About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Sunday, October 3, 2010

ವೀಗನಿಸಂ ಎಂದರೆ ಏನು? ಒಂದು ಚಿಕ್ಕ ಪರಿಚಯ

ವೀಗನಿಸಂ ಒಂದು ಸಿದ್ಧಾಂತ, ಒಂದು ಜೀವನಕ್ರಮ: ಸಾಧ್ಯವಾದಷ್ಟೂ ಅಹಿಂಸೆಯ ಪಥದಲ್ಲಿ ಜೀವನ ನಡೆಸುವ ಮನೋಧರ್ಮವಿದು. ಮೂಲಭೂತವಾಗಿ ಮಾನವನು ಪ್ರಾಣಿಗಳನ್ನು* ವಿವಿಧ ರೀತಿಯಲ್ಲಿ ಉಪಯೋಗಿಸುತ್ತಿರುವಷ್ಟೂ ಕಾಲ ಅವುಗಳ ಮೇಲೆ ತರತರದ ದೌರ್ಜನ್ಯ ತಪ್ಪಿದ್ದಲ್ಲ, ಆಳಕ್ಕೆ ಇಳಿದು ನೋಡಿದರೆ ಇದರಲ್ಲಿ ಕೇವಲ ಮನುಷ್ಯನ ಸ್ವಾರ್ಥ ಅಡಗಿದೆ ಹಾಗೂ ಪ್ರಾಣಿಗಳ ಹಿತಚಿಂತನೆಯಲ್ಲ ಎಂಬ ಸತ್ಯದ ಅರಿವಾದವರು ಈ ಜೀವನಧರ್ಮವನ್ನು ಅಪ್ಪಿಕೊಳ್ಳುತ್ತಾರೆ. ಇದನ್ನು ಪಾಲಿಸುವವರನ್ನು ವೀಗನ್ ಎಂದು ಕರೆಯುತ್ತಾರೆ (ಕೆಲವರು ವೆಗನ್/ವೇಗನ್ ಅಂತವೂ ಕರೆಯುತ್ತಾರೆ).

* ಗಮನಿಸಿ: ಇಲ್ಲಿ ಪ್ರಾಣಿ, ಪಕ್ಷಿ, ಜಲಚರ – ಹೀಗೆ ಸಸ್ಯಗಳನ್ನು ಬಿಟ್ಟು ಉಳಿದೆಲ್ಲಾ ಜೀವಿಗಳನ್ನು ಉದ್ದೇಶಿಸಿ ಸಂಕ್ಷಿಪ್ತವಾಗಿ ‘ಪ್ರಾಣಿ’ ಎಂಬ ಪದದ ಬಳಕೆಯನ್ನು ಈ ಲೇಖನದುದ್ದಕ್ಕೂ ಮಾಡಿದ್ದೇನೆ.

ಹುಟ್ಟು

ಪದದ ಜನನವಾದದ್ದು ಬ್ರಿಟನ್‍ನಲ್ಲಿ. ೧೯೪೩ರಲ್ಲಿ ಡೊನಾಲ್ಡ್ ವಾಟ್ಸನ್ ಎಂಬ ಮಹನೀಯರು ಈ ಪದವನ್ನು ಹುಟ್ಟುಹಾಕಿದರು, “ವೀಗನ್ ಸೊಸೈಟಿ”ಯನ್ನು ಹುಟ್ಟುಹಾಕುವಲ್ಲಿ ಕೂಡ ಮಹತ್ತರ ಪಾತ್ರ ವಹಿಸಿದರು. ಆನಂತರ ನಿಧಾನವಾಗಿ ದೇಶ, ಜಾತಿಗಳ ಎಲ್ಲೆಗಳನ್ನು ಮೀರಿ ಈ ಮಾನವೀಯ ಸಿದ್ಧಾಂತ ಬೆಳೆಯುತ್ತಲೇ ಹೋಯಿತು.

ಇದಕ್ಕೆ ಸಮಾನಾರ್ಥಕ ಕನ್ನಡ ಪದ ಇನ್ನೂ ಇಲ್ಲ; ಇದು ಪಾಶ್ಚಾತ್ಯ ದೇಶಗಳಲ್ಲಿ ಜನಿಸಿದ ಪದವಾದ್ದರಿಂದಲೂ ಹಾಗೂ ಜೀವನಕ್ರಮವು ಭಾರತದಲ್ಲಿ ಜನಪ್ರಿಯವಲ್ಲದಿರುವುದರಿಂದಲೂ ಇದಕ್ಕೆ ಭಾರತೀಯ ಭಾಷೆಗಳಲ್ಲಿ ಸಮಾನಾರ್ಥಕ ಪದ ಇನ್ನೂ ಹುಟ್ಟಿಲ್ಲ. ಕನ್ನಡದಲ್ಲಿ ಈ ನಿಟ್ಟಿನಲ್ಲಿ ಸಾಹಿತ್ಯವೂ ಬಹಳ ಕಮ್ಮಿ, ಬಹುಷಃ ನಾನೇ ಮೊದಲ ಬರಹಗಾರನಿರಬೇಕು!

ವೀಗನ್ ಜೀವನಕ್ರಮ

ಆಹಾರ, ದಿರಿಸು, ಮೋಜು, ಔಷಧಿ – ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪ್ರಾಣಿಗಳು ಅಥವಾ ಪ್ರಾಣಿಜನ್ಯ ವಸ್ತುಗಳು ನಮ್ಮ ಜೀವನಕ್ರಮದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸೇರಿಕೊಂಡಿರುತ್ತವೆ. ಪ್ರಾಣಿಜನ್ಯ ವಸ್ತುಗಳಿಂದ ಮುಕ್ತವಾದ ಜೀವನ ನಡೆಸುವುದು ಹಾಗೂ ಇನ್ಯಾವುದೇ ಕಾರಣಕ್ಕೆ ಪ್ರಾಣಿಗಳನ್ನು ಉಪಯೋಗಿಸದೇ ಇರುವುದು ವೀಗನ್ ಜೀವನಕ್ರಮದ ಮುಖ್ಯ ಧ್ಯೇಯ. ಕೆಲವು ಉದಾಹರಣೆಗಳು ಕೆಳಗಿನಂತಿವೆ:
. ಪ್ರಾಣಿಗಳನ್ನು ತಿನ್ನದೇ ಇರುವುದು ಮಾತ್ರವಲ್ಲ, ಪ್ರಾಣಿಜನ್ಯ ಪದಾರ್ಥಗಳನ್ನು ಸೇವಿಸದೇ ಇರುವುದು - ಇದರಲ್ಲಿ ಮೊಟ್ಟೆ ಮಾತ್ರವಲ್ಲ, ಹಾಲು, ಜೇನು ಇತ್ಯಾದಿ ಕೂಡ ಬರುತ್ತದೆ.
. ಪ್ರಾಣಿಜನ್ಯ ವಸ್ತುಗಳಿಂದ ತಯಾರಾದ ದಿರಿಸುಗಳನ್ನು ಧರಿಸದೇ ಇರುವುದು - ಚರ್ಮದ ಮೆಟ್ಟು, ಕೈಚೀಲ, ಕೋಟು, ಟೊಪ್ಪಿ ಇತ್ಯಾದಿ.
. ಪ್ರಾಣಿಗಳ ಮೇಲೆ ಪ್ರಯೋಗ ಮಾಡಿದ ವಸ್ತುಗಳನ್ನು ಉಪಯೋಗಿಸದೇ ಇರುವುದು - ಸೋಪು, ಶಾಂಪೂ ಮಾತ್ರವಲ್ಲ ಮದ್ದು ಕೂಡ ಇಲ್ಲಿ ಪರಿಗಣಿಸಲ್ಪಡುತ್ತದೆ. (ಉದಾಹರಣೆಗೆ ನಮ್ಮ ಕಣ್ಣುಗಳಿಗೆ ತೊಂದರೆಯಾಗದಿರಲಿ ಎಂದು ಕೆಲವು ಶಾಂಪೂ ಕಂಪನಿಯವರು ಮೊಲಗಳ ಕಣ್ಣುಗಳ ಮೇಲೆ ಅದನ್ನು ಸುರಿದು ಪರಿಣಾಮಗಳನ್ನು ಅಭ್ಯಸಿಸುತ್ತಾರೆ - ಹೀಗೆ ನಮಗೆ ಗೊತ್ತಿಲ್ಲದೇ ನಿತ್ಯೋಪಯೋಗಿ ವಸ್ತುಗಳ ತಯಾರಿಯ ಹಿನ್ನೆಲೆ ಕೂಡ ಕೆಲವೊಮ್ಮೆ ಕ್ರೂರವಾಗಿರುತ್ತದೆ)
. ಪ್ರಾಣಿಗಳನ್ನು ಮೋಜಿಗಾಗಿ ಬಳಸುವುದನ್ನು ಪ್ರೋತ್ಸಾಹಿಸದೇ ಇರುವುದು - ಉದಾಹರಣೆಗೆ ಸರ್ಕಸ್ಗೆ, ಜ಼ೂಗಳಿಗೆ ಹೋಗದೇ ಇರುವುದು.
೫. ಪ್ರಾಣಿಗಳನ್ನು ನಮ್ಮ ವಿವಿಧ ‘ಸೇವೆ’ಗಳಿಗಾಗಿ ಬಳಸದೇ ಇರುವುದು. ಉದಾ: ರಕ್ಷಣೆಗೆ, ಭಾರದ ವಸ್ತುಗಳನ್ನು ಹೊರುವುದಕ್ಕೆ ಇತ್ಯಾದಿ.

ಮೇಲ್ನೋಟಕ್ಕೆ ವೀಗನ್ ಜನರ ಸಿದ್ಧಾಂತವು ಸರಳವಾಗಿ ಕಂಡು ಬಂದರೂ ಕೂಡ ಆಳಕ್ಕೆ ಇಳಿದಂತೆ ಅದರಲ್ಲಿನ ವೈವಿಧ್ಯತೆ ಗೋಚರವಾಗುತ್ತದೆ - ಈ ಸಿದ್ಧಾಂತವನ್ನು ಬೇರೆ ಬೇರೆ ಜನರು ಬೇರೆ ಬೇರೆ ಮಟ್ಟದಲ್ಲಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಜೀವನಕ್ರಮವನ್ನು ಪಾಲಿಸುವವರಿಗೆ ನಿತ್ಯವೂ ಕಲಿಯಲು/ಅರಿಯಲು ಎಷ್ಟೋ ಹೊಸ ವಿಷಯಗಳಿರುತ್ತವೆ; ಹೀಗೆ ಕಲಿಯುತ್ತಾ ಅವರು ಅಹಿಂಸಾ ಪಥದಲ್ಲಿ ವಿಕಸಿತಗೊಳ್ಳುತ್ತಾ ಹೋಗುತ್ತಾರೆ.

ಇದನ್ನು ಪಾಲಿಸುವುದು ಸರಳವಾದ ವಿಚಾರವಲ್ಲ, ತುಂಬಾ ಕ್ಲಿಷ್ಟಕರ ಎಂದು ಕೆಲವರು ಭಾವಿಸುತ್ತಾರೆ ಹಾಗೂ ದೂರವೇ ಉಳಿಯುತ್ತಾರೆ. ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ಬೇಕಾದದ್ದು ದಯೆ, ಪ್ರಾಣಿಗಳ ಮೇಲೆ ಅಂತಃಕರುಣೆ - ಅಂತಹ ಮನಸ್ಥಿತಿಯಿದ್ದರೆ ಈ ಜೀವನಕ್ರಮ ಏನೇನೂ ಕಷ್ಟವೆನಿಸುವುದಿಲ್ಲ, ಬದಲಾಗಿ ಸ್ವಾಭಾವಿಕವೆನಿಸುತ್ತದೆ ಹಾಗೂ ನೆಮ್ಮದಿ ದೊರೆಯುತ್ತದೆ, ಹಿತವೆನಿಸುತ್ತದೆ.

ವೀಗನ್ ಜೀವನಕ್ರಮವನ್ನು ಎತ್ತಿ ಹಿಡಿಯುವವರು, ಬೆಂಬಲಿಗರು

‘ವೀಗನ್ ಸೊಸೈಟಿ’ ಈ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ಸಂಸ್ಥೆ (೧೯೪೩ರಲ್ಲಿ!). ಇಂದು ಹಲವಾರು ಸಂಸ್ಥೆಗಳು ಸಿದ್ಧಾಂತವನ್ನು ಎತ್ತಿ ಹಿಡಿದು ಹೆಚ್ಚು ಹೆಚ್ಚು ಜನರಲ್ಲಿ ಅರಿವು ಮೂಡಿಸುವುದಕ್ಕೋಸ್ಕರ ಹಗಲಿರುಳೂ ಶ್ರಮಿಸುತ್ತವೆ - ಮನುಷ್ಯರ ಬಗ್ಗೆ ಮಾತ್ರವಲ್ಲ, ಸಮಸ್ತ ಜೀವಜಾಲದ ಬಗ್ಗೆ ಹಾಗೂ ಪರಿಸರದ ಬಗ್ಗೆ ನಮಗೆ ಕಾಳಜಿ ಇರಬೇಕು, ಹಾಗೆ ಇದ್ದರೇನೇ ಚೆನ್ನ ಎಂಬುದನ್ನು ಹೆಚ್ಚಿನ ಜನ ಮನಗಾಣುವಂತೆ ಮಾಡಲು ಇವರು ಪ್ರಯತ್ನಿಸುತ್ತಾರೆ. ಇವರಲ್ಲಿ ಕೆಲವರು ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತೀವ್ರವಾಗಿಯೂ ಕೆಲವರು ಸೌಮ್ಯವಾಗಿಯೂ ಪ್ರತಿಭಟಿಸುತ್ತಾರೆ. ಭಾರತದಲ್ಲಿ ಕೂಡ ಈ ನಿಟ್ಟಿನಲ್ಲಿ ಸಕ್ರಿಯವಾಗಿರುವ ಅನೇಕ ಸಂಘಸಂಸ್ಥೆಗಳಿವೆ; ಹೆಚ್ಚಿನ ಮಾಹಿತಿಗಳಿಗಾಗಿ ಈ ಕೊಂಡಿಯನ್ನು ಕ್ಲಿಕ್ಕಿಸಿರಿ:

ಮಾತ್ರವಲ್ಲ, ಯಾವುದೇ ಸಂಘ ಸಂಸ್ಥೆಯ ಮೂಲಕವಲ್ಲದಿದ್ದರೂ ಪ್ರತಿಯೊಬ್ಬ ವೀಗನ್ ತನ್ನ ಜೀವನಕ್ರಮದ ಮೂಲಕ ಅಹಿಂಸೆಯ ಸಂದೇಶವನ್ನು ಪ್ರತಿನಿತ್ಯವೂ ಸಾರುತ್ತಲೇ ಸಾಗುತ್ತಾನೆ. Facebook ಮುಂತಾದ ತಾಣಗಳಲ್ಲಿಯೂ ಇದಕ್ಕೆ ಸಂಬಂಧಪಟ್ಟಂತೆ ಅನೇಕ ಸಂಘಗಳಿವೆ.

ಜನಪ್ರಿಯ ವ್ಯಕ್ತಿಗಳೂ, ಸುಪ್ರಸಿದ್ಧ ತಾರೆಗಳೂ ಕೂಡ ಕೆಲವೊಮ್ಮೆ ಸಿದ್ಧಾಂತವನ್ನು ಸಮರ್ಥಿಸಿ ಇದನ್ನು ಪ್ರಚಾರ ಮಾಡಲು ಸಹಾಯ ಮಾಡುತ್ತಾರೆ. ಪ್ರಸಿದ್ಧ ಸಿತಾರ್ ವಾದಕ ರವಿಶಂಕರ್, ಅವರ ಮಗಳು ಅನೌಷ್ಕಾ, ನಫ಼ೀಸಾ ಜೋಸೆಫ಼್, ಯಾನಾ ಗುಪ್ತಾ, ಅನಿಲ್ ಅಂಬಾನಿ, ಹೇಮ ಮಾಲಿನಿ, ಅಮಿಷಾ ಪಟೇಲ್, ಅಮಿತಾಭ್ ಬಚ್ಚನ್, ಅಮೃತಾ ರಾವ್, ಮಲ್ಲಿಕಾ ಶೆರಾವತ್.... ಹೀಗೆ ಸಂಖ್ಯೆ ಬೆಳೆಯುತ್ತಲೇ ಹೋಗುತ್ತದೆ. ಇದರರ್ಥ ಇವರೆಲ್ಲಾ ಪಕ್ಕಾ ವೀಗನ್ ಅಂತ ಅಲ್ಲ. ಒಬ್ಬೊಬ್ಬರು ಒಂದೊಂದು ಮಟ್ಟದಲ್ಲಿ ಪ್ರಾಣಿದಯೆಯನ್ನು ನಂಬುತ್ತಾರೆ, ಪ್ರಚಾರ ಮಾಡುತ್ತಾರೆ. ಪಬ್ಲಿಸಿಟಿಗೋಸ್ಕರ ಮಾಡುವವರೂ ಇರಬಹುದು, ಇಲ್ಲದ್ದಿಲ್ಲ :-)

ಟೀಕೆಗಳು, ವಿರೋಧಿಗಳು
ಅಹಿಂಸಾ ಪ್ರವೃತ್ತಿಯನ್ನೂ ಟೀಕಿಸುವವರಿಗೆ ಏನೂ ಕೊರತೆ ಇಲ್ಲ. ಕೆಲವರು ಅರಿವಿನ ಕೊರತೆಯಿಂದಲೂ, ಕೆಲವರು ವಸ್ತುನಿಷ್ಠವಾಗಿಯೂ, ಇನ್ನು ಕೆಲವರು ತಮ್ಮನ್ನು ಪಾಪಪ್ರಜ್ಞೆ ಕಾಡದಿರಲೆಂದೂ ಇದನ್ನು ವಿವಿಧ ರೀತಿಯಲ್ಲಿ ಟೀಕಿಸುತ್ತಾರೆ. ಕೆಲವು ಮುಖ್ಯವಾದ ಟೀಕೆಗಳು ಇಂತಿವೆ:
. ವೀಗನ್ ಜೀವನಕ್ರಮ ಆರೋಗ್ಯಕರವಲ್ಲ, ಪೌಷ್ಠಿಕಾಂಶದ ಕೊರತೆ ಎದುರಾಗುವುದು
. ಪ್ರಾಣಿ-ಪಕ್ಷಿಗಳಿಗಿಂತ ಮನುಷ್ಯ ಜೀವ ಶ್ರೇಷ್ಠ, ಅದನ್ನು ಎತ್ತಿ ಹಿಡಿಯುವ ಉದ್ದೇಶಸಾಧನೆಯೊಂದಿಗೆ ಪ್ರಾಣಿಕ್ರೌರ್ಯವಿದ್ದರೆ ಅದು ಸಾಧು

ವೀಗನ್ ಪರಿವಾರದ ಅನೇಕ ಸದಸ್ಯರು ಇಂತಹ ಟೀಕೆಗಳಿಗೆ ಉತ್ತರ ಕೊಡಲು, ಸಮಜಾಯಿಷಿ ನೀಡಲು, ತಪ್ಪು ಕಲ್ಪನೆಯನ್ನು ದೂರಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ದುರದೃಷ್ತವಶಾತ್ ಕೆಲವು ವೀಗನ್ಸ್ ತಮ್ಮ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿ ವಹಿಸದೇ ಅಥವಾ ವೀಗನೇತರರನ್ನು ಕಟುವಾಗಿ ವಿರೋಧಿಸಿ ತೀವ್ರವಾದಿಗಳು ಎಂಬ ಹಣೆಪಟ್ಟಿ ಗಳಿಸಿ ಸಿದ್ಧಾಂತದಿಂದ ಜನಸಾಮಾನ್ಯರು ವಿಮುಖರಾಗುವಂತೆಯೂ ಮಾಡುತ್ತಾರೆ; ಆದರೆ ಅಂತಹವರ ಸಂಖ್ಯೆ ಕಡಿಮೆ.

ವೀಗನಿಸಂ, ಸಾಂಪ್ರದಾಯಿಕತೆ ಹಾಗೂ ಧಾರ್ಮಿಕತೆ

ತಲೆಮಾರುಗಳಿಂದ ಬಂದ ಸಂಪ್ರದಾಯಗಳನ್ನು ಸರಿ ಎಂದೇ ಅನೇಕರು ನಂಬಲು ಇಷ್ಟಪಡುತ್ತಾರೆ. ಅಂತೆಯೇ ಅನೇಕರಿಗೆ ಧಾರ್ಮಿಕ ವಿಧಿವಿಧಾನಗಳಲ್ಲಿ ಬಳಕೆಯಾಗುವ ವಸ್ತುಗಳ ಬಗ್ಗೆ ಕೂಡ ಒಂದು ರೀತಿಯ ವಿಶೇಷವಾದ ಭಾವನೆಗಳಿರುತ್ತವೆ. ಇಂತಹ ನಂಬುಗೆಗಳು ವೀಗನ್ ಸಿದ್ಧಾಂತವನ್ನು ಒಪ್ಪಿಕೊಳ್ಳುವಲ್ಲಿ, ವೀಗನ್ ಜೀವನಕ್ರಮವನ್ನು ಅಳವಡಿಸಿಕೊಳ್ಳುವಲ್ಲಿ ಅಡ್ಡಿ ಉಂಟುಮಾಡುತ್ತವೆ – ನಮ್ಮ ಭಾರತದಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ‘ಪುರಾಣಮಿತ್ಯೇವ ನ ಸಾಧು ಸರ್ವಂ, ನ ಚಾಪಿ ಕಾವ್ಯಂ ನವಮಿತ್ಯವದ್ಯಂ’ (ಹಳೆಯದೆಲ್ಲವೂ ಒಳ್ಳೆಯದೇ ಎಂದೇನಿಲ್ಲ, ಹೊಸದೆಲ್ಲವೂ ಕೆಟ್ಟದ್ದೂ ಆಗಿರಬೇಕಿಲ್ಲ), ‘ದಯೆಯೇ ಧರ್ಮದ ಮೂಲವಯ್ಯಾ’, ‘ಕಲ್ಲ ನಾಗರ ಕಂಡರೆ ಹಾಲೆರೆವರು, ದಿಟ ನಾಗರ ಕಂಡರೆ ಕಲ್ಲನೆಸೆವರಯ್ಯಾ’ ಎಂಬಿತ್ಯಾದಿ ಮಾತುಗಳು ಎಲ್ಲರ ಮನಸ್ಸಿನಲ್ಲಿ ಸದಾ ಹೊಸಬೆಳಕನ್ನು ಹರಿಯಬಿಡುತ್ತಿರಲಿ ಎಂಬುದು ನನ್ನ ಆಸೆ.

ಸರಿ, ಪೀಠಿಕೆಯನ್ನು ಇಲ್ಲಿಗೆ ನಿಲ್ಲಿಸುತ್ತೇನೆ. ಆಸಕ್ತರಾಗಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ ನೀವು ಅಂತರ್ಜಾಲವನ್ನು ಜಾಲಾಡಬಹುದು. ಗೂಗಲ್ನಲ್ಲಿ ಹುಡುಕಿ ನೋಡಿ - ಅಚ್ಚರಿಗೊಳಿಸುವ ಹೊಸತೊಂದು ಲೋಕ ನಿಮ್ಮನ್ನು ಎದುರುಗೊಳ್ಳುತ್ತದೆ ಎಂಬುದಂತೂ ದಿಟ.

ಇತಿ,
ಕೃಷ್ಣ ಶಾಸ್ತ್ರಿ.

ವಿ.ಸೂ: ಹೆಚ್ಚಿನ ಮಾಹಿತಿಗಾಗಿ ವಿಕಿಪೀಡಿಯಾದಲ್ಲಿ ಕೂಡ ಜಾಲಾಡಿ!

15 comments:

Anonymous said...

Veganಗೆ ಮೈ.ವಿ.ವಿ.ನಿಲಯದ ಕೋಶ ಕೇವಲ ಶಾಕಾಹಾರಿ, ಸಸ್ಯಾಹಾರಿ ಎಂದು ಹೇಳಿದರೂ ಇಸಮು ಬಂದಾಗ ಪ್ರಾಣಿದಯಾ-ಪರ (ನೀವೇ ಬಳಸಿದ್ದೀರಿ)ಎಂದೆಲ್ಲಾ ಹೇಳಬಹುದೋ ಏನೋ. ಮತ್ತೆ ವಿವರಣೆಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹೆಚ್ಚುಕಡಿಮೆ ಇದ್ದದ್ದೇ ಬಿಡಿ. ಜೈನ ತತ್ವವಾದರೂ ಇದೇ ಅಲ್ಲವೇ. ಅವರ ಸ್ವಾಮಿಗಳು ಹಿಡಿಯುವ ಪಿಂಛ(ಉದುರು ಗರಿಯಿಂದ ಮಾಡಿದ್ದು)ಬಳಕೆಯಾಗುವುದು ಅವರು ಕೂರುವ ನೆಲದಲ್ಲಿನ ಇರುವೆ ಮುಂತಾದ ಸಣ್ಣ ಜೀವಗಳನ್ನೂ ನಿವಾರಿಸಿ (ಕೊಂದಲ್ಲ), ಪ್ರಾಣಿದಯೆ ಸಾರಲು ಎಂದು ನಿಮಗೆ ಗೊತ್ತಿರಬಹುದು. ನಾಗರಿಕತೆಯ ಸಂಕೀರ್ಣ ಜೀವನ ಶೈಲಿಯಲ್ಲಿ ನಾನಂತೂ ಕಣ್ಗಾಪು ಕಟ್ಟಿದ ಕುದುರೆಯಂತೆ (ಕತ್ತೆ?)ಎಷ್ಟೆಷ್ಟೋ ಬುದ್ಧಿಗೆ ಹೊಳೆಯುವ ಪ್ರಾಣಿ ವಿರೋಧೀ ಸಂಗತಿಗಳನ್ನು ಸಹಜವಾಗಿ ತೆಗೆದುಕೊಂಡು (ಮೊನ್ನೆ ರಾತ್ರಿ ಅಡಿಗೆ ಮನೆ ಸೇರಿದ್ದ ಇಲಿಯನ್ನು ಕಾಲುಗಂಟೆ ಶ್ರಮಿಸಿ ನಾನೇ ಹೊಡೆದು ಕೊಂದದ್ದೂ ಸೇರಿ), ಸೀಮಿತ ಲಕ್ಷ್ಯ ಬೇಧನದಲ್ಲಿ ತೊಡಗಿರುತ್ತೇನೆ, ಪ್ರೇರಿಸುತ್ತೇನೆ. ನಾಗರಹೊಳೆಯ ಖ್ಯಾತ ಕೆ.ಎಂ. ಚಿಣ್ಣಪ್ಪ - ಕಾಫಿ ತೋಟಕ್ಕೆ ನುಗ್ಗಿದ ಹುಲಿಯನ್ನು ಏನು ಮಾದಬೇಕು ಎಂದಾಗ "ಗುಂಡಾಕಿ ಕೊಲ್ಲಿ" ಎಂದದ್ದು ಇದೇ ಅರ್ಥದಲ್ಲಿ.
ಅಶೋಕವರ್ಧನ

Anonymous said...

ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿರುವ ಹಾಲಿಗೊಸ್ಕರ ಹಸುಗಳಿಗೆ ಹಿಂಸೆ ಕೊಡುತ್ತೇವೆ ಎಂದರೆ ಮೊದಲಿಗೆ ಶಾಕ್ ಆಗುವುದು ಖಂಡಿತ. ಇವತ್ತಿನ ಪರಿಸ್ಥಿತಿಯಲ್ಲಿ ಇದು ಬಹುಮಟ್ಟಿಗೆ ನಿಜವೂ ಇರಬಹುದು. ಆದರೆ ಹಿಂದೆ ಈ ರೀತಿ ಇರಲಿಲ್ಲವೇನೋ..ಕೃಷ್ಣ ಹೇಳುವ ಹಿಂಸೆಯ aspect ಬರುವುದು ಹಸುಗಳನ್ನು ಒಂದು ಕಡೆ ಕೂಡಿ ಹಾಕಿ, ಯಂತ್ರಗಳನ್ನು ಉಪಯೋಗಿಸಿ ಅವಗಳನ್ನು ಕರೆಯುವುದರಲ್ಲಿ. ಹಿಂದೆ ಹಸುಗಳು ದಿನಪೂರ್ತಿ ಗುಡ್ಡ-ಬೆಟ್ಟಗಳಲ್ಲಿ ಮೆಯ್ದುಕೊಂಡು ಬರುತ್ತಿದ್ದುವು..ಹಾಲು ಕರೆಯುವಾಗಲೂ ಮೊದಲು ಕರುವಿಗೆ ಆದ್ಯತೆ. ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟುತ್ತಿದ್ದರೂ ಅದು ಆ ಕಾಲದಲ್ಲಿ ಯಥೇಚ್ಛವಾಗಿದ್ದ ಕಾಡು ಪ್ರಾಣಿಗಳಿಂದ ರಕ್ಷಣೆ ಆಗುತ್ತಿತ್ತೇನೋ..ಹಾಗಾಗಿ ಮನುಷ್ಯ ಮತ್ತು ಹಸುಗಳದು ಒಂದು ರೀತಿ symbiotic ಸಂಬಂಧ ಆಗಿತ್ತು..
ನಿಜ, ಈಗ ಹಾಗಿಲ್ಲ. ಆದರೆ ನಮ್ಮ ಜೀವನಕ್ರಮದಲ್ಲಿ ಹಾಲು ಮಾತ್ರ indispensable ಆಗಿಬಿಟ್ಟಿದೆ. ಏನು ಮಾಡೋಣ? ತುಂಬಾ ಗಟ್ಟಿ ಮನಸ್ಸು ಇಲ್ಲದೆ veganism ಅಳವಡಿಸಲು ಸಾಧ್ಯವಿಲ್ಲ. ಅಳವಡಿಸಿಕೊಂಡವರಿಗೆ ನನ್ನ ಕಡೆಯಿಂದ ತುಂಬಾ ಗೌರವವಿದೆ.
- ರಾಮಪ್ರಕಾಶ.

Anonymous said...

ಶಾಸ್ತ್ರಿ,

"ವೀಗನಿಸಮ್" ಗೆ "ಸಸ್ಯಮಾತ್ರಾಹಾರಿ" ಅಥವಾ "ಸಸ್ಯಜನ್ಯಾಹಾರಿ" ಎನ್ನಬಹುದೇ?

ನಿಜವಾಗಿ ವೀಗನಿಸ್ಮ್ ಎನ್ನುವುದು ಕೇವಲ ಆಹಾರಕ್ಕೆ ಸಂಬಂಧಪಟ್ಟದ್ದಲ್ಲದೆ ಒಟ್ಟಾರೆ ಜೀವನಕ್ರಮವಾಗಿರುವುದರಿಂದ ಅದಕ್ಕೆ ಇರುವ ಪದದಲ್ಲಿ "ಆಹಾರ" ಎನ್ನುವುದನ್ನು ತೆಗೆಯಬೇಕಾಗುತ್ತದೆ. "ಕೇವಲ ಸಸ್ಯೋಪಯೋಗಿ" ಜೀವನಕ್ರಮ ಎನ್ನಬಹುದೇನೊ.

--ಅಶ್ವತ್ಥ.

ಕೃಷ್ಣ ಶಾಸ್ತ್ರಿ - Krishna Shastry said...

ಅಶ್ವತ್ಥ,

Vegetarianism ಹಾಗೂ Veganism - ನೀನೇ ಗಮನಿಸಿದಂತೆ ಈ ಎರಡು ಪದಗಳಲ್ಲಿ ಒಂದು ಗಮನಾರ್ಹ ವ್ಯತ್ಯಾಸ ಇದೆ. ವಿಕಿಪೀಡಿಯಾದ ಪ್ರಕಾರ ಈ ಎರಡರ ಹೀಗೆ ಶುರುವಾಗುತ್ತದೆ.

Vegetarianism is the practice of following a plant-based diet...

Veganism is a philosophy and lifestyle...

ಆದರೆ Vegetarianism ಪದವನ್ನು ಬರೀ ಆಹಾರ ಕ್ರಮಕ್ಕೆ ಸೀಮಿತವಾಗಿಸಿದ್ದು ಬಹುಷಃ ಸರಿಯಲ್ಲವೇನೋ? ಇತ್ತೀಚೆಗೆ (ಬಹುಷಃ ವೀಗನ್‍ಗಳ ಪ್ರಭಾವದಿಂದಲೋ ಏನೋ) Vegetarian ಬೂಟುಗಳು, Vegetarian ಬಟ್ಟೆಗಳು ಇತ್ಯಾದಿ ಪದಗಳ ಬಳಕೆ ಸಾಮಾನ್ಯವಾಗಿದೆ. ಮುಂದೆ ಒಂದು ದಿನ ಮಾನವನ ಪರಿಕಲ್ಪನೆ ವಿಸ್ತಾರಗೊಂಡಂತೆ Vegetarianism ಪದಕ್ಕೆ ಕೂಡ ಅಹಾರ ಕ್ರಮವನ್ನು ಮೀರಿದ definition ಸಿಗಬಹುದೇನೋ.

ಇರಲಿ, ಕನ್ನಡದ ವಿಷಯಕ್ಕೆ ಬಂದಾಗ ಯಾವ ಪದ ಸೂಕ್ತ? "ಸಸ್ಯೋಪಯೋಗಿ" ಎನ್ನುವುದು ಅಷ್ಟೇನೂ ಹಿತವಾಗಿ ಕಾಣುವುದಿಲ್ಲ - ಸಸ್ಯಕ್ಕೆ ಉಪಯೋಗವಾಗುವಂಥದ್ದು ಎಂಬ ಅರ್ಥ ಕೊಡುತ್ತದೆಯಲ್ಲವೇ? (ಬಹೂಪಯೋಗಿ, ಜನೋಪಯೋಗಿ ಇದ್ದ ಹಾಗೆ). ಸದ್ಯಕ್ಕೆ ಬೇರೆ ಯಾವ ಪದವೂ ಹೊಳೆಯುತ್ತಿಲ್ಲ, ನೋಡೋಣ.

ಇತಿ,
ಕೃಷ್ಣ ಶಾಸ್ತ್ರಿ.

Srikrishna Bhat said...

ಹಾಲು ಮತ್ತು ಅದರ ಉತ್ಪನ್ನಗಳನ್ನು ಬಳಸಿ ಮಾಡುವ ಅಡುಗೆಗಳಿಗೆ ಪ್ರತಿಯಾಗಿ ಸಸ್ಯಜನ್ಯ ವಸ್ತುಗಳನ್ನು ಬಳಸಿ ಹೇಗೆ ಆಹಾರ ತಯಾರಿಸಬಹುದು ಎಂಬುದರ ಬಗ್ಗೆ ಬ್ಲಾಗು ಬರೆದರೆ ಇನ್ನೂ ಹೆಚ್ಚು ಉಪಯುಕ್ತ.

ಶ್ರೀಕೃಷ್ಣ ಭಟ್ಟ

ಕೃಷ್ಣ ಶಾಸ್ತ್ರಿ - Krishna Shastry said...

ಪ್ರಿಯ ಶ್ರೀಕೃಷ್ಣ ಭಟ್ಟ,

ಸಲಹೆಗೆ ಧನ್ಯವಾದಗಳು. ನನ್ನ ಈ ಲೇಖನದ ಮೂಲ ಉದ್ದೇಶ ವೀಗನಿಸಂಗೆ ಒಂದು ಚಿಕ್ಕ-ಚೊಕ್ಕ ಪರಿಚಯ ನೀಡುವುದು ಮಾತ್ರವಾಗಿತ್ತು, ಹೀಗಾಗಿ ಹೆಚ್ಚಿನ ವಿವರಗಳಿಗೆ ಹೋಗಲಿಲ್ಲ.

ಆಸಕ್ತರಿಗೆ ಅನೇಕ ಅಂತರ್ಜಾಲ ತಾಣಗಳಿವೆ, ಆಹಾರ-ಆರೋಗ್ಯ ಇತ್ಯಾದಿಗಳ ಬಗ್ಗೆ ಅನೇಕ ಪತ್ರಗಳನ್ನೂ ಕಳುಹಿಸುತ್ತಾರೆ, ಹೋಗಿ ನೊಂದಾಯಿಸಿಕೊಳ್ಳಬಹುದು.

ಆದರೆ ನನ್ನ ಅನುಭವ, ಮೊದಲಿನ-ಈಗಿನ ಆಹಾರಕ್ರಮ - ಇದರ ಬಗ್ಗೆ ಖಂಡಿತಾ ಬರೆಯಬಹುದು, ಸಮಯ ಸಿಕ್ಕಿದಾಗ ಬರೆಯುತ್ತೇನೆ, ನೋಡೋಣ :-)

ಇತಿ,
ಕೃಷ್ಣ ಶಾಸ್ತ್ರಿ.

Sumanth Hegde said...

I always wonder on people practising veganism.
Veganism is all about having kindness for animals.

I feel most important is having kindness for human too. Is anybody practising this? I mean like veganism.

Before we are kind to animals, we need to be kind for ourselves that is for human animal

ಕೃಷ್ಣ ಶಾಸ್ತ್ರಿ - Krishna Shastry said...

Dear Sumanth,

Thanks for your feedback. Of course being kind towards fellow human beings is very important. As I have seen and interacted with many vegans so far in my life, I can confidently say that veganism is one step beyond (but inclusive of) caring for other human beings.

Even when it comes to people, some people care only about themselves, some care about their family, some extend their boundaries to relatives and friends, some extend further towards people belonging to their place, languagee, religion and so on. And some people feel believe in "Vasudhaiva Kutumbakam".

ವಿ.ರಾ.ಹೆ. said...

ಸಸ್ಯಾಹಾರಿಗಳು ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ಕೊಬ್ಬನ್ನು ಈ ಹಾಲಿನ ಉತ್ಪನ್ನಗಳಿಂದಲೇ ಪಡೆದುಕೊಳ್ಳಬೇಕಾಗುತ್ತದೆ ಅನ್ನುತ್ತಾರೆ. ಆದರೆ ಈ ವೀಗನ್ ಆಹಾರ ಪದ್ಧತಿ ಅಳವಡಿಸಿಕೊಂಡರೆ ಇದನ್ನು ಹೇಗೆ ಪಡೆದುಕೊಳ್ಳುವುದು? ಈ ಪೋಷಕಾಂಶಗಳ ಕೊರತೆ ಉಂಟಾಗುವುದಿಲ್ಲವೇ?

ಕೃಷ್ಣ ಶಾಸ್ತ್ರಿ - Krishna Shastry said...

ಹಾಲು ಒಂದು ಪರಿಪೂರ್ಣ ಆಹಾರ ಎಂಬ ಭಾವನೆ ನಮ್ಮಲ್ಲಿ ಬಲವಾಗಿ ಬೇರೂರಿದೆ. ಆದರೆ ಹಾಲು ಒಂದು ಅನೈಸರ್ಗಿಕ ಆಹಾರ, ಅದರಲ್ಲಿ ಅನೇಕರ ದೇಹಕ್ಕೆ ಉತ್ತಮವಲ್ಲದ ಅಂಶಗಳೂ ಸೇರಿವೆ ಎಂಬುದನ್ನು ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಮುಚ್ಚಿಡಲಾಗುತ್ತಿದೆ, ಬದಲಾಗಿ ಇದು ಎಲ್ಲರಿಗೂ ಒಳ್ಳೆಯದು ಎಂಬುದನ್ನು ಅತಿಯಾಗಿ ಪ್ರಚಾರ ಮಾಡಲಾಗುತ್ತಿದೆ. ನಾವು ಪೋಷಕಾಂಶಗಳು ಹಾಗೂ ವಿಷ ಇವೆರಡೂ ಇರುವ ಆಹಾರವನ್ನು ಸೇವಿಸುವುದು ಉತ್ತಮವೋ ಅಥವಾ ಕೇವಲ ಪೋಷಕಾಂಶಗಳಿರುವ ಆಹಾರವನ್ನು ಸೇವಿಸುವುದು ಉತ್ತಮವೋ? ಹಾಲಿನಲ್ಲಿರುವ ಕ್ಯಾಲ್ಶಿಯಂ ಇತ್ಯಾದಿ ಪೋಷಕಾಂಶಗಳು ಸಸ್ಯಮೂಲಗಳಿಂದ ಧಾರಾಳವಾಗಿ ಸಿಗುತ್ತವೆ, ತುಸು ಎಚ್ಚರದಿಂದ ವಿವಿಧ ತರಕಾರಿಗಳನ್ನು, ಹಣ್ಣು-ಹಂಪಲುಗಳನ್ನು, ದವಸ-ಧಾನ್ಯಗಳನ್ನು ಆಯ್ಕೆಮಾಡಬೇಕಷ್ಟೆ.

ಒಟ್ಟಿನಲ್ಲಿ, ಸುಮಾರು ಎಂಟು ಹತ್ತು ಸಾವಿರ ವರ್ಷಗಳ ಹಿಂದೆಯಷ್ಟೇ ಮಾನವನು ಮೊತ್ತ ಮೊದಲ ಬಾರಿಗೆ ಹಾಲನ್ನು ಸೇವಿಸಲು ಶುರುಮಾಡಿದ್ದು. ಆಗ ಕೆಲವು ಮನುಷ್ಯರ ದೇಹಪ್ರಕೃತಿಯಲ್ಲಿ ಬದಲಾವಣೆಗಳಾಗತೊಡಗಿ ಹಾಲನ್ನು ಜೀರ್ಣಿಸುವ ಶಕ್ತಿಯನ್ನು ಬೆಳೆಸಿಕೊಂಡವು. ಆದರೆ ಇಂದಿಗೂ ಜಗತ್ತಿನಲ್ಲಿ ಬಹುಪಾಲು ಜನರ ದೇಹಗಳು ಒಂದಲ್ಲ ಒಂದು ರೀತಿಯಲ್ಲಿ ಹಾಲಿನಿಂದ ತೊಂದರೆ ಅನುಭವಿಸುತ್ತಿವೆ, ಅನೇಕ ಬಾರಿ ಅವರಿಗೆ ಆ ತೊಂದರೆಗಳು ಹಾಲಿನಿಂದ ಎಂದು ತಿಳಿದೇ ಇರುವುದಿಲ್ಲ.

ಬರೆಯುತ್ತಾ ಹೋದಲ್ಲಿ ಇನ್ನೂ ಸುಮಾರು ಬರೆಯಬಹುದು. ಈ ಕೆಳಗಿನ ಕೊಂಡಿಗಳಲ್ಲಿ ನಿಮಗೆ ಸಾಕಷ್ಟು ಮಾಹಿತಿ ದೊರೆಯಬಹುದು ಎಂದಂದುಕೊಂಡಿದ್ದೇನೆ, ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಸಂಕೋಚವಿಲ್ಲದೆ ಕೇಳಿ.

http://www.indianvegan.com/
http://sharan-india.org/
ಭಾರತೀಯ ವೀಗನ್ನರ ಮಾಹಿತಿಯುಕ್ತ ತಾಣಗಳು

http://nomilk.com/
ಹಾಲಿಲ್ಲದೇ ಹೇಗೆ ಅಡುಗೆ ಮಾಡಬಹುದು, ಏನನ್ನು ಹೇಗೆ ತಿನ್ನಬಹುದು ಎಂಬುದರ ಬಗ್ಗೆ ಅಪಾರ ಮಾಹಿತಿಯುಳ್ಳ ತಾಣ

http://www.hsph.harvard.edu/nutritionsource/what-should-you-eat/calcium-and-milk/index.html
ಅತಿಯಾಗಿ ಸೇವಿಸಿದರೆ ಹಾಲಿನಿಂದ ನಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ನಿಲುವು. ಹೆಚ್ಚು ಹಾಲು ತೆಗೆದುಕೊಂಡರೆ ಕ್ಯಾಲ್ಶಿಯಂ ಹೆಚ್ಚಾಗುವ ಬದಲು ಕಡಿಮೆ ಆಗುತ್ತದೆ ಎಂಬುದು ಅಚ್ಚರಿಯ ಸಂಗತಿಯೇ ಹೌದು, ಆದರೆ ಅನೇಕರಿಗೆ ಗೊತ್ತಿಲ್ಲದಿರುವುದು ಬೇಸರದ ಸಂಗತಿ.

http://milk.procon.org/
ಹಾಲು ಒಳ್ಳೆಯದೋ ಕೆಟ್ಟದೋ ಎಂಬುದರ ಬಗ್ಗೆ ವಿವಿಧ ತಜ್ಞರ ಪರ-ವಿರೋಧ ಹೇಳಿಕೆಗಳನ್ನೊಳಗೊಂಡ ಉಪಯುಕ್ತ ಮಾಹಿತಿಮೂಲ

http://www.pcrm.org/
ಜವಾಬ್ದಾರಿಯುತವಾದ ಮದ್ದು-ಚಿಕಿತ್ಸೆಗಳನ್ನು ಸೂಚಿಸುವ ವೈದ್ಯರ ಸಮೂಹ. ಇವರ ಸಲಹೆ-ಸೂಚನೆಗಳನ್ನು ಅನುಸರಿಸಿದವರಿಗೆ ವೈಜ್ಞಾನಿಕವಾಗಿ ಆರೋಗ್ಯ ಸುಧಾರಿಸುತ್ತಿರುವುದಂತೂ ಸತ್ಯವೇ. ಇವರ ಕ್ರಮಗಳನ್ನು ಅನುಸರಿಸುವವರು ಭಾರತದಲ್ಲಿಯೂ ಇದ್ದಾರೆ.

ಕೃಷ್ಣ ಶಾಸ್ತ್ರಿ - Krishna Shastry said...

ಹ್ಞಾಂ, ಇನ್ನೊಂದು ವಿಷಯ. ಹಾಲಿನಲ್ಲಿರುವ ಹಾನಿಕಾರಕ ಅಂಶಗಳ ಬಗ್ಗೆ ಹೇಳುವಾಗ ಹೇಳಲೇಬೇಕಾದ ಇನ್ನೊಂದು ವಿಷಯವಿದೆ. ಅದೇನೆಂದರೆ ಇಂದಿನ ಆಧುನಿಕ ಯುಗದಲ್ಲಿ ದೊರೆಯುವ ಹಾಲು ಹಿಂದೆಂದಿಗಿಂತಲೂ ಹೆಚ್ಚು ಅನೈಸರ್ಗಿಕವಾಗಿರುವುದು. ದನ-ಎಮ್ಮೆಗಳೇ ಅತ್ಯಂತ ಅನೈಸರ್ಗಿಕ ವಿಧಾನದಲ್ಲಿ ಬದುಕುತ್ತಿವೆ, ವಿಚಿತ್ರ ಆಹಾರವನ್ನು ತಿನ್ನುತ್ತಿವೆ, ಹಾನಿಕಾರಕ ಔಷಧಿಗಳು ಅವುಗಳ ದೇಹವನ್ನು ಸೇರುತ್ತಿವೆ. ಇಂತಿರುವಾಗ ಅವುಗಳ ಹಾಲು ಹೇಗಿರಬಹುದು? ಇದು ಕೂಡ ಆಲೋಚಿಸತಕ್ಕಂತಹ ವಿಚಾರ. ಕಲಬೆರಕೆಯೂ ಆಗಾಗ ವಾರ್ತಾಪತ್ರಿಕೆಗಳಲ್ಲಿ ವರದಿಯಾಗುತ್ತಿರುವ ವಿಚಾರ.

ವಿ.ಸೂ. ತರಕಾರಿ, ಹಣ್ಣು ಖರೀದಿಸುವಾಗಲೂ ಎಚ್ಚರ ಅಗತ್ಯ.

ವಿ.ರಾ.ಹೆ. said...

ಧನ್ಯವಾದಗಳು. ನೀವು ಕೊಟ್ಟ ಕೊಂಡಿಗಳ ಮೂಲಕ ಹೋಗಿ ಹೆಚ್ಚಿನ ಮಾಹಿತಿ ಓದುತ್ತೇನೆ.

Arun said...

ಮಾನ್ಯ ಕೃಷ್ಣ ಶಾಸ್ತ್ರಿಗಳೇ, ಅತ್ಯತ್ತಮವಾದ ಮಾಹಿತಿಗಾಗಿ ಧನ್ಯವಾದಗಳು. ಸಾಂಪ್ರದಾಯಿಕವಾಗಿ ನಾನು ಸಸ್ಯಾಹಾರಿ ಆದರೆ ನಾನು ಕೆಲಸ ಮಾಡುವ ಜಾಗದಲ್ಲಿ ೯೯% ಸಹವರ್ತಿಗಳು ಮಾಂಸಾಹಾರಿಗಳು, ನನಗೆ ಭಾರತದಲ್ಲಿದ್ದು ನಮ್ಮ ಸಾಂಪ್ರದಾಯಿಕ ಆಹಾರವನ್ನು ಮರೆತಿರುವ ನಮ್ಮ ಜನರಿಗೆ ಏನು ಹೇಳಲಿ ಎಂದು ದಿಕ್ಕು ತೋಚದೆ ತೊಲಳದುತ್ತಿದ್ದೇನೆ. ಇವರಿಗೆಲ್ಲ ಉತ್ತಮ ಆಹಾರ ಎಂದರೆ ಕೋಳಿ ಬಿರಿಯಾನಿ ಮತ್ತು ಕೆ ಎಫ್ ಸಿ. ಬುದ್ದಿ ಹೇಳುವುದಾದರೂ ಹೇಗೆ?

ಕೃಷ್ಣ ಶಾಸ್ತ್ರಿ - Krishna Shastry said...

@Arun: ನೀವು ಅನುಭವಿಸಿದ, ಅನುಭವಿಸುತ್ತಿರುವ ಬವಣೆ ಕೇಳಿ ಬೇಸರವಾಯಿತು. ಈಗ ಅನೇಕ ಕಂಪನಗಳು ತಮ್ಮ ಉದ್ಯೋಗಿಗಳಿಗೆ ಆರೋಗ್ಯಕರ ಶುದ್ಧ ಸಸ್ಯಾಹಾರೀ ಆಹಾರ ಕೊಡುವ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿವೆ. ಉದ್ಯೋಗಿಗಳು ಆರೋಗ್ಯವಂತರಾಗಿರುವುದು ಕಂಪನಿಗೂ ಲಾಭಕರ, ಅಲ್ಲವೇ? ಈ ಬಗ್ಗೆ ನಿಮ್ಮ ಕಂಪನಿ ಈಗಾಗಲೇ ಏನೂ ಮಾಡಿಲ್ಲ ಎಂದಾದರೆ ನಿಮ್ಮ ಬೇಡಿಕೆಯನ್ನು ಅವರ ಮುಂದಿಡಿ, ನಿಧಾನಕ್ಕೆ ಎಲ್ಲರೂ ಈ ಬದಲಾವಣೆನ್ನು ಇಷ್ಟಪಡಬಹುದು ಎಂದು ನಂಬಿ ಮುನ್ನಡೆಯೋಣ.

ಪಂಡಿತಾರಾಧ್ಯ said...

ಮಾನ್ಯರೆ,
ಪ್ರಕೃತಿಯಲ್ಲಿ ಜೀವಿ ಜೀವಿಯನ್ನು ತಿಂದೇ ಜೀವಿಸಬೇಕು. ಅಷ್ಟು ಸೂಕ್ಷ್ಮವಾಗಿ ಯೋಚಿಸಿದರೆ ಬದುಕುವುದೇ ಹಿಂಸೆಯಾಗುತ್ತದೆ. ಸಾಧ್ಯವಾದಷ್ಟು ಬೇರೆ ಜೀವರಾಶಿಗೆ ಹಿಂಸೆ ಮಾಡದೆ ಬದುಕಲು ಸಾಧ್ಯ. ಪ್ರಾಣಿ ಮತ್ತು ಪ್ರಾಣಿಜನ್ಯ ವಸ್ತುಗಳನ್ನು ಆಹಾರವಾಗಿ ಬಳಸುವುದನ್ನು ಸಾಧ್ಯವಾದಷ್ಟೂ ತಪ್ಪಿಸಲು ಸಾಧ್ಯವಿದೆ. ಮಕ್ಕಳು ಮತ್ತು ರೋಗಿಗಳಿಗೆ ಹಾಲನ್ನು ಮಿತಗೊಳಿಸಿದರೆ ಹಾಲಿಗಾಗಿ ನಡೆಯುತ್ತಿರುವ ಹಸುಗಳ ಇತರ ಪ್ರಾಣಿಗಳ ಶೋ಼ಷಣೆ ತಪ್ಪುತ್ತದೆ. ಜೇನು, ಮೊಟ್ಟೆಗಳೂ ಇದರೊಂದಿಗೆ ಸೇರುತ್ತವೆ. ಸಾಕಷ್ಟು ಪೌಷ್ಟಿಕವಾದ ಸಸ್ಯಾಹಾರವನ್ನೇ ಒದಗಿಸಲು ಸಾಧ್ಯ.

Post a Comment