About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Saturday, September 1, 2001

ಭ್ರಮೆ


ಸೆಪ್ಟೆಂಬರ್ ೨೦೦೧,
ಮೈಸೂರು.
ಭ್ರಮೆ
**************

ಕೆಲವು ದಿನಗಳಿಂದ ಆನಂದರಾಯರಿಗೆ ರಾತ್ರಿಯೆಲ್ಲಾ ನಿದ್ದೆ ಬರುತ್ತಿರಲಿಲ್ಲ. ಅವರ ಮನಸ್ಸು ಅಶಾಂತವಾಗಿತ್ತು. ತಮ್ಮ ಜೀವನದಲ್ಲಿ ಬಂದ ಹೊಸ ತಿರುವನ್ನು ಎದುರಿಸಲು ಅವರು ಅಸಮರ್ಥರಾಗಿದ್ದರು. ಇಷ್ಟಕ್ಕೂ ಅವರು ಏನೂ ಗಂಡಾಂತರಕ್ಕೆ ಸಿಕ್ಕಿಹಾಕಿಕೊಂಡಿರಲಿಲ್ಲ. ತಮ್ಮಂತೆಯೇ ಇರುವ ಎಷ್ಟೋ ಜನರಂತೆ ಅವರು ಹೋದ ತಿಂಗಳು ನಿವೃತ್ತಿ ಹೊಂದಿದ್ದರು. ಹೆಸರಾಂತ ಕಂಪೆನಿಯೊಂದರಲ್ಲಿ ಆಡಳಿತ ವಿಭಾಗದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ ಅವರಿಗೆ ಕೈತುಂಬಾ ಸಂಬಳ ಬರುತ್ತಿತ್ತು. ದಕ್ಷ ನೌಕರರಿಗೆ ಅವರು ಕೊಡುವ ಆದ್ಯತೆ ಹಾಗೂ ಶಿಸ್ತುಪಾಲನೆಗೆ ಅವರು ನೀಡುತ್ತಿದ್ದ ಮಹತ್ತ್ವ ಅವರಿಗೆ ಒಂದು ವಿಶಿಷ್ಟವಾದ ಕಳೆಯನ್ನು ನೀಡಿತ್ತು. ಅವರ ಕೈಕೆಳಗೆ ಇದ್ದವರೆಲ್ಲರೂ ಅವರನ್ನು ಗೌರವಿಸುತ್ತಿದ್ದರು, ಹೆದರಿಕೆಯಿಂದಲ್ಲ, ಬದಲಾಗಿ ಅವರ ಕಾರ್ಯವೈಖರಿಯು ಎಂತಹವರಲ್ಲಿಯೂ ಗೌರವ ಹುಟ್ಟಿಸುತ್ತಿತ್ತು. ತಮ್ಮ ಕೆಲಸದಲ್ಲಿ ಅವರು ಅದೆಷ್ಟು ಮುಳುಗಿಹೋಗಿದ್ದರೆಂದರೆ ತಮ್ಮ ನಿವೃತ್ತಿಯ ಸಮಯ ಹತ್ತಿರ ಬಂದಿದ್ದೇ ಅವರಿಗೆ ತಿಳಿಯಲಿಲ್ಲ. ಇನ್ನೇನು ಒಂದು ತಿಂಗಳಿದೆ ಅನ್ನಬೇಕಾದರೆ ಅವರಿಗೆ ಈ ವಿಷಯವು ಗಮನಕ್ಕೆ ಬಂತು. ತಮಗೆ ವಹಿಸಿದ ಕೆಲಸಗಳನ್ನು ನಿಷ್ಠೆಯಿಂದಲೇ ಅದುವರೆಗೆ ಮಾಡುತ್ತಾ, ಅದನ್ನು ಆಸ್ವಾದಿಸುತ್ತಾ ಬಂದಿದ್ದ ರಾಯರಿಗೆ ಕೂಡ ನಿರಂತರ ಕೆಲಸವು ಒಂದು ರೀತಿಯ ಬೇಸರವನ್ನು ತರಿಸಿತ್ತು. ಹೀಗಾಗಿ ಆಗಿನಿಂದಲೇ ಅವರು ನಿವೃತ್ತಿ ಜೀವನದ ಮಧುರಕ್ಷಣಗಳ ಬಗ್ಗೆ ಕನಸು ಕಾಣಲಾರಂಭಿಸಿದರು.

ಕೊನೆಗೂ ಆ ದಿನ ಬಂದೇ ಬಿಟ್ಟಿತು. ಸಹೋದ್ಯೋಗಿಗಳೆಲ್ಲಾ ಸೇರಿ ಸಣ್ಣ ಸಮಾರಂಭವೊಂದನ್ನು ಏರ್ಪಡಿಸಿ ಅವರ ಭಾವೀ ಜೀವನಕ್ಕೆ ಶುಭಹಾರೈಸಿ ಬೇಸರದೊಂದಿಗೆ ಅವರನ್ನು ಬೀಳ್ಕೊಟ್ಟರು. ರಾಯರಿಗೂ ಹೃದಯ ತುಂಬಿಬಂತು. ತಮ್ಮ ಹೊಸ ಜೀವನವನ್ನು ಅವರು ಮೊದಲೇ ಅಂದುಕೊಂಡಿದ್ದಂತೆ ಸಂತೋಷದಿಂದಲೇ ಸ್ವಾಗತಿಸಿದರು. ಮೊದಲ ಎರಡು ಮೂರು ವಾರಗಳನ್ನು ಅವರು ಆರಾಮವಾಗಿಯೇ ಕಳೆದರು. ತಮಗಿಷ್ಟವಾದ ತಿಂಡಿಗಳನ್ನು ತಿಂದುಕೊಂಡು, ಟಿ.ವಿಯಲ್ಲಿ ತಮಗೆ ಬೇಕಾದ ಚ್ಯಾನಲ್‍ಗಳನ್ನು ನೋಡಿಕೊಂಡು, ಕೆಲಸದ ಒತ್ತಡದ ಮಧ್ಯೆ ಓದದೆ ಬಾಕಿಯಾದ ಪುಸ್ತಕಗಳನ್ನು ಓದಿಕೊಂಡು ಕಾಲ ಕಳೆಯುತ್ತಿದ್ದ ಅವರು ಬೇಸರವಾದಾಗಲೆಲ್ಲಾ ಪೇಟೆಗೆ ಹೋಗುತ್ತಿದ್ದರು. ಅಲ್ಲಿ ತಮ್ಮ ಮಿತ್ರರಾರಾದರೂ ಸಿಕ್ಕಿದರೆ ಹರಟೆ ಹೊಡೆಯುತ್ತಾ ಹೊತ್ತು ಹೋಗುವುದೇ ಅವರಿಗೆ ತಿಳಿಯುತ್ತಿರಲಿಲ್ಲ. ಮೊದಲೆಲ್ಲಾ ಈ ತರಹದ ಕಾಡುಹರಟೆಯಿಂದ ದೂರವೇ ಉಳಿಯುತ್ತಿದ್ದ ಅವರು ಅದರಲ್ಲಿರುವ ಆನಂದವನ್ನು ಆಸ್ವಾದಿಸಲಾರಂಭಿಸಿದರು.

ಹೀಗೇ ಒಂದು ದಿನ ಪೇಟೆಗೆ ಹೋದಾಗ ಅವರ ದೃಷ್ಟಿಯು ‘ವೃದ್ಧಾಪ್ಯದ ತೊಂದರೆಗಳು’ ಎಂಬ ಪುಸ್ತಕದ ಮೇಲೆ ಬಿತ್ತು. ಸ್ವಾಭಾವಿಕವಾದ ಕುತೂಹಲದಿಂದ ಆ ಪುಸ್ತಕವನ್ನು ಖರೀದಿಸಿದ ಅವರಿಗೆ ಅದರಿಂದಾಗಿ ತಾನು ಎದುರಿಸಲಿರುವ ಮಾನಸಿಕ ಕಷ್ಟಗಳ ಕಲ್ಪನೆಯೂ ಬರಲಿಲ್ಲ. ವೃದ್ಧಾಪ್ಯದಲ್ಲಿ ಬರುವ ಶಾರೀರಿಕ ಹಾಗೂ ಮಾನಸಿಕ ತೊಂದರೆಗಳ ಕುರಿತು ಬರೆಯಲಾದ ಆ ಪುಸ್ತಕದಲ್ಲಿ ರಾಯರ ಮನಸ್ಸನ್ನು ತಟ್ಟಿದ್ದು ಒಂದೇ ವಿಷಯ. ನಿವೃತ್ತಿ ಹೊಂದಿದವರನ್ನು ಎಷ್ಟೋ ಮನೆಗಳಲ್ಲಿ ಕೀಳಾಗಿ ನೋಡುತ್ತಾರೆಂದು ಅದರಲ್ಲಿ ಬರೆದಿತ್ತು. ನಿಷ್ಪ್ರಯೋಜಕರೆಂದೂ, ಅರಳು-ಮರುಳು ಶುರುವಾದ ಮುದುಕರೆಂದೂ ಮನೆಯವರು ಅಂತಹ ವ್ಯಕ್ತಿಗಳನ್ನು ತಾತ್ಸಾರದಿಂದ ನೋಡುವುದು ಅನೇಕರು ಅನುಭವಿಸುವ ತೊಂದರೆಯೆಂದು ಅದರಲ್ಲಿ ಓದಿದ ರಾಯರು ತಮ್ಮ ಮನೆಯ ವಾತಾವರಣವನ್ನು ಅಂದಿನಿಂದ ಗಮನಿಸತೊಡಗಿದರು. ಮೇಲಿಂದ ಮೇಲೆ ಎಲ್ಲರೂ ತನ್ನೊಡನೆ ಗೌರವದಿಂದ ವರ್ತಿಸುವಂತೆ ಕಂಡರೂ ಒಳಗೊಳಗೇ ಬೇರೇನೋ ಇದೆ ಎಂದು ಅವರ ಮನಸ್ಸು ಹೇಳಲಾರಂಭಿಸಿತು. ಹೆಂಡತಿ ತರಕಾರಿ ತರಲು ಹೇಳಿದಾಗ, ಮಗ ಬ್ಯಾಂಕಿಗೆ ಹೋಗಲು ಹೇಳಿದಾಗ ಅವರ ಮನಸ್ಸು ಮುದುಡುತ್ತಿತ್ತು. ತನ್ನ ಗಂಡ ಆಫೀಸಿನಿಂದ ಬಂದಾಗ ಸೊಸೆ ತಮ್ಮ ಮಾತಿಗೆ ಜಾಸ್ತಿ ಕಿವಿಗೊಡದೆ ಹೋಗುವುದು, ತಾನು ಏನಾದರೂ ವಿಷಯವನ್ನು ಹೇಳುತ್ತಾ ಇದ್ದಾಗ ಅಡುಗೆಯ ನೆಪ ಹೇಳಿ ಹೆಂಡತಿ ಹೋಗುವುದು ಇತ್ಯಾದಿ ಸಣ್ಣ ಸಣ್ಣ ವಿಷಯಗಳು ಅವರನ್ನು ಭೂತಾಕಾರವಾಗಿ ಕಾಡಲಾರಂಭಿಸಿದುವು. ತುಂಬಾ ಸೋಮಾರಿತನವು ಒಳ್ಳೆಯದಲ್ಲವೆಂದು ತಮ್ಮನ್ನು ಮನೆಯವರೆಲ್ಲರೂ ಚಟುವಟಿಕೆಯಿಂದಿರಿಸಲು ಯತ್ನಿಸುತ್ತಾರೆಂಬ ಸತ್ಯವು ಅವರಿಗೆ ಹೊಳೆಯಲೇ ಇಲ್ಲ. ಮೊದಲೆಲ್ಲಾ ತುಂಬಾ ಚುರುಕಾಗಿ ಓಡಾಡುತ್ತಿದ್ದ ಅವರು ಹಾಗಿದ್ದರೇನೇ ಅವರ ಆರೋಗ್ಯಕ್ಕೆ ಒಳ್ಳೆಯದೆಂದು ಅವರೆಲ್ಲರ ಮತವಾಗಿತ್ತು. ಇತ್ತೀಚೆಗೆ ರಾಯರಲ್ಲಿ ಎಂದೂ ಇಲ್ಲದ ಅಸಹನೆ, ಸಿಡುಕುತನಗಳನ್ನು ನೋಡಿ ಅವರೆಲ್ಲರಿಗೂ ಆಶ್ಚರ್ಯವಾಗಿತ್ತು. ನಿವೃತ್ತರಾಗಿ ತುಂಬಾ ದಿನಗಳಾಗಿಲ್ಲವಾದುದರಿಂದ ನಿಧಾನವಾಗಿ ಎಲ್ಲಾ ಸರಿಹೋಗುವುದೆಂದು ಅವರು ಅಂದುಕೊಂಡರು. ರಾಯರ ಮನಸ್ಸನ್ನು ಕೊರೆಯುತ್ತಿದ್ದ ಹುಳು ಅವರ ಕಣ್ಣಿಗಾದರೂ ಹೇಗೆ ಬೀಳಬೇಕು?

ಹೀಗಿರಲು ಒಂದು ದಿನ ರಾಯರು ಸಂತೆಯಲ್ಲಿ ತರಕಾರಿ ಕೊಳ್ಳಲು ಹೋಗಿದ್ದಾಗ ಅವರಿಗೆ ತಮ್ಮ ಬಾಲ್ಯದ ಗೆಳೆಯನಾದ ರವಿಶಂಕರ್ ಸಿಕ್ಕಿದರು. "ಏನೋ ರವಿ! ಹೇಗಿದ್ದೀಯಾ?" ಎಂದು ಸಂಭ್ರಮದಿಂದ ಮಾತಾಡಿಸಿದ ಅವರಿಗೆ ಕಳೆದುಹೋದ ನಿಧಿಯೊಂದು ಸಿಕ್ಕಿದಂತಾಗಿತ್ತು. ಪಕ್ಕದಲ್ಲಿಯೇ ಇದ್ದ ಹೋಟೇಲೊಂದಕ್ಕೆ ನುಗ್ಗಿದ ಅವರು ಅಲ್ಲಿ ಕುಳಿತು ಮಾತಾಡಲಾರಂಭಿಸಿದರು. ಕಾಲೇಜು ವಿಧ್ಯಾಭ್ಯಾಸದವರೆಗೆ ಒಟ್ಟಿಗೇ ಇದ್ದ ಅವರನ್ನು ಬಳಿಕ ಕಾಲಪ್ರವಾಹವು ಬೇರ್ಪಡಿಸಿತ್ತು. ರಾಯರು ಕರ್ನಾಟಕದಲ್ಲಿಯೇ ಉಳಿದುಕೊಂಡರೆ ರವಿಶಂಕರ್ ಗುಜರಾತಿಗೆ ಹೊರಟುಹೋಗಿದ್ದರು. ಸ್ವಲ್ಪ ಸಮಯ ಪತ್ರವ್ಯವಹಾರಗಳು ನಡೆದರೂ ಕೂಡ ಆಮೇಲೆ ಕೆಲಸದ ಒತ್ತಡ, ಸಂಸಾರದ ಮಧ್ಯೆ ಈ ಕೊಂಡಿಯು ಎಲ್ಲೋ ಕಳೆದುಹೋಗಿತ್ತು. ರವಿಶಂಕರ್ ಕೂಡ ಇತ್ತೀಚೆಗೆ ನಿವೃತ್ತರಾಗಿ ಮರಳಿ ಕರ್ನಾಟಕಕ್ಕೆ ಬಂದಿದ್ದರು. ತನ್ನ ದುಃಖವನ್ನು ತೋಡಿಕೊಳ್ಳಲು ಸರಿಯಾದ ವ್ಯಕ್ತಿಯೊಬ್ಬ ಸಿಕ್ಕಿದ ಎಂದುಕೊಂಡ ರಾಯರು ಈ ವಿಷಯವನ್ನು ಪ್ರಸ್ತಾಪಿಸುವ ಮೊದಲೇ ರವಿಶಂಕರ್ ತಮ್ಮ ಕಷ್ಟಗಳನ್ನು ಹೇಳಲಾರಂಭಿಸಿದರು. ಮಧ್ಯಮವರ್ಗದ ತಾನು ಒಳ್ಳೆಯ ಕೆಲಸದಲ್ಲಿದ್ದು ಬೇಕಾದಷ್ಟು ದುಡ್ಡು ಕೂಡಿಹಾಕಿದ್ದರೂ ಕೂಡ ತಮ್ಮನ್ನು ತಮ್ಮ ಸ್ವಂತ ಮನೆಯಲ್ಲಿ ಎಷ್ಟು ಕೀಳಾಗಿ ಕಾಣುತ್ತಿದ್ದಾರೆಂದು ಅವರು ಬೇಸರದಿಂದ ಹೇಳಲು ಶುರುಮಾಡಿದರು. ತಮ್ಮ ಹೆಂಡತಿ ತೀರಿಹೋದ ಮೇಲೆ ಸೊಸೆಯೇ ಎಲ್ಲಾ ಮನೆಕೆಲಸವನ್ನೂ ಮಾಡುತ್ತಿದ್ದಳಾದರೂ ಈಗ ತಾನು ನಿವೃತ್ತಿಹೊಮ್ದಿದ ಮೇಲೆ ಕ್ಲಬ್ಬು, ಪಾರ್ಟಿ ಎಂದು ಗಂಡನ ಜೊತೆಗೆ ಅವಳು ತಿರುಗಾಡಿಕೊಂಡು ಮನೆಕೆಲಸವನ್ನೆಲ್ಲಾ ತನ್ನ ತಲೆಯ ಮೇಲೆ ಹಾಕಿ ಹೋಗುತ್ತಾಳೆಂದು ಅವರು ದುಃಖದಿಂದ ಹೇಳಿದರು. "ಅದರಲ್ಲೂ ಹುಳುಕು ಹುಡುಕಿ ಚುಚ್ಚುಮಾತುಗಳಿಂದ ನನ್ನ ಜೀವನವು ನರಕವಾಗಿದೆ. ನನ್ನ ಮಗನೂ ಏನೂ ಕಡಿಮೆಯಿಲ್ಲ. ‘ಅರವತ್ತರ ಅರಳು ಮರುಳಿನ ಅಪ್ಪನನ್ನು ಸಂಭಾಳಿಸುವುದೇ ಕಷ್ಟ’ ಎಂದು ನಾಚಿಕೆಯಿಲ್ಲದೆ ಹೇಳುವ ಅವನಲ್ಲಿ ಮೊದಲು ಅಂದರೆ ನಾನು ಸಂಪಾದಿಸುವಾಗ ಇದ್ದ ಭಕ್ತಿ, ಗೌರವಗಳೆಲ್ಲಾ ಎಲ್ಲಿ ಹೋದುವೋ ಏನೋ? ಒಟ್ಟಿನಲ್ಲಿ ನಾನು ಈಗ ಮನೆಯಲ್ಲಿ ಒಬ್ಬ ಕೆಲಸದವನಿದ್ದಂತೆ...." ಎಂದು ಹೇಳುತ್ತಾಹೋದ ಮಿತ್ರನ ಬಗ್ಗೆ ರಾಯರಿಗೆ ಅನುಕಂಪ ಉಕ್ಕಿ ಬಂತು. ತಾವು ಹೇಳಬೇಕೆಂದಿದ್ದ ವಿಷಯವು ಅವರ ಗಂಟಲಿನಲ್ಲಿಯೇ ಉಳಿದುಬಿಟ್ಟಿತ್ತು. ಮಿತ್ರನನ್ನು ಸಾಂತ್ವನಗೊಳಿಸಿ ಮನೆಯ ಕಡೆಗೆ ನಡೆಯುತ್ತಿದ್ದಾಗ ಅವರು ತಮ್ಮ ಮಿತ್ರನ ಮಾತುಗಳನ್ನೇ ಮೆಲುಕುಹಾಕುತ್ತಿದ್ದರು. ತಾವು ತಮ್ಮ ಮನೆಯಲ್ಲಿ ಅದೆಷ್ಟು ಸುಖಿ ಎಂದು ಅವರ ಮನಸ್ಸಿಗೆ ಎಷ್ಟೋ ದಿನಗಳ ಮೇಲೆ ಮೊದಲ ಬಾರಿ ತೋರಿತು. ರಾಡಿಯಾಗಿದ್ದ ಮನಸ್ಸು ತಿಳಿಯಾಗಿತ್ತು. ಇಷ್ಟು ದಿನಗಳ ಕಾಲ ತಾವು ಆಲೋಚಿಸುತ್ತಿದ್ದ ಧಾಟಿ ನೆನೆಸಿ ಅವರಿಗೆ ಒಂಥರಾ ನಾಚಿಕೆಯೆನಿಸಿತು. ಹೀಗೆ ಆಲೋಚಿಸುತ್ತಿದ್ದಂತೆ ಮನೆ ಬಂದೇ ಬಿಟ್ಟಿತು. ಇನ್ನೇನು ಕಾಲಿಂಗ್ ಬೆಲ್ ಒತ್ತಬೇಕು ಎನ್ನಬೇಕಾದರೆ ಅವರಿಗೆ ಮನೆಯ ಒಳಗಿನ ಮಾತುಗಳು ಕೇಳಿಸಿದುವು. ಸೊಸೆ ಮಗನ ಬಳಿ ಹೇಳುತ್ತಿದ್ದಳು- "ನಿಮ್ಮ ಆಫೀಸಿಗೆ ಫೋನು ಮಾಡಿದ್ದೆ. ಮಾವನವರು ತರಕಾರಿ ತರಲು ಸಂತೆಗೆ ಹೋಗಿ ತುಂಬಾ ಹೊತ್ತಾಯಿತು. ಇನ್ನೂ ಬರಲಿಲ್ಲ. ಆಫೀಸಿನಿಂದ ಬರುತ್ತಾ ನೋಡಿಕೊಂಡು ಬನ್ನಿ ಎಂದು ಹೇಳಲು ಫೋನ್ ಮಾಡಿದ್ದೆ, ಆದರೆ ನೀವು ಆಗಲೇ ಹೊರಟಾಗಿತ್ತು. ಯಾವುದೋ ಕಾರಣದಿಂದ ಅಲ್ಲಿ ಬಾಕಿಯಾಗಿರುತ್ತಾರೆ, ಈಗಲೇ ನೀವು ಆ ಕಡೆಗೆ ಹೊರಡಿ" ಎಂದು. ಆಗ ಅವನು "ಅಮ್ಮಾ, ಬಂದ ಮೇಲೆ ಕಾಫಿ ಅಪ್ಪನ ಜೊತೆಗೆ ಕುಡಿಯುತ್ತೇನೆ. ವೀಣಾ, ಹೋಗಿಬರುತ್ತೇನೆ" ಎಂದು ಹೇಳಿ ಬಾಗಿಲು ತೆರೆದಾಗ ಅಲ್ಲಿ ರಾಯರನ್ನು ನೋಡಿ "ಅಪ್ಪಾ, ಬಂದಿರಾ? ಏನು ಲೇಟು...." ಎಂದು ಮುಂತಾಗಿ ಕಕ್ಕುಲತೆಯಿಂದ ವಿಚಾರಿಸಿದಾಗ ರಾಯರ ಮನಸ್ಸು ಗರಿಗೆದರಿತು. ಆ ದಿನದ ಬಳಿಕ ರಾಯರಲ್ಲಿದ್ದ ಸಿಡುಕುತನ ಇದ್ದಕ್ಕಿದ್ದ ಹಾಗೆ ಮಾಯವಾದುದರ ರಹಸ್ಯ ಮಾತ್ರ ಮನೆಯವರಿಗೆ ತಿಳಿಯಲೇ ಇಲ್ಲ. ಒಟ್ಟಿನಲ್ಲಿ ಈ ಬದಲಾವಣೆಯು ಎಲ್ಲರಲ್ಲಿಯೂ ಸಮಾಧಾನ ಮೂಡಿಸಿತ್ತು.

ಕೃಷ್ಣ ಶಾಸ್ತ್ರಿ ಸಿ.

0 comments:

Post a Comment