About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Saturday, September 1, 2001

ನಿರ್ಣಯ


ಸೆಪ್ಟೆಂಬರ್ ೨೦೦೧,
ಮೈಸೂರು.
ನಿರ್ಣಯ
*********
ಕಳೆದ ಕೆಲವು ದಿನಗಳಿಂದ ಶಂಭುಭಟ್ಟರು ಸಿದ್ಧಪ್ಪನನ್ನು ಗಮನಿಸುತ್ತಲೇ ಇದ್ದರು. ಅವನಲ್ಲಿ ಏನೋ ಬದಲಾವಣೆ ಕಂಡುಬರುತ್ತಿತ್ತು. ಸದಾ ನಗುಮುಖದಿಂದ ಇರುತ್ತಿದ್ದ ಅವನ ಮುಖ ಇತ್ತೀಚೆಗೆ ಮ್ಲಾನವಾಗಿತ್ತು. ಹೆಂಡತಿಯಲ್ಲಿ ಈ ಬಗ್ಗೆ ಕೇಳಿದಾಗ ಸರಿಯಾದ ಉತ್ತರ ಅವರಿಗೆ ಸಿಕ್ಕಿರಲಿಲ್ಲ. ಕೊನೆಗೆ ತಡೆಯಲಾರದೆ ಸಿದ್ಧಪ್ಪನಲ್ಲಿಯೇ "ಏನು ಸಿದ್ಧಾ, ಏನೋ ಚಿಂತೆ ತಲೆಗೆ ಹಚ್ಚಿಕೊಂಡಂತಿದೆ. ಹೇಳು ಪರವಾಗಿಲ್ಲ" ಎಂದು ಕೇಳಿಯೇಬಿಟ್ಟರು. ಆಗ ಅವನು ಮುಖದಲ್ಲಿ ಇಲ್ಲದ ನಗು ತಂದುಕೊಂಡು "ಏನೂ ಇಲ್ಲ ಭಟ್ಟರೇ, ನೀವೇನೂ ಚಿಂತೆ ಮಾಡುವ ಅಗತ್ಯವಿಲ್ಲ. ಕೆಲವು ದಿನಗಳಿಂದ ಸಣ್ಣಗೆ ತಲೆ ನೋಯುತ್ತಾ ಇದೆ ಅಷ್ಟೆ. ತಾನೇ ವಾಸಿಯಾಗುತ್ತದೆ ಬಿಡಿ" ಎಂದು ಹೇಳಿ ಅಲ್ಲಿಂದ ಜಾರಿದನು. ಭಟ್ಟರಿಗೇಕೋ ಸಮಾಧಾನವಾಗಲಿಲ್ಲ, ಆದರೂ ಇನ್ನೇನೋ ಕೇಳಬೇಕೆಂದುಕೊಂಡಿದ್ದವರು ಅಲ್ಲಿಗೇ ಸುಮ್ಮನಾದರು.

ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು. ಶಂಭುಭಟ್ಟರು ಇನ್ನೂ ನೌಕರಿಗೆ ಸೇರಿದ ಶುರು. ಆಗ ಇಪ್ಪತ್ತಾರನೇ ವರ್ಷಕ್ಕೆ ಭಟ್ಟರು ಕಾಲಿಟ್ಟಿದ್ದರು. ಭಟ್ಟರ ಹಿನ್ನೆಲೆಯು ಅವರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಾಕಷ್ಟು ಮಹತ್ವ ವಹಿಸಿತ್ತು. ತಾಯಿಯಿಲ್ಲದೆ ಬೆಳೆದ ಅವರಿಗೆ ತಂದೆಯೇ ಇಬ್ಬರ ಜವಾಬ್ದಾರಿಯನ್ನೂ ವಹಿಸಿಕೊಂಡು ಸಲಹಿ ಬೆಳೆಸಿದ್ದರು. ಹಣ, ವಯಸ್ಸು ಎಲ್ಲವೂ ಚೆನ್ನಾಗಿದ್ದರೂ ಮರುಮದುವೆಯ ಮಾತೆತ್ತದೆ ಜೀವಿಸಿದ ತಂದೆಯಿಂದ ಶಂಭುಭಟ್ಟರು ಸಹನೆ ಮತ್ತು ಬುದ್ಧಿವಂತಿಕೆಗಳನ್ನು ಬಳುವಳಿಯಾಗಿ ಪಡೆದಿದ್ದರು. ಆ ಪ್ರೀತಿಯ ತಂದೆಯೂ ಕ್ಯಾನ್ಸರ್‍‍ನೊಂದಿಗೆ ಹೋರಾಡುತ್ತಾ ತನ್ನನ್ನು ತಬ್ಬಲಿಯಾಗಿಸಿ ಹೋದಾಗ ಆಗಿನ್ನೂ ಹದಿನೈದು ತುಂಬಿರದ ಭಟ್ಟರು ಏಕಾಂಗಿಯಾಗಿಬಿಟ್ಟರು. ಅಲ್ಲಿಯವರೆಗೆ ತುಂಟತನದಿಂದ ತುಂಬಿದ ಅವರ ವ್ಯಕ್ತಿತ್ವ ಒಮ್ಮೆಲೇ ಗಂಭೀರವಾಗಿಬಿಟ್ಟಿತು. ಪಿತ್ರಾರ್ಜಿತವಾಗಿ ಬಂದ ಆಸ್ತಿಯು ಬೇಕಾದಷ್ಟು ಇದ್ದುದರಿಂದ ಏನೂ ತೊಂದರೆಯಿಲ್ಲದೆ ಓದು ಮುಂದುವರೆಸಿ ಅದಾದ ಮೇಲೆ ಸ್ವಂತ ಊರಿನಲ್ಲಿಯೇ ಕೆಲಸಕ್ಕೆ ಸೇರಿಕೊಂಡರು. ಹಣಕ್ಕೇನೂ ಕೊರತೆಯಿಲ್ಲದಿದ್ದರೂ ಏಕಾಂಗಿತನವನ್ನು ಕಳೆಯುವಲ್ಲಿ ಇದು ಸಹಾಯಕಾರಿಯಾಗಿತ್ತು. ಅಲ್ಲದೆ ಮನೆಯಲ್ಲಿಯೇ ಕುಳಿತು ಆಸ್ತಿ ನೋಡಿಕೊಂಡಿರಲು ಅವರಿಗೆ ಇಷ್ಟವಿರಲಿಲ್ಲ. ಅದರ ಜೊತೆಗೇ ಕೆಲಸಕ್ಕೂ ಸೇರಿದರೆ ಹೊರಪ್ರಪಂಚ ಮತ್ತದರ ಬೆಳವಣಿಗೆಯಿಂದ ಹೊರಗುಳಿಯುವುದಿಲ್ಲ ಎಂದೂ ಅವರು ವಿಚಾರ ಮಾಡಿದ್ದರು.

ಅದೊಂದು ದಿನ ಭಾನುವಾರವಾಗಿದ್ದುದರಿಂದ ಸ್ವಲ್ಪ ತಡವಾಗಿ ಎದ್ದ ಭಟ್ಟರು ಎಲ್ಲಾ ರಜಾದಿನಗಳಂತೆ ಗೇಟಿನ ಬಳಿ ಆರಾಮಕುರ್ಚಿಯಲ್ಲಿ ಕುಳಿತರು. ಆ ಆರಾಮಕುರ್ಚಿ ಅವರ ತಂದೆ ಉಪಯೋಗಿಸುತ್ತಿದ್ದರು. ಅದರಿಂದಲೇ ಶಂಭುಭಟ್ಟರಿಗೂ ಅದರ ಮೇಲೆ ಬಹಳ ಪ್ರೀತಿ. ರಜಾದಿನಗಳಂದು ತಾವೇ ಬೆಳೆಸಿದ ಸುಂದರವಾದ ಹೂತೋಟದ ಬಳಿ ಅದರಲ್ಲಿ ಕುಳಿತು ಯಾವುದಾದರೂ ಕಾದಂಬರಿಯನ್ನು ಓದುವುದು ಅವರ ಪ್ರಿಯ ಹವ್ಯಾಸಗಳಲ್ಲೊಂದು. ಆ ದಿನ ಹೀಗೇ ಕುಳಿತಿರಲು ಒಬ್ಬ ಮಧ್ಯವಯಸ್ಕನು ಒಳಗೆ ಬಂದನು. ಬಂದವನೇ "ಸ್ವಾಮಿ, ನಾನು ಸಿದ್ಧಪ್ಪಾಂತ. ಏನಾದರೊಂದು ಕೆಲಸದ ನಿರೀಕ್ಷೆಯಲ್ಲಿ ನಿಮ್ಮಲ್ಲಿಗೆ ಬಂದಿದ್ದೇನೆ. ನನಗೆ ಎರಡು ಹೊತ್ತಿನ ಗಂಜಿ, ಹಳೇ ಬಟ್ಟೆ ಕೊಟ್ಟರೆ ಇಲ್ಲೇ ಮೂಲೆಯಲ್ಲಿ ಬಿದ್ದಿರುತ್ತೇನೆ" ಎಂದು ದೀನನಾಗಿ ನುಡಿದ. ಅಡುಗೆ ಮಾಡಲು ಬರುವುದೇ ಎಂದು ಕೇಳಿದಾಗ ಸಕಾರತ್ಮಕವಾದ ಉತ್ತರ ನೀಡಿದ ಅವನನ್ನು "ಇಷ್ಟು ದಿನ ಎಲ್ಲಿದ್ದೆ? ಏನು ಮಾಡುತ್ತಿದ್ದೆ?" ಎಂದು ಭಟ್ಟರು ಕೇಳಿದಾಗ "ಇದೊಂದು ವಿಷಯದಲ್ಲಿ ನನ್ನನ್ನು ಕ್ಷಮಿಸಿಬಿಡಿ,ನನ್ನ ಹಳೆಯದೆಲ್ಲವನ್ನೂ ಮರೆಯುವ ಪ್ರಯತ್ನವನ್ನು ಮಾಡುವ ನನ್ನಲ್ಲಿ ಅದನ್ನು ಕೇಳಬೇಡಿ. ಆದರೆ ಒಂದಂತೂ ಹೇಳಬಲ್ಲೆ ನಾನು ವಂಚಕನಲ್ಲ" ಎಂದು ಹೇಳಿದನು. ಅವನ ಮಾತಿನಲ್ಲಿ ಪ್ರಾಮಾಣಿಕತೆ ಗೋಚರಿಸಿದ ಭಟ್ಟರು ಮರುಮಾತಾಡದೆ ಅವನನ್ನು ಅಡುಗೆಯವನನ್ನಾಗಿ ಮಾಡಿಕೊಂಡರು. ಶಿಸ್ತುಬದ್ಧವಾದ ಜೀವನವನ್ನು ನಡೆಸುತ್ತಿದ್ದ ಅವರು ಅದಕ್ಕೂ ಮೊದಲು ತಾವೇ ಅಡುಗೆ ಮಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಕೆಲಸದ ಹೊರೆ ಜಾಸ್ತಿಯಾಗುತ್ತಾ ಬಂದಂತೆ ಅವರಿಗೆ ಎಲ್ಲದಕ್ಕೂ ಸಮಯ ಸಿಗುತ್ತಿರಲಿಲ್ಲ. ಮದುವೆಯಾಗುವ ತನಕ ಹೇಗೋ ತಳ್ಳಿಕೊಂಡು ಹೋಗುವುದೆಂದು ನಿರ್ಧರಿಸಿದ್ದ ಭಟ್ಟರ ಜೀವನದಲ್ಲಿ ಹೊಸ ವ್ಯಕ್ತಿಯ ಆಗಮನವು ಮದುವೆಯ ಮೊದಲೇ ಆಗಿಬಿಟ್ಟಿತು. ತನ್ನ ಅಚ್ಚುಕಟ್ಟಿನ ಕೆಲಸಕಾರ್ಯಗಳಿಂದ ಅವನು ನಿಧಾನವಾಗಿ ಭಟ್ಟರ ಗಮನ ಸೆಳೆಯತೊಡಗಿದ್ದ. ಈ ಮಧ್ಯೆ ಭಟ್ಟರ ಮದುವೆಯೂ ಆಯಿತು. ಗುಣವಂತೆಯಾದ ಭಟ್ಟರ ಹೆಂಡತಿಯೂ ಅವರಂತೆಯೇ ಮೃದುಹೃದಯಿಯಾಗಿದ್ದರು. ಸಿದ್ಧಪ್ಪನನ್ನು ಆಕೆ ಗೌರವದಿಂದಲೇ ನಡೆಸಿಕೊಂಡರು. ಈ ದಂಪತಿಗಳಿಗೆ ಜನಿಸಿದ ಇಬ್ಬರೂ ಗಂಡುಮಕ್ಕಳು ಸಿದ್ಧಪ್ಪನನ್ನು ತುಂಬಾ ಹಚ್ಚಿಕೊಂಡರು. ಹೀಗೆ ಸಿದ್ಧಪ್ಪನು ಅವರ ಸಂಸಾರದಲ್ಲಿ ಒಂದು ಅವಿಭಾಜ್ಯ ಅಂಗವಾಗಿಬಿಟ್ಟನು.

ಯಾವ ದೊಡ್ಡ ಏರಿಳಿತಗಳಿಲ್ಲದೆ ಸಂಸಾರ ರಥವು ಕಾಲಪ್ರವಾಹದಲ್ಲಿ ಮುಂದೆ ಸಾಗುತ್ತಿದ್ದಂತೆ ಭಟ್ಟರ ನಿವೃತ್ತಿಯ ಕಾಲವೂ ಬಂದುಬಿಟ್ಟಿತು. ನಿವೃತ್ತಿಯ ಬಳಿಕ ಕಾಲ ಕಳೆಯುವುದು ಕಷ್ಟವಾಗಬಾರದೆಂಬ ಉದ್ದೇಶದಿಂದ ಭಟ್ಟರು ಒಂದಷ್ಟು ಹೊಸ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಬಗ್ಗೆ ಮೊದಲೇ ವಿಚಾರಮಾಡಿದ್ದರು. ಮಾನಸಿಕವಾಗಿ ಸಿದ್ಧರಿದ್ದ ಭಟ್ಟರು ಜೀವನದ ಹೊಸ ಘಟ್ಟವನ್ನೂ ಆಸ್ವಾದಿಸತೊಡಗಿದರು. ಈಗ ಸಿದ್ಧಪ್ಪನಿಗೂ ವಯಸ್ಸಾಗಿತ್ತು. ಹೆಚ್ಚು ಕೆಲಸ ಮಾಡಲಾಗುತ್ತಿರಲಿಲ್ಲ. ಭಟ್ಟರ ಗಂಡುಮಕ್ಕಳಿಬ್ಬರೂ ಬೇರೆ ಊರುಗಳಲ್ಲಿದ್ದುದರಿಂದ ಮನೆಯಲ್ಲಿ ಕೆಲಸವೂ ಕಡಿಮೆಯಾಗಿತ್ತು. ಅವರಿಬ್ಬರೂ ರಜಾದಿನಗಳಲ್ಲಿ ಮನೆಗೆ ಬಂದಾಗ ಮನೆಗೆಲ್ಲಾ ಹೊಸ ಕಳೆ ಬರುತ್ತಿತ್ತು. ಅವರು ಯಾವಾಗಲೂ ಇಲ್ಲದಿರುವುದರಿಂದ ಭಟ್ಟರಿಗೂ ಸಿದ್ಧಪ್ಪನ ಜೊತೆ ಹರಟೆ ಹೊಡೆಯುವುದು ಪ್ರಿಯ ಹವ್ಯಾಸಗಳಲ್ಲೊಂದಾಗಿತ್ತು. ಯಾವಾಗಲೂ ಪ್ರಶಾಂತವಾದ ಕಳೆಯನ್ನು ಅವನ ಮುಖದಲ್ಲಿ ನೋಡಿ ಅಭ್ಯಾಸವಾಗಿದ್ದ ಭಟ್ಟರಿಗೆ ಸಿದ್ಧಪ್ಪನ ಈ ಹೊಸ ಅವತಾರ ಇಷ್ಟವಾಗಲಿಲ್ಲ.

ಒಂದು ದಿನ ಮಕ್ಕಳಿಬ್ಬರೂ ಮನೆಗೆ ಬಂದ ಸಂದರ್ಭ, ರಾತ್ರಿಯಿಡೀ ಅವರ ಜೊತೆ ಮಾತಾಡುತ್ತಾ ಕಾಲಕಳೆದ ಭಟ್ಟರನ್ನು ಅವರ ಪತ್ನಿ ಬೆಳಿಗ್ಗೆ ಬೇಗನೆ ಏಳಿಸಿದರು. "ಸಿದ್ಧಪ್ಪನಿಗೆ ತುಂಬಾ ಜ್ವರವಂತೆ ಡಾಕ್ಟರಲ್ಲಿಗೆ ಕರೆದುಕೊಂಡು ಹೋಗಿ" ಎಂದು ಅವರು ಭಟ್ಟರಿಗೆ ಹೇಳಿದರು. ಗಡಿಬಿಡಿಯಿಂದಲೇ ಹೊರಟು ಸಿದ್ಧಪ್ಪನನ್ನು ಕರೆದುಕೊಂಡು ಅವರು ಡಾಕ್ಟರಲ್ಲಿಗೆ ಹೋದರು. ‘ಒಮ್ಮೆ ಎಲ್ಲಾರೀತಿಯ ಪರೀಕ್ಷೆಗಳನ್ನೂ ಮಾಡಿಬಿಡೋಣ, ವಯಸ್ಸಾದ ಮೇಲೆ ಏನೇನೋ ತೊಂದರೆಗಳಿರುತ್ತವೆ’ ಎಂದು ಡಾಕ್ಟರು ಹೇಳಿದಾಗ ಭಟ್ಟರು ಹ್ಞೂಂಗುಟ್ಟಿದರು. ಆ ದಿನಕ್ಕೆ ಮಾತ್ರೆಗಳನ್ನು ಕೊಟ್ಟ ಡಾಕ್ಟರು ಭಟ್ಟರಿಗೆ ಮಾರನೆಯ ದಿನ ಬಂದು ರಿಪೋರ್ಟ್‍ಗಳನ್ನು ತೆಗೆದುಕೊಂಡು ಹೊಗಲು ಹೇಳಿದರು. ಅಂತೆಯೇ ಮರುದಿನ ಅಲ್ಲಿಗೆ ಹೋಗಿಬಂದ ಭಟ್ಟರ ಮುಖವು ಕಳೆಗುಂದಿತ್ತು. ಭಟ್ಟರ ಹೆಂಡತಿ,ಮಕ್ಕಳು ಕೇಳಿದಾಗ ಸಂಕ್ಷಿಪ್ತವಾಗಿ ವಿಷಯವನ್ನು ಅವರಿಗೆ ತಿಳಿಸಿ ಅವರ ಪ್ರತಿಕ್ರಿಯೆಗೂ ಕಾಯದೆ ಸಿದ್ಧಪ್ಪನ ಕೋಣೆಗೆ ಹೋದರು. ಯಾವ ದುರಭ್ಯಾಸವೂ ಇಲ್ಲದ ಸಿದ್ಧಪ್ಪನಿಗೆ ಈ ರೋಗ ಹೇಗೆ ಬಂತು ಎಂದು ಚಿಂತಿಸಿದ ಭಟ್ಟರಿಗೆ ಎರಡು ವರ್ಷಗಳ ಹಿಂದೆ ಹಿತ್ತಿಲಿನಲ್ಲಿ ಅವನು ಬಿದ್ದು ತೀವ್ರವಾದ ರಕ್ತಸ್ರಾವವಾದಾಗ ಅವನಿಗೆ ರಕ್ತ ಕೊಟ್ಟಿದ್ದು ನೆನಪಾಯಿತು. ಅವನ ಬಳಿ ಕುಳಿತ ಭಟ್ಟರು "ಇದು ಮೊದಲೇ ನಿನಗೆ ಗೊತ್ತಿತ್ತೇನೋ ಸಿದ್ಧಪ್ಪಾ?" ಎಂದು ಕೇಳಿದರು. "ಸ್ವಲ್ಪ ದಿನಗಳ ಹಿಂದೆ ಪೇಟೆಗೆ ಹೋಗಿದ್ದಾಗ ಒಬ್ಬನಿಗೆ ತೀವ್ರ ಅಫಘಾತವಾಗಿತ್ತು. ರಕ್ತ ತುರ್ತಾಗಿ ಬೇಕಿದ್ದ ಅವನಿಗೆ ನಾನು ಕೊಡಲು ಮುಂದಾಗಿದ್ದೆ. ಆಗ ರಕ್ತ ಪರೀಕ್ಷೆ ಮಾಡಿದಾಗ ಇದು ತಿಳಿಯಿತು. ನಿಮಗೆ ಹೇಳಬೇಕೆಂದು ಪ್ರಯತ್ನವೇನೋ ಮಾಡಿದೆ, ಆದರೆ ಆಗಲಿಲ್ಲ. ಈಗ ಎಲ್ಲವೂ ಗೊತ್ತಾದ ಪಕ್ಷದಲ್ಲಿ ನಾನು ಇಲ್ಲಿರುವುದು ಸರಿಯಲ್ಲ, ನಾನು ಹೊರಟು ಬಿಡುತ್ತೇನೆ" ಎಂದು ಸಿದ್ಧಪ್ಪ ಹೇಳಿದ. "ಎಲ್ಲಿಗೆ?" ಎಂದು ಭಟ್ಟರು ಕೇಳಿದಾಗ ಸಿದ್ಧಪ್ಪನಿಗೆ ದುಃಖ ಬಂದು ಅದನ್ನು ಮರೆಮಾಚಲು ವ್ಯರ್ಥಪ್ರಯತ್ನವನ್ನು ಮಾಡುತ್ತಾ "ಯಾವುದಾದರೂ ವೃದ್ಧಾಶ್ರಮಕ್ಕೆ ಹೋಗುತ್ತೇನೆ" ಎಂದು ಹೇಳಿದ. ಇದನ್ನು ಕೇಳಿದ ಭಟ್ಟರು "ಏಕೆ ಇದು ನಿನ್ನ ಮನೆಯಲ್ಲವೇನು?" ಎಂದು ಪ್ರಶ್ನಿಸಿದರು. "ತುಂಬಾ ವರ್ಷಗಳಿಂದ ಈ ಮನೆಯಲ್ಲಿದ್ದ ಮಾತ್ರಕ್ಕೆ ನನಗೇನೂ ಹಕ್ಕು ಬರಲಿಲ್ಲ. ನಾನು ಗತಿಯಿಲ್ಲದೆ ನಿಮ್ಮಲ್ಲಿ ಆಶ್ರಯ ಬೇಡಿಕೊಂಡು ಬಂದವನು ಮಾತ್ರ. ನನ್ನ ಮೇಲೆ ದಯೆ ತೋರಿಸಿ ಇಷ್ಟು ದಿನ ನನಗೆ ಇಲ್ಲಿ ಇರಲು ಅವಕಾಶ ಕೊಟ್ಟು ಕೆಲವು ಸಂತಸದ ಕ್ಷಣಗಳನ್ನು ನೀಡಿದ್ದಕ್ಕಾಗಿ ನಾನು ಚಿರಋಣಿ. ಆದರೆ ಅದಕ್ಕಿಂತಲೂ ಹೆಚ್ಚಿಗೆ ಏನೂ ಇಲ್ಲ" ಎಂದು ಸಿದ್ಧಪ್ಪ ಉತ್ತರಿಸಿದನು. ಆಗ ಭಟ್ಟರು "ನೋಡು ಸಿದ್ಧಪ್ಪಾ, ಈ ಲೋಕದಲ್ಲಿ ನಾವು ಅಂದುಕೊಂಡಂತೆ ಎಲ್ಲವೂ ನಡೆಯುವುದಿಲ್ಲ. ನಮಗೆ ಮಿಗಿಲಾದ ಒಂದು ಶಕ್ತಿ ಎಲ್ಲವನ್ನೂ ನಿಯಂತ್ರಿಸುತ್ತದೆ ಎಂದು ನಾನು ನಂಬುತ್ತೇನೆ. ಈಗ ನಿನ್ನ ಸ್ಥಿತಿಯೇ ಒಂದು ಉದಾಹರಣೆ. ಈಗ ಅದೇ ಶಕ್ತಿಯು ನನ್ನ ಅಂತರಾತ್ಮದ ಮೂಲಕ ಹೇಳುತ್ತಿದೆ ನಿನ್ನನ್ನು ಈ ಸ್ಥಿತಿಯಲ್ಲಿ ಕೈಬಿಡಬಾರದು ಎಂದು. ನನ್ನ ಋಣ ನಿನ್ನಲ್ಲಿ ಇದೆ ಎಂದು ನೀನು ಹೇಳುವೆಯಲ್ಲಾ, ಹಾಗಾದರೆ ಆ ಹಕ್ಕಿನ ಬಲದಿಂದ ಹೇಳುತ್ತಿದ್ದೇನೆ-ನೀನು ಇಲ್ಲೇ ಇರು ಎಂದು. ನೀನು ನಮ್ಮ ಮನೆಯಲ್ಲಿ ಕೆಲಸದವನಾಗಿ ಉಳಿದಿಲ್ಲ, ಬದಲಾಗಿ ಒಂದು ರೀತಿಯ ಹಕ್ಕಿನ ಸ್ಥಾನವನ್ನು ಗಳಿಸಿರುವೆ." ಎಂದು ಭಟ್ಟರು ತಮ್ಮ ಮಾತು ಮುಗಿಸಿದಾಗ ಹೊರಗಡೆಯಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಅವರ ಹೆಂಡತಿ, ಮಕ್ಕಳು ಒಳಗಡೆ ಬಂದು "ಇದಕ್ಕೆ ನಮ್ಮ ಒಪ್ಪಿಗೆಯೂ ಇದೆ, ನಾವೆಲ್ಲರೂ ನಿನ್ನ ಜೊತೆ ಇದ್ದೇವೆ" ಎಂದು ಹೇಳಿದರು. ಈ ಪ್ರತಿಕ್ರಿಯೆಯನ್ನು ಅಪೇಕ್ಷಿಸಿಯೂ ಇರದ, ನಿರೀಕ್ಷಿಸಿಯೂ ಇರದ ಸಿದ್ಧಪ್ಪನಿಗೆ ಇದನ್ನು ಕೇಳಿ ಗಂಟಲು ತುಂಬಿ ಬಂತು.

ಕೃಷ್ಣ ಶಾಸ್ತ್ರಿ ಸಿ.

0 comments:

Post a Comment