About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Monday, February 27, 2012

ಬಂದ್ ನೈತಿಕವೋ? ಪರಿಣಾಮಕಾರಿಯೋ?


ಇಂದು ವಿವಿಧ ಕಾರ್ಮಿಕ ಸಂಘಟನೆಗಳು ದೇಶದಾದ್ಯಂತ ಬಂದ್‍ಗೆ ಕರೆ ನೀಡಿವೆ, ಇದುವರೆಗೆ ಮಿಶ್ರ ಪ್ರತಿಕ್ರಿಯೆ ದೊರೆತಿವೆ. ಕೇರಳದಂತಹ ಬಂದ್ ಪ್ರಿಯ ರಾಜ್ಯಗಳಲ್ಲಿ ಬಹುತೇಕ ಯಶಸ್ವಿಯಾಗಿವೆ. ಈ ಬಂದ್ ಹಾಗೂ ಇದರ ಹಿಂದಿರುವ ಕಾರಣದ ಬಗ್ಗೆ ನನ್ನ ಮನಸ್ಸಿಗೆ ಬರುವ ಕೆಲವು ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಮೊದಲಿಗೆ, ನಿಮಗೇನನಿಸುತ್ತಿದೆ?

ಬಂದ್ ಮಾಡುವುದು ಜವಾಬ್ದಾರಿಯುತ ಕೆಲಸವೋ? ಅಥವಾ ಕೆಲಸಗಳ್ಳ ಗೂಂಡಾಗಳಿಗೆ ಇತರರ ಮೇಲೆ ವಿಜೃಂಭಿಸುವ ಅವಕಾಶವೋ?

ಬಂದ್ ಮಾಡುವುದು ಜನರ ಹಕ್ಕೋ? ಅಥವಾ ಇತರರ ಹಕ್ಕುಗಳನ್ನು ಕಸಿಯುವ ಕೆಲವರ ಸೊಕ್ಕೋ?

ಅನ್ಯಾಯದ ವಿರುದ್ಧ ಪ್ರತಿಭಟಿಸಲು ಯಾವ ವಿಧಾನ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ನಿಮಗನಿಸುತ್ತದೆ?
- ಬಂದ್, ಹರತಾಳ, ರಸ್ತೆ ತಡೆ, ಮುಷ್ಕರ, ಸಮರ (ಕೊನೆಯದ್ದು ಮಲಯಾಳಿಗಳು ಉಪಯೋಗಿಸುವ ಪದ!!)
- ಉಪವಾಸ ಸತ್ಯಾಗ್ರಹ
- ಸಾಂಕೇತಿಕ ಮೌನ ಪ್ರತಿಭಟನೆ (ಕೈಗೆ ಕಪ್ಪು ಬಿಲ್ಲೆ ಹಚ್ಚಿಕೊಂಡು ಇತ್ಯಾದಿ)
- ಇತರೆ

ಬಂದ್‍ಗೆ ಕರೆ ಕೊಡುವವರ ಮನೋಭಾವ

ಬಂದ್ ಸಮಯದಲ್ಲಿ ಕಿಡಿಗೇಡಿಗಳಿಂದ ಸಾರ್ವಜನಿಕ ಹಾಗೂ ಜನರ ಸ್ವಂತ ಸೊತ್ತುಗಳಿಗೆ ಹಾನಿ ಆಗುವುದು ಸಾಮಾನ್ಯ. ಜನರ ಮನಸ್ಸಿನಲ್ಲಿ ತರತರದ ಭೀತಿಯನ್ನು ಹುಟ್ಟುಹಾಕುವುದು ಕೆಲಸಗಳ್ಳ ಗೂಂಡಾಗಳಿಗೆ ವಿಕೃತ ಖುಷಿ ಕೊಡುವ ಸಂಗತಿ. ವಾಹನ ಅಪಘಾತಗಳನ್ನುಂಟುಮಾಡಿ ಜೀವಹಾನಿ ಆದರೂ ಅದರ ಬಗ್ಗೆ ಬಂದ್‍ಗೆ ಕರೆ ಕೊಟ್ಟವರು ಅಸಡ್ಡೆ ತೋರಿಸುತ್ತಾರೆ.

ಒಟ್ಟಿನಲ್ಲಿ ಇತರರಿಗೆ ಆಗುವ ಹಾನಿ, ಅನಾನುಕೂಲ ಯಾವುದಕ್ಕೂ ಇವರು ಜವಾಬ್ದಾರರಲ್ಲ.

ಮುಷ್ಕರವೋ ಬಂದೋ? ಹೆಸರಿನಲ್ಲೇನಿದೆ?

ಇಂದಿನದ್ದು ಅಧಿಕೃತವಾಗಿ ‘ಮುಷ್ಕರ’. ಆದರೆ ಅನೇಕ ಕಡೆ ಆಗುತ್ತಿರುವುದು ಬಂದ್. ಇಂತಹ ಸಂದರ್ಭದಲ್ಲಿ ಬಂದ್‍ಗೆ ಕರೆ ನೀಡುವ ಮುಂದಾಳುಗಳ ವಾಕ್ಯಗಳನ್ನು ಬೇರೆಯೇ ರೀತಿ ಓದಬೇಕಾಗುತ್ತದೆ:
·         ‘ಎಲ್ಲರೂ ನಮ್ಮ ಜೊತೆ ಸಹಕರಿಸುತ್ತಾರೆ ಎಂದು ನಂಬಿದ್ದೇವೆ’ ಎಂದರೆ ‘ಬಂದ್ ಯಶಸ್ವಿಯಾಗಲೇ ಬೇಕು, ನೀವು ಧಿಕ್ಕರಿಸಿದರೆ ಜಾಗ್ರತೆ!’ ಎಂದರ್ಥ
·         ‘ಇಂದು ವಾಹನ ಸಂಚಾರ ಕಡಿಮೆ ಇರಬಹುದು ಎಂದು ನಿರೀಕ್ಷಿಸುತ್ತಿದ್ದೇವೆ’ ಎಂದರೆ ‘ವಾಹನ ಚಲಾಯಿಸಿದರೆ ಕಲ್ಲೇಟು ತಿನ್ನಲು ತಯಾರಿಗಿರಿ’ ಎಂದರ್ಥ.

ನಯವಾದ ಮಾತಿನಲ್ಲಿ ನಡೆಯುವ ಗೂಂಡಾಗಿರಿ, ಭಯೋತ್ಪಾದನೆ ಇದು, ಅಲ್ಲದ ಇನ್ನೇನು?

ಕೇರಳದಲ್ಲಿ ನೋಡಿ – ಕೆಲ ವರುಷಗಳ ಹಿಂದೆ ‘ಬಂದ್’ ಎಂಬುದು ಅಸಾಂವಿಧಾನಿಕ, ಯಾರಿಗೂ ಇತರರ ಮೂಲಭೂತ ಹಕ್ಕು ಕಸಿಯುವ ಹಕ್ಕು ಇಲ್ಲ ಎಂದು ಕೇರಳದ ಉಚ್ಛನ್ಯಾಯಾಲಯ ತಾಕೀತು ಮಾಡಿತು. ಈಗ ಅದಕ್ಕೆ ಉತ್ತರವಾಗಿ ಎಲ್ಲರೂ ‘ಹರತಾಳ’ ಮಾಡುತ್ತಾರೆ. ಹೆಸರು ಬೇರೆ, ಪರಿಣಾಮ ಒಂದೇ.

ಬಂದ್‍ನಿಂದ ನಿಜವಾಗಿ ಏನು ಪ್ರಯೋಜನ?

ಈ ಎಲ್ಲಾ ಬಂದ್‍ಗಳಿಂದ ಇದುವರೆಗೆ ಏನನ್ನು ಸಾಧಿಸಲಾಗಿದೆ? ಇದರ ಬಗ್ಗೆ ಯಾರಾದರೂ ಗಂಭೀರವಾಗಿ ಚಿಂತಿಸಿದರೆ ತಾನೇ ಏನಾದರೂ ಪ್ರಯೋಜನವಾಗುವುದು? ಬಂದ್‍ನ ಹಿಂದೆ ಇರುವ ಕಾರಣದ ಬಗ್ಗೆ ಯಾರಾದರೂ ಗಂಭೀರವಾಗಿ ಚಿಂತಿಸುತ್ತಾರೆಯೇ? ಆ ಸಂಗತಿಯ ಬಗ್ಗೆ ಸಹಾನುಭೂತಿ ತೋರುತ್ತಾರೆಯೇ? ಒಂದಷ್ಟು ಉದಾಹರಣೆಗಳನ್ನು ನೋಡೋಣ.

- ವಿದ್ಯಾರ್ಥಿಗಳು ಹಾಗೂ (ಬಂದ್‍ನಿಂದ ಸಂಬಳ ಕಳೆದುಕೊಳ್ಳದ) ಅನೇಕ ನೌಕರರು ರಜೆ ಸಿಕ್ಕಿತೆಂದು ಖುಷಿ ಪಡುತ್ತಾರೆ.
- ಮನೆಯಲ್ಲಿಯೇ ಇರುವ ಗೃಹಿಣಿ ಅಥವಾ ನಿವೃತ್ತರು ತುಸು ಪೂರ್ವತಯಾರಿ ಮಾಡಿಕೊಂಡು ಮನೆಯಲ್ಲಿ ಆರಾಮವಾಗಿ ಇರುತ್ತಾರೆ.
- ಈ ಎಲ್ಲರೂ ಬಹುಷಃ ೪ ಘಂಟೆ ಹೆಚ್ಚು ಟಿ.ವಿ. ನೋಡಿ ಆನಂದಿಸುತ್ತಾರೆ.
- ದಿನಗೂಲಿ ಕೆಲಸಗಾರರು ಮತ್ತಿತರ ಬಡವರ್ಗದವರು ಊಟಕ್ಕೇನು ಮಾಡುವುದು ಎಂದು ಚಿಂತಿಸುತ್ತಾರೆ, ತಮ್ಮ ಆದಾಯ ತಪ್ಪಿಹೋದುದಕ್ಕೆ ಬಂದ್ ಮಾಡಿದವರಿಗೆ ಹಿಡಿಶಾಪ ಹಾಕುತ್ತಾರೆ.
- ಇವತ್ತು ಮಾಡಲಾಗದಿದ್ದರೆ ನಾಳೆ ಹೆಚ್ಚು ದುಡಿದು ಮುಗಿಸಲೇಬೇಕು ಎನ್ನುವ ಕೆಲಸಗಳು ಬೇಕಾದಷ್ಟಿರುತ್ತವೆ, ಅಂಥವರು ಬಂದ್ ಎಂದರೆ ಕಿಡಿಕಿಡಿಯಾಗುತ್ತಾರೆ
- ಆಸ್ಪತ್ರೆ ಮುಂತಾದ ಕಡೆ ಅನಿವಾರ್ಯವಾಗಿ ಕೆಲಸ ಮಾಡಬೇಕಾದವರು ಕಷ್ಟಪಟ್ಟುಕೊಂಡು/ಹೆದರಿಕೊಂಡು ಕೆಲಸಕ್ಕೆ ಬರುತ್ತಾರೆ, ಇವರೂ ಬಂದ್ ಕರೆ ಕೊಟ್ಟವರಿಗೆ ಒಂದಷ್ಟು ಹಿಡಿಶಾಪ ಹಾಕುತ್ತಾರೆ
- ಸರಕಾರ ಏನೋ ಕಾರಣ ಹೇಳಿ ನುಣುಚಿಕೊಳ್ಳುತ್ತದೆ, ರಾಜಕಾರಣಿಗಳು ಬಂದ್‍ನ ಮೊದಲು ಒಂದಷ್ಟು ದಿನ, ಆಮೇಲೆ ಇನ್ನೊಂದಷ್ಟು ದಿನ ನಾಟಕ ಮಾಡಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ, ನಿಜವಾಗಿ ಮಾಡಬೇಕಾದ ಕೆಲಸಗಳನ್ನು ಬಿಟ್ಟು ತಮ್ಮ ಸಮಯ, ಶಕ್ತಿ ಹಾಗೂ ‘ಕಳಕಳಿ’ಯನ್ನು ಈ ಕಡೆ ವ್ಯಯಿಸುತ್ತಾರೆ
- ಪೋಲೀಸರಿಗೂ ಬಂದ್‍ನ ದಿನ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸಾಕಷ್ಟು ಒದ್ದಾಡಬೇಕಾಗುತ್ತದೆ, ಅವರೂ ಖಂಡಿತಾ ಹಿಡಿಶಾಪ ಹಾಕುತ್ತಾರೆ
- ಬ್ಯುಸಿನೆಸ್ ಮಾಡುವವರು ತಮ್ಮ ದೈನಂದಿನ ವಹಿವಾಟಿನ ಮೇಲೆ ಆದ ಪರಿಣಾಮದ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆಯೇ ಹೊರತು ಬಂದ್‍ನ ಹಿಂದೆ ಇರುವ ನಿಜವಾದ ಕಾರಣದ ಬಗ್ಗೆ ಚಿಂತಿಸುವುದಿಲ್ಲ, ಬಂದ್ ಅವರಿಗೆ ಚಿಂತಿಸಲು ವ್ಯವಧಾನ ಕೊಡುವುದಿಲ್ಲ, ಬದಲಾಗಿ ಕೆಟ್ಟ ಕಿರಿಕಿರಿ ಉಂಟುಮಾಡುತ್ತದೆ, ಅಷ್ಟೆ
- ಬಹುರಾಷ್ಟ್ರೀಯ ಕಂಪನಿಗಳು ಆ ದಿನವನ್ನು ರಜಾದಿನ ಎಂದು ಘೋಷಿಸಿ ಶನಿವಾರವನ್ನು ಕೆಲಸ ಮಾಡುವ ದಿನವೆಂದು ಘೋಷಿಸುತ್ತಾರೆ, ಅದಕ್ಕಿಂತ ಹೆಚ್ಚು ತಲೆ ಕೆಡಿಸಿಕೊಳ್ಳಲು ಹೋಗುವುದೇ ಇಲ್ಲ. ಈ ಉದ್ಯಮದ ಎಲ್ಲರೂ ಜತೆಯಾಗಿ ಹಿಡಿಶಾಪ ಹಾಕುತ್ತಾರೆ.

ಒಟ್ಟಿನಲ್ಲಿ ಬಂದ್ ಪರಿಣಾಮಕಾರಿಯೇ ಅಲ್ಲ ಎಂದು ನನ್ನ ಅಭಿಪ್ರಾಯ. ಅದರಿಂದಾಗುವ ಹಾನಿ, ಅದು ಉಂಟುಮಾಡುವ ಋಣಾತ್ಮಕ ವಾತಾವರಣ – ಇವುಗಳನ್ನು ಅದರಿಂದುಂಟಾಗುವ ಪ್ರಯೋಜನಗಳೊಂದಿಗೆ ತೂಗಿ ನೋಡಿದರೆ ಬಂದ್ ಎಂಬ ಪಿಡುಗನ್ನು ನಮ್ಮ ಸಮಾಜ ನಿವಾರಿಸಿಕೊಳ್ಳಲೇಬೇಕು ಎಂಬುದು ನನ್ನ ಬಲವಾದ ಅಭಿಪ್ರಾಯ.

ಉಪವಾಸ ಸತ್ಯಾಗ್ರಹ ಏಕಲ್ಲ?

ಇನ್ನೊಂದು ಕಡೆ ನೋಡಿದರೆ ಇತ್ತೀಚೆಗೆ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹದ ಬಲವನ್ನು ಮತ್ತೊಮ್ಮೆ ಭಾರತದ ಜನಕ್ಕೆ ತೋರಿಸಿಕೊಟ್ಟಿದ್ದಾರೆ. ಜನರ ಸಹಾನುಭೂತಿ, ಬೆಂಬಲ, ಮಾಧ್ಯಮ ಪ್ರಚಾರ ಎಲ್ಲವೂ ಸಿಕ್ಕಿದೆ ಇದಕ್ಕೆ. ಇತರರ ಹಕ್ಕುಗಳನ್ನು ಕಸಿಯದೇ, ಸಂಬಂಧಪಡದವರನ್ನು ಉಪದ್ರವಿಸದೆಯೇ ತಮ್ಮ ಮೇಲಾದ ಅನ್ಯಾಯದ ವಿರುದ್ಧವಾಗಿ ಸತ್ಯಾಗ್ರಹ ಮಾಡುವುದು ಸುಲಭವಲ್ಲ.

ಬಂದ್ ಮಾಡುವುದು ಹೇಡಿಗಳ, ಕೆಲಸಗಳ್ಳರ ಕೆಲಸ, ಉಪವಾಸ ಸತ್ಯಾಗ್ರಹ ಮಾಡಲು ನಿಜವಾದ ಮನಸ್ಥೈರ್ಯ, ನೈತಿಕತೆ, ಆತ್ಮವಿಶ್ವಾಸ ಬೇಕು. ಬಂದ್ ಆಕ್ರೋಶ, ಅಸಹ್ಯ ಹುಟ್ಟಿಸುತ್ತದೆ; ಉಪವಾಸ ಸತ್ಯಾಗ್ರಹ ಗೌರವ ಮೂಡಿಸುತ್ತದೆ, ಮನಸ್ಸನ್ನು ಚಿಂತನೆಗೆ ಹಚ್ಚುತ್ತದೆ. ಈ ಬಂದ್ ಮಾಡುವವರಲ್ಲಿ ಎಷ್ಟು ಜನರಿಗೆ ನೈತಿಕವಾಗಿ ಉನ್ನತಸ್ಥರದ ಪ್ರತಿಭಟನೆ ಮಾಡಲು ಸಾಧ್ಯವಿದೆ? ತಮ್ಮ ಸಮಸ್ಯೆಗಳ ಪರಿಹಾರಕ್ಕೆ ಇತರರ  ಜೀವ/ಸೊತ್ತುಗಳನ್ನು ಪಣಕ್ಕಿಡುವುದು ಸರಿಯೇ ಅಥವಾ ತಾವೇ ಒಂದಷ್ಟು ಹೊತ್ತು ಊಟ ಬಿಟ್ಟು ಪರಿಣಾಮಕಾರಿಯಾಗಿ ಪ್ರತಿಭಟಿಸುವುದು ಉತ್ತಮವೋ? ನೀವೇ ಆಲೋಚನೆ ಮಾಡಿ ನೋಡಿ.

ಬಂದ್‍ನ ಹಿಂದೆ ಇರುವ ಕಾರಣದ ಬಗ್ಗೆ

ಇದನ್ನು ನಾನು ಬೇಕೆಂದೇ ಕೊನೆಯದಾಗಿ ಹಾಗೂ ಚಿಕ್ಕದಾಗಿ ಬರೆಯುತ್ತಿದ್ದೇನೆ. ಯಾಕೆಂದರೆ ಬಂದ್‍ನ ಮೇಲೆ ಇರುವ ಆಕ್ರೋಶ ಈ ಕಳಕಳಿಯನ್ನು ಮೀರುತ್ತದೆ, ಅದಕ್ಕೆ. ಹಾಗೆಂದು ಕಾರ್ಮಿಕರ ಬಗ್ಗೆ ಕಳಕಳಿ ಇಲ್ಲ ಎಂದಲ್ಲ, ಖಂಡಿತವಾಗಿಯೂ ಇದೆ.

- ಕಳೆದ ೨-೩ ವರ್ಷಗಳಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಗಗನಕ್ಕೇರಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ, ಆದರೆ ವೇತನಗಳು ಹಾಗೆ ಹೆಚ್ಚಾಗಲಿಲ್ಲ (ಹಾಗೆಂದು ವೇತನ ಕೊಡುವವರ ಆದಾಯ ಅಭೂತಪೂರ್ವವಾಗಿ ಹೆಚ್ಚಾಗಿದೆಯೇ ಅದೂ ಇಲ್ಲ, ಅದು ಬೇರೆ ಸಂಗತಿ)
- ದಿನಗೂಲಿ ಇತ್ಯಾದಿ ಸಿಕ್ಕಾಪಟ್ಟೆ ಹೆಚ್ಚಾದಲ್ಲಿ ಕಾರ್ಮಿಕರು ಅದನ್ನು ಉಪಯೋಗಿಸಿಕೊಂಡು ಸುಖವಾಗಿದ್ದಾರೆಯೇ? ಅನೇಕ ಕಡೆ ಕೆಲಸ ಮಾಡುವ ದಿನಗಳನ್ನೇ ಕುಂಠಿತಗೊಳಿಸಿ ಒಟ್ಟಾರೆ ಕಡಿಮೆ ಆದಾಯದಲ್ಲಿಯೇ ಉದಾಸೀನದಿಂದ ಕಾಲ ಕಳೆಯುವ ಮನೋಭಾವವೂ ಕಂಡುಬರುತ್ತಿದೆ. ಇದಕ್ಕೇನು ಪರಿಹಾರ?
- ಕಾರ್ಮಿಕರು/ಕೆಲಸಗಾರರು ನಿಜಕ್ಕೂ ಎಷ್ಟು ನಿಷ್ಠೆಯಿಂದ ಕೆಲಸ ಮಾಡುತ್ತಾರೆ? ತಮ್ಮ ಕೌಶಲ್ಯವನ್ನು ಕಾಲಕಾಲಕ್ಕೆ ಬಲಪಡಿಸಿಕೊಳ್ಳುವತ್ತ ಗಮನ ಹರಿಸುತ್ತಾರೆ? ಹೆಚ್ಚು ಸಂಬಳಕ್ಕೆ ಒತ್ತಾಯಿಸುವವರು ಉದ್ಯಮರಂಗಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನೂ ಗಮನಿಸಬೇಕು, ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಂದರ್ಭಗಳು ಬಹಳಷ್ಟಿವೆ ಎಂದು ನನಗೆ ತೋರುತ್ತದೆ.

ಕಾರ್ಮಿಕರ ಸೇವೆಗಳನ್ನು ಹೇಗೆ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು, ಅವರ ಜೀವನವೂ ಹೇಗೆ ಸಂತೋಷ-ತೃಪ್ತಿ-ಆರೋಗ್ಯ ಇತ್ಯಾದಿಗಳಿಂದ ಕೂಡಿರಬೇಕು ಎಂಬುದರ ಬಗ್ಗೆ ಹೆಚ್ಚಿನ ಚಿಂತನೆ ನಡೆಯಬೇಕು ಎನ್ನುವುದರ ಬಗ್ಗೆ ಯಾವುದೇ ಸಂಶಯವಿಲ್ಲ. ಆದರೆ ಇದನ್ನು ಸಾಧಿಸುವ ನಿಟ್ಟಿನಲ್ಲಿ (ಕೋರಿಕೆ, ವಿನಂತಿ, ಮಾತುಕತೆಗಳು ಫಲಕಾರಿಯಾಗದಿದ್ದರೂ ಕೂಡ) ಬಂದ್ ಖಂಡಿತವಾಗಿಯೂ ಉತ್ತರವಲ್ಲ.

2 comments:

Anonymous said...

ಕನಕ ಜಯಂತಿ, ಅಂಬೇದ್ಕರ್ ಜಯಂತಿ, ವಾಲ್ಮೀಕಿ ಜಯಂತಿ ಎಂಬಿತ್ಯಾದಿ ‘ಶಾಸನಾತ್ಮಕ’ ಬಂದ್‍ಗಳ ಪಾವಿತ್ರ್ಯಕ್ಕೇನಂತೀರಿ! (ಇದು ಪ್ರಶ್ನೆಯಲ್ಲ, ಉತ್ತರ ಎಲ್ಲರಿಗೂ ಗೊತ್ತಿದ್ದದ್ದೇ) ನಾನಂತೂ ಹೆಚ್ಚಿನ ಆದಿತ್ಯವಾರದ ಕೆಲಸ ನಡೆಸಿ, ಸಂಜೆಗೆ ಕಾರು ಭರ್ತಿ ಮಾಡಿ ಮುದ್ರಾಡಿಯ ರಾಷ್ಟ್ರೀಯ ನಾಟಕೋತ್ಸವಕ್ಕೆ ಹೋದೆ - ಏನು ಹುಚ್ಚೂರೀ ಯಾಕ್ ಹಿಂಗಾಡ್ತೀರ್ರೀ
ಅಶೋಕವರ್ಧನ

Anonymous said...

ಅಶೋಕವರ್ಧನರ ಒಕ್ಕಣೆಗೆ ನನ್ನ ಪೂರ್ತಿ ಸಹಮತವಿದೆ. ಆಚರಿಸುವವರು ಆಚರಿಸಲಿ, ಉಳಿದವರಿಗೆ ಹೇರಿಕೆಯೇಕೆ?

ರಾಜೇಶ

Post a Comment