About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Thursday, February 2, 2012

ಹವ್ಯಕ ಭಾಷೆಯಲ್ಲಿ ಸ್ತ್ರೀಯರು

ಹವ್ಯಕ ಭಾಷೆಯಲ್ಲಿ ಹುಡುಗರನ್ನು ಅಂವ-ಇಂವ ಎಂದೂ, ಗಂಡಸರನ್ನು ಅವು-ಇವು ಎಂದೂ ಹೇಳುತ್ತಾರೆ. ಆದರೆ ಹುಡುಗಿಯರನ್ನು, ಹೆಂಗಸರನ್ನು ಅದು-ಇದು ಎಂದು ಹೇಳುತ್ತಾರೆ. ಇದೇ ಹವ್ಯಕ ಭಾಷೆಯಲ್ಲಿ ಪ್ರಾಣಿಗಳನ್ನು ಹಾಗೂ ನಿರ್ಜೀವ ಪದಾರ್ಥಗಳನ್ನು ಕೂಡ ಅದು-ಇದು ಎಂದೇ ಹೇಳುತ್ತಾರೆ. ಆದರೆ ಇತ್ತೀಚೆಗೆ ಇದು ಕೆಲವರಿಗೆ (ಅನೇಕರಿಗೆ?) ಇಷ್ಟವಾಗುವುದಿಲ್ಲ, ಇದರ ಬಗ್ಗೆ ಚರ್ಚೆಗಳು ನಡೆಯುವುದನ್ನು ಗಮನಿಸಿದ್ದೇನೆ, ನಾನೂ ಭಾಗವಹಿಸಿದ್ದೇನೆ. ಈ ಬಗ್ಗೆ ಒಂದಿಷ್ಟು ಬರೆಯೋಣ ಎಂದನಿಸಿತು, ಹೀಗಾಗಿ ಈ ಲೇಖನ ನಿಮ್ಮ ಮುಂದಿದೆ.

ನನ್ನ ವೈಯಕ್ತಿಕ ನಿಲುವು

ಕಷ್ಟವಾದರೂ ಸರಿ, ಬದಲಾವಣೆ ಮಾಡಿದರೆ ಒಳಿತು ಎಂದು ಹೇಳುವವನು ನಾನು. ಹೀಗಾಗಿ ನನ್ನ ಲೇಖನ ಆ ಗುಂಪಿನವರ ಪರ ಹೆಚ್ಚು ವಾಲಿರುವುದು ನಿಮಗೆ ಕಂಡುಬಂದರೆ ಕ್ಷಮಿಸಿ, ಸಾಧ್ಯವಾದಷ್ಟೂ ನಿರ್ಲಿಪ್ತವಾಗಿ ಬರೆಯಲು ಯತ್ನಿಸುವುದು ನನ್ನ ಉದ್ದೇಶ.

Facebookನಲ್ಲಿ ಚರ್ಚೆ

ಈ ಬಗ್ಗೆ ಕೆಲವು ವಾರಗಳ ಹಿಂದೆ Facebookನಲ್ಲಿಯೂ ಚರ್ಚೆ ನಡೆದಿತ್ತು. ಜನರ ಅಭಿಪ್ರಾಯ ತಿಳಿಯಲು ಒಂದು ಮತ ಸಂಗ್ರಹಣೆ ಹಾಗೂ ಹೊಸ ಪ್ರಯೋಗಕ್ಕೆ ಸಲಹೆ ಸೂಚನೆಗಳ ಆಹ್ವಾನ - ಹೀಗೆ ಎರಡು ವಿಷಯಗಳನ್ನು ನಾನು ಶುರುಮಾಡಿದೆ, ತಕ್ಕಮಟ್ಟಿಗೆ ಚರ್ಚೆಯನ್ನು ಜೀವಂತವಾಗಿಡಲು ಪ್ರಯತ್ನ ಮಾಡಿದೆ, ಆದರೆ ಕೊನೆಗೆ ಸತ್ತೇ ಹೋಯಿತು. ಚರ್ಚೆಗೆ ಕೊಂಡಿಗಳು ಈ ಕೆಳಗೆ ಇವೆ:

ಹೊಸ ಪ್ರಯೋಗಕ್ಕೆ ಸಲಹೆ-ಸೂಚನೆಗಳು
https://www.facebook.com/groups/prajnavanthahavyakaru/226424447423594/

ಸಮಸ್ಯೆಯ ಬಗ್ಗೆ ಒಂದು ಮತ ಸಂಗ್ರಹಣೆ
https://www.facebook.com/groups/prajnavanthahavyakaru/229910463741659/

ವಿ.ಸೂ. ಈ ಚರ್ಚೆಯನ್ನು ನೋಡಬೇಕಾದರೆ ನೀವು ಆ ಹವ್ಯಕ ಗುಂಪಿನ ಸದಸ್ಯರಾಗಬೇಕು, ಆಗ ಮಾತ್ರ ಸಾಧ್ಯ. ಈ ಗುಂಪಿನಲ್ಲಿ ಹವ್ಯಕೇತರರಿಗೆ ಪ್ರವೇಶ ಇಲ್ಲ ಎಂಬುದನ್ನೂ ಗಮನದಲ್ಲಿರಿಸಿಕೊಳ್ಳಿ. ಗುಂಪಿನ ಸದಸ್ಯರಾಗಬೇಕಿದ್ದಲ್ಲಿ ನೀವು ಇವರನ್ನು ಸಂಪರ್ಕಿಸಬಹುದು: https://www.facebook.com/venkatakrishna

ಚರ್ಚೆಯ ಸಾರಾಂಶ

ಚರ್ಚೆಯ ಒಂದು ಸಂಕ್ಷಿಪ್ತ ಸಾರಾಂಶ ಇಂತಿದೆ. ಯಾವುದಾದರೂ ಪ್ರಮುಖ ಅಂಶಗಳು ಇಲ್ಲದಿದ್ದರೆ ಕ್ಷಮೆ ಇರಲಿ.

ಈ ಪ್ರಯೋಗ ಕೆಲವರಿಗೆ/ಹಲವರಿಗೆ ಇಷ್ಟವಾಗುವುದಿಲ್ಲ - ಏಕೆ?

ಸ್ತ್ರೀಯರ ಬಗ್ಗೆ ಇರುವ ಪ್ರಯೋಗ ಕೆಲವರಿಗೆ ಇಷ್ಟವಾಗುವುದಿಲ್ಲ ಎಂದು ಹೇಳಿದೆ, ಯಾಕೆ ಇಷ್ಟವಾಗುವುದಿಲ್ಲ? ಹವ್ಯಕೇತರರು ಗೇಲಿ ಮಾಡುವುದರಿಂದಲೇ? ಅಥವಾ ತಮಗೇ ಇದು ತಪ್ಪು ಎಂಬ ಭಾವನೆ ಬಂದಿರುವುದರಿಂದಲೇ? ಅಥವಾ ಇನ್ಯಾವುದಾದರೂ ಕಾರಣಗಳಿವೆಯೇ? ಒಬ್ಬೊಬ್ಬರಿಗೆ ಒಂದೊಂದು ಕಾರಣಗಳಿರಬಹುದು. ಒಟ್ಟಿನಲ್ಲಿ ಇಷ್ಟವಾಗದವರು ಎತ್ತಿ ಹಿಡಿಯುವ ಅಂಶಗಳು/ಪ್ರಶ್ನೆಗಳು ಇಂತಿವೆ:

ಸ್ತ್ರೀಯರ ಬಗ್ಗೆ ಬಳಸುವ ಪ್ರಯೋಗ ಹಾಗೂ ಪ್ರಾಣಿ/ವಸ್ತುಗಳ ಬಗ್ಗೆ ಬಳಸುವ ಪ್ರಯೋಗ - ಇವೆರಡೂ ಬೇರೆ ಬೇರೆ ಎಂದು ಯಾಕೆ ನೋಡಬೇಕು? ಈ ಪ್ರಯೋಗವು ಕನ್ನಡಲ್ಲಿಯೂ ಸಾಮಾನ್ಯವಾಗಿರುವ ನಪುಂಸಕಲಿಂಗ ಪ್ರಯೋಗವೇ ತಾನೇ? ಇದು ಹವ್ಯಕ ಸಮಾಜದಲ್ಲಿ ಮೊದಲಿದ್ದ ಪುರುಷಪ್ರಧಾನ ವ್ಯವಸ್ಥೆಯ ಕೊಡುಗೆಯಲ್ಲವೇ? ಸ್ತ್ರೀಯರನ್ನು ಕೀಳಾಗಿ ನೋಡುವ ಸಂಪ್ರದಾಯವೇ ಇದರ ಮೂಲವಲ್ಲವೇ? ಅಲ್ಲ ಎಂದಾದರೆ ಇದರ ಮೂಲ ಏನು ಹೇಳಿ?

ಮಾತ್ರವಲ್ಲ, ಇಲ್ಲಿ ಇನ್ನೊಂದು ಮಾತಿದೆ. ಹವ್ಯಕ ಭಾಷೆಯಲ್ಲಿ ಅದು-ಇದು ಎಂಬ ಪ್ರಯೋಗ ಇನ್ನಿತರ ಕೆಲವು ಸಂದರ್ಭಗಳಲ್ಲಿಯೂ ಆಗುತ್ತದೆ, ಅಲ್ಲಿ ಅಗೌರವ/ಅಸಮಾನತೆ ಎದ್ದು ಕಾಣುತ್ತದೆ. ಹೀಗಾಗಿ ಸ್ತ್ರೀಯರ ವಿಷಯದಲ್ಲಿ ಕೂಡ ಮೂಲತಃ ಇರುವುದು ಇದೇ ರೀತಿಯ ಅಗೌರವ/ಅಸಮಾನತೆ ಎಂದು ಕೆಲವರು ವಾದಿಸುತ್ತಾರೆ.

ಹಳೇ/ಈಗಲೂ ಇರುವ ಪ್ರಯೋಗದ ಸಮರ್ಥಕರು ಏನನ್ನುತ್ತಾರೆ?

ಕೆಲವು ಹವ್ಯಕರು ಇದನ್ನು ‘ಸಮಸ್ಯೆ’ ಎಂದು ಒಪ್ಪುತ್ತಾರೆ, ಆದರೆ ಪರಿಹಾರದ ಅಗತ್ಯ ಅವರಿಗೆ ಕಂಡುಬರುವುದಿಲ್ಲ. ಅಷ್ಟೇನೂ ದೊಡ್ಡ ವಿಷಯ ಅಲ್ಲ ಎಂದು ಅವರಿಗೆ ತೋರುತ್ತದೆ.

ಇನ್ನು ಕೆಲವರಿಗೆ ಇದೊಂದು ಸಮಸ್ಯೆ ಎಂದೇ ತೋರುವುದಿಲ್ಲ. ಅವರ ವಾದಗಳು ಹೆಚ್ಚು-ಕಡಿಮೆ ಈ ರೀತಿ ಇರುತ್ತವೆ:

ಮೂಲ ಕೆದಕುವುದರಲ್ಲಿ ಪ್ರಯೋಜನ ಇಲ್ಲ, ವಸ್ತುಸ್ಥಿತಿ ಮುಖ್ಯ, ಪ್ರಯೋಗ ತಪ್ಪು ಎಂದು ಮೇಲ್ನೋಟಕ್ಕೆ ಕಾಣಿಸಿದರೂ ಇದರಲ್ಲಿ ಅಗೌರವ ಇಲ್ಲ ಎಂಬುದನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು, ಅದು ಒಪ್ಪಿದ ಪಕ್ಷದಲ್ಲಿ ಇದನ್ನೊಂದು ಸಮಸ್ಯೆಯೇ ಅಲ್ಲ ಎಂದು ಪರಿಗಣಿಸಬಹುದು, ಎಲ್ಲಾ ಭಾಷೆಗಳಿಗೂ ಅದರದ್ದೇ ಆದ ಸೊಗಸು/ಚರಿತ್ರೆ/ಪದಪ್ರಯೋಗ/ವ್ಯಾಕರಣ ಇತ್ಯಾದಿ ಇರುತ್ತವೆ, ಅದನ್ನು ಹೀಗೆಲ್ಲಾ ಸಾರಾಸಾಗಟಾಗಿ ಬದಲಾಯಿಸುವುದು ಉತ್ತಮ ವಿಚಾರ ಅಲ್ಲ, ಈ ವಿಷಯದಲ್ಲಿ ಕೀಳರಿಮೆ ಅಥವಾ ಕೋಪ ಸಲ್ಲದು, ಇತರರಿಗೆ ನಾವೇ ತಿಳಿಸಿ ಹೇಳಬೇಕು. ಹಾಗೂ ಬದಲಾವಣೆ ಬೇಕಿದ್ದಲ್ಲಿ ಅದು ತಾನಾಗಿಯೇ ಆಗುತ್ತದೆ, ನಿಧಾನವಾಗಿ. ಒತ್ತಾಯದ ಬದಲಾವಣೆ ಸ್ವಂತಿಕೆಯನ್ನು ಕೊಂದುಹಾಕುತ್ತದೆ.

ಬದಲಾವಣೆ ಬೇಕೆನ್ನುವವರು ಮತ್ತೂ ಒತ್ತಿ ಹೇಳುವ ಅಂಶಗಳು ಇಂತಿವೆ:

ಈಗ ಅಗೌರವ ಇದೆ ಎಂದು ಹೇಳುತ್ತಿಲ್ಲ, ಆದರೆ ಈ ಪ್ರಯೋಗಕ್ಕೆ ಅಗೌರವ/ಅಸಮಾನತೆಯ ಹಿನ್ನೆಲೆ ಇದೆ ಎಂಬ ಸಾಧ್ಯತೆ ಕೂಡ ಇದ್ದರೆ ಅದನ್ನು ತ್ಯಜಿಸಬೇಕಾದದ್ದು ಸರಿ, ಕಷ್ಟಪಟ್ಟರೂ ಮಾಡಲೇ ಬೇಕಾದ ಕೆಲಸ. ಈಗ ಅದು ಇತರರಿಗೆ ಹೇಗೆ ಕಾಣುತ್ತದೆ ಎಂಬುದು ಕೂಡ ಬಹುಮುಖ್ಯವಾದ ವಿಷಯ. ಪ್ರತೀ ಸಲ ಇತರರಿಗೆ ವಿವರಿಸಿಕೊಂಡು ಕೂರಲಾಗುವುದಿಲ್ಲ, ಅನೇಕ ಸಲ ಅವರು ಮೌನವಾಗಿ ಗಮನಿಸಿ ತಮ್ಮದೇ ರೀತಿಯಲ್ಲಿ ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಬೆಳೆಸಿಕೊಂಡುಬಿಡುತ್ತಾರೆ, ಅದಕ್ಕೇನು ಪರಿಹಾರ? ಮಾತ್ರವಲ್ಲ, ಎಷ್ಟೇ ಹೇಳಿದರೂ ಇದು ಇತರರ ಅನೇಕರಿಗೆ ಸರಿ ಕಾಣುವುದಿಲ್ಲ, ಅಂತರ್-ಜಾತಿಯ ಮದುವೆಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ನಾವು ಬದಲಾಗದಿದ್ದರೆ ಹವ್ಯಕ ಭಾಷೆಯ ಉಳಿವಿಗೇ ಮಾರಕವಾಗಬಹುದು.

ಭಾಷಾತಜ್ಞರು ಏನನ್ನುತ್ತಾರೆ?

ಕನ್ನಡದಲ್ಲಿ ಈ ಸಮಸ್ಯೆ ಇಲ್ಲ, ಹಳೆಗನ್ನಡದಲ್ಲಿಯೂ ಇಲ್ಲ, ಹವ್ಯಕದಲ್ಲೇಕೆ ಇದೆ? ಹೇಗೆ ಬಂತು?

ಹೀಗೆ ನಾನು ವಿಚಾರಿಸಿದ್ದು ಕೆಲವರ ಬಳಿ ಮಾತ್ರ, ಆದರೆ ಯಾರೂ ಇದಕ್ಕೆ ಸರಿಯಾಗಿ ಉತ್ತರ ಕೊಡುತ್ತಿಲ್ಲ. ಒಬ್ಬ ಭಾಷಾ ತಜ್ಞರು ನನ್ನ ಬಳಿ ಹೇಳಿದ ಹೇಳಿದ ಮಾತಿದು: ಮೊದಲು ಸ್ತ್ರೀಯರಿಗೂ ಅವ-ಇವ ಎಂಬ ಪ್ರಯೋಗ ಇತ್ತು, ಅದು ಕಾಲಕ್ರಮೇಣ ಹೊರಟುಹೋಯಿತು. ಇದರ ಬಗ್ಗೆ ಹೆಚ್ಚು ಕೆದಕಲು ಸಮಯ-ಸಂದರ್ಭ ಕೂಡಿಬರಲಿಲ್ಲ.

ಇನ್ನೊಬ್ಬರು ಭಾಷಾ ತಜ್ಞರೊಬ್ಬರು ಹೇಳಿದ ಮಾತು ಚಿಂತನಾರ್ಹ: ಅವು-ಇವು ಎನ್ನುವುದು ಕೂಡ ಪ್ರಶ್ನಾರ್ಥಕ ಪ್ರಯೋಗ. ಇದನ್ನು ಅವರು-ಇವರು ಎಂಬುದಕ್ಕೂ ಅವುಗಳು-ಇವುಗಳು ಎಂಬುದಕ್ಕೂ ಬಳಸುತ್ತೇವೆ. ಹಾಗಾದರೆ ಆ ಪ್ರಯೋಗವನ್ನೂ ಬದಲಾಯಿಸಬೇಕೇ?

ಸ್ತ್ರೀಯರಲ್ಲೇ ಎಷ್ಟು ಜನರಿಗೆ ಬದಲಾವಣೆಯ ಅಗತ್ಯ ಕಂಡುಬರುತ್ತಿದೆ?

ನಾನೆಷ್ಟೇ ಪ್ರಯತ್ನ ಮಾಡಿಡರೂ ಕೆಲವೇ ಕೆಲವು ಸ್ತ್ರೀಯರು Facebookನಲ್ಲಿ ಮತಚಲಾಯಿಸಿದರು, ಕೆಲವು ಸ್ತ್ರೀಯರು ಮುಂದೆ ಬಂದು ಮಾತನಾಡಿದ್ದು ಬಿಟ್ಟರೆ ಹೆಚ್ಚಿನವರು ಮೌನವಾಗಿದ್ದರು. ಇದರ ಅರ್ಥ ಏನು? ನಿಜಕ್ಕೂ ಗೊತ್ತಿಲ್ಲ.

ಇದು ಗಂಡಸರೇ ಹುಟ್ಟುಹಾಕಿದ ಸಮಸ್ಯೆ, ಅವರೇ ತಮ್ಮ ತಪ್ಪನ್ನು ಅರಿತು, ತಿದ್ದಿಕೊಂಡು ಹೊಸ ಪ್ರಯೋಗವನ್ನು ಹುಟ್ಟುಹಾಕಬೇಕೆಂದು ಕೆಲವು ಸ್ತ್ರೀಯರು ಹೇಳುತ್ತಾರೆ, ಆದರೆ ಎರಡೂ ಕೈ ಸೇರದಿದ್ದರೆ ಚಪ್ಪಾಳೆಯಾಗುವುದಿಲ್ಲ ಎಂದು ನನಗನಿಸುತ್ತದೆ. ಇದೊಂದು ವಿಶಿಷ್ಟವಾದ ವಿಷಯ – ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀಯರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸದೇ ಇದ್ದಲ್ಲಿ ಇದೊಂದು ಗಂಭೀರ ಸಮಸ್ಯೆ ಎಂಬ ಹಣೆಪಟ್ಟಿ ಪಡೆಯುವುದು ಅಸಾಧ್ಯ.

ಹೆಚ್ಚಿನ ಸ್ತ್ರೀಯರಿಗೆ ಈ ಬದಲಾವಣೆ ಬೇಕೆಂಬ ಉತ್ಕಟೇಚ್ಛೆ ಇದೆ ಎಂದು ನಿಮಗೆ ಅನಿಸುತ್ತದೆಯೇ? ನಿಮ್ಮ ಮನೆಯಲ್ಲಿರುವ ಸ್ತ್ರೀಯರ ಅಭಿಪ್ರಾಯ ಏನು? ಕೇಳಿ ತಿಳಿದು ಇಲ್ಲಿ ಹಂಚಿಕೊಳ್ಳುವಿರಾ?

ಇನ್ಯಾವುದಾದರೂ ಭಾಷೆಯಲ್ಲಿ ಹೀಗಿರುವ ಪ್ರಯೋಗ ಇದೆಯೇ?

ತೆಲುಗಿನಲ್ಲಿ ಇದೆಯಂತೆ, ಈ ಮಾಹಿತಿಯನ್ನು ಪರಿಶೀಲಿಸಿ ನೋಡಲಿಲ್ಲ ಇನ್ನೂ.

ಭಾಷಾ ರಚನೆಯ ವೈವಿಧ್ಯತೆ-ವೈಚಿತ್ರ್ಯತೆಯ ಬಗ್ಗೆ ಒಂದು ಮಾತು

ಹಿಂದಿ ಭಾಷೆಯನ್ನು ಗಮನಿಸಿ, ಅದರಲ್ಲಿ ವಸ್ತುಗಳಿಗೂ ಪುಲ್ಲಿಂಗ ಸ್ತ್ರೀಲಿಂಗದ ಪ್ರಯೋಗ ಇದೆ, ಅದಕ್ಕೇ ದಕ್ಷಿಣ ಭಾರತದವರಿಗೆ ಅದು ಕಬ್ಬಿಣದ ಕಡಲೇಕಾಯಿ. ಆದರೆ ಸಂಸ್ಕೃತದಲ್ಲಿ ಹಾಗಿಲ್ಲ. ಹಾಗಾದರೆ ಹಿಂದಿಗೆ ಹೇಗೆ ಆ ಪ್ರಯೋಗ ಬಂತು? ಹೀಗಿರುವ ಅನೇಕ ವಿಷಯಗಳಿವೆ. ಆದರೆ ಕೆಲವಕ್ಕೆ ಬರೀ ‘ಕ್ಲಿಷ್ಟ’ ಎಂಬ ಹಣೆಪಟ್ಟಿ ಸಿಗುತ್ತದೆ, ಈಗ ನಮ್ಮ ಮುಂದಿರುವ ವಿಷಯಕ್ಕೆ ‘ಸಮಸ್ಯೆ’ ಎಂಬ ವರ್ಗೀಕರಣ ಸಿಕ್ಕಿರುವುದು ಹೆಚ್ಚಿನ ಚರ್ಚೆಗೆ ಕಾರಣವಾಗಿದೆ.

ಸಮಸ್ಯೆಯಿಂದ ಸಮಾಧಾನದತ್ತ

ವಸ್ತುಸ್ಥಿತಿಯನ್ನು ಇನ್ನೊಂದು ರೀತಿಯಲ್ಲಿ ನೋಡೋಣವೇ?

ಯಾವುದೇ ‘ಸಮಸ್ಯೆ’ಯನ್ನು ನೀಗಿಸುವತ್ತ ಕೊಂಡೊಯ್ಯಲು ಹಲವು ಹಂತ/ಹೆಜ್ಜೆಗಳಿವೆ.

೧) ಸಮಸ್ಯೆಯನ್ನು ಗುರುತಿಸುವುದು
೨) ಇದು ಸಮಸ್ಯೆ ಹೌದು ಎಂದು ಒಪ್ಪಿಕೊಳ್ಳುವುದು
೩) ಪರಿಹಾರವನ್ನು ಸೂಚಿಸುವುದು/ಸಮಾಲೋಚಿಸುವುದು
೪) ಇದು ಪರಿಹಾರ ಹೌದು ಎಂದು ಒಪ್ಪಿಕೊಳ್ಳುವುದು
೫) ಪರಿಹಾರವನ್ನು ಕಾರ್ಯರೂಪಕ್ಕೆ ತರುವ ದಾರಿಗಳನ್ನು ಸೂಚಿಸುವುದು
೬) ಇದೇ ಸರಿಯಾದ ದಾರಿ ಎಂದು ಒಪ್ಪಿಕೊಳ್ಳುವುದು
೭) ಪರಿಹಾರವನ್ನು ಕಾರ್ಯರೂಪಕ್ಕೆ ತರುವುದು
೮) ಪರಿಹಾರ ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಿದೆಯೇ ಎಂದು ಪರಿಶೀಲಿಸುವುದು
೯) ಇಲ್ಲ ಎಂದಾದರೆ ಮೇಲಿನ ಹೆಜ್ಜೆಗಳನ್ನು ಪುನಃ ಪಾಲಿಸುವುದು

ಈ ಪಥದಲ್ಲಿ ನಮ್ಮ ವಿಷಯದಲ್ಲಿ ಹೇಗಿದೆ ವಸ್ತುಸ್ಥಿತಿ?

ಕ್ರಮಾಂಕ
ಪರಿಹಾರ ನೀಗಿಸುವ ಪಥದಲ್ಲಿರುವ ಮೆಟ್ಟಿಲುಗಳು
ವಸ್ತುಸ್ಥಿತಿ
ಸಮಸ್ಯೆಯನ್ನು ಗುರುತಿಸುವುದು
ಹವ್ಯಕೇತರರು ಹಾಗೂ ಹವ್ಯಕರಲ್ಲೇ ಕೆಲವರು ಇದನ್ನು ಸಮಸ್ಯೆ ಎಂದು ಗುರುತಿಸಿದ್ದಾರೆ.
ಇದು ಸಮಸ್ಯೆ ಹೌದು ಎಂದು ಒಪ್ಪಿಕೊಳ್ಳುವುದು
ಹವ್ಯಕರಲ್ಲಿ ಒಂದಷ್ಟು ಜನ ಸಮಸ್ಯೆ ಹೌದು ಎಂದು ಒಪ್ಪಿಕೊಂಡಿದ್ದಾರೆ, ಇನ್ನೊಂದಷ್ಟು ಜನ ಒಪ್ಪಿಕೊಳ್ಳುತ್ತಿಲ್ಲ.
ಪರಿಹಾರವನ್ನು ಸೂಚಿಸುವುದು/ಸಮಾಲೋಚಿಸುವುದು
ಪರಿಹಾರ ಸರಳವಲ್ಲ, ‘ಅದು’ ಎಂಬುದನ್ನು ‘ಅವಳು’ ಎಂದು ಬದಲಾಯಿಸಿದರೆ ಸಾಲದು, ಭಾಷಾ ರಚನೆಯ ದೃಷ್ಟಿಯಿಂದ ನೋಡಿದರೆ ಸಮಸ್ಯೆ ಸಾಕಷ್ಟು ಕ್ಲಿಷ್ಟಕರವಾಗಿದೆ.
ಇದು ಪರಿಹಾರ ಹೌದು ಎಂದು ಒಪ್ಪಿಕೊಳ್ಳುವುದು
ಒಂದೆರಡು ಶೈಶವಾವಸ್ಥೆಯಲ್ಲಿರುವ ಸಲಹೆ/ಸೂಚನೆಗಳಿವೆ, ಆದರೆ ಬಲವಾದ ಪರಿಹಾರ ಇನ್ನೂ ಇಲ್ಲ.
ಪರಿಹಾರವನ್ನು ಕಾರ್ಯರೂಪಕ್ಕೆ ತರುವ ದಾರಿಗಳನ್ನು ಸೂಚಿಸುವುದು
ಪರಿಹಾರ ಇದೆ ಎಂದು ಒಪ್ಪಿಕೊಂಡರೂ ಕೂಡ, ಹೇಗೆ ಕಾರ್ಯರೂಪಕ್ಕೆ ತರುವುದು ಎಂಬುದು ಕೂಡ ಭೂತಾಕಾರವಾದ ಪ್ರಶ್ನೆ. ಒಂದು ದಾರಿ ಎಂದರೆ ಕೆಲವು ಸಮಾನ ಮನಸ್ಕರು ಗಟ್ಟಿ ಮನಸ್ಸು ಮಾಡಿ ಹೊಸ ಪ್ರಯೋಗವನ್ನು ಬಳಕೆ ಮಾಡುತ್ತಾ ಮುಂದುವರಿಯುವುದು, ಬದಲಾವಣೆ ಬರಲಿ ಎಂದು ಹಾರೈಸುತ್ತಾ. ಆದರೆ ಕೊನೆಗೆ ಅವರೇ ಇಂಗು ತಿಂದ ಮಂಗನಾಗುವ ಸಾಧ್ಯತೆಗಳೂ ಇವೆ. ಹೀಗಾಗಿ ಜನರು ಮುಂದೆ ಬರುವುದು ಕಷ್ಟ.
ಇದೇ ಸರಿಯಾದ ದಾರಿ ಎಂದು ಒಪ್ಪಿಕೊಳ್ಳುವುದು
ಈ ಹಂತಕ್ಕೆ ನಾವಿನ್ನೂ ಬರಲಿಲ್ಲ.
ಪರಿಹಾರವನ್ನು ಕಾರ್ಯರೂಪಕ್ಕೆ ತರುವುದು
ಈ ಹಂತಕ್ಕೆ ನಾವಿನ್ನೂ ಬರಲಿಲ್ಲ.
ಪರಿಹಾರ ಸಮರ್ಪಕವಾಗಿ ಕಾರ್ಯರೂಪಕ್ಕೆ ಬಂದಿದೆಯೇ ಎಂದು ಪರಿಶೀಲಿಸುವುದು
ಈ ಹಂತಕ್ಕೆ ನಾವಿನ್ನೂ ಬರಲಿಲ್ಲ.
ಇಲ್ಲ ಎಂದಾದರೆ ಮೇಲಿನ ಹೆಜ್ಜೆಗಳನ್ನು ಪುನಃ ಪಾಲಿಸುವುದು
ಈ ಹಂತಕ್ಕೆ ನಾವಿನ್ನೂ ಬರಲಿಲ್ಲ.

ಕೊನೆಯ ಮಾತು

ಬಹುಷಃ ಹೆಚ್ಚಿನ ಜನ ಇದರಲ್ಲಿ ಆಸಕ್ತಿ ತೋರಿಸಿದ್ದರೆ ನಾನು ಇನ್ನೂ ಒಂದಷ್ಟು ಪ್ರಯತ್ನ ಮಾಡುತ್ತಿದ್ದನೇನೋ. ಆದರೆ ಸದ್ಯಕ್ಕೆ ಇಷ್ಟು ಮಾಡಿ ನಿಲ್ಲಿಸುತ್ತಿದ್ದೇನೆ. ಇಲ್ಲಿ ಬರೆದ ವಿಷಯಗಳು ಈ ನಿಟ್ಟಿನಲ್ಲಿ ಆಸಕ್ತಿ ಇರುವವರಿಗೆ ಅಸಕ್ತಿದಾಯಕವಾದ/ಸಹಾಯಕಾರಿಯಾದ ಮಾಹಿತಿ ಕೊಡುವಲ್ಲಿ ಯಶಸ್ವಿಯಾಗಿದ್ದಲ್ಲಿ ನಾನು ವ್ಯಯಿಸಿದ ಸಮಯಕ್ಕೆ ಸಾರ್ಥಕ್ಯತೆ ಸಿಕ್ಕಿದೆ ಎಂದು ಭಾವಿಸುತ್ತೇನೆ. ಧನ್ಯವಾದಗಳು.

ನಿಮ್ಮ ಪ್ರತಿಕ್ರಿಯೆ/ಸಲಹೆ/ಟೀಕೆಗಳಿಗೆ ಸದಾ ಸ್ವಾಗತವಿದೆ.

ಇತಿ,
ಕೃಷ್ಣ ಶಾಸ್ತ್ರಿ.


ನಿಮಗೆ ಓದಲು ಆಸಕ್ತಿ ಇರಬಹುದಾದ ಇನ್ನೊಂದು ಲೇಖನ:

ಸಮಾಜದಲ್ಲಿ ಹೆಣ್ಣಿನ ಸ್ಥಾನ ಎಲ್ಲಿ ಇರಬೇಕು? ಮೇಲೆಯೋ? ಸಮಾನವಾಗಿಯೋ? ಕೆಳಗೆಯೋ? ಈಗ ಎಲ್ಲಿ ಇದೆ? ಇದು ಆಗಾಗ ಚರ್ಚೆ ಆಗಿಕೊಂಡೇ ಇರುವಂತಹ ಒಂದು ವಿಷಯ. ಈ ಚರ್ಚೆ ಬ್ರಾಹ್ಮಣ ಸಮಾಜದಲ್ಲಿಯೂ ಇದೆ. ನನ್ನ ಅನಿಸಿಕೆಗಳು ಈ ಲೇಖನದಲ್ಲಿವೆ.

ಸಮಯ ಸಿಕ್ಕಿದಾಗ ನನ್ನ ಬ್ಲಾಗಿನಲ್ಲಿರುವ ಈ ಲೇಖನ ಓದಿ ಎಂದು ವಿನಂತಿ:
http://krishnashastry.blogspot.com/2011/10/brahmana-samajadalli-hennina-sthanamana.html#Havyaka

http://krishnashastry.blogspot.com/2011/10/brahmana-samajadalli-hennina-sthanamana.html#Kannada

ಗಮನಿಸಿ: ಈ ಲೇಖನದ ಪ್ರತಿಕ್ರಿಯೆ ವಿಭಾಗದಲ್ಲಿ ದಕ್ಷಿಣ ಕನ್ನಡ ಕರಾವಳಿಯ ಹಿರಿಯ ಚಿಂತನಾಶೀಲ ಲೇಖಕಿಯರಲ್ಲೊಬ್ಬರಾದ ಮನೋರಮಾ ಎಂ ಭಟ್ ಬರೆದ ಸುದೀರ್ಘವಾದ ಪ್ರತಿಕ್ರಿಯೆಯೂ ಲಭ್ಯವಿದೆ.

10 comments:

ವಿ.ರಾ.ಹೆ. said...

ನಾನು ಇದನ್ನು ನಮ್ಮ ಹವಿಗನ್ನಡದ ಗುಣಲಕ್ಷಣ ಎಂಬಂತೆ ಸಹಜವಾಗಿ ನೋಡುವುದರಿಂದ ಇದನ್ನು ಸಮಸ್ಯೆ ಎಂದು ಪರಿಗಣಿಸುವುದಿಲ್ಲ. ಇದು ಸಹಜವಾಗಿರುವುದರಿಂದ ಈ ಭಾಷಾಪ್ರಯೋಗದಿಂದ ನಮ್ಮ ಕಡೆ ಯಾವ ಹೆಣ್ಣು ಮಕ್ಕಳೂ ಯಾವುದೇ ಸಮಸ್ಯೆ ಕಿರಿಕಿರಿ ಅನುಭವಿಸುವುದಿಲ್ಲ. ಇದರಲ್ಲಿ ಯಾವ ಅಸಮಾನತೆ, ಕೀಳುತನ , ಲಿಂಗಭೇದ ಎಂತದೂ ಇಲ್ಲ. ಶತಮಾನಗಳಿಂದ ಬಳಕೆಯಲ್ಲಿರುವ ಇದನ್ನು ಬದಲಾಯಿಸುವುದು ಅಸಾಧ್ಯ ಮತ್ತು ಅಸಹಜ ಮತ್ತು 'ಅನಗತ್ಯ' :)

ಕೃಷ್ಣ ಶಾಸ್ತ್ರಿ - Krishna Shastry said...

ವಿ.ರಾ.ಹೆ. ಪ್ರತಿಕ್ರಿಯೆಗೆ ಧನ್ಯವಾದಗಳು. ನಾನು ಇಂದಿಗೂ ಈ ಪ್ರಯೋಗವನ್ನು ಬಳಸುತ್ತೇನೆ, ನನ್ನ ಮನಸ್ಸಿನಲ್ಲಿ ಕೊಳಕು ಇಲ್ಲ. ಇದೆಲ್ಲಾ ತಾರ್ಕಿಕವಾಗಿ ಹಾಗೂ ಇತರ ಪ್ರಾಯೋಗಿಕ ಆಯಾಮಗಳನ್ನು ನೋಡುವಾಗ ಹುಟ್ಟುವ ಆಲೋಚನೆಗಳು.

ಲೇಖನದಲ್ಲಿ ಒಪ್ಪಿಕೊಂಡಂತೆ ಬದಲಾವಣೆ ಕಷ್ಟಸಾಧ್ಯ, ಬಹುಷಃ ಅಸಾಧ್ಯ. ಅಸಹಜವೂ ಎನಿಸಬಹುದು. ಆದರೆ ಅನಗತ್ಯ ಎಂದು ನನಗೆ ಕಾಣುವುದಿಲ್ಲ, ಈ ಪ್ರಯೋಗ ಸರಿ ಎಂದೂ ಅನಿಸುವುದಿಲ್ಲ.

ನಾವು ಈಗ ‘ಹವ್ಯಕ’ ಎಂಬ ಚಿಪ್ಪಿನೊಳಗೆ ಇಲ್ಲ, ಬ್ರಾಹ್ಮಣರೊಳಗೇ ಹಾಗೂ ಇತರರೊಡನೆಯೂ ಪರಸ್ಪರ ಬೆರೆಯುವುದು (ಅರ್ಥಾತ್ ಮದುವೆ ಎಂದೇ ಅಲ್ಲ, ಕಾಲ ಕಳೆಯುವುದು ಎಂಬರ್ಥದಲ್ಲಿ ಹೇಳಿದ್ದು) ತೀರಾ ಸಾಮಾನ್ಯವಾಗುತ್ತಿದೆ. ಇಂತಿರುವಾಗ Perception Management ಬಗ್ಗೆ ಕೂಡ ಗಮನ ಕೊಡಬೇಕಾಗುತ್ತದೆ ಎಂದು ನನ್ನ ಅಭಿಪ್ರಾಯ. ಅರ್ಥಾತ್ ನಮ್ಮ ಭಾಷೆಯಲ್ಲಿ ಸ್ತ್ರೀಯರ ಬಗ್ಗೆ ಕೀಳುಭಾವನೆ ಇದೆ, ಅಸಮಾನತೆ ಇದೆ ಎಂದು ಬೇರೆಯವರು ಆರೋಪಿಸಿದರೆ ಬಾಯಿ ಮುಚ್ಚಿ ಕೂರಬೇಕಷ್ಟೆ! ಅನೇಕ ಸಲ ಆರೋಪಿಸುವುದೇ ಇಲ್ಲ, ಮನಸ್ಸಿನಲ್ಲಿಯೇ ಹಾಗೆ ಅಂದುಕೊಳ್ಳುತ್ತಾರೆ. ಇದು ಇನ್ನೂ ಅಪಾಯಕಾರಿ.

ಮಾತ್ರವಲ್ಲ, ನಮ್ಮ ಭಾಷೆಯ ಅವನತಿಗೆ ಇದೂ ಒಂದು ಕಾರಣವಾದರೆ ನನಗೆ ಆಶ್ಚರ್ಯವಿಲ್ಲ. ಉದಾ: ಹವ್ಯಕ ಗಂಡು ಹವ್ಯಕೇತರ ಹುಡುಗಿಯನ್ನು ಮದುವೆಯಾದರೆ ಆ ಹುಡುಗಿ ಈ ಕಾರಣದಿಂದ ಹವ್ಯಕ ಭಾಷೆಯನ್ನು ಪೂರ್ತಿಯಾಗಿ ಗೊಡ್ಡು ಭಾಷೆ ಎಂದು ತಿರಸ್ಕರಿಸುವ ಸಾಧ್ಯತೆಯಿಲ್ಲವೇ?

ಬಹುಷಃ ಇದು ಹೀಗೇ ಮುಂದುವರಿಯುತ್ತದೆ, ಕಾಲವೇ ಉತ್ತರ ಹೇಳಬೇಕಷ್ಟೆ!

Ramakant Hegde said...

"ಹವ್ಯಕ ನುಡಿಯಲ್ಲಿ ಸ್ತ್ರೀಲಿಂಗದ ಅಭಾವ"
ಈ ಬಗ್ಗೆ ಆತ್ಮೀಯರಾದ ಹಿರಿಕಿರಿಯ ಹವ್ಯಕ ಸ್ತ್ರೀಯರಲ್ಲಿ ನಾನು ಒಂದು private survey ಮಾಡಿದ್ದೆ. ಪ್ರತಿಕ್ರಿಯೆಗಳು ಈ ಕೆಳಗಿನಂತಿದ್ದವು.
ಹವ್ಯಕ ಮನೆಗಳಲ್ಲಿ ಹುಟ್ಟಿ ಹವ್ಯಕ ಪುರುಷರನ್ನು ಮದುವೆಯಾದ ಅಶಿಕ್ಷಿತ / ಅರೆಶಿಕ್ಷಿತ / ಶಿಕ್ಷಿತ ಸ್ತ್ರೀಯರಿಂದ:
- ನಮಗೆ ಯಾರಿಗೂ ಈ ಬಗ್ಗೆ ಕೀಳರಿಮೆ ಅನಿಸಿಯೇ ಇಲ್ಲ. ಮುಂದೆಯೂ ಅನಿಸಲಿಕ್ಕಿಲ್ಲ. ನಮ್ಮ ತಾಯ್ನುಡಿಯ ಬಗ್ಗೆ ನಮಗೆ ಅಭಿಮಾನ ಇದೆ. ಹೆಮ್ಮೆ ಕೂಡಾ. ಹವ್ಯಕ ನುಡಿಯಲ್ಲಿ ಇಂಥ ಬದಲಾವಣೆ ಅನಗತ್ಯ.
ಹವ್ಯಕ ಮನೆಗಳಲ್ಲಿ ಹುಟ್ಟಿ ಹವ್ಯಕೇತರ / ಕನ್ನಡಿಗ ಪುರುಷರನ್ನು ಮದುವೆಯಾದ ಅರೆಶಿಕ್ಷಿತ / ಶಿಕ್ಷಿತ ಸ್ತ್ರೀಯರಿಂದ (ಈ ವರ್ಗದ ಅಶಿಕ್ಷಿತ ಸ್ತ್ರೀಯರನ್ನು ನಾನು ಕಂಡಿಲ್ಲ):
- ನನ್ನ ಪತಿ, ಹಾಗೂ ಅವನ ಕಡೆಯವರು ಹವ್ಯಕ ನುಡಿಯಲ್ಲಿನ ಈ ಅಭಾವದ ಬಗ್ಗೆ ಒಂದೆರಡು ಬಾರಿ ಪ್ರಶ್ನಿಸಿದ್ದುಂಟು. ತಿಳಿಸಿ ಹೇಳಿದೆ. ಅರ್ಥ ಮಾಡಿಕೊಂಡರು. ಬೇಜಾರು ಪಡಲಿಲ್ಲ. ಈಗ ನಾನು ಹವ್ಯಕ ಮಾತಾಡುವದು ತವರು ಮನೆಗೆ ಹೋದಾಗ ಅಥವಾ ನನ್ನ ಮಕ್ಕಳೊಂದಿಗೆ ಮಾತ್ರ. ನನಗೇನೂ ಹವ್ಯಕ ನುಡಿಯಲ್ಲಿ ಇಂಥ ಬದಲಾವಣೆ ಬೇಕಿಲ್ಲ. ನನ್ನ ಮಕ್ಕಳಿಗೂ ಬೇಕಿಲ್ಲ.
ಹವ್ಯಕ ಮನೆಗಳಲ್ಲಿ ಹುಟ್ಟಿ ಹವ್ಯಕೇತರ / ಕನ್ನಡೇತರ ಪುರುಷರನ್ನು ಮದುವೆಯಾದ ಅಶಿಕ್ಷಿತ ಸ್ತ್ರೀಯರಿಂದ:
- ನನ್ನ ಪತಿ ಹಾಗೂ ಅವನ ಕಡೆಯವರು ಎಂದೂ ಈ ಬಗ್ಗೆ ಯೋಚಿಸಿಯೇ ಇಲ್ಲ. ಹವ್ಯಕ ನುಡಿಯಲ್ಲಿ ಇಂಥ ಬದಲಾವಣೆ ಅನಗತ್ಯ. ಈಗ ನಾನು ವ್ಯವಹರಿಸುವದೆಲ್ಲಾ ಹಿಂದಿ / ಮರಾಟಿ / ಕೊಂಕಣಿಯಲ್ಲಿ. ಮಕ್ಕಳು ಕೂಡ ಹಾಗೆಯೇ.
ಹವ್ಯಕ ಮನೆಗಳಲ್ಲಿ ಹುಟ್ಟಿ ಹವ್ಯಕೇತರ / ಕನ್ನಡೇತರ ಪುರುಷರನ್ನು ಮದುವೆಯಾದ ಅರೆಶಿಕ್ಷಿತ / ಶಿಕ್ಷಿತ ಸ್ತ್ರೀಯರಿಂದ:
- ನನ್ನ ಪತಿ ಹಾಗೂ ಅವನ ಕಡೆಯವರು ಎಂದೂ ಈ ಬಗ್ಗೆ ಯೋಚಿಸಿಯೇ ಇಲ್ಲ. ಹವ್ಯಕ ನುಡಿಯಲ್ಲಿ ಇಂಥ ಬದಲಾವಣೆ ಅನಗತ್ಯ. ಈಗ ನಾನು ವ್ಯವಹರಿಸುವದೆಲ್ಲಾ ಹಿಂದಿ / ಇಂಗ್ಲಿಷಿನಲ್ಲಿ. ಮಕ್ಕಳು ಕೂಡ ಹಾಗೆಯೇ.
ಹವ್ಯಕೇತರ / ಕನ್ನಡೇತರ ಮನೆಗಳಲ್ಲಿ ಹುಟ್ಟಿ ಹವ್ಯಕ ಪುರುಷರನ್ನು ಮದುವೆಯಾದ ಅಶಿಕ್ಷಿತ ಸ್ತ್ರೀಯರಿಂದ:
- ಶುರುವಿನಲ್ಲಿ ಈ ಸ್ತ್ರೀಲಿಂಗದ ಅಭಾವ ವಿಚಿತ್ರ ಅನಿಸಿತ್ತು. ಈಗ ಚನ್ನಾಗಿ ಹವ್ಯಕ ನುಡಿ ಮಾತಾಡಲು ಕಲಿತಿದ್ದೇನೆ. ಮಕ್ಕಳೂ ಚನ್ನಾಗಿ ಹವ್ಯಕ ಮಾತಾಡುತ್ತಾರೆ. ಹವ್ಯಕ ನುಡಿಯಲ್ಲಿ ಇಂಥ ಬದಲಾವಣೆ ಅನಗತ್ಯ.
ಹವ್ಯಕೇತರ / ಕನ್ನಡೇತರ ಮನೆಗಳಲ್ಲಿ ಹುಟ್ಟಿ ಹವ್ಯಕ ಪುರುಷರನ್ನು ಮದುವೆಯಾದ ಅರೆಶಿಕ್ಷಿತ / ಶಿಕ್ಷಿತ ಸ್ತ್ರೀಯರಿಂದ:
- ನಾನು ಪತಿಯೊಡನೆ ಹೆಚ್ಚಾಗಿ ವ್ಯವಹರಿಸುವದು ಹಿಂದಿ / ಇಂಗ್ಲಿಷಿನಲ್ಲಿ. ಮಕ್ಕಳು ಕೂಡ ಹಾಗೆಯೇ. ಆದರೂ ಅಲ್ಪ-ಸ್ವಲ್ಪ ಕನ್ನಡ ಮಾತಾಡಲು ಕಲಿತಿದ್ದೇನೆ. ಹವ್ಯಕ ಕನ್ನಡ ಹೆಚ್ಚು ಗೊತ್ತಿಲ್ಲ. ಮಕ್ಕಳಿಗಂತೂ ಕನ್ನಡವೇ ಗೊತ್ತಿಲ್ಲ. ಇನ್ನು ಹವ್ಯಕ ನುಡಿಯಲ್ಲಿ ಬದಲಾವಣೆ? ಬೇಕಿದ್ದರೆ ಮಾಡಿಕೊಳ್ಳಿ.

ತಾತ್ಪರ್ಯ: ಹವ್ಯಕ ನುಡಿಯಲ್ಲಿ ಬದಲಾವಣೆ ಅನಗತ್ಯ. ಹೆಚ್ಚು ಯೋಚಿಸಿ ತಲೆಕೆಡಿಸಿಕೊಳ್ಳಬೇಡಿ!!!!

- ರಮಾಕಾಂತ ಹೆಗಡೆ, ಶಿರಸಿ

ಕೃಷ್ಣ ಶಾಸ್ತ್ರಿ - Krishna Shastry said...

ಪ್ರಿಯ ರಮಾಕಾಂತ ಅವರೇ, ನಿಮ್ಮ ಸರ್ವೇ ಫಲಿತಾಂಶಗಳನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು. ನನ್ನ ಪ್ರತಿಕ್ರಿಯೆಗಳು ಇಂತಿವೆ.

೧) ಪ್ರತಿ ವಿಭಾಗದಲ್ಲಿ ಎಷ್ಟು ಜನರ ಪ್ರತಿಕ್ರಿಯೆಗಳು ಇದರಲ್ಲಿ ಒಳಗೊಂಡಿವೆ ಎಂಬುದನ್ನೂ ಹೇಳಿದರೆ ಸಂತೋಷ.

೨) ಈ ಬಳಕೆಯನ್ನು ಬದಲಾಯಿಸಬೇಕು ಎನ್ನುವವರು ಒಬ್ಬರೂ ನಿಮಗೆ ಸಿಗದೇ ಇದ್ದದ್ದು ಆಶ್ಚರ್ಯ. ಏಕೆಂದರೆ ಅಂತರ್ಜಾಲ ಬಳಸುವ ಶಿಕ್ಷಿತ ಸಮುದಾಯದಲ್ಲಿ, ಅನಿವಾಸಿ ಭಾರತೀಯರಲ್ಲಿ ಈ ಬದಲಾವಣೆ ಬೇಕು ಎಂದು ಹೇಳುವ ಅನೇಕ ಹೆಂಗಸರನ್ನೂ ಗಂಡಸರನ್ನೂ ನಾನು ಕಂಡಿದ್ದೇನೆ. ಅದಿರಲಿ, ನೀವು ಗಂಡಸರ ಸರ್ವೇ ಮಾಡಲಿಲ್ಲವೇ?

೩) ನೀವು ಬರೆದ ಎರಡನೇ ವಿಭಾಗದಲ್ಲಿ "ತಿಳಿಸಿ ಹೇಳಿದೆ" ಎಂದರೆ ಏನು ಎಂಬುದನ್ನು ತುಸು ವಿವರಿಸಿದರೆ ಉತ್ತಮವಿತ್ತು, ನನಗೆ ಆ ವಿಷಯದಲ್ಲಿ ಬಹಳ ಕುತೂಹಲವಿದೆ.

೪) ನಾನೇ ಲೇಖನದ ಕೊನೆಯಲ್ಲಿ ವಿವರಿಸಿದಂತೆ, ಬದಲಾವಣೆ ಬೇಕು ಎಂದಾಕ್ಷಣ ಅದು ಸುಲಭಸಾಧ್ಯವಲ್ಲ. ಭಾಷೆಯ ರೂಪಾಂತರ ಸಹಜವಾಗಿ/ಸ್ವಾಭಾವಿಕವಾಗಿ ಆದರೆ ಚೆನ್ನ. ಅದು ಬಿಟ್ಟು ಬಲಪ್ರಯೋಗದಿಂದ ಆಗಬೇಕಾದರೆ ಅದಕ್ಕೆ ದೊಡ್ಡ ಚಳುವಳಿಯೇ ಆಗಬೇಕು. ಇದು ಅಷ್ಟೆಲ್ಲಾ ಮುಖ್ಯವಾದ ವಿಚಾರ ಎಂದು ನನಗನಿಸುವುದಿಲ್ಲ, ಏಕೆಂದರೆ ಸ್ತ್ರೀಯರೇ ಈ ವಿಷಯದಲ್ಲಿ ಒಮ್ಮತದಲ್ಲಿಲ್ಲ. ಮಾತ್ರವಲ್ಲ, ಕನ್ನಡವೇ ಉಳಿಯುವ ಬಗ್ಗೆ ನಾವು ಸಂಶಯ ತೋರುತ್ತಿರುವ ದಿನಗಳಲ್ಲಿ ಹವ್ಯಕ ನುಡಿ ಎಷ್ಟು ಸಮಯ ಉಳಿಯಬಹುದು ಎಂಬುದೂ ಗಂಭೀರ ಪ್ರಶ್ನೆ. ಹವ್ಯಕ-ಹವ್ಯಕೇತರರ ಮದುವೆಗಳು ಸಾಮಾನ್ಯವಾಗುತ್ತಿರುವ ಇಂದಿನ ಕಾಲದಲ್ಲಿ ಹವ್ಯಕ ನುಡಿಯ ಅಂತ್ಯ ಕನ್ನಡಕ್ಕಿಂತಲೂ ಸಾಕಷ್ಟು ಬೇಗನೇ ಬರಬಹುದು ಎಂಬುದರಲ್ಲಿ ನನಗೆ ಸಂಶಯವಿಲ್ಲ. ಇದರಿಂದ ನಾನು ಸಂತಸ ಪಡುತ್ತೇನೆ ಎಂದಲ್ಲ, ವಸ್ತುಸ್ಥಿತಿಯನ್ನು ಹೇಳುತ್ತಿದ್ದೇನೆ, ಅಷ್ಟೆ.

ಕೊನೆಯದಾಗಿ, ಈ ಬಗ್ಗೆ ಆಸಕ್ತಿ ವಹಿಸಿ ಮಾಹಿತಿ ಸಂಗ್ರಹ ಮಾಡಿ ವಿವರವಾಗಿ ಇಲ್ಲಿ ಹಂಚಿಕೊಂಡದ್ದಕ್ಕೆ ತುಂಬಾ ಧನ್ಯವಾದಗಳು.

Ramakant Hegde said...

ಧನ್ಯವಾದಗಳು.
ಒಂದೆರಡು ವಿಷಯಗಳನ್ನು ತುಸು ಇನ್ನೂ ಕೆದಕಬಯಸುತ್ತೇನೆ!
"ಗಂಡಸರ ಸರ್ವೇ"
- ಯಾಕೆ ಮಾಡಬೇಕಿತ್ತು? ಇದರಲ್ಲಿ affected party ಸ್ತ್ರೀಯರು ಮಾತ್ರ ಅಂತ ನನ್ನ ಅನಿಸಿಕೆ. subjective ಎಂದು ತಮಗೆ ಅನಿಸಿದ್ದರೂ I cannot help it!
"ಒಬ್ಬರೂ ನಿಮಗೆ ಸಿಗದೇ ಇದ್ದದ್ದು ಆಶ್ಚರ್ಯ"
- ಯಾಕಿಲ್ಲ? ತಾವು ಪ್ರಕಟಿಸದೇ ಬಿಟ್ಟ ನನ್ನ "ಮರೆತ ಮಾತನ್ನು" ಕೆಳಗೆ ಪುನಃ ನೆನಪಿಸುತ್ತಿದ್ದೇನೆ:
ಹವ್ಯಕೇತರ / ಕನ್ನಡ / ಕೊಂಕಣಿ / ತುಳು ಮನೆಗಳಲ್ಲಿ ಹುಟ್ಟಿ ಹವ್ಯಕ ಪುರುಷರನ್ನು ಮದುವೆಯಾದ ಅಶಿಕ್ಷಿತ / ಅರೆಶಿಕ್ಷಿತ / ಶಿಕ್ಷಿತ ಸ್ತ್ರೀಯರಿಂದ:
- ನಾನು ಪತಿ ಹಾಗೂ ಮಕ್ಕಳೊಡನೆ ವ್ಯವಹರಿಸುವದು ಹೆಚ್ಚಾಗಿ ಶುದ್ಧಕನ್ನಡದಲ್ಲಿ. ಹವ್ಯಕ ಕನ್ನಡ ಗೊತ್ತಿದ್ದರೂ ಉಪಯೋಗಿಸುವದು ಕಮ್ಮಿ. ಇದಕ್ಕೆ ಹವ್ಯಕ ನುಡಿಯಲ್ಲಿ ಸ್ತ್ರೀಲಿಂಗದ ಅಭಾವವೂ ಒಂದು ಚಿಕ್ಕ ಕಾರಣ ಎನ್ನಬಹುದೇನೋ. ಇನ್ನು ಹವ್ಯಕ ನುಡಿಯಲ್ಲಿ ಬದಲಾವಣೆ? ಆದರೆ, ಆದಾಗ ನೋಡಿಕೊಳ್ಳೋಣ!
"ಹವ್ಯಕ ನುಡಿಯಲ್ಲಿ ಸ್ತ್ರೀಲಿಂಗದ ಅಭಾವ"
- ಇದು ಪೂರ್ತಿ ಸತ್ಯ ಅಲ್ಲ. ಭೌಗೋಳಿಕವಾಗಿ ಅಂಕೋಲೆಯಿಂದ ಕಾಸರಕೋಡು (ಹಾಗೂ ಹಿನ್ನಾಡನ್ನು) ಹವ್ಯಕರ ಕ್ಷೇತ್ರ ಎಂದುಕೊಂಡರೆ, ಅದರಲ್ಲಿ ಬೈಂದೂರು-ಕುಂದಾಪುರ (ಹಾಗೂ ತುಸು ಹಿನ್ನಾಡಿನಲ್ಲಿ) ಹವ್ಯಕ ನುಡಿಯಲ್ಲಿ ಸ್ತ್ರೀಲಿಂಗದ ಅಭಾವ ಇಲ್ಲ.
"ಸ್ತ್ರೀಯರೇ ಈ ವಿಷಯದಲ್ಲಿ ಒಮ್ಮತದಲ್ಲಿಲ್ಲ"
- ಪೂರ್ತಿ ಒಪ್ಪಬೇಕಾದ ಮಾತಿದು. ಯಾಕೆಂದರೆ, ಇದೊಂದು ದೊಡ್ಡ ಸಮಸ್ಯೆ ಎಂದು ಅವರಿಗೆ ಕೂಡ ಅನಿಸಿಲ್ಲ!
"ಹವ್ಯಕ ನುಡಿ ಎಷ್ಟು ಸಮಯ ಉಳಿಯಬಹುದು ಎಂಬುದೂ ಗಂಭೀರ ಪ್ರಶ್ನೆ"
- ಇದೇ ಹವ್ಯಕರೆಲ್ಲರೂ ಒಮ್ಮತಕ್ಕೆ ಬರಬೇಕಿದ್ದ ಇಂದಿನ ದೊಡ್ಡ ಸಮಸ್ಯೆ. "ಉಳಿಯಬಹುದು" ಎಂಬುದು "ಉಳಿಸಬೇಕು" ಎಂದುಕೊಂಡವರ lobby ದೊಡ್ಡದಿದ್ದಾಗ / ದೊಡ್ಡದಾದಾಗ ಮಾತ್ರ ಸಾಧ್ಯ ಅಲ್ಲವೇ? "ಬೆಳೆಸಬೇಕು" ಎಂದುಕೊಂಡವರ lobby ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡಿ ನಮ್ಮ ತಾಯ್ನುಡಿಯನ್ನು ವಿನಾಶದೆಡೆಗೆ ಒಯ್ಯದಂತೆ ನೋಡಿಕೊಳ್ಳೋಣ! ಹೀಗಾಗಿಯೇ ನಾನು ತಮ್ಮನ್ನು ಕೇಳಿಕೊಂಡಿರುವದು - "ಹವ್ಯಕ ನುಡಿಯಲ್ಲಿ ಸ್ತ್ರೀಲಿಂಗದ ಅಭಾವ" ದೊಡ್ಡ ಸಮಸ್ಯೆ ಅಲ್ಲ; ಈ ದಿಕ್ಕಿನಲ್ಲಿ "ಬೆಳೆಸಲು" ಖಂಡಿತ ಪ್ರಯತ್ನ ಮಾಡಬೇಡಿ! "ಅಳಿಸಲು" ಹೋದೀರಿ ಎಚ್ಚರ!
"ಹವ್ಯಕ ನುಡಿಗೆ ಬಂದ ಈ ದೊಡ್ಡ ಸಮಸ್ಯೆ (ಅಳಿಕೆ) ಗೆ ಕಾರಣಗಳು ಯಾವವು?"
- ಹಿರಿಯ ಕಾರಣಗಳೆಂದರೆ ಸಾಮಾಜಿಕ ಸ್ಥರಗಳಲ್ಲಿ ಆದ ಮಾರ್ಪಾಡುಗಳು, ಇತರ ಊರು / ದೇಶಗಳಿಗೆ ವಲಸೆ, ಆಂಗ್ಲ ವಿದ್ಯಾಭ್ಯಾಸಕ್ಕೆ ಕೊಟ್ಟ ಪ್ರಾಮುಖ್ಯತೆ, ಇತರ ಭಾಷೆಗಳನ್ನಾಡುವ ತಾಯಂದಿರು, ಹೆಚ್ಚು ಯೋಚಿಸಲು ಹೋಗದ ತಂದೆಯರು.
"ಉಳಿಸುವ ಪ್ರಯತ್ನ ಇಂದು ಎಲ್ಲಿ ಅತ್ಯಗತ್ಯ?"
- ಕಳೆದು ಹೋಗುತ್ತಿರುವ ಪದಗಳ ಬಳಕೆ, ಕಳೆದು ಹೋದ ಪದಗಳ ಮರುಬಳಕೆ. ನಿಘಂಟು ರಚನೆ / popularisation, ವ್ಯಾಕರಣದ ಪುನರಾವಲೊಕನ, ಹವ್ಯಕ ಉಪನುಡಿಗಳಲ್ಲಿನ ವ್ಯತ್ಯಾಸಗಳನ್ನು ಅರಿತುಕೊಳ್ಳುವದು
"ಶುದ್ಧಕನ್ನಡದಿಂದ / ಇತರ ಭಾಷೆಗಳಿಂದ ಹವ್ಯಕ ನುಡಿಯಲ್ಲಿ ಬಳಕೆಗೆ ಬಂದಿರುವ / ಬರುತ್ತಿರುವ ಹೊಸಪದಗಳನ್ನು ವಿರೋಧಿಸಬೇಕೆ?"
- ಖಂಡಿತ ಕೂಡದು.
"ಬೆಳೆಸುವ ಪ್ರಯತ್ನ ಇಂದು ಎಲ್ಲಿ ಬೇಕು?"
- ಆಡುನುಡಿಯಿಂದ ಲಿಖಿತನುಡಿಯ ಕಡೆಗೆ. ಅಂತರ್ಜಾಲದ ಪಾತ್ರ ಇದರಲ್ಲಿ ತುಂಬಾ ಸಹಕಾರಿಯಾದೀತು. ಉದಾಹರಣೆಗೆ, "ಒಪ್ಪಣ್ಣ" blog
"ಬೆಳೆಸುವಲ್ಲಿ ಎಲ್ಲಿ ಎಡವುತ್ತಿದ್ದೇವೆ?"
- ಲಿಖಿತನುಡಿಯ ಬಗ್ಗೆ ಹೆಚ್ಚು ಪ್ರಯತ್ನ ಆಗಿಲ್ಲ. ಉದಾಹರಣೆಗೆ, ನೀವು / ನಾನು ಇದೆಲ್ಲವನ್ನೂ ಹವ್ಯಕ ನುಡಿಯಲ್ಲೇ ಬರೆಯಬಹುದಿತ್ತಲ್ಲವೇ?
"ನಾನು ಯಾಕೆ ಹವ್ಯಕನುಡಿಯಲ್ಲಿ ಬರೆಯಲಿಲ್ಲ?"
- ನನ್ನ ಅಸಾಮರ್ಥ್ಯ!
"ನಾನು ಆಂಗ್ಲ ಪದಗಳನ್ನು ಯಾಕೆ ಬಳಸಿದೆ?"
- ನನ್ನ ದೌರ್ಬಲ್ಯ!
"ತಮಗೆ ನನ್ನೊಂದು ಚಿಕ್ಕ ಕೋರಿಕೆ"
- ಹವ್ಯಕ ನುಡಿಯಲ್ಲಿ blog ಪ್ರಯತ್ನಿಸಿ!!!

ಕೃಷ್ಣ ಶಾಸ್ತ್ರಿ - Krishna Shastry said...

ಪ್ರಿಯ ರಮಾಕಾಂತ ಅವರೇ,

ನಿಮ್ಮ ಮುಕ್ತ ಹಾಗೂ ತರ್ಕಬದ್ಧವಾದ ಮರು ಪ್ರತಿಕ್ರಿಯೆಗೆ ಧನ್ಯವಾದ.

ಮರೆತ ಮಾತು: ನಾನು ಪ್ರಕಟಿಸದೇ ಇದ್ದುದಲ್ಲ, ನನಗೆ ಅದು ಸಿಗಲೇ ಇಲ್ಲ, ಕ್ಷಮಿಸಿ, ಏನಾದರೂ ತಾಂತ್ರಿಕ ದೋಷಗಳಿರಬಹುದೇನೋ. ಇರಲಿ, ಅದರಲ್ಲಿ ನೀವು ಹೇಳಿದ್ದು ಒಂದು ಮುಖ್ಯ ವಿಷಯ ಹೌದು. ಆ ವಿಭಾಗದ ಜನರು ಬದಲಾವಣೆಯನ್ನು ಬಯಸುವುದು ಸಹಜ. ಆದರೆ ನಾನು ಹೇಳಿದ್ದು ಹವ್ಯಕ ಕುಟುಂಬದಲ್ಲಿಯೇ ಹುಟ್ಟಿ ಬೆಳೆದು, ಹವ್ಯಕರನ್ನೇ ಮದುವೆಯಾಗಿ, ನಿತ್ಯವೂ ಹವ್ಯಕ ಭಾಷೆಯನ್ನೇ ಬಳಸುವ ಮಹಿಳೆಯರಲ್ಲಿಯೂ ಬದಲಾವಣೆಯನ್ನು ಬಯಸುವವರನ್ನು ನಾನು ನೋಡಿದ್ದೇನೆ.

ಕೆಲವು ಪ್ರಾಂತ್ಯಗಳ ಹವ್ಯಕ ಭಾಷೆಗಳಲ್ಲಿ ಸ್ತ್ರೀಲಿಂಗದ ಅಭಾವ ಇಲ್ಲ ಎಂದು ಹೇಳಿದಿರಿ, ಧನ್ಯವಾದ. ಇದನ್ನು ನಾನು ಸಮಯ ಸಿಕ್ಕಿದಾಗ ಹೆಚ್ಚು ಅಧ್ಯಯನ ಮಾಡುತ್ತೇನೆ. ಆದರೆ ಉಳಿದ ಕಡೆ ಇರುವ ಸಮಸ್ಯೆಯನ್ನು ಇದು ಕಡಿಮೆ ಮಾಡುವುದಿಲ್ಲ ಎನ್ನುವುದೂ ಸತ್ಯವೇ.

ಸ್ತ್ರೀಯರು ಒಮ್ಮತದಲ್ಲಿರದಿರುವ ಬಗ್ಗೆ: ಈ ಮೇಲಿನ ಲೇಖನದ ಕೊನೆಯಲ್ಲಿ ಇನ್ನೊಂದು ಲೇಖನದ ಕೊಂಡಿಯನ್ನು ಕೊಟ್ಟಿದ್ದೇನೆ, ನೋಡಿ. ಅದರ ಪ್ರತಿಕ್ರಿಯೆಯಲ್ಲಿ ನೀವು ದಕ್ಷಿಣ ಕನ್ನಡ ಕರಾವಳಿಯ ಹಿರಿಯ ಚಿಂತನಾಶೀಲ ಲೇಖಕಿಯರಲ್ಲೊಬ್ಬರಾದ ಮನೋರಮಾ ಭಟ್ ಅವರು ನೀಡಿದ ಪ್ರತಿಕ್ರಿಯೆಯನ್ನು ದಯವಿಟ್ಟು ಓದಿ ಎಂದು ವಿನಂತಿ. ವಿವಿಧ ಸಂದರ್ಭಗಳಲ್ಲಿ ಮಹಿಳೆಯರು ದನಿ ಎತ್ತದಿರುವುದಕ್ಕೆ ಹಲವಾರು ಕಾರಣಗಳಿರುತ್ತವೆ, ಪುರುಷ ಪ್ರಧಾನ ವ್ಯವಸ್ಥೆ ಇದರ ಹಿಂದೆ ಇರುವ ಒಂದು ಪ್ರಮುಖ ಕಾರಣ. (ಅಕ್ಷರಶಃ) ಎಲ್ಲಾ ರೀತಿಯಲ್ಲಿಯೂ ಸಮಾನತೆಯನ್ನು ಅನುಭವಿಸಿದ ಮಹಿಳೆಯರು ಭಾಷೆಯಲ್ಲಿಯೂ ಬದಲಾವಣೆ ಬೇಕೆಂದು ಬಯಸುವುದನ್ನು ನಾನು ಹೆಚ್ಚಾಗಿ ಕಂಡಿದ್ದೇನೆ. ದಯವಿಟ್ಟು ನೆನಪಿಡಿ - ಮೇಲ್ನೋಟಕ್ಕೆ ಕಾಣುವ ಸಮಾನತೆಗೂ ನಿಜವಾದ ಅರ್ಥದಲ್ಲಿ ಇರುವ ಸಮಾನತೆಗೂ ಅಗಾಧ ವ್ಯತ್ಯಾಸವಿದೆ. ಹವ್ಯಕೇತರ ಬ್ರಾಹ್ಮಣೇತರ ಸಮಾಜಗಳಲ್ಲಿಯೂ ಈ ಸಮಸ್ಯೆಯಿದೆ, ಅದರ ಫಲಿತಾಂಶವನ್ನು ನಿತ್ಯವೂ ವಿವಿಧ ರೀತಿಯಲ್ಲಿ ಕಾಣುತ್ತೇವೆ ಕೂಡ. ಪರಿಸ್ಥಿತಿ ಹೀಗೆಲ್ಲಾ ಇರುವಾಗ, ಭಾಷೆಯಲ್ಲಿರುವ ಈ ನ್ಯೂನತೆ ಅನೇಕರಿಗೆ ದೊಡ್ಡ ವಿಷಯವಾಗಿ ಕಾಣುವುದಿಲ್ಲ. ಅದರರ್ಥ ಸಮಸ್ಯೆ ಇಲ್ಲವೆಂದಲ್ಲ.

ಹವ್ಯಕ ನುಡಿಯ ಅಳಿಕೆ: ಈ ಲೇಖನದಲ್ಲಿ ವಿವರಿಸಿದ ಅಂಶವು ಭಾಷೆಯ ಅವನತಿಗೆ ಕಾರಣವಾಗುತ್ತದೆ ಎಂದಲ್ಲ, ಆದರೆ ಅಳಿಕೆಗೆ ಕಾರಣೀಭೂತವಾಗುವ ಅನೇಕ ಅಂಶಗಳಲ್ಲಿ ಇದೂ ಒಂದಾಗುತ್ತದೆ ಎಂದು ನಾನು ಬಲವಾಗಿ ನಂಬಿದ್ದೇನೆ. ನೀವೇ ಬರೆದ ಮರೆತ ಮಾತಿನ ವಿಭಾಗದವರನ್ನು ಗಮನಿಸಿ, ಅದೊಂದು ಉತ್ತಮ ಉದಾಹರಣೆ. ಉಳಿದಂತೆ ಭಾಷೆಯ ಅವನತಿಯ ಬಗ್ಗೆ ಮಾತನಾಡುತ್ತಾ ಹೋದರೆ ಅದು ಇನ್ನೊಂದು ವಿಶಾಲ ಸಮುದ್ರ, ಪ್ರತ್ಯೇಕವಾಗಿ ಹಾಗೂ ವಿಶದವಾಗಿ ತರ್ಕಗಳನ್ನು ಮಂಡಿಸುವುದು ಸೂಕ್ತ. ಇಲ್ಲಿ ಮುಂದುವರಿಸಿದರೆ ಮೂಲ ವಿಷಯಕ್ಕೆ ಧಕ್ಕೆ ತಂದಂತಾಗಬಹುದು ಎಂಬ ಭಾವನೆ ಮೂಡಿಬರುತ್ತಿದೆ ನನಗೆ.

ಗಂಡಸರ ಸರ್ವೇ: ‘ಈ ಅಭಾವಕ್ಕೆ, ಸಮಸ್ಯೆಗೆ ಮೂಲಕಾರಣ ಗಂಡಸರೇ. ಅವರು ಸೃಷ್ಟಿಸಿದ ಸಮಸ್ಯೆಯನ್ನು ಅವರೇ ಮುಂದೆ ಬಂದು ಪರಿಹರಿಸಬೇಕು, ನಮಗೆ ಗೌರವ ಕೊಡಬೇಕು’ ಎಂದು ಹೇಳುವ ಮಹಿಳೆಯರನ್ನು ನಾನು ನೋಡಿದ್ದೇನೆ. ಅದರಲ್ಲಿ ತರ್ಕವೂ ಇದೆ. ಈ ನಿಟ್ಟಿನಲ್ಲಿ ಗಂಡಸರ ಅಭಿಪ್ರಾಯವೂ ಮುಖ್ಯವಲ್ಲವೇ? ಇಂದು ಅನೇಕರು ಈ ಪ್ರಯೋಗವನ್ನು ಮಾಡುವಾಗ ಅಗೌರವದಿಂದ ಮಾಡುತ್ತಾರೆ ಎಂದಲ್ಲ, ಆದರೆ ಅದರರ್ಥ ಸಮಸ್ಯೆ ಇಲ್ಲ ಎಂದೂ ಅಲ್ಲ.

ಹವ್ಯಕ ಬ್ಲಾಗ್: ನನ್ನ ಬ್ಲಾಗಿನಲ್ಲಿ ಒಂದೆರಡು ಸುದೀರ್ಘ ಲೇಖನಗಳನ್ನು ನಾನು ಹವ್ಯಕದಲ್ಲಿಯೂ, ಕನ್ನಡದಲ್ಲಿಯೂ ಬರೆದಿದ್ದೇನೆ. ನನ್ನಿಂದ ಇದುವರೆಗೆ ಸಾಧ್ಯವಾದದ್ದು ಇಷ್ಟೇ. ಸಮಯ ಸಿಕ್ಕಿದರೆ ಹೆಚ್ಚು ಬರೆಯಲು ಆಸಕ್ತಿಯಿದೆ, ನನಗೆ ನನ್ನ ತಾಯ್ನುಡಿ ಖಂಡಿತಾ ಇಷ್ಟ.

ಕೊನೆಯದಾಗಿ: ನನ್ನ ಈ ಮೊದಲಿನ ಪ್ರತಿಕ್ರಿಯೆಯಲ್ಲಿ ನಾನು ಕೇಳಿದ ಪ್ರಶ್ನೆ ೧ ಹಾಗೂ ೩ಕ್ಕೆ ನಿಮ್ಮ ಪ್ರತಿಕ್ರಿಯೆ ಏನು? ತಿಳಿಯಲು ಉತ್ಸುಕನಾಗಿದ್ದೇನೆ.

Ramakant Hegde said...

ಧನ್ಯವಾದಗಳು.
ಇನ್ನೂ ಒಂದೆರಡು ವಿಷಯಗಳನ್ನು ಬರೆಯುವದು ಉಚಿತ ಅಂದುಕೊಂಡಿದ್ದೇನೆ.
ಹೊಸ ಪದಗಳನ್ನು ಅಥವಾ ಹೊಸ ವ್ಯಾಕರಣವನ್ನು ಜನ ಮುಕ್ತವಾಗಿ ಬಳಸಿದಂತೆಲ್ಲ ತಾಯ್ನುಡಿಗಳ ಬೆಳವಣಿಗೆ ಆಗುತ್ತದೆ. ಅದಕ್ಕೆ ಇತರರು ಯಾರೂ ಅಡ್ಡ ಬರುವದಿಲ್ಲ. ಹೊಗಳಿಯೋ ಹೊಗಳದೆಯೋ (ಆದರೆ ಮುಕ್ತವಾಗಿ) ಸ್ವೀಕರಿಸುತ್ತಾರೆ. ಮುಕ್ತ ಬೆಳವಣಿಗೆ ಯಾವಾಗಲೂ ಸ್ಥಿರ ಮತ್ತು most welcome. (ಇದಕ್ಕೆ ದೊಡ್ಡ ಉದಾಹರಣೆ ಎಂದರೆ ಜಗತ್ತನ್ನೇ ಆವರಿಸಿರುವ ಆಂಗ್ಲ ಭಾಷೆ). Forced change is always very dangerous and will only last till the force exists.
ಹವಿಗನ್ನಡ ಇಂದಿಗೂ ಆಡುನುಡಿಯಷ್ಟೇ ಆಗಿ ಉಳಿದಿರುವದರಿಂದ ಅದರ ಇಂದಿನ ಬೆಳವಣಿಗೆ ಏನಿದ್ದರೂ ಮನೆಯಲ್ಲಿ ತಾಯಿಯರಿಂದಲೇ ಬರಬೇಕು. ತಮ್ಮ ತಾಯಿ ಮನೆಯಲ್ಲಿ ಮುಕ್ತವಾಗಿ ಸ್ತ್ರೀಲಿಂಗದ ಬಳಕೆ ಮಾಡಿದ್ದರೆ ತಾವೂ ಮಾಡುತ್ತಿದ್ದಿರಿ ಅಲ್ಲವ? ಆಗ ತಮಗೆ ಈ ಸ್ತ್ರೀಲಿಂಗದ ಬಳಕೆಯ ಬಗ್ಗೆ ಕೀಳರಿಮೆ ಬರುತ್ತಿರಲಿಲ್ಲ! ನನ್ನ ತಾಯಿ ಕೊಲ್ಲೂರಿನಿಂದ ಶಿರಸಿಗೆ ಬಂದವಳು. ಬಂದಮೇಲೂ ಅವಳ ಮಾತಿನಲ್ಲಿ ಸ್ತ್ರೀಲಿಂಗದ ಬಳಕೆ ಆಗಲೋ ಈಗಲೋ ಇದ್ದೇ ಇರುತ್ತಿತ್ತು. ನನ್ನ ತಂದೆಯಿಂದಾಗಲೀ, ಅವನ ಕಡೆಯ ಇತರರಿಂದಾಗಲೀ ಆಗ ಈ ಬಗ್ಗೆ ಉಭ-ಶುಭ ಇರುತ್ತಿರಲಿಲ್ಲ. ಆದ್ದರಿಂದ ನನಗೂ, ನನ್ನ ತಮ್ಮ-ತಂಗಿಯರಿಗೂ ಈ ಕೀಳರಿಮೆ ಎಂದೂ ಬರಲೇ ಇಲ್ಲ. ನಮ್ಮ ಮನೆಮಾತಿನಲ್ಲಿ ಸ್ತ್ರೀಲಿಂಗದ ಬಳಕೆ ಎಂದೂ ತೊಡಚಾಗಿರಲಿಲ್ಲ. ಮುಂದೆ ಆಗುವದೂ ಇಲ್ಲ. (ಮನೋರಮಾ ಭಟ್ ಹಾಗೂ ಇತರ ಚಿಂತನಶೀಲ ಸ್ತ್ರೀಯರ ಗಮನಕ್ಕೆ ಇದು ಬರಬಹುದೆಂದುಕೊಂಡಿದ್ದೇನೆ).
ಲಿಖಿತ ಪ್ರಯೋಗಗಳು ನುಡಿಯ ಬೆಳವಣಿಗೆಯಲ್ಲಿ ದೊಡ್ಡ ಮೈಲಿಗಲ್ಲುಗಳು.
ಕೆಲವೇ ಶತಮಾನಗಳ ಹಿಂದೆ ಹವಿಗನ್ನಡ, ತುಳುನುಡಿ ಹಾಗೂ ಕೊಂಕಣಿನುಡಿಗಳು ಸಮಾನ ಎತ್ತರದಲ್ಲಿದ್ದವು. ಗೋವೆಯ / ಮಂಗಳೂರಿನ ಅಂದಿನ ಪಾದರಿಗಳು ಹಾಕಿದ ತಳಪಾಯಗಳು ಕೊಂಕಣಿನುಡಿಯನ್ನು ಏಷ್ಟೋ ಮುಂದಕ್ಕೆ ಕೊಂಡೊಯ್ದಿವೆ. ಈಗ ತುಳುನುಡಿ ಕೂಡ ಇದನ್ನು ಅನುಸರಿಸಿದೆ. ಈಗ ಹವಿಗನ್ನಡ ಯಾಕೆ ಹಿಂದುಳಿಯಬೇಕು?
"ನನಗೆ ನನ್ನ ತಾಯ್ನುಡಿ ಖಂಡಿತಾ ಇಷ್ಟ" ಎಂದಿದ್ದೀರಿ. ತುಂಬ ಸಂತೋಷ. ಲಿಖಿತನುಡಿಯ ಬಗ್ಗೆ ತಮ್ಮ ಪ್ರಯತ್ನ ಸದಾ ಇರಲಿ. ಅದರಲ್ಲಿ ತಮ್ಮ ಹೊಸ ಪ್ರಯೋಗಗಳನ್ನು ಮಾಡಿ ತೋರಿಸಿ. ಅದು ಫಲಿಸಿದಂತೆಲ್ಲ ಉಳಿದವರಿಗೂ ಮಾದರಿಯಾದೀತು. ಮುಂದಿನ ಬೆಳವಣಿಗೆಗಳು ತಾವೇ ತಾವಾಗಿ ಬರುತ್ತವೆ.
ಇದೇ ನನ್ನ ಕಡೆಯಿಂದ ಕೊನೆಯ ಮಾತು ಅಂದುಕೊಳ್ಳಿ!!!!

ಕೃಷ್ಣ ಶಾಸ್ತ್ರಿ - Krishna Shastry said...

ಪ್ರಿಯ ರಮಾಕಾಂತ ಅವರೇ,

ಬಲಪ್ರಯೋಗದಿಂದ ತರುವ ಬದಲಾವಣೆಗಳು ಉಳಿಯುವುದಿಲ್ಲ ಎಂಬುದು ಕೆಲವು ಕಡೆ ಮಾತ್ರ ಅನ್ವಯವಾಗುವ ತತ್ವ. ಭಾಷೆಯ ವಿಷಯಕ್ಕೆ ಬಂದಾಗ ಬಲಪ್ರಯೋಗದ ಬದಲಾವಣೆ ಖಂಡಿತಾ ನೆಲೆನಿಂತೇ ನಿಲ್ಲುತ್ತದೆ. ಯಾಕೆಂದರೆ ಮುಂದಿನ ಪೀಳಿಗೆಗಳಿಗೆ ಭಾಷೆಯ ಮುಖ್ಯ ಅಡಿಪಾಯ ಅವರ ಒಂದೋ ಎರಡೋ ಹಿಂದಿನ ಪೀಳಿಗೆಯವರು ಮಾತನಾಡುವ ಭಾಷೆ, ಅವರು ಬಲಪ್ರಯೋಗದಿಂದ ಮಾತನಾಡಿದರೋ ಅಲ್ಲವೋ ಎಂಬುದು ಮುಖ್ಯವಾಗುವುದಿಲ್ಲ. ಚೈನಾ ದೇಶದಲ್ಲಿ ಭಾಷೆಯನ್ನು ಒಗ್ಗೂಡಿಸಿದ ಪರಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

ಹಾಗೆಂದು ಬಲಪ್ರಯೋಗ ಸರಿಯಾದ ಮಾರ್ಗ ಎಂದು ನಾನು ಖಂಡಿತಾ ಹೇಳುತ್ತಿಲ್ಲ. ಆಯಾ ಸಮಾಜದ ಚಿಂತಕರು, ವಿಶ್ಲೇಷಕರು ಗುಣಾವಗುಣಗಳನ್ನು ಅವಲೋಕಿಸಿ, ಬಳಿಕ ನಿಧಾನಕ್ಕೆ ಬದಲಾವಣೆಯನ್ನು ಪ್ರೇರೇಪಿಸಿದರೆ, ಹಾಗೂ ಅದು ಸಹಜ ಬದಲಾವಣೆಯನ್ನು ತಂದರೆ ಅದು ಸ್ವಾಗತಾರ್ಹ. ಹಾಗೆಂದು ಈ ವಿಷಯದಲ್ಲಿ ಸ್ತ್ರೀವರ್ಗವು ಬಲವಾದ ನಿಲುವು ತೆಗೆದುಕೊಂಡು ಈ ಬದಲಾವಣೆ ಬರಲೇಬೇಕು ಎಂದು ಹೋರಾಡಿದರೆ ಅಂತಹ ಹೋರಾಟವನ್ನು ಸಮರ್ಥಿಸದೇ ಇರಲು ನನಗೆ ಸಾಧ್ಯವಿಲ್ಲ.

ನಮ್ಮಲ್ಲಿ ಲೋಪದೋಷ ಇದೆ ಎಂದು ಗುರುತಿಸಿದ ಮಾತ್ರಕ್ಕೆ ಅದನ್ನು ಕೀಳರಿಮೆ ಎಂದು ಪರಿಗಣಿಸಬೇಕಾಗಿಲ್ಲ ಎಂದು ನನ್ನ ಅಭಿಪ್ರಾಯ. ಈ ಭಾಷಾಪ್ರಯೋಗದಲ್ಲಿ ಹೆಮ್ಮೆ ಪಡುವಂತಹ ವಿಚಾರ ಏನೂ ಇಲ್ಲ, ಆದರೆ ಇಂದಿನ ದಿನಗಳಲ್ಲಿ ಇದು ಅಗೌರವಸೂಚಕವಾಗಿ ಬಳಕೆಯಾಗುತ್ತಿಲ್ಲವಾದ್ದರಿಂದ ಕೀಳರಿಮೆ ಬರುವಂತದ್ದೇನೂ ನನಗೆ ಕಾಣುವುದಿಲ್ಲ. ಆದರೆ ಅಗೌರವ/ಅಸಮಾನತೆಯ ಹಿನ್ನೆಲೆ ಇರುವುದು ಸ್ಪಷ್ಟವಾಗಿ ಕಾಣುವುದರಿಂದ ನಿಧಾನಕ್ಕೆ ಬದಲಾವಣೆ ಆದರೆ ಉತ್ತಮ ಎಂದಷ್ಟೇ ನಾನು ಹೇಳಬಲ್ಲೆ. ಮನೋರಮಾ ಭಟ್ ಅವರ ಉದಾಹರಣೆ ನಾನು ತೆಗೆದುಕೊಂಡಿದ್ದು ಈ ಭಾಷಾ ಪ್ರಯೋಗದ ವಿಚಾರದಲ್ಲಿ ಅಲ್ಲ, ಬದಲಾಗಿ ಸ್ತ್ರೀಯರು ದನಿ ಎತ್ತದಿರುವುದಕ್ಕೆ ಏನು ಕಾರಣಗಳಿರುತ್ತವೆ ಎಂಬ ವಿಷಯವನ್ನು ವಿವರಿಸುವುದಕ್ಕಾಗಿ, ಅಷ್ಟೆ.

ಲಿಖಿತ ಪ್ರಯೋಗಗಳು ನುಡಿಯ ಬೆಳವಣಿಗೆಯಲ್ಲಿ ಮುಖ್ಯ ಪಾತ್ರವಹಿಸುತ್ತವೆ - ಮುತ್ತಿನಂಥಾ ಮಾತು. ಆದರೆ ಈ ವಿಷಯದಲ್ಲಿ ಹೊಸಪ್ರಯೋಗ ಸುಲಭ ಅಲ್ಲ. ಸಾಧ್ಯವಾದರೆ ನಾನು ಲೇಖನದಲ್ಲಿ ಕೊಟ್ಟ ಫೇಸ್‍ಬುಕ್ ಕೊಂಡಿಗಳನ್ನು ನೋಡಿ, ಹೊಸ ಪ್ರಯೋಗ ಸುಲಭವಲ್ಲ ಎಂಬುದನ್ನು ನೀವಲ್ಲಿ ಕಾಣಬಹುದು. ಇದರಲ್ಲಿ ಭಾಷಾ ತಜ್ಞರು ಮುಖ್ಯ ಪಾತ್ರ ವಹಿಸಬೇಕು, ಸಲಹೆ/ಸೂಚನೆಗಳನ್ನು ಕೊಡಬೇಕು.

ಕೆಲವು ತಿಂಗಳುಗಳ ಹಿಂದೆ ಅಮೇರಿಕದ ಹವ್ಯಕ ಬಂಧುಗಳು ಕೂಡ ಈ ವಿಷಯದಲ್ಲಿ ಆಸಕ್ತಿದಾಯಕವಾಗಿ ಚರ್ಚೆ ಮಾಡಿದ್ದರು. ಕೊನೆಗೆ ಮುಂಬರುವ ಒಂದು ಸಭೆಯಲ್ಲಿ ಇದನ್ನು ಒಂದು ಚರ್ಚೆಯ ವಿಷಯವನ್ನಾಗಿ ಇರಿಸುವುದೆಂದೂ ಮಾತಾಗಿತ್ತು. ಆಮೇಲೆ ಏನಾಯಿತು ಗೊತ್ತಿಲ್ಲ. ಬಹುಷಃ ಹೊಸಪ್ರಯೋಗ ಅಲ್ಲಿಂದಲೇ ಬರಬಹುದೇನೋ?!

ಸರಿ, ಸದ್ಯಕ್ಕೆ ಈ ವಿಚಾರ ವಿನಿಮಯವನ್ನು ಇಲ್ಲಿಗೆ ನಿಲ್ಲಿಸುವುದಿದ್ದರೆ ಪರವಾಗಿಲ್ಲ. ನಿಮ್ಮ ಚಿಂತನೆಗಳನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು.

Ramakant Hegde said...

ಅರೆ! ತಮ್ಮ ಈ ಬಾರಿಯ ವಾದ ತುಂಬ ವಿಚಿತ್ರ ಅನಿಸುತ್ತಿದೆಯಲ್ಲ! ಉತ್ತರಿಸದೇ ಗತ್ಯಂತರವಿಲ್ಲ!
"ಬಲಪ್ರಯೋಗದಿಂದ ತರುವ ಬದಲಾವಣೆಗಳು ಉಳಿಯುವುದಿಲ್ಲ ಎಂಬುದು ಕೆಲವು ಕಡೆ ಮಾತ್ರ ಅನ್ವಯವಾಗುವ ತತ್ವ. ಭಾಷೆಯ ವಿಷಯಕ್ಕೆ ಬಂದಾಗ ಬಲಪ್ರಯೋಗದ ಬದಲಾವಣೆ ಖಂಡಿತಾ ನೆಲೆನಿಂತೇ ನಿಲ್ಲುತ್ತದೆ. ಚೈನಾ ದೇಶದಲ್ಲಿ ಭಾಷೆಯನ್ನು ಒಗ್ಗೂಡಿಸಿದ ಪರಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ."
ಹಾಗಂದರೆ ಏನರ್ಥ? ಚೈನಾದಲ್ಲಿ ನಮ್ಮ ಭಾರತಕ್ಕಿಂತಲೂ ಹೆಚ್ಚು ಆಡುನುಡಿಗಳಿದ್ದವು, ಇಂದೂ ಇವೆ. ಹೆಚ್ಚಿನವಕ್ಕೆ ಲಿಪಿಗಳಿರಲಿಲ್ಲ, ಇಂದೂ ಇಲ್ಲ. ಇದ್ದ ಲಿಪಿಗಳೆಲ್ಲವೂ ಚಿತ್ರಲಿಪಿಗಳು. (ಅಂದರೆ phonetic ಭಾಷೆಗಳಲ್ಲ, ಪದಕ್ಕೊಂದರಂತೆ ಒಂದು ನುಡಿಗೆ ಸಾವಿರಾರು ಚಿತ್ರಗಳು). ಸರಕಾರ ತನಗೆ ಇದ್ದ ನಿರಂಕುಶ ಅಧಿಕಾರದ ಬಲದಿಂದಾಗಿಯಾದರೂ uniform written & official communication ಸಲುವಾಗಿ ಒಂದು ನುಡಿ ಹಾಗೂ ಒಂದು ಲಿಪಿ ಇವನ್ನು ರಾಷ್ಟ್ರಭಾಷೆಯೆಂದು ಗುರುತಿಸಿ, ತನ್ನ ಪ್ರಜೆಗಳ ಮೇಲೆ ಅವನ್ನು ಹೇರದೇ ಬೇರೆ ಗತಿ ಇರಲಿಲ್ಲ. ಇದರಿಂದಾಗಿ ಅಲ್ಲಿನ ಅತಿಚಿಕ್ಕ ನುಡಿಗಳು ಇಂದು ಸತ್ತು ಹೋಗಿವೆಯಾದರೂ, ಕೆಲವಷ್ಟು ಆಡುನುಡಿಗಳು (ಆಡುಗರ ಒಲವಿನ ಒಂದೇ ಕಾರಣದಿಂದಾಗಿ) ಇನ್ನೂ ಜೀವಂತವಾಗಿವೆ. ಇಂದು ಅವು ರಾಷ್ಟ್ರಭಾಷೆಗೆ ಸಮನಾಗಿ, ಸಮರಸವಾಗಿದ್ದರೂ, ಅಲ್ಲಿನ forced socialism ಕೊನೆಯಾದರೆ, ಅದೇ ದಿನಕ್ಕೇ ಇಡೀ ದೇಶವನ್ನು ವಿಭಜಿಸಿ ಬಿಡುವಷ್ಟು ಸಬಲವಾಗಿವೆ. ಹತ್ತಿರಕ್ಕೆ ಬನ್ನಿ, ಅಖಂಡ ಪಾಕಿಸ್ತಾನದಲ್ಲಿ ಆದ ಉರ್ದು / ಪಂಜಾಬಿ / ಬಾಂಗ್ಲಾ ಗಳ ನಡುವಿನ ತಿಕ್ಕಾಟದ ಪರಿಣಾಮ ಏನಾಯ್ತೆಂಬುದು ತಮಗೆ ಗೊತ್ತೇ ಇದೆ. Thank God! ನಮಗೆ ಯಾಕೆ ಬೇಕು ಅಂತಹ ಇಲ್ಲದ ರಗಳೆಗಳು?? ಹವಿಗನ್ನಡ uniform written & official communication ಆಗಿ ರಾಜ್ಯಭಾಷೆ ಕನ್ನಡದ ಜೊತೆಗೋ, ರಾಷ್ಟ್ರಭಾಷೆ ಹಿಂದಿಯ ಜೊತೆಗೋ ಹೋರಾಡುವದು ನಮಗೆ ಬೇಕಿಲ್ಲ.
"ಆಯಾ ಸಮಾಜದ ಚಿಂತಕರು, ವಿಶ್ಲೇಷಕರು ಗುಣಾವಗುಣಗಳನ್ನು ಅವಲೋಕಿಸಿ, ಬಳಿಕ ನಿಧಾನಕ್ಕೆ ಬದಲಾವಣೆಯನ್ನು ಪ್ರೇರೇಪಿಸಿದರೆ, ಹಾಗೂ ಅದು ಸಹಜ ಬದಲಾವಣೆಯನ್ನು ತಂದರೆ ಅದು ಸ್ವಾಗತಾರ್ಹ."
"ಭಾಷಾ ತಜ್ಞರು ಮುಖ್ಯ ಪಾತ್ರ ವಹಿಸಬೇಕು, ಸಲಹೆ/ಸೂಚನೆಗಳನ್ನು ಕೊಡಬೇಕು."
"ಕೆಲವು ತಿಂಗಳುಗಳ ಹಿಂದೆ ಅಮೇರಿಕದ ಹವ್ಯಕ ಬಂಧುಗಳು ಕೂಡ ಈ ವಿಷಯದಲ್ಲಿ ಆಸಕ್ತಿದಾಯಕವಾಗಿ ಚರ್ಚೆ ಮಾಡಿದ್ದರು. ಕೊನೆಗೆ ಮುಂಬರುವ ಒಂದು ಸಭೆಯಲ್ಲಿ ಇದನ್ನು ಒಂದು ಚರ್ಚೆಯ ವಿಷಯವನ್ನಾಗಿ ಇರಿಸುವುದೆಂದೂ ಮಾತಾಗಿತ್ತು. ಆಮೇಲೆ ಏನಾಯಿತು ಗೊತ್ತಿಲ್ಲ. ಬಹುಷಃ ಹೊಸಪ್ರಯೋಗ ಅಲ್ಲಿಂದಲೇ ಬರಬಹುದೇನೋ?!"
- ಇದಕ್ಕೆಲ್ಲ ನಮಗೆ ನಮ್ಮ ತಾಯಂದಿರೇ ಸಾಕು ಕಣ್ರೀ!
"ಈ ವಿಷಯದಲ್ಲಿ ಸ್ತ್ರೀವರ್ಗವು ಬಲವಾದ ನಿಲುವು ತೆಗೆದುಕೊಂಡು ಈ ಬದಲಾವಣೆ ಬರಲೇಬೇಕು ಎಂದು ಹೋರಾಡಿದರೆ ಅಂತಹ ಹೋರಾಟವನ್ನು ಸಮರ್ಥಿಸದೇ ಇರಲು ನನಗೆ ಸಾಧ್ಯವಿಲ್ಲ."
- ನಮ್ಮ ಹವ್ಯಕ ಸ್ತ್ರೀವರ್ಗಕ್ಕೆ ಇದರಲ್ಲಿ ಎಳ್ಳಷ್ಟೂ ಆಸಕ್ತಿ ಇಲ್ಲವೆಂದು ನಿರೂಪಿಸಿದ ಮೇಲೂ ಹೀಗೆ ಹೇಳುತ್ತಿದ್ದೀರಾ? ಭಲೇ... ತಾವು ಒಳ್ಳೇ ರಾಜಕಾರಣಕ್ಕೆ ಲಾಯಕ್ಕು ಕಣ್ರಿ!!
"ನಮ್ಮಲ್ಲಿ ಲೋಪದೋಷ ಇದೆ ಎಂದು ಗುರುತಿಸಿದ ಮಾತ್ರಕ್ಕೆ ಅದನ್ನು ಕೀಳರಿಮೆ ಎಂದು ಪರಿಗಣಿಸಬೇಕಾಗಿಲ್ಲ ಎಂದು ನನ್ನ ಅಭಿಪ್ರಾಯ. ಈ ಭಾಷಾಪ್ರಯೋಗದಲ್ಲಿ ಹೆಮ್ಮೆ ಪಡುವಂತಹ ವಿಚಾರ ಏನೂ ಇಲ್ಲ, ಆದರೆ ಇಂದಿನ ದಿನಗಳಲ್ಲಿ ಇದು ಅಗೌರವಸೂಚಕವಾಗಿ ಬಳಕೆಯಾಗುತ್ತಿಲ್ಲವಾದ್ದರಿಂದ ಕೀಳರಿಮೆ ಬರುವಂತದ್ದೇನೂ ನನಗೆ ಕಾಣುವುದಿಲ್ಲ. ಆದರೆ ಅಗೌರವ/ಅಸಮಾನತೆಯ ಹಿನ್ನೆಲೆ ಇರುವುದು ಸ್ಪಷ್ಟವಾಗಿ ಕಾಣುವುದರಿಂದ ನಿಧಾನಕ್ಕೆ ಬದಲಾವಣೆ ಆದರೆ ಉತ್ತಮ ಎಂದಷ್ಟೇ ನಾನು ಹೇಳಬಲ್ಲೆ."
- ಈ ವಿತಂಡವಾದಕ್ಕೆ ಏನರ್ಥ? ನಾನಂತೂ ಹವಿಗನ್ನಡಕ್ಕಿರುವ ಲಿಖಿತನುಡಿಯ ಕೊರತೆಯನ್ನು ದೊಡ್ಡ ಲೋಪವೆಂದೇ ಎಣಿಸಿದ್ದೇನೆ. ಆ ಕೀಳರಿಮೆ ನನಗೆ ಸಾಕಷ್ಟಿದೆ!!
"ಸ್ತ್ರೀಯರು ದನಿ ಎತ್ತದಿರುವುದಕ್ಕೆ ಏನು ಕಾರಣಗಳಿರುತ್ತವೆ ಎಂಬ ವಿಷಯವನ್ನು ವಿವರಿಸುವುದಕ್ಕಾಗಿ, ಅಷ್ಟೆ."
- ನಾನು survey ಮಾಡಿದ ಸ್ತ್ರೀಯರೆಲ್ಲ ತುಂಬ frank / honest ಆಗಿ ನನಗೆ ಕಾರಣ ಹೇಳಿದರಪ್ಪ! "ಸ್ತ್ರೀಲಿಂಗದ ಅಭಾವ ದೊಡ್ಡ ಕೊರತೆ ಅಲ್ಲ" ಎಂದು!!
ಸಾಕು. ದಯವಿಟ್ಟು ಇಲ್ಲಿಗೇ ನಿಲ್ಲಿಸಲು ನನಗೆ ಅನುಮತಿ ನೀಡಿ!!!!!!!!!!!

ಕೃಷ್ಣ ಶಾಸ್ತ್ರಿ - Krishna Shastry said...

ಪ್ರಿಯ ರಮಾಕಾಂತ ಅವರೇ,

ಯಾಕೋ communication gap ಮೂಡುತ್ತಿರುವ ಸಂಶಯ ಬರುತ್ತಿದೆ ನನಗೆ. ಭಾಷೆಯ ಅಳಿವು-ಉಳಿವಿನ ಬಗ್ಗೆ ವಿಸ್ತಾರವಾದ ಚರ್ಚೆಗೆ ಇದು ಸರಿಯಾದ ವೇದಿಕೆ ಅಲ್ಲ. ಬಲವಂತವಾಗಿ ಭಾಷೆಯ ಮೇಲೆ ಬದಲಾವಣೆ ಹೇರಿದರೆ ಅದು ಸಾಕಷ್ಟು ಬಲವಾಗಿ ನಿಂದೇ ನಿಲ್ಲುತ್ತದೆ ಎಂಬುದರ ಬಗ್ಗೆ ನನಗೆ ಯಾವ ಸಂಶಯವೂ ಇಲ್ಲ. Let us agree to disagree ಏನಂತೀರಿ?

ಅರೆ! ನಮ್ಮ ಸ್ತ್ರೀವರ್ಗಕ್ಕೆ "ಎಳ್ಳಷ್ಟೂ" ಆಸಕ್ತಿ ಇಲ್ಲ ಎಂದು ಎಲ್ಲಿ ನಿರೂಪಿಸಿದಿರಿ ನೀವು? ಅದಕ್ಕೆ ಪ್ರತಿಯಾಗಿ ನಾನು ಈ ವಿಷಯದಲ್ಲಿ ಆಸಕ್ತಿ ಇರುವವರಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದೇನೆ, ಅಲ್ಲವೇ? ಮಾತ್ರವಲ್ಲ, ನೀವು ನಡೆಸಿದ ಸರ್ವೇಯ ಅಂಕಿ ಅಂಶಗಳನ್ನು ಕೇಳಿದರೆ ಅದನ್ನೂ ಕೊಡಲಿಲ್ಲ ನೀವು.

ಸುಮ್ಮಸುಮ್ಮನೇ ತರ್ಕಬದ್ಧವಾದ ವಾದವನ್ನು ವಿತಂಡವಾದ ಎಂದು ಹೇಳುವುದರಿಂದಲೂ, ನನ್ನನ್ನು ವಿನಾಕಾರಣ ರಾಜಕಾರಣಿಗೆ ಹೋಲಿಸುವುದರಿಂದಲೂ ಏನೂ ಪ್ರಯೋಜನ ಇಲ್ಲ. ನಿಮ್ಮ ಸರ್ವೇಗೆ ಸೀಮಿತವಾದ ಮಹಿಳೆಯರ ಮಾತೇ ಕೊನೆಯ ಮಾತು ಎಂಬ ಭ್ರಮೆಯಲ್ಲಿ ನೀವು ಇರಬೇಕೆಂದಿದ್ದರೆ ಧಾರಾಳವಾಗಿ ಇರಿ. ಇದೊಂದು ಸಮಸ್ಯೆ ಹೌದು, ಬದಲಾವಣೆ ಬೇಕು ಎಂಬ ಮಹಿಳೆಯರನ್ನು ನಾನು ನೋಡಿದ್ದೇನೆ, ಅವರು ಬರೆದಿದ್ದನ್ನು ಓದಿದ್ದೇನೆ. ಅದರ ಪ್ರಕಾರ ನಾನು ಮುಂದುವರಿಯುತ್ತೇನೆ. ಧನ್ಯವಾದಗಳು.

ತಾಳ್ಮೆ ಕಳೆದುಕೊಂಡು ಎಲ್ಲೆ ಮೀರಿ ಮಾತನಾಡಿದ ನಿಮ್ಮ ಪ್ರತಿಕ್ರಿಯೆಗಳಿಗೆ ಇನ್ನು ನನ್ನಿಂದ ಉತ್ತರ ಇಲ್ಲ, ಕ್ಷಮಿಸಿ.

Post a Comment