇಳಿಕೊಡುತ್ತಾನೆಯೇ? ಇಲ್ಲ. ಅಂತೆಯೇ ದನವೂ ಕೂಡ.
- ಕೇವಲ ಕೆಲವು ಸಾವಿರ ವರುಷ ಮನುಷ್ಯನ ಜೊತೆ ಇದ್ದ ಮಾತ್ರಕ್ಕೆ ಅವುಗಳ ಮೂಲಸ್ವಭಾವದಲ್ಲಿ ಅದೆಷ್ಟು ಮಹಾ ಬದಲಾವಣೆ ಹೊಂದಿರುತ್ತದೆ, ನೀವೆಲ್ಲಾ ಈ ಕೆಳಗಿನ ವಿಧಾನಗಳನ್ನು/ತಂತ್ರಗಳನ್ನು ಉಪಯೋಗಿಸಿ ಹೆಚ್ಚು ಹಾಲನ್ನು ಪಡೆಯುತ್ತೀರಿ
    () ದನಗಳಿಗೆ ಅತಿಯಾಗಿ ಹಾಗೂ ಸಂಸ್ಕರಿತ ಆಹಾರ ಸೇವಿಸುವಂತೆ ಪ್ರೇರೇಪಿಸಿ ಅಗತ್ಯಕ್ಕಿಂತ ಹೆಚ್ಚು ಹಾಲು ಉತ್ಪಾದಿಸುವಂತೆ ಮಾಡುವುದು (ಮುಕ್ತ ಪರಿಸರದಲ್ಲಿ ಅವುಗಳಿಗೆ ಸಿಗುವ ಆಹಾರವು ಸೀಮಿತ, ಹಾಗೂ ವಿವಿಧ ಕ್ರೂರಮೃಗಗಳಿಂದ ತಪ್ಪಿಸಿಕೊಂಡು ಮೇಯುವ, ನೀರು ಕುಡಿಯುವ ಅನಿವಾರ್ಯತೆ ಇರುವುದರಿಂದ ಒಟ್ಟಾರೆ ಸೇವನೆಯು ಹಿಡಿತದಲ್ಲಿರುತ್ತದೆ)
    () ಕರುವಿಗೆ ಸಿಗಬೇಕಾದ ಹಾಲನ್ನು ನೀವೇ ತೆಗೆದು ಕೊನೆಗೆ ದನವು ತನ್ನ ಕರುವಿಗೆ ಬೇಕಾಗಿ ಹೆಚ್ಚು ಹಾಲನ್ನು ಉತ್ಪಾದಿಸುವಂತೆ ಪರೋಕ್ಷ ಒತ್ತಡ ಹೇರುವುದು
    () ಹಾಗೂ ಇತ್ತೀಚೆಗಿನ ದಿನಗಳಲ್ಲಿ ಹಾರ್ಮೋನ್ ಇಂಜೆಕ್ಷನ್ ಇತ್ಯಾದಿ ಕೊಟ್ಟು ಹೆಚ್ಚು ಹಾಲು ಕೊಡುವಂತೆ ಮಾಡುವುದು

ಒಟ್ಟಾರೆ, ಈ ದನಗಳನ್ನು ಪುನಃ ಕಾಡಿಗೆ ಬಿಟ್ಟರೆ ಬಹಳ ಬೇಗನೆ ಅವುಗಳು ತಮ್ಮ ಆ ಮುಕ್ತ ಪರಿಸರಕ್ಕೆ ಹೊಂದಿಕೊಳ್ಳುತ್ತವೆ, ಹಾಗೂ ತಮ್ಮ ದಾರಿಯನ್ನು ತಾವೇ ಕಂಡುಕೊಳ್ಳುತ್ತವೆ ಎಂಬುದು ನನ್ನ ನಿಲುವಾಗಿತ್ತು. ವಿದೇಶದಿಂದ ಕರೆತಂದ ಜರ್ಸಿ ದನಗಳು ನಮ್ಮ ದೇಶದ ವಾತಾವರಕ್ಕೆ ಅಷ್ಟಾಗಿ ಹೊಂದಿಕೊಳ್ಳದೆ ಇರುವುದು ಬೇರೆ ಕಥೆ ಬಿಡಿ, ಅದರ ವಿವರಣೆ ತರ್ಕಕ್ಕೆ ನಿಲುಕದಂಥದ್ದೇನೂ ಅಲ್ಲ. ಆದರೆ ಈಗ ಮನುಷ್ಯನನ್ನೇ ನೋಡಿ - ಹೇಗೆ ಜಗತ್ತಿನಾದ್ಯಂತ ವಿವಿಧ ಪರಿಸರಕ್ಕೆ ಒಗ್ಗಿಕೊಳ್ಳುತ್ತಾನೆ, ಹಾಗೆಯೇ ಸ್ವತಂತ್ರವಾಗಿ ಬಿಟ್ಟರೆ ಜಗತ್ತಿನಾದ್ಯಂತ ಮನುಷ್ಯನ ಮೂಲಕ ಹರಡಿಹೋಗಿರುವ ದನದ ತಳಿಗಳು ಕೂಡ ವಿವಿಧ ಅಡೆತಡೆಗಳನ್ನು ಮೀರಿ ತಮ್ಮಷ್ಟಕ್ಕೆ ಬದುಕಲು ಕಲಿಯುತ್ತವೆ ಎಂದು ನಾನು ನಂಬಿದ್ದೆ.

ಮನುಷ್ಯನ ಅಡಿಯಾಳಾಗಿರದೆ ಇತರ ಅನೇಕ ವನ್ಯಜೀವಿಗಳಂತೆ ಬದುಕುವ ಒಂದು ಜಾತಿಯ ದನ ಇಂಗ್ಲೆಂಡಿನ ಒಂದು ಪ್ರದೇಶದಲ್ಲಿ ಇಂದಿಗೂ ಇವೆ!
http://chillinghamwildcattle.com/

ಆದರೆ ಇತ್ತೀಚೆಗಿನ ಕೆಲವು ಲೇಖನಗಳು ನನ್ನ ಆಲೋಚನೆಗಳಿಗೆ ಹೊಸ ಆಯಾಮ ಕೊಟ್ಟಿವೆ, ಈ ವಾದಸರಣಿ ಅಂದುಕೊಂಡಷ್ಟೇನೂ ಸರಳವಾಗಿಲ್ಲ ಎಂಬುದು ನನಗೆ ನಿಚ್ಚಳವಾಗಿದೆ. ನಾವು, ಅರ್ಥಾತ್ ಮನುಷ್ಯರು, ತಿಳಿದೋ ತಿಳಿಯದೆಯೋ ಏನೆಲ್ಲಾ ಅವಾಂತರಗಳನ್ನು ಹುಟ್ಟುಹಾಕಿದ್ದೇವೆ ಎಂಬುದರ ಬಗ್ಗೆ ಮುಂದೆ ಓದಿ.

ವಿಕಾಸವಾದದ ಬಗ್ಗೆ ಒಂದಿಷ್ಟು...

ಪ್ರಕೃತಿಯಲ್ಲಿ ಯಾವುದೇ ಸಸ್ಯ-ಪ್ರಾಣಿ-ಪಕ್ಷಿಗಳ ಪ್ರಭೇದಗಳು ವಿಕಸನಗೊಳ್ಳುವುದು ಯಾವ ರೀತಿಯಲ್ಲಿ? "ಈಸಬೇಕು, ಇದ್ದು ಜೈಸಬೇಕು" ಎಂಬ ಬಯಕೆಯಿದೆಯಲ್ಲಾ, ಅದು ಪ್ರತಿಯೊಂದು ಜೀವಪ್ರಭೇದದಲ್ಲಿಯೂ ಅತ್ಯಂತ ಪ್ರಬಲವಾಗಿರುತ್ತದೆ, ತಮ್ಮಲ್ಲಿ ಯಾವುದಾದರೂ ನ್ಯೂನತೆಗಳಿದ್ದರೆ ಅದನ್ನು ಮೆಟ್ಟಿನಿತ್ತು ಬದಲಾಗಲು, ಮಿತಿಗಳನ್ನು ಮೀರಲು ಎಲ್ಲಾ ಜೀವಿಗಳೂ ವಿವಿಧ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ಇಂತಹ ಅದಮ್ಯ ತುಡಿತವೋ ಅಥವಾ ಇತರ ಆಕಸ್ಮಿಕ ಕಾರಗಳಿಂದಲೋ, ಕಾಲಕಾಲಕ್ಕೆ ಜೀವಿಗಳ ಜೀನ್‍ಗಳಲ್ಲಿ ಅಲ್ಲೊಂದು-ಇಲ್ಲೊಂದು ಹೀಗೆ ಸಣ್ಣಪುಟ್ಟ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಹೀಗೆ ಬದಲಾವಣೆಗಳಾದಾಗ ಅವುಗಳ ಉಳಿಯುವಿಕೆ-ಬೆಳವಣಿಗೆ, ಒಟ್ಟಾರೆ ವಿಕಾಸಕ್ಕೆ ಪೂರಕವಾದ ಗುಣಲಕ್ಷಣಗಳು ಕಂಡುಬಂದರೆ ಅವು ಮುಂದಿನ ಜನಾಂಗಗಳಿಗೆ ದಾಟಿಹೋಗುತ್ತದೆ. ಇನ್ನೊಂದೆಡೆ, ಪೂರಕವಲ್ಲದ ಗುಣಲಕ್ಷಣಗಳನ್ನು (ವೈಪರೀತ್ಯಗಳು) ಹೊಂದಿದ ಜೀವಿಗಳು ಬೇಗನೇ ಅಂತ್ಯಕಾಣುತ್ತವೆ ಹಾಗೂ ಅಂತಹ ದುರ್ಬಲ ಜೀನ್‍ಗಳು ಮುಂದಿನ ಜನಾಂಗಕ್ಕೆ ಹೋಗುವ ಸಾಧ್ಯತೆಗಳು ಕಮ್ಮಿಯಾಗುತ್ತವೆ. ಉದಾ: ಅಪಾಯವನ್ನು ಗ್ರಹಿಸುವ ಹಾಗೂ ಅದರಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಯಾವುದೇ ಪ್ರಾಣಿಪ್ರಭೇದದ ವಿಕಾಸದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈ ವಿಕಾಸವಾದದ ನಿಜವಾದ ಅದ್ಭುತವನ್ನು ಕಾಣಬೇಕಾದರೆ ನಾವು ಎಲ್ಲಾ ಜೀವಿಗಳನ್ನೂ ಒಟ್ಟಾರೆ ದೃಷ್ಟಿಯಿಂದ ಅವಲೋಕಿಸಬೇಕು. ಆಗಲೇ ನಮಗೆ ತಿಳಿಯುವುದು - ಹೇಗೆ ಒಂದು ಕಾಲದಲ್ಲಿ ನಿರ್ಜೀವವಾಗಿದ್ದ ಭೂಮಿ ಮೊದಲಿಗೆ ಏಕಕೋಶ ಜೀವಿಗಳಿಗೆ ಜನ್ಮ ಕೊಟ್ಟು ಇಂದು ಅಸಂಖ್ಯ ಸಸ್ಯ-ಪ್ರಾಣಿ-ಪಕ್ಷಿ-ಜಲಚರ ಪ್ರಭೆದಗಳಿಂದ ತುಂಬಿ ತುಳುಕುತ್ತಿದೆ ಎಂದು. Survival of the fittest ಎಂಬ ವಿಕಾಸವಾದದ ಸಿದ್ಧಾಂತವನ್ನು ನಾವೆಲ್ಲರೂ ಶಾಲೆಯಲ್ಲಿ ಕಲಿತಿದ್ದೇವೆ. ಆದರೆ ಇದರ ಬಗ್ಗೆ ಅದೆಷ್ಟು ಗಂಭೀರವಾಗಿ ನಾವು ಆಲೋಚನೆ ಮಾಡುತ್ತೇವೆ? ನಿತ್ಯವೂ ಕಾಣುವ ಅದೆಷ್ಟು ಸಮಸ್ಯೆಗಳನ್ನು ಈ ಭೂತಗನ್ನಡಿಯ ಅಡಿಯಲ್ಲಿಟ್ಟು ವಿಶ್ಲೇಷಿಸುತ್ತೇವೆ?

"ದನ"ಗಳ ವಿಕಾಸ

ಕೆಲವು ಸಾವಿರ ವರುಷಗಳ ಹಿಂದೆ ನಮ್ಮ ವಿವಿಧ ಅಗತ್ಯಗಳನ್ನು ಪೂರೈಸುವುದಕ್ಕೋಸ್ಕರ ನಾವು ದನ ಮತ್ತಿತರ ಪ್ರಾಣಿ-ಪಕ್ಷಿಗಳನ್ನು ಸಾಕುಪ್ರಾಣಿಗಳಾಗಿ ನಮ್ಮೊಡನೆ ಇರಿಸಿಕೊಳ್ಳಲಾರಂಭಿಸಿದೆವು. ಈ ಪ್ರಕ್ರಿಯೆಯಲ್ಲಿ ನಾವು ಅವುಗಳಿಗೆ ಆಹಾರ-ರಕ್ಷಣೆ ಇತ್ಯಾದಿಗಳನ್ನು ಕೊಡಲು ಆರಂಭಿಸಿದೆವು, ವಿವಿಧ ರೀತಿಯಲ್ಲಿ ಸ್ನೇಹವನ್ನೂ ತೋರಲಾರಂಭಿಸಿದೆವು. ಆದರೆ ಮುಖ್ಯ ಉದ್ದೇಶ ನಮ್ಮ ಅಗತ್ಯಗಳನ್ನು ಪೂರೈಸುವುದೇ ಆಗಿತ್ತು, ಅವುಗಳ ಉದ್ಧಾರ ಅಲ್ಲ. ನಾವು ಅರಿತೋ ಅರಿಯದೆಯೋ ಅವುಗಳ ನೈಸರ್ಗಿಕ ವಿಕಾಸವನ್ನು ಕಡೆಗಣಿಸಿ ನಮಗೆ ಬೇಕಾದ ದಿಕ್ಕಿನಲ್ಲಿ ಅದನ್ನು ತಿರುಚಲಾರಂಭಿಸಿದೆವು. ಉದಾಹರಣೆಗೆ, ತನ್ನ ಕರುವಿಗೆ ಬೇಕಾದದ್ದಕ್ಕಿಂತಲೂ ಹೆಚ್ಚು ಹಾಲು ಉತ್ಪಾದಿಸುವ ‘ವೈಪರೀತ್ಯ’ವಿರುವ ದನವೊಂದು ಆಕಸ್ಮಿಕವಾಗಿ ಹುಟ್ಟಿತು ಎಂದಿಟ್ಟುಕೊಳ್ಳಿ. ಮುಕ್ತಪರಿಸರದಲ್ಲಿ ಆ ದನವು ಕೆಚ್ಚಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಸತ್ತುಹೋಗುತ್ತಿತ್ತೋ ಏನೋ. ಆದರೆ ನಾವು ಅಂತಹ ವೈಪರೀತ್ಯಗಳನ್ನು ನೋಡಿ ಖುಷಿಪಟ್ಟೆವು, ಅದನ್ನು ಜೋಪಾನವಾಗಿ ಕಾಪಾಡಿ ಅದರ ಸಂತತಿ ಬೆಳೆಯುವಂತೆ ಪ್ರೇರೇಪಿಸಿದೆವು. ಆದರೆ ಹೀಗಿರುವ ನೈಸರ್ಗಿಕ ಆಕಸ್ಮಿಕಗಳು ಪ್ರಕೃತಿಯಲ್ಲಿ ಆಗುವುದು ಅತ್ಯಂತ ಅಪರೂಪಕ್ಕೆ ಹಾಗೂ ನಮಗೆ ಇದರ ಮೇಲೆ ಯಾವುದೇ ಹಿಡಿತವಿರಲಿಲ್ಲ. ಆಗ ನಾವು ಕಂಡುಹುಡುಕಿದ ಇನ್ನೊಂದು ವಿಧಾನವೇನು? ಅದುವೇ selective breeding

ಬುದ್ಧಿವಂತರಾದ ನಮಗೆ ಇರುವ ಅತ್ಯಂತ ದೊಡ್ಡ ಶಕ್ತಿಯೆಂದರೆ pattern recognition. ನಮ್ಮ ಸುತ್ತಮುತ್ತ ತುಸುವೇ ವ್ಯತ್ಯಸ್ಥವಾಗಿರುವ ಎರಡು ತಳಿಗಳು ಮಿಲನಗೊಂಡು ಮರಿ ಹುಟ್ಟಿಸುವಾಗ ಬೇರೆಯೇ ಒಂದು ತಳಿಯು ಸೃಷ್ಟಿಯಾಗುವ ವೈಚಿತ್ರ್ಯವು ನಮ್ಮ ಗಮನಕ್ಕೆ ಬೀಳದೇ ಇರಲಿಲ್ಲ. ನಿಧಾನಕ್ಕೆ ಇದನ್ನು ನಮ್ಮ ಲಾಭಕ್ಕೆ ಹೇಗೆ ಬಳಸಬಹುದು ಎಂಬ ಆಲೋಚನೆಯು ನಮ್ಮ ಮನಸ್ಸಿನಲ್ಲಿ ಮೂಡತೊಡಗಿತು. ನೈಸರ್ಗಿಕವಾಗಿ ಆಗುವ ಈ ಪ್ರಕ್ರಿಯೆಯನ್ನು ವೇಗಗೊಳಿಸಲು ಸಾಧ್ಯವೇ ಎಂಬ ದೂ(ದು)ರಾಲೋಚನೆಯೂ ನಮಗೆ ಮೂಡಿಬಂತು, ಹೀಗೆ trial & error ಮೂಲಕ ಅವುಗಳ ನೈಸರ್ಗಿಕ ಮಿಲನಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಮೂಗುತೂರಿಸಲು ಆರಂಭಿಸಿದೆವು, ನಮಗೆ ಬೇಕಾದ ಗುಣಲಕ್ಷಣಗಳಿಗೆ ಮಣೆ ಹಾಕಿ ವಿವಿಧ ಸಾಮರ್ಥ್ಯ-ವೈಪರೀತ್ಯಗಳಿರುವ ತಳಿಗಳನ್ನು ಹುಟ್ಟಿಸಿ ಪ್ರೋತ್ಸಾಹಿಸಲಾರಂಭಿಸಿದೆವು. ಕಳೆದ ಸಾವಿರಾರು ವರುಷಗಳ ಒಡನಾಟದಲ್ಲಿ ನಾವು ದನಗಳ ಮೂಲಸ್ವರೂಪವನ್ನು ಸಾಕಷ್ಟು ಮಾರ್ಪಡಿಸಿದ್ದೇವೆ. ಮನುಷ್ಯನ ಹಸ್ತಕ್ಷೇಪವಿಲ್ಲದಿದ್ದರೆ ಇಂದಿನ ದನಗಳ ಪೂರ್ವಜ ತಳಿಗಳಾದ Aurochಗಳು ಅದೇ ರೂಪದಲ್ಲಿ ಅಥವಾ ಒಂದಷ್ಟು ನೈಸರ್ಗಿಕ ಮಾರ್ಪಾಡುಗಳನ್ನು ಹೊಂದಿ ಜಿಂಕೆ, ಹುಲಿಗಳಂತೆ ಕಾಡಿನಲ್ಲಿರುತ್ತಿದ್ದವು. ಆದರೆ ಈಗ ಆ ಮೂಲತಳಿಗಳು ಸಂಪೂರ್ಣವಾಗಿ ನಿರ್ನಾಮವಾಗಿ ಬೇರೆಯೇ ತಳಿಗಳು ನಮ್ಮ ಮುಂದಿವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇಂದು ನಾವು pure breed ಎಂದು ಹೇಳುವ ಯಾವ ತಳಿಯೂ ಕೂಡ natural selection ಮೂಲಕ ಸೃಷ್ಟಿಯಾದದ್ದಲ್ಲ, ಹೀಗಾಗಿ ಅವುಗಳಿಗೆ ಪ್ರಕೃತಿಯಲ್ಲಿ ಮುಕ್ತವಾಗಿ ಬದುಕುವ ಸಾಮರ್ಥ್ಯ ಇದೆಯೇ ಇಲ್ಲವೇ ಎಂಬುದು ದೊಡ್ಡ ಪ್ರಶ್ನೆಯೇ ಹೌದು. ಇಷ್ಟೆಲ್ಲಾ ಆದರೂ ಕೂಡ ಕೆಲವು ಕೃಷಿಕರ ಅಭಿಪ್ರಾಯವೇನೆಂದರೆ ನಮ್ಮ ದೇಶೀ ತಳಿಗಳಲ್ಲಿ ಅನೇಕ ದನಗಳು ಇಂದಿಗೂ ಕಾಡಿನಲ್ಲಿ ಮುಕ್ತವಾಗಿ ಬದುಕುವ ಸಾಮರ್ಥ್ಯವನ್ನು ಉಳಿಸಿಕೊಂಡಿವೆ ಎಂದು, ಆದರೆ ಇದು ಯಾರೂ ಮಾಡದ ಪ್ರಯೋಗವಾದ್ದರಿಂದ ಖಾತ್ರಿಯಾಗಿ ಹೇಳುವವರಾರೂ ಇಲ್ಲ. ಆದರೆ ಇದನ್ನು ಅಲ್ಲಗಳೆಯುವಂತೆಯೂ ಇಲ್ಲ. ನಿಮಗೇನನಿಸುತ್ತದೆ?

ತಂತ್ರಜ್ಞಾನದ ಅಬ್ಬರ

ಕೈಗಾರಿಕಾ ಕ್ರಾಂತಿ ಶುರುವಾಗುವ ತನಕ ನಾವು ಪ್ರಕೃತಿಯ ನಿಯಮಗಳಿಗೆ ಸಾಕಷ್ಟು ಪೂರಕವಾಗಿಯೇ ಅನೇಕ ವಿಷಯಗಳನ್ನು ಮಾಡುತ್ತಿದ್ದೆವು. ಹಾಗೂ selective breeding ಒಂದು ಅತ್ಯಂತ ನುರಿತ ವಿಜ್ಞಾನವಾಗಿ, ನಿರ್ದಯ ಸಾಧನವಾಗಿ ಇನ್ನೂ ಹೊರಹೊಮ್ಮಿರಲಿಲ್ಲ. ಆದರೆ ಇತ್ತೀಚೆಗಿನ ದಿನಗಳಲ್ಲಿ ಪ್ರಬುದ್ಧ(?) ತಂತ್ರಜ್ಞಾನಗಳನ್ನು ಬಳಸಿ ದನಗಳ ಜೀವನವನ್ನು ನರಕಗೊಳಿಸುವಲ್ಲಿ ನಾವು ಸಾಕಷ್ಟು ಯಶಸ್ಸು ಗಳಿಸಿದ್ದೇವೆ. ಪಾಶ್ಚಾತ್ಯ ದೇಶಗಳಲ್ಲಿ ಕಳೆದ ಕೆಲವು ದಶಕಗಳಲ್ಲಿ ಏನೆಲ್ಲಾ "ಸಾಧಿಸಿದ್ದಾರೆ" ಎಂಬುದನ್ನು ಗಮನಿಸಿದರೆ ನಿಜಕ್ಕೂ ಬೇಸರವಾಗುತ್ತದೆ. ಅಮೇರಿಕಾದ ಡೈರಿ ಉದ್ಯಮಿಗಳು ದನಗಳ ಹಾಲಿನಲ್ಲಿ ಕೊಬ್ಬಿನಂಶ ಎಷ್ಟು, ಪ್ರೋಟೀನ್ ಎಷ್ಟು, ಎಷ್ಟು ತಿಂಗಳು ಹಾಲು ಉತ್ಪಾದಿಸುತ್ತದೆ - ಎಂಬಿತ್ಯಾದಿ ಗುಣಲಕ್ಷಣಗಳು ಮಾತ್ರ ಮಾನದಂಡಗಳನ್ನಾಗಿರಿಸಿಕೊಂಡು ದನಗಳನ್ನು ವರ್ಗೀಕರಣ ಮಾಡಲಾರಂಭಿಸಿದರು; ಯಾವ ಹೋರಿಗಳ ವೀರ್ಯದ ಮೂಲಕ ದನಗಳನ್ನು ಹೆಚ್ಚು ಲಾಭದಾಯಕ ಮಾಡಲು ಸಾಧ್ಯ ಎಂಬುದನ್ನು ಗಮನಿಸಿ "ಅತ್ಯುತ್ಕೃಷ್ಟವಾದ ಹೋರಿ"ಗಳ ಆಯ್ಕೆ ಮಾಡಲಾರಂಭಿಸಿದರು (ಅವುಗಳಿಗೆ ಮಾತ್ರ ಸಂತಾನಭಾಗ್ಯ!). ಈ ಪ್ರಕ್ರಿಯೆ ಅಮೇರಿಕಾದಲ್ಲಿ ಮಾತ್ರ ಅಲ್ಲ ಜಗತ್ತಿನ ಎಲ್ಲೆಡೆಯೂ ನಡೆಯುತ್ತಿತ್ತು, ಇದರಲ್ಲೇನು ವಿಶೇಷ ಎಂದಿರಾ? ಒಂದು ವಿಶೇಷವಿದೆ - ಅಮೇರಿಕಾದಲ್ಲಿ  ಹತ್ತಾರು, ನೂರಾರು ದನಗಳಿರುವ ಸಣ್ಣ ಡೈರಿಗಳನ್ನು ಮುಚ್ಚಿ ಸಾವಿರಾರು ದನಗಳ ದೊಡ್ಡ ಡೈರಿಗಳನ್ನು ಹುಟ್ಟುಹಾಕಲಾರಂಭಿಸಿದರು, ಹಾಗೂ ಈ ಎಲ್ಲಾ ವಿಷಯಗಳನ್ನು Big Data ತತ್ವಗಳನ್ನು ಉಪಯೋಗಿಸಿಕೊಂಡು ಅತ್ಯಂತ ಕರಾರುವಾಕ್ಕಾಗಿ ಲೆಕ್ಕ ಹಾಕಲಾರಂಭಿಸಿದರು. ಪರಿಣಾಮ? ಕೇವಲ ಎಪ್ಪತ್ತು ವರ್ಷಗಳಲ್ಲಿ ದನಗಳ ಹಾಲಿನ ಉತ್ಪಾದನೆಯನ್ನು ನಾಲ್ಕುಪಟ್ಟಿಗಿಂತಲೂ ಹೆಚ್ಚು ಮಾಡಿದ್ದಾರೆ, ಅರ್ಥಾತ್ ಇಂದು ಅಮೇರಿಕಾದಲ್ಲಿರುವ ದನಗಳ ನೈಸರ್ಗಿಕ ವಿಕಾಸವು ಸಂಪೂರ್ಣವಾಗಿ ದಾರಿತಪ್ಪಿದೆ. ಒಂದು ಅಧ್ಯಯನದ ಪ್ರಕಾರ ಹೋಲ್‍ಸ್ಟೀನ್ ದನಗಳ ಜೀನ್‍ಗಳು ಕೇವಲ ಕಳೆದ ನಲುವತ್ತು ವರ್ಷಗಳಲ್ಲಿ ಶೇಕಡಾ22ರಷ್ಟು ಬದಲಾಗಿದೆಯಂತೆ! ಶಾಕ್ ಹೊಡೆಯಿತೇ?! ಇಂತಹ ಅಧ್ಯಯನಗಳು ನಡೆಯುತ್ತಿರುವುದು ಕೇವಲ ಹಾಲಿನ ಉತ್ಪಾದನೆಯ ದೃಷ್ಟಿಯಿಂದ ಮಾತ್ರ ಅಲ್ಲ, ದನಗಳಿಂದ ಎಷ್ಟು ಹೆಚ್ಚು ಮಾಂಸ ಸಿಗುತ್ತದೆ ಎಂಬುದೂ ಒಂದು ಮಾನದಂಡ.



ನಮ್ಮ ಮಧ್ಯೆ ಕುಲಾಂತರಿ ತಂತ್ರಜ್ಞಾನದ ಬಗ್ಗೆ ದನಿ ಎಬ್ಬಿಸುವವರು ಹಲವರಿದ್ದಾರೆ - ಬಿಟಿ ಬದನೆ ವಿರುದ್ಧ ನಡೆದ ಹೋರಾಟ, ಮೊನ್ಸಾಂಟೋ ಕಂಪೆನಿಯ ವಿರುದ್ಧ ಹಾಗೂ GM ಸಾಸಿವೆ ವಿರುದ್ಧ ಇಂದಿಗೂ ಅನೇಕರು ನಡೆಸುವ ಹೋರಾಟ ಇತ್ಯಾದಿ ನಿಮಗೆ ಗೊತ್ತಿರಬಹುದು, ಆದರೆ ಹೈಬ್ರಿಡ್ ತಳಿಗಳು, selective breeding ಮೂಲಕ ಜೀನ್‍ಗಳ ಗುಣವನ್ನು ಇಷ್ಟರ ಮಟ್ಟಿಗೆ ಬದಲಿಸುವುದರ ಬಗ್ಗೆ ಅಷ್ಟೆಲ್ಲಾ ತಲೆಕೆಡಿಸಿಕೊಂಡವರು ವಿರಳ - ಅವುಗಳು ಪ್ರಕೃತಿಯ ನಿಯಮಕ್ಕನುಸಾರವಾಗಿಯೇ ನಡೆಯುವ ಪ್ರಕ್ರಿಯೆ ಎಂಬ ಭ್ರಮೆಯಲ್ಲಿರುವುದು ನಮ್ಮ ಸಾಮಾನ್ಯ ಧೋರಣೆ. ಈ ವಿಧಾನದ ಮೂಲಕ ಜೀನ್‍ಗಳಲ್ಲಿ ಇಪ್ಪತ್ತಲ್ಲ ಐವತ್ತು ಶೇಕಡಾ ಬದಲಾವಣೆ ಆದರೂ ಕೂಡ ಅವರಿಗಾರಿಗೂ ವಿಶೇಷವಾದ ಚಿಂತೆ ಇದ್ದಂತಿಲ್ಲ. ಅಂತಹ ದನಗಳ ಹಾಲಿನ ಗುಣಲಕ್ಷಣಗಳೇನು? ಅದನ್ನು ಕುಡಿಯುವುದು ಮೊದಲಿಗಿಂತ ಹೆಚ್ಚು ಅಪಾಯಕಾರಿಯೇ ಎಂಬ ಭಯ ಯಾರಿಗೂ ಬಂದಂತಿಲ್ಲ. ಹೀಗೆ ಅಭೂತಪೂರ್ವವಾಗಿ ಜೀನ್ ಬದಲಾದರೂ ಕೂಡ, ಅಂತಹ ದನಗಳನ್ನು ರಾಸಾಯನಿಕಗಳ ಸೋಂಕು ಇಲ್ಲದೆ ಬೆಳೆಸಿದರೆ ಅದರಿಂದ ಸಾವಯವ ಹಾಲು ಪಡೆಯಬಹುದು ಎಂಬ ಕೆಲವರ ನಿಲುವನ್ನು ನೋಡಿದರಂತೂ ನಿಜಕ್ಕೂ ನಗು ಬರುತ್ತದೆ. ಇವಿಷ್ಟೂ ನಡೆದಿರುವುದು ಕೇವಲ selective breeding ಮೂಲಕ, ಇನ್ನು ಮುಂದೆ ಪ್ರಯೋಗಾಲಯದಲ್ಲಿ ಸಂಪೂರ್ಣ ಬೇರೆ ಜೀವಿಗಳ ವಂಶತಂತುಗಳನ್ನು ಸೇರ್ಪಡಿಸಿ-ಮಾರ್ಪಡಿಸಿ ಹೊಸ ತಳಿಗಳನ್ನು ಹುಟ್ಟಿಸತೊಡಗಿದ ಮೇಲೇ ಏನು ಕಾದಿದೆ ಎಂಬುದನ್ನು ಊಹಿಸುವುದೂ ಕಷ್ಟ.

ಇದೆಲ್ಲಾ ಭಾರತದಲ್ಲಿ ನಡೆಯುತ್ತಿಲ್ಲ ಎಂದು ಭಾವಿಸಿದ್ದೀರಾ? ನಮ್ಮಲ್ಲಿ ಕೂಡ ನಿಜವಾಗಿ ನಡೆಯುತ್ತಿರುವುದು ದನದ ಹಿತಾಸಕ್ತಿಯ ರಕ್ಷಣೆ ಅಲ್ಲ, ಬದಲಾಗಿ ಕೇವಲ ನಮ್ಮ ಸ್ವಂತ ಕ್ಷೇಮಾಭಿವೃದ್ಧಿ. ಭಾರತದ 39 "ಶ್ರೇಷ್ಠ" ತಳಿಗಳ genetic improvement ಎಂಬುದು ನಮ್ಮ ಸರಕಾರದ "ರಾಷ್ಟ್ರೀಯ ಗೋಕುಲ್ ಮಿಶನ್"ನ ಮುಖ್ಯ ಗುರಿಗಳಲ್ಲಿ ಒಂದು. "ಶ್ರೇಷ್ಠತೆ" ಎಂಬ ಮಾನದಂಡವನ್ನು ನಿರ್ಧರಿಸುವವರಾರು? ನಾವೇ ತಾನೇ? ಹಾಗಿದ್ದರೆ ತಮ್ಮ ಭವಿಷ್ಯವನ್ನು ನಿರ್ಧರಿಸುವಲ್ಲಿ ದನಗಳಿಗೆಲ್ಲಿದೆ ಆಯ್ಕೆಯ ಸ್ವಾತಂತ್ರ್ಯ? ಇನ್ನು, ದನದ ಮಾಂಸದ ನಿಷೇಧ ಎಂಬುದಂತೂ ಹಾಸ್ಯಾಸ್ಪದ ಸಂಗತಿ. ಲಾಭವನ್ನೇ ಧ್ಯೇಯವಾಗಿಸಿದ ಇಂದಿನ ಸಮಾಜ ಇದರಿಂದ ವಿಮುಖವಾಗಿ ದನಗಳನ್ನು ಕಸಾಯಿಖಾನೆಗೆ ಕಳುಹಿಸದೆ ಜೀವನಪೂರ್ತಿ ಸಾಕುವ ಸಾಧ್ಯತೆ ಅತ್ಯಂತ ಕಡಿಮೆ. ಹಾಗೊಂದು ವೇಳೆ ಕೆಲವು ರಾಜಕಾರಣಿಗಳು ಅಂತಹ ಕಾನೂನನ್ನು ಜನರ ಮೇಲೆ ಹೇರಿದರೂ ಕೂಡ "ಮುದಿ-ಅನುಪಯುಕ್ತ" ದನಗಳನ್ನು ನೋಡಿಕೊಳ್ಳಲು ಸರಕಾರವೇ ಕಾಸು ಬಿಚ್ಚಬೇಕಾಗುತ್ತದೆ. ಬಿಡಿ, ಇದು, A1-A2 ಹಾಲಿನ ಹುಚ್ಚು ಇತ್ಯಾದಿ ಬೇರೆಯೇ ಕಥೆ, ಇದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.


ಈಗ ಇನ್ನೊಂದು ಉದಾಹರಣೆಯನ್ನು ನೋಡೋಣ: (ಮನುಷ್ಯರ) ಅಭಿವೃದ್ಧಿಯ ಹೆಸರಿನಲ್ಲಿ "ಕ್ಷೀರಕ್ರಾಂತಿ"ಯನ್ನು ಹುಟ್ಟುಹಾಕಿ ಭಾರತದಾದ್ಯಂತ ಆಕಳುಗಳ ಜೀವನವನ್ನು ನರಕವಾಗಿಸಿದ "ಅಮುಲ್" ಸಂಸ್ಥೆಯ ಹೊಸ ಕರಾಳಯೋಜನೆಯ ಪ್ರಕಾರ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ (ಅನುಪಯುಕ್ತ) ಗಂಡುಕರುಗಳು ಹುಟ್ಟದೇ ಇರುವಂತೆ ಮಾಡುತ್ತಾರಂತೆ! ಇದರಿಂದಾಗಿ ಇನ್ನು ಮುಂದೆ ಗಂಡುಕರುಗಳನ್ನು ಕಸಾಯಿಖಾನೆಗೆ ಕಳುಹಿಸುವ ಪ್ರಮೇಯವಿಲ್ಲ, ನಮ್ಮ ಪಾಪಭಾರದಲ್ಲಿ ಅರ್ಧ ಕಡಿಮೆಯಾಗುತ್ತದೆ ಎಂದು ಸಂಭ್ರಮಪಟ್ಟುಕೊಳ್ಳುವವರನ್ನು ನೋಡಿದರೆ ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ.


ಒಟ್ಟಿನಲ್ಲಿ, ಭಾರತಲ್ಲಿರಬಹುದು ಅಥವಾ ವಿದೇಶಗಳಲ್ಲಿರಬಹುದು - ನಿಜಕ್ಕೂ ನಡೆಯುತ್ತಾ ಬಂದಿರುವುದೇನೆಂದರೆ, ಮನುಷ್ಯರು ದನಗಳಲ್ಲಿ ತಮಗೆ ಲಾಭದಾಯಕವಾಗುವಂತಹ ಗುಣಸ್ವಭಾವಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಅವುಗಳ ಜೀನ್‍ಗಳ ಜೊತೆ ಆಟವಾಡಿ ಅವುಗಳ ತಳಿಗಳನ್ನು "ಅಭಿವೃದ್ಧಿ" ಪಡಿಸುವುದು, ಅರ್ಥಾತ್ ದೇವರಾಟ ಆಡುವುದು. ಇನ್ನೊಂದೆಡೆ ಕೋಟಿಗಟ್ಟಲೆ ಜನರು ಇದ್ಯಾವುದರ ಪರಿವೆಯೇ ಇಲ್ಲದೆ ಪ್ಯಾಕೆಟ್‍ನಲ್ಲಿ ಸಿಗುವ ವಿವಿಧ ರೀತಿಯ ಹಾಲು ಹಾಗೂ ಅದರ ಉತ್ಪನ್ನಗಳನ್ನು ಆಸ್ವಾದಿಸುತ್ತಾ ಹಾಯಾಗಿರುವುದು. (selective breeding ಮೂಲಕ ಚಿತ್ರ ವಿಚಿತ್ರವಾದ, ಅನೈಸರ್ಗಿಕ ತಳಿಗಳನ್ನು ಹುಟ್ಟಿಸುವ ಕೆಲಸ ನಡೆದದ್ದು ಬರೀ ದನದ ವಿಷಯದಲ್ಲಲ್ಲ - ಕೋಳಿ, ನಾಯಿ, ಹಂದಿ ಹೀಗೆ ಈ ಹಾವಳಿ ಅನೇಕ ಪ್ರಭೇದಗಳನ್ನು ಹಿಂಡಿ ಹಿಪ್ಪೆ ಮಾಡಿ ಹಾಕಿದೆ. ಆದರೆ ಈ ಲೇಖನವನ್ನು ದನದ ಮಟ್ಟಿಗೆ ಸೀಮಿತಗೊಳಿಸಿದ್ದೇನೆ.)

ಇತರ ಪ್ರಾಣಿಗಳ ಹಾಲು ಮನುಷ್ಯನಿಗೆ ಅಗತ್ಯವೇ ಇಲ್ಲ ಹಾಗೂ ಅದು ನಮ್ಮ ಆರೋಗ್ಯಕ್ಕೆ ಪೂರಕವೂ ಅಲ್ಲ ಎಂಬ ಸತ್ಯವನ್ನು ನಾವು ಯಾವಾಗ ಅರಿತುಕೊಳ್ಳುತ್ತೇವೆ? ಯಾವಾಗ ನಾವು ಈ ಮುಗ್ಧ ಜೀವಿಗಳನ್ನು ನಮ್ಮ ರಾಕ್ಷಸ ಮುಷ್ಟಿಯಿಂದ ಮುಕ್ತಗೊಳಿಸುತ್ತೇವೆ? ಇದಕ್ಕೆಲ್ಲಾ ಪರಿಹಾರವು ದೇಸೀ ದನಗಳನ್ನು ಉಳಿಸುವ ಚಳುವಳಿ ಅಲ್ಲ, ಅಲ್ಲವೇ ಅಲ್ಲ. ಇಂದು ಆಪತ್ತಿನಲ್ಲಿರುವುದು ಕೇವಲ ದನ ಅಲ್ಲ, ಭೂಮಿಯ ಒಟ್ಟಾರೆ ಜೀವವೈವಿಧ್ಯಗಳು ಅತ್ಯಂತ ವೇಗವಾಗಿ ಕ್ಷೀಣಿಸುತ್ತಿವೆ, ಭೂತಾಪಮಾನ ಅನಿಯಂತ್ರಿತವಾಗಿ ಹೆಚ್ಚುತ್ತಿದೆ, ಅನೈಸರ್ಗಿಕ ಜೀವನಶೈಲಿಯಿಂದಾಗಿ ಮನುಷ್ಯನ ಆರೋಗ್ಯವೂ ಅತಿವೇಗದಲ್ಲಿ ಹದಗೆಡಲು ಶುರುವಾಗಿದೆ - ಈ ಎಲ್ಲಾ ವಿಕೋಪಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಾವು ತೆಗೆದುಕೊಳ್ಳಬೇಕಾದ ಅರ್ಥವತ್ತಾದ ಹೆಜ್ಜೆಗಳೆಂದರೆ

) ವೀಗನ್ ಆಗಿ ಸಂಪೂರ್ಣ ಸಸ್ಯಾಧಾರಿತ ಜೀವನಶೈಲಿಯನ್ನು ಅಪ್ಪಿಕೊಳ್ಳುವುದು: ಇದರ ಮೂಲಕ ನಾವು ಆಧುನಿಕತೆಯ ಅಬ್ಬರದ ಮಧ್ಯೆಯೂ ಪರಿಸರದ ಜೊತೆ ಕೊಂಡಿಯು ಕಳಚಿಕೊಳ್ಳದಂತೆ, ಆದಷ್ಟೂ ಕಡಿಮೆ ecological footprint ಇರುವಂತೆ ಬದುಕಲು ಯತ್ನಿಸಬಹುದು

) ಮನುಷ್ಯರ ಸಂಖ್ಯೆಯನ್ನು ಹತೋಟಿಯಲ್ಲಿಟ್ಟುಕೊಳ್ಳುವುದು (ಮಾತ್ರವಲ್ಲ ನಿಧಾನಕ್ಕೆ ಕಮ್ಮಿ ಮಾಡುವುದು ಕೂಡ!)

) ಕಾಡುಗಳಿಗೆ ಪುನಃ ಬೆಳೆಯಲು ಅವಕಾಶ ಕೊಡುವುದು

) ಪ್ರಕೃತಿಗೆ ಸಾಧ್ಯವಾದಷ್ಟೂ ಪೂರಕವಾಗಿ (ಹಾಗೂ ಪ್ರಾಣಿಗಳ ಗುಲಾಮಗಿರಿಯಿಲ್ಲದೆ) ಕೃಷಿ ಮಾಡಲು ಹಾಗೂ ಬದುಕಲು ಕಲಿಯುವುದು ಇತ್ಯಾದಿ.

ಇದನ್ನೆಲ್ಲಾ ಬರೆದು ಮುಗಿಸುತ್ತಿದ್ದಂತೆ ನನ್ನ ಗಮನಕ್ಕೆ ಬಂದ ಇನ್ನೊಂದು ಪ್ರಬುದ್ಧವಾದ ಲೇಖನ ಇಲ್ಲಿದೆ ನೋಡಿ. ಉಗಾಂಡಾ ದೇಶದ ಅಂಕೋಲೆ ಎಂಬ ದನದ ಬಗ್ಗೆ ಇರುವ ಇದು ಖಂಡಿತವಾಗಿಯೂ ಓದಲೇಬೇಕಾದದ್ದು. ಇದನ್ನೋದುವಾಗ ಅವರ ಹಾಗೂ ನಮ್ಮ ಮಧ್ಯೆ ಇರುವ ಸಾಮ್ಯತೆಗಳನ್ನು ಕಂಡು ಅಚ್ಚರಿಯಾಗದಿದ್ದರೆ ಹೇಳಿ! (ಒಂದೇ ವ್ಯತ್ಯಾಸವೆಂದರೆ ಅವರಿಗೆ ದನ ಎಂದರೆ ದೇವರು ಎಂಬ ತಪ್ಪುಕಲ್ಪನೆ ಇಲ್ಲ ಹಾಗೂ ಅದರ ಮಾಂಸ ತಿನ್ನುವ ವಿಷಯಕ್ಕೆ ಬಂದಾಗ ಬಿಗುಮಾನ ಇಲ್ಲ, ಇತರ ಪ್ರಾಣಿಗಳ ಮಾಂಸದಂತೆಯೇ ದನದ ಮಾಂಸ ಕೂಡ ಅವರಿಗೆ.)

ಅವರು ಕೂಡ ನಮ್ಮಂತೆಯೇ; ನಿಜವಾದ ಪರಿಹಾರದ ಬೆನ್ನತ್ತಿ ಹೋಗುವುದು ಬಿಟ್ಟು ಪಾಶ್ಚಾತ್ಯ ಉದ್ಯಮಿಗಳ ಹಾಗೂ ಜರ್ಸಿ ದನಗಳ ಮೋಡಿಗೆ ಬಿದ್ದು ಸಂಪೂರ್ಣ ಉಲ್ಟಾ ದಿಕ್ಕಿನಲ್ಲಿ ಸಾಗುತ್ತಿದ್ದಾರೆ - ಹೈನುಗಾರಿಕೆಗೆ ಹೆಚ್ಚು ಒತ್ತುಕೊಡುವುದರಿಂದ, ಅದನ್ನು ಆಧುನೀಕರಣದತ್ತ ತಳ್ಳುವುದರಿಂದ ಬಡತನ ಹಾಗೂ ಇತರ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ಭ್ರಮೆಯಲ್ಲಿ ಮುಂದುವರಿಯುತ್ತಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಹಾಲು ಉತ್ಪಾದಿಸಿ ಕೊನೆಗೆ ಅದರ ಸೇವನೆಯನ್ನು ಉತ್ತೇಜಿಸಲು ವಿವಿಧ ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಕೊನೆಗೆ ಅದರಿಂದ ಬರುವ ರೋಗಗಳನ್ನು ವಾಸಿ ಮಾಡುವ ಉದ್ಯಮಗಳೂ ತಲೆಯೆತ್ತಿ ಲಾಭ ಮಾಡತೊಡಗುತ್ತವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ನಿಜವಾದ ಪರಿಹಾರ ಸುಲಭ ಎಂದೇನೂ ನಾನು ಹೇಳುತ್ತಿಲ್ಲ. ಆದರೆ ಅತ್ಯಂತ ಅನೈಸರ್ಗಿಕವಾದ ಹಾಗೂ ಸಾಕಷ್ಟು ಅನಾರೋಗ್ಯಕರವಾದ ಹೈನುಗಾರಿಕೋದ್ಯಮಕ್ಕೆ ಕೊಡುವ ಸಬ್ಸಿಡಿ ಸವಲತ್ತುಗಳ ಒಂದು ಸಣ್ಣ ಶೇಕಡವಾದರೂ ನೈಸರ್ಗಿಕ ಜೀವನಕ್ರಮದ ಅಧ್ಯಯನಕ್ಕೆ ಕೊಡಲಿ ನೋಡೋಣ. ಸರಳ-ಸುಂದರ-ಸದೃಢವಾದ ಉತ್ತರಗಳು ತಾನಾಗಿಯೇ ಮುಂದೆ ಬರುತ್ತವೆ, ನಿಜವಾದ ಸುಸ್ಥಿರ ಸಮಾಜಗಳು ವಿಕಸನಗೊಳ್ಳುತ್ತವೆ.

1 comments:

ನಾಗೇಶ ಹೆಗಡೆ said...

ನಿಮ್ಮ ವಿಶ್ಲೇಷಣೆ ಚೆನ್ನಾಗಿದೆ. ನಾವು ಸುಸ್ಥಿರ ಬದುಕನ್ನು ಎಲ್ಲೋ ಪಕ್ಕಕ್ಕೊತ್ತಿ ಬಲುದೂರ ಬಂದು ಬಿಟ್ಟಿದ್ದೇವೆ.
ಅಂದಹಾಗೆ, ಕಾಳಿಕಣಿವೆಯ ಜೊಯಿಡಾ ತಾಲ್ಲೂಕಿನಲ್ಲಿ ಹೀಗೆ ದನಕರುಗಳನ್ನು ಅಡವಿಗೇ ಬಿಟ್ಟು ಬಿಡುವ ಪದ್ಧತಿ ಇದೆ.

Post a Comment