ಶಿವಮೊಗ್ಗಕ್ಕೊಂದು ಪ್ರಯಾಣ - ಭಾಗ ೨
ಜೋಗದ ಪರಿಸರದಲ್ಲಿ
ಜೋಗ ಜಲಪಾತವನ್ನು ಎರಡು ಕೋನಗಳಿಂದ ಆಸ್ವಾದಿಸಬಹುದು - ಒಂದು ಕಡೆಯಿಂದ ಇಡೀ ಜೋಗದ ಜಲಪಾತವನ್ನು ವೀಕ್ಷಿಸಬಹುದು ಮಾತ್ರವಲ್ಲ ಅಲ್ಲಿಂದ ಜೋಗದ ಗುಂಡಿಗೂ ಇಳಿಯಬಹುದು, ಇನ್ನೊಂದು ಕಡೆಯಿಂದ ಜಲಪಾತದ ಮೇಲಿನ ಭಾಗದಲ್ಲಿ ನಡೆದಾಡಬಹುದು (ಇದನ್ನು ಬ್ರಿಟಿಷ್ ಬಂಗಲೆ ಕಡೆ ಅಂತ ಕೂಡ ಕರೆಯುತ್ತಾರೆ). ನಾವು ಮೊದಲು ಜೋಗದ ಸಿರಿಯನ್ನು ಮುಂಭಾಗದಿಂದ ಆಸ್ವಾದಿಸುವ ಸಲುವಾಗಿ ಆ ಕಡೆಗೆ ತೆರಳಿದೆವು.
ನಾನು ಮೊದಲಿಗೆ ಅಂದುಕೊಂಡಿದ್ದೇನೆಂದರೆ - ಮಳೆಗಾಲ ಬಂತಲ್ಲಾ, ಜೋಗ ಭೋರ್ಗರೆದು ಧುಮ್ಮಿಕ್ಕುತ್ತಿರಬಹುದು ಎಂದು. ಆದರೆ ಆಮೇಲೆ ತಿಳಿಯಿತು, ಅಣೆಕಟ್ಟು ತುಂಬಲು ಇನ್ನೂ ತುಂಬಾ ದಿನಗಳು ಇವೆ, ಈಗ ಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ದೃಶ್ಯವು ಸಾಧಾರಣ ಮಾತ್ರವಾಗಿರುತ್ತದೆ ಎಂದು. ಹಾಗೆ ನೋಡಿದರೆ ಜೋಗ ಸಂಪೂರ್ಣವಾಗಿ ಭೋರ್ಗರೆದು ಧುಮ್ಮಿಕ್ಕುವುದು ಬಹಳ ಅಪರೂಪವಂತೆ, ಪ್ರತಿವರ್ಷವೂ ಆಗುವ ಸಂಗತಿಯೇನಲ್ಲ, ೧೦-೧೫ ವರುಷಗಳಿಗೊಮ್ಮೆ ಮುನ್ಸೂಚನೆಯಿಲ್ಲದೆ ೧-೨ ದಿನ ಮಾತ್ರ ಅಂತಹ ದೃಶ್ಯ ನೋಡಲು ಸಿಗುವುದಂತೆ! ಮೊದಲೇ ಯೋಜನೆ ಹಾಕಿ ಹೋಗಿ ನೋಡಿ ಆಸ್ವಾದಿಸಲು ಸಾಧ್ಯವಿಲ್ಲ. ಸುಮಾರು ೨ ವರ್ಷಗಳ ಹಿಂದೊಮ್ಮೆ ಸೆಪ್ಟೆಂಬರ್ ತಿಂಗಳಲ್ಲಿ, ಮತ್ತೊಮ್ಮೆ ಈ ವರ್ಷದ ಕಡು ಬೇಸಿಗೆಯ ಎಪ್ರಿಲ್‍ನಲ್ಲಿ ಜೋಗದ ಸೊಬಗನ್ನು ಸವಿದಿದ್ದ ನನಗೆ ಸ್ವಲ್ಪ ನಿರಾಶೆಯಾಯಿತು, ಆದರೂ ಹುಮ್ಮಸ್ಸು ಕಳೆದುಕೊಳ್ಳದೇ ಮುಂದುವರೆದೆ. ಅಲ್ಲಿಗೆ ತಲುಪಿ ನೋಡಿದಾಗ, ನೀರು ಸಾಧಾರಣ ಮಟ್ಟದಲ್ಲಿರುವುದು ನೋಡಿ ಕಡೇಪಕ್ಷ ಕೆಳಗಿಳಿಯುವುದಕ್ಕೆ ಸಾಧ್ಯವಾಗುತ್ತಲ್ಲಾ ಎಂದಂದುಕೊಂಡು ಖುಷಿ ಪಟ್ಟೆವು. ಸ್ಮಿತಾ ಕೂಡ ಇಳಿಯಲು ತಯಾರಿ ನಡೆಸಿಕೊಂಡು ಬಂದಿದ್ದಳಲ್ಲಾ! ನೀರಿನ ಬಾಟಲಿಗಳನ್ನು ಬೆನ್ನ ಚೀಲದೊಳಗಿರಿಸಿ ನಾವೆಲ್ಲಾ ಹೊರಟೆವು, ಜೋಗದ ಗುಂಡಿ ಇಳಿಯಲು. ಕೆಳಗಿಳಿದು ಮೇಲೆ ಬರುವ ತನಕ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ ಎಂದು ಮೊದಲೇ ತಿಳಿದಿದ್ದರಿಂದ ಮೇಲ್ಭಾಗದಲ್ಲಿ ಇದ್ದ ಶೌಚಾಲಯಕ್ಕೆ ಕೂಡ ನಮ್ಮಲ್ಲಿ ಕೆಲವರು ಒಂದು ಭೇಟಿ ಕೊಟ್ಟೆವು. ಭಾರತದಲ್ಲಿ ಹೆಚ್ಚಿನ ಕಡೆ ಇರುವ ಸಾರ್ವಜನಿಕ ಶೌಚಾಲಯಗಳಷ್ಟು ಶೋಚನೀಯ ಪರಿಸ್ಥಿತಿಯಲ್ಲಿರಲಿಲ್ಲ, ಹೇಗೋ ಮೂತ್ರ ವಿಸರ್ಜಿಸಿ ಬರಬಹುದಾಗಿತ್ತು. ಎಂದಿನಂತೆ, ನಮ್ಮ ಜನರ ಸಾಮಾಜಿಕ ಪ್ರಜ್ಞೆ-ಆಡಳಿತ ವರ್ಗದವರ ಅದಕ್ಷತೆ-ಕೆಲಸಗಾರರ ಉದಾಸೀನತೆ ಇವೆಲ್ಲದರ ಬಗ್ಗೆ ನಿರಾಶೆ, ಜುಗುಪ್ಸೆ ಮನದಲ್ಲಿ ಮೂಡಿಬಂದು ಆನಂತರ ಮರೆಯಾದುವು, ಇಲ್ಲವಾದರೆ ಮನಸ್ಸು ಸುಮ್ಮನೆ ಕಹಿಯಾಗುತ್ತದೆ, ಯಾವುದನ್ನು ಆಸ್ವಾದಿಸಲು ಬಂದಿದ್ದೇವೋ ಅದನ್ನೇ ಮರೆತುಬಿಡುವಷ್ಟು! ಪರಿಸ್ಥಿತಿಯ ಜೊತೆ ಹೊಂದಿಕೊಳ್ಳುವ ಈ ಮನೋಭಾವ ಎಷ್ಟರಮಟ್ಟಿಗೆ ಹೋಗುತ್ತದೆ ಎಂದರೆ, ನಾವು ಅಂತಹ ಶೌಚಾಲಯದಿಂದ ಹೊರಬರುತ್ತಿರುವಾಗ ಯಾರಾದರೂ ಕುತೂಹಲ-ಆತಂಕದಿಂದ ‘ಹೇಗಿದೆ?’ ಎಂದು ಬಗ್ಗೆ ಕೇಳಿದಾಗ ‘ಪರವಾಗಿಲ್ಲ, ಧಾರಾಳವಾಗಿ (೨ ನಿಮಿಷಕ್ಕೆ) ಹೋಗಿಬರಬಹುದು’ ಎನ್ನುವುದರಿಂದ ಹಿಡಿದು ತುಸುವೇ ಚೆನ್ನಾಗಿದ್ದರೆ ‘ತುಂಬಾ ಸ್ವಚ್ಛವಾಗಿದೆ’ ಎಂದು ಹೇಳುವಲ್ಲಿಯವರೆಗೆ ಹೋಗುತ್ತದೆ :-) ಇದು ವಿಪರ್ಯಾಸ.
ಆದರೆ ನಮಗೆ ಮತ್ತೊಂದು ನಿರಾಸೆ ಕಾದಿತ್ತು, ಕೆಳಭಾಗದಲ್ಲಿ ಅದೇನೋ ಕೆಲಸ ನಡೆಯುತ್ತಿರುವುದರಿಂದ ಪ್ರವಾಸಿಗರಿಗೆ ಕೆಳಗಿಳಿಯಲು ಅವಕಾಶವಿಲ್ಲ ಎಂಬುದಾಗಿ ತಿಳಿದುಬಂತು. ನಮ್ಮ ಉತ್ಸಾಹದ ಬಲೂನ್ ಟುಸ್ ಅಂತ ಒಡೆದು ಹೋಯ್ತು. ಮೇಲಿನಿಂದಲೇ ನಿಸರ್ಗದ ಆ ಅದ್ಭುತದ ಸೊಬಗನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾ, ಹೋದ ಬಾರಿ ಬಂದ ನೆನಪುಗಳನ್ನು ಮೆಲುಕು ಹಾಕುತ್ತಾ ಒಂದಷ್ಟು ಹೊತ್ತು ಅಲ್ಲೇ ಅಡ್ಡಾಡಿದೆವು. ಒಂದು ಕಾಲು ಘಂಟೆಯಾದ ಮೇಲೆ ಅಲ್ಲಿ ನೋಡುವುದೇನೂ ಬಾಕಿ ಇರಲಿಲ್ಲ, ಹಾಗಾಗಿ ಬ್ರಿಟಿಷ್ ಬಂಗಲೆಯತ್ತ ತೆರಳಿದೆವು. ಅಲ್ಲಿ ಜಲಪಾತದ ನೆತ್ತಿಯ ಮೇಲೆ ನಡೆದಾಡಿ, ಬಂಡೆಗಳ ತುದಿಗೆ ಹೋಗಿ, ಕೆಳಮುಖವಾಗಿ ಮಲಗಿಕೊಂಡು ೮೦೦ ಅಡಿ ಗುಂಡಿಯನ್ನು ನೇರವಾಗಿ ನೋಡಬಹುದು ಎಂಬುದು ಪ್ರಮುಖ ಆಕರ್ಷಣೆ. ಕೆಲಸಮಯದ ಹಿಂದೆ ಅಮೇರಿಕಾದಲ್ಲಿ ಜಗದ್ವಿಖ್ಯಾತ ನಯಾಗರಾ ಜಲಪಾತವನ್ನು ನೋಡಿ ಬಂದಿದ್ದ ನಮಗೆ ಇದು ಅಂತಹ ಪ್ರದೇಶಗಳಲ್ಲಿ ಖಂಡಿತಾ ಸಾಧ್ಯವಾಗದ ವಿಷಯ ಎಂದು ತಿಳಿದಿತ್ತು :-) ಯಾಕೆಂದರೆ ಇದರಲ್ಲಿ ಸಾಕಷ್ಟು ಗಂಡಾಂತರಗಳಿವೆ, ಸುರಕ್ಷಾ ಕ್ರಮಗಳು ಏನೇನೂ ಇಲ್ಲ. ಅದೊಂದು ವಿಷಯದಲ್ಲಿ ನಾನು ಆಡಳಿತಾ ವರ್ಗದವರನ್ನು ದೂರುವುದಿಲ್ಲ! ಅವರವರ ಜಾಗ್ರತೆಯಲ್ಲಿ ಹೋಗಿ ನೋಡಿಬರುವವರಿಗೆ, ಸುರಕ್ಷಿತವಾಗಿ ವಾಪಾಸ್ ಬಂದವರಿಗೆ ಜೀವಮಾನದುದ್ದಕ್ಕೂ ಅದೊಂದು ಅವಿಸ್ಮರಣೀಯ ಅನುಭವವಾಗುದರಲ್ಲಿ ಎರಡು ಮಾತಿಲ್ಲ. ಹೆಚ್ಚಿನವರು ಜಾಗ್ರತೆವಹಿಸಿ ವಾಪಾಸ್ ಬರುತ್ತಾರೆ, ಅತಿಸಾಹಸ ಮಾಡಲೆತ್ನಿಸಿ, ಅಥವಾ ಕೆಲವು ಗಂಡಾಂತರಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ಜೀವ ಕಳೆದುಕೊಳ್ಳುವವರು ಪ್ರತಿವರ್ಷವೂ ಇರುತ್ತಾರೆ. ಸಂಜೆ ಮನೆಗೆ ಹೋದಾಗ ತಿಳಿಯಿತು, ಅಂದೇ ಒಬ್ಬ ಬಂಡೆಯ ತುತ್ತ ತುದಿಗೆ ಹೋಗಿ ಬಗ್ಗಿ ನಿಂತು ಗುಂಡಿಯ ಛಾಯಾಗ್ರಹಣ ಮಾಡುವ (ದು)ಸ್ಸಾಹಸ ಮಾಡಲೆತ್ನಿಸಿ ಬಿದ್ದು ಜೀವ ಕಳೆದುಕೊಂಡ ಸಂಗತಿ (ಪ್ರಾಯಶಃ ಅವನ ಶವ ಹುಡುಕುವ/ತೆಗೆಯುವ ಕಾರ್ಯದಲ್ಲಿಯೇ ನಿರತರಾಗಿ ಇತರರನ್ನು ಕೆಳಕ್ಕಿಳಿಯಲು ಬಿಡಲಿಲ್ಲವೋ ಏನೋ, ಗೊತ್ತಿಲ್ಲ). ಇರಲಿ ನಾವು ಕೂಡ ನಮ್ಮದೇ ಜಾಗ್ರತೆಯಲ್ಲಿ ಕೆಲವು ಬಂಡೆಗಳ ತುದಿಗೆ ತೆವಳಿಕೊಂಡು ತೆರಳಿ ಗುಂಡಿಯನ್ನು ನೋಡಿ, ನಿಸರ್ಗದ ಅಗಾಧತೆಯ ಮುಂದೆ ಕುಬ್ಜರಾಗಿ ಧನ್ಯರಾದೆವು. ಕೆಲವರು ತುಸು ಸಾಹಸ ತೋರಿಸಿ ಹೋದ ಕೆಲವು ಬಂಡೆಗಳಿಗೆ ನನಗೆ ಹೋಗಲಾಗಲಿಲ್ಲ, ಅಂತಹ ವಿಷಯಗಳಲ್ಲಿ ಅಭ್ಯಾಸದ ಕೊರತೆ ಹಾಗೂ ಭಯದಿಂದಾಗಿ. ಆದರೆ ನನಗೆ ನೋಡಲು ಸಿಕ್ಕಿದರಲ್ಲಿಯೇ ತೃಪ್ತಿ ಪಟ್ಟೆ. ಸ್ಮಿತಾ ಕೂಡ ನೋಡಿ ನಾನು ಮೊದಲ ಬಾರಿ ನೋಡಿದಾಗ ಅನುಭವಿಸಿದಂತೆ ಅಭೂತಪೂರ್ವವಾದ ಆನಂದ ಪಟ್ಟಳು!
ಇಲ್ಲಿ ಪ್ರಕಾಶ ಏನನ್ನೋ ಹೇಳಲು ಹೋಗಿ ಏನನ್ನೋ ಹೇಳಿ ನನ್ನ ಹಾಸ್ಯಕ್ಕೆ ಆಹಾರವಾದ. ಅಲ್ಲೊಂದಷ್ಟು ಕಡೆ ನೀರಿನ ಹರಿವು ಕಡಿಮೆ ಆಗಿ ಬರೀ ಕೆಸರು ಉಳಿದಿತ್ತು, ಅದನ್ನು ನೋಡಿದ ಪ್ರಕಾಶ ಅಲ್ಲಿ ಇತರ ಕಾಲದಲ್ಲಿ ನೀರು ಹರಿಯುತ್ತದೆ ಎಂಬುದನ್ನು ಗಮನಿಸದೆ ‘ಇಲ್ಲಿ ಎಷ್ಟು ಕೆಟ್ಟದಾಗಿದೆ ನೋಡು, ಏನೂ ಚೆನ್ನಾಗಿ ನೋಡಿಕೊಳ್ಳುತ್ತಾ ಇಲ್ಲ ಸಂಬಂಧಪಟ್ಟ ಅಧಿಕಾರಿಗಳು’ ಎಂದು ಖೇದ ವ್ಯಕ್ತಪಡಿಸಿದ. ನನಗೋ ಜೋರಾಗಿ ನಗು ಬಂತು, ವಿವರಿಸಿ ಹೇಳಿದಾಗ ಅವನಿಗೂ ಇಂಗು ತಿಂದ ಮಂಗನಂತಾಗಿತ್ತು, ಪಾಪ. ನಾನು ಅಲ್ಲಿಗೇ ಬಿಡದೆ ಎಲ್ಲರಿಗೂ ಆ ಹಾಸ್ಯವನ್ನು ತುಸು ಬಣ್ಣ ಬಳಿದು ಹೇಳಿ ಪ್ರಕಾಶನನ್ನು ಛೇಡಿಸುತ್ತಿದ್ದೆ ಒಂದಷ್ಟು ಹೊತ್ತು.
ಕೊನೆಗೆ ಜೋಗಕ್ಕೆ ಟಾ ಟಾ ಹೇಳಿ ಅಲ್ಲಿಂದ ಹೊರಟೆವು, ಮತ್ತೊಮ್ಮೆ ಖಂಡಿತಾ ಬರುತ್ತೇನೆಂಬ ನಿರ್ಧಾರದೊಂದಿಗೆ. ಪುನಃ ಪುನಃ ಹೋಗಿ ನೋಡಬೇಕೆಂಬ ಜಾಗ, ಜೋಗ. ವಾಪಾಸ್ ಬರುವಾಗ ಕತ್ತಲೆಯಾಗಿದ್ದರೂ ನಮ್ಮ ಜೀವ-ಸುರಕ್ಷತೆಗಳನ್ನು ಚಾಲಕನ ಕೈಲಿ ಕೊಟ್ಟು ನಾವು ಪರಸ್ಪರ ಹರಟುತ್ತಾ ಆರಾಮವಾಗಿದ್ದೆವು, ಇದು ಒಂಥರಾ ಜೂಜು, ಆದರೆ ಆ ಚಾಲಕರು ನಮಗಿಂತ ಅನುಭವಸ್ಥರಿರುತ್ತಾರೆ ಎಂಬ (ಕುರುಡು) ನಂಬಿಕೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ. ಏನೂ ತೊಂದರೆಯಾಗಲಿಲ್ಲ, ನಮ್ಮ ಚಾಲಕನು ಸಾಕಷ್ಟು ಜಾಗರೂಕತೆಯಿಂದಲೇ ಚಲಾಯಿಸುತ್ತಿದ್ದುದನ್ನು ಗಮನಿಸಿದೆ, ಸಮಾಧಾನವಾಯಿತು.
ಕೊನೆಗೊಂದು ವಿಷಯದಲ್ಲಿ ನಾನು ಕೂಡ ತಮಾಷೆಯ ವಸ್ತುವಾದೆ :-) ದಾರಿಯಲ್ಲಿ ಒಂದು ಕಡೆ ಹೊಟ್ಟೆಗೆ ಏನಾದರೂ ಹಾಕಿಕೊಳ್ಳುವಾ ಎಂದು ನಿಲ್ಲಿಸಿದ್ದೆವು, ಅಲ್ಲಿ ಬಾಳೆ ಹಣ್ಣು ತಿನ್ನೋಣವೇ ಎಂಬ ಮಾತು ಬಂದಾಗ ನಾನು ಹೇಳಿಬಿಟ್ಟೆ - ಕದಳಿ, ನೇಂದ್ರ ಇವೆರಡು ಬಿಟ್ಟರೆ ಇತರ ಬಾಳೆಹಣ್ಣುಗಳು ನನಗೆ ಹಿಡಿಸುವುದಿಲ್ಲ ಎಂದು. ಯಾಕೋ ಏನೋ ಎಲ್ಲರಿಗೂ ಅದು ಬಹಳ ತಮಾಷೆ ಎನಿಸಿತು, ಕೊನೆಗೆ ಪ್ರಕಾಶನಂತೂ ದಾರಿಯುದ್ದಕ್ಕೂ ಅನೇಕ ವಿಷಯಗಳಲ್ಲಿ ಹೊಂದಾಣಿಕೆಯ ಮಾತು ಬಂದಾಗ ‘ಕೆಲವರು ಕದಳಿ, ನೇಂದ್ರ ಬಾಳೆಹಣ್ಣು ಮಾತ್ರ ತಿನ್ನುತ್ತಾರೆ, ನನಗೆ ಎಲ್ಲವೂ ಆಗುತ್ತದೆ, ಹಾಗೆ ಇಲ್ಲಿಯೂ ನಾನು ಹೊಂದಾಣಿಕೆ ಮಾಡಬಲ್ಲೆ’ ಎಂದು ನನ್ನನ್ನು ಛೇಡಿಸುತ್ತಿದ್ದ ಆ ಭೂಪ, ಸೇಡು ತೀರಿಸಿದ ಸಂಭ್ರಮದಲ್ಲಿ, ಅದಕ್ಕೆ ಉಮೇಶನ ಸಪೋರ್ಟ್ ಬೇರೆ!
ಅಶ್ವತ್ಥನ ಮನೆ, ಮತ್ತೂರು
ವಾಪಾಸ್ ಶಿವಮೊಗ್ಗಕ್ಕೆ ತಲುಪಿದ ಮೇಲೆ ಇನ್ನೋವಾ ಕಾರನ್ನು ಬಿಟ್ಟು ನಮ್ಮ ನಮ್ಮ ಕಾರ್ ಹತ್ತಿಕೊಂಡೆವು, ವೀಣಕ್ಕನ ಮನೆಗೆ ಹೋಗಿ ನಮ್ಮ ಸಾಮಾನುಗಳನ್ನು ತೆಗೆದುಕೊಂಡು ಅಶ್ವತ್ಥನ ಮನೆಯತ್ತ ತೆರಳಿದೆವು. ಅಶ್ವತ್ಥ, ಪ್ರಕಾಶ ಬೈಕ್‍ನಲ್ಲಿ ದಾರಿ ತೋರಿಸುತ್ತಾ ಮುಂದೆ ನಡೆದರು, ಸ್ಮಿತಾ, ಉಮೇಶ, ಜ್ಯೋತ್ಸ್ನಾರೊಂದಿಗೆ ನಾನು ಸ್ವಿಫ಼್ಟ್‍ನಲ್ಲಿ ಹಿಂಬಾಲಿಸಿದೆ. ಕತ್ತಲಾಗಿದ್ದರಿಂದ ಮತ್ತೂರಿನ ದಾರಿಯ ಸೊಬಗನ್ನು ಸವಿಯಲು ಸಾಧ್ಯವಾಗಲಿಲ್ಲ, ಸುಮ್ಮನೆ ವಾಹನ ಚಲಾಯಿಸುವುದರ ಬಗ್ಗೆ ಮಾತ್ರ ಗಮನ ಕೊಟ್ಟು ಅಶ್ವತ್ಥನ ಹಿಂದೆಯೇ ದೌಡಾಯಿಸಿದೆ. ಮನೆ ತಲುಪಿದಾಗ ಮನೆಯವರೆಲ್ಲರೂ ಬಹಳ ಆತ್ಮೀಯವಾಗಿ ನಮ್ಮನ್ನು ಬರಮಾಡಿಕೊಂಡರು. ‘ಅವನಿ’ಯ ಆರೋಗ್ಯದ ಬಗ್ಗೆ ವಿಚಾರಿಸಿದೆವು, ಅವಳು ಸಾಕಷ್ಟು ಸುಧಾರಿಸಿದ್ದಳು, ಮಲಗಿದ್ದಳು. ಅವನಿಗಾಗಿ (ಅರ್ಥಾತ್ ‘ಅವನಿ’ಗಾಗಿ) ಏನನ್ನೂ ತೆಗೆದುಕೊಂಡು ಹೋಗಲಾಗಲಿಲ್ಲಾ ಎಂಬ ಸಂಗತಿ ನನಗೆ ಬೇಸರ ತರಿಸಿತು, ಇದು ಎರಡನೇ ಬಾರಿ ಎದುರಾದ ತಪ್ಪುಪ್ರಜ್ಞೆ! ಮುಂದಿನ ಸಲ ನೋಡಬೇಕಷ್ಟೆ ಎಂದು ಇಲ್ಲದ ಸಮಾಧಾನ ತೆಗೆದುಕೊಂಡು ಸುಮ್ಮನಾದೆ.
ಸ್ವಲ್ಪ ಹೊತ್ತಿನಲ್ಲಿ ನಾವೆಲ್ಲರೂ ಊಟಕ್ಕೆ ಕುಳಿತೆವು, ಅದೆಷ್ಟು ಬಗೆಯ ತಿನಿಸು-ಖಾದ್ಯಗಳನ್ನು ಮಾಡಿದ್ದರು ಎಂದರೆ ಯಾವುದನ್ನು ತಿನ್ನಲಿ ಯಾವುದನ್ನು ಬಿಡಲಿ ಎಂಬುದನ್ನು ನಿರ್ಧರಿಸುವುದೇ ಕಷ್ಟವಾಯಿತು. ಕಾರಣಾಂತರಗಳಿಂದ (ಇದನ್ನು ಇನ್ನೊಂದು ಬ್ಲಾಗಿನಲ್ಲಿ ವಿವರಿಸುತ್ತೇನೆ ಬಿಡಿ :-)) ಈಗಿನ ಯುವಜನರು ತಿನ್ನುವುದು ಬಹಳ ಕಡಿಮೆಯಲ್ಲವೇ? ಹೀಗಾಗಿ ಸ್ವಲ್ಪ ತಿನ್ನುವುದರಲ್ಲಿ ನಮಗೆಲ್ಲಾ ಸುಸ್ತಾಯಿತು. ಅದೂ ಇದೂ ಮಾತನಾಡುತ್ತಾ ಮತ್ತೂರು ಗ್ರಾಮದ ಬಗ್ಗೆ ಒಂದಿಷ್ಟು ತಿಳಿದುಕೊಂಡೆವು, ಹೇಗೆ ಅಲ್ಲಿ ಗ್ರಾಮಸ್ಥರ ಮನೆಗಳು ಒಂದು ಕಡೆ ಹಾಗೂ ಹೊಲ-ತೋಟಗಳು ಇನ್ನೊಂದು ಕಡೆ ಇವೆ, ಹೇಗೆ ಅಲ್ಲಿಯೂ ಕೃಷಿ ಕಾರ್ಯದಲ್ಲಿ ನಿರಾಸಕ್ತರಾದ ಯುವಜನ ಅದರಿಂದ ವಿಮುಖರಾಗಿ ಪಟ್ಟಣದತ್ತ ಸಾಗುತ್ತಿದ್ದಾರೆ ಇತ್ಯಾದಿ. ಮನೆಯಲ್ಲಿದ್ದ ಪುಸ್ತಕಸಂಪತ್ತನ್ನು ನೋಡಿ, ಅದನ್ನು ಚೊಕ್ಕವಾಗಿ ಇರಿಸಿಕೊಂಡ ರೀತಿ ನೋಡಿ ಸಂತಸವಾಯಿತು.
ಬೆಳಿಗ್ಗೆ ಎದ್ದು ನಾವೆಲ್ಲರೂ ಸ್ನಾನ ಇತ್ಯಾದಿ ಮಾಡಿ ಮುಗಿಸಿ ಹೊರಟೆವು, ಪಿ.ಡಿ.ಯ ಮದುವೆಗೆ. ತಿಂಡಿ ಅಲ್ಲಿಯೇ ತಿನ್ನುವುದೆಂದು ನಿರ್ಧಾರವಾಗಿತ್ತು. ಮತ್ತೂರಿನ ಬಗ್ಗೆ ಮನದಲ್ಲಿ ಸಾಕಷ್ಟು ಕುತೂಹಲವಿತ್ತು, ಹಾಸ್ಟೆಲ್ ದಿನಗಳಿಂದಲೂ. ಅಶ್ವತ್ಥ ಯಾವಾಗಲೂ ತಮ್ಮೂರನ್ನು ‘ಸ್ವರ್ಗ’ ಎಂದು ಬಣ್ಣಿಸುತ್ತಲಿದ್ದ, ಹಾಗೂ ಸಂಸ್ಕೃತ ಗ್ರಾಮ ಎಂದು ಕೂಡ ಪ್ರಸಿದ್ಧಿಗೆ ಬಂದಿತ್ತಲ್ಲಾ. ಆದರೆ ಈ ಬಾರಿಯ ನಮ್ಮ ಮತ್ತೂರು ದರ್ಶನವನ್ನು ಅಲ್ಲಿಗೇ ಮೊಟಕುಗೊಳಿಸಿ ಹೊರಡಬೇಕಾದ ಅನಿವಾರ್ಯತೆ ಇತ್ತು, ಮತ್ತೊಮ್ಮೆ ಬರುವ ವಾಗ್ದಾನ ಮಾಡಿ ಹೊರಟೆವು.
ಮದುವೆ ಮನೆ
ಆ ದಿನ "ಭಾರತ್ ಬಂದ್" ಎಂದು ಘೋಷಿಸಲಾಗಿತ್ತು, ರಾಜಕೀಯ ಪಕ್ಷಗಳಿಂದ, ಇತ್ತೀಚೆಗಿನ ತೈಲ ಬೆಲೆಯೇರಿಕೆಯನ್ನು ಪ್ರತಿಭಟಿಸಿ. ಹೀಗಾಗಿ ನಮಗೆ ದಾರಿಯಲ್ಲಿ ಏನಾದರೂ ಅಹಿತಕರ ಸಂಭವಗಳು ನಡೆದರೆ ಎಂಬ ಆತಂಕ ತುಸು ಇತ್ತು. ಮದುವೆ ಮನೆಯನ್ನು ತುಸು ಬೇಗನೇ ತಲುಪುವ ಯೋಜನೆ ಕೂಡ ಇಟ್ಟುಕೊಂಡಿದ್ದೆವು, ಆಮೇಲೆ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿದರೆ ಎಂಬ ಮುಂದಾಲೋಚನೆಯಿಂದ. ಹಾಗೆ ನೋಡಿದರೆ ನಾವು ಮಂಗಳೂರಿನಿಂದ ಹೊರಡುವ ಮೊದಲೇ, ಕೆಲವು ದಿನಗಳ ಹಿಂದೆಯೇ ಇದರ ಬಗ್ಗೆ ತಿಳಿದಿತ್ತು, ಹೊರಟ ಉದ್ದೇಶ ಈಡೇರದಿದ್ದರೆ ಏನು ಪ್ರಯೋಜನ, ಅಂತಹ ಸನ್ನಿವೇಶದಲ್ಲಿ ಹೊರಡುವುದು ಉಚಿತವೇ ಎಂಬ ಆಲೋಚನೆಯೂ ಮನಸ್ಸಲ್ಲಿತ್ತು, ಕೊನೆಗೆ ಗಟ್ಟಿಮನಸ್ಸು ಮಾಡಿ ಹೊರಟಿದ್ದೆವು. ಇರಲಿ, ಬಂದ್‍ನ ಪ್ರಭಾವ ಅಷ್ಟಾಗಿ ಕಾಣಲಿಲ್ಲ, ಸಾಕಷ್ಟು ವಾಹನಗಳು ನಿರಾತಂಕವಾಗಿ ಓಡಾಡುತ್ತಿದ್ದುವು, ಕ್ಷೇಮವಾಗಿ ಮದುವೆ ಮನೆಯನ್ನು ತಲುಪಿದೆವು.
‘ಗಾಯತ್ರಿ ಮಾಂಗಲ್ಯ ಮಂದಿರ’ದಲ್ಲಿ ವ್ಯವಸ್ಥೆಗಳೆಲ್ಲವೂ ಚೆನ್ನಾಗಿ ಇರುವಂತೆ ಕಾಣುತ್ತಿತ್ತು, ಒಳಾಂಗಣ ವಿಶಾಲವಾಗಿತ್ತು, ಹಾಗೂ ಮೇಲಿನ ಅಂತಸ್ತಿನಲ್ಲಿ ಅನೇಕ ಕೊಠಡಿಗಳಿದ್ದು ಅನೇಕರಿಗೆ ಉಳಿದುಕೊಳ್ಳುವ ಅನುಕೂಲಗಳಿರುವಂತೆ ಕಾಣುತ್ತಿತ್ತು. ಹೊರಗೆ ವಾಹನ ನಿಲುಗಡೆ ಪ್ರದೇಶವು ತುಂಬಾ ವಿಶಾಲವಾಗಿರಲಿಲ್ಲ, ಆದರೂ ತಕ್ಕಮಟ್ಟಿಗೆ ಇತ್ತು. ಇದು ನಮ್ಮಲ್ಲಿರುವ ಇನ್ನೊಂದು ಸಮಸ್ಯೆ - ಈ ಥರದ ಸಮಾರಂಭಗಳನ್ನು ನಡೆಸುವ ಛತ್ರಗಳನ್ನು ಕಟ್ಟುವಾಗ ಅದರ ಗಾತ್ರಕ್ಕೆ ತಕ್ಕಂತೆ ಪಾರ್ಕಿಂಗ್ ವ್ಯವಸ್ಥೆ ಇದೆಯಾ ಎಂದು ಪರಿಶೀಲಿಸದೆ ಕಟ್ಟಡ ಕಟ್ಟಲು ಪರವಾನಿಗೆ ಕೊಟ್ಟುಬಿಡುತ್ತಾರೆ, ಲಂಚ ತೆಗೆದುಕೊಂಡೋ ಅಥವಾ ನಿಯಮಗಳೇ ಸಡಿಲವಾಗಿವೆಯೋ ಗೊತ್ತಿಲ್ಲ, ಒಟ್ಟಿನಲ್ಲಿ ಮುಂದೆ ಆ ಪರಿಸರದಲ್ಲಿ ಬೀದಿ ಬದಿಯ ಪಾರ್ಕಿಂಗ್‍ನಿಂದಾಗಿ ಎಲ್ಲರಿಗೂ ತೊಂದರೆ. ಮದುವೆ ಮನೆ ಮಾತ್ರವಲ್ಲ, ಅಂಗಡಿ, ಆಸ್ಪತ್ರೆ ಇತ್ಯಾದಿ ಎಲ್ಲಾ ಕಡೆ ನಾವು ಈ ಪಿಡುಗನ್ನು ಕಾಣುತ್ತೇವೆ.
ಮುಹೂರ್ತ ಬೆಳಗ್ಗಿನದಾಗಿತ್ತು, ಅದಾಗಲೇ ಶೃತಿ ಮತ್ತವಳ ಪರಿವಾರದವರು ಬಂದು ನೆರೆದಿರುತ್ತಾರೆ, ವಿಧಿ-ವಿಧಾನಗಳ ಅಬ್ಬರ ಮೊದಲ್ಗೊಂಡಿರುತ್ತದೆ, ಪಿ.ಡಿ.ಯನ್ನು ಸಮಯ ಸಿಕ್ಕಾಗಲೆಲ್ಲಾ ಛೇಡಿಸಬಹುದೆಂದು ಅಂದುಕೊಂಡಿದ್ದ ನಮಗೆ ಒಂದು ಅಪ್ರಿಯ ಸತ್ಯ ಎದುರಾಯ್ತು. ಹೆಣ್ಣಿನ ಕಡೆಯವರು ಬರುತ್ತಿದ್ದ ಬಸ್ಸಿನ ಅಪಘಾತವಾಗಿತ್ತು, ಹಾಗೂ ಅನೇಕರು ಜಖಂಗೊಂಡಿದ್ದರು. ಅದೃಷ್ಟವಶಾತ್ ಯಾರಿಗೂ ಜೀವಹಾನಿಯಾಗಿರಲಿಲ್ಲ, ಶೃತಿ ಏನೂ ಗಾಯಗಳಿಲ್ಲದೆ ಪಾರಾಗಿದ್ದಳು, ಆದರೆ ಅವಳ ಅಮ್ಮನೂ ಸೇರಿದಂತೆ ಕೆಲವರಿಗೆ ಮೂಳೆ ಮುರಿತದಿಂದ ಹಿಡಿದು ಸಣ್ಣಪುಟ್ಟ ಗಾಯಗಳವರೆಗೆ ವಿವಿಧ ರೀತಿಯಲ್ಲಿ ಸಂಕಟಕ್ಕೀಡಾಗಿದ್ದರು. ಶೃತಿ ಹೈದರಾಬಾದ್ ಮೂಲದ ಹುಡುಗಿ. ಅವಳ ಪರಿವಾರದವರೆಲ್ಲರೂ ಭಾಷೆ ತಿಳಿಯದ ಈ ದೂರದೂರಿಗೆ ಬಂದು ಈ ಕಷ್ಟದಲ್ಲಿ ಸಿಕ್ಕಿಹಾಕಿಕೊಂಡದ್ದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿತ್ತು. ಇದನ್ನೆಲ್ಲಾ ಕೇಳಿ ನಮಗೆಲ್ಲಾ ದುಃಖ, ಆತಂಕವಾಯಿತು, ಆದರೆ ಎಲ್ಲರ ಸಹಕಾರದೊಂದಿಗೆ ಮದುವೆ ಕಾರ್ಯಕ್ರಮವು ಮೊಟಕುಗೊಳ್ಳದೆ ಮುಂದುವರೆಯುತ್ತದೆ ಎಂಬುದು ಸಮಾಧಾನ ತಂದ ವಿಷಯವಾಗಿತ್ತು. ಇದು ಅಶುಭ, ಅಪಶಕುನ, ಯಾರದ್ದೋ ಕೆಟ್ಟ ಕಾಲ್ಗುಣ ಕೈಗುಣಗಳನ್ನು ತೋರಿಸುತ್ತದೆ ಎಂಬಿತ್ಯಾದಿ ಅಸಂಬದ್ಧ ಮಾತುಗಳನ್ನಾಡಿ ಗಾಯದ ಮೇಲೆ ಬರೆ ಎಳೆಯುವವರಿಲ್ಲದ್ದು ನೋಡಿ ನಾವು ಇಷ್ಟಾದರೂ ಪ್ರಗತಿ ಸಾಧಿಸಿದ್ದೇವಲ್ಲಾ ಎಂದನಿಸಿತು.
ಆ ಪರಿಸ್ಥಿತಿಯಲ್ಲಿ ಸ್ವಲ್ಪ ಸಮಾಧಾನ ಹೇಳುವುದು, ಹಾಗೂ ಕ್ಷೇಮ ಹಾರೈಸುವುದನ್ನು ಬಿಟ್ಟರೆ ಇನ್ನೇನೂ ಮಾಡುವುದಕ್ಕೆ ತೋಚಲಿಲ್ಲ, ತಿಂಡಿ ತಿಂದು ಮದುವೆ ಮಂಟಪದ ಬಳಿ ಬಂದು ಕುಳಿತುಬಿಟ್ಟೆವು. ತುಸು ಸಮಯದ ನಂತರ ವಧೂ ಪರಿವಾರದ ಆಗಮನವಾಯಿತು. ನಾನು ಶೃತಿಯನ್ನು ಮೊದಲೇ ಒಮ್ಮೆ ಚಿಕಾಗೋದಲ್ಲಿ ಭೇಟಿ ಆಗಿದ್ದರಿಂದ ಹೊಸ ಪರಿಚಯವೇನೂ ಆಗಿರಲಿಲ್ಲ, ಉಳಿದವರೆಲ್ಲರೂ ಅವಳನ್ನು ಭೇಟಿಯಾಗಲು ಬಹಳ ಉತ್ಸುಕರಾಗಿದ್ದರು. ಪರಿಚಯ ವಿನಿಮಯದ ಬಳಿಕ ನಾವು ಸ್ವಸ್ಥಾನಕ್ಕೆ ಮರಳಿದೆವು, ಮಂಟಪದ ಮುಂದಿದ್ದ ಆಸೀನಗಳಲ್ಲಿ ಕುಳಿತು ಹರಟೆಯನ್ನು ಮುಂದುವರಿಸಿದೆವು.
ಸದ್ಯಕ್ಕೆ ನಮ್ಮ ಗುಂಪಿನಲ್ಲಿ ಮದುವೆ ಆಗಲು ಬಾಕಿ ಇರುವವನು ಪ್ರಕಾಶ ಮಾತ್ರ, ಅಲ್ಲಿ ಓಡಾಡುತ್ತಲಿದ್ದ ಒಬ್ಬಿಬ್ಬರು ಹುಡುಗಿಯರನ್ನು ಅವನಿಗೆ ತೋರಿಸಿ ಛೇಡಿಸುವ ಕೆಲಸವನ್ನೂ ಮಾಡುತ್ತಿದ್ದೆವು. ಒಂದು ಹಂತದಲ್ಲಿ ನನ್ನನ್ನೇ ಛೇಡಿಸಲು ಶುರುಮಾಡಿದರು ಕೆಲವರು - ಅವನ ನೆಪದಲ್ಲಿ ನೀನೇ ಹುಡುಗಿಯರನ್ನು ನೋಡುತ್ತಿದ್ದೀಯೋ ಏನೋ ಎಂದು. ಆಯ್ಯೋ! ಇದೇನು ಉಲ್ಟಾ ಹೊಡಿಯಿತಲ್ಲಾ ಎಂದು ಆಮೇಲೆ ನಾನು ಸುಮ್ಮನಾದೆ :-) ಅತ್ತ ಕಡೆ ಮದುವೆಯ ವಿಧಿವಿಧಾನಗಳು ಸಾಂಗೋಪಸಾಂಗವಾಗಿ ನಡೆಯುತ್ತಿತ್ತು, ನಮಗೆ ಆದರ ಕಡೆ ಗಮನ ತುಸು ಕಡಿಮೆಯೇ ಇತ್ತು ಎನ್ನಲಡ್ಡಿಯಿಲ್ಲ, ಆಗಾಗ ಪಿ.ಡಿ. ಏನು ಮಾಡುತ್ತಿದ್ದಾನಪ್ಪಾ ಎಂದು ಹಲ್ಕಿರಿದು ನೋಡುತ್ತಿದ್ದೆವು, ಅಷ್ಟೆ, ಹ್ಹೆಹ್ಹೆ. ತುಸು ಹೊತ್ತಿಗೆ ನಮ್ಮ ಇನ್ನೊಬ್ಬ ಮಿತ್ರ, ಶ್ರವಣ ಪತ್ನೀಸಮೇತನಾಗಿ ಬಂದ, ಅವನನ್ನೂ ನೋಡದೆ ಎಷ್ಟೋ ಸಮಯವಾಗಿತ್ತು, ನಮ್ಮ ಹರಟೆಗೆ ಹೊಸ ಜೀವ ಬಂತು, ಮಾತು ಮುಂದುವರಿಯಿತು. ಹೊರಗೆ ರಭಸದ ಗಾಳಿಯೊಂದಿಗೆ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು.
ಕೊನೆಗೆ ಊಟದ ಸಮಯ ಬಂತು, ಎಲ್ಲಾ ಚೆನ್ನಾಗಿ ನಡೆಯಿತಲ್ಲಾ ಎಂಬ ಸಂತೃಪ್ತಿಯೊಂದಿಗೆ ಊಟಕ್ಕೆ ಕುಳಿತೆವು. ಊಟ ಚೆನ್ನಾಗಿತ್ತು, ಊಟದ ಬಳಿಕ ಪಿ.ಡಿ.ಗೆ ಕೂಡ ಸ್ವಲ್ಪ ಹೊತ್ತು ನಮ್ಮ ಜೊತೆ ಮಾತನಾಡಲು ಅವಕಾಶ ಸಿಕ್ಕಿತು. ನಿಧಾನಕ್ಕೆ ನಾವೆಲ್ಲರೂ ಹೊರಡುವ ತಯಾರಿ ನಡೆಸಿದೆವು. ಪಿ.ಡಿ.ಯ ತಂದೆಯವರು ಭಾವುಕರಾಗಿ ನಮ್ಮೆಲ್ಲರನ್ನೂ ಬೀಳ್ಕೊಡುತ್ತಾ ಒಂದು ಮಾತು ಹೇಳಿದರು - "ನೀವು ಇವತ್ತು ಒಂದು ಚಮತ್ಕಾರವನ್ನು ನೋಡಿದ್ದೀರಿ, ಅದಕ್ಕೆ ಸಾಕ್ಷಿಯಾಗಿದ್ದೀರಿ" ಎಂದು. ಅಪಘಾತದ ಘಟನೆ ಅವರಿಗೂ ಸಾಕಷ್ಟು ಆಘಾತವನ್ನುಂಟುಮಾಡಿತ್ತು, ಕೊನೆಗೆ ಎಲ್ಲವೂ ಒಂದು ಹಂತಕ್ಕೆ ಬಂದು ತಲುಪಿದ್ದು ಅವರಿಗೆ ವಿವರಿಸಲಾಗದ ಸಮಾಧಾನವನ್ನು ತಂದಿತ್ತು ಎಂಬುದು ಅವರ ಮುಖದಲ್ಲಿ ಸ್ಪಷ್ಟವಾಗಿ ವ್ಯಕ್ತವಾಗುತ್ತಿತ್ತು. ಪರಸ್ಪರ ಟಾ ಟಾ ಹೇಳಿ ಒಬ್ಬೊಬ್ಬರೂ ಒಂದೊಂದು ದಿಕ್ಕಿನತ್ತ ತೆರಳಿದೆವು, ಪ್ರಕಾಶ ನಮ್ಮೊಂದಿಗೆ ಊರಿನತ್ತ ಬರುವುದು ಎಂದು ಮೊದಲೇ ನಿರ್ಧರಿಸಿಕೊಂಡಿದ್ದೆವು.
ಆಗುಂಬೆಯತ್ತ ಪಯಣ
ನಾನು ಆದಷ್ಟೂ ರಾತ್ರಿಹೊತ್ತಿನಲ್ಲಿ ವಾಹನ ಚಲಾಯಿಸುವುದನ್ನು ತಪ್ಪಿಸುತ್ತೇನೆ, ರಸ್ತೆಗಳ ದುರವಸ್ಥೆ ಒಂದು ಕಾರಣ, ಇನ್ನೊಂದು ಹೈ ಬೀಮ್ ಹಾಕಿಕೊಂಡು ಚಲಾಯಿಸುವವರ ಹಾವಳಿ ದೃಷ್ಟಿಯನ್ನು ಇನ್ನಷ್ಟೂ ಮಂದಗೊಳಿಸಿ ಅಪಘಾತದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಮದುವೆ, ಊಟ ಮುಗಿದ ಮೇಲೆ ಶಿವಮೊಗ್ಗದಿಂದ ಹೊರಟು ಅದೇ ದಿನ ಊರಿಗೆ ವಾಪಸ್ ಬರುವುದು ಅಷ್ಟು ಒಳ್ಳೆಯ ಯೋಜನೆ ಎಂದನಿಸಿರಲಿಲ್ಲ, ಹೀಗಾಗಿ ಅರ್ಧದಾರಿ ಕ್ರಮಿಸಿ ಎಲ್ಲಿಯಾದರೂ ಉಳಿದುಕೊಂಡು ಆಮೇಲೆ ಮರುದಿನ ಊರಿನತ್ತ ತೆರಳುವುದು ಎಂದು ಆಲೋಚನೆ ಮಾಡಿದ್ದೆವು. ಈ ಯೋಜನೆಯನ್ನು ಕೇಳಿದ ಅಶ್ವತ್ಥ ಆಗುಂಬೆಯಲ್ಲಿ ಒಂದು ಮನೆ ಇದೆ, ಅದರಲ್ಲಿ ವಸತಿ ಸೌಕರ್ಯ ಒದಗಿಸುತ್ತಾರೆ, ತುಂಬಾ ಚೆನ್ನಾಗಿದೆ ಎಂದು ಅನೇಕರು ಹೇಳಿದ್ದಾರೆ ಎಂಬುದಾಗಿ ಹೇಳಿದ್ದ. ಆಗಲೇ ನಾನು ಅಂತರ್ಜಾಲದಲ್ಲಿ ಅದರ ಬಗ್ಗೆ ಹುಡುಕಿ ‘ದೊಡ್ಡ ಮನೆ’ಯ ಮಾಹಿತಿ ಸಂಗ್ರಹಿಸಿದ್ದೆ, ಅವರಿಗೆ ದೂರವಾಣಿ ಕರೆ ನೀಡಿ ಬರುತ್ತೇವೆ ಎಂದೂ ಸೂಚಿಸಿದ್ದೆ. ಈ ಯೋಜನೆಯಂತೆ ನಾವು ಅತ್ತ ಕಡೆ ವಾಹನದ ಚಕ್ರಗಳನ್ನು ಉರುಳಿಸಿದೆವು!
ದೊಡ್ಡ ಮನೆ ಹಾಗೂ ಜೆನ್ನಾ ಬಾಯಿ
ಇನ್ನೂ ಸಾಕಷ್ಟು ಬೆಳಕಿರುವಾಗಲೇ ನಾವು ‘ದೊಡ್ಡ ಮನೆ’ಯನ್ನು ತಲುಪಿದ್ದೆವು. ಹುಡುಕಲು ಕಷ್ಟವೇನೂ ಆಗಲಿಲ್ಲ, ಆಗುಂಬೆಯ ಮುಖ್ಯ ಭಾಗದಲ್ಲಿ ರಸ್ತೆಬದಿಗೇ ಇತ್ತು. ನಮ್ಮನ್ನು ಎದುರುಗೊಂಡಿದ್ದು ಒಂದು ಹಳೇ ಮನೆ, ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿದ್ದ ಮುಂಭಾಗದ ಕಿಟಕಿಗಳು ಮನೆಗೆ ಒಳ್ಳೆಯ ಕಳೆ ನೀಡುತ್ತಿರಲಿಲ್ಲ, ಹೀಗಾಗಿ ನಮಗೆ ತುಸು ಕಸಿವಿಸಿಯಾಗಿತ್ತು, ಇಲ್ಲಿ ಉಳಿದುಕೊಳ್ಳುವ ನಿರ್ಧಾರ ಮಾಡಿದ್ದು ಸರಿಯೋ ಏನೋ ಎಂದು. ಇರಲಿ, ಇಲ್ಲಿಯವರೆಗೆ ಬಂದಾಯಿತಲ್ಲಾ, ಒಂದು ರಾತ್ರಿ ಕಳೆಯಲು ತಾನೇ, ಒಳಗೆ ಹೋಗಿ ನೋಡುವಾ ಎಂದುಕೊಂಡು ಮನೆಯನ್ನು ಪ್ರವೇಶಿಸಿದೆವು. ಒಳ ಹೋದಂತೆ ವಿಶಾಲವಾದ ಮನೆಯ ಭವ್ಯ ದರ್ಶನವಾಯಿತು. ಮನೆ ಸಾಕಷ್ಟು ಹಳೆಯದಾಗಿತ್ತು, ಹೀಗಾಗಿ ಫಳಫಳ ಎಂದು ಹೊಳೆಯುತ್ತಿರಲಿಲ್ಲ, ಆದರೆ ಸಾಕಷ್ಟೂ ಜತನದಿಂದ ಕಾಯ್ದುಕೊಂಡು ಬಂದಂತೆ ಕಾಣುತ್ತಿತ್ತು. ಮನೆಯ ಯಜಮಾನಿ ‘ಕಸ್ತೂರಕ್ಕ’, ಶಿವಮೊಗ್ಗದಿಂದ ಕರೆ ಮಾಡಿದಾಗ ನನ್ನ ಸಂಭಾಷಣೆ ಅವರ ಜೊತೆಗೇ ನಡೆದಿತ್ತು. ಅವರು ಒಳಗೆ ಊಟದ ಕೋಣೆಯಲ್ಲಿದ್ದರು, ರಾತ್ರಿಯ ಅಡುಗೆಯ ತಯಾರಿ ಮಾಡುತ್ತಿದ್ದರು (ಬರುತ್ತೇವೆ ಎಂದು ಹೇಳಿ ಬರಲಾಗದಿದ್ದರೆ ಮುಂಚಿತವಾಗಿ ತಿಳಿಸಬೇಕೆಂದು ನಮಗೆ ತಾಕೀತು ಮಾಡಿದ್ದರು ಆ ತಾಯಿ, ಮಾಡಿದ ಅಡುಗೆ ವ್ಯರ್ಥವಾಗಿ ಹೋಗಬಾರದಲ್ಲಾ ಎಂಬ ಕಾರಣದಿಂದ).
ಅಲ್ಲಿಯ ಒಂದು ವಿಶೇಷತೆ ಏನೆಂದರೆ ವಸತಿ ಸೌಕರ್ಯಕ್ಕಾಗಲೀ, ಊಟ-ತಿಂಡಿಗಾಗಲೀ ಯಾವುದೇ ಶುಲ್ಕವನ್ನು ನಿಗದಿಪಡಿಸಲಿಲ್ಲ, ಇಷ್ಟ ಪಟ್ಟಂತೆ ಕೊಟ್ಟರೆ ಆಯಿತು, ಇದು ಮೊದಲಿಗೆ ವಿಶೇಷತೆ ಅನಿಸಿದರೂ ಕೂಡ ಆಮೇಲೆ ನಮ್ಮನ್ನು ತುಸು ಇಕ್ಕಟ್ಟಿಗೆ ಸಿಕ್ಕಿಸಿಹಾಕುವುದಂತೂ ನಿಜ. ಆ ಮನೆಯಲ್ಲಿ ಅನೇಕ ಕೊಠಡಿಗಳಿದ್ದುವು, ಕೆಲವು ದೊಡ್ಡವು, ಕೆಲವು ಸಣ್ಣವು. ಯಾವುದೂ ನಮಗೆ ಅಷ್ಟಾಗಿ ಮನಸ್ಸಿಗೊಪ್ಪಲಿಲ್ಲ. ಹಲವು ವರ್ಷಗಳ ಹಿಂದೆ ಕಾಲೇಜು ದಿನಗಳಲ್ಲಿ ಪ್ರವಾಸ/ಚಾರಣಕ್ಕೆ ಬರುವುದಾಗಿದ್ದರೆ ಅದು ಸ್ವರ್ಗ ಎಂದನಿಸುತ್ತಿತ್ತೋ ಏನೋ, ಆದರೆ ಈಗ ಕೆಲವು ವಿಷಯಗಳು ಮನಸ್ಸಿಗೆ ಅಷ್ಟು ಸರಿಬರುವುದಿಲ್ಲ ಎಂಬ ಸತ್ಯ ಮತ್ತೊಮ್ಮೆ ಗೋಚರವಾಯ್ತು. ಏನು ಮಾಡುವುದಪ್ಪಾ ಎಂದು ಹಿಂದೆ ಮುಂದೆ ನೋಡುತ್ತಿದ್ದಾಗ ಮನೆಯವರೇ ಸೂಚಿಸಿದರು - ಎದುರಿಗೆ ಇನ್ನೊಂದು ಮನೆಯಿದೆ, ಅವರ ಸಂಬಂಧಿಕರದ್ದು, ಅಲ್ಲಿಯೂ ವಸತಿ ಸೌಕರ್ಯ ನೀಡುತ್ತಾರೆ, ಅಲ್ಲಿ ನೋಡಿಕೊಂಡು ಇಷ್ಟವಾದರೆ ಅಲ್ಲಿಯೇ ಉಳಿದುಕೊಂಡು ಊಟಕ್ಕೆ ಇಲ್ಲಿಗೆ ಬರಬಹುದು ಎಂದು. ನಮಗೆ ಹೊಸ ಉತ್ಸಾಹ ಬಂದು ಅದನ್ನು ನೋಡಿ ಬರುತ್ತೇವೆ ಎಂದು ಅಲ್ಲಿಂದ ಕಾಲ್ಕಿತ್ತೆವು.
ಹೀಗೆ ನಾವು ಜೆನ್ನಾ ಬಾಯಿ ಎಂಬವರ ಮನೆಗೆ ಹೋದೆವು. ಆ ಮನೆಯನ್ನು ಹೊರಗಿನಿಂದ ನೋಡುವಾಗಲೇ ನಮಗೆ ಹೆಚ್ಚಿನ ಭರವಸೆ ಇತ್ತು, ಒಳಗೆ ಹೋದಾಗ ನಮಗೆ ತಕ್ಷಣ ಇಷ್ಟವಾಯಿತು, ಅಲ್ಲಿಯೇ ಉಳಿದುಕೊಳ್ಳುವುದು ಎಂಬ ನಿರ್ಧಾರ ಮಾಡಿದೆವು. ‘ದೊಡ್ಡ ಮನೆ’ಯಲ್ಲಿದ್ದಂತೆ ಅಲ್ಲಿ ಅನೇಕ ಕೊಠಡಿಗಳಿರಲಿಲ್ಲ, ಮೊದಲನೇ ಮಹಡಿಯನ್ನು ನಮ್ಮಂತಹ ಯಾತ್ರಿಗಳಿಗೆ ಉಳಿದುಕೊಳ್ಳಲೆಂದು ಮೀಸಲಾಗಿಟ್ಟಿದ್ದರು. ‘ದೊಡ್ಡ ಮನೆ’ಯಂತೆ ಇಲ್ಲಿ ಎಷ್ಟು ದುಡ್ಡು ಕೊಡುವುದು ಎಂಬುದರ ಬಗ್ಗೆ ಸಂದಿಗ್ಧತೆ ಇರಲಿಲ್ಲ, ಅವರು ಹೇಳಿದ ಮೊತ್ತ ಹೆಚ್ಚು ಅಂತವೂ ಕಾಣಲಿಲ್ಲ. ಒಟ್ಟಿನಲ್ಲಿ, ಉಳಿದುಕೊಳ್ಳುವ ವ್ಯವಸ್ಥೆಯಾಯಿತಲ್ಲಾ ಎಂದು ಖುಷಿಪಟ್ಟೆವು, ‘ದೊಡ್ಡ ಮನೆ’ಯವರಿಗೂ ತಿಳಿಸಿದೆವು.
ನಮ್ಮ ಚೀಲಗಳನ್ನು ಕಾರಿನಿಂದ ತೆಗೆದು ರೂಮಿನಲ್ಲಿಟ್ಟುಕೊಂಡೆವು, ಇನ್ನೂ ಹೊರಗೆ ಸ್ವಲ್ಪ ಬೆಳಕಿದ್ದುದರಿಂದ ಸುತ್ತಮುತ್ತ ಸ್ವಲ್ಪ ನಡೆದಾಡಿ ಬರುವುದೆಂದು ಯೋಚಿಸಿದೆವು, ಅಷ್ಟರಲ್ಲಿ ಜೆನ್ನಾ ಬಾಯಿಯವರು ಬಂದರು, ಎಲ್ಲಾ ಸರಿಯಾಗಿದೆಯಾ ಎಂದು ವಿಚಾರಿಸಿಕೊಳ್ಳುವುದಕ್ಕೆ. ಹೀಗೇ ಮಾತು ಮುಂದುವರೆದು ಅವರು ತಮ್ಮ ಜೀವನದ ಬಗ್ಗೆ ಹೇಳಲು ಶುರುಮಾಡಿದರು, ಹೇಗೆ ಅವರು ಸಣ್ಣ ಪ್ರಾಯದಲ್ಲಿ ವಿವೇಕಾನಂದ ಮುಂತಾದ ಮಹನೀಯರಿಂದ ಪ್ರಭಾವಿತರಾಗಿ ತಮ್ಮ ಜೀವನವನ್ನು ಇತರರ ಸೇವೆಗಾಗಿ ಮುಡಿಪಾಗಿಡಲು ಪ್ರೇರೇಪಿತಗೊಂಡದ್ದು, ಆಸ್ಪತ್ರೆಯ ದಾದಿಯಾಗಿ ಸೇವೆ ಸಲ್ಲಿಸುವ ಅವಕಾಶ ಆ ನಿಟ್ಟಿನಲ್ಲಿ ಅತ್ಯಂತ ಒಳ್ಳೆಯದೆಂದು ಮನಗಂಡು ಆ ನಿಟ್ಟಿನಲ್ಲಿ ಮುಂದುವರೆದದ್ದು, ಮದುವೆಯಾಗದೇ ಇದ್ದುಕೊಂಡು ತಾಳ್ಮೆ, ಪ್ರೀತಿಯಿಂದ ಇತರರ ಜೀವನದಲ್ಲಿ ಬೆಳಕು ತುಂಬಿದ್ದು, ಒಂದು ಅವಧಿಯಲ್ಲಿ ಅನಾಥ ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿ ಅವರಿಗೆ ಒಳ್ಳೆಯ ಮನೆಗಳು ದೊರಕುವಂತೆ ಮಾಡಿದ್ದು, ಹುಟ್ಟಿ ಬೆಳೆದ ಆಗುಂಬೆಗೆ ವಾಪಾಸ್ ಬಂದು ಅಲ್ಲಿ ಅತ್ಯುತ್ತಮ ಶಾಲೆ ಸ್ಥಾಪಿಸುವಲ್ಲಿ ಸಾರ್ಥಕ ಪಾತ್ರ ವಹಿಸಿದ್ದು - ಹೀಗೆ ಅವರು ಹೇಳುತ್ತಾ ಹೋದಂತೆ ನಾವು ಮಂತ್ರಮುಗ್ಧರಂತೆ ಕೇಳುತ್ತಾ ಹೋದೆವು, ಶುರುವಿಗೆ ನನಗೆ ಚಡಪಡಿಕೆಯಾಗುತ್ತಿತ್ತು, ಛೇ ನಾವಂದುಕೊಂಡಂತೆ ಹೊರಗೆ ನಡೆದಾಡಿ ಬರಬಹುದಲ್ಲಾ, ಇವರೊಡನೆ ಕತ್ತಲಾದ ಮೇಲೆ ಮಾತನಾಡಬಹುದಲ್ಲಾ ಎಂದು, ಆದರೆ ಅವರು ಅತ್ಯುತ್ಸಾಹದಿಂದ ತಮ್ಮ ಜೀವನಾನುಭವವನ್ನು ಹಂಚಿಕೊಳ್ಳುವಾಗ ನನಗೆ ಅಡ್ಡಕಾಲು ಹಾಕಲು ಮನಸ್ಸೇ ಬರಲಿಲ್ಲ. ಮಾತ್ರವಲ್ಲ, ಅಂತಹ ಅಪರೂಪದ ವ್ಯಕ್ತಿಗಳಿಂದ ಅವರ ನೇರನುಡಿಗಳನ್ನು ಕೇಳುವ ಅವಕಾಶ ಸಿಗುವುದು ಕೂಡ ಒಂದು ಭಾಗ್ಯ, ಅವರ ವಿಶಾಲವಾದ ಹೃದಯವನ್ನು ನೋಡಿ ಬೆರಗಾಗಿ, ಮನದಲ್ಲೇ ವಂದಿಸಿ ನಾವು ಕೇಳುತ್ತಾ ಕುಳಿತೆವು, ಸಮಯ ಹೋದದ್ದೇ ಗೊತ್ತಾಗಲಿಲ್ಲ. ತಮ್ಮ ಸುದೀರ್ಘವಾದ ಜೀವಿತಾವಧಿಯಲ್ಲಿ ಎದುರಾದ ಸಣ್ಣ ಮನಸ್ಸಿನ ಮನುಷ್ಯರ ಬಗ್ಗೆ ಕೂಡ ಅವರು ಹೇಳಿದರು, ಸಂಕ್ಷಿಪ್ತವಾಗಿ, ನಾವು ನಮಗೆ ತೋಚಿದಂತೆ ಸಹಮತ ವ್ಯಕ್ತಪಡಿಸಿದೆವು. ೭೫ರ ಅವರು ಹೇಳಿದ ಒಂದು ಮಾತು ಮನಸ್ಸಲ್ಲಿ ಅಚ್ಚಳಿಯದೆ ಕೂತುಬಿಟ್ಟಿದೆ - "ಮನುಷ್ಯನಿಗೆ ನೂರು ವರ್ಷ ಆಯುಸ್ಸು ಎಂದು ಹೇಳುತ್ತಾರೆ, ಇನ್ನೂ ೨೫ ವರ್ಷಗಳಲ್ಲಿ ಇತರರಿಗೆ ಎಷ್ಟು ಸಹಾಯ ಮಾಡಲು ಸಾಧ್ಯವೋ ಎಷ್ಟು ಸೇವೆ ಸಲ್ಲಿಸಲು ಸಾಧ್ಯವೋ ಅದನ್ನು ಮಾಡಬೇಕೆಂಬ ಆಸೆ" ಎಂದ ಆ ಮಹಾತಾಯಿಯ ಮಾತುಗಳಿಂದ ಮೂಕವಿಸ್ಮಿತರಾದ ನಾವು ಅದನ್ನು ಮೆಲುಕುಹಾಕುತ್ತಾ ಊಟ ಮಾಡಲು ‘ದೊಡ್ಡ ಮನೆ’ಯತ್ತ ಪಾದ ಬೆಳೆಸಿದೆವು.
ನಾವು ಮೊದಲು ಮನೆಗೆ ಬಂದಾಗ ಅಲ್ಲಿ ಒಂದು ರೀತಿಯ ಕಳವಳವೂ ಕಾಣುತ್ತಿತ್ತು - ಕಾರಣ? ಚಾರಣಕ್ಕೆಂದು ಬಂದ ಕೆಲವು ಹುಡುಗರು ವಾಪಸ್ ಬಂದಿರಲಿಲ್ಲ, ಎರಡು ದಿನಗಳೇ ಕಳೆದುಹೋಗಿದ್ದುವು, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಅವರನ್ನು ಹುಡುಕಾಡಲು ಅನೇಕರು ಪ್ರಯತ್ನಗಳನ್ನು ಶುರುಮಾಡಿದ್ದರು, ನಕ್ಸಲ್ ವಿರೋಧೀ ದಳದವರೂ ಸೇರಿದಂತೆ! ನಾವು ಊಟಕ್ಕೆ ಬರುವ ಹೊತ್ತಿಗೆ ಆ ಹುಡುಗರು ಸಿಕ್ಕಿದ ಸುದ್ದಿ ತಿಳಿದು ಎಲ್ಲರ ಮನಸ್ಸೂ ತಿಳಿಯಾಗಿತ್ತು. ಆಗ ತಿಳಿದು ಬಂದ ಒಂದು ಕೌತುಕವಾದ ವಿಚಾರ ಏನೆಂದರೆ - ಆ ಪರಿಸರದಲ್ಲಿ ಕಾಡಿನಲ್ಲಿ ಒಂದು ಬಳ್ಳಿ ಇರುತ್ತದೆ, ಅದನ್ನು ದಾಟಿದರೆ ತಾತ್ಕಾಲಿಕವಾಗಿ ಬುದ್ಧಿ ಭ್ರಮಣೆ ಆಗುತ್ತದೆಯಂತೆ, ಆಮೇಲೆ ದಾರಿ ತಪ್ಪಿ ಎಲ್ಲೆಲ್ಲೋ ಸುತ್ತುತ್ತಾರಂತೆ. ನನಗೆ ನಗು ಬಂತು, ಆದರೂ ಅಂದುಕೊಂಡೆ - ಆ ಗಿಡವೋ ಅಥವಾ ಅದರ ಸುತ್ತಮುತ್ತ ಸಾಮಾನ್ಯವಾಗಿ ಇರುವ ಇನ್ನೊಂದು ಗಿಡ-ಪ್ರಾಣಿಯೋ ಯಾವುದಾದರೂ ವಿಶೇಷವಾದ ರಾಸಾಯನಿಕವನ್ನು ಹೊರಬಿಡುತ್ತದೆಯೇನೋ ಎಂದು.
ಊಟ ಸರಳವಾಗಿಯೇ ಇತ್ತು, ಆದರೆ ಸಾಕಷ್ಟು ರುಚಿಕರವಾಗಿತ್ತು. ಬಡಿಸಿದ ಎಲ್ಲವನ್ನೂ ಬೇಡವೆನ್ನದೆ ಸ್ವಲ್ಪ ಸ್ವಲ್ಪ ಹಾಕಿಸಿಕೊಂಡೆವು, ಸ್ಮಿತಾ ಸೇರಿದಂತೆ. ಆಮೇಲೆ ಕಸ್ತೂರಕ್ಕ ಆಜ್ಞೆ ಬಂತು - ಎಲೆಯಲ್ಲಿ ಏನನ್ನೂ ಬಿಡುವಂತಿಲ್ಲ, ಬೇಕಾದ್ದನ್ನು ಬೇಕದಷ್ಟೇ ಹಾಕಿಸಿಕೊಂಡು ಊಟಮಾಡಬೇಕು ಎಂದು. ಈಗ ಸ್ಮಿತಾಳ ಮುಖ ಕಳೆಗುಂದಿತು, ಕಡಿಮೆ ತಿನ್ನುವ ಅವಳು ಆಮೇಲೆ ಕಷ್ಟಪಟ್ಟು ಎಲ್ಲವನ್ನೂ ತಿಂದು ಮುಗಿಸಿದಳು, ನನಗೋ ಮನದೊಳಗೇ ನಗು. ಮನೆಯಲ್ಲಿ ಕಸ್ತೂರಕ್ಕ, ಅವರ ಮಗಳು, ಅಳಿಯ, ಮೊಮ್ಮಗಳು, ಒಬ್ಬರು ಅಜ್ಜಿ ಹಾಗೂ ಹತ್ತಿರದ ಸಂಬಂಧದ ಇನ್ನೊಬ್ಬ ಹುಡುಗಿ - ಇಷ್ಟು ಜನ ಇದ್ದರು. ಎಲ್ಲರೂ ನಮ್ಮನ್ನು ಆತ್ಮೀಯವಾಗಿಯೇ ಮಾತನಾಡಿಸಿದರು. ಮನೆಯ ೧೨೦ ವರ್ಷದ ಇತಿಹಾಸ, ವಾಸ್ತು, ಸಾಂಸ್ಕೃತಿಕ ವೈಭವ, ಈಗಿನ ದಿನಗಳು, ಅಷ್ಟು ದೊಡ್ಡ ಹಳೇ ಮನೆಯನ್ನು ಸುಸ್ಥಿತಿಯಲ್ಲಿಡಲು ನಡೆಸುವ ಪ್ರಯತ್ನಗಳು - ಹೀಗೆ ಅನೇಕ ವಿಷಯಗಳ ಬಗ್ಗೆ ಮನೆಯವರು ನಮಗೆ ವಿವರಿಸಿ ಹೇಳುತ್ತಿದ್ದಾಗ ನಮಗೆ ಊಟ ಇನ್ನೂ ರುಚಿಕರ ಎನಿಸಿತು! ಆ ರೀತಿಯ ಹಳೇ ಮನೆಯ ಅನುಭವ ನನಗೆ ಹೊಸತೇನಲ್ಲ, ಅಷ್ಟು ಪುರಾತನಗಲ್ಲದಿದ್ದರೂ ಕೂಡ ನಮ್ಮದೇ ಮನೆಯ ಹಿರಿಯ ಶಾಖೆಗಳಿಗೆ ಸೇರಿದ ಕೆಲವು ಹಳೇ ಮನೆಗಳಿವೆ, ಬಾಲ್ಯದಲ್ಲಿ ನಾನು ಅನೇಕ ಬಾರಿ ಅಲ್ಲಿಗೆಲ್ಲಾ ಹೋದದ್ದಿದೆ, ಇಲ್ಲಿ ಆ ಬಾಲ್ಯದ ಕೆಲವು ನೆನಪುಗಳು ಮರುಕಳಿಸುತ್ತಿದ್ದುವು. ಊಟವಾದ ಬಳಿಕ ೯:೩೦ಕ್ಕೆ ಇದ್ದ ಟಿ.ಎನ್.ಸೀತಾರಾಮರ ‘ಮುಕ್ತ ಮುಕ್ತ’ ಧಾರಾವಾಹಿಯನ್ನು ಅವರ ಮನೆಯಲ್ಲಿ ನೋಡಬಹುದು ಎಂದೆಣಿಸಿದ್ದೆವು, ಆದರೆ ಜೆನ್ನಾ ಬಾಯಿಯವರು ೯:೩೦ ಗೆ ಗೇಟಿಗೆ ಬೀಗ ಹಾಕುತ್ತೇನೆ ಎಂದು ಸೂಚಿಸಿದ್ದರಿಂದ ನಾವು ವಾಪಸ್ ಹೋಗುವ ನಿರ್ಧಾರ ತೆಗೆದುಕೊಂಡೆವು.
ಮರುದಿನ ಬೆಳಿಗ್ಗೆ ಎದ್ದು ಅಲ್ಲೇ ಸುತ್ತುಮುತ್ತ ಎಲ್ಲಿಯಾದರೂ ದರ್ಶನಯೋಗ್ಯ ಸ್ಥಳಗಳಿದ್ದರೆ ನೋಡಿ ಹೋಗುವುದು ಉತ್ತಮವೆಂದು ನಮ್ಮ ಅಭಿಪ್ರಾಯವಾಗಿತ್ತು. ಆಗುಂಬೆಯಲ್ಲಿ ಸೂರ್ಯೋದಯ/ಸೂರ್ಯಾಸ್ತಗಳು ಚೆನ್ನಾಗಿ ಕಾಣಿಸುವುದಾದರೂ ಕೂಡ ಮೋಡ ಮುಸುಕಿದ ಮಳೆಗಾಲದ ವಾತಾವರಣ ಅದಕ್ಕೆ ತಕ್ಕುದಾಗಿರಲಿಲ್ಲ. ನಮಗೆ ದೊರಕಿದ ಒಂದು ಸೂಚನೆ ‘ಕುಂದಾದ್ರಿ’ಗೆ ಹೋಗಬಹುದು ಎಂದು. ವಿವರಗಳನ್ನು ಕೇಳಿಕೊಂಡು ಹಾಗೆಯೇ ಮಾಡುವುದೆಂದಾಯಿತು.
ಬೆಳಗ್ಗೆದ್ದು ಪ್ರಾತಃವಿಧಿಗಳನ್ನು ಮುಗಿಸಿಕೊಂಡು ನಾವು ‘ದೊಡ್ಡ ಮನೆ’ಗೆ ತೆರಳಿದೆವು, ತಿಂಡಿ ತಿನ್ನಲು. ಪುನಃ ಸ್ವಾದಿಷ್ಟಕರವಾದ ಹಾಗೂ ವಿಶಿಷ್ಟವಾದ ತಿಂಡಿ ನಮ್ಮನ್ನು ಸ್ವಾಗತಿಸಿತು. ಅದಾದ ಮೇಲೆ ಪುನಃ ಆ ಪುರಾತನ ಮನೆಯ ಬಗ್ಗೆ ಇನ್ನೂ ಒಂದಷ್ಟು ವಿಷಯಗಳನ್ನು ವಿವರಿಸಿ, ತೋರಿಸಿ ಕೊಟ್ಟರು, ಮನೆಯವರು. ಎಲ್ಲಾ ವಿವರಗಳನ್ನೂ ಬರೆಯುವ ಪ್ರಯತ್ನಗಳನ್ನು ಮಾಡುವುದಿಲ್ಲ, ಯಾವಗಲಾದರೂ ನೀವೇ ಒಮ್ಮೆ ಹೋಗಿ ನೋಡಿ, ಖಂಡಿತವಾಗಿಯೂ ಅದು ಉತ್ತಮವಾದ ಒಂದು ಅನುಭವ. ರಸ್ತೆ ಅಗಲೀಕರಣದ ಅಂಗವಾಗಿ ಆ ಭವ್ಯ ಮನೆಯ ಮುಂಭಾಗವನ್ನು ಸದ್ಯದಲ್ಲೇ ಒಡೆದು ತೆಗೆಯಲಾಗುತ್ತದೆ ಎಂದು ತಿಳಿದುಬಂದಾಗ ಬೇಸರವಾಯಿತು. ಅಲ್ಲಿ ನಮಗೆ ದೊರಕಿದ ಆತಿಥ್ಯಕ್ಕೆ ಬೆಲೆ ಕಟ್ಟಲಾಗದಿದ್ದರೂ ಕೂಡ ಮನಕ್ಕೆ ತೋಚಿದಂತೆ ಒಂದಷ್ಟು ದುಡ್ಡು ಕೊಟ್ಟು, ಬಂದವರಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲೆಂದೇ ಇರಿಸಿದ ಪುಸ್ತಕವೊಂದರಲ್ಲಿ ಒಂದೆರಡು ಮಾತು ಬರೆದು ಅಲ್ಲಿಂದ ಹೊರಟೆವು.
ಆ ಬಳಿಕ ಜೆನ್ನಾ ಬಾಯಿ ಕೆಳಗಿನ ಅಂತಸ್ತಿನಲ್ಲಿದ್ದ ತಮ್ಮ ಮನೆಗೆ ಕರೆದು ಆಗುಂಬೆಯ ಶಾಲೆಯ ಬಗ್ಗೆ ವಿವರಗಳನ್ನು ನೀಡಿದರು, ಅದಕ್ಕಿಂತಲೂ ಮುಖ್ಯವಾಗಿ ತಮ್ಮ ಅದ್ಭುತ ಕಲಾವಂತಿಕೆಯ ಪರಿಚಯ ಮಾಡಿಸಿದರು - ಹೂ, ಎಲೆ ಇತ್ಯಾದಿ ನೈಸರ್ಗಿಕ ವಸ್ತುಗಳನ್ನುಪಯೋಗಿಸಿ ಮನಮೋಹಕ ಶುಭಾಶಯ ಪತ್ರಗಳು (ಗ್ರೀಟಿಂಗ್ ಕಾರ್ಡ್), ಪರಿಚಯ ಪತ್ರಗಳು (ವಿಸಿಟಿಂಗ್ ಕಾರ್ಡ್) ಇತ್ಯಾದಿ ಮಾಡುವಲ್ಲಿ ಅವರು ವಿಶೇಷವಾದ ಪ್ರಾವೀಣ್ಯತೆಯನ್ನು ಸಾಧಿಸಿದ್ದರು. ಆದರೆ ಅದನ್ನು ಅಲ್ಲಿಗೇ ನಿಲ್ಲಿಸಲಿಲ್ಲ, ಆಗುಂಬೆಯ ಗ್ರಾಮೀಣ ಹೆಣ್ಣುಮಕ್ಕಳಿಗೆ ಅದನ್ನೊಂದು ಆದಾಯ ತರುವ ವೃತ್ತಿಯಾಗಿ ಕಲಿಸಿಕೊಟ್ಟು ಅವರನ್ನು ಸ್ವಾವಲಂಬಿಯಾಗಿ ಮಾಡುವ ದಿಕ್ಕಿನಲ್ಲಿ ಅವರು ಮಾಡಿದ ಪ್ರಯತ್ನಗಳು ಪ್ರಶಂಸನೀಯ. ಇದನ್ನೂ ಮೀರಿದ ಸಂಗತಿಯೆಂದರೆ ಅವರ ಪ್ರಕೃತಿ ಪ್ರೇಮ - ಅಂತಹ ಕೆಲಸದಲ್ಲಿ ತೊಡಗಿದ್ದಾಗ ಹೇಗೆ ಗಿಡದಿಂದ ನಾಜೂಕಾಗಿ, ನೋವಾಗದಂತೆ ಹೂ, ಎಲೆ ಇತ್ಯಾದಿಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಕೂಡ ಆ ಹೆಣ್ಣುಮಕ್ಕಳಿಗೆ ಒತ್ತಿ ಹೇಳಿದ ಅವರು ವಿಶ್ವಪ್ರೇಮದ ಒಂದು ರಾಯಭಾರಿಯಾಗಿ ಕಂಡುಬಂದರು. ಕೊನೆಗೆ, ಈಗಿನ ಟಿ.ವಿ.ಯ ಹಾವಳಿಯಿಂದಾಗಿ ಹೇಗೆ ಜನರು ಅಧಃಪತನದತ್ತ ತೆರಳುತ್ತಿದ್ದಾರೆ ಎನ್ನುವುದನ್ನು ವಿವರಿಸಿ ಹೇಳಿದರು - ಈಗ ಯಾವ ಹೆಣ್ಣುಮಕ್ಕಳಿಗೂ ಅಂತಹ ಕೆಲಸವನ್ನು ಮಾಡುವ ತಾಳ್ಮೆಯೇ ಇಲ್ಲವಂತೆ. ಅವರ ಒಳ್ಳೆಯ ಕೆಲಸಗಳಿಂದ ಪ್ರೇರೇಪಿತರಾದ ನಾವು ಅವರು ಹೇಳಿದ್ದಕ್ಕಿಂತಲೂ ಹೆಚ್ಚೇ ದುಡ್ಡು ಕೊಟ್ಟು, ಶಾಲೆಗೂ ಸಣ್ಣ ಮೊತ್ತದ ಸಹಾಯಧನ ನೀಡಿ ಅಲ್ಲಿಂದ ಹೊರಟೆವು.
ಕುಂದಾದ್ರಿ
ಆಗುಂಬೆಯಿಂದ ಸುಮಾರು ೧೫-೨೦ ಕಿ.ಮೀ. ದೂರ ವಾಹನ ಚಲಾಯಿಸಿದರೆ ಬೆಟ್ಟದ ಮೇಲಕ್ಕೆ ಹೋಗಿಬಿಡಬಹುದು, ಅಲ್ಲಿ ಒಂದು ಜೈನ್ ಬಸದಿ ಕೂಡ ಇದೆಯೆಂದು ಹೇಳಿದ್ದರು, ‘ದೊಡ್ಡ ಮನೆ’ಯವರು. ಅವರು ಹೇಳಿದ ಸೂಚನೆಯಂತೆ ಹೊರಟೆವು. ವಿಶೇಷ ಕಷ್ಟವಿಲ್ಲದೆ ಬೆಟ್ಟದ ತಪ್ಪಲಿಗೆ ಬಂದು ಮುಂದಕ್ಕೆ ವಾಹನ ಚಲಾಯಿಸಲು ಶುರು ಮಾಡಿದೆವು, ಹತ್ತುತ್ತಿದ್ದಂತೆ ಆತಂಕ ಹೆಚ್ಚುತ್ತಾ ಹೋಯಿತು, ಎಷ್ಟು ಹತ್ತಿದರೂ ಮುಗಿಯುವುದೇ ಇಲ್ಲ, ರಸ್ತೆ ಚಿಕ್ಕದಾಗುತ್ತಾ ಕೊನೆಗೆ ಒಂದೇ ವಾಹನ ಹೋಗುವಷ್ಟಾಯಿತು, ಎದುರಿನಿಂದ ಏನಾದರೂ ಬಂದರೆ ಏನು ಮಾಡುವುದು ಎಂಬುದಕ್ಕೆ ಉತ್ತರ ಇರಲಿಲ್ಲ, ಮಾತ್ರವಲ್ಲ ಅನೇಕ ಕಡೆ ಸ್ವಿಫ಼್ಟ್‍ಗೇ ಮೊದಲ ಗೇರ್‌ನಲ್ಲಿ ಹೋಗಲು ಸಾಕಷ್ಟು ಶ್ರಮ ಪಡಬೇಕಾಯಿತು, ಅಷ್ಟು ಕಡಿದಾಗಿತ್ತು ರಸ್ತೆ. ರಸ್ತೆ ಗುಣಮಟ್ಟ ಒಳ್ಳೆಯದಿದ್ದರಿಂದ ಬೇಗನೇ ಹೋಗಿ ಮೇಲ್ಭಾಗಕ್ಕೆ ತಲುಪಲು ಸಾಧ್ಯವಾಯಿತು. ಅಲ್ಲಿ ಕಾರ್ ನಿಲ್ಲಿಸಿ ಕೆಲವು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಿತ್ತು, ಬಸದಿಗೆ. ಕೊನೆಗೂ ಅಲ್ಲಿಗೆ ತಲುಪಿದಾಗ ಆ ದೃಶ್ಯಾವಳಿಯು ನಮ್ಮನ್ನು ಮಂತ್ರಮುಗ್ಧರನ್ನಾಗಿಸಿತು. ತಂಪಾದ ಹವೆ, ಸುತ್ತಲೂ ಮುಸುಕಿದ ಮಂಜು ನಾವೇನು ಸ್ವರ್ಗ ಲೋಕಕ್ಕೆ ಬಂದಿದ್ದೇವೋ ಎಂದೆಣಿಸುವಂತೆ ಮಾಡಿದುವು. ಬಂಡೆಗಳಿಂದಾವೃತವಾದ ಬೆಟ್ಟದ ತುದಿಯಲ್ಲಿ ಜೈನ್ ಬಸದಿ ಮಾತ್ರವಲ್ಲ, ಬಂಡೆಗಳನ್ನು ಕೊರೆದು ನೀರಿನ ಕೆರೆಗಳನ್ನು ಕೂಡ ಮಾಡಿದ್ದರು. ಬೆಟ್ಟದ ಅಂಚಿಗೆ ಹೋಗಿ ನೋಡಿದರೆ ನಿಗೂಢ ರಹಸ್ಯ ಪ್ರಪಂಚಕ್ಕೆ ಮಂಜು ಮುಸುಕಿದ ಬಾಗಿಲುಗಳು ಕಾಣುತ್ತಿದ್ದುವು, ಮೈಮರೆತು ಹೋದರೆ ಪ್ರಪಾತಕ್ಕೆ ಬೀಳುತ್ತಿದ್ದೆವು ಎಂಬುದು ಬೇರೆ ಸಂಗತಿ :-) ಆ ಜೈನ ಬಸದಿಯ ಚಾರಿತ್ರಿಕ ಹಿನ್ನೆಲೆಯ ಬಗ್ಗೆ ಏನೂ ಸರಿಯಾದ ವಿವರಗಳು ಸಿಗಲಿಲ್ಲ ಅಲ್ಲಿ, ಸಾಕಷ್ಟು ಹಳೆಯದು ಮತ್ತು ಇತ್ತೀಚೆಗೆ ನವೀಕರಿಸಿದ್ದರು ಎಂದಷ್ಟೇ ಗೊತ್ತಾಯಿತು.
ಅಲ್ಲೇ ಸ್ವಲ್ಪ ಹೊತ್ತು ಅಡ್ಡಾಡಿದ ನಾವು ಇನ್ನು ಕೆಳಕ್ಕಿಳಿದು ಮನೆಯ ಕಡೆಗೆ ಹೊರಡೋಣ ಎಂದು ಕಾರಿನ ಕಡೆಗೆ ನಡೆದೆವು, ಅಲ್ಲಿ ಒಂದು ಅನೂಹ್ಯವಾದ ಘಟನೆ ನಡೆಯಿತು, ಒಂದು ಹಕ್ಕಿ ಇರಬೇಕು ಬಹುಷಃ - ಯಾರೋ ಮನುಷ್ಯರು ಸಿನೇಮಾ ಹಾಡೊಂದನ್ನು ಶಿಳ್ಳೆ ಹಾಕುವಂತೆ ಕೂಗುತ್ತಿತ್ತು, ನಾವು ಕಿವಿಕೊಟ್ಟು ಕೇಳಿದೆವು ತುಸು ಹೊತ್ತು, ಅದು ನಿಜಕ್ಕೂ ಹಕ್ಕಿಯೇ ಮನುಷ್ಯನೋ ಎಂಬುದು ಕೊನೆಗೂ ಗೊತ್ತಾಗಲಿಲ್ಲ, ಆದರೆ ಅಲ್ಲಿನ ಸುತ್ತುಮುತ್ತಲಿನ ಪ್ರದೇಶಗಳಲ್ಲಿ ನಕ್ಸಲೀಯರ ಹಾವಳಿಯಿರುವುದೂ ಗೊತ್ತಿತ್ತು. ಸುಮ್ಮನೆ ಯಾಕೆ ಅಪಾಯವನ್ನು ಆಹ್ವಾನಿಸುವುದು ಎಂಬ ಆತಂಕದೊಂದಿಗೆ ಆ ನಿರ್ಜನ ಪ್ರದೇಶದಿಂದ ಹೊರಟೆವು. ಕೆಳಬರುವಾಗಲೂ ಯಾವುದೇ ವಾಹನ ಎದುರುಬದುರಾಗಿ ಸಿಗಲಿಲ್ಲ, ಹೀಗಾಗಿ ಆ ಇಕ್ಕಟ್ಟಾದ ದಾರಿಯಲ್ಲಿ ತೊಂದರೆಯಿಲ್ಲದೆ ವಾಪಾಸ್ ತಪ್ಪಲಿಗೆ ಬಂದೆವು, ನಾನು ಮಂಗಳೂರಿನತ್ತ ಕಾರನ್ನು ದೌಡಾಯಿಸಿದೆ.
ಹೆಬ್ರಿಯ ಹೋಳಿಗೆ ಭಟ್ರು
ಆಗುಂಬೆಯ ಘಾಟಿಯಲ್ಲಿ ವಾಹನ ನಿಲ್ಲಿಸಿ ಅಲ್ಲಿಂದ ಕಾಣಸಿಗುವ ಪ್ರಕೃತಿ ಸೌಂದರ್ಯವನ್ನೂ ಆಸ್ವಾದಿಸಿ, ತಿಳಿಗೇಡಿ ಜನರು ಕಸ ಎಸೆದು ಹಾಳುಗೆಡವಿದ ಪ್ರಕೃತಿಯ ದುರ್ಗತಿಯನ್ನೂ ನೋಡಿ ದುಃಖಿಸಿ ಮುಂದಕ್ಕೆ ಪ್ರಯಾಣ ಬೆಳೆಸಿದೆವು. ಹೆಬ್ರಿಗೆ ಬಂದಾಗ ಮೊದಲೇ ಅಂದುಕೊಂಡಿದ್ದಂತೆ ‘ಹೋಳಿಗೆ ಭಟ್ರು’ ಫಲಕ ಕಂಡಾಗ ಕಾರ್ ನಿಲ್ಲಿಸಿದೆವು. ಒಬ್ಬ ಉತ್ಸಾಹೀ ದಂಪತಿ ಹೋಳಿಗೆ ಮತ್ತಿತರ ಅನೇಕ ಸಿಹಿ-ಖಾರ ತಿನಿಸುಗಳನ್ನು ತಯಾರು ಮಾಡಿ ಮಾರುವ ಪ್ರಯತ್ನವನ್ನು ಕಂಡು ಖುಷಿ ಆಯಿತು. ಮಾತ್ರವಲ್ಲ ಶುಚಿಯಾಗಿಯೂ ಆರೋಗ್ಯಕರವಾಗಿಯೂ ತಯಾರುಮಾಡುವ ಬಗ್ಗೆ ಅವರು ಸಾಕಷ್ಟು ಗಮನಕೊಡುತ್ತಿದ್ದರು ಎಂದು ಅವರಿಂದ ತಿಳಿದುಬಂತು. ಅವರಿಂದ ಒಂದಷ್ಟು ತಿನಿಸುಗಳನ್ನು ಕಟ್ಟಿಸಿಕೊಂಡು ಹೊರಟೆವು, ಆಮೇಲೆ ನಮ್ಮ ಅನುಭವಕ್ಕೆ ಬಂದ ಒಂದು ಸಂಗತಿಯೇನೆಂದರೆ ಅಲ್ಲಿಂದ ತಂದ ತಿನಿಸುಗಳಲ್ಲಿ ಹೋಳಿಗೆಯೊಂದನ್ನು ಬಿಟ್ಟು ಉಳಿದೆಲ್ಲವೂ ಸ್ವಾದಿಷ್ಟಕರವಾಗಿದ್ದುವು, ಇದೊಳ್ಳೆ ವಿಪರ್ಯಾಸ ಎಂದು ನಮಗನಿಸಿತು, ಏನೋ ಆ ಒಂದು ದಿನ ಹೋಳಿಗೆ ಸರಿಯಾಗಲಿಲ್ಲವೋ ಏನೋ.
ಮುಕ್ತಾಯ, ಮರಳಿ ಮನೆಯಲ್ಲಿ
ಆಯ್ತು, ಪ್ರವಾಸದ ಕೊನೆ ಬಂದೇಬಿಟ್ಟಿತು, ಮಧ್ಯಾಹ್ನದ ಊಟದ ಸಮಯಕ್ಕೆ ಸರಿಯಾಗಿ ಮಂಗಳೂರಿನ ಮನೆಗೆ ಬಂದು ತಲುಪಿದೆವು, ಸುಶೀಲಕ್ಕ (ನಮ್ಮ ಮನೆಗೆ ಅಡುಗೆಯ ಸಹಾಯಕ್ಕೆಂದು ಬರುವ ಮಹಿಳೆ) ಅಡುಗೆ ಮಾಡಿಟ್ಟಿದ್ದರು. ಪ್ರಕಾಶ ಕೂಡ ಮನೆಯಲ್ಲಿ ಊಟ ಮಾಡಿ ಬಳಿಕ ಸ್ವಂತ ಊರು ಕುರುಡಪದವಿನ ಕಡೆಗೆ ತೆರಳಿದ.
ಏನೋ, ಪ್ರಯಾಣ ಮುಗಿಸಿ ಬಂದಾಗ ಇದನ್ನು ಬರೆಯಬೇಕು ಎಂಬ ಆಸೆ ಮೂಡಿಬಂತು, ತುಸು ಸಮಯ ತೆಗೆದುಕೊಂಡರೂ ಕೂಡ ಇದನ್ನು ನಿಮ್ಮೊಡನೆ ಹಂಚಿಕೊಳ್ಳಲು ಸಾಧ್ಯವಾದುದಕ್ಕೆ ಸಂತಸವಿದೆ. ಹೆಚ್ಚಿಗೆ ಬೋರ್ ಆಗದೇ ಚೆನ್ನಾಗಿ ಓದಿಸಿಕೊಂಡು ಹೋಗಿದೆ ಈ ಪ್ರವಾಸ ಕಥನ ಎಂದು ನಂಬಿದ್ದೇನೆ.
2 comments:
ಕೃಷ್ಣ ಶಾಸ್ತ್ರಿಯವರೇ,
ನನಗಂತೂ ನೀವು ಪ್ರವಾಸ ಕಥನ ಬರೆದ ರೀತಿ ಇಷ್ಟವಾಯಿತು. ಎಲ್ಲೂ ಬೋರ್ ಹೊಡೆಸಲಿಲ್ಲ.
ನಾವು ಆಗುಂಬೆಗೆ ಹೋದಾಗ ಉಳಿದುಕೊಳ್ಳುವ ವ್ಯವಸ್ಥೆಯ ಬಗ್ಗೆ ಮಾಹಿತಿ ಇರದ ಕಾರಣ, ಹೆಬ್ರಿಯಲ್ಲಿ ಉಳಿದೆವು. "ದೊಡ್ಡ ಮನೆ"ಯ ಬಗ್ಗೆ ಮಾಹಿತಿಗೆ ಧನ್ಯವಾದ. ಆಗುಂಬೆ ಹತ್ತಿರ ಜೋಮ್ಲುತೀರ್ಥ, ಕೂಡ್ಲುತೀರ್ಥ ಕೂಡ ಅಷ್ಟೇ ಸುಂದರವಾಗಿದೆ.
ಸೀತಾನದಿ ಕೂಡ ಸೂಪರ್. ಸೋಮೇಶ್ವರ ಪ್ರಕೃತಿ ಶಿಬಿರದಲ್ಲಿ ತಂಗಿದ್ದೆವು. ಅದು ಕೂಡ ತುಂಬ ಸುಂದರವಾಗಿದೆ.
ಚಿತ್ರ ಪ್ರಸನ್ನ
www.vichaaradhaare.blogspot.com
www.prasca.blogspot.com
ಗಾಜನೂರಿನ ಪಕ್ಕದಲ್ಲೇ ಇರುವ ಸಕ್ರೆಬೈಲು ಆನೆ ಶಿಬಿರ ನಿಮಗ್ಯಾರೂ ಹೇಳದೆ ನಷ್ಟವಾಯ್ತು. ಜೋಗದ ದಾರಿಯಲ್ಲೇ ಶಿವಮೊಗ್ಗದ ಹೊರವಲಯದಲ್ಲೇ ಇರುವ ತಾವರೆಕೊಪ್ಪ ಸಿಂಹುಲಿಧಾಮವೂ ಹೀಗೇ ನಿಮಗೆ ತಪ್ಪಿಹೋಯ್ತಲ್ಲಾಂತ ನನಗೆ ಬೇಸರವಾಯ್ತು. ಯಾಕೆ ಬರಿಯ ನುಡಿಚಿತ್ರ ಮಾತ್ರ ಕೊಟ್ಟಿದ್ದೀರಿ? ಕನಿಷ್ಠ ಚರವಾಣಿಯ ಚಿತ್ರಗಳಾದರೂ ಸರಿ, ತೆಗೆದು ಹಾಕಬಹುದಿತ್ತಲ್ಲಾಂತನ್ನಿಸಿತು. ರ್ನಿಮಗಿಂತ ಕನಿಷ್ಠ ಮೂವತ್ತು ವರ್ಷ ಹಿಂದೆ ಹುಟ್ಟಿದ ಆಕಸ್ಮಿಕದ ಸೌಕರ್ಯದಲ್ಲಿ, ಸಹಜವಾಗಿ ಪೇರಿದ ಅನುಭವಗಳ ಮೊತ್ತದಲ್ಲಿ ನಿಮ್ಮನುಭವದ ಪ್ರತಿ ಸಾಲಿನೊಡನೆ ನನ್ನ ಶ್ರುತಿಸೇರಿಸುವ ಉತ್ಸಾಹ ಬರುತ್ತದೆ. ಆದರೆ - ಮುದಿಮರುಳು ಇನ್ನೂ ಬಂದಿಲ್ಲದಿರುವುದಕ್ಕೆ (ಇಷ್ಟು ಬರೆದದ್ದು?)ಇಲ್ಲಿ ದಾಖಲಿಸುತ್ತಿಲ್ಲ. ಅನುಕೂಲವಾದರೆ ನನ್ನ ‘ಚಕ್ರವರ್ತಿಗಳು’ ಪುಸ್ತಕ ಎಲ್ಲಿಂದಾದರೂ ಸಂಗ್ರಹಿಸಿ, ಓದಿನೋಡಿ. ಮೊನ್ನೆ ಚೌತಿ ರಜೆ ಸೇರಿಸಿ ನಾವೂ ಹೆಚ್ಚುಕಡಿಮೆ ಇದೇ ದಾರಿ ಅನುಸರಿಸಿದ್ದೆವು. ನನ್ನದು ‘ತೀರ್ಥಯಾತ್ರೆ’ಯಾಗಿ ಸದ್ಯದಲ್ಲೇ ಬ್ಲಾಗೇರಲಿದೆ - ನಿರೀಕ್ಷಿಸಿ!
ಏನೇ ಇರಲಿ, ಸುಂದರ ಅನುಭವ ಕಥನದಿಂದ, ನನ್ನ ನೆನಪಿನ ಸರಣಿಗೆ ಹೊಸ ಕುಮ್ಮಕ್ಕಿನಿಂದ ನಾನು ನಿಜಕ್ಕೂ ಅನ್ವರ್ಥನಾಮನಾಗಿದ್ದೇನೆ - ಕೃತಜ್ಞ.
ಸಂತೋಷ ಹೆಚ್ಚಳ :-)
Post a Comment