About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, June 26, 2012

ತರಕಾರಿ-ಹಣ್ಣುಗಳಲ್ಲಿ ವಿಷವಿದೆ ನಿಜ, ಆದರೆ ಮಾಡುವುದಾದರೂ ಏನು?


ಸನ್ನಿವೇಶ ೧: ಪೇಟೆಯಲ್ಲಿರುವವರು (ನನ್ನಂಥವರು) ಅಪರೂಪಕ್ಕೆ ಹಳ್ಳಿಗೆ ಹೋದಾಗ (ಅಂಥಾ ಭಾಗ್ಯ ಎಲ್ಲರಿಗೂ ಇರುವುದಿಲ್ಲ ಬಿಡಿ) ಅಲ್ಲಿಯ ಬಂಧುಮಿತ್ರರು ‘ಇದೋ, ಹೋಗುತ್ತಾ ಸ್ವಲ್ಪ ತರಕಾರಿಯನ್ನೂ ತೆಗೆದುಕೊಂಡು ಹೋಗಿ, ಇದು ರಾಸಾಯನಿಕ ಹಾಕದೇ ಬೆಳೆಸಿದ್ದು’ ಎಂದಾಗ ಹಿರಿಹಿರಿ ಹಿಗ್ಗಿ ತೆಗೆದುಕೊಂಡು ಹೋಗುತ್ತಾರೆ.

ಸನ್ನಿವೇಶ ೨: ಪೇಟೆಯವರು ಹಳ್ಳಿಯನ್ನು ಸಂದರ್ಶಿಸಿದ ಇನ್ನೊಂದು ಉದಾಹರಣೆ. ‘ಅರೆರೆ, ಈ ಬೆಂಡೆಕಾಯಿ ಎಷ್ಟೊಂದು ಚೆನ್ನಾಗಿ ಬೆಳೆದಿದೆ, ನನಗೊಂದಷ್ಟು ಕೊಡಿ’ ಎಂದು ಪೇಟೆಯವರು ಕೇಳಿದಾಗ ‘ಅದೂ... ಅದಕ್ಕೆ ಸಿಕ್ಕಾಪಟ್ಟೆ ಕೀಟನಾಶಕ ಹಾಕಿದೆ, ಅದು ನಿಮಗೆ ಬೇಡ ಬಿಡಿ, ಇದೋ ಇಲ್ಲಿ ಮನೆಯ ಅಗತ್ಯಕ್ಕಾಗಿ ಬೆಳೆಸಿದ್ದು ಬೇರೆಯೇ ಇದೆ, ಅಲ್ಲಿಂದ ಕೊಡುತ್ತೇನೆ ನಿಮಗೆ’ ಎಂದು ಹಳ್ಳಿಯವರು ಹೇಳಿದಾಗ ಪೇಟೆಯವರಿಗೆ ಮನಸ್ಸು ಪೂರಾ ಅಯೋಮಯ – ‘ಅಯ್ಯೋ, ನಾನು ನಿತ್ಯವೂ ಪೇಟೆಯಲ್ಲಿ ಖರೀದಿಸುವುದು ಏನನ್ನು?’ ಎಂದು.

ಸನ್ನಿವೇಶ ೩: ಪೇಟೆಯ ಅಂಗಡಿಯೊಂದರಲ್ಲಿ ‘ಸಾವಯವ’ ಎಂದು ಹಣೆಪಟ್ಟಿ ಧರಿಸಿ ಒಂದಕ್ಕೆರಡು ಬೆಲೆಯೊಂದಿಗೆ ಒಂದು ಉತ್ಪನ್ನವು ರಾರಾಜಿಸುತ್ತಿರುತ್ತದೆ. ಆಗ ಪಕ್ಕದಲ್ಲಿರುವವರೊಬ್ಬರು ಗೊಣಗುತ್ತಾರೆ – “ಅಲ್ಲಾ, ಇದನ್ನು ಬೆಳೆಸಲು ಸಾಮಾನ್ಯವಾಗಿ ರಾಸಾಯನಿಕ ಹಾಕುವ ಕ್ರಮವೇ ಇಲ್ಲ, ಇವರು ಸುಮ್ಮ ಸುಮ್ಮನೇ ಸಾವಯವ ಎಂದು ದೊಡ್ಡದಾಗಿ ಬರೆದು ನಮ್ಮಿಂದ ಹೆಚ್ಚು ಹಣ ಕಕ್ಕಿಸುತ್ತಿದ್ದಾರೆ, ಅಷ್ಟೆ, ಇದರ ಬದಲಾಗಿ ಇದೇ ವಸ್ತುವನ್ನು ಇತರ ಅಂಗಡಿಗಳಲ್ಲಿ ಕೊಂಡುಕೊಂಡರೆ ಅದೇ ಲಾಭ”.

ಈ ಮೇಲಿನ ಮೂರೂ ಸನ್ನಿವೇಶಗಳಲ್ಲಿ ಕಂಡುಬರುವ ಒಂದು ಸಾಮಾನ್ಯ ಸಂಗತಿಯೆಂದರೆ ತರಕಾರಿ-ಹಣ್ಣುಗಳಲ್ಲಿ ಕೀಟನಾಶಕ/ರಾಸಾಯನಿಕಗಳು ಇರುವ ಬಗ್ಗೆ ಜನರಿಗೆ ಇರುವ ಆತಂಕ, ಕಾಳಜಿ. ಆದರೆ ಅವಿಲ್ಲದೇ ಇರುವ ಪದಾರ್ಥಗಳು ದುರ್ಲಭ, ಹೆಚ್ಚು ಬೆಲೆಯುಳ್ಳವು ಎಂಬ ಸತ್ಯವನ್ನೂ ನಾವು ಇಲ್ಲಿ ಕಾಣಬಹುದು. ಮಾತ್ರವಲ್ಲ, ಕೆಲವು ಕೃಷಿಕರು ದುರಾಸೆಯಿಂದ (ಅಸಹಾಯಕತೆಯಿಂದಲೂ ಇರಬಹುದು) ತಮಗೊಂದು ಇತರರಿಗೊಂದು ಎಂಬ ಇಬ್ಬಗೆಯ ನೀತಿಯನ್ನು ಹೊಂದಿರುವುದನ್ನೂ ನಾವಿಲ್ಲಿ ಗಮನಿಸಬೇಕು.

ವಿಜಯವಾಣಿಯಲ್ಲಿ ಗಿರೀಶ್ ಗರಗ ಅವರು ಇತ್ತೀಚೆಗೆ ‘ವಿಜಯವಾಣಿ’ಯಲ್ಲಿ ಬರೆದ ಲೇಖನ ಓದಿ. ಬೆಂಗಳೂರು ವಿವಿ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥ ಸೋಮಶೇಖರ್ ನೇತೃತ್ವದ ತಂಡ ನಡೆಸಿದ ಅಧ್ಯಯನದ ಫಲಿತಾಂಶವನ್ನಾಧರಿಸಿ ಬರೆದ ಲೇಖನವಿದು.

ಹಣ್ಣು, ತರಕಾರಿಯಲ್ಲಿ ವಿಷವೋ ವಿಷ

ಜನಸಾಮಾನ್ಯ ಏನು ಮಾಡಬೇಕು?

ಒಟ್ಟಿನಲ್ಲಿ, ಬರಿಗಣ್ಣಿಗೆ ನೋಡಲು ಆರೋಗ್ಯಕರವಾಗಿ ಕಾಣುವ ತರಕಾರಿ-ಹಣ್ಣುಗಳಲ್ಲಿ ಎಷ್ಟೆಲ್ಲಾ ವಿಷವಿರುತ್ತದೆ ಎಂಬುದು ಆತಂಕಕಾರಿ ವಿಷಯ, ಆದರೆ ಜನಸಾಮಾನ್ಯರ ದೃಷ್ಟಿಯಿಂದ ನೋಡಿದರೆ ಈ ಬಗ್ಗೆ ಚಿಂತಿಸಿ ಮಾಡುವುದಾದರೂ ಏನು ಎಂಬುದು ದೊಡ್ಡ ಪ್ರಶ್ನೆ. ಅದನ್ನು ಹೇಳದ ಹೊರತು, ಜನಸಾಮಾನ್ಯನ ದೈನಂದಿನ ಜೀವನಕ್ಕೆ ಪೂರಕವಾಗುವ ಮಾಹಿತಿಯನ್ನು ಕೊಡದ ಹೊರತು ಸಮಸ್ಯೆಗೆ ಪರಿಹಾರ ಖಂಡಿತಾ ದೊರೆಯುವುದಿಲ್ಲ.

ಉದಾಹರಣೆಗೆ, ನನ್ನ ಮನಸ್ಸಿನಲ್ಲಿ ತುಂಬಾ ಸಮಯದಿಂದಲೂ ಕೊರೆಯುತ್ತಿರುವ ಕೆಲವು ಪ್ರಶ್ನೆಗಳಿವೆ:
- ತರಕಾರಿ-ಹಣ್ಣುಗಳನ್ನು ರಸ್ತೆ ಬದಿಯಲ್ಲಿ ಖರೀದಿಸುವುದಕ್ಕೂ, ಸಣ್ಣ-ಪುಟ್ಟ ಅಂಗಡಿಗಳಲ್ಲಿ ಖರೀದಿಸುವುದಕ್ಕೂ, ಹಾಪ್-ಕಾಂಸ್‍ನಂತಹ ಸರಕಾರೀ ಮಳಿಗೆಗಳಲ್ಲಿ ಖರೀದಿಸುವುದಕ್ಕೂ, ಮೋರ್/ಸ್ಪಾರ್/ಫುಡ್ ಬಜಾರ್ ಇತ್ಯಾದಿಗಳಲ್ಲಿ ಖರೀದಿಸುವುದಕ್ಕೂ ನಿಜಕ್ಕೂ ಎಷ್ಟು ವ್ಯತ್ಯಾಸವಿದೆ?
- ಮೇಲೆ ಹೇಳಿದ ದೊಡ್ಡ ಮಳಿಗೆಗಳ ಗುಣಮಟ್ಟ ಪರಿಶೀಲನೆ ವಿಭಾಗದವರು ಕೀಟನಾಶಕ/ರಾಸಾಯನಿಕಗಳ ಮಟ್ಟವನ್ನು ಪರಿಶೀಲಿಸುತ್ತಾರೆಯೇ? ಅಥವಾ ಬರೀ ಅಂದ-ಚೆಂದ-ಬಾಳಿಕೆ ಇತ್ಯಾದಿಗಳನ್ನು ಪರಿಗಣಿಸುತ್ತಾರೆಯೇ?
- ದೊಡ್ಡ ಮಳಿಗೆಗಳಲ್ಲಿ ಇತ್ತೀಚೆಗೆ ಬೇಳೆ, ಸಕ್ಕರೆ ಇತ್ಯಾದಿಗಳಲ್ಲಿ value ಹಾಗೂ select ಎಂಬ ಎರಡು ರೀತಿಯ ಹಣೆಪಟ್ಟಿಗಳು ಕಾಣಸಿಗುತ್ತವೆ. ಇದಕ್ಕೂ ಆ ಉತ್ಪನ್ನಗಳಲ್ಲಿರುವ ಕೀಟನಾಶಕ/ರಾಸಾಯನಿಕಗಳಿಗೂ ಏನಾದರೂ ಸಂಬಂಧವಿದೆಯೇ?
- ಈ ವಿಷಯದಲ್ಲಿ ಜನಸಾಮಾನ್ಯರ ಕೈಗೆಟಕುವಂತೆ ವೈಜ್ಞಾನಿಕ ಅಧ್ಯಯನಗಳು ನಡೆದಿವೆಯೇ? ಹೌದು ಎಂದಾದರೆ ಎಲ್ಲಿಂದ ಯಾವುದನ್ನು ಖರೀದಿಸುವುದು ಉತ್ತಮ ಎಂಬ ಸಾಧಾರ ಮಾಹಿತಿ ಲಭ್ಯವಿದೆಯೇ?

‘ಸಾವಯವ’ದೊಂದಿಗೆ ತಳುಕು ಹಾಕಿದ ಸಮಸ್ಯೆಗಳು

 ‘ಸಾವಯವ ಎಂದು ನಾಮಾಂಕಿತ ಉತ್ಪನ್ನಗಳು ಈಗ ಹೆಚ್ಚು ಹೆಚ್ಚಾಗಿ ದೊರೆಯತೊಡಗಿವೆ, ಇದು ಖಂಡಿತಾ ಉತ್ತಮ ಬೆಳವಣಿಗೆ. ಆದರೆ ಭಾರತದಲ್ಲಿ ಸಾವಯವಎಂಬುದರ ಬಗ್ಗೆ ನೀತಿ-ನಿಯಮಗಳು ಹಾಗೂ ಅವುಗಳ ಅನುಷ್ಠಾನ ಎಷ್ಟು ಬಲವಾಗಿವೆ ಎಂಬುದು ದೊಡ್ಡ ಪ್ರಶ್ನೆ. ಮಾತ್ರವಲ್ಲ, ಅದರ ಬೆಲೆಯೂ ಹೆಚ್ಚು. ಕಡೇಪಕ್ಷ ದುಡ್ಡಿರುವವರಾದರೂ ಅವುಗಳನ್ನು ಕೊಂಡು ಸಾವಯವ ಕೃಷಿಯನ್ನು ಪ್ರೋತ್ಸಾಹಿಸಿದರೆ ಅದೇ ದೊಡ್ಡ ಭಾಗ್ಯ. ಈ ವರ್ಗದ ಜನರಲ್ಲಿ ಕೂಡ ಸಾವಯವ ಎಂಬ ಹಣೆಪಟ್ಟಿಯ ಬಗ್ಗೆ ಸಂಶಯ ವ್ಯಕ್ತಪಡಿಸುವವರು, ಆ ಹಣೆಪಟ್ಟಿ ಇಲ್ಲದೇ ಇರುವ ಉತ್ಪನ್ನಗಳಲ್ಲಿ ಅಷ್ಟೇನೂ ರಾಸಾಯನಿಕ ಇರಲಾರದು (ಪ್ರತ್ಯೇಕವಾಗಿ “ಉತ್ತಮ” ಅಂಗಡಿಗಳಿಂದ ಖರೀದಿಸಿದರೆ) ಎಂಬ ಆಶಾವಾದಿಗಳು ಇರುತ್ತಾರೆ. ಹೀಗಾಗಿ ಸಾವಯವ ಉತ್ಪನ್ನಕ್ಕೆ ಮಾರುಕಟ್ಟೆ ಇಂದಿಗೂ ಅತ್ಯಂತ ಸೀಮಿತವಾಗಿದೆ.

‘ಅರೆ-ಸಾವಯವ’ ಎಂಬ ಪ್ರಯೋಗ, ವರ್ಗೀಕರಣ ಏಕಿಲ್ಲ?

ಅ-ಸಾವಯವಉತ್ಪನ್ನಗಳೇ ಇಂದಿಗೂ ಎಲ್ಲೆಡೆ ಸುಲಭವಾಗಿ, ಸುಲಭ ದರದಲ್ಲಿ ದೊರೆಯುವ ಉತ್ಪನ್ನಗಳು. ಕಟ್ಟು ನಿಟ್ಟಾಗಿ ಸಾವಯವ ಉತ್ಪನ್ನ ಎನ್ನಲಾಗದಿದ್ದರೂ ಕೂಡ ಕೀಟನಾಶಕ/ರಾಸಾಯನಿಕಗಳ ಪ್ರಮಾಣ ಹೆಚ್ಚು-ಕಡಿಮೆ ಇರುವುದು ಸಹಜ - ಇದು ಸ್ಥಳದಿಂದ ಸ್ಥಳಕ್ಕೆ, ಬೆಳೆಗಾರನಿಂದ ಬೆಳೆಗಾರನಿಗೆ ಬದಲಾಗುವ ಸಂಗತಿ. ಹೀಗಾಗಿ ಇವುಗಳ ವರ್ಗೀಕರಣ ಅತಿಮುಖ್ಯ. ಬಹುಷಃ ಇದು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾದ ಒಂದು ಸಂಗತಿ. ಇಂತಹ ವರ್ಗೀಕರಣವಿಲ್ಲದೇ ಇರುವುದರಿಂದ ಆಗುವ ಇನ್ನೊಂದು ದೊಡ್ಡ ಅನಾಹುತ ಎಂದರೆ – ಅರೆ-ಸಾವಯವ ಕೃಷಿ ಮಾಡುವವರಿಗೂ ವಿವೇಚನೆ ಇಲ್ಲದೆ ರಾಶ ರಾಸಾಯನಿಕ ಸುರಿದು ಕೃಷಿ ಮಾಡುವವರಿಗೂ ತಮ್ಮ ಉತ್ಪನ್ನಗಳಿಗೆ ಒಂದೇ ಬೆಲೆ ಸಿಗುವುದು. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಾವಯವ ಕೃಷಿಯಲ್ಲಿ ಅರೆ-ಬರೆ ಆಸಕ್ತಿ ಇರುವವರು ಬೆಲೆಯ ಪೈಪೋಟಿಯನ್ನೆದುರಿಸುವುದಕ್ಕೋಸ್ಕರ ಬೇರೆ ದಾರಿ ಇಲ್ಲದೆ ರಾಸಾಯನಿಕಗಳಿಗೆ ಸೋತು ಹೋಗುವ ಸಾಧ್ಯತೆಗಳು ಬಹಳಷ್ಟಿವೆ. (ಸಾವಯವ ಕೃಷಿಯಲ್ಲಿ ಬೆಳೆ ಕಡಿಮೆ ಎಂಬ ಸಾಮಾನ್ಯ ನಂಬಿಕೆಯನ್ನು ನಾನಿಲ್ಲಿ ಉಪಯೋಗಿಸಿದ್ದೇನೆ, ಇದು ಸುಳ್ಳು ಎಂಬ ಅಧ್ಯಯನಗಳು ಹೊರಬರುತ್ತಿದ್ದರೂ ಕೂಡ ಸದ್ಯಕ್ಕೆ ಇದೇ ವ್ಯಾಪಕವಾಗಿ ಕೃಷಿಕರ ಮನಸ್ಸಿನಲ್ಲಿ ಬೇರೂರಿರುವ ಸಂಗತಿ ಎಂಬುದನ್ನು ನಾವಿಲ್ಲಿ ಗಮನಿಸಬೇಕು)

ಮುಂದೇನು?

ಈ ಬಗ್ಗೆ ಮುಂಬರುವ ದಿನಗಳಲ್ಲಿ ನಾನು ಹೆಚ್ಚಿನ ಮಾಹಿತಿ ಕಲೆಹಾಕಲು, ಸಾಧ್ಯವಾದರೆ ಅಂತರ್ಜಾಲದಲ್ಲಿ ಪ್ರಕಟಿಸಿ ನಿಮ್ಮೊಡನೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ, ನಿಮ್ಮ ಬಳಿ ಏನಾದರೂ ಉಪಯುಕ್ತ ಮಾಹಿತಿಯಿದ್ದರೆ ನನಗೆ ತಿಳಿಸಿ ಎಂದು ವಿನಮ್ರ ವಿನಂತಿ.

ನಿಮ್ಮ ಪ್ರತಿಕ್ರಿಯೆ, ಟೀಕೆ, ಸಲಹೆ, ಸೂಚನೆಗಳಿಗೆ ಸದಾ ಸ್ವಾಗತವಿದೆ.

ಇತಿ,
ಕೃಷ್ಣ ಶಾಸ್ತ್ರಿ

0 comments:

Post a Comment