About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Wednesday, July 25, 2012

ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು - ೬


ಇದುವರೆಗೆ:


ಇದು ಈ ಅನುಭವ ಕಥನದ ಕೊನೆಯ ಕಂತು. ತುಸು ತಡವಾಗಿ ನಿಮ್ಮೊಡನೆ ಹಂಚಿಕೊಳ್ಳುತ್ತಿರುವುದಕ್ಕೆ ಕ್ಷಮೆ ಇರಲಿ.

ಭಾಗ ೧೮ - ಎಫ್..ಆರ್. ಕಥೆ

ಪೂರಾ ಬ್ಯಾಗಲ್ಲದಿದ್ದರೂ ಕೂಡ ಕೆಲವು ಮುಖ್ಯವಾದ ದಾಖಲೆಗಳು ಕೈಸೇರಿದ್ದಾಯಿತು. ಮುಂದೇನು? ಬೆಂಗಳೂರಿನಲ್ಲಿ ಪೋಲೀಸರು ಹೇಳಿದ್ದರು - ಕಳೆದುಹೋದ ಪಾಸ್ಪೋರ್ಟ್ ಬಗ್ಗೆ ಒಂದು ವಿಶೇಷವಾದ ಸಿಸ್ಟಮ್ನಲ್ಲಿ ದಾಖಲು ಮಾಡುತ್ತಾರೆ ಎಂದು. ಅದರಲ್ಲಿ ಪಾಸ್ಪೋರ್ಟ್ ಸಿಕ್ಕಿದೆ ಎಂದು ನಮೂದಿಸುವುದು ಕೂಡ ಮುಖ್ಯವಿರಬಹುದು ಎಂದು ನಾನಂದುಕೊಂಡೆ. ಏನಿದ್ದರೂ ಎಫ್..ಆರ್. ಅನ್ನು ಕೂಡ ಸುಮ್ಮನೆ ಹಾಗೆ ಬಿಡುವುದು ಸರಿಯಲ್ಲ ಎಂಬ ಭಾವನೆ ನನಗಿತ್ತು - ಯಾರಿಗೆ ಗೊತ್ತು ವಿಷಯದಲ್ಲಿ ಯಾರಾದರೂ ಕೆಲಸ ಮಾಡುತ್ತಿದ್ದಾರೋ ಏನೋ, ಅನಗತ್ಯವಾಗಿ ಸಾರ್ವಜನಿಕ ಹಣ ಪೋಲಾಗುವುದು ಬೇಡ ಎಂಬ ಆಲೋಚನೆಯೂ ನನ್ನ ತಲೆಯಲ್ಲಿ ಮೂಡಿತ್ತು. ಪ್ರಾಮಾಣಿಕವಾಗಿ ಹೇಳುವುದಾದರೆ ನಿಜಕ್ಕೂ ಎಫ್..ಆರ್. ಆಧಾರದಲ್ಲಿ ಏನಾದರೂ ಕೆಲಸ ನಡೆಯುತ್ತಿದೆ ಎಂಬುದರ ಬಗ್ಗೆ ನನಗೆ ಯಾವ ಭರವಸೆಯೂ ಉಳಿದಿರಲಿಲ್ಲ, ಆದರೂ ನಾನು ಮಾಡಬೇಕಾದ ಕರ್ತವ್ಯದಿಂದ ವಿಮುಖನಾಗಲು ಮನಸ್ಸಿರಲಿಲ್ಲ.

ಸರಿ, ಬೆಂಗಳೂರಿಗೆ ವಾಪಸ್ ಹೋಗಿ ಉಪ್ಪಾರ್ಪೇಟೆ ಆರಕ್ಷಕಾ ಠಾಣೆಗೆ ಹೋದೆ. ಮಧ್ಯಾಹ್ನದ ಹೊತ್ತು - ಸಲ ಅಲ್ಲಿ ಹಲವಾರು ಸಾರ್ವಜನಿಕರು ವಿವಿಧ ಅಹವಾಲುಗಳನ್ನು ಹಿಡಿದುಕೊಂಡು ನಿಂತಿದ್ದರು. ಅಲ್ಲಿ ನಾವು ದೂರು ಕೊಟ್ಟಾಗ ಇದ್ದ ಪೋಲೀಸರೂ ಇದ್ದರು. ತುಸು ಸಲಿಗೆ ವಹಿಸಿ ಮುಂದೆ ಹೋಗಿ ನಾನು ಅಧಿಕಾರಿಯನ್ನು ಮಾತನಾಡಲೆತ್ನಿಸಿದೆ. ಅವರಿಗೆ ನನ್ನ ಮುಖಪರಿಚಯವಿತ್ತು. "ಏನು ನಿಮ್ಮ ಬ್ಯಾಗು ಇನ್ನೂ ಸಿಕ್ಕಲಿಲ್ಲವೇ?" ಎಂದು ಕೇಳುತ್ತಿರಬೇಕಾದರೆ ನಾನೇ (ಅವರ ಅಮೂಲ್ಯ ಸಮಯವನ್ನು ವ್ಯರ್ಥಮಾಡಲಿಷ್ಟವಿಲ್ಲದೆ) ಅವರ ಮಾತುಗಳನ್ನು ತುಂಡರಿಸಿ "ಬ್ಯಾಗ್ ಸಿಗಲಿಲ್ಲ, ಆದರೆ ಪಾಸ್ಪೋರ್ಟ್, ಬ್ಯಾಂಕಿನ ಕಾರ್ಡ್ ಇತ್ಯಾದಿ ಸಿಕ್ಕಿದವು" ಎಂದು ಹೇಳಿ ಸಂಕ್ಷಿಪ್ತವಾಗಿ ವಿವರಿಸಿದೆ. ಇವನ್ನೆಲ್ಲಾ ನಮಗೆ ವಾಪಸ್ ಕೊಟ್ಟದ್ದು ಒಬ್ಬ ಅನಾಮಧೇಯ ವ್ಯಕ್ತಿ ಎಂದೂ ಹೇಳಿದೆ, ಜಾರ್ಜ್ ಅನ್ನು ಸುಮ್ಮನೆ ಕೇಸಿಗೆ ಎಳೆಯುವುದು ಬೇಡ ಎಂಬ ಉದ್ದೇಶದಿಂದ - ಇದು ಸರಿಯೋ, ತಪ್ಪೋ, ಒಟ್ಟಿನಲ್ಲಿ ಪೋಲೀಸು-ಕೇಸು ಇವುಗಳಲ್ಲಿ ಭಾಗಿಯಾಗಲು ಇಷ್ಟಪಡದ ವ್ಯಕ್ತಿಯನ್ನು ಸುಮ್ಮನೇ ಎಳೆಯುವುದು ಸರಿ ಎಂದು ನನಗನಿಸಲಿಲ್ಲ. ಆದರೆ ಪೋಲೀಸರಿಗೆ ನಡೆದ ಘಟನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಯಾವುದೇ ಆಸಕ್ತಿ ಇದ್ದಂತಿರಲಿಲ್ಲ. "ಒಳ್ಳೆದಾಯ್ತು, ಅವೆಲ್ಲಾ ಸಿಕ್ಕಿತಲ್ಲಾ, ಇನ್ನುಳಿದದ್ದು ಸಿಗುವುದಿಲ್ಲ ಬಿಡಿ" ಎಂದು ವಾಸ್ತವಿಕತೆಯ ಚಿತ್ರಣ ಕೊಟ್ಟರು.

"ಸರಿ, ಈಗ ಎಫ್..ಆರ್. ಅನ್ನು ಏನು ಮಾಡುವುದು?" ಎಂಬ ಪ್ರಶ್ನೆಯನ್ನು ನಾನೆತ್ತಿದಾಗ ಒಬ್ಬ ಪೋಲೀಸರು ಕಳೆದುಹೋದದ್ದೆಲ್ಲಾ ಸಿಕ್ಕಿದೆ ಎಂದು ಬರೆದು ಕೊಡಿ ಎಂದು ಹೇಳಿದರು. ಆದರೆ ನನಗೆ ಮಾತು ಅಷ್ಟಾಗಿ ಹಿಡಿಸಲಿಲ್ಲ. ವಿನಯಪೂರ್ವಕವಾಗಿಯೇ ನಾನು ಕೇಳಿದೆ "‘ ವಸ್ತುಗಳು ಸಿಕ್ಕಿವೆ, ಉಳಿದದ್ದು ಸಿಗಲಿಲ್ಲಎಂದು ಬರೆದುಕೊಡಲೇ?" ಎಂದು ಕೇಳಿದೆ. ಆಗ ಇಬ್ಬರಲ್ಲಿ ಹಿರಿಯರಾಗಿದ್ದ ಅಧಿಕಾರಿ ತುಸು ಜಾಗೃತರಾದರು, "ಪರವಾಗಿಲ್ಲ ಬಿಡಿ, ಏನೂ ಬೇಡ, ನೀವು ಹೋಗಿ, ಸ್ವಲ್ಪ ದಿನಗಳಾದ ಮೇಲೆ ನಾವೇ ಕೇಸನ್ನು ಮುಚ್ಚುತ್ತೇವೆ ಬಿಡಿ" ಎಂದು ಹೇಳಿದರು. ನಾನು ದಂಗಾದೆ! ಕ್ಷಣಮಾತ್ರದಲ್ಲಿಯೇ ನನಗೆ ಅರಿವಾಯಿತು, ನಾನು ಹೇಳಿದಂತೆ ಬರೆದುಕೊಟ್ಟರೆ ಅವರಿಗೆ ಎಫ್..ಆರ್. ಮುಚ್ಚಲು ಕಷ್ಟವಾಗಬಹುದೇನೋ ಅಥವಾ ತುಸು ಕೆಲಸ ಹೆಚ್ಚಬಹುದೇನೋ, ಆದರೆ ಸುಮ್ಮನಿದ್ದುಬಿಟ್ಟರೆ ಏನೋ ಒಂದು ಬರೆದು ಮುಚ್ಚಲು ಸುಲಭವಾಗಬಹುದೇನೋ. ಇವೆಲ್ಲಾ ನನ್ನ ಊಹೆಗಳು, ಅಷ್ಟೆ. ಒಟ್ಟಿನಲ್ಲಿ ನಾನು ಲಿಖಿತ ರೂಪದಲ್ಲಿ ಏನನ್ನೂ ಕೊಡದೆಯೇ ಠಾಣೆಯಿಂದ ಹೊರಬಂದೆ.

ನಮ್ಮ ವ್ಯವಸ್ಥೆ ಇಷ್ಟೇಎಂಬ ನಿಟ್ಟುಸಿರು ಬಿಟ್ಟು ಅಲ್ಲಿಂದ ಹೊರಟೆ. ಆದರೆ ಪೋಲೀಸರದ್ದು ಎಷ್ಟು ತಪ್ಪು ಎಂದು ಹೇಳಲು ನನಗೆ ಗೊತ್ತಿಲ್ಲ. ಅದಕ್ಕಿಂತ ಹೆಚ್ಚು ಮಾಡಲು ಪೂರಕವಾಗುವ ವ್ಯವಸ್ಥೆಗಳು, ಸಲಕರಣೆಗಳು, ಜನಬಲ ಅವರ ಬಳಿ ಇರುವುದೂ ಸಂಶಯವೇ. ಕಡೇಪಕ್ಷಪೋಲೀಸರ ಬಳಿ ಹೋಗುವುದು ಆತಂಕ, ಕಿರಿಕಿರಿಯ ವಿಷಯಎಂಬ ಚಿತ್ರಣದ ವಿರುದ್ಧವಾಗಿ ಸಭ್ಯವಾಗಿ, ಆತ್ಮೀಯತೆಯಿಂದ ಮಾತನಾಡಿಸದರಲ್ಲಾ, ಬಹುಷಃ ಅದೇ ಒಂದು ದೊಡ್ಡ ಬೆಳವಣಿಗೆ ಎಂದಂದುಕೊಂಡೆ ನಾನು.

ಭಾಗ ೧೯ - ನಮಗೆ ಸಿಕ್ಕಿದ ಇನ್ನೊಂದು ಬ್ಯಾಗಿನ ಕಥೆ

ನಮ್ಮ ಕಳೆದುಹೋದ ಬ್ಯಾಗಿನ ಬದಲು ಬಸ್ಸಿನಲ್ಲಿ ಇನ್ನೊಂದು ಬ್ಯಾಗು ಸಿಕ್ಕಿತ್ತು ಎಂದು ಹೇಳಿದ್ದೆನಲ್ಲಾ. ಅದನ್ನು ನಿಜವಾಗಿಯೂ ಕಳ್ಳನದ್ದೇ? ಅಥವಾ ಇನ್ಯಾರದ್ದಾದರೂ ಕದ್ದುಹೋದ ಬ್ಯಾಗೇ? ಅದರಲ್ಲಿ ಒಂದು ವಾಹನ ಚಾಲನಾ ಪರವಾನಿಗೆಯ ಪ್ರತಿ ಇತ್ತೆಂದು ಹೇಳಿದ್ದೆ, ಅದರಲ್ಲಿರುವ ವಿವರಗಳನ್ನು ಸರಕಾರೀ ಅಂತರ್ಜಾಲ ತಾಣದಲ್ಲಿ ಹಾಕಿದಾಗ ವಿವರಗಳಿಗೆ ತಾಳೆಯಾಗುವ ಪರವಾನಿಗೆ ಇಲ್ಲವೆಂದು ತೋರಿಸುತ್ತದೆ ಎಂದೂ ಹೇಳಿದ್ದೆ. ಹಾಗಾದರೆ ಅದು ನಕಲಿ ದಾಖಲೆಯೇ? ಅಥವಾ ಲೈಸೆನ್ಸ್ ಕ್ಯಾನ್ಸಲ್ ಮಾಡಲಾಗಿದೆಯೇ? ಅದರಲ್ಲಿ ನಮೂದಿಸಲಾದ ವಿಳಾಸಕ್ಕೆ ಒಂದು ಪತ್ರ ಬರೆದುನೋಡಿದರೆ ಹೇಗೆ ಎಂಬ ಆಲೋಚನೆಯೂ ಇತ್ತು.

ಆದರೆ ಅಷ್ಟರಲ್ಲಿ ಇನ್ನೊಂದು ಸಂಗತಿ ಹೊರಬಂತು. ಬ್ಯಾಗು ನಮಗೆ ಮೊದಲು ಸಿಕ್ಕಿದಾಗ ಇದ್ದ ಆ ಹಳೇ ಡಿಜಿಟಲ್ ಕ್ಯಾಮರಾ, ಮೊಬೈಲ್ ಬ್ಯಾಟರಿ ಹಾಗೂ ಚಾರ್ಜರ್, (ಚಿನ್ನದ್ದಲ್ಲದ?) ಬ್ರೇಸ್ಲೆಟ್, ಸ್ಕ್ರೂ ಡ್ರೈವರ್, ಹ್ಯಾಕ್ಸಾ ಬ್ಲೇಡು, ಡ್ರೈವಿಂಗ್ ಲೈಸೆನ್ಸ್ ಪ್ರತಿಗಳು - ಇವಿಷ್ಟು ಈಗ ಬ್ಯಾಗಿನಲ್ಲಿ ಇರಲೇ ಇಲ್ಲ! ಅರೆ, ಇವೆಲ್ಲಾ ಎಲ್ಲಿ ಹೋಯಿತು ಎಂದು ನಾನು ಮೂಗಿನ ಮೇಲೆ ಬೆರಳಿಟ್ಟುಕೊಂಡೆ. ಎಷ್ಟು ಯೋಚಿಸಿದರೂ ಹೊಳೆಯಲೇ ಇಲ್ಲ. ಕೊನೆಗೆ ವಿಷಯವನ್ನು ಹೆಚ್ಚಿಗೆ ಕೆದಕುವುದು ಬೇಡ ಎಂದು ಅಲ್ಲಿಗೇ ಬಿಟ್ಟುಬಿಟ್ಟೆ. ಪೂರಾ ಕಥೆಯನ್ನು ಕೂಲಂಕಷವಾಗಿ ಓದಿದರೆ ಇವೆಲ್ಲಾ ಏನಾಗಿರಬಹುದು ಎಂಬುದರ ಬಗ್ಗೆ ನಿಮಗೆ ಕೆಲವು ವಿಷಯಗಳು ಹೊಳೆಯಬಹುದು. ಅಂತಹ ಆಲೋಚನೆಗಳನ್ನು ನೀವು ಹರಿಯಬಿಟ್ಟರೆ ಅದಕ್ಕೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ ಎಂಬುದನ್ನು ಈಗಲೇ ಹೇಳಿಬಿಡುತ್ತೇನೆ. ಕೆಲವು ವಿಷಯಗಳನ್ನು ಹೆಚ್ಚು ಕೆದಕದೇ ಬಿಡುವುದೇ ಒಳಿತು.

ಇನ್ನುಳಿದಂತೆ ಬ್ಯಾಗಿನಲ್ಲಿ ಅಂಥಾ ಬೆಲೆಬಾಳುವ ವಸ್ತುಗಳು ಏನೂ ಇರಲಿಲ್ಲ ಎಂಬುದನ್ನು ಗಮನಿಸಿ ಇನ್ನೊಬ್ಬ ಅಜ್ಞಾತ ವ್ಯಕ್ತಿಯನ್ನು ಸಂಪರ್ಕಿಸುವ, ಬ್ಯಾಗು ವಾಪಸ್ ಕೊಡಲು ಯತ್ನಿಸುವ ಸಾಹಸ ಬೇಡ ಎಂದು ನಿರ್ಧರಿಸಿದೆ. ಅಳಿದುಳಿದ ವಸ್ತುಗಳೊಂದಿಗೆ (ತಮಿಳು ಹಾಡುಗಳ ಸಿ.ಡಿ., ಒಂದೆರಡು ಬಟ್ಟೆ, ಏನೋ ಒಂದು ಕ್ರೀಂ, ಬಾಚಣಿಗೆ ಇತ್ಯಾದಿ) ಬ್ಯಾಗು ಈಗಲೂ ಮನೆಯ ಮೂಲೆಯಲ್ಲೊಂದು ಕಡೆ ಬಿದ್ದುಕೊಂಡಿದೆ. ಅದನ್ನು ಸ್ಥಳ-ಸಂದರ್ಭ ಕೂಡಿ ಬಂದಾಗ ಯಾರಿಗಾದರೂ ದಾನವಾಗಿ ಕೊಟ್ಟುಬಿಡಬೇಕು, ಇನ್ನೇನು ಮಾಡುವುದು?

ಭಾಗ ೨೦ - ಬ್ಯಾಂಕಿನ ಕಾರ್ಡನ್ನು ತಡೆಹಿಡಿಯುವ ಯತ್ನ

ಇದು ಒಂಥರಾ ಹಿನ್ನೋಟ, ಮೊದಲೇ ಬರೆಯುವುದಕ್ಕಿಂತ ಕೊನೆಗೆ ಬರೆದರೆ ಸಾಕು ಎಂದು ಕಂಡಿದ್ದರಿಂದ ಈಗ ಬರೆಯುತ್ತಿದ್ದೇನೆ.

ನಮ್ಮ ಡೆಬಿಟ್ ಕಾರ್ಡೊಂದನ್ನು ತಡೆಹಿಡಿಯುವುದಕ್ಕೋಸ್ಕರ .ಸಿ..ಸಿ.. ಬ್ಯಾಂಕನ್ನು ಸಂಪರ್ಕಿಸಿದಾಗ ಹೊರಬಂದ ವಿಷಯವಿದು - ಅನಗತ್ಯ ವಿವರಗಳನ್ನು ಬದಿಗಿರಿಸಿ ಒಂದು ಮುಖ್ಯವಾದ ವಿಚಾರವನ್ನು ನಾನಿಲ್ಲಿ ಹೇಳಬಯಸುತ್ತೇನೆ. ಕಾರ್ಡೇನೋ ಸುಲಭವಾಗಿ ಬ್ಲಾಕ್ ಆಯಿತು, ಆದರೆ ಅಂತಹ ಬ್ಲಾಕ್ ಆದ ಕಾರ್ಡನ್ನು ಯಾರಾದರೂ ಉಪಯೋಗಿಸಿದರೆ ಆಗ ತಕ್ಷಣ ನಮಗೋ ಪೋಲೀಸರಿಗೋ ಸೂಚನೆ ಹೋಗುವುದೇ ಎಂದು ಆತುರದಿಂದ ನಾವು ಕೇಳಿದೆವು - ಹಾಗಿರುವ ವ್ಯವಸ್ಥೆ ಇದ್ದರೆ ಆಗ ಕಳ್ಳರನ್ನು ಹಿಡಿಯುವುದು ಸುಲಭವಾಗುವುದಲ್ಲವೇ ಎಂಬುದು ನಮ್ಮ ಆಲೋಚನೆಯಾಗಿತ್ತು. ಆದರೆ ಇಂದಿನ ಗ್ರಾಹಕ ಸೇವಾ ಸಿಬ್ಬಂದಿಗಳಿಗೆ ಸಿದ್ಧ ಉತ್ತರಗಳನ್ನು ನೀಡುವುದಲ್ಲದೆ ಇನ್ನೇನೂ ಗೊತ್ತಿರುವುದೇ ಇಲ್ಲ, ಸಾಮಾನ್ಯ ಜ್ಞಾನವಂತೂ ದೂರದ ಕನಸು ಎಂಬ ಸತ್ಯ ಮತ್ತೊಮ್ಮೆ ನಮಗರಿವಾಯಿತು. ಪೆದ್ದು ಸಿಬ್ಬಂದಿಯೊಂದಿಗೆ ಒಂದಷ್ಟು ಹೊತ್ತು ತರ್ಕ ಮಾಡಲು ಯತ್ನಿಸಿ ಕೊನೆಗೆ ಬೇಸತ್ತು ಅಲ್ಲಿಗೆ ವಿಷಯವನ್ನು ಬಿಟ್ಟುಬಿಟ್ಟೆವು. ನಿಜಕ್ಕೂ ಅಂತಹ ವ್ಯವಸ್ಥೆ ಇದೆಯೇ ಇಲ್ಲವೇ? ಗೊತ್ತಿಲ್ಲಪ್ಪ, ನಿಮಗೇನಾದರೂ ತಿಳಿದಿದ್ದರೆ ಮಾಹಿತಿಯನ್ನು ಹಂಚಿಕೊಳ್ಳಿ ಎಂದು ವಿನಂತಿ.

ಚಿಂತನೆ: ಯಾರ್ಯಾರು ತಮ್ಮ ಸೇವೆಗಳನ್ನು ಹೇಗೆ ಉತ್ತಮಪಡಿಸಬಹುದು?
---------------------------------------------------------------------

ಇನ್ನು ಕೊನೆಯದಾಗಿ ಆರಕ್ಷಕರು ಹಾಗೂ .ರಾ..ಸಾ.ನಿ. ಹೇಗೆ ತಮ್ಮ ಸೇವೆಯಗಳನ್ನು ಉತ್ತಮಪಡಿಸಬಹುದು ಎಂಬುದರ ಬಗ್ಗೆ ಒಂದೆರಡು ಮಾತು.

ಆರಕ್ಷಕರು
-----------
ನೀವು ಕಥೆಯ ಪೂರ್ವಾರ್ಧವನ್ನು ಗಮನಿಸಿದರೆ ಪೋಲೀಸರು ಇದು ಕಳ್ಳತನವಲ್ಲ ಎಂಬ ಭಾವನೆಯನ್ನು ಮೂಡಿಸಿದ್ದರು. ಆದರೆ ಆಮೇಲೆ ನೋಡಿದರೆ ಇಂತಹ ಕಳ್ಳತನದ ಪ್ರಕರಣಗಳು ಬೆನ್ನು ಬೆನ್ನಿಗೇ ಕಂಡು/ಕೇಳಿಬಂದುವು. ಹಾಗಿದ್ದರೆ ಪೋಲೀಸರು ಏಕೆ ಇಂತಹ ಸುಳ್ಳು ಭರವಸೆಯನ್ನು ಕೊಡಬೇಕು? ಕಂಪ್ಯೂಟರಿನ ಸಹಾಯದಿಂದ ಸರಿಯಾದ ಅಂಕಿಅಂಶಗಳನ್ನಾಧರಿಸಿ ಸರಿಯಾದ ಚಿತ್ರಣ ಕೊಡುವುದು ಉತ್ತಮ.

ಕಂಪ್ಯೂಟರೈಸೇಶನ್ ಇಲ್ಲದಿರುವುದರ ಕೊರತೆ ಅನೇಕ ವಿಷಯಗಳಲ್ಲಿ ಎದ್ದು ಕಾಣುತ್ತಿತ್ತು. ಉದಾ: ಎಫ್..ಆರ್. ವಿವರಗಳನ್ನು, ಕೇಸಿನ ಪ್ರಗತಿಯನ್ನು ನಮಗೆ ಮನೆಯಿಂದಲೇ ನೋಡಲು ಅವಕಾಶ ಸಿಗುವುದು, ನಮಗೆ ಹೆಚ್ಚಿನ ಮಾಹಿತಿ ಇದ್ದರೆ ಅದನ್ನು ಆನ್ಲೈನ್ ಆಗಿ ತಿಳಿಯಪಡಿಸುವ ವ್ಯವಸ್ಥೆ ಇರುವುದು ಇತ್ಯಾದಿ ನಿಜಕ್ಕೂ ನಾವು ಅಪೇಕ್ಷಿಸಬಹುದಾದ ಮೂಲಭೂತ ಸುಧಾರಣೆಗಳಲ್ಲಿ ಒಂದು.

ಆದರೆ ಎಲ್ಲದಕ್ಕಿಂತ ಮುಖ್ಯವಾಗಿ, ಪಾಸ್ಪೋರ್ಟ್, ಬ್ಯಾಂಕಿನ ಕಾರ್ಡುಗಳು ಇತ್ಯಾದಿಗಳು ಕಳೆದುಹೋದಾಗ ಏನು ಮಾಡಬೇಕು ಎನ್ನುವುದರ ಬಗ್ಗೆ ಮಾಹಿತಿಯನ್ನು, ಸಾಮಾನ್ಯ ಪ್ರಶ್ನೋತ್ತರಗಳನ್ನು (FAQ) ಸಿದ್ಧಪಡಿಸಿ ಹೀಗೆ ದೂರುಕೊಡುವವರಿಗೆ ಒಂದು ಪ್ರತಿಯನ್ನು ಕೊಟ್ಟರೆ, ತಕ್ಷಣವೇ ಅವರ ಬ್ಯಾಂಕಿನ ಕಾರ್ಡುಗಳನ್ನು ತಡೆಹಿಡಿಯುವಲ್ಲಿ ಸಹಕರಿಸಿದರೆ ಅದು ಅವರು ಕೊಡಬಹುದಾದ ಅತ್ಯಂತ ಅಮೂಲ್ಯ ಸೇವೆಯಾಗುವುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ. ಬೆಂಗಳೂರು ಬಸ್ ನಿಲ್ದಾಣದ ಬಳಿ ಇರುವಂತಹ ಠಾಣೆಗಳಲ್ಲಿಯಂತೂ ಇಂತಹ ಮಾಹಿತಿ ಸುಲಭವಾಗಿ ಲಭ್ಯವಿರುವುದು ಅತ್ಯಂತ ಮುಖ್ಯ ಹಾಗೂ ಸಹಾಯಕಾರಿ.

.ರಾ..ಸಾ.ನಿ.
----------------
ಲೇಖನದ ಮೊತ್ತ ಮೊದಲ ಭಾಗದಲ್ಲಿ ನಾನು ಮಾಡಿದ ಏಳು ತಪ್ಪುಗಳ ಬಗ್ಗೆ ಬರೆದಿದ್ದೆ. ಅದರರ್ಥ ನಾನು ಬೇಜವಾಬ್ದಾರಿ ಮನುಷ್ಯನೆಂದೇ? ಕಳೆದ ಎರಡು ದಶಕಗಳಲ್ಲಿ ನಾನು ಪ್ರಯಾಣ ಮಾಡಿದ ಜಾಗಗಳು ಅನೇಕ, ಉಪಯೋಗಿಸಿದ ವಾಹನಗಳ ವಿಧಗಳು ಅನೇಕ. ನನಗೆ ಅನುಭವದ ಕೊರತೆ ಇರಲಿಲ್ಲ. ಕಳೆದ ಒಂದು ವರುಷದಲ್ಲಿ ಹಲವಾರು ಬಾರಿ ಅಹಮದಾಬಾದಿಗೆ ರೈಲಿನಲ್ಲಿ ವಾತಾನುಕೂಲಿ ವಿಭಾಗದಲ್ಲಿ ತೆರಳುವಾಗ ಕೂಡ ಮುಖ್ಯ ವಸ್ತುಗಳಿದ್ದ ಬ್ಯಾಗನ್ನು ಜಾಗ್ರತೆಯಾಗಿಡಲು ಪಡುತ್ತಿದ್ದ ಕಷ್ಟವು ಇನ್ನೂ ಕಣ್ಣಮುಂದೆಯೇ ಇದೆ; ಪ್ರಯಾಣದ ವೇಳೆ ಹೇಗೆ/ಎಲ್ಲಿ ಜಾಗ್ರತೆಯಾಗಿರಬೇಕು ಎನ್ನುವುದರ ಬಗ್ಗೆ ವಿವರವಾದ ಲೇಖನವನ್ನೇ ಬರೆಯಬಲ್ಲೆ. ಹಾಗಾದರೆ ಇಲ್ಲಿ ಆದದ್ದೇನು? - ಸುಖಪ್ರಯಾಣದ ಕನಸು, ಇತರರ ಮೇಲೆ ಹೆಚ್ಚಿದ ನಂಬಿಕೆ, ಹಾಗೂ ಇದರಿಂದ ಒಂದು ಸಲ ಮೈಮರೆತು ಆದ ಅಜಾಗರೂಕತೆ.

ನಿಮ್ಮಲ್ಲಿ ವಿಮಾನದಲ್ಲಿ ಪ್ರಯಾಣಿಸಿದವರಿಗೆ ಗೊತ್ತಿರಬಹುದು - ಅಲ್ಲಿ ನಿಮಗೆ ಬ್ಯಾಗು ಕಳವಾಗುವ ಬಗ್ಗೆ ಹೆದರಿಕೆ ಇರುತ್ತದೆಯೇ? ಸದಾ ಬಗ್ಗೆ ಚಿಂತೆ ಮಾಡಿಕೊಂಡು ಪ್ರಯಾಣಿಸುತ್ತೀರಾ? ಇಲ್ಲ, ಅಲ್ಲವೇ? ಇದೇ ರೀತಿ ವೋಲ್ವೋ ಬಸ್ಸಿನಂತಹ ಪ್ರೀಮಿಯರ್ ಬಸ್ಸಿನಲ್ಲಿ ಪ್ರಯಾಣಿಸುವಾಗ ಕೂಡ ಒಂದು ರೀತಿಯ ಸುರಕ್ಷೆಯ ಭಾವನೆ ಮನದಲ್ಲಿ ಮೂಡುತ್ತದೆ. ಕೆಲವೊಮ್ಮೆ ಇದು ವಿಮಾನದಷ್ಟು ಸುರಕ್ಷಿತವಲ್ಲ ಎಂಬ ಮಾತು ಮರೆತುಹೋಗುತ್ತದೆ. ರಸ್ತೆಬದಿಯ ಕಾಮತ್ ಉಪಚಾರದಂತಹ ಸ್ಥಳಗಳಲ್ಲಿ ಬಸ್ಸು ನಿಲ್ಲಿಸಿದಾಗ ನೋಡಿ, ತೊಂಬತ್ತು ಶೇಕಡಾ ಜನ ಆರಾಮವಾಗಿ ತಮ್ಮ ಬ್ಯಾಗನ್ನು ಬಸ್ಸಿನಲ್ಲಿಯೇ ಬಿಟ್ಟು ತೆರಳುತ್ತಾರೆ, ಇದು ಕಳ್ಳರನ್ನು ಆಕರ್ಷಿಸದೇ ಇರುತ್ತದೆಯೇ?

ನನ್ನ ಅನುಭವವಾದ ಮೇಲೆ ಕೆಲವೇ ದಿನಗಳಲ್ಲಿ ಪ್ರಕಟವಾದ ಸುದ್ದಿಯನ್ನು ನೋಡಿ (ಪುಟದ ಕೆಳಗಿನ ಭಾಗ ನೋಡಿ): http://news.suddimahithi.com/puttur/news.asp?s_dateentry=30%2F06%2F2012&econtentPage=7 ನಮ್ಮದೇ ಬಸ್ಸಿನಲ್ಲಿ ಕಳುವಾದ ಇನ್ನೊಂದು ಬ್ಯಾಗಿನ ಬಗ್ಗೆ ಬರೆದಿದ್ದನ್ನೂ ನೆನಪಿಸಿಕೊಳ್ಳಿ. ಆಗ ನಿಮಗೆ ವಿಷಯದ ಗಂಭೀರತೆಯ ಬಗ್ಗೆ ಅರಿವಾಗಬಹುದು. ಇವೆಲ್ಲದನ್ನು ಗಮನಿಸಿ .ರಾ..ಸಾ.ನಿ. ಏನು ಮಾಡಬಹುದು ಎಂಬುದರ ಬಗ್ಗೆ ಒಂದೆರಡು ಮಾತು:

- ಬಸ್ಸಿನಲ್ಲಿ ಕ್ಯಾಮರಾಗಳನ್ನು ಅಳವಡಿಸಲೇಬೇಕು. ಇದು ಅಂಥಾ ವೆಚ್ಚದ ಸಂಗತಿಯೇನೂ ಅಲ್ಲ ಇಂದಿನ ದಿನಗಳಲ್ಲಿ. ಇದರಿಂದ ಇಂತಹ ಕಳ್ಳತನಗಳನ್ನು ಹಿಡಿಯುವುದು ತುಂಬಾ ಸುಲಭವಾಗಬಹುದು.
- ಬ್ಯಾಗನ್ನು ಕಾಯ್ದುಕೊಂಡು ನಿದ್ದೆಗೆಡುವುದೊಂದೇ ದಾರಿಯೇ? ಅಥವಾ ಸುರಕ್ಷಿತವಾಗಿ checkin & checkout ಮಾಡುವ ವ್ಯವಸ್ಥೆ ಇದ್ದರೆ? .ರಾ..ಸಾ.ನಿ. ಬಗ್ಗೆ ಚಿಂತಿಸಬೇಕೆಂದು ವಿನಂತಿ.
- ಇಂತಹ ಕಳ್ಳತನಗಳನ್ನು ಗಮನಿಸಿ ಬಸ್ಸಿನ ನಿರ್ವಾಹಕರು ಪ್ರಯಾಣಿಕರನ್ನು ಎಚ್ಚರಿಸುವ ಸಂಪ್ರದಾಯವನ್ನು ಶುರುಮಾಡಿದರೆ ಉತ್ತಮ. ದೆಹಲಿ ಮೆಟ್ರೋ ನೋಡಿ - ಎರಡೆರಡು ನಿಮಿಷಕ್ಕೊಮ್ಮೆ ಕಿಸೆಗಳ್ಳರ ಬಗ್ಗೆ ಎಚ್ಚರಿಕೆ ಕೊಡುತ್ತಲೇ ಇರುತ್ತಾರೆ. .ರಾ..ಸಾ.ನಿ. ನಿರ್ವಾಹಕರು ಪ್ರಯಾಣದ ಮುಖ್ಯ ಘಟ್ಟಗಳಲ್ಲಿ ಇಂತಹ ಸೂಚನೆಗಳನ್ನು ಕೊಟ್ಟರೆ ಬಹಳ ಸಹಾಯಕಾರಿ.
- ಬ್ಯಾಗು ಕಳುವಾದಂತಹ, ಅದಲು-ಬದಲಾದಂತ ಸನ್ನಿವೇಶಗಳಲ್ಲಿ ಹೇಗೆ ವರ್ತಿಸಬೇಕು, ಗ್ರಾಹಕರಿಗೆ ಸಹಾಯ ಮಾಡಬೇಕು ಎನ್ನುವುದರ ಬಗ್ಗೆ ನಮ್ಮ .ರಾ..ಸಾ.ನಿ. ದುರದೃಷ್ಟವಶಾತ್ ಹೆಚ್ಚಾಗಿ ಚಿಂತೆ ಮಾಡಿದಂತಿಲ್ಲ. ಉದಾ: ನಿರ್ವಾಹಕರು ನಮ್ಮದಲ್ಲದ ಬ್ಯಾಗನ್ನು ಒಯ್ಯಲು ಬಿಟ್ಟಿದ್ದು ಸರ್ವಥಾ ತಪ್ಪು. ಮಾತ್ರವಲ್ಲ, ಎಲ್ಲಿ ದೂರು ಕೊಡಬೇಕು, ತಕ್ಷಣ ಕೈಗೊಳ್ಳಬೇಕಾದ ಕ್ರಮಗಳೇನು ಎನ್ನುವುದರ ಬಗ್ಗೆ ಯಾವುದೇ ರೀತಿಯಲ್ಲಿ ಸರಿಯಾದ ಮಾಹಿತಿ ಕೊಡಲಿಲ್ಲ. ಆಬಳಿಕ ಮರುದಿನ ಕಛೇರಿಗೆ ಬಂದಾಗ ಕೂಡ ಅಧಿಕಾರಿಗಳು ಅಧಿಕೃತ ರೀತಿಯಲ್ಲಿ ಸಹಾಯ ಮಾಡುವುದಕ್ಕಿಂತ ಹೆಚ್ಚಾಗಿ ಅನಧಿಕೃತವಾಗಿ ಮಾಹಿತಿ ಕೊಟ್ಟು ಸಹಾಯ ಮಾಡಿದರು.

ಎಲ್ಲಾ ನಿಟ್ಟಿನಲ್ಲಿ .ರಾ..ಸಾ.ನಿ. ಅನೇಕ ಕ್ರಮಗಳನ್ನು ಕೈಗೊಳ್ಳಬಹುದು. ವೋಲ್ವೋ ಬಸ್ಸಿನಂತಹ ಪ್ರೀಮಿಯರ್ ವಾಹನವನ್ನು ಹಾಕಿದರೆ ಸಾಲದು, ಪ್ರಯಾಣವು ಸುರಕ್ಷಿತವಾಗಿರುವಂತೆ ಮಾಡಲು ಇನ್ನೂ ಒಂದಷ್ಟು ಹೆಜ್ಜೆಗಳನ್ನಿರಿಸುವುದು ಅನಿವಾರ್ಯ ಎಂಬುದು .ರಾ..ಸಾ.ನಿ. ಗಮನಕ್ಕೆ ಬರಲಿ ಎಂದು ನಾನು ಆಶಿಸುತ್ತೇನೆ.

ಇಲ್ಲಿಗೆ ಅನುಭವ ಕಥನವನ್ನು ಮುಗಿಸುತ್ತೇನೆ. ಓದಿ, ಇಷ್ಟಪಟ್ಟು, ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು. ಕೆಲವು ಕಡೆ ಸಿನಿಮೀಯ ತಿರುವುಗಳು ಇವೆಯೇನೋ ಎಂಬ ಭ್ರಮೆ ಮೂಡಿಸಿ ಕೊನೆಗೆ ಸಾಧಾರಣವಾದ ವಾಸ್ತವಿಕತೆಯನ್ನು ಮುಂದಿಟ್ಟು ನಿರಾಶೆಗೊಳಿಸಿದ್ದಕ್ಕೆ ಕ್ಷಮೆ ಇರಲಿ :-)

ಇತಿ,
ಕೃಷ್ಣ ಶಾಸ್ತ್ರಿ.

3 comments:

REALESTATE said...

helpful message to soceity

Samasamprathi said...

ನಾನು ಸ್ವಲ್ಪ ತಡವಾಗಿ ಈ ಬ್ಲಾಗ್ ನೋಡಿದ್ದು..... "ವೋಲ್ವೊ ಬಸ್ಸಿನಲ್ಲಿ....." ಚೆನ್ನಾಗಿದೆ...... ನಾಕು ಸಾಲು ಓದಲು ಹೊರಟು ಎಲ್ಲಾ ಮುಗಿದ ಮೇಲೇ ಗೊತ್ತಾದದ್ದು..... ...... ಈ ನಿಗೂಢತೆಯನ್ನು ಪೂರ್ತಿ ಬಿಟ್ಟು ಕೊಡದ ಘಟನೆಗಳೂ,... ಕತೆಗಳೂ... ನಮ್ಮ ತಲೆಯೊಳಗೂ ಒಂದು ಹುಳವನ್ನು ಬಿಟ್ಟು...ನಮಗೂ ಒಂದು ಪತ್ತೇದಾರನ ಅಂಗಿ ತೊಡಿಸುವುದು...ಇದ್ದದ್ದೇ...ಅಲ್ವೇ...!! ಪೋಲೀಸರು...ಜಾರ್ಜ್...ಎಲ್ಲಾ ...ನಿಗೂಢವೇ....ನಿಮ್ಮ ಪಾಸ್ ಪೋರ್ಟ್...ಡ್ರೈವಿಂಗ್ ಲೈಸೆನ್ಸ್ ...ಎಲ್ಲಾ ನಿಮ್ಮ ವಿಳಾಸ ಬಳಸಿ ಡೂಪ್ಲಿಕೇಟ್ ಆಗಿರ್ಲಿಕ್ಕಿಲ್ಲವಲ್ಲ....!! (ಹೇಗೆ ತಿಳಿಯಬಹುದು ಎಂದು ನನಗೆ ಗೊತ್ತಿಲ್ಲ...)

Ranjan said...

Polisara system online aadare neevu matte station ge hoguvira? Daskshine koduvira?? KSRTC yalli neevu heluvantha system hora deshagalalliyu illa.. but they are very innovative, if you suggest to then, may be in the next generation buses will have some technology to prevent theft.

Post a Comment