About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Sunday, July 1, 2012

ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು - ೨


ಹಾಸನದಿಂದ ಬೆಂಗಳೂರಿಗೆ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನಾವು ಬ್ಯಾಗೊಂದನ್ನು ಕಳೆದುಕೊಂಡದ್ದರ ಬಗ್ಗೆ ಮೊದಲ ಭಾಗವನ್ನು ಈ ಮೊದಲು ಬರೆದಿದ್ದೆ.


ಮುಂದಿನ ಕೆಲವು ಭಾಗಗಳು ಇಲ್ಲಿವೆ, ತುಸು ದೀರ್ಘವಾಗಿದ್ದರೂ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುತ್ತದೆ ಎಂದು ನಂಬಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತವಿದೆ.

ಭಾಗ ೨ - ಬಸ್ಸಿನಿಂದಿಳಿದ ಮೇಲೆ, ಮೊದಲ ಹೆಜ್ಜೆ

"ನಿಮ್ಮ ಬ್ಯಾಗಿನಲ್ಲಿ ನಿಮ್ಮ ವಿಳಾಸ, ಮೊಬೈಲ್ ನಂಬರ್ ಏನಾದರೂ ಇದೆಯೇ? ಬ್ಯಾಗ್ ಸಿಕ್ಕಿದವರಿಗೆ ನಿಮ್ಮನ್ನು ಸುಲಭವಾಗಿ ಸಂಪರ್ಕಿಸಬಹುದು ತಾನೇ?" ಎಂದು ಬಸ್ಸಿನ ನಿರ್ವಾಹಕರು ಹೇಳಿದ ಮಾತು ತಲೆಯಲ್ಲಿ ರಿಂಗಣಿಸತೊಡಗಿತು. ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವಾಗ ನಮ್ಮ ಬ್ಯಾಗುಗಳ ಬಗ್ಗೆ ತುಸು ಜಾಗ್ರತೆಯಲ್ಲಿ ಇರುತ್ತಿದ್ದೆವು. ನಮ್ಮ ಬ್ಯಾಗುಗಳ ಮೇಲೆ ಸಂಪೂರ್ಣ ಸಂಪರ್ಕ ಮಾಹಿತಿ (ವಿಳಾಸ ಹಾಗೂ ದೂರವಾಣಿ/ಚರವಾಣಿ ಸಂಖ್ಯೆ) ಇರುವಂತೆ ಚೀಟಿ ಅಂಟಿಸುವುದು, ಅದು ಕಿತ್ತುಹೋಗುವ ಭಯವಿದ್ದರೆ ಕಡೇಪಕ್ಷ ಬ್ಯಾಗಿನ ಒಳಗೆ ಸುಲಭವಾಗಿ ಸಿಗುವ ಜಾಗದಲ್ಲಿ ಅದನ್ನಿರಿಸುವುದು ಇತ್ಯಾದಿ ಕ್ರಮಗಳನ್ನು ಪಾಲಿಸುತ್ತಿದ್ದೆವು - ಬ್ಯಾಗುಗಳು ಕಳೆದುಹೋದರೆ ಇವು ಸಹಾಯಕಾರಿಯಾಗಿರಲಿ ಎಂದು. ಆದರೆ ಯಾಕೋ ಈ ಒಳ್ಳೆಯ ಕ್ರಮಗಳನ್ನು ನಾವು ರೈಲು ಹಾಗೂ ಬಸ್ಸು ಪ್ರಯಾಣಗಳಲ್ಲಿ ಪ್ರತಿಸಲವೂ ಅಳವಡಿಸಿಕೊಳ್ಳುವ ಅಭ್ಯಾಸವನ್ನು ಇನ್ನೂ ಬೆಳೆಸಿಕೊಳ್ಳಲಿಲ್ಲ. ಸಣ್ಣ ಪುಟ್ಟ ಪ್ರಯಾಣದಲ್ಲಿ ಇಂತಹ ಅನೇಕ ವಿಷಯಗಳನ್ನು ಚಾಚೂತಪ್ಪದೆ ಪಾಲಿಸುವುದು ‘ಅತಿಎಂಬ ಭಾವನೆಯೇನೋ. ಒಟ್ಟಿನಲ್ಲಿ ಈ ಸಲವಂತೂ ನಮ್ಮ ಬ್ಯಾಗಿನಲ್ಲಿ ನಮ್ಮ ಸಂಪರ್ಕ ಮಾಹಿತಿಯನ್ನು ಪ್ರತ್ಯೇಕವಾಗಿ, ಸುಲಭವಾಗಿ ಸಿಗುವಂತೆ ನಾವು ಇರಿಸಿರಲಿಲ್ಲ - ಇದು ನಮಗೆ ಸ್ವಲ್ಪ ಕಳವಳಕ್ಕೀಡುಮಾಡಿತು. ಆಮೇಲೆ ಆ ಇನ್ನೊಂದು ಬ್ಯಾಗ್ ಇತ್ತಲ್ಲಾ - ಅದರಲ್ಲಿ ಆ ವ್ಯಕ್ತಿಯ ಸಂಪರ್ಕ ಮಾಹಿತಿಗಳೇನಾದರೂ ಇರಬಹುದೇ ಎಂದು ಒಮ್ಮೆ ಮೇಲಿಂದ ಮೇಲೆ ಪರೀಕ್ಷಿಸಿದೆವು - ಒಂದಷ್ಟು ನಿತ್ಯ ಉಪಯೋಗದ ವಸ್ತುಗಳು, ಬಟ್ಟೆಬರೆ, ಮಕಳ ಆಟಿಕೆ, ಒಂದು ಡಿಜಿಟಲ್ ಕ್ಯಾಮರಾ ಇತ್ಯಾದಿ ಕಾಣಸಿಕ್ಕಿದುವು, ಒಬ್ಬರ ವಾಹನ ಚಲಾವಣಾ ಪರವಾನಿಗೆ (ಡ್ರೈವಿಂಗ್ ಲೈಸೆನ್ಸ್)ನ ಪ್ರತಿಗಳೂ ಸಿಕ್ಕಿದುವು. ಇವನ್ನೆಲ್ಲಾ ನೋಡಿ ಸ್ವಲ್ಪ ಸಮಾಧಾನವಾಯ್ತು, ಬ್ಯಾಗ್ ಅದಲು-ಬದಲಾದದ್ದೇ ಇರಬಹುದೆಂಬ ವಿಶ್ವಾಸ ಮೂಡಿತು. ಇನ್ನು ನಮ್ಮ ಬ್ಯಾಗಿನಲ್ಲಿ ನನ್ನ ಪಾಸ್‍ಪೋರ್ಟ್ ಇತ್ತು, ಅದರಲ್ಲಿ ನನ್ನ ಕಾಸರಗೋಡಿನ ಮನೆಯ ವಿಳಾಸ ಸ್ಫುಟವಾಗಿ ಇತ್ತು (ಆದರೆ ಅದರಲ್ಲಿ ಫೋನ್ ನಂಬರ್ ಇರಲಿಲ್ಲ) ಮಾತ್ರವಲ್ಲ, ನನ್ನ ಪತ್ನಿಯ ಕೆಲವು ಬ್ಯಾಂಕಿನ ಕಾರ್ಡುಗಳಿದ್ದುವು, ಅವರು ಬ್ಯಾಂಕನ್ನು ಸಂಪರ್ಕಿಸಿದರೆ ಅಥವಾ ಕ.ರಾ.ರ.ಸಾ.ನಿ.ಗೆ/ಪೋಲೀಸರಿಗೆ ಬ್ಯಾಗನ್ನು ಒಪ್ಪಿಸಿದರೆ ನಿಧಾನಕ್ಕೆಯಾದರೂ ಬ್ಯಾಗ್ ನಮ್ಮ ಕೈಗೆ ಸಿಗಬಹುದೆಂಬ ವಿಶ್ವಾಸ ನಮಗಿತ್ತು.

ಆದರೆ ಬ್ಯಾಗ್ ಅದಲು-ಬದಲು ಆದದ್ದು ಎಂಬುದು ಕೇವಲ ಒಂದು ರೀತಿಯ ಆಲೋಚನೆ; ಇದು ನಿಜವಿರಲೇಬೇಕೆಂದಿರಲಿಲ್ಲ, ಬ್ಯಾಗನ್ನು ಉದ್ದೇಶಪೂರ್ವಕವಾಗಿಯೇ ಕದ್ದ ಸಾಧ್ಯತೆಗಳೂ ಇದ್ದುವು. ಎರಡೂ ಬ್ಯಾಗುಗಳ ತೂಕದಲ್ಲಿದ ವ್ಯತ್ಯಾಸವೂ ಹೀಗೆ ಆಲೋಚನೆ ಮಾಡಲು ನಮ್ಮನ್ನು ಪ್ರೇರೇಪಿಸಿತು - ನಮ್ಮ ಬ್ಯಾಗಿನಲ್ಲಿ ಅಮ್ಮ ಕೊಟ್ಟ ತಿಂಡಿ ಇತ್ಯಾದಿ ಇದ್ದುದರಿಂದ ಸಾಕಷ್ಟು ಭಾರವಾಗಿಯೇ ಇತ್ತು - ಹೀಗಾಗಿ ತಪ್ಪಿ ತೆಗೆದುಕೊಂಡವರಿಗೆ ಅದು ತಮ್ಮ ಬ್ಯಾಗ್ ಅಲ್ಲ ಎಂದು ಸುಲಭವಾಗಿ ಗೊತ್ತಾಗಬೇಕಿತ್ತಲ್ಲಾ ಎಂಬುದು ನನ್ನ ಆಲೋಚನೆಯಾಗಿತ್ತು. ಮಾತ್ರವಲ್ಲ, ನಮ್ಮ ಸನಿಹದ ಸೀಟುಗಳ ಹಿಂದಿನ ಸೀಟಿನಲ್ಲಿ ಕುಳಿತ ಇಬ್ಬರ ವರ್ತನೆ ತುಸು ಸಂಶಯಾಸ್ಪದವಾಗಿತ್ತು ಎಂಬುದು ಕೂಡ ನಮಗೆ ತುಸು ತಡವಾಗಿ ಹೊಳೆಯಿತು.

ಏನೇ ಇರಲಿ, ಮುಂಜಾಗರೂಕತೆಯ ದೃಷ್ಟಿಯಿಂದ ಆದಷ್ಟೂ ಬೇಗನೆ ಬ್ಯಾಂಕಿನ್ ಕಾರ್ಡುಗಳನ್ನು ತಡೆಹಿಡಿಸುವುದು (ಬ್ಲಾಕ್ ಮಾಡುವುದು) ಅತ್ಯಂತ ಮುಖ್ಯವಾಗಿತ್ತು. ಪಾಸ್‍ಪೋರ್ಟಿನ ವಿಷಯದಲ್ಲಿ ಪೋಲೀಸರ ಬಳಿ ಹೋಗಿ ಎಮ್.ಐ.ಆರ್ ಮಾಡಬೇಕಾಗುತ್ತದೆ ಎಂಬ ವಿಷಯವೇನೋ ತಿಳಿದಿತ್ತು, ಆದರೆ ಅದಕ್ಕಿಂತ ಹೆಚ್ಚಿನ ವಿವರಗಳು ತಿಳಿದಿರಲಿಲ್ಲ, ಪಾಸ್‍ಪೋರ್ಟನ್ನು ಕಳ್ಳರು ಯಾವ ಯಾವ ರೀತಿಯಲ್ಲಿ ದುರುಪಯೋಗ ಮಾಡಲು ಸಾಧ್ಯ ಎಂಬುದರ ಬಗ್ಗೆಯೂ ನಮಗೆ ಹೆಚ್ಚಿನ ವಿವರಗಳು ಗೊತ್ತಿರಲಿಲ್ಲ. ಏನಕ್ಕೂ ಆದಷ್ಟೂ ಬೇಗನೆ ಮನೆಗೆ ಹೋಗಿ ವಿವಿಧ ಬ್ಯಾಂಕುಗಳನ್ನು ಸಂಪರ್ಕಿಸಿ ಕಾರ್ಡುಗಳನ್ನು ತಡೆಹಿಡಿಯುವ ಕೆಲಸ ಮಾಡೋಣ, ಆಮೇಲೆ ಉಳಿದ ವಿಷಯಗಳ ಬಗ್ಗೆ, ಮುಂದಿನ ಹೆಜ್ಜೆಗಳ ಬಗ್ಗೆ ಆಲೋಚನೆ ಮಾಡೋಣ ಎಂದು ನಿರ್ಧರಿಸಿ ಮೆಜೆಸ್ಟಿಕ್‍ನಿಂದ ಮನೆಯತ್ತ ತೆರಳುವ ವೋಲ್ವೋ ಬಸ್ ಒಂದನ್ನು ಹತ್ತಿದೆವು, ಟಿಕೆಟ್ ತೆಗೆದುಕೊಂಡು ಕುಳಿತೆವು.

ಬಸ್ಸಿನೊಳಗೆ ಸುಮ್ಮನೆ ಕುಳಿತಿರಲಾರದೆ ಮತ್ತೊಂದು ಬ್ಯಾಗಿನ ಪುನರ್ ಪರಿಶೀಲನೆ ನಡೆಸಲಾರಂಭಿಸಿದೆ, ನಮ್ಮ ಬ್ಯಾಗ್ ಕೊಂಡೊಯ್ದ ವ್ಯಕ್ತಿಯ ಏನಾದರೂ ವಿವರಗಳು ದೊರಕಬಹುದೇ ಎಂದು ತಿಳಿಯಲು. ವಾಹನ ಚಲಾವಣಾ ಪರವಾನಿಗೆಯ ಪ್ರತಿ ಬಿಟ್ಟರೆ ಇನ್ನೇನೂ ಅಂತಹ ಉಪಯುಕ್ತ ಮಾಹಿತಿ ಸಿಗಲಿಲ್ಲ. ಅಷ್ಟರಲ್ಲಿ ನನ್ನ ಒಬ್ಬ ಮಿತ್ರನ ಕರೆ ಬಂತು, ಮಾತನಾಡುವ ಮನಸ್ಸಿಲ್ಲದಿದ್ದರೂ ಆಪ್ತ ಮಿತ್ರನಾಗಿದ್ದರಿಂದ ಕರೆಯನ್ನು ಸ್ವೀಕರಿಸಿದೆ. ನಾವಿರುವ ಸ್ಥಿತಿಯನ್ನು ಸಂಕ್ಷಿಪ್ತವಾಗಿ ವಿವರಿಸಿದೆ. ಆಗ ಅವನು ‘ತಕ್ಷಣ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿಯೇ ಇರುವ ಆರಕ್ಷಕರ ಬಳಿ ಹೋಗಿ ಎಫ್.ಐ.ಆರ್. ಮಾಡಿಸಿಬಿಡು, ನಾಳೆಯವರೆಗೆ ಕಾಯುವುದು ಒಳ್ಳೆಯದಲ್ಲ" ಎಂದು ಸಲಹೆ ಕೊಟ್ಟ. ನನ್ನ ಮಿತ್ರ ಒಬ್ಬ ವಕೀಲ ಬೇರೆ, ಅವನು ಹಾಗೆ ಹೇಳುವಾಗ ಕೇಳದಿರಲು ಸಾಧ್ಯವಿರಲಿಲ್ಲ. ಆಗಿನ್ನೂ ನಾವು ಬಸ್ಸು ಮೆಜೆಸ್ಟಿಕ್‍ನಿಂದ ಹೊರಟು ಒಂದೆರಡು ನಿಮಿಷ ಆಗಿತ್ತಷ್ಟೆ, ತಕ್ಷಣ ಇಳಿಯುವ ನಿರ್ಧಾರ ಮಾಡಿದೆವು. ಕಳೆದು ಹೋದದ್ದರಲ್ಲಿ ಸ್ಮಿತಾಳ ವಸ್ತುಗಳು ಕೂಡ ಇದ್ದುದರಿಂದ ಅವಳನ್ನು ಮನೆಗೆ ಹೋಗೆಂದು ಹೇಳಲು ಸಾಧ್ಯವಿರಲಿಲ್ಲ. ತಕ್ಷಣ ಸೀಟಿನಿಂದೆದ್ದು ಸಂಕ್ಷಿಪ್ತವಾಗಿ ನಿರ್ವಾಹಕರ ಬಳಿ ವಿಷಯ ಹೇಳಿ ಬಸ್ಸು ನಿಲ್ಲಿಸುವಂತೆ ಕೋರಿಕೊಂಡೆವು, ಅಲ್ಲೇ ಮುಂದಕ್ಕೆ ಇದ್ದ ಬಸ್ಸು ನಿಲುಗಡೆಯ ತಾಣದಲ್ಲಿ ನಮ್ಮನ್ನಿಳಿಸಿದರು. ಇಳಿಯುವಾಗ ನಮಗೆ ಒಂದು ಸಲಹೆಯನ್ನೂ ಕೊಟ್ಟರು ‘ನೀವು ಸೀದಾ ಡಿಪೋಕ್ಕೆ ಹೋಗಿ, ಆ ಬಸ್ಸಿನಲ್ಲಿ ಸೀಟು ಕಾದಿರಿಸಿದ ಉಳಿದವರ ಸಂಪರ್ಕ ಮಾಹಿತಿ ತಿಳಿದುಕೊಂಡು ಅವರಿಗೆ ಕರೆ ಮಾಡಿ ಬ್ಯಾಗ್ ಯಾರ ಜೊತೆಗಾದರೂ ಅದಲು-ಬದಲು ಆಗಿದೆಯೇ ಎಂದು ವಿಚಾರಿಸಿಎಂದು. ಅವರ ಸಲಹೆಗೆ ಧನ್ಯವಾದಗಳನ್ನರ್ಪಿಸಿ ನಾವು ಬಸ್ಸಿಳಿದೆವು.

ಭಾಗ ೩ - ಮೆಜೆಸ್ಟಿಕ್‍ನ ಆರಕ್ಷಕಾ ಠಾಣೆಯಲ್ಲಿ

ಆಗಲೇ ರಾತ್ರಿ ಸುಮಾರು ಒಂಬತ್ತು ಘಂಟೆ ಆಗಿತ್ತು, ನಾವು ಬಸ್ಸಿಳಿದ ಜಾಗದಿಂದ ಸುಲಭದಲ್ಲಿ ನಮಗೆ ಮೆಜೆಸ್ಟಿಕ್ ಕಡೆಗೆ ವಾಪಸ್ ತೆರಳಲು ಬಸ್ಸು/ಆಟೋ ಏನೂ ಸಿಗಲಿಲ್ಲ, ಒಂದಷ್ಟು ಹೊತ್ತು ಒದ್ದಾಡಿ ಕೊನೆಗೂ ಒಂದು ಆಟೋ ಸಿಕ್ಕಿತು. ನಾವು ಆರಕ್ಷಕ ಠಾಣೆಗೆ ತಲುಪಿದಾಗ ಸುಮಾರು ಒಂಬತ್ತೂವರೆ ಘಂಟೆಯಾಗಿತ್ತು. ರಾತ್ರಿ ಒಂಬತ್ತು ಘಂಟೆಯ ಮೇಲೆ ಅಲ್ಲಿ ಹೆಚ್ಚಿನ ಪೋಲೀಸರು ಇರಲಾರರೆಂದೂ  ದೂರು ಸ್ವೀಕರಿಸಲು ಹಿಂದೇಟು ಹಾಕಬಹುದೆಂದೂ ನನ್ನ ಮಿತ್ರ ಹೇಳಿದ್ದರಿಂದ ನಾನು ತುಸು ಹಿಂಜರಿಕೆಯಿಂದಲೇ ಇದ್ದೆ. ಇನ್ನೂ ತಡ ಮಾಡುವುದು ಬೇಡ ಎಂದು ಒಳನಡೆದೆವು, ಡಿಪೋಕ್ಕೆ ಆಮೇಲೆ ಹೋಗೋಣ ಎಂದಂದುಕೊಂಡೆವು. ಅಲ್ಲಿದ್ದ ಪೋಲೀಸರು ನಮ್ಮ ಕಥೆಯನ್ನು ತಾಳ್ಮೆಯಿಂದಲೇ ಕೇಳಿಕೊಂಡರು. ಕೊನೆಗೆ ಬ್ಯಾಗಿನೊಳ ಏನಿದೆ ನೋಡೋಣ ಎಂದು ತೆರೆದರು. ಅಲ್ಲಿಯವರೆಗೆ ನಾವು ಬ್ಯಾಗನ್ನು ಮೇಲಿಂದ ಮೇಲೆ ನೋಡಿದ್ದೆವಷ್ಟೆ. ಈಗ ಕೂಲಂಕಷವಾಗಿ ಪರಿಶೀಲಿಸುವಾಗ ಅದರಲ್ಲಿದ್ದ ವಸ್ತುಗಳನ್ನು ನೋಡಿ ತುಸು ವಿಚಿತ್ರವೆನಿಸಿತು:

- ಆ ಬ್ಯಾಗಿನ ಮುಂಭಾಗದ ವಿಭಾಗದಲ್ಲಿ ಬಾಚಣಿಕೆ, ಏನೋ ಕ್ರೀಂ, ಒಂದಷ್ಟು ಮಾತ್ರೆಗಳು, ಮೊಬೈಲ್ ಚಾರ್ಜರ್ ಇತ್ಯಾದಿ ವೈಯಕ್ತಿಕ ಉಪಯೋಗಗಳ ವಸ್ತುಗಳೂ ಇದ್ದುವು, ಆದರೆ ಜೊತೆಗೆ ಸ್ಕ್ರೂ ಡ್ರೈವರ್, ಸಣ್ಣ ಚಾಕು, ಸಣ್ಣದೊಂದು ಹ್ಯಾಕ್ ಸಾ ಬ್ಲೇಡ್ - ಈ ವಸ್ತುಗಳೂ ಇದ್ದುವು. ಒಂದು ಸಣ್ಣ ಕಾಗದದ ಚೀಲದಲ್ಲಿ ಒಂದು ಚಿನ್ನದ ಬಣ್ಣದ ಕೈಗೆ ಕಟ್ಟುವಂತಹ ಆಭರಣವೂ ಇತ್ತು, ನಿಜವಾದದ್ದೋ ಅಲ್ಲವೋ ತಕ್ಷಣ ಗೊತ್ತಾಗಲಿಲ್ಲ.
- ಇನ್ನೊಂದು ವಿಭಾಗದಲ್ಲಿ ವ್ಯಾಯಾಮ ಶಾಲೆಯಲ್ಲಿ ಹಾಕುವ ಒಂದು ಜೊತೆ ಬಟ್ಟೆ, ಟಿಶ್ಯೂ ಪೇಪರ್ ಇದ್ದುವು.
- ಮತ್ತೊಂದು ವಿಭಾಗದಲ್ಲಿ ಒಂದು ಡಿಜಿಟಲ್ ಕ್ಯಾಮರಾ, ಜೊತೆಗೆ ಒಂದು ಮೊಬೈಲ್ ಬ್ಯಾಟರಿ ಇದ್ದುವು. ಡಿಜಿಟಲ್ ಕ್ಯಾಮರಾದಲ್ಲಿ ಕಾರ್ಡ್ ಅಥವಾ ಬ್ಯಾಟರಿ ಇರಲಿಲ್ಲ, ಅದು ಕೆಲಸ ಮಾಡುತ್ತದೆಯೇ ಎಂದೂ ತಿಳಿಯುವಂತಿರಲಿಲ್ಲ. ಈ ವಿಭಾಗದಲ್ಲೇ ಇದ್ದದ್ದು ಒಬ್ಬ ವ್ಯಕ್ತಿಯ ಕೇರಳ ಡ್ರೈವಿಂಗ್ ಲೈಸೆನ್ಸ್‍ನ ಮೂರು ಪ್ರತಿಗಳು.
- ಬ್ಯಾಗಿನಲ್ಲಿ ಒಂದಷ್ಟು ಸಿ.ಡಿ.ಗಳೂ ಇದ್ದುವು - ಎರಡು ಹಾಡುಗಳ ಸಿ.ಡಿ.ಗಳು, ಇನ್ನೊಂದೆರಡು ಏನೋ ಗೊತ್ತಾಗಲಿಲ್ಲ. ಇನ್ನು ಒಂದು ಸಣ್ಣ ಗೊಂಬೆ (ಸಾಫ್ಟ್ ಟಾಯ್) ಹಾಗೂ ಇನ್ನೊಂದು ಸಣ್ಣ ಮಕ್ಕಳು ಆಡುವ ಕಾರು ಕೂಡ ಇತ್ತು.

ಆಭರಣದ ಭಾರ ನೋಡಿ ಒಬ್ಬರು ಅದು ಚಿನ್ನದ್ದೇ ಇರಬಹುದು ಎಂದು ಹೇಳಿದರು, ಹಾಗಾದರೆ ಬ್ಯಾಗ್ ಅದಲು-ಬದಲಾದದ್ದೇ ನಿಜವಿರಬಹುದೇನೋ ಎಂಬ ಭರವಸೆ ನಮಗೆ ಪುನಃ ಮೂಡಿತು. ಆದರೆ ಕೊನೆಗೊಬ್ಬರು ಹಿರಿಯ ಅಧಿಕಾರಿ ಅದು ಚಿನ್ನದ್ದಲ್ಲ ಎಂದು ತಿಳಿಸಿ ಹೇಳಿದರು. ಸರಿ, ಆ ಬ್ಯಾಗನ್ನು ಮಾಡುವುದೇನು? ಪೋಲೀಸರು ಕೇಳಿದರು ‘ಅದನ್ನು ನೀವು ತೆಗೆದುಕೊಂಡು ಹೋಗುತ್ತೀರಾ ಅಥವಾ ಇಲ್ಲಿ ಕೊಟ್ಟು ಹೋಗುತ್ತೀರಾ?’ ಎಂದು. ನಮಗೆ ಮತ್ತೊಮ್ಮೆ ಆಶ್ಚರ್ಯವಾಯಿತು - ನಮ್ಮದಲ್ಲದ ಬ್ಯಾಗನ್ನು ತೆಗೆದುಕೊಂಡು ಹೋಗಲು ಇವರೂ ಬಿಡುತ್ತಾರಲ್ಲಾ ಎಂದು. ‘ನಮಗೇಕೆ ಈ ಬ್ಯಾಗ್? ಇಲ್ಲಿಯೇ ಬಿಟ್ಟು ಹೋಗುತ್ತೇವೆಎಂದು ಹೇಳಿದೆವು. ಆದರೆ ವಾಪಸ್ ಇಡುವಾಗ ಅದರಲ್ಲಿದ್ದ ಡ್ರೈವಿಂಗ್ ಲೈಸೆನ್ಸ್‍ನ ಮೂರು ಪ್ರತಿಗಳಲ್ಲಿ ಒಂದನ್ನು ನನ್ನ ಬಳಿಯೇ ಇರಿಸಿಕೊಂಡೆ, ಏನಕ್ಕೂ ಇರಲಿ ಎಂದಂದುಕೊಂಡು. ಇನ್ನು ಎಫ್.ಐ.ಆರ್. ಬಗ್ಗೆ ವಿಚಾರಿಸಿದಾಗ ಅಲ್ಲಿದ್ದ ಪೋಲೀಸರು ‘ನೀವು ಇಲ್ಲಿ ನಿಮ್ಮ ಸಂಪರ್ಕ ಮಾಹಿತಿಯನ್ನು ವಿವರವಾಗಿ ಬರೆಯಿರಿ, ಆಮೇಲೆ ಉಪ್ಪಾರ್‌ಪೇಟ್ ಆರಕ್ಷಕಾ ಠಾಣೆಗೆ ಹೋಗಿ ಎಫ್.ಐ.ಆರ್. ಬರೆಸೋಣ ಬನ್ನಿಎಂದು ಹೇಳಿದರು. ಬೆಂಗಳೂರಿನ ಒಳಗೆ ಸಂಚರಿಸುವ ವೋಲ್ವೋ ಬಸ್ಸಿನ ನಿರ್ವಾಹಕರು ನಮಗೆ ಹೇಳಿಕೊಟ್ಟ ಐಡಿಯವನ್ನು ನಾವು ಇಲ್ಲಿ ಪೋಲೀಸರ ತಲೆಗೆ ತುಂಬಲು ಯತ್ನಿಸಿದೆವು - ಅದೇ ಬಸ್ಸಿನಲ್ಲಿ ಸೀಟು ಕಾದಿರಿಸಿದವರ ಸಂಪರ್ಕ ಮಾಹಿತಿ ಪಡೆದು ಅವರೆಲ್ಲರಿಗೂ ಕರೆ ಮಾಡಿ ನೋಡಿ, ಅದಲು-ಬದಲಾಗಿದ್ದರೆ ಆದಷ್ಟೂ ಬೇಗನೇ ಸುಲಭದಲ್ಲಿ ವಿಷಯವನ್ನು ಬಗೆಹರಿಸಿಕೊಳ್ಳಬಹುದಲ್ಲವೇ ಎಂದು. ಆಗ ಎಲ್ಲರ ಸಮಯ-ಶ್ರಮ ಉಳಿಯುವುದಲ್ಲಾ ಎಂಬುದು ನಮ್ಮ ಲೆಕ್ಕಾಚಾರವಾಗಿತ್ತು. ಆದರೆ ಪೋಲೀಸರು ‘ಅದೆಲ್ಲಾ ಮಾಡೋಣ, ನೀವು ಎಫ್.ಐ.ಆರ್. ದಾಖಲಿಸಿಎಂದು ನಮ್ಮನ್ನಲ್ಲಿಂದ ಹೊರಡಿಸಿದರು. ಸರಿ ಎಂದಂದು ಅಲ್ಲಿನ ಕೆಲಸವನ್ನು ಮುಗಿಸಿ ಹೊರಬಂದೆವು.

ಭಾಗ ೪ - ಉಪ್ಪಾರ್‌ಪೇಟ್ ಆರಕ್ಷಕಾ ಠಾಣೆಯಲ್ಲಿ

ಒಬ್ಬ ಪೋಲೀಸು ನಮ್ಮನ್ನು ಆಟೋಕ್ಕೆ ಹತ್ತಿಸಿ ಚಾಲಕನಿಗೆ ಸೂಚನೆ ಕೊಟ್ಟು ಬೈಕನ್ನೇರಿ ಮುನ್ನಡೆದನು, ತುಸು ಹೊತ್ತಿನಲ್ಲಿಯೇ ನಾವು ಉಪ್ಪಾರ್‌ಪೇಟ್ ಠಾಣೆಯ ಬಳಿ ಇದ್ದೆವು. ಇಲ್ಲಿ ಅದೆಷ್ಟು ಜನ ದೂರು ಕೊಡಲು ಕಾಯುತ್ತಿದ್ದಾರೋ, ರಾತ್ರಿಯ ಪಾಳಿಯಲ್ಲಿ ಕೆಲಸ ಮಾಡುವ ಕೋಪದಿಂದಲೋ ಅಥವಾ ಜನರ ಒತ್ತಡದಿಂದಲೋ ಅಥವಾ ಅಧಿಕಾರದ ಸೊಕ್ಕಿನಿಂದಲೋ ಪೋಲೀಸರು ನಮ್ಮೊಡನೆ ಹೇಗೆ ವರ್ತಿಸಬಹುದು ಎಂಬ ಚಿಂತೆ ಮನದಲ್ಲಿ ಮೂಡತೊಡಗಿತು. ಆದರೆ ಎಫ್.ಐ.ಆರ್. ದಾಖಲಿಸದೆ ಬೇರೆ ದಾರಿ ಕಾಣಲಿಲ್ಲ, ಹೀಗಾಗಿ ಕುರಿಗಳಂತೆ ಒಳನಡೆದೆವು.

ಆದರೆ ಒಳ ಹೋದಾಗ ಅಲ್ಲಿಯ ಶಾಂತ ವಾತಾವರಣ ಅಚ್ಚರಿ ತರಿಸಿತು. ಉದ್ದದ ಕ್ಯೂ ಇರಲಿಲ್ಲ, ಇಬ್ಬರು ಪೋಲೀಸರು ಹಾಗೂ ಅವರೆದುರಿಗಿದ್ದ ಖಾಲಿ ಕುರ್ಚಿಗಳು ನಮ್ಮನ್ನು ಸ್ವಾಗತಿಸಿದುವು. ಅವರು ನಮ್ಮನ್ನು ಗೌರವದಿಂದಲೇ ಬರಮಾಡಿಕೊಂಡರು. ಮುಂದಿನ ಕೆಲವು ನಿಮಿಷಗಳು ನಿಜಕ್ಕೂ ಪೋಲೀಸರ ಬಗ್ಗೆ ಇದ್ದ ಭಾವನೆಯನ್ನು ಬದಲಿಸಿದುವು ಎಂದರೆ ಅತಿಶಯೋಕ್ತಿಯಿಲ್ಲ. ನಮ್ಮ ಅಹವಾಲನ್ನು ತಾಳ್ಮೆಯಿಂದ ಆಲಿಸಿ ಅವರು ನಮ್ಮೊಡನೆ ಸಂಭಾಷಿಸಿದರು. ಈ ಸಂಭಾಷಣೆಯಲ್ಲಿ ಅವರು ಹೇಗೆ ಜನರು ತಮ್ಮ ಬಗ್ಗೆ ತಪ್ಪು ಕಲ್ಪನೆಗಳನ್ನಿಟ್ಟುಕೊಳ್ಳುತ್ತಾರೆ ಎಂಬುದನ್ನು ವಿವರಿಸಿದರು. ಚಿನ್ನ ಮುಂತಾದ ಬೆಲೆಬಾಳುವ ವಸ್ತುಗಳು ಸಿಕ್ಕಿದರೆ ಅದನ್ನು ಜೋಪಾನವಾಗಿ ದಾಖಲಿಸಿ ಅಧಿಕೃತ ರೀತಿ-ನೀತಿಗಳ ಮೂಲಕ ವಾರಸುದಾರರಿಗೆ ತಲುಪಿಸಲಾಗುತ್ತದೆ ಒತ್ತಿ ಹೇಳಿದರು. ಸಾಫ್ಟ್‍ವೇರ್ ಇಂಜಿನಿಯರುಗಳು ಅನೇಕ ಕಾರ್ಡುಗಳನ್ನು ಇಟ್ಟುಕೊಂಡು ಯಾಕೆ ತಿರುಗಾಡುತ್ತಾರೆ ಎಂಬುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು :-) TV9 ಚ್ಯಾನಲ್ ಬಗ್ಗೆ ಕೂಡ ಕಿಡಿಕಾರಿದರು - ಅವರು ಕಷ್ಟಪಟ್ಟು ಕಳ್ಳರನ್ನು ಹಿಡಿಯುವ ವಿಧಾನಗಳನ್ನು ಪ್ರಸಾರ ಮಾಡಿ ಕಳ್ಳರಿಗೆ ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತಾರೆ ಎಂದು! ನಮಗೆ ಕುಡಿಯಲು ಮಿನರಲ್ ವಾಟರ್, ತಿನ್ನಲು ಹೊಸ ಬಿಸ್ಕತ್ ಪ್ಯಾಕೆಟ್ ತೆರೆದು ಕೂಡ ಕೊಟ್ಟರು - ನಾವು ಮೂರ್ಛೆ ಬೀಳುವುದೊಂದೇ ಬಾಕಿ, ನಿಜಕ್ಕೂ ಸಂಕೋಚದಿಂದ ತುಸು ಕುಗ್ಗಿದೆವು. ಇದೆಲ್ಲಾ ಕೊನೆಗೆ (ತಕ್ಕಮಟ್ಟಿಗೆ ಸ್ಥಿತಿವಂತರಂತೆ ಕಾಣುವ ನಮ್ಮಿಂದ) ಹೆಚ್ಚಿನ ಲಂಚ (ಉಡುಗೊರೆ?) ಪಡೆಯಲು ಮಾಡುವ ಸರ್ಕಸ್ಸೇ ಎಂಬ ಅನುಮಾನವೂ ಬಂತು ಎಂದರೆ ಸುಳ್ಳಲ್ಲ :-(

ಕೊನೆಗೆ ಎಫ್.ಐ.ಆರ್. ಬರೆಯಲೆಂದು ನಮಗೆ ಒಂದು ಖಾಲಿ ಕಾಗದ ಕೊಟ್ಟರು. ಬರೆದೆ ನಾನು ವೃತ್ತಾಂತವನ್ನು. ಈ ಮಧ್ಯೆ ಇವರಿಗೂ ಡಿಪೋಕ್ಕೆ ಹೋಗಿ ಉಳಿದ ಪ್ರಯಾಣಿಕರನ್ನು ಸಂಪರ್ಕಿಸುವ ಬಗ್ಗೆ ಮನವೊಲಿಸುವ ಪ್ರಯತ್ನ ಮಾಡಿದೆ. ಆಗ ಅವರು ‘ಅದೆಲ್ಲಾ ನಿಮ್ಮ ಪರವಾಗಿ ನಾವು ಮಾಡುತ್ತೇವೆ, ನೀವು ಏನೂ ಚಿಂತೆ ಮಾಡುವುದು ಬೇಡಎಂದು ಹೇಳಿ ನಮ್ಮನ್ನು ಸುಮ್ಮನಿರಿಸಿದರು. ಏನೋಪ್ಪ ಎಂದು ನಾವೂ ಸುಮ್ಮನುಳಿದೆವು. ಪಾಸ್‍ಪೋರ್ಟಿನ ವಿಷಯದಲ್ಲಿ ಕಳೆದುಹೋದದ್ದನ್ನು/ಸಿಕ್ಕಿದ್ದನ್ನು ದಾಖಲಿಸಿಕೊಳ್ಳಲು, ವ್ಯಕ್ತಿಗಳಿಗೆ ತಲುಪಿಸಲು ಉತ್ತಮ ವ್ಯವಸ್ಥೆಯಿರುವುದಾಗಿ ನಮ್ಮನ್ನು ಸಮಾಧಾನ ಪಡಿಸಿದರು. ಬ್ಯಾಂಕ್ ಕಾರ್ಡುಗಳನ್ನು ಆದಷ್ಟೂ ಬೇಗನೆ ತಡೆಹಿಡಿಯುವಂತೆ ಅವರು ನಮಗೆ ಸೂಚನೆ ಕೊಟ್ಟರು. ಒಂದು ಬ್ಯಾಂಕಿನದ್ದು ನಾವು ಅದಾಗಲೇ ಮಾಡಿಯಾಗಿತ್ತು, ಆದರೆ ಉಳಿದವುಗಳನ್ನು ಮಾಡಲು ಮನೆಗೆ ಹೋಗಿ ಸ್ವಲ್ಪ ಮಾಹಿತಿ ಸಂಗ್ರಹ ಮಾಡಬೇಕಿತ್ತು. ಹೀಗಾಗಿ ನಾವು ತುಸು ಚಡಪಡಿಸುತ್ತಿದ್ದೆವು.

ಎಫ್.ಐ.ಆರ್ ಬರೆಯುವಾಗ ನಾನು ಆ ಇನ್ನೊಂದು ಬ್ಯಾಗಿನಲ್ಲಿದ್ದ ಡ್ರೈವಿಂಗ್ ಲೈಸೆನ್ಸ್ ಪ್ರತಿಯ ಬಗ್ಗೆ ಕೂಡ ಬರೆದೆ, ಕೊನೆಗೆ ಅವರು ಈ ಕೇಸಿನ ಬಗ್ಗೆ ವಿಚಾರಣೆ ನಡೆಸುವಾಗ ಆ ಮಾಹಿತಿ ಕಳೆದುಹೋಗದಿರಲಿ ಎಂದು. ಈ ವಿಷಯದಲ್ಲಿ ಕೂಡ ನನಗೆ ಎರಡೂ ಠಾಣೆಗಳಲ್ಲಿ ನಿರಾಶೆ ಎದುರಾಯ್ತು - ಅಷ್ಟು ಒಳ್ಳೆಯ ಒಂದು ಗುರುತಿನ ಕಾರ್ಡು ಇರುವಾಗ ಅಂತಹ ಒಬ್ಬ ವ್ಯಕ್ತಿ ಬಸ್ಸಿನಲ್ಲಿ ಪ್ರಯಾಣಿಸಿದ್ದಾನೆಯೇ ಎಂಬುದನ್ನು ಪರಿಶೀಲಿಸಲು ಅಥವಾ ಕೇರಳ ಪೋಲೀಸರ ಮೂಲಕ (ಅಥವಾ ಕಂಪ್ಯೂಟರಿನ ಸಹಾಯದಿಂದ) ಆ ವ್ಯಕ್ತಿಯ ದೂರವಾಣಿ/ಚರವಾಣಿ ಸಂಖ್ಯೆಯನ್ನು ಪಡೆಯಲು ಪ್ರಯತ್ನಿಸದೆಯೇ ಇದ್ದದ್ದು ತುಸು ಬೇಸರ ತರಿಸಿತು. ಇವರ ಪತ್ತೇದಾರಿ ಕೆಲಸ ಏನಿದ್ದರೂ ಎಫ್.ಐ.ಆರ್ ಬರೆದ ಮೇಲೆಯೇ ಎಂಬ ಭಾವನೆ ಮೂಡಿತು. ಅಂತೂ ಇಂತೂ ಬರೆದು ಮುಗಿಸಿದೆ.

ಎಫ್.ಐ.ಆರ್ ಬರೆದಾದ ಮೇಲೆ ಅದನ್ನು ಓದಿದ ಪೋಲೀಸರು ನಮ್ಮನ್ನು ಅಲ್ಲಿಗೆ ಕರೆದುಕೊಂಡು ಬಂದ ಪೋಲೀಸರ ಕೈಗೆ ಕೊಟ್ಟು ಅದರ ಒಂದು ಪ್ರತಿ ಮಾಡಿ ತರಲು ಹೇಳಿದರು. ಆ ವ್ಯಕ್ತಿ ಹೋಗಿ ಬರಲು ಒಂದರ್ಧ ಘಂಟೆ ತೆಗೆದುಕೊಂಡು ಕೊನೆಗೆ ಬಂದು ಹೇಳಿದರು - ಯಾವ ಜೆರಾಕ್ಸ್ ಅಂಗಡಿ ಕೂಡ ತೆರೆದಿಲ್ಲ ಎಂದು. ಕೊನೆಗೆ ಠಾಣೆಯಲ್ಲಿದ್ದ ಅಧಿಕಾರಿ ನಮಗೆ ಇನ್ನೊಂದು ಖಾಲಿ ಕಾಗದ ಕೊಟ್ಟು ಅದರಲ್ಲಿ ಇನ್ನೊಂದು ಸಲ ಯಥಾವತ್ತಾಗಿ ಬರೆದುಕೊಡಿ, ಅದಕ್ಕೆ ಮುದ್ರೆ-ಸಹಿ ಹಾಕಿ ಕೊಡುತ್ತೇನೆ ಎಂದು ಹೇಳಿದರು. ಅಷ್ಟರಲ್ಲಿ ನಮಗೆ ಮೊದಲು ಬರೆದಿದ್ದರಲ್ಲಿ ಒಂದೆರಡು ಚಿಕ್ಕಪುಟ್ಟ ಸಂಗತಿಗಳನ್ನು ಸೇರಿಸಬೇಕು ಎಂದು ಗಮನಕ್ಕೆ ಬಂದಿತ್ತು. ಆ ಸಂಗತಿಗಳನ್ನು ಮೊದಲ ಪ್ರತಿಯಲ್ಲಿ ತಿದ್ದಿ ಆಮೇಲೆ ಎರಡನೇ ಪ್ರತಿ ಬರೆಯುವಾಗಲೂ ಸೇರಿಸುತ್ತೇನೆ ಎಂದಾಗ ಮಾತ್ರ ಆ ಅಧಿಕಾರಿ ಸುತರಾಂ ಒಪ್ಪಲಿಲ್ಲ. ಮೊದಲು ಬರೆದಿದ್ದನ್ನೇ ಯಥಾವತ್ತಾಗಿ ಪುನಃ ಬರೆಯಿರಿ ಎಂದು ಹಠ ಹಿಡಿದರು. ಸರಿ, ಇವರ ಜೊತೆ ತರ್ಕ ಸಾಧ್ಯ ಇಲ್ಲ ಎಂದು ಅದನ್ನೇ ಪುನಃ ಬರೆದೆವು. ವಿಷಯ ಸಣ್ಣದಾಗಿದ್ದರಿಂದ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.

ಇನ್ನು ಏನಿದ್ದರೂ ನಾಳೆ ಎಂದು ಅಲ್ಲಿಂದ ಹೊರಟೆವು. ನಮ್ಮನ್ನಲ್ಲಿಗೆ ಕರೆದುಕೊಂಡು ಬಂದ ಅಧಿಕಾರಿ ಪುನಃ ನಮ್ಮನ್ನು ಇನ್ನೊಂದು ಆಟೋ ಹತ್ತಿಸಿ ಮನೆಗೆ ಕಳುಹಿಸಿದರು. ಒಟ್ಟಾರೆ ನಮ್ಮನ್ನು ಸೌಜನ್ಯಪೂರ್ವಕವಾಗಿಯೇ  ನಡೆಸಿಕೊಂಡ ಪೋಲೀಸರ ಬಗ್ಗೆ ನಮಗೆ ಮನಸ್ಸಿನಲ್ಲಿ ಹೆಮ್ಮೆಯೂ ಗೌರವವೂ ಮೂಡಿತು. ಕೆಲವು ವಿಷಯಗಳಲ್ಲಿ ಅವರು ತಾರ್ಕಿಕವಾಗಿ ವರ್ತಿಸದೇ ಇರುವಂತೆ ಕಂಡುಬಂದರೂ ಕೂಡ ಅವರು ನಮ್ಮಲ್ಲಿ ತುಂಬಿದ ಭರವಸೆಯನ್ನು ನೋಡಿ ಧೈರ್ಯವೂ ಬಂದಿತ್ತು. ಮನೆಗೆ ತಲುಪುವಾಗ ರಾತ್ರಿ ಹನ್ನೊಂದಾಗಿತ್ತು, ಆಮೇಲೆ ಇತರ ಬ್ಯಾಂಕುಗಳ ಕಾರ್ಡುಗಳನ್ನು ತಡೆಹಿಡಿಯುವ ಕಾರ್ಯ, ಅಡುಗೆ-ಊಟ ಇತ್ಯಾದಿಗಳನ್ನು ಮುಗಿಸಿ ಸುಸ್ತಾಗಿ ಮಲಗಿದೆವು.

ಭಾಗ ೫ - ಎರಡನೇ ದಿನ, ಸ್ವಂತ ಅನ್ವೇಷಣೆ

ಮರುದಿನ ಒಟ್ಟಾರೆ ವಿಷಯಗಳನ್ನು ಅವಲೋಕಿಸಿ, ಪರಾಮರ್ಶಿಸಿದ ಮೇಲೆ ಒಂದು ವಿಷಯ ಕಂಡಿತು - ನಾನೇ ಡಿಪೋಕ್ಕೆ ಹೋಗಿ ಸಹಪ್ರಯಾಣಿಕರನ್ನು ಸಂಪರ್ಕಿಸುವುದು ಉತ್ತಮವೇನೋ ಎಂದು. ಮಾತ್ರವಲ್ಲ, ಬ್ಯಾಗಿನಲ್ಲಿದ್ದ ಸಿ.ಡಿ.ಗಳಲ್ಲಿ ಒಂದೆರಡರಲ್ಲಿ ಏನಿದೆ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿರಲಿಲ್ಲ. ಅದನ್ನು ಕಂಪ್ಯೂಟರಿಗೆ ಹಾಕಿ ನೋಡಿದರೆ ಏನಾದರೂ ಹೆಚ್ಚಿನ ಮಾಹಿತಿ ಸಿಗಬಹುದೇನೋ ಎಂಬ ಆಸೆ ಹುಟ್ಟಿತು. ಆ ಸಿ.ಡಿ.ಗಳ ಬಗ್ಗೆ ಪೋಲೀಸರ ಬಗ್ಗೆ ಮಾತನಾಡಿ ನೋಡೋಣ ಎಂದೂ ಕಂಡಿತು. ಹೀಗಾಗಿ ಸೀದಾ ಮೆಜೆಸ್ಟಿಕ್ ಕಡೆಗೆ ತೆರಳಿದೆ. ದಾರಿಯಲ್ಲಿ ಟಿಕೇಟ್, ಎಫ್.ಐ.ಆರ್ ಇತ್ಯಾದಿಗಳ ಪ್ರತಿಗಳನ್ನೂ ತೆಗೆದಿಟ್ಟುಕೊಂಡೆ.

ಮೊದಲು ಬಸ್ ನಿಲ್ದಾಣದ ವಿಚಾರಣಾ ವಿಭಾಗಕ್ಕೆ ಹೋದೆ, ಅಲ್ಲಿಂದ ಕಂಟ್ರೋಲ್ ರೂಮಿಗೆ ಕಳುಹಿಸಿದರು. ಅಲ್ಲಿ ಅವರು ನಾನು ಕೇಳಿದ ಸಹಪ್ರಯಾಣಿಕರ ವಿವರಗಳನ್ನು ಕಾದಿರಿಸುವ ಕೌಂಟರಿನ ಮೂಲಕ ತೆಗೆದುಕೊಳ್ಳುವಂತೆ ಸೂಚಿಸಿದರು. ಸರಿ ಎಂದು ಅಲ್ಲಿಗೆ ಹೋದೆ. ಅಲ್ಲಿ ನನ್ನ ಸಮಸ್ಯೆಯನ್ನು ಸಹಾನುಭೂತಿಯಿಂದಲೇ ಆಲಿಸಿದ ಅಧಿಕಾರಿ ನನಗೆ ಮಾಹಿತಿಯನ್ನು ಕೊಟ್ಟ - ‘ನಿಜವಾಗಿ ಇದನ್ನೆಲ್ಲಾ ನಾನು ಕೊಡುವಂತಿಲ್ಲ, ನಾನು ಕೊಟ್ಟದ್ದು ಎಂದು ಯಾರಿಗೂ ಹೇಳಬೇಡಿಎಂಬ ಒಂದು ಕೋರಿಕೆ/ಎಚ್ಚರಿಕೆಯೊಂದಿಗೆ. ನನ್ನ ಟಿಕೇಟ್, ಎಫ್.ಐ.ಆರ್., ನಡವಳಿಕೆ ಇತ್ಯಾದಿಗಳನ್ನು ನೋಡಿ ಅವನಿಗೆ ನಾನು ಧೂರ್ತನಲ್ಲ ಎಂಬ ಭಾವನೆಯಂತೂ ಬಂದಿತ್ತು. ಈ ಪ್ರಕ್ರಿಯೆಯಲ್ಲಿ ನಮಗೆ ತಿಳಿದುಬಂದ ಒಂದು ನಿರಾಶಾಜನಕ ಸುದ್ದಿಯೆಂದರೆ ನಮ್ಮ ಅಕ್ಕಪಕ್ಕ ಕುಳಿತವರು ಹಾಗೂ ಅದರ ಹಿಂದಿನ ಎಲ್ಲಾ ಸೀಟುಗಳು ಮೊದಲೇ ಕಾಯ್ದಿರಿಸಲ್ಪಟ್ಟವಲ್ಲ ಎಂದು - ಆ ಸೀಟುಗಳಲ್ಲಿ ಕುಳಿತು ಪ್ರಯಾಣಿಸಿದವರು ಬಸ್ಸಿನಲ್ಲೇ ಟಿಕೇಟ್ ತೆಗೆದುಕೊಂಡು ಪ್ರಯಾಣಿಸಿದವರು, ಅವರ ಸಂಪರ್ಕ ಮಾಹಿತಿ ಸಿಗುವುದು ಅಸಾಧ್ಯವಾಗಿತ್ತು. ಏನೇ ಇರಲಿ, ಇರುವವರಿಗೆ ಫೋನಾಯಿಸಿ ನೋಡೋಣ ಎಂದು ಅವರೆಲ್ಲರಿಗೂ ಕರೆ ನೀಡಿದೆ. ಅದರಲ್ಲಿ ಇಬ್ಬರ ಹೊರತು ಉಳಿದೆಲ್ಲರೂ ಋಣಾತ್ಮಕವಾದ ಪ್ರತಿಕ್ರಿಯೆ ಕೊಟ್ಟರು. ಆಸಕ್ತಿದಾಯಕವಾದ ಪ್ರತಿಕ್ರಿಯೆ ಕೊಟ್ಟ ಇಬ್ಬರ ವಿವರಗಳು ಇಂತಿವೆ:

- ಒಬ್ಬರು ಹೇಳಿದರು "ನಾನು ನಿನ್ನೆಗೆ ಸೀಟು ಕಾಯ್ದಿರಿಸಲೇ ಇಲ್ಲ, ಬದಲಾಗಿ ಇವತ್ತು ಪ್ರಯಾಣಿಸುತ್ತಿದ್ದೇನೆ" ಎಂದು! ಇದು ಹೇಗಪ್ಪಾ ಸಾಧ್ಯ ಎಂದು ನನಗೆ ತಿಳಿಯಲಿಲ್ಲ.
- ಇನ್ನೊಬ್ಬರು ಹೇಳಿದರು "ನನ್ನದೂ ಉಪ್ಪಿನಂಗಡಿಯಲ್ಲಿ ಒಂದು ಚೀಲ ಕಳೆದುಹೋಯಿತು, ಆದರೆ ಅದರಲ್ಲಿ ತಿಂಡಿ ಸಾಮಗ್ರಿಗಳು ಮಾತ್ರ ಇದ್ದುವು, ಹೀಗಾಗಿ ದೂರು ಕೊಡುವ ಗೋಜಿಗೆ ಹೋಗಲಿಲ್ಲ" ಎಂದು.

ಒಟ್ಟಿನಲ್ಲಿ ಅದಲು-ಬದಲು ಆದ ಬಗ್ಗೆ ಹೆಚ್ಚಿನ ಮಾಹಿತಿ ಯಾವುದಾದರೂ ಸಹಪ್ರಯಾಣಿಕರಿಂದ ದೊರಕುವ ಆಸೆ ಅಲ್ಲಿಗೆ ಸತ್ತಿತು. ಅಲ್ಲಿಂದ ಪುನಃ ಬಸ್ ನಿಲ್ದಾಣದಲ್ಲಿಯೇ ಇದ್ದ ಠಾಣೆಗೆ ತೆರಳಿದೆ, ಸಿ.ಡಿ.ಗಳ ಬಗ್ಗೆ ಮಾತನಾಡಲು. ಆಗ ಬೆಳಗ್ಗಿನ ಹೊತ್ತಲ್ಲವೇ, ಬೇರೆ ಪೋಲೀಸರು ಇದ್ದರು. ಪುನಃ ಅವರಿಗೆ ನನ್ನ ಕಥೆಯನ್ನೆಲ್ಲಾ ಹೇಳಿ ಸಿ.ಡಿ.ಗಳ ಬಗ್ಗೆ ಅವರ ಸಹಾಯ ಯಾಚಿಸಿದೆ. ಅವರು ಆ ಸಿ.ಡಿ.ಗಳನ್ನು ನನಗೆ ಕೊಡಲು ಹಿಂದೆ ಮುಂದೆ ನೋಡಲಿಲ್ಲ. ಕೊನೆಗೆ ಕೊಠಡಿಯೊಂದರಲ್ಲಿ ಭದ್ರವಾಗಿರಿಸಿದ ಆ ಬ್ಯಾಗನ್ನು ತೆಗೆದುಕೊಂಡು ಬಂದು ಇಡೀ ಬ್ಯಾಗನ್ನೇ ನನ್ನ ಕೈಗೆ ಕೊಟ್ಟರು. ಬ್ಯಾಗಿನಲ್ಲಿ ಸಿಕ್ಕಿದ ಡ್ರೈವಿಂಗ್ ಲೈಸೆನ್ಸ್ ಕೇರಳದ್ದು, ನಾನು ಕಾಸರಗೊಡಿನವನು ಎಂಬುದು ಅವರಿಗೆ ಗೊತ್ತಾಗಿಬಿಟ್ಟಿತ್ತು. "ನೀವು ಕೇರಳದ ಪೋಲೀಸರ ಮೂಲಕ ಆ ವ್ಯಕ್ತಿಯ ಪತ್ತೆ ಹಚ್ಚಿದರೆ ಈ ಬ್ಯಾಗನ್ನು ನೀವೇ ಆ ವ್ಯಕ್ತಿಗೆ ಕೊಟ್ಟುಬಿಡಿ" ಎಂದಂದು ಅವರು ಧಾರಾಳವಾಗಿ ನನಗೆ ಅದನ್ನು ಹಸ್ತಾಂತರಿಸಿದರು - ನನ್ನ ಗುರುತನ್ನೂ ಪರಿಶೀಲಿಸಲಿಲ್ಲ, ಸಹಿಯನ್ನೂ ತೆಗೆದುಕೊಳ್ಳಲಿಲ್ಲ.

ಇದನ್ನೆಲ್ಲಾ ಕೇಳಿದ ನನ್ನ ವಕೀಲ ಮಿತ್ರ "ಅವರ ಅನ್ವೇಷಣೆಯ ಬಗ್ಗೆ ಹೆಚ್ಚು ಭರವಸೆ ಇಟ್ಟುಕೊಳ್ಳಬೇಡ, ಎಫ್.ಐ.ಆರ್. ಏನೂ ತೊಂದರೆ ಇಲ್ಲದೆ ಆಯಿತಲ್ಲಾ, ಅದೇ ದೊಡ್ಡ ವಿಷಯ, ಇನ್ನು ಅದನ್ನು ಇಟ್ಟುಕೊಂಡು ನೀನು ಪಾಸ್‍ಪೋರ್ಟ್‍ನ ಮತ್ತೊಂದು ಪ್ರತಿಗೆ ಅರ್ಜಿ ಸಲ್ಲಿಸಬಹುದು" ಎಂದು ವಿವರಿಸಿದ. ಏನಿದ್ದರೂ ನನಗೆ ಗಡಿಬಿಡಿ ಮಾಡುವ ಅಗತ್ಯ ಕಾಣಲಿಲ್ಲ. ಹೇಗಿದ್ದರೂ ಎಫ್.ಐ.ಆರ್ ದಾಖಲಿಸಿ ಇಂತಿಷ್ಟು (ಎಷ್ಟು ಎಂದು ಗೊತ್ತಿಲ್ಲ) ದಿನಗಳಾಗದ ಹೊರತು ಪಾಸ್‍ಪೋರ್ಟಿನ ದ್ವಿಪ್ರತಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಕ್ಕಿಲ್ಲ ಎಂಬುದು ನನ್ನ ಆಲೋಚನೆಯಾಗಿತ್ತು. ಮಾತ್ರವಲ್ಲ ಪಾಸ್‍ಪೋರ್ಟ್ ವಾಪಸ್ ಬರುವ ಬಗ್ಗೆ ನನಗೆ ಇನ್ನೂ ಆಸೆ ಜೀವಂತವಾಗಿತ್ತು. ಬ್ಯಾಗ್ ಕಳುವಾದದ್ದು ಎಂದೇ ಪರಿಗಣಿಸಿದರೂ ಕೂಡ ತಮಗೆ ಉಪಯುಕ್ತವಲ್ಲದ ಆದರೆ ಮೂಲ ಮಾಲೀಕರಿಗೆ ಅತ್ಯಂತ ಮುಖ್ಯವಾದ ಅಂತಹ ದಾಖಲೆಗಳನ್ನು ಪೋಸ್ಟಿನಲ್ಲಿ ಕಳುಹಿಸುವ ಉದಾತ್ತ ಮನೋಭಾವದ ಕಳ್ಳರ ಬಗ್ಗೆ ಹಲವು ಬಾರಿ ಕೇಳಿದ್ದೆ. ಮಾತ್ರವಲ್ಲ, ಅವರು ಅದನ್ನು ಎಲ್ಲಿಯಾದರೂ ಎಸೆದರೂ ಕೂಡ ಸಾರ್ವಜನಿಕರ ಮೂಲಕ ಅದು ವಾಪಸ್ ಬರುವ ಸಾಧ್ಯತೆಗಳೂ ಇದ್ದುವು - ಯಾವುದೇ ಆರಕ್ಷಕಾ ಠಾಣೆಯಲ್ಲಿ, ಅಂಚೆ ಕಛೇರಿಯಲ್ಲಿ, ಅಂಚೆ ಡಬ್ಬಿಯಲ್ಲಿ ಹಾಕಿದರೆ ಅವರು ಅಂತಹ ದಾಖಲೆಗಳನ್ನು ಅದರಲ್ಲಿರುವ ವಿಳಾಸಕ್ಕೆ ಕಳುಹಿಸುತ್ತಾರೆ ಎಂಬ ಸುದ್ದಿ ನಿಜವಂತೆ. ಹೀಗಾಗಿ ಕೆಲವು ದಿನ ಕಾಯುವುದೇ ಲೇಸು ಎಂಬ ನಿರ್ಧಾರಕ್ಕೆ ಬಂದೆ.

ಮನೆಗೆ ಬಂದು ಆತುರದಿಂದ ಇನ್ನೊಂದು ಬ್ಯಾಗಿನಲ್ಲಿದ್ದ ಸಿ.ಡಿ.ಗಳನ್ನು ಒಂದೊಂದೇ ಹಾಕಿ ನೋಡಿದೆ. ದುರದೃಷ್ಟವಶಾತ್ ಎಲ್ಲದರಲ್ಲಿಯೂ ಇದ್ದದ್ದು ಹಾಡುಗಳು ಮಾತ್ರ - ತಮಿಳೋ, ಮಲಯಾಳವೋ ಇರಬೇಕು. ನಿರಾಸೆಯಾಯಿತು. ಆಮೇಲೆ ಇನ್ನೊಂದು ವಿಷಯ ಹೊಳೆಯಿತು - ಕೇರಳ ಡ್ರೈವಿಂಗ್ ಲೈಸೆನ್ಸ್ ವಿವರಗಳು ಅಂತರ್ಜಾಲದಲ್ಲಿ ದೊರೆಯಬಹುದೇ ಎಂದು. ಹುಡುಕಿದಾಗ ಒಂದು ತಾಣ ದೊರೆಯಿತು - ಲೈಸೆನ್ಸ್ ನಂಬ್ರ ಹಾಗೂ ಹುಟ್ಟಿದ ದಿನಾಂಕವನ್ನು ಹಾಕಿದರೆ ಲೈಸೆನ್ಸ್‍ನ ಹೆಚ್ಚಿನ ವಿವರಗಳನ್ನು ಪಡೆಯುವ ಒಂದು ವ್ಯವಸ್ಥೆಯಿತ್ತು. ಆದರೆ ಪುನಃ ನಿರಾಸೆ ಕಾದಿತ್ತು - ಈ ವ್ಯಕ್ತಿಯ ವಿವರಗಳನ್ನು ಹಾಕಿದರೆ ಮಾಹಿತಿ ತಾಳೆಯಾಗುವುದಿಲ್ಲ ಎಂದು ತಾಣ ಹೇಳಿತು. ಹಾಗಿದ್ದರೆ ಇದು ನಕಲಿ ದಾಖಲೆಯೇನೋ, ಇದು ಕಳ್ಳತನದ ಪ್ರಕರಣವೇ ಇರಬಹುದೇನೋ ಎಂಬ ಅನುಮಾನ ಪುನಃ ಬಲವಾಗಿ ಕಾಡತೊಡಗಿತು. ಆದರೂ ಸುಮ್ಮನೆ ಕೂರಲಾಗದೆ ಕಳೆದುಹೋದ ಪಾಸ್‍ಪೋರ್ಟಿನ ವಿಷಯದಲ್ಲಿ ಕೊನೆಗೂ ಸಿಗದಿದ್ದರೆ ಏನು ಮಾಡುವುದೆಂಬ ವಿಷಯದಲ್ಲಿ ಮಾಹಿತಿ ಸಂಗ್ರಹಿಸಲಾರಂಭಿಸಿದೆ. ಕಳೆದುಹೋದರೆ ತಕ್ಷಣ ಏನು ಮಾಡಬೇಕು, ಕದ್ದವರು ಅದನ್ನು ಹೇಗೆ ದುರುಪಯೋಗ ಮಾಡುವ ಸಾಧ್ಯತೆಗಳಿವೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲಿಲ್ಲ, ಆಶ್ಚರ್ಯವಾಯಿತು. ಕೊನೆಗೆ ಒಂದಷ್ಟು ದಿನ ಕಾಯುವುದನ್ನು ಬಿಟ್ಟರೆ ತಕ್ಷಣ ಬೇರಿನ್ನೇನೂ ಮಾಡುವುದಿರಲಿಲ್ಲ.

ಕಥೆ ಇಲ್ಲಿಗೇ ಮುಗಿಯಲಿಲ್ಲ, ರಸವತ್ತಾದ ವಿವರಗಳು ಇನ್ನೂ ಸುಮಾರಿವೆ, ಮುಂಬರುವ ಭಾಗಗಳಲ್ಲಿ ಬರೆಯುತ್ತೇನೆ.

3 comments:

ಚೆ೦ಬಾರ್ಪು said...

I lost my wallet once in 'Sugama' while i was returning from home. I lost my DL, PAN card and some money. fortunately i had not taken any credit/debit cards with me.

I lodged a complaint in sanjayanagar police station about lost purse. i was in need of FIR copy for getting duplicate DL, PAN card and as a proof of loss in case of misuse of DL/PAN card. Even i was surprised with very human treatment offered at sanjayanagar police station (even though i was not offered biscuits etc;))

I thought of waiting for few days hoping that if someone finds my wallet, they might return. I had kept some business cards in the wallet.after around a week, i relieved a call form one guy saying that he found my wallet and i can collect it from 'canara pinto' bus at gandhinagar(near majestic) at around 9 pm. I went there and he handed over the wallet to me. he told me that he found the wallet in his bus, which might have been thrown inside by somebody. he also told there was nothing in the wallet except DL, PAN card and business cards.there were chances that he might have known the real thief. but then i was very relieved as i had got back my documents. I thanked him and left from there. went to sanjayanagar police station and informed them that i found the documents back and they took back the complaint copy.

ಚೆ೦ಬಾರ್ಪು said...

in another incident, someone stole laptop kept in hall of my relative's house in Sanjayanagar. even they had lodged complaint in Sanjayanagar police station.

guess what?

police recovered their laptop (of course, along with many other gadgets) which was kept for sale in a cybercafe at salem, TN! after some legal procedures, they got back their laptop.

ಕೃಷ್ಣ ಶಾಸ್ತ್ರಿ - Krishna Shastry said...

ಮುರಳಿ, ನಿನ್ನ ಅನುಭವ ಕೇಳಿ ಖುಷಿ ಆಯಿತು, ಹಂಚಿಕೊಂಡದ್ದಕ್ಕೆ ಧನ್ಯವಾದ.

Post a Comment