Saturday, June 16, 2012

ಪರಿಸರಸ್ನೇಹೀ ಆಹಾರ ಎಂದರೆ ಏನು?


ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಅನೇಕರು ವಿವಿಧ ವಿಷಯಗಳ ಬಗ್ಗೆ ಗಮನ ಹರಿಸತೊಡಗಿದ್ದಾರೆ, ಇದರಲ್ಲಿ ಆಹಾರವೂ ಒಂದು ಪ್ರಮುಖವಾದ ಅಂಶ ಎಂಬುದು ಅನೇಕರು ಗಮನಿಸದೇ ಇರುವ ಸಂಗತಿ. ಆಹಾರ ಸೇವನೆಯ ದೃಷ್ಟಿಯಿಂದ ನಾವು ಪರಿಸರಕ್ಕೆ ಮಾಡುವ ಹಾನಿಯನ್ನು ಯಾವ ರೀತಿಯಲ್ಲಿ ಕಡಿಮೆ ಮಾಡಬಹುದು? ಪರಿಸರಸ್ನೇಹೀ ಆಹಾರ ಹಾಗೂ ಆಹಾರಕ್ರಮಗಳ ಒಂದು ಪಟ್ಟಿ ಇಲ್ಲಿದೆ ನೋಡಿ:

ಸಾವಯವ ಆಹಾರ
ಕೀಟನಾಶಕಗಳಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲವಷ್ಟೆ? ಬೆಲೆ ಹೆಚ್ಚಿದ್ದರೂ ಕೂಡ ಸಾವಯವ ಆಹಾರ ಪದಾರ್ಥಗಳನ್ನೇ ಹೆಚ್ಚು ಉಪಯೋಗಿಸಲು ಯತ್ನಿಸುವುದು ಒಳಿತು. ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಕೂಡ ಇದು ಅತ್ಯಂತ ಶ್ರೇಯಸ್ಕರ.

ಸ್ಥಳೀಯ ಆಹಾರ
ಆಹಾರ ಮದಾರ್ಥಗಳನ್ನು ದೂರದೂರಿಂದ ತರಲು ಹಾಗೂ ಹೆಚ್ಚು ಕಾಲ ಚೆನ್ನಾಗಿ ಇಡಲು ಅಧಿಕ ಇಂಧನ ವ್ಯಯವಾಗುತ್ತದೆ, ಹೆಚ್ಚಿನ ಪ್ಯಾಕೇಜಿಂಗ್ ಹಾಗೂ ಶೀತಲೀಕರಣ ಬೇಕಾಗುತ್ತದೆ. ಇವೆಲ್ಲದರಿಂದ ಪರಿಸರಕ್ಕೆ ಹೆಚ್ಚಿನ ಹಾನಿಯುಂಟಾಗುತ್ತದೆ. ಸ್ಥಳೀಯವಾಗಿ ಬೆಳೆಸಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಆಯ್ಕೆ ಮಾಡುವುದು ಪರಿಸರಕ್ಕೆ ಅತ್ಯಂತ ಒಳ್ಳೆಯದು. ಅನೇಕ ಸಂದರ್ಭಗಳಲ್ಲಿ ಇದು ಹೆಚ್ಚು ತಾಜಾ ಕೂಡ ಇರುತ್ತದೆ ಎಂಬುದನ್ನು ಗಮನಿಸಿ.

ಸಸ್ಯಜನ್ಯ ಆಹಾರ
ಪರಿಸರದ ದೃಷ್ಟಿಯಿಂದ ನೋಡಿದರೆ ಪ್ರಾಣಿಜನ್ಯ ಆಹಾರಗಳು ಖಂಡಿತಾ ಒಳ್ಳೆಯದಲ್ಲ; ಸಾಕು ಪ್ರಾಣಿಗಳಿಂದ ನೆಲ-ಜಲ-ವಾಯು ಇವೆಲ್ಲಾ ಅಪಾರ ಪ್ರಮಾಣದಲ್ಲಿ ಮಲಿನಗೊಳ್ಳುತ್ತವೆ. ಮಾತ್ರವಲ್ಲ ಸಸ್ಯೋತ್ಪನ್ನಗಳನ್ನು ನೇರವಾಗಿ ಸೇವಿಸುವುದರಿಂದ ದೊಡ್ಡ ಪ್ರಮಾಣದಲ್ಲಿ ‘ಶಕ್ತಿ-ಸೋರಿಕೆ’ಯನ್ನು ತಡೆಗಟ್ಟಬಹುದು – ಒಂದು ಕಿಲೋ ಮಾಂಸವನ್ನು ಪಡೆಯಲು ಎಷ್ಟೋ ಹೆಚ್ಚು ಕಿಲೋ ಧಾನ್ಯಗಳನ್ನು ಪ್ರಾಣಿಗಳಿಗೆ ತಿನ್ನಲು ಕೊಡಬೇಕಾಗುತ್ತದೆ – ಅದೇ ನೆಲದಲ್ಲಿ ನಮಗೆ ಉಪಯುಕ್ತ ಧಾನ್ಯಗಳನ್ನು ಬೆಳೆಸಿದರೆ ಯಾವ ಮನುಷ್ಯನೂ ಹಸಿವೆಯಿಂದ ಸಾಯಬೇಕಾದ ಪರಿಸ್ಥಿತಿಯಿರುವುದಿಲ್ಲ. ಸಸ್ಯಾಹಾರ ಆರೋಗ್ಯದ ದೃಷ್ಟಿಯಿಂದಲೂ ಬಹಳ ಲಾಭದಾಯಕ, ಮಾತ್ರವಲ್ಲ ಇದರಿಂದ ಈ ಪರಿಸರದಲ್ಲಿ ನಮ್ಮ ಸಜಜೀವಿಗಳಾದ ಪ್ರಾಣಿಗಳ ಹಕ್ಕುಗಳನ್ನೂ ಗೌರವಿಸಿದಂತಾಗುತ್ತದೆ.

ಹಸಿ ಆಹಾರ
ಬೇಯಿಸುವುದು, ಕರಿಯುವುದು ಇತ್ಯಾದಿಗಳಿಂದ ಆಹಾರವು ಅನೇಕ ಪೌಷ್ಟಿಕಾಂಶಗಳನ್ನು ಕಳೆದುಕೊಂಡು ಸತ್ವಹೀನವಾಗುತ್ತವೆ (ಕೆಲವೊಮ್ಮೆ ಆಹಾರ ಹೆಚ್ಚು ಅನಾರೋಗ್ಯಕರವೂ ಆಗುತ್ತವೆ), ಹೀಗಾಗಿ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಪಡೆಯುವುದಕ್ಕಾಗಿ ಹೆಚ್ಚು ಹೆಚ್ಚು ತಿನ್ನಬೇಕಾದ ಅನಿವಾರ್ಯತೆ ಬರುತ್ತದೆ. ಇದನ್ನು ಬಿಟ್ಟು ಹಸಿ ಆಹಾರದತ್ತ ಹೊರಳುವುದರಿಂದ ಇಂಧನವೂ ಉಳಿತಾಯವಾಗುತ್ತದೆ. ಆದರೆ ಹಸಿ ಆಹಾರಕ್ರಮವನ್ನು ಅಳವಡಿಸಿಕೊಳ್ಳುವಾಗ ಕ್ರಿಮಿಕೀಟಗಳು ಇಲ್ಲದಂತೆ ಹೆಚ್ಚು ಎಚ್ಚರವಹಿಸುವುದು ಅವಶ್ಯ ಎಂಬುದನ್ನು ಮರೆಯಬೇಡಿ.

ಮಿತಾಹಾರ/ಹಿತಾಹಾರ
ನಮ್ಮ ಆರೋಗ್ಯ ಕೆಟ್ಟಷ್ಟೂ ಪರಿಸರಕ್ಕೆ ಅದರಿಂದ ಅನೇಕ ರೀತಿಯಲ್ಲಿ ಹಾನಿಯಿದೆ. ಹೀಗಾಗಿ ಮಿತಾಹಾರ ಹಾಗೂ ಹಿತಾಹಾರದ ಮೂಲಕ ಆರೋಗ್ಯವನ್ನು ಕಾಪಾಡಿ, ಪರಿಸರವನ್ನು ಉಳಿಸಿ.

ನಿಮ್ಮ ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತವಿದೆ.

ಇತಿ,
ಕೃಷ್ಣ ಶಾಸ್ತ್ರಿ.

3 comments:

  1. Thank you Krishna for this excellent piece of information. - Shankar narayan

    ReplyDelete
  2. olle baraha Krishna ravare, yellaru oodabekaddadu

    ReplyDelete
  3. eshtu beko ashte thinni, aamele workout maduvudakkintha. Time waste, thinda aahara kooda waste. My dad has a suggestion. He says, people waste a lot of time and energy trying to workout the calories. Can anyone invent a machine which can convert the mechanical energy(During workouts)to any other form of energy(like electrical)so that the food we eat is converted to something useful.
    Ashwini

    ReplyDelete