About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, February 19, 2013

ನನ್ನ ಪಯಣ, ನೈತಿಕ, ಹಸಿರು ಉದ್ಯಮಿಯಾಗುವತ್ತ

ವಿ.ಸೂ. ಈ ಲೇಖನವನ್ನು ನಾನು ಮೊದಲು ಆಂಗ್ಲಭಾಷೆಯಲ್ಲಿ ಕೆಲವು ದಿನಗಳ ಹಿಂದೆ ಬರೆದಿದ್ದೆ, ಈಗ ಕನ್ನಡಕ್ಕೆ ಭಾಷಾಂತರ ಮಾಡಿದ್ದೇನೆ, ಹೀಗಾಗಿ ಕೆಲವು ಕಡೆ ಭಾಷೆ ತನ್ನ ಸೊಗಸನ್ನು ಕಳೆದುಕೊಂಡಿರಬಹುದು, ಕ್ಷಮೆ ಇರಲಿ. ತನ್ನ ಮೂಲ ಲೇಖನದ ಕೊಂಡಿ ಇಲ್ಲಿದೆ.


ನಾನು ಈ ಬಗ್ಗೆ ಹೆಚ್ಚು ಪ್ರಚಾರ ಮಾಡದೆ ಇದುವರೆಗೆ ತಕ್ಕಮಟ್ಟಿಗೆ ಸುಮ್ಮನಿದ್ದೆ, ಆದರೆ ಈಗ ಪ್ರಕಟಿಸಲು ತಕ್ಕ ಸಮಯ ಬಂದಿದೆ ಎಂದಂದುಕೊಂಡಿದ್ದೇನೆ. ನಾನೊಂದು ಹೊಸ ಪಯಣವನ್ನು ಆರಂಭಮಾಡಿದ್ದೇನೆ, ಒಬ್ಬ ನೈತಿಕ, ಹಸಿರು ಉದ್ಯಮಿಯಾಗಿ. ಯಶಸ್ಸು ಹಾಗೂ ಪರಿಪೂರ್ಣತೆ ದೂರದಲ್ಲೇ ಇದ್ದರೂ, ಸತತವಾಗಿ ಸವಾಲುಗಳನ್ನೆದುರಿಸುತ್ತಾ ದಣಿಯುತ್ತಲಿದ್ದರೂ, ಆರ್ಥಿಕವಾಗಿ ಭಯ ಹುಟ್ಟಿಸುವಂತಿದ್ದರೂ, ನಾನು ಹಸುಗೂಸಿನಂತೆ ಸಣ್ಣ ಹೆಜ್ಜೆಗಳನ್ನಿಡುತ್ತಾ ಮುಂದುವರಿಯುತ್ತಿದ್ದೇನೆ.

ಸಂಕ್ಷಿಪ್ತವಾಗಿ ಹೇಳುವುದಿದ್ದರೆ, ನಾನು ನೈತಿಕ ಹಾಗೂ ವೀಗನ್ ವ್ಯವಹಾರವೊಂದನ್ನು ಶುರುಮಾಡುವ ಉದ್ದೇಶದೊಂದಿಗೆ “ಸ್ವಾಮೀಸ್ ಕಿಚನ್ ಪ್ರೈವೇಟ್ ಲಿಮಿಟೆಡ್” ಎಂಬ ಕಂಪನಿಯನ್ನು ಸಹ ಸಂಸ್ಥಾಪಕನಾಗಿ ಹುಟ್ಟುಹಾಕಿದ್ದೇನೆ. ಸದ್ಯಕ್ಕೆ ನಾವು ಬೆಂಗಳೂರಿನಲ್ಲಿ ವೀಗನ್ ಆರೋಗ್ಯಕರ ಉಪಾಹಾರಗೃಹವೊಂದನ್ನು ಶುರುಮಾಡಿದ್ದೇವೆ, ಸದ್ಯದಲ್ಲಿಯೇ ಗ್ರಾಹಕರಿಗೆ ತೆರೆಯಲಿದ್ದೇವೆ: ಕ್ಯಾರೆಟ್ಸ್, ಆರೋಗ್ಯಕರ ಉಪಾಹಾರಗೃಹ ಹಾಗೂ ಅಂಗಡಿ

ಫೇಸ್‍ಬುಕ್ ತಾಣ: www.facebook.com/CarrotsTheHealthyKitchenAndStore
ಅಂತರ್ಜಾಲ ತಾಣ: www.carrots-india.com/ (ಇನ್ನೂ ರೂಪ ಪಡೆದುಕೊಳ್ಳುತ್ತಾ ಇದೆ)

“ಉತ್ತಮ ಆರೋಗ್ಯಕ್ಕಾಗಿ, ಉತ್ತಮ ನಾಳೆಗಾಗಿ” ಎಂಬುದು ನಮ್ಮ ಕನಸು, ಗುರಿ. ಪರಿಸರದ, ಪ್ರಾಣಿಗಳ ಹಾಗೂ ನಮ್ಮಗಳ ಅರ್ಥಾತ್ ಮನುಷ್ಯರ – ಹೀಗೆ ಎಲ್ಲರ/ಎಲ್ಲದರ ಉತ್ತಮ ಭವಿಷ್ಯಕ್ಕಾಗಿ ದುಡಿಯುವುದು ನಮ್ಮಾಸೆ. ಸದಾ ಸೃಜನಶೀಲರಾಗಿರುವುದು, ಜಾಗೃತರಾಗಿರುವುದು, ವೀಗನ್ ಪಥದಲ್ಲಿ ಮುಂದುವರೆಯುವುದು – ಇವುಗಳನ್ನು ಅನುದಿನವೂ ಪಾಲಿಸುವುದು, ದೂರಗಾಮಿ ಯೋಜನೆಗಳಲ್ಲಿ ಅಳವಡಿಸುವುದು ನಮಗೆ ಮುಖ್ಯ. ನ್ಯಾಯ-ವ್ಯಾಪಾರ ಹಾಗೂ ಸಾವಯವ ಕೃಷಿಯನ್ನು ನಾವು ಬೆಂಬಲಿಸಿ ಪ್ರೋತ್ಸಾಹಿಸುತ್ತೇವೆ.

ನಾನು ಹೇಗೆ ಇಲ್ಲಿಯವರೆಗೆ ಬಂದೆ?

ಭಾಗ ೧ – ಮಾನಸಿಕ ಸಿದ್ಧತೆ

ಬಹುಷಃ ನಾನು ಈ ಕಥೆಯನ್ನು ಬಹಳ ಹಿಂದಿನಿಂದಲೇ ಶುರುಮಾಡಬೇಕು, ನಾನು ಹೇಗೆ ಮತ್ತು ಯಾವಾಗ ವೀಗನ್ ಆದೆ ಎಂಬಲ್ಲಿಂದ. ಅದೊಂದು ಆಸಕ್ತಿದಾಯಕ ಕಥೆ, ಆದರೆ ಅದನ್ನು ಇನ್ನೊಮ್ಮೆ ಯಾವಗಲಾದರೂ ಬರೆಯುವೆ. ಇಲ್ಲಿ ಇತ್ತೀಚೆಗಿನ ಸಮಯದಿಂದ ಶುರುಮಾಡುತ್ತೇನೆ. ೨೦೧೦ರಲ್ಲಿ ನಾನು ಇನ್ಫೋಸಿಸ್ ಬಿಡುತ್ತೇನೆಂದು ನಿರ್ಧಾರ ಕೈಗೊಂಡಾಗ, ನನಗೆ ಗೊತ್ತಿದ್ದದ್ದಿಷ್ಟೇ – ಹೊರಜಗತ್ತಿಗೆ ಕಾಲಿಟ್ಟು ಬದಲಾವಣೆಯನ್ನು ಅನುಭವಿಸಬೇಕು ಎಂದು. ಅದೃಷ್ಟವಶಾತ್, ಮಂಗಳೂರಿನಲ್ಲಿಯೇ ನನಗೆ ಒಂದು ಅವಕಾಶ ದೊರಕಿತು, ಎಂಫಸಿಸ್‍ನಲ್ಲಿ. ಅಲ್ಲಿ ನನಗೆ ಉತ್ತಮ ಸಂಬಳ ಹಾಗೂ ಹುದ್ದೆ ದೊರಕಿತು, ಅನೇಕ ವಿಷಯಗಳು ಚೆನ್ನಾಗಿಯೇ ಮುನ್ನಡೆಯತೊಡಗಿದುವು. ನನ್ನ ಮೊಟ್ಟಮೊದಲ ಕಂಪನಿಯಲ್ಲಿ ದೀರ್ಘ ಕಾಲ ಕೆಲಸ ಮಾಡಿದ ಮೇಲೆ ಇನ್ನೊಂದೆಡೆ ಕೆಲಸ ಮಾಡಿದ್ದು ವಿವಿಧ ರೀತಿಯಲ್ಲಿ ಕಣ್ತೆರೆಯುವಂತೆ ಮಾಡಿತು. ಆದರೆ ಈ ಅವಧಿಯಲ್ಲಿ ಐ.ಟಿ. ಉದ್ಯಮದ ಅನೇಕ ಮಜಲುಗಳ ಬಗ್ಗೆ ಹೆಚ್ಚು ಹೆಚ್ಚು ಚಿಂತಿಸಲಾರಂಭಿಸಿದೆ, ಮುಖ್ಯವಾಗಿ ಒಟ್ಟಾರೆ ಕೆಲಸ-ಸಂಸ್ಕೃತಿ (work culture) ಎತ್ತ ಕಡೆ ಸಾಗುತ್ತಿದೆ, ವೈಯಕ್ತಿಕ ಜೀವನದ ಮೇಲೆ ಅಂತಹ ಸಂಸ್ಕೃತಿಯ ಪ್ರಭಾವ ಏನು, ನಾವು ಮಾಡುವ ಕೆಲಸದ ಅಂತಿಮ ಗುರಿ ಏನು, ಇತ್ಯಾದಿ ಇತ್ಯಾದಿ.

ಆಗ ಒಂದು ಪ್ರಮುಖ ಬೆಳವಣಿಗೆ ಎದುರುಬಂತು – ನನ್ನ ಹೆಂಡತಿ ಸ್ಮಿತಾಳಿಗೆ ಐ.ಐ.ಎಂ-ಎ (IIM-A)ಯಲ್ಲಿ ಸೀಟು ಸಿಕ್ಕಿತು. ಇದು ಭಾರತದಲ್ಲೇ ಮುಂಚೂಣಿಯಲ್ಲಿರುವ, ಜಗತ್ತಿನಾದ್ಯಂತ ನೋಡಿದರೂ ಉನ್ನತ ಶ್ರೇಣಿಗೆ ಸೇರಿದ ವಿದ್ಯಾಸಂಸ್ಥೆ. ಕೋರ್ಸ್ ಒಂದು ವರ್ಷದ್ದಾಗಿತ್ತು, ಎಪ್ರಿಲ್ ೨೦೧೧ರಿಂದ ಮಾರ್ಚ್ ೨೦೧೨. ಇಂತಹ ಅದ್ಭುತ ಅವಕಾಶವನ್ನು ಕಳೆದುಕೊಳ್ಳುವುದರಲ್ಲಿ ಯಾವುದೇ ಅರ್ಥವಿರಲಿಲ್ಲ. ಆದರೆ ಇದು ನಮ್ಮ ವೈಯಕ್ತಿಕ ಜೀವನವನ್ನು ಏರುಪೇರು ಮಾಡುವುದಂತೂ ಖಂಡಿತವಿತ್ತು – ನಮಗೆ ಒಂದು ವರುಷವೂ ಬೇರೆ ಬೇರೆಯಾಗಿ ಇರಲು ಮನಸ್ಸಿರಲಿಲ್ಲ, ಮಾತ್ರವಲ್ಲ ಯಾರಿಗೆ ಗೊತ್ತು ಅದು ಇನ್ನೆಷ್ಟು ಮುಂದೆ ಹೋಗುತ್ತದೆ ಎಂದು? ಇದು ನನಗೂ ನನ್ನದೇ ಎಂ.ಬಿ.ಎ. ಕನಸುಗಳನ್ನು ಮುಂದೆ ತೆಗೆದುಕೊಂಡು ಹೋಗಲು ಪ್ರಚೋದನೆ ನೀಡಿತು. ನಾನು ದಿಟ್ಟತನದಿಂದ ಐ.ಟಿ. ಉದ್ಯಮದಿಂದ ತಾತ್ಕಾಲಿಕ ವಿರಾಮ ತೆಗೆದುಕೊಂಡು ಅಹ್ಮದಾಬಾದಿಗೆ ತೆರಳಿ ಅಲ್ಲಿ GMAT ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದೆ. ಚೆನ್ನಾಗಿ ಓದಿ ಆ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಮೊದಲ ಆದ್ಯತೆಯಾಗಿತ್ತು, ಉಳಿದ ಸಮಯದಲ್ಲಿ ಏನು ಮಾಡುವುದು ಎಂಬುದರ ಬಗ್ಗೆ ಬಲವಾದ ನಿರ್ಧಾರ ಇನ್ನೂ ತೆಗೆದುಕೊಂಡಿರಲಿಲ್ಲ.

ಏತನ್ಮಧ್ಯೆ, ನಾನು ನಮ್ಮೂರಿನಲ್ಲಿರುವ ನಮ್ಮ (ನನ್ನ ತಂದೆಯವರು ಭಾಗೀದಾರರಾಗಿರುವ) ಆಸ್ಪತ್ರೆಯಲ್ಲಿ ಹೆಚ್ಚು ಹೆಚ್ಚಾಗಿ ನನ್ನನ್ನು ತೊಡಗಿಸಿಕೊಳ್ಳತೊಡಗಿದೆ. ಅಲ್ಲಿ ಹೊಸ ದೃಷ್ಟಿಕೋನಗಳು ಬೇಕಾಗಿರುವಂತಹ ಒಂದಷ್ಟು ಸವಾಲುಗಳಿದ್ದುವು, ಹೊಸ ಪೀಳಿಗೆಯವರನ್ನು ಆಹ್ವಾನಿಸುವಂತಹ ಅವಕಾಶಗಳಿದ್ದುವು, ಮಾತ್ರವಲ್ಲ ಜನರಿಗೆ ಕೊಡುವ ಸೇವೆ ನೀಡುವಲ್ಲಿ ಸುಧಾರಣೆ ತರಲೂ ಸಾಧ್ಯವಿತ್ತು, ಒಂದು ಆಸ್ಪತ್ರೆಯ ಮುಖ್ಯ ಗುರಿ ಏನಿದ್ದರೂ ಇದೇ ತಾನೇ? ಎಂಫಸಿಸ್‍ನಲ್ಲಿರುವಾಗ ಆಸ್ಪತ್ರೆಯ ಬಗ್ಗೆ ಗಮನ ಕೊಡಲು ಸಾಧ್ಯವಿರಲಿಲ್ಲ, ಆದರೆ ಕೆಲಸ ವಿರಾಮದ ವೇಳೆಯಲ್ಲಿ ಇದು ಸಾಧ್ಯ ಎಂದಂದುಕೊಂಡೆ, ನನ್ನೆಣಿಕೆ ಸುಳ್ಳಾಗಲಿಲ್ಲ.

GMAT ಪರೀಕ್ಷೆಗೆ ತಯಾರಿ ನಡೆಸುವುದು ನನ್ನ ಇತ್ತೀಚೆಗಿನ ದಿನಗಳ ಅನುಭವದಲ್ಲಿ ಉಲ್ಲಾಸದಾಯಕ ಎನಿಸಿದ್ದರಲ್ಲಿ ಒಂದು ಎಂದರೆ ಅತಿಶಯೋಕ್ತಿಯಿಲ್ಲ. ಕೊನೆಗೆ ಉತ್ತಮ ಸ್ಕೋರ್ ಪಡೆದೆ, ಆದರೆ ನನಗೆ ನಿಜಕ್ಕೂ ಖುಷಿ ಕೊಟ್ಟದ್ದು ವಿವಿಧ ರೀತಿಯಲ್ಲಿ ನನ್ನನ್ನು ಪ್ರಭುದ್ಧಗೊಳಿಸಿದ ಪಯಣ ಅರ್ಥಾತ್ ಪರೀಕ್ಷೆಯ ತಯಾರಿ. ಅಂತಹ ಸರಳ ಪರೀಕ್ಷೆಯ ತಯಾರಿ ಅಷ್ಟೊಂದು ಬೆಲೆಬಾಳುವ ಅನುಭವ ಕೊಡುತ್ತದೆ ಎಂದು ನಾನೆಣಿಸಿರಲೇ ಇಲ್ಲ. ಇರಲಿ, GMATನಲ್ಲಿ ಉತ್ತಮ ಅಂಕಗಳು ಸಿಕ್ಕಿದ ಮೇಲೆ, ನನ್ನ ಮುಂದಿನ ಹೆಜ್ಜೆ ವಿವಿಧ ಬಿ-ಸ್ಕೂಲುಗಳಿಗೆ ಅರ್ಜಿ ಸಲ್ಲಿಸುವುದಾಗಿತ್ತು. ಈ ಪ್ರಕ್ರಿಯೆಯಲ್ಲಿ ನಾನು ತುಸು selective (ಏನಪ್ಪಾ ಇದಕ್ಕೆ ಕನ್ನಡ ಪದ?!!) ಆಗಿ ಕೇವಲ ಮೂರಕ್ಕೆ ಅರ್ಜಿ ಸಲ್ಲಿಸಿದ್ದೆ. ಒಬ್ಬರಿಗೆ ನನ್ನ ಅರ್ಜಿ ಆಸಕ್ತಿದಾಯಕವಾಗಿ ಕಂಡುಬರಲಿಲ್ಲ, ಇನ್ನೆರಡು ಕಡೆಯಿಂದ ನನಗೆ ಸಂದರ್ಶನಕ್ಕೆ ಕರೆ ಬಂತು. ಅದೃಷ್ಟವಶಾತ್ ಅಥವಾ ದುರದೃಷ್ಟವಶಾತ್, ಎರಡೂ ಸಂದರ್ಶನಗಳಲ್ಲಿ ನಾನು ತೇರ್ಗಡೆ ಹೊಂದಲಿಲ್ಲ. ಅದರೆ ಒಟ್ಟಾರೆ ಪ್ರಕ್ರಿಯೆ ನನ್ನನ್ನು ಹೆಚ್ಚು ಪ್ರಬುದ್ಧನನ್ನಾಗಿಯೂ ವಿನಮ್ರನನ್ನಾಗಿಯೂ ಮಾಡಿತು.

ಈ ಕೆಲಸ-ವಿರಾಮದ ಅವಧಿಯಲ್ಲಿ ಆದ ಒಂದು ಪ್ರಮುಖವಾದ ಬೆಳವಣಿಗೆಯೆಂದರೆ ನಾನು ಪರಿಸರ, ಹಸಿರು, ಸುಸ್ಥಿರತೆ (sustainability) ಹಾಗೂ ಅದರ ಪ್ರಾಮುಖ್ಯತೆ ಇತ್ಯಾದಿಗಳ ಬಗ್ಗೆ ಹೆಚ್ಚು ಚಿಂತಿಸಲಾರಂಭಿಸಿದ್ದು. ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ವೀಗನ್ ಆಗಿದ್ದ ನನಗೆ ಇದು ಮೊದಲಿನಿಂದಲೇ ಆಸಕ್ತಿ ಇದ್ದ ವಿಷಯವಾಗಿತ್ತು, ಆದರೆ ವಿರಾಮದ ವೇಳೆ ನಿಜಕ್ಕೂ ಇದರ ಬಗ್ಗೆ ಹೆಚ್ಚು ಆಲೋಚನೆ ಮಾಡಲು, ತೊಡಗಿಸಿಕೊಳ್ಳಲು ಸಹಾಯ ಮಾಡಿತು. ಐ.ಐ.ಎಂ-ಎ ಯ ಒಳಗೂ ಹೊರಗೂ ಇದಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಅಧ್ಯಯನ ಮಾಡಲು, ಆಸಕ್ತಿದಾಯಕ ವ್ಯಕ್ತಿಗಳ ಜೊತೆಗೆ ಚರ್ಚಿಸಲು, ವಿವಿಧ ಉತ್ಪನ್ನ ಹಾಗೂ ಪರಿಹಾರ ಸೂಚನೆಗಳನ್ನು ನೋಡಲು ಅವಕಾಶ ಸಿಕ್ಕುತು. ಮಾತ್ರವಲ್ಲ, ಉನ್ನತ ವ್ಯಾಸಂಗ ಮಾಡಿದ ಹಾಗೂ ಜವಾಬ್ದಾರಿಯುತ ಹುದ್ದೆಗಳಲ್ಲಿರುವ ಅನೇಕ ವ್ಯಕ್ತಿಗಳಲ್ಲಿ ಕೂಡ ಈ ಬಗ್ಗೆ ಬಹಳ ಹೆಚ್ಚು ಸಂವೇದನಾಶೀಲತೆಯ ಕೊರತೆ ಕಂಡುಬರುವುದು ಅಚ್ಚರಿಗೀಡುಮಾಡಿತು.

ಈ ಕ್ಷೇತ್ರದಲ್ಲಿ ನನ್ನ ಹೆಚ್ಚಿದ ಆಸಕ್ತಿ ನನ್ನನ್ನು ಇತರ ಸಾಮಾನ್ಯ ಎಂ.ಬಿ.ಎ.ಗಳ ಬದಲಾಗಿ “ಸುಸ್ಥಿರ ಮ್ಯಾನೇಜ್‍ಮೆಂಟ್” ಎಂಬ ಎಂ.ಬಿ.ಎ. ಕೋರ್ಸುಗಳನ್ನು ಮಾಡುವತ್ತ ಪ್ರೇರೇಪಿಸಿತು. ಅಂತಹ ಕೆಲವು ಕೋರ್ಸುಗಳಿದ್ದುವು, ಆದರೆ ಅನೇಕ ಅಡಚಣೆಗಳೂ ಇದ್ದುವು, ಅನೇಕ ಆಯಾಮಗಳನ್ನು ಪರಿಗಣಿಸಿ ತೂಗಿನೋಡಬೇಕಾದ ಅನಿವಾರ್ಯತೆ ಇತ್ತು. ವೈಯಕ್ತಿಕ ಆದ್ಯತೆಗಳನ್ನು ಪರಿಗಣಿಸುತ್ತಾ, ನಾನು ಸ್ಮಿತಾಳ ಕೆಲಸದ ಜಾಗ ನಿರ್ಧಾರವಾಗುವ ತನಕ ನನ್ನ ಕೆಲಸ-ವಿರಾಮವನ್ನು ಮುಂದುವರಿಸಲು ನಿರ್ಧರಿಸಿದೆ. ಇದು ನನಗೆ ಆಸ್ಪತ್ರೆಯ ವಿಷಯದಲ್ಲಿ ಆಳವಾಗಿ ಮುಳುಗಿ ಅಲ್ಲಿ ಕೆಲವು ಮುಖ್ಯವಾದ ಬದಲಾವಣೆಗಳನ್ನು ತರಲು ಸಹಾಯ ಮಾಡಿತು.

ಅಹ್ಮದಾಬಾದಿನಲ್ಲಿದ್ದಾಗ (ಅಲ್ಲಿಯ ಅನೇಕ ಸ್ಥಳೀಯರು ಹೇಳುವಂತೆ ಅಮ್ದಾವಾದ್) ನಾನು ಗಳಿಸಿದ ಒಂದಷ್ಟು ಮಾಹಿತಿಯನ್ನು ಇತರರೊಡನೆ ಹಂಚಿಕೊಳ್ಳುವ ನಿಟ್ಟಿನಲ್ಲಿ ನಾನು ಬರೆದ ಕೆಲವು ಲೇಖನಗಳು ಇಂತಿವೆ (ಕ್ಷಮಿಸಿ, ಎಲ್ಲವೂ ಇನ್ನೂ ಆಂಗ್ಲಭಾಷೆಯಲ್ಲಿ ಮಾತ್ರ ಇವೆ)


ಕೊನೆಗೂ ನಮ್ಮ ಗಮ್ಯಸ್ಥಾನ ನಿರ್ಧಾರವಾಯಿತು; ಇನ್ನು ಕೆಲವು ವರುಷ ನಾವು ಬೆಂಗಳೂರಿನಲ್ಲಿ ನೆಲೆಸುತ್ತೇವೆ ಎಂದು ನಿರ್ಧರಿಸಿದೆವು. ನನ್ನ ವೈಯಕ್ತಿಕ ದೃಷ್ಟಿಯಿಂದ ಎತ್ತ ಸಾಗುವುದು ಉತ್ತಮ ಎಂಬುದರ ಬಗ್ಗೆ ನಾನು ಆಳವಾದ ಆಲೋಚನೆಯನ್ನು ಮುಂದುವರಿಸಿದೆ. ಒಮ್ಮೆ ಬೆಂಗಳೂರಿಗೆ ಬಂದಿಳಿದು, ವಾಸಿಸಲು ಒಳ್ಳೆಯ ಜಾಗವೊಂದನ್ನು ನೋಡಿ ಬೇಕಾದ ವ್ಯವಸ್ಥೆಗಳನ್ನೆಲ್ಲಾ ಮಾಡಿದ ಮೇಲೆ ನಾನು ಗಂಭೀರವಾಗಿ ನನ್ನದೊಂದು ಕನಸನ್ನು ನನಸುಮಾಡುವ ಬಗ್ಗೆ ನೋಡತೊಡಗಿದೆ – ಒಂದು ವೀಗನ್ ಉಪಾಹಾರಗೃಹವೊಂದನ್ನು ಹುಟ್ಟುಹಾಕಬೇಕು ಎಂದು; ಒಟ್ಟಾರೆ ಅನೇಕ ಯೋಜನೆಗಳಿದ್ದುವು, ಆದರೆ ಇದು ಪಟ್ಟಿಯಲ್ಲಿ ಮೊದಲನೆಯದ್ದಾಗಿ ಎದ್ದು ನಿಂತಿತು. ವೀಗನಿಸಂ ಎಂದರೆ ಆರೋಗ್ಯ, ಪರಿಸರ ಹಾಗೂ ಪ್ರಾಣಿಗಳಿಗೆ ಒಳಿತುಂಟುಮಾಡುವ ಹಾಗೂ ಅತ್ಯಂತ ಕಡಿಮೆ ಕೆಡುಕುಂಟುಮಾಡುವ ಒಂದು ಜೀವನಕ್ರಮ ಅಥವಾ ತತ್ವ. (ಈ ಬಗ್ಗೆ ತುಸು ಹೆಚ್ಚಿನ ಆದರೆ ಬೋರು ಹೊಡಿಸದೇ ಇರುವಷ್ಟು ಮಾತ್ರ ಮಾಹಿತಿ ಬೇಕೆಂದರೆ ನಾನು ಈ ಮೊದಲು ಬರೆದ ಒಂದು ಲೇಖನವನ್ನು ಓದಿ ಎಂದು ವಿನಂತಿ: ವೀಗನಿಸಂ ಎಂದರೆ ಏನು?ಒಂದು ಚಿಕ್ಕ ಪರಿಚಯ). ಹೀಗಾಗಿ, ಈ ಆದರ್ಶವನ್ನು ಪಾಲಿಸುವ ವ್ಯವಹಾರ/ಉದ್ಯಮವೊಂದು ಸ್ವಾಭಾವಿಕವಾಗಿಯೇ ನೈತಿಕವಾದದ್ದಾಗಿರುತ್ತದೆ, ನನ್ನ ಹೃದಯಕ್ಕೆ ಹತ್ತಿರವಾಗಿರುತ್ತದೆ. ಗಲಿಬಿಲಿ-ಗೊಂದಲಗಳ ಗೋಜೇ ಬೇಡ ಎಂದು ಯಾವುದೇ ಬಿ-ಸ್ಕೂಲುಗಳಿಗೆ ಅರ್ಜಿ ಸಲ್ಲಿಸುವುದೇ ಬೇಡ ಎಂಬುದಾಗಿ ನಿರ್ಧರಿಸಿ ನಾನು ಈ ನೈತಿಕ ಉದ್ದಿಮೆಯನ್ನು ಶುರುಹಾಕಲು ಮುಂದುವರಿದೆ.

ಈ ನಿರ್ಧಾರದ ಹಿಂದೆ ಇನ್ನೊಂದು ಆಲೋಚನೆ ಕೂಡ ಇತ್ತು. ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಎಂ.ಬಿ.ಎ. ಮಾಡಲು ಒಂದು ಸಣ್ಣ ನಿಧಿಯೇ ಬೇಕು. ಅದು ಬೇಡ, ಬದಲಾಗಿ ಆ ಹಣದಲ್ಲಿ “ಪ್ರಾಯೋಗಿಕ ಎಂ.ಬಿ.ಎ.” ಕೂಡ ಉತ್ತಮ ಆಯ್ಕೆಯಾಗಬಹುದು ಎಂದಂದುಕೊಂಡೆ ನಾನು. ಹಾಗೆ ಮಾಡಿದರೆ ಕೊನೆಯಲ್ಲಿ ಡಿಗ್ರಿ ಸರ್ಟಿಫಿಕೇಟು ಇತ್ಯಾದಿ ಸಿಗುವುದಿಲ್ಲ ನಿಜ, ಆದರೆ ಅಂತಹ ಒಂದು ಜೀವನಾನುಭವವನ್ನು ಎದುರಿಸಲು ನಾನು ಸಿದ್ಧನಾಗಿದ್ದೆ. ಹೇಗಿದ್ದರೂ ಸ್ಮಿತಾ ಈ ನಿಟ್ಟಿನಲ್ಲಿ ಔಪಚಾರಿಕ ಶಿಕ್ಷಣವನ್ನು ಪಡೆದುಕೊಂಡಾಗಿತ್ತು, ಅವಳ ಸಹಕಾರದೊಂದಿಗೆ ನಾವು ದೊಡ್ಡ ಕನಸನ್ನು ಕಾಣಬಹುದು ಹಾಗೂ ದಿಟ್ಟತನದಿಂದ ಸ್ವಂತ ಉದ್ಯಮವನ್ನು ಸ್ಥಾಪಿಸಬಹುದು ಎಂದು ನಾನಂದುಕೊಂಡೆ. ನಿಜವಾಗಿ ಹೇಳುವುದಿದ್ದರೆ, ಸ್ಮಿತಾ ಆಗಲೂ ಇದಕ್ಕೆ ಸಂಪೂರ್ಣ ತೆರೆದುಕೊಂಡಿರಲಿಲ್ಲ, ಇನ್ನೂ ಕೆಲವು ವರುಷಗಳು ಕಳೆದ ಮೇಲೆ, ತುಸು ಹೆಚ್ಚಿನ ಅನುಭವ ಪಡೆದ ಮೇಲೆ ನಾವು ಈ ದಿಕ್ಕಿನಲ್ಲಿ ಹೋದರೆ ಒಳಿತು ಎಂಬುದು ಅವಳ ಅಭಿಮತವಾಗಿತ್ತು. ಆದರೆ ನಾನು ಅತೀವ ಉತ್ಸುಕನಾಗಿದ್ದೆ, ಕನಸಿನ ಲೋಕದಲ್ಲಿ ವಿಹರಿಸುತ್ತಲಿದ್ದೆ. ಈಗ ಹಿಂದಿರುಗಿ ನೋಡಿದರೆ ಅವಳು ಹೇಳಿದ್ದರಲ್ಲಿ ಸಂಪೂರ್ಣ ಸುಳ್ಳಿಲ್ಲ ಎಂಬುದಂತೂ ನಿಜ.

ಭಾಗ ೨ – ಕ್ಯಾರೆಟ್ಸ್’ ಹುಟ್ಟುಹಾಕುವ ನಿಟ್ಟಿನಲ್ಲಿ ನನ್ನ ಪಯಣ

ಸ್ವಾಮೀಸ್ ಕಿಚನ್’ನ ಪರಿಚಯ

೨೦೧೨ರ ಮೇ ತಿಂಗಳಲ್ಲಿ ನಾನು ರೆಸ್ಟಾರೆಂಟ್ ವ್ಯವಹಾರದ ಬಗ್ಗೆ ಅಧ್ಯಯನ ಆರಂಭಿಸಿದೆ. ಆಗ ಒಬ್ಬ ವೀಗನ್ ನನ್ನನ್ನು ಪುಟ್ಟಪರ್ತಿಯಲ್ಲಿರುವ ಮತ್ತೊಬ್ಬ ಕೃಷ್ಣ ಹಾಗೂ ಅವರು ನಡೆಸುವ (ಬಹುತೇಕ) ವೀಗನ್ ಹಾಗೂ ಆರೋಗ್ಯಕರ ಉಪಾಹಾರಗೃಹವಾದ ’ಸ್ವಾಮೀಸ್ ಕಿಚನ್’ ಅನ್ನು ಪರಿಚಯ ಮಾಡಿಸಿದಳು. ಪು.ಕೃಷ್ಣ ಒಬ್ಬ ಜರ್ಮನ್ ನಾಗರೀಕ ಹಾಗೂ ಒಬ್ಬ ಶ್ರೀ ಸತ್ಯಸಾಯಿ ಭಕ್ತ. ಇದರೊಂದಿಗೆ, ನನಗೆ ಮುಖ್ಯವಾದ ವಿಷಯವೆಂದರೆ ಅವರಿಗೆ ಬೆಂಗಳೂರಿನಲ್ಲಿ ಒಂದು ಉಪಾಹಾರಗೃಹವನ್ನು ಶುರುಮಾಡಲು ಆಸಕ್ತಿ ಇದೆ ಎಂಬುದು. ನನಗೆ ಆಹಾರ ಉದ್ಯಮದಲ್ಲಿ ಕಡಿಮೆ ಅನುಭವ ಇರುವುದರಿಂದ ಅಂಥವರೊಡನೆ ಪಾಲುದಾರಿಕೆ ಮಾಡಿಕೊಂಡು ವ್ಯವಹಾರ ಶುರುಮಾಡಿದರೆ ಉತ್ತಮ ಎಂದನಿಸಿತು. ಅವರ ಅಂತರ್ಜಾಲ ತಾಣ, ಅಲ್ಲಿ ಉಣಬಡಿಸುವ ವಿವಿಧ ಭಕ್ಷ್ಯಗಳ ಪಟ್ಟಿ ಇತ್ಯಾದಿಗಳನ್ನು ನೋಡಿದಾಗ ಅದ್ಭುತವಾಗಿ ಕಂಡಿತು.

ಆಮೇಲೆ ಅದನ್ನು ಖುದ್ದಾಗಿ ಸಂದರ್ಶಿಸಿ ಪರಿಶೀಲಿಸಬೇಕೆಂದು ನಿರ್ಧರಿಸಿ ೨೦೧೨ ಜೂನ್ ತಿಂಗಳಲ್ಲಿ ಪುಟ್ಟಪರ್ತಿಗೆ ಹೋಗಿ ಅಲ್ಲಿ ಎರಡು ದಿನ ತಂಗಿ “ಸ್ವಾಮೀಸ್ ಬೇಕರಿ”ಯಲ್ಲಿ ಅತ್ಯುತ್ತಮವಾದ ಆಹಾರವನ್ನು ಸವಿದೆ (ಸ್ವಾಮೀಸ್ ಕಿಚನ್ ಎಂದು ಮೊದಲು ಆರಂಭವಾದ ವ್ಯವಹಾರ ಅದೀಗ ಸ್ವಾಮೀಸ್ ಬೇಕರಿ ಎಂಬ ಹೆಸರು ಪಡೆದುಕೊಂಡು ತುಸು ಬೇರೆ ಕಡೆಗೆ ಸ್ಥಳಾಂತರವಾಗಿತ್ತು). ಅಲ್ಲಿ ಪು.ಕೃಷ್ಣರ ಜೊತೆಗೆ ಉತ್ತಮವಾದ ಮಾತುಕತೆಯೂ ನಡೆಯಿತು, ಅವರ ಜೊತೆಗೆ ವ್ಯವಹಾರ ಮಾಡುವುದು ಉತ್ತಮವಾದ ಯೋಜನೆ ಎಂದೂ ಕಂಡಿತು.

ಫೇಸ್‍ಬುಕ್ ತಾಣ: www.facebook.com/SwamysBakery
ಅಂತರ್ಜಾಲ ತಾಣ: http://swamyskitchen.com/ (ಇದರಲ್ಲಿ ಸ್ವಾಮೀಸ್ ಬೇಕರಿ ಸಂಬಂಧಿತ ಮಾಹಿತಿ ಹಾಕಬೇಕಷ್ಟೆ)

ಸೂಕ್ತ ಜಾಗಕ್ಕೆ ಹುಡುಕಾಟ

ಬೆಂಗಳೂರಿಗೆ ಹಿಂದಿರುಗಿದ ಮೇಲೆ ನಾನು ಸೂಕ್ತ ಜಾಗದ ಹುಡುಕಾಟವನ್ನು ಆರಂಭಿಸಿದೆ. ಅದಕ್ಕೆ ಮೊದಲು ನಾನು ಅದನ್ನು ಅಷ್ಟೆಲ್ಲಾ ಗಂಭೀರವಾದ ಸವಾಲು ಎಂದು ಪರಿಗಣಿಸಿರಲಿಲ್ಲ. ಕಟ್ಟಡಗಳ ಕಾಡಿನಲ್ಲಿ ಒಂದು ಸಣ್ಣ ಜಾಗ ಸಿಗುವುದು ಸುಲಭ ಎಂದಂದುಕೊಂಡಿದ್ದೆ. ಆದರೆ ಕೊನೆಗೆ ಮುಂದಿನ ೪ ತಿಂಗಳುಗಳ ಕಾಲ ಈ ಕೆಲಸದಲ್ಲಿ ಮುಳುಗಿಬಿಟ್ಟೆ. ಈ ಅವಧಿಯಲ್ಲಿ ಆಗಾಗ ಹತಾಶನನ್ನಾಗಿಯೂ ಮಾಡುತ್ತಿತ್ತು, ಒಂದಿಗೇ ಅಪಾರವಾದ ಅನುಭವವನ್ನೂ ಕೊಟ್ಟಿತು. ಮೊದಲಿಗೆ ನಾನು ಇಂದಿರಾನಗರದಲ್ಲಿ ಹುಡುಕುತ್ತಿದ್ದೆ, ಆಮೇಲೆ ನನ್ನ ಗಮನವನ್ನು ಕೋರಮಂಗಲದತ್ತ ಹರಿಸಿದೆ. ಕೊನೆಗೆ ಅಕ್ಟೋಬರ್ ೨೦೧೨ರಲ್ಲಿ ನಾವು ಜಾಗವನ್ನು ಆಯ್ಕೆಮಾಡಿದೆವು.

ಸ್ವಾಮೀಸ್ ಕಿಚನ್’ಗೆ ಒಂದು ಔಪಚಾರಿಕ ರೂಪ

ಏತನ್ಮಧ್ಯೆ ನಾವು ಈ ಯೋಜನೆಯನ್ನು ಕ್ರಮಬದ್ಧವಾಗಿ ಒಂದು ಔಪಚಾರಿಕ ಘಟಕದ ಅಡಿಯಲ್ಲಿ ಮುಂದುವರಿಸುವ ನಿರ್ಧಾರ ತೆಗೆದುಕೊಂಡೆವು, ಹಾಗೂ ಇದರನ್ವಯ ಒಂದು ಖಾಸಗಿ ಕಂಪನಿಯೊಂದನ್ನು ಹುಟ್ಟುಹಾಕಿದೆವು. ಹೀಗೆ “ಸ್ವಾಮೀಸ್ ಕಿಚನ್ ಪ್ರೈವೇಟ್ ಲಿಮಿಟೆಡ್” ಹುಟ್ಟುಕೊಂಡಿತು. ಪು.ಕೃಷ್ಣರಿಗೆ ಈ ಹೆಸರಿನ ಬಗ್ಗೆ ಸಾಕಷ್ಟು ಒಲುಮೆಯಿತ್ತು – ಅವರಿಗೆ ’ಸ್ವಾಮಿ’ ಎಂದರೆ ಬರೀ ಶ್ರೀ ಸತ್ಯಸಾಯಿಬಾಬಾ ಆಗಿರಲಿಲ್ಲ, ಯಾವುದೇ ರೂಪ/ಹೆಸರಿನಲ್ಲಿದ್ದ ಯಾವುದೇ ದೇವರಿಗೆ ಸಮಾನವಾಗಿತ್ತು. ಹಾಗೂ ’ಕಿಚನ್’ ಎಂದರೆ ನಿತ್ಯವೂ ಅನೇಕ ವಿಷಯಗಳು ಆಗಿಹೋಗುವ, ನಿರ್ಮಿತವಾಗಿ, ಸೇವಿಸಲ್ಪಡುವ ಪ್ರಪಂಚವನ್ನು ಬಿಂಬಿಸುವಂತಿತ್ತು. ಹೀಗೆ, ’ಸ್ವಾಮೀಸ್ ಕಿಚನ್’ ಎಂದರೆ ಪ್ರಪಂಚದ ಒಂದು ಸಣ್ಣ ಬಿಂಬ, ತುಣುಕು ಎಂಬ ತತ್ವವಿತ್ತು. ವೈಯಕ್ತಿಕವಾಗಿ ನಾನು ಧಾರ್ಮಿಕ ನಂಬಿಕೆ/ಭಾವನೆಗಳಿಂದ ದೂರ, ಹೀಗಾಗಿ ನನಗೆ ಈ ಹೆಸರಿನ ಮೇಲೆ ಅಷ್ಟಾಗಿ ಮನಸ್ಸಿರಲಿಲ್ಲ. ಆದರೆ ಈ ಮೇಲೆ ಹೇಳಿದ ವಿಶಿಷ್ಟವಾದ ಅರ್ಥದೊಂದಿಗೆ ನಾನೂ ಒಪ್ಪಿದೆ, ಹಾಗೂ ನಾವು ಮುಂದುವರಿದೆವು. ಆದರೆ ಉಪಾಹಾರಗೃಹದ ಹೆಸರು ಬೇರೆಯೇ ಇಡುವುದೆಂದೂ ನಿರ್ಧರಿಸಿದೆವು.

ಉಪಾಹಾರಗೃಹದ ಹೆಸರು – ಕ್ಯಾರೆಟ್ಸ್

ನಮಗೆ ಒಂದೇ ಪದದ ಹೆಸರು ಬೇಕಿತ್ತು, ಅದು ಯಾವುದೇ ಭಾಷೆ, ಪ್ರಾಂತ್ಯಕ್ಕೆ ಸೀಮಿತವಾಗಿರಬಾರದು, ಯಾವುದೇ ವಾದವಿವಾದಗಳಿಗೆ ಆಹಾರವಾಗಬಾರದು, ನೋಡಿದಾಕ್ಷಣ ಇದು ಆಹಾರೋದ್ಯಮಕ್ಕೆ ಸಂಬಂಧಿಸಿದ್ದು ಎಂದು ಗೊತ್ತಾಗುವಂತಿರಬೇಕು, ಸಸ್ಯಾಹಾರ-ಆರೋಗ್ಯಕ್ಕೆ ಜತೆಯಾಗಬೇಕು ಎಂಬುದು ನಮ್ಮ ಗುರಿಯಾಗಿತ್ತು. ಪು.ಕೃಷ್ಣ ’ಕ್ಯಾರೆಟ್ಸ್’ ಹೆಸರನ್ನು ಸೂಚಿಸಿದಾಗ ನನಗೆ ತಕ್ಷಣವೇ ಇಷ್ಟವಾಯಿತು. ಕ್ಯಾರೆಟ್‍ನ ಬಣ್ಣವೂ ಆಕರ್ಷಕ ಎನಿಸಿತು. ಕೊನೆಗೆ, ಎರಡು ಕ್ಯಾರೆಟ್‍ಗಳನ್ನು ಇಂಗ್ಲಿಷ್‍ನ ವಿ ಆಕಾರದಲ್ಲಿ ಇರಿಸಲು ಸಾಧ್ಯವಾದದ್ದು ನೋಡಿ ತುಂಬಾ ಖುಷಿಯಾಯಿತು.

ಹೀಗೆಯೇ ವಿಚಾರ ಮಂಥನ ಮಾಡಿ ನಾವು ನಮ್ಮ ಆಲೋಚನೆ-ಗುರಿ-ಪರಿಕಲ್ಪನೆಗಳನ್ನು ಬಿಂಬಿಸುವ ಇತರ ವಾಕ್ಯಗಳನ್ನೂ ಬರೆದೆವು

“ಉತ್ತಮ ಆರೋಗ್ಯಕ್ಕಾಗಿ, ಉತ್ತಮ ನಾಳೆಗಾಗಿ” ಇದು ನಮ್ಮ ಧ್ಯೇಯ ಹಾಗೂ ದಾರಿ ತೋರಿಸಿ ಮುನ್ನಡೆಸುವ ತತ್ವವಾಗಿರುತ್ತದೆ.
“ಆರೋಗ್ಯಕರ ಅಡುಗೆಮನೆ ಹಾಗೂ ಅಂಗಡಿ” ಇದು ನಮ್ಮ ಉಪಾಹಾರಗೃಹ ಹಾಗೂ ವ್ಯಾಪಾರ ಸ್ಥಳವನ್ನು ಸೂಕ್ತವಾಗಿ ವಿವರಿಸುತ್ತದೆ.
“ಸೃಜನಶೀಲ-ಜಾಗೃತ-ವೀಗನ್” ಇದು ನಮ್ಮ ವ್ಯಕ್ತಿತ್ವಗಳನ್ನೂ ನಾವು ನಂಬುವ ತತ್ವಗಳನ್ನೂ ಎತ್ತಿ ಹಿಡಿಯುತ್ತದೆ.

ಸಾವಯವ, ಪರಿಸರ ಪ್ರೇಮೀ ಉತ್ಪನ್ನಗಳು, ವ್ಯಕ್ತಿಗಳು ಹಾಗೂ ಸಂಘ-ಸಂಸ್ಥೆಗಳು

ರೆಸ್ಟಾರೆಂಟಿಗೆ ಸರಿಯಾದ ಸ್ಥಳವನ್ನು ಹುಡುಕುವ ಹಾಗೂ ಖಾಸಗೀ ಕಂಪನಿಯನ್ನು ಹುಟ್ಟುಹಾಕುವ ಈ ಸಮಯದಲ್ಲಿ ನಾನು ಸಾವಯವ ತೋಟಗಾರಿಕೆ, ಉತ್ಪಾದನೆ, ಪರಿಸರ ಪ್ರೇಮ, ವೀಗನಿಸಂ ಇತ್ಯಾದಿಗಳಿಗೆ ಸಂಬಂಧಪಟ್ಟ ಅನೇಕ ಕಾರ್ಯಕ್ರಮಗಳಿಗೆ, ಮೇಳಗಳಿಗೆ ಹೋದೆ. ಅಲ್ಲೆಲ್ಲಾ ಅನೇಕ ಅದ್ಭುತ ವ್ಯಕ್ತಿಗಳ ಹಾಗೂ ಸಂಘ-ಸಂಸ್ಥೆಗಳ ಪರಿಚಯ ಮಾಡಿಕೊಂಡೆ. ಉಪಾಹಾರಗೃಹದೊಂದಿಗೇ ವೀಗನ್, ಪರಿಸರಸ್ನೇಹೀ, ಆರೋಗ್ಯಕರ ಉತ್ಪನ್ನಗಳನ್ನು ಮಾರುವ ಒಂದು ಜಾಗೃತ ಮಳಿಗೆಯನ್ನೂ ಇಡಬೇಕೆಂಬುದು ನಮ್ಮ ಗುರಿಯಾಗಿದ್ದರಿಂದ ಈ ಪರಿಚಯಗಳು ತುಂಬಾ ಸಹಾಯಕಾರಿಯಾದುವು.

ಈ ರೀತಿಯ ಮಾಹಿತಿ ಹಾಗೂ ವ್ಯಕ್ತಿ ಪರಿಚಯಗಳನ್ನು ಕಲೆಹಾಕಲು ನಾನು ಸಾಕಷ್ಟು ಸಮಯ/ಶಕ್ತಿ ವ್ಯಯಿಸಿದ್ದರೂ ಕೂಡ ನಾನು ಇಂತಹ ಉಪಯುಕ್ತ ಮಾಹಿತಿಯನ್ನು ಇತರರೊಡನೆ ಹಂಚಿಕೊಳ್ಳದೆ ನನ್ನೊಡನೆಯೇ ಇರಿಸಿಕೊಳ್ಳಬೇಕೆಂದು ಬಯಸಲಿಲ್ಲ, ಹೀಗಾಗಿ ಇದನ್ನು ಮುಕ್ತವಾಗಿ ಎಲ್ಲರೊಡನೆ ಹಂಚಿಕೊಂಡಿದ್ದೇನೆ, ಇನ್ನು ಮುಂದೆಯೂ ಇದೇ ರೀತಿ ಮುಂದುವರೆಯಬೇಕೆಂದಿದ್ದೇನೆ.


ಡಾ| ನಂದಿತಾ ಶಾ ಅವರ ಬಗ್ಗೆ ಒಂದು ವಿಶೇಷವಾದ ಉಲ್ಲೇಖ: ಈ ಮೊದಲೇ ಅವರ ಬಗ್ಗೆ ಕೇಳಿ ತಿಳಿದಿದ್ದರೂ, ಅವರನ್ನು ನೇರವಾಗಿ ಭೇಟಿಯಾಗುವ ಸುಯೋಗ ದೊರಕಿರಲಿಲ್ಲ, ಆದರೆ ಈ ಕಾಲಾವಧಿಯಲ್ಲಿ ಈ ಕೊರತೆ ನೀಗಿತು, ಅವರು ಆಯೋಜಿಸಿದ್ದ ಆರೋಗ್ಯಕರ ಅಡುಗೆ ಕಮ್ಮಟದಲ್ಲಿ ನಾನು ಭಾಗವಹಿಸಿದಾಗ. ಆರೋಗ್ಯದ ಬಗ್ಗೆ ಹಾಗೂ ವೀಗನಿಸಂ ಬಗ್ಗೆ ಅರಿವನ್ನು ಮೂಡಿಸಲು, ಪಸರಿಸಲು ಮಾಡುವ ನಿಟ್ಟಿನಲ್ಲಿ ಅವರ ಪ್ರಯತ್ನಗಳನ್ನು ನೋಡಿ ನನಗೆ ಖುಷಿಯಾಯಿತು. ಮಾತ್ರವಲ್ಲ, ಅವರು ನಮ್ಮ ವ್ಯವಹಾರದ ಒಬ್ಬ ದೊಡ್ಡ ಅಭಿಮಾನಿ ಹಾಗೂ ಬೆಂಬಲಿಗರಾಗಿ ಮುಂದೆ ಬಂದರು. ನಾವು ಮುಂದಿನ ದಿನಗಳಲ್ಲಿ ಅವರ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ.

ಉದ್ಯೋಗಿಗಳ ನೇಮಕಾತಿ

ಅನೇಕರು ಹೇಳುವಂತೆ, ರೆಸ್ಟಾರೆಂಟ್ ವ್ಯವಹಾರದ ಅತ್ಯಂತ ಪ್ರಮುಖ ಸವಾಲುಗಳಲ್ಲಿ ಒಂದು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳುವುದು ಹಾಗೂ ಉಳಿಸಿಕೊಳ್ಳುವುದು. ನನಗೆ ಮೊದಲ ಹೆಜ್ಜೆ ಸಾಕಷ್ಟು ಸುಲಭವಾಗಿಯೇ ಆಯಿತು, ಪ್ರತ್ಯೇಕವಾಗಿ ಮುಖ್ಯ ಅಡುಗೆಯವರ ಸ್ಥಾನಕ್ಕೆ. ನಾನು ಉದ್ಯೋಗಾವಕಾಶಗಳನ್ನು ಪ್ರಕಟಿಸಿದಾಗ, ಶೆಫ್ ಅನಂತ ಅವರು ಮುಂದೆ ಬಂದು ಇದನ್ನೊಂದು ಸವಾಲಾಗಿ ಸ್ವೀಕರಿಸುವ ಉಮೇದು ತೋರಿಸಿದರು. ನಾನು ಹುಡುಕುತ್ತಿದ್ದ ಮನೋಭಾವ ಇದೇ ಆಗಿತ್ತು, ಹೀಗಾಗಿ ಅವರನ್ನು ಹೆಚ್ಚು ತಡ ಇಲ್ಲದೆ ಆಯ್ಕೆ ಮಾಡಿಯೇ ಬಿಟ್ಟೆ. ಮೊದಲಿಗೆ ಎಲ್ಲವನ್ನೂ ಸ್ಥಾಪಿಸುವ ಹಂತದಲ್ಲಿ ಸರಿಯಾದ ಅಡುಗೆಮನೆ ಇಲ್ಲದ್ದರಿಂದ ಅವರಿಗೆ ಸಕ್ರಿಯವಾಗಿರಲು ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ, ಆದರೀಗ ರುಚಿ ನೋಡುವ ಕಾರ್ಯಕ್ರಮಗಳಲ್ಲಿ ಅವರ ಅಡುಗೆಯ ಬಗ್ಗೆ ಅನೇಕರಿಂದ ಪ್ರಶಂಸೆಗಳು, ಉತ್ತಮ ಪ್ರತಿಕ್ರಿಯೆಗಳು ಕೇಳಿಬರುತ್ತಿವೆ.

ಕೆಲಸಕ್ಕೆ ತೆಗೆದುಕೊಂಡು ಪ್ರತಿಯೊಬ್ಬರಿಗೂ ನಾನು ನಮ್ಮ ತತ್ವಗಳನ್ನು ಸವಿವರವಾಗಿ ವಿವರಿಸಿದೆ, ಹಾಗೂ ನಾವು ಹೇಗೆ ಇತರ ಅನೇಕರಿಂದ ವ್ಯತ್ಯಸ್ಥ, ಹೇಗೆ ನಾವು ಒಟ್ಟಾರೆ ಧನಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಬಹುದು ಇತ್ಯಾದಿ ವಿಷಯಗಳನ್ನು ಎತ್ತಿ ತೋರಿಸಿದೆ.  ನಮ್ಮ ಉದ್ಯೋಗಿಗಳ ನೇಮಕ ಪ್ರಕ್ರಿಯೆ ಇನ್ನೂ ಮುಗಿದಿಲ್ಲ, ಆದರೆ ಇದುವರೆಗೆ ಸಿಕ್ಕಿದ ೪ ಜನ ತುಂಬಾ ಉತ್ತಮ ಆಯ್ಕೆ. ಇನ್ನುಳಿದವರೂ ಇದೇ ರೀತಿಯ ಮನೋಭಾವ ಹಾಗೂ ಚೈತನ್ಯವನ್ನು ಹೊಂದಿರುತ್ತಾರೆ ಎಂದು ಆಶಿಸುತ್ತಿದ್ದೇನೆ.

ಉಪಾಹಾರಗೃಹದ ಜಾಗವನ್ನು ತಯಾರುಮಾಡುವುದು ಹಾಗೂ ಇತರ ಕಾರ್ಯಾಚರಣಾ ಚಟುವಟಿಕೆಗಳು

ಎಲ್ಲದಕ್ಕಿಂತ ಕಷ್ಟವಾದದ್ದು ಈ ಸಂಗತಿ. ಈ ಮೊದಲೇ ಒಂದು ಉಪಾಹಾರಗೃಹ ನಡೆಯುತ್ತಿದ್ದ ಒಂದು ಜಾಗವನ್ನು ನಾವು ಬಾಡಿಗೆಗೆ ತೆಗೆದುಕೊಂಡಿದ್ದರಿಂದ ನಾವು ಹೆಚ್ಚಿನ ಬದಲಾವಣೆ ಇಲ್ಲದೆ ಬೇಗನೇ ಶುರುಮಾಡಬಹುದು ಎಂದು ಅಂದುಕೊಂಡೆವು. ಆದರೆ ನಮ್ಮ ಯೋಜನೆಗಳು ಬದಲಾಗುತ್ತಾ ಸಾಗಿದವು, ಅನೇಕ ಕೆಲಸಗಳು ಅಂದುಕೊಂಡಷ್ಟು ಸಮಯದಲ್ಲಿ ಮುಗಿಯಲಿಲ್ಲ, ಅಂದಾಜು ಖರ್ಚುಗಳೂ ಏರಿದವು.

ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ನಾನು ಗಳಿಸಿದ ಅನುಭವ ಈ ರೀತಿಯ ಪ್ರಾಜೆಕ್ಟ್‌ಗಳಲ್ಲಿ ಯಾವಾಗಲೂ ಉಪಯೋಗವಾಗುವುದಿಲ್ಲ ಎಂಬುದನ್ನು ನಾನು ಮನಗಂಡೆ. ಐ.ಟಿ. ಜಗತ್ತಿನಲ್ಲಿ ರೀತಿ-ನೀತಿ-ನಿಯಮಗಳನ್ನು ಹುಟ್ಟುಹಾಕಿ ಅನುಷ್ಠಾನಕ್ಕೆ ತರುವುದು, ಪರಸ್ಪರ ಅಪೇಕ್ಷೆಗಳನ್ನು ವ್ಯಕ್ತಪಡಿಸುವುದು, ಕೆಲಸದ ಪ್ರಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸುವುದು, ತಕ್ಕ ಕ್ರಮ ಕೈಗೊಳ್ಳುವುದು ಇತ್ಯಾದಿ ಸಾಕಷ್ಟು ಸುಲಭ. ಆದರೆ ಇಂತಹ ಪ್ರಾಜೆಕ್ಟ್‌ಗಳಲ್ಲಿ ಅನೇಕರು (ವ್ಯಾಪಾರಸ್ಥರು, ಸಲಹೆಗಾರರು, ಕೆಲಸಗಾರರು ಇತ್ಯಾದಿ) ಇಂತಹ ಕಾರ್ಯವೈಖರಿಗೆ ಒಗ್ಗಿ ಹೋಗಿರದೇ ಇರುವುದರಿಂದಲೂ, ಸವಾಲುಗಳು ವ್ಯತ್ಯಸ್ಥವಾಗಿರುವುದರಿಂದಲೂ, ನನ್ನ ಅನುಭವವನ್ನು ಇಲ್ಲಿ ಪರಿಣಾಮಕಾರಿಯಾಗಿ ಬಳಸುವುದು ವಿಶಿಷ್ಠವಾದ ಅನುಭವವಾಗಿತ್ತು.

ನಾನು ಹೊಸ ಉಪಾಹಾರಗೃಹವೊಂದನ್ನು ಶುರುಮಾಡುವುದು ಹೇಗೆ ಎಂಬುದರ ಬಗ್ಗೆ ಬೆಳಕು ಚೆಲ್ಲುವ ಒಂದು ಕಮ್ಮಟಕ್ಕೂ ಹೋಗಿದ್ದೆ, ಆದರೆ ಅದು ಹೆಚ್ಚಿನ ಪ್ರಯೋಜನ ನೀಡಲಿಲ್ಲ. ಇಂತಹುದೇ ಇನ್ನೊಂದು ಕಾರ್ಯಕ್ರಮ ಕೂಡ ಇತ್ತು, ಆದರೆ ಮೊದಲಿನದ್ದರ ವೈಫಲ್ಯವನ್ನು ನೋಡಿದ ಮೇಲೆ ನಾನು ಅದರ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ, ಆದರೆ ಅದು ಉತ್ತಮ ದರ್ಜೆಯದ್ದಾಗಿತ್ತಂತೆ, ನಾನು ಆ ಅವಕಾಶವನ್ನು ಕಳೆದುಕೊಂಡೆ, ಅಷ್ಟೆ.

ಇನ್ನೊಂದು ಮುಖ್ಯವಾದ ವಿಷಯವೆಂದರೆ ಇಂತಹ ಯೋಜನೆಯನ್ನು ಬುಡದಿಂದಲೇ ಶುರುಮಾಡುವುದು ಅಥವಾ ಇದ್ದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದು – ಇವೆರಡರ ಮಧ್ಯೆ ಇರುವ ವ್ಯತ್ಯಾಸ. ಒಂದು ರೀತಿಯಲ್ಲಿ ನೋಡಿದರೆ ಮೊದಲೇ ಉಪಾಹಾರಗೃಹ ಇದ್ದದ್ದು ಕೆಲವು ವಿಷಯಗಳನ್ನು ಸರಳೀಕರಿಸುತ್ತದೆ, ಆದರೆ ಅದನ್ನು ನಮ್ಮ ತತ್ವಗಳಿಗನುಗುಣವಾಗಿ ಬದಲಾವಣೆ ಮಾಡುವುದು ದೊಡ್ಡ ಸವಾಲಾಗಿ ಪರಿಣಮಿಸುತ್ತದೆ, ಯಾಕೆಂದರೆ ಅದರಲ್ಲಿ ಅನೇಕ ಅಡೆತಡೆಗಳಿರುತ್ತವೆ.

ಪ್ರತಿಯೊಂದು ಹೆಜ್ಜೆಯಲ್ಲಿಯೂ ಪರಿಸರಸ್ನೇಹೀ ತತ್ವಗಳನ್ನು ಪಾಲಿಸುವುದು, ಕೆಲಸಗಾರರಿಗೆ ಎಲ್ಲಾ ರೀತಿಯಲ್ಲಿಯೂ ನ್ಯಾಯಯುತವಾದ ಸಂಬಳ, ಸವಲತ್ತುಗಳು ಸಿಗುತ್ತವೆ ಎಂಬುದನ್ನು ಖಾತ್ರಿ ಮಾಡುವುದು – ಇವೆಲ್ಲಾ ಅತ್ಯಂತ ದೊಡ್ಡ ಸವಾಲುಗಳಾಗಿದ್ದುವು, ಪ್ರತ್ಯೇಕವಾಗಿ ಸಮಯ/ಹಣ ಎರಡೂ ಸೀಮಿತವಾಗಿದ್ದಾಗ ಹಾಗೂ ಬೇಗನೇ ಖಾಲಿಯಾಗುತ್ತಿದ್ದಾಗ – ಇದರಲ್ಲಿ ಒಂದು ಸಮತೋಲನವನ್ನು ಸಾಧಿಸುವುದು ನಿತ್ಯದ ಒಗಟಾಗಿತ್ತು.

ಈ ಎರಡೂ ವಿಷಯಗಳು ಯಾರಿಗಾದರೂ ಅತ್ಯಂತ ಮುಖ್ಯ ಎಂಬ ಭಾವನೆ ಇದ್ದರೆ, ಅಂಥವರು ಸಂಬಂಧಪಟ್ಟ ಎಲ್ಲಾ ವಿಷಯಗಳ ಬಗ್ಗೆ ಇನ್ನೂ ಆಳವಾದ ಅಧ್ಯಯನ ಮಾಡಿ ಆಮೇಲೆಯಷ್ಟೇ ಜಾಗವನ್ನು ಬಾಡಿಗೆಗೆ ತೆಗೆದುಕೊಳ್ಳುವುದು ಉತ್ತಮ ಎಂದು ನಾನು ಬಲವಾಗಿ ಶಿಫಾರಸು ಮಾಡುತ್ತೇನೆ. ಇಲ್ಲದಿದ್ದರೆ ಯೋಜನೆಯ ಮಧ್ಯದಲ್ಲಿ ಕೆಲವು ವಿಷಯಗಳ ಬಗ್ಗೆ ಅಧ್ಯಯನ ಮಾಡುವುದರಿಂದಾಗಿ ಇಡೀ ಯೋಜನೆ ನಿಧಾನವಾಗುತ್ತದೆ, ಮಾತ್ರವಲ್ಲ ದಣಿವುಂಟುಮಾಡುತ್ತದೆ.

ಒಟ್ಟಾರೆ, ನನಗೆ ಇದೊಂದು ನಿಜಕ್ಕೂ ವಿನೀತನನ್ನಾಗಿಸುವ ಅನುಭವವಾಗಿತ್ತು ಹಾಗೂ ಈ ಅನುಭವ ನನ್ನನ್ನು ಹೆಚ್ಚು ವಿವೇಕಿಯಾಗಿಸಿದೆ ಎಂಬುದನ್ನು ಚೆನ್ನಾಗಿ ಕಾಣುತ್ತಿದ್ದೇನೆ. ಯಾರಿಗಾದರೂ ಏನಾದರೂ ಸಲಹೆ ಸೂಚನೆ ಕೊಡುವ ಇಚ್ಛೆ ಇದ್ದರೆ ನನ್ನನ್ನು ಮುಕ್ತವಾಗಿ ಸಂಪರ್ಕಿಸಿರಿ.

ಧನ್ಯವಾದಗಳು

ವೈಯಕ್ತಿಕವಾಗಿ, ನನ್ನ ಕನಸನ್ನು ನನಸು ಮಾಡುವಲ್ಲಿ ಸಹಾಯ ಮಾಡಿದ ಅನೇಕರಿಗೆ ನಾನು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ಈ ಪಟ್ಟಿ ದೊಡ್ಡದಿದೆ, ಯಾರದ್ದಾದರೂ ಹೆಸರು ತಪ್ಪಿಹೋದರೆ ಆಮೇಲೆ ನನಗೆ ಬೇಸರವಾಗುವುದು ಖಚಿತ, ಹೀಗಾಗಿ ಆ ಸಾಹಸಕ್ಕೆ ಹೊರಡುವುದಿಲ್ಲ. ಆದರೆ ಸಹಾಯ ಮಾಡಿದವರು ನನ್ನ ಕೃತಜ್ಞತಾಭಾವವನ್ನೂ ತಿರುಗಿ ಕೈಲಾದ ಸಹಾಯಮಾಡುತ್ತಿರುವುದನ್ನೂ ಕಾಣುತ್ತಿದ್ದಾರೆ ಎಂದು ನಂಬಿದ್ದೇನೆ, ಈ ನಿಟ್ಟಿನಲ್ಲಿ ಎಲ್ಲಿ ಯಾವಾಗ ಸಾಧ್ಯವಾಗುತ್ತದೋ ಅದನ್ನು ಹೃತ್ಪೂರ್ವಕವಾಗಿ ಮಾಡುತ್ತಿದ್ದೇನೆ ಎಂಬುದರ ಬಗ್ಗೆ ಭರವಸೆ ಇರಲಿ.

ಕೊನೆಯದಾಗಿ, ಅನೇಕ ಏರುಬೀಳುಗಳಿಂದ ಕೂಡಿದ ಈ ಪಯಣದಲ್ಲಿ ಅತ್ಯಂತ ಭರವಸೆ ಹಾಗೂ ಆಸರೆ ಕೊಟ್ಟ ನನ್ನ ಕುಟುಂಬದವರಿಲ್ಲದೆ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಇದು ಈಗಿನ್ನೂ ಪಯಣದ ಆರಂಭ, ಇದು ನನ್ನನ್ನು ಯಶಸ್ಸಿನ ಕಡೆಗೆ ಒಯ್ಯಲಿ, ಹಾಗೂ ಇದರ ಮೂಲಕ ನನ್ನವರು ಹೆಮ್ಮೆ ಹಾಗೂ ಸಂತೋಷ ಪಡಲಿ, ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ಅವರ ತಳಮಳ ಕಡಿಮೆಯಾಗಲಿ ಎಂದು ಆಶಿಸುತ್ತಿದ್ದೇನೆ!



ನಿಮಗೆ ಆಸಕ್ತಿ ಹುಟ್ಟಿಸಬಹುದಾದ ಇತರ ಕೆಲವು ಲೇಖನಗಳು:

ದನ,ನಮ್ಮ ಗುಲಾಮ ದೇವರು!

ಆಹಾ! ಮತ್ತೊಂದು ವೀಗನ್ ಮದುವೆ!!

ದೈನಂದಿನ ಜೀವನದಲ್ಲಿ ಪರಿಸರ ಸಂರಕ್ಷಣೆ

ಪರಿಸರಸ್ನೇಹೀ ಆಹಾರ ಎಂದರೆ ಏನು?

ಕೆಲವು ಸಸ್ಯಾಹಾರಿಗಳೇಕೆ ಮಾಂಸಾಹಾರದ ಬಗ್ಗೆ ಟೀಕೆ ಮಾಡುವುದಿಲ್ಲ?

ಒಂದು ಕೌತುಕಮಯವಾದ ಸಂಭಾಷಣೆ

1 comments:

Post a Comment