About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, June 26, 2012

ವೋಲ್ವೋ ಬಸ್ಸಿನಲ್ಲಿ ಕಳೆದುಹೋದ ಬ್ಯಾಗು - ೧


ಭಾಗ - ಸಡಿಲುಗೊಂಡಿತು ಎಚ್ಚರ, ಕಾಣೆಯಾಯಿತು ಬ್ಯಾಗು

ಲೋಕದಲ್ಲಿ ಕಳ್ಳರು (ಅಥವಾ ಗೊತ್ತಿಲ್ಲದೇ ತಪ್ಪು ಮಾಡುವವರು) ಕೆಲವರೇ ಕೆಲವರಿರಬಹುದು, ಆದರೆ ಅವರು ಉಳಿದೆಲ್ಲರ ಮನಶ್ಶಾಂತಿ, (ಮನುಷ್ಯ-ಮನುಷ್ಯರ ಮಧ್ಯೆ ಇರುವ) ನಂಬಿಕೆಗಳನ್ನು ಕೆಡಿಸಿಬಿಡುತ್ತಾರೆ. ಎಷ್ಟೆಲ್ಲಾ ಲೋಕ-ಪ್ರಯಾಣಾನುಭವವಿದ್ದರೂ, ಎಷ್ಟೆಲ್ಲಾ ವಿಷಯ/ಜಾಗ/ಸನ್ನಿವೇಶಗಳಲ್ಲಿ ಎಚ್ಚರವಹಿಸಿದರೂ ಕೂಡ ಕೆಲವೊಮ್ಮೆ (ನಮ್ಮ ಅನುಕೂಲಕ್ಕಾಗಿ) ಎಚ್ಚರ ಸಡಿಲಿಸಿದರೆ ಜಗತ್ತು ಹೊಸ ಪಾಠಗಳನ್ನು ಕಲಿಸಿಕೊಡುತ್ತದೆ! ಮೊನ್ನೆ ಸ್ಮಿತಾ ಮತ್ತು ನಾನು ಆದಿತ್ಯವಾರ ಹಾಸನದಿಂದ ಬೆಂಗಳೂರಿಗೆ ಪ್ರಯಾಣಿಸುವಾಗ ಇಂತಹ ಒಂದು ಅನುಭವವಾಯಿತು. ಇದರ ಮೂಲಕ ನಾವು ಅನೇಕ ಪಾಠಗಳನ್ನೂ ಕಲಿತೆವು, ನಮ್ಮ ಅನುಭವಪರಿಧಿಯೂ ವಿಸ್ತಾರಗೊಂಡಿತು - ಇವು ನಿಮಗೂ ಸಹಾಯಕಾರಿಯಾಗಬಹುದೆಂಬ ನಂಬಿಕೆಯೊಂದಿಗೆ ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

ಬೆಳಗ್ಗೆ ಶ್ರವಣಬೆಳಗೊಳದ ಎರಡೂ ಬೆಟ್ಟಗಳನ್ನು ಹತ್ತಿ ಆಬಳಿಕ ಬೇಲೂರು-ಹಳೆಬೀಡುಗಳನ್ನು ಸಂದರ್ಶಿಸಿದ ನಾವು ಸಂಜೆ ಹಾಸನದಲ್ಲಿ ವೋಲ್ವೋ ಬಸ್ಸು ಹತ್ತಿದೆವು. ಘಂಟೆಗೆ ಎಂದಿದ್ದ ಬಸ್ಸು ಸುಮಾರು ಮುಕ್ಕಾಲು ಘಂಟೆ ತಡವಾಗಿ ಬಂದು ನಮ್ಮ ತಾಳ್ಮೆಯನ್ನು ಪರೀಕ್ಷಿಸಿತ್ತು. ಆದರೆ ಸೀಟು ಕಾಯ್ದಿರಿಸಿದ್ದರಿಂದ ಅದನ್ನು ಬಿಟ್ಟು ಇತರ ಬಸ್ಸುಗಳಿಗೆ ಹೋಗುವುದೂ ಸುಲಭವಿರಲಿಲ್ಲ. ಕೊನೆಗೆ ಬಸ್ಸು ಬಂದಾಗ ಉಸ್ಸಪ್ಪಾ ಎಂದು ಹತ್ತಿ ಕುಳಿತೆವು. ನಮ್ಮ ಬಳಿ ಹೆಗಲಿಗೆ ಹಾಕುವಂತಹ ಎರಡು ಬ್ಯಾಗುಗಳಿದ್ದುವು, ಒಂದರಲ್ಲಿ ಕೆಲವು ಮುಖ್ಯವಾದ ವಸ್ತುಗಳೂ ಇದ್ದುವು. ಯಾಕೋ ಏನೋ ಮೊದಲಿಗೆ ಕಾಲಿನ ಬಳಿ ಬ್ಯಾಗುಗಳನ್ನು ಇಡುವ ಬಗ್ಗೆ ಆಲೋಚಿಸಿ ಕೊನೆಗೆ ಮೇಲೆ ಇರಿಸಿದೆವು, ಮೊದಲನೆಯ ತಪ್ಪು.

ತುಸುಹೊತ್ತಿನಲ್ಲಿಯೇ ಚೆನ್ನರಾಯಪಟ್ಟಣದ ಕಾಮತ್ ಉಪಚಾರದ ಬಳಿ ಬಸ್ಸಿನ ನಿಲುಗಡೆಯಾಯಿತು. ಮೊದಲು ನಾನು ಅಂತಹ ಸಂದರ್ಭಗಳಲ್ಲಿ ಬಸ್ಸು ಇಳಿದು ಹೆಚ್ಚು ದೂರ ಹೋಗುತ್ತಿರಲಿಲ್ಲ, ಹೋದರೂ ಸಾಕಷ್ಟು ಬೇಗನೇ ವಾಪಸ್ಸಾಗುತ್ತಿದ್ದೆ. ಮೊನ್ನೆ ಯಾಕೋ ಅಷ್ಟಾಗಿ ಚಿಂತೆ ಮೂಡಲಿಲ್ಲ. ಸಾಮಾನ್ಯವಾಗಿ ವೋಲ್ವೋ ಬಸ್ಸುಗಳಲ್ಲಿ ಕಳ್ಳತನದ ಪ್ರಕರಣಗಳು ಕಡಿಮೆಯಿರುತ್ತವೆ ಎಂಬ ಒಂದು ನಂಬಿಕೆ. ಹೀಗಾಗಿ ನಿಧಾನಕ್ಕೆ ಸಹಪ್ರಯಾಣಿಕರ ಬಗ್ಗೆ ನಂಬಿಕೆ ಬೆಳೆಯುತ್ತಾ ಹೋಗಿ ನಿಶ್ಚಿಂತೆಯಿಂದ ಪ್ರಯಾಣಿಸುವ ಅಭ್ಯಾಸ ಮೈಮನಸ್ಸಿಗೆ ಹತ್ತಿಹೋಗತೊಡಗಿತ್ತು ಎಂದರೆ ಅತಿಶಯೋಕ್ತಿಯಲ್ಲ. ಮಾತ್ರವಲ್ಲ ಬಸ್ಸಿನ ನಿರ್ವಾಹಕರುಎಲ್ಲರೂ ಇಳಿಯಿರಿ, ಬಾಗಿಲು ಹಾಕುತ್ತೇನೆಎಂಬುದಾಗಿ ಹೇಳುತ್ತಿದ್ದುದನ್ನು ನೋಡಿದರೆ ಸುರಕ್ಷತೆಯ ಬಗ್ಗೆ ಹೆಚ್ಚಿನ ಭರವಸೆ ಮೂಡಿತ್ತು. ಆದರೆ ಒಂದಿಬ್ಬರು ಇಳಿಯದೇ ಇದ್ದುದರಿಂದಾಗಿ ಕೊನೆಗೆ ಬಾಗಿಲು ಹಾಕಲಿಲ್ಲ ಎಂಬುದು ಅಂತಿಮವಾಗಿ ನಡೆದ ಸಂಗತಿ, ಆಗ ಮನಸ್ಸು ಎಚ್ಚರಗೊಳ್ಳಲಿಲ್ಲ, ಎರಡನೆಯ ತಪ್ಪು.

ಅಂತಹ ಸಂದರ್ಭಗಳಲ್ಲಿ ಬಸ್ಸಿನಲ್ಲಿ ವಾತಾನುಕೂಲಿ ವ್ಯವಸ್ಥೆಯನ್ನೂ ನಿಲ್ಲಿಸಿರುತ್ತಾರೆ, ಮಾತ್ರವಲ್ಲ ಕಿಟಕಿಗಳನ್ನೂ ತೆರೆಯುವಂತಿಲ್ಲ- ಹದಿನೈದು ನಿಮಿಷಗಳ ಕಾಲ ಅಂತಹ ಸ್ಥಿತಿಯಲ್ಲಿ ಒಳಗೆ ಕೂರುವುದು ಕೂಡ ಕಿರಿಕಿರಿ. ಇವೆಲ್ಲಾ ಕಾರಣಗಳಿಂದ ನಾವು ಕೂಡ ತುಸು ಅಡ್ಡಾಡಲೆಂದು ಬಸ್ಸಿಳಿದೆವು, ಆದರೆ ಬ್ಯಾಗುಗಳನ್ನು ಹೆಗಲಿಗೇರಿಸಿಕೊಳ್ಳಲಿಲ್ಲ, ಮೂರನೆಯ ತಪ್ಪು. ಐದು-ಹತ್ತು  ನಿಮಿಷ ಕಳೆದ ಬಳಿಕ ನಮ್ಮ ಸೀಟಿನಲ್ಲಿ ವಾಪಸ್ ಬಂದು ಕುಳಿತೆವು. ಆದರೆ ಬ್ಯಾಗುಗಳು ಇನ್ನೂ ಇವೆಯೇ ಎಂಬುದರ ಬಗ್ಗೆ ವಿಶೇಷವಾದ ಗಮನ ಕೊಡಲಿಲ್ಲ, ನಾಲ್ಕನೆಯ ತಪ್ಪು (ಏನಾದರೂ ಹೆಚ್ಚುಕಡಿಮೆಯಾಗಿದ್ದದ್ದು ಆಗ ಗೊತ್ತಾದರೂ ವಿಶೇಷ ಪ್ರಯೋಜನವಾಗುತ್ತಿರಲಿಲ್ಲ ಎಂಬುದು ಬೇರೆ ಸಂಗತಿ).

ಅಲ್ಲಿಂದ ಮುಂದೆ ಬೆಂಗಳೂರಿಗೆ ತೆರಳುವಾಗ ಮಧ್ಯೆ ತುಸುಹೊತ್ತು ನಿದ್ರೆ ಮಾಡಿದ್ದೂ ಆಯಿತು, ದಣಿದ ದೇಹ ಕೇಳಬೇಕಲ್ಲಾ? ನಿದ್ರೆ ಮಾಡುವಾಗಲಾದರೂ ಬ್ಯಾಗನ್ನು ಕಾಲಿನ ಬಳಿ ಇಡುವ ಆಲೋಚನೆ ಬಂತೋ? ಇಲ್ಲ. ಐದನೆಯ ತಪ್ಪು. ಕೊನೆಗೆ ಬೆಂಗಳೂರಿನ ಹೊರವಲಯದಲ್ಲಿ ಬಸ್ಸು ಒಂದೊಂದೇ ಕಡೆ ನಿಲ್ಲಿಸತೊಡಗಿತು, ಕೆಲವರು ಇಳಿಯತೊಡಗಿದರು, ಆಗ ಯಾರಾದರೂ ನಮ್ಮ ಬ್ಯಾಗನ್ನು ಒಯ್ಯುತ್ತಿದ್ದಾರೆಯೇ ಎಂಬುದನ್ನು ಗಮನಿಸಿದೆವೋ? ಇಲ್ಲ. ಆರನೆಯ ತಪ್ಪು. ಕೊನೆಗೆ ಮೆಜೆಸ್ಟಿಕ್ ಬಂದಾಗ ಉಳಿದವರೆಲ್ಲಾ ತಮ್ಮ (?) ಬ್ಯಾಗುಗಳನ್ನು ತೆಗೆದುಕೊಂಡು ಇಳಿಯತೊಡಗಿದರು, ನಮಗೆ ನೂಕುನುಗ್ಗಲು ಇಷ್ಟವಾಗುವುದಿಲ್ಲ, ಹೀಗಾಗಿ ಗಡಿಬಿಡಿಯಿರುವವರು ಇಳಿದು ಹೋದ ಮೇಲೆ ನಾವು ಆರಾಮವಾಗಿ ಇಳಿದು ಹೋಗುವಾ ಎಂದು ಸಾವಕಾಶವಾಗಿ ಕುಳಿತೆವು, ಆಗಲೂ ನಮ್ಮ ಬ್ಯಾಗುಗಳನ್ನು ಇನ್ಯಾರಾದರೂ ಒಯ್ಯುತ್ತಿದ್ದಾರೆಯೇ ಎಂದು ಗಮನಿಸಲಿಲ್ಲ, ಏಳನೆಯ ತಪ್ಪು.

ಕೊನೆಗೆ ಎದ್ದು ನಿಂತು ನಮ್ಮ ಬ್ಯಾಗು ಇರಿಸಿದ ಜಾಗಕ್ಕೆ ಕೈ ಹಾಕಿದೆ, ಎರಡು ಬ್ಯಾಗುಗಳು ಕಣ್ಣಿಗೆ ಬಿದ್ದುವು, ನಿಶ್ಚಿಂತೆಯಿಂದ ಒಂದು ಬ್ಯಾಗನ್ನು ಕೆಳಗಿಳಿಸಿ ಕೈಯಲ್ಲಿದ್ದ ಒಂದು ವಾರ್ತಾಪತ್ರಿಕೆಯನ್ನು ಒಳಹಾಕುವುದಕ್ಕೋಸ್ಕರ ಜಿಪ್ ತೆಗೆದೆ, ಆಗ ಗೊತ್ತಾಯಿತು, ಅದು ನಮ್ಮ ಬ್ಯಾಗು ಅಲ್ಲ ಎಂದು. ನಮ್ಮ ಇನ್ನೊಂದು ಬ್ಯಾಗೇನೋ ಇತ್ತು, ಆದರೆ ಒಂದು ಬ್ಯಾಗಿನ ಬದಲು ಮತ್ತೊಂದ್ಯಾವುದೋ ಇತ್ತು – ಎದೆ ಧಸ್ಕಕ್ಕೆಂದಿತು. ಬದಲಿಗೆ ಇನ್ನೊಂದು ಬ್ಯಾಗಿದ್ದುದರಿಂದ ಮೊದಲ ನೋಟಕ್ಕೆ ಬ್ಯಾಗುಗಳು ಅದಲು-ಬದಲು ಆಗಿರಬಹುದು ಎಂಬಂತೆ ಕಂಡಿತು. ತಕ್ಷಣ ಹೊರಗೋಡಿ ಅಳಿದುಳಿದ ಸಹಪ್ರಯಾಣಿಕರೊಂದಿಗೆ ವಿಚಾರಿಸಿ ನೋಡಿದ್ದಾಯ್ತು, ಯಾರ ಬಳಿಯೂ ನಮ್ಮ ಬ್ಯಾಗು ಸಿಗಲಿಲ್ಲ. ಬಸ್ಸಿನ ನಿರ್ವಾಹಕರು ಹಾಗೂ ಚಾಲಕರು ಆತಂಕದಲ್ಲಿದ್ದ ನಮಗೆ ಏನೂ ಸರಿಯಾದ ಸಲಹೆ-ಸೂಚನೆ ಕೊಡದೆ ಸುಮ್ಮನಾದರು. ಮಾತ್ರವಲ್ಲ, ಬಸ್ಸಿನಲ್ಲಿ ಬಾಕಿಯಾದ ನಮ್ಮದಲ್ಲದ ಬ್ಯಾಗನ್ನು ತೆಗೆದುಕೊಂಡು ಹೋಗಲು ಬಿಟ್ಟರು ಕೂಡ!

ಬಸ್ಸಿನಿಂದಿಳಿದ ಮೇಲೆ ಮುಂದೆ ಏನು ಎಂಬ ಪ್ರಶ್ನೆ ಕಾಡತೊಡಗಿತು. ಅಲ್ಲಿಂದ ಮುಂದೆ ನಡೆದ ವಿಷಯಗಳ ಬಗ್ಗೆ, ಈಗ ನಡೆಯುತ್ತಿರುವ ವಿಷಯಗಳ ಬಗ್ಗೆ, ಮುಂದಿನ ಯೋಜನೆಗಳ ಬಗ್ಗೆ, ಯಾರ್ಯಾರು ಹೇಗೆ ಸಹಾಯ ಮಾಡಿದರು, ಯಾರ್ಯಾರು ಮುಖ ತಿರುಗಿಸಿದರು, ಬಸ್ಸಿನವರು ಹೇಗೆ ತಮ್ಮ ಸೇವೆಗಳನ್ನು ಉತ್ತಮಗೊಳಿಸಬಹುದು ಎಂಬಿತ್ಯಾದಿಗಳ ಬಗ್ಗೆ ಬರೆಯುತ್ತೇನೆ, ಮುಂಬರುವ ಭಾಗಗಳಲ್ಲಿ.

ನಿಮ್ಮ ಪ್ರತಿಕ್ರಿಯೆ, ಟೀಕೆ, ಸಲಹೆ, ಸೂಚನೆಗಳಿಗೆ ಸದಾ ಸ್ವಾಗತವಿದೆ.

2 comments:

ashoka vardhana gn said...

ನಾನು ಬೈಕಿನಲ್ಲಿ ಪ್ರಯಾಣಿಸುವಾಗ ವಾಲ್ವೋ ಬಸ್ಸನ್ನೇ ಇಷ್ಟಪಡುತ್ತೇನೆ. ಕಾರಣ - ಇಲ್ಲಿ ನೀವೇ ಹೇಳಿದ್ದೀರಿ, ಕಿಟಕಿ ತೆರೆಯುವಂತಿಲ್ಲ; ಬಸ್ಸು ಹಾದು ಹೋಗುವಾಗ ವಾಂತಿ, ಎಂಜಲು ನಮಗೆ ಉಚಿತವಾಗಿ ಸಿಗುವುದಿಲ್ಲ! ಇದುವರೆಗೆ ಪಟ್ಟಿಯಾದ ಏಳು ತಪ್ಪುಗಳೂ ಹಾಗೇ ನಿಮ್ಮ ಒಳಗೇ ಇಟ್ಟುಕೊಂಡಿದ್ದೀರಿ. ಹೆಚ್ಚಿನ ವಿವರಗಳು ಬಂದಂತೆ ನನಗೇನಾದರೂ ಹೇಳುವುದು ಇದ್ದರೆ ಬರೆಯುತ್ತೇನೆ.
ಅಶೋಕವರ್ಧನ

Anonymous said...

thanks for sharing this. looks like somebody got confused. Always good to be alert or tie it or put a tag i a visible way in additionto safety. Regards
S R Vijayashankar

Post a Comment