Saturday, July 7, 2012

ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು - ೫


ಇದುವರೆಗೆ:

ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು 
ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು
ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು – ೩ 
ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು – ೪

ಇದುವರೆಗೆ ಬ್ಯಾಗು ಕಾಣೆಯಾದುದರ ಬಗ್ಗೆ, ಅದರ ಸುತ್ತಮುತ್ತ ಬೆಳೆದ ಊಹಾಪೋಹಗಳ ಬಗ್ಗೆ, ಒಬ್ಬ ಒಜ್ಞಾತ ವ್ಯಕ್ತಿಗೆ ಅದರಲ್ಲಿದ್ದ ಕೆಲವು ವಸ್ತುಗಳು ಸಿಕ್ಕಿದುದರ ಬಗ್ಗೆ, ಹಾಗೂ ಆ ವ್ಯಕ್ತಿಯ ನಿಗೂಢತೆಯ ಬಗ್ಗೆ ಬರೆದೆ. ಇದೆಲ್ಲಾ ಬರೆದಿದ್ದರ ಮುಖ್ಯ ಉದ್ದೇಶ ಮನೋರಂಜನೆ ಕೊಡುವುದು ಅಲ್ಲ, ಬದಲಾಗಿ ವಾಸ್ತವಿಕತೆಯ ಅರಿವು ಮೂಡಿಸುವುದು, ಜಾಗೃತಿಯನ್ನು ಹರಡುವುದು. ಈ ಕಂತಿನಲ್ಲಿ ನೀವು ಓದಲಿರುವ ಅಜ್ಞಾತ ವ್ಯಕ್ತಿಯ ಭೇಟಿಯ ವಿವರಗಳೊಂದಿಗೆ ನಿಮ್ಮ ಮುಖ್ಯ ಕುತೂಹಲ ತಣಿಯಬಹುದೇನೋ, ಆದರೆ ಸಾಧ್ಯವಿದ್ದಲ್ಲಿ ಮುಂದಿನ ಕಂತುಗಳ ಮೇಲೆಯೂ ಒಂದು ಕಣ್ಣಿಡಿ, ನಾವು ಹಾಗೂ ವ್ಯವಸ್ಥೆ ಉತ್ತಮಗೊಳ್ಳಬೇಕಿದ್ದಲ್ಲಿ ಅವು ಮುಖ್ಯವಾಗುತ್ತವೆ.

ಭಾಗ ೧೪ - ಆಲ್ವೈಗೆ ಪ್ರಯಾಣ, ಬದಲಾದ ಯೋಜನೆಗಳು

ಅಂತೂ ಇಂತೂ ನವೀನಣ್ಣನೂ ನಾನೂ ಹೊರಟೆವು ಆಲ್ವೈಗೆ. ಹಾಂ, ನಮ್ಮ ಪ್ರಯಾಣದ ಪೂರ್ವತಯಾರಿಯ ಒಂದು ಅಂಗವಾಗಿ ನಾವು ಜಾರ್ಜ್, ರವಿ, ಸುಹಾಸ, ರಾಜ, ಟೋನಿ, ಮಹಾಬಲ - ಇವರೆಲ್ಲರ ನಂಬರುಗಳನ್ನು ಎರಡು ಪೇಪರಿನಲ್ಲಿ ಬರೆದು ನಮ್ಮ ನಮ್ಮ ಕಿಸೆಯಲ್ಲಿಯೂ ಇಟ್ಟುಕೊಂಡಿದ್ದೆವು, ಎಲ್ಲಿಯಾದರೂ ಮೊಬೈಲ್ ಕಾಣೆಯಾದರೆ ಎಂದು :-) ಈ ಟೋನಿ ಮತ್ತು ಮಹಾಬಲ ಎಂದರೆ ಯಾರು ಎಂದಿರಾ? ಆಲ್ವೈಯಲ್ಲಿ ಸ್ಥಳೀಯ ವ್ಯಕ್ತಿಯೊಬ್ಬ ನಮ್ಮೊಡನೆ ಬರುವವನಿದ್ದನಲ್ಲಾ? ಅವನು ಟೋನಿ. ಮತ್ತೆ ಮಹಾಬಲ ಸಹಾಯಹಸ್ತ ಚಾಚಿದ ಕ್ರಿಮಿನಲ್ ಲಾಯರು. ಇನ್ನು ಹೊಸ ಪಾತ್ರಧಾರಿಗಳ ಸೆರ್ಪಡೆಯಿಲ್ಲ, ಟೆನ್ಶನ್ ಬೇಡ.

ಪ್ರಯಾಣದ ಸಮಯದಲ್ಲಿ ಹೆಚ್ಚಿಗೆ ಆಲೋಚನೆ ಮಾಡುವುದೇನೂ ಇರಲಿಲ್ಲ. ಆದರೆ ನಾವು ಗಮನಿಸಿದ ಒಂದು ಮಾತಿತ್ತು. ರೈಲಿನ ಸಮಯದ ಬಗ್ಗೆ ಹಿಂದಿನ ದಿನ ಕಳುಹಿಸಿದ ಎಸ್.ಎಮ್.ಎಸ್. ಹಾಗೂ ಪ್ರಯಾಣದ ದಿನ ಮಧ್ಯದಾರಿಯಲ್ಲಿ ನಾವು ಸುಮಾರು ಒಂದೂವರೆಗೆ ತಲುಪುತ್ತೇವೆಎಂದು ಕಳುಹಿಸಿದ ಎಸ್.ಎಮ್.ಎಸ್. ಇವಕ್ಕೆಲ್ಲಾ ಜಾರ್ಜ್‌ನಿಂದ ಉತ್ತರವಿರಲಿಲ್ಲ - ಅವನಿಗೇಕೋ ಎಸ್.ಎಮ್.ಎಸ್. ಕಳುಹಿಸಲು ಸುತರಾಂ ಇಷ್ಟವಿಲ್ಲದ ಹಾಗೆ. ಕೊನೆಗೆ ಆಲ್ವೈ ತಲುಪಲು ಇನ್ನೂ ಒಂದೆರಡು ಘಂಟೆ ಇರುವಾಗ ಕರೆ ನೀಡಿದೆ, ಅದನ್ನು ಸ್ವೀಕರಿಸಿದ ಅವನು ಸರಿ, ನಿಲ್ದಾಣಕ್ಕೆ ಬಂದಾಗ ಕರೆ ನೀಡಿಎಂದು ಹೇಳಿದ. ಮುಂದುವರಿದು, ತಾನು ರೈಲ್ವೇ ನಿಲ್ದಾಣಕ್ಕೆ ಬಂದು ದಾಖಲೆಗಳನ್ನು ಹಸ್ತಾಂತರಿಸುತ್ತೇನೆ ಎಂದು ಹೇಳಿದ. ಓಹೋ, ಇದಾ ವಿಷಯ? ತನ್ನ ವಿಳಾಸ ಬಹಿರಂಗಪಡಿಸುವುದು ಇಷ್ಟವಿಲ್ಲ ಆಸಾಮಿಗೆ, ಅದಕ್ಕೆ ಈ ಮೊದಲೂ ವಿಳಾಸ ಕಳುಹಿಸಲಿಲ್ಲ ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆವು. ಹೀಗೆ ಕಥೆ ಇನ್ನೊಂದು ಸಣ್ಣ ತಿರುವು ಪಡೆಯಿತು ನೋಡಿ.

ಈ ಮೊದಲು ಟೋನಿ ಹೇಳಿದ ವಿಷಯವೊಂದಿತ್ತು, ಅದನ್ನಿಲ್ಲಿ ನೆನಪಿಸಿಕೊಂಡೆ. ಟೋನಿಯ ಪ್ರಕಾರ ಜಾರ್ಜ್ ತನ್ನ ವಿಳಾಸವನ್ನು ಖಂಡಿತಾ ಬಿಟ್ಟುಕೊಡಲಾರ, ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಜಾರ್ಜ್ ನಮ್ಮನ್ನು ಭೇಟಿಯೂ ಆಗಲಾರ, ಯಾವುದೋ ಒಂದು ಅಂಗಡಿಯಲ್ಲಿ ದಾಖಲೆಗಳನ್ನು ಕೊಟ್ಟುಬಿಟ್ಟು ನಾವು ಅಲ್ಲಿಗೆ ತಲುಪುವ ಸ್ವಲ್ಪ ಹೊತ್ತು ಮುಂಚೆಯೇ ಅಲ್ಲಿಂದ ಪರಾರಿ ಆಗಿಬಿಡುವನು ಎಂದು. ನಾವು ಹೋಗುವಾಗಲೇ ಪೋಲೀಸರನ್ನು ಕರೆದುಕೊಂಡು ಹೋಗಬಹುದು, ಆಮೇಲೆ ಅವನು ಉಳಿದ ಕಳ್ಳತನದ ಆರೋಪವನ್ನು ಎದುರಿಸುವಂತಾಗಬಹುದು ಎಂದವನು ಹೆದರಿಕೊಂಡಿರಬಹುದು, ಇವೆಲ್ಲದರಿಂದಾಗಿ ಜಾರ್ಜ್ ಹೀಗೆ ಮಾಡುವ ಸಾಧ್ಯತೆಯೆ ಹೆಚ್ಚು ಎಂಬುದು ಟೋನಿಯ ಲೆಕ್ಕಾಚಾರವಾಗಿತ್ತು. ಈಗ ನೋಡಿದರೆ ಜಾರ್ಜ್ ತನ್ನ ವಿಳಾಸ ಬಿಟ್ಟುಕೊಡುವ ಲಕ್ಷಣ ಕಾಣಲಿಲ್ಲ, ಟೋನಿ ಹೇಳಿದ ಮಾತು ಆಂಶಿಕವಾಗಿ ಸತ್ಯವಾಗಿತ್ತು. ಆದರೆ ರೈಲ್ವೇ ನಿಲ್ದಾಣಕ್ಕೆ ಬಂದು ನೇರವಾಗಿ ಹಸ್ತಾಂತರಿಸುತ್ತೇನೆ ಎಂದೇನೋ ಹೇಳಿದ್ದ - ಯಾರಿಗೆ ಗೊತ್ತು ಅದೂ ಸತ್ಯವೋ ಸುಳ್ಳೋ ಎಂದು? ಅವನೋ ಇನ್ನೊಬ್ಬನೋ ಯಾರೋ ಒಬ್ಬರು ನಿಲ್ದಾಣಕ್ಕೆ ಬರುತ್ತಾರೆ ಎಂಬ ವಿಶ್ವಾಸ ಮೂಡಿತು. ಒಟ್ಟಿನಲ್ಲಿ ಈಗ ನಮಗ ಟೋನಿಯ ಅಗತ್ಯ ಕಂಡುಬರಲಿಲ್ಲ. ಹೀಗಾಗಿ ಅವನಿಗೆ ಫೋನಾಯಿಸಿ ಹೇಳಿದೆ, ಅಗತ್ಯ ಬಿದ್ದರೆ ಮಾತ್ರ ಅವನಿಗೆ ಕರೆನೀಡುತ್ತೇವೆ ಎಂದು, ಅವನು ಸರಿ ಎಂದ. ನಮ್ಮ ವಾಪಸ್ಸಿನ ಟಿಕೇಟು ಇದ್ದದ್ದು ಮಧ್ಯರಾತ್ರಿ ೧೨ಕ್ಕೆ, ಅಷ್ಟು ಹೊತ್ತು ಅಲ್ಲಿ ಏನು ಮಾಡುವುದಪ್ಪಾ ಎಂಬ ಹೊಸ ಚಿಂತೆ ಶುರುವಾಗಿತ್ತು. ಎಲ್ಲಾ ರೈಲ್ವೇ ನಿಲ್ದಾಣದಲ್ಲಿಯೇ ಪಕ್ಕನೇ ಮುಗಿದುಬಿಟ್ಟರೆ ಮತ್ತಿನ್ನೊಂದು ಘಂಟೆಯಲ್ಲಿ ವಾಪಸ್ ಹೋಗುವ ರೈಲಿನಲ್ಲಿ ಟಿಕೇಟು ತೆಗೆಯಲು ಪ್ರಯತ್ನಿಸುವುದು, ರಾತ್ರಿಯ ಟಿಕೇಟನ್ನು ಕ್ಯಾನ್ಸಲ್ ಮಾಡುವುದು ಎಂದು ನಿರ್ಧರಿಸಿದೆವು.

ಕೊನೆಗೂ ಆಲ್ವೈಯಲ್ಲಿ ನಿಲ್ದಾಣದಲ್ಲಿ ಇಳಿದು ಜಾರ್ಜ್‌ಗೆ ಕರೆ ನೀಡಿದೆವು. ಆಗ ಅವನು ಹೇಳಿದ ಇನೊಂದಿಪ್ಪತ್ತು ನಿಮಿಷದಲ್ಲಿ ಬರುತ್ತೇನೆ ಎಂದು. ಆಗ ನಾನು ಲೋಕಾಭಿರಾಮವಾಗಿಯೇ ಕೇಳಿದೆ "ನೀವು ರೈಲ್ವೇ ನಿಲ್ದಾಣದೊಳಗೇ ಬರುತ್ತಿದ್ದೀರಲ್ಲವೇ? ನಾವಿಲ್ಲಿ ಕುಳಿತಿರುತ್ತೇವೆ" ಎಂದು. ಆಗ ಆಸಾಮಿ ಪುನಃ ನಮ್ಮನು ಗಲಿಬಿಲಿಗೊಳಿಸುವ ಉತ್ತರ ನೀಡಿದನು "ಹತ್ತಿರ ಬರುವಾಗ ಕರೆ ನೀಡುತ್ತೇನೆ" ಎಂದು - ಒಂದು ರೀತಿಯ ಅಡ್ಡಗೋಡೆಯ ಮೇಲೆ ದೀಪವಿಟ್ಟ ಹಾಗಿರುವ ಉತ್ತರ. ಏನು ನಮ್ಮನ್ನು ನಿಲ್ದಾಣದಿಂದ ಹೊರಬಂದು ಇನ್ನೆಲ್ಲಿಗಾದರೂ ಬರಲು ಹೇಳುತ್ತಾನೆಯೇ? ಯಾವುದಾದರೂ ವಾಹನ ಹತ್ತಿಸುತ್ತಾನೆಯೇ? ಟೋನಿಯನ್ನು ಬರುವುದು ಬೇಡ ಎಂದಿದ್ದು ತಪ್ಪಾಯಿತೇ ಎಂಬಿತ್ಯಾದಿ ಯೋಚನೆ ತೊಡಗಿತು. ಹತ್ತೇ ನಿಮಿಷದಲ್ಲಿ ಪುನಃ ಕರೆ ಬಂತು - "ಜೀನತ್ ಸಿನೆಮಾ ಮಂದಿರದ ಬಳಿ ಇರುವ ಒಂದು ಅಂಗಡಿ ಇದೆ (ಹೆಸರು ಬೇಡ), ಅಲ್ಲಿಗೆ ಆಟೋದಲ್ಲಿ ಬನ್ನಿ" ಎಂದು. ತುಸು ಆಲೋಚನೆ ಮಾಡಿ ನಂತರ ಹೊರಗೆ ಹೋಗಿ ಆಟೋದವರಲ್ಲಿ ಕೇಳಿದೆವು "ಅದೋ ಅಲ್ಲಿ ಹತ್ತಿರದಲ್ಲೇ ಇದೆ ನೋಡಿ, ನಡೆದುಕೊಂಡೇ ಹೋಗಬಹುದು, ನಾವು ಬರುವುದಿಲ್ಲ" ಎಂದವರು ನಿರಾಕರಿಸಿದರು. ಪರವಾಗಿಲ್ವೇ! ಪೇಟೆ ಪೂರ್ತಿ ಸುತ್ತಿಸಿ ಹತ್ತಿರದಲ್ಲೇ ಇದ್ದ ವಿಳಾಸಕ್ಕೆ ಪರಕೀಯರನ್ನು ಕರೆದುಕೊಂಡು ಹೋಗುವ ಅವಕಾಶವನ್ನು ಕಳೆದುಕೊಳ್ಳುವ ಪ್ರಾಮಾಣಿಕರಿವರುಎಂದಂದುಕೊಳ್ಳುತ್ತಾ ಮುಂದೆ ಸಾಗಿದೆವು. ಇದು ಜನನಿಬಿಡ ಪ್ರದೇಶ, ಏನಕ್ಕೂ ಹೋಗಿ ನೋಡೋಣ ಎಂದು ನಾವು ಧೈರ್ಯಮಾಡಿ ಮುಂದುವರಿದೆವು. ಮಳೆ ಬರುತ್ತಿದ್ದುದರಿಂದ ಹಾಗೂ ಅಂಗಡಿಯವರಲ್ಲಿ ಕೇಳಿಕೊಂಡು ನಡೆಯುತ್ತಿದ್ದುದರಿಂದ ತುಸು ಹೊತ್ತು ಬೇಕಾಯ್ತು - ಈ ಮಧ್ಯೆ ಜಾರ್ಜ್‍ ಎರಡು ಬಾರಿ ನಾವೆಲ್ಲಿದ್ದೇವೆ ಎಂದು ವಿಚಾರಿಸಿಯೂ ಆಯಿತು, ಅವನು ತುಸು ಗಡಿಬಿಡಿಯಲ್ಲಿದ್ದಂತೆ ಕಾಣುತ್ತಿತ್ತು.

ಭಾಗ ೧೫ - ಅಂತೂ ಇಂತೂ ಜಾರ್ಜ್‌ನ ದರುಶನ ಭಾಗ್ಯ

ಕೊನೆಗೂ ಜಾರ್ಜ್ ಹೇಳಿದ ಅಂಗಡಿ ಕಾಣಸಿಕ್ಕಿತು. ಅಲ್ಲಿ ಒಬ್ಬ ವ್ಯಕ್ತಿ (ಜಾರ್ಜೇ ಇರಬೇಕು ಎಂದುಕೊಂಡೆ) ನಗುಮುಖದೊಂದಿಗೆ ನಮ್ಮ ಕಡೆ ಕೈಬೀಸಿದ. ನೋಡಿದೆ - ರಸ್ತೆಗೆ ಪೂರ್ಣವಾಗಿ ತೆರೆದುಕೊಂಡಿರುವ ಸಾಮಾನ್ಯ ಅಂಗಡಿ. ಏನೂ ಅಪಾಯ ತೋರಲಿಲ್ಲ. ಹೀಗಾಗಿ ನಾವಿಬ್ಬರೂ ಒಳನಡೆದೆವು. ಅವನು ಜಾರ್ಜೇ ಆಗಿದ್ದ, ಅಂಗಡಿಯಲ್ಲಿ ಇನ್ನೊಬ್ಬನಿದ್ದ, ಆತ ಅಂಗಡಿಯಾತನೆಂದೂ ಜಾರ್ಜ್‍ನ ಮಿತ್ರನೆಂದೂ ತಿಳಿಯಿತು. ಜಾರ್ಜ್ ಹೆಚ್ಚೇನೂ ಮಾತನಾಡದೆ, ನನ್ನ ಗುರುತಿನ ಪುರಾವೆಯನ್ನೂ ಕೇಳದೆ ಸೀದಾ ಒಂದು ಸಣ್ಣ ಕಟ್ಟನ್ನು ಹಸ್ತಾಂತರಿಸಿದ - ಅತ್ಯಂತ ನಾಜೂಕಿನಿಂದ ದಾಖಲೆಗಳನ್ನು ಜೋಡಿಸಿ, ಪೇಪರಿನಲ್ಲಿ ಸುತ್ತಿ, ಅಂಟಿಸಿ ಇಟ್ಟ ಒಂದು ಕಟ್ಟು ಅದಾಗಿತ್ತು. ವಿಸ್ಮಯಗೊಂಡೆ - ಎಸೆದವರು ಇಷ್ಟೆಲ್ಲಾ ಮಾಡಿ ಎಸೆದಿದ್ದರೇನು?’ ಎಂದು ಕೇಳಿದೆ ನಾನು. ಅದಕ್ಕವನು ಇಲ್ಲಾ, ಅವರು ಒಂದು ಕವರಿನಲ್ಲಿ ಸುಮ್ಮನೆ ಹಾಕಿ ಎಸೆದಿದ್ದರು ಎಂದು ಹೇಳಿದನವ. ಸರಿ ಎಂದು ಅವನು ಜತನದಿಂದ ಮಾಡಿದ ಪ್ಯಾಕನ್ನು ಹರಿದು ತೆಗೆದು ದಾಖಲೆಗಳನ್ನು ಪರೀಕ್ಷಿಸಿದೆ. ಎಲ್ಲಾ ಇತ್ತು, ಸಿಕ್ಕಿದೆ ಎಂದು ಗೊತ್ತಾದ ಮೇಲೆಯೂ ಇಷ್ಟೆಲ್ಲಾ ಆತಂಕ ಹುಟ್ಟಿಸಿದ ವಿಷಯ ಇಷ್ಟು ಸುಲಭವಾಗಿಯೇ ಮುಗಿದುಹೋಯಿತೇ ಎಂದು ನಮಗೆ ಅಚ್ಚರಿತರಿಸಿತು. ಏತನ್ಮಧ್ಯೆ ಅಂಗಡಿಯಾತನಿಗೂ ವಿವರಿಸಬೇಕಾಯಿತು - ಇದೆಲ್ಲಾ ಹೇಗಾಯಿತು ಎಂದು!

ದಾಖಲೆಗಳಲ್ಲಿದ್ದ ಒಂದೇ ಒಂದು ವಿಚಿತ್ರವೆಂದರೆ ನನ್ನ ವಾಹನ ಚಲಾವಣಾ ಲೈಸೆನ್ಸ್ - ಅದು ಪುಸ್ತಕ ರೂಪದಲ್ಲಿತ್ತು, ಹಾಗೂ ಅದಕ್ಕೊಂದು ಪ್ಲಾಸ್ಟಿಕ್ ಹೊದಿಕೆ ಇತ್ತು, ಹಳೆಯದ್ದು, ವಾಹನ ಚಲಾವಣಾ ಶಾಲೆಯವರು ಹಾಕಿಕೊಟ್ಟಿದ್ದು ಇನ್ನೂ ಇತ್ತು, ತುಸು ಚಿಂದಿಯಾಗಿದ್ದರೂ ಕೂಡ. ಆದರೆ ಈಗ ಆ ಹೊದಿಕೆ ಇರಲಿಲ್ಲ, ಬೆತ್ತಲೆಯಾಗಿ ಉಳಿದ ವಸ್ತುಗಳೊಂದಿಗೆ ಜೋಡಿಸಿ ಇಡಲಾಗಿತ್ತು. ಕಳ್ಳರು ಅದನ್ನೇಕೆ ತೆರೆಯುತ್ತಾರೆ ಎಂಬುದು ನನಗೆ ಹೊಳೆಯಲಿಲ್ಲ - ಎಲ್ಲವೂ ಜೋಡಿಸಿರುವ ರೀತಿ, ಪ್ಯಾಕ್ ಮಾಡಿದ ರೀತಿ ನೋಡಿದರೆ ತುಸು "ಅತಿ" ಎನ್ನುವ ರೀತಿ ಇತ್ತು. ಇವನೇ ಏಕೆ ಆ ಹೊದಿಕೆಯನ್ನು ಕಿತ್ತೆಸೆದು ಹೀಗೆ ಪ್ಯಾಕ್ ಮಾಡಿರಬಾರದು ಎಂಬ ವಿಲಕ್ಷಣ ಆಲೋಚನೆ ಮನಸ್ಸಿನಲ್ಲಿ ಮಿಂಚಿನಂತೆ ಹಾದುಹೋಯಿತು, ಕ್ಷಣಮಾತ್ರದಲ್ಲಿ ಮಾಯವೂ ಆಯಿತು.

ಭಾಗ ೧೬ - ಜಾರ್ಜ್‌ನ ವಿವರಣೆ, ಸೇವಾ ಮನೋಭಾವ

"ಅದು ಸರಿ, ಆದರೆ ನೀವು ಸುಲಭವಾಗಿ ಪೋಸ್ಟಿನಲ್ಲಿಯೇ ಕಳುಹಿಸಬಹುದಿತ್ತಲ್ಲಾ" ಎಂದು ಕೇಳಿದೆ ನಾನು. ಒಂದರೆಕ್ಷಣ ಮೌನದ ಬಳಿಕ ಜಾರ್ಜ್ ಹೇಳಿದ "ಸುಮ್ಮನೆ ಕಳುಹಿಸಿಕೊಟ್ಟಿದ್ದಲ್ಲಿ ಉಳಿದ ವಸ್ತುಗಳನ್ನು ನಾನೇ ಇಟ್ಟುಕೊಂಡಿದ್ದೇನೆ ಎಂಬ ಅನುಮಾನ ನಿಮಗೆ ಬರುತ್ತಿತ್ತೋ ಏನೋ ಎಂಬ ಸಂಶಯ ನನಗಿತ್ತು, ಆದ ಕಾರಣ ನೇರವಾಗಿ ಹಸ್ತಾಂತರಿಸೋಣ ಎಂದಂದುಕೊಂಡೆ, ಮತ್ತೆ ಅಂಚೆಯಲ್ಲಿ ಹೊಸಸಮಸ್ಯೆ ಏನಾದರೂ ಬಂದರೆ ಎಂಬ ಭಯವೂ ಇತ್ತು" ಎಂದು. ನೇರವಾಗಿ ಹಸ್ತಾಂತರಿಸಿದರೆ ಅವನು ಉಳಿದ ವಸ್ತುಗಳನ್ನು ತೆಗೆದುಕೊಳ್ಳಲಿಲ್ಲ ಎಂಬುದು ತಾರ್ಕಿಕವಾಗಿ ಹೇಗೆ ಸಿದ್ಧವಾಗುತ್ತದೆ ಎಂಬುದು ನನಗೆ ಗೊತ್ತಿಲ್ಲ, ಇರಲಿ ಅದು ಅವನಿಗೆ ಕಂಡ ತರ್ಕ!

ಪುನಃ ಧನ್ಯವಾದಗಳನ್ನರ್ಪಿಸುತ್ತಾ ನಾನು ಕೊನೆಗೆ ಸೂಚ್ಯವಾಗಿ ಹೇಳಿದೆ "ಸರಿ, ನಾವಿನ್ನು ಹೊರಡುತ್ತೇವೆ, ನಿಮಗೆ ಹೇಗೆ ಧನ್ಯವಾದಗಳನ್ನರ್ಪಿಸಬೇಕು ಎಂಬುದೇ ಗೊತ್ತಿಲ್ಲ" ಎಂದು. ಜಾರ್ಜ್‌ಗೆ ಅದು ಅರ್ಥವಾಯಿತು, ಅವನು ಹೇಳಿದ "ನನಗೆ ದುಡ್ಡೇನೂ ಬೇಡ, ಕೆಲವು ವರ್ಷಗಳ ಹಿಂದೆ ನಾನು ಅಫಘಾತಕ್ಕೀಡಾಗಿ ರಸ್ತೆಬದಿಯಲ್ಲಿ ರಕ್ತಸಿಕ್ತನಾಗಿ ಬಿದ್ದಿದ್ದೆ, ಆಗ ನನ್ನನ್ನು ಗುರುತು ಪರಿಚಯ ಇಲ್ಲದವರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು, ಹೀಗಾಗಿ ನನಗೂ ಇತರರಿಗೆ ಸಹಾಯ ಮಾಡುವ ಮನಸ್ಸು ಬಂದಿದೆ" ಎಂದು. ಅದನ್ನು ಕೇಳಿದಾಗ ತಕ್ಷಣ ಅನೇಕ ಸಂಗತಿಗಳು ಹೊಸಬೆಳಕನ್ನು ಕಂಡುವು - ಯಾಕೆ ಅವನು ಅಷ್ಟೆಲ್ಲಾ ಶ್ರಮವಹಿಸಿ ನಮಗೆ ತಲುಪಿಸುವ ಕಾರ್ಯವನ್ನು ಕೈಗೊಂಡ ಎಂದು. ನಾನೇನೂ ನಾಚಿಕೆಯಿಂದ ಕುಗ್ಗಲಿಲ್ಲ, ಯಾಕೆಂದರೆ ನಾವು ಪಟ್ಟ ಆತಂಕವೂ ನ್ಯಾಯಯುತವಾದುದೇ ಆಗಿತ್ತು. ಆದರೆ ನಿಜವಿಷಯ ತಿಳಿದು ಮನಸ್ಸು ನಿರಾಳವಾಯಿತು.

ಈ ಮೊದಲು ಜಾರ್ಜ್‍ಗೆ ಕೃತಜ್ಞತೆ ಸೂಚಿಸಲು ಹಣವಲ್ಲದಿದ್ದರೂ ಏನಾದರೂ ರೂಪದಲ್ಲಿ ನಮ್ಮ ಕೃತಜ್ಞತೆಗಳನ್ನರ್ಪಿಸಬೇಕೆಂದು ಆಲೋಚಿಸಿದ್ದೆವು, ಆದರೆ ಸರಿಯಾಗಿ ವಿಷಯ ಏನೆಂದು ತಿಳಿಯದೆ ಸುಮ್ಮನಿದ್ದೆವು. ಆಮೇಲೆ ವಿಳಾಸ ಗೊತ್ತಾಗುತ್ತದಲ್ಲಾ, ಅದಕ್ಕೆ ಏನಾದರೂ ನಮ್ಮೂರಿನ ವಿಶೇಷ ತಿಂಡಿಯನ್ನೇನಾದರೂ ಒಮ್ದು ಹಬ್ಬದ ಸಮಯದಲ್ಲಿ ಕಳುಹಿಸಬಹುದು ಎಂದೆಲ್ಲಾ ಮನಸ್ಸಿನೊಳಗೇ ಅಂದುಕೊಳ್ಳುತ್ತಿದ್ದೆ. ಆದರೆ ಈಗ ನೋಡಿದರೆ ವಿಳಾಸವೂ ಇಲ್ಲ. ಜಾರ್ಜ್ ಅದನ್ನು ಕೊಡುವ ಯಾವುದೇ ಲಕ್ಷಣವೂ ಕಾಣಲಿಲ್ಲ. ಸರಿ, ಆಯಿತಲ್ಲಾ, ಸಂತೋಷ, ಇಲ್ಲಿಗೆ ನಮ್ಮ ನಿಮ್ಮ ಭೇಟಿ ಮುಗಿಯಿತು, ಇನ್ನು ಹೊರಡಿಎಂಬಂತಿತ್ತು ಅವನ ಮುಖ. (ಈ ವಿಷಯದಲ್ಲಿ ನವೀನಣ್ಣನ ಅನಿಸಿಕೆ ತುಸು ವ್ಯತ್ಯಸ್ಥವಾಗಿತ್ತು - ಅವರ ಮುಖ ಭಾವೋದ್ವೇಗದಿಂದ ಕೂಡಿತ್ತು ಎಂಬುದು ಅವನು ಕಂಡ ವಿಚಾರ! ನನಗೆ ಕಂಡದ್ದು ನಿರ್ಲಿಪ್ತತೆ).

ಭಾಗ ೧೭ - ಪುನಃ ಅಸ್ಪಷ್ಟ ಕಳವಳ

ನಮ್ಮ ರೈಲು ಇದ್ದದ್ದು ಮೂರು ಘಂಟೆಗೆ, ಅದು ತಡ ಆಗಿ ಮೂರೂವರೆ ಎಂದಾಗಿತ್ತು. ಖಾರಖಾರದ ಮಲಯಾಳೀ ಸಸ್ಯಾಹಾರಿ ಊಟವನ್ನು ಮುಗಿಸಿ ರೈಲುನಿಲ್ದಾಣದಲ್ಲಿ ಕಾಯುತ್ತಿದ್ದ ನಮಗೆ ಸುಮಾರು ಮೂರು ಘಂಟೆಗೆ ಪುನಃ ಜಾರ್ಜ್‌ನಿಂದ ಕರೆ ಬಂತು - "ಎಲ್ಲಿದ್ದೀರಿ? ಹೊರಟಿರಾ" ಎಂದು. ಅಲ್ಲಾ, ಆ ರೈಲು ಸಿಗದಿದ್ದರೆ ರಾತ್ರಿ ಹನ್ನೆರಡರ ತನಕ ಕಾಯಬೇಕು ಎಂದು ಹೇಳಿದಾಗ ಮೌನವಾಗಿದ್ದು ಆ ಸಮಯದಲ್ಲಿ ಏನು ಮಾಡಬಹುದು, ಎಲ್ಲಿ ತಿರುಗಾಡಬಹುದು ಎಂಬುದನ್ನು ಸೂಚಿಸದೆ ಮೌನವನ್ನಾಶ್ರಯಿಸಿದ ಜನಕ್ಕೆ ಈಗೇನು ಕಳಕಳಿ ಎಂದು ನನಗೆ ಅಚ್ಚರಿಯಾಯಿತು. ನಾವಿಲ್ಲಿಂದ ಹೋಗುವ ವಿಷಯದಲ್ಲಿ ಏತಕ್ಕೆ ಇಷ್ಟು ಉತ್ಸುಕನಾಗಿದ್ದಾನೆ ಎಂಬ ಪ್ರಶ್ನೆ ಮೂಡಿತು.

ಕೊನೆಗೆ ರಾತ್ರಿ ಮನೆಗೆ ತಲುಪಿ ಒಂಬತ್ತೂವರೆಗೆ ಕರೆ ನೀಡಿ ಜಾರ್ಜ್‌ಗೆ ಪುನಃ ಧನ್ಯವಾದಗಳನ್ನರ್ಪಿಸಿ ನಾವು ಮನೆಗೆ ಕ್ಷೇಮವಾಗಿ ತಲುಪಿದ್ದೇವೆ ಎಂದು ಹೇಳಿದೆ. ಆಗವನು ಹೇಳಿದ ಮಾತು ಇನ್ನೂ ಗಲಿಬಿಲಿ ತರಿಸಿತು "ಸರಿ, ಆಗಾಗ ಕರೆ ನೀಡುತ್ತಾ ಇರಿ, ಬೆಂಗಳೂರಿಗೆ ಬಂದಾಗ ನಾನೂ ಕರೆ ನೀಡುತ್ತೇನೆ" ಎಂದು ಹೇಳಿದನು. ಮುಖ ಕೊಟ್ಟು ಮಾತನಾಡುವಾಗ ಇದ್ದ ಅವನ ವರ್ತನೆಗೂ ಫೋನಿನಲ್ಲಿ ಈಗ ತೋರಿಸುತ್ತಿದ್ದ ವರ್ತನೆಗೂ ಏನೂ ತಾಳಮೆಳ ಇರಲಿಲ್ಲ - ಬಹುಷಃ ನಾನು ಅದನ್ನು ಬರವಣಿಗೆಯ ಮೂಲಕ ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ಆದರೆ ಆಗ ನನಗೆ ಬಂದ ಭಾವನೆಯೇನೆಂದರೆ - ಈ ಹಾರರ್ ಸಿನೇಮಾಗಳಲ್ಲಿ ಭೂತವನ್ನು ಕೊಂದು ಸುಖಾಂತ್ಯವಾದ ಮೇಲೆ ಸಿನೇಮಾ ಅಂತ್ಯ ಮಾಡುವ ಮೊದಲು ಭೂತ ಇನ್ನೂ ನಿರ್ನಾಮವಾಗಿಲ್ಲಎಂಬ ಕಲ್ಪನೆ ಕೊಟ್ಟು ವೀಕ್ಷಕರ ಮನಸ್ಸು ಕೆಡಿಸುತ್ತಾರಲ್ಲಾ, ಹಾಗೆ. ಅಂತಹ ಒಂದು ಅನುಭವವಾಯಿತು ನನಗೆ, ಯಾಕೋ ಗೊತ್ತಿಲ್ಲ.

ಒಟ್ಟಿನಲ್ಲಿ ಮೇಲ್ನೋಟಕ್ಕೆ ಇಷ್ಟೆಲ್ಲಾ ಸಹಾಯ ಮಾಡಿದನು ಎಂಬಂತೆ ತೋರಿದರೂ ಕೂಡ ಅವನ ಬಗ್ಗೆ ಕೂಡ ಜಾಗ್ರತೆಯಿಂದಿರುವುದು ಒಳಿತು, ಏನೋ ಎಲ್ಲವೂ ಸರಿಯಿಲ್ಲ ಎಂಬ ಭಾವನೆಯೊಂದಿಗೆ ವಿಶ್ರಮಿಸಿದೆವು. ಈ ಅಸ್ಪಷ್ಟ ಆಲೋಚನೆಗಳೆಲ್ಲಾ ಹೆಚ್ಚು ಪತ್ತೇದಾರಿ ಕಥೆ-ಸಿನೇಮಾ-ಧಾರಾವಾಹಿಗಳನ್ನು ಓದಿ-ನೋಡಿದ್ದರಿಂದ, ನಿಜಕ್ಕೂ ಜಾರ್ಜ್ ಆ ವ್ಯಕ್ತಿಯ ನಿಜವಾದ ಹೆಸರೇ ಇರಬಹುದು, ಅವನು ಒಬ್ಬ ಒಳ್ಳೆಯ ಮನಸ್ಸಿನ, ತುಸು ನಾಚಿಕೆ ಸ್ವಭಾವದ, ಮುಗ್ಧ ಕೃಷಿಕ ಇರಬಹುದು ಎಂದು ಆಲೋಚನೆ ಮಾಡುವುದೇ ಹಿತಕರ ಎಂದು ಕಂಡಿತು, ಹಾಗೆಯೇ ನಿದ್ರೆಗೆ ಜಾರಿದೆ.

ಮುಂದೇನು? ಕಥೆ ಇನ್ನೂ ಮುಗಿದಿಲ್ಲ. ಬೆಂಗಳೂರಿನಲ್ಲಿ ಕೊಟ್ಟ ಎಫ್.ಐ.ಆರ್.ನ ಕಥೆ ಏನು? ನಮಗೆ ಸಿಕ್ಕಿದ ಇನ್ನೊಂದು ಬ್ಯಾಗು ಕಳ್ಳನದ್ದೇ ಅಥವಾ ಕಳ್ಳ ಇನ್ಯಾರಿಂದಲೋ ಕದ್ದದ್ದೇ? ಅದನ್ನು ಅದರ ವಾರಸುದಾರರಿಗೆ ತಲುಪಿಸುವ ಬಗೆ ಹೇಗೆ? ಇಂತಹ ವಿಷಯಗಳಲ್ಲಿ ಆರಕ್ಷಕರು ಹಾಗೂ ಕ.ರಾ.ರ.ಸಾ.ನಿ. ಹೇಗೆ ತಮ್ಮ ಸೇವೆಯನ್ನು ಉತ್ತಮಗೊಳಿಸಬಹುದು? ಬ್ಯಾಂಕ್ ಕಾರ್ಡುಗಳನ್ನು ತಡೆಹಿಡಿಯುವ ವಿಷಯದಲ್ಲಿ ನಾವು ಗಮನಿಸಿದ ಕೆಲವು ಆಸಕ್ತಿದಾಯಕವಾದ ವಿಷಯಗಳೇನು? ಎಂಬಿತ್ಯಾದಿ ವಿಷಯಗಳ ಬಗ್ಗೆ ಮುಂದೆ ಬರೆಯುತ್ತೇನೆ. ಆಸಕ್ತಿ ಉಳಿಸಿಕೊಂಡು ಮುಂದಿನ ಕಂತನ್ನು ಓದುವಿರೆಂದು ನಂಬಿದ್ದೇನೆ. ಇದುವರೆಗೆ ಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ನಿಮ್ಮ ಪ್ರತಿಕ್ರಿಯೆ/ಟೀಕೆ/ಸಲಹೆ/ಸೂಚನೆಗಳಿಗೆ ಸದಾ ಸ್ವಾಗತವಿದೆ.


ಮುಂದಿನ ಭಾಗ: ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು - ೬

1 comment:

  1. Hay what happened? we are looking for ವೋಲ್ವೋ ಬಸ್ಸಿನಲ್ಲಿ ಕಾಣೆಯಾದ ಬ್ಯಾಗು - 6 ...................:)

    ReplyDelete