About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Wednesday, November 10, 2010

ನಾಯಿಮರಿಯ ಅದೃಷ್ಟ

English Version (Original): Puppy's Luck

ಇವತ್ತು ದಿನ ಮೊದಲ್ಗೊಂಡಾಗ ಎಲ್ಲಾ ಸಾಮಾನ್ಯವಾಗಿಯೇ ಇತ್ತು - ಒಂದು ಸಣ್ಣ ವ್ಯತ್ಯಾಸವೆಂದರೆ ಸ್ವಲ್ಪ ಬೇಗನೇ ಎದ್ದಿದ್ದರಿಂದ ಬ್ಯಾಂಕ್ ಹಾಗೂ ಕೆಲ ಅಂಗಡಿಗಳಿಗೆ ಹೋಗಿ ಕೆಲಸಕಾರ್ಯಗಳನ್ನು ಮುಗಿಸಲು ನನಗೆ ಸಾಧ್ಯವಾಯಿತು, ಖುಷಿಯಾಯಿತು. ಆಮೇಲೆ ನಾನು ನನ್ನ ಕಛೇರಿಯತ್ತ ತೆರಳಲಾರಂಭಿಸಿದೆ. ದಾರಿಯಲ್ಲಿ ಆದ ಒಂದು ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ, ಒಂದೆರಡು ನಿಮಿಷ ಬದಿಗಿಟ್ಟು ಖಂಡಿತಾ ಆಲೋಚನೆ ಮಾಡಬೇಕಾದ ವಿಷಯವಿದು.

ಎಂದಿನಂತಿದ್ದ ಗಜಿಬಿಜಿ ಟ್ರಾಫ಼ಿಕ್‍ನ ಮಧ್ಯೆ ಕಾರನ್ನು ಜಾಗರೂಕನಾಗಿ ಚಲಾಯಿಸುತ್ತಿದ್ದೆ, ಒಂದು ಕಡೆ ವಾಹನ ಸಂಚಾರ ಬ್ಲಾಕ್ ಆಗಿ ನಿಲ್ಲಿಸಬೇಕಾಗಿ ಬಂತು, ಅದರಲ್ಲಿ ಹೊಸದೇನೂ ಇರಲಿಲ್ಲ. ಆದರೆ ಮುಂದಿದ್ದ ಒಂದೆರಡು ವಾಹನಗಳು ಯಾಕೆ ನಿಲ್ಲಿಸಿವೆ ಎಂಬುದು ಸುಲಭವಾಗಿ ಕಾಣುತ್ತಿರಲಿಲ್ಲ. ಒಂದೆರಡು ನಿಮಿಷ ತಾಳ್ಮೆಯಿಂದ ಕಾದು ಆಮೇಲೆ ಒಮ್ಮೆ ಹಾರ್ನ್ ಹಾಕಿದೆ. ಆಗಲೂ ಕೆಲವು ಕ್ಷಣಗಳ ಕಾಲ ಏನೂ ಅಗಲಿಲ್ಲ, ಬಳಿಕ ವಾಹನಗಳು ನಿಧಾನಕ್ಕೆ ಮುಂದುವರಿಯಲಾರಂಭಿಸಿದುವು. ಆಗಲೇ ನನ್ನ ಗಮನಕ್ಕೆ ಬಂದಿದ್ದು - ರಸ್ತೆಯ ಇನ್ನೊಂದು ಬದಿ ಒಂದು ಸಣ್ಣ ನಾಯಿಮರಿ ಅತ್ಯಂತ ನೋವಿನೊಂದಿಗೆ ಕುಂಟಿಕೊಂಡೂ ಆಗಾಗ ಎತ್ತರಕ್ಕೆ ಪುಟಿಯುತ್ತಲೂ ಇತ್ತು. ನಾನು ನೋಡುತ್ತಿದ್ದಂತೆಯೇ ಅದು ರಸ್ತೆ-ಗುಂಡಿಯಲ್ಲಿದ್ದ ನೀರಿಗೆ ಬಿದ್ದು ಅರ್ಧ ಒದ್ದೆಯಾಗಿ, ಆಮೇಲೆ ಎದ್ದು ಎರಡು ಮೂರು ಹೆಜ್ಜೆ ಹಾಕಿ ನಿಧಾನಕ್ಕೆ ಮಲಗಿಬಿಟ್ಟಿತು. ಅಲ್ಲೇ ಇನ್ನೊಂದು ನಾಯಿಮರಿ ಇತ್ತು, ಖಂಡಿತಾ ಅದರ ಒಡಹುಟ್ಟಿದ್ದೇ ಇರಬೇಕು, ಅದು ಸುಮ್ಮನೇ ಆಚೀಚೆ ನೆಗೆಯುತ್ತಲಿತ್ತು, ಒಮ್ಮೊಮ್ಮೆ ಈ ನಾಯಿಮರಿಯ ಸನಿಹಕ್ಕೆ ಬರುತ್ತಲಿತ್ತು. ಆ ಎರಡನೇ ನಾಯಿಮರಿಗೆ ಏನು ಮಾಡಲು ಸಾಧ್ಯವಿತ್ತು, ಅಥವಾ ಅದಕ್ಕೆ ನಿಜಕ್ಕೂ ಎಷ್ಟು ಕಳಕಳಿ ಇತ್ತು ಗೊತ್ತಿಲ್ಲ, ಅದು ಸುಮ್ಮನೇ ಮೂಸುತ್ತಿತ್ತು, ಅಲ್ಲೇ ಆಚೀಚೆ ಹೋಗಿ ಬಂದು ಮಾಡುತ್ತಿತ್ತು.

ನನ್ನ ಮನಸ್ಸೇನೂ ತೀರಾ ಜಾಸ್ತಿ ಕೆಡಲಿಲ್ಲ, ಆದರೆ ಅಲ್ಲಿದ್ದ ಇತರರು ಅದನ್ನು ನೋಡಿಯೂ ಮುಖದಲ್ಲಿ ಏನೂ ಭಾವನೆಯಿಲ್ಲದೆ ತಮ್ಮ ಪಾಡಿಗೆ ಮುಂದೆ ಹೋದಂತೆ ಮಾಡಲು ನನ್ನಿಂದ ಸಾಧ್ಯವಾಗಲಿಲ್ಲ. ಹೌದು, ಆ ಪರಿಸರದಲ್ಲಿ ಸಿಕ್ಕಾಪಟ್ಟೆ ಬೀದಿನಾಯಿಗಳಿವೆ, ಇದೆಲ್ಲಾ ಅವರಿಗೆ ಸಾಮಾನ್ಯ ವಿದ್ಯಮಾನವಿರಬಹುದು. ಇರಲಿ, ನನ್ನ ಕಾರನ್ನು ಪಾರ್ಕ್ ಮಾಡಿ ನಾನು ಆ ನಾಯಿಮರಿಯ ಬಳಿ ಹೋದೆ. ಭಾವನೆಗಳು ನನ್ನ ಬುದ್ಧಿಗೆ ಮಂಕು ಕವಿದಿರಲಿಲ್ಲ, ಹೀಗಾಗಿ ನಾನು ನೇರವಾಗಿ ಆ ನಾಯಿಮರಿಯನ್ನು ಮುಟ್ಟಲು ಹೋಗಲಿಲ್ಲ, ಏನು ಕಾದಿದೆಯೋ ಗೊತ್ತಿಲ್ಲವಲ್ಲಾ. ಅದು ಅಲ್ಲೇ ಮಲಗಿತ್ತು, ಜೋರಾಗಿ ಉಸಿರಾಡುತ್ತಿತ್ತು, ಅರ್ಧನಿಮೀಲಿತ ಕಣ್ಣುಗಳೊಂದಿಗೆ. ಹೆಚ್ಚೇನೂ ರಕ್ತ ಕಾಣಲಿಲ್ಲ, ಹೀಗಾಗಿ ಅದರ ಕಾಲಿಗೆ ಬಲವಾದ ಏಟಾಗಿದೆ ಎಂದು ನಾನಂದುಕೊಂಡೆ.

ತಕ್ಷಣ ಅಲ್ಲೇ ಇದ್ದ ಅಂಗಡಿಯವರಲ್ಲಿ ವಿಚಾರಿಸಿದೆ, ಅಲ್ಲೇ ಅನತಿ ದೂರದಲ್ಲಿ ಪಶು ಆಸ್ಪತ್ರೆ ಇದೆ ಎಂದು ತಿಳಿದಾಗ ಸಮಾಧಾನವಾಯಿತು. ಕೂಡಲೇ ಅಲ್ಲಿಗೆ ಹೋದ ನನಗೆ ಅಲ್ಲಿ ವೈದ್ಯರು ಇರುವುದು ನೋಡಿ ಸಂತಸವಾಯಿತು, ಒಬ್ಬ ಮಧ್ಯವಯಸ್ಕ ಮಹಿಳೆ ಅವರ ಬಳಿ ಏನೋ ಹೇಳಿಕೊಳ್ಳುತ್ತಿದ್ದರು, ಅಷ್ಟೆ. ವೈದ್ಯರು ನನ್ನ ಕಡೆಗೆ ತಿರುಗಿ ಏನಾಗಬೇಕಿತ್ತು ಎಂದು ಕೇಳಿದರು, ನಾನು ಸನ್ನಿವೇಶವನ್ನು ಅವರಿಗೆ ಬೇಗನೇ ವಿವರಿಸಿದೆ.

ಅವರು ಹೇಳಿದ ಮೊದಲ ಮಾತು - "ನಾವು ರಸ್ತೆಗೆ ಬಂದು ಅದನ್ನು ನೋಡುವ ಪ್ರಶ್ನೆಯೇ ಇಲ್ಲ". ಮಾತು ಮುಂದುವರಿಸಿದ ಅವರು ಅದರಿಂದ ಬರಬಹುದಾದ ತೊಡಕುಗಳನ್ನೂ ಕಾನೂನು ಸಮಸ್ಯೆಗಳನ್ನೂ ವಿವರಿಸುತ್ತಾ ಅವೆಲ್ಲ ಕಾರಣಗಳಿಂದ ತಾವು ಗಡಿಬಿಡಿಯಿಂದ ತಮ್ಮ ಕುರ್ಚಿಯಿಂದೆದ್ದು ಸೀದಾ ಬಂದು ನನಗೆ ಸಹಾಯ ಮಾಡುವಂತಿಲ್ಲ ಎಂದು ಹೇಳಿದರು. ಇನ್ನೊಂದು ಕಡೆಯಿಂದ ನಾನು ಕೂಡ ಹೇಳುತ್ತಲೇ ಇದ್ದೆ - ಇಲ್ಲೇ ನಾಲ್ಕು ಹೆಜ್ಜೆ ಹಾಕಿದರೆ ಸಿಗುವಷ್ಟು ಹತ್ತಿರದಲ್ಲಿದೆ, ಒಬ್ಬ ವೈದ್ಯರಾಗಿ ಅದನ್ನು ಕರುಣೆಯಿಂದ ತಕ್ಷಣ ನೋಡುವುದು ಅವರ ಕರ್ತವ್ಯ ಎಂದು. ಅದನ್ನು ವಾಸಿ ಮಾಡಲು ಸಾಧ್ಯವೋ ಅಥವಾ ದಯಾಮರಣ ಕೊಡಬೇಕೋ ಎಂಬುದನ್ನು ನಿರ್ಧರಿಸಿದ ಮೇಲೆ ಅದರ ವೆಚ್ಚವನ್ನೂ ಕೊಡಲು ನಾನು ಸಿದ್ಧ ಎಂದೂ ಹೇಳಿದೆ. ವೈದ್ಯರು ಶಾಂತವಾಗಿಯೇ ಇದ್ದರು - ಈ ರೀತಿಯ ಸನ್ನೆವೇಶಗಳು ನನಗೆ ಹೊಸದಲ್ಲ, ನಾನು ಕೆಲವು ಮಿತಿಗಳನ್ನು ದಾಟುವಂತಿಲ್ಲ ಎಂದು ಹೇಳಿಬಿಟ್ಟರು. ತಾನು ಪ್ರಾಣಿಗಳ ಅನೇಕ ಕ್ಷೇಮ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ವೈದ್ಯನೆಂದೂ ಸ್ವತಃ ದಯಾಪರನೆಂದೂ ಹೇಳಿದರು. ಮಧ್ಯದಲ್ಲೊಮ್ಮೆ ವಿಷಯವನ್ನೇ ಬದಲಾಯಿಸಿ ನೀವು ಕೂಡ ಮಂಗಳೂರಿನ ಪ್ರಾಣಿದಯಾ ಸಂಘಗಳಿಗೆ ಸೇರಿ ಎಂದೂ ಹೇಳಿದರು!

ಆ ಕ್ಷಣದಲ್ಲಿ ಆ ವೈದ್ಯರ ಆದ್ಯತೆ ಯಾವುದು ಎಂಬುದರ ಬಗ್ಗೆ ನನಗೆ ಹೆಚ್ಚು ಹೆಚ್ಚು ಗೊಂದಲವಾಗತೊಡಗಿತು. ಕೊನೆಗೆ ಹೇಳಿದೆ "ಸರಿ ಹಾಗಾದರೆ, ನನಗೆ ಇಲ್ಲಿ ನಿಮ್ಮ ಜೊತೆ ಮಾತನಾಡುತ್ತಾ ಸಮಯ ವ್ಯರ್ಥ ಮಾಡಲು ಇಷ್ಟವಿಲ್ಲ, ನನ್ನ ಅರಿವನ್ನು ಮೀರಿದ ಏನೇನೋ ತೊಡಕುಗಳು ಇರಬಹುದೇನೋ, ಅಲ್ಲೇ ಪಕ್ಕದಲ್ಲಿದ್ದ ಚಿಕನ್ ಅಂಗಡಿಗೆ ಹೋಗಿ ಯಾರಿಗಾದರೂ ಒಂದೈವತ್ತು ರೂಪಾಯಿ ಕೊಟ್ಟು ಆ ನಾಯಿಮರಿಯ ತಲೆಗೆ ಒಂದೇಟು ಹಾಕಿ ಅದರ ಕಥೆ ಮುಗಿಸಲು ಹೇಳುತ್ತೇನೆ, ನನ್ನಿಂದ ಸಾಧ್ಯವಾಗದ ಕಾರಣ" ಎಂದು. ವೈದ್ಯರು ಅದನ್ನು ಅಮಾನುಷ ಕೃತ್ಯ ಎಂದು ಹೇಳಿದಾಗ ನಾನು ಪ್ರತಿಭಟಿಸಿ ಅವರು ಮಾಡುತ್ತಿರುವುದು ಇನ್ನೂ ಹೆಚ್ಚಿನ ಅಮಾನುಷ ಕೃತ್ಯ ಎಂದು ಹೇಳಿದೆ.

ಸನ್ನಿವೇಶವನ್ನು ವಿವರಿಸಿ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ನಾನೊಂದು ಪತ್ರ ಬರೆದರೆ ಏನಾದರೂ ಸಹಾಯ ಮಾಡಲು ಯತ್ನಿಸುತ್ತೇನೆ ಎಂದು ವೈದ್ಯರು ಹೇಳಿದ್ದು ಆಗಲೇ. ನಾನು ಪುನಃ ಪುನಃ ಹೇಳಿದೆ - ನಾನು ಎಲ್ಲಿಗೂ ಓಡಿ ಹೋಗುವುದಿಲ್ಲ, ತುಸು ಹೊತ್ತು ಕಳೆದು ಆ ಪತ್ರ ಬರೆದು ಕೊಡುತ್ತೇನೆ ಎಂದು, ಅವರು ತಕ್ಷಣ ಹೋಗಿ ಆ ನಾಯಿಮರಿಯನ್ನು ನೋಡಲಿ ಎಂದು ನನ್ನ ಮನಸ್ಸಿನಲ್ಲಿತ್ತು. ಆದರೆ ಅವರು ಆ ಪತ್ರವನ್ನು ಬರೆಯುವಂತೆ ನನ್ನ ಮೇಲೆ ಒತ್ತಡ ಹೇರಿದರು. ಅಲ್ಲೇ ಕುಳಿತು ಇನ್ನೂ ಹೆಚ್ಚಿನ ಸಮಯ ವ್ಯರ್ಥ ಮಾಡಲೇ ಅಥವಾ ಇನ್ನೊಂದು ದಾರಿ ಹಿಡಿಯಲೇ - ಇವೆರಡರ ಮಧ್ಯೆ ನನ್ನ ಮನಸ್ಸು ಹೊಯ್ದಾಡುತ್ತಿತ್ತು. ಕೊನೆಗೆ ಬೇಗನೇ ಒಂದು ಪತ್ರ ಬರೆದೆ, ಸಹಿ ಹಾಕಿ ಕೊಟ್ಟೆ. ಬರೆಯುತ್ತಿರುವಾಗ ಒಂದು ವಿಷಯದ ಬಗ್ಗೆ ಅಚ್ಚರಿಯೂ ಆಯಿತು - "..... ಆ ನಾಯಿಗೆ ಗುಣಮುಖ ಮಾಡಲು ಸಾಧ್ಯವಿರದ ಕಾರಣ ದಯಾಮರಣ ನೀಡಿ...." ಒಬ್ಬ ವೈದ್ಯರಾಗಿ ಹೀಗೆ ಬರೆಯುವಂತೆ ನಿರ್ದೇಶನ ನೀಡಲು ಅವರಿ ಹೇಗೆ ಮನಸ್ಸು ಬಂತು, ಅದೂ ನೇರವಾಗಿ ಅದನ್ನು ಪರೀಕ್ಷೆ ಮಾಡದೆ? ಕೆಲವು ಶುಲ್ಕಗಳ ಸಲುವಾಗಿ ೨೧೦ ರೂ.ಗಳನ್ನೂ ತೆತ್ತೆ (ಲಂಚವಲ್ಲ). ವೈದ್ಯರು ನನ್ನ ಜೊತೆ ಒಬ್ಬ ಕಾಂಪೌಂಡರನ್ನು ಕಳುಹಿಸುತ್ತೇನೆ ಎಂದರು, ದಯಾಮರಣಕ್ಕೆ ಬೇಕಾದ ಇಂಜೆಕ್ಷನ್‍ನೊಂದಿಗೆ.

ಅವರು ಕಾಂಪೌಂಡರ್‌ನ ಬಳಿ ತುಳುವಿನಲ್ಲಿ ಮಾತನಾಡುತ್ತಿದ್ದರು, ನನಗೆ ಸ್ವಲ್ಪ ಅರ್ಥವಾಗುತ್ತಿತ್ತು - ಇದು ಕಾನೂನಿಗೆ ವಿರುದ್ಧವಾದರೂ ಕೂಡ ನಾನು ಈ ಕೆಲಸ ಮಾಡಲು ಒಪ್ಪಿಗೆ ಕೊಡುತ್ತಿದ್ದೇನೆ, ಒಬ್ಬ ಒಳ್ಳೆಯ ವಿದ್ಯಾವಂತ ಹೀಗೆ ಪಾಪದ ಪ್ರಾಣಿಯ ಮೇಲೆ ತೋರಿಸುವ ಅನುಕಂಪವನ್ನು ಪರಿಗಣಿಸಿ ಉದಾರತೆ ತೋರುತ್ತಿದ್ದೇನೆ ಎಂದು ಮುಂತಾಗಿ ಹೇಳುತ್ತಿದ್ದರು. ಕಾಂಪೌಂಡರಿಗೆ ಇದರಲ್ಲಿ ಮನಸ್ಸಿದ್ದಂತೆ ಇರಲಿಲ್ಲ, ಆದರೆ ವೈದ್ಯರ ಮಾತನ್ನು ಧಿಕ್ಕರಿಸಲಾಗಲಿಲ್ಲ, ಒಪ್ಪಿದರು. ವೈದ್ಯರು ನನ್ನ ಕಡೆಗೆ ತಿರುಗಿ ಹೇಳಿದರು - ಕಳೆದ ಸುಮಾರು ಎರಡು ದಶಕಗಳಲ್ಲಿ ಇದು ಮೊದಲನೇ ಬಾರಿ ನಾನು ಕಾನೂನಿನ ವಿರುದ್ಧ ಹೋಗುತ್ತಿರುವುದು ಎಂದು. ನಾನು ಅವರಿಗೆ ಧನ್ಯವಾದ ಹೇಳಿ ಕಾಂಪೌಂಡರಿಗೆ ನನ್ನ ಜೊತೆ ಬೇಗ ಬರಲು ಹೇಳಿದೆ.

ಆಗ ವೈದ್ಯರ ತಲೆಯಲ್ಲಿ ಇನ್ನೊಂದು ಪ್ರಶ್ನೆ ಉದ್ಭವಿಸಿತು - ಸತ್ತ ನಾಯಿಮರಿಯನ್ನೇನು ಮಾಡುತ್ತೀರಿ ಎಂದು. ನಾನು ಹೇಳಿದೆ - ಅದನ್ನು ಆಮೇಲೆ ನೋಡೋಣ, ಮೊದಲು ಮಾಡಬೇಕಾದ ಕೆಲಸವನ್ನು ಮಾಡಿ ಬಿಡೋಣ, ಎಂದು. ಅವರು ಹೇಳಿದರು - ಅದನ್ನು ಸರಿಯಾದ ಚೀಲದಲ್ಲಿ ಹಾಕಿ ಮುನಿಸಿಪಾಲಿಟಿ ತೊಟ್ಟಿಯಲ್ಲಿ ಹಾಕಬೇಕು ಎಂದು. ನಾನು ಸುಮ್ಮನೆ ಅವರತ್ತ ನೋಡಿ ಒಂದು ವಿಷಾದದ ನಗೆ ಬೀರಿದೆ - "ಸರ್, ಅದೆಲ್ಲಾ ನನ್ನ ಬಳಿ ಎಲ್ಲಿಂದ ಬರಬೇಕು? ನೀವೇ ಒಂದು ಚೀಲ ಕೊಡಿ, ಕೈಗವಸು ಕೂಡ ಕೊಡಿ, ಅದನ್ನು ನಾನೇ ಮಾಡುತ್ತೇನೆ" ಎಂದು. ಕೊನೆಗೆ ಸ್ವಲ್ಪ ಆಲೋಚಿಸಿದ ವೈದ್ಯರು ಅದನ್ನು ಕಂಪೌಂಡರ್ ಮಾಡುತ್ತಾನೆ ಎಂದು ಹೇಳಿದರು. ನನ್ನ ಬಳಿ ಮೆತ್ತಗೆ ಹೇಳಿದರು - ಕಂಪೌಂಡರ್ ಅಷ್ಟೆಲ್ಲಾ ಸಹಾಯ ಮಾಡುತ್ತಿರುವುದರಿಂದಾಗಿ ಅವನಿಗೂ ಒಂದು ಹತ್ತಿಪ್ಪತ್ತು ರೂ. ಕೊಡಿ ಎಂದು, ನಾನು ಸರಿ ಎಂದೆ.

ಕೊನೆಗೂ ಕಂಪೌಂಡರ್ ನನ್ನ ಜೊತೆ ಪಾದ ಬೆಳೆಸಿದರು, ನಿಧಾನವಾಗಿ. ಆಸ್ಪತ್ರೆಯಿಂದ ಹೊರಗೆ ಬಂದ ಕೂಡಲೇ ಅವರು "ನಾಯಿಮರಿಯ ಶವ ತೆಗೆಯುವುದು ನನ್ನ ಕೆಲಸ ಅಲ್ಲ, ಅದಕ್ಕೆ ಬೇರೆ ಜನ ಇದ್ದಾರೆ, ಅವರನ್ನು ಕೆಲಸಕ್ಕೆ ಗೊತ್ತು ಮಾಡಿ" ಎಂದಿತ್ಯಾದಿ ಹೇಳಲಾರಂಭಿಸಿದರು. ನಾನು ಹೆಚ್ಚೇನೂ ಮಾತನಾಡದೇ ಬೇಗ ಬೇಗನೇ ನಡೆಯಲಾರಂಭಿಸಿದೆ. ಆಗಾಗ ಹಿಂದಕ್ಕೆ ನೋಡುತ್ತಾ ಅವರನ್ನು ಬೇಗ ಬರುವಂತೆ ಮಾಡುತ್ತಿದ್ದೆ.

ಕೊನೆಗೂ ನಾವು ಅಲ್ಲಿಗೆ ತಲುಪಿದೆವು, ಆದರೆ ಅದಾಗಲೇ ನಾಯಿಮರಿ ಇಹಲೋಕವನ್ನು ತ್ಯಜಿಸಿತ್ತು - "ತುಂಬಾ ಧನ್ಯವಾದಗಳು, ಆದರೆ ನನಗೆ ನೀವು ಮನುಷ್ಯರಿಂದ ಬಹುದೂರ ಹೋಗಲು ಇನ್ನೂ ಕಾಯಲು ಇಷ್ಟವಿರಲಿಲ್ಲ, ಈಗ ನಾನು ಅದೃಷ್ಟಶಾಲಿ ಎಂದು ಭಾಸವಾಗುತ್ತದೆ" ಎಂಬ ಒಂದು ಸಂದೇಶವನ್ನು ಅದು ಬಿಟ್ಟು ಹೋದಂತಿತ್ತು. ಕಂಪೌಂಡರ್ ಹೇಳಿದರು - ಅದನ್ನು ಅಲ್ಲಿಯೇ ಬಿಟ್ಟು ಹೋಗುವುದು ಒಳಿತು, ಮುನಿಸಿಪಾಲಿಟಿಯವರು ಬಂದು ತೆಗೆದುಕೊಂಡು ಹೋಗುತ್ತಾರೆ ಎಂದು. ನಾವು ನಿಧಾನಕ್ಕೆ ವಾಪಾಸ್ ಆಸ್ಪತ್ರೆಯತ್ತ ತೆರಳಿದೆವು, ನಾಯಿ ಅದಾಗಲೇ ಸತ್ತಿತ್ತು ಎಂದು ತಿಳಿದು ವೈದ್ಯರೂ ಖುಷಿ ಪಟ್ಟರು. ನನಗೆ ನನ್ನ ೨೧೦ ರೂ. ವಾಪಾಸ್ ಸಿಕ್ಕಿತು, ನಾನು ಬರೆದ ಪತ್ರವನ್ನು ವೈದ್ಯರು ಹರಿದು ಹಾಕಿದರು.

ಆಮೇಲೆ ವೈದ್ಯರು ಇನ್ನೂ ಒಂದಷ್ಟು ಹೊತ್ತು ನನ್ನ ಬಳಿ ಇಂತಹ ವಿಷಯಗಳಲ್ಲಿರುವ ತೊಡಕುಗಳ ಬಗ್ಗೆ ಹಾಗೂ ಅವರು ಹೇಗೆ ಬೀದಿಬದಿಯ ಪ್ರಾಣಿಗಳತ್ತ ಕ್ರಮಬದ್ಧವಾಗಿ ಸಹಾಯಹಸ್ತ ಚಾಚುತ್ತಾರೆ ಎಂದಿತ್ಯಾದಿ ವಿವರಿಸಿದರು. ಕೆಲ ನಿಮಿಷಗಳ ಬಳಿಕ ನಾನು ಅವರ ದೂರವಾಣಿ ಸಂಖ್ಯೆಯನ್ನು ತೆಗೆದುಕೊಂಡು ಇನ್ನೊಮ್ಮೆ ವಿವರವಾಗಿ ಮಾತನಾಡುತ್ತೇನೆ ಎಂಬ ಭರವಸೆಯನ್ನು ಕೊಟ್ಟು ಅಲ್ಲಿಂದ ಹೊರಟೆ.

ಇಲ್ಲಿ ನಿಚ್ಚಳವಾದ ಒಂದು ಸಂಗತಿಯೆಂದರೆ ವೈದ್ಯರು ತಮ್ಮನ್ನು ಆದಷ್ಟೂ ಸುರಕ್ಷಿತವಾಗಿರುವಂತೆ ನೋಡಿಕೊಂಡದ್ದು, ಮೊದಲು ಅವರಿಗಾಗ ಅನೇಕ ಕೆಟ್ಟ ಅನುಭವಗಳ ಆಧಾರದ ಮೇಲೆ. ಅವರು ತುಸು ಜಾಸ್ತಿಯೇ ಆತ್ಮರಕ್ಷಣೆ ಮಾಡುತ್ತಿದ್ದಾರೆ, ಯಾವುದಕ್ಕೆ ಆದ್ಯತೆ ಕೊಡಬೇಕೋ ಅದಕ್ಕೆ ಕೊಡುವಲ್ಲಿ ಎಲ್ಲೋ ಸ್ವಲ್ಪ ಆಚೀಚೆ ಆಗಿದೆ ಎಂದು ನನಗನಿಸುತ್. ಆದರೂ, ಅವರಿಗಾದ ಕೆಟ್ಟ ಅನುಭವಗಳ ಬಗ್ಗೆ, ಅವರು ಯಾಕೆ ಹೀಗಿದ್ದಾರೆ ಎಂಬುದರ ಬಗ್ಗೆ ಇನ್ನೂ ಆಳವಾಗಿ ತಿಳಿದುಕೊಳ್ಳಬೇಕು. ಬಹುಷಃ ಕಂಪೌಂಡರ್‌ನಿಂದ ಇದಕ್ಕಿಂತ ಹೆಚ್ಚೇನೂ ನಿರೀಕ್ಷಿಸುವಂತಿಲ್ಲ - ಮಾಡದೆ ನಿರ್ವಾಹವಿಲ್ಲದೆ ಮಾಡುತ್ತಿರುವ ಕೆಲಸದಂತಿತ್ತು ಅವರು ಅದನ್ನು ಪರಿಗಣಿಸಿದ ರೀತಿ. ಒಟ್ಟಾರೆ ಆಲೋಚಿಸಿದರೆ, ಮನುಷ್ಯರಿಗೇ ಅನೇಕ ರೀತಿಯಲ್ಲಿ ಆಸ್ಪತ್ರೆಗಳಲ್ಲಿ ಕೆಟ್ಟ ಚಿಕಿತ್ಸೆ ಸಿಗುವ ವಿದ್ಯಮಾನಗಳು ಆಗುತ್ತಲೇ ಇರುತ್ತವೆ, ಇದು ಹೆಚ್ಚೇನೂ ಅಚ್ಚರಿ ತರಲಿಲ್ಲ.

"ನಾವು ಬೇಗನೇ ಬಂದಿದ್ದರೆ ನಾಯಿಮರಿಗೆ ನರಳಾಟ ಕಡಿಮೆಯಾಗುತ್ತಿತ್ತೇ? ಎಷ್ಟರ ಮಟ್ಟಿಗೆ ಕಡಿಮೆಯಾಗುತ್ತಿತ್ತು?" ಎಂಬಿತ್ಯಾದಿ ಪ್ರಶ್ನೆಗಳ ಬಗ್ಗೆ ಆಲೋಚನೆಗಳನ್ನು ಹರಿಯಬಿಡದೇ "ಸರಿ, ಸತ್ತಿತಲ್ಲಾ, ಅದಕ್ಕೆ ಒಳ್ಳೆಯದಾಯಿತು" ಎಂದಂದುಕೊಂಡು ಆಫ಼ೀಸಿನತ್ತ ಕಾರನ್ನು ಚಲಾಯಿಸಿದೆ.

ಅದೃಷ್ಟಶಾಲಿ ನಾಯಿಮರಿಯ ನಿರ್ಜೀವ ದೇಹದ ಚಿತ್ರ ಇಲ್ಲಿದೆ ನೋಡಿ. ಘಟನೆಯಾದ ಹಲವು ತಾಸುಗಳ ಬಳಿಕವೂ ಅದು ಅಲ್ಲೇ ಇತ್ತು - ಸುಡು ಬಿಸಿಲೂ, ಗದ್ದಲದ ವಾಹನಗಳ ಪರಿವೆಯೇ ಇಲ್ಲದೆ.
 

ಇತಿ,

ಕೃಷ್ಣ ಶಾಸ್ತ್ರಿ.

7 comments:

Anonymous said...

sad indeed. but organization like PETA are good. i once stumbled upon a sick pigeon and went to PETA and handed it over. they took care of it.

if it was a man in place of a puppy, i dont think response from the crowd and doctor would have been different. we are moving into an age where "life" has no meaning, only "clock" and "money" make all the sense.


vijay hegde

Anonymous said...

Oh!! Really heart touching incident!!. Yes, as you said dog is lucky. We, unlucky people are living with such Doctors and incidents every day!!
We have to think...think and think......!

Anonymous said...

ಈ ಸಂಗತಿ ನಡೆದ ಸ್ಥಳ ಎಲ್ಲಿ (ಊರು)?

Anonymous said...

sad, but seriously, there may not be a totally legal way for the doctor to handle such situation :(

I recently read a news item that '108' service refused to take an accident victim to Bangalore from tumakuru as it was not part of their duty. finally someone called up lokayukta to get the job done..

Murali

ಕೃಷ್ಣ ಶಾಸ್ತ್ರಿ - Krishna Shastry said...

--ಈ ಸಂಗತಿ ನಡೆದ ಸ್ಥಳ ಎಲ್ಲಿ (ಊರು)?
ಇದು ನಡೆದದ್ದು ಮಂಗಳೂರಿನಲ್ಲಿ.

ಕೃಷ್ಣ ಶಾಸ್ತ್ರಿ - Krishna Shastry said...

@ಮುರಳಿ: ಅನೇಕ ಕಾನೂನು ತೊಡಕುಗಳು ಇರಬಹುದು ಎಂಬುದನ್ನು ನಾನು ಅಲ್ಲಗಳೆಯುತ್ತಿಲ್ಲ. ವೈದ್ಯರೊಂದಿಗೆ ಇನ್ನೊಮ್ಮೆ ವಿವರವಾಗಿ ಮಾತನಾಡಿ ಇದರ ಬಗ್ಗೆ ಇನ್ನಷ್ಟು ತಿಳಿಯಬೇಕು ಅಂತ ಆಲೋಚನೆ ಉಂಟು, ನೋಡುವಾ.

Anonymous said...

ನನ್ನಂಗಡಿಯೆದುರು ಒಂದು ಬೀಡಾಡಿ ನಾಯಿ ದಂಪತಿ ಸದಾ ಓಡಾಡಿಕೊಂಡು ಇರುತ್ತಿತ್ತು. ಈಚೆಗೆ ಒಂದು ಬೆಳಿಗ್ಗೆ ಹೆಣ್ಣು ನಾಯಿ ತನ್ನ ರಕ್ತಸಿಕ್ತ ಎಡ ಮುಂಗಾಲನ್ನು ಅಕ್ಷರಶಃ ನೇತಾಡಿಸಿಕೊಂಡು ಬರುವುದು ಕಂಡು ನನ್ನ ಹೊಟ್ಟೆ ಕಿವಿಚಿದಂತಾಯ್ತು. ನಾನು ಕೂಡಲೇ ಮಂಗಳೂರು animal care trust ನ ಗೆಳೆಯ ಚಾರ್ಲ್ಸ್ ಗೆ ದೂರವಾಣಿಸಿ ಹೇಳಿದೆ. ಇಂದು ಗಂಡು ಒಂದೇ ಬೀದಿ ಸುತ್ತುತ್ತಿದೆ. ಅದೃಷ್ಟವಂತೆ ಬೊಗ್ಗಿ ಶಸ್ತ್ರಚಿಕಿತ್ಸೆಯಿಂದ ಟ್ರಸ್ಟಿನ ಆಶ್ರಯದಲ್ಲಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದೆ. ಟ್ರಸ್ಟಿನ ವಿವರಗಳಿಗೆ ನೋಡಿ:
http://athreebook.com/2010/10/11/11oct2010/#comments
ಅಶೋಕವರ್ಧನ

Post a Comment