About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Thursday, August 19, 2010

ಶಿವಮೊಗ್ಗಕ್ಕೊಂದು ಪ್ರಯಾಣ - ಭಾಗ ೧

ಶಿವಮೊಗ್ಗಕ್ಕೊಂದು ಪ್ರಯಾಣ - ಭಾಗ ೧


ಜುಲೈ ತಿಂಗಳ ಮೊದಲನೇ ವಾರದಲ್ಲಿ ನಾನು ಸ್ಮಿತಾಳೊಂದಿಗೆ ಶಿವಮೊಗ್ಗಕ್ಕೆ ಹೋಗಿದ್ದೆ, ಪ್ರಿಯ ಗೆಳೆಯ ಪನ್ನಗದತ್ತನ (ಪಿ.ಡಿ.ಯ) ಮದುವೆಗೆಂದು. ಅನ್ಯಥಾ ಏರಿಳಿತಗೊಳಿಂದಿಗೆ ಕೂಡಿರದ ಇತ್ತೀಚೆಗಿನ ಜೀವನದಲ್ಲಿ ಒಟ್ಟಾರೆ ಪ್ರಯಾಣ ದಾಖಲಾರ್ಹವಾಗಿತ್ತು ಎನ್ನಲಡ್ಡಿಯಿಲ್ಲ, ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ. ನನಗೆ ಸ್ವಲ್ಪ ವಿಷದವಾಗಿ ಬರೆಯುವ ಚಟ :-) ನಿಮಗೆ ಬೋರ್ ಆದರೆ ಕ್ಷಮಿಸಿ!

ಸಿದ್ಧತೆ

ಶುಕ್ರವಾರ ಬೆಳಗ್ಗೆ ಕಾಸರಗೋಡಿಗೆ ಹೋಗಿ ನನ್ನ ಬಳಿ ಇದ್ದ ಮಾರುತಿ ಆಲ್ಟೋವನ್ನು ಅಪ್ಪನಿಗೆ ಕೊಟ್ಟು ಅವರ ಬಳಿಯಿದ್ದ ಮಾರುತಿ ಸ್ವಿಫ಼್ಟ್‍ ಅನ್ನು ಜಾಗರೂಕತೆಯಿಂದ ದೌಡಾಯಿಸಿಕೊಂಡು ಮಂಗಳೂರಿಗೆ ಬಂದಿದ್ದೆ - ದೂರ ಪ್ರಯಾಣಕ್ಕೆ ಆಲ್ಟೋಕ್ಕಿಂತ ಸ್ವಿಫ಼್ಟ್ ಬಹಳ ಆರಾಮದಾಯಕ ಎಂಬುದು ಈಗಾಗಲೇ ನಾವು ಕಂಡುಕೊಂಡ ವಿಷಯವಾಗಿತ್ತು. ಮಾತ್ರವಲ್ಲ, ನಾನು ಕೆಲವು ಬಾರಿ ಹೇಳಿರುವುದನ್ನು ಗಮನಿಸಿ ಸ್ವಿಫ಼್ಟ್‍ಗೆ ಹೊಸ ಆಡಿಯೋ ಸಿಸ್ಟಮ್ ಮತ್ತು ರಿಮೋಟ್ ಬೀಗ ಹಾಕಿಸಿ ಇಟ್ಟಿದ್ದರು ಅಪ್ಪ. ಶಿವಮೊಗ್ಗ ಪ್ರಯಾಣದಲ್ಲಿ ಕೂಡ ಚೆನ್ನಾಗಿ ಬಳಕೆ ಆಗುತ್ತದೆ ಎಂಬುದನ್ನೂ ಗಮನದಲ್ಲಿಟ್ಟುಕೊಂಡು ಕಾಳಜಿಯಿಂದ ಸರಿಯಾದ ಸಮಯಕ್ಕೆ ಹಾಕಿಸಿದ್ದರು. ಇರಲಿ, ಹೊರಡುವ ದಿನ ಬಂತು, ಶನಿವಾರ. ಬೆಳಗ್ಗೆ ತಿಂಡಿಗೆಂದು ಇಡ್ಲಿ ಮಾಡಿದ್ದೆವು - ಇಡ್ಲಿ/ಸಾಂಬಾರ್/ಚಟ್ನಿಯನ್ನು ಕೂಡ ತೆಗೆದುಕೊಂಡು ಹೊರಟೆವು ನಾವು, ಸುಮಾರು ಹನ್ನೆರಡು ಘಂಟೆಗೆ.

ಕಾರು ಏರಿದ ಬಳಿಕ, ತಿಂಡಿ ತಿನ್ನುವ ತನಕ!

ದಕ್ಷಿಣ ಕನ್ನಡ ಪ್ರದೇಶದಲ್ಲಿ ಈ ಕಾಲದಲ್ಲಿ ವಿಪರೀತ ಮಳೆ ಸಾಮಾನ್ಯ, ಆದರೆ ಆ ದಿನ ನಮಗೆ ಅಷ್ಟೇನೂ ತೊಂದರೆ ಕೊಡಲಿಲ್ಲ. ನೋಡ ನೋಡುವಷ್ಟರಲ್ಲಿ ಉಡುಪಿಯ ಬಳಿ ತಲುಪಿದ್ದೆವು. ಅಲ್ಲಿ ಕಣ್ಣರಳಿಸಿ ಬೈಪಾಸ್ ರೋಡ್ ಮೂಲಕ ಹೋಗಲು ಪ್ರಯತ್ನ ಪಟ್ಟೆವು. ಹೋದ ಬಾರಿ ಶಿವಮೊಗ್ಗಕ್ಕೆ ಹೋದಾಗ ಇದೇ ಪ್ರಯತ್ನದಲ್ಲಿ ಅದೇಕೋ ತುಸು ದಾರಿ ತಪ್ಪಿ ಮಣಿಪಾಲ ಗುಡ್ಡದ ಅದ್ಯಾವುದೋ ಭಾಗಗಳನ್ನೆಲ್ಲಾ ಸರ್ವೇ ಮಾಡುತ್ತಾ ಹೋಗಿದ್ದಾಗಿತ್ತು, ಹಾಗಾಗಿ ಜಾಗರೂಕರಾಗಿರಲು ನಿರ್ಧರಿಸಿದ್ದೆವು. ಅದೇನು ಮಾಯಾಜಾಲವೋ ಗೊತ್ತಿಲ್ಲ, ಈ ಬಾರಿಯೂ ಒಂದು ಕಡೆ ಉಡುಪಿ ಪೇಟೆಗೆ ನುಸುಳಿಬಿಟ್ಟಿದ್ದೆವು, ಕಳೆದ ಬಾರಿಯಷ್ಟು ಅವಾಂತರವಾಗಲಿಲ್ಲ ಅಷ್ಟೆ. ಹಾಗೆಯೇ ಮುಂದೆ ಹೋಗುತ್ತಾ ಸಾಗಿದಾಗ ಹೆಬ್ರಿಯಲ್ಲಿ ದಾರಿಯ ಬದಿಯಲ್ಲಿ "ಹೋಳಿಗೆ ಭಟ್ರು" ಎಂಬ ಫಲಕ ಕಾಣಿಸಿತು, ಬಾಯಿಯಲ್ಲಿ ನೀರೂರಿತು. ತಡವಾಗುತ್ತದೆ, ವಾಪಾಸ್ ಬರುವಾಗ ಸಂದರ್ಶಿಸೋಣ ಎಂದು ಮುಂದೆ ಸಾಗಿದೆವು.

ಸೀತಾನದಿ ನಿಸರ್ಗಧಾಮ

ಕೊನೆಗೂ ತಲುಪಿತು ಸೀತಾನದಿ ನಿಸರ್ಗಧಾಮ, ಇಲ್ಲಿ ಇಳಿದು ತಿಂಡಿ ಖಾಲಿ ಮಾಡಿ ಹೋಗುವುದೆಂದು ಹೊರಟಾಗಲೇ ಮನದಲ್ಲಿ ಲೆಕ್ಕ ಹಾಕಿದ್ದೆವು. ನಾವೇನು ಅಲ್ಲಿ ದಿನಪೂರ್ತಿ ಇದ್ದು ಚಾರಣ ಮಾಡಲು ಹೋದವರಲ್ಲ, ಏನಿದೆ-ಹೇಗಿದೆ ಅಂತ ನೋಡಿಕೊಂಡು ರುಚಿ ರುಚಿಯಾದ ಮನೆಯ ಇಡ್ಲಿಯನ್ನು ತಿಂದು ತೇಗುವ ಉದ್ದೇಶ ಇಟ್ಟುಕೊಂಡು ತೆರಳಿದ್ದು, ಅಷ್ಟೆ. ಆದರೇನು? ನಿಯಮಗಳು ನಿಯಮಗಳೇ ತಾನೆ. ವಾಹನಕ್ಕೆ ೫೦ ರೂ. ಒಬ್ಬೊಬ್ಬರಿಗೆ ೪೦ ರೂ.ಗಳಂತೆ ಒಟ್ಟು ೧೩೦ ರೂ. ತೆತ್ತು ಒಳ ತೆರಳಿದೆವು. ಅಲ್ಲಿಯ ವ್ಯವಸ್ಥೆಗಳನ್ನು ನೋಡಿ ಖುಷಿ ಆಯಿತು. ಆ ಇಡೀ ಪ್ರದೇಶವನ್ನು ಪ್ಲಾಸ್ಟಿಕ್ ಫ಼್ರೀ ಅಂತ ಘೋಷಿಸಿ ಅಂತೆಯೇ ಕಾಳಜಿಯಿಂದ ನೋಡಿಕೊಂಡಿದ್ದರು. ಇದರಿಂದಾಗಿ ನಮಗೆ ಅಲ್ಲಿ ಪ್ರಕೃತಿಯ ಸೌಂದರ್ಯವನ್ನು ಪ್ರಸನ್ನ ಮನಸ್ಸಿನಿಂದ ಆಸ್ವಾದಿಸಲು ಸಾಧ್ಯವಾಯಿತು. ತುಂಬಿ ಹರಿಯುತ್ತಿದ್ದ ನದಿ, ಧಾರಾಕಾರ ಸುರಿದ ಮಳೆಗೆ ಸ್ಪಂದಿಸಿ ಸೊಕ್ಕಿ ಬೆಳೆದ ಸಸ್ಯ ಸಂಪತ್ತು, ಮಳೆಯ ಅರ್ಭಟದೆದುರು ನಾವೇನು ಕಮ್ಮಿ ಇಲ್ಲ ಎನ್ನುವಂತೆ ಕೂಗಿಕೊಳ್ಳುತ್ತಿದ್ದ ಜೀರುಂಡೆಗಳು (ಹೆಚ್ಚಾಗಿ ನಗರ ಪ್ರದೇಶದಲ್ಲಿರುವ) ನಮಗೆ ಖುಷಿ ನೀಡಿದವು. ಅಲ್ಲಿಯ ಪಾಲಕರು ನಮ್ಮನ್ನು ಮೃದುವಾಗಿ ಸೌಜನ್ಯದಿಂದ ಮಾತನಾಡಿಸಿ, ಅಲ್ಲಿಯ ವ್ಯವಸ್ಥೆಗಳ ಬಗ್ಗೆ ವಿವರಿಸಿ ಮನಸ್ಸನ್ನು ಮುದಗೊಳಿಸಿದರು. ಅನೇಕ ಕಡೆ ಉದ್ಧಟತನ, ಉದಾಸೀನತೆ, ಅಜ್ಞಾನ ಮೆರೆಯುವ ಭಾರತೀಯರ ‘ಸೇವಾ ಅದಕ್ಷತೆ’ಯಿಂದ ಮುದುಡಿಹೋಗಿದ್ದ ಮನಸ್ಸನ್ನು ಪ್ರಫುಲ್ಲಗೊಳಿಸುವ, ಭವಿಷ್ಯದ ಬಗ್ಗೆ ಆಶಾವಾದವನ್ನು ಮೂಡಿಸುವ ಇಂತಹವರು ಭಾರತದಲ್ಲಿ ಇನ್ನೂ ಹೆಚ್ಚಾಗಲಿ ಎಂದು ಹಾರೈಸುತ್ತಾ ಅಲ್ಲಿಂದ ಹೊರಟೆವು, ಮತ್ತೊಮ್ಮೆ ಸಾವಕಾಶವಾಗಿ ಕಾಲ ಕಳೆಯಲೆಂದು ಪುನಃ ಬರಬೇಕೆಂಬ ನಿರ್ಧಾರದೊಂದಿಗೆ.

ಆಗುಂಬೆಯ ದಾಟಿ ಶಿವಮೊಗ್ಗಕ್ಕೆ ಪ್ರವೇಶ

ಆಗುಂಬೆ ಘಾಟಿಯನ್ನು ಹತ್ತುವ ಮೊದಲು ಕಾಣಸಿಗುವ ಪರ್ವತ ಶ್ರೇಣಿಯ ಭವ್ಯ ದೃಶ್ಯವನ್ನು ಕಾರೊಳಗಿಂದಲೇ ಕಣ್ಣಿನಲ್ಲಿ ತುಂಬಿಕೊಳ್ಳುವ ವ್ಯರ್ಥಪ್ರಯತ್ನವನ್ನು ಮಾಡುತ್ತಾ ಮುಂದೆ ಸಾಗಿದೆವು ನಾವು. ಇದೀಗ ಮೂರನೇ ಸಲ ಹೋಗುತ್ತಿರುವುದರಿಂದ ಘಾಟಿಯ ಹತ್ತಾರು ಭಯಂಕರ ತಿರುವುಗಳು ಅಷ್ಟೇನೂ ಸವಾಲೊಡ್ಡಲಿಲ್ಲ. ಆದರೂ ಒಂದು ಕಡೆ ಪ್ರಪಾತದಂಚಿಗೆ ಹಾಕಿದ್ದ ಗೋಡೆಯ ಭಾಗವೊಂದು ಧ್ವಂಸವಾದದ್ದು ನೋಡಿ ಅಲ್ಲಿ ನಡೆದಿರಬಹುದಾದ ಘಟನೆಯನ್ನು ಕಲ್ಪಿಸಿಕೊಂಡು ಎದೆ ಝಿಲ್ಲೆಂದಿತು. ಹಾಗೆಯೇ ಮುಂದುವರೆದು ಶಿವಮೊಗ್ಗವನ್ನು ತಲುಪಿದಾಗ ಸಂಜೆಯಾಗಿತ್ತು. ಶಿವಮೊಗ್ಗ ಹಾಗೂ ಆಸುಪಾಸಿನ ಸ್ಥಳಗಳಲ್ಲಿ ಹಿಂದಿನ ಬಾರಿ ಕಾಣಸಿಗದ ಸಂಖ್ಯೆಯಲ್ಲಿ ದನ-ಹಂದಿ-ಕತ್ತೆ ಇತ್ಯಾದಿಗಳ ಹಿಂಡು ತಾಳ್ಮೆಗೆ ಸವಾಲನ್ನೊಡ್ಡಿದ್ದವು. ಇಲ್ಲಿ ನಿಮಗೆ ಒಂದು ಸಂಗತಿಯನ್ನು ಹೇಳಲೇ ಬೇಕು ನೋಡಿ! ವೀಗನ್ ಆದ ಮೇಲೆ ಈ ಮೂಕ ಮುಗ್ಧ ಪ್ರಾಣಿಗಳು ಮಾಡುವ ‘ತೊಂದರೆ’ಗಳು ನಿಜಕ್ಕೂ ಮನಸ್ಸಿಗೆ ಅಷ್ಟೆಲ್ಲಾ ಕಿರಿಕಿರಿ ಮಾಡುವುದಿಲ್ಲ, ಕೋಪವನ್ನೂ ತರಿಸುವುದಿಲ್ಲ, ಆಗುವ ಅನಾನುಕೂಲತೆಯನ್ನು ತಾಳಿಕೊಳ್ಳುವ ಮನಸ್ಥಿತಿ ಎಷ್ಟೋ ಜಾಸ್ತಿ ಆಗಿದೆ ನನಗೆ. ಬುದ್ಧಿ ಇದೆ ಎಂಬ ಹೆಗ್ಗಳಿಕೆಯಿಂದೊಡಗೂಡಿದ ಮನುಷ್ಯರು ಅಲ್ಪಬುದ್ಧಿ ತೋರಿಸಿ ಕಿರಿಕಿರಿ ಮಾಡಿದಾಗ ಅದೆಷ್ಟೋ ಜಾಸ್ತಿ ರಕ್ತ ಕುದಿಯುತ್ತದೆ. ಇರಲಿ, ಮೊದಲೇ ಯೋಜಿಸಿದಂತೆ ಸೀದಾ ಸ್ಮಿತಾಳ ಅಕ್ಕನ (ವೀಣಕ್ಕ) ಮನೆಗೆ ಹೋದೆವು ರಾತ್ರಿ ತಂಗಲೆಂದು. ಅಲ್ಲಿ ಹಾಸನದಿಂದ ಬಂದ ಸ್ಮಿತಾಳ ಅಣ್ಣ (ನಾಗೇಶಣ್ಣ) ಕೂಡ ಇದ್ದರು, ಪತ್ನಿ-ಪುತ್ರ ಸಮೇತರಾಗಿ, ಎಲ್ಲರೂ ಒಟ್ಟು ಸೇರಿ ಒಂದು ಸಂತಸದ ವಾತಾವರಣವಿತ್ತು.

ಗೆಳೆಯರೇ, ಹೇಗಿದ್ದೀರಿ?

ಅದೇ ಹೊತ್ತಿಗೆ ಮುಂಬೈನಿಂದ ಪ್ರಯಾಣ ಬೆಳೆಸಿದ್ದ ಇನ್ನೊಬ್ಬ ಆತ್ಮೀಯ ಗೆಳೆಯ ರಾಮಪ್ರಕಾಶ್ ಕೂಡ ಶಿವಮೊಗ್ಗ ತಲುಪಿದ್ದ. ಪಕ್ಕದ ಮತ್ತೂರಿನ ಅಶ್ವತ್ಥ ನಮ್ಮ ಇನ್ನೊಬ್ಬ ಆಪ್ತ ಮಿತ್ರ, ಹೊಟ್ಟೆ ಕೆಟ್ಟು ಹೋಗಿ ಭದ್ರಾವತಿಯ ಆಸ್ಪತ್ರೆಯಲ್ಲಿದ್ದ ಅವನ ಮುದ್ದಿನ ಮಗಳು ‘ಅವನಿ’ ಸಾಕಷ್ಟು ಗುಣಮುಖವಾಗಿದ್ದಾಳೆಂದು ಸಮಾಧಾನವಾಗಿ ಗೆಳೆಯ-ಬಳಗದೊಂದಿಗೆ ತುಸು ಸಮಯ ಕಳೆಯಲು ಉತ್ಸುಕನಾಗಿದ್ದನು. ಆ ದಿನ ಸಂಜೆ ನಾವು ನಾಲ್ಕು ಜನ ಒಂದು ಘಂಟೆ ಪಿ.ಡಿ.ಯ ಮನೆಯಲ್ಲಿ ಕಾಲಕ್ಷೇಪ ಮಾಡಿದೆವು, ಇನ್ನೆರಡು ದಿನ ಮದುವೆಯ ಗೌಜಿಗದ್ದಲದಲ್ಲಿ ಮುಕ್ತವಾಗಿ ಬೆರೆಯಲು ಸಾಧ್ಯವಾಗಲಿಕ್ಕಿಲ್ಲ ಎಂಬ ಅಂಜಿಕೆಯಿಂದ ಪಿ.ಡಿ. ಕೂಡ ಅಂದೇ ಭೇಟಿಯಾಗೋಣ ಎಂಬ ಆಶಯ ವ್ಯಕ್ತಪಡಿಸಿದ್ದ. ಒಟ್ಟಿನಲ್ಲಿ ಅಲ್ಲಿ ಹೊಸ-ಹಳೇ ವಿಷಯಗಳನ್ನು ಆಡಿ-ನಲಿದು ಮೂವತ್ತರ ಹರೆಯದ ನಾವು ಕಾಲೇಜು ದಿನಗಳ ಇಪ್ಪತ್ತರ ಯುವಕರಂತೆ ಹೊರಬಂದೆವು.

ನಾಳೆ ಏನು ಮಾಡುವುದಪ್ಪಾ?

ಮರುದಿನದ ಭೋರ್ಗರೆಯುವ ಜೋಗ ಜಲಪಾತವನ್ನು ನೋಡಲು ಹೋಗುವ ಯೋಜನೆ ಇತ್ತು ನಮಗೆ, ಪಿ.ಡಿ.ಯ ಮನೆಯ ಬಳಿ ಇದ್ದ ಗಣಪತಿ ದೇವಸ್ಥಾನದಲ್ಲಿ ಮದುವೆಗೆ ಸಂಬಂಧಪಟ್ಟಂತೆ ಕೆಲ ಧಾರ್ಮಿಕ ವಿಧಿವಿಧಾನ, ಪೂಜೆ, ಹೋಮ ಇತ್ಯಾದಿ, ಕೊನೆಗೆ ಊಟ - ಈ ಕಾರ್ಯಕ್ರಮ ಕೂಡ ಇತ್ತು. ಇದರೊಂದಿಗೇ ನಮ್ಮೆಲ್ಲರ ಇನ್ನೊಬ್ಬ ಮಿತ್ರ ಉಮೇಶರ ರಂಗಪ್ರವೇಶವಾಗುವುದಿತ್ತು (ನಮಗಿಂತ ಕೇವಲ ಒಂದು ವರ್ಷಕ್ಕೆ ಹಿರಿಯರಾಗಿದ್ದರೂ ಕೂಡ ಅದೇಕೋ ಅವರ ವ್ಯಕ್ತಿತ್ವದಲ್ಲಿದ್ದ ಸಾತ್ವಿಕತೆಯ ಹಿರಿಮೆಯೋ ಏನೋ, ಅವರನ್ನು ಬಹುವಚನದಲ್ಲಿ ಮಾತನಾಡಿಸುವ ಸಂಪ್ರದಾಯ ಹಾಸ್ಟೆಲ್ ದಿನಗಳಿಂದಲೇ ಬೆಳೆದು ಬಂದಿತ್ತು, ಅದು ಈಗಲೂ ರೂಢಿಯಲ್ಲಿದೆ). ಅವರ ಪತ್ನಿ ಜ್ಯೋತ್ಸ್ನಾಳಿಗೆ ಕೆಲಸ ಸಿಕ್ಕಿದ್ದರಿಂದ ಅವರಿಬ್ಬರೂ ಭಾರತಕ್ಕೆ ಇದೇ ಸಮಯಕ್ಕೆ ಬರುವಂತಾದದ್ದು, ಈ ಮದುವೆಯಲ್ಲಿ ಭಾಗವಹಿಸುವಂತಾದದ್ದು ನಮಗೆಲ್ಲಾ ತುಂಬಾ ಖುಷಿ ಕೊಟ್ಟಿತ್ತು.

ಗಾಜನೂರು ಅಣೆಕಟ್ಟು

ಬೆಳಗ್ಗೆ ಅಶ್ವತ್ಥನಿಗೆ ಪುನಃ ಭದ್ರಾವತಿಗೆ ಹೋಗುವುದಿತ್ತು, ಮಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಕರೆತರಲು. ಉಮೇಶ ಬರುವುದಕ್ಕೆ ಇನ್ನೂ ಸಮಯವಿತ್ತು, ಹೀಗಾಗಿ ಪ್ರಕಾಶ, ನಾವಿಬ್ಬರು ಮತ್ತೆ ನಾಗೇಶಣ್ಣ ಪಕ್ಕದಲ್ಲೇ ಇದ್ದ ಗಾಜನೂರಿಗೆ ಹೋಗಿ ಬರಲು ನಿರ್ಧರಿಸಿದೆವು, ಅಣೆಕಟ್ಟನ್ನು ನೋಡಿ ಬರಲು, ಹೀಗೆ ಸುಮ್ಮನೆ. ನಿಜ ಹೇಳುವುದಾದರೆ, ಗಂಭೀರವಾಗಿ ಆಲೋಚನೆ ಮಾಡಿದಾಗಲೆಲ್ಲಾ ಈ ಅಣೆಕಟ್ಟು ಎಂಬುದು ಬೇಸರ ತರಿಸುವ ಸಂಗತಿ, ಮಿತಿ ಇಲ್ಲದ ಮನುಜ ಸ್ವಾರ್ಥದ ಸಂಕೇತಗಳಲ್ಲಿ ಒಂದು ಎನ್ನಲಡ್ಡಿಯಿಲ್ಲ. ಆದರೆ ಅನುಕೂಲತೆಗಳ ದಾಸರಾಗಿ ಹೋದ ನಮಗೆ ಪ್ರತಿಭಟಿಸುವ ಮನಸ್ಸಿರುವುದಿಲ್ಲ, ಅನೇಕರಿಗೆ ಅದರಲ್ಲಿ ಪ್ರತಿಭಟಿಸುವ ವಿಷಯವಡಗಿದೆ ಎಂದೇ ತೋರುವುದಿಲ್ಲ. ಏನೇ ಇರಲಿ, ಅಣೆಕಟ್ಟುಗಳು ನೋಡಲು ಸುಂದರವಾಗಿರುವುದಂತೂ ನಿಜ, ಅಂತಹ ಬೃಹತ್ ಮಾನವ ನಿರ್ಮಿತ ತಡೆಗೋಡೆಯ ವೈಶಾಲ್ಯತೆ, ಸಾಮರ್ಥ್ಯ, ಹಿಡಿದಿಟ್ಟ ನೀರಿನ ಅಗಾಧತೆ, ಹಾಗೂ ಇವೆಲ್ಲದರ ಹಿಂದಿರುವವರ ಪರಿಶ್ರಮ, ನೈಪುಣ್ಯತೆ, ತಪಸ್ಸು - ಇವೆಲ್ಲಾ ಮನಸ್ಸಿನಲ್ಲಿ ಹಾದುಹೋಗುವ ವಿಷಯಗಳು. ಅಣೆಕಟ್ಟಿನ ಮೇಲೆ ನಡೆದಾಡಲು ಅವಕಾಶವಿರಲಿಲ್ಲ ನಮಗೆ, ಪೂರ್ತಿ ಕಾಮಗಾರಿ ಮುಗಿದಿರಲಿಲ್ಲವೋ ಅಥವಾ ಸಾರ್ವಜನಿಕರಿಗೆ ಅನುಮತಿ ನೀಡಲು ಇನ್ನೂ ಹೆಚ್ಚಿನ ಸಮಯ ಬೇಕಿತ್ತೋ ಗೊತ್ತಿಲ್ಲ, ಒಟ್ಟಿನಲ್ಲಿ ನಮಗೆ ಸ್ವಲ್ಪ ನಿರಾಸೆಯಾಯಿತು. ಅಲ್ಲೇ ಜಲಾಶಯದ ಪಕ್ಕ ಇನ್ನೊಂದು ಸಣ್ಣ ಜಾಗ ಇತ್ತು, ಕಳೆದ ಬಾರಿ ಬಂದಿದ್ದಾಗ ಮನಸ್ಸನ್ನು ಸೆಳೆದಿತ್ತು - ನೀರಿನ ಬಳಿ ಒಂದು ದೊಡ್ಡ ಮರ, ಅದರ ನೆರಳಿನಲ್ಲೆ ಒಂದು ಕಲ್ಲು ಬೆಂಚು, ಅದರ ಮೇಲೆ ಕುಳಿತು ಸುಮ್ಮನೆ ನೀರಿನ ಸಣ್ಣ ಅಲೆಗಳನ್ನು, ದೂರದಲ್ಲಿ ಅಣೆಕಟ್ಟಿನಿಂದಾಗಿ ನಿರ್ಮಿತವಾದ ಸಣ್ಣದೊಂದು ದ್ವೀಪವನ್ನು ನೋಡುತ್ತಾ ಸ್ವಲ್ಪ ಹೊತ್ತು ಕಾಲಕ್ಷೇಪ ಮಾಡುವುದು ಆಹ್ಲಾದಕರ ವಿಷಯ ಎಂಬುದರಲ್ಲಿ ಎರಡು ಮಾತಿಲ್ಲ. ಆ ಅನುಭವವನ್ನು ಸ್ಮಿತಾಳಿಗೂ ತೋರಿಸಿಕೊಡಬೇಕು ಎಂದನಿಸಿತ್ತು, ಆದರೆ ಅಣೆಕಟ್ಟಿಗೆ ನೀರಿನ ಒಳಹರಿವು ಹೆಚ್ಚಾದ ಕಾರಣ ಆ ಪ್ರದೇಶಕ್ಕೆ ಪ್ರವೇಶವನ್ನು ತಡೆದಿದ್ದರು. ಅಲ್ಲಿ ಇನ್ನೇನೂ ಮಾಡುವುದಿರಲಿಲ್ಲ, ನಮ್ಮ ಬಳಿ ಇದ್ದ ಹೊಸ ದುರ್ಬೀನಿಂದ ಅಲ್ಲಿ ಇಲ್ಲಿ ಒಂದಷ್ಟು ನೋಡಿ ಏನೋ ಸಾರ್ಥಕತೆ-ಸಂಭ್ರಮ ಅನುಭವಿಸಿ ಅಲ್ಲಿಂದ ಹೊರಬಿದ್ದೆವು, ವಾಪಾಸ್ ಶಿವಮೊಗ್ಗದ ಕಡೆಗೆ.

ಗಣಪತಿ ದೇವಸ್ಥಾನದಲ್ಲಿ

ನಾಗೇಶಣ್ಣನನ್ನು ಮನೆಯಲ್ಲಿ ಬಿಟ್ಟು ಸ್ಮಿತಾ, ಪ್ರಕಾಶ ಹಾಗೂ ನಾನು ಪಿ.ಡಿ.ಯ ಮನೆಯ ಬಳಿ ಇದ್ದ ಗಣಪತಿ ದೇವಸ್ಥಾನಕ್ಕೆ ತೆರಳಿದೆವು. ಪಿ.ಡಿ. ಅಲ್ಲಿ ಸಾಂಪ್ರದಾಯಿಕ ಉಡುಗೆ ಉಟ್ಟು ಒಂದಷ್ಟು ವಿಧಿ-ವಿಧಾನಗಳಲ್ಲಿ ನಿರತನಾಗಿದ್ದ. ಆಗಾಗ ಆಚೆ-ಈಚೆ ನಡೆದಾಡುವಾಗ ನಾವು ಎಡತಾಕುತ್ತಿದ್ದೆವು, ಆಗ ನಮಗೊಂದು ಮುಗುಳ್ನಗೆಯನ್ನು ದಯಪಾಲಿಸುತ್ತಿದ್ದ. ಆಗಾಗ ಬರುತ್ತಿದ್ದ ತುಂತುರು ಮಳೆಯಿಂದ ತಪ್ಪಿಸಿಕೊಳ್ಳುತ್ತಾ, ಮರದ ಮೇಲಿನಿಂದ ಬೀಳುತ್ತಿದ್ದ ‘ಪ್ರಸಾದ’ ನಮಗೆ ಸಿಗದಿರಲಿ ಎಂದು ಹಾರೈಸುತ್ತಾ ಅಲ್ಲೇ ದೇವಸ್ಥಾನದ ಹೊರ ಆವರಣದಲ್ಲಿ ಅಡ್ಡಾಡುತ್ತಿದ್ದೆವು ನಾವು. ಸ್ವಲ್ಪ ಹೊತ್ತಿನಲ್ಲಿ ಉಮೇಶ-ಜ್ಯೋತ್ಸಾರ ಆಗಮನವಾಯಿತು, ಮಾತುಕತೆ ಇನ್ನೂ ಜೋರಾಯಿತು. ಉಮೇಶರಿಗೂ ಹೊಟ್ಟೆ ಕೆಟ್ಟು ಹೋಗಿ ಬರುವುದೋ ಇಲ್ಲವೋ ಎಂಬ ಸಂದಿಗ್ಧತೆಯಲ್ಲಿದ್ದರು, ಕೊನೆಗೂ ಸುಧಾರಿಸಿ ಬರುವಂತಾದದ್ದು ನಮಗೆಲ್ಲಾ ಖುಷಿ ಕೊಟ್ಟಿತ್ತು.

ಊಟದ ಸಮಯ ಹತ್ತಿರ ಬಂದಾಗ ಒಂದು ತಮಾಷೆ ನನ್ನನ್ನು ಎದುರುಗೊಂಡಿತ್ತು, ಅನಿರೀಕ್ಷಿತವಾಗಿ. ನನಗೆ ತಿಳಿದಿರಲಿಲ್ಲ, ಪಿ.ಡಿ.ಯ ಸಂಬಂಧಿಕರಿಗೆ ನನ್ನ ವೀಗನಿಸಂನ ಬಗ್ಗೆ ತಿಳಿದಿದೆ ಎಂದು - ಧುತ್ತನೆ ಒಬ್ಬರು ಹಿರಿಯ ಮಹಿಳೆ ನನ್ನ ಬಳಿ ಕೇಳಿದರು "ನೀವೋ ಹಾಲು ಕುಡಿಯದವರು?" ಎಂದು. ನಾನು ಮುಗುಳ್ನಕ್ಕು ಹೌದು ಎಂದೆ. ಅವರು ಮಾತು ಮುಂದುವರಿಸಿ "ಏನಿಲ್ಲಾ, ಹಾಲು ಕುಡಿಯದವರು ಹೇಗಿರುತ್ತಾರೆ ಎಂದು ನೋಡಬೇಕಿತ್ತಷ್ಟೆ" ಎಂದು ಮುಗ್ಧವಾಗಿ ಹೇಳಿದರು, ನನಗೆ ಮನದೊಳಗೇ ನಗು, ಅವರು ಒಬ್ಬ ವಿಚಿತ್ರವಾಗಿ ಕಾಣುವ ಹಿಪ್ಪಿಯನ್ನು ನಿರೀಕ್ಷಿಸುತ್ತಿದ್ದರೇನೋ ಗೊತ್ತಿಲ್ಲ. ಆಮೇಲೆ ಸ್ವಲ್ಪ ಸಮಯದ ಬಳಿಕ ಪಿ.ಡಿ. ಮೆಲ್ಲನೆ ನನ್ನ ಬಳಿ ಹೇಳಿದ "ನಿನ್ನನ್ನು ಇಲ್ಲಿ ಸುಮಾರು ಜನ ಕುತೂಹಲದಿಂದ ನೋಡುತ್ತಿದ್ದಾರೆ ಕಣೋ" ಎಂದು. ನಾನು ನಕ್ಕು ಮುಂದೆ ಸರಿದೆ.

ಅಸೌಖ್ಯದ ನಿಮಿತ್ತ ಉಮೇಶ ನಮ್ಮ ಜೊತೆ ಊಟ ಮಾಡಲಿಲ್ಲ, ಕಾರಿಗೆ ಹೋಗಿ ಮನೆಯಿಂದ ತಂದ ಇಡ್ಲಿಯಲ್ಲೇ ತೃಪ್ತರಾಗಬೇಕಾಯಿತು. ನಾವು ನಾಲ್ಕು ಮಂದಿ ಊಟವನ್ನು ಸವಿದೆವು, ಪ್ರಕಾಶನಿಗೆ ಕೊನೆಗೆ ಸ್ವಲ್ಪ ಕಸಿವಿಸಿಯಾಯಿತು. ನಮ್ಮ ಕಡೆ ಹುಳಿ ಯಾ ಸಾಂಬಾರ್ ಆದ ಮೇಲೆ ಮಜ್ಜಿಗೆ ಹುಳಿ ಯಾ ಕಾಯಿ ಹುಳಿಯನ್ನು ಕೂಡ ಬಡಿಸಲಾಗುತ್ತದೆ, ಪ್ರಕಾಶ ಸಂಭ್ರಮದಿಂದ ಊಟ ಮಾಡುತ್ತಾ ಅದಕ್ಕೆಂದು ಅನ್ನ ಕಾದಿರಿಸಿದ್ದ, ಆದರೆ ಅದು ಬರದೇ ಸೀದಾ ಮಜ್ಜಿಗೆ-ಮೊಸರು ಬಂತು. ಅವನಿಗೆ ಮೊಸರು-ಮಜ್ಜಿಗೆ ಅಷ್ಟಾಗಿ ಆಗದು, ಹೀಗಾಗಿ ಫಜೀತಿ ಪಟ್ಟು ಕೊನೆಗೂ ತಿಂದುಬಿಟ್ಟ, ನನಗೆ ನಗು.

ಜೋಗದತ್ತ ಪಯಣ

ಸ್ವಲ್ಪದರಲ್ಲಿ ಅಶ್ವತ್ಥ ಬಂದ, ಇನ್ನೋವಾ ಕಾರಿನೊಂದಿಗೆ. ನಮ್ಮ ಸ್ವಿಫ಼್ಟ್ ಹಾಗೂ ಅಶ್ವತ್ಥನ ಬಳಿ ಇದ್ದ ಆಲ್ಟೋ, ಇವೆರಡರಲ್ಲಿ ಹೋಗುವುದೋ ಅಥವಾ ಬೇರೊಂದು ದೊಡ್ಡ ಬಾಡಿಗೆ ಕಾರ್ ಮಾಡಿಕೊಂಡು ಹೋಗುವುದೋ ಎಂಬುದರ ಬಗ್ಗೆ ಈ ಮೊದಲು ಜಿಜ್ಞಾಸೆ ನಡೆದಿತ್ತು. ನಮ್ಮದೇ ಕಾರಿನಲ್ಲಿ ಹೋಗುವುದಾದರೆ ಕತ್ತಲಾಗುವ ಮೊದಲೇ ವಾಪಾಸ್ ಬರಬೇಕೆನ್ನುವುದು ನಮ್ಮೆಲ್ಲರ ಅಭಿಮತವಾಗಿತ್ತು. ಅದಕ್ಕಿಂತಲೂ ಮುಖ್ಯವಾದ ವಿಷಯವನ್ನು ಅಶ್ವತ್ಥ ಹೇಳಿದ, ನಮಗೂ ಸರಿ ಎನಿಸಿತು, ಅದೇನೆಂದರೆ ಒಟ್ಟಾರೆ ಜೋಗ ನೋಡುವ ಕಾರ್ಯಕ್ರಮದಲ್ಲಿ ಎರಡು ಘಂಟೆ ಹೋಗಲು, ಎರಡು ಘಂಟೆ ಬರಲು, ಹೀಗೆ ನಾಲ್ಕು ಘಂಟೆಯ ಮೇಲೆ ಪ್ರಯಾಣದಲ್ಲಿಯೇ ಕಳೆದುಹೋಗುತ್ತದೆ, ಎರಡು ಗುಂಪು ಮಾಡಿ ಬೇರೆ ಬೇರೆ ಕಾರಿನಲ್ಲಿ ಹೋಗುವುದರ ಬದಲು ಎಲ್ಲರೂ ಒಟ್ಟಿಗೆ ಒಂದೇ ಕಾರಿನಲ್ಲಿ ಹೋದರೆ ಜೊತೆಯಾಗಿ ಹೆಚ್ಚು ಕಾಲ ಸಿಗುತ್ತದೆ ಎಂದು.

ಗಣಪತಿ ದೇವಸ್ಥಾನದಲ್ಲಿ ಊಟ ಮುಗಿಯುವಾಗ ಸುಮಾರು ಎರಡೂವರೆ ಘಂಟೆಯಾಗಿತ್ತು, ಬೇಗನೆ ಹೊರಡುವ ತಯಾರಿ ಶುರುಮಾಡಿದೆವು. ಜೋಗಕ್ಕೆ ಹೋಗುವಾಗ ಚೂಡಿದಾರ್ ಬಿಟ್ಟು ಜೀನ್ಸ್-ಟೀಶರ್ಟ್-ಸ್ಪೋರ್ಟ್ಸ್ ಶೂ ಧರಿಸಿಕೊಂಡು ಹೋದರೆ ಅನುಕೂಲ ಎಂದು ಸ್ಮಿತಾಳ ಯೋಜನೆಯಾಗಿತ್ತು, (ಈ ಮೊದಲು ಚಪ್ಪಲಿ ಹಾಕಿಕೊಂಡು ಜೋಗದ ಗುಂಡಿಯನ್ನು ಇಳಿದು, ಹತ್ತಿ, ಚಪ್ಪಲಿ ಕಾಲನ್ನು ಕಚ್ಚಿ ಒದ್ದಾಡಿ ಹೋಗಿದ್ದಳು, ಹೀಗಾಗಿ ಈ ಮುಂಜಾಕರೂಕತೆ) ಹೀಗಾಗಿ ವೀಣಕ್ಕನ ಮನೆಗೆ ಹೋಗಿ ದಿರಿಸು ಬದಲಾಯಿಸಿ ಕುಡಿಯುವ ನೀರನ್ನು ಕೂಡ ಇಟ್ಟುಕೊಂಡು ಹೊರಟೆವು ನಾವು. ಒಟ್ಟಾರೆ ಹೊರಡುವಾಗ ೩ ಘಂಟೆಯಾಗಿತ್ತು, ಸಂಜೆಯಾಗುತ್ತಿದ್ದಂತೆ ಮಳೆ ಜೋರಾಗುತ್ತದೆ, ಬೇಗ ಹೊರಡೋಣ ಎಂದು ಡ್ರೈವರ್ ಕೂಡ ಹೇಳಲಾರಂಭಿಸಿದ್ದರು.

ಏ.ಸಿ. ಬೇಕೋ ಬೇಡವೋ? ಮೊದಲಿಗೆ ಏ.ಸಿ. ಬೇಡ ಎಂದು ಹೇಳಿ ಕಾರನ್ನು ಬಾಡಿಗೆಗೆ ಗೊತ್ತುಮಾಡಲಾಗಿತ್ತು, ಕಿಲೋಮೀಟರಿಗೆ ೯ ರೂ.ನಂತೆ. ಆದರೆ ಸ್ಮಿತಾಳಿಗೆ ನಗರ ಪ್ರದೇಶದಲ್ಲಿರುವ ಧೂಳು-ಹೊಗೆ ಇತ್ಯಾದಿಗಳೆಂದರೆ ತುಸು ಜಾಸ್ತಿಯೇ ಕಿರಿಕಿರಿ, ಸ್ವಲ್ಪ ಹೊತ್ತು ಏ.ಸಿ. ಹಾಕೋಣ ಅಂತ ಹೇಳಿದಳು. ಸ್ವಲ್ಪ-ಹೆಚ್ಚು ಅಂತ ಇಲ್ಲ, ಹವಾನಿಯಂತ್ರಣ ವಾಹನವೆಂದು ಪರಿಗಣಿಸಬೇಕಾಗುತ್ತದೆ ಅಂತ ಡ್ರೈವರ್ ಹೇಳಿದರು, ಸರಿಯಪ್ಪಾ ಎಂದು ಒಪ್ಪಿದೆವು, ಅದಕ್ಕೆ ಕಿಲೋಮೀಟರ್‌ಗೆ ೧೦ ರೂ. ಆಲೋಚನೆ ಮಾಡಿದಾಗ ನನಗೂ ಕಂಡಿತು, ನಗರ ಪ್ರದೇಶದ ಹೊರಗೆ ಕೂಡ ಜೋರು ಮಳೆ ಬರುತ್ತಿರುವಾಗ ಕಿಟಕಿ ಗಾಜನ್ನು ಕೆಳ ಸರಿಸಲು ಸಾಧ್ಯವಾಗುವುದಿಲ್ಲ, ಒಟ್ಟಾರೆ ಉಸಿರುಗಟ್ಟಿದ ಅನುಭವವಾಗಬಹುದು ಎಂದು. ಒಟ್ಟಿನಲ್ಲಿ ಏ.ಸಿ. ಇನ್ನೋವಾದಲ್ಲಿ ಶುರುಮಾಡಿದೆವು ನಮ್ಮ ಯಾತ್ರೆಯನ್ನು.

ಶಿವಮೊಗ್ಗದಿಂದ ಜೋಗಕ್ಕೆ ಹೋಗುವ ರಸ್ತೆಗಳು ಸುಸ್ಥಿತಿಯಲ್ಲಿದ್ದವು, ಅದರೊಂದಿಗೇ ಒಳ್ಳೆಯ ಕಾರ್ ಕೂಡ ಇದ್ದಿದ್ದರಿಂದ ಪ್ರಯಾಣ ಸುಗಮವಾಗಿಯೇ ಸಾಗಿತು. ಉಮೇಶ ಇದ್ದರೆ ಸಾಮಾನ್ಯವಾಗಿ ಹರಟೆಗೆ ಒಳ್ಳೆಯ ಕಳೆ ಬರುತ್ತದೆ, ಉಳಿದವರು ನೀರಸ ಎಂದೇನಲ್ಲ. ನಮ್ಮ ಸಂಭಾಷಣೆಗಳು ಸಾಮಾನ್ಯವಾಗಿ ಹಳೆಯ ರಸನಿಮಿಷಗಳನ್ನು ಮೆಲುಕುಹಾಕುವುದು, ದೇಶ-ಭಾಷೆಯ ಸಮಸ್ಯೆಗಳು ಹಾಗೂ ಪರಿಹಾರಗಳ ಚರ್ಚೆ, ವಿದೇಶ-ಸ್ವದೇಶವನ್ನು ವಿವಿಧ ರೀತಿಯಲ್ಲಿ ಹೋಲಿಸಿ/ತೂಗಿ ನೋಡುವುದು, ಪ್ರಸ್ತುತಃ ನಮ್ಮ ಜೀವನದಲ್ಲಿ ಏನೇನು ನಡೆಯುತ್ತಿದೆ ಎಂಬಿತ್ಯಾದಿ ವಿಷಯಗಳ ಸುತ್ತ ಇರುತ್ತದೆ. ಕೆಲವು ಗಂಭೀರವಾದ ಸಂವಾದಗಳು ಬಹಳ ಆರೋಗ್ಯಕರವಾಗಿರುತ್ತವೆ, ನಮ್ಮಲ್ಲಿ ಇತ್ತೀಚಿನ ದಿನಗಳಲ್ಲಿ ಪಕ್ವವಾಗುತ್ತಾ ಬರುತ್ತಿರುವ ಹೊಸ ವಿಚಾರಗಳನ್ನು ಹಂಚಿಕೊಂಡು ಏನಾದರೂ ಕೊರತೆಗಳಿದ್ದರೆ ತಿದ್ದಿಕೊಳ್ಳಲು, ಇತರರಿಗೆ ನಾವು ಕಲಿತ ಪಾಠಗಳನ್ನು ದಾಟಿಸಲು ಒಂದು ಉತ್ತಮ ವೇದಿಕೆಯಾಗಿ ವರ್ತಿಸುತ್ತವೆ. ಪ್ರತಿಸಲ ಭೇಟಿಯಾದಾಗಲೆಲ್ಲಾ ಇಂತಹ ಗೆಳೆಯರು ಇರುವುದು ಎಂಥಾ ಅದೃಷ್ಟ ಎಂದಂದುಕೊಳ್ಳುವುದಿದೆ.

ಮುಂದಿನ ಸಂಚಿಕೆಯಲ್ಲಿ

- ಜೋಗದ ಪರಿಸರದಲ್ಲಿ
- ಅಶ್ವತ್ಥನ ಮನೆ, ಮತ್ತೂರು
- ಮದುವೆ ಮನೆ
- ಆಗುಂಬೆಯತ್ತ ಪಯಣ
- ದೊಡ್ಡ ಮನೆ
- ಜೆನ್ನ ಬಾಯಿ
- ಕುಂದಾದ್ರಿ
- ಹೆಬ್ರಿಯ ಹೋಳಿಗೆ ಭಟ್ರು
- ಮುಕ್ತಾಯ, ಮರಳಿ ಮನೆಯಲ್ಲಿ

0 comments:

Post a Comment