About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Thursday, October 27, 2011

ಬ್ರಾಹ್ಮಣ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ

 

ಗಮನಿಸಿ: ಈ ಕೆಳಗಿನ ಲೇಖನ ದಕ್ಷಿಣ ಕನ್ನಡದ ಹವ್ಯಕ ಕನ್ನಡದಲ್ಲಿದೆ. ಸಾಮಾನ್ಯ ಬಳಕೆಯಲ್ಲಿರುವ ಕನ್ನಡದಲ್ಲಿ ಓದಬೇಕಾದರೆ ಈ ಕೊಂಡಿಯನ್ನು ಕ್ಲಿಕ್ಕಿಸಿರಿ
ಬ್ರಾಹ್ಮಣ ಸಮಾಜಲ್ಲಿ ಹೆಣ್ಣಿನ ಸ್ಥಾನಮಾನ
 
ಸಮಾಜಲ್ಲಿ ಹೆಣ್ಣಿನ ಸ್ಥಾನ ಎಲ್ಲಿ ಇರೆಕು? ಗಂಡಿಗಿಂತ ಮೇಲೆಯೋ, ಸಮಾನವಾಗಿಯೋ? ಕೆಳವೋ?

ಚಾರಿತ್ರಿಕವಾಗಿ ನೋಡಿದರೆ ಜಗತ್ತಿನಾದ್ಯಂತ ಗಂಡು ಹೆಣ್ಣಿನ ಸಂರಕ್ಷಿಸಿಯೋಂಡುದೇ ಬಯಿಂದ, ಹೆಣ್ಣಿನ ಮೇಲೆ ಅತ್ಯಾಚಾರವನ್ನೂ ಮಾಡಿಯೋಂಡು ಬಯಿಂದ. ಬೇರೆ ದೇಶದ ಚಾರಿತ್ರಿಕ ಮಾಹಿತಿಗೊ ಎನಗೆ ರಜ್ಜ ರಜ್ಜ ಗೊಂತಿದ್ದಷ್ಟೆ, ಆದರೆ ಭಾರತಲ್ಲಿ ನೋಡಿದರೆ ಸಂರಕ್ಷಣೆಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಹೆಣ್ಣಿನ ಎತ್ತರದ ಸ್ಥಾನಲ್ಲಿಮಡುಗಿದ ಉದಾಹರಣೆಗೊ ಇದ್ದು, ಹೆಣ್ಣಿನ ಶಕ್ತಿ/ಪ್ರಾಮುಖ್ಯತೆಯ ಎತ್ತಿಹಿಡಿದು ದೇವರ ರೂಪ ಕೊಟ್ಟದೂ ಇದ್ದು. ಈ ರೀತಿಯ ಉದಾತ್ತ ತತ್ವಂಗೊ ಹುಟ್ಟಿದರೂ ಕೂಡ ಈ ನಾಡಿಲ್ಲಿ ಅತ್ಯಾಚಾರಂಗೊಕ್ಕೆ ಎಂತ ಕಮ್ಮಿಯೂ ಆಯಿದಿಲ್ಲೆ.

ಹೆಣ್ಣಿನ ಉತ್ತಮ ಸ್ಥಿತಿಯ ಬಗ್ಗೆ ಆಲೋಚನೆ ಮಾಡುವಾಗ ಎನ್ನ ಪರಿಮಿತ ಅನುಭವಲ್ಲಿ ಕೆಲವು ಉದಾಹರಣೆಗೊ ಎದ್ದು ಕಾಣ್ತು:
·    ಝಾನ್ಸಿ ರಾಣಿ ಲಕ್ಷೀಬಾಯಿ, ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಅಕ್ಕಮಹಾದೇವಿ... ಹೀಂಗೆ ಅದ್ಭುತ ವ್ಯಕ್ತಿತ್ವವ ಪ್ರದರ್ಶಿಸಿದ ಮಹಿಳೆಯರು ನಮ್ಮಲ್ಲಿತ್ತಿದ್ದವು. ಅವಕ್ಕೆ social acceptance ಇತ್ತಿದ್ದು ಹೇಳುದು ಮುಖ್ಯ.
·         ಹೆಣ್ಣು ದೇವರುಗೊಕ್ಕೆ ಎಂತದೂ ಕಮ್ಮಿ ಇಲ್ಲೆ ಹೇಳಿ ಗೊಂತಿಪ್ಪದೇ ಅನ್ನೆ?
·         ಇತ್ತೀಚೆಗಂತೂ ಅನೇಕ ಹೆಮ್ಮಕ್ಕೊ ಹಲವಾರು ಕ್ಷೇತ್ರಲ್ಲಿ ಸಾಧನೆ ಮಾಡ್ತಾ ಇದ್ದವು
ಆದರೆ ದಿನಾ ಪೇಪರಿಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ ಮತ್ತೆ ಇತರ ಹಲವು ರೀತಿಯ ದೌರ್ಜನ್ಯ ಅಪ್ಪದು ಕೂಡ ಕಾಣ್ತು.

ಚಾರಿತ್ರಿಕವಾಗಿ ನೋಡುವಾಗ ಒಂದು ನಿರ್ಧಿಷ್ಟ ಪ್ರದೇಶದ ಬಗ್ಗೆ ಹೇಳುವುದಾದರೆ ಈ ಉದಾಹರಣೆ ಮನಸ್ಸಿಂಗೆ ಎದ್ದು ಕಾಣ್ತು:
·         ಕೇರಳಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಬಂದದು (ಈಗ ನಿಧಾನಕ್ಕೆ ನಶಿಸಿ ಹೋವ್ತಾ ಇದ್ದು ಹೇಳಿ ಲೆಕ್ಕ)
·         ಆದರೆ ಅದೇ ಕೇರಳಲ್ಲಿ ಕೆಳವರ್ಗದ ಹೆಂಗಸರು ಸೊಂಟಂದ ಮೇಲೆ ವಸ್ತ್ರ ಧರಿಸುಲಾಗ ಹೇಳುವ ನಿರ್ಬಂಧ ಇದ್ದದು
ಎಂತದಕ್ಕೆ ಆದಿಕ್ಕು ಈ ವಿರೋಧಾಭಾಸ?

ತುಂಬಾ ಮೊದಲು ವೇದದ ಕಾಲಲ್ಲಿ ಹೆಣ್ಣಿಂಗೆ ಗಂಡಿಂಗೆ ಸಮಾಜಲ್ಲಿ ಸಮಾನ ಸ್ಥಾನಮಾನ ಇತ್ತಿದ್ದು ಹೇಳಿ ಕೆಲವರು ಹೇಳ್ತವು - ಇದರ ವಿರುದ್ಧ ಹೇಳುವವೂ ಇದ್ದವಡ. http://en.wikipedia.org/wiki/Women_in_Indiaಲ್ಲಿ ಇದರ ಬಗ್ಗೆ ರಜ್ಜ ಹೆಚ್ಚು ಓದುಲಕ್ಕು. ಆದರೆ ಈಗ ಹೇಂಗಿದ್ದು ಹೇಳುದರ ನೋಡುವಾಂ.

ಬೇರೆ ಸಮಾಜಂಗಳ-ದೇಶಂಗಳ ಬದಿಗೆ ಮಡಿಗಿ ನಮ್ಮ ಬ್ರಾಹ್ಮಣ (ಬರೀ ಹವ್ಯಕ ಅಲ್ಲ) ಸಮಾಜಲ್ಲಿ ಸ್ಥಿತಿ ಹೇಂಗಿದ್ದು ಹೇಳುದರ ಬಗ್ಗೆ ಎನ್ನ ಅನಿಸಿಕೆಗಳ ಬರತ್ತೆ. ಇಲ್ಲಿ ಯಾವುದು ಸರಿ-ಯಾವುದು ತಪ್ಪು ಹೇಳಿ ವಿಂಗಡನೆ ಮಾಡುದಕ್ಕಿಂತ ಹೆಚ್ಚಾಗಿ ಈಗ ಇಪ್ಪ ಸಂಗತಿಗಳ, ಸಂಪ್ರದಾಯಂಗಳ ಮತ್ತೆ ಅದರ ಹಿಂದೆ ಇಪ್ಪ ಆಲೋಚನೆ ಅಥವಾ ಇತರ ವಿಷಯಂಗಳ ವಿವರಿಸುಲೆ ಪ್ರಯತ್ನ ಮಾಡ್ತೆ. ಎನಗೆ ಸರಿ ಹೇಳಿ ಕಾಂಬ ಕೆಲವು ವಿಷಯಂಗಳ ಬಗ್ಗೆ ರಜ್ಜ ಒತ್ತು ಕೊಡುಲೂ ಸಾಕು, ಆದರೆ ಅದು ನಿಂಗಳ ಮೇಲೆ ಎನ್ನ ಅಭಿಪ್ರಾಯ ಹೇರುವ ಪ್ರಯತ್ನ ಅಲ್ಲ. ನಿಂಗೊ ಆಲೋಚನೆ ಮಾಡಿ ನಿಂಗಳ ಪರ-ವಿರೋಧ ಅನಿಸಿಕೆಗಳ ಮುಕ್ತವಾಗಿ ಎನಗೆ ತಿಳಿಶಿ ಹೇಳಿ ಎನ್ನ ಅಪೇಕ್ಷೆ.

ಒಟ್ಟಾರೆ ಬ್ರಾಹ್ಮಣ ಸಮಾಜ ಹೆಣ್ಣಿನ ನಡೆಶಿಕೊಂಬ ರೀತಿ ಇತರ ಅನೇಕ ಸಮಾಜಗಳಿಂದ ಮುಂದೆ ಇದ್ದು ಹೇಳುದು ಸತ್ಯ ಹೇಳಿ ಎನಗೂ ಕಾಣ್ತು, ಆದರೆ ಇನ್ನೂ ಸಾಧಿಸೆಕ್ಕಾದ ಎಷ್ಟೋ ಅಂಶಂಗೊ ನಮ್ಮ ಮುಂದೆ ಇದ್ದು ಹೇಳುದುದೇ ಸತ್ಯವೇ ಹೇಳಿ ಎನಗೆ ಕಾಣ್ತು.

ಹೆಣ್ಣು ಭ್ರೂಣಹತ್ಯೆ

ಇದು ಭಾರತಲ್ಲಿ ಮಾತ್ರ ಅಲ್ಲ, ಜಗತ್ತಿನ ಇನ್ನೂ ಸುಮಾರು ಕಡೆ ಅತ್ಯಂತ ದೊಡ್ಡ ಸಮಸ್ಯೆ. ಎಷ್ಟೋ ಸಲ ಸುಧಾರಕರ ಪೂರ್ಣ ಗಮನ ಈ ಸಮಸ್ಯೆಯ ಮೇಲೆಯೇ ಇರ್ತು, ಹೆಣ್ಣಿನ ಉಳಿದ ಸಮಸ್ಯೆಗೊ-ಹಕ್ಕುಗೊ ಇದರ ಮುಂದೆ ಗೌಣ ಆವ್ತು. ಬ್ರಾಹ್ಮಣ ಸಮಾಜ ಈ ಒಂದು ವಿಷಯಲ್ಲಿ ಬಹುಷಃ ಸಾಕಷ್ಟು ಮುಂದೆ ಬಯಿಂದು. ಗಂಡು ಮಗುವಿನ ಮೇಲೆ ಒಲವು ಇದ್ದರೂ ಹೆಣ್ಣು ಮಗು ಹುಟ್ಟುಲಾಗ ಹೇಳುವ ಕೆಟ್ಟ ಆಲೋಚನೆಗೊ ಇಪ್ಪದು ಕಡಮ್ಮೆ, ಕಾನೂನುಬಾಹಿರ ಭ್ರೂಣಲಿಂಗ ಪರೀಕ್ಷೆ ಮಾಡ್ಸಿ ಹೆಣ್ಣಾದ್ರೆ ಭ್ರೂಣಹತ್ಯೆ ಮಾಡುವ ಉದಾಹರಣೆಗೊ ಎನಗೆ ಕೇಳಿ ಗೊಂತಿಲ್ಲೆ. ಇದರಿಂದಾಗಿಯೇ ನಾವು ಉಳಿದ ಹಲವಾರು ಸಮಸ್ಯೆಗಳ ಬಗ್ಗೆ ಮಾತಾಡುತ್ತಾ ಇಪ್ಪದು!

ಶಿಕ್ಷಣ

ತಾತ್ಸಾರ: ಶಿಕ್ಷಣದ ವಿಷಯ ಬಂದಪ್ಪಗ ‘ಕೂಸಲ್ಲದಾ, ಹೆಚ್ಚು ಓದೆಕ್ಕು ಹೇಳಿ ಇಲ್ಲೆ, ಮದುವೆ ಮಾಡಿ ಬಿಟ್ರೆ ಸಾಕು’ ಹೇಳಿ ಹೇಳುದು ಈಗಳೂ ಸುಮಾರು ಕಡೆ ಇದ್ದು. ಕೆಲವು ಕಡೆ ಬಾಯಿಲಿ ಹೇಳದ್ರುದೇ ಅಪ್ಪ-ಅಮ್ಮಂದ್ರ ಅಥವಾ ಬಂಧುಗಳ ಮನಸ್ಸಿಲ್ಲಿ ಹಾಂಗಿರ್ತು. ಕೆಲವು ಸಲ ಹೆತ್ತವು ಅಥವಾ ಸಮಾಜ ಒತ್ತಡ ಹೇರದ್ರುದೇ ಕೂಸುಗಳೇ ಸ್ವತಃ ಹಾಂಗೆ ಆಲೋಚನೆ ಮಾಡಿಯೋಂಡು ಗಮ್ಮತಿಲ್ಲಿಪ್ಪದೂ ಇದ್ದು!

ಮದುವೆಯ ಬಗ್ಗೆ ಹೆದರಿಕೆ: ಅಯ್ಯೋ, ಹೆಚ್ಚು ಹೆಚ್ಚು ಓದಿದರೆ ಮತ್ತೆ ಮಾಣಿ ಸಿಕ್ಕ, ಅಥವಾ ಹೆಚ್ಚು ಪ್ರಾಯ ಆದರೆ ಮತ್ತೆ ಮದುವೆ ಅಪ್ಪಲೆ ಕಷ್ಟ ಅಕ್ಕು ಹೇಳುವ ಭಯ ಸುಮಾರು ಜನರಲ್ಲಿರ್ತು. ಈಗೀಗ (ಹವ್ಯಕ ಸಮಾಜಲ್ಲಿ) ಕೂಸುಗೊಕ್ಕೆ ಡಿಮ್ಯಾಂಡ್ ಜಾಸ್ತಿ ಆದ ಕಾರಣ ಜನ ಬಹುಷಃ ರಜ್ಜ ಮೆದು ಆದಿಕ್ಕು ಹೇಳಿ ಒಂದು ಊಹೆ!

ಓದುವ ಜಾಗೆ: ಉತ್ತರ ಭಾರತಲ್ಲಿ ಐ.ಐ.ಟಿ. ಸೀಟು ಸಿಕ್ಕಿದರೆ ಕೂಸಿನ ಕಳ್ಸುಸೆ ಎಷ್ಟು ಜನ ತಯಾರಿರ್ತವು? ಅಥವಾ ಎಷ್ಟು ಕೂಸುಗೊ ಹೋಪಲೆ ತಯಾರಿರ್ತವು? ತುಂಬಾ ದೂರ ಹೋಗಿ ಓದುದು ಬೇಡ ಹೇಳುವ ಭಾವನೆ ಹೆಣ್ಣಿನ ಶಿಕ್ಷಣಲ್ಲಿ ಒಂದು ಅಡಚಣೆಯಾಗಿದ್ದು.

ಕಲ್ಶುವ ತಾಕತ್ತು: ಹೆಣ್ಣು-ಗಂಡು, ಎರಡೂ ರೀತಿಯ ಮಕ್ಕೊ ಇಪ್ಪಗ ಇಬ್ಬರನ್ನೂ ಕಲ್ಶುಲೆ ಪೈಸೆ ಇಲ್ಲೆ ಹೇಳಿ ಇದ್ದರೆ, ‘ಮುಂದೆ ಸಂಪಾದ್ಸೆಕ್ಕಾದವಂ, ಮುಂದೆ ನಮ್ಮ ನೋಡಿಯೋಂಬವಂ’ ಹೇಳುವ ಆಲೋಚನೆಲಿ ಗಂಡಿನ ಓದಿಂಗೆ ಜಾಸ್ತಿ ಖರ್ಚು ಮಾಡುದು ಸಾಮಾನ್ಯ. ಇದು ಕೂಡ ಕೆಲವು ಕಡೆ ಹೆಣ್ಣಿನ ಶಿಕ್ಷಣವ ಮೊಟಕುಗೊಳ್ಸುತ್ತು.

ಉದ್ಯೋಗ
ನಮ್ಮಲ್ಲಿ ಇನ್ನುದೇ ಹೆಮ್ಮಕ್ಕೊ ಕೆಲಸಕ್ಕೆ ಹೋಪಲಾಗ ಅಥವಾ ಹೋಪ ಅಗತ್ಯ ಇಲ್ಲೆ ಹೇಳಿ ತುಂಬಾ ಜನ ಅಭಿಪ್ರಾಯ ಪಡ್ತವು. ಇದಕ್ಕೆ ಕಾರಣಂಗಳೂ ಹಲವಾರು ಇರ್ತು.
·   ಮಕ್ಕೊಗೆ ಮನೆಲಿ ‘ಅಮ್ಮ’ನ ಅಗತ್ಯ ಇದ್ದು, ಇಲ್ಲದ್ದರೆ ಒಟ್ಟಾರೆ ಕೌಟುಂಬಿಕ ಆರೋಗ್ಯ ಹಾಳಾವ್ತು ಹೇಳಿ ಕೆಲವರು ಅಭಿಪ್ರಾಯಪಡ್ತವು.
·    ಇನ್ನು ಕೆಲವರು (ಪೈಸೆಯ ಮಟ್ಟಿಂಗೆ ಸಾಕಷ್ಟು ಉತ್ತಮ ಸ್ಥಿತಿಲಿ ಇಪ್ಪವು) ಗಂಡ ಸಂಪಾದ್ಸಿದ್ರೆ ಸಾಕಲ್ಲದಾ, ಎಂತದಕ್ಕೆ ದುರಾಶೆ ಹೇಳಿ ಹೇಳ್ತವು.
·    ಕಾರಣಾಂತರಗಳಿಂದ ಒಬ್ಬರು ಮನೆಲಿ ಕೂರೆಕ್ಕಾದ ಅನಿವಾರ್ಯತೆ ಇದ್ದು ಹೇಳಿ ಇದ್ದರೆ, ಗಂಡು ಮನೆಲಿ ಕೂದು ಹೆಣ್ಣು ಉದ್ಯೋಗ ಮಾಡುದರ ಕಲ್ಪಿಸಿಗೊಂಬಲೂ ಸುಮಾರು ಜನಕ್ಕೆ ಎಡ್ತಿಲ್ಲೆ. ಅದು ಗಂಡಸುತನಕ್ಕೆ ಕೊರತೆ ಹೇಳಿ ಮುಸಿಮುಸಿ ನೆಗೆ ಮಾಡುವ ಪುರುಷಪ್ರಧಾನ ಮನಸ್ಥಿತಿಯವೂ ಇರ್ತವು.

ಹೆಣ್ಣು ಕೆಲಸಕ್ಕೆ ಹೋಗದ್ರೆ ಎಂತ ಆವ್ತು? ಕಾರಣ ಎಂತದೇ ಇರಲಿ, ಆದರೆ ಗಂಡು ಉದ್ಯೋಗಕ್ಕೆ ಹೋಗಿ ಹೆಣ್ಣು ಮನೆಲಿ ಕೂಪಂತಹ ವಾತಾವರಣಲ್ಲಿ ಮೇಲು-ಕೀಳು ಭಾವನೆ ಬಪ್ಪ ಸಾಧ್ಯತೆ ಬಹಳ ಹೆಚ್ಚು. ‘ಇದು ಎನ್ನ ಪೈಸೆ ಅಲ್ಲ’ ಹೇಳುವ ಭಾವನೆ ಬಪ್ಪದು, ಲೋಕಜ್ಞಾನ ಕಮ್ಮಿ ಅಪ್ಪದು ಇತ್ಯಾದಿ ವಿಷಯಂಗೊ ಹೆಣ್ಣಿನ ಆತ್ಮವಿಶ್ವಾಸವ ಹೆಚ್ಚು ಮೇಲೆ ಹೋಪಲೆ ಬಿಡ್ತಿಲ್ಲೆ. (ಈ ಸಮಸ್ಯೆ ಗಂಡು ಮನೆಲಿ ಕೂದರುದೇ ಬಕ್ಕು). ಹೆಣ್ಣಿನ economic independence ಸುಮಾರು ಜನಕ್ಕೆ ಮುಖ್ಯ ಆವುತ್ತೇ ಇಲ್ಲೆ. ಬ್ರಾಹ್ಮಣೇತರ ಸಮಾಜಲ್ಲಿಯೇ ಎಷ್ಟೋ ಕಡೆ ಹೆಮ್ಮಕ್ಕೊ ಸ್ವತಃ ಸಂಪಾದಿಸಿ ಗಂಡಿನ ದೌರ್ಜನ್ಯವ ಮೆಟ್ಟಿ ನಿಂದು ಜೀವನವ ಎದುರಿಸುತ್ತವು. ಬ್ರಾಹ್ಮಣ ಸಮಾಜಲ್ಲಿ explicit ದೌರ್ಜನ್ಯ, ಹೊಡೆದು-ಬಡಿದು ಮಾಡುದು ಇತ್ಯಾದಿ ಕಮ್ಮಿ. ಹಾಂಗಾಗಿ ಆದಿಕ್ಕು, ಕೂಸುಗೊಕ್ಕುದೇ ಸ್ವಂತ ಪೈಸೆ ಬೇಕು ಹೇಳುದರ ಬಗ್ಗೆ ಸುಮಾರು ಸಲ ಚಿಂತೆ ಇರ್ತಿಲ್ಲೆ. ಆದರೆ ವರ್ಷಂಗೊ ಉರುಳಿದ ಹಾಂಗೆ ಉಶಾರಿನ ಕೂಸುಗೊಕ್ಕೆ ನಿಧಾನಕ್ಕೆ ಈ ಕೊರತೆ ಕಾಂಬಲೆ ಶುರು ಆವ್ತು, ಆದರೆ ಅಂಬಗ ವಾಪಸ್ ಹೋಪಲೆ ಎಡ್ತಿಲ್ಲೆ. ಅಥವಾ ಅನಿರೀಕ್ಷಿತ ಕಾರಣಂದ ಇಕ್ಕಟ್ಟಿಲ್ಲಿ ಸಿಕ್ಕಿದರೆ ಅಂಬಗಳುದೇ ಸಮಸ್ಯೆ ಶುರು ಆವ್ತು (ಉದಾ: ಗಂಡ ಸತ್ತು ಹೋದರೆ ಅಥವಾ ಆರ್ಥಿಕ ಕಷ್ಟ ಬಂದರೆ)

ವಿ.ಸೂ. ಕೃಷಿ ಮಾಡಿಗೊಂಡು ಇಪ್ಪಲ್ಲಿಯುದೇ ಕೆಲವು ಕಡೆ ಗಂಡಿಂಗೆ ‘ಹೆರ’ ಹೋಗಿ ಮಾಡುವ ಕೆಲಸದ ಕೊಂಬು ಇರ್ತು, ಹೆಂಗಸರು ಮನೆಲಿ, ತೋಟಲ್ಲಿ ಬೆನ್ನು ಮುರಿವ ಹಾಂಗೆ ಕೆಲಸ ಮಾಡಿದರೂ ತಾವು ಅವರಿಗಿಂತ ಮೇಲು ಹೇಳುವ ಭಾವನೆ ಗಂಡಸರಿಂಗೆ ಇಪ್ಪದು ನೋಡಿದ್ದೆ.

ಹಾಂಗೂ ಕೆಲಸಕ್ಕೆ ಹೋಪದು ಓಕೆ ಹೇಳಿದರೆ ಅಲ್ಲಿಯೂ ಸಮಾನತೆ ಇರ್ತಿಲ್ಲೆ:
·         ಹೆಣ್ಣಿನ ಉದ್ಯೋಗ ಬರೀ ಟೈಂ‍ಪಾಸ್ ಹೇಳಿ ಪರಿಗಣಿಸುವವು ಇರ್ತವು
·         ಇಡೀ ದಿನ ಕೆಲಸ ಮಾಡುದು ಬೇಡ, ಸಣ್ಣ ಕೆಲಸ ಮಾಡಿದರೆ ಸಾಕು ಹೇಳಿ ಕೆಲವು ಹೇಳ್ತವು
·         ಗಂಡಿಂಗೆ ಸಮಾನವಾದ ಅಥವಾ ಹೆಚ್ಚಿನ (ಶ್ರಮ, ಸಮಯ ಅಥವಾ ಪೈಸೆಯ ಮಾನದಂಡಲ್ಲಿ) ಉದ್ಯೋಗ ಮಾಡಿದರೂ ಕೂಡ ಮನೆಲಿ ಹೆಣ್ಣಿನ ಮೇಲೆ ಕಂಡಾಬಟ್ಟೆ ಜಾಸ್ತಿ ಒತ್ತಡ ಇರ್ತು. ಮನೆ ಕೆಲಸ, ಅಡಿಗೆ, ಮಕ್ಕಳ ನೋಡಿಗೊಂಬದು ಇತ್ಯಾದಿ ಅವರದ್ದೇ ಜವಾಬ್ದಾರಿ ಗಂಡಂದಲ್ಲ ಹೇಳಿ ಹೇಳುವ ವಾತಾವರಣ ಇರ್ತು ಹಲವು ಕಡೆ.
·         ಕೆಲಸಕ್ಕೆ ಹೋಪ ಹೆಂಡತಿಯೊಟ್ಟಿಂಗೆ ಮಕ್ಕಳ ಬಿಟ್ಟು ಗಂಡ ಕೆಲಸಕ್ಕೆ ವಿದೇಶ ಪ್ರಯಾಣಕ್ಕೆ ಹೋಪದು ಇದ್ದು, ಆದರೆ ಅದರ ವಿರುದ್ಧ ಕಾಂಬಲೆ ಸಿಕ್ಕುದು ಕಡಮ್ಮೆ.

ಒಂದು ಸನ್ನಿವೇಶವ ತೆಕ್ಕೊಂಬ: ಇಬ್ಬರೂ ಕೆಲಸಕ್ಕೆ ಹೋಪ ಒಂದು ಮನೆಯ ತೆಕ್ಕೋಳಿ. ಮನೆಲಿ ಅತ್ತೆ-ಮಾವ ಎಲ್ಲರೂ ಇದ್ದವು (ಗಂಡನ ಅಪ್ಪ-ಅಮ್ಮ). ಹೆಂಡತಿಯ ಒಂದು (ಹೆಣ್ಣು ಅಥವಾ ಗಂಡು) ಸಹೋದ್ಯೋಗಿ ಮನೆಗೆ ಬಂದತ್ತಪ್ಪಾ. ಅಂಬಗ ಹೆಣ್ಣು ಕಾಲಿನ ಮೇಲೆ ಕಾಲು ಹಾಕಿಯೋಂಡು ಗಮ್ಮತಿಲ್ಲಿ ಸಹೋದ್ಯೋಗಿಯ ಹತ್ರ ಮಾತಾಡುದು, ಗಂಡು ಒಳ ಹೋಗಿ ಕಾಪಿ-ಉಪ್ಪಿಟ್ಟು ಮಾಡಿ ತಪ್ಪದು, ಇತರ ಬೇಕು-ಬೇಡಂಗಳ ನೋಡುದು - ಹೀಂಗೆ ಎಲ್ಲಿಯಾದರೂ ನಡೆತ್ತಾ? ಅಥವಾ ನಡೆದರೂ ಅದರ ಎಷ್ಟು ಜನ ಒಳ್ಳೆ ದೃಷ್ಟಿಲಿ ನೋಡ್ತವು? ಅಂವ ಹೆಂಡತಿಯ ಗುಲಾಮ ಹೇಳಿ ನೆಗೆ ಮಾಡುವವೂ ಇರ್ತವು. ಗಮನಿಸಿ: ಇಂತಹ ಸನ್ನಿವೇಶ ವಿದೇಶಲ್ಲಿ ಕೆಲವು ಕಡೆ ಬಹಳ ಸ್ವಾಭಾವಿಕ.

ಕೆಲವು ಸಮಸ್ಯೆಗಳ ಬೇರುಗೊ ಬಹಳ ಆಳಲ್ಲಿ ಇರ್ತು. ಅಡಿಗೆ-ಮನೆಕೆಲಸ ಆದಿಕ್ಕು, ಮಕ್ಕಳ ನೋಡಿಗೊಂಬದು ಆದಿಕ್ಕು - ಸುಮಾರು ಕಡೆ ಗಂಡಸರು ಕೂಡ ಬಹಳ ಚೆಂದಕ್ಕೆ ಮಾಡ್ತವು, ಅವಕ್ಕೂ ಎಡಿತ್ತು ಹೇಳುವ ಸತ್ಯವ ಮನಗಾಣದ್ದೇ, ಆ ಸಾಧ್ಯತೆಯನ್ನೇ ಬದಿಗೆ ಮಡಿಗಿ ಮಕ್ಕಳ ಬೆಳಶಿದರೆ ಬಹುಷಃ ಸುಮಾರು ಗಂಡುಮಕ್ಕೊ (ಈ ವಿಷಯಲ್ಲಿ) ಪೆದ್ದುಪೆದ್ದಾಗಿ ಬೆಳತ್ತವು, ಕೊನೆಗೆ ಇದೆಲ್ಲಾ ಗಂಡಸರ ಕೈಲಿ ಅಪ್ಪಲೆ ಹೋಪಲೆ ಇಲ್ಲೆ ಹೇಳಿ ಬಿಡ್ತವು. ಹೆಂಗಸರಲ್ಲೇ ಹೀಂಗೆ ಹೇಳುವವು ಬೇಕಾದಷ್ಟಿದ್ದವು. ಮೊದಲಾದರೆ ಗಂಡಸರು ಮಕ್ಕಳ ಹತ್ರೆ ಪ್ರೀತಿ-ಸೌಹಾರ್ದಲ್ಲಿ ಇದ್ದದು ಕಡಮ್ಮೆ, ಈಗೀಗ ಗಂಡಸರು ಬದಲಾವ್ತಾ ಇದ್ದವು ಸರಿ. ಆದರೆ ಗಂಡ-ಹೆಂಡತಿಯ ಮಧ್ಯೆ ಇನ್ನುದೇ ಹೆಚ್ಚಿನ ಸಮಾನತೆ ಬಪ್ಪಲೆ ಬಾಕಿ ಇದ್ದು. ಮಗುವಿನ ಗಲೀಜಿನ ತೆಗವ ವಿಷಯ ಬಂದಪ್ಪಗ ಹೆಂಡತಿಯ ತಲೆಗೆ ಹಾಕಿ ಅತ್ತ ಕಡೆ ಮೋರೆಯೇ ತಿರುಗಿಸದ್ದ ಗಂಡಂದ್ರು ಬೇಕಾದಷ್ಟಿದ್ದವು (ಎಲ್ಲರೂ ಅಲ್ಲ).

ಗಂಡಂದ್ರು ಉದ್ಯೋಗಂದ ‘ರಿಟೈರ್’ ಆದರೂ ಹೆಂಡತಿಯ ಮನೆಗೆಲಸಕ್ಕೆ ರಿಟೈರ್‍‍ಮೆಂಟ್ ಇದ್ದೋ? ಎಷ್ಟು ಜನ ಗಂಡಸರು ಉದ್ಯೋಗಲ್ಲಿ ಒತ್ತಡ ಕಡಮ್ಮೆ ಆದ ಮೇಲೆ ಅಡುಗೆ-ಮನೆಗೆಲಸಲ್ಲಿ ಕೈಜೋಡ್ಸುತ್ತವು? ಹೆಂಡತಿಗೂ ಪ್ರಾಯ ಆವ್ತಾ ಇದ್ದು, ಕಷ್ಟ ಆವ್ತು ಹೇಳಿ ಗಮನಿಸುತ್ತವು?

ಧಾರ್ಮಿಕತೆ

ಆನು ಇದರಲ್ಲಿ expert ಅಲ್ಲ, ಆದರುದೇ ಮೇಲೆಂದ ಮೇಲೆ ನೋಡುವಾಗ ಧಾರ್ಮಿಕ ವಿಧಿಗಳಲ್ಲಿ ಸಾಕಷ್ಟು ‘ಪುರುಷ ಪ್ರಧಾನ’ ಮನಸ್ಥಿತಿ ಕಾಣ್ತು, ಮನಸ್ಸಿಂಗೆ ಬಹಳ ಹಿಂಸೆ ಆವ್ತು.

ಮುಟ್ಟು: ಕೆಲವುದರ ಗಂಡಸರು ಮಾತ್ರ ಮಾಡುಲಕ್ಕಷ್ಟೆ (ಉದಾ: ಚಿತೆಗೆ ಅಗ್ನಿಸ್ಪರ್ಷ ಮಾಡುದು, ಉಪನಯನಲ್ಲಿ ಮಂತ್ರೋಪದೇಶ ಮಾಡುದು), ಮುಟ್ಟಾದ್ರೆ ದೇವಸ್ಥಾನ ಪ್ರವೇಶ ಮತ್ತಿತರ ಕೆಲವು ಕಾರ್ಯ ನಿಷಿದ್ಧ ಹೇಳಿ ಹೇಳ್ತವು. ಹೆಂಗಸರಿಂಗೆ ಉಪನಯನ ಇರ್ತಿಲ್ಲೆ, ಅರ್ಚಕಿಯಾಗಿ ದೇವಸ್ಥಾನಲ್ಲಿ ದೇವರ ಪೂಜೆ ಮಾಡುವ ಅಧಿಕಾರ ಇರ್ತಿಲ್ಲೆ, ಪೌರೋಹಿತ್ಯ ಮಾಡುಲೆ ಎಡ್ತಿಲ್ಲೆ, ಮನೆಲಿ ನಿತ್ಯಪೂಜೆ ಮಾಡುಲೆ ಎಡ್ತಿಲ್ಲೆ. ಈ ಎಲ್ಲದಕ್ಕೂ ಮೂಲ ಕಾರಣ ‘ಮುಟ್ಟು’ ಹೇಳುವ ನೈಸರ್ಗಿಕ ಪ್ರಕ್ರಿಯೆಯ ಕೀಳಾಗಿ ಕಾಂಬದು ಮತ್ತೆ ಅದರಿಂದಾಗಿ ನಿತ್ಯವೂ ಅವಕ್ಕೆ ಮಾಡುಲೆ ಎಡ್ತಿಲ್ಲೆ ಹೇಳುವ bottleneck ಬಪ್ಪದು. ಈಗಾಣ ಕಾಲಲ್ಲಿ ಮುಟ್ಟಾದಿಪ್ಪಗ ಏನೇನೂ ಕಷ್ಟ ಆಗದ್ದ ಹಾಂಗೆ ವ್ಯವಹರಿಸುಲೆ ಹೆಮ್ಮಕ್ಕೊಗೆ ಎಡ್ತು, ಅಂಬಗ ಧಾರ್ಮಿಕ ವಿಧಿಲಿ ನಿಷೇಧ ಎಂತದಕ್ಕೆ? ಕಷ್ಟ ಆವುತ್ತೋ ಇಲ್ಲೆಯೋ - ಆದರೆ ಮೈಲಿಗೆ ಹೇಳಿ ಎಂತದಕ್ಕೆ ಪರಿಗಣಿಸೆಕ್ಕು? ದೇವರಿಂಗೆ ಮೈಲಿಗೆ ಇದ್ದಾ? ಹೆಂಗಸರಿಂಗೆ ಉಪನಯನ ಇತ್ಯಾದಿ ಸಂಸ್ಕಾರ ಎಂತದಕ್ಕೆ ನಿಷಿದ್ಧ? (ಮೊದ್ಲಾಣ ಕಾಲ್ಲಲ್ಲಿ ಇತ್ತಿದ್ದಡಪ್ಪ, ಹೇಳುದು ಕೇಳಿದ್ದೆ)

ವಿಧವೆಯರು: ಇವು ಅಶುಭ, ಹಾಂಗೆ ಮಾಡ್ಲಾಗ - ಹೀಂಗೆ ಮಾಡಿದರೆ ದೋಷ ಹೇಳಿ ಬೇಕಾದಷ್ಟು ನಿರ್ಬಂಧ ಹೇರ್ತವು. ಬೊಟ್ಟು ಹಾಕುಲಾಗ, ಅಲಂಕಾರ ಮಾಡುಲಾಗ, ಶುಭ ಕಾರ್ಯಂಗೊಕ್ಕೆ ಬಪ್ಪಲಾಗ ಹೇಳಿ ಹೇಳ್ತವು (ಮಕ್ಕಳ ನಾಮಕರಣಕ್ಕೆ ಈಗಳುದೇ ಸುಮಾರು ವಿಧವೆಯರು ಹೋಪಲಿಲ್ಲೆ). ವಿಧವೆಯಂದ್ರಿಂಗೆ ಮಗಳ ಕನ್ಯಾದಾನ ಮಾಡುಲೆ ಹಕ್ಕು ಇಲ್ಲೆ. ಸ್ವಂತ ಮಗಳ ಬೇರೆ ಆರೋ ಕನ್ಯಾದಾನಾ ಮಾಡುದರ ಮೂಕವಾಗಿ ನೋಡಿಯೋಂಡು ಕೂಪ ಸ್ಥಿತಿ ಇದ್ದು ಅಂತಹ ಅಮ್ಮಂದ್ರಿಂಗೆ ಇಂದಿಂಗುದೇ, ಆದರೆ ಅಪ್ಪ ಮಾತ್ರ ಇದ್ದರೆ ಹಾಂಗಿಪ್ಪ ತೊಂದರೆ ಇಲ್ಲೆ (ಅಲ್ಲಾ, ಕೂಸಿನ ಕೊಡುದಕ್ಕೆ ಕನ್ಯಾದಾನ ಹೇಳಿ ಹೇಳ್ತವು. ಅದೆಂತದಕ್ಕೆ ‘ಕನ್ಯೆ’ಯೇ ಆಯ್ಕು ಮದುವೆ ಅಪ್ಪಲೆ? ಅಂಬಗ ವಿಧವೆ ಅಥವಾ ವಿಚ್ಛೇದನ ಆದವು ಮದುವೆ ಅಪ್ಪದು ‘ಧರ್ಮ’ದ ಪ್ರಕಾರ ತಪ್ಪಾ?)

ಕಾಲ್ಗುಣ: ಕೂಸು ಮದುವೆ ಆಗಿ ಗಂಡನ ಮನೆಗೆ ಹೋದಪ್ಪಗ ಎಂತಾದ್ರುದೇ ಅನಾಹುತ ಆದ್ರೆ, ಮರಣ ಸಂಭವಿಸಿದ್ರೆ ಕೂಸಿನ ಕಾಲ್ಗುಣದ ಬಗ್ಗೆ ಮಾತು ಇಂದಿಂಗುದೇ ಬತ್ತು. ಆದರೆ ಗಂಡಿಂಗೆ ಹಾಂಗಿಪ್ಪ ಕಳಂಕ ಬಪ್ಪದು ಕೇಳಿದ್ದಿಲ್ಲೆ. ಇದೇ ರೀತಿ ಕೂಸು ಹುಟ್ಟಿದಪ್ಪಗಳುದೇ ಕೆಲವೊಮ್ಮೆ ಕೂಸಿನ ಕಾಲ್ಗುಣದ ಬಗ್ಗೆ ಮಾತು ಬತ್ತು, ಆದರೆ ಗಂಡು ಮಗುವಿಂಗೆ ಹಾಂಗೆಂತ ಆವ್ತಿಲ್ಲೆ. ಇದು ಹವ್ಯಕರಲ್ಲಿ ರಜ್ಜ ಕಮ್ಮಿ ಇದ್ದೇನೋ, ಆದರೆ ಒಟ್ಟಾರೆ ನೊಡಿದರೆ ಬ್ರಾಹ್ಮಣರಲ್ಲಿ ಸಾಕಷ್ಟು ನಡೆತ್ತಾ ಇದ್ದು ಹೇಳಿ ಕೇಳಿದ್ದೆ.

ಇನ್ನೂ ಕೆಲವು:
- ಕೂಸುಗೊ ಬಳೆ, ಕೆಮಿದು, ಬೊಟ್ಟು ಇತ್ಯಾದಿ ಹಾಕದ್ರೆ ದೊಡ್ಡ ಸಂಗತಿ, ಆದ್ರೆ ಗಂಡುಮಕ್ಕೊಗೆ ಹಾಂಗೆಂತ ಇಲ್ಲೆ.
- ಮಾಣಿಯಂಗೊಗೆ ಜುಟ್ಟು ಬಿಡೆಕು ಹೇಳುವ ಒತ್ತಡ ಪೂರ್ತಿ ಹೋಯ್ದು, ಆದ್ರೆ ಹೆಂಗಸರು ಜೆಡೆ ಹಾಕುವ ಹಾಂಗೆ ಉದ್ದದ ಕೂದ್ಲು ಬಿಡೆಕು ಹೇಳಿ ಹೇಳುವವು ಇನ್ನುದೇ ಸುಮಾರು ಜನ ಇದ್ದವು
- ಮದುವೆ ಆದ ಹೆಂಗಸರು ಕರಿಮಣಿ ಹಾಕದ್ರೆ ದೊಡ್ಡ ಸಂಗತಿ, ಆದರೆ ಗಂಡಸರು ಜನಿವಾರ ಹಾಕದ್ರೆ ದೊಡ್ಡ ಸಂಗತಿ ಅಲ್ಲ.
- ಪೂಜೆಗೆ ಗಂಡಸರು ಪ್ಯಾಂಟ್ ಶರ್ಟ್ ಹಾಕಿಯೊಂಡು ಬಂದರೆ ದೊಡ್ಡ ವಿಷಯವೇ ಇಲ್ಲೆ, ಆದರೆ ಒಂದು ಕೂಸು ಹಾಂಗೆ ಬಂದರೆ?

ಹೆಚ್ಚಿನ ಸಲ ಕ್ರಮಂಗಳ ಹಿಂದೆ ಅಗೌರವ ಇದ್ದು ಹೇಳಿ ಅಲ್ಲ, ‘ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ’ ಹೇಳುವ ಮಾತನ್ನೇ ನೋಡಿದ್ರೆ ಗೊಂತಾವ್ತು ಮೂಲತಃ ಅಗೌರವ ಇಲ್ಲೆ ಹೇಳಿ. ಆದರೆ ಸಾರಾಸಾಗಟಾಗಿ ಗಂಡು ಒಂದು ವಿಷಯಕ್ಕೆ ಲಾಯಕ್ಕು, ಹೆಣ್ಣು ಇನ್ನೊಂದು ವಿಷಯಕ್ಕೆ ಲಾಯಕ್ಕು ಹೇಳಿ ಮಾಡಿದ ವಿಂಗಡನೆ ಸುಮಾರು ಸಮಸ್ಯೆಗಳ ಹುಟ್ಟುಹಾಕಿದ್ದು. ನಿಧಾನಕ್ಕೆ ಚಿನ್ನದ ಪಂಜರಲ್ಲಿ ಸಿಕ್ಕಿಹಾಕಿ, ಕೊನೆಗೆ ಹೊನ್ನಶೂಲಕ್ಕೆ ಏರಿದ ಕಥೆ ಹೆಣ್ಣಿಂದು, ನಮ್ಮ ದೇಶಲ್ಲಿ.

ಎಷ್ಟೋ ಸಲ ಹೆಮ್ಮಕ್ಕೊಗೆ ಕೂಡ ಇದೊಂದು ಅವಮಾನ, ತಪ್ಪು ಹೇಳಿ ಭಾಸ ಆವ್ತೇ ಇಲ್ಲೆ, ಅಷ್ಟರ ಮಟ್ಟಿಂಗೆ ಹಾಸುಹೊಕ್ಕಾಯ್ದು ಕೆಲವು ಸಂಪ್ರದಾಯಂಗೊ. ಆದರೆ ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕುವ ಅಗತ್ಯ ಇಲ್ಲೆ ಹೇಳಿ ಅನೇಕರು ಅರ್ಥಮಾಡಿಗೊಳ್ತವಿಲ್ಲೆ; ಕ್ರಮ-ಸಂಪ್ರದಾಯಂಗಳ ಗುಣಾವಗುಣಂಗಳ ವಿಶ್ಲೇಷಿಸಿ ಉತ್ತಮ, ಪ್ರಬುದ್ಧ ಬದಲಾವಣೆಯ ತಪ್ಪಲೆ ಪ್ರಯತ್ನ ಮಾಡುವವು ತುಂಬಾ ಕಡಮ್ಮೆ.

ಅಪ್ಪು, ಒಪ್ಪುತ್ತೆ - ಮುಟ್ಟಾದ್ರೆ ಹೆರ ಕೂಪದು ನಿಂದಿದು, ವಿಧವೆಯರ ತಲೆ ಬೋಳ್ಸುತ್ತವಿಲ್ಲೆ, ವಿಧವೆಯರಿಂಗೆ ಮತ್ತೆ ವಿಚ್ಛೇದನ ಪಡೆದ ಕೂಸುಗೊಕ್ಕೆ ಮರುಮದುವೆಯೂ ಅಪ್ಪಲೆ ಶುರು ಆಯ್ದು, ಬಹಳ ಒಳ್ಳೆಯದು. ಆದರೆ ಕ್ರಮಿಸುಲೆ ಇನ್ನೂ ಸುಮಾರು ದೂರ ಇದ್ದು ಹೇಳಿ ಎನಗೆ ಕಾಣ್ತು.

ವಿ.ಸೂ.೧. ವೇದದ ಕಾಲಲ್ಲಿದ್ದ ಹೆಣ್ಣಿನ ಸ್ಥಾನಮಾನವ ಕೆಳ ಮಾಡುದ್ರಲ್ಲಿ ಮನುಸ್ಮೃತಿಯ ಮಹತ್ತರವಾದ ಪಾತ್ರ ಇದ್ದು ಹೇಳಿ ಹೇಳುವವು ಇದ್ದವು, ಅದರ ಬಗ್ಗೆ ಎನಗೆ ಹೆಚ್ಚು ಗೊಂತಿಲ್ಲೆ. ಇದು ಅಲ್ಲ ಹೇಳಿಯಾದರೆ ಒಂದೋ ವೇದದ ಕಾಲಲ್ಲಿಯೇ ಸಮಾನತೆ ಇತ್ತಿದ್ದಿಲ್ಲೆ, ಅಥವಾ ಬೇರೆ ಕಾರಣಂಗೊ ಈ ಸಮಾನತೆಯ ತೆಗೆದು ಹಾಕಿಕ್ಕು. ಇರಲಿ, ಚರಿತ್ರೆ ಎಂತ ಹೇಳುದಕ್ಕಿಂತ ಈಗ ನಾವು ಹೇಂಗಿದ್ದರೆ ಉತ್ತಮ ಹೇಳಿ ನೋಡಿದರೆ ಉತ್ತಮ.

ವಿ.ಸೂ.೨. ಕೆಲವರು ಹೇಳ್ತವು, ಇದು ಪುರುಷ ಪ್ರಧಾನ ಅಲ್ಲ, ಗಂಡಿಂಗೆ ಅದು, ಹೆಣ್ಣಿಂಗೆ ಇದು ಹೇಳಿ ಕ್ರಮಂಗಳ ವಿಂಗಡನೆ ಅಷ್ಟೆ ಹೇಳಿ. ಕೆಲವು ಸಣ್ಣ ಸಣ್ಣ ವಿಷಯಂಗಳಲ್ಲಿ ಹಾಂಗಿಪ್ಪಲೂ ಸಾಕು, ಆದರೆ ಬಹಳ ನಿಚ್ಚಳವಾಗಿ ಪುರುಷ ಪ್ರಧಾನ ಸಂಪ್ರದಾಯ ಎನಗೆ ಎದ್ದು ಕಾಣ್ತು.

ಇತರ ಸಂಪ್ರದಾಯಂಗೊ, ವಸ್ತುಸ್ಥಿತಿ

·    ಕೂಸುಗಳ ಬೇಗ ಮದುವೆ ಮಾಡುದು: ಸ್ವಂತ ವ್ಯಕ್ತಿತ್ವ ಪ್ರಬಲವಾಗಿ ಬೆಳವ ಮೊದಲೇ ಮದುವೆ ಮಾಡಿಬಿಟ್ಟರೆ, ಕೂಸೊಗೊ ಗಂಡಂದಿರ ನೆರಳಾಗಿಬಿಡ್ತವು, ಅವರ ಸಾಧನೆಯ ಸಾಧ್ಯತೆಗೊ ಕಡಿಮೆ ಆವ್ತು ಹೇಳಿ ಎನಗೆ ಕಾಣ್ತು. ಬೇಗ ಮಕ್ಕೊ ಅಪ್ಪದರಲ್ಲಿಯೂ ಈ ರೀತಿ ಆವ್ತು. ಬಹುಷಃ ಬಾಲ್ಯ ವಿವಾಹ ನಿಂದಿದು ಹೇಳಿ ಹೇಳುಲಕ್ಕೇನೋ.
·         ಹೆಣ್ಣು-ಗಂಡಿಂಗೆ ತುಂಬಾ ವಯಸ್ಸಿನ ಅಂತರ ಇಪ್ಪದು: ಈಗ ಈ trend ರಜ್ಜ ಬದಲಾವ್ತಾ ಇದ್ದು. ಎರಡರಲ್ಲಿಯೂ ಬೇರೆ ಬೇರೆ ರೀತಿಯ ಒಳ್ಳೆದು-ಹಾಳು ಇದ್ದು ಹೇಳಿ ಎನಗೆ ಕಾಣ್ತು, ಆದರೆ ಸಮಾನತೆಯ ದೃಷ್ಟಿಲಿ ನೋಡಿದರೆ ವಯಸ್ಸಿನ ಅಂತರ ಹೆಚ್ಚಿದ ಹಾಂಗೆ ಹೆಣ್ಣು ಗಂಡಿನ ನೆರಳಾಗಿಪ್ಪ ಸಾಧ್ಯತೆ ಹೆಚ್ಚು ಹೇಳಿ ಕಾಣ್ತು
·         ಗಂಡಸರ ಅನೈತಿಕ ಕಾರ್ಯಂಗಳ ಹಗುರವಾಗಿ ನೋಡಿ ಹೆಂಗಸರದ್ದರ ದೊಡ್ಡ ವಿಷಯ ಮಾಡ್ತವು: ಉದಾ: ಕುಡಿತ, ಸಿಗರೇಟು ಸೇದುದು, ಜೂಜು, ಸೆಕ್ಸ್. ಹೆಂಗಸರೂ ಮಾಡಲಿ ಹೇಳಿ ಅಲ್ಲ, ಆದರೆ ತಪ್ಪಾದಪ್ಪಗ ಎಂತದಕ್ಕೆ ಹೆಂಗಸರದ್ದಕ್ಕೆ ಜಾಸ್ತಿ ಬಣ್ಣ, ಕೋಪ?
·       ಗಂಡ ಸರಿ ಇಪ್ಪದು-ಬಿಡುದು ಹೆಣ್ಣಿನ ಕೈಲಿ ಇಪ್ಪದು? ಶಿಕ್ಷಣ, exposure ಎಲ್ಲಾ ಕಡಮ್ಮೆ ಇದ್ದರೂ ಹೆಣ್ಣು ಗಂಡನ ದಾರಿ ತಪ್ಪಿದ್ದ ಹಾಂಗೆ ‘ನೋಡಿಯೋಳೆಕ್ಕು’ ಹೇಳುವ ನಿರೀಕ್ಷೆ ಇರ್ತು ಈಗಳೂ ಸುಮಾರು ಕಡೆ
·         ವರದಕ್ಷಿಣೆ: ಕೆಲವು ಬ್ರಾಹ್ಮಣ ಸಮುದಾಯಲ್ಲಿ ಇನ್ನುದೇ ವರದಕ್ಷಿಣೆಯ ಪಿಡುಗು ಸಾಕಷ್ಟು ಇದ್ದಡ
·         ವಾಸ: ಮದುವೆ ಆದ ನಂತರ ಎಂತದಕ್ಕೆ ಹೆಣ್ಣೇ ಗಂಡಿನ ಮನೆಗೆ ಹೋಯೆಕ್ಕು?
·       ಹೆಣ್ಣಿನ ಅಪ್ಪ-ಅಮ್ಮನ ಸ್ಥಾನಮಾನ: ಗಂಡಿನ ಅಪ್ಪ-ಅಮ್ಮ ಮತ್ತೆ ಹೆಣ್ಣಿನ ಅಪ್ಪ-ಅಮ್ಮಂಗೆ ಒಂದೇ ಸ್ಥಾನ ಇನ್ನುದೇ ಇಲ್ಲೆ. ಬರೀ ಮಗಳಿಪ್ಪ (ಅಥವಾ ಕೆಟ್ಟ ಮಗ + ಒಳ್ಳೆಯ ಮಗಳಿಪ್ಪ) ಅಪ್ಪ-ಅಮ್ಮಂದ್ರಿಂಗೆ ಇದರಿಂದ ಎಷ್ಟು ಕಷ್ಟ, ಅಲ್ಲದಾ?
·         ಆಸ್ತಿ: ಕಾನೂನಿಲ್ಲಿ ಬದಲಾವಣೆ ಆಯ್ದು ಸರಿ, ಆದರೆ ಸ್ವಯಾರ್ಜಿತವ ಹಂಚುವಾಗ ಈಗಳುದೇ ಸುಮಾರು ಜನ ಮಗಳಂದ್ರಿಂಗೆ ಕಡಮ್ಮೆ ಕೊಡ್ತವು ಅಥವಾ ಮಗಂದ್ರು ತಮಗೆ ಜಾಸ್ತಿ ಹಕ್ಕು ಇದ್ದು ಹೇಳಿ ಗ್ರೆಹಿಶುತ್ತವು
·   ಬಂಡಾಯ ಏಳುವ ಕೂಸುಗೊ: ಕೆಲವೊಮ್ಮೆ ಈ ಎಲ್ಲಾ ಕಟ್ಟುಪಾಡುಗಳ ವಿರುದ್ಧವಾಗಿ ಕೂಸುಗೊ/ಹೆಮ್ಮಕ್ಕೊ ಹೋಪದಿದ್ದು. ಅದರಲ್ಲಿ ಕೆಲವು ವಿಷಯಂಗೊ ಸಮಾಜಕ್ಕೆ ಇಷ್ಟ ಆವ್ತು, ಕೆಲವು ಆವ್ತಿಲ್ಲೆ. ಅದರಲ್ಲಿ ಕೆಲವು ವಿವೇಚನಾರಹಿತವಾಗಿ ಮಾಡಿದ್ದಿರ್ತು, ಕೆಲವೊಮ್ಮೆ ಆಲೋಚನೆ ಮಾಡಿಯೇ ಮಾಡಿರ್ತವು. ಆದರೆ ಒಟ್ಟಾರೆ ಹೆಣ್ಣು ಮಾಡಿದಪ್ಪಗ ಅದು ಸುಲಭವಾಗಿ ದೊಡ್ಡ ಸುದ್ದಿ ಆವ್ತು, ಗಂಡಸರು ಮಾಡಿದ್ದಕ್ಕಿಂತ!
·         ಹೆಂಗಸರುದೇ ಹೆಂಗಸರಿಂಗೆ ಶತ್ರುಗೊ: ತಾವು ಮೇಲು ಹೇಳುವ ಗಂಡಸರು ಹೇಂಗಾದ್ರುದೇ ಮಾಡ್ತವು, ಆದರೆ ಕಟ್ಟಿಹಾಕಿದ ಮನೋಭಾವಲ್ಲಿ ಬೆಳೆದ, ಹೆರಾಣ ಲೋಕವ ಹೆಚ್ಚು ನೋಡದ್ದ ಹೆಮ್ಮಕ್ಕಳಲ್ಲಿ ಕೂಡ ಹಲವರು ಹೆಣ್ಣಿನ ಈ ಸ್ಥಿತಿಯ ಮುಂದುವರಿಕೆಗೆ ಕಾರಣರಾವ್ತವು. ಉದಾ: ಎಷ್ಟೋ ಕಡೆಲಿ ಸೊಸೆಯ ಮೇಲೆ ಅತ್ತೆ ಒತ್ತಡ ಹೇರುದು, ಮಗಳ-ಮಗನ ಬೇರೆ ರೀತಿಲಿ ಬೆಳಶುದು.

ಇದೆಲ್ಲದರ ವಿರುದ್ಧವೂ ಇದ್ದು ಕೆಲವು ಕಡೆ. ಕೂಸುಗಳ ಕಟ್ಟುಪಾಡುಗೊಕ್ಕೆ ಒಳಪಡಿಶದ್ದೆ ಮನೆ-ಕೆಲಸ ಇತ್ಯಾದಿ ಕಲಿಶದ್ದೆ ಬೆಳೆಶುವ ಅಪ್ಪ-ಅಮ್ಮಂದ್ರೂ ಇದ್ದವು. ಹಾಂಗಿಪ್ಪಲ್ಲಿ ಕೆಲವೊಮ್ಮೆ ಬರೀ ಮುದ್ದಿಂದ ಆ ರೀತಿ ಬೆಳೆಶುತ್ತವು, ಇನ್ನು ಕೆಲವು ಕಡೆ ಗಂಡು ಮಕ್ಕಳ ಹಾಂಗೆ ಬೆಳೆಶುತ್ತವು. ಮೊದಲನೆಯದ್ದು ಮುಂದೆ ತೊಂದರೆ ಕೊಡುಗು, ಎರಡನೆಯದ್ದರ end result ಎಂತ ಹೇಳಿ ಹೇಳುಲೆ ಬತ್ತಿಲ್ಲೆ.

ಗಂಡೂ ಹೆಣ್ಣೂ ಒಂದೇಯೋ? ನಿಜಕ್ಕೂ ವೈಜ್ಞಾನಿಕವಾಗಿ ಸಮಾನತೆಗೆ ಅರ್ಹರೋ?

ಗಂಡು ಹೆಣ್ಣಿಂಗೆ ಸಾಕಷ್ಟು biological ವ್ಯತ್ಯಾಸಂಗೊ ಇದ್ದನ್ನೆ. ಸಾಮಾನ್ಯವಾಗಿ ಹೆಣ್ಣು ಗಂಡಿಗಿಂತ ನಾಜೂಕು, ಅಶಕ್ತೆ. ಮಕ್ಕಳ ಹೆರುದು ಹೆಣ್ಣೇ, ಗಂಡಿಂಗೆ ಸಾಧ್ಯ ಇಲ್ಲೆ. ಇದಲ್ಲದ್ದೆ ಭಾವನಾತ್ಮಕ ಮಟ್ಟಲ್ಲಿಯುದೇ ಕೆಲವು ವ್ಯತ್ಯಾಸಂಗೊ ಕಂಡುಬತ್ತು. ಆದರೆ ಬೌದ್ಧಿಕ ಮಟ್ಟಕ್ಕೆ ಬಂದಪ್ಪಗ? ಇದರ ಬಗ್ಗೆ ಆರುದೇ ಹೆಚ್ಚು ಮುಕ್ತವಾಗಿ ಅನಿಸಿಕೆ ವ್ಯಕ್ತಪಡಿಸುಲೆ ಹೆರಡ್ತವಿಲ್ಲೆ. ಜಗತ್ತಿನ ಬೇರೆ ಬೇರೆ ಜನಾಂಗಂಗಳ ಮಧ್ಯೆ ಬೌದ್ಧಿಕ ಮಟ್ಟದ ಹೋಲಿಕೆ/ತೂಗಿ ನೋಡುದು ಯಾವ ರೀತಿ ಅನೈತಿಕ ಹೇಳಿ ಪರಿಗಣಿಸಲ್ಪಟ್ಟಿದೋ ಅದೇ ರೀತಿ ಈ ವಿಷಯಲ್ಲಿ ಹೆಣ್ಣು-ಗಂಡಿನ ಹೋಲಿಕೆ ತಪ್ಪು ಹೇಳಿ ಇಂದ್ರಾಣ ಬುದ್ಧಿಜೀವಿಗೊ ಸಾಮಾನ್ಯವಾಗಿ ಅಭಿಪ್ರಾಯ ಪಡ್ತವು. ಹಾಂಗೆ ಹೇಳಿ ಜನ ಸುಮ್ಮನೆ ಕೂರ್ತವಿಲ್ಲೆ! ಈ ಕೆಳಾಣ ವಿಷಯಂಗಳ ಬಗ್ಗೆ ಸುಮಾರು ಜನಕ್ಕೆ one sided opinion ಇದ್ದು ಹೇಳಿ ಎನಗೆ ಗೊಂತಿದ್ದು. ಆದರೆ ನಿಜ ಎಂತದು?

·         ಹೆಣ್ಣಿಂಗೆ ಪ್ರಾಯ ೪೫ ದಾಟಿದ ಮೇಲೆ (ಮುಟ್ಟು ನಿಂದ ಮೇಲೆ) ಉದ್ಯೋಗಲ್ಲಿ ಆಸಕ್ತಿ ಕಮ್ಮಿ ಆವ್ತು ಹೇಳಿ ಹೇಳುದು ಕೇಳಿದ್ದೆ. ಇದು ಸತ್ಯವೋ? Majority ಹೆಂಗಸರಿಂಗೆ ಕೆಲಸ ಮಾಡುದಕ್ಕಿಂತ ಮನೆ-ಮಕ್ಕಳ ನೋಡಿಗೊಂಡು ಚಿನ್ನ-ಸೀರೆಯ ಬಗ್ಗೆ ಮಾತಾಡಿಗೊಂಡು ಕೂಪಲೆ ಜಾಸ್ತಿ ಇಷ್ಟವೋ? ಹಾಂಗಾದ್ರೆ ಗಂಡಸಿನ ಉದ್ಯೋಗದ ಮೇಲೆ ಹೆಚ್ಚು ಒತ್ತು ಕೊಡುದು ನ್ಯಾಯವೋ?
·      ಹೆಂಗಸರ weak point ಹೇಳಿ ಎಲ್ಲರೂ ಗ್ರೆಹಿಶಿಯೊಂಡು ಇದ್ದ ಆರ್ಥಿಕ ಕ್ಷೇತ್ರಲ್ಲಿ ಈಗ ಎಷ್ಟೋ ಹೆಂಗಸರು ಗಂಡಸರ ಮೀರಿಸಿ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದವು. ಹೆಂಗಸರು multi-taskingಲಿ ಗಂಡಸರಿಗಿಂತ ಉಶಾರು ಹೇಳಿ ಹೇಳುದು ಕೇಳಿದ್ದೆ. ಹಾಂಗಾದ್ರೆ ಉದ್ಯೋಗ ಕ್ಷೇತ್ರಲ್ಲಿ ಗಂಡಸರಿಗಿಂತ ಹೆಂಗಸರೇ ಅಕ್ಕೋ ಹೇಂಗೆ? ಮೊದಲು ಯುದ್ಧ ಜಾಸ್ತಿ ಇದ್ದ ಕಾಲಲ್ಲಿ ಸ್ವಾಭಾವಿಕವಾಗಿ ದೈಹಿಕವಾಗಿ ಅಶಕ್ತೆಯಾದ ಕಾರಣ ಹೆಣ್ಣು ‘ಸಂರಕ್ಷಣೆ’ಯ ಹೆಸರಿಲ್ಲಿ ತೆರೆಯ ಹಿಂದೆ ಹೋಗಿದ್ದಿಕ್ಕು, ಆದರೆ ಈಗ ಸುಭಿಕ್ಷತೆ, ಸುರಕ್ಷತೆ ಹೆಚ್ಚಾದ ಹಾಂಗೆ ಮಹಿಳೆಯರೇ ಹೆಚ್ಚು preferred employees ಅವ್ತಾ ಇದ್ದವೋ? ಯುದ್ಧಕಾಲಲ್ಲಿ ಬೇಕಾದ ಶಕ್ತಿ, ಕೋಪ ಇತ್ಯಾದಿಗಳ ಬದಿಗೆ ಮಡಿಗಿ ಹೆಂಗಸರ ಕೆಲವು ಗುಣಂಗಳ ಅಳವಡಿಸಿಯೋಳದ್ರೆ ಗಂಡಸರು ಓಟಲ್ಲಿ ಹಿಂದೆ ಬೀಳುಗು ಹೇಳಿ ಅಭಿಪ್ರಾಯ ಪಡುವ ಸಂಶೋಧಕರಿದ್ದವು!
·   ಕೆಲವು ಹೆಂಗಸರು ಉದ್ಯೋಗಲ್ಲಿ ಹೆಚ್ಚಿನ ಸಾಧನೆ ಮಾಡುದು, ಕೆಲವು ಗಂಡಸರು ಮಕ್ಕಳ ಚೆಂದಕ್ಕೆ ನೋಡಿಗೊಂಡು ಮನೆಕೆಲಸಲ್ಲಿ ಕೈಜೋಡಿಸುದು - ಇದೆಲ್ಲಾ minority ಕೇಸುಗಳೋ ಅಥವಾ ಸಮಾನತೆಗೆ ಹೆಚ್ಚಿನ ಒತ್ತು ಕೊಡುಲೆ ಪೂರಕವಾಗಿಪ್ಪ ಸತ್ಯಂಗಳೋ (ಸಮಾಜ-ಮನಸ್ಸು ಬದಲಾದರೆ ಹೆಚ್ಚಿನವಕ್ಕೆ ನಿಜಕ್ಕೂ ಮಾಡುಲೆ ಸಾಧ್ಯ ಇಪ್ಪ ಸಂಗತಿಯೋ)? ಇನ್ನೊಂದು ರೀತಿಲಿ ಹೇಳುದಾದ್ರೆ ಸಮಾನ ಅವಕಾಶ ಕೊಟ್ಟರೆ ಹೆಣ್ಣು ಮಕ್ಕಳೂ ಶಿಕ್ಷಣ-ಉದ್ಯೋಗಲ್ಲಿ ಗಂಡಸರಷ್ಟೇ ಸಾಧನೆ ಮಾಡುಗೋ ಮತ್ತೆ ಗಂಡಸರನ್ನುದೇ ತಲೆಮೇಲೆ ಕೂರ್ಸದ್ದೆ ಸರಿಯಾಗಿ ಬೆಳೆಶಿದರೆ ಅಡುಗೆ-ಮನೆಕೆಲಸ-ಮಕ್ಕಳ ನೋಡಿಕೊಂಬದು - ಇದರ ಚೆಂದಕ್ಕೆ ಮಾಡುಗೋ?

ಇದರಲ್ಲೆಲ್ಲಾ ವಿಜ್ಞಾನಿಗೊ, ಮನೋ-ವಿಶ್ಲೇಷಕರು ಇತ್ಯಾದಿ ಸಂಶೋಧನೆ/ವಿಚಾರ ಮಾಡಿಯೊಂಡೇ ಇದ್ದವು. ಆದರೆ ಒಬ್ಬ ಜನಸಾಮಾನ್ಯ ಯಾವ ನಿಲುವು ಮಡಿಕ್ಕೊಂಬದು ಅತ್ಯಂತ ಸರಿ? ಆನು “ಸಮಾನತೆ” ಹೇಳಿ ಹೇಳುವೆ - ಅದು ಸರಳ-ಸುಂದರ ಸೂತ್ರ ಹೇಳಿ ಎನಗೆ ಕಾಣ್ತು.

ಸಾಮಾಜಿಕ ಸಂಪ್ರದಾಯ, ಒತ್ತಡ

ಕೊನೆಯದಾಗಿ ಎಂತದೇ ತರ್ಕ, ವಿಜ್ಞಾನ ಮಾತಾಡಿದರುದೇ ಕೂಡ ನಾವು ಸಾಮಾಜಿಕ ಜೀವಿಗೊ ಹೇಳುದೊಂದು ಬಹುದೊಡ್ಡ ಅಂಶವಾಗಿ ನಮ್ಮ ಮುಂದೆ ನಿಲ್ತು. ಸಮಾಜದ ಸಂಪ್ರದಾಯ ನಮ್ಮ (ಬಹುಜನರು ಒಪ್ಪುವ) ‘ತಪ್ಪು’ ದಾರಿಗೆ ಹೋಗದ್ದ ಹಾಂಗೆ ಕೂಡ ನೊಡ್ತು, ಅದರೊಟ್ಟಿಂಗೆ ಒಂದು ರೀತಿಯ ಒತ್ತಡವನ್ನೂ ಹೇರ್ತು. ಹೀಂಗಾಗಿ ಮನೆಯ ನೈಜ ಅಗತ್ಯಂಗೊ, ಮನೆಯವರ ವೈಯಕ್ತಿಕ ಮನೋಭಾವ ಮಾತ್ರ ಅಲ್ಲ ಅವರ ನಿರ್ಧಾರಂಗಳ influence ಮಾಡುದು - ಸಾಮಾಜಿಕ ಸಂಪ್ರದಾಯ/ಒತ್ತಡ ಕೂಡ ಗಂಡು-ಹೆಣ್ಣು ಮತ್ತೆ ಮನೆಯವರೆಲ್ಲರ ಕೆಲವೊಮ್ಮೆ ಕಟ್ಟಿಹಾಕುತ್ತು.

ಮಾತ್ರವಲ್ಲ ಧೈರ್ಯಲ್ಲಿ ಹೆರ ಓಡಾಡುವ ವಿಷಯ ಬಂದಪ್ಪಗ ಗಂಡು-ಹೆಣ್ಣು ಸಮಾನ ಹೇಳಿ ಎದೆ ತಟ್ಟಿ ಹೇಳುಲೆ ಸಾಧ್ಯ ಇಲ್ಲೆ ಇಂದಿಂಗುದೇ. ಹೆಣ್ಣಿಂಗೆ ಇದೊಂದು ದೊಡ್ಡ disadvantage, ಇದು ಕೂಡ ದುರದೃಷ್ಟವಶಾತ್ ಹೆಣ್ಣಿನ ಕಟ್ಟಿ ಹಾಕುತ್ತು.

ಆದರೆ ಈ ಎಲ್ಲಾ ಅಡಚಣೆ/ಒತ್ತಡಂಗಳ ಮಧ್ಯೆ ಎಡಿಗಾದಲ್ಲೆಲ್ಲಾ ಹೆಣ್ಣಿನ ಸಮಾನವಾಗಿ ನೋಡಿ, ಆತ್ಮವಿಶ್ವಾಸ ಹೆಚ್ಚಿಸಿ, ತನ್ನ ಸಾಮರ್ಥ್ಯವ ಪೂರ್ತಿ ಧಾರೆ ಎರೆದು ಸಾಧನೆ ಮಾಡುಲೆ ನಮ್ಮ ಸಮಾಜ ಹೆಣ್ಣಿಂಗೆ ಅವಕಾಶ ಮಾಡಿಕೊಡೆಕು ಹೇಳಿ ಎನ್ನ ಬಯಕೆ.

ಪಟ್ಟಣ-ಹಳ್ಳಿ

ಹಳ್ಳಿಯ ಬಗ್ಗೆ ಹಗುರಾಗಿ ಮಾತಾಡುದು ಎನ್ನ ಉದ್ದೇಶ ಅಲ್ಲ, ಪಟ್ಟಣವಾಸಲ್ಲಿ ಅದರದ್ದೇ ಆದ ಅನೇಕ ಕುಂದುಕೊರತೆಗೊ ಇದ್ದು. ಆದ್ರೂ ಗಂಡು ಹೆಣ್ಣಿನ ಸಮಾನತೆಯ ವಿಷಯಕ್ಕೆ ಬಂದಪ್ಪಗ ಪಟ್ಟಣಲ್ಲಿ ಇದು ಹೆಚ್ಚು ಕಾಣ್ತು. ಮನೆಲಿ ಕೆಲಸ ಕಮ್ಮಿ ಇಪ್ಪದು, ಒಟ್ಟಾರೆ exposure ಮತ್ತೆ ಸೌಲಭ್ಯಂಗೊ ಜಾಸ್ತಿ ಇಪ್ಪದು ಇದಕ್ಕೆ ಕಾರಣ ಇಕ್ಕು ಹೇಳಿ ಎನಗೆ ಕಾಣ್ತು. ಹಳ್ಳಿಲಿ ಹಿಂದಾಣ ಅನೇಕ ಒಳ್ಳೆ ಸಂಪ್ರದಾಯಂಗಳೊಟ್ಟಿಂಗೆ ಕೆಟ್ಟ ಸಂಪ್ರದಾಯಂಗೊ ಕೂಡ ಮುಂದುವರೆತ್ತಾ ಹೋವ್ತು, ಬದಲಾವಣೆ ನಿಧಾನಕ್ಕೆ ಅಪ್ಪದು.

ಕೊನೆಯ ಮಾತು

ಕೊನೆಯದಾಗಿ ಅಮೇರಿಕಲ್ಲಿಪ್ಪಗ ಆನು ಗಮನಿಸಿದ ಒಂದು ವಿದ್ಯಮಾನ, ನಿಂಗಳ ಗಮನಕ್ಕೆ.
·         ಗಂಡು, ಹೆಣ್ಣು ಇಬ್ಬರುದೇ ಕೆಲಸಕ್ಕೆ ಹೋವ್ತವು
·         ಸುಮಾರು ೩೦ರ ವರೆಂಗೆ ಮದುವೆ ಆವ್ತವಿಲ್ಲೆ, ಗಮ್ಮತು ಮಾಡ್ತವು
·         ಮದುವೆ ಅಪ್ಪದು ಹೇಳಿದರೆ ಮಕ್ಕಳ ಹುಟ್ಸುಲೆ ರೆಡಿ ಹೇಳಿ ಲೆಕ್ಕ!
·         ತುಂಬಾ ಅಂತರ ಮಡುಗದ್ದೆ ೨-೩-೪ ಮಕ್ಕಳ ಹುಟ್ಸುತ್ತವು
·         ಮುಂದಾಣ ಒಂದಿಪ್ಪತ್ತೈದು ವರ್ಷ ಮಕ್ಕಳ ಮೇಲೆ ತ್ಯಾಗ ಮಾಡ್ತವು
·     ಇಬ್ಬರಲ್ಲಿ ಒಬ್ಬರು ಉದಿಯಪ್ಪಗ ೧೧-೧೨ ಘಂಟೆಗೆ ಶುರು ಮಾಡಿ ರಾತ್ರಿ ೮-೯ ಘಂಟೆಗೆ ಮುಗಿಶುತ್ತವು; ಮಕ್ಕಳ ಶಾಲೆಗೆ ಹೆರಡ್ಸಿ ಕಳ್ಸುವ ಜವಾಬ್ದಾರಿ ಇವರದ್ದು
·      ಇನ್ನೊಬ್ಬರು ಉದಿಯಪ್ಪಗ ೪-೫ ಘಂಟೆಗೆ (ಸುಳ್ಳಲ್ಲ!) ಕೆಲಸ ಶುರು ಮಾಡಿ ಮಧ್ಯಾಹ್ನ ೧-೨ ಘಂಟೆಗೆ ಮುಗಿಶುತ್ತವು; ಮಕ್ಕಳ ಶಾಲೆಂದ ಕರ್ಕೊಂಡು ಹೋಗಿ, ತಿಂಡಿ ಕೊಟ್ಟು ಹೋಮ್‍ವರ್ಕ್ ಮಾಡ್ಸುದು ಇವರ ಜವಾಬ್ದಾರಿ
·         ೫೫ ಅಪ್ಪಗ ಮಕ್ಕಳ ಜವಾಬ್ದಾರಿ ಮುಗಿದಿರ್ತು, ಮತ್ತೆ ಪುನಃ ತಮ್ಮ ಜೀವನವ ಆಸ್ವಾದಿಸುಲೆ ಪ್ರಯತ್ನ ಮಾಡ್ತವು
ಇದು ಹೇಳಿದಷ್ಟು ಸುಲಭ-ಸರಳ ಅಲ್ಲ, ಆದರೆ ಈಗಾಣ ಕೆಲವಾರು ದಂಪತಿಗೊ ಹೆಚ್ಚುಕಡಿಮೆ ಹೀಂಗಿಪ್ಪ ಒಂದು ಯೋಜನೆಯಡಿಲಿ ತಮ್ಮ ಬದುಕಿನ ರೂಪಿಸುದರ ಆನು ತಿಳ್ಕೊಂಡಿದೆ (ಎಲ್ಲರೂ ಡೈವೋರ್ಸ್ ಮಾಡಿ ತಿರುಗಿಯೋಂಡು ಇರ್ತವಿಲ್ಲೆ, ಅದು ನಮ್ಮ ಕಲ್ಪನೆ ಅಷ್ಟೆ). ಒಟ್ಟಾರೆ ಗಂಡು-ಹೆಣ್ಣು ಸಮಾನವಾಗಿ ಜೀವನವ ಆಸ್ವಾದಿಸುತ್ತವು, ಮೇಲು-ಕೀಳು ಹೇಳುವ ಭಾವನೆ ಇಲ್ಲದ್ದೆ ಮನೆ-ಮಕ್ಕಳ ಜವಾಬ್ದಾರಿಯ ಸಮಾನವಾಗಿ ಮಾಡ್ತವು. ಇದರಲ್ಲಿ ಕೊರತೆಯೇ ಇಲ್ಲೆ ಹೇಳಿ ಆನು ವಾದ ಮಾಡುಲೆ ಹೋವ್ತಿಲ್ಲೆ, ಆದರೆ ಇದರಿಂದ ನಾವು ಕಲಿವದು ತುಂಬಾ ಇದ್ದು ಹೇಳಿ ಎನಗೆ ಕಾಣ್ತು.

‘ಬದಲಾವಣೆ’ಗಳ ಸಂಶಯದ ದೃಷ್ಟಿಲಿ, ಹಾಸ್ಯಾಸ್ಪದವಾಗಿ ಮತ್ತೆ ಕೋಪಲ್ಲಿ ನೋಡುದು ಸರ್ವೇಸಾಮಾನ್ಯ ಮನುಷ್ಯ ಸ್ವಭಾವ. ಹೀಂಗಾಗಿ ಬಂಧುಬಳಗದವು, ಸುತ್ತಮುತ್ತಲಿನವು ಇತ್ಯಾದಿ ನಮ್ಮ ವರ್ತನೆಗಳ, ನಿರ್ಧಾರಂಗಳ ಹೇಂಗೆ ಪರಿಗಣಿಸುತ್ತವು, ಎಲ್ಲಿ ಅವು ಹೇಳಿದ್ದರ ಬಿಟ್ಟು ನಮ್ಮದೇ ದಾರಿ ತೆಕ್ಕೋಳೆಕ್ಕು, ಯಾವುದು ಸರಿ, ಯಾವುದು ತಪ್ಪು ಇತ್ಯಾದಿ ಬಹಳ ಜಟಿಲವಾದ ಪ್ರಶ್ನೆಗೊ ಬತ್ತು ಹಲವು ಸಲ. ಪ್ರತಿಯೊಂದಕ್ಕೂ ಇದಮಿತ್ಥಂ ಹೇಳಿ ಉತ್ತರ ಇರೆಕು ಹೇಳಿ ಎಂತ ಇಲ್ಲೆ. ಆದರೆ, ಒಟ್ಟಾರೆ ಸಂತೃಪ್ತಿ, ಆತ್ಮವಿಶ್ವಾಸ, ಪರಸ್ಪರ ಪ್ರೀತಿ-ಗೌರವ ಮತ್ತೆ ಸುಖ-ಸಂಪತ್ತು – ಎಲ್ಲವೂ ಹೆಚ್ಚಪ್ಪ ದಿಕ್ಕಿಲ್ಲಿ ನಾವೆಲ್ಲರೂ ಜೊತೆಯಾಗಿ ನಡೆಯುವಾಂ, ಆ ಒಂದು ಕನಸು ನಿಂಗಳೆಲ್ಲರ ಮನಸ್ಸಿಲ್ಲಿಯೂ ಇರಲಿ ಹೇಳಿ ಎನ್ನ ಆಶೆ.
ಗಮನಿಸಿ: ಇದೇ ಲೇಖನವ ದಕ್ಷಿಣ ಕನ್ನಡದ ಹವ್ಯಕ ಭಾಷೆಲಿ ಓದೆಕ್ಕಾದರೆ ಈ ಕೊಂಡಿಯ ಕ್ಲಿಕ್ಕಿಸಿ
ಬ್ರಾಹ್ಮಣ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ

ಸಮಾಜದಲ್ಲಿ ಹೆಣ್ಣಿನ ಸ್ಥಾನ ಎಲ್ಲಿ ಇರಬೇಕು? ಗಂಡಿಗಿಂತ ಮೇಲೆಯೋ, ಸಮಾನವಾಗಿಯೋ? ಕೆಳಗೆಯೋ?

ಚಾರಿತ್ರಿಕವಾಗಿ ನೋಡಿದರೆ ಜಗತ್ತಿನಾದ್ಯಂತ ಗಂಡು ಹೆಣ್ಣನ್ನು ಸಂರಕ್ಷಿಸಿಕೊಂಡೂ ಬಂದಿದ್ದಾನೆ, ಹೆಣ್ಣಿನ ಮೇಲೆ ಅತ್ಯಾಚಾರವನ್ನೂ ಮಾಡಿಕೊಂಡು ಬಂದಿದ್ದಾನೆ. ಬೇರೆ ದೇಶದ ಚಾರಿತ್ರಿಕ ಮಾಹಿತಿಗಳು ನನಗೆ ಸ್ವಲ್ಪ ಸ್ವಲ್ಪ ಮಾತ್ರ ತಿಳಿದಿದೆ, ಆದರೆ ಭಾರತದಲ್ಲಿ ನೋಡಿದರೆ ಸಂರಕ್ಷಣೆಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಹೆಣ್ಣಿನ ಎತ್ತರದ ಸ್ಥಾನದಲ್ಲಿಇರಿಸಿದ ಉದಾಹರಣೆಗಳು ಇವೆ, ಹೆಣ್ಣಿನ ಶಕ್ತಿ/ಪ್ರಾಮುಖ್ಯತೆಯನ್ನು ಎತ್ತಿಹಿಡಿದು ದೇವರ ರೂಪ ಕೊಟ್ಟದ್ದೂ ಇದೆ. ಈ ರೀತಿಯ ಉದಾತ್ತ ತತ್ವಗಳು ಹುಟ್ಟಿದರೂ ಕೂಡ ಈ ನಾಡಿನಲ್ಲಿ ಅತ್ಯಾಚಾರಗಳಿಗೆ ಏನು ಕಮ್ಮಿಯೂ ಆಗಲಿಲ್ಲ.

ಹೆಣ್ಣಿನ ಉತ್ತಮ ಸ್ಥಿತಿಯ ಬಗ್ಗೆ ಆಲೋಚನೆ ಮಾಡುವಾಗ ನನ್ನ ಪರಿಮಿತ ಅನುಭವದಲ್ಲಿ ಕೆಲವು ಉದಾಹರಣೆಗಳು ಎದ್ದು ಕಾಣುತ್ತವೆ:
·   ಝಾನ್ಸಿ ರಾಣಿ ಲಕ್ಷೀಬಾಯಿ, ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ, ಅಕ್ಕಮಹಾದೇವಿ... ಹೀಗೆ ಅದ್ಭುತ ವ್ಯಕ್ತಿತ್ವವನ್ನು ಪ್ರದರ್ಶಿಸಿದ ಮಹಿಳೆಯರು ನಮ್ಮಲ್ಲಿದ್ದರು. ಅವರಿಗೆ social acceptance ಇತ್ತು ಎನ್ನುವುದು ಮುಖ್ಯ.
·         ಹೆಣ್ಣು ದೇವರುಗಳಿಗೆ ಏನೂ ಕಮ್ಮಿ ಇಲ್ಲ ಎಂದು ಗೊತ್ತಿರುವ ಸಂಗತಿಯೇ ಅಲ್ಲವೇ?
·         ಇತ್ತೀಚೆಗಂತೂ ಅನೇಕ ಹೆಂಗಸರು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಾ ಇದ್ದಾರೆ
ಆದರೆ ದಿನಾ ಪೇಪರಿನಲ್ಲಿ ಹೆಣ್ಣಿನ ಮೇಲೆ ಅತ್ಯಾಚಾರ ಹಾಗೂ ಇತರ ಹಲವು ರೀತಿಯ ದೌರ್ಜನ್ಯಗಳು ಆಗುವುದು ಕೂಡ ಕಾಣುತ್ತದೆ.

ಚಾರಿತ್ರಿಕವಾಗಿ ನೋಡುವಾಗ ಒಂದು ನಿರ್ದಿಷ್ಟ ಪ್ರದೇಶದ ಬಗ್ಗೆ ಹೇಳುವುದಾದರೆ ಈ ಉದಾಹರಣೆ ಮನಸ್ಸಿಗೆ ಎದ್ದು ಕಾಣುತ್ತದೆ:
·         ಕೇರಳದಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಬಂದದ್ದು (ಈಗ ನಿಧಾನಕ್ಕೆ ನಶಿಸಿ ಹೋಗುತ್ತಾ ಇದೆ ಎಂದು ಲೆಕ್ಕ)
·         ಆದರೆ ಅದೇ ಕೇರಳದಲ್ಲಿ ಕೆಳವರ್ಗದ ಹೆಂಗಸರು ಸೊಂಟದ ಮೇಲೆ ವಸ್ತ್ರ ಧರಿಸಬಾರದು ಎಂಬ ನಿರ್ಬಂಧ ಇದ್ದದ್ದು;
ಯಾಕಾಗಿ ಇದ್ದಿರಬಹುದು ಈ ವಿರೋಧಾಭಾಸ?

ತುಂಬಾ ಹಿಂದೆ ವೇದದ ಕಾಲದಲ್ಲಿ ಹೆಣ್ಣಿಗೆ ಗಂಡಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ಇತ್ತು ಎಂದು ಕೆಲವರು ಹೇಳುತ್ತಾರೆ - ಇದರ ವಿರುದ್ಧ ಹೇಳುವವರೂ ಇದ್ದಾರಂತೆ. http://en.wikipedia.org/wiki/Women_in_Indiaಲ್ಲಿ ಇದರ ಬಗ್ಗೆ ಸ್ವಲ್ಪ ಹೆಚ್ಚು ಓದಬಹುದು. ಆದರೆ ಈಗ ಹೇಗಿದೆ ಎನ್ನುವುದನ್ನು ನೋಡೋಣ.

ಬೇರೆ ಸಮಾಜಗಳ-ದೇಶಗಳ ಬದಿಗಿಟ್ಟು ನಮ್ಮ ಬ್ರಾಹ್ಮಣ (ಬರೀ ಹವ್ಯಕ ಅಲ್ಲ) ಸಮಾಜದಲ್ಲಿ ಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ನನ್ನ ಅನಿಸಿಕೆಗಳನ್ನು ಬರೆಯುತ್ತೇನೆ. ಇಲ್ಲಿ ಯಾವುದು ಸರಿ-ಯಾವುದು ತಪ್ಪು ಎಂದು ವಿಂಗಡನೆ ಮಾಡುವುದಕ್ಕಿಂತ ಹೆಚ್ಚಾಗಿ ಈಗ ಇರುವ ಸಂಗತಿಗಳನ್ನು, ಸಂಪ್ರದಾಯಂಗಳನ್ನು ಮತ್ತೆ ಅವುಗಳ ಹಿಂದೆ ಇರುವ ಆಲೋಚನೆಗಳು ಅಥವಾ ಇತರ ವಿಷಯಗಳನ್ನು ವಿವರಿಸಲು ಪ್ರಯತ್ನ ಮಾಡುತ್ತೇನೆ. ನನಗೆ ಸರಿ ಎಂದು ಕಾಣುವ ಕೆಲವು ವಿಷಯಗಳ ಬಗ್ಗೆ ಸ್ವಲ್ಪ ಒತ್ತು ಕೊಡಲೂ ಬಹುದು, ಆದರೆ ಅದು ನಿಮ್ಮ ಮೇಲೆ ನನ್ನ ಅಭಿಪ್ರಾಯ ಹೇರುವ ಪ್ರಯತ್ನ ಅಲ್ಲ. ನೀವು ಆಲೋಚನೆ ಮಾಡಿ ನಿಮ್ಮ ಪರ-ವಿರೋಧ ಅನಿಸಿಕೆಗಳನ್ನು ಮುಕ್ತವಾಗಿ ನನಗೆ ತಿಳಿಸಿ ಎಂದು ನನ್ನ ಅಪೇಕ್ಷೆ.

ಒಟ್ಟಾರೆ ಬ್ರಾಹ್ಮಣ ಸಮಾಜ ಹೆಣ್ಣಿನ ನಡೆಸಿಕೊಳ್ಳುವ ರೀತಿ ಇತರ ಅನೇಕ ಸಮಾಜಗಳಿಗಿಂತ ಮುಂದೆ ಇದೆ ಎನ್ನುವುದು ಸತ್ಯ ಎಂದು ಎನಗೂ ಕಾಣುತ್ತದೆ, ಆದರೆ ಇನ್ನೂ ಸಾಧಿಸಬೇಕಾದ ಎಷ್ಟೋ ಅಂಶಗಳು ನಮ್ಮ ಮುಂದೆ ಇವೆ ಎಂಬುದು ಕೂಡ ಸತ್ಯವೇ ಎಂದು ನನಗೆ ಕಾಣುತ್ತದೆ.

ಹೆಣ್ಣು ಭ್ರೂಣಹತ್ಯೆ

ಇದು ಭಾರತದಲ್ಲಿ ಮಾತ್ರ ಅಲ್ಲ, ಜಗತ್ತಿನ ಇನ್ನೂ ಸುಮಾರು ಕಡೆ ಅತ್ಯಂತ ದೊಡ್ಡ ಸಮಸ್ಯೆ. ಎಷ್ಟೋ ಸಲ ಸುಧಾರಕರ ಪೂರ್ಣ ಗಮನ ಈ ಸಮಸ್ಯೆಯ ಮೇಲೆಯೇ ಇರುತ್ತದೆ, ಹೆಣ್ಣಿನ ಉಳಿದ ಸಮಸ್ಯೆಗಳು-ಹಕ್ಕುಗಳು ಇದರ ಮುಂದೆ ಗೌಣ ಆಗುತ್ತವೆ. ಬ್ರಾಹ್ಮಣ ಸಮಾಜ ಈ ಒಂದು ವಿಷಯದಲ್ಲಿ ಬಹುಷಃ ಸಾಕಷ್ಟು ಮುಂದೆ ಬಂದಿದೆ. ಗಂಡು ಮಗುವಿನ ಮೇಲೆ ಒಲವು ಇದ್ದರೂ ಕೂಡ ಹೆಣ್ಣು ಮಗು ಹುಟ್ಟಬಾರದು ಎಂಬ ಕೆಟ್ಟ ಆಲೋಚನೆಗಳು ಇರುವುದು ಕಡಿಮೆ, ಕಾನೂನುಬಾಹಿರ ಭ್ರೂಣಲಿಂಗ ಪರೀಕ್ಷೆ ಮಾಡಿಸಿ ಹೆಣ್ಣಾದ್ರೆ ಭ್ರೂಣಹತ್ಯೆ ಮಾಡುವ ಉದಾಹರಣೆಗಳು ನನಗೆ ಕೇಳಿ ಗೊತ್ತಿಲ್ಲ. ಇದರಿಂದಾಗಿಯೇ ನಾವು ಉಳಿದ ಹಲವಾರು ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಇರುವುದು!

ಶಿಕ್ಷಣ

ತಾತ್ಸಾರ: ಶಿಕ್ಷಣದ ವಿಷಯ ಬಂದಾಗ ‘ಹುಡುಗಿಯಲ್ಲವೇ, ಹೆಚ್ಚು ಓದಬೇಕು ಎಂದೇನಿಲ್ಲ, ಮದುವೆ ಮಾಡಿ ಬಿಟ್ಟರೆ ಸಾಕು’ ಎಂದು ಹೇಳುವುದು ಇಂದಿಗೂ ಅನೇಕ ಕಡೆ ಇದೆ. ಕೆಲವು ಕಡೆ ಬಾಯಿಬಿಟ್ಟು ಹೇಳದಿದ್ದರೂ ಅಪ್ಪ-ಅಮ್ಮಂದಿರ ಅಥವಾ ಬಂಧುಗಳ ಮನಸ್ಸಿನಲ್ಲಿ ಹಾಗೆ ಇರುತ್ತದೆ. ಕೆಲವೊಮ್ಮೆ ಹೆತ್ತವರು ಅಥವಾ ಸಮಾಜ ಒತ್ತಡ ಹೇರದೇ ಇದ್ದರೂ ಹುಡುಗ್ಯರೇ ಸ್ವತಃ ಹಾಗೆ ಆಲೋಚನೆ ಮಾಡಿಕೊಂಡು ಗಮ್ಮತಿಲ್ಲಿರುವುದೂ ಇದೆ!

ಮದುವೆಯ ಬಗ್ಗೆ ಹೆದರಿಕೆ: ಅಯ್ಯೋ, ಹೆಚ್ಚು ಹೆಚ್ಚು ಓದಿದರೆ ಮತ್ತೆ ಗಂಡು ಸಿಗಲಿಕ್ಕಿಲ್ಲ, ಅಥವಾ ಹೆಚ್ಚು ಪ್ರಾಯ ಆದರೆ ಆಮೇಲೆ ಮದುವೆ ಆಗಲು ಕಷ್ಟ ಆಗಬಹುದು ಎಂಬ ಭಯ ಸುಮಾರು ಜನರಲ್ಲಿರುತ್ತದೆ. ಈಗೀಗ (ಹವ್ಯಕ ಸಮಾಜದಲ್ಲಿ) ಹುಡುಗಿಯರಿಗೆ ಡಿಮ್ಯಾಂಡ್ ಜಾಸ್ತಿ ಆದ ಕಾರಣ ಜನ ಬಹುಷಃ ಸ್ವಲ್ಪ ಮೆತ್ತಗಾಗಿರಬಹುದು ಎಂದು ಒಂದು ಊಹೆ!

ಓದುವ ಜಾಗ: ಉತ್ತರ ಭಾರತದಲ್ಲಿ ಐ.ಐ.ಟಿ. ಸೀಟು ಸಿಕ್ಕಿದರೆ ಹುಡುಗಿಯನ್ನು ಕಳುಹಿಸಲು ಎಷ್ಟು ಜನ ತಯಾರಿರುತ್ತಾರೆ? ಅಥವಾ ಎಷ್ಟು ಹುಡುಗಿಯರು ಹೋಗಲು ತಯಾರಿರುತ್ತಾರೆ? ತುಂಬಾ ದೂರ ಹೋಗಿ ಓದುವುದು ಬೇಡ ಎಂಬ ಭಾವನೆ ಹೆಣ್ಣಿನ ಶಿಕ್ಷಣದಲ್ಲಿ ಒಂದು ಅಡಚಣೆಯಾಗಿದೆ.

ಓದಿಸುವ ತಾಕತ್ತು: ಹೆಣ್ಣು-ಗಂಡು, ಎರಡೂ ರೀತಿಯ ಮಕ್ಕಳು ಇರುವಾಗ ಇಬ್ಬರನ್ನೂ ಓದಿಸಲು ಹಣ ಇಲ್ಲ ಎಂಬ ಸ್ಥಿತಿ ಇದ್ದರೆ, ‘ಮುಂದೆ ಸಂಪಾದಿಸಬೇಕಾದವನು, ಮುಂದೆ ನಮ್ಮನ್ನು ನೋಡಿಕೊಂಬವನು’ ಎಂಬ ಆಲೋಚನೆಯಲ್ಲಿ ಗಂಡಿನ ಓದಿಗೆ ಜಾಸ್ತಿ ಖರ್ಚು ಮಾಡುವುದು ಸಾಮಾನ್ಯ. ಇದು ಕೂಡ ಕೆಲವು ಕಡೆ ಹೆಣ್ಣಿನ ಶಿಕ್ಷಣವನ್ನು ಮೊಟಕುಗೊಳಿಸುತ್ತದೆ.

ಉದ್ಯೋಗ
ನಮ್ಮಲ್ಲಿ ಇನ್ನು ಕೂಡ ಸ್ತ್ರೀಯರು ಕೆಲಸಕ್ಕೆ ಹೋಗಬಾರದು ಅಥವಾ ಹೋಗುವ ಅಗತ್ಯ ಇಲ್ಲ ಎಂದು ತುಂಬಾ ಜನ ಅಭಿಪ್ರಾಯ ಪಡುತ್ತಾರೆ. ಇದಕ್ಕೆ ಕಾರಣಗಳೂ ಹಲವಾರು ಇರುತ್ತವೆ.
·         ಮಕ್ಕಳಿಗೆ ಮನೆಯಲ್ಲಿ ‘ಅಮ್ಮ’ನ ಅಗತ್ಯ ಇದೆ, ಇಲ್ಲದಿದ್ದರೆ ಒಟ್ಟಾರೆ ಕೌಟುಂಬಿಕ ಆರೋಗ್ಯ ಹಾಳಾಗುತ್ತದೆ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.
·         ಇನ್ನು ಕೆಲವರು (ದುಡ್ಡಿನ ಮಟ್ಟಿಗೆ ಸಾಕಷ್ಟು ಉತ್ತಮ ಸ್ಥಿತಿಯಲ್ಲಿ ಇರುವವರು) ಗಂಡ ಸಂಪಾದಿಸಿದ್ರೆ ಸಾಕಲ್ಲವೇ, ಯಾಕೆ ದುರಾಶೆ ಎಂದು ಹೇಳುತ್ತಾರೆ.
·    ಕಾರಣಾಂತರಗಳಿಂದ ಒಬ್ಬರು ಮನೆಯಲ್ಲಿ ಕೂರಬೇಕಾದ ಅನಿವಾರ್ಯತೆ ಇದೆ ಎಂದಿದ್ದರೆ, ಗಂಡು ಮನೆಯಲ್ಲಿ ಕೂತು ಹೆಣ್ಣು ಉದ್ಯೋಗ ಮಾಡುವುದನ್ನು ಕಲ್ಪಿಸಿಕೊಳ್ಳಲೂ ಅನೇಕರಿಗೆ ಸಾಧ್ಯವಾಗುವುದಿಲ್ಲ. ಅದು ಗಂಡಸುತನಕ್ಕೆ ಕೊರತೆ ಎಂದು ಮುಸಿಮುಸಿ ನಗುವ ಪುರುಷಪ್ರಧಾನ ಮನಸ್ಥಿತಿಯವರೂ ಇರುತ್ತಾರೆ.

ಹೆಣ್ಣು ಕೆಲಸಕ್ಕೆ ಹೋಗದಿದ್ದರೆ ಏನಾಗುತ್ತದೆ? ಕಾರಣ ಏನೇ ಇರಲಿ, ಆದರೆ ಗಂಡು ಉದ್ಯೋಗಕ್ಕೆ ಹೋಗಿ ಹೆಣ್ಣು ಮನೆಯಲ್ಲಿ ಕೂರುವಂತಹ ವಾತಾವರಣದಲ್ಲಿ ಮೇಲು-ಕೀಳು ಭಾವನೆ ಬರುವ ಸಾಧ್ಯತೆ ಬಹಳ ಹೆಚ್ಚು. ‘ಇದು ನನ್ನ ಹಣ ಅಲ್ಲ’ ಎಂಬ ಭಾವನೆ ಬರುವುದು, ಲೋಕಜ್ಞಾನ ಕಮ್ಮಿ ಆಗುವುದು ಇತ್ಯಾದಿ ವಿಷಯಗಳು ಹೆಣ್ಣಿನ ಆತ್ಮವಿಶ್ವಾಸವನ್ನು ಹೆಚ್ಚು ಮೇಲೆ ಹೋಗಲು ಬಿಡುವುದಿಲ್ಲ. (ಈ ಸಮಸ್ಯೆ ಗಂಡು ಮನೆಯಲ್ಲಿ ಕೂತರೂ ಬರಬಹುದು). ಹೆಣ್ಣಿನ economic independence ಅನೇಕ ಜನರಿಗೆ ಮುಖ್ಯ ಆಗುವುದೇ ಇಲ್ಲ. ಬ್ರಾಹ್ಮಣೇತರ ಸಮಾಜದಲ್ಲಿಯೇ ಎಷ್ಟೋ ಕಡೆ ಹೆಮ್ಮಕ್ಕಳು ಸ್ವತಃ ಸಂಪಾದಿಸಿ ಗಂಡಿನ ದೌರ್ಜನ್ಯವನ್ನು ಮೆಟ್ಟಿ ನಿಂತು ಜೀವನವನ್ನು ಎದುರಿಸುತ್ತಾರೆ. ಬ್ರಾಹ್ಮಣ ಸಮಾಜದಲ್ಲಿ explicit ದೌರ್ಜನ್ಯ, ಹೊಡೆದು-ಬಡಿದು ಮಾಡುವುದು ಇತ್ಯಾದಿ ಕಮ್ಮಿ. ಹಾಗಾಗಿ ಆಗಿರಬಹುದು, ಸ್ತ್ರೀಯರಿಗೂ ಸ್ವಂತ ದುಡ್ಡು ಬೇಕು ಎಂಬುದರ ಬಗ್ಗೆ ಅನೇಕ ಸಲ ಚಿಂತೆ ಇರುವುದಿಲ್ಲ. ಆದರೆ ವರ್ಷಗಳು ಉರುಳಿದ ಹಾಗೆ ಜಾಣ ಸ್ತ್ರೀಯರಿಗೆ ನಿಧಾನಕ್ಕೆ ಈ ಕೊರತೆ ಕಾಣಲು ಶುರು ಆಗುತ್ತದೆ, ಆದರೆ ಆಗ ವಾಪಸ್ ಹೋಗಲು ಸಾಧ್ಯವಾಗುವುದಿಲ್ಲ. ಅಥವಾ ಅನಿರೀಕ್ಷಿತ ಕಾರಣದಿಂದ ಇಕ್ಕಟ್ಟಿನಲ್ಲಿ ಸಿಕ್ಕಿದರೆ ಆಗ ಕೂಡ ಸಮಸ್ಯೆ ಶುರು ಆಗುತ್ತದೆ (ಉದಾ: ಗಂಡ ಸತ್ತು ಹೋದರೆ ಅಥವಾ ಆರ್ಥಿಕ ಕಷ್ಟ ಬಂದರೆ)

ವಿ.ಸೂ. ಕೃಷಿ ಮಾಡಿಕೊಂಡು ಇರುವಲ್ಲಿ ಕೂಡ ಕೆಲವು ಕಡೆ ಗಂಡಿಗೆ ‘ಹೊರಗೆ’ ಹೋಗಿ ಮಾಡುವ ಕೆಲಸದ ಕೋಡು ಇರುತ್ತದೆ, ಹೆಂಗಸರು ಮನೆಯಲ್ಲಿ, ತೋಟದಲ್ಲಿ ಬೆನ್ನು ಮುರಿಯುವ ಹಾಗೆ ಕೆಲಸ ಮಾಡಿದರೂ ತಾವು ಅವರಿಗಿಂತ ಮೇಲು ಎಂಬ ಭಾವನೆ ಗಂಡಸರಿಗೆ ಇರುವುದು ನೋಡಿದ್ದೇನೆ.

ಹಾಗೂ ಕೆಲಸಕ್ಕೆ ಹೋಗುವುದು ಓಕೆ ಎಂದರೆ ಅಲ್ಲಿಯೂ ಸಮಾನತೆ ಇರುವುದಿಲ್ಲ:
·         ಹೆಣ್ಣಿನ ಉದ್ಯೋಗ ಬರೀ ಟೈಂ‍ಪಾಸ್ ಎಂದು ಪರಿಗಣಿಸುವವರು ಇರುತ್ತಾರೆ
·         ಇಡೀ ದಿನ ಕೆಲಸ ಮಾಡುವುದು ಬೇಡ, ಸಣ್ಣ ಕೆಲಸ ಮಾಡಿದರೆ ಸಾಕು ಎಂದು ಕೆಲವು ಹೇಳುತ್ತಾರೆ
·         ಗಂಡಿಗೆ ಸಮಾನವಾದ ಅಥವಾ ಹೆಚ್ಚಿನ (ಶ್ರಮ, ಸಮಯ ಅಥವಾ ಹಣದ ಮಾನದಂಡದಲ್ಲಿ) ಉದ್ಯೋಗ ಮಾಡಿದರೂ ಕೂಡ ಮನೆಯಲ್ಲಿ ಹೆಣ್ಣಿನ ಮೇಲೆ ಕಂಡಾಬಟ್ಟೆ ಜಾಸ್ತಿ ಒತ್ತಡ ಇರುತ್ತದೆ. ಮನೆ ಕೆಲಸ, ಅಡಿಗೆ, ಮಕ್ಕಳನ್ನು ನೋಡಿಕೊಳ್ಳುವುದು ಇತ್ಯಾದಿ ಅವರದ್ದೇ ಜವಾಬ್ದಾರಿ ಗಂಡನದ್ದಲ್ಲ ಎಂದು ಹೇಳುವ ವಾತಾವರಣ ಇರುತ್ತದೆ ಹಲವು ಕಡೆ.
·         ಕೆಲಸಕ್ಕೆ ಹೋಗುವ ಹೆಂಡತಿಯೊಟ್ಟಿಗೆ ಮಕ್ಕಳನ್ನು ಬಿಟ್ಟು ಗಂಡ ಕೆಲಸಕ್ಕೆ ವಿದೇಶ ಪ್ರಯಾಣಕ್ಕೆ ಹೋಗುವುದು ಇದೆ, ಆದರೆ ಅದರ ವಿರುದ್ಧ ಕಾಣಲು ಸಿಕ್ಕುವುದು ಕಡಿಮೆ.

ಒಂದು ಸನ್ನಿವೇಶವನ್ನು ತೆಗೆದುಕೊಳ್ಳೋಣ: ಇಬ್ಬರೂ ಕೆಲಸಕ್ಕೆ ಹೋಗುವ ಒಂದು ಮನೆಯನ್ನು ತೆಗೆದುಕೊಳ್ಳಿ. ಮನೆಯಲ್ಲಿ ಅತ್ತೆ-ಮಾವ ಎಲ್ಲರೂ ಇದ್ದಾರೆ (ಗಂಡನ ಅಪ್ಪ-ಅಮ್ಮ). ಹೆಂಡತಿಯ ಒಂದು (ಹೆಣ್ಣು ಅಥವಾ ಗಂಡು) ಸಹೋದ್ಯೋಗಿ ಮನೆಗೆ ಬಂದರೆಂದುಕೊಳ್ಳಿ. ಆಗ ಹೆಣ್ಣು ಕಾಲಿನ ಮೇಲೆ ಕಾಲು ಹಾಕಿಕೊಂಡು ಗಮ್ಮತಿನಲ್ಲಿ ಸಹೋದ್ಯೋಗಿಯ ಹತ್ರ ಮಾತನಾಡುವುದು, ಗಂಡು ಒಳಗೆ ಹೋಗಿ ಕಾಪಿ-ಉಪ್ಪಿಟ್ಟು ಮಾಡಿ ತರುವುದು, ಇತರ ಬೇಕು-ಬೇಡಗಳನ್ನು ನೋಡುವುದು - ಹೀಗೆ ಎಲ್ಲಿಯಾದರೂ ನಡೆಯುತ್ತದೆಯೇ? ಅಥವಾ ನಡೆದರೂ ಅದನ್ನು ಎಷ್ಟು ಜನ ಒಳ್ಳೆ ದೃಷ್ಟಿಯಲ್ಲಿ ನೋಡುತ್ತಾರೆ? ಅವನು ಹೆಂಡತಿಯ ಗುಲಾಮ ಎಂದು ನೆಗೆ ಮಾಡುವವರೂ ಇರುತ್ತಾರೆ. ಗಮನಿಸಿ: ಇಂತಹ ಸನ್ನಿವೇಶ ವಿದೇಶದಲ್ಲಿ ಕೆಲವು ಕಡೆ ಬಹಳ ಸ್ವಾಭಾವಿಕ.

ಕೆಲವು ಸಮಸ್ಯೆಗಳ ಬೇರುಗಳು ಬಹಳ ಆಳದಲ್ಲಿ ಇರುತ್ತವೆ. ಅಡಿಗೆ-ಮನೆಕೆಲಸ ಆಗಿರಬಹುದು, ಮಕ್ಕಳನ್ನು ನೋಡಿಕೊಳ್ಳುವುದು ಆಗಿರಬಹುದು - ಸುಮಾರು ಕಡೆ ಗಂಡಸರು ಕೂಡ ಬಹಳ ಚೆಂದಕ್ಕೆ ಮಾಡುತ್ತಾರೆ, ಅವರಿಗೂ ಸಾಧ್ಯವಿದೆ ಎಂಬ ಸತ್ಯವನ್ನು ಮನಗಾಣದೆ, ಆ ಸಾಧ್ಯತೆಯನ್ನೇ ಬದಿಗೆ ಇರಿಸಿ ಮಕ್ಕಳನ್ನು ಬೆಳೆಸಿದರೆ ಬಹುಷಃ ಸುಮಾರು ಗಂಡುಮಕ್ಕಳು (ಈ ವಿಷಯದಲ್ಲಿ) ಪೆದ್ದುಪೆದ್ದಾಗಿ ಬೆಳೆಯುತ್ತಾರೆ, ಕೊನೆಗೆ ಇದೆಲ್ಲಾ ಗಂಡಸರ ಕೈಲಿ ಸಾಧ್ಯ ಇಲ್ಲ ಎಂದು ಬಿಡುತ್ತಾರೆ. ಹೆಂಗಸರಲ್ಲೇ ಹೀಗೆ ಹೇಳುವವರು ಬೇಕಾದಷ್ಟಿದ್ದಾರೆ. ಹಿಂದೆಯಾದರೆ ಗಂಡಸರು ಮಕ್ಕಳೊಂದಿಗೆ ಪ್ರೀತಿ-ಸೌಹಾರ್ದದಲ್ಲಿ ಇದ್ದದು ಕಡಿಮೆ, ಈಗೀಗ ಗಂಡಸರು ಬದಲಾಗುತ್ತಾ ಇದ್ದಾರೆ ಸರಿ. ಆದರೆ ಗಂಡ-ಹೆಂಡತಿಯ ಮಧ್ಯೆ ಇನ್ನು ಕೂಡ ಹೆಚ್ಚಿನ ಸಮಾನತೆ ಬರಲು ಬಾಕಿ ಇದೆ. ಮಗುವಿನ ಗಲೀಜಿನನ್ನು ತೆಗೆಯುವ ವಿಷಯ ಬಂದಾಗ ಹೆಂಡತಿಯ ತಲೆಗೆ ಹಾಕಿ ಅತ್ತ ಕಡೆ ಮುಖವೇ ತಿರುಗಿಸದ ಗಂಡಸರು ಬೇಕಾದಷ್ಟಿದ್ದಾರೆ (ಎಲ್ಲರೂ ಅಲ್ಲ).

ಗಂಡಂದಿರು ಉದ್ಯೋಗದಿಂದ ‘ರಿಟೈರ್’ ಆದರೂ ಹೆಂಡತಿಯ ಮನೆಗೆಲಸಕ್ಕೆ ರಿಟೈರ್‍‍ಮೆಂಟ್ ಇದೆಯೇ? ಎಷ್ಟು ಜನ ಗಂಡಸರು ಉದ್ಯೋಗದಲ್ಲಿ ಒತ್ತಡ ಕಡಿಮೆ ಆದ ಮೇಲೆ ಅಡುಗೆ-ಮನೆಗೆಲಸದಲ್ಲಿ ಕೈಜೋಡಿಸುತ್ತಾರೆ? ಹೆಂಡತಿಗೂ ಪ್ರಾಯ ಆಗುತ್ತಾ ಇದೆ, ಕಷ್ಟ ಆಗುತ್ತದೆ ಎಂದು ಗಮನಿಸುತ್ತಾರೆ?

ಧಾರ್ಮಿಕತೆ

ನಾನು ಇದರಲ್ಲಿ expert ಅಲ್ಲ, ಆದರೂ ಮೇಲಿಂದ ಮೇಲೆ ನೋಡುವಾಗ ಧಾರ್ಮಿಕ ವಿಧಿಗಳಲ್ಲಿ ಸಾಕಷ್ಟು ‘ಪುರುಷ ಪ್ರಧಾನ’ ಮನಸ್ಥಿತಿ ಕಾಣುತ್ತದೆ, ಮನಸ್ಸಿಗೆ ಬಹಳ ಹಿಂಸೆ ಆಗುತ್ತದೆ.

ಮುಟ್ಟು: ಕೆಲವನ್ನು ಗಂಡಸರು ಮಾತ್ರ ಮಾಡಬಹುದಷ್ಟೆ (ಉದಾ: ಚಿತೆಗೆ ಅಗ್ನಿಸ್ಪರ್ಷ ಮಾಡುವುದು, ಉಪನಯನದಲ್ಲಿ ಮಂತ್ರೋಪದೇಶ ಮಾಡುವುದು), ಮುಟ್ಟಾದರೆ ದೇವಸ್ಥಾನ ಪ್ರವೇಶ ಮತ್ತಿತರ ಕೆಲವು ಕಾರ್ಯಗಳು ನಿಷಿದ್ಧ ಎಂದು ಹೇಳುತ್ತಾರೆ. ಹೆಂಗಸರಿಗೆ ಉಪನಯನ ಇರುವುದಿಲ್ಲ, ಅರ್ಚಕಿಯಾಗಿ ದೇವಸ್ಥಾನದಲ್ಲಿ ದೇವರ ಪೂಜೆ ಮಾಡುವ ಅಧಿಕಾರ ಇರುವುದಿಲ್ಲ, ಪೌರೋಹಿತ್ಯ ಮಾಡಲು ಸಾಧ್ಯವಾಗುವುದಿಲ್ಲ, ಮನೆಯಲ್ಲಿ ನಿತ್ಯಪೂಜೆ ಮಾಡಲು ಸಾಧ್ಯವಾಗುವುದಿಲ್ಲ. ಈ ಎಲ್ಲದಕ್ಕೂ ಮೂಲ ಕಾರಣ ‘ಮುಟ್ಟು’ ಎಂಬ ನೈಸರ್ಗಿಕ ಪ್ರಕ್ರಿಯೆಯನ್ನು ಕೀಳಾಗಿ ಕಾಣುವುದು ಮತ್ತು ಅದರಿಂದಾಗಿ ನಿತ್ಯವೂ ಅವರಿಗೆ ಮಾಡಲು ಸಾಧ್ಯವಾಗುವುದಿಲ್ಲ ಎಂಬ bottleneck ಬರುವುದು. ಈಗಿನ ಕಾಲದಲ್ಲಿ ಮುಟ್ಟಾಗಿರುವಾಗ ಏನೇನೂ ಕಷ್ಟ ಆಗದೇ ಇರುವಂತೆ ವ್ಯವಹರಿಸಲು ಸ್ತ್ರೀಯರಿಗೆ ಸಾಧ್ಯವಾಗುತ್ತಿದೆ, ಆಗ ಧಾರ್ಮಿಕ ವಿಧಿಗಳಲ್ಲಿ ನಿಷೇಧ ಏತಕ್ಕೆ? ಕಷ್ಟ ಆಗುತ್ತದೋ ಇಲ್ಲವೋ - ಆದರೆ ಮೈಲಿಗೆ ಎಂದು ಏಕೆ ಪರಿಗಣಿಸಬೇಕು? ದೇವರಿಗೆ ಮೈಲಿಗೆ ಇದೆಯೇ? ಹೆಂಗಸರಿಗೆ ಉಪನಯನ ಇತ್ಯಾದಿ ಸಂಸ್ಕಾರ ಏಕೆ ನಿಷಿದ್ಧ? (ಹಿಂದಿನ ಕಾಲದಲ್ಲಿ ಇತ್ತಂತೆ, ಹೇಳುವುದು ಕೇಳಿದ್ದೇನೆ)

ವಿಧವೆಯರು: ಇವರು ಅಶುಭ, ಹಾಗೆ ಮಾಡಬಾರದು - ಹೀಗೆ ಮಾಡಿದರೆ ದೋಷ ಎಂದು ಬೇಕಾದಷ್ಟು ನಿರ್ಬಂಧ ಹೇರುತ್ತಾರೆ. ಬೊಟ್ಟು ಹಾಕಬಾರದು, ಅಲಂಕಾರ ಮಾಡಬಾರದು, ಶುಭ ಕಾರ್ಯಗಳಿಗೆ ಬರಬಾರದು ಎಂದು ಹೇಳುತ್ತಾರೆ (ಮಕ್ಕಳ ನಾಮಕರಣಕ್ಕೆ ಇಂದಿಗೂ ಅನೇಕ ವಿಧವೆಯರು ಹೋಗುವುದಿಲ್ಲ). ವಿಧವೆಯರಿಗೆ ಮಗಳನ್ನು ಕನ್ಯಾದಾನ ಮಾಡಲು ಹಕ್ಕು ಇಲ್ಲ. ಸ್ವಂತ ಮಗಳನ್ನು ಬೇರೆ ಯಾರೋ ಕನ್ಯಾದಾನ ಮಾಡುದನ್ನು ಮೂಕವಾಗಿ ನೋಡಿಕೊಂಡು ಕೂರುವ ಸ್ಥಿತಿ ಇದೆ ಅಂತಹ ಅಮ್ಮಂದಿರಿಗೆ ಇಂದಿಗೂ, ಆದರೆ ಅಪ್ಪ ಮಾತ್ರ ಇದ್ದರೆ ಹಾಗಿರುವ ತೊಂದರೆ ಇಲ್ಲ (ಅಲ್ಲಾ, ಹೆಣ್ಣಿನ ಕೊಡುವುದನ್ನು ಕನ್ಯಾದಾನ ಎಂದು ಹೇಳುತ್ತಾರೆ. ಅದು ಯಾಕೆ ‘ಕನ್ಯೆ’ಯೇ ಆಗಬೇಕು ಮದುವೆ ಆಗಲು? ಆಗ ವಿಧವೆ ಅಥವಾ ವಿಚ್ಛೇದನ ಆದವರು ಮದುವೆ ಆಗುವುದು ‘ಧರ್ಮ’ದ ಪ್ರಕಾರ ತಪ್ಪಾ?)

ಕಾಲ್ಗುಣ: ಹೆಣ್ಣು ಮದುವೆ ಆಗಿ ಗಂಡನ ಮನೆಗೆ ಹೋದಾಗ ಏನಾದರೂ ಅನಾಹುತ ಆದರೆ, ಮರಣ ಸಂಭವಿಸಿದರೆ ಹೆಣ್ಣಿನ ಕಾಲ್ಗುಣದ ಬಗ್ಗೆ ಮಾತು ಇವತ್ತಿಗೂ ಬರುತ್ತದೆ. ಆದರೆ ಗಂಡಿಗೆ ಹಾಗಿರುವ ಕಳಂಕ ಬರುವುದು ಕೇಳಲಿಲ್ಲ. ಇದೇ ರೀತಿ ಹೆಣ್ಣುಕೂಸು ಹುಟ್ಟಿದಾಗ ಕೂಡ ಕೆಲವೊಮ್ಮೆ ಹೆಣ್ಣಿನ ಕಾಲ್ಗುಣದ ಬಗ್ಗೆ ಮಾತು ಬರುತ್ತದೆ, ಆದರೆ ಗಂಡು ಮಗುವಿಗೆ ಹಾಗೆ ಏನೂ ಆಗುವುದಿಲ್ಲ. ಇದು ಹವ್ಯಕರಲ್ಲಿ ಸ್ವಲ್ಪ ಕಮ್ಮಿ ಇರಬಹುದೇನೋ, ಆದರೆ ಒಟ್ಟಾರೆ ನೊಡಿದರೆ ಬ್ರಾಹ್ಮಣರಲ್ಲಿ ಸಾಕಷ್ಟು ನಡೆಯುತ್ತಾ ಇದೆ ಎಂದು ಕೇಳಿದ್ದೇನೆ.

ಇನ್ನೂ ಕೆಲವು:
- ಹುಡುಗಿಯರು ಬಳೆ, ಕಿವಿಯದ್ದು, ಬೊಟ್ಟು ಇತ್ಯಾದಿ ಹಾಕದಿದ್ದರೆ ದೊಡ್ಡ ಸಂಗತಿ, ಆದ್ರೆ ಗಂಡುಮಕ್ಕಳಿಗೆ ಹಾಗೇನೂ ಇಲ್ಲ.
- ಹುಡುಗರಿಗೆ ಜುಟ್ಟು ಬಿಡಬೇಕು ಎನ್ನುವ ಒತ್ತಡ ಪೂರ್ತಿ ಹೋಗಿದೆ, ಆದ್ರೆ ಹೆಂಗಸರು ಜಡೆ ಹಾಕುವ ಹಾಗೆ ಉದ್ದದ ಕೂದಲು ಬಿದಬೇಕು ಎಂದು ಹೇಳುವವರು ಇಂದಿಗೂ ಸುಮಾರು ಜನ ಇದ್ದಾರೆ
- ಮದುವೆ ಆದ ಹೆಂಗಸರು ಕರಿಮಣಿ ಹಾಕದೇ ಇದ್ದರೆ ದೊಡ್ಡ ಸಂಗತಿ, ಆದರೆ ಗಂಡಸರು ಜನಿವಾರ ಹಾಕದಿದ್ದರೆ ದೊಡ್ಡ ಸಂಗತಿ ಅಲ್ಲ.
- ಪೂಜೆಗೆ ಗಂಡಸರು ಪ್ಯಾಂಟ್ ಶರ್ಟ್ ಹಾಕಿಕೊಂಡು ಬಂದರೆ ದೊಡ್ಡ ವಿಷಯವೇ ಇಲ್ಲ, ಆದರೆ ಒಬ್ಬ ಹೆಂಗಸು ಹಾಗೆ ಬಂದರೆ?

ಹೆಚ್ಚಿನ ಸಲ ಕ್ರಮಗಳ ಹಿಂದೆ ಅಗೌರವ ಇದೆ ಎಂದು ಅಲ್ಲ, ‘ಆರತಿಗೊಬ್ಬ ಮಗಳು, ಕೀರುತಿಗೊಬ್ಬ ಮಗ’ ಹೇಳುವ ಮಾತನ್ನೇ ನೋಡಿದ್ರೆ ಗೊತ್ತಾಗುತ್ತದೆ ಮೂಲತಃ ಅಗೌರವ ಇಲ್ಲ ಎಂದು. ಆದರೆ ಸಾರಾಸಾಗಟಾಗಿ ಗಂಡು ಒಂದು ವಿಷಯಕ್ಕೆ ಲಾಯಕ್ಕು, ಹೆಣ್ಣು ಇನ್ನೊಂದು ವಿಷಯಕ್ಕೆ ಲಾಯಕ್ಕು ಎಂದು ಮಾಡಿದ ವಿಂಗಡನೆ ಸುಮಾರು ಸಮಸ್ಯೆಗಳನ್ನು ಹುಟ್ಟುಹಾಕಿದೆ. ನಿಧಾನಕ್ಕೆ ಚಿನ್ನದ ಪಂಜರದಲ್ಲಿ ಸಿಕ್ಕಿಹಾಕಿ, ಕೊನೆಗೆ ಹೊನ್ನಶೂಲಕ್ಕೆ ಏರಿದ ಕಥೆ ಹೆಣ್ಣಿನದ್ದು, ನಮ್ಮ ದೇಶದಲ್ಲಿ.

ಎಷ್ಟೋ ಸಲ ಸ್ತ್ರೀಯರಿಗೆ ಕೂಡ ಇದೊಂದು ಅವಮಾನ, ತಪ್ಪು ಎಂದು ಭಾಸ ಆಗುವುದೇ ಇಲ್ಲ, ಅಷ್ಟರ ಮಟ್ಟಿಗೆ ಹಾಸುಹೊಕ್ಕಾಗಿದೆ ಕೆಲವು ಸಂಪ್ರದಾಯಗಳು. ಆದರೆ ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕುವ ಅಗತ್ಯ ಇಲ್ಲ ಎಂದು ಅನೇಕರು ಅರ್ಥಮಾಡಿಕೊಳ್ಳುವುದಿಲ್ಲ; ಕ್ರಮ-ಸಂಪ್ರದಾಯಗಳ ಗುಣಾವಗುಣಗಳನ್ನು ವಿಶ್ಲೇಷಿಸಿ ಉತ್ತಮ, ಪ್ರಬುದ್ಧ ಬದಲಾವಣೆಯನ್ನು ತರಲು ಪ್ರಯತ್ನ ಮಾಡುವವರು ತುಂಬಾ ಕಡಿಮೆ.

ಅಪ್ಪು, ಒಪ್ಪುತ್ತೆ - ಮುಟ್ಟಾದ್ರೆ ಹೊರಗೆ ಕೂರುದು ನಿಂತಿದೆ, ವಿಧವೆಯರ ತಲೆ ಬೋಳಿಸುವುದಿಲ್ಲ, ವಿಧವೆಯರಿಗೆ ಹಾಗೂ ವಿಚ್ಛೇದನ ಪಡೆದ ಹುಡುಗಿಯರಿಗೆ ಮರುಮದುವೆಯೂ ಆಗಲು ಶುರು ಆಗಿದೆ, ಬಹಳ ಒಳ್ಳೆಯದು. ಆದರೆ ಕ್ರಮಿಸಲು ಇನ್ನೂ ಸುಮಾರು ದೂರ ಇದೆ ಎಂದು ನನಗೆ ಕಾಣುತ್ತದೆ.

ವಿ.ಸೂ.೧. ವೇದದ ಕಾಲಲ್ಲಿದ್ದ ಹೆಣ್ಣಿನ ಸ್ಥಾನಮಾನವನ್ನು ಕೆಳಗೆ ತಳ್ಳುವುದರಲ್ಲಿ ಮನುಸ್ಮೃತಿಯ ಮಹತ್ತರವಾದ ಪಾತ್ರ ಇದೆ ಎಂದು ಹೇಳುವವರು ಇದ್ದಾರೆ, ಅದರ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಇದು ಅಲ್ಲ ಎಂದಾದರೆ ಒಂದೋ ವೇದದ ಕಾಲದಲ್ಲಿಯೇ ಸಮಾನತೆ ಇರಲಿಲ್ಲ, ಅಥವಾ ಬೇರೆ ಕಾರಣಗಳು ಈ ಸಮಾನತೆಯನ್ನು ತೆಗೆದು ಹಾಕಿರಬಹುದು. ಇರಲಿ, ಚರಿತ್ರೆ ಏನು ಎಂಬುದಕ್ಕಿಂತ ಈಗ ನಾವು ಹೇಗಿದ್ದರೆ ಉತ್ತಮ ಎಂದು ನೋಡಿದರೆ ಉತ್ತಮ.

ವಿ.ಸೂ.೨. ಕೆಲವರು ಹೇಳುತ್ತಾರೆ, ಇದು ಪುರುಷ ಪ್ರಧಾನ ಅಲ್ಲ, ಗಂಡಿಗೆ ಅದು, ಹೆಣ್ಣಿಗೆ ಇದು ಎಂದು ಕ್ರಮಗಳ ವಿಂಗಡನೆ ಅಷ್ಟೆ ಎಂದು. ಕೆಲವು ಸಣ್ಣ ಸಣ್ಣ ವಿಷಯಗಳಲ್ಲಿ ಹಾಗಿರಲೂ ಬಹುದು, ಆದರೆ ಬಹಳ ನಿಚ್ಚಳವಾಗಿ ಪುರುಷ ಪ್ರಧಾನ ಸಂಪ್ರದಾಯ ನನಗೆ ಎದ್ದು ಕಾಣುತ್ತದೆ.

ಇತರ ಸಂಪ್ರದಾಯಗಳು, ವಸ್ತುಸ್ಥಿತಿ

·     ಹುಡುಗಿಯರನ್ನು ಬೇಗ ಮದುವೆ ಮಾಡುವುದು: ಸ್ವಂತ ವ್ಯಕ್ತಿತ್ವ ಪ್ರಬಲವಾಗಿ ಬೆಳೆಯುವುದರ ಮೊದಲೇ ಮದುವೆ ಮಾಡಿಬಿಟ್ಟರೆ, ಸ್ತ್ರೀಯರು ಗಂಡಂದಿರ ನೆರಳಾಗಿಬಿಡುತ್ತಾರೆ, ಅವರ ಸಾಧನೆಯ ಸಾಧ್ಯತೆಗಳು ಕಡಿಮೆ ಆಗುತ್ತವೆ ಎಂದು ನನಗೆ ಕಾಣುತ್ತದೆ. ಬೇಗ ಮಕ್ಕಳು ಆಗುವುದರಲ್ಲಿಯೂ ಈ ರೀತಿ ಆಗುತ್ತದೆ. ಬಹುಷಃ ಬಾಲ್ಯ ವಿವಾಹ ನಿಂತಿದೆ ಎಂದು ಹೇಳಬಹುದೇನೋ.
·   ಹೆಣ್ಣು-ಗಂಡಿಗೆ ತುಂಬಾ ವಯಸ್ಸಿನ ಅಂತರ ಇರುವುದು: ಈಗ ಈ trend ಸ್ವಲ್ಪ ಬದಲಾಗುತ್ತಾ ಇದೆ. ಎರಡರಲ್ಲಿಯೂ ಬೇರೆ ಬೇರೆ ರೀತಿಯ ಒಳ್ಳೆದು-ಹಾಳು ಇದೆ ಎಂದು ನನಗೆ ಕಾಣುತ್ತದೆ, ಆದರೆ ಸಮಾನತೆಯ ದೃಷ್ಟಿಯಲ್ಲಿ ನೋಡಿದರೆ ವಯಸ್ಸಿನ ಅಂತರ ಹೆಚ್ಚಿದ ಹಾಗೆ ಹೆಣ್ಣು ಗಂಡಿನ ನೆರಳಾಗಿರುವ ಸಾಧ್ಯತೆ ಹೆಚ್ಚು ಎಂದು ಕಾಣುತ್ತದೆ.
·     ಗಂಡಸರ ಅನೈತಿಕ ಕಾರ್ಯಗಳನ್ನು ಹಗುರವಾಗಿ ನೋಡಿ ಹೆಂಗಸರದ್ದನ್ನು ದೊಡ್ಡ ವಿಷಯ ಮಾಡುತ್ತಾರೆ: ಉದಾ: ಕುಡಿತ, ಸಿಗರೇಟು ಸೇದುವುದು, ಜೂಜು, ಸೆಕ್ಸ್. ಹೆಂಗಸರೂ ಮಾಡಲಿ ಎಂದು ಅಲ್ಲ, ಆದರೆ ತಪ್ಪಾದಾಗ ಏಕೆ ಹೆಂಗಸರದ್ದಕ್ಕೆ ಜಾಸ್ತಿ ಬಣ್ಣ, ಕೋಪ?
·         ಗಂಡ ಸರಿ ಇರುವುದು-ಬಿಡುವುದು ಹೆಣ್ಣಿನ ಕೈಲಿ ಇರುವುದು? ಶಿಕ್ಷಣ, exposure ಎಲ್ಲಾ ಕಡಿಮೆ ಇದ್ದರೂ ಹೆಣ್ಣು ಗಂಡನ ದಾರಿ ತಪ್ಪದ ಹಾಗೆ ‘ನೋಡಿಕೊಳ್ಳಬೇಕು’ ಎಂಬ ನಿರೀಕ್ಷೆ ಇರುತ್ತದೆ ಇಂದಿಗೂ ಸುಮಾರು ಕಡೆ
·         ವರದಕ್ಷಿಣೆ: ಕೆಲವು ಬ್ರಾಹ್ಮಣ ಸಮುದಾಯದಲ್ಲಿ ಇನ್ನು ಕೂಡ ವರದಕ್ಷಿಣೆಯ ಪಿಡುಗು ಸಾಕಷ್ಟು ಇದೆಯಂತೆ
·         ವಾಸ: ಮದುವೆ ಆದ ನಂತರ ಏಕೆ ಹೆಣ್ಣೇ ಗಂಡಿನ ಮನೆಗೆ ಹೋಗಬೇಕು?
·       ಹೆಣ್ಣಿನ ಅಪ್ಪ-ಅಮ್ಮನ ಸ್ಥಾನಮಾನ: ಗಂಡಿನ ಅಪ್ಪ-ಅಮ್ಮ ಮತ್ತೆ ಹೆಣ್ಣಿನ ಅಪ್ಪ-ಅಮ್ಮನಿಗೆ ಒಂದೇ ಸ್ಥಾನ ಇಂದಿಗೂ ಇಲ್ಲ. ಬರೀ ಮಗಳಿರುವ (ಅಥವಾ ಕೆಟ್ಟ ಮಗ + ಒಳ್ಳೆಯ ಮಗಳಿರುವ) ಅಪ್ಪ-ಅಮ್ಮಂದಿರಿಗೆ ಇದರಿಂದ ಎಷ್ಟು ಕಷ್ಟ, ಅಲ್ಲವೇ?
·         ಆಸ್ತಿ: ಕಾನೂನಿನಲ್ಲಿ ಬದಲಾವಣೆ ಆಗಿದೆ ಸರಿ, ಆದರೆ ಸ್ವಯಾರ್ಜಿತವನ್ನು ಹಂಚುವಾಗ ಇವತ್ತಿಗೂ ಅನೇಕ ಜನ ಮಗಳಂದಿರಿಗೆ ಕಡಿಮೆ ಕೊಡುತ್ತಾರೆ ಅಥವಾ ಮಗಂದಿರು ತಮಗೆ ಜಾಸ್ತಿ ಹಕ್ಕು ಇದೆ ಎಂದು ಅಂದುಕೊಳ್ಳುತ್ತಾರೆ
·      ಬಂಡಾಯ ಏಳುವ ಹುಡುಗಿಯರು: ಕೆಲವೊಮ್ಮೆ ಈ ಎಲ್ಲಾ ಕಟ್ಟುಪಾಡುಗಳ ವಿರುದ್ಧವಾಗಿ ಹುಡುಗಿಯರು/ಹೆಂಗಸರು ಹೋಗುವುದಿದೆ. ಅದರಲ್ಲಿ ಕೆಲವು ವಿಷಯಗಳು ಸಮಾಜಕ್ಕೆ ಇಷ್ಟ ಆಗುತ್ತದೆ, ಕೆಲವು ಆಗುವುದಿಲ್ಲ. ಅದರಲ್ಲಿ ಕೆಲವು ವಿವೇಚನಾರಹಿತವಾಗಿ ಮಾಡಿದ್ದಿರುತ್ತದೆ, ಕೆಲವೊಮ್ಮೆ ಆಲೋಚನೆ ಮಾಡಿಯೇ ಮಾಡಿರುತ್ತಾರೆ. ಆದರೆ ಒಟ್ಟಾರೆ ಹೆಣ್ಣು ಮಾಡಿದಾಗ ಅದು ಸುಲಭವಾಗಿ ದೊಡ್ಡ ಸುದ್ದಿ ಆಗುತ್ತದೆ, ಗಂಡಸರು ಮಾಡಿದ್ದಕ್ಕಿಂತ!
·      ಹೆಂಗಸರೂ ಹೆಂಗಸರಿಗೆ ಶತ್ರುಗಳು: ತಾವು ಮೇಲು ಎನ್ನುವ ಗಂಡಸರು ಹೇಗಿದ್ದರೂ ಮಾಡುತ್ತಾರೆ, ಆದರೆ ಕಟ್ಟಿಹಾಕಿದ ಮನೋಭಾವದಲ್ಲಿ ಬೆಳೆದ, ಬಾಹ್ಯ ಲೋಕವನ್ನು ಹೆಚ್ಚು ನೋಡದೇ ಇದ್ದ ಹೆಂಗಸರಲ್ಲಿ ಕೂಡ ಹಲವರು ಹೆಣ್ಣಿನ ಈ ಸ್ಥಿತಿಯ ಮುಂದುವರಿಯುವಿಕೆಗೆ ಕಾರಣರಾಗುತ್ತಾರೆ. ಉದಾ: ಎಷ್ಟೋ ಕಡೆಗಳಲ್ಲಿ ಸೊಸೆಯ ಮೇಲೆ ಅತ್ತೆ ಒತ್ತಡ ಹೇರುವುದು, ಮಗಳನ್ನೂ-ಮಗನನ್ನೂ ಬೇರೆ ರೀತಿಯಲ್ಲಿ ಬೆಳೆಸುವುದು.

ಇದೆಲ್ಲದರ ವಿರುದ್ಧವೂ ಇದೆ ಕೆಲವು ಕಡೆ. ಹುಡುಗಿಯರನ್ನು ಕಟ್ಟುಪಾಡುಗಳಿಗೆ ಒಳಪಡಿಸದೇ ಮನೆ-ಕೆಲಸ ಇತ್ಯಾದಿ ಕಲಿಸದೇ ಬೆಳೆಸುವ ಅಪ್ಪ-ಅಮ್ಮದಿರೂ ಇದ್ದಾರೆ. ಹಾಗಿರುವಲ್ಲಿ ಕೆಲವೊಮ್ಮೆ ಬರೀ ಮುದ್ದಿನಿಂದ ಆ ರೀತಿ ಬೆಳೆಸುತ್ತಾರೆ, ಇನ್ನು ಕೆಲವು ಕಡೆ ಗಂಡು ಮಕ್ಕಳ ಹಾಗೆ ಬೆಳೆಸುತ್ತಾರೆ. ಮೊದಲನೆಯದ್ದು ಮುಂದೆ ತೊಂದರೆ ಕೊಡಬಹುದು, ಎರಡನೆಯದ್ದರ end result ಏನು ಎಂದು ಹೇಳಲು ಸಾಧ್ಯವಾಗುವುದಿಲ್ಲ.

ಗಂಡೂ ಹೆಣ್ಣೂ ಒಂದೇಯೋ? ನಿಜಕ್ಕೂ ವೈಜ್ಞಾನಿಕವಾಗಿ ಸಮಾನತೆಗೆ ಅರ್ಹರೋ?

ಗಂಡು ಹೆಣ್ಣಿಗೆ ಸಾಕಷ್ಟು biological ವ್ಯತ್ಯಾಸಗಳು ಇದೆಯಲ್ಲವೇ. ಸಾಮಾನ್ಯವಾಗಿ ಹೆಣ್ಣು ಗಂಡಿಗಿಂತ ನಾಜೂಕು, ಅಶಕ್ತೆ. ಮಕ್ಕಳನ್ನು ಹೆರುವುದು ಹೆಣ್ಣೇ, ಗಂಡಿಗೆ ಸಾಧ್ಯ ಇಲ್ಲ. ಇದಲ್ಲದೆ ಭಾವನಾತ್ಮಕ ಮಟ್ಟದಲ್ಲಿಯೂ ಕೆಲವು ವ್ಯತ್ಯಾಸಗಳು ಕಂಡುಬರುತ್ತವೆ. ಆದರೆ ಬೌದ್ಧಿಕ ಮಟ್ಟಕ್ಕೆ ಬಂದಾಗ? ಇದರ ಬಗ್ಗೆ ಯಾರೂ ಹೆಚ್ಚು ಮುಕ್ತವಾಗಿ ಅನಿಸಿಕೆ ವ್ಯಕ್ತಪಡಿಸಲು ಹೊರಡುವುದಿಲ್ಲ. ಜಗತ್ತಿನ ಬೇರೆ ಬೇರೆ ಜನಾಂಗಗಳ ಮಧ್ಯೆ ಬೌದ್ಧಿಕ ಮಟ್ಟದ ಹೋಲಿಕೆ/ತೂಗಿ ನೋಡುವುದು ಯಾವ ರೀತಿ ಅನೈತಿಕ ಎಂದು ಪರಿಗಣಿಸಲ್ಪಟ್ಟಿದೋ ಅದೇ ರೀತಿ ಈ ವಿಷಯದಲ್ಲಿ ಹೆಣ್ಣು-ಗಂಡಿನ ಹೋಲಿಕೆ ತಪ್ಪು ಎಂದು ಇಂದಿನ ಬುದ್ಧಿಜೀವಿಗಳು ಸಾಮಾನ್ಯವಾಗಿ ಅಭಿಪ್ರಾಯ ಪಡುತ್ತಾರೆ. ಹಾಗೆಂದು ಜನ ಸುಮ್ಮನೆ ಕೂರುವುದಿಲ್ಲ! ಈ ಕೆಳಗಿನ ವಿಷಯಗಳ ಬಗ್ಗೆ ಅನೇಕ ಜನಕ್ಕೆ one sided opinion ಇದೆ ಎಂದು ನನಗೆ ತಿಳಿದಿದೆ. ಆದರೆ ನಿಜ ಏನು?

·         ಹೆಣ್ಣಿಗೆ ಪ್ರಾಯ ೪೫ ದಾಟಿದ ಮೇಲೆ (ಮುಟ್ಟು ನಿಂತ ಮೇಲೆ) ಉದ್ಯೋಗದಲ್ಲಿ ಆಸಕ್ತಿ ಕಮ್ಮಿ ಆಗುತ್ತದೆ ಎಂದು ಹೇಳುವುದು ಕೇಳಿದ್ದೇನೆ. ಇದು ಸತ್ಯವೋ? Majority ಹೆಂಗಸರಿಗೆ ಕೆಲಸ ಮಾಡುದಕ್ಕಿಂತ ಮನೆ-ಮಕ್ಕಳನ್ನು ನೋಡಿಕೊಂಡು ಚಿನ್ನ-ಸೀರೆಯ ಬಗ್ಗೆ ಮಾತಾಡಿಕೊಂಡು ಕೂರಲು ಜಾಸ್ತಿ ಇಷ್ಟವೋ? ಹಾಗಾದರೆ ಗಂಡಸಿನ ಉದ್ಯೋಗದ ಮೇಲೆ ಹೆಚ್ಚು ಒತ್ತು ಕೊಡುದು ನ್ಯಾಯವೋ?
·      ಹೆಂಗಸರ weak point ಎಂದು ಎಲ್ಲರೂ ಅಂದುಕೊಂಡಿದ್ದ ಆರ್ಥಿಕ ಕ್ಷೇತ್ರದಲ್ಲಿ ಈಗ ಎಷ್ಟೋ ಹೆಂಗಸರು ಗಂಡಸರನ್ನು ಮೀರಿಸಿ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಹೆಂಗಸರು multi-taskingನಲ್ಲಿ ಗಂಡಸರಿಗಿಂತ ಸಮರ್ಥೆಯರು ಎಂದು ಹೇಳುವುದು ಕೇಳಿದ್ದೇನೆ. ಹಾಗಾದರೆ ಉದ್ಯೋಗ ಕ್ಷೇತ್ರದಲ್ಲಿ ಗಂಡಸರಿಗಿಂತ ಹೆಂಗಸರೇ ಆಗಬಹುದೋ ಹೇಗೆ? ಮೊದಲು ಯುದ್ಧ ಜಾಸ್ತಿ ಇದ್ದ ಕಾಲದಲ್ಲಿ ಸ್ವಾಭಾವಿಕವಾಗಿ ದೈಹಿಕವಾಗಿ ಅಶಕ್ತೆಯಾದ ಕಾರಣ ಹೆಣ್ಣು ‘ಸಂರಕ್ಷಣೆ’ಯ ಹೆಸರಿನಲ್ಲಿ ತೆರೆಯ ಹಿಂದೆ ಹೋಗಿದ್ದಿರಬಹುದು, ಆದರೆ ಈಗ ಸುಭಿಕ್ಷತೆ, ಸುರಕ್ಷತೆ ಹೆಚ್ಚಾದಂತೆ ಮಹಿಳೆಯರೇ ಹೆಚ್ಚು preferred employees ಅಗುತ್ತಾ ಇದ್ದಾರೋ? ಯುದ್ಧಕಾಲದಲ್ಲಿ ಬೇಕಾದ ಶಕ್ತಿ, ಕೋಪ ಇತ್ಯಾದಿಗಳನ್ನು ಬದಿಗಿರಿಸಿ ಹೆಂಗಸರ ಕೆಲವು ಗುಣಗಳನ್ನು ಅಳವಡಿಸಿಕೊಳ್ಳದೇ ಹೋದರೆ ಗಂಡಸರು ಓಟದಲ್ಲಿ ಹಿಂದೆ ಬೀಳಬಹುದು ಎಂದು ಅಭಿಪ್ರಾಯ ಪಡುವ ಸಂಶೋಧಕರಿದ್ದಾರೆ!
·        ಕೆಲವು ಹೆಂಗಸರು ಉದ್ಯೋಗದಲ್ಲಿ ಹೆಚ್ಚಿನ ಸಾಧನೆ ಮಾಡುವುದು, ಕೆಲವು ಗಂಡಸರು ಮಕ್ಕಳನ್ನು ಚೆಂದಕ್ಕೆ ನೋಡಿಕೊಂಡು ಮನೆಕೆಲಸದಲ್ಲಿ ಕೈಜೋಡಿಸುದು - ಇದೆಲ್ಲಾ minority ಕೇಸುಗಳೋ ಅಥವಾ ಸಮಾನತೆಗೆ ಹೆಚ್ಚಿನ ಒತ್ತು ಕೊಡಲು ಪೂರಕವಾಗಿರುವ ಸತ್ಯಗಳೋ (ಸಮಾಜ-ಮನಸ್ಸು ಬದಲಾದರೆ ಹೆಚ್ಚಿನವರಿಗೆ ನಿಜಕ್ಕೂ ಮಾಡಲು ಸಾಧ್ಯ ಇರುವ ಸಂಗತಿಯೇ)? ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸಮಾನ ಅವಕಾಶ ಕೊಟ್ಟರೆ ಹೆಣ್ಣು ಮಕ್ಕಳೂ ಶಿಕ್ಷಣ-ಉದ್ಯೋಗದಲ್ಲಿ ಗಂಡಸರಷ್ಟೇ ಸಾಧನೆ ಮಾಡಬಹುದೋ ಮತ್ತೆ ಗಂಡಸರನ್ನೂ ತಲೆಮೇಲೆ ಕೂರಿಸದೆ ಸರಿಯಾಗಿ ಬೆಳೆಸಿದರೆ ಅಡುಗೆ-ಮನೆಕೆಲಸ-ಮಕ್ಕಳನ್ನು ನೋಡಿಕೊಳ್ಳುವುದು - ಇವುಗಳನ್ನು ಚೆಂದಕ್ಕೆ ಮಾಡಬಹುದೋ?

ಇದರಲ್ಲೆಲ್ಲಾ ವಿಜ್ಞಾನಿಗಳು, ಮನೋ-ವಿಶ್ಲೇಷಕರು ಇತ್ಯಾದಿ ಸಂಶೋಧನೆ/ವಿಚಾರ ಮಾಡಿಕೊಂಡೇ ಇದ್ದಾರೆ. ಆದರೆ ಒಬ್ಬ ಜನಸಾಮಾನ್ಯ ಯಾವ ನಿಲುವು ಇರಿಸಿಕೊಳ್ಳುವುದು ಅತ್ಯಂತ ಸರಿ? ನಾನು “ಸಮಾನತೆ” ಎಂದು ಹೇಳುವೆ - ಅದು ಸರಳ-ಸುಂದರ ಸೂತ್ರ ಎಂದು ನನಗೆ ಕಾಣುತ್ತದೆ.

ಸಾಮಾಜಿಕ ಸಂಪ್ರದಾಯ, ಒತ್ತಡ

ಕೊನೆಯದಾಗಿ ಏನೇ ತರ್ಕ, ವಿಜ್ಞಾನ ಮಾತಾಡಿದರೂ ಕೂಡ ನಾವು ಸಾಮಾಜಿಕ ಜೀವಿಗಳು ಎನ್ನುವುದೊಂದು ಬಹುದೊಡ್ಡ ಅಂಶವಾಗಿ ನಮ್ಮ ಮುಂದೆ ನಿಲ್ಲುತ್ತದೆ. ಸಮಾಜದ ಸಂಪ್ರದಾಯ ನಮ್ಮ (ಬಹುಜನರು ಒಪ್ಪುವ) ‘ತಪ್ಪು’ ದಾರಿಗೆ ಹೋಗದೇ ಇರುವ ಹಾಗೆ ಕೂಡ ನೊಡುತ್ತದೆ, ಅದರೊಂದಿಗೆ ಒಂದು ರೀತಿಯ ಒತ್ತಡವನ್ನೂ ಹೇರುತ್ತದೆ. ಹೀಗಾಗಿ ಮನೆಯ ನೈಜ ಅಗತ್ಯಗಳು, ಮನೆಯವರ ವೈಯಕ್ತಿಕ ಮನೋಭಾವ ಮಾತ್ರ ಅಲ್ಲ ಅವರ ನಿರ್ಧಾರಗಳನ್ನು influence ಮಾಡುವುದು - ಸಾಮಾಜಿಕ ಸಂಪ್ರದಾಯ/ಒತ್ತಡ ಕೂಡ ಗಂಡು-ಹೆಣ್ಣು ಹಾಗೂ ಮನೆಯವರೆಲ್ಲರನ್ನು ಕೆಲವೊಮ್ಮೆ ಕಟ್ಟಿಹಾಕುತ್ತದೆ.

ಮಾತ್ರವಲ್ಲ ಧೈರ್ಯದಲ್ಲಿ ಹೊರಗೆ ಓಡಾಡುವ ವಿಷಯ ಬಂದಾಗ ಗಂಡು-ಹೆಣ್ಣು ಸಮಾನ ಎಂದು ಎದೆ ತಟ್ಟಿ ಹೇಳಲು ಸಾಧ್ಯ ಇಲ್ಲ ಇಂದಿಂಗೂ. ಹೆಣ್ಣಿಗೆ ಇದೊಂದು ದೊಡ್ಡ disadvantage, ಇದು ಕೂಡ ದುರದೃಷ್ಟವಶಾತ್ ಹೆಣ್ಣನ್ನು ಕಟ್ಟಿ ಹಾಕುತ್ತದೆ.

ಆದರೆ ಈ ಎಲ್ಲಾ ಅಡಚಣೆ/ಒತ್ತಡಗಳ ಮಧ್ಯೆ ಸಾಧ್ಯವಾದಲ್ಲೆಲ್ಲಾ ಹೆಣ್ಣನ್ನು ಸಮಾನವಾಗಿ ನೋಡಿ, ಆತ್ಮವಿಶ್ವಾಸ ಹೆಚ್ಚಿಸಿ, ತನ್ನ ಸಾಮರ್ಥ್ಯವನ್ನು ಪೂರ್ತಿ ಧಾರೆ ಎರೆದು ಸಾಧನೆ ಮಾಡಲು ನಮ್ಮ ಸಮಾಜ ಹೆಣ್ಣಿಗೆ ಅವಕಾಶ ಮಾಡಿಕೊಡಬೇಕು ಎಂದು ನನ್ನ ಬಯಕೆ.

ಪಟ್ಟಣ-ಹಳ್ಳಿ

ಹಳ್ಳಿಯ ಬಗ್ಗೆ ಹಗುರಾಗಿ ಮಾತಾಡುವುದು ನನ್ನ ಉದ್ದೇಶ ಅಲ್ಲ, ಪಟ್ಟಣವಾಸದಲ್ಲಿ ಅದರದ್ದೇ ಆದ ಅನೇಕ ಕುಂದುಕೊರತೆಗಳು ಇವೆ. ಆದರೂ ಗಂಡು ಹೆಣ್ಣಿನ ಸಮಾನತೆಯ ವಿಷಯಕ್ಕೆ ಬಂದಾಗ ಪಟ್ಟಣದಲ್ಲಿ ಇದು ಹೆಚ್ಚು ಕಾಣುತ್ತದೆ. ಮನೆಯಲ್ಲಿ ಕೆಲಸ ಕಮ್ಮಿ ಇರುವುದು, ಒಟ್ಟಾರೆ exposure ಮತ್ತೆ ಸೌಲಭ್ಯಗಳು ಜಾಸ್ತಿ ಇರುವುದು ಇದಕ್ಕೆ ಕಾರಣ ಇರಬಹುದು ಎಂದು ನನಗೆ ಕಾಣುತ್ತದೆ. ಹಳ್ಳಿಯಲ್ಲಿ ಹಿಂದಿನ ಅನೇಕ ಒಳ್ಳೆ ಸಂಪ್ರದಾಯಗಳೊಟ್ಟಿಗೆ ಕೆಟ್ಟ ಸಂಪ್ರದಾಯಗಳು ಕೂಡ ಮುಂದುವರೆಯುತ್ತಾ ಹೋಗುತ್ತವೆ, ಬದಲಾವಣೆ ನಿಧಾನಕ್ಕೆ ಆಗುತ್ತದೆ.

ಕೊನೆಯ ಮಾತು

ಕೊನೆಯದಾಗಿ ಅಮೇರಿಕಲ್ಲಿರುವಾಗ ನಾನು ಗಮನಿಸಿದ ಒಂದು ವಿದ್ಯಮಾನ, ನಿಮ್ಮ ಗಮನಕ್ಕೆ.
·         ಗಂಡು, ಹೆಣ್ಣು ಇಬ್ಬರೂ ಕೆಲಸಕ್ಕೆ ಹೋಗುತ್ತಾರೆ
·         ಸುಮಾರು ೩೦ರ ವರೆಗೆ ಮದುವೆ ಆಗುವುದಿಲ್ಲ, ಗಮ್ಮತು ಮಾಡುತ್ತಾರೆ
·         ಮದುವೆ ಆಗುವುದು ಎಂದರೆ ಮಕ್ಕಳನ್ನು ಹುಟ್ಟಿಸಲು ರೆಡಿ ಎಂದು ಲೆಕ್ಕ!
·         ತುಂಬಾ ಅಂತರ ಇಡದೆ ೨-೩-೪ ಮಕ್ಕಳನ್ನು ಹುಟ್ಟಿಸುತ್ತಾರೆ
·         ಮುಂದಿನ ಒಂದಿಪ್ಪತ್ತೈದು ವರ್ಷ ಮಕ್ಕಳ ಮೇಲೆ ತ್ಯಾಗ ಮಾಡುತ್ತಾರೆ
·    ಇಬ್ಬರಲ್ಲಿ ಒಬ್ಬರು ಬೆಳಿಗ್ಗೆ ೧೧-೧೨ ಘಂಟೆಗೆ ಶುರು ಮಾಡಿ ರಾತ್ರಿ ೮-೯ ಘಂಟೆಗೆ ಮುಗಿಸುತ್ತಾರೆ; ಮಕ್ಕಳನ್ನು ಶಾಲೆಗೆ ಹೊರಡಿಸಿ ಕಳುಹಿಸುವ ಜವಾಬ್ದಾರಿ ಇವರದ್ದು
·     ಇನ್ನೊಬ್ಬರು ಬೆಳ್ಳಂಬೆಳಿಗ್ಗೆ ೪-೫ ಘಂಟೆಗೆ (ಸುಳ್ಳಲ್ಲ!) ಕೆಲಸ ಶುರು ಮಾಡಿ ಮಧ್ಯಾಹ್ನ ೧-೨ ಘಂಟೆಗೆ ಮುಗಿಸುತ್ತಾರೆ; ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗಿ, ತಿಂಡಿ ಕೊಟ್ಟು ಹೋಮ್‍ವರ್ಕ್ ಮಾಡಿಸುವುದು ಇವರ ಜವಾಬ್ದಾರಿ
·         ೫೫ ಆದಾಗ ಮಕ್ಕಳ ಜವಾಬ್ದಾರಿ ಮುಗಿದಿರುತ್ತದೆ, ಮತ್ತೆ ಪುನಃ ತಮ್ಮ ಜೀವನವನ್ನು ಆಸ್ವಾದಿಸಲು ಪ್ರಯತ್ನ ಮಾಡುತ್ತಾರೆ
ಇದು ಹೇಳಿದಷ್ಟು ಸುಲಭ-ಸರಳ ಅಲ್ಲ, ಆದರೆ ಇಂದಿನ ಕೆಲವಾರು ದಂಪತಿಗಳು ಹೆಚ್ಚುಕಡಿಮೆ ಹೀಗಿರುವ ಒಂದು ಯೋಜನೆಯಡಿಯಲ್ಲಿ ತಮ್ಮ ಬದುಕನ್ನು ರೂಪಿಸುದನ್ನು ನಾನು ತಿಳಿದುಕೊಂಡಿದ್ದೇನೆ (ಎಲ್ಲರೂ ಡೈವೋರ್ಸ್ ಮಾಡಿ ತಿರುಗಿಕೊಂಡು ಇರುವುದಿಲ್ಲ, ಅದು ನಮ್ಮ ಕಲ್ಪನೆ ಅಷ್ಟೆ). ಒಟ್ಟಾರೆ ಗಂಡು-ಹೆಣ್ಣು ಸಮಾನವಾಗಿ ಜೀವನವನ್ನು ಆಸ್ವಾದಿಸುತ್ತಾರೆ, ಮೇಲು-ಕೀಳು ಎಂಬ ಭಾವನೆ ಇಲ್ಲದೆ ಮನೆ-ಮಕ್ಕಳ ಜವಾಬ್ದಾರಿಯನ್ನು ಸಮಾನವಾಗಿ ಮಾಡುತ್ತಾರೆ. ಇದರಲ್ಲಿ ಕೊರತೆಯೇ ಇಲ್ಲ ಎಂದು ನಾನು ವಾದ ಮಾಡಲು ಹೋಗುವುದಿಲ್ಲ, ಆದರೆ ಇದರಿಂದ ನಾವು ಕಲಿಯುವುದು ತುಂಬಾ ಇದೆ ಎಂದು ನನಗೆ ಕಾಣುತ್ತದೆ.

‘ಬದಲಾವಣೆ’ಗಳನ್ನು ಸಂಶಯದ ದೃಷ್ಟಿಯಲ್ಲಿ, ಹಾಸ್ಯಾಸ್ಪದವಾಗಿ ಮತ್ತೆ ಕೋಪದಲ್ಲಿ ನೋಡುವುದು ಸರ್ವೇಸಾಮಾನ್ಯ ಮನುಷ್ಯ ಸ್ವಭಾವ. ಹೀಗಾಗಿ ಬಂಧುಬಳಗದವರು, ಸುತ್ತಮುತ್ತಲಿನವರು ಇತ್ಯಾದಿ ನಮ್ಮ ವರ್ತನೆಗಳನ್ನು, ನಿರ್ಧಾರಗಳನ್ನು ಹೇಗೆ ಪರಿಗಣಿಸುತ್ತಾರೆ, ಎಲ್ಲಿ ಅವರು ಹೇಳಿದ್ದನ್ನು ಬಿಟ್ಟು ನಮ್ಮದೇ ದಾರಿ ತೆಗೆದುಕೊಳ್ಳಬೇಕು, ಯಾವುದು ಸರಿ, ಯಾವುದು ತಪ್ಪು ಇತ್ಯಾದಿ ಬಹಳ ಜಟಿಲವಾದ ಪ್ರಶ್ನೆಗಳು ಬರುತ್ತವೆ ಹಲವು ಸಲ. ಪ್ರತಿಯೊಂದಕ್ಕೂ ಇದಮಿತ್ಥಂ ಎಂದು ಉತ್ತರ ಇರಬೇಕು ಎಂದೇನೂ ಇಲ್ಲ. ಆದರೆ, ಒಟ್ಟಾರೆ ಸಂತೃಪ್ತಿ, ಆತ್ಮವಿಶ್ವಾಸ, ಪರಸ್ಪರ ಪ್ರೀತಿ-ಗೌರವ ಮತ್ತೆ ಸುಖ-ಸಂಪತ್ತು – ಎಲ್ಲವೂ ಹೆಚ್ಚಾಗುವ ದಿಕ್ಕಿನಲ್ಲಿ ನಾವೆಲ್ಲರೂ ಜೊತೆಯಾಗಿ ನಡೆಯೋಣ, ಆ ಒಂದು ಕನಸು ನಿಮ್ಮೆಲ್ಲರ ಮನಸ್ಸಿನಲ್ಲಿಯೂ ಇರಲಿ ಎಂದು ನನ್ನ ಆಶೆ.

12 comments:

ಚೆಂದುಳ್ಳಿ said...

ಅತ್ಯುತ್ತಮ ಲೇಖನ ಮಾನ್ಯರೇ..
ಒದಿ ತುಂಬ ಖುಷಿ ಆತು.

ISHWARA BHAT K said...

ತುಂಬಾ ಸಂಶೋಧಕ ಲೇಖನ. ಹೆಚ್ಚಿನ ವಿಚಾರ ನಿಂಗಳ ಒಳಮನಸ್ಸಿಂದ ಬಂದದು ವ್ಯಾಪಕ ಚರ್ಚೆ ಆಯೆಕ್ಕು. ಒಳ್ಳೆ ಚಿಕಿತ್ಸಕ ಲೇಖನ. ಶುಭಾಶಯಗಳು .

Venkatakrishna.K.K. said...

ತುಂಬಾ ಸಕಾಲಿಕವಾಗಿ ಬಂದ ಬರೆಹ..
ನಮ್ಮ ಗುಂಪಿಲಿಪ್ಪ ಎಲ್ಲೋರೂ ಓದೆಕ್ಕದ ಲೇಖನ..
ಆನು ಹವ್ಯಕಲ್ಲಿ ಇದರ ಹಾಕುತ್ತೆ..ಅಕ್ಕನ್ನೇ..

sharma said...

Good article, worth reading.

ಕರವೀರ said...

ಒಳ್ಳೆಯ ಲೇಖನ...ಆದರೆ ಎನ್ನ ಅಭಿಪ್ರಾಯಲ್ಲಿ ಹೆಣ್ಣು-ಗಂಡು "ಸಮಾನತೆ" ಹೇಳಿ ನೋಡುವುದಕ್ಕಿಂತ "ಪೂರಕವಾಗಿ" ಇದ್ದರೆ ಜೀವನ ಹೆಚ್ಚು ಅರ್ಥಪೂರ್ಣವಾಗಿ ಸಾಗಿಸಿ ಯಶಸ್ವಿಗೊಳಿಸಲು ಸಾದ್ಯ ಹೇಳಿ ಕಾಣ್ತು..ಕೆಲವು ಪರಿಸ್ಥಿತಿಲಿ ವ್ಯವಹರಿಸುಲೆ ಹೆಣ್ಣು ಹೆಚ್ಚು ಸಮರ್ಥಳು..ಇನ್ನು ಕೆಲವೊಮ್ಮೆ ಗಂಡು.. "ಸಮಾನತೆ" ಹೇಳುವಲ್ಲಿ "ಅಹಂ"(ego)ಹೆಚ್ಚು ಕೆಲಸ ಮಾಡ್ತು..ಉದಾಹರಣಗೆ ಗಂಡ ಹೆಂಡತಿಯರಲ್ಲಿ ಜಗಳ ಆದರೆ ಪುನಃ ಸರಿ ಆಯೆಕ್ಕಾದರೆ ಆರು ಮೊದಲು ಮಾತಾಡುದು...?ಇಬ್ಬರೂ ಆನು ಅವನಿಂದ(ಅವಳಿಂದ) ಎಂತ ಕಮ್ಮಿ..ಬೇಕಾದರೆ ಮೊದಲು ಮಾತಾಡಲಿ ಹೇಳಿ ಕೂರುತ್ತವು..(ಈ ರೀತಿಯ ಘಟನೆಗೊ ಕೆಲವು "ವಿಚ್ಛೇದನ" ವರೆಗೆ ಹೋದ್ದದು ನೋಡಿದ್ದೆ)."ಪೂರಕ" ಜೀವನಲ್ಲಿ ಒಂದೊಂಮ್ಮೆ ಆರು ಬೇಕಾದರೂ ಮಾತಾಡುಲಕ್ಕು(ಪೂರಕ ಹೇಳಿ ತಿಳ್ಕೊಂಡರೆ ಜಗಳದ ಪ್ರಶ್ಣೆಯೇ ಇಲ್ಲೆ..ಹಾಂಗೆ ಹೇಳಿ ಹೆಣ್ಣೊಬ್ಬನೇ ಕೆಲಸ ಮಾಡೆಕ್ಕು ಹೇಳಿ ಅರ್ಥ ಅಲ್ಲ..ಕೆಲಸಂಗಳ ಹಂಚಿಗೊಳೆಕ್ಕು ಹೇಳಿಯೇ).ಆದ್ದರಿಂದ ಗಂಡು ಮೇಲಲ್ಲ..ಹೆಣ್ಣು ಕೀಳಲ್ಲ..ಸಮಾನರೂ ಅಲ್ಲ...!ಒಬ್ಬರಿಗೊಬ್ಬ ಪೂರಕ ಹೇಳುವ ದೃಷ್ಟಿಂದ ನೋಡೆಕ್ಕು ಹೇಳಿ...

halemane said...

ಕರವೀರ ಹೇಳಿದ ಮಾತು ನೂರಕ್ಕೆ ನೂರು ನಿಜ.

Anonymous said...

ಕರವೀರ ..ಸರಿಯಾಗಿ ಹೇಳಿದ್ದಾರೆ..

ಕೃಷ್ಣ ಶಾಸ್ತ್ರಿ - Krishna Shastry said...

ದಕ್ಷಿಣ ಕನ್ನಡ ಕರಾವಳಿಯ ಚಿಂತನಶೀಲ ಲೇಖಕಿಯರಲ್ಲೊಬ್ಬರಾದ ಮನೋರಮಾ ಎಂ. ಭಟ್ ಬರೆದ ಪ್ರತಿಕ್ರಿಯೆ ಇಲ್ಲಿದೆ. ೭೯ರ ಇಳಿವಯಸ್ಸಿನಲ್ಲಿಯೂ ಲವಲವಿಕೆ ಹಾಗೊ ನಿರ್ಭೀತಿಯಿಂದ ಅವರು ಓಡಾಡುವ ರೀತಿ ನೋಡಿದರೆ ಯಾರಾದರೂ ದಂಗಾಗಬೇಕು. ಮಹಿಳೆಯರ, ಅದರಲ್ಲೂ ವಿಧವೆಯರ ಕಷ್ಟಗಳ ಬಗ್ಗೆ ಯಾವುದೇ ಸಂಕೋಚವಿಲ್ಲದೆ ಅನೇಕ ಕಾಲ ಹೋರಾಡಿದ ಈ ಧೀರ ಮಹಿಳೆ ಇಂದಿಗೂ ತಮ್ಮ ಪ್ರಯತ್ನಗಳನ್ನು ನಿಲ್ಲಿಸಲಿಲ್ಲ. ನಾನು ಬರೆದ ಲೇಖನ ಕೊಟ್ಟಕೂಡಲೇ ಆಸಕ್ತಿಯಿಂದ ತೆಗೆದುಕೊಂಡು ಸುದೀರ್ಘವಾದ ಪ್ರತಿಕ್ರಿಯೆ ಕೊಟ್ಟು ಹರಸಿದ್ದಾರೆ ಈ ನನ್ನ ಅಜ್ಜಿ. ಅವರು ಬರೆದ ‘ಹೆಣ್ಣಿಗೇಕೆ ಈ ಶಿಕ್ಷೆ’ ಎಂಬ ಪುಸ್ತಕವನ್ನು ನೀವು ಓದಲೇ ಬೇಕು. ಆಗ ಕೆಳಗೆ ಅವರು ಬರೆದ ಕೆಲವು ವಿಷಯಗಳ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ದೊರೆಯುವುದು.

- ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಂಡು ಬಂದದ್ದು ಪುರುಷನೇ. ಆದುದರಿಂದ ಯಜಮಾನ ಆತನೇ ಸರಿ. ಧನ-ಧಾನ್ಯ ಇವುಗಳ ಅಧಿಕಾರಿಯೂ ಆತನೇ. ಈಗಿನ ಕಾನೂನಿನಂತೆ ಪಿತ್ರಾರ್ಜಿತದಲ್ಲಿ ಹೆಣ್ಣು ಮಕ್ಕಳಿಗೂ ಸಮಾನ ಹಕ್ಕುಗಳು ಇವೆ, ಆದರೆ ಯಾವ ಅಣ್ಣತಮ್ಮಂದಿರು ಪಾಲು ಮಾಡಿಕೊಳ್ಳುವಾಗ ಅಕ್ಕತಂಗಿಯರಿಗೆ ಕೊಡುತ್ತಾರೆ ಹೇಳಿ?

- ಬ್ರಾಹ್ಮಣರೇ ಮೇಲು, ಶೂದ್ರರು ಕೀಳು - ಯಾಕೆಂದರೆ ಬ್ರಾಹ್ಮಣರಿಗೆ ತಮ್ಮ ತೋಟದಲ್ಲಿ ಗದ್ದೆಗಳಲ್ಲಿ ದುಡಿಸಿಕೊಳ್ಳಲು ಬೇಕಾದವರು ಅವಿದ್ಯಾವಂತ ಶೂದ್ರರೇ ಆಗಿತ್ತು. ಆದರೆ ಈಗ ವಿದ್ಯೆಯ ಅವಕಾಶಗಳನ್ನು ಶೂದ್ರರೂ ಕೂಡ ತಮ್ಮ ಮಕ್ಕಳಿಗೆ ಕೊಡಲು ಆಶಿಸುವ ಕಾರಣದಿಂದ ಬ್ರಾಹ್ಮಣರಿಗೆ ಮನೆ-ತೋಟ-ಗದ್ದೆಗಳಲ್ಲಿ ದುಡಿಸಿಕೊಳ್ಳಲು ಜನರೇ ಸಿಗುತ್ತಿಲ್ಲವಂತೆ! ವೇದಾಧ್ಯಯನ ಕಲಿಯುವ ಯೋಗ್ಯತೆಯನ್ನು ಶತಮಾನಗಳ ಹಿಂದೆ ನಮ್ಮ ಧರ್ಮ ಕೊಟ್ಟಿದ್ದು ಕೇವಲ ಬ್ರಾಹ್ಮಣ ಪುರುಷರಿಗೆ ಮಾತ್ರ! ಸ್ತ್ರೀಯರಿಗೂ-ಶೂದ್ರರಿಗೂ ವೇದಾಧ್ಯಯನದ ಅಧಿಕಾರವೇ ಇರಲಿಲ್ಲ.

ಹೆಣ್ಣು ಭ್ರೂಣ ಹತ್ಯೆ

ಪ್ರಕೃತಿ ಸಹಜವಾಗಿ ಗಂಡು ಸುಖವಾದ ಜೀವನ ನಡೆಸುತ್ತಾನೆ. ಗರ್ಭವನ್ನು ಹೊರುವ, ಹೆರುವ, ಮೊಲೆಯುಣಿಸಿ ಮಗುವನ್ನು ಸಾಕುವ, ಮುಟ್ಟು ಇತ್ಯಾದಿ ಶಾರೀರಿಕ ಕಷ್ಟಗಳಿಂದ ಆತ ಸ್ವತಂತ್ರ ತಾನೇ? ಹೆಣ್ಣಾಗಿ ತಾಯಿ ಅದೆಷ್ಟು ನೋವು-ಮಾನಸಿಕ ಯಾತನೆ-ಭಾವನಾತ್ಮಕ ದೈಹಿಕ ಅಡಚಣೆಗಳನ್ನು ಅನುಭವಿಸುತ್ತಾಳೆ. ಈ ಸಮಯದಲ್ಲಿ ಅವಳ ಕೈಹಿಡಿದಾಗ ಆಕೆಗೆ ಧೈರ್ಯ ಕೊಟ್ಟು ಆಕೆಯ ಬೆನ್ನೆಲುಬಾಗಿ ಬದುಕಿನಲ್ಲಿ ನಿಂತರೆ ಆಕೆಗೆ ತನ್ನ ಗರ್ಭ ಹೆಣ್ಣಾದರೂ ಸರಿ, ಗಂಡಾದರೂ ಸರಿ ಎಂದು ಕಾಣಬಹುದು. ಹಾಗೆ ನೋಡಿದರೆ ಗರ್ಭದಲ್ಲಿರುವ ಭ್ರೂಣವನ್ನು ಗಂಡು ಅಥವಾ ಹೆಣ್ಣು ಮಾಡುವ ಚೈತನ್ಯ ಗಂಡಿನ ವೀರ್ಯಕ್ಕೆ ಸಂಬಂಧಿಸಿದ್ದು. ಅದು ಗೊತ್ತಿದೆಯೇ ನಿಮಗೆ?

ಹೆಣ್ಣುಮಕ್ಕಳ ವಿವಾಹ, ವರದಕ್ಷಿಣೆ, ಆಭರಣಳು - ಇವುಗಳನ್ನು ಹೊಂದಿಸಿಕೊಳ್ಳುವ ತಾಪತ್ರಯಗಳನ್ನು ಎಣಿಸುವಾಗಲೇ ನಮಗೆ... (ನಮ್ಮಲ್ಲಿ ಕೆಲವರಿಗೆ ಹೆಣ್ಣುಮಗು ಬೇಡ ಎಂಬ ಭಾವನೆ ಬಂದರೆ ಆಶ್ಚರ್ಯವಿಲ್ಲ)

ನೆನಪಿಡಿ ಭ್ರೂಣಹತ್ಯೆ ಮಾಡಿಸಿಕೊಳ್ಳುವಾಗ ಗರ್ಭದ ಲಿಂಗ ಪರೀಕ್ಷೆ, ಅಬಾರ್ಶನ್ ಇತ್ಯಾದಿಗಳು ನಡೆಯಬೇಕಾದರೆ ಆಕೆಯ ಗಂಡನ ಸಹಿ ಬೇಕೇಬೇಕು. ಏನೇ ಆಗಲಿ ಈಗಂತೂ ಭ್ರೂಣಹತ್ಯೆ ಕಾನೂನುಬಾಹಿರವಾಗಿದೆ.

ಶಿಕ್ಷಣ

ಶಿಕ್ಷಣಕ್ಕೂ ಮದುವೆಗೂ ಈಗ ಏನೇನೂ ಸಂಬಂಧವಿಲ್ಲ. ಹೆಣ್ಣುಮಕ್ಕಳಿಗೆ ಬೇಕಾದಷ್ಟು ಭವಿಷ್ಯದ ಕನಸುಗಳನ್ನು ಹೆಣೆಯಲು ಅವಕಾಶಗಳಿವೆ. ಮಾಧ್ಯಮಗಳು ಸಾಕಷ್ಟು ವಿಚಾರಗಳನ್ನು ಕಾಲೆಜಿಗೆ ಕಾಲಿರಿಸಿದ ಹೆಣ್ಣುಮಕ್ಕಳಿಗೆ ಹೇಳುತ್ತವೆ. "ಹೆಚ್ಚು ಓದಿದರೆ ಮಾಣಿ ಸಿಕ್ಕ" ಹೇಳುವ ಮಾತುಗಳು ಕೇವಲ ಕಪೋಲಕಲ್ಪಿತ. ಮದುವೆಯ ಸಂಬಂಧಗಳು ಕೂಡಿಬರಲು ಬೇರೆ ಬೇರೆ ಕಾರಣಗಳಿವೆ. ಐ.ಐ.ಟಿ. ಸೀಟು ಸಿಕ್ಕನಂತರ ಓದುವ ಸ್ಥಳ-ಕಾಲೇಜು ಇವುಗಳ ಆಯ್ಕೆಯಲ್ಲಿ ನಿರ್ಧಾರ ಮಾಡುವಾಕೆ ವಿದ್ಯಾರ್ಥಿನಿಯೇ.

ಉದ್ಯೋಗ

ಉದ್ಯೋಗ, ವೈವಾಹಿಕ ಜೀವನ, ಮುಂದಿನ ಪೀಳಿಗೆಯ ಮಕ್ಕಳನ್ನು ಸಾಕುವ ಬೆಳೆಸುವ ಅಥವಾ ನಮಗೆ ಈಗ ಮಕ್ಕೊ ಬೇಡ ಎಂದು ನಿರ್ಧರಿಸಿಕೊಂಡು ಉದ್ಯೋಗವನ್ನು ಮುಂದುವರಿಸುವ ಸಮಸ್ಯೆ-ನಿರ್ಧಾರ ಎಲ್ಲವೂ ಪರಸ್ಪರ ದಂಪತಿಗಳದ್ದು. ಇದರಲ್ಲಿ ಹೊಂದಾಣಿಕೆ ಅತ್ಯಂತ ಮುಖ್ಯ.

ಕೃಷಿಯಲ್ಲಿ ನಮ್ಮ ಗಂಡುಮಕ್ಕಳಿಗೆ ಆಸಕ್ತಿ ಕಡಿಮೆಯಾಗಿದೆ. ಆತನಿಗೂ ಪಟ್ಟಣದ ಬದುಕೇ ಬೇಕು. ಹೆಂಡತಿಯ ತೋಟದ ಕೆಲಸಕ್ಕೆ ಬಿಟ್ಟು ಪಟ್ಟಣಕ್ಕೆ ಕೆಲಸಕ್ಕೆ ಹೋಪ ಗಂಡು ಹೆಚ್ಚು ಓದಿದವನಲ್ಲ. ಮೆಡಿಕಲ್-ಇಂಜಿನಿಯರಿಂಗ್-ಪಿ.ಎಚ್.ಡಿ. ಮಾಡಿದವರು ಪತ್ನಿಯನ್ನು ಮಕ್ಕಳನ್ನು ಆಸ್ತಿಯ-ಹಳ್ಳಿಯ ಮನೆಯಲ್ಲಿ ಬಿಟ್ಟಾರೆಯೇ?

ಇಬ್ಬರೂ ಉದ್ಯೋಗ ಮಾಡುವ ದಂಪತಿಗಳಿಗೆ ಹೆಚ್ಚಾಗಿ ಅಡಿಗೆ ಕಾಫಿ-ಟೀ ಇತ್ಯಾದಿಗಳ ಮಾಡಲಿಕ್ಕೆ ಇಬ್ಬರಿಗೂ ಬರುತ್ತದೆ. ಇದು ಇತ್ತೀಚೆಗಿನ ಬೆಳವಣಿಗೆ. ನನ್ನ ಇಬ್ಬರು ಗಂಡುಮಕ್ಕಳಿಗೂ ಅಡಿಗೆ ಕೋಣೆಯ ಎಲ್ಲಾ ಕೆಲಸಗಳು ಗೊತ್ತಿವೆ. ನಾವು ತಾಯಂದಿರು ಇಂಥಾ ಪಾಠಗಳನ್ನು ಹೇಳಿ ಕೊಡಲೇ ಬೇಕು. ಹೆಣ್ಣು ಮಕ್ಕಳು ಇರುವುದು ಗಂಡನ ಊಟ ತಿಂಡಿ ಮತ್ತು ದೇಹದ ಆಸೆಗಳನ್ನು ಪೂರ್ತಿ ಮಾಡಲಿಕ್ಕೆ ಮಾತ್ರ ಅಲ್ಲ.

ಕೃಷ್ಣ ಶಾಸ್ತ್ರಿ - Krishna Shastry said...

ಮನೋರಮಾ ಎಂ ಭಟ್ ಅವರ ಪ್ರತಿಕ್ರಿಯೆಯ ಎರಡನೇ ಭಾಗ ಇದು.

ಧಾರ್ಮಿಕತೆ

ಇದರಲ್ಲಿ ಗಂಡು ಮಕ್ಕಳ ಪಾತ್ರ ಅತ್ಯಂತ ಹಿರಿದು. ದಯಮಾಡಿ ನೀವು ಗಂಡು ಮಕ್ಕಳು ನಿಮ್ಮ ಪತ್ನಿಯಾಗುವವಳಿಗೆ ಹಿರಿಯರ ಸಮಕ್ಷಮ ತಾಳಿ ಕಟ್ಟುವಾಗ ಹೇಳುವ ಮಾತುಗಳನ್ನು ಅರ್ಥಮಾಡಿಕೊಳ್ಳಿ. ‘ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ ಕಂಠೇ ಬಧ್ನಾಮಿ ಸುಭಗೇ ತ್ವಂ ಜೀವಂ ಶರದಃ ಶತಂ’

‘ಇದು ನಾನು ಬದುಕಿರುವ ತನಕ ಮಾತ್ರ’ ಎನ್ನುವ ಅರ್ಥವಲ್ಲ. ಹೇಳಿಕೆಗಳಿಗೆ ಭಾವನಾತ್ಮಕ ಚಿಂತನೆಯ ಹಿನ್ನೆಲೆಯೂ ಇದ್ದಾಗ ಮಾತ್ರ ಅದು ಅತ್ಯಂತ ಮಹತ್ವದ್ದಾಗಿರುತ್ತದೆ. ‘ತ್ವಂ ಜೀವಂ ಶರದಃ ಶತಂ’ ಎಂದರೆ ನೀನು ನೂರು ವರ್ಷ ಕಾಲ ಬಾಳು. ಈ ಮಂಗಲ ಸೂತ್ರದ ಜೊತೆಗೆ ನೀನು ನೂರು ವರ್ಷ ಬಾಳು. ಇದು ನಿನಗೆ ನನ್ನ ಕೊಡುಗೆ. ಇದು ನಿನಗೆ ಶ್ರೀರಕ್ಷೆಯಾಗಿರಲಿ.

ಮತ್ತೆ ಪತಿಯನ್ನು ಕಳಕೊಂಡಾಗ ಆಕೆ ಮಕ್ಕಳಿಗೆ ತಾಯಿಯಲ್ಲವೇ? ಅಕ್ಕ ತಮ್ಮಂದಿರಿಗೆ ಒಡ ಹುಟ್ಟುಗಳಿಗೆ ಹೆತ್ತವರಿಗೆ ಆಕೆ ಮೊದಲಿನ ಸಂಬಂಧದಲ್ಲಿಯೇ ಹೆಸರಿಕೊಳ್ಳುವಾಕೆ ಹೇಗೆ ನಿಮ್ಮ ಪುರುಷಪ್ರಧಾನ ಧಾರ್ಮಿಕ ಜಗತ್ತಿಗೆ ಮಾತ್ರ ವಿಧವೆಯಾಗುತ್ತಾಳೆ?

ನಾನೇ ನೋಡಿದ್ದೇನೆ. ನನ್ನ ತಾಯಿಯ ತಂದೆಗೆ ಪತ್ನಿ ಅಲ್ಲದೆ ಇನ್ನೊಬ್ಬಾಕೆ ಹೆಣ್ಣು ಇತ್ತು. ನನ್ನ ಪತಿಯವರ ಅಜ್ಜ(ತಾಯಿಯ ತಂದೆ)ನವರಿಗೂ ಹೆಣ್ಣು ಇತ್ತು. ಹೀಗಿದ್ದ ಹೆಣ್ಣುಗಳಿಗೆ ಆತ ಮಕ್ಕಳನ್ನು ಕೊಟ್ಟಿದ್ದರು. ಅಂಥವರಿಗೆ ನಮ್ಮ ಧಾರ್ಮಿಕ ಜಗತ್ತು ಪೂಜೆ ಪುರಸ್ಕಾರಗಳಿಂದ ಹೊರಗೆ ಹಾಕಿದೆಯೇ?!!!

ನೀವು ನಿಮ್ಮ ಪತ್ನಿಯರಿಗೆ ಮೊದಲೇ ಹೇಳಿ "ಒಂದು ವೇಳೆ ನಾನು ಮೊದಲು ಸಾವನ್ನು ಕಂಡರೆ ನೀನು ಮಂಗಲೆಯಾಗಿಯೇ ಇರಬೇಕು, ಇರುತ್ತೀ" ಎಂದು. ನನ್ನ ತೀರ್ಥರೂಪರಾದ ಕನ್ನೆಪ್ಪಾಡಿ ಪರಮೇಶ್ವರ ಶಾಸ್ತ್ರಿಗಳು ತನ್ನ ೯೧ನೇ ವರ್ಷ ನಿಧನರಾದಾಗ ತನ್ನ ಪತ್ನಿಯನ್ನು ಬಳಿ ಕರೆದು ಮೇಲಿನ ಮಾತುಗಳನ್ನು ಹೇಳಿದ್ದಾರೆ. ಅಂಥಾ ತಂದೆಯವರನ್ನು ಪಡೆದ ನಾನು ಧನ್ಯೆ, ಭಾಗ್ಯವಂತೆ. ನೋಡಿ, ಇದನ್ನು ಬರೆಯುತ್ತಿರುವಾಗ ನಾನು ಅಳುತ್ತಿದ್ದೇನೆ. ತಂದೆಯವರಿಗೆ ನನ್ನ ಕಣ್ಣೀರಿನ ಕೃತಜ್ಞತೆಗಳನ್ನು ಈ ಮೂಲಕ ಹೇಳುತ್ತಿದ್ದೇನೆ ‘ಅಪ್ಪಾ, ನಾನು ಮುಂದಿನ ಜನ್ಮದಲ್ಲೂ ಹೆಣ್ಣಾಗಿ ಜನಿಸುವೆ, ನಿಮ್ಮ ಪ್ರೀತಿಯ ಮನೋರಮೆಯೇ ಆಗುವೆ ಅಪ್ಪಾ’

ದೇವರೇ, ನೀನು ಇದ್ದೀಯಾ? ನನ್ನಂಥ ಹೆಣ್ಣುಜೀವಗಳ ನೋವು ನಿನಗೆ ಕಾಣುವುದಿಲ್ಲವೇ?

ರಾಜಾರಾಮ್ ಮೋಹನ ರಾಯ್ ಈ ಭಾರತ ಭೂಮಿಯಲ್ಲಿ ಹುಟ್ಟದಿದ್ದರೆ ನನ್ನನ್ನು ಇಲ್ಲಿನ ಅವಿದ್ಯಾವಂತ ಬ್ರಾಹ್ಮಣರು ನನ್ನ ಪತಿಯ ಶವದ ಜೊತೆಗೆ ಜೀವಂತವಾಗಿ ಸುಡುತ್ತಿದ್ದದು!

ದಯಮಾಡಿ ಹವ್ಯಕ ಮಹಾಶಯರು ಸಹಕರಿಸಿರಿ. ನಿಮ್ಮ ಪೈಕಿ ಅಕಸ್ಮಾತ್ ಯಾರಾದರೂ ನಿಧನರಾದಾಗ ಅಲ್ಲಿಗೆ ಹೋಗಿ ಆತನ ಪತ್ನಿಯ ಅಸ್ತಿತ್ವ ಪತಿ ಬದುಕಿರುವಾಗ ಹೇಗಿತ್ತೋ ಹಾಗೆಯೇ ಇರಬೇಕು ಎನ್ನುವ ಚಿಂತನೆಗಳಿಂದ ಆಕೆಯನ್ನು ಬೆಂಬಲಿಸಿರಿ. ಪುರುಷ ಪತ್ನಿಯನ್ನು ಕಳಕೊಂಡಾಗ ಆತನ ಅಸ್ತಿತ್ವಕ್ಕೆ ಏನೇನೂ ಕೊರತೆ ಇಲ್ಲ. ಹಾಗಾದರೆ ಹೆಣ್ಣಿಗೆ ಮಾತ್ರ ಯಾಕೆ ಈ ಶಿಕ್ಷೆ? ಯಾಕೆ ಇಂಥಾ ಅಮಾನವೀಯ ಶಿಕ್ಷೆ?...

ನಾನು ಹೇಳುವುದೂ ಅದನ್ನೇ. ನಾವು ಮಾನವರು ಮನುಷ್ಯತ್ವವನ್ನು ಉಳಿಸೋಣ, ಬೆಳೆಸೋಣ. ಪರಸ್ಪರ ಜೀವಿತದಲ್ಲಿ ಸಹಕರಿಸೋಣ. ಸಮಾಜಕ್ಕೆ ಮಾದರಿಯಾಗೋಣ.

ಕೃಷ್ಣ ಶಾಸ್ತ್ರಿ - Krishna Shastry said...

ಮನೋರಮಾ ಎಂ ಭಟ್ ಅವರ ಪ್ರತಿಕ್ರಿಯೆಯ ಮೂರನೆಯ ಹಾಗೂ ಕೊನೆಯ ಭಾಗ ಇದು. ವಿಧವೆಯರ ಕಷ್ಟಗಳಿಗೆ ಸ್ಪಂದಿಸಿ ಬರೆದ ಹೃದಯಸ್ಪರ್ಶಿ ಕವನ ಇದು.

ಅಕ್ಕನ ಆಸೆ
-----------
ನಿನ್ನ ಗೆದ್ದೆಲಿ ಬೆಳೆದ ಗಂಧ ಸಾಲೆಕ್ಕಿ
ಕುಟ್ಟಿದರೂ ಕಡೆದರೂ ಪರಿಮಳವ ಕೊಡದಾ ||
ನಿನ್ನ ಜಾಲಿಲಿ ಬೆಳೆದ ಮಲ್ಲಿಗೆಯ ಬಳ್ಳೀಲಿ
ನಿತ್ಯ ಅರಳುವ ಹೂಗು ಒಂದೆ ಅಲ್ಲದ ಹೇಳು?
ನಿನ್ನ ಮಾವಿನ ಮರಲಿ ಬಂದು ಕೂಗುವ ಹಕ್ಯ
ಬಾಯಿ ಮುಚ್ಚಿಸುಲೆ ನಿನಗೆಡಿಗ ಹೇಳು!
ಪಶ್ಚಿಮಕ್ಕೆ ಸರಸರನೆ ಹರಿವ ನೇತ್ರಾವತಿಯ
ತಡೆದು ನಿಲ್ಲಿಸುಲೆ ನಿನಗೆಡಿಗ ಹೇಳು!
ನಿನ್ನ ಗೆದ್ದೆಲಿ ಬೆಳೆದ ಗಂಧ ಸಾಲೆಕ್ಕಿ...
ತಿಂಬಲಿದ್ದರೆ ಸಾಲ ಅಗಿವ ಹಲ್ಲುದೆ ಬೇಕು
ಮನಸು ಇದ್ದರೆ ಸಾಲ... ಮಾಡುವವರು ಬೇಕು
ಎಲ್ಲರೊಪ್ಪುವ ಹಾಂಗೆ ಬದಲು ಮಾಡೆಕ್ಕಾರೆ
ಮೇಗಣಿಂದಲೆ ಬರೆಕು ಒಪ್ಪಿಗೆಯ ನೀತಿ.. ||
ನಿನ್ನೆ ಮಂಗಲೆನಿಸಿದ್ದ ನಿನ್ನಕ್ಕ ತಂಗೆಕ್ಕೂ
ಇಂದಮಂಗಲೆಯಪ್ಪದು.. ಹೇಂಗಪ್ಪ ಹೇಳು?
ಭಾವ ಇದ್ದರೂ ಒಂದೆ.. ಇಲ್ಲದಿದ್ದರೂ ಒಂದೆ..
ಆನು ಹೇಳುವುದಿಷ್ಟೆ ಕೇಳು ಒಪ್ಪಣ್ಣ
ಈ ಅಕ್ಕನಾಶವೇ ಹೆದರದ್ದೆ ನೀನು
ಗುರುಹಿರಿಯರೆದುರಿಲ್ಲಿ ಮಡುಗೆಕ್ಕು ನೋಡು!
ಇದುವೆ ನಿನ್ನಕ್ಕಂಗೆ ನೀ ಬಿಡುವ ನೀರು
ಬೇರೆಂತ ಬೇಡೆನಗೆ ಎನ್ನ ತಮ್ಮಣ್ಣ..
ನಿನ್ನ ಗೆದ್ದೆಲಿ ಬೆಳೆದ ಗಂಧಸಾಲೆಕ್ಕಿ ಕುಟ್ಟಿದರೂ ಕಡೆದರೂ ಪರಿಮಳವ ಕೊಡದಾ ||

ಗಾಂಧಿ ಬಜಾರ್ ಮಾಸಿಕದಲ್ಲಿ ಪ್ರಕಟಿತ - ಸೆಪ್ಟೆಂಬರ್ ೨೦೦೧

ಹಕ್ಯ = ಹಕ್ಕಿಯ
ನಿನಗೆಡಿಗ = ನಿನ್ನಿಂದ ಸಾಧ್ಯವಾದೀತೇ
ಮೇಗಣಿಂದಲೇ ಬರೆಕು ಒಪ್ಪಿಗೆ = ಧರ್ಮಾಧಿಪತಿಗಳಿಂದ ಬರತಕ್ಕದ್ದು ಒಪ್ಪಿಗೆ

Santosh said...

ತುಂಬಾ ಚನ್ನಾಗ ಇದ್ದು ಲೇಖನ ....

Santosh said...

ತುಂಬಾ ಚನ್ನಾಗ ಇದ್ದು ಲೇಖನ ....

Post a Comment