ನನ್ನ ಪರಿಚಯವಿರುವವರಿಗೆ ಆಶ್ಚರ್ಯವಾಗಬಹುದು "ಇವನ ತಂದೆ-ತಾಯಿ ಇರುವುದು ಕಾಸರಗೋಡಿನಲ್ಲಿ, ಮಂಗಳೂರಿನಿಂದ ಕೇವಲ ೫೦-೬೦ ಕಿ.ಮೀ. ದೂರದಲ್ಲಿ. ಯಾವಾಗಲೂ ಅಲ್ಲಿಗೆ ಹೋಗಿ ಬರುವುದು ಇದ್ದದ್ದೇ, ಇದರಲ್ಲಿ ಬ್ಲಾಗ್ ಬರೆಯುವುದು ಏನಿದೆ" ಅಂತ. ಆದರೆ ಈ ಸಲದ ಪ್ರಯಾಣ ನನ್ನನ್ನು ಬ್ಲಾಗ್ ಬರೆಯುವಂತೆ ಪ್ರೇರೇಪಿಸಿತು. ಮನದಲ್ಲೇ ಕಟ್ಟಿಟ್ಟಿದ್ದ ಅಥವಾ ಸಂದರ್ಭೋಚಿತವಾಗಿ ಪಕ್ಕದಲ್ಲಿದ್ದವರ ಜೊತೆ ಗೊಣಗುತ್ತಿದ್ದ ಕೆಲವು ವಿಷಯಗಳನ್ನು ಬರಹ ರೂಪಕ್ಕೆ ಇಳಿಸಲು ಮನಸ್ಸಾಯಿತು, ಹೀಗಾಗಿ ಈ ಬ್ಲಾಗ್.
ಇದರಲ್ಲಿ ನೀವು ನಿತ್ಯವೂ ಕಾಣುವ ಅದೆಷ್ಟೋ ವಿಷಯಗಳಿರಬಹುದು, ಆದರೆ ಓದುತ್ತಾ ಹೋದಂತೆ ಈ ವಿಷಯಗಳ ಬಗ್ಗೆ ತುಸು ಆಳವಾಗಿ ಆಲೋಚನೆ ಮಾಡುವಂತೆ ನಿಮ್ಮನ್ನು ವಿನಂತಿಸಿಕೊಳ್ಳುತ್ತಿದ್ದೇನೆ. ಒಂದು ಉತ್ತಮ ಹಾಗೂ ಸುಸಂಸ್ಕೃತ ಸಮಾಜವನ್ನು ನಮ್ಮ ಮುಂದಿನ ಜನಾಂಗ ಕಾಣಬೇಕಾದರೆ ಇದು ಅತ್ಯವಶ್ಯ.
ಬಸ್ಸು ಯಾನದ ಬಗ್ಗೆ ಒಂದಿಷ್ಟು, ಯಾಕೆ ರೈಲು?
ಇದುವರೆಗೂ ನಾವು ಬಸ್ಸಿನಲ್ಲೇ ಹೋಗಿ ಬರುತ್ತಿದ್ದೆವು, ಒಮ್ಮೊಮ್ಮೆ ಮಾತ್ರ ಕಾರಿನಲ್ಲಿ ಹೋಗಿ ಬರುತ್ತಿದ್ದೆವು. ಪ್ರತಿ ಬಾರಿಯೂ ಕಾರಿನಲ್ಲಿ ಹೋಗಿ ಬರದಿರಲು ಕೆಲವಾರು ಕಾರಣಗಳಿದ್ದುವು:
- ವಾಹನ ಚಲಾಯಿಸುವುದು ಒಂದು ಸಂತಸದ ವಿಷಯವಾಗಿರದೆ ಮನಸ್ಸಿಗೆ ಒತ್ತಡವನ್ನು ತರುವುದು
- ವರುಷದ ಒಂದೆರಡು ತಿಂಗಳುಗಳನ್ನು ಬಿಟ್ಟರೆ ಇನ್ನುಳಿದಂತೆ ರಸ್ತೆಗಳ ಸ್ಥಿತಿ ಸಾಕಷ್ಟು ಕೆಟ್ಟದಾಗಿರುವುದು
- ಕಿಸೆಗೂ ಪರಿಸರಕ್ಕೂ ಹಾನಿ ಮಾಡುವ ಪೆಟ್ರೋಲ್ ಖರ್ಚು ಅನಾವಶ್ಯ ಎಂದು ಕಾಣುವುದು
ಇತ್ತೀಚೆಗೆ ಕಾಸರಗೋಡು-ಮಂಗಳೂರು ಮಾರ್ಗದಲ್ಲಿ ‘ಕೆಸರು-ರಟ್ಟಿಸಿ’ (ಕೆ.ಎಸ್.ಆರ್.ಟಿ.ಸಿ) ಬಸ್ಸುಗಳದ್ದೇ ಮೇಲುಗೈ. ಕೆಲವು ವರುಷಗಳ ಹಿಂದೆ ಖಾಸಗೀ ವಾಹನಗಳ ವಿಜೃಂಭಣೆಯ ದಿನಗಳನ್ನು ನೋಡಿದ ನನಗೆ ಈ ಬದಲಾವಣೆಯ ಹಿಂದಿರುವ ಕಥೆಯ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ, ಆದರೆ ಕೆಲವು ರೀತಿಯಲ್ಲಿ ಒಳ್ಳೆಯದಾಗಿದೆ.
- ಸೀಟು ಸಿಗಬೇಕಾದರೆ ಬಸ್ಸು ಹೊರಡುವ ಸ್ಥಳದಿಂದ ಹತ್ತಿದರೆ ಉತ್ತಮ, ಹೀಗಾಗಿ ನಾನು ಸಾಧ್ಯವಾದಷ್ಟೂ ಮುಖ್ಯ ನಿಲ್ದಾಣಕ್ಕೆ ಹೋಗಿ ಅಲ್ಲಿಂದಲೇ ಪ್ರಯಾಣ ಶುರುಮಾಡುವವನು, ಐದ್ಹತ್ತು ರೂಪಾಯಿ ಹಾಗೂ ತುಸು ಹೆಚ್ಚಿನ ಸಮಯ ವ್ಯಯ ಮಾಡಬೇಕಿದ್ದರೂ ಕೂಡ. ಆದರೆ ಮೀನಿನ ದುರ್ವಾಸನೆಯಿಂದ ಕೂಡಿದ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಪರಿಸರಕ್ಕೆ ಹೋಗುವುದೆಂದರೇನೇ ಸಂಕಟವಾಗುತ್ತಿತ್ತು, ಈಗ ಕ.ರಾ.ರ.ಸಾ.ನಿ ನಿಲ್ದಾಣಕ್ಕೆ ಹೋಗುವುದೆಂದರೆ ಸ್ವಲ್ಪ ನಿರಾಳ (ಇನ್ನುಳಿದಂತೆ ಇದರಲ್ಲೂ ಮನಕ್ಕೆ ಬೇಸರ ತರಿಸುವಂತಹ ಎಷ್ಟೋ ವಿಷಯಗಳಿವೆ, ಆದರೆ ಮೀನಿನ ನಾತ ಇಲ್ಲ ಎಂಬುದಷ್ಟೇ ಮುಖ್ಯವಾಗುವ ವಿಚಾರ, ಅಲ್ಲಿ ಸ್ವಲ್ಪ ಸಮಯ ಮಾತ್ರ ಕಳೆಯುವ ನನಗೆ)
- ಇತ್ತೀಚೆಗೆ ಖಾಸಗೀ ಬಸ್ಸಿನವರು ವಾಹನಗಳನ್ನು ರಿಪೇರಿ ಮಾಡದೇ, ಒತ್ತೊತ್ತಾಗಿ ಸೀಟುಗಳನ್ನು ಹಾಕಿ ಅತಿ ಲಾಭಕ್ಕೋಸ್ಕರ ಏನೇನೋ ಸರ್ಕಸ್ ಮಾಡಿ ಕಿರಿಕಿರಿ ಮಾಡುತ್ತಿದ್ದರು (ಅವರ ಬಳಿ ಅದಕ್ಕೆಲ್ಲಾ ಏನೇನೋ ಸಮಾಜಾಯಿಷಿಗಳಿರುತ್ತವೆ, ಬಿಡಿ), ಆದರೆ ಈ ಸರಕಾರೀ ಬಸ್ಸುಗಳೆಲ್ಲವೂ ಹೆಚ್ಚುಕಡಿಮೆ ಒಂದೇ ಗುಣಮಟ್ಟದವಾಗಿ, ಸುಮಾರಾಗಿ ಒಳ್ಳೆಯದಾಗಿ ಕೂಡ ಇರುತ್ತವೆ
- ಅದರಲ್ಲೂ ಕರ್ನಾಟಕ ಸಾರಿಗೆ ಬಸ್ಸುಗಳು ಕೇರಳದ್ದಕ್ಕಿಂತ ನೂರುಪಾಲು ಉತ್ತಮ - ನಮಗೆ ಅದರ ಸಮಯ ನೋಡಿಕೊಂಡು ಹೋಗುವುದು ಹೆಚ್ಚಾಗಿ ಸಾಧ್ಯವಾಗುತ್ತದೆ
ಒಟ್ಟಿನಲ್ಲಿ ಬಸ್ಸು ಯಾನ ಸಾಕಷ್ಟು ಆರಾಮದಾಯಕವಾಗಿಯೇ ಇತ್ತು, ಇತ್ತೀಚೆಗಿನವರೆಗೆ. ಈಗ ಏನಾಯಿತು?
ರಾಷ್ಟ್ರೀಯ ಹೆದ್ದಾರಿಯ ೧೭ರ ಕಾಸರಗೋಡು-ಮಂಗಳೂರು ರಸ್ತೆಯ ದುರವಸ್ಥೆ ಎಷ್ಟು ಕೆಟ್ಟದಾಗಿದೆಯೆಂದರೆ ನೀವು ಹೋಗಿಯೇ ನೋಡಬೇಕು. ಕರ್ನಾಟಕದ ರಸ್ತೆಗಳಂತೂ ಆ ಹೆಸರಿನಿಂದ ಕರೆಸಿಕೊಳ್ಳುವುದಕ್ಕೇ ಲಾಯಕ್ಕಿಲ್ಲದಂತಾಗಿವೆ, ಅದಕ್ಷತೆ ಹಾಗೂ ಭ್ರಷ್ಟಾಚಾರಕ್ಕೆ ನಮೋ ನಮಃ. ಪ್ರಯಾಣದ ಅವಧಿ ಎರಡು ಪಟ್ಟಾಗಿದ್ದಲ್ಲದೆ ಹೋಗುವುದೇ ಹಿಂಸೆ ಅಂತ ಮನಸ್ಸಿಗೆ ಅನಿಸಲಾರಂಭಿಸಿತ್ತು ಇತ್ತೀಚೆಗಿನ ದಿನಗಳಲ್ಲಿ. ಹೀಗಾಗಿ ಈ ಸಲ ರೈಲಿನಲ್ಲಿ ಹೋದರೆ ಹೇಗೆ ಎಂದನಿಸಿತು. ಇದು ಪೀಠಿಕೆ, ಇಲ್ಲಿಂದ ಶುರುವಾಗುತ್ತದೆ ಹೊಸ ಅನುಭವಗಳು.
ಮಂಗಳೂರಿನಿಂದ ಕಾಸರಗೋಡಿಗೆ
ನಮ್ಮ ರೈಲು ಸಂಜೆ ೪:೦೫ಕ್ಕೆ ಇತ್ತು, ಮನೆಯಿಂದ ಹೊರಡುವಾಗ ಸ್ವಲ್ಪ ತಡವಾಗಿತ್ತು, ಅದರ ಮೇಲೆ ಆಮೆ ವೇಗದಲ್ಲಿ ಹೋಗುವ ಒಬ್ಬ ಆಟೋಚಾಲಕ ಸಿಕ್ಕಿದ ನಮಗೆ, ಹೀಗಾಗಿ ನಿಲ್ದಾಣ ತಲುಪುವಾಗಲೇ ೩:೫೫ ಆಗಿತ್ತು. ೪:೩೦ಗೆ ಇನ್ನೊಂದು ಲೋಕಲ್ ರೈಲು ಇದೆ ಎಂದು ಗೊತ್ತಿತ್ತು, ಹೀಗಾಗಿ ಅನಾವಶ್ಯ ಒತ್ತಡದಲ್ಲಿರಲಿಲ್ಲ. ಅಲ್ಲಿದ್ದ ನಾಲ್ಕು ಕ್ಯೂಗಳಲ್ಲಿ ಒಂದು ಕ್ಯೂನಲ್ಲಿ ನಿಂತೆ. ‘ನನ್ನ ಗಾಡಿ ಇನ್ನೇನು ಹೊರಡಲಿದೆ, ಹೀಗಾಗಿ ನಾನು ಕ್ಯೂ ತಪ್ಪಿಸಿ ಮುಂದೆ ಹೋಗಲೇ ಅಥವಾ ಹೋಗುತ್ತಿದ್ದೇನೆ, ಕ್ಷಮಿಸಿ’ ಎನ್ನುತ್ತಾ ಸರದಿಯಲ್ಲಿದ್ದ ಪ್ರತಿಯೊಬ್ಬರ ಮನ ಗೆಲ್ಲುತ್ತಾ, ವಾಗ್ಯುದ್ಧಗಳನ್ನು ನಿವಾರಿಸಿಕೊಳ್ಳುತ್ತಾ ಮುಂದುವರಿಯಲು ಮನಸ್ಸಿರಲಿಲ್ಲ. ಇತರರು ಏನು ಮಾಡುತ್ತಾರೆ, ಹೀಗೆ ಮುನ್ನುಗ್ಗುತ್ತಾರಾ ಎನ್ನುವ ಕುತೂಹಲವೂ ಇತ್ತು. ನಾವಲ್ಲಿ ರೆಗ್ಯುಲರ್ ಜನಗಳಲ್ಲವಲ್ಲಾ...
ಇನ್ನು ಸ್ವಲ್ಪ ಹೊತ್ತಿನಲ್ಲಿ ನಿಲ್ದಾಣದಿಂದ ಹೊರಡುವ ರೈಲುಗಳ ಟಿಕೇಟು ಪಡೆಯಲು ಜನರಿಗೆ ಗಡಿಬಿಡಿ ಇರುತ್ತದೆ, ಕೊನೆ ಕ್ಷಣದಲ್ಲಿ ಟಿಕೇಟು ಪಡೆದವರು ಚಲಿಸುತ್ತಿರುವ ರೈಲಿಗೆ ಹತ್ತಲು ಯತ್ನಿಸಿ ಅವಘಡಕ್ಕೀಡಾಗುವ ಸಂಭವವಿರುವುದಿಲ್ಲವೇ? ವೃದ್ಧರು, ಅಂಗವಿಕಲರು ಏನು ಮಾಡಬೇಕು? ಇಂತಹ ಸಂದರ್ಭಗಳಲ್ಲಿ ಇತರರನ್ನು ವಿನಂತಿಸಿಕೊಳ್ಳುವ, ಅಂಗಲಾಚುವ, ಜಗಳ ಕಾಯುವ ಪ್ರಸಂಗ ಯಾಕೆ ಇರಬೇಕು? ಸುವ್ಯವಸ್ಥೆ ಯಾಕಿಲ್ಲ? ಅನಿವಾರ್ಯವಾಗಿ ಆ ರೈಲಿನಲ್ಲಿ ಹೋಗಲೇ ಬೇಕೆಂದಿರುವವರು ಟಿಕೇಟು ಇಲ್ಲದೆ ಹತ್ತುವ ಪ್ರಸಂಗಳೂ ಇರುತ್ತವೆಯಲ್ಲವೇ? ವಿಶೇಷ ಸಂದರ್ಭಗಳಲ್ಲಿ (ತುಸು ಹೆಚ್ಚಿನ ಬೆಲೆ ತೆತ್ತಾದರೂ ಕೂಡ) ರೈಲಿನಲ್ಲೇ ಟಿಕೇಟು ತೆಗೆದುಕೊಳ್ಳುವ ಅವಕಾಶ ಯಾಕಿಲ್ಲ? ಎಂಬುದಾಗಿ ಆಲೋಚನೆಗಳು ಹರಿದುಬಂದುವು ಮನದಲ್ಲಿ.
ಯಾರೋ ಒಬ್ಬರು ಇನ್ನೊಂದು ಕ್ಯೂನಲ್ಲಿ ನಿಂತ ಎಲ್ಲರನ್ನೂ ಮೀರಿ ಸಾವಕಾಶವಾಗಿ ಹೋಗಿ ಟಿಕೇಟು ತೆಗೆದುಕೊಂಡದ್ದನ್ನೂ, ಅದನ್ನು ಯಾರೂ ಪ್ರತಿಭಟಿಸಿದ್ದನ್ನೂ ನೋಡಿ ಅಚ್ಚರಿಗೊಳಗಾದೆ, ನಮ್ಮ ೪:೦೫ರ ರೈಲು ಹೇಗಿದ್ದರೂ ಹೋಗಿಯಾಗಿತ್ತು, ಹಾಗೂ ೪:೩೦ರ ರೈಲಿಗೆ ಇನ್ನೂ ಸಮಯವಿತ್ತು, ಹೀಗಾಗಿ ನಾನು ಆ ಸಾಹಸಕ್ಕೆ ಕೈ ಹಾಕುವ ಅಗತ್ಯ ಆಗಿರಲಿಲ್ಲ. ಇದರ ನಡುವೆ ನನ್ನ ಹಿಂದಿದ್ದ ವ್ಯಕ್ತಿಯ ಕಡೆಗೆ ಗಮನ ಹರಿಯಿತು, ನನ್ನ ಬೆನ್ನಿಗೆ ಹಾಕಿದ ಬ್ಯಾಗ್ ಮೇಲೆ ಒತ್ತಡ ಹೇರುತ್ತಾ ನಿಂತಿದ್ದ ಭೂಪ, ಒಂದು ಇರುವೆಯೂ ಮಧ್ಯದಲ್ಲಿ ಬರಬಾರದು ಎನ್ನುವಂತೆ. ನೋಡಲು ವಿದ್ಯಾವಂತನಂತೆ ಕಾಣುತ್ತಿದ್ದ ಅವನ ವರ್ತನೆ ನೋಡಿ ನನಗೆ ಭಾರತೀಯರ ಅಸುರಕ್ಷತಾ ಭಾವನೆಯನ್ನು ನೋಡಿ ಬೇಸರವಾಯಿತು. ಕೆಲವು ಕಡೆ ಹಾಗೆ ಮಾಡುವುದು ಅನಿವಾರ್ಯವಿರಬಹುದೇನೋ, ಆದರೆ ಆ ಸಂದರ್ಭದಲ್ಲಿ ಹೆಚ್ಚು ಕಡಿಮೆ ಯಾರೂ ಕ್ಯೂ ಮಧ್ಯದಲ್ಲಿ ಬಂದು ಸೇರಿಕೊಳ್ಳುತ್ತಿರಲಿಲ್ಲ, ಆದರೂ ಮನದಾಳದಲ್ಲಿ ಬೇರುಬಿಟ್ಟ ಈ ಭಯ ಜನರನ್ನು ಬಿಡುವುದಿಲ್ಲ ನೋಡಿ!
ಕೊನೆಗೂ ಇಪ್ಪತ್ತು ನಿಮಿಷದಲ್ಲಿ ನನ್ನ ಸರದಿ ಬಂತು, ಟಿಕೇಟು ಬೆಲೆ ನೋಡಿ ದಂಗಾದೆ, ಸಾವರಿಸಿಕೊಂಡು ಹಣ ನೀಡಿ ಟಿಕೇಟು ತೆಗೆದುಕೊಂಡು ಈಚೆಗೆ ಬಂದೆ. ಕದ್ರಿಯಲ್ಲಿದ್ದ ಮನೆಯಿಂದ ರೈಲು ನಿಲ್ದಾಣಕ್ಕೆ ಬರಲು ಆಟೋಕ್ಕೆ ೩೩ ರೂ. ಮಂಗಳೂರಿನಿಂದ ಕಾಸರಗೋಡಿಗೆ ಲೋಕಲ್ ರೈಲಿನಲ್ಲಿ ಇಬ್ಬರ ಟಿಕೇಟಿಗೆ ೧೬ ರೂ. :-) ಒಬ್ಬರ ಟಿಕೇಟಿಗೆ ಸುಮಾರು ೧೫ ರೂ. ಇರಬಹುದು ಎಂದಂದುಕೊಂಡಿದ್ದ ನನಗೆ ಆಶ್ಚರ್ಯವಾಯಿತು.
ಸರಿ, ಅಲ್ಲೇ ಮುಂದಿದ್ದ ಪ್ಲಾಟ್‍ಫ಼ಾರ್ಮ್‍ನಲ್ಲಿ ಖಾಲಿ ಇದ್ದ ಬೋಗಿಯನ್ನು ಹುಡುಕಿಕೊಂಡು ನಡೆದೆವು, ಮೂತ್ರದ ವಾಸನೆಯಿಂದ ಮೂಗು ಸಿಂಡರಿಸಿಕೊಳ್ಳುತ್ತಾ (ಇದು ಭಾರತದ ಎಲ್ಲಾ ರೈಲುನಿಲ್ದಾಣಗಳಲ್ಲಿ ಸಾಮಾನ್ಯವಾಗಿರುವ ಒಂದು ವಿದ್ಯಮಾನ, ಅಲ್ಲವೇ? ಛೆ, ನಿಜಕ್ಕೂ ಕೊಳಕರು ನಾವು). ಕೊನೆಯಲ್ಲಿದ್ದ ಬೋಗಿಗಳು ಖಾಲಿ ಇದ್ದುವು, ಹತ್ತಿ ಒಂದು ಕಡೆ ಕುಳಿತೆವು. ಸ್ವಲ್ಪ ಹೊತ್ತಿನಲ್ಲಿ ಒಂದು ಮಹಾತಾಯಿ ಮಕ್ಕಳ ಸೈನ್ಯವನ್ನು ಕಟ್ಟಿಕೊಂಡು ನಾವಿದ್ದಲ್ಲಿಗೆ ಬಂದು ಕೂತಳು, ಆ ಮಕ್ಕಳ ಉಪಟಳ, ಆ ಹೆಂಗಸಿನ ದುರ್ವರ್ತನೆಗಳಿಂದ ಬೇಸತ್ತ ಸ್ಮಿತಾ ಮುಖ ಸಿಂಡರಿಸಿಕೊಂಡು ಅಲ್ಲಿಂದೆದ್ದು ಇನ್ನೊಂದು ಖಾಲಿ ಸೀಟಿನತ್ತ ತೆರಳುವಂತೆ ನನ್ನನ್ನು ವಿನಂತಿಸಿಕೊಂಡಳು, ಅಲ್ಲಿಂದ ನಾವೆದ್ದ ಕೂಡಲೇ ಆ ಮಕ್ಕಳು ಕಿಟಕಿಯ ಬಳಿ ಇದ್ದ (ನಾವು ಕೂತಿದ್ದ) ಸೀಟಿನತ್ತ ಅಧಿಕಾರ ಸ್ಥಾಪಿಸಲು ಲಗ್ಗೆ ಹಾಕಿದರು. ಆ ಅಮ್ಮನ ಮುಖದಲ್ಲಾಗಲೀ, ಆ ಮಕ್ಕಳ ಮುಖದಲ್ಲಾಗಲೀ (ಎರಡು ಮಕ್ಕಳು ಸುಮಾರು ಪ್ರೌಢಶಾಲೆಯಲ್ಲಿ ಕಲಿಯುವಷ್ಟು ದೊಡ್ಡವರಾಗಿದ್ದರು, ಚೆನ್ನಾಗಿ ಬಟ್ಟೆಬರೆ ಕೂಡ ಹಾಕಿದ್ದರು) ತುಸುವೇ ನಾಚಿಕೆ, ಅವಮಾನ ಕಾಣಿಸಲಿಲ್ಲ. ಇರಲಿ, ಇನ್ನೊಂದು ಕಡೆ ಹೋಗಿ ಕುಳಿತೆವು ನಾವು, ಅದೃಷ್ಟವಶಾತ್ ಅಲ್ಲಿದ್ದ ಜನರೆಲ್ಲರೂ ಸಭ್ಯರೂ, ಶಾಂತಿಪ್ರಿಯರೂ ಆಗಿದ್ದರು, ಉಳಿದ ಪ್ರಯಾಣ ಸುಖಕರವಾಗಿಯೇ ಸಾಗಿತು, ಮನಸ್ಸು ನಿರಾಳವಾಯಿತು.
ಕೊನೆಗೆ ಕಾಸರಗೋಡಿನಲ್ಲಿ ಇಳಿಯುವಾಗ ಪುನಃ ಒಂದು ವಿಷಯ ಮನವನ್ನು ಕೊರೆಯಿತು. ನಮ್ಮ ರೈಲುಗಳನ್ನು, ನಿಲ್ದಾಣಗಳನ್ನು ವಿನ್ಯಾಸಗೊಳಿಸಿದ ರೀತಿಯ ಬಗ್ಗೆ. ಅಲ್ಲಾ, ರೈಲಿನ ಬೋಗಿಯ ಒಳ ನೆಲ ಹಾಗೂ ನಿಲ್ದಾಣದ ಪ್ಲಾಟ್‍ಫ಼ಾರ್ಮ್ - ಇವೆರಡೂ ಒಂದೇ ಎತ್ತರದಲ್ಲಿರುವಂತೆ ನೋಡಿಕೊಂಡರೆ ಹತ್ತಿಳಿಯುವುದು ಎಷ್ಟು ಆರಾಮದಾಯಕವಲ್ಲವೇ? ಆದರೆ ಹೆಚ್ಚಿನ ಕಡೆ ಒಂದಂತಸ್ತಿನಷ್ಟು ಎತ್ತರ ವ್ಯತ್ಯಾಸವಿರುತ್ತದೆ. ಹತ್ತುವಾಗಲಾದರೂ ಹೇಗಾದರೂ ಸಂಭಾಳಿಸುವ ನಮ್ಮಂತಹ ಸಣ್ಣ ಪ್ರಾಯದವರಿಗೇ ಇಳಿಯುವಾಗ ತ್ರಾಸದಾಯಕವಾಗುವಂತಹ ಆ ವಿನ್ಯಾಸದ ಬಗ್ಗೆ ಆಲೋಚನೆ ಮಾಡಿದಷ್ಟೂ ಮನಕ್ಕೆ ಬೇಸರವಾಯಿತು - ವೃದ್ಧರು, ಅಂಗವಿಕಲರು, ಮಕ್ಕಳನ್ನು ಹಿಡಿದುಕೊಂಡಿರುವ ಮಹಿಳೆಯರು, ಹೆಚ್ಚಿನ ಚೀಲಗಳನ್ನು ಹಿಡಿದುಕೊಂಡಿರುವ ವ್ಯಕ್ತಿಗಳು - ಇವರೆಲ್ಲಾ ಅದೆಷ್ಟು ಕಷ್ಟ ಅನುಭವಿಸುತ್ತಿರಬೇಡ ಈ ಕೆಟ್ಟ ವ್ಯವಸ್ಥೆಯಲ್ಲಿ? ಅದೂ ಪರಿಹಾರ ಸಾಕಷ್ಟು ಸರಳವಾಗಿರುವಾಗ, ಅಲ್ಲವೇ?
ಕಾಸರಗೋಡಿನಿಂದ ಮಂಗಳೂರಿಗೆ
ವಾಪಸ್ ಬರುವಾಗಲೂ ರೈಲಿನಲ್ಲೇ ಬರುವ ನಿರ್ಧಾರ ತೆಗೆದುಕೊಂಡೆವು, ಬೆಂಗಳೂರಿಗೆ ಹೋಗುವ ಎಕ್ಸ್‍ಪ್ರೆಸ್ ರೈಲು ಇತ್ತು, ೬:೧೦ಕ್ಕೆ. ಆದಿತ್ಯವಾರ (ಭಾನುವಾರ)ವಾದ್ದರಿಂದ ಹೆಚ್ಚಿನ ಜನಸಂದಣಿ ಇರುವುದಿಲ್ಲ, ಮುಂದೆ ಇರುವ ಜನರಲ್ ಬೋಗಿಯಲ್ಲಿ ಹತ್ತಿ ಎಂಬ ಕಿವಿಮಾತು ಸಿಕ್ಕಿತ್ತು ನಮಗೆ. ಈ ಸಲವೂ ಕಾರಣಾಂತರದಿಂದ ನಾವು ರೈಲು ನಿಲ್ದಾಣ ತಲುಪುವಾಗ ಸ್ವಲ್ಪ ತಡವಾಗಿತ್ತು, ರೈಲು ಹೊರಡಲು ೧೦ ನಿಮಿಷ ಮಾತ್ರ ಬಾಕಿ ಇತ್ತು, ಎರಡೇ ಕೌಂಟರ್ ಇತ್ತು, ಸಾಕಷ್ಟು ಜನರಿದ್ದರು ಟಿಕೇಟು ಖರೀದಿಸಲು. ಈಗ ನಾವು ಸ್ವಲ್ಪ ಆತಂಕದಲ್ಲಿದ್ದೆವು, ಅದಾದ ಮೇಲೆ ಸದ್ಯದಲ್ಲಿ ಬೇರೆ ರೈಲು ಇಲ್ಲದಿರುವುದಕ್ಕೆ. ಕೊನೆಗೆ ಒಂದಿಬ್ಬರಲ್ಲಿ ವಿನಂತಿಸಿಕೊಳ್ಳುತ್ತಾ, ಉಳಿದವರ ಮುಖವೂ ನೋಡದೆ ತಪ್ಪಿಸಿಕೊಳ್ಳುತ್ತಾ ಸೀದಾ ಕೌಂಟರ್ ಬಳಿ ತೆರಳಿ ನಿಂತೆ, ಬೇಗನೆ ಟಿಕೇಟ್ ಖರೀದಿಸುವ ಉದ್ದೇಶದಿಂದ. ಜನರು ಸಹಕರಿಸಿದರು, ಜಗಳ ಕಾಯುವ ಪ್ರಸಂಗ ಬರಲಿಲ್ಲ, ಮನಸ್ಸು ನಿರಾಳವಾಯಿತು - ಈಗ ನನ್ನ ಮುಂದೆ ಕೇವಲ ಒಬ್ಬ ವ್ಯಕ್ತಿಯಿದ್ದ. ಆದರೆ ಆ ಕೌಂಟರ್‌ನಲ್ಲಿದ್ದ ಮನುಷ್ಯನ ನಿಧಾನಗತಿ, ಕಾಯುವವರ ಬಗೆಗಿದ್ದ ಅಸಡ್ಡೆತನ ನೋಡಿ ಮೈಯೆಲ್ಲಾ ಉರಿಯುತ್ತಿತ್ತು - ತುಸು ಹೊತ್ತಿನಲ್ಲಿ ಅವನು ‘ನಾನಿನ್ನು ಸ್ವಲ್ಪ ಹೊತ್ತು ಕಳೆದು ಬರುತ್ತೇನೆ’ ಎಂದಂದು ಎದ್ದು ಹೊರಟೇ ಹೋದ, ಎಲ್ಲರನ್ನೂ ಅಲ್ಲಿ ನಡುನೀರಿನಲ್ಲಿ ಕೈಬಿಟ್ಟು. ಕೊನೆಗೆ ನಾನು ಪಕ್ಕದಲ್ಲಿದ್ದ ಇನ್ನೊಂದು ಕ್ಯೂನಲ್ಲಿ ನಿಂತಿದ್ದ ಒಬ್ಬರಲ್ಲಿ ವಿನಂತಿಸಿಕೊಂಡು ಅವರ ಮೂಲಕ ಮಂಗಳೂರಿಗೆ ಎರಡು ಟಿಕೇಟು ತೆಗೆಸಿಕೊಂಡೆ, ಆ ಕ್ಯೂನಲ್ಲಿದ್ದ ಜನರೂ ಜಗಳ ಕಾಯದೇ ಸಹಕರಿಸಿದರು, ಪಾಪ. ಇದು ಎಕ್ಸ್‍ಪ್ರೆಸ್ ರೈಲಾಗಿದ್ದರಿಂದ ಟಿಕೇಟಿಗೆ ೨೨ ರೂ. (ಒಬ್ಬರಿಗೆ)
ಈ ಸಲ ಸಣ್ಣ ಆತಂಕ ಇತ್ತು, ರೈಲು ಬಂದು ನಿಂತಾಗ ಯಾವ ಬೋಗಿ ಎಲ್ಲಿ ನಿಲ್ಲುತ್ತದಪ್ಪಾ ಎಂದು, ಅಂತಹ ಮಾಹಿತಿ ಉಪಯುಕ್ತವಲ್ಲ ನೋಡಿ, ಅದಕ್ಕೇ ಪ್ರಯಾಣಿಕರಿಗೆ ಒಂದಷ್ಟು ಸಾಹಸದ ಅವಕಾಶಗಳನ್ನು ನೀಡಿರುತ್ತಾರೆ, ರೈಲ್ವೇ ಇಲಾಖೆ. ಒಂದು ಕಡೆ ಒಂದಷ್ಟು ಜನ ಗುಂಪು ಸೇರಿದ್ದು ನೋಡಿ ಅದೇ ಜನರಲ್ ಬೋಗಿ ಬರುವ ಜಾಗ ಎಂದು ಅಂದಾಜು ಆಯಿತು. ಕೊನೆಗೂ ರೈಲು ಬಂದಾಗ ನಮ್ಮ ಮುಂದೆ ‘ಸೆಕೆಂಡ್ ಕ್ಲಾಸ್’ ಎಂದು ಬರೆದಿದ್ದ ೨ ಬೋಗಿಗಳು ಮುಂದೆ ಸರಿದವು, ನಮ್ಮ ಮುಂದೆ ಅದರ ಹಿಂದಿದ್ದ ಹವಾನಿಯಂತ್ರಿತ ಬೋಗಿಗಳು ನಿಂತವು. ಬೆಪ್ಪುತಕ್ಕಡಿಗಳಂತೆ ನಾವು ಮುಖ-ಮುಖ ನೋಡಿಕೊಂಡೆವು. ಸೆಕೆಂಡ್ ಕ್ಲಾಸೇ ಜನರಲ್ ಬೋಗಿಯೋ ಅಥವಾ ಇನ್ನೂ ಹಿಂದಿರಬಹುದೇ ಎಂದು ಆಲೋಚನೆ ಮಾಡಿ ಹಿಂದಿನ ದಿಕ್ಕಿನಲ್ಲಿ ತೆರಳಿದೆವು, ಆಗ ಗೊತ್ತಾಯಿತು, ಹವಾನಿಯಂತ್ರಿತ ಬೋಗಿಗಳಾದ ಮೇಲೆ ಉದ್ದಕ್ಕೂ ಸ್ಲೀಪರ್ ಬೋಗಿಗಳಿವೆ ಅಂತ, ಅದಕ್ಕೂ ಆಚೆಗೆ ಇದ್ದ ಜನರಲ್ ಬೋಗಿಯನ್ನು ತಲುಪಲು ಬೇಗ ಬೇಗನೆ ನಡೆದುಕೊಂಡು , ಓಡುತ್ತಾ ತೆರಳಿದೆವು. ಕೊನೆಗೂ ಮತ್ತೊಂದು ‘ಸೆಕೆಂಡ್ ಕ್ಲಾಸ್’ ಕಾಣಿಸಿತು, ಅಬ್ಬಾ ಎಂದು ಮನಸ್ಸು ನಿರಾಳವಾಯಿತು, ಆದರೆ ಜನ ಸಂದಣಿ ಸಾಕಷ್ಟಿತ್ತು. ಹತ್ತುವಷ್ಟರಲ್ಲಿ ನನ್ನ ಮುಂದಿದ್ದವನ ಚಪ್ಪಲಿ ಜಾರಿ ಕೆಳಗೆ ಬಿತ್ತು, ಅದು ಪ್ಲಾಟ್‍ಫ಼ಾರ್ಮ್‍ಗೆ ಬೀಳುತ್ತಿತ್ತೇನೋ, ಆದರೆ ನನ್ನ ಕಾಲು ತಾಗಿ ಅದು ಹಳಿಯ ಮೇಲೆ ಬಿತ್ತು ಅರ್ಥಾತ್ ಅವನಿಗೆ ಪುನಃ ಸಿಗದಂತೆ ಕಳೆದುಹೋಯಿತು. ಅಯ್ಯೋ, ನನ್ನ ಚಪ್ಪಲಿ ಎಲ್ಲಿ ಎಂದು ಅವನು - ಛೆ, ನನ್ನ ಕಾಲು ತಾಗಿ ಅವನ ಚಪ್ಪಲಿ ಕಳೆದೇ ಹೋಯಿತಲ್ಲಾ ಎಂದು ನಾನು, ಹೀಗೆ ಇಬ್ಬರೂ ಕ್ಷಣ ಕಾಲ ಗಲಿಬಿಲಿಯಲ್ಲಿರುವಾಗ ರೈಲು ಹೊರಟೇ ಬಿಟ್ಟಿತು. ಆಗ ನಾವು ನಮ್ಮ ಹಿಂದೆ ಇದ್ದ ಇನ್ನೊ ಕೆಲವರು ಎಲ್ಲರಲ್ಲೂ ಹೊಸ ಚೈತನ್ಯದ ಸಂಚಲನವಾಯಿತು, ಹೋ ಅನ್ನುತ್ತಾ ದಡಬಡನೆ ಹತ್ತಿಬಿಟ್ಟೆವು.
ಸಹಜವಾಗಿಯೇ, ಕೂತುಕೊಳ್ಳಲು ಜಾಗ ಇರಲಿಲ್ಲ. ಆದರೆ ಬರೀ ೩೫ ನಿಮಿಷದ ಪ್ರಯಾಣ ಎಂದು ನಾವೂ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ - ಬಸ್ಸಿನ ಅತಿ ಕುಲುಕಾಟ, ರಸ್ತೆಯ ಧೂಳು ಇತ್ಯಾದಿ ಸಮಸ್ಯೆಗಳು ಇರದೇ ಇದ್ದದ್ದು ಮತ್ತೊಂದು ಅನುಕೂಲ ನೋಡಿ! ಆದರೆ ಅನಗತ್ಯವಾಗಿ ಹೆಣ್ಣುಮಕ್ಕಳ ಮೈ ತಾಕಿಸಿಕೊಂಡು ತೆವಲು ತೀರಿಸಿಕೊಳ್ಳುವ ಕೆಲವು ಮಧ್ಯವಯಸ್ಕರೂ, ಪುಂಡ ಹುಡುಗರೂ ಇರುತ್ತಾರೆ ಎಂಬುದು ಸ್ವಲ್ಪ ಹೊತ್ತಿನಲ್ಲೇ ನಮ್ಮ ಗಮನಕ್ಕೆ ಬಂತು, ಸಾಧ್ಯವಾದಷ್ಟೂ ಎಚ್ಚರದಲ್ಲಿದ್ದೆವು ನಾವು. ಉಳಿದಂತೆ ಪ್ರಯಾಣ ಪರವಾಗಿರಲಿಲ್ಲ.
ಕೊನೆಗೆ ಮಂಗಳೂರಿನಲ್ಲಿ ಇಳಿಯಬೇಕಾದರೆ ಸಿಕ್ಕಾಪಟ್ಟೆ ಕಷ್ಟ ಆಯಿತು. ಇಳಿಯಲಿಕ್ಕಿರುವ ಪ್ರಯಾಣಿಕರನ್ನು ಇಳಿಯಲೂ ಬಿಡದೆ ಹತ್ತಲು ತವಕಿಸುವ ಪ್ರಯಾಣಿಕರು ದೊಡ್ಡದೊಂದು ಸವಾಲೊಡ್ಡಿದ್ದರು, ಹತ್ತಲೆಂದು ಕಾದಿರುವವರಲ್ಲಿ ಹೆಚ್ಚಿನವರು ತಮ್ಮ ಸಂಯಮ ಕಾಯ್ದುಕೊಳ್ಳುತ್ತಾರೆ, ಇಳಿಯುವವರು ಇಳಿದಾದ ಕೂಡಲೇ ಹತ್ತುವವರಲ್ಲಿ ನಾವು ಪ್ರಥಮರಾಗಿರಬೇಕೆನ್ನುವುದೇ ಅವರ ಮುಖ್ಯ ಉದ್ದೇಶವಾಗಿರುತ್ತದೆ. ಆದರೆ ಕೆಲವು ದುರುಳರು ಇಳಿಯುವವರ ಮಧ್ಯೆಯೇ ನುಸುಳುತ್ತಾ ಹತ್ತಲು ಯತ್ನಿಸುತ್ತಾರೆ, ಹೆಂಗಸರನ್ನೂ ಲೆಕ್ಕಿಸದೆ. ಇಂತಹ ಒಬ್ಬ ಕೆಟ್ಟ ಮಧ್ಯವಯಸ್ಕ ತನ್ನ ಚೀಲವನ್ನು ಸ್ಮಿತಾ ಮತ್ತಿತರರ ಕೈ-ಮುಖಗಳಿಗೆ ಗಾಯವಾಗುವಂತೆ ಎಳೆದಾಡಿಕೊಂಡು ಹತ್ತಿದ್ದು ನೋಡಿ ಮನಸ್ಸು ರೋಸಿ ಹೋಯಿತು. ಅವನ ಮುಖದಲ್ಲಿ ಒಂದಿನಿತೂ ಬೇಸರವಿರಲಿಲ್ಲ, ವಿಜಯೋತ್ಸಾಹವಿತ್ತು.
ಪ್ರಯಾಣವನ್ನು ಮತ್ತೂ ಕಹಿಯಾಗಿ ಮಾಡಿದ ಆ ದುಷ್ಟನನ್ನು ಹಳಿಯುತ್ತಾ ನಾವು ನಿಲ್ದಾಣದ ಹೊರಗೆ ಬಂದೆವು, ಆಟೋ ಹಿಡಿಯಲು. ಇಲ್ಲಿ ಇನ್ನೊಂದು ಕಿರಿಕಿರಿ ಕಾದಿತ್ತು ಎಂದರೆ ಅದರಲ್ಲಿ ಆಶ್ಚರ್ಯವೇನಿಲ್ಲ, ಅಲ್ಲವೇ? ಮೀಟರ್ ಹಾಕಿಕೊಂಡು ಬರಲು ಯಾರೂ ತಯಾರು ಇಲ್ಲ, ಅತಿಯಾಗಿ ಸುಲಿಗೆ ಮಾಡಲು ತಯಾರಾಗಿ ಎಲ್ಲರೂ ನಿಂತಿದ್ದರು, ಇನ್ನು ಕೆಲವರು ನಮ್ಮ ಮನೆ ಕಡೆ ರಸ್ತೆ ಚೆನ್ನಾಗಿಲ್ಲ ಎಂದು ಬರಲು ನಿರಾಕರಿಸುವವರು - ಇವರನ್ನು ನಿಯಂತ್ರಿಸುವವರು ಯಾರೂ ಇರಲಿಲ್ಲ, ಹೆಚ್ಚಿನ ಪ್ರಯಾಣಿಕರು ಈ ದೌರ್ಜನ್ಯವನ್ನು ಮೂಕವಾಗಿ ಸಹಿಸುತ್ತಾ ಒಂದಿಷ್ಟು ಚೌಕಾಸಿ ಮಾಡಿ ಹತ್ತಿ ಹೋಗುತ್ತಿದ್ದರು. ಇನ್ನು ಕೆಲವರು ಆಟೋ ಚಾಲಕರ ವರ್ತನೆಯಿಂದ ಬೇಸತ್ತು, ಅಥವಾ ಸ್ವಾಭಿಮಾನ ಸೆಟೆದು, ಕೋಪ ಬಂದು ಬಸ್ ಹಿಡಿಯಲು ತೆರಳುತ್ತಿದ್ದರು. ನಮ್ಮ ಕೈಯಲ್ಲಿ ತುಸು ಭಾರದ ಚೀಲಗಳಿತ್ತು, ಆದರೂ ಮುಖ್ಯರಸ್ತೆಯ ಕಡೆಗೆ ನಡೆಯಲಾರಂಭಿಸಿದೆವು, ಅಲ್ಲಿ ಸರಿಯಾದ ಆಟೋ ಸುಲಭವಾಗಿ ಸಿಗಬಹುದೆಂದು. ದುರದೃಷ್ಟವಶಾತ್ ಮುಖ್ಯರಸ್ತೆಯಲ್ಲಿಯೂ ಖಾಲಿ ಆಟೋ ಸಿಗಲಿಲ್ಲ, ಮತ್ತೂ ಮುನ್ನಡೆದು ಕೊನೆಗೆ ಸ್ಟೇಟ್ ಬ್ಯಾಂಕ್‍ನಿಂದ ಬಸ್ ಹಿಡಿದು ಬಂಟ್ಸ್ ಹಾಸ್ಟೆಲ್‍ವರೆಗೆ ತೆರಳಿದೆವು, ಅಲ್ಲಿ ಕೂಡ ಒಂದಿಷ್ಟು ಹೊತ್ತು ಕಾದು ಕೊನೆಗೆ ಆಟೋ ಹಿಡಿದು ಮನೆ ತಲುಪಿದೆವು.
ಮುಕ್ತಾಯ
ನಿತ್ಯವೂ ರೈಲಿನಲ್ಲಿ ಹೋಗುವವರು ಈ ಬ್ಲಾಗನ್ನು ನೋಡಿ ಖಂಡಿತಾ ನಗೆಯಾಡಬಹುದು, ಇದೊಂದು ದೊಡ್ಡ ಸಮಸ್ಯೆಯೇ ಅಲ್ಲ, ಈ ಚಿಲ್ಲರೆ ಸಮಸ್ಯೆಗಳನ್ನುದ್ಧರಿಸಿ ವ್ಯವಸ್ಥೆಯನ್ನು ಟೀಕಿಸುತ್ತಾನೆ, ಮೊದಲಿದ್ದದ್ದಕ್ಕಿಂತ ಈಗ ಎಷ್ಟೋ ವಾಸಿ, ಅದರಲ್ಲೂ ದಕ್ಷಿಣ ಭಾರತದಲ್ಲಿ ಪ್ರಯಾಣಿಕರ ವರ್ತನೆ ಎಷ್ಟೋ ಉತ್ತಮ ಎಂದಿತ್ಯಾದಿ ಅವರಿಗೆ ಕಾಣಬಹುದು. ನಮ್ಮ ಗ್ರಾಮೀಣ ಪ್ರದೇಶದ ಜನರಿಗಂತೂ ಅನೇಕ ವಿಷಯಗಳಲ್ಲಿ ಅದೆಷ್ಟು ಕೆಟ್ಟ ವ್ಯವಸ್ಥೆಗಳಿವೆ ಎಂದರೆ ಈ ಥರದ ಸೂಕ್ಷ್ಮವಾದ ವಿಚಾರಗಳ ಬಗ್ಗೆ ಆಲೋಚನೆಯೂ ಹರಿಯುವುದಿಲ್ಲ, ಅದೆಷ್ಟೋ ಸಲ. ಆದರೆ ಸ್ಯಾನ್‍ಫ಼್ರಾನ್ಸಿಸ್ಕೋ, ಚಿಕಾಗೋ ಮುಂತಾದ ಕಡೆ ರೈಲಿನ ಸುವ್ಯವಸ್ಥೆ ನೋಡಿದ ನನಗೆ, ದೆಹಲಿಯಲ್ಲಿರುವ ಮೆಟ್ರೋದ ಗುಣಮಟ್ಟವನ್ನೂ ನೋಡಿದ ನನಗೆ ಕಾಣುವುದೇನೆಂದರೆ - "ಒಟ್ಟಿನಲ್ಲಿ ಪ್ರಯಾಣಿಕರ ಸಮಯಕ್ಕೆ, ಸೌಕರ್ಯಕ್ಕೆ, ಮನಸ್ಸಮಾಧಾನಕ್ಕೆ, ಕೊನೆಗೆ ಜೀವಕ್ಕೂ ಬೆಲೆ ಕೊಡುವಲ್ಲಿ ನಮ್ಮ ರೈಲು ವ್ಯವಸ್ಥೆ ಇನ್ನೂ ದೂರದ ಹಾದಿ ಕ್ರಮಿಸಲಿಕ್ಕಿದೆ, ಸುವ್ಯವಸ್ಥೆ ಎನಿಸಿಕೊಳ್ಳಲು" ಎಂದು.
ಉಳಿದಂತೆ ರಸ್ತೆಯ ಕಳಪೆ ಗುಣಮಟ್ಟದ ಬಗ್ಗೆ, ಆಟೋ ಚಾಲಕರ ದುರ್ವರ್ತನೆಗಳ ಬಗ್ಗೆ - ಇಲ್ಲಿ ಕೂಡ ಸುಧಾರಣೆಗಳು ಯಾವಾಗ ಸಮಾಧಾನಕರ ಮಟ್ಟವನ್ನು ತಲುಪುತ್ತವೆ ಎನ್ನುವುದೊಂದು ಯಕ್ಷಪ್ರಶ್ನೆ.
ಇತಿ,
ಕೃಷ್ಣ ಶಾಸ್ತ್ರಿ
ಪ್ರತಿಯೊಬ್ಬರ ಜೀವನವೂ ಒಂದು ಪುಸ್ತಕದಂತೆ. ಪ್ರತಿದಿನವೂ ಕಥೆ ಬೆಳೆಯುತ್ತದೆ, ಪುಟಗಳೂ, ಅಧ್ಯಾಯಗಳೂ ಸೇರ್ಪಡೆಗೊಳ್ಳುತ್ತಲೇ ಹೋಗುತ್ತವೆ. ಆದರೆ ಪರರು ಓದಲೆಂದು ಇಡೀ ಪುಸ್ತಕವನ್ನು ಯಾರೂ ತೆರೆದಿಡುವುದಿಲ್ಲ. ನಾನೂ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ತೆರೆದ ಕೆಲವು ಪುಟಗಳು ಇಲ್ಲಿ ನಿಮ್ಮ ಮುಂದಿವೆ.
They say, life is like a book. Each day pages, chapters keep getting added. But no one keeps the entire book open for everyone to read. I am not an exception either. Here are the open pages for you.
About Me
- ಕೃಷ್ಣ ಶಾಸ್ತ್ರಿ - Krishna Shastry
- ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.
I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
Total Pageviews
Sunday, October 10, 2010
Subscribe to:
Post Comments (Atom)
5 comments:
ರೈಲಿನಲ್ಲಿ ನೀವು ಮಾಡಿದ ಸಾಹಸಯಾತ್ರೆ ಕಣ್ಣಿಗೆ ಕಟ್ಟಿದಂತೆ ಬರೆದಿದ್ದೀರ.
ನನಗೇ ರೈಲಿನಲ್ಲಿ ಈ ರೀತಿ ಕಹಿ ಅನುಭವ ಆಗುತ್ತಿದೆಯೇನೋ ಎಂದು ಅನಿಸುವಷ್ಟರ ಮಟ್ಟಿಗೆ ಬರೆದಿದ್ದೀರ. ಉತ್ತಮ ಬರವಣಿಗೆ.
ಹರೀಶ
ella sari kananna. aadre ee 'moothra' andre enu antha tilililla.. adroo chennagi bardiddiya.. aa dyavr chennag ittirli..
ನಮಸ್ಕಾರ,
ನಿಮ್ಮ ಬ್ಲಾಗ್ ತುಂಬಾ ಚೆನ್ನಾಗಿದೆ.. ಸಣ್ಣ ಸಣ್ಣ ವಿಷಯಗಳನ್ನೂ ಮನ ಮುಟ್ಟುವಂತೆ ವರ್ಣನೆ ಮಾಡಿದ್ದೀರಾ..
ಈ ಸುವ್ಯವಸ್ತೆಗೆ ಯಾರು ಹೊಣೆ? ನಾವು ಅಂದರೆ ಸಾಮಾನ್ಯ ಜನ ಹೇಗೆ ಸರಿ ಪಡಿಸ ಬಹುದು?
ನಾನು ಕೆಲ ಕಾಲ ಮುಂಬೈ ನಲ್ಲಿ ಕಳೆದೆ. ಅಲ್ಲಿನ ಲೋಕಲ್ ರೈಲ್, ಬೆಸ್ಟ್ ಬಸ್ ಹಾಗು ಆಟೋ ಗಳಲ್ಲಿ ಪ್ರಯಾಣಿಸಿದ್ದೇನೆ. ನಾವು ಅಂದರೆ ಕರ್ನಾಟಕದವರು ಬಹಳ ಕಲಿಯ ಬೇಕು ಅನಿಸುತ್ತದೆ..
ಉದಾಹರಣೆಗೆ ಬಸ್ ನಲ್ಲಿ ಕೇವಲ ೮ ರೂಪಾಯಿ ಟಿಕೆಟ್ಟಿಗೆ ೧೦೦ ರೂಪಾಯಿ ಕೊಟ್ಟರೆ, ಮುಖ ಸಿನ್ದರಸಿಕೊಲ್ಲದೆ ಅಥವಾ ಟಿಕೆಟ್ ಹಿಂದೆ ಬಾಕಿ ಹಣ ಬರೆದು ಕೊಡದೆ ತಕ್ಷಣ ಚಿಲ್ಲರೆ ಹಣವನ್ನ ಕೊಡುತ್ತಾರೆ. ಪ್ರತಿಯೊಂದು ಸ್ಟಾರ್ಟ್ಟಿಂಗ್ ಪಾಯಿಂಟ್ ನಲ್ಲಿ ಜನ ಕ್ಯು ನಲ್ಲಿ ಬಸ್ ಹತ್ತುತ್ತಾರೆ.
ನೆರೆ ರಾಜ್ಯಗಳಿಂದ ಸ್ವಲ್ಪ ಕಲಿತು ಸಾರ್ವಜನಿಕ ಪ್ರಯಾಣದ ವ್ಯವಸ್ತೆ ನಮ್ಮ ರಾಜ್ಯ ದಲ್ಲೂ ಸುಧಾರಸ ಬಹುದೇನೋ ಎಂದು ಆಶಿಸುತ್ತಾ ನನ್ನ ಬೋರಿಂಗ್ ಫೀಡ್ ಬ್ಯಾಕ್ ನಿಲ್ಲಿಸಿತ್ತಿದ್ದೇನೆ....
ವಿಶ್ವಾಸಿ
ವಿನೋದ್
ವಿನೋದ್ ಅವರೆ,
ನಿಮ್ಮ ಮುಂಬೈ ಅನುಭವ ಕೇಳಿ ಖುಷಿ ಆಯಿತು. ಭಾರತದಲ್ಲಿ ಎಲ್ಲೇ ಇರಲಿ, ಜನರು ಶಿಷ್ಟಾಚಾರದಲ್ಲಿ ಮುಂದಿದ್ದಾರೆ ಎಂದರೆ ಅದು ಸಂತೋಷದ ವಿಷಯವೇ ಸರಿ.
ನೀವು ಹೇಳಿದಂತೆ ಇತರರೂ ಅಂತಹ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಂಡು ಸುಸಂಸ್ಕೃತ ಪ್ರಜೆಗಳಾಗಿ ಬೆಳೆಯಲಿ ಎಂದು ಆಶಿಸೋಣ.
ಕೊನೆಯದಾಗಿ, ಈ ಸುವ್ಯವಸ್ಥೆಗೆ ಯಾರು ಹೊಣೆ? ನಾನು, ನೀವು ಎಲ್ಲರೂ - ಆದರೆ ಪ್ರತಿಯೊಂದು ಹೆಜ್ಜೆಗೂ ಅವ್ಯವಸ್ಥೆ ಕಾಣುವ ಇಲ್ಲಿ ಪ್ರತಿಯೊಂದರಲ್ಲಿಯೂ ‘ಏನಾದರೂ’ ಮಾಡುತ್ತಾ ಹೋಗಲು ಸಾಧ್ಯವಿಲ್ಲ. ನಾನು ಕಡೇಪಕ್ಷ ಒಂದು ಬ್ಲಾಗ್ ಬರೆದು ವಿದ್ಯಾವಂತ ಜನರಲ್ಲಿ ಜಾಗೃತಿಯನ್ನು ಹೆಚ್ಚಿಸುವಾ ಎಂದು ಪ್ರಯತ್ನಿಸುತ್ತಿದ್ದೇನೆ, ಅಷ್ಟೆ (ಎಷ್ಟೋ ಸಲ ವಿದ್ಯಾವಂತರ ಸಾರ್ವಜನಿಕ ವರ್ತನೆ ಇತರರಿಗಿಂತ ತುಚ್ಛವಾಗಿರುತ್ತದೆ ಎಂಬುದನ್ನು ನಾನು ಈಗಾಗಲೇ ಅನೇಕ ಕಡೆ ನೋಡಿದ್ದೇನೆ).
ಇತಿ,
ಕೃಷ್ಣ ಶಾಸ್ತ್ರಿ
ನಿಮ್ಮ ಬ್ಲಾಗ್ ಚೆನ್ನಾಗಿದೆ.
ಹಾಗೆ ನನ್ನ ಸಾಹಿತ್ಯದ ಬ್ಲಾಗ್ ಕಡೆಗೆ ಒಮ್ಮೆ ಬನ್ನಿ..
http://sharadabooks.blogspot.com/
Post a Comment