About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, November 1, 2011

ನೆಟ್‍ವರ್ಕ್‍ನಿಂದ ಸೋಶಿಯಲ್ ನೆಟ್‍ವರ್ಕಿಂಗ್ ತನಕ

ನಾನು ಮುಖ್ಯವಾಗಿ ಬರೆಯಬೇಕೆಂದಿರುವುದು ಸೋಶಿಯಲ್ ನೆಟ್‍ವರ್ಕಿಂಗ್ ಬಗ್ಗೆ. ಆದರೆ ಅದಕ್ಕೆ ಮೊದಲು ನೆಟ್‍ವರ್ಕ್ ಎಂದರೇನು ಎಂಬುದನ್ನು ಸ್ವಲ್ಪ ಗಮನಿಸೋಣ. ಬೀಜದಿಂದ ಮರವಾದುದರ ಬಗ್ಗೆ ಓದುವುದರಲ್ಲಿ, ಮೆಲುಕು ಹಾಕುವುದರಲ್ಲಿ ಅದರದ್ದೇ ಆದ ಪ್ರಯೋಜನ/ಗಮ್ಮತು ಇದೆ ಎಂದು ನನ್ನಸಿಕೆ, ಆದರೆ ಬೋರ್ ಆದರೆ ನೇರವಾಗಿ ಈ ಮೊದಲಿನ ಕೆಲವು ಪ್ಯಾರಾಗಳನ್ನು ಗಾಳಿಗೆ ತೂರಿ ಮುಂದೆ ಹೋಗಿ :-)

ನೆಟ್‍ವರ್ಕ್ ಎಂದರೆ ಏನು?

ಕನ್ನಡದಲ್ಲಿ ನೆಟ್‍ವರ್ಕ್ ಎಂಬುದಕ್ಕೆ ಸಮಾನಾರ್ಥಕವಾದ ಪದದ ಬಳಕೆ ಅಷ್ಟಾಗಿ ನಿತ್ಯಜೀವನದಲ್ಲಿ ಇಲ್ಲ ಎಂದಂದುಕೊಳ್ಳುತ್ತೇನೆ (ಜಾಲ ಎನ್ನುವುದು ನನಗೆ ಅಷ್ಟು ಹಿತವೆನಿಸುವುದಿಲ್ಲ), ಹೀಗಾಗಿ ನೆಟ್‍ವರ್ಕ್ ಪದವನ್ನೇ ಪ್ರಯೋಗಿಸುತ್ತೇನೆ. ಇದನ್ನು ವಿವರಿಸುವಾಗ ಮೊದಲು ಅತ್ಯಂತ ಸರಳ ಆಯಾಮದ ಮೂಲಕ ಪರಿಚಯಿಸಿ ಆಮೇಲೆ ವಿಸ್ತೃತ ರೂಪವನ್ನು ತೆರೆದಿಡುತ್ತೇನೆ.

ಆಯಾಮ ೧

ನಮಗೆ ‘ಬೇಕಾದ’ ಅಥವಾ ನಾವು ಮೆಚ್ಚುವ ವ್ಯಕ್ತಿಗಳ ಜೊತೆ ನಮಗೆ ಸರಿ ಎನಿಸಿದ ಮಟ್ಟದಲ್ಲಿ ನಾವು ಸಂಬಂಧವನ್ನಿರಿಸಿಕೊಳ್ಳುತ್ತೇವೆ, ಅಲ್ಲವೇ? ಇದುವೇ ನೆಟ್‍ವರ್ಕಿಂಗ್. ನಾವು ಮೆಚ್ಚುವ ವ್ಯಕ್ತಿಗಳ ಜೊತೆ ನಮಗೆ ಸಂಬಂಧ ಇರಿಸಿಕೊಳ್ಳಬೇಕೆನ್ನುವುದನ್ನು ಅರ್ಥಮಾಡಿಕೊಳ್ಳುವುದು ಸುಲಭ. ಆದರೆ ಇನ್ನೊಬ್ಬರು ನಮಗೆ ಯಾಕೆ ‘ಬೇಕು’ ಎನ್ನುವುದನ್ನು ತುಸು ಹೆಚ್ಚು ಕೆದಕಿ ನೋಡೋಣ. ಕೆಲವು ಉದಾಹರಣೆಗಳು ಇಂತಿವೆ.

- ಅವರಿಂದ ನಮಗೆ ಯಾವುದಾದರೂ ರೀತಿಯಲ್ಲಿ ಆರ್ಥಿಕ ಲಾಭಗಳಿರಬಹುದು
- ನಾವು ಹೇಳಿದ ಮಾತುಗಳನ್ನು ಅವರು ತಾಳ್ಮೆಯಿಂದ ಕೇಳಿಸಿಕೊಳ್ಳುವವರಿರಬಹುದು ಅಥವಾ ಮೆಚ್ಚುವವರಿರಬಹುದು
- ಅವರು ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿ ನಮ್ಮ ಏಳ್ಗೆಯಲ್ಲಿ ಸಹಾಯ ಮಾಡುತ್ತಿರಬಹುದು
- ಒಮ್ಮೊಮ್ಮೆ ಸುಮ್ಮನೆ ಕಾಲಕಳೆಯಲು ಅವರು ಒಳ್ಳೆಯ ಜೊತೆಯಾಗಿರಬಹುದು
- ಅವರು ನಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡುವವರು ಎಂಬ ಭರವಸೆ ನಮಗಿರಬಹುದು

ಹಾಗಾದರೆ ಎರಡನೇ ವಿಭಾಗ ಸಂಪೂರ್ಣವಾಗಿ ನಮ್ಮ ‘ಬೇಕು’ಗಳ ಸುತ್ತ ಹೆಣೆಯಲಾಗಿದ್ದು ನಮ್ಮ ಸ್ವಾರ್ಥವನ್ನು ಬಿಂಬಿಸುತ್ತದೆಯೇ? ಖಂಡಿತಾ ಇಲ್ಲ, ಈ ಎರಡನೇ ವಿಭಾಗದಲ್ಲಿರುವ ಜನರಲ್ಲಿ ನಾವು ಮೆಚ್ಚುವ ಗುಣಗಳೂ ಅನೇಕವಿರುತ್ತವೆ.

ಆಯಾಮ ೨

ಇದುವರೆಗೆ ವಿವರಿಸಿದ ನೆಟ್‍ವರ್ಕಿಂಗ್ ಏಕಮುಖವಾದದ್ದು; ಇತರರ ಜೊತೆಗೆ ಸಂಬಂಧವಿರಿಸಿಕೊಳ್ಳಲು ನಮ್ಮ ಕಡೆಯಿಂದ ನಾವು ಮಾಡುವ ಪ್ರಯತ್ನವನ್ನು ವಿವರಿಸುತ್ತದೆ. ಈಗ ಇದಕ್ಕೆ ಇನ್ನೊಂದು ಆಯಾಮವನ್ನು ಸೇರಿಸೋಣ: ಇತರರು ನಮ್ಮನ್ನು ತಮ್ಮ ಸ್ವಂತ ನೆಟ್‍ವರ್ಕ್‍ನಲ್ಲಿ ಇರಿಸಿಕೊಳ್ಳುವುದು - ತಮ್ಮ ಬೇಕುಗಳಿಗಾಗಿ ಅಥವಾ ನಮ್ಮನ್ನವರು ಮೆಚ್ಚುವುದರಿಂದಾಗಿ ಅಥವಾ ಈ ಎರಡರ ಮಿಶ್ರಣದಿಂದಾಗಿ.

ಆಯಾಮ ೩

ಹಾಗಾದರೆ ನಮ್ಮ ಹಾಗೂ ಇತರರ ನೆಟ್‍ವರ್ಕ್ ಒಂದನ್ನೊಂದು ಪ್ರಭಾವಿತಗೊಳಿಸುವುದಿಲ್ಲವೇ? ಹೌದು, ನಿಜ ಜೀವನದಲ್ಲಿ ಯಾರೊಬ್ಬರ ನೆಟ್‍ವರ್ಕ್ ಸಂಪೂರ್ಣ ರಹಸ್ಯವಾಗಿರುವುದಿಲ್ಲ, ಹೀಗಾಗಿ ಒಂದನ್ನೊಂದು ಪ್ರಭಾವಿತ ಮಾಡಿಯೇ ಮಾಡುತ್ತದೆ, ಇದೇ ಮೂರನೇ ಆಯಾಮ: ಇತರರ ಕ್ರಿಯೆ ಅರ್ಥಾತ್ ಇತರರು ನಮ್ಮನ್ನು ಅಥವಾ ಇನ್ಯಾರೋ ಮೂರನೆಯ ವ್ಯಕ್ತಿಯನ್ನು ತಮ್ಮ ಸ್ವಂತ ನೆಟ್‍ವರ್ಕ್‍ನಲ್ಲಿ ಇರಿಸಿಕೊಳ್ಳುವ ಪ್ರಕ್ರಿಯೆ ನಮ್ಮನ್ನೂ ಹಾಗೆಯೇ ಮಾಡುವಂತೆ ಪ್ರೇರೇಪಿಸುವುದು. ದಾಕ್ಷಿಣ್ಯಕ್ಕೆ ಕಟ್ಟುಬಿದ್ದೋ ಅಥವಾ ಇನ್ನೂ ಹೆಚ್ಚಿನ ಭಾವನೆಗಳು ಸ್ಫುರಿಸಿಯೋ ನಾವು ಕೂಡ ಅವರನ್ನು ನಮ್ಮ ನೆಟ್‍ವರ್ಕ್‍ನಲ್ಲಿ ಸೇರಿಸಬಹುದು, ಅವರ ಜೊತೆ ವಿಚಾರ ವಿನಿಮಯ ಮಾಡಬಹುದು, ಅದಕ್ಕೂ ಹೆಚ್ಚಿನ ವ್ಯವಹಾರ ಮಾಡಬಹುದು. ನಾವು ಸಾಮಾಜಿಕ ಜೀವಿಗಳು - ತೆಗೆದುಕೊಳ್ಳುವುದು ಮಾತ್ರವಲ್ಲ ಕೊಡುವುದೂ ನಮ್ಮ ಜೀವನದ ಅವಿಭಾಜ್ಯ ಅಂಗ.

ಆಯಾಮ ೪

ಹಾಗಾದರೆ ನಮ್ಮ ನೆಟ್‍ವರ್ಕ್‍ನಲ್ಲಿರುವುದು ಕೇವಲ ಮನುಷ್ಯರೇ? ಅಲ್ಲ, ನಾವು ಇತರ ಸಂಸ್ಥೆಗಳೊಂದಿಗೂ ಸಂಬಂಧವನ್ನಿರಿಸಿಕೊಳ್ಳಬಹುದು. ಇದು ನಾಲ್ಕನೇ ಆಯಾಮ. ನಾವು ನಮ್ಮ ಜೀವನದ ಮೂಲಭೂತ ಅಗತ್ಯಗಳನ್ನು (ಆಹಾರ, ಆರೋಗ್ಯ, ಶಿಕ್ಷಣ ಇತ್ಯಾದಿ) ಪೂರೈಸುವ ಸಂಸ್ಥೆಗಳ ಜೊತೆ ಸಂಬಂಧವನ್ನಿರಿಸಿಕೊಳ್ಳುತ್ತೇವೆ. ಪುಸ್ತಕ/ವಾರ್ತಾಪತ್ರಿಕೆಗಳನ್ನು ಓದುವುದು, ನಾಟಕ/ಧಾರಾವಾಹಿ/ಸಿನೇಮಾ ನೋಡುವುದು, ಮನರಂಜನೆ ಯಾತ್ರೆಗೆ ಹೋಗುವುದು - ಇವೆಲ್ಲವೂ ಕೂಡ ಒಂದು ರೀತಿಯ ಸಂಬಂಧಗಳೇ ಹೌದು.

ಆಯಾಮ ೫

ಕೊನೆಯದಾಗಿ ಐದನೇ ಹಾಗೂ ಅತ್ಯಂತ ಕ್ಲಿಷ್ಟಕರ ಆಯಾಮ: ನೆಟ್‍ವರ್ಕ್‍ನಲ್ಲಿ ಯಾರ ಸ್ಥಾನ ಎಲ್ಲಿದೆ? ಇತರರನ್ನು ನಾವು ಎಷ್ಟು ಮೆಚ್ಚುತ್ತೇವೆ ಅಥವಾ ಅವರು ನಮಗೆಷ್ಟು ಬೇಕು ಎಂಬುದನ್ನಾಧರಿಸಿ ನಾವು ಒಬ್ಬೊಬ್ಬರಿಗೂ ಪ್ರತ್ಯೇಕ ಸ್ಥಾನ ಕೊಡುತ್ತೇವೆ. ಅಂತೆಯೇ ಅವರೂ ತಮ್ಮದೇ ಆದ ನೆಟ್‍ವರ್ಕ್‍ನಲ್ಲಿ ನಮಗೂ ಒಂದು ಸ್ಥಾನ ಕೊಟ್ಟಿರುತ್ತಾರೆ. ಈ ಸ್ಥಾನಗಳು ಪುನಃ ಪರಸ್ಪರ ಪ್ರಭಾವಿತಗೊಳಿಸಿ ಕೊನೆಗೆ ಒಂದು ರೀತಿಯ ಸಮತೋಲನದಲ್ಲಿರುತ್ತದೆ. ಈ ಸಮತೋಲನ ಕಾಲ ಉರುಳಿದಂತೆ ವಾಲುತ್ತಲೂ, ಹೊಸ ನೆಲೆಯನ್ನು ಕಂಡುಕೊಳ್ಳುತ್ತಲೂ ಇರಬಹುದು, ಅದು ಸಹಜ. ಅಂತೆಯೇ ಕೆಲವರು ತಮ್ಮ ನೆಟ್‍ವರ್ಕ್‍ನಿಂದ ಕೆಲವರನ್ನು ಕಿತ್ತುಹಾಕಲೂ ಬಹುದು, ಇತರ ನೆಟ್‍ವರ್ಕ್‍ನಿಂದ ಸ್ಥಾನ ಕಳೆದುಕೊಳ್ಳಲೂ ಬಹುದು. ಈ ಶಿಥಿಲತೆ ಕಾಲದ ಪ್ರಭಾವದಿಂದಲೂ ಇರಬಹುದು, ಅಥವಾ ಯಾವುದಾದರೂ ಘಟನೆಯಿಂದ ಪ್ರೇರೇಪಿತವಾದದ್ದಿರಬಹುದು. ಒಟ್ಟಿನಲ್ಲಿ ಈ ನಾಲ್ಕನೇ ಆಯಾಮ ಅತ್ಯಂತ ಚಂಚಲ - ಕೆಲವೊಮ್ಮೆ ಗಾಢವಾಗಿರುತ್ತದೆ, ಕೆಲವೊಮ್ಮೆ ಚಂಚಲವಾಗಿರುತ್ತದೆ.

ಒಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು, ತಮ್ಮ ಮನಸ್ಸು-ಹೃದಯಗಳನ್ನು ತಣಿಸಿಕೊಳ್ಳಲು ಸಂಬಂಧಗಳ ಜಾಲವನ್ನು ಹೆಣೆಯುತ್ತಾರೆ - ಇದೇ ನೆಟ್‍ವರ್ಕಿಂಗ್. ಈಗ ನೆಟ್‍ವರ್ಕಿಂಗ್‍ನ ಮೂಲ ಉದ್ದೇಶ ನಿಮಗೆ ಅರ್ಥವಾಗಿರಬೇಕಲ್ಲಾ?

ಅಂತರ್ಜಾಲದಲ್ಲಿ ನೆಟ್‍ವರ್ಕಿಂಗ್

ಅಂತರ್ಜಾಲವನ್ನು ಉಪಯೋಗಿಸುವವರು ಯಾರು? ಮನುಷ್ಯರೇ ತಾನೇ? (ರೋಬೋಟುಗಳು ಸ್ವತಂತ್ರವಾಗಿ ಅಲೆದಾಡುವ ಭವಿಷ್ಯತ್ ಕಾಲವನ್ನು ಸ್ವಲ್ಪ ಬದಿಗಿಡೋಣ, ಈಗಿನ್ನೂ ಆ ಕಾಲ ಬರಲಿಲ್ಲ, ಅಬ್ಬ). ಈ ಮನುಷ್ಯರು ಯಾರು? ಇವರನ್ನು ನಾವು ಎರಡು ರೀತಿಯಲ್ಲಿ ವರ್ಗೀಕರಿಸಬಹುದು:
- ನಿಜ ಜೀವನದಲ್ಲಿ ನಮಗೆ ಪರಿಚಯ ಇರುವ ವ್ಯಕ್ತಿಗಳು
- ಅಂತರ್ಜಾಲದ ಮೂಲಕ ಮಾತ್ರ ನಮಗೆ ಪರಿಚಯ ಇರುವ ವ್ಯಕ್ತಿಗಳು*

* ಈ ರೀತಿಯ ವ್ಯಕ್ತಿಗಳು ಮೊದಲು ಕೂಡ ನಮ್ಮ ನೆಟ್‍ವರ್ಕ್‍ನಲ್ಲಿರುತ್ತಿದ್ದರು, ಆದರೆ ಅತ್ಯಂತ ವಿರಳವಾಗಿ. ಉದಾ: ಪೆನ್ ಫ್ರೆಂಡ್ಸ್

ಇದರಲ್ಲಿ ಎರಡನೇ ವಿಭಾಗದ ವ್ಯಕ್ತಿಗಳ ಸಂಬಂಧವಿರಿಸಿಕೊಳ್ಳುವುದರಲ್ಲಿ ಹೆಚ್ಚು ರಿಸ್ಕ್ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಅನೇಕ ಸಲ ಅದರಲ್ಲಿಯೂ ಧನಾತ್ಮಕ ಗುಣಗಳನ್ನು ಕಾಣುತ್ತೇವೆ, ಹಾಗೂ ಮುಂದುವರಿದು ಸಂಬಂಧವನ್ನು ಬೆಳೆಸುತ್ತೇವೆ. ಅವರಲ್ಲಿ ಕೂಡ ಎರಡು ವಿಧದವರಿರುತ್ತಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳೋಣ:
- ನಿಜ ಜೀವನದಲ್ಲಿ ಅವರು ಯಾರು ಎಂಬುದರ ಬಗ್ಗೆ ನಮಗೆ ಸ್ಪಷ್ಟ ಮಾಹಿತಿ/ಕಲ್ಪನೆ ಇರುತ್ತದೆ
- ಅವರು ಹೆಚ್ಚು ಕಡಿಮೆ ಸಂಪೂರ್ಣವಾಗಿ ಅನಾಮಧೇಯರು, ತೆರೆಯ ಹಿಂದೆ ಅವಿತಿರುವವರು ಎಂಬುದು ನಮಗೆ ತಿಳಿದಿರುತ್ತದೆ (ಕೆಲವೊಮ್ಮೆ ನಾವೇ ಈ ವಿಭಾಗಕ್ಕೆ ಸೇರಿರುತ್ತೇವೆ!)

ಈಮೈಲ್ ಹಾಗೂ ಚಾಟಿಂಗ್

ಅಂತರ್ಜಾಲ ಸಾಮಾನ್ಯ ಮನುಷ್ಯನ ಜೀವನವನ್ನು ಪ್ರವೇಶಿಸಿದಾಗ ನೆಟ್‍ವರ್ಕಿಂಗ್‍ನ ದೃಷ್ಟಿಯಿಂದ ನಮ್ಮನ್ನು ಮೊದಲು ಆಕರ್ಷಿಸಿದ್ದು ಈಮೈಲ್ ಹಾಗೂ ಚಾಟಿಂಗ್. ಮುಖತಃ ಭೇಟಿಯಾಗದಿದ್ದರೂ ನಮಗೆ ಬೇಕಾದವರೊಂದಿಗೆ ಸಂಪರ್ಕಿಸಬೇಕಾದರೆ ಮೊದಲು ಪತ್ರ ವ್ಯವಹಾರ ಇತ್ತು, ಆಮೇಲೆ ಫೋನ್ ಬಂದಾಗ ಬಲವಾದ ಒಂದು ಬದಲಾವಣೆಯ ಗಾಳಿ ಬೀಸಿತು. ಆದರೆ ಅಂತರ್ಜಾಲ ಬಂದಾಗ ವ್ಯಕ್ತಿ-ವ್ಯಕ್ತಿಗಳ ಮಧ್ಯೆ ಇರುವ ನೆಟ್‍ವರ್ಕಿಂಗ್ ಬೃಹದಾಕಾರವನ್ನು ತಾಳಿತು. ಫೋನ್ ಹಾಗೂ ಈಮೈಲ್/ಚಾಟಿಂಗ್ ಜೊತೆಯಾಗಿ ಪ್ರಪಂಚವನ್ನು ಅದ್ಭುತವಾಗಿ ಕುಗ್ಗಿಸಿತು.

ಈಮೈಲ್‍ನಲ್ಲಿ ಸಾಂಪ್ರದಾಯಿಕ ಪತ್ರವ್ಯವಹಾರದ ಜೊತೆಗೆ ಅನೇಕ ಹೊಸ ಲಾಭಗಳು ಕಂಡು ಬಂದುವು. ಮಿಂಚಿನ ವೇಗ ಮಾತ್ರವಲ್ಲದೆ ಒಂದೇ ಪತ್ರವನ್ನು ವಿವಿಧೆಡೆ ಇರುವ ಅನೇಕರಿಗೆ ಒಟ್ಟಿಗೇ ಕಳುಹಿಸುವ ಸೌಲಭ್ಯ ಜನರನ್ನಾಕರ್ಷಿಸಿತು. ಚಾಟಿಂಗ್ ಅಂತೂ ಹೊಸತೊಂದು ಲೋಕವನ್ನೇ ತೆರೆಯಿತು. ತಾವು ಸಂಭಾಷಿಸುತ್ತಿರುವುದು ನಿಜ ಜೀವನದಲ್ಲಿ ಪರಿಚಯ ಇರುವ ವ್ಯಕ್ತಿಯ ಜೊತೆಗೇ ಆಗಿದ್ದರೂ ಕೂಡ, ಮುಖತಃ ಮಾತನಾಡುವಾಗ ಇರುವುದಕ್ಕಿಂತಲೂ ಹೆಚ್ಚು ಮನಸ್ಸನ್ನು ಬಿಚ್ಚಿಡಲು ಜನರು ಶುರುಮಾಡಿದ್ದು ಒಂದು ವಿಸ್ಮಯ, ಇದನ್ನು ಅನೇಕರು ಗಮನಿಸುವುದಿಲ್ಲ, ಆದರೆ ನನಗನಿಸಿದಂತೆ ಇದು ಬಹುಷಃ ಈ ತಂತ್ರಜ್ಞಾನದ ಹೆಗ್ಗಳಿಕೆಗಳಲ್ಲಿ ಒಂದು. ಸರಳತೆ, ವೇಗ, ಮನಗೆಲ್ಲುವ ಸ್ಮೈಲಿಗಳು, ಒಂದೇ ಸಲಕ್ಕೆ ಹಲವರೊಡನೆ ಪ್ರತ್ಯೇಕವಾಗಿ ಚಾಟ್ ಮಾಡುವ ಸೌಲಭ್ಯ ಇತ್ಯಾದಿಗಳು ಜನರ ಮನ ಗೆದ್ದವು ಎಂಬುದು ಸರ್ವವಿದಿತ. ಚಾಟಿಂಗ್ ಕ್ಷೇತ್ರದಲ್ಲಿ ಅನಾಮಧೇಯತೆ ಉಳಿದೆಲ್ಲೆಡೆಗಿಂತಲೂ ಹೆಚ್ಚು ಮೆರೆಯಿತು, ಪ್ರತ್ಯೇಕವಾಗಿ ಹಲವರು ಭಾಗವಹಿಸುವ ಚಾಟಿಂಗ್ ಕೋಣೆಗಳಲ್ಲಿ. ಚಾಟಿಂಗ್‍ ಕ್ಷೇತ್ರದಲ್ಲಿ ಚಾಟಿಂಗ್ ಕೋಣೆಗಳು ಇದ್ದ ಹಾಗೆಯೇ ಈಮೈಲ್ ಜಗತ್ತಿನಲ್ಲಿ ಈಮೈಲ್ ಗುಂಪುಗಳು ಶುರುವಾಗಿ ಅವೂ ಕೂಡ ಅನೇಕರನ್ನು ಆಕರ್ಷಿಸಿದುವು. ಮಾಹಿತಿ ಸಂಗ್ರಹಣೆ ಹಾಗೂ ಮನರಂಜನೆಗಾಗಿ ಕೂಡ ನಾವು ಕಂಪ್ಯೂಟರನ್ನು ಹೆಚ್ಚು ಹೆಚ್ಚು ನೆಚ್ಚಿಕೊಳ್ಳಲು ತೊಡಗಿದೆವು.

ಸಮಯದ  ಅಭಾವ

ಹೀಗೆ ಸ್ವಾಭಾವಿಕವಾಗಿ ಈ ಹೊಸ ತಂತ್ರಜ್ಞಾನಗಳು ನಮ್ಮ ಜೀವನದಲ್ಲಿ ಸೇರಿಕೊಂಡು ಹೋದಂತೆ ನಮ್ಮ ನೆಟ್‍ವರ್ಕ್ ತೀರಾ ವ್ಯತ್ಯಸ್ಥವಾದ ಸ್ವರೂಪವನ್ನು ಪಡೆಯಲು ಶುರು ಮಾಡಿತು. ಮೊದಲಿನ ಜೀವನವನ್ನು ಸಂಪೂರ್ಣ ತ್ಯಜಿಸಲೂ ಸಿದ್ಧರಿರಲಿಲ್ಲ, ಅದು ಸಾಧ್ಯವೂ ಇರಲಿಲ್ಲ, ಅದು ವಿವೇಕಯುತವಾದ ನಿರ್ಧಾರವೂ ಆಗಿರಲಿಲ್ಲ. ಆದರೆ ಹೊಸತಾಗಿ ನಮ್ಮ ಜೀವನದಲ್ಲಿ ಅರ್ಥಾತ್ ನೆಟ್‍ವರ್ಕ್‍ನಲ್ಲಿ ಅನೇಕ ವ್ಯಕ್ತಿಗಳು, ಸಂಸ್ಥೆಗಳು ಸೇರ್ಪಡೆಗೊಂಡವು. ಫೋನ್/ಈಮೈಲ್‍ಗಳಿರುವಾಗ ದೂರದಲ್ಲಿರುವ ಆಪ್ತರ ಜೊತೆಗೆ ವ್ಯವಹರಿಸದಿದ್ದರೂ ಇರುಸುಮುರುಸು ಅಥವಾ ಬೇಸರ, ಇನ್ನು ಕೆಲವೊಮ್ಮೆ ತಪ್ಪಿತಸ್ಥ ಭಾವನೆ; ವ್ಯವಹರಿಸುತ್ತಾ ಕೂತರೆ ಸಮಯ ಸಾಲದು; ಮಾತ್ರವಲ್ಲ, ಜಗತ್ತಿನ ಎಲ್ಲೆಡೆಯಿಂದಲೂ ನಮ್ಮೆಡೆಗೆ ಲೆಕ್ಕವಿಲ್ಲದಷ್ಟು ‘ಮಾಹಿತಿ’ಯ ಹರಿವು ಕೂಡ ನಮ್ಮನ್ನಾಕರ್ಷಿಸಿ ಸಮಯ ತಿನ್ನಲಾರಂಭಿಸಿದುವು - ಒಟ್ಟಿನಲ್ಲಿ ಸಮಯದ ಅಭಾವ ನಿಧಾನವಾಗಿ ಉದ್ಭವವಾಗಲು ಶುರುವಾಯಿತು.

ನಾವು ಅಂತರ್ಜಾಲದಲ್ಲಿ ನೆಟ್‍ವರ್ಕಿಂಗ್‍ನ ಪ್ರಯೋಜನಗಳನ್ನು ನಿಜವಾಗಿ ಪಡೆದುಕೊಳ್ಳುತ್ತಿದ್ದೇವೆಯೇ?

ನೆಟ್‍ವರ್ಕಿಂಗ್‍ನಿಂದ ನಮಗಾಗುವ ಅಥವಾ ನಮ್ಮಿಂದ ಇತರರಿಗಾಗುವ ಪ್ರಯೋಜನಗಳನ್ನು ಇನ್ನೊಂದು ರೀತಿಯಲ್ಲಿ ಸಂಕ್ಷಿಪ್ತವಾಗಿ ನೋಡೋಣ:
- ಆರ್ಥಿಕ ಲಾಭಗಳು ಅಥವಾ ಇತರ ಕೆಲವು ಜೀವನಾವಶ್ಯಕ ಅಗತ್ಯಗಳ ಪೂರೈಕೆ
- ಬೌದ್ಧಿಕ ಹಸಿವಿಗೆ ಆಹಾರ
- ಮನಸ್ಸಿಗೆ/ಹೃದಯಕ್ಕೆ ಸಿಗುವ ಸಂತೋಷ, ಸಮಾಧಾನ, ಸಾಂತ್ವನ

ಅಂತರ್ಜಾಲ ಬಂದ ಮೇಲೆ ಈ ಮೂರರಲ್ಲಿ ನಮ್ಮಲ್ಲಿ ಹೆಚ್ಚಿನವರು ಯಾವುದಕ್ಕೆ ಅಧಿಕ ಆದ್ಯತೆ ಕೊಟ್ಟಿದ್ದೇವೆ? ಬಹುಷಃ ಕೊನೆಯದ್ದಕ್ಕೆ ಹೆಚ್ಚು, ಮೊದಲನೆಯದ್ದಕ್ಕೆ ಹಾಗೂ ಎರಡನೆಯದ್ದಕ್ಕೆ ತುಸು ಕಡಿಮೆ. ಆದರೆ ಅದು ಮೇಲೆ ಹೇಳಿದ ರೀತಿಯಲ್ಲೇ ಇದ್ದಿದ್ದರೆ ಸಮಸ್ಯೆಗಳು ಕಡಿಮೆ ಇರುತ್ತಿತ್ತೇನೋ. ಮೊದಲು ಮನುಷ್ಯ ಸಮಯ ವ್ಯರ್ಥ ಮಾಡುತ್ತಿರಲಿಲ್ಲವೆಂದೇನಲ್ಲ, ಇದ್ದ ‘ಭೌತಿಕ’ ನೆಟ್‍ವರ್ಕ್‍ನೊಳಗೆ ಬೇಕಾದಷ್ಟು ಕಾಡುಹರಟೆ ಮಾಡುತ್ತಾ ಸಮಯ ಕೊಲ್ಲುವವರೆಷ್ಟೋ ಇದ್ದರು. ಹೀಗಾಗಿ ಕೆಲವರು ಹೇಳುತ್ತಾರೆ - ಅಂತರ್ಜಾಲ ಇಂಥವರಿಗೊಂದು ಹೊಸ ವಿಧಾನ ಮಾತ್ರ, ಅದಿಲ್ಲದೇ ಹೋದರೆ ಕೂಡ ಇವರು ಜಾಣತನದಿಂದ ಸಮಯವನ್ನು ವಿನಿಯೋಗಿಸುವುದಿಲ್ಲ ಎಂದು, ಈ ಮಾತಿನಲ್ಲಿ ಸತ್ಯವಿಲ್ಲದ್ದಿಲ್ಲ.

ಅಂತರ್ಜಾಲದಲ್ಲಿ ಹೊಸ ಬೆಳವಣಿಗೆಗಳು ಆಗುತ್ತಲೇ ಸಾಗಿವೆ. ಈಮೈಲ್/ಚಾಟಿಂಗ್‍ಗಳ ಬಳಿಕ ಈಗ ಬ್ಲಾಗುಗಳು, ಟ್ವಿಟರ್, ಸೋಶಿಯಲ್ ನೆಟ್‍ವರ್ಕಿಂಗ್ ಸೈಟುಗಳು ಬಂದಿವೆ. ಅಂತೆಯೇ ಫೋನ್‍ ಕ್ಷೇತ್ರದಲ್ಲಿ ಕೂಡ ಮೊಬೈಲ್ ಫೋನ್‍ಗಳು ನಮ್ಮ ಜೀವನದಲ್ಲಿ ಲಗ್ಗೆ ಇಟ್ಟಿವೆ. ಈಗೀಗ ಇವೆರಡೂ ಒಟ್ಟಿಗೇ ಸೇರಿ ನಮ್ಮನ್ನು ತಬ್ಬಿಬ್ಬುಗೊಳಿಸುತ್ತಿವೆ. ಇದರಲ್ಲಿ ಪ್ರತ್ಯೇಕವಾಗಿ ಸೋಶಿಯಲ್ ನೆಟ್‍ವರ್ಕಿಂಗ್ ಬಗ್ಗೆ ನನಗೆ ಹೆಚ್ಚು ಆಸಕ್ತಿ ಹಾಗೂ ಆತಂಕ ಇದೆ. ಅದರ ಬಗ್ಗೆ ಒಂದಿಷ್ಟು ಬರೆಯುತ್ತೇನೆ.

ಸೋಶಿಯಲ್ ನೆಟ್‍ವರ್ಕಿಂಗ್

ಸೋಶಿಯಲ್ ನೆಟ್‍ವರ್ಕಿಂಗ್ ತಾಣಗಳಲ್ಲಿ ಹೆಚ್ಚಿನವರು ಕಂಡ ಆಕರ್ಷಣೆಗಳೆಂದರೆ:
- ಇತರರ ಜೀವನವನ್ನು ದೂರದಿಂದಲೇ ಹೆಚ್ಚು ತಿಳಿದುಕೊಳ್ಳಲು/ಅಭ್ಯಸಿಸಲು ಸಾಧ್ಯವಾಗುವುದು.
- ಒಂದು ವಿಷಯದ ಬಗ್ಗೆ ನಮ್ಮ ನೆಟ್‍ವರ್ಕ್‍ನಲ್ಲಿರುವ ಇತರರು ಏನು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎನ್ನುವುದನ್ನು ಸುಲಭವಾಗಿ, ಒಂದೇ ಕಡೆ ಓದಲು ಸಾಧ್ಯವಾಗುವುದು; ಇದನ್ನು ಈಮೈಲ್ ಗುಂಪುಗಳಿಗಿಂತಲೂ ಸುಲಭವಾಗಿ ಮಾಡಲು ಸೌಲಭ್ಯಗಳು ಕಂಡುಬಂದುವು.

ದುರದೃಷ್ಟವಶಾತ್, ಈ ತಾಣಗಳ ಹರಿಕಾರರಿಗೆ ಸಾಮಾಜಿಕ ಕಳಕಳಿಯೊಂದಿಗೆ ಸೇರಿದ ದೂರಗಾಮಿ ದೃಷ್ಟಿಯ ಕೊರತೆ ಇತ್ತು, ಈಗಲೂ ಇದೆ, ಬದಲಾಗಿ ಸ್ವಾರ್ಥ ಧಾರಾಳವಾಗಿಯೇ ಇತ್ತು/ಇದೆ ಎಂದು ನನ್ನ ವೈಯಕ್ತಿಕ ಅನಿಸಿಕೆ. ಸ್ವಾರ್ಥವಿರುವುದು ಅವರ ತಪ್ಪು ಎಂಬ ಏಕಮುಖ ಆರೋಪಣೆ ಸಲ್ಲದು, (ಕಂಪ್ಯೂಟರ್ ಜಗತ್ತಿನ) ಜನಸಾಮಾನ್ಯನಿಗೂ ಪ್ರಬುದ್ಧತೆ ಸ್ವಲ್ಪ ಕಮ್ಮಿಯೇ ಇದ್ದುದು ಮಂಗನ ಕೈಗೆ ಕೊಟ್ಟ ಮಾಣಿಕ್ಯದ ಹಾಗೆ ಆಯಿತು. ಈ ತಾಣಗಳ ಮಾಲಕರು ಬಳಕೆದಾರನ ಮೇಲೆ ಒತ್ತಾಯಪೂರ್ವಕವಾಗಿ ಏನನ್ನೂ ಹೇರಲಿಲ್ಲ, ಹೀಗಾಗಿ ಅವರ ಸ್ವಾರ್ಥವನ್ನು ತಪ್ಪು ಎಂದು ಪರಿಗಣಿಸುವುದೂ ಕಷ್ಟವಾಗುತ್ತದೆ ಕೆಲವೊಮ್ಮೆ.

ಮೂಲಭೂತವಾಗಿ ಈ ಐಡಿಯಾ ಅತ್ಯುತ್ತಮವಾದುದ್ದೇ, ಸಂಶಯವಿಲ್ಲ. ಆದರೆ ಇದುವರೆಗೆ ಈ ತಾಣಗಳಿಂದ ಎಷ್ಟು ಪ್ರಯೋಜನಗಳಾಗಿವೆಯೋ ಅಷ್ಟೇ ಹಾನಿಗಳೂ ಆಗಿವೆ ಎಂದರೆ ಅತಿಶಯೋಕ್ತಿಯಿಲ್ಲವೇನೋ? ಪ್ರಯೋಜನಗಳ ಮಟ್ಟಿಗೆ ಹೇಳುವುದಾದರೆ ಮೊದಲಿದ್ದ ಅಂತರ್ಜಾಲದ ನೆಟ್‍ವರ್ಕ್‍ನ ಪ್ರಯೋಜನಗಳು ಇದರಲ್ಲಿಯೂ ಇವೆ, ಹಾಗೂ ಮೇಲೆ ಹೇಳಿದ ಹೊಸ ಆಕರ್ಷಣೆಗಳೂ ಸರಿಯಾಗಿ ಉಪಯೋಗಿಸಲ್ಪಟ್ಟರೆ ಅಮೋಘ ಪ್ರಯೋಜನಗಳೇ ಹೌದು. ಈಗ ಹಾನಿಗಳತ್ತ ಹೊರಳಿ ನೋಡೋಣ. ನನಗೆ ಕಂಡಂತೆ ಈ ಕೆಳಗಿನ ಮುಖ್ಯವಾದ ಹಾನಿಗಳನ್ನು ಪಟ್ಟಿ ಮಾಡಬಹುದು:

ಸೋಶಿಯಲ್ ನೆಟ್‍ವರ್ಕಿಂಗ್‍ನಿಂದ ಉದ್ಭವಿಸಿದ ಸಮಸ್ಯೆಗಳು

೧. ವೈಯಕ್ತಿಕ ವಿವರಗಳು ಜಗಜ್ಜಾಹೀರಾಗುವುದು (Privacy Issue)

ಈ ವಿಷಯದಲ್ಲಿ ಅದೆಷ್ಟು ಆಭಾಸಗಳಾಗಿವೆಯೋ, ಅನರ್ಥಗಳಾಗಿವೆಯೋ ಊಹಿಸಲಸಾಧ್ಯ. ಆದರೆ ಈಗೀಗ ಅನೇಕ ತಾಣಗಳು ಜನರ ಅಗತ್ಯ/ಆಕ್ರೋಶವನ್ನರಿತುಕೊಂಡೋ ಅಥವಾ ಪರಸ್ಪರ ಪೈಪೋಟಿಯ ಮನೋಭಾವದಿಂದಲೋ ಅಂತೂ ಇಂತೂ ಬದಲಾವಣೆಯ ದಿಕ್ಕಿನಲ್ಲಿ ನಡೆಯುತ್ತಿವೆ.

೨. ಅನಗತ್ಯ ಅಥವಾ ಕಡಿಮೆ ಪ್ರಾಮುಖ್ಯತೆ ಇರುವ ಮಾಹಿತಿಯ ಮೇಲೆ ಸಮಯ ಹಾಳಾಗುವುದು

ಮೊದಲು ನಾವು ಮಾಹಿತಿಗಾಗಿ ವಾರ್ತಾಪತ್ರಿಕೆಗಳನ್ನು ಓದುತ್ತಿದ್ದೆವು, ಟ್.ವಿ.ಯಲ್ಲಿ ನ್ಯೂಸ್ ನೋಡುತ್ತಿದ್ದೆವು. ಆದರೆ ಅದರ ಬಗ್ಗೆ ಇತರರು ಏನು ಹೇಳುತ್ತಾರೆ ಎಂಬುದು ಸುಲಭವಾಗಿ ತಿಳಿಯುತ್ತಿತ್ತೋ, ಬಹಳ ಸೀಮಿತವಾಗಿ ಅಷ್ಟೆ ತಾನೆ? ಮುಂದೆ ಅಂತರ್ಜಾಲ ಬಂದಾಗ ಕೆಲವು ತಾಣಗಳಲ್ಲಿ ವಾರ್ತೆಗಳನ್ನು ಓದುವಾಗ ಇತರ ಓದುಗರು ಏನು ಹೇಳಿದ್ದಾರೆ ಎಂಬುದನ್ನು ಓದಲು ಸಿಗುತ್ತಿತ್ತು, ಅನೇಕರು ಆ ಆಕರ್ಷಣೆಗೆ ಒಳಗಾಗಿದ್ದರು ಕೂಡ. ಆದರೆ ನಿಮಗೆ ಸಂಬಂಧಪಟ್ಟವರು ಏನು ಹೇಳುತ್ತಾರೆ ಎಂಬುದನ್ನು ಹೇಗೆ ತಿಳಿಯುವುದು? ಇದನ್ನು ಸೋಶಿಯಲ್ ನೆಟ್‍ವರ್ಕಿಂಗ್ ತಾಣಗಳು ಸಾಧ್ಯಮಾಡಿದುವು, ಹೀಗಾಗಿ ಜನ ಇದಕ್ಕೆ ಮುಗಿಬಿದ್ದರು. ಯದ್ವಾ ತದ್ವಾ ಇತರರ ಅಭಿಪ್ರಾಯಗಳನ್ನು ಓದುವುದು, ಅದಕ್ಕೆ ಪ್ರತಿಯಾಗಿ ತಾವು ಬರೆಯುವುದು - ಈ ಅಭ್ಯಾಸ ಸರ್ವೇಸಾಮಾನ್ಯವಾಗುತ್ತಾ ಸಾಗಿತು, ಈಗಲೂ ನಮ್ಮಲ್ಲಿ ಅನೇಕರು ಇದಕ್ಕೆ ಬಲಿಯಾಗಿದ್ದೇವೆ.

ಇದನ್ನು ಮತ್ತೂ ಹಾಳು ಮಾಡುವ ಸಂಗತಿ ಎಂದರೆ ಸೋಶಿಯಲ್ ನೆಟ್‍ವರ್ಕಿಂಗ್ ತಾಣಗಳಲ್ಲಿ ಮಾಹಿತಿಯ ವರ್ಗೀಕರಣ ಇಲ್ಲದಿರುವುದು. ವಾರ್ತಾಪತ್ರಿಕೆಯಿರಬಹುದು ಅಥವಾ ಅಂತರ್ಜಾಲ ತಾಣಗಳಿರಬಹುದು, ನಿಮಗೆ ಆಟೋಟ ಬೇಕಿದ್ದರೆ, ರಾಜಕೀಯ ಬೇಕಿದ್ದರೆ ಆ ವಿಭಾಗಕ್ಕೆ ಹೋಗಿ ನೋಡಲು ಸಾಧ್ಯವಿದೆ. ಆದರೆ ಸೋಶಿಯಲ್ ನೆಟ್‍ವರ್ಕಿಂಗ್ ತಾಣಗಳಲ್ಲಿ ನಾವು ಕಾಣುವುದು ಮಾಹಿತಿಯ ಅವರ್ಗೀಕೃತ ಪ್ರವಾಹ. ಈ ಪ್ರವಾಹದಲ್ಲಿ ಎಷ್ಟೋ ಉತ್ತಮ ವಿಚಾರಗಳು ನಮ್ಮ ಗಮನಕ್ಕೆ ಬರದೆಯೇ ಹರಿದು ಹೋಗುತ್ತವೆ, ಪ್ರಾಮುಖ್ಯತೆ ಕಡಿಮೆ ಇರುವ ವಿಷಯದ ಮೇಲೆ ನಮ್ಮ ಸಮಯವನ್ನು ವ್ಯರ್ಥ ಮಾಡುತ್ತೇವೆ. ಇದರ ಬಗ್ಗೆ ಫೇಸ್‍ಬುಕ್‍ನಲ್ಲಿ ಜನರನ್ನು ಎಚ್ಚರಿಸಲು ಕೂಡ ಯತ್ನಿಸಿದ್ದೆ, ಆದರೆ ಇದನ್ನು ಅರ್ಥಮಾಡಿಕೊಂಡು ಗಂಭೀರವಾಗಿ ಪರಿಗಣಿಸಿದವರು ಕೇವಲ ಬೆರಳೆಣಿಕೆಯಷ್ಟು ಜನ. ತಾಣವನ್ನು ಉತ್ತಮಗೊಳಿಸಿರೆಂದು ಸಂಬಂಧಪಟ್ಟವರನ್ನು ಸಂಪರ್ಕಿಸಿದ್ದೆ, ಏನೂ ಪ್ರತಿಕ್ರಿಯೆ ಬರಲಿಲ್ಲ. ಈ ವಿಷಯದಲ್ಲಿ ನಾನು ಶುರುಮಾಡಿದ ಅಭಿಯಾನದ ವಿವರಗಳನ್ನು ನಾನು ಬ್ಲಾಗಿಗೂ ಏರಿಸಿದ್ದೇನೆ. ಸಮಯ, ಆಸಕ್ತಿಗಳಿದ್ದರೆ ಇಲ್ಲಿದೆ ಕೊಂಡಿ. ಮಾತ್ರವಲ್ಲ, ಈ ವಿಷಯದಲ್ಲಿ ಕೈಜೋಡಿಸಬೇಕೆಂದಿದ್ದರೆ ಫೇಸ್‍ಬುಕ್ಕಿನ ಕೊಂಡಿಯನ್ನೂ ಕೊಟ್ಟಿದ್ದೇನೆ.
ಫೇಸ್‍ಬುಕ್ ಕೊಂಡಿ: http://www.causes.com/causes/610326?recruiter_id=126569555

ಭಾಷೆಯ ಇತಿಮಿತಿಗಳು ಕೂಡ ಸಮಯವನ್ನು ಕೊಲ್ಲುವಲ್ಲಿ ಪಾತ್ರ ವಹಿಸುತ್ತವೆ. ಉದಾ: ಯಾರೋ ಕಂಗ್ಲಿಷ್‍ನಲ್ಲಿ ಬರೆದದ್ದನ್ನು ಓದಲು ಹೆಣಗಾಡಿ ಅದರ ಮೂಲಕ ಕೂಡ ಸಮಯ ವ್ಯರ್ಥವಾಗುತ್ತದೆ. ಇದು ಈಮೈಲ್/ಚಾಟಿಂಗ್/ಉಳಿದ ತಾಣಗಳಲ್ಲಿ ಕೂಡ ಇದ್ದ ಮಿತಿ, ಆದರೆ ಸೋಶಿಯಲ್ ನೆಟ್‍ವರ್ಕಿಂಗ್ ತಾಣಗಳಲ್ಲಿರುವ ಮಾಹಿತಿಯ ಅಗಾಧತೆಯಿಂದಾಗಿ ಈ ಸಮಸ್ಯೆಯ ಪರಿಣಾಮ ಇನ್ನೂ ಭೀಕರವಾಗಿರುವುದನ್ನು ನಾನು ಕಾಣುತ್ತೇನೆ.

೩. ಅನೇಕ ‘ಸಣ್ಣ’ ಮಾಹಿತಿಗಳನ್ನೇ ಓದಿ ಓದಿ ಏಕಾಗ್ರತೆಯ ಕೊರತೆ ಎದುರಿಸುವುದು (Attention span problem)

ಇದು ಬಹುಷಃ ಇನ್ನೂ ಹೆಚ್ಚಿನ ಜನರು ಗಮನಿಸದ ವಿಷಯ. ಕೆಲವು ಆಧುನಿಕ ಸಂಶೋಧನೆಗಳು ಹೇಳುವ ಪ್ರಕಾರ ಸೋಶಿಯಲ್ ನೆಟ್‍ವರ್ಕಿಂಗ್ ತಾಣಗಳನ್ನು ಹೆಚ್ಚು ಉಪಯೋಗಿಸುವವರಿಗೆ ಏಕಾಗ್ರತೆಯ ಕೊರತೆ ಶುರುವಾಗುತ್ತದೆ ಎಂದು, ಇದು ಮಕ್ಕಳ ದೃಷ್ಟಿಯಿಂದ ನೋಡಿದಾಗ ಹೆಚ್ಚು ಆತಂಕ ತರುವ ವಿಷಯ, ಆದರೆ ದೊಡ್ಡವರೂ ಹಳ್ಳಕ್ಕೆ ಬೀಳುತ್ತಿದ್ದಾರೆ ಎಂಬುದು ಸುಳ್ಳಲ್ಲ. ಸಾಮಾನ್ಯ ಜ್ಞಾನದ ಮೂಲಕ ನೋಡಿದಾಗ ಇದು ಸತ್ಯವೇ ಎಂದು ನನಗೂ ಕಾಣುತ್ತದೆ. ಇದು ಸೋಶಿಯಲ್ ನೆಟ್‍ವರ್ಕಿಂಗ್ ತಾಣಗಳಿಂದ ಶುರುವಾದ ಸಂಗತಿಯಲ್ಲ, ಕೇಬಲ್ ಟಿ.ವಿ. ಬಂದಾಗ ಚ್ಯಾನೆಲ್ ಬದಲಾಯಿಸುತ್ತಲೇ ಇರುವುದು, ದೊಡ್ಡ ಪುಸ್ತಕಗಳನ್ನು ಓದದೇ ಹತ್ತಾರು ವಾರ್ತಾಪತ್ರಿಕೆಗಳನ್ನು ಮಾತ್ರ ಓದುವುದು ಇತ್ಯಾದಿಗಳೂ ಇಂತಹುದೇ ಸಮಸ್ಯೆಗಳನ್ನು ಹುಟ್ಟುಹಾಕಿರಬಹುದು. ಸೋಶಿಯಲ್ ನೆಟ್‍ವರ್ಕಿಂಗ್ ತಾಣಗಳಲ್ಲಿ ಕೂಡ ನಾವು ಒಂದು ವಿಷಯದಿಂದ ಇನ್ನೊಂದು ಜಿಗಿಯುತ್ತಲೇ ಸಾಗುವುದು ಬಹಳ ಸಾಮಾನ್ಯ ಸಂಗತಿ, ಇದು ಈಗಾಗಲೇ ಇದ್ದ ಸಮಸ್ಯೆಯನ್ನು ಉಲ್ಭಣಗೊಳಿಸಿದೆ ಎಂದು ನನಗೆ ಕಾಣುತ್ತದೆ. ಹೀಗಾಗಿ ಈ ಸಮಸ್ಯೆಯನ್ನು ಗಮನಿಸುವುದು ಉತ್ತಮ.

೪. ಮಾಹಿತಿಯ ಮಿಂಚಿನ ವೇಗದ ಸಂಚಲನೆ

ಮಾಹಿತಿ ಒಬ್ಬರಿಂದ ಇನ್ನೊಬ್ಬರಿಗೆ ಅತಿ ವೇಗದಲ್ಲಿ ತಲುಪುವುದರಲ್ಲಿ ಒಳಿತೂ ಇದೆ, ಕೆಡುಕೂ ಇದೆ. ಕೆಡುಕಿಗೊಂದು ಉದಾಹರಣೆ: ಇತ್ತೀಚೆಗೆ ಕಾಲೇಜೊಂದರಲ್ಲಿ ಪ್ರೇಮಿಗಳ ಜೋಡಿಯೊಂದಿತ್ತು. ಏನೋ ಕಾರಣದಿಂದ ಅವರು ಪ್ರತ್ಯೇಕವಾದರು. ಆ ಹುಡುಗ ತಮ್ಮ ಮಧ್ಯೆ ಸಂಬಂಧ ಮುರಿದುಬಿದ್ದುದನ್ನು ನೇರವಾಗಿ ಫೇಸ್‍ಬುಕ್ಕಿನಲ್ಲಿ ಹಾಕಬೇಕೇ? ಅವನ ನೂರಾರು ಮಿತ್ರರಿಗೆ ವಿಷಯ ಕೂಡಲೇ ತಿಳಿಯಿತು. (ಈಮೈಲ್ ಬಂದಾಗ ಕೂಡ ಜೀವನದ ಎಲ್ಲಾ ಆಗುಹೋಗುಗಳನ್ನು ತಮ್ಮ ನೆಟ್‍ವರ್ಕ್‍ನಲ್ಲಿದ್ದ ಎಲ್ಲರಿಗೂ ಬೇಕಾಬಿಟ್ಟಿ ಕಳುಹಿಸುವ ಸಂಪ್ರದಾಯ ಇರಲಿಲ್ಲ.) ಅದರಲ್ಲಿ ಅನೇಕರಿಗೆ ಅವಳ ಪರಿಚಯವೂ ಇತ್ತೆಂದು ಕಾಣುತ್ತದೆ, ಅವಮಾನದಿಂದ ನೊಂದುಕೊಂಡ ಅವಳು ಆತ್ಮಹತ್ಯೆಯೇ ಮಾಡಿಕೊಂಡು ಬಿಟ್ಟಳು. ಬಹುಷಃ ಫೇಸ್‍ಬುಕ್ ಇಲ್ಲದಿದ್ದರೂ ನಿಧಾನವಾಗಿ ಸುದ್ದಿ ಹರಡಿಯೇ ಹರಡುತ್ತಿತ್ತೇನೋ, ಆದರೆ ಅಷ್ಟು ಹೊತ್ತಿಗೆ ಆ ಹುಡುಗಿಗೆ ನಡೆದದ್ದರ ಬಗ್ಗೆ ಜಿಜ್ಞಾಸೆ ನಡೆಸಿ ತುಸು ಸಮತೋಲನ ಸಾಧಿಸಲು ಸಾಧ್ಯವಾಗುತ್ತಿತ್ತೋ ಏನೋ.

ಇದೊಂದು ಸಾಮಾನ್ಯ ಘಟನೆಯಲ್ಲ, ಆ ಹುಡುಗಿ ಅಷ್ಟು ದುರ್ಬಲ ಮನಸ್ಕಳಾಗಿದ್ದರೆ ಇನ್ಯಾವುದೋ ಕಾರಣದಿಂದ ಕುಸಿಯುತ್ತಿದ್ದಳು ಎಂದು ಕೆಲವರು ತಳ್ಳಿ ಹಾಕಬಹುದು, ನಾನು ಅಲ್ಲಗಳೆಯುವುದಿಲ್ಲ. ಆದರೆ ಮಿಂಚಿನ ವೇಗದಲ್ಲಿ ಮಾಹಿತಿಯ ಸಂಚಲನೆಯಲ್ಲಿರುವ ರಿಸ್ಕ್‍ಗಳ ಬಗ್ಗೆ ನಾವು ಜಾಗೃತರಾಗಿರಬೇಕು. ಕಡೇಪಕ್ಷ ನಮ್ಮಿಂದಾಗಿ ಇತರರು ನೊಂದುಕೊಳ್ಳದಂತೆ ಪ್ರಯತ್ನ ಮಾಡಬೇಕು.

೫. ಅಂತರ್ಜಾಲದ ಮೋಹಜಾಲದಲ್ಲಿ ಕಳೆದುಹೋದ ಭೌತಿಕ ನೆಟ್‍ವರ್ಕ್?

ಕೊನೆಯದಾಗಿ, ಮೊದಲೇ ವಿವರಿಸಿದಂತೆ ತಂತ್ರಜ್ಞಾನಗಳು ನಮ್ಮ ನೆಟ್‍ವರ್ಕನ್ನು ವಿಸ್ತರಿಸುತ್ತಾ ಹೋದಂತೆ ನಾವು ಹೆಚ್ಚು ಹೆಚ್ಚು ಸಮಯದ ಅಭಾವವನ್ನು ಎದುರಿಸತೊಡಗಿದ್ದೇವೆ. ಮಾತ್ರವಲ್ಲ, ಅಂತರ್ಜಾಲದಲ್ಲಿಯೇ ಮೈಮರೆತು ಭೌತಿಕ ಜಗತ್ತಿನಲ್ಲಿರುವ ನೆಟ್‍ವರ್ಕನ್ನು ಕಡೆಗಣಿಸುವ ಗಂಡಾಂತಕಾರಿ ಬೆಳವಣಿಗೆಗಳೂ ಶುರುವಾಗಿವೆ, ನಾನೂ ಕೆಲವೊಮ್ಮೆ ಇದಕ್ಕೆ ಹೊರತಲ್ಲ. ಇದರ ಬಗ್ಗೆ ನೀವೆಲ್ಲರೂ ಬೇಕಾದಷ್ಟು ಓದಿರುವಿರಿ ಎಂದು ನಂಬಿದ್ದೇನೆ. ಹೀಗಾಗಿ ಹೆಚ್ಚು ಬರೆಯಲು ಹೋಗುವುದಿಲ್ಲ.

ಹಾಗಾದರೆ ಸೋಶಿಯಲ್ ನೆಟ್‍ವರ್ಕಿಂಗ್ ತಾಣಗಳನ್ನು ಬಿಡಬೇಕೇ?

ನಾನು ಸೋಶಿಯಲ್ ನೆಟ್‍ವರ್ಕಿಂಗ್ ತಾಣಗಳಿಂದ ಸಂಪೂರ್ಣ ವಿಮುಖನಾಗದಿರಲು ಹಲವು ಕಾರಣಗಳಿವೆ:

- ನಮ್ಮ ನೆಟ್‍ವರ್ಕ್ ಒಂದನ್ನು ರಚಿಸುವತ್ತ, ಅದರಲ್ಲಿ ನಮಗೆ ನಿಜಕ್ಕೂ ಸಂಬಂಧಪಟ್ಟ ವ್ಯಕ್ತಿಗಳನ್ನು ಸೇರಿಸುವತ್ತ ಗಮನ ಹರಿಸುವುದು ಒಳ್ಳೆಯದೇ ಎಂದು ನನ್ನನಿಸಿಕೆ. ಅಗತ್ಯ ಬಿದ್ದಾಗ ಬಾವಿ ತೋಡುವ ಬದಲು ನಮ್ಮ ನಮ್ಮ ನೆಟ್‍ವರ್ಕ್ ತಯಾರಾಗಿರಿಸಿಕೊಳ್ಳುವುದೆಂಬ ಆಲೋಚನೆ ನನಗೆ ಪ್ರಿಯವಾಗಿ ಕಾಣುತ್ತದೆ.

- ಸುತ್ತಮುತ್ತಲಿನ ಅನೇಕರು ಒಂದು ದಿಕ್ಕಿನಲ್ಲಿ ಭರದಿಂದ ಸಾಗುವಾಗ ನಾವು ಕೂಡ ಸಾಗದಿದ್ದರೆ ಏನನ್ನೋ ಕಳೆದುಕೊಳ್ಳುತ್ತಾ ಇದ್ದೇವೆ, ಎಂಬ ಭಾವನೆ ಉದ್ಭವಿಸುವುದು ಸಹಜ. ತಂತ್ರಜ್ಞಾನದ ನಾಗಾಲೋಟದ ಈ ಕಾಲದಲ್ಲಿ ನಾವು ಗವಿಮಾನವರಾಗಿಯೇ ಎಲ್ಲಿ ಉಳಿದುಬಿಡುತ್ತೇವೋ ಎಂಬ ಭಯವೂ ಕಾಡುತ್ತದೆ!

- ಈಗೀಗ ತೀರಾ ಹತ್ತಿರದವರೂ ತಮ್ಮ ಬಗ್ಗೆ, ತಮ್ಮ ಫೋಟೋ ಇತ್ಯಾದಿಗಳನ್ನು ಈ ತಾಣಗಳಲ್ಲಿ ಮಾತ್ರ ಹಾಕುತ್ತಿದ್ದಾರೆ, ಈಮೈಲ್ ಮಾಡುವುದನ್ನು ಅನೇಕರು ನಿಲ್ಲಿಸಿಯೇ ಬಿಡುವುದು ಕಂಡು ಬರುತ್ತಾ ಇದೆ.

- ನಿತ್ಯವೂ ಅತಿಯಾಗಿ ಬಳಸದೇ ಹಿತಮಿತವಾಗಿ ಬಳಸುವ ನಿರ್ಧಾರ ತೆಗೆದುಕೊಂಡರೆ ಒಂದು ರೀತಿಯ ಬ್ಯಾಲೆನ್ಸ್ ಅನ್ನು ಕಷ್ಟಪಟ್ಟು ಸಾಧಿಸಬಹುದು ಎಂಬ ಗುರಿ ಮನಸ್ಸನ್ನು ಸೆಳೆಯುತ್ತದೆ. ಆದರೆ ಈ ತಾಣಗಳ ಸದ್ಯದ ಇತಿಮಿತಿಗಳಿಂದಾಗಿಯೂ, ವೈಯಕ್ತಿಕ ದೌರ್ಬಲ್ಯಗಳಿಂದಾಗಿಯೂ ಈ ಬ್ಯಾಲೆನ್ಸ್ ತಲುಪಲು ಇನ್ನೂ ಯತ್ನಿಸುತ್ತಿದ್ದೇನೆ.

ಈ ಮೊದಲೂ ಇಂತಹ ಬ್ಯಾಲೆನ್ಸ್ ಪಡೆಯಲು ಕೆಲವು ಸರ್ಕಸ್ ಮಾಡಿದ್ದಿದೆ. ಉದಾ: ಓರ್ಕುಟ್‍ನಲ್ಲಿ ನನಗೆ ಕೇವಲ ನೆಟ್‍ವರ್ಕ್ ಮಾಡಿ ಇರಿಸಿಕೊಳ್ಳಬೇಕು, ಆದರೆ ಯಾರೂ ನನಗೆ scrap ಬರೆಯಬೇಡಿ ಎಂಬ ವಿನಂತಿ ಕಣ್ಣಿಗೆ ರಾಚುವಂತೆ ನನ್ನ scrapbookನಲ್ಲಿ ಹಾಕಿದ್ದೆ. ಅದನ್ನು ಮುಖ್ಯವಾಗಿ ಹಾಕಿದ್ದು ಜನರು ವಿವೇಚನೆ ಇಲ್ಲದೆ ವೈಯಕ್ತಿಕ ವಿಷಯಗಳನ್ನು ಎಲ್ಲರೆದುರಿಗೆ ಚರ್ಚಿಸುತ್ತಿದ್ದುದರಿಂದ. ಅನೇಕರು ಮುಸಿಮುಸಿ ನಕ್ಕಿದ್ದರು ಎನ್ನುವುದು ಸುಳ್ಳಲ್ಲ :-) ಆದರೆ ಕೆಲವರು ಅರ್ಥಮಾಡಿಕೊಂಡಿದ್ದರು ಕೂಡ. ಓರ್ಕುಟ್‍ನಲ್ಲಿ ಈಗಲೂ ಆ ಸೂಚನೆ ಹಾಗೆಯೇ ಇದೆ! ಫೇಸ್‍ಬುಕ್ಕಿಗೆ ಬರುವ ಹೊತ್ತಿಗೆ ಜನರು ತುಸು ಹೆಚ್ಚು ಪ್ರಬುದ್ಧರೂ ಆಗಿದ್ದರು, ಮಾತ್ರವಲ್ಲ ಮಾಹಿತಿಯ ಮಹಾಪೂರದಿಂದ ಕಂಗೆಟ್ಟು ವೈಯಕ್ತಿಕ ಸಂದೇಶಗಳನ್ನು ಇತರರ wallನಲ್ಲಿ ಹಾಕುವುದಕ್ಕೆ ಅವರಿಗೆ ಸರಿಯಾಗಿ ಸಮಯ ಸಿಗುತ್ತಿರಲಿಲ್ಲ, ಹೀಗಾಗಿ ಇಲ್ಲಿ ಅಥವಾ ಗೂಗಲ್+ನಲ್ಲಿ ಹಾಕುವ ಅಗತ್ಯ ಇನ್ನೂ ಕಂಡು ಬರಲಿಲ್ಲ.

ಕೊನೆಯ ಮಾತು

ಸೋಶಿಯಲ್ ನೆಟ್‍ವರ್ಕಿಂಗ್‍ನಿಂದ ಖಂಡಿತಾ ಪ್ರಯೋಜನಗಳಿವೆ, ಆದರೆ ನೀವು ಅದರ ನಿಜವಾದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದೀರಾ? ಅಥವಾ ಕಡಿಮೆ ಪ್ರಾಮುಖ್ಯತೆ ಇರುವ ವಿಷಯಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡುತ್ತಿದ್ದೀರಾ? ನಿಮ್ಮ ಅಂತರ್ಜಾಲದ ನೆಟ್‍ವರ್ಕ್‍ನ ಮೇಲೆ (ಈಮೈಲ್/ಚಾಟಿಂಗ್/ಸೋಶಿಯಲ್ ನೆಟ್‍ವರ್ಕಿಂಗ್ ತಾಣ ಇತ್ಯಾದಿ ಎಲ್ಲಾ ಸೇರಿಸಿ) ನೀವು ಅಗತ್ಯಕ್ಕಿಂತ ಹೆಚ್ಚು ಸಮಯ ವ್ಯಯಿಸುತ್ತಿದ್ದೀರಾ? ಇದೆಲ್ಲಾ ನೀವು ನಿಮ್ಮನ್ನೇ ಕೇಳಿಕೊಂಡು ಉತ್ತರಿಸಬೇಕಾದ ಪ್ರಶ್ನೆಗಳು. ಶುಭವಾಗಲಿ.

ವಿ.ಸೂ. ನನಗನಿಸಿದಂತೆ ಸೋಶಿಯಲ್ ನೆಟ್‍ವರ್ಕಿಂಗ್ ತಾಣಗಳು ಅನೇಕ ಬದಲಾವಣೆಗಳನ್ನು ಮಾಡಿಕೊಂಡು ಜನರಿಗೆ ಇನ್ನೂ ಹೆಚ್ಚು ಉಪಯುಕ್ತವಾಗಬಹುದು, ನಮ್ಮ ಒಟ್ಟಾರೆ ಪ್ರಗತಿಯಲ್ಲಿ ಮಹತ್ತರವಾದ ಪಾತ್ರ ವಹಿಸಬಹುದು. ಈ ನಿಟ್ಟಿನಲ್ಲಿ ನಾನು ಬರೆದ ಇನ್ನೊಂದು ಲೇಖನವಿದೆ. ಸಮಯ ಸಿಕ್ಕಿದಾಗ ಓದಿ.

8 comments:

sharma said...

Ee social network ondu thara knife idda haage.Apple cut maadalikku upayogisabahudu, nimmanne adu stab maadalu bahudu.Upayoga padeyuvudu upayogisuvaarige bitta vichaara.Hendathiyanne pariganisi. Aake nimma jeevanavanne swarga maadalu bahudu, naraka maadalu bahudu. Hendathi beda ennalaadeethe?

ಕೃಷ್ಣ ಶಾಸ್ತ್ರಿ - Krishna Shastry said...

ಶರ್ಮರೇ, ಬಹುಷಃ ಚಾಕು/ಚೂರಿ ಉತ್ತಮ ಉಪಮೆ ಅಲ್ಲ, ಅದು ಮೊದಲೂ ಇತ್ತು ಈಗಲೂ ಇದೆ.

ಇದೊಂದು ಹೊಸ ರೀತಿಯ ಹಣ್ಣು ಇದ್ದ ಹಾಗೆ. ಕೆಲವೊಮ್ಮೆ ತುಂಬಾ ಸಿಹಿ ಇರುತ್ತದೆ ಹಾಗೂ ಆರೋಗ್ಯಕ್ಕೆ ಉಪಯುಕ್ತ ಅಂಶಗಳಿರುತ್ತವೆ ಎಂದಿಟ್ಟುಕೊಳ್ಳೋಣ, ಆದರೆ ಕೆಲವೊಮ್ಮೆ ಕಹಿಯೂ ಸ್ವಲ್ಪ ವಿಷಯುಕ್ತವೂ ಆಗಿರುತ್ತದೆ ಎಂದು ಪರಿಗಣಿಸೋಣ. ಹಾಗೆಂದು ತಿನ್ನಬೇಕೇ ಬಿಡಬೇಕೇ ಎನ್ನುವುದು ಸಮಸ್ಯೆ, ಅಷ್ಟೆ :-)

PRASHANTH said...

nice one shastri, I am definitely sure people are not able to concentrate because of social networking sites. but sometimes its useful for e.g I will come to know about your blogs only through Facebook ..

Anonymous said...

Shastrigale how to deadiction madodu anta mahithi kotre olledittu...

ಕೃಷ್ಣ ಶಾಸ್ತ್ರಿ - Krishna Shastry said...

@Prashant: True, I don't send my new blog post links through emails these days. May be should start doing it again :-)

@Anonymous: Good point, will write about it sometime.

prabhamani nagaraja said...

ಮಾಹಿತಿಯುಕ್ತ ಲೇಖನಕ್ಕಾಗಿ ಧನ್ಯವಾದಗಳು,

ವಿ.ರಾ.ಹೆ. said...

Article fair enough to publish in newspapers and magazines. Most of your articles are so. Plz take your articles beyond blog if not done so far.

ಕೃಷ್ಣ ಶಾಸ್ತ್ರಿ - Krishna Shastry said...

ವಿಕಾಸ್, ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಪುನಃ ಧನ್ಯವಾದಗಳು. ಇಂತಹ ಪ್ರೋತ್ಸಾಹಭರಿತ ಮಾತುಗಳು ಬರವಣಿಗೆಯನ್ನು ಮುಂದುವರಿಸಲು ಖಂಡಿತಾ ಪ್ರೇರೇಪಿಸುತ್ತವೆ.

ಒಳ್ಳೆಯದೋ, ಕೆಟ್ಟದೋ - ಒಟ್ಟಿನಲ್ಲಿ ನಾನು ಪತ್ರಿಕೆಗಳಿಗೆ ಕಳುಹಿಸುವುದಿಲ್ಲ ಎಂಬ ನಿರ್ಧಾರವನ್ನು ತುಂಬಾ ಮೊದಲೇ ತೆಗೆದುಕೊಂಡಿದ್ದೇನೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಸಂಪಾದಕರು ನನ್ನ ಮತ್ತು ಜಗತ್ತಿನ ಮಧ್ಯೆ ಇರುವ ಕಂದಕ ಎಂದು ನನ್ನ ಅಭಿಪ್ರಾಯ, ಇದು ಅವರ ತಪ್ಪಲ್ಲ - ಆದರೆ ನನಗೆ ಇಷ್ಟವಾಗದ ವಿಷಯ, ಅಷ್ಟೆ. ಆದರೆ ಇಲ್ಲಿ ವಿಪರ್ಯಾಸ ಎಂದರೆ ಬರೀ ಅಂತರ್ಜಾಲದಲ್ಲಿ ಹಾಕಿದರೆ ಕೆಲವೇ ಕೆಲವು ಜನರನ್ನು ಮಾತ್ರ ತಲುಪಲು ಸಾಧ್ಯ, ಅನೇಕ ಗಂಭೀರ ಓದುಗರನ್ನು ತಲುಪುವುದೇ ಇಲ್ಲ.

ಇದಕ್ಕಿಂತಲೂ ಹೆಚ್ಚು ಇಷ್ಟವಾಗದ ವಿಷಯ ಎಂದರೆ - ಸಂಪಾದಕರು ನಮ್ಮ ಲೇಖನಗಳನ್ನು ತಿದ್ದುಪಡಿ ಮಾಡುವುದು. ಸಾವಿರಾರು ಲೇಖಕ/ಲೇಖನಗಳೊಂದಿಗೆ ಈಜಾಡುತ್ತಾ, ಕಾಲಕಾಲಕ್ಕೆ ಪತ್ರಿಕೆಯನ್ನು ಹೊರತರುವ ಅನಿವಾರ್ಯ ಜವಾಬ್ದಾರಿ ಹೊತ್ತ ಅವರಿಗೆ ಕೊನೆಯ ಪ್ರತಿಯನ್ನು ಲೇಖಕರಿಗೆ ಕಳುಹಿಸಿ, ಪುನಃ ಚರ್ಚಿಸಿ ಇಬ್ಬರಿಗೂ ಒಪ್ಪಿಗೆಯಾಗುವ ಪ್ರತಿಯನ್ನು ಪ್ರಕಟಿಸಲು ಸಾಧ್ಯವಾಗುವುದಿಲ್ಲ, ಅದು ಅಪ್ರಾಯೋಗಿಕವಾಗುತ್ತದೆ. ನಾನು ಇತರರ ತಿದ್ದುಪಡಿಗಳನ್ನು ಒಪ್ಪುವುದಿಲ್ಲವೆಂದೇನಲ್ಲ, ಆದರೆ ನನ್ನ ಅನುಮತಿ ಇಲ್ಲದೆ ತಿದ್ದುಪಡಿ ಮಾಡುವುದು ನನಗೆ ಜೀರ್ಣವಾಗದ ವಿಷಯ - ನಾನು ವ್ಯಕ್ತಪಡಿಸಬೇಕೆಂದಿರುವ ವಿಷಯಗಳು ಎಲ್ಲಿ ಬದಿಗೆ ತಳ್ಳಿ ಹೋಗುತ್ತವೋ, ಎಲ್ಲಿ ತಿರುಚಿಹೋಗುತ್ತವೋ ಎಂಬ ಹೆದರಿಕೆ.

ಇದು ಅಹಂಕಾರವಲ್ಲ, ದಯವಿಟ್ಟು ತಪ್ಪು ತಿಳಿದುಕೊಳ್ಳಬೇಡಿ. ಆದರೆ ಸದ್ಯಕ್ಕೆ ಮುಕ್ತ ಅಭಿವ್ಯಕ್ತಿಯನ್ನು ತಾಳಿಕೊಳ್ಳುವ ಅಂತರ್ಜಾಲವೇ ಸಾಕು ಎಂದು ಕಾಣುತ್ತಾ ಇದೆ.

Post a Comment