English version: Good Waste Management
English Version: An appeal by a garbage bin in Mangaluru
ತ್ಯಾಜ್ಯ ಉತ್ಪಾದನೆಯನ್ನು ಹೇಗೆ ಕಡಿಮೆ ಮಾಡುವುದು?
ಅಸಮರ್ಪಕ ತ್ಯಾಜ್ಯ ನಿರ್ವಹಣೆ ಎಂಬ ವಿಷಯ ನನಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಆತಂಕ/ಆಸಕ್ತಿ ಹುಟ್ಟಿಸಿದ ವಿಷಯ. ಮನುಷ್ಯನ ಅತಿಯಾಸೆ ಹಾಗೂ ದುಡುಕುತನದಿಂದ ಜಗತ್ತೆಲ್ಲವೂ ಅನೂಹ್ಯ ವೇಗದಲ್ಲಿ ವಿವಿಧ ತ್ಯಾಜ್ಯಗಳಿಂದ ಮಲಿನ/ವಿಷಯುಕ್ತವಾಗುತ್ತಿರುವ ಇಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚು ಗಂಭೀರವಾಗಿ ಆಲೋಚಿಸದೇ ಇರುವವರನ್ನು ಜಾಗೃತಗೊಳಿಸಲು, ಪರಿಸರ-ಪ್ರಾಣಿ-ಪಕ್ಷಿಗಳ ಮೇಲೆ ಮಾಯವಾಗುತ್ತಿರುವ ಕಾಳಜಿ-ಒಲವನ್ನು ಪುನಃ ಮೂಡಿಸಲು ಅನೇಕರು ಪ್ರಯತ್ನ ಮಾಡುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ನನ್ನ ಒಂದು ಕಿರುಪ್ರಯತ್ನ ಈ ಕಿರು ಸಾಕ್ಷ್ಯ ಚಿತ್ರ:
English Version: An appeal by a garbage bin in Mangaluru
ಈ ಸಾಕ್ಷ್ಯ ಚಿತ್ರ ಸಾರುವ ಸಂದೇಶ ಪರಿಣಾಮಕಾರಿಯಾಗಿದೆ, ಉಪಯುಕ್ತವಾಗಿದೆ ಎಂದು ನಿಮಗೆ ಅನಿಸಿದಲ್ಲಿ ದಯವಿಟ್ಟು ಇದನ್ನು ಹೆಚ್ಚಿನ ಜನರೊಡನೆ ಹಂಚಿಕೊಳ್ಳಿ ಎಂದು ವಿನಂತಿ. ಮುಖ್ಯವಾಗಿ ಶಾಲಾ-ಕಾಲೇಜುಗಳಲ್ಲಿ ಕಲಿಯುವ ಮಕ್ಕಳ ಮುಂದೆ ಇದನ್ನು ಸಾದರಪಡಿಸಿ ಎಳೆಯದರಲ್ಲಿಯೇ ಅವರ ಮನಸ್ಸು-ಹೃದಯಗಳಲ್ಲಿ ಇಂತಹ ಕಾಳಜಿಯನ್ನು ಹುಟ್ಟಿಸಲು ಸಾಧ್ಯವಾದರೆ ತುಂಬಾ ಸಂತೋಷ (ಈ ಸಾಕ್ಷ್ಯ ಚಿತ್ರ ಇಂಗ್ಲಿಷಿನಲ್ಲಿಯೂ ಇದೆ ಎಂಬುದನ್ನು ದಯವಿಟ್ಟು ಗಮನಿಸಿ).
ಈ ಸಾಕ್ಷ್ಯ ಚಿತ್ರದ ಪರಿಮಿತಿಯ ಬಗ್ಗೆ ಒಂದು ಮಾತು: ತ್ಯಾಜ್ಯ ನಿರ್ವಹಣೆ ಎಂಬುದು ಒಂದು ವಿಸ್ತಾರವಾದ ವಿಷಯ. ಈ ಸಾಕ್ಷ್ಯ ಚಿತ್ರದಲ್ಲಿ ಒಟ್ಟಾರೆ ಸಮಸ್ಯೆಯ ಕೆಲವು ಮುಖಗಳನ್ನು ಮಾತ್ರ ತೋರಿಸುವ ಪ್ರಯತ್ನ ಮಾಡಲಾಗಿದೆ. ಹತ್ತಾರು ವಿಷಯಗಳನ್ನು ಒಮ್ಮೆಲೇ ಹೇಳಿ ವೀಕ್ಷಕರ ಮನಸ್ಸಿನಲ್ಲಿ ಗೊಂದಲ ಹುಟ್ಟಿಸದೇ ಸರಳವಾಗಿಟ್ಟು ಪರಿಣಾಮಕಾರಿಯಾಗಿಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಮಾತ್ರವಲ್ಲ, ಇಲ್ಲಿ ಕದ್ರಿ ದೇವಸ್ಥಾನ ರಸ್ತೆಯ ತೊಟ್ಟಿ ಒಂದು ನಿಮಿತ್ತ ಮಾತ್ರ. ತೆರೆದ ಕಸದ ಬುಟ್ಟಿಗಳು, ತ್ಯಾಜ್ಯದ ಒಟ್ಟಾರೆ ಅಸಮರ್ಪಕ ನಿರ್ವಹಣೆ ಭಾರತದ ಎಲ್ಲೆಡೆಯೂ ಇರುವ ಸಮಸ್ಯೆ. ಇವೆಲ್ಲದರ ಬಗ್ಗೆ ತುಸು ಹೆಚ್ಚಿನ ಮಾಹಿತಿಯನ್ನು ಕೊಡುವ ಪ್ರಯತ್ನವನ್ನು ಈ ಕೆಳಗೆ ಮಾಡುತ್ತಿದ್ದೇನೆ.
ತ್ಯಾಜ್ಯ ನಿರ್ವಹಣೆ – ಇಂದಿನ ಸ್ಥಿತಿಗತಿ
ಅನೇಕ ನಗರ ಪ್ರದೇಶದವರು ಮಾಡುವ ತ್ಯಾಜ್ಯ ನಿರ್ವಹಣೆ ಎಂದರೆ ಗ್ರಾಮಾಂತರ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ತೆರೆದ ಬಯಲಿನಲ್ಲಿ ರಾಶಿ ಹಾಕುವುದು ಮಾತ್ರ. ಇತ್ತೀಚಿನ ದಿನಗಳಲ್ಲಿ ಅಂತಹ ಗ್ರಾಮದ ಜನರು ಎಚ್ಚೆತ್ತು ಪ್ರತಿಭಟನೆ ಮಾಡಿ ಉತ್ತಮ ತ್ಯಾಜ್ಯ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ಹೇರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ನನ್ನ ಅನಿಸಿಕೆ. ನಗರದೊಳಗೂ ಜಾಗೃತ ನಾಗರೀಕರು Daily Dumpನಂತಹ ಯೋಜನೆಗಳ ಮೂಲಕ ತಮ್ಮ ಕೈಲಾದಷ್ಟು ಮಾಡಲು ಯತ್ನಿಸಲು ತೊಡಗಿರುವುದು ಕೂಡ ಭವಿಷ್ಯತ್ತಿನ ಬಗ್ಗೆ ಹೊಸ ಕನಸುಗಳನ್ನು ಹುಟ್ಟುಹಾಕುತ್ತಿವೆ.
ಹಾಗೆಂದು ಆಡಳಿತಾಧಿಕಾರಿಗಳನ್ನು ಬರೀ ಹೀಗಳೆಯುವುದು ತರವಲ್ಲ, ಆ ದಿಕ್ಕಿನಿಂದಲೂ ಅನೇಕ ಉತ್ತಮ ಹೆಜ್ಜೆಗಳನ್ನು ಕಾಣಬಹುದು. ಭ್ರಷ್ಟಾಚಾರದ ಜೊತೆಗೆ ಜನಸಾಮಾನ್ಯರಿಗೆ ಸಮಷ್ಠಿಯ ಹಿತಚಿಂತನೆ ಇಲ್ಲದಿರುವುದು ಇಂತಹ ಯೋಜನೆಗಳ ಮುಖ್ಯ ಶತ್ರುವೆಂದರೆ ತಪ್ಪಲ್ಲವೇನೋ. ಹೀಗಾಗಿ ಸತತ ಜಾಗೃತೀಕರಣ (ಜಾಗತೀಕರಣ ಅಲ್ಲ :-)) ಪ್ರಯತ್ನಗಳು ಅತಿ ಮುಖ್ಯ. ಒಟ್ಟಿನಲ್ಲಿ ನಾವೆಲ್ಲರೂ ಜೊತೆಜೊತೆಯಾಗಿ ಮುನ್ನಡೆಯೋಣ, ಮುಂದಿನ ಜನಾಂಗಕ್ಕೆ ಈ ಭೂಮಿಯನ್ನು ಸುಂದರ ರೂಪದಲ್ಲಿ ಉಳಿಸಲು ಪ್ರಯತ್ನ ಮಾಡೋಣ ಎಂದು ನನ್ನ ಕೋರಿಕೆ.
ಉತ್ತಮ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಸ್ವರೂಪವೇನು?
· ಮೂಲದಲ್ಲಿಯೇ ವಿಂಗಡನೆಯೊಂದಿಗೆ ಸಂಗ್ರಹಣೆ
· ಕಡಿಮೆ ಸಾಗಾಟ
· ಉತ್ಕೃಷ್ಟ ಮಟ್ಟದ ಪರಿಷ್ಕರಣೆ
ಮೂಲದಲ್ಲಿಯೇ ವಿಂಗಡನೆಯೊಂದಿಗೆ ಸಂಗ್ರಹಣೆ - ಹೀಗೆಂದರೆ ಏನು?
ತ್ಯಾಜ್ಯ ಉತ್ಪಾದನೆಯಾಗುವಲ್ಲಿಯೇ ವಿವಿಧ ರೀತಿಯ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಮುಂದಿನ ನಿರ್ವಹಣೆಗೆ ಕೊಡುವುದು ಅತ್ಯಂತ ಯೋಗ್ಯವಾದ ಹೆಜ್ಜೆ. ಎಲ್ಲವನ್ನೂ ಕಲಸುಮೇಲೋಗರ ಮಾಡಿ ಆಮೇಲೆ ವಿಂಗಡನೆ ಮಾಡುವುದು ಕಷ್ಟಸಾಧ್ಯ, ಅನೇಕ ಸಲ ಅಸಾಧ್ಯ. ಮಿಶ್ರತ್ಯಾಜ್ಯಗಳು ಹೆಚ್ಚಾಗಿ ಏನೂ ಪರಿಷ್ಕರಣೆಗೊಳಗಾಗದೆ ಎಸೆಯಲ್ಪಡುತ್ತವೆ (landfill), ಇದರಿಂದ ಪರಿಸರಕ್ಕೆ ಅನೇಕ ರೀತಿಯ ಹಾನಿಗಳಿವೆ. ಮಾತ್ರವಲ್ಲ, ಅನೇಕ ಕಡೆ ಮಿಶ್ರತ್ಯಾಜ್ಯ ರಾಶಿಯಿಂದ ಉಪಯುಕ್ತ/ಲಾಭದಾಯಕ ವಸ್ತುಗಳನ್ನು ಪ್ರತ್ಯೇಕಿಸಲು ಮುಗ್ಧ ಮಕ್ಕಳೂ ಆರೋಗ್ಯ-ಶಿಕ್ಷಣದ ಪರಿವೆ ಇಲ್ಲದೆ ದುಡಿಯುತ್ತಾರೆ.
ತ್ಯಾಜ್ಯಗಳ ವಿಂಗಡನೆ ಎಂದರೇನು?
· ಸುಲಭವಾಗಿ ತಾನಾಗಿಯೇ ಮರಳಿ ಪ್ರಕೃತಿಯ ಪಂಚಭೂತಗಳಲ್ಲಿ ವಿಲೀನವಾಗುಂಥವು (bio-degradable) ಮತ್ತು ಆಗದೇ ಇರುವಂಥವು
· ವಿಷಕಾರಿಯಾಗಿರುವಂಥವು ಮತ್ತು ಅಲ್ಲದೇ ಇರುವಂಥವು
· ಪರಿಷ್ಕರಣೆಯಿಂದ ಒಳಿತುಂಟಾಗುವಂಥವು ಮತ್ತು ಆಗದೇ ಇರುವಂಥವು
ಹೀಗೆ ತ್ಯಾಜ್ಯಗಳನ್ನು ಹಲವು ರೀತಿಯಲ್ಲಿ ವಿಂಗಡಿಸಬಹುದು. ಆದರೆ ಜನಸಾಮಾನ್ಯರ ದೃಷ್ಟಿಕೋನ, ಪರಿಣತಿ, ಪ್ರಾಯೋಗಿಕತೆ ಇತ್ಯಾದಿಗಳನ್ನು ಗಮನಿಸಿ ಮನೆ-ಮನೆಗಳಲ್ಲಿ* ಈ ಕೆಳಗಿನಂತೆ ತ್ಯಾಜ್ಯಗಳನ್ನು ವಿಂಗಡಿಸಿ ಸಂಗ್ರಹಿಸಬಹುದು:
· ಘನ ತ್ಯಾಜ್ಯಗಳು
· ಆಹಾರ ಮತ್ತಿತರ ಸಸ್ಯ/ಪ್ರಾಣಿಮೂಲದ ತ್ಯಾಜ್ಯಗಳು
· ರಾಸಾಯನಿಕಗಳನ್ನೊಳಗಂಡ ತ್ಯಾಜ್ಯಗಳು (ಉದಾ: ಇಲೆಕ್ಟ್ರಾನಿಕ್ ಹಾಗೂ ಇಲೆಕ್ಟ್ರಿಕಲ್ ಉಪಕರಣಗಳು)
· ಇತರೆ ತ್ಯಾಜ್ಯಗಳು
* ಕಾರ್ಖಾನೆ ಮತ್ತಿತರ ಉತ್ಪಾದನಾ ಕೇಂದ್ರಗಳಲ್ಲಿ ಅವರು ಬಳಸುವ ವಸ್ತುಗಳನ್ನಾಧರಿಸಿ ವಿಂಗಡನೆ, ಸಾಗಾಟ, ಪರಿಷ್ಕರಣೆಯ ಯೋಜನೆಗಳನ್ನು ಮಾಡಬೇಕು. ಇದನ್ನು ಈ ಲೇಖನದ ವ್ಯಾಪ್ತಿಯಿಂದ ಹೊರಗಿಟ್ಟಿದ್ದೇನೆ.
ಘನ ತ್ಯಾಜ್ಯಗಳಲ್ಲಿ ಈ ಕೆಳಗಿನವುಗಳನ್ನು ಮೂಲದಲ್ಲಿಯೇ ಪ್ರತ್ಯೇಕಗೊಳಿಸಿದರೆ ಮತ್ತೂ ಉತ್ತಮ:
· ಕಾಗದ
· ಗಾಜು
· ಲೋಹಗಳು
· ಪ್ಲಾಸ್ಟಿಕ್
ತ್ಯಾಜ್ಯದಿಂದ ಹಣ!
ನೀವು ತ್ಯಾಜ್ಯವನ್ನು ಹಣ ಕೊಟ್ಟು ಹೊರಸಾಗಿಸುತ್ತಿದ್ದೀರಾ? ಅದರ ಬದಲು ತ್ಯಾಜ್ಯದಿಂದ ಹಣ ಸಂಪಾದಿಸಿದರೆ ಹೇಗೆ? ಹಳೇ ಲೋಹದ ವಸ್ತುಗಳು, ವಾರ್ತಾಪತ್ರಿಕೆ, ಹಾಲಿನ ಪ್ಯಾಕೆಟ್, ಗಾಜಿನ ಬಾಟಲಿಗಳು ಇತ್ಯಾದಿಗಳನ್ನು ರದ್ದಿಯವರಿಗೆ ಕೊಟ್ಟು ದುಡ್ಡು ಪಡೆಯುವುದನ್ನು ನೀವು ನೋಡಿರಬಹುದು, ಕೇಳಿರಬಹುದು. ಆದರೆ ಇತ್ತೀಚೆಗೆ ಆಹಾರ ತ್ಯಾಜ್ಯಗಳೂ ಇದೇ ವಿಭಾಗಕ್ಕೆ ಸೇರತೊಡಗಿದೆ, ಯಾಕೆಂದರೆ ಅವುಗಳಿಂದ ಶಕ್ತಿಯನ್ನು, ಉತ್ತಮ ಗೊಬ್ಬರವನ್ನು ಪಡೆಯಬಹುದು.
ಉತ್ಕೃಷ್ಟ ಮಟ್ಟದ ಪರಿಷ್ಕರಣೆ
ತ್ಯಾಜ್ಯ ನಿರ್ವಹಣೆಯ ಕೊನೆಯ ಅಂಗವಾದ ‘ಉತ್ಕೃಷ್ಟ ಮಟ್ಟದ ಪರಿಷ್ಕರಣೆ’ ತ್ಯಾಜ್ಯ ನಿರ್ವಹಣೆಯ ಬಹುಮುಖ್ಯ ಅಂಶ, ಉಳಿದವು ಬೆಂಬಲಿಸುವ ಅಂಶಗಳು (supporting factors). ಪರಿಷ್ಕರಣೆಯನ್ನು ಮತ್ತೂ ವಿಶ್ಲೇಷಿಸಿದಾಗ ಈ ಕೆಳಗಿನ ಅಂಶಗಳನ್ನೊಳಗೊಂಡಿರುವುದನ್ನು ಕಾಣಬಹುದು:
· ಮರುಬಳಕೆಯಾಗಬಲ್ಲ ಪದಾರ್ಥಗಳನ್ನು ಪ್ರತ್ಯೇಕಗೊಳಿಸುವುದು, ಉಪಯೋಗಿಸುವುದು (Recycle)
· ಮೇಲಿನ ಪ್ರಕ್ರಿಯೆಯಲ್ಲಿ ತ್ಯಾಜ್ಯದಲ್ಲಿ ಅಡಕವಾಗಿರುವ ‘ಶಕ್ತಿ’ಯನ್ನು ಸಾಧ್ಯವಾದಷ್ಟೂ ಪಡೆಯುವುದು ಕೂಡ ಸೇರಿರುತ್ತದೆ (ಉದಾ: ಇಂಧನವಾಗಿ ಉಪಯೋಗಿಸಲು ಸಾಧ್ಯವಿರುವ ದಹ್ಯ ಅನಿಲ)
· ಉಳಿದ (ನಿಜವಾದ ಅರ್ಥದ) ತ್ಯಾಜ್ಯವನ್ನು ಜಾಗರೂಕತೆಯಿಂದ ಸಂಸ್ಕರಿಸಿ ಯಾರಿಗೂ ಹಾನಿಕಾರಕವಲ್ಲದ ಪದಾರ್ಥಗಳನ್ನಾಗಿ ವಿಂಗಡಿಸಿ ಭೂಮಿಗೆ ತಿರುಗಿ ಕೊಡುವುದು
· ಅದೂ ಸಾಧ್ಯವಿಲ್ಲದಿದ್ದರೆ ಉಳಿದ ‘ವಿಷ’ವನ್ನು ಯಾರ ಕೈಗೂ ಸಿಗದಂತೆ ಭೂಗತಗೊಳಿಸುವುದು
ಈ ಮೇಲಿನ ಒಂದೊಂದೂ ಪರಿಷ್ಕರಣೆಯ ಅಂಶಗಳನ್ನು ಹೇಗೆ ಮಾಡುವುದು ಎಂಬುದರ ಬಗ್ಗೆ ಅನೇಕ ಸಂಶೋಧನೆಗಳು ಈಗಾಗಲೇ ನಡೆದಿವೆ, ಇಂದು ಕೂಡ ಭರದಿಂದ ನಡೆಯುತ್ತಿವೆ. ಇದನ್ನು ವಿವರಿಸುವುದು ಈ ಚಿಕ್ಕ ಲೇಖನದಲ್ಲಿ ಸಾಧ್ಯವಿಲ್ಲ, ಹೀಗಾಗಿ ಇಲ್ಲಿಗೇ ನಿಲ್ಲಿಸುತ್ತೇನೆ.
ತ್ಯಾಜ್ಯ ಉತ್ಪಾದನೆ
ನಿಜಕ್ಕೂ ನೋಡಿದರೆ ತ್ಯಾಜ್ಯ ನಿರ್ವಹಣೆ ಎಂಬುದು ಎರಡನೇ ಹೆಜ್ಜೆ. ಅದಕ್ಕೂ ಮೊದಲು ಬರುವ ವಿಷಯ ತ್ಯಾಜ್ಯ ಉತ್ಪಾದನೆ. ರೋಗವನ್ನು ಗುಣಪಡಿಸುವುದಕ್ಕಿಂತ ರೋಗ ಬರದಂತೆ ತಡೆಯುವುದೇ ಉತ್ತಮವಲ್ಲವೇ? ನಾವು ತ್ಯಾಜ್ಯದ ಉತ್ಪಾದನೆಯನ್ನೇ ಕಡಿಮೆ ಮಾಡಿ, ತ್ಯಾಜ್ಯದ ವಿಲೇವಾರಿಯ ಬಗ್ಗೆ ಹೆಚ್ಚು ನಿಶ್ಚಿಂತೆಯಿಂದಿರಬಹುದಲ್ಲವೇ? ಈ ಮೊದಲ ಹಂತದಲ್ಲಿಯೇ ಎಚ್ಚರವಹಿಸಿದರೆ ಎರಡನೇ ಹಂತದ ಮೇಲಿನ ಭಾರ ಎಷ್ಟೋ ಕಡಿಮೆ ಆಗುತ್ತದೆ. ಹೀಗಾಗಿ ಈ ಮೂಲಭೂತ ವಿಷಯ ಇಲ್ಲಿ ಅತ್ಯಂತ ಪ್ರಸ್ತುತವಾಗುತ್ತದೆ.
ಇದನ್ನು ಹೇಗೆ ಸಾಧಿಸಬಹುದು ಎಂಬುದರ ಬಗ್ಗೆ ಕೆಲವು ಸಲಹೆ/ಸೂಚನೆಗಳು ಇಲ್ಲಿವೆ ನೋಡಿ:
· ಅಗತ್ಯ-ಆಸೆ-ದುರಾಶೆಗಳನ್ನು ತುಲನೆ ಮಾಡಿ ನೋಡಿ ಅನಗತ್ಯ ಬಳಕೆಯನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವುದು
· ಬಳಸುವಾಗ ಸಾಧ್ಯವಾದಷ್ಟೂ ಪರಿಸರಸ್ನೇಹೀ ಉತ್ಪನ್ನಗಳನ್ನೇ ಬಳಸುವುದು
· ಬರೀ ಉತ್ಪನ್ನ ಪರಿಸ್ನೇಹಿಯಾಗಿದ್ದರೆ ಸಾಲದು, ಉತ್ಪಾದನೆ, ಸಾಗಾಟದ ದೃಷ್ಟಿಯಿಂದಲೂ ಪರಿಸರಸ್ನೇಹೀ ಆಗಿರುವ ಉತ್ಪನ್ನಗಳನ್ನು ಬಳಸುವುದು
· ಬಳಸಿಯಾದ ಮೇಲೆ ಉತ್ಪನ್ನಗಳನ್ನು ಒಂದಲ್ಲದಿದ್ದರೆ ಇನ್ನೊಂದು ರೀತಿಯಲ್ಲಿ ಮರುಬಳಕೆ ಮಾಡುವುದು
· ಹಾಳಾದರೆ ಎಸೆದು ಹೊಸದು ತೆಗೆದುಕೊಳ್ಳುವುದರ ಬದಲು ರಿಪೇರಿ ಮಾಡುವುದು
· ತನಗೆ ಬೇಡವಾದ ಉತ್ಪನ್ನಗಳನ್ನು ಇತರರಿಗೆ ಕೊಟ್ಟು ಉಪಯುಕ್ತವಾಗುವಂತೆ ನೋಡಿಕೊಳ್ಳುವುದು
ನೋಡಿ, ಎಷ್ಟೆಲ್ಲಾ ರೀತಿಯಲ್ಲಿ ತ್ಯಾಜ್ಯದ ಉತ್ಪಾದನೆಯನ್ನೇ ಕಡಿಮೆ ಮಾಡಬಹುದು ಎಂದು! ಅಲ್ಲವೇ? ಮರುಬಳಕೆ, ರಿಪೇರಿ ಈ ಎಲ್ಲಾ ಸಾಧ್ಯತೆಗಳೂ ಇಲ್ಲವಾಗಿ ಉತ್ಪನ್ನ ತೀರಾ ನಿರುಪಯುಕ್ತವೆನಿಸಿದಾಗ ತ್ಯಾಜ್ಯ ನಿರ್ವಹಣೆಯ ವಿಷಯ ಎದ್ದುಬರುತ್ತದೆ, ಬರಬೇಕು.
ಕೊನೆಯ ಮಾತು
ಹೀಗೆ ಹೆಜ್ಜೆ ಹೆಜ್ಜೆಯಲ್ಲಿಯೂ ನಾವು ಅತ್ಯಂತ ಜವಾಬ್ದಾರಿಯುತವಾಗಿ, ಜಾಗರೂಕತೆಯಿಂದ ಬಾಳಬೇಕು. ಆಗಲೇ ಮನುಷ್ಯ ಹಾಗೂ ಮನುಷ್ಯೇತರ ಜೀವಿಗಳು ಉತ್ತಮ ರೀತಿಯಲ್ಲಿ, ಆರೋಗ್ಯಕರವಾಗಿ ಬಾಳಬಹುದು. ಮಾತ್ರವಲ್ಲ, ನಾವು ಆಸ್ವಾದಿಸುತ್ತಿರುವ ಈ ಸುಂದರ ಭೂಮಿಯ ಸಮತೋಲನ ಹಾಗೆಯೇ ಉಳಿಯುತ್ತದೆ, ನಮ್ಮ ಮುಂದಿನ ಪೀಳಿಗೆಗೆ ಲಭ್ಯವಾಗುತ್ತದೆ. ಇಂದಿನ ನಾಗಾಲೋಟದ ಜೀವನದಲ್ಲಿ ಇದು ಸುಲಭವಲ್ಲ, ಆದರೆ ಮನಸ್ಸು ಮಾಡಿದರೆ ನಮ್ಮಿಂದ ಪರಿಸರಕ್ಕೆ ಆಗುವ ಹಾನಿಯನ್ನು ಪೂರ್ತಿಯಲ್ಲದಿದ್ದರೂ ಎಷ್ಟೋ ಕಡಿಮೆ ಮಾಡಬಹುದು.
ನಿಮ್ಮ ಸಲಹೆ/ಸೂಚನೆ/ಪ್ರತಿಕ್ರಿಯೆಗಳಿಗೆ ಸದಾ ಸ್ವಾಗತವಿದೆ.
ನಿಮ್ಮ ವಿಶ್ವಾಸಿ,
ಕೃಷ್ಣ ಶಾಸ್ತ್ರಿ.
13 comments:
ತುಂಬ ಒಳ್ಳೆಯ, ಬೋಧನೀಯ ಪ್ರಯತ್ನ. ಆದರೆ ಶುದ್ಧ ಪಾಠ ತೆಗೆದುಕೊಳ್ಳುವವರು ಸಿಕ್ಕುವುದು ಕಷ್ಟ. ನಾನು ಅಂಗಡಿಯಲ್ಲಿ ಪ್ಲ್ಯಾಸ್ಟಿಕ್ ಪ್ಯಾಕಿಂಗ್ ನಿಲ್ಲಿಸಿದ್ದನ್ನು ಸಹಿಸಿಕೊಳ್ಳುವವರೇ ಹೆಚ್ಚು, ಸುಧಾರಿಸಿಕೊಳ್ಳುವವರು ಕೆಲವರು, ಸ್ಪಷ್ಟ ಬೇಡ ಎನ್ನುವವರು ಬೆರಳೆಣಿಕೆ. ಹಳಗಾಲದ ಮಡಿ ಹೋಗಿದೆ, ಹೊಸಗಾಲದ ಶುಚಿ ಸಿಕ್ಕಿಲ್ಲ - ಎಡಬಿಡಂಗಿ ಸ್ಥಿತಿ ನಮ್ಮದು. ನನ್ನದೇ ಅನ್ಯ ಲಕ್ಷ್ಯಗಮನದಲ್ಲಿ ಇದರ ಉಪಯುಕ್ತತೆಯ ಆವಶ್ಯಕತೆ ಕಂಡಲ್ಲಿ ಖಂಡಿತಾ ಉಲ್ಲೇಖಿಸುತ್ತೇನೆ, ಬಳಸುತ್ತೇನೆ. ಅದುವರೆಗೆ ನಿಮ್ಮ ಅಭಿಯಾನಕ್ಕೆ ಶುಭಾಶಯಗಳು
ಅಶೋಕವರ್ಧನ
ಅಶೋಕವರ್ಧನರೇ, ನಿಮ್ಮ ತುಂಬುಹೃದಯದ ಪ್ರೋತ್ಸಾಹಕ್ಕೆ ಧನ್ಯವಾದಗಳು. "ಹಳೆಗಾಲದ ಮಡಿ ಹೋಗಿದೆ, ಹೊಸಗಾಲದ ಶುಚಿ ಸಿಕ್ಕಿಲ್ಲ" ಎನ್ನುವುದು ನೂರಕ್ಕೆ ನೂರು ಸತ್ಯ. ಈ ತ್ರಿಶಂಕು ಸ್ಥಿತಿಯಿಂದ ಆದಷ್ಟೂ ಬೇಗನೆ ಹೊರಬಂದರೆ ಉತ್ತಮ.
ಇದನ್ನು ಧಾರಾಳವಾಗಿ ಬೇಕಾದಲ್ಲಿ ಬಳಸಿ. ಜ್ವಲಂತ ಸಮಸ್ಯೆಗಳ ಬಗ್ಗೆ ಚಿಂತನೆ ಹುಟ್ಟಿಸುವಂತಹ ಇಂತಹ (ಬಹುಷಃ ಇನ್ನೂ ಚೆನ್ನಾಗಿ ತಯಾರು ಮಾಡಿದಂತಹ) ಸಾಕ್ಷ್ಯಚಿತ್ರಗಳನ್ನು ಶಾಲಾಮಕ್ಕಳಿಗೆ ತೋರಿಸಬೇಕು ಎನ್ನುವುದು ನನ್ನ ದೂರಗಾಮಿ ಯೋಜನೆಗಳಲ್ಲಿ ಒಂದು.
ಇದು ಮಂಗಳೂರಿಗೆ ಮಾತ್ರ ಸಂಬಂಧಪಟ್ಟಂತಿದೆ, ಹೆಚ್ಚು generic ಆಗಿ ಇನ್ನೊಂದು ಸಾಕ್ಷ್ಯಚಿತ್ರ ತಯಾರು ಮಾಡಬೇಕೆಂಬ ಇಚ್ಛೆ ಇದೆ, ನೋಡೋಣ ಸಮಯ-ಅವಕಾಶ ಕೂಡಿಬಂದರೆ ಮಾಡಿ ನಿಮ್ಮೊಡನೆ ಹಂಚುತ್ತೇನೆ.
Great Message in simple terms
http://www.theuglyindian.com/ is doing good job...
ತ್ಯಾಜ್ಯದಿಂದ ಹಣ! - This can make more people to manage their waste effectively. But how often do we see these folks who come and collect old paper, bottles etc these days?
- Nishchal
ನಮಸ್ತೆ, ಯಾವುದೋ ಕೊಂಡಿಯ ಮೂಲಕ ಈ ಬ್ಲಾಗ್ ಪ್ರವೇಶಿಸಿದೆ. ನಿಮ್ಮ ಬ್ಲಾಗ್ ನಲ್ಲಿ ಬರೆದಿರುವ ಎಲ್ಲಾ ವಿಷಯಗಳು ಒಳ್ಳೊಳ್ಳೆಯ ಮಾಹಿತಿಗಳನ್ನೊಳಗೊಂಡಿದೆ. ಒಂದೊಂದಾಗಿ ಓದುತ್ತಿದ್ದೇನೆ. ಧನ್ಯವಾದಗಳು.
ವಿಕಾಸ್, ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಧನ್ಯವಾದಗಳು. ಉಳಿದ ಲೇಖನಗಳೂ ನಿಮಗೆ ಹಿಡಿಸಿದರೆ ಮತ್ತೂ ಸಂತೋಷ.
ನಿಶ್ಚಲ್, ಇಂದಿಗೂ ಹೀಗೆ ರದ್ದಿ ಸಂಗ್ರಹಿಸುವವರು ಇದ್ದಾರೆ, ಅವರ ಬಳಿ ಮೊಬೈಲ್ ಕೂಡ ಇದೆ! ಬಹುಷಃ ಅಂಥವರ ನಂಬರುಗಳನ್ನು ಒಂದು ಕಡೆ ಕಲೆ ಹಾಕಿದರೆ ಎಲ್ಲರಿಗೂ ಉಪಯೋಗವಾಗಬಹುದೇನೋ ಎಂದು ನನ್ನ ಪತ್ನಿಯೂ ಸೂಚಿಸಿದ್ದಳು. ಇದೇ ಬ್ಲಾಗಿನಲ್ಲಿ ಹಾಕಲು ಪ್ರಯತ್ನಿಸಬಹುದು, ನೋಡುತ್ತೇನೆ.
@Muralikrishna ಈ ಕೊಂಡಿ ಕಳುಹಿಸಿದ್ದಕ್ಕೆ ಧನ್ಯವಾದಗಳು. ತ್ಯಾಜ್ಯ ನಿರ್ವಹಣೆಯ ವಿಷಯದಲ್ಲಿ The Ugly Indian ಪ್ರೇರಣಾತ್ಮಕವಾದ ಕೆಲಸ ಮಾಡುತ್ತಿದ್ದಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
inspired by watching ur presentation
Dear Krishna Shastry - can you please post examples of different types of wastes in Kannada languaage
ಸರ್ ಈ ಲೇಖನ ಓದಿದೆ ತುಂಬ ಒಳ್ಳೆಯ ಬರಹ. ನಾನು ತ್ಯಾಜ್ಯ ವಿಲೇವಾರಿಯ ಕುರಿತ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ನನಗೆ ಇನ್ನೂ ಹೆಚ್ಚಿನ ಮಾಹಿತಿ ನೀಡುವಿರಾ.
bkoustubha@gmail.com
ಗೆ ಕಳುಹಿಸಿ
ಧನ್ಯವಾದ
S.Koustubha Bharadvaj
more information on waste management was required .
Post a Comment