About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Sunday, September 4, 2011

ಅಂತರ್ಜಾಲದಲ್ಲಿ ಬರುವ ‘ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ’ ವಿನಂತಿಗಳು ಎಷ್ಟು ಸತ್ಯ?


ಮನುಷ್ಯ ಸಂಘಜೀವಿ, ಪರಸ್ಪರ ಕಷ್ಟಗಳಿಗೆ ಸ್ಪಂದಿಸುವುದು ಸಹಜಗುಣ, ನಮ್ಮ ಒಟ್ಟಾರೆ ಏಳ್ಗೆಯಲ್ಲಿ ಇಂತಹ ಸಹಕಾರ ಮನೋಭಾವ ಮಹತ್ತರ ಪಾತ್ರ ವಹಿಸುತ್ತದೆ. ಆದರೆ ದುರದೃಷ್ಟವಶಾತ್ ಮೋಸ, ವಂಚನೆ, ಸ್ವಾರ್ಥ ಕೂಡ ಮನುಷ್ಯನ ಜೀವನದಲ್ಲಿ ಅಷ್ಟೇ ಸ್ವಾಭಾವಿಕವಾದ ವಿಷಯಗಳು, ಇದರ ಬಗ್ಗೆ ಎಚ್ಚರವಿದ್ದರೆ ಒಳಿತು.

ಅಂತರ್ಜಾಲ ಈಗ ಅನೇಕರ ಜೀವನದಲ್ಲಿ ಅವಿಭಾಜ್ಯ ಅಂಗವಾಗುತ್ತಾ ಬೆಳೆದಿದೆ. ಇಲ್ಲಿ ಹೊಸದಾಗಿ ಕಾಣುವ ಅದ್ಭುತಗಳ ಮಧ್ಯೆ ಮೈಮರೆತು ಹೋಗುತ್ತಿದ್ದಾರೆ ಜನ. ಇದರೊಂದಿಗೇ ಕಳ್ಳಕಾಕರಿಗೇನೂ ಕಡಿಮೆ ಇಲ್ಲ, ನಿತ್ಯವೂ ಹಲವು ರೀತಿಯಲ್ಲಿ ಸಹಸ್ರಾರು ಜನ ಟೋಪಿ ಹಾಕಿಸಿಕೊಳ್ಳುತ್ತಿದ್ದಾರೆ; ಈಗ ನಿಧಾನಕ್ಕೆ ಜನರಿಗೆ ಈ ಬಗ್ಗೆ ಅರಿವು ಹೆಚ್ಚುತ್ತಿರುವುದು ಸಂತಸದ ಸಂಗತಿ. ಈ ನಿಟ್ಟಿನಲ್ಲಿ ಒಂದು ನಿರ್ದಿಷ್ಟವಾದ ವಿಷಯದ ಬಗ್ಗೆ ಒಂದು ಚಿಕ್ಕ ಲೇಖನ.

ನಾವು ಈ ರೀತಿಯ ಅನೇಕ ಈ-ಮೈಲ್‍ಗಳನ್ನು ನೋಡುತ್ತೇವೆ: ‘ಕಷ್ಟದಲ್ಲಿರುವ ವಿದ್ಯಾರ್ಥಿ, ಸಹಾಯ ಮಾಡಿ’, ‘ಆರ್ಥಿಕ ಕಷ್ಟದಲ್ಲಿರುವ ರೋಗಿ/ಕುಟುಂಬ, ಶಸ್ತ್ರಚಿಕಿತ್ಸೆಗೆ ಧನಸಹಾಯ ಬೇಕು’ ಇತ್ಯಾದಿ. ಇಂತಹ ಪತ್ರಗಳಲ್ಲಿ ಖಾತೆ ವರ್ಗಾವಣೆ (Account Transfer) ಮಾಡಲು ಬ್ಯಾಂಕ್ ಖಾತೆಯ ವಿವರಗಳು ಇತ್ಯಾದಿ ಇರುತ್ತವೆ. ಕೆಲವು ಪತ್ರಗಳಲ್ಲಿ ಏನಾದರೂ ‘ಪ್ರಶ್ನೆ’ಗಳಿದರೆ ಪರಿಹರಿಸಿಕೊಳ್ಳಲೆಂದು ಮೊಬೈಲ್ ನಂಬರ್ ಕೂಡ ಇರುತ್ತದೆ.

ಅಂತರ್ಜಾಲಕ್ಕೂ ಹಿಂದಿನ ಕಾಲದಲ್ಲಿ...

ಮೊದಲು ಮನೆ-ಮನೆಗೆ ನೋಟೀಸು ಹಿಡಿದುಕೊಂಡು ಬರುತ್ತಿದ್ದರು - ನೆರೆ-ಭೂಕಂಪ-ಕ್ಷಾಮ ಪೀಡಿತರೆಂದು ಹೇಳಿಕೊಂಡು. ಅವರ ಕೈಯಲ್ಲಿ ಒಂದು ಸರ್ಟಿಫಿಕೇಟು ಕೂಡ ಇರುತ್ತಿತ್ತು. ಅವರನ್ನು ನೋಡುವಾಗ ಅನೇಕ ಸಲ ಮರುಕ ಬರುತ್ತಿತ್ತು ನಿಜ, ಆದರೆ ಯಾವುದು ನಿಜ, ಯಾವುದು ಸುಳ್ಳು ಎಂದು ತಿಳಿಯುವುದೂ ಅಸಾಧ್ಯ ಇತ್ತು. ಅನೇಕ ಜನ ಮಧ್ಯಮ ಮಾರ್ಗವನ್ನು ಹಿಡಿಯುತ್ತಿದ್ದರು - ಭಿಕ್ಷುಕರಿಗೆ ಕೊಡುವಂತೆ ಸಣ್ಣ ಸಹಾಯ ಮಾಡಿ. ಈಗಲೂ ಬಸ್ಸು-ರೈಲುಗಳಲ್ಲಿ ಹೀಗಿರುವವರು ಕಾಣಸಿಗುತ್ತಾರೆ, ಆದರೆ ಮನೆಗೆ ಬರುವುದು ಕಮ್ಮಿ ಆಗಿದೆ ಎಂದು ಕಾಣುತ್ತದೆ (ಕಾರಣ ಗೊತ್ತಿಲ್ಲ - ಸುಭಿಕ್ಷವೋ ಅಥವಾ ಇದರಲ್ಲಿ ಜನರ ನಂಬಿಕೆ ಹೋಗಿದೆಯೋ ಅಥವಾ ಜನರು ಸ್ಪಂದನಾರಹಿತವಾಗಿದ್ದಾರೋ ಗೊತ್ತಿಲ್ಲ).

ವಿನಂತಿಸುವ ಜನರ ಸಾಕ್ಷರತೆ, ನಯವಾದ ಮಾತು ಬಿಟ್ಟರೆ ಮೂಲಭೂತವಾಗಿ ಇದಕ್ಕೂ ಅಂತರ್ಜಾಲದಲ್ಲಿ ಈಮೈಲ್ ಮೂಲಕ ಬರುವ ವಿನಂತಿಗೂ ಏನು ವ್ಯತ್ಯಾಸ? ಹಾಗಾಗ್ಯೂ ಅಂತರ್ಜಾಲದಲ್ಲಿ ಬರುವ ವಿನಂತಿಗಳಿಗೆ ಅನೇಕ ಜನ ಸ್ಪಂದಿಸುವುದನ್ನು ನಾನು ಕಂಡಿದ್ದೇನೆ. ಕೆಲವೊಮ್ಮೆ ಸಾವಿರಾರು ರೂ.ಗಳು ಹರಿದು ಬರುತ್ತವೆ, ನಾನೂ ಕೂಡ ಕೆಲವೊಮ್ಮೆ ಇಂತಹ ಧನಸಹಾಯ ಮಾಡಿದ್ದೇನೆ. ಆದರೆ ಇದರಲ್ಲಿ ಮೋಸವಿರುವುದಿಲ್ಲ ಎಂದು ಭಾವಿಸುವುದು ಭ್ರಮೆಯಲ್ಲವೇ ಎಂದು ಕೆಲವೊಮ್ಮೆ ಚಿಂತಿಸುತ್ತಿರುತ್ತೇನೆ.

ಇನ್ನೊಂದು ರೀತಿಯ ವಿನಂತಿಯನ್ನು ಪರಿಗಣಿಸೋಣ: ವಾರ್ತಾಪತ್ರಿಕೆಗಳಲ್ಲಿ ಬರುವ ವಿನಂತಿಗಳು. ಇದು ಅಂತರ್ಜಾಲ ಬರುವುದಕ್ಕಿಂತ ಮೊದಲೂ ಇತ್ತು. ಇದಕ್ಕೆ ಸಾಮಾನ್ಯವಾಗಿ ಮನೆಗಳಿಗೆ ನೇರವಾಗಿ ಬರುವ ಜನರ ವಿನಂತಿಗಳಿಗಿಂತ ಹೆಚ್ಚು ಬೆಲೆ ಕೊಡುತ್ತಾರೆ, ಸ್ಪಂದಿಸುತ್ತಾರೆ. ಕಾರಣ? ಪತ್ರಿಕೆಯವರು ಅಗತ್ಯದ/ಕಷ್ಟದ ಸತ್ಯಾಸತ್ಯತೆಗಳನ್ನು ಪರಿಶೀಲಿಸಿರುತ್ತಾರೆ ಎಂಬ ನಂಬಿಕೆ ಇರಬಹುದು. (ಮನೆಯಲ್ಲಿ ನೇರವಾಗಿ ಕೊಡಲು ಜನರು ಹಿಂಜರಿಯುವುದಕ್ಕೆ ಇನ್ನೊಂದು ಕಾರಣವೂ ಇರಬಹುದು: ಒಮ್ಮೆ ‘ಕೊಡುಗೈ ದಾನಿ’, ‘ಆರ್ದ್ರ ಹೃದಯದವರು’ ಎಂಬ ಹಣೆಪಟ್ಟಿ ಸಿಕ್ಕಿದರೆ ಆನಂತರ ವಿನಂತಿಸುವವರ ಸಂಖ್ಯೆ ಜಾಸ್ತಿಯಾಗುತ್ತದೆ ಎಂಬ ಹೆದರಿಕೆಯೂ ಇರಬಹುದು!)
 
ಅಂತರ್ಜಾಲದಲ್ಲಿ ವ್ಯಕ್ತಿಯ ನಿಜ-ಗುರುತು/ಪರಿಚಯ

ಅಂತರ್ಜಾಲದಲ್ಲಿ ನಾವು ವ್ಯಕ್ತಿಗಳನ್ನು ನೇರವಾಗಿ ಕಂಡು ಮಾತನಾಡಿಸುವುದಿಲ್ಲ, ಒಬ್ಬರು ಹೆಸರು-ವಿಳಾಸ-ಫೋಟೋ ಎಲ್ಲವನ್ನೂ ತಪ್ಪು-ತಪ್ಪಾಗಿ ಆದರೆ ನೈಜವಾಗಿ ತೋರುವಂತೆ ಹಾಕಬಹುದು, ಸಂಪೂರ್ಣವಾಗಿ (ಸಮಾಜದಲ್ಲಿ ತಕ್ಕಮಟ್ಟಿಗೆ ಒಳ್ಳೆಯ ಹೆಸರು ಮಾಡಿದ) ಇನ್ನೊಬ್ಬರದ್ದು ಕೂಡ ಹಾಕಬಹುದು (impersonation - identity theft), ಒಟ್ಟಿನಲ್ಲಿ ಗುರುತು ಖಚಿತವಾಗಿರುವುದಿಲ್ಲ, ಇದೊಂದು ದೊಡ್ಡ ಸಮಸ್ಯೆ.

ಅಗತ್ಯದ ಹಾಗೂ ಸಾಕಾದಷ್ಟು ಮಾಹಿತಿ (necessary and sufficient conditions)

ದುಡ್ಡು ಕಳಿಸಲು ಬ್ಯಾಂಕ್ ಖಾತೆಯ ವಿವರ ಅಗತ್ಯ ಹಾಗೂ ಉದ್ದೇಶಿತ ಕಾರ್ಯಕ್ಕೆ ಅದು ಸಾಕು. ಆದರೆ ವಿನಂತಿಯ ಸತ್ಯಾಸತ್ಯತೆಯನ್ನು ಅರಿಯಲು ಯಾವ ರೀತಿಯ ಮಾಹಿತಿ ಬೇಕು? ಅದನ್ನು ಯಾರು ಅನುಮೋದಿಸಬೇಕು? ಮೊಬೈಲ್ ನಂಬರ್ ಇದ್ದರೆ ಒಂದಷ್ಟು ಪ್ರಶ್ನೆ ಕೇಳಬಹುದು; ಆದರೆ ಮೋಸ ಮಾಡಬೇಕೆಂದೇ ಹೊರಟಿರುವವರು ಬಹಳ ಸುಲಭವಾಗಿ ಅದನ್ನೂ ಉತ್ತರಿಸಿ ಸಮಾಧಾನಕರವಾದ ಉತ್ತರವನ್ನು ಕೊಡಬಹುದಲ್ಲವೇ?

ಕೆಲವು ಸಲಹೆಗಳು:

೧) ವಿನಂತಿಯ ಸತ್ಯಾಸತ್ಯತೆಗಳನ್ನು ಸರಿಯಾಗಿ ಪರಿಶೀಲಿಸಿ, ಇದರಲ್ಲಿ ಸಂಕೋಚ ಪಡುವಂಥದ್ದು ಏನೂ ಇಲ್ಲ:
·         ವಿನಂತಿ ನಂಬಲರ್ಹ ಮೂಲಗಳಿಂದ ಬಂದಿದೆಯೇ?
·         ಅಂತರ್ಜಾಲದ ವ್ಯಕ್ತಿಗುರುತನ್ನು ಕುರುಡಾಗಿ ನಂಬಬೇಡಿ, ಅವರು ನಿಮ್ಮೊಡನೆ ಕೆಲವಾರು ವರ್ಷಗಳಿಂದ ಅಂತರ್ಜಾಲದಲ್ಲಿ ನಯವಾದ ಸಂಬಂಧ ಬೆಳೆಸಿದ್ದರೂ ಕೂಡ ಜಾಗ್ರತೆಯಿಂದಿರಿ, ಹಣ-ದುರಾಸೆ ಎಂಥವರನ್ನೂ ಮರುಳು ಮಾಡುತ್ತದೆ, ಮಾತ್ರವಲ್ಲ ಹೀಗೆ ಮೋಸ ಮಾಡಲೆಂದೇ ಇಷ್ಟು ಸಮಯ ಬೆಣ್ಣೆ ಹಚ್ಚಿದ್ದರೂ ಆಶ್ಚರ್ಯ ಇಲ್ಲ.
·         ನಿಮ್ಮದೇ ಸಮುದಾಯದ ಹೆಸರನ್ನು, ಭಾಷೆಯನ್ನು ಬಳಸಿ ಮೋಸಮಾಡುವವರು ಇರಬಹುದು, ಎಚ್ಚರಿಕೆ
·         ನಿಮ್ಮ ಸ್ವಂತ ಪರಿಚಯದವರೇ ಕಳಿಸಿದರೂ ಕೂಡ ಅವರು ವಿನಂತಿಯ ಮೂಲವನ್ನು ಚೆನ್ನಾಗಿ ಪರಿಶೀಲಿಸಿದ್ದಾರೆಯೇ ಎಂದು ತಿಳಿಯಿರಿ, ಇಲ್ಲವಾದರೆ ಒಬ್ಬರು ಮೋಸ ಹೋದ ಮೇಲೆ ಅವರ ಮೂಲಕ ಇನ್ನೂ ಹತ್ತಾರು ಜನರು ಮೋಸ ಹೋಗುವ ಸರಪಳಿ ಪ್ರಕ್ರಿಯೆ ಶುರುವಾಗಬಹುದು
·         ವಿನಂತಿಯನ್ನು ಯಾರಾದರೂ ಗಣ್ಯ ವಕ್ತಿಗಳು ಅಥವಾ ಸಂಸ್ಥೆಗಳು ವಿನಂತಿಯನ್ನು ಅನುಮೋದಿಸಿದ್ದಾರೆಯೇ ಎಂಬುದನ್ನು ಗಮನಿಸಿ ಹಾಗೂ ಇದರ ಸತ್ಯಾಸತ್ಯತೆಗಳನ್ನು ವಿಚಾರಿಸಿ
·         ಬ್ಯಾಂಕ್ ಖಾತೆಯನ್ನು ಹಾಗೂ ಮೊಬೈಲ್ ನಂಬರನ್ನು ಒಮ್ಮೆ ಗೂಗಲ್ ಮಾಡಿ ನೋಡಿ, ಇವು ಪದೇ ಪದೇ ವಿವಿಧ ವಿನಂತಿಗಳಲ್ಲಿದ್ದರೆ ಅದು ಮೋಸದ ಬಲವಾದ ಸಂಕೇತವಿರಲೂಬಹುದು!
·         ಬೇಕಾದರೆ ಮೊಬೈಲ್ ನಂಬರಿಗೆ ಕರೆ ಮಾಡಿ ವಿಚಾರಿಸಿ, ಆದರೆ ವಿನಯ-ಸೌಜನ್ಯಗಳನ್ನು ಮರೆಯದಿರಿ!

೨) ಅಗತ್ಯದ ಸಂಪೂರ್ಣವಾದ ವಿವರಗಳಿವೆಯೋ ಪರಿಶೀಲಿಸಿ: ಎಷ್ಟು ಹಣದ ಅಗತ್ಯ ಇದೆ, ಪ್ರಸ್ತುತ ಆರ್ಥಿಕ ಸ್ಥಿತಿಯ ಬಗ್ಗೆ ಸಮಾಧಾನಕರವಾದ ವಿವರಗಳಿವೆಯೇ, ಸಂಪೂರ್ಣ ವಿಳಾಸವಿದೆಯೇ ಇತ್ಯಾದಿ.

೩) ಎಷ್ಟು ಸಹಾಯ ಈಗಾಗಲೇ ದೊರಕಿದೆ ಎಂಬುದನ್ನು ವಿಚಾರಿಸಿ: ಅಂತರ್ಜಾಲದ ಮೂಲಕ ಸಹಾಯ ಕೇಳುವವರಿಗೆ ಧನ ಸಹಾಯ ಸಿಗುತ್ತಿದ್ದ ಹಾಗೆ ‘ಇದುವರೆಗೆ ಎಷ್ಟು ಸಹಾಯ ಸಿಕ್ಕಿದೆ’ ಎಂಬ ಮಾಹಿತಿಯನ್ನು ಸುಲಭವಾಗಿ ಕೈಗೆಟಕುವಂತೆ ಪ್ರಕಟಿಸಲು ಸಾಧ್ಯವಿದೆ (ಉದಾ: ಚಿಕ್ಕ ಬ್ಲಾಗ್ ಮೂಲಕ). ಆಗ ಅಗತ್ಯಕ್ಕೂ ಮೀರಿದ ಧನ ಸಹಾಯವನ್ನು ತಪ್ಪಿಸಬಹುದು. ಗಮನಿಸಿ: ಇದು ವಾರ್ತಾಪರ್ತಿಕೆಗಳ ಮೂಲಕ ಸುಲಭ ಸಾಧ್ಯ ಅಲ್ಲ, ಆದರೆ ಅಂತರ್ಜಾಲದಲ್ಲಿ ಸಾಧ್ಯ, ಇದನ್ನು ನಾವು ಅಪೇಕ್ಷಿಸುವುದು ತಪ್ಪಲ್ಲ.

೪) ಈಗಾಗಲೇ ಇರುವ ವ್ಯವಸ್ಥೆಯನ್ನು ಬಳಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸಿ: ಕಷ್ಟದಲ್ಲಿರುವವರು ತಮ್ಮ ಸಮುದಾಯದಲ್ಲಿ ಅಥವಾ ಸರಕಾರದ ಮೂಲಕ ಈಗಾಗಲೇ ಪ್ರಚಲಿತವಾಗಿರುವ ಧನ ಸಹಾಯ ನಿಧಿ/ಕಾರ್ಯಕ್ರಮಗಳನ್ನು ಉಪಯೋಗಿಸಿಕೊಳ್ಳಲು ಪ್ರಯತ್ನಿಸಿದ್ದಾರೆಯೇ ಎಂಬುದನ್ನು ವಿಚಾರಿಸಿ. ಇದರಲ್ಲಿ ತಪ್ಪೇನೂ ಇಲ್ಲ. ಕೆಲವೊಮ್ಮೆ ಅಂಥವರಿಗೆ ಮಾಹಿತಿಯ ಕೊರತೆ ಇದ್ದರೂ ಇರಬಹುದು, ಮಾತ್ರವಲ್ಲ, ಅಂತಹ ವ್ಯವಸ್ಥೆಗಳಲ್ಲಿ ದಾನಿಗಳಿಗೂ ತೆರಿಗೆ ವಿನಾಯಿತಿಯ ಸೌಲಭ್ಯಗಳಿರುತ್ತವೆ. ಅಂತರ್ಜಾಲದಲ್ಲಿ ಕಳುಹಿಸಿದರೆ ಸುಲಭವಾಗಿ ಸಿಗುತ್ತದೆ ಎಂಬ ಮನೋಭಾವದವರೂ ಇರಬಹುದು, ಅಲ್ಲಗಳೆಯುವಂತಿಲ್ಲ.

ದೂರದೇಶ ವಾಸದ, ಸುಲಭ ಜೀವನದ ಪ್ರಭಾವ ಏನು?

ಕೆಲವೊಮ್ಮೆ ದೂರದೇಶದಲ್ಲಿರುವವರಿಗೆ ತಾಯ್ನಾಡಿನಲ್ಲಿರುವ ತಮ್ಮವರಿಗೆ ಸಹಾಯ ಮಾಡಬೇಕೆಂಬ ಬಲವಾದ ತುಡಿತ ಇರುತ್ತದೆ, ಭಾರತದಲ್ಲಿ ದೊಡ್ಡದೆನಿಸುವ ಮೊತ್ತ ಅಲ್ಲಿ ಅವರಿಗೆ ಕೆಲವೊಮ್ಮೆ ಸಣ್ಣದಾಗಿಯೂ ಕಾಣುತ್ತದೆ. ಮಾತ್ರವಲ್ಲ, ಇಲ್ಲಿಗಿಂತ ಹೆಚ್ಚು ನಂಬಿಕೆ-ನಯ-ವಿನಯಗಳಿಂದ ಕೂಡಿದ ಸಮಾಜದಲ್ಲಿ ಇರುವಾಗ ಸುಲಭವಾಗಿ ಈ ರೀತಿಯ ವಿನಂತಿಗಳನ್ನು ನಂಬಿಬಿಡುವ ಸಾಧ್ಯತೆಗಳೂ ಇವೆ. ಭಾರತದಲ್ಲೇ ಇದ್ದು ಎ.ಸಿ. ಕೋಣೆಗಳಲ್ಲಿ ಕೆಲಸ ಮಾಡುತ್ತಾ, ಅನೂಹ್ಯ ಸಂಬಳವನ್ನು ಪಡೆಯುತ್ತಾ ಕಾರುಗಳಲ್ಲಿ ಓಡಾಡುವ ಅನೇಕರಿಗೆ ಕೂಡ ಇದು ಅನ್ವಯವಾಗಬಹುದೇನೋ. ಅಂತವರಿಗೆ ಹೃದಯ ಕರಗಿಸುವ ಒಂದು ವಿನಂತಿ ಈಮೈಲ್ ಮುಖಾಂತರ ಬಂದಾಗ ತಕ್ಷಣ ಸ್ಪಂದಿಸಬೇಕೆಂದು ಅನಿಸುವುದರಲ್ಲಿ ಆಶ್ಚರ್ಯವಿಲ್ಲ. ಇಂತಹ ಅನೇಕರಿಗೆ ಸತ್ಯಾಸತ್ಯತೆಗಳನ್ನು ಪರಿಶೀಲಿಸಲು ಸಮಯವೂ ಇರುವುದಿಲ್ಲ, ಸುಲಭಸಾಧ್ಯವೂ ಅಗಿರುವುದಿಲ್ಲ. ಇದೆಲ್ಲಾ ನಾನು ಹೇಳುತ್ತಿರುವುದು ಅವಹೇಳನಾಕಾರಿಯಾಗಿ ಅಲ್ಲ, ಆದರೆ ದೂರದೇಶದಲ್ಲಿರುವ ಅಥವಾ ಸುಲಭ ಜೀವನ ಸಾಗಿಸುವ ಸಹೃದಯರು ಈ ರೀತಿಯ ವಿನಂತಿಗಳಿಗೆ ಹೇಗೆ ಸ್ಪಂದಿಸಬಹುದು ಎಂಬುದರ ಬಗ್ಗೆ ಪ್ರಾಮಾಣಿಕ ಚಿಂತನೆ, ಅಷ್ಟೆ.

ನೀವೇ ಮುಂದಾಳುತನವನ್ನು ವಹಿಸಿಕೊಳ್ಳುತ್ತಿದ್ದೀರಾ?

ಕೆಲವೊಮ್ಮೆ ಕಷ್ಟದಲ್ಲಿರುವ ಇತರರಿಗಾಗಿ ಇಂತಹ ವಿನಂತಿಗಳನ್ನು ಹುಟ್ಟು ಹಾಕುವ ಸಂದರ್ಭ ನಿಮಗೂ ಎದುರಾಗಬಹುದು ಅಥವಾ ಇಂತಹ ಒಂದು ಹೊಸ ಸಂಸ್ಥೆಯನ್ನು/ವ್ಯವಸ್ಥೆಯನ್ನು ನೀವು ಹುಟ್ಟುಹಾಕಬಹಸಬಹುದು. ಆಗ ದಯವಿಟ್ಟು ಈ ಮೇಲೆ ಹೇಳಿದ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಈ ಒಟ್ಟಾರೆ ಪ್ರಕ್ರಿಯೆಯನ್ನು ಹೆಚ್ಚು ಅರ್ಥವತ್ತಾಗಿ, ಪಾರದರ್ಶಕವಾಗಿ ನಡೆಸಿಕೊಂಡು ಹೋಗಿ ಎಂದು ವಿನಂತಿ. ಇದರಿಂದ ಮಾನವೀಯ ಮೌಲ್ಯಗಳಲ್ಲಿ ಜನರ ನಂಬಿಕೆ ಉಳಿಯುತ್ತದೆ ಹಾಗೂ ಬೆಳೆಯುತ್ತದೆ. ಮಾತ್ರವಲ್ಲ, ಈಗಾಗಲೇ ನಿಮ್ಮ ಸಮುದಾಯದಲ್ಲಿ ಇಂತಹ ಸಹಾಯಕ್ಕೆ ಒಂದು ಸರಿಯಾದ ವ್ಯವಸ್ಥೆ ಇದೆ ಎಂದಾದರೆ ಅದನ್ನೇ ಉಪಯೋಗಿಸಿಕೊಳ್ಳುವುದು ಉತ್ತಮವಿರಬಹುದೇನೋ, ಅದನ್ನು ಕೂಲಂಕುಷವಾಗಿ ಪರಿಗಣಿಸಿ ನೋಡಿ.

ಕೊನೆಯ ಮಾತು:

ಒಳ್ಳೆ ಕೆಲಸ ಮಾಡುವವರ ಉತ್ಸಾಹಕ್ಕೆ ತಣ್ಣೀರು ಎರೆಚುವುದು ಖಂಡಿತಾ ನನ್ನ ಉದ್ದೇಶ ಅಲ್ಲ, ಆದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಾಗ ನಾವು ಅಪಾತ್ರ ದಾನದ ಬಗ್ಗೆ ಕೂಡ ಆಲೋಚನೆ ಮಾಡಬೇಕು. ಇದನ್ನು ತಡೆಯಲು ಒಂದು ಸರಿಯಾದ ವ್ಯವಸ್ಥೆ ಇರಬೇಕು. ಇದೆಲ್ಲಾ ಇಲ್ಲದಿದ್ದರೆ ನಿಧಾನಕ್ಕೆ ಸಂಶಯ-ದೂರು-ಜಗಳ-ಚರ್ಚೆ ಹೆಚ್ಚಾಗಿ ಮೂಲ ಉದ್ದೇಶಕ್ಕೆ ಹಾನಿಯಾಗುತ್ತದೆ, ಮನಸ್ಸಿನಲ್ಲಿ ಕಹಿ-ಅಪನಂಬಿಕೆ ಉಳಿದುಬಿಡುತ್ತದೆ. ಅಪಾತ್ರ ದಾನವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯ ಎಂದೂ ಅಲ್ಲ, ಆದರೆ ಬರುವ ವಿನಂತಿಗಳ ಮೇಲೆ ಕುರುಡು ನಂಬಿಕೆ ಸಲ್ಲದು ಎಂದು ನನ್ನ ಅಭಿಪ್ರಾಯ. ಈ ನಿಟ್ಟಿನಲ್ಲಿ ಅಂತರ್ಜಾಲದಲ್ಲಿ ಬರುವ ವಿನಂತಿಗಳ ಬಗ್ಗೆ ಒಂದೆರಡು ಎಚ್ಚರದ ಮಾತುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ, ಅಷ್ಟೆ.

ಇವೆಲ್ಲವನ್ನೂ ಮೀರಿ ಒಬ್ಬರ ವಿನಂತಿಯಲ್ಲಿ ಇರುವ ಸತ್ಯ ನಿಮ್ಮ ಹೃದಯಕ್ಕೆ ಗೋಚರವಾದರೆ ಏನೂ ಸಂಕೋಚ ಇಲ್ಲದೆ ಕೊಟ್ಟುಬಿಡಿ, ಆಮೇಲೆ ಚಿಂತೆಯನ್ನೂ ಬಿಟ್ಟುಬಿಡಿ - ಎಲ್ಲವನ್ನೂ ನಂಬಿಕೆ-ಅಪನಂಬಿಕೆಯ ತಕ್ಕಡಿಯಲ್ಲಿಟ್ಟು ತೂಗಲು ಸಾಧ್ಯ ಇಲ್ಲ, ಮನುಷ್ಯನಿಗೆ ಇನ್ನೊಬ್ಬ ಮನುಷ್ಯನ ಮೇಲೆ ಸರಳ-ಸುಂದರ ನಂಬಿಕೆ ಇರುವುದೂ ಕೂಡ ಮುಖ್ಯ.

2 comments:

shishir said...

very good n valuable info... much thanks

ವೆಂಕಟಕೃಷ್ಣ ಕೆ ಕೆ ಪುತ್ತೂರು said...

"ವಿನಂತಿಯಲ್ಲಿ ಇರುವ ಸತ್ಯ ನಿಮ್ಮ ಹೃದಯಕ್ಕೆ ಗೋಚರವಾದರೆ ಏನೂ ಸಂಕೋಚ ಇಲ್ಲದೆ ಕೊಟ್ಟುಬಿಡಿ, ಆಮೇಲೆ ಚಿಂತೆಯನ್ನೂ ಬಿಟ್ಟುಬಿಡಿ - ಎಲ್ಲವನ್ನೂ ನಂಬಿಕೆ-ಅಪನಂಬಿಕೆಯ ತಕ್ಕಡಿಯಲ್ಲಿಟ್ಟು ತೂಗಲು ಸಾಧ್ಯ ಇಲ್ಲ, ಮನುಷ್ಯನಿಗೆ ಇನ್ನೊಬ್ಬ ಮನುಷ್ಯನ ಮೇಲೆ ಸರಳ-ಸುಂದರ ನಂಬಿಕೆ ಇರುವುದೂ ಕೂಡ ಮುಖ್ಯ."
ನಿಜವಾದ ಮಾತು..ಇಷ್ಟವಾಯಿತು.ಶಾಸ್ತ್ರೀ ಗಳೇ..

Post a Comment