About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, July 3, 2012

ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು - ೩


ಹಾಸನದಿಂದ ಬೆಂಗಳೂರಿಗೆ ವೋಲ್ವೋ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ನಾವು ಬ್ಯಾಗೊಂದನ್ನು ಕಳೆದುಕೊಂಡದ್ದು, ಆಮೇಲೆ ಆರಕ್ಷಕಾ ಠಾಣೆಯಲ್ಲಿ ಆದ ಅನುಭವ, ಸ್ವಂತ ಪತ್ತೇದಾರಿ - ಈ ಬಗ್ಗೆ ಇದುವರೆಗೆ ಬರೆದಿದ್ದೆ.


ಮುಂದಿನ ಕೆಲವು ಭಾಗಗಳು ಇಲ್ಲಿವೆ, ತುಸು ದೀರ್ಘವಾಗಿದ್ದರೂ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುತ್ತದೆ ಎಂದು ನಂಬಿದ್ದೇನೆ. ನಿಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತವಿದೆ.

ಭಾಗ ೬ - ಆರಕ್ಷಕಾ ಠಾಣೆಯಲ್ಲಿ ನಡೆದ ಇನ್ನೊಂದು ಘಟನೆ

ಪೋಲೀಸರು ಹೇಳಿದ ಇನ್ನೊಂದು ಮಾತಿತ್ತು, ಅದನ್ನು ಈ ಮೊದಲು ಹೇಳಲು ಬಿಟ್ಟುಹೋಗಿತ್ತು. ಅವರು ಇದು ಕಳ್ಳತನವಲ್ಲ, ಅದಲು-ಬದಲಾದದ್ದೇ ಇರಬೇಕು ಎಂದು ಹೇಳುತ್ತಿದ್ದರು. ಅವರು ಕೊಟ್ಟ ಕಾರಣಗಳು ಇಂತಿದ್ದುವು.

- ಸಾಮಾನ್ಯವಾಗಿ ನಾನು ಬಂದ ರೂಟಿನಲ್ಲಿ ಇಂತಹ ಪ್ರಕರಣಗಳು ದಾಖಲಾಗುವುದಿಲ್ಲ
- ಬ್ಯಾಗಿನಲ್ಲಿ ಸಿಕ್ಕಿದ ಹ್ಯಾಕ್ ಸಾ ಬ್ಲೇಡ್, ಚಾಕು ಇತ್ಯಾದಿಗಳು ಕಳ್ಳರು ಉಪಯೋಗಿಸುವಂತದ್ದಲ್ಲ
- ಬ್ಯಾಗು ಕಳ್ಳರು ರಾತ್ರಿ ಬಸ್ಸುಗಳನ್ನು ಹೆಚ್ಚು ಇಷ್ಟಪಡುತ್ತಾರೆ, ಯಾಕೆಂದರೆ ಹಗಲು ಹೊತ್ತಿನಲ್ಲಿ ಜನರು ಗುರುತು ಹಿಡಿದು ಫಜೀತಿ ಆಗಬಹುದು ಎಂದು
- ಮಾತ್ರವಲ್ಲ, ಸಾಮಾನ್ಯವಾಗಿ ಅವರು ಪೂರ್ತಿ ಬ್ಯಾಗನ್ನು ಕದಿಯುವುದಿಲ್ಲ, ಬದಲಾಗಿ ರಾತ್ರಿ ಹೊತ್ತಿನಲ್ಲಿ ಸಮಯ ಸಿಕ್ಕಿದಾಗ ಇತರರ ಬ್ಯಾಗನ್ನು ತಡಕಾಡಿ ಅಮೂಲ್ಯ ವಸ್ತುಗಳೇನಾದರೂ ಸಿಕ್ಕಿದರೆ ಅದನ್ನು ಪಕ್ಕದಲ್ಲೇ ಇರುವ ತಮ್ಮ ಬ್ಯಾಗಿಗೆ ಹಾಕಿ ತಣ್ಣಗೆ ಕೂತುಬಿಡುತ್ತಾರೆ, ಆಮೇಲೆ ತಮ್ಮ ಬ್ಯಾಗನ್ನೇ ಎತ್ತಿಕೊಂಡು ಇಳಿದುಬಿಡುತ್ತಾರೆ. ಆಗ ಅವರನ್ನು ಹಿಡಿಯುವುದು ತುಂಬಾ ಕಷ್ಟವಾಗುತ್ತದೆ.

ತುಂಬಾ ಭರವಸೆಯಿಂದ ಪೋಲೀಸರು ಹೇಳಿದ ಈ ಮಾತುಗಳನ್ನು ಕೇಳಿ ಮೊದಲು ನಮಗೂ ಅನಿಸಿತ್ತು - ಅದಲು-ಬದಲಾದದ್ದೇ ಇರಬಹುದೇನೋ ಎಂದು. ಆಮೇಲೆ ಈ ನಂಬಿಕೆ ಉಳಿಯಿತೇ ಅಥವಾ ಕಳ್ಳತನವೆಂದು ಮನವರಿಕೆಯಾಯಿತೇ? ತಿಳಿಯಲು ಮುಂದಕ್ಕೆ ಓದಿ.

ಭಾಗ ೭ - ಇನ್ನೊಂದು ಆಘಾತ: ಡ್ರೈವಿಂಗ್ ಲೈಸೆನ್ಸ್

ಕೆಲವು ದಿನವಾದರೂ ಕಾಯುವುದು ಬಿಟ್ಟು ಹೆಚ್ಚೇನೂ ಮಾಡುವುದಿರಲಿಲ್ಲ ಎಂದು ಚಡಪಡಿಸಿ ಕಾಲ ಕಳೆಯುತ್ತಿದ್ದ ನಮಗೆ ನಾಲ್ಕನೆಯ ದಿನ ಇನ್ನೊಂದು ವಿಷಯ ತಿಳಿಯಿತು - ಬಹುಷಃ ನನ್ನ ಡ್ರೈವಿಂಗ್ ಲೈಸೆನ್ಸ್ ಕೂಡ ಆ ಬ್ಯಾಗಿನಲ್ಲಿತ್ತು ಎಂದು. ಯಾವತ್ತೂ ಅದನ್ನು ನನ್ನ ಪರ್ಸಿನಲ್ಲಿಯೇ ಇಟ್ಟುಕೊಂಡು ಓಡಾಡುವ ನಾನು ಒಂದೆರಡು ತಿಂಗಳು ಹಿಂದೆ ದುರದೃಷ್ಟಕ್ಕೆ ಅದನ್ನು ಒಂದು ಪ್ರತ್ಯೇಕ ಉದ್ದೇಶಕ್ಕಾಗಿ ತೆಗೆದು ಆ ಬ್ಯಾಗಿನಲ್ಲಿ ಹಾಕಿದ ನೆನಪು ಬಂತು. ಕಷ್ಟಗಳು ಹೆಚ್ಚಾದುವಲ್ಲಾ ಎಂದು ಕಳವಳವಾಯಿತು. ಅದನ್ನು ವಾಪಸ್ ಪಡೆಯಬೇಕೆಂದರೆ ಎಷ್ಟು ಸರ್ಕಸ್ ಮಾಡಬೇಕು ಅದೂ ಗೊತ್ತಿರಲಿಲ್ಲ - ಯಾಕೆಂದರೆ ಕಾರಿನ ಲೈಸೆನ್ಸ್ ಮಾಡಿಸಿದ್ದು ಕೇರಳದಲ್ಲಿ, ದ್ವಿಚಕ್ರದ್ದು ಕರ್ನಾಟಕದಲ್ಲಿ, ಹೀಗಾಗಿ ನಿಜಕ್ಕೂ ನನ್ನ ಲೈಸೆನ್ಸ್‍ನ ದಾಖಲೆಗಳು ಯಾವ ರಾಜ್ಯದವರ ಬಳಿ ಇದೆ ಎಂಬುದೂ ಗೊತ್ತಿರಲಿಲ್ಲ, ನಿಧಾನಕ್ಕೆ ಅದನ್ನು ನೋಡಿದರಾಯ್ತು ಎಂದು ಇಷ್ಟು ವರ್ಷ ಬಿಟ್ಟಿದ್ದೆ.

ಭಾಗ ೮ - ಐದನೆಯ ದಿನ: ಮೊಬೈಲ್ ಕರೆ

ಐದನೆಯ ದಿನ ಒಂದು ಅಚ್ಚರಿ ಕಾದಿತ್ತು. ರಾತ್ರಿ ಸುಮಾರು ಹನ್ನೊಂದೂ ಮುಕ್ಕಾಲರ ಹೊತ್ತಿಗೆ ಒಂದು ಚರವಾಣ ಕರೆ ನಮ್ಮನ್ನು ನಿದ್ರೆಯಿಂದೆಬ್ಬಿಸಿತು. ಕರೆ ಬಂದದ್ದು ಸ್ಮಿತಾಳ ಮೊಬೈಲಿಗೆ. ಮಾತು ಮುಂದುವರಿಯುತ್ತಿದ್ದಂತೆ ನನಗೂ ಸರಿಯಾಗಿ ಎಚ್ಚರವಾಯ್ತು, ಆ ಕಡೆಯಿಂದ ಏನು ಹೇಳುತ್ತಿದ್ದಾರೆ ಎಂಬುದು ಕೇಳುತ್ತಿರಲಿಲ್ಲವಾದರೂ ಸ್ಮಿತಾ ಮಾತಾಡುವುದನ್ನು ಕೇಳಿ ಯಾರಿಗೋ ನಮ್ಮ ವಸ್ತುಗಳು ಸಿಕ್ಕಿದೆ ಎಂಬ ಸೂಚನೆ ದೊರೆಯಿತು, ಮನಸ್ಸು ಅರಳಿತು. ಆಮೇಲೆ ಅವಳು ವಿಷಯ ಹೇಳಿದಳು - ಕರೆ ನೀಡಿದ್ದು ಅಮೇರಿಕನ್ ಎಕ್ಸ್‍ಪ್ರೆಸ್‍ ಗ್ರಾಹಕ ಸೇವಾ ವಿಭಾಗದವರು - ಒಬ್ಬರು ಮಹಿಳೆ ಅವರಿಗೆ ಕರೆ ನೀಡಿ ಕಳೆದುಹೋದ ಸ್ಮಿತಾಳ ಕಾರ್ಡಿನ ವಿವರಗಳನ್ನು ತಿಳಿಸಿದರಂತೆ, ಅದರೊಂದಿಗೆ ಪಾಸ್‍ಪೋರ್ಟ್ ಇತ್ಯಾದಿ ಕೂಡ ಇದ್ದುವಂತೆ, ಕರೆ ನೀಡಿದವರು ತಮ್ಮ ಚರವಾಣಿ ಸಂಖ್ಯೆಯನ್ನು ನೀಡಿದ್ದರು. ಆದರೆ ದುರದೃಷ್ಟವಶಾತ್ ಆ ಮಹಿಳೆ ಸಂಭಾಷಣೆ ನಡೆಸಿದ್ದು ತಮಿಳಿನಲ್ಲಿ, ಗ್ರಾಹಕ ಸೇವಾ ವಿಭಾಗದಲ್ಲಿ ತಕ್ಷಣವೇ ತಮಿಳು ಗೊತ್ತಿದ್ದವರು ಇಲ್ಲದ್ದರಿಂದ ಸಂಭಾಷಣೆ ಸಂಪೂರ್ಣವಾಗಿ ಸ್ಪಷ್ಟವಾಗಿರಲಿಲ್ಲ. ಇರಲಿ, ಕರೆ ನೀಡಿದ ವ್ಯಕ್ತಿಯ ಚರವಾಣಿ ಸಂಖ್ಯೆಯಾದರೂ ಸಿಕ್ಕಿತಲ್ಲಾ, ಅವರಿಗೆ ಧನ್ಯವಾದಗಳನ್ನರ್ಪಿಸಿ ನಾವು ತುಸು ಸಮಾಧಾನದಿಂದ ನಿದ್ರೆ ಮಾಡಿದೆವು.

ಭಾಗ ೯ - ಆರನೆಯ ದಿನ: ಅಜ್ಞಾತ ವ್ಯಕ್ತಿಯ ಜೊತೆ ಸಂಪರ್ಕ

ಮರುದಿನ ನಾನು ದೊಡ್ಡಪ್ಪ-ದೊಡ್ಡಮ್ಮನೊಂದಿಗೆ ವಾಪಸ್ ಊರಿಗೆ ಹೋಗುವುದಿತ್ತು. ಹೀಗಾಗಿ ಅಜ್ಞಾತ ವ್ಯಕ್ತಿಯ ಜೊತೆ ಸಂಪರ್ಕ ಸಾಧಿಸುವ ಕೆಲಸವನ್ನು ನಾನು ಸ್ಮಿತಾಳಿಗೆ ಕೊಟ್ಟೆ. ಬೆಂಗಳೂರಿನ ನಮ್ಮ ಮನೆಗೆ ಬರುವ ಕೆಲಸದವಳಿಗೆ ತಮಿಳು ಬರುತ್ತಿತ್ತು, ಹೀಗಾಗಿ ಅವಳ ಮೂಲಕ ಮಾತಾಡಿಸೋಣ ಎಂದಂದುಕೊಂಡೆವು. ನಾನು ಬೆಳಿಗ್ಗೆ ಐದೂವರೆಗೆ ಮನೆ ಬಿಟ್ಟಾಗಿತ್ತು, ಕೆಲವು ಘಂಟೆಗಳು ಕಳೆದ ಮೇಲೆ ಸ್ಮಿತಾ ನನಗೆ ಕರೆ ನೀಡಿ ಹೇಳಿದಳು - ಫೋನ್ ಮಾಡಿದ್ದಾಗ ಕರೆ ಸ್ವೀಕರಿಸಿದ್ದು ಒಬ್ಬ ಗಂಡಸು, ಹೆಂಗಸಲ್ಲ. ಮಾತ್ರವಲ್ಲ ಅವರು ಮಾತನಾಡುತ್ತಿದ್ದುದು ಮಲಯಾಳ ಎಂದು ತೋರುತ್ತದೆ, ತಮಿಳಲ್ಲ ಎಂದು. ಓ, ಅಮೇರಿಕನ್ ಎಕ್ಸ್‍ಪ್ರೆಸ್‍ನವರಿಗೆ ತಮಿಳು-ಮಲಯಾಳದ ವ್ಯತ್ಯಾಸ ಗೊತ್ತಾಗಿರಲಿಕ್ಕಿಲ್ಲ ಎಂದಂದುಕೊಂಡು ನಾನೇ ಮಾತನಾಡುತ್ತೇನೆ ಎಂದು ಹೇಳಿದೆ, ಹೇಗಿದ್ದರೂ ತಕ್ಕಮಟ್ಟಿಗೆ ಮಲಯಾಳ ಮಾತನಾಡಲು ಬರುತ್ತದಲ್ಲಾ.

ಸರಿ, ಸಕಲೇಶಪುರದ ಘಾಟಿಯ ಬಳಿ ಎಲ್ಲೋ ಒಂದು ಕಡೆ ಕಾರು ನಿಲ್ಲಿಸಿ ಆ ವ್ಯಕ್ತಿಗೆ ಕರೆ ನೀಡಿದೆ. ನಾವಂದುಕೊಂಡಂತೆ ಅವನು ಮಲಯಾಳಿಯೇ ಆಗಿದ್ದ. ಸುಶಿಕ್ಷಿತನಂತೆ ಮಾತನಾಡಿದ ಅವನು ನನಗೆ ತಿಳಿಸಿದ ವಿವರಗಳು ಇವು:

- ನನ್ನ ಪಾಸ್‍ಪೋರ್ಟ್, ನನ್ನ ಡ್ರೈವಿಂಗ್ ಲೈಸೆನ್ಸ್, ಸ್ಮಿತಾಳ ಪಾನ್ ಕಾರ್ಡು, ಬ್ಯಾಂಕು ಕಾರ್ಡುಗಳು ಮತ್ತಿತರ ಕೆಲವು ಸದಸ್ಯತ್ವ ಕಾರ್ಡುಗಳು ರಸ್ತೆಬದಿಯಲ್ಲಿ ಎಸೆಯಲ್ಪಟ್ಟಿತ್ತು, ಅವು ಆ ವ್ಯಕ್ತಿ ಹಾಗೂ ಅವನ ಪತ್ನಿಗೆ ಕಂಡು ಅದನ್ನವರು ಹೆಕ್ಕಿ ಇಟ್ಟುಕೊಂಡಿದ್ದರು
- ಇವೆಲ್ಲಾ ಸಿಕ್ಕಿದ್ದು ಕೇರಳದ ಎರ್ನಾಕುಳಂ ಬಳಿ, ಬೆಂಗಳೂರಿನಿಂದ ಸುಮಾರು ೫೦೦ ಕಿ.ಮೀ. ದೂರದಲ್ಲಿ, ತಾನಿರುವುದು ಇಡುಕ್ಕಿಯಲ್ಲಿ ಎಂದು ಹೇಳಿದನು
- ಬ್ಯಾಗು-ಕ್ಯಾಮರಾ-ಬಟ್ಟೆ-ತಿಂಡಿ ಅಂತವು ಏನೂ ಸಿಗಲಿಲ್ಲ

ಆಮೇಲೆ ಅವನು ಮಾತು ಮುಂದುವರಿಸಿ "ಇದನ್ನು ನಾನು ಲೆಕ್ಕಪ್ರಕಾರ ಪೋಲೀಸರಿಗೆ ಒಪ್ಪಿಸಬೇಕು, ಆದರೆ ಆಮೆಲೆ ಅದನ್ನು ನೀವು ವಾಪಸ್ ಪಡೆಯಲು ಹೆಣಗಾಡಬೇಕಾಗುತ್ತದೋ ಏನೋ ಎಂದು ಯೋಚಿಸಿ ನಿಮ್ಮನ್ನು ಖುದ್ದಾಗಿ ಸಂಪರ್ಕಿಸೋಣ ಎಂದುಕೊಂಡೆ. ನಿಮ್ಮ ಪಾಸ್‍ಪೋರ್ಟಿನಲ್ಲಿದ್ದ ವಿಳಾಸವನ್ನು ಹೇಳಿ ಕಾಸರಗೋಡಿನ ಅಂಚೆ ಕಛೇರಿಗೆ ಕರೆ ನೀಡಿ ನಿಮ್ಮ ಮನೆಯ ದೂರವಾಣಿ ಸಂಖ್ಯೆಯನ್ನು ಪಡೆದೆ, ಆದರೆ ಹತ್ತಾರು ಸಲ ಕರೆ ನೀಡಿದರೂ ಯಾರೂ ಕರೆ ಸ್ವೀಕರಿಸಲೇ ಇಲ್ಲ. ಕೊನೆಗೆ ಅಮೇರಿಕನ್ ಎಕ್ಸ್‍ಪ್ರೆಸ್ ಗ್ರಾಹಕ ಸೇವಾ ವಿಭಾಗಕ್ಕೆ ಕರೆ ನೀಡಿ ನಿಮ್ಮ ವಿವರಗಳನ್ನು ತಿಳಿಸಿದೆ" ಎಂದು ಹೇಳಿದನು. ಅಮ್ಮ ಯಾವಾಗಲೂ ಮನೆಯಲ್ಲಿಯೇ ಇರುತ್ತಾಳಲ್ಲಾ, ಯಾಕೆ ಕರೆ ಸ್ವೀಕರಿಸಲಿಲ್ಲ ಎಂದು ಯೋಚಿಸತೊಡಗಿದ ನಾನು ಯೋಚನೆಗಳನ್ನು ಅರ್ಧದಲ್ಲಿಯೇ ತುಂಡರಿಸಿ "ಜೋರು ಮಳೆಗಾಲ ಶುರುವಾಯಿತಲ್ಲಾ, ಫೋನ್ ಕೆಟ್ಟುಹೋಗಿರಬೇಕು" ಎಂದು ಮಾತು ಮುಂದುವರಿಸಿದೆ. ಮುಖ್ಯ ವಿಷಯ ಹೇಗಿದ್ದರೂ ಅದಾಗಿರಲಿಲ್ಲವಲ್ಲಾ.

ಆಮೇಲೆ ನಾನು ಅವನಲ್ಲಿ ವಿನಂತಿಸಿದೆ "ಸರಿ, ನಿಮಗೆ ಈಗ ಇದೆಲ್ಲಾ ಸಿಕ್ಕಿತಲ್ಲಾ, ತುಂಬಾ ಸಂತೋಷ ಹಾಗೂ ಧನ್ಯವಾದಗಳು. ಇವನ್ನು ದಯವಿಟ್ಟು ಪೋಸ್ಟಿನಲ್ಲಿ ಪಾಸ್‍ಪೋರ್ಟಿನಲ್ಲಿ ಇರುವ ವಿಳಾಸಕ್ಕೆ ಕಳುಹಿಸಬಲ್ಲಿರಾ? ಅದಕ್ಕೆ ಬೇಕಾಗುವ ವೆಚ್ಚವನ್ನೆಲ್ಲಾ ನಾನೇ ಕೊಡುತ್ತೇನೆ" ಎಂದು. ಅಲ್ಲಿಂದ ಶುರುವಾಯ್ತು ನೋಡಿ ಕಥೆಯಲ್ಲಿ ಮತ್ತೊಂದು ತಿರುವು. "ನನಗೆ ದುಡ್ಡೆಲ್ಲಾ ಬೇಡ, ನಿಮ್ಮ ಪರಿಚಯದವರು ಯಾರಾದರೂ ಎರ್ನಾಕುಳಂ ಬಳಿ ಇದ್ದಾರೆಯೇ? ಅವರು ಬಂದರೆ ನಾನು ಕೊಡುತ್ತೇನೆ, ಇಲ್ಲದಿದ್ದರೆ ನೀವೇ ಬನ್ನಿ ಸಾಧ್ಯವಾದರೆ, ನಾನು ಕೊಡುತ್ತೇನೆ" ಎಂದು ಹೇಳಿದ ಆತ. ಇದೊಳ್ಳೆ ಕಥೆಯಾಯಿತಲ್ಲಾ ಎಂದಂದುಕೊಂಡೆ ನಾನು. ಆದರೆ ಆ ಕ್ಷಣದಲ್ಲಿ ನಾನು ದಾಖಲೆಗಳು ಸಿಕ್ಕಿದ್ದೇ ದೊಡ್ಡದು ಎಂಬ ಸಂತಸದ ಭಾವನೆಯಲ್ಲಿದ್ದೆ, ಹೀಗಾಗಿ ಕಷ್ಟವಾದರೂ ಸರಿ ಹೋಗಿ ತೆಗೆದುಕೊಳ್ಳುವುದೇ ಉತ್ತಮ ಎಂದಂದುಕೊಂಡೆ. "ಸರಿ ಹಾಗಾದರೆ, ಒಂದೋ ನನ್ನ ಕಡೆಯಿಂದ ಒಬ್ಬರನ್ನು ಕಳುಹಿಸುತ್ತೇನೆ, ಇಲ್ಲಾ ಸಾಧ್ಯವಾದರೆ ನಾನೇ ಬರುತ್ತೇನೆ, ಎನಕ್ಕೂ ನಿಮಗೆ ವಿಷಯ ತಿಳಿಸುತ್ತೇನೆ" ಎಂದೆ ನಾನು. ಆಗ ಅವನು ಕೊನೆಗೆ "ನೀವು ಚಿಂತೆ ಮಾಡಬೇಡಿ, ಎಷ್ಟು ದಿನವಾದರೂ ತೊಂದರೆ ಇಲ್ಲ, ನಾನಿವನ್ನು ಜೋಪಾನವಾಗಿ ಇಡುತ್ತೇನೆ, ನೀವು ದ್ವಿಪ್ರತಿಗಳಿಗೆ ಅರ್ಜಿ ಸಲ್ಲಿಸುವ ಆವಶ್ಯಕತೆ ಇಲ್ಲ, ಮೂಲಪ್ರತಿಗಳನ್ನು ಬಂದು ತೆಗೆದುಕೊಂಡು ಹೋಗಿ" ಎಂದಂದು ಮಾತನ್ನು ಮುಗಿಸಿದನು. ಈ ಮಧ್ಯೆ ತಮಿಳು-ಮಲಯಾಳದ ಗಲಿಬಿಲಿ ಯಾಕೆ ಆಯಿತೆಂಬುದೂ ಗೊತ್ತಾಯಿತು - ಅವನ ಹೆಂಡತಿ ತಮಿಳಂತೆ, ಅವನು ಮಲಯಾಳಿಯಂತೆ. ಅವನ ಹೆಚ್ಚಿನ ವಿವರಗಳನ್ನು ಕೇಳಿದಾಗ ತಾನೋರ್ವ ಕೃಷಿಕನೆಂದೂ ತನ್ನ ಹೆಸರು ಜಾರ್ಜ್ (ಹೆಸರು ಬದಲಿಸಿದೆ) ಎಂದೂ ಹೇಳಿದನು.

ಭಾಗ ೧೦ - ವಿಷಯಗಳ ಪುನರಾವಲೋಕನೆ, ಸಂಶಯದ ಬೀಜದ ಮೊಳಕೆ

ಒಂದು ವಿಷಯವಂತೂ ಸ್ಪಷ್ಟವಾಗಿತ್ತು, ಬ್ಯಾಗು ಕದ್ದುಹೋದದ್ದೇ ಹೊರತು ಅದಲು-ಬದಲಾದದ್ದಲ್ಲ ಎಂದು. ಇನ್ನು ಬ್ಯಾಗು-ಕ್ಯಾಮರಾ ಇತ್ಯಾದಿಗಳು ಖಂಡಿತಾ ಸಿಗುವುದಿಲ್ಲ ಎಂಬುದೂ ಹೆಚ್ಚುಕಡಿಮೆ ಶತಃಸಿದ್ಧವಾಗಿತ್ತು. ಆದರೆ ಅವೆಲ್ಲಕ್ಕಿಂತಲೂ ಅಮೂಲ್ಯವಾದ ದಾಖಲೆಗಳು ಸಿಕ್ಕಿದುವಲ್ಲಾ ಎಂಬುದೇ ಸಮಾಧಾನದ ವಿಷಯವಾಗಿತ್ತು. ನಮ್ಮ ಆಸ್ಪತ್ರೆಗೆ ಸಂಬಂಧಪಟ್ಟಂತೆ ನಾನು ಶ್ರಮವಹಿಸಿ ಮಾಡಿದ ಕೆಲವು ಕಾಗದಪತ್ರಗಳೂ ಕಳೆದುಹೋಗಿದ್ದುವು, ಅವೂ ಇನ್ನು ಸಿಗುವ ಸಂಭವವಿರಲಿಲ್ಲ. ಕರೆ ನೀಡಿದವನು ಸಂಭಾವಿತನಂತೆಯೇ ತೋರಿದನು, ಹೀಗಾಗಿ ಮನಸ್ಸಿನಲ್ಲಿ ಮೊದಲಿಗೆ ಏನೂ ಸಂಶಯ ಹುಟ್ಟಲಿಲ್ಲ. ಖುದ್ದಾಗಿ ಬಂದು ತೆಗೆದುಕೊಂಡು ಹೋಗಲು ಹೇಳಿದ್ದು ತುಸು ಕಿರಿಕಿರಿ ಎನಿಸಿದರೂ ಕೂಡ ಅದು ಪರವಾಗಿಲ್ಲ ಎನಿಸಿತು. ಮನೆಗೂ ಫೋನಾಯಿಸಿ ಎಲ್ಲಾ ವಿವರಗಳನ್ನೂ ಅರುಹಿದೆ.

ಒಬ್ಬೊಬ್ಬರಿಗೇ ವಿಷಯವನ್ನು ಹೇಳುತ್ತಾ ಬಂದಂತೆ ಮಿಶ್ರ ಪ್ರತಿಕ್ರಿಯೆಗಳು ಬರತೊಡಗಿದುವು. ಒಟ್ಟಿನಲ್ಲಿ ಮುಂದಿನ ಕೆಲವು ಘಂಟೆಗಳಲ್ಲಿ ನಮ್ಮ ಮುಂದಿದ್ದ ಸಮೀಕರಣಗಳು ಇಂತಿದ್ದುವು:

- ಖುದ್ದಾಗಿ ಬರಲು ಹೇಳಿದ್ದರ ಹಿಂದೆ ಇರುವ ನಿಜವಾದ ಉದ್ದೇಶ ಏನು? ಹಣ ಕೇಳುವವನಿದ್ದಾನೆಯೇ? ಎಷ್ಟು ಕೇಳಬಹುದು? ಅವನು ಬೇಡ ಅಂದಿದ್ದು ಅಂಚೆವೆಚ್ಚಕ್ಕಿರಬಹುದು - ಆದರೆ ದೊಡ್ಡ ಬಹುಮಾನವನ್ನು ನಿರೀಕ್ಷಿಸುತ್ತಿರಬಹುದು.
- ಅಥವಾ ಅವನೇ ಕಳ್ಳರ ತಂಡದವನಾಗಿದ್ದು ಅಲ್ಲಿಗೆ ಹೋದಾಗ ಇನ್ನೂ ಹೆಚ್ಚಿನ ಸಮಸ್ಯೆಗಳು ಸೃಷ್ಟಿಯಾದರೆ? ಒಬ್ಬನೇ ಹೋಗುವುದು ಅಪಾಯ ಎಂಬುದು ಕೆಲವರ ಅಭಿಮತವಾಗಿತ್ತು, ನನ್ನ ಅಮ್ಮನಿಂದ ಮೊದಲ್ಗೊಂಡು.
- ಮಳೆಗಾಲ ಜೋರಾಗಿಯೇ ಶುರುವಾಗಿದೆ, ರಸ್ತೆಬದಿಯಲ್ಲಿ ಎಸೆದಿದ್ದರೆ ಎಲ್ಲವೂ ಒದ್ದೆಯಾಗಿ ಹೋಗಬೇಕಿತ್ತಲ್ಲವೇ? ಆ ದಾಖಲೆಗಳು ಯಾವ ಸ್ಥಿತಿಯಲ್ಲಿವೆ ಗೊತ್ತಿಲ್ಲ ಎಂಬುದು ನನ್ನ ತಂದೆ ಮುಂದಿಟ್ಟ ವಿಷಯ - ಹೇಗಿದ್ದರೂ ವಾಪಸ್ ಪಡೆಯುವುದು ಮುಖ್ಯ ಎಂದೂ ಅದನ್ನೀಗ ಪುನಃ ಕೇಳುವ ಅಗತ್ಯ ಇಲ್ಲ ಎಂದೂ ನಾನು ಅದನ್ನು ಬದಿಗಿರಿಸಿದೆ.
- ಸಂಶಯಪಟ್ಟು ಪೋಲೀಸರಿಗೆ ತಿಳಿಸಿದರೆ ಅಥವಾ ಪುನಃ ಆ ವ್ಯಕ್ತಿಗೆ ಕರೆ ನೀಡಿ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದರೆ ಕೊನೆಗೆ ನಾವು ದಾಖಲೆಗಳನ್ನು ಕಳೆದುಕೊಂಡರೇನು ಮಾಡುವುದು ಎಂಬ ಭಯವೂ ಇತ್ತು - ಅವನು ಕೇವಲ ಒಬ್ಬ ಹಿತಚಿಂತಕ, ಸಭ್ಯ ಎಂಬ ಸಾಧ್ಯತೆಯೂ ಇತ್ತು, ಅಲ್ಲವೇ? ಆದರೆ ನಾವು ಸಂಶಯ ವ್ಯಕ್ತಪಡಿಸಿದರೆ ಇವರ ಉಸಾಬರಿಯೇ ಬೇಡ ಎಂದು ಅವನು ಆ ದಾಖಲೆಗಳನ್ನು ನಾಶ ಮಾಡಿದರೆ ಎಂಬ ಹೆದರಿಕೆ ನಮಗಿತ್ತು.
- ಕಳ್ಳನೇ ಆಗಿದ್ದಲ್ಲಿ ಮೊಬೈಲ್ ನಂಬರಿನಿಂದ ಕರೆ ನೀಡಬಹುದೇ? ಅನಾಮಧೇಯನಾಗಿ ಯಾವುದೋ ಸಾರ್ವಜನಿಕ ಫೋನಿನ ಮೂಲಕ ಕರೆ ಮಾಡುತ್ತಿರಲಿಲ್ಲವೇ? ಆದರೆ ಆಗ ನಮಗೆ ವಾಪಸ್ ಮಾಡುವ ಅವಕಾಶ ಇಲ್ಲವಾಗುತ್ತದೆ - ದುರುದ್ದೇಶ ಇರುವವರು ಎಂಬುದೂ ಸಿದ್ಧವಾಗುತ್ತದೆ, ಒಳ್ಳೆಯವನ ಸೋಗು ಹಾಕುವುದು ಸಾಧ್ಯವಿಲ್ಲ. ಗುರುತು ಇಲ್ಲದ ಮೊಬೈಲ್ ನಂಬರ್ ಇರುವುದು ಸುಲಭಸಾಧ್ಯವೇ? ಅದೂ ಗೊತ್ತಿಲ್ಲ. ಇಂತಹ ಚಿಕ್ಕ ಪುಟ್ಟ ವಿಷಯಗಳಲ್ಲಿ ಇಷ್ಟೆಲ್ಲಾ ಮಾಡುವ ಕಳ್ಳರೂ ಇರುತ್ತಾರೆಯೇ ಎಂಬ ಪ್ರಶ್ನೆಯೂ ಇತ್ತು.

ಹೀಗೆಯೇ ಎರಡೂ ದಿಕ್ಕಿನಲ್ಲಿ ಆಲೋಚನೆ ಮಾಡುತ್ತಾ ನಮ್ಮ ಪತ್ತೇದಾರಿ ಬುದ್ಧಿಯನ್ನು ಖರ್ಚು ಮಾಡಿ ಸುಸ್ತಾದೆವು, ಏನಿದ್ದರೂ ಒಬ್ಬನೇ ಹೋಗುವುದಕ್ಕಿಂತ ಇನ್ನೊಬ್ಬರು ಜೊತೆಗಿದ್ದರೆ ಸೂಕ್ತ ಎಂದು ಪರಿಗಣಿಸಿ ನನ್ನ ದೊಡ್ಡಪ್ಪನ ಮಗ ನವೀನಣ್ಣನೂ ನನ್ನ ಜೊತೆಗೆ ಬರುವುದು ಎಂದು ನಿರ್ಧರಿಸಿದೆವು. ಸಹಾಯಕ್ಕೆ ಸದಾ ಸಿದ್ಧನಾಗುವ ಅವನು ಅದನ್ನು ತಾನೇ ಸೂಚಿಸಿದನು.

ಮುಂದಕ್ಕೇನು ನಡೆಯಿತು? ನಾವು ಖುದ್ದಾಗಿ ಅಲ್ಲಿಗೆ ಹೋದೆವೇ? ಅಲ್ಲಿ ಏನು ನಡೆಯಿತು? ನಮ್ಮನ್ನು ಸಂಪರ್ಕಿಸಿದವನು ನಿಜಕ್ಕೂ ಸಂಭಾವಿತನೇ? ಅಥವಾ ಕೆಟ್ಟವನಲ್ಲದಿದ್ದರೂ ತುಸು ಹಣರೂಪದ ಪ್ರತಿಫಲಕ್ಕೆ ಆಸೆಯಿಟ್ಟವನೇ? ಅಥವಾ ಬ್ಯಾಗು ಕದ್ದ ಕಳ್ಳನೇ? ಅಥವಾ ಇನ್ನೂ ದೊಡ್ಡ ವ್ಯವಸ್ಥಿತ ಜಾಲದಲ್ಲಿ ಭಾಗಿಯೇ? ಇವೆಲ್ಲಾ ಮುಂದಿನ ಭಾಗಗಳಲ್ಲಿ.

ಮುಂದಿನ ಭಾಗ: ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು – ೪

7 comments:

ashoka vardhana gn said...

ಠಾಂ ಡ ಢಾಂ ಎಂದು ಮನಸ್ಸಲ್ಲೇ ಮ್ಯೂಸಿಕ್ ಕೊಡುವಂತೆ ನಿಗೂಢವಾಗುತ್ತಾ ನಡೆದಿದೆ. ಸತ್ಯವೋ ಕಥೆಯೋ ಗೊಂದಲವಾಗುತ್ತಿದೆ. ಇದು ಹೇಗಾಯ್ತು - "ಐದನೆಯ ದಿನ ಒಂದು ಅಚ್ಚರಿ ಕಾದಿತ್ತು. ಬ್ಯಾಗು ಕಳೆದುಹೋಗಿ ೪೮ ಘಂಟೆಗಳು" ಕಳೆದದ್ದು ರಾತ್ರಿ ಒಂಬತ್ತರ ಸುಮಾರಿಗೆ ಎಂದೂ ದಿನ ಐದರ ಬೆಳಿಗ್ಗೆ ಲೆಕ್ಕಕ್ಕೆ ಹಿಡಿದರೂ ಗಂಟೆ ನೂರರ ಸಮೀಪವಿರಬೇಕಲ್ಲವೇ? ಮುಂದೆ?

ಕೃಷ್ಣ ಶಾಸ್ತ್ರಿ - Krishna Shastry said...

ಆಹಾ ಅಶೋಕವರ್ಧನರೇ! ಒಳ್ಳೆಯ ಕ್ಯಾಚ್. ಸಣ್ಣ ಕನ್ಫ್ಯೂಶನ್ ಆಗಿತ್ತು, ಗಡಿಬಿಡಿಯಲ್ಲಿ ತಿದ್ದಲು ಬಿಟ್ಟುಹೋಯ್ತು, ಸರಿಪಡಿಸಿದ್ದೇನೆ ಈಗ.

ಇದು ಸತ್ಯಕಥೆಯೇ, ಕಪೋಲಕಲ್ಪಿತವಲ್ಲ, ನಂಬಿ :-)

Ranjan said...

hehe.. Krishna ninna leelegalanu enu peelali? :) matte enthake Tvli bappa daravahiya haange munde hovthane iddu? Innu eshtu kanthu baaki iddu? :)

Ranjan said...

hehe.. Krishna ninna leelegalanu enu peelali? :) matte enthake Tvli bappa daravahiya haange munde hovthane iddu? Innu eshtu kanthu baaki iddu? :)

shivakiran k said...

krishnanna sakleshpura gatili mobil range sikkitha nigoge???yava service provider adu???ashcharya....

ಕೃಷ್ಣ ಶಾಸ್ತ್ರಿ - Krishna Shastry said...

@Ranjan: ಎಂತ ಮಾಡುದು ಮಾರಾಯಾ? ಮಾಡಿದ್ದುಣ್ಣೋ ಮಹಾರಾಯಾ ಹೇಳುವ ಹಾಂಗೆ ಅನುಭವಿಶೆಕ್ಕು ನೋಡು!

ಕೃಷ್ಣ ಶಾಸ್ತ್ರಿ - Krishna Shastry said...

@Shivakiran: ಎಲ್ಲಾ ಕಡೆ ಸಿಗ್ನಲ್ ಸಿಗಲಾರದೇನೋ, ನಾವು ನಿಲ್ಲಿಸಿದಲ್ಲಿ ಕ್ಷೀಣವಾಗಿ ಸಿಗ್ನಲ್ ಲಭ್ಯವಿತ್ತು - ಏರ್‌ಟೆಲ್

Post a Comment