About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, May 7, 2013

ಸಾವಯವ ಹಾಲು – ಸಂಕುಚಿತ ಮಾನವೀಯತೆ

 
ಎರಡು ದಿನಗಳ ಹಿಂದೆ “ದ ಹಿಂದೂ” ವಾರ್ತಾಪತ್ರಿಕೆಯಲ್ಲಿ ಒಂದು ಕಣ್ಣುತೆರೆಸುವ ಲೇಖನ ಬಂತು:

ಇದನ್ನು ಕೆಲವರು ಕೆಲವು ಕಡೆ (ಫೇಸ್‍ಬುಕ್ಕಿನಲ್ಲಿ) ಹಂಚಿಕೊಂಡಾಗ ಸಹಜವಾಗಿಯೇ ತರತರದ ಪ್ರತಿಕ್ರಿಯೆಗಳು ಹೊಮ್ಮಿದುವು. ಕೆಲವು ಕಡೆ ಗಾಢವಾದ ಮೌನವೂ ಕಂಡುಬಂತು – ತಪ್ಪುಪ್ರಜ್ಞೆಯೋ, ಅಸಡ್ಡೆಯೋ, ಸ್ವಾರ್ಥವೋ, ಅಪನಂಬಿಕೆಯೋ – ಏನೋ ಗೊತ್ತಿಲ್ಲ. ಇದೆಲ್ಲಾ ನಡೆಯುತ್ತಿರುವಾಗ ನನಗೆ ನನ್ನ ಕೆಲವು ತಿಂಗಳುಗಳ ಹಿಂದಿನ ಒಂದು ಅನುಭವವನ್ನು ಹಂಚಿಕೊಳ್ಳುವ ಮನಸ್ಸಾಯಿತು,

ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಒಂದು ಸಾವಯವ ಮೇಳಕ್ಕೆ ಹೋಗಿದ್ದೆ. ನನ್ನ ಜೊತೆ ಒಬ್ಬ ಗೆಳೆಯನೂ ಇದ್ದ. ಹೀಗೇ ಸುತ್ತಾಡುತ್ತಿರಲು ನಮಗೆ ಒಂದು ಅಂಗಡಿ ಕಾಣಸಿಕ್ಕಿತು - "ಸಾವಯವ ಹಾಲು" ಎಂದು ಮುಂತಾಗಿ... ಹೆಸರು ನೆನಪಿಲ್ಲ. ಸುಮ್ಮನೆ ಕುತೂಹಲಕ್ಕೆ ನೋಡಿದೆ ಏನು ಬರೆದಿದ್ದಾರೆ ಎಂದು. ಬರೀ ಸಾವಯವ ಮೇವು ಕೊಟ್ಟು ಸಾವಯವ ಹಾಲು ಎಂದು ಹೇಳುತ್ತಾರೋ ಅಥವಾ ಸದಾ ಕೊಟ್ಟಿಗೆಯಲ್ಲಿಯೇ ಕೂಡಿ ಹಾಕದೆ ಅಡ್ಡಾಡಲು ಕೂಡ ಬಿಡುತ್ತಾರೋ, ಅದರೊಂದಿಗೇ ಇನ್ನೇನಾದರೂ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತಾರೋ ಎಂದು.

ನೋಡೋಣ, ಎಂದುಕೊಂಡು ಅಲ್ಲಿ ಮುಂದಿಟ್ಟಿದ್ದ ಮಾಹಿತಿ ಚೀಟಿಗಳನ್ನು ಓದತೊಡಗಿದೆ - ಅದರಲ್ಲಿ ಒಂದು ಕಡೆ ಬರೆದಿತ್ತು - "ನಾವು ದನಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತೇವೆ" ಎಂದು, ಆದರೆ ಅದಕ್ಕೆ ತಕ್ಕ ಸಮರ್ಥನೀಯ ಮಾಹಿತಿ-ಹೇಳಿಕೆಗಳು ಏನೂ ಇರಲಿಲ್ಲ. ಅದನ್ನು ನೋಡಿ ನನಗನಿಸಿತು - ಒಟ್ಟಾರೆ ವಿಷಯ ಅಷ್ಟೆಲ್ಲಾ ಪ್ರಬುದ್ಧವಾಗಿ ಇಲ್ಲ ಎಂದು. ಅಂತೆಯೇ ನನ್ನ ಗೆಳೆಯನ ಬಳಿ ಹೇಳಿದೆ - "ಇವರು ಹೀಗೆಲ್ಲಾ ಬರೆಯುತ್ತಾರೆ, ಆದರೆ ಇದು ಬರೀ ಮಾರ್ಕೆಟಿಂಗ್ ತಂತ್ರ, ನಿಜಕ್ಕೂ ಹಿಂದೆ ಇರುವುದು ಬೇರೆಯೇ" ಎಂದು. ಆಗ ಅಲ್ಲಿ ಕುಳಿತಿದ್ದ ಮಹನೀಯರಿಗೆ ಅದು ಕೇಳಿಸಿಬಿಟ್ಟಿತು, ಅವರು ಸಿಡಿದೆದ್ದರು - "ಏನು ಹಾಗೆಲ್ಲಾ ಹೇಳ್ತೀರಾ? ನಾವು ಸುಳ್ಳು ಹೇಳುವುದಿಲ್ಲ, ಇಲ್ಲಿ ಬರೆದಿದ್ದೆಲ್ಲಾ ಸತ್ಯವೇ" ಎಂದು. ನಾನು ಶಾಂತವಾಗಿಯೇ ಇದ್ದೆ, ಅವರಲ್ಲಿ ಹೇಳಿದೆ "ನೀವು ಸಾವಯವ ಮೇವನ್ನೇನೋ ಹಾಕಬಹುದು, ನಾನು ಇಲ್ಲವೆನ್ನುತ್ತಿಲ್ಲ, ಹಾಗೆಂದು ಹಾಲನ್ನು ಸಾವಯವ ಎಂದೂ ಹೇಳಬಹುದೇನೋ, ಆದರೆ ಅಷ್ಟು ಮಾತ್ರಕ್ಕೆ ದನಗಳನ್ನು ಮಾನವೀಯವಾಗಿ ನಡೆಸಿಕೊಳ್ಳುತ್ತೀರಿ ಎಂದು ನನಗೆ ಭರವಸೆ ಇಲ್ಲ, ಯಾಕೆಂದರೆ ಅದನ್ನು ಸಮರ್ಥಿಸುವ ಯಾವುದೇ ಮಾಹಿತಿ ಇಲ್ಲಿ ಇಲ್ಲ, ಇದ್ದಿದ್ದರೆ ಖಂಡಿತಾ ಎದೆ ತಟ್ಟಿ ಹಾಕುತ್ತಿದ್ದಿರಿ" ಎಂದು. ಹಾಗೆಯೇ ಮುಂದುವರಿಸಿ ನಾನು ಕೇಳಿದೆ "ನಿಮ್ಮಲ್ಲಿ ನನಗಿರುವುದು ಎರಡೇ ಪ್ರಶ್ನೆಗಳು, ಅದಕ್ಕೆ ತೃಪ್ತಿಕರವಾಗಿ ಉತ್ತರ ಸಿಕ್ಕಿದರೆ ನನ್ನ ಮಾತು ಹಿಂತೆಗೆದುಕೊಳ್ಳಲು ನಾನು ತಯಾರು" ಎಂದು. ಅವರೂ ಸೈ ಎಂದರು.

ಪ್ರಶ್ನೆ: ಹಾಲು ಕೊಡುವುದನ್ನು ನಿಲ್ಲಿಸಿದ ಮೇಲೆ ದನಗಳನ್ನು ಏನು ಮಾಡುತ್ತೀರಾ? ಸಾಯುವ ತನಕ ನೋಡಿಕೊಳ್ಳುತ್ತೀರಾ?
ಉತ್ತರ: ಕೆಲವರು ನೋಡಿಕೊಳ್ಳುತ್ತಾರೆ, ಇನ್ನು ಕೆಲವರು ಮೊದಲೇ (ಇನ್ನೂ ಒಂದೆರಡು ಬಾರಿ ಹಾಲು ಕೊಡಲು ಬಾಕಿ ಇರುವಾಗಲೇ) ಮಾರಿಬಿಡುತ್ತಾರೆ
ಪ್ರಶ್ನೆ: ಈ ಮಾರಿದ ದನಗಳ ಅವಸ್ಥೆ ಏನಿರಬಹುದು?
ಉತ್ತರ: ಅದು ನಮಗೆ ಗೊತ್ತಿಲ್ಲ

ಪ್ರಶ್ನೆ: ಇರಲಿ, ನೀವು ಗಂಡು ಕರುಗಳನ್ನು ಏನು ಮಾಡುತ್ತೀರಾ? ಮಾರುತ್ತೀರಾ ಅಥವಾ ಸಾಕುತ್ತೀರಾ?
ಉತ್ತರ: ಸರಿಯಾಗಿ ಗೊತ್ತಿಲ್ಲ
ಪ್ರಶ್ನೆ: ಅಲ್ಲಾ, ಸಾಮಾನ್ಯವಾಗಿ "ಉಪಯೋಗಕ್ಕಿಲ್ಲದ" ಗಂಡು ಕರುಗಳನ್ನು ಏನು ಮಾಡುವುದು? ಕೃಷಿಕರು ನೇರವಾಗಿ ಕಟುಕರಿಗೇ ಮಾರದೇ ಇರಬಹುದು, ಆದರೆ ಮಧ್ಯವರ್ತಿಗಳಿಗೆ ಮಾರಿದರೂ ಕೊನೆಗೆ ಅವು ಸೇರುವುದು ಕಸಾಯಿ ಖಾನೆಯನ್ನೇ, ಅಲ್ಲವೇ? ಮಾನವೀಯ ನೆಲೆಯಲ್ಲಿ ನೀವೇನು ಮಾಡುತ್ತೀರಾ ಎಂದು ನನಗೆ ತಿಳಿಯುವ ಕುತೂಹಲ, ಅಷ್ಟೇ
ಉತ್ತರ: ನೋಡಿ, ನಾವು ಕೃಷಿಕರಲ್ಲ, ಗೌಳಿಗರಲ್ಲ, ಸಾವಯವ ಹಾಲನ್ನು ಮಾರಾಟ ಮಾಡುವ ಮಧ್ಯವರ್ತಿಗಳು, ಅಷ್ಟೇ. ಹಾಲು ಸಾವಯವ ಎಂಬುದಕ್ಕೆ ಮಿಗಿಲಾಗಿ ದನ-ಕರುಗಳನ್ನು ಏನು ಮಾಡುತ್ತಾರೆ ಎಂಬುದರ ಕುರಿತಾಗಿ ಒಂದು ಮಿತಿಗಿಂತ ನಮಗೆ ಗೊತ್ತಿರಲು ಸಾಧ್ಯವಿಲ್ಲ, ಅದು ನಮ್ಮ ಆದ್ಯತೆಯೂ ಅಲ್ಲ. ಇರಬಹುದು, ಕೆಲವೊಮ್ಮೆ ಕೃಷಿಕರು ಉನ್ನತ ಆದರ್ಶಗಳನ್ನು ತೋರದೇ ಇರಬಹುದು, ಆದರೆ ಅವರು ದನಗಳನ್ನು ಹೊಡೆದು-ಬಡಿದು ಮಾಡುವುದಿಲ್ಲ, ಸರಿಯಾದ ಸಮಯಕ್ಕೆ ಮೇವು-ನೀರು-ಔಷಧಿ ಕೊಟ್ಟು ಸಾಕುತ್ತಾರೆ, ಒಟ್ಟಿನಲ್ಲಿ ಹಾಲು ಉತ್ತಮ ಗುಣಮಟ್ಟದ ಸಾವಯವ ಉತ್ಪನ್ನ ಎಂದು ನಾವು ಭರವಸೆ ಕೊಡಬಹುದು
ನನ್ನ ಪ್ರತಿಕ್ರಿಯೆ: ಸರಿ, ಹಾಗಾದರೆ ನನ್ನ ಮಾತು ಸುಳ್ಳಲ್ಲ ಎಂದಾಯಿತು ಅಲ್ಲವೇ. ದನಗಳನ್ನು ಮಾನವೀಯವಾಗಿ ನೋಡಿಕೊಳ್ಳಲಾಗುತ್ತದೆ ಎಂಬುದು ಮಾರ್ಕೆಟಿಂಗ್ ತಂತ್ರವಲ್ಲದೆ ಇನ್ನೇನು? ನಿಮ್ಮ ಹಾಲು ಸಾವಯವ ಇರಬಹುದು ಆದರೆ ಕ್ರೌರ್ಯರಹಿತವಂತೂ ಅಲ್ಲವೇ ಅಲ್ಲ.

ಹೀಗೆಂದು ಮುಕ್ತಾಯ ಹಾಡಿ ನಾನಲ್ಲಿಂದ ಮುಂದಕ್ಕೆ ಹೋದೆ.

ಮನದಲ್ಲೇ ಅಂದುಕೊಳ್ಳುತ್ತಾ ಇದ್ದೆ - ಯಾವಾಗ ನಮ್ಮ ಜನರಿಗೆ ಹಾಲಿನ ಹಿಂದೆ ಇರುವ ಕ್ರೌರ್ಯ ಮನವರಿಕೆ ಆಗುತ್ತದೆ, ಎಲ್ಲಿಯವರೆಗೆ ವಿವಿಧ ಸತ್ಯಸಂಗತಿಗಳಿಂದ ದೂರವಿರುತ್ತಾ ಸ್ವಾರ್ಥಿ ಹಾಗೂ ಸುಖಲೋಲುಪತೆಯ ಭ್ರಮಾಲೋಕದಲ್ಲಿ ಇರಬಯಸುತ್ತಾರೆ?

ಕೊನೆಯದಾಗಿ – ಮಾನವೀಯತೆಯ ಬಗ್ಗೆ ಇವರು ಬರೆದದ್ದು ಕೇವಲ ಮಾರ್ಕೆಟಿಂಗ್ ತಂತ್ರ ಇರಲಾರದೇನೋ, ಬಹುಷಃ ಮಾನವೀಯತೆಯ ಬಗ್ಗೆ ಅವರಿಗಿರುವ ಕಲ್ಪನೆಯೇ ಅತ್ಯಂತ ಸಂಕುಚಿತವಾದದ್ದು ಹಾಗೂ ತಮ್ಮೊಳಗೇ ಅವರಂದುಕೊಂಡಿರಬಹುದು – “ಇವನಿಗೇನು ಗೊತ್ತು ನಮ್ಮ ಕಷ್ಟದ ಬಗ್ಗೆ?” ಎಂದು!

ಇತರ ಲೇಖನಗಳು:

ದನ, ನಮ್ಮಗುಲಾಮ ದೇವರು! ದನಗಳನ್ನು ನಾವು ನಿಜವಾಗಿ ಹೇಗೆ ನಡೆಸಿಕೊಳ್ಳುತ್ತೇವೆ ಎಂಬುದರ ಬಗ್ಗ್ಗೆ ವಿವರವಾದ ಚಿಂತನಾತ್ಮಕ ಲೇಖನ, ಕೊನೆಯಲ್ಲಿ ಪ್ರಶ್ನೋತ್ತರಗಳೂ ಇವೆ

Happy California Cows ಮಾರ್ಕೆಟಿಂಗ್ ತಂತ್ರದ ಇನ್ನೊಂದು ಅತ್ಯುತ್ತಮ ನಿದರ್ಶನ ಈ ಲೇಖನದಲ್ಲಿದೆ. “ಅಹಿಂಸಾ ಹಾಲು” ಎಂಬುದರ ಬಗ್ಗೆ ಚಿಕ್ಕ ಪರಿಚಯ ಕೂಡ ಇಲ್ಲಿದೆ

ಭೂಮಿ ನಡುಗಿಸುವ ಗೋವಿನ ಸಿಂಹನಾದ ಹೇಗೆ ಧಾರ್ಮಿಕತೆ ಮೂಢನಂಬಿಕೆಯತ್ತ ಹೋಗಿ ನಗೆಪಾಟಲಿಗೀಡಾಗುತ್ತದೆ ಎಂಬುದಕ್ಕೆ ಒಂದು ಉತ್ತಮ ನಿದರ್ಶನ

3 comments:

prabhamani nagaraja said...

ಮಾನವೀಯತೆಯಿ೦ದ ಹಸುಗಳನ್ನು ನೋಡಿಕೊಳ್ಳುವ ಬಗೆಗಿನ ನಿಮ್ಮ ಕಾಳಜಿ ಬಹಳ ಇಷ್ಟವಾಯ್ತು. ಚಿ೦ತನ ಯೋಗ್ಯ ಲೇಖನಕ್ಕಾಗಿ ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.

ಅಶೋಕವರ್ಧನ said...

ಗೋ-ಸ್ವಾಮಿಗಳ ಮುಖಪುಸ್ತಕ ಖಾತೆಯಲ್ಲಿ ಒಂದು ಪಟ ಕಂಡೆ. ಕುತ್ತಿಗೆಗೆ ಹಗ್ಗ ಕಟ್ಟಿಕೊಂಡಿದ್ದ ದನಕ್ಕೆ ಶ್ರ‍ೀಗಳು ಏನೋ ತಿನ್ನಿಸುತ್ತಿದ್ದರು. "ಮಾತೆ ನಮಗೆ ಹಾಲುಣಿಸುತ್ತಾಳೆ" ಎಂಬರ್ಥದ ಶೀರ್ಷಿಕೆ ಇತ್ತು. ನಾನು ಪ್ರತಿಕ್ರಿಯಿಸಿದೆ - ತಾಯಿಯ ಕುತ್ತಿಗೆಗೆ ಹಗ್ಗ ಹಾಕಿ ಕಟ್ಟಬಹುದೇ? ಗೋಮಾತೆ ಹಾಲು ಕೊಡುವುದೇ ಅಥವಾ ನಾವು ಕರೆಯುವುದೇ? ನನಗಿನ್ನೂ ಉತ್ತರ ಸಿಕ್ಕಿಲ್ಲ :-(

ಕೃಷ್ಣ ಶಾಸ್ತ್ರಿ - Krishna Shastry said...

ಕೆಲವರಿಗೆ ದನವನ್ನು ಮಾತೆಯ ಸ್ಥಾನದಿಂದ ಕೆಳಗಿಳಿಸಿ ನಿಜಕ್ಕೂ ಗುಲಾಮ ಎಂದು ಒಪ್ಪಿಕೊಂಡರೆ ಗೋಹತ್ಯೆ ಹೆಚ್ಚಬಹುದು ಎಂಬ ಭಯವಿರಬಹುದೇನೋ? ಆದರೆ ಇನ್ನೂ ಹತ್ತಾರು ರೀತಿಯಲ್ಲಿ ಗೋವರ್ಗ ಹಿಂಸೆ ಅನುಭವಿಸುತ್ತದೆ ಎಂಬುದನ್ನು ಹೆಚ್ಚಿನವರು ಆಲೋಚಿಸದೇ ಇರುವುದು ಖೇದಕರ.

Post a Comment