About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Friday, October 8, 2010

ವಿದ್ಯುನ್ಮಾನ ದುಡ್ಡು ಯಾಕೆ ಶಾಕ್ ಕೊಡುತ್ತದೆ?

೧೦-ಸೆಪ್ಟೆಂಬರ್ ೨೦೧೦
ನಮಸ್ಕಾರ,

ಅಶೋಕವರ್ಧನ ಅವರು ತಮ್ಮ ಬ್ಲಾಗ್‍ನಲ್ಲಿ ಇತ್ತೀಚೆಗೆ ಬರೆದ ಬ್ಯಾಂಕ್ ಬ್ಯಾಂಕ್ ಬ್ಯಾಂಘ್ ಎಂಬ ಅನುಭವ ಕಥನವನ್ನು ಓದಿದೆ. ಕಳ್ಳನೋಟು, ಕ್ರೆಡಿಟ್ ಕಾರ್ಡ್ ಯಂತ್ರಗಳು - ಹೀಗೆ ಕೆಲವು ವಿಷಯಗಳಲ್ಲಿ ಅವರಿಗಾದ ಕಹಿ ಅನುಭವಗಳನ್ನು, ತಾಳ್ಮೆಯಿಂದ ನಡೆಸಿದ ಹೋರಾಟವನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ. ಸಮಯ ಸಿಕ್ಕಿದಾಗ ಖಂಡಿತಾ ಓದಿ.

ಅವರ ಬ್ಲಾಗ್‍ನಲ್ಲಿಯೇ ಇದಕ್ಕೆ ಪ್ರತಿಕ್ರಿಯೆ ನೀಡುವಾ ಅಂತ ಹೊರಟೆ, ಆದರೆ ಅನೇಕ ವಿಷಯಗಳು ಮನಸ್ಸಿಗೆ ಹರಿದುಬಂದುವು, ಹೀಗಾಗಿ ನನ್ನದೇ ಬ್ಲಾಗ್‍ನಲ್ಲಿ ವಿವರವಾಗಿ ಬರೆಯುತ್ತಿದ್ದೇನೆ.

ಕಾಗದವಿರಲಿ, ನಾಣ್ಯವಿರಲಿ - ದುಡ್ಡು ಎಂಬುದು ಏನಿದ್ದರೂ ಒಂದು ಸಾಂಕೇತಿಕ ರೂಪ, ಅದು ಇಲೆಕ್ಟ್ರಾನಿಕ್ ರೂಪಕ್ಕೆ ಬದಲಾದರೆ ಎಲ್ಲರಿಗೂ ಅನೇಕ ಲಾಭಗಳಿವೆ. ಈ ಕೆಳಗಿನ ಅಂಶಗಳನ್ನು ಗಮನಿಸಿ:

- ನೋಟುಗಳ ವಹಿವಾಟು ಇದ್ದರೆ ತಾನೇ ಕಳ್ಳನೋಟಿಗೆ ಚಲಾವಣೆ ಇರುವುದು? ನೋಟೇ ಇಲ್ಲದಿದ್ದರೆ?!
- ನೋಟು, ನಾಣ್ಯಗಳ ಮುದ್ರಣಕ್ಕಾಗಿ, ಮರುಮುದ್ರಣಕ್ಕಾಗಿ, ಸಾಗಾಟಕ್ಕಾಗಿ ಸರಕಾರ ಸಾಕಷ್ಟು ಖರ್ಚು ಮಾಡುತ್ತದೆ
- ದುಡ್ಡನ್ನು ಲೆಕ್ಕ ಮಾಡಲು, ಜೋಪಾನವಾಗಿ ಕಾಯ್ದಿಡಲು ಈ ಭೂಮಿಯಲ್ಲಿ ಅದೆಷ್ಟು ಉದ್ಯೋಗಿಗಳಿದ್ದಾರು, ಊಹಿಸಬಲ್ಲಿರಾ? ಅದೆಷ್ಟು ಭದ್ರವಾದ ತಿಜೋರಿಗಳಿವೆಯೋ ಏನೋ!
- ಜನಸಾಮಾನ್ಯರೂ ಕೂಡ ಪ್ರತಿದಿನ ದುಡ್ಡು ಲೆಕ್ಕ ಮಾಡುವ ಸಮಯವನ್ನು ಕೂಡಿಸಿದರೆ ಚಂದ್ರನಿಗೇ ಏಣಿ ಇಡಬಹುದೇನೋ!!
- ಸಣ್ಣ ಮಕ್ಕಳು ಕೂಡ ನಾಣ್ಯ ಸಂಗ್ರಹ ಅಂತ ಸಮಯ ಕೊಲ್ಲುತ್ತಾರಪ್ಪ (ಹ್ಹೆ ಹ್ಹೆ, ನಾನೂ ಮಾಡುತ್ತಿದ್ದೆ)

ಕಾರ್ಡುಗಳ ಬಳಕೆ ಮತ್ತಿತರ ‘ವಿದ್ಯುನ್ಮಾನ ದುಡ್ಡು ಹಾಗೂ ಚಲಾವಣೆ’ ನೋಟುಗಳ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಬಲ್ಲುದು ಎಂಬುದು ನಾನು ಅಮೇರಿಕಾದಲ್ಲಿ ಈಗಾಗಲೇ ಕಂಡುಕೊಂಡ ಸತ್ಯ. ಅಲ್ಲಿ ಒಂದೇ ಒಂದು ನೋಟು, ನಾಣ್ಯವನ್ನು ಮುಟ್ಟದೇ, ಉಪಯೋಗಿಸದೇ ನಾನು ವಾರಗಟ್ಟಲೆ ಇದ್ದದ್ದಿದೆ, ವರುಷಗಟ್ಟಲೆ ಕೂಡ ಇರಬಹುದೇನೋ, ಆದರೆ ಕೊನೆಗೆ ಬೋರ್ ಆಗಿ ಕೆಲವು ವಹಿವಾಟುಗಳನ್ನು ನೋಟು-ನಾಣ್ಯಗಳನ್ನುಪಯೋಗಿಸಿ ಮಾಡುತ್ತಿದ್ದೆ, ಹಳೇ ಚಾಳಿಯನ್ನು ಬಿಡಲು ಮನಸ್ಸಾಗದು ನೋಡಿ!

ಹಾಗಿದ್ದಲ್ಲಿ ಸರಕಾರ, ಬ್ಯಾಂಕ್, ಇತರ ವಿತ್ತ ಸಂಸ್ಥೆಗಳು, ಎಲ್ಲರೂ ಸೇರಿ ಕಾರ್ಡ್ ಬಳಕೆಯನ್ನು ಹೆಚ್ಚಿಸುವತ್ತ ಗಮನ ಹರಿಸಿ ಪ್ರೋತ್ಸಾಹಿಸಬೇಕು, ಮೇಲ್ನೋಟಕ್ಕೆ ನಿಮಗೂ ಹಾಗೆ ತೋರುವುದಿಲ್ಲವೇ? ಉದಾ: ಅದರಿಂದಾಗುವ ಲಾಭಗಳನ್ನು ಪರಿಗಣಿಸಿ ಕಾರ್ಡ್ ಬಳಕೆ ಮಾಡಿದರೆ ತಾವೇ ಒಂದೋ ಎರಡೋ ಶೇಕಡಾವನ್ನು ಬಳಕೆದಾರರಿಗೆ (ಗ್ರಾಹಕರಿಗೂ, ವರ್ತಕರಿಗೂ) ವಾಪಾಸ್ ಕೊಡಬೇಕು.

ಏನಂತೀರಾ? ಹೇಗಿದೆ ನನ್ನ ಸಿದ್ಧಾಂತ? :-)

ಡೆಬಿಟ್ ಯಾಕೆ ಮಾಡ್ತೀರ್ರೀ, ಕ್ರೆಡಿಟ್ ತಗೊಳ್ಳಿ ಸ್ವಾಮೀ...

ಹಾ! ಇನ್ನೊಂದು ವಿಚಿತ್ರ ಸಂಗತಿ. ಕಂಪ್ಯೂಟರ್ ನೋಡುತ್ತಿರುವ ನಿಮಗೆಲ್ಲರಿಗೂ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‍ಗಳ ವ್ಯತ್ಯಾಸ ಗೊತ್ತಿರಬಹುದು, ಅದನ್ನು ವಿವರಿಸುವ ಗೋಜಿಗೆ ಹೋಗುವುದಿಲ್ಲ. ಇಲ್ಲಿ ನನಗೆ ಕುತೂಹಲ ತರಿಸಿದ ವಿಚಾರವೆಂದರೆ ಕೆಲವು ಕಡೆ ಕೇಳಲ್ಪಡುವುದು ಏನೆಂದರೆ - "ನಾವು ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುತ್ತೇವೆ, ಆದರೆ ಡೆಬಿಟ್ ಕಾರ್ಡ್ ಅಲ್ಲ, ಕ್ಷಮಿಸಿ". ಇದು ನನಗೆ ಎಲ್ಲಿಲ್ಲದ ಸಿಟ್ಟು ತರಿಸುವ ವಿಚಾರ. "ಅಲ್ಲಾ ಮಾರಾಯಾ, ನನ್ನ ಬ್ಯಾಂಕ್‍ನಲ್ಲಿ ದುಡ್ಡು ಉಂಟಪ್ಪಾ, ಹಾಸಿಗೆ ಇದ್ದಷ್ಟೇ ಕಾಲು ಚಾಚು ಅಂತ ಹಿರಿಯರು ಹೇಳಿದ್ದಾರೆ, ಇರುವ ದುಡ್ಡನ್ನು ಕೊಡುತ್ತೇನೆಂದರೆ ಅದನ್ನು ಬಿಟ್ಟು ನಾನು ಸಾಲ ಮಾಡಿಯೇ ನಿನಗೆ ಕೊಡಬೇಕೆನ್ನುವುದು ಏನು ನ್ಯಾಯ?" ಎಂದು ಕೇಳಿದರೆ ಬರುವ ಉತ್ತರ - "ಅದೆಲ್ಲಾ ನಮಗೆ ಗೊತ್ತಿಲ್ಲ, ಕ್ರೆಡಿಟ್ ಕಾರ್ಡ್ ಮಾತ್ರ ತೆಗೆದುಕೊಳ್ಳುತ್ತೇವೆ" ಹಿಂದಿನ ಕಾಲದಲ್ಲಿ ಜಮೀನ್ದಾರರು ಬಡರೈತರಿಗೆ ತೀರಿಸಲಾಗದ ಸಾಲಕೊಟ್ಟು ಕೊನೆಗೆ ಅವರ ಜಮೀನನ್ನು ವಶಪಡಿಸಿಕೊಳ್ಳುತ್ತಿದ್ದರಲ್ಲಾ, ಹೀಗೆ ಏನಾದರೂ ವ್ಯವಸ್ಥಿತವಾದ ಸಂಚು ಇದೆಯೇನೋ ಎಂದು ನನಗೆ ಒಮ್ಮೊಮ್ಮೆ ಸಂಶಯ ಬರುವುದಿದೆ :-) ಸರಿಯಪ್ಪಾ, ನನಗೆ ಈ ವಿಷಯದ ಆಳದಲ್ಲಿರುವ ಕೆಲವು ಸಮಸ್ಯೆಗಳು ತಿಳಿಯದೇ ಇರಬಹುದು, ಆದರೆ ಇದು ಅತಾರ್ಕಿಕ ಎಂದನಿಸುವುದಿಲ್ಲವೇ ನಿಮಗೆ? ಈ ಸಮಸ್ಯೆ ಅಮೇರಿಕಾದಲ್ಲಿ ಕಡಿಮೆ, ಭಾರತದಲ್ಲಿ ಜಾಸ್ತಿ ಎನ್ನುವುದು ಗಮನಿಸತಕ್ಕ ವಿಚಾರ.

ಸರಿ, ಸದ್ಯಕ್ಕೆ ಇಲ್ಲಿಗೆ ನಿಲ್ಲಿಸುವೆ, ಇನ್ನೊಮ್ಮೆ ಸಿಗೋಣ.

ಇತಿ,
ಕೃಷ್ಣ ಶಾಸ್ತ್ರಿ


-------------------------------------------------------------------------------------------------------------

೨೮-ಸೆಪ್ಟೆಂಬರ್-೨೦೧೨

ಈ ಮೇಲಿನ ಲೇಖನ ಬರೆದು ೨ ವರುಷಗಳೇ ಕಳೆದವು! ಶರವೇಗದಲ್ಲಿ, ಅಲ್ಲಲ್ಲ ರಾಕೆಟ್ ವೇಗದಲ್ಲಿ ಮುನ್ನಡೆಯುತ್ತಿರುವ ಇಂದಿನ ದಿನಗಳಲ್ಲೂ ದುರದೃಷ್ಟವಶಾತ್ ಈ ಬದಲಾವಣೆ ಕಾಣಸಿಗಲಿಲ್ಲ. ಕಾರಣವೇನು? ಸಂಬಂಧಪಟ್ಟವರಿಗೆ ದೂರದೃಷ್ಟಿ ಇಲ್ಲದಿರುವುದೇ? ಅಥವಾ ಅವರ ಪೆದ್ದುತನವೇ? ಅಥವಾ ಇದನ್ನು ಜಾರಿಗೆ ತರದೇ ಇರುವಲ್ಲಿ ಯಾರದ್ದಾದರೂ ಹಿತಾಸಕ್ತಿಗಳು ಗೌಪ್ಯವಾಗಿ ಕೆಲಸ ಮಾಡುತ್ತಿವೆಯೇ?

ಏನೇನೂ ಆಗುತ್ತಿಲ್ಲ ಎನ್ನುವುದಕ್ಕೆ  ಅಪವಾದ ಇಲ್ಲಿದೆ ನೋಡಿ. ಬುಧವಾರ ಸೆಪ್ಟೆಂಬರ್ ೨೬ರಂದು ವಿಜಯಕರ್ನಾಟಕದಲ್ಲಿ ಬಂದ ಒಂದು ಸುದ್ದಿಯನ್ನು ಇಲ್ಲಿ ಲಗತ್ತಿಸಿದ್ದೇನೆ. ಇದು ಒಳ್ಳೆಯದೇ, ಆದರೆ ಡೆಬಿಟ್-ಕ್ರೆಡಿಟ್ ಕಾರ್ಡುಗಳಿಗೆ ಸಂಬಂಧಿಸಿದ ಶುಲ್ಕಗಳನ್ನು ಯಾವಾಗ ಕಿತ್ತು ಎಸೆಯುತ್ತಾರೆ ಎನ್ನುವುದು ಕೂಡ ಅತಿ ಮುಖ್ಯ ಪ್ರಶ್ನೆ.



4 comments:

Anonymous said...

ನನ್ನ ಅನುಭವದಲ್ಲಿ ಈಗ ಡೆಬಿಟ್ ಕಾರ್ಡ್ accept ಮಾಡುವವರ ಸಂಖ್ಯೆ ೩-೪ ವರ್ಷಗಳಿಂದ ಗಣನೀಯವಾಗಿ ಹೆಚ್ಚಾಗಿದೆ. ಅಂತರರಾಷ್ಟ್ರೀಯ ವಿನಿಮಯಕ್ಕೂ ನಾನು ಡೆಬಿಟ್ ಕಾರ್ಡ್ ಉಪಯೋಗಿಸಿದ್ದೇನೆ. ಎಲ್ಲಾ ಕಡೆ ಡೆಬಿಟ್ ಕಾರ್ಡ್ accept ಮಾಡುವ ದಿನಗಳು ಬೇಗ ಬರಬಹುದೇನೋ..
- ರಾಮಪ್ರಕಾಶ.

KS Naveen said...

ನಮಸ್ತೆ, ಅಶೋಕವರ್ಧನರ ಲೇಖನ ಓದಿಲ್ಲ, ಓದಿ ಪ್ರತಿಕ್ರಯಿಸುತ್ತೇನೆ. ನನಗೆ ಅವರದ್ದು ಹಳೆಯ ಪರಿಚಯ! ಇರಲಿ. ತಮ್ಮ ಲೇಖನ ಚೆನ್ನಾಗಿದೆ. "ಕ್ರೆಡಿಟ್ ಮಾತ್ರ ತೊಗೊತೀವಿ ಡೆಬಿಟ್ ಬೇಡಾ.." ಈ ಬಗ್ಗೆ ನೀವು ಊಹಿಸಿರೋದು ಸರಿ. ಖಂಡಿತಾ ಇದೊಂದು ಹುನ್ನಾರವೇ. ಕ್ರೆಡಿಟ್ ಕಾರ್ಡನ ದುರಂತ ಗೊತ್ತಿರದವರೇ ಆ ಕಂಪನಿಗಳ ಬಂಡವಾಳ! ೀ ಬಾರಿ ಕೊಂಡು ತಕ್ಷಣವೇ ಹಣಪಾವತಿ ಮಾಡಿದರೆ ಅವರು ಬದುಜುವುದು ಹೇಗೆ! ಬಡ್ಡಿಗೆ ಬಡ್ಡಿ ಸೇರಿಸಿಯೇ ಅವರು ಬದುಕುವುದು

ಕೆ ಎಸ್ ನವೀನ್

Anonymous said...

ದಿನದ ಎರಡು ಕೊನೆಗಳು ವಾಹನಿಗರಿಗೆಲ್ಲಾ ರಗಳೇದೇ ಎನ್ನುವ ಮಾತನ್ನು ಬ್ಯಾಂಕಿಗರಿಗೆ ಅನ್ವಯಿಸಿ ನೋಡಿ. ಅವರು ಹಳೇ ಕಡತಗಳ ಕಮಟು (ಮುಳುಗು ಸೂರ್ಯನ ಬೆಳಕು) ಇನ್ನೂ ಮರೆಯಲಾರರು, ಗಣಕಲೋಕದ ಪೂರ್ಣ ಸೌಕರ್ಯ (ಹೆದ್ದೀಪದ ಪ್ರಖರತೆ)ಗ್ರಹಿಸಲಾರರು. ಏನ್ಮಾಡೋಣಾ ನಾನು ಪ್ರಯಾಣ ನಿಲ್ಲಿಸಲಾರೆ! ಗಾಢಾಂಧಕಾರ ಬರುತ್ತೋ ಸೂರ್ಯೋದಯವಾಗುತ್ತೋ ನಿಶ್ಚಯವಾಗಲಿ, ನಾನು ಮತ್ತೆ ಕಾರ್ಡುಜ್ಜುವ ಯಂತ್ರಕ್ಕೆ ಶರಣಾಗಲೂ ಬಹುದು (ಪ್ರಯಾಣ ನಿಲ್ಲಿಸದಿದ್ದರೆ!) ವಿಷಾದಗಳಿಲ್ಲದೆ - ಅಶೋಕವರ್ಧನ

Anonymous said...

i agree that overall the plastic money in far better. however in a vast country(illiterate!) the universal use of plastic money may take decades to come

Post a Comment