About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Tuesday, October 5, 2010

ಒಂದು ಕೌತುಕಮಯವಾದ ಸಂಭಾಷಣೆ

ಸನ್ನಿವೇಶ: ಒಬ್ಬರು ತಮ್ಮ ಪರಿಚಯಸ್ಥರ ಮನೆಗೆ ಭೇಟಿ ಕೊಡುವುದು.

ಪಾತ್ರಧಾರಿಗಳು:
ಸುರೇಶ: ಅತಿಥಿ
ಶಿವರಾಮ: ಮನೆಯ ಯಜಮಾನ
ಲಕ್ಷ್ಮಿ: ಗೃಹಿಣಿ, ಶಿವರಾಮನ ಪತ್ನಿ

ಸಂಜೆಯ ಹೊತ್ತು ಸುಮಾರು ಘಂಟೆ. ಶಿವರಾಮ ಮನೆಯ ಹೊರಗೆ ಚಾವಡಿಯಲ್ಲಿ ಪೇಪರ್ ಓದಿಕೊಂಡು ಇರುತ್ತಾನೆ. ಲಕ್ಷ್ಮಿ ಮನೆಯ ಒಳ ಏನೋ ಕೆಲಸದಲ್ಲಿ ನಿರತಳಾಗಿರುತ್ತಾಳೆ. ಆಗ ಸುರೇಶನ ಆಗಮನವಾಗುತ್ತದೆ.

ಶಿವರಾಮ: ಓಹೋ! ಸುರೇಶಾ! ಭಾರೀ ಅಪರೂಪ, ಬನ್ನಿ ಬನ್ನಿ.
ಸುರೇಶ: ನಮಸ್ಕಾರ, ನೀವೆಲ್ಲಾ ಚೆನ್ನಾಗಿದ್ದೀರಾ, ಹೀಗೆ ಸುಮ್ಮನೆ ಮಾತಾಡಿಸಿಕೊಂಡು ಹೋಗುವಾ ಅಂತ ಬಂದೆ, ಅಷ್ಟೆ.
ಶಿವರಾಮ: ಒಳ್ಳೆದಾಯ್ತು, ಬನ್ನಿ ಬನ್ನಿ, ಕೂತುಕೊಳ್ಳಿ.

ಮನೆಯ ಒಳಗಿಂದ ಲಕ್ಷ್ಮಿಯೂ ಹೊರಬರುತ್ತಾರೆ.

ಗೃಹಿಣಿ: ಬಾಯಾರಿಕೆಗೆ ಏನು ಕೊಡಲಿ ಕುಡಿಯಲು? ಚಾ, ಕಾಫಿ?
ಸುರೇಶ: ಚಾ, ಕಾಪಿ ಬೇಡ. ಯಾವುದಾದರೂ ಪಾನಕ ಆದೀತು.

ಶಿವರಾಮ: ! ಹೊರಗೆ ತುಂಬಾ ಸೆಕೆ ಅಲ್ವಾ, ಸರಿ ಸರಿ.
ಸುರೇಶ ಸುಮ್ಮನೆ ಮುಗುಳ್ನಗುತ್ತಾರೆ... ಲಕ್ಷ್ಮಿ ಮನೆಯೊಳಕ್ಕೆ ಹೋಗುತ್ತಾರೆ.

ಶಿವರಾಮ, ಸುರೇಶ ಲೋಕಾಭಿರಾಮವಾಗಿ ಮಾತನಾಡುತ್ತಿರುತ್ತಾರೆ, ತುಸು ಹೊತ್ತಿನ ಬಳಿಕ ಲಕ್ಷ್ಮಿ ನಿಂಬೆಹಣ್ಣಿನ ಪಾನಕ, ಚಕ್ಕುಲಿ, ಮೈಸೂರ್ ಪಾಕ್ ತರುತ್ತಾರೆ. ಸುರೇಶ ಒಂದೆರಡು ಚಕ್ಕುಲಿ ತಿಂದು ಪಾನಕ ಕುಡಿಯುತ್ತಾನೆ, ಮೈಸೂರ್ ಪಾಕ್ ಹಾಗೆಯೇ ತಟ್ಟೆಯಲ್ಲಿ ಉಳಿದುಬಿಡುತ್ತದೆ, ಇದು ಲಕ್ಷ್ಮಿಯ ಗಮನ ಸೆಳೆಯುತ್ತದೆ.

ಲಕ್ಷ್ಮಿ: ಏನು ನೀವು ಮೈಸೂರ್ ಪಾಕ್ ಮುಟ್ಟಲೇ ಇಲ್ಲ? ಇದು ಮನೆಯಲ್ಲೇ ಮಾಡಿದ್ದು, ಮಾತ್ರವಲ್ಲ ಒಳ್ಳೆ ತುಪ್ಪದಲ್ಲಿ.
ಸುರೇಶ: ಪರವಾಗಿಲ್ಲ ಬಿಡಿ, ನಾನು ತುಪ್ಪದಲ್ಲಿ ಮಾಡಿದ್ದು ತಿನ್ನುವುದಿಲ್ಲ.

ಲಕ್ಷ್ಮಿಗೆ ಗಲಿಬಿಲಿಯಾಗುತ್ತದೆ, ಅವಳು ಏನಾದರೂ ಹೇಳುವ ಮುನ್ನ ಶಿವರಾಮ ಮಧ್ಯೆ ಬಾಯಿ ಹಾಕುತ್ತಾನೆ.

ಶಿವರಾಮ: ಹ್ಹೆಹ್ಹೆ, ಏನು ಡಯಟ್ ಮಾಡ್ತಾ ಇದ್ದೀರಾ?
ಸುರೇಶ: ಒಂದು ರೀತಿಯಲ್ಲಿ ನೋಡಿದರೆ ಡಯಟ್ ಮಾಡ್ತಾ ಇದ್ದೇನೆ ಅಂತ ಹೇಳಬಹುದು, ಆದರೆ ನೀವು ಹೇಳುವ ರೀತಿಯಲ್ಲಲ್ಲ. ನಾನು ಶುದ್ಧ ಸಸ್ಯಾಹಾರಿ, ಪ್ರಾಣಿಜನ್ಯವಾದದ್ದು ಎಲ್ಲವೂ ವರ್ಜ್ಯ, ಹಾಲು ಮತ್ತು ಅದರ ಉತ್ಪನ್ನಗಳು (ಬೆಣ್ಣೆ, ತುಪ್ಪ, ಮೊಸರು), ವಿಭಾಗದಲ್ಲಿ ಜೇನು ಕೂಡ ಸೇರುತ್ತದೆ.

ಶಿವರಾಮ: ಓಹೋ! ಇದಕ್ಕೆ ಕಾರಣವೇನು ಎಂದು ಕೇಳಬಹುದೇ? ನೀವು ಯಾವ ಜಾತಿ? ಅಥವಾ ನಿಮಗೆ ಯಾವುದಾದರೂ ಅಲರ್ಜಿ ಇದೆಯೇ?
ಸುರೇಶ: ಇದು ಜಾತಿಯಿಂದ ಬಂದದ್ದಲ್ಲ, ನಾನೇ ಆಯ್ದುಕೊಂಡಿರುವ ಒಂದು ರೀತಿಯ ಅಹಿಂಸಾತ್ಮಕ ಜೀವನಕ್ರಮ, ಸಕಲ ಪ್ರಾಣಿ-ಪಕ್ಷಿಗಳ ಮೇಲಿನ ಪ್ರೀತಿಯಿಂದ, ಕಳಕಳಿಯಿಂದ. ಮಾತ್ರವಲ್ಲ ಆರೋಗ್ಯದ ಹಾಗೂ ಪರಿಸರದ ದೃಷ್ಟಿಯಿಂದ ಕೂಡ ಇದು ಒಂದು ಸರಿಯಾದ ಹೆಜ್ಜೆ.

ಲಕ್ಷ್ಮಿ: ಅರೆ! ಇಂಥಾದ್ದನ್ನು ಈವರೆಗೆ ಕೇಳಲೇ ಇಲ್ಲವಲ್ಲಾ!! ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲವೇ?
ಸುರೇಶ: ಹಾಲು ಆರೋಗ್ಯಕರ ಹೌದು, ಆದರೆ ಸ್ವಂತ ಅಮ್ಮನ ಹಾಲು, ಬೇರೆಯೇ ಪ್ರಬೇಧದ ಪ್ರಾಣಿಯಾದ ದನದ ಹಾಲಲ್ಲ. ಆರೋಗ್ಯದ ದೃಷ್ಟಿಯಿಂದ ನೋಡಿದರೆ, ಸಮತೂಕದ ಶುದ್ಧ ಸಸ್ಯಾಹಾರಕ್ಕಿಂತ ಉತ್ತಮ ಇನ್ಯಾವುದೂ ಇಲ್ಲ ಎಂದು ಈಗ ಅನೇಕ ತಜ್ಞರು ವೈಜ್ಞಾನಿಕವಾಗಿ ತೋರಿಸಿಕೊಟ್ಟಿದ್ದಾರೆ.

ಲಕ್ಷ್ಮಿ: ಆದರೆ ದನದ ಹಾಲು ಅಷ್ಟೇನೂ ಹಾಳಲ್ಲ, ಅಲ್ಲವೇ?
ಸುರೇಶ: ಪ್ರಾಣಿಮೂಲದಿಂದ ಬಂದ ಆಹಾರವಸ್ತುಗಳಲ್ಲಿ ನಮ್ಮ ದೇಹಕ್ಕೆ ಉಪಯುಕ್ತವಾಗುವ ಅಂಶಗಳೊಂದಿಗೆ ಅನೇಕ ಹಾನಿಕಾರಕ ಅಂಶಗಳೂ ಇವೆ. ಇದು ಮಾಂಸದ ಬಗ್ಗೆ ಇರುವ ಸತ್ಯ ಮಾತ್ರವಲ್ಲ, ಹಾಲು ಹಾಗೂ ಕ್ಷೀರೋತ್ಪನ್ನಗಳೂ ಸಾಲಿನಲ್ಲಿ ಸೇರುತ್ತವೆ.

ಲಕ್ಷ್ಮಿ: ಏನೋಪ್ಪ, ನನಗೆ ಅರ್ಥವಾಗುತ್ತಿಲ್ಲ. ಹಲವು ತಲೆಮಾರುಗಳಿಂದ ನಾವೆಲ್ಲರೂ ಹಾಲು-ಬೆಣ್ಣೆ-ಮೊಸರು-ತುಪ್ಪ ತಿಂದುಕೊಂಡೇ ಬಂದಿದ್ದೇವೆ, ಅದರಿಂದ ಏನಾಗಿದೆ?
ಸುರೇಶ: ತಿಂದ ಕೂಡಲೇ ಸತ್ತು ಬೀಳುವಂತಹ ವಿಷ ಎಂದು ನಾನು ಹೇಳುತ್ತಾ ಇಲ್ಲ. ಎಷ್ಟೋ ಸಂದರ್ಭಗಳಲ್ಲಿ ಅದು ಆರೋಗ್ಯಕರ ಎಂದೇ ತೋರಬಹುದು. ಆದರೆ ಶುದ್ಧ ಸಸ್ಯಾಹಾರ ಅದಕ್ಕಿಂತ ಮೇಲು, ದೂರಗಾಮಿ ದೃಷ್ಟಿಯಿಂದ ನೋಡಿದರೆ ನಮ್ಮ ದೇಹಕ್ಕೆ ಅದೇ ಹೆಚ್ಚು ಸೂಕ್ತ ಎಂದಷ್ಟೇ ಹೇಳುತ್ತಾ ಇದ್ದೇನೆ. ನಿಮಗೆ ಬೇಕಾದರೆ ಹೇಳಿ, ಹೆಚ್ಚಿನ ಮಾಹಿತಿ ನಾನು ಕೊಡುತ್ತೇನೆ.

ಲಕ್ಷ್ಮಿಗೆ ಅಯೋಮಯವಾಗುತ್ತದೆ, ಅಪನಂಬಿಕೆಯ ಮುಖ ಹೊತ್ತು ಏನನ್ನೋ ಚಿಂತಿಸಿಕೊಂಡು ಸುಮ್ಮನಿರುತ್ತಾಳೆ, ಹೆಚ್ಚಿಗೆ ಮಾತು ಬೆಳೆಸುವುದಿಲ್ಲ.

ಶಿವರಾಮ: ಅಹಿಂಸೆ ಎಂದಿರಿ, ಆದರೆ ದನಗಳಿಂದ ನಾವು ಹಾಲನ್ನು ಮಾತ್ರ ಪಡೆಯುವುದಲ್ಲವೇ? ನಮ್ಮಲ್ಲಿ ದನಗಳನ್ನು ಕೊಲ್ಲುವ ಕ್ರಮ ಇಲ್ಲ, ಚೆನ್ನಾಗಿಯೇ ನೋಡಿಕೊಳ್ಳುತ್ತೇವೆ, ಪೂಜ್ಯಸ್ಥಾನದಲ್ಲಿಟ್ಟು ಗೌರವಿಸುತ್ತೇವೆ.
ಸುರೇಶ: ತಪ್ಪು ತಿಳಿದುಕೊಳ್ಳಬೇಡಿ, ನೀವು ಅಮಾಯಕರಾಗಿ ಸೀಮಿತ ದೃಷ್ಟಿಯಿಂದ ವಿಷಯವನ್ನು ಅವಲೋಕಿಸುತ್ತಿದ್ದೀರಿ, ನಿಜಕ್ಕೂ ನೋಡಿದರೆ ಕೊಲ್ಲುವುದು ಮಾತ್ರ ಹಿಂಸೆ ಅಲ್ಲ, ಮನುಷ್ಯರು ಮುಗ್ಧ ಜೀವಿಗಳ ಮೇಲೆ ಅನೇಕ ದೌರ್ಜನ್ಯಗಳನ್ನೆಸಗುತ್ತಿದ್ದಾರೆ, ಇತ್ತೀಚೆಗಂತೂ ಕ್ರೌರ್ಯ ಎಲ್ಲೆ ಮೀರಿದೆ, ಅನೇಕ ಕಡೆ ಧಾರ್ಮಿಕತೆಯೂ ಅರ್ಥ ಕಳೆದುಕೊಂಡಿದೆ. ನೀವು ನಿಮಗೆ ತಿಳಿದ ಮಟ್ಟಿಗೆ ದನಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿರಬಹುದು, ಆದರೆ ನಿಮಗೆ ತಿಳಿಯದೆಯೇ ನೀವು ಅನೇಕ ರೀತಿಯಲ್ಲಿ ಹಿಂಸಾಪಥದಲ್ಲಿರಲೂಬಹುದು.

ಶಿವರಾಮ, ಲಕ್ಷ್ಮಿ ಇಬ್ಬರ ಮನದೊಳಗೂ ಅನೇಕ ಆಲೋಚನೆಗಳು, ಪ್ರಶ್ನೆಗಳು, ಅಪನಂಬಿಕೆ-ಕೋಪ-ಕುತೂಹಲ-ಬೇಸರ ಇತ್ಯಾದಿ ಭಾವನೆಗಳು ಹರಿದಾಡುತ್ತಿರುವುದು ಅವರ ಮುಖಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ, ಒಂದೆರಡು ಕ್ಷಣ ಮೌನ ಪಸರಿಸುತ್ತದೆ. ಅವರಿಗೆ ಸುರೇಶ ಹೇಳುವುದು ಇಷ್ಟವಾಗುವುದಿಲ್ಲ, ಆದರೆ ಮನೆಗೆ ಬಂದ ಅತಿಥಿ ಎಂಬ ಗೌರವದಿಂದ ಸುಮ್ಮನಿರುತ್ತಾರೆ.

ಸುರೇಶ: ನಿಮ್ಮನ್ನು ಹೀಗಳೆಯುವುದು, ದನದ ಮೇಲಿರುವ ನಿಮ್ಮ ಪ್ರೀತಿ-ಕಳಕಳಿಯನ್ನು ಪ್ರಶ್ನಿಸುವುದು ನನ್ನ ಉದ್ದೇಶ ಅಲ್ಲ, ತಪ್ಪು ತಿಳಿದುಕೊಳ್ಳಬೇಡಿ. ಇದು ಬಹಳ ಸೂಕ್ಷ್ಮವಾದ ಹಾಗೂ ಆಳವಾದ ವಿಷಯ, ವಿಚಾರವಾಗಿ ಇದರ ಬಗ್ಗೆ ಇನ್ನೂ ಹೆಚ್ಚಿನ ವಿವರಗಳು ಅಂತರ್ಜಾಲದಲ್ಲಿ ಲಭ್ಯವಿದೆ, ನಾನೂ ಇತ್ತೀಚೆಗೆ ವಿಚಾರದಲ್ಲಿ ಒಂದು ವಿವರವಾದ ಲೇಖನ ಬರೆದಿದ್ದೇನೆ. ನನ್ನ ಬ್ಲಾಗ್ನಲ್ಲಿದೆ, ಆಸಕ್ತಿ ಇದ್ದರೆ ಓದಿ:
ದನ, ನಮ್ಮ ಗುಲಾಮ ದೇವರು!
http://krishnashastry.blogspot.com/2011/05/blog-post.html#Kannada

ಈಗ ವಾತಾವರಣ ಸ್ವಲ್ಪ ತಿಳಿಯಾಗುತ್ತದೆ.

ಸುರೇಶ: ನನ್ನ ಅಹಿಂಸಾ ಜೀವನಕ್ರಮ ಬರೀ ಆಹಾರಕ್ಕೆ ಸೀಮಿತವಾಗಿಲ್ಲ, ಚರ್ಮ-ಸಿಲ್ಕ್-ಉಣ್ಣೆ ಇತ್ಯಾದಿಗಳ ಉಪಯೋಗವನ್ನು ಕೂಡ ನಾನು ಮಾಡುವುದಿಲ್ಲ.
ಶಿವರಾಮ: ಹೌದಾ, ಆದರೆ ನೀವು ಚರ್ಮದ ಬೂಟನ್ನು ಧರಿಸಿಕೊಂಡು ಬಂದಿದ್ದೀರಿ?
ಸುರೇಶ: ಇಲ್ಲ, ಅದು ಸಿಂಥೆಟಿಕ್, ಚರ್ಮದ್ದಲ್ಲ.
ಶಿವರಾಮ: ಓಹೋ, ಆಶ್ಚರ್ಯವಾಗಿದೆ.

ಲಕ್ಷ್ಮಿ: ಪರಿಸರದ ವಿಚಾರವೂ ಹೇಳಿದಿರಿ? ಹಾಲು ಕುಡಿಯುವುದಕ್ಕೂ ಪರಿಸರಕ್ಕೂ ಏನು ಸಂಬಂಧ?
ಸುರೇಶ: ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಾಣಿ ಸಾಕಣೆಗೆಂದು ಅಪಾರ ಪ್ರಮಾಣದಲ್ಲಿ ನೆಲ-ಜಲದ ದುರುಪಯೋಗವಾಗುತ್ತದೆ, ಅರಣ್ಯ ನಾಶವಾಗುತ್ತದೆ, ಅವುಗಳ ಮೇವಿಗೆಂದೇ ಅನೇಕ ದವಸ-ಧಾನ್ಯಗಳನ್ನು ಉತ್ಪಾದಿಸುತ್ತಾರೆ. ಎಲ್ಲವನ್ನೂ ನಮಗೆ ನಿಜವಾಗಿ ಆರೋಗ್ಯಕರವಾದ ಶುದ್ಧ ಸಸ್ಯಾಹಾರವನ್ನು ಬೆಳೆಸಲು ಉಪಯೋಗಿಸಿಕೊಂಡರೆ ಆಗ ಅದರಿಂದಾಗುವ ಪರಿಸರ ಹಾನಿ ತುಂಬಾ ಕಡಿಮೆ, ನಾವು ಕೂಡ ಹೆಚ್ಚು ಆರೋಗ್ಯವಂತರಾಗಿರಬಹುದು.

ಶಿವರಾಮ ಅರೆಕ್ಷಣ ಆಲೋಚನಾಮಗ್ನರಾಗುತ್ತಾನೆ... ಹೊಸ ತರ್ಕ ಹೊಳೆಯುತ್ತದೆ

ಶಿವರಾಮ: ಅಲ್ಲಾ, ಸಸ್ಯಗಳಿಗೂ ಜೀವವಿಲ್ಲವೇ? ಅಲ್ಲಿ ಹಿಂಸೆ ಇಲ್ಲವೇ?
ಸುರೇಶ: ಒಳ್ಳೆಯ ಪ್ರಶ್ನೆ, ಜೀವ ಇದ್ದಲ್ಲೆಲ್ಲಾ ನೋವು ಇರಲೇಬೇಕೆಂದಿಲ್ಲ, ನಮಗೆಲ್ಲಾ ಪ್ರಕೃತಿನೋವುಎಂಬ ಸಲಕರಣೆ ಕೊಟ್ಟದ್ದು ಸ್ವ-ರಕ್ಷಣೆಗೆಂದು. ನೀವೇ ಆಲೋಚನೆ ಮಾಡೀ ನೋಡಿ: ಬೆಂಕಿ ತಾಗಿದಾಗ ಕೈ ಹಿಂದಕ್ಕೆ ಸರಿಯಲು ಪ್ರೇರೇಪಿಸುವುದೇನು? ನೋವು, ಅಲ್ಲವೇ? ಸಸ್ಯಗಳು ಚಲನಾರಹಿತವಾದ್ದರಿಂದ ಅದಕ್ಕೆ ನೋವು ಅನುಭವಿಸುವ ನರಮಂಡಲವನ್ನು ಪ್ರಕೃತಿ ಕೊಡಲಿಲ್ಲ. ಇದರರ್ಥ ಸಸ್ಯಕ್ಕೆ ಸ್ಪಂದನಾಶೀಲತೆ ಇಲ್ಲ ಎಂದೂ ಅಲ್ಲ, ಆದರೆ ನೋವು ಇಲ್ಲ ಅಥವಾ ಅತಿ ಕಡಿಮೆ ಎಂದರ್ಥ.

ಶಿವರಾಮ: ಆದರೆ ನಾವು ಓಡಾಡುವಾಗ ಲೆಕ್ಕವಿಲ್ಲದಷ್ಟು ಹುಳ, ಹುಪ್ಪಟೆಗಳು ಸಾವುನೋವಿಗೀಡಾಗುತ್ತವೆ, ಅದಕ್ಕೇನಂತೀರಾ?
ಸುರೇಶ: ನಮ್ಮ ಸ್ವಾರ್ಥಕ್ಕಾಗಿ/ಮೋಜಿಗಾಗಿ ಅಂತವುಗಳನ್ನು ಹೊಸಕಿ ಹಾಕುವುದು ಖಂಡಿತಾ ಕ್ರೌರ್ಯವೇ. ಆದರೆ ಹೆಚ್ಚಿನ ಸಲ ನಾವು ಕೊಲ್ಲುವುದು ಬೇರೆ ವಿಧಿ ಇಲ್ಲದೆ, ನಮ್ಮ ಸ್ವಂತ ರಕ್ಷಣೆಗಾಗಿ. ಮಾತ್ರವಲ್ಲ, ಮೊದಲೇ ಹೇಳಿದಂತೆ, ಅಂತಹ ಕೆಲವು ಜೀವಿಗಳಲ್ಲಿ ನೋವಿನ ಅರಿವು ಕಡಿಮೆ ಇರುವ ಸಾಧ್ಯತೆಗಳು ಹೆಚ್ಚು, ಆದರೆ ಇದನ್ನು ಸಾಧಾರಣೀಕರಿಸಬಾರದು.

ಸುರೇಶ ಒಂದರೆಕ್ಷಣ ತಡೆಯುತ್ತಾನೆ

ಸುರೇಶ: ನನ್ನ ಜೀವನಕ್ರಮದಲ್ಲಿ ಕ್ರೌರ್ಯವೇ ಇಲ್ಲ ಎಂದೇನು ನಾನು ಪ್ರತಿಪಾದಿಸುತ್ತಾ ಇಲ್ಲ, ಇತರ ಜೀವಿಗಳ ಒಳಿತಿಗಿಂತ ನನ್ನೊಳಗಿನ ಸ್ವಾರ್ಥವೇ ಮೇಲುಗೈ ಸಾಧಿಸುವ ಕ್ಷಣಗಳು, ಅತ್ಯಂತ ಸಂದಿಗ್ಧವಾದ ದ್ವಂದ್ವದ ಸನ್ನಿವೇಶಗಳು ಜೀವನದುದ್ದಕ್ಕೂ ಎದುರಾಗುತ್ತವೆ, ಆದರೆ ಮೂಲಭೂತವಾಗಿ ನನ್ನಲ್ಲಿರುವ ಮನಸ್ಥಿತಿ ಅಹಿಂಸೆಯ ಕಡೆ ನನ್ನನ್ನು ಪ್ರೇರೇಪಿಸುತ್ತಾ ಇರುತ್ತದೆ, ಅಷ್ಟೆ. ಎಲ್ಲದಕ್ಕಿಂತ ಮುಖ್ಯವಾಗಿ ಕೆಲವು ಕಡೆ ಅನಿವಾರ್ಯವಾಗುವ ಸಣ್ಣ ಪ್ರಮಾಣದ ಹಿಂಸೆಯನ್ನೇ ನೆಪವಾಗಿಟ್ಟುಕೊಂಡು ಎಗ್ಗಿಲ್ಲದೇ ದೊಡ್ಡ ಪ್ರಮಾಣದ ಹಿಂಸೆ ಮಾಡಲು ಹೇಸದೇ ಇರುವ ವಿಷವರ್ತುಲದಿಂದ ನಾನು ಹೊರಗೆ ಬಂದಿದ್ದೇನೆ, ಎನ್ನಬಹುದು.

ಲಕ್ಷ್ಮಿ: ಹಂ, ನಿಮ್ಮದೊಂದು ಅನುಪಮ ಜೀವನಕ್ರಮ! ಹೀಗಿರುವವ ಯಾರನ್ನೂ ನಾನು ಇದುವರೆಗೆ ಭೇಟಿಯಾಗಲಿಲ್ಲ.
ಸುರೇಶ: ನನ್ನಂತೆಯೇ ಅನೇಕ ಜನರಿದ್ದಾರೆ, ಸಂಖ್ಯೆ ಹೆಚ್ಚುತ್ತಾ ಇದೆ. ಸಿದ್ಧಾಂತಕ್ಕೆವೀಗನಿಸಂಎನ್ನುತ್ತಾರೆ, ಇದನ್ನು ಪಾಲಿಸುವವರನ್ನುವೀಗನ್ಎಂದು ಕರೆಯುತ್ತಾರೆ. ಪ್ರತಿಯೊಬ್ಬರೂ ತಮ್ಮ ಜೀವನಕ್ರಮವನ್ನು ಜೀವನದುದ್ದಕ್ಕೂ ಕೈಲಾದಷ್ಟು ಅಹಿಂಸೆಯ ಕಡೆಗೆ ಕೊಂಡೊಯ್ಯುತ್ತಲೇ ಇರುತ್ತಾರೆ. ಮಹಾತ್ಮಾ ಗಾಂಧಿಯೂ ಆಗಿನ ಕಾಲದಲ್ಲಿಯೇ ವೀಗನಿಸಂ ಸಿದ್ಧಾಂತವನ್ನು ಎತ್ತಿಹಿಡಿಯಲು ಶ್ರಮಿಸಿದ್ದಾರೆ, ಗೊತ್ತಿದೆಯೇ ನಿಮಗೆ?

ಶಿವರಾಮ: ನೀವು ಹೇಳುವುದು ತರ್ಕಬದ್ಧವಾಗಿಯೇನೋ ಕಾಣುತ್ತದೆ, ಆದರೆ ಯಾಕೋ ಮನಸ್ಸು ಸುಲಭವಾಗಿ ಒಪ್ಪುವುದಿಲ್ಲ. ಆದರೂ ನಿಮ್ಮ ಮನಸ್ಥೈರ್ಯ ನೋಡಿದರೆ ಆಶ್ಚರ್ಯವಾಗುತ್ತದೆ, ನನಗೆ ಇದೆಲ್ಲಾ ಸಾಧ್ಯವಿಲ್ಲಪ್ಪ :-)
ಸುರೇಶ: ಎಷ್ಟೋ ಸಲ ಬದಲಾಗುವುದು ಸಾಧ್ಯವಿಲ್ಲ ಎಂದು ನಂಬುತ್ತೇವೆ, ಆದರೆ ತಪ್ಪಿತಸ್ಥ ಭಾವನೆಯೂ ಕಾಡುತ್ತದೆ, ಇದರಿಂದ ಪಾರಾಗಲು ಮನಸ್ಸು ಅದಕ್ಕೆ ತಕ್ಕಂತೆ ತರ್ಕವನ್ನು ಹುಟ್ಟಿಹಾಕುತ್ತದೆ. ಮಾತ್ರವಲ್ಲ, ನಿಧಾನಕ್ಕೆ ನೂರಾರು ವರ್ಷಗಳಿಂದ ಬೆಳೆದು ಬಂದ ಸಂಪ್ರದಾಯ, ಬೇರೂರಿದ ನಂಬಿಕೆಗಳು ಒಮ್ಮೆಗೇ ಬದಲಾಗುವುದು ಸುಲಭವಲ್ಲ, ಸರಿಯಾಗಿ ಪರಾಮರ್ಶಿಸದೆ ಬದಲಾಗುವುದು ವಿವೇಕಯುತವೂ ಅಲ್ಲ.

ಸುರೇಶ ಒಂದರೆಕ್ಷಣ ತಡೆಯುತ್ತಾನೆ

ಸುರೇಶ: ಇದು ಕಷ್ಟ, ದಾರಿಯಲ್ಲಿ ಅನೇಕ ಕಲ್ಲು-ಮುಳ್ಳುಗಳಿವೆ ಎಂದಂದುಕೊಳ್ಳಬೇಡಿ. ಅಹಿಂಸೆಯ ಪರಿಕಲ್ಪನೆ ಹೆಚ್ಚಿನ ಮನುಷ್ಯರ ಮನಸ್ಸಿನಲ್ಲಿದೆ, ಇದರ ಬಗ್ಗೆ ಆಳವಾಗಿ ಚಿಂತನೆ ಮಾಡಿದಂತೆ ಹೊಸ ವಿಷಯಗಳು ಮನಸ್ಸಿಗೆ ನಾಟುತ್ತವೆ, ಆಗ ತನ್ನಿಂದ ತಾನೇ ಸುತ್ತಮುತ್ತಲಿನ ಎಲ್ಲಾ ಜೀವಿಗಳೊಂದಿಗೆ ಅನುಬಂಧ ಮೂಡುತ್ತದೆ, ಹಾಗೂ ಬದಲಾವಣೆ ಸ್ವಾಭಾವಿಕವಾಗಿಯೇ ಕಾಣುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಇದು ನಿಮಗೆ ನಿರಾಳತೆ, ಸಂತಸವನ್ನು ನೀಡುತ್ತದೆ.

ಲಕ್ಷ್ಮಿ: ನಿಮ್ಮ ಮನೆಯಲ್ಲಿ ಎಲ್ಲರೂ ಹೀಗೆಯೇ?
ಸುರೇಶ: ಸದ್ಯಕ್ಕೆ ನಾನು ಮಾತ್ರ ವೀಗನ್. ಉಳಿದವರು ಹಾಲನ್ನು ಬಿಡಲಿಲ್ಲ.

ಇದನ್ನು ಕೇಳಿದಾಗ ಶಿವರಾಮ, ಲಕ್ಷ್ಮಿ ಇಬ್ಬರಿಗೂ ಸ್ವಲ್ಪ ಸಮಾಧಾನವಾಗುತ್ತದೆ!

ಸುರೇಶ: ಆಗಾಗ ವಿಷಯದಲ್ಲಿ ನಾವು ವೈಚಾರಿಕ ಚರ್ಚೆಗಳನ್ನು ಮಾಡಿಕೊಂಡೇ ಇರುತ್ತೇವೆ. ಸೈದ್ಧಾಂತಿಕವಾಗಿ ಅವರು ವಿಷಯವನ್ನು ಒಪ್ಪುವುದೇ ಇಲ್ಲ ಎಂದಲ್ಲ, ನನ್ನ ವಿಚಾರಗಳನ್ನು ಅವರಲ್ಲಿ ಹೆಚ್ಚಿನವರು ಒಪ್ಪುತ್ತಾರೆ, ಗೌರವಿಸುತ್ತಾರೆ. ಆದರೆ ತ್ಯಜಿಸುವುದು ಪರಿಹಾರ ಎಂದು ಅವರ ಮನಸ್ಸಿಗೆ ಬಲವಾಗಿ ಕಂಡುಬರಲಿಲ್ಲ, ತಮಗೆ ಸಾಧ್ಯವಿಲ್ಲ ಎಂದೂ ಕಾಣುತ್ತದೆ.

ಲಕ್ಷ್ಮಿ: ನೀವು ವೀಗನ್ ಆದದ್ದು ಯಾವಾಗ, ಹೇಗೆ ಎಂದು ಕೇಳಬಹುದೇ?
ಸುರೇಶ: ನಾನು ೨೦೦೦ನೇ ಇಸವಿಯಲ್ಲಿ, ಅಂದರೆ ಸುಮಾರು ೧೧ ವರ್ಷಗಳ ಹಿಂದೆ ಹಾದಿಯಲ್ಲಿ ನಡೆಯಲಾರಂಭಿಸಿದೆ, ಅದಕ್ಕೂ ಮುಂಚೆ ಹಾಲು ಕುಡಿಯುವ ಸಸ್ಯಾಹಾರಿಯಾಗಿದ್ದೆ. ಅದೊಂದು ಬೇರೆಯೇ ಕಥೆ, ಇನ್ನೊಮ್ಮೆ ಹೇಳುತ್ತೇನೆ, ಈಗ ನಾನಿನ್ನು ಹೊರಡಬೇಕು.

ಶಿವರಾಮ: ಹೌದೇನು?! ಇವತ್ತು ಅಂತರ್ಜಾಲದಲ್ಲಿ ಇದರ ಬಗ್ಗೆ ಖಂಡಿತಾ ಹುಡುಕಾಡುತ್ತೇನೆ, ಹೆಚ್ಚಿನ ಮಾಹಿತಿಗಾಗಿ. ನಾವು ಇದುವರೆಗೆ ಮಾತನಾಡಿದ ಧಾಟಿಯನ್ನು ನೋಡಿದರೆ ನಿಮಗೆ ಬಗ್ಗೆ ಅನೇಕರಿಗೆ ಹೇಳಿ ಹೇಳಿ ಬೋರ್ ಆಗಿರಬಹುದು ಎಂದು ಕಾಣುತ್ತದೆ, ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ, ತುಂಬಾ ಕುತೂಹಲ ಆಯಿತು, ಹೀಗಾಗಿ ಕೇಳುತ್ತಾ ಹೋದೆವು, ತಪ್ಪು ತಿಳಿದುಕೊಳ್ಳಬೇಡಿ.
ಸುರೇಶ: ಇದರಲ್ಲಿ ತೊಂದರೆ ಏನು ಬಂತು? ನೀವು ಕುತೂಹಲ ತೋರಿಸಿದ್ದಕ್ಕೆ, ತಾಳ್ಮೆಯಿಂದ ನಾನು ಹೇಳಿದ್ದನ್ನು ಕೇಳಿಸಿಕೊಂಡಿದ್ದಕ್ಕೆ ನಾನು ನಿಮಗೆ ಧನ್ಯವಾದ ಹೇಳಬೇಕು ನೋಡಿ! ಅಂತರ್ಜಾಲದಲ್ಲಿ ಇದರ ಬಗ್ಗೆ ಓದುವಾಗ ನಾನು ವೀಗನಿಸಂ ಬಗ್ಗೆ ಬರೆದ ಕಿರುಪರಿಚಯವನ್ನು ಸಾಧ್ಯವಿದ್ದಲ್ಲಿ ನನ್ನ ಬ್ಲಾಗ್ನಲ್ಲಿ ಓದಿ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ
http://krishnashastry.blogspot.com/2010/10/blog-post_03.html

ಶಿವರಾಮ: ಖಂಡಿತಾ, ಇನ್ನೊಮ್ಮೆ ಸಿಗೋಣ, ನಿಮ್ಮ ಸ್ವಂತ ಅನುಭವದ ಬಗ್ಗೆ ಆಗ ಮಾತಾಡೋಣವಂತೆ.
ಸುರೇಶ: ಸರಿ, ಹೋಗಿ ಬರುತ್ತೇನೆ.

*** ಮುಕ್ತಾಯ ***

4 comments:

Anonymous said...

Very good thinking good presentation. I never thought of leaving dairy products. I also do not use leather things and silk things.
-aasha Bhat

Susmitha - Veganosaurus said...

Very well written play! Needless to say, you have narrated it precisely as it happens all the time. I could picture myself being the athithi here. LOL

Your simple style covering all points makes it easy for anyone to read with interest. And is much most importantly, your attempt to put it across in a peaceful manner makes a world of difference.

Anonymous said...

nice. But what to do with cows we have now If we stop drinking milk? Secondly what is the problem if we drink milk from our own cow?

ಕೃಷ್ಣ ಶಾಸ್ತ್ರಿ - Krishna Shastry said...

Answer to your first question: The large cow population that we see currently is because of human beings itself. We cant eliminate them from our lives immediately and wash off our mistakes. One should stop 'using' them and do service for them, by treating them with dignity and slowly take things back to where it was earlier.

Answer to your second question: That's exactly the problem explained in the whole article, not sure what your confusion is. When you say your own cow, are you saying it is not subjected any of the cruelty mentioned in this article? Please explain.

Hope this helps, feel free to post more questions, if any.

Post a Comment