Thursday, July 5, 2012

ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು - ೪


ಹಾಸನದಿಂದ ಬೆಂಗಳೂರಿಗೆ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನಾವು ಬ್ಯಾಗೊಂದನ್ನು ಕಳೆದುಕೊಂಡದ್ದು, ಆಮೇಲೆ ಆರಕ್ಷಕಾ ಠಾಣೆಯಲ್ಲಿ ಆದ ಅನುಭವ, ಸ್ವಂತ ಪತ್ತೇದಾರಿ, ಕೇರಳದ ಒಬ್ಬ ಮಹಾನುಭಾವ ದಾಖಲೆಗಳು ನನಗೆ ಸಿಕ್ಕಿದೆ ಎಂದು ಹೇಳಿ ನಮಗೆ ನೆಮ್ಮದಿಯಾಗಿದ್ದು, ಆಮೇಲೆ ಪುನಃ ಹೊಸ ಆತಂಕ ಶುರುವಾಗಿದ್ದು - ಈ ಬಗ್ಗೆ ಇದುವರೆಗೆ ಬರೆದಿದ್ದೆ.


ಮುಂದಿನ ಕೆಲವು ಭಾಗಗಳು ಇಲ್ಲಿವೆ, ತುಸು ದೀರ್ಘವಾಗಿದ್ದರೂ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುತ್ತದೆ ಎಂದು ನಂಬಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತವಿದೆ.

ಭಾಗ ೧೧ - ಆರನೆಯ ದಿನ: ಮನೆಗೆ ಅನಿರೀಕ್ಷಿತ ಅತಿಥಿ

ಇನ್ನೂ ಆರನೆಯ ದಿನ ಹಾಗೂ ಅಚ್ಚರಿಗಳು ಮುಗಿದಿರಲಿಲ್ಲ. ಸಂಜೆ ಅಪ್ಪ ಹಾಗೂ ನಾನು ಆಸ್ಪತ್ರೆಯಿಂದ ವಾಪಸ್ ಮನೆಗೆ ಬಂದಾಗ ನಮಗೊಂದು ಹೊಸ ವಿಷಯ ತಿಳಿಯಿತು - ಯಾರೋ ಒಬ್ಬರು ಮನೆಗೆ ಬಂದಿದ್ದರಂತೆ, ನನ್ನನ್ನು ವಿಚಾರಿಸಿಕೊಂಡು. ಅಮ್ಮನಿಗೆ ಅವರು ಯಾರು ಎಂದು ಗೊತ್ತಿರಲಿಲ್ಲ, ಹೀಗಾಗಿ ತಾನು ಬಾಗಿಲ ಬಳಿಯೇ ನಿಂತು ಅವರನ್ನು ದೂರವೇ ನಿಲ್ಲಿಸಿ ಮಾತನಾಡಿಸಿ ಕಳುಹಿಸಿದರು. ಬಂದ ವ್ಯಕ್ತಿ ಹೇಳಿದ್ದೇನಂತೀರಾ? ದಾಖಲೆಗಳು ಸಿಕ್ಕಿದ ವ್ಯಕ್ತಿಯ ಒಬ್ಬ ಮಿತ್ರನ ಓರ್ವ ಸಂಬಂಧಿಯ ಸಹೋದ್ಯೋಗಿ ತಾನೆಂದು! ತಾನು ಪಿ.ಡಬ್ಲ್ಯು.ಡಿ.ಯಲ್ಲಿ ಕೆಲಸ ಮಾಡುವುದೆಂದೂ, ತಾನು ಕಾಸರಗೋಡಿನ ಬಳಿ ಇರುವುದರಿಂದ ನನ್ನ ಪಾಸ್‍ಪೋರ್ಟ್‍ನಲ್ಲಿರುವ ವಿಳಾಸವನ್ನು ಪತ್ತೆಹಚ್ಚಿ ಆ ವಿಳಾಸದಲ್ಲಿದ್ದ ಜನರೊಂದಿಗೆ ಮಾತನಾಡಲೆಂದು ಬಂದಿದ್ದೇನೆಂದೂ ಆತ ಹೇಳಿದ. ದಾಖಲೆಗಳು ಕಳೆದುಹೋದದ್ದು ಹೇಗೆ ಎಂಬಿತ್ಯಾದಿ ವಿವರಗಳನ್ನು ತುಸುಹೊತ್ತು ಅಮ್ಮನೊಡನೆ ಮಾತನಾಡಿ ಆಮೆಲೆ ತೆರಳಿದ ಆತ. ಅವನ್ನು ಪೋಸ್ಟಿನಲ್ಲಿ ಕಳುಹಿಸಬಲ್ಲಿರಾ ಎಂಬ ಅಮ್ಮನ ವಿನಂತಿಗೆ ಅವನು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ದಾಖಲೆಗಳು ಇರುವವರ ಹೆಸರು ಏನು ಎಂಬುದರ ಬಗ್ಗೆಯೂ ಅವನು ಉತ್ತರ ನೀಡಲಿಲ್ಲ, ನಯವಾಗಿ ನುಣುಚಿಕೊಂಡನಂತೆ.

ಆದರೆ ಹೋಗುತ್ತಾ ತನ್ನ ಮೊಬೈಲ್ ನಂಬರನ್ನೂ, ತನ್ನ ಮಿತ್ರನ ಮೊಬೈಲ್ ನಂಬರನ್ನೂ, ಅವನ ಸಂಬಂಧಿಯ ಮೊಬೈಲ್ ನಂಬರನ್ನೂ ಕೊಟ್ಟುಹೋದನವ. ಈ ಕೊನೆಯ ವ್ಯಕ್ತಿ ಯಾರೆಂದು ತಿಳಿಯಿತೇ? ದಾಖಲೆಗಳನ್ನು ಹೊಂದಿದವನ ಮಿತ್ರ :-) ಪರವಾಗಿಲ್ಲ ಬಿಡಿ, ನನಗೂ ಮೊದಲಿಗೆ ಇಷ್ಟೆಲ್ಲಾ ಉದ್ದದ ಕೊಂಡಿಗಳನ್ನು ನೋಡಿ ಕನ್ಫ್ಯೂಶನ್ ಆದದ್ದಂತೂ ನಿಜ. ಈ ವ್ಯಕ್ತಿಪರಿಚಯಗಳನ್ನು ತುಸು ಸರಳೀಕರಿಸೋಣ (ಹೆಸರುಗಳನ್ನೆಲ್ಲಾ ಬದಲಾಯಿಸಲಾಗಿದೆ)

ಜಾರ್ಜ್: ದಾಖಲೆಗಳನ್ನು ಹೊಂದಿದವನು, ಇಡುಕ್ಕಿಯ ನಿವಾಸಿ
ರವಿ: ಜಾರ್ಜ್‍ನ ಮಿತ್ರ, ಇಡುಕ್ಕಿಯ ನಿವಾಸಿ
ಸುಹಾಸ: ರವಿಯ ಸಂಬಂಧಿ, ಕಾಸರಗೋಡಿನಲ್ಲಿ ಪಿ.ಡಬ್ಲ್ಯು.ಡಿ. ಉದ್ಯೋಗಿ
ರಾಜ: ಸುಹಾಸನ ಸಹೋದ್ಯೋಗಿ, ಮನೆಗೆ ಬಂದವನು ಇವನು

ಏನಾದರೂ ಪ್ರಶ್ನೆಗಳಿದ್ದರೆ ರವಿಯ ಬಳಿ ಮಾತನಾಡುವಂತೆ ರಾಜ ಸೂಚಿಸಿದ್ದ. ಅಲ್ಲಾ, ದಾಖಲೆಗಳನ್ನು ಹಿಂದಿರುಗಿಸಲು ಯಾರಾದರೂ ಇಷ್ಟೆಲ್ಲಾ ಕಷ್ಟಪಡುತ್ತಾರೆಯೇ? ಏನಿದೆಲ್ಲಾ ಎಂಬ ಕುತೂಹಲ, ಆತಂಕವುಂಟಾಯಿತು ನಮಗೆ. ಸರಿ, ಏನಿದ್ದರೂ ಈ ರವಿಗೆ ಕರೆನೀಡಿ ಮಾತನಾಡುತ್ತೇನೆ ಎಂಬ ನಿರ್ಧಾರಕ್ಕೆ ಬಂದೆ. ಹೆಚ್ಚು ತಡಮಾಡದೆ ಕರೆ ನೀಡಿದಾಗ ಸಂಭಾಷಣೆ ಹೆಚ್ಚುಕಡಿಮೆ ಹೀಗೆ ನಡೆಯಿತು (ಮುಖ್ಯ ಅಂಶಗಳನ್ನು ಮಾತ್ರ ಬರೆಯುತ್ತಿದ್ದೇನೆ):

ನಾನು: ರವಿಯವರಲ್ಲವೇ? ನಾನು ಕೃಷ್ಣ ಶಾಸ್ತ್ರಿ.
ರವಿ: ಓಹೋಹೋ, ಹೇಳಿ.
ನಾನು: ನನ್ನ ಪಾಸ್‍ಪೋರ್ಟ್ ಇತ್ಯಾದಿ ನಿಮಗೆ ಸಿಕ್ಕಿದ ವಿಚಾರ ಹಾಗೂ ಅದನ್ನು ವಾಪಸ್ ಪಡೆಯುವ ಬಗ್ಗೆ ಕರೆ ನೀಡಿದೆ. ನಿಮ್ಮವರೊಬ್ಬರು ಮನೆಗೆ ಬಂದಿದ್ದರು, ನಾನು ಅದಾಗಲೇ ಜಾರ್ಜ್ ಬಳಿಯೂ ಮಾತನಾಡಿಯಾಗಿದೆ, ಬಂದರೆ ಕೊಡುತ್ತೇನೆ ಎಂದು ಹೇಳಿದ್ದಾರೆ.

ಪುನಃ ರವಿಯ ಪ್ರಶ್ನೆಗಳಿದ್ದುವು - ಇದೆಲ್ಲಾ ಹೇಗಾಯಿತು ಎಂಬುದರ ಬಗ್ಗೆ, ತಾಳ್ಮೆಯಿಂದ ವಿವರಿಸಿದೆ. ಆಮೇಲೆ ರವಿ ತಾನು ಯಾರು ಎಂಬುದರ ಬಗ್ಗೆ ತುಸು ಕೊರೆದ, ಹಾಗೆ ವಿವರಿಸುವಾಗ ಜಾರ್ಜ್ ಇರುವ ಜಾಗ ಆಲ್ವೈ ಎಂದುಬಿಟ್ಟ.

ನಾನು: ಅರೆ! ಜಾರ್ಜ್ ಹೇಳಿದ್ದು ತಾನಿರುವುದು ಇಡುಕ್ಕಿಯಲ್ಲಿ ಎಂದು, ನೀವು ಆಲ್ವೈ ಎನ್ನುತ್ತೀರಲ್ಲಾ?
ರವಿ: ಜಾರ್ಜ್ ಇರುವುದು ಆಲ್ವೈಯಲ್ಲೇ, ಇಡುಕ್ಕಿಯಲ್ಲಲ್ಲ, ನಾನಿರುವುದು ಇಡುಕ್ಕಿಯಲ್ಲಿ.

ಸರಿ, ಪುನಃ ಜಾರ್ಜ್‍ಗೆ ಫೋನಾಯಿಸಿ ಏನಿದು ಎಂದು ವಿಚಾರಿಸೋಣ ಎಂದು ಸುಮ್ಮನಿದ್ದೆ

ರವಿ: ಜಾರ್ಜ್ ಅದನ್ನು ನೇರವಾಗಿ ನಿಮಗೆ ಕೊಡಲೂ ಬಹುದು, ಅಥವಾ ಕೊಡಲು ಸ್ವಲ್ಪ ಹೆದರಲೂ ಬಹುದು. ಕೊನೆಗೆ ನೀವು ಭಯೋತ್ಪಾದಕರೋ ಇನ್ನೇನೋ ಆಗಿರಬಾರದಲ್ಲಾ ಎಂದು ನಮಗೆ ಹೆದರಿಕೆ!
ನಾನು: ಅಯ್ಯೋ, ಅದೆಲ್ಲಾ ಹೆದರಿಕೆ ಬೇಡ, ಹಾಗೆಲ್ಲಾ ಇದ್ದರೆ ನೀವು ಪೋಲೀಸರಿಗೇ ಒಪ್ಪಿಸಿ, ನಾನು ಎಫ್.ಐ.ಆರ್. ಸಲ್ಲಿದ್ದಿದೆ, ಕಾನೂನಿನ ಪ್ರಕಾರವೆ ತೆಗೆದುಕೊಳ್ಳುತ್ತೇನೆ ಬಿಡಿ
ರವಿ: ಪರವಾಗಿಲ್ಲ ಬಿಡಿ, ನೀವು ಬನ್ನಿ, ನಿಮಗೆ ಕೊಡಿಸೋಣವಂತೆ.
ನಾನು: ಸರಿ, ಬರುತ್ತೇನೆ ಬಿಡಿ
ರವಿ: ಇದರ ಸುತ್ತ ಏನೂ ಕ್ಲಿಷ್ಟವಾದ ಕೇಸು ಇತ್ಯಾದಿಗಳೇನೂ ಇಲ್ಲ ತಾನೆ?
ನಾನು: ಹೇಳಿದೆನಲ್ಲಾ ಆಗಲೇ, ಇದೊಂದು ಸರಳವಾದ ಬ್ಯಾಗ್ ಕಳ್ಳತನದ ಪ್ರಕರಣ
ರವಿ: ಸರಿ, ನೀವು ಚಿಂತೆ ಮಾಡಬೇಡಿ, ನಿಮಗೆ ಬೇಕಿದ್ದರೆ ಇಡುಕ್ಕಿಗೆ ಬಂದು ನನ್ನನ್ನು ಜೊತೆಗೆ ಕರೆದುಕೊಂಡು ಆಲ್ವೈಗೆ ಹೋಗಿ, ನಾನು ಜಾರ್ಜ್‍ನ ಕೈಯಿಂದ ಅವನ್ನು ನಿಮಗೆ ಕೊಡಿಸುತ್ತೇನೆ

ಇದೆಲ್ಲಿಂದ ಬಂದ ಇನ್ನೊಬ್ಬ ಬ್ರೋಕರ್ ಎಂದು ಕಿರಿಕಿರಿಯಾಯಿತು.

ನಾನು: ಅದು ಸರಿ ನೀವೇನು ಮಾಡುತ್ತಿದ್ದೀರಿ?
ರವಿ: ನಾನೊಬ್ಬ ಕೃಷಿಕ
ನಾನು: ಸರಿ, ಬೇಕಿದ್ದರೆ ನಿಮಗೆ ಕರೆ ನೀಡುತ್ತೇನೆ, ಧನ್ಯವಾದ

ಹೀಗಂದು ಸಂಭಾಷಣೆ ಮುಗಿಸಿದೆ.

ನನಗೆ ಅರೆಬರೆ ಮಲಯಾಳ ಮಾತನಾಡಲು ಬರುವುದಾದರೂ ಈ ದಕ್ಷಿಣ ಕೇರಳದವರ ಮಲಯಾಳ ಮಾತನಾಡುವ ರೀತಿ ಕಾಸರಗೋಡಿನವರದ್ದಕ್ಕಿಂತ ವ್ಯತ್ಯಸ್ಥ, ಹೀಗಾಗಿ ಸಂಭಾಷಣೆಯಲ್ಲಿ ಶೇಕಡಾ ನೂರರಷ್ಟು ಸ್ಪಷ್ಟತೆ ಇರುವುದಿಲ್ಲ. ಅತ್ಯಂತ ಗಮನವಿತ್ತು ಸಂಭಾಷಣೆಯನ್ನು ಹೇಗೋ ಅರ್ಥಪೂರ್ಣವಾಗಿ ಮುಗಿಸಿದೆ. ನೋಡಿ, ಪಾಸ್‍ಪೋರ್ಟ್ ಕಳೆದುಹೋದರೆ ಅದು ಸಿಕ್ಕಿದವರು ನಮ್ಮನ್ನೇ ಆತಂಕವಾದಿಗಳು ಎಂದು ಭಾವಿಸುವ ಸಾಧ್ಯತೆ ಇದೆ ಎಂಬುದನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಿ!

ವಿ.ಸೂ. ಆತಂಕ ಇರುವವರೂ ಆತಂಕವಾದಿಗಳೇ ಎಂದು ನೀವು ತಮಾಷೆ ಮಾಡಿದರೆ ನನಗಿಷ್ಟವಾಗುವುದಿಲ್ಲ, ಮೊದಲೇ ಹೇಳುತ್ತಿದ್ದೇನೆ :-)

ಭಾಗ ೧೨ - ಹೆಚ್ಚಿದ ನಿಗೂಢತೆ, ಆತಂಕ

ಆಮೇಲೆ ಗೂಗಲ್ ನಕ್ಷೆ ತೆರೆದು ನೋಡಿದಾಗ ತಿಳಿಯಿತು - ಇಡುಕ್ಕಿ ಹಾಗೂ ಆಲ್ವೈ ನೂರಕ್ಕೂ ಹೆಚ್ಚು ಕಿ.ಮೀ. ದೂರದಲ್ಲಿರುವುದು ಎಂದು. ಇದೊಳ್ಳೆ ಕರ್ಮ ಆಯಿತಲ್ಲಾ? ರವಿಯನ್ನು ಕರೆದುಕೊಂಡು ಜಾರ್ಜ್ ಬಳಿ ಹೋಗುವುದೆಂದರೆ ಅದಕ್ಕೆಂದೇ ಪ್ರತ್ಯೇಕವಾಗಿ ವಾಹನದ ವ್ಯವಸ್ಥೆ ಮಾಡಬೇಕಾದೀತು, ಅದೆಲ್ಲಾ ಬೇಡ ಪುನಃ ಜಾರ್ಜ್ ಜೊತೆ ಮಾತನಾಡಿ ನೋಡೋಣ ಎಂದು ಅವನಿಗೆ ಕರೆನೀಡಿದೆ. ಅವನ ಕಡೆಯವರೊಬ್ಬರು ಮನೆಗೆ ಬಂದಿದ್ದರ ಬಗ್ಗೆ, ರವಿಯ ಜೊತೆ ಮಾತನಾಡಿದ್ದರ ಬಗ್ಗೆ ಜಾರ್ಜ್ ಬಳಿ ಮಾತನಾಡಿದೆ - ನೀನಿರುವುದು ಆಲ್ವೈಯಲ್ಲಿಯೇ ಎಂದಾಗ ಹೌದು ಎಂದುಬಿಟ್ಟ! ಸರಿಯಪ್ಪಾ, ನಾನು ಬಂದು ದಾಖಲೆಗಳನ್ನು ನಿನ್ನ ಬಳಿಯಿಂದ ನೇರವಾಗಿ ತೆಗೆದುಕೊಳ್ಳಬಹುದೇ ಎಂದಾಗ ಏನೂ ಚಿಂತೆ ಇಲ್ಲದೆ ಸರಿ ಎಂದನವ, ಖುಷಿಯಾಯಿತು. ಇನ್ನು ರವಿಗೆ ಕರೆ ನೀಡುವುದಿಲ್ಲ ಎಂದು ನಿರ್ಧರಿಸಿದೆ.

ಸಾಧ್ಯವಾದರೆ ಆದಿತ್ಯವಾರ ಸಂಜೆ ಹೋಗುವುದೆಂದು ಅಷ್ಟರಲ್ಲಿ ನಿರ್ಧರಿಸಿಯಾಗಿತ್ತು. ಹೀಗಾಗಿ ಜಾರ್ಜ್ ಬಳಿ ಕೇಳಿದೆ, ಸೋಮವಾರ ಬೆಳ್ಳಂಬೆಳಿಗ್ಗೆ ಬಂದರೆ ತೊಂದರೆ ಇಲ್ಲವೇ ಎಂದು, ಆಸಾಮಿ ಅದಕ್ಕೂ ಸೈ ಎಂದ, ಬೆಳಿಗ್ಗೆ ಐದು ಘಂಟೆಗೆ ಬರುತ್ತೇನೆಂದರೂ ಕೂಡ! ಸ್ವಲ್ಪ ಹೊತ್ತು ಹೋಟೇಲಿನಲ್ಲಿದ್ದು ಎಂಟೊಂಬತ್ತು ಘಂಟೆಗೆ ಬರಬೇಕಾ ಎಂದರೆ ಅವೆಲ್ಲಾ ಬೇಕಾಗಿಲ್ಲ, ಎಷ್ಟು ಹೊತ್ತಿಗಾದರೂ ಬನ್ನಿ ಎಂದನವ. ಸರಿ, ನಿನ್ನ ವಿಳಾಸ ಎಸ್.ಎಮ್.ಎಸ್. ಮಾಡು ಮಾರಾಯಾ ಎಂದರೆ ನನಗೆ ಇನ್ನೊಂದು ಶಾಕ್ – “ಎಸ್.ಎಮ್.ಎಸ್. ಎನೂ ಬೇಡ, ನೀವು ಬನ್ನಿ, ರೈಲು ನಿಲ್ದಾಣದಿಂದ ಕರೆ ನೀಡಿ, ವಿಳಾಸ ನೀಡುತ್ತೇನೆ” ಎಂದ. ವಿಷಯ ನಿಧಾನವಾಗಿ ಪುನಃ ಜಟಿಲವಾಗುತ್ತಾ ಸಾಗಿತ್ತು. ಅದಕ್ಕೇನು ಹೇಳಬೇಕು ಎಂದು ತೋಚದೆ ಸರಿಯಪ್ಪಾ ಎಂದು ಫೋನಿಟ್ಟೆ.

ಈಗ ಒಂದು ಸಾಧ್ಯತೆ ನಿಚ್ಚಳವಾಗಿ ಕಾಣತೊಡಗಿತು - ಬಹುಷಃ ಒಳ್ಳೆಯ ಕೆಲಸ ಮಾಡಬೇಕೆಂದಿದ್ದರೂ ಕೂಡ ಅವರೂ ಹೆದರಿಕೊಂಡಿದ್ದಾರೆ, ಅಥವಾ ಅನಗತ್ಯವಾಗಿ ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಲು ಇಷ್ಟಪಡುವುದಿಲ್ಲ ಎಂಬುದು. ಆದರೆ ಇವೆಲ್ಲಾ ಒಂದು ವರ್ಣರಂಜಿತ ಕಥೆಯಾಗಿರಬಹುದಲ್ಲವೇ? ಹೀಗಾಗಿ ಮನೆಯವರೆಲ್ಲರಿಗೂ ಇದರಿಂದ ಆತಂಕ ತುಸು ಹೆಚ್ಚಿತು. ಕೊನೆಗೆ ನಾನೇ ಅವರನ್ನು ಸಮಾಧಾನಿಸಿದೆ, ಹೇಗಿದ್ದರೂ ಇಬ್ಬರು ಹೋಗುತ್ತಿದ್ದೇವಲ್ಲಾ, ಅವನು ಯಾವ ವಿಳಾಸ ಹೇಳುತ್ತಿದ್ದಾನೋ ನೋಡಿಕೊಂಡು ಮುಂದಿನ ಹೆಜ್ಜೆ ಇಡೋಣವಂತೆ ಎಂದು. ನಮ್ಮ ಬಳಿ ಕೆಲವಾರು ಯೋಜನೆಗಳಿದ್ದುವು:

- ರೈಲು ನಿಲ್ದಾಣದಿಂದ ಇಳಿದ ಮೇಲೆ ಅವನ ವಿಳಾಸ ಸಿಕ್ಕಿದ ಮೇಲೆ ಮನೆಗೆ ಕರೆ ನೀಡಿ ಹೇಳುವುದು, ಕೊನೆಗೆ ರಂಗಪ್ರವೇಶ ಮಾಡುವ ಮೊದಲು ಕೂಡ ಒಮ್ಮೆ ಮನೆಗೆ ಕರೆ ಮಾಡುವುದು, ನಿರ್ದಿಷ್ಟ ಸಮಯವೊಂದನ್ನು ನಿಗದಿ ಮಾಡುವುದು, ಅದರೊಳಗೆ ನಮ್ಮ ಕ್ಷೇಮ ಸಮಾಚಾರ ತಿಳಿಯದಿದ್ದರೆ ಆಲ್ವೈಯ ಪೋಲೀಸರಿಗೆ ಕರೆ ನೀಡಿ ಅಲ್ಲಿಗೆ ಕಳುಹಿಸುವುದು (ನಮ್ಮ ರಕ್ಷಣೆಗೆ!)

- ಯಾವುದಾದರೂ ಕಟ್ಟಡದೊಳ ಹೋಗುವುದಿದ್ದರೆ ನವೀನಣ್ಣ ನನ್ನೊಂದಿಗೇ ವಿಳಾಸದ ತನಕ ಬರದೆ ತುಸು ದೂರವೇ ಉಳಿದುಕೊಳ್ಳುವುದು, ಅರ್ಧ-ಒಂದು ಕಿ.ಮೀ. ದೂರದಲ್ಲಿ. ನಿಗದಿತ ಸಮಯೊಳಗೆ ನಾನು ವಾಪಸ್ ಬರದಿದ್ದಲ್ಲಿ ಅವನು ಪೋಲೀಸರಿಗೆ ತಿಳಿಸಿ ಅವರ ಸಹಾಯ ಪಡೆಯುವುದು

- ಕೊಟ್ಟ ವಿಳಾಸ ಎಲ್ಲೋ ಒಳಗೊಳಗೆ, ಜನನಿಬಿಡ ಪ್ರದೇಶವಲ್ಲ ಎಂದೆಲ್ಲಾ ಕಂಡರೆ ಮೊದಲೆ ಅಲ್ಲಿಯ ಸ್ಥಳೀಯ ಪೋಲೀಸರಿಗೆ ತಿಳಿಸಿ ಅವರೊಂದಿಗೇ ಹೋಗುವುದು

ಮೊದಲೇ ಪೋಲೀಸರಿಗೆ ತಿಳಿಸುವುದು ನಿಜಕ್ಕೂ ಸರಿಯಾದ ದಾರಿ, ಆದರೆ ನಾವು ಧರ್ಮಸಂಕಟಕ್ಕೀಡಾಗಿದ್ದೆವು ಕೂಡ. ಅವರು ಪೋಲೀಸರಿಂದ ದೂರ ಉಳಿಯಬೇಕೆಂದು ಅಷ್ಟೆಲ್ಲಾ ಮಾಡುತ್ತಿರಬೇಕಾದರೆ ಒಂದು ಪಕ್ಷ ಅವರು ಒಳ್ಳೆಯವರೇ ಆಗಿದ್ದರೆ ಅವರ ಸದುದ್ದೇಶಕ್ಕೆ ಮಸಿ ಬಳೆದಂತಾಗುತ್ತದೆ ಎಂಬುದು ನಮ್ಮ ವಿಚಾರವಾಗಿತ್ತು. ಇರಲಿ, ಅನೇಕ ಮುಂಜಾಗರೂಕತೆಗಳನ್ನು ವಹಿಸಿಕೊಳ್ಳುತ್ತಿದ್ದೇವಲ್ಲಾ ಎಂದು ಸಮಾಧಾನಪಟ್ಟುಕೊಂಡೆವು.

ಕೊನೆಗೆ ಆದಿತ್ಯವಾರ ರಾತ್ರಿಯ ರೈಲು ಸಿಗಲಿಲ್ಲ, ಸೋಮವಾರ ಬೆಳಿಗ್ಗೆ ಐದೂವರೆಗೆ ಹೊರಟು ಮಧ್ಯಾಹ್ನ ಒಂದೂವರೆಗೆ ಆಲ್ವೈ ತಲುಪುವಂತಹ ರೈಲು ಸಿಕ್ಕಿತು. ಪುನಃ ಜಾರ್ಜ್‌ಗೆ ಕರೆ ನೀಡಿ ತಿಳಿಸಿದಾಗ ಅವನು ಅದಕ್ಕೂ ಸರಿ ಎಂದ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ? ವಾಪಸ್ ಬರಲು ಸೋಮವಾರ ರಾತ್ರಿಯ ರೈಲಿನಲ್ಲಿ ಸೀಟು ಕಾದಿರಿಸಿದೆವು.

ಅಲ್ಲಿಗೆ ಆರನೆಯ ದಿನಾಂತ್ಯವಾಯಿತು, ವ್ಯೂಹ ಸನ್ನದ್ಧರಾದ ನಾವು ನಿದ್ರಾದೇವಿಗೆ ಶರಣಾದೆವು.

ಭಾಗ ೧೩ - ಏಳನೆಯ ದಿನ: ಹೆಚ್ಚಿದ ಭುಜಬಲ, ಧೈರ್ಯ

ನಮ್ಮ ಪರಿಚಯದವರೊಬ್ಬರು ಮಲಯಾಳಿ, ಅವರಿಗೆ ಕೇರಳದ ಉದ್ದಗಲದಲ್ಲಿ ಅನೇಕ ಬಂಧುಮಿತ್ರರಿದ್ದಾರೆ. ನಮ್ಮಿಂದ ವಿಷಯವನ್ನೆಲ್ಲಾ ತಿಳಿದ ಅವರು ತಕ್ಷಣ ನಮಗೊಂದು ಸಹಾಯ ಮಾಡಿದರು – “ಆಲ್ವೈಯಲ್ಲಿ ನನಗೆ ಪರಿಚಯವುಳ್ಳವನೊಬ್ಬನಿದ್ದಾನೆ, ನೀವು ವಿಳಾಸ ನೀಡಿ, ಹೋಗುವ ಮೊದಲು ಒಮ್ಮೆ ಸಣ್ಣ ಪತ್ತೇದಾರಿ ಮಾಡಿಸುತ್ತೇನೆ, ಮಾತ್ರವಲ್ಲ, ಅಲ್ಲಿಗೆ ಹೋಗುವಾಗ ಅವನೇ ನಿಮ್ಮನ್ನು ಕಾರಿನಲ್ಲಿ ಕರೆದುಕೊಂಡು ಹೋಗಲಿ, ಅಗತ್ಯಬಿದ್ದರೆ ಗಟ್ಟಿಗತನ ತೋರುವ ತಾಕತ್ತುಳ್ಳವನು ಅವನು” ಎಂದು ನನ್ನ ತಂದೆಯ ಬಳಿ ಹೇಳಿದರವರು. ವಿಳಾಸ ನಮ್ಮ ಬಳಿ ಇರಲಿಲ್ಲ, ಆದರೆ ಅವರನ್ನು ನಮ್ಮೊಡನೆ ಕರೆದುಕೊಂದು ಹೋಗುವುದು ಎಂದು ನಿರ್ಧರಿಸಿದೆವು ನಾವು. ಅವರಿಗೊಂದು ಐನೂರು ರೂ. ಕೊಟ್ಟರೆ ಸಾಕು ಎಂಬ ಮಾತುಕತೆಯಾಯಿತು ನಮ್ಮ ಪರಿಚಯಸ್ಥರೊಡನೆ.

ಮತ್ತೊಂದು ವಿಷಯವೆಂದರೆ ನನ್ನ ವಕೀಲ ಮಿತ್ರ ಇನ್ನೊಂದು ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದು – ಅವನ ಒಳ್ಳೆಯ ಮಿತ್ರನೊಬ್ಬನು ಅದೇ ಪರಿಸರದಲ್ಲಿ ಕ್ರಿಮಿನಲ್ ಲಾಯರ್ ಎಂದೂ ನಾವು ಧಾರಾಳವಾಗಿ ಅವನ ಸಹಾಯ ಯಾಚಿಸಬಹುದೆಂದೂ ಹೇಳಿದನು. ಕ್ರಿಮಿನಲ್ ಲಾಯರ್ ಎಂದರೆ ಪೋಲೀಸರ ಜೊತೆ ದಿನವೂ ವ್ಯವಹರಿಸುವವರು, ಇದನ್ನು ಕೇಳಿ ನನಗೆ ತುಂಬಾ ಖುಷಿಯಾಯಿತು. ಆ ಮಿತ್ರನ ಸಂಪರ್ಕ ಮಾಹಿತಿಯನ್ನು ಕೇಳಿ ತೆಗೆದಿರಿಸಿಕೊಂಡೆ, ಅಗತ್ಯ ಬಿದ್ದರೆ ಮಾತ್ರ ಉಪಯೋಗಿಸುವ ಯೋಜನೆಯೊಂದಿಗೆ.

ಈ ಎರಡೂ ಆಯುಧಗಳು ನಮ್ಮ ಬತ್ತಳಿಕೆ ಸೇರಿದ ಬಳಿಕ ನಮಗೆ ಆನೆಯ ಬಲ ಸಿಕ್ಕಿದಂತಾಯಿತು. ಮರುದಿನ, ಅಂದರೆ ಆದಿತ್ಯವಾರ ನಿರಾಳವಾಗಿ ನನ್ನ ಭಾವನ ಮದುವೆಗೆ ಹೋಗಿ ಬಂದೆ. ಆದಿತ್ಯವಾರ ನಡೆದ ಇನ್ನೊಂದು ಘಟನೆಯೆಂದರೆ ನವೀನಣ್ಣನಿಗೆ ಜ್ವರ ಎಂದು ಗೊತ್ತಾದದ್ದು – ಅವನಿಗೆ ಬರಲು ಸಾಧ್ಯವೇ ಇಲ್ಲವೇ ಎಂಬ ಚಿಂತೆ ಒಮ್ಮೆ ಮೂಡಿತ್ತು, ಆದರೆ ಆಲ್ವೈಯಲ್ಲಿ ಹೆಚ್ಚಿನ ಸಹಾಯಕ್ಕೆ ಇತರರು ಇರುವುದು ಗೊತ್ತಿದ್ದ ಕಾರಣ ಮನಸ್ಸು ಹೆಚ್ಚು ಕಳವಳಗೊಳ್ಳಲಿಲ್ಲ, ದಿನಾಂತ್ಯದಂದು ನವೀನಣ್ಣ ಹುಶಾರಾಗಿ ಹೊರಟು ಕಾಸರಗೋಡಿಗೆ ಬಂದದ್ದೂ ಆಯಿತು.

ಮುಂದಕ್ಕೇನು ನಡೆಯಿತು? ನಾವು ಆಲ್ವೈಗೆ ತೆರಳಿದಾಗ ನಮ್ಮನ್ನು ಎಂತಹ ಜಾಗಕ್ಕೆ ಕರೆಯಿಸಿದರು? ಅಲ್ಲಿ ನಮಗೆ ಸಿಕ್ಕಿದ್ದಾದರೂ ಯಾರು? ದಾಖಲೆಗಳು ನಮಗೆ ಸುಲಭವಾಗಿ ಸಿಕ್ಕಿದುವೇ ಅಥವಾ ಸಿನಿಮೀಯ ಶೈಲಿಯಲ್ಲಿ ಡಿಶುಂ ಡಿಶುಂ ನಡೆಯಿತೇ ಅಥವಾ ಬಂದ ದಾರಿಗೆ ಸುಂಕ ಇಲ್ಲ ಎಂದು ವಾಪಸ್ಸಾದೆವೇ? ಇವೆಲ್ಲಾ ಮುಂದಿನ ಭಾಗಗಳಲ್ಲಿ.

ಮುಂದಿನ ಭಾಗ: ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು – ೫

2 comments:

  1. ಮುಂದಿನ ಭಾಗ(5) ಯಾವಾಗ ರಿಲಿಸ್ ಅಕ್ಕು.....??? ಭಾರೀ ಕುತೂಹಲ ...ಮೆಘಾ ಸಿರಿಯಲ್ ಮಾಡುದೋ ಇದರ...:)

    ReplyDelete
  2. aatanka mattu atankavaadigala bagegina vishesha suuchane tumbaa isthavaaytu haagu manasaare nakke.

    ReplyDelete