About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Saturday, September 1, 2001

ನಂಬಿಕೆ


ಸೆಪ್ಟೆಂಬರ್ ೨೦೦೧,
ಮೈಸೂರು.
ನಂಬಿಕೆ
************

ಪ್ರಜ್ಞೆ ಬಂದಾಗ ವಾಸುವಿಗೆ ಗೊತ್ತಾಯಿತು ತಾನು ಆಸ್ಪತ್ರೆಯಲ್ಲಿದ್ದೇನೆಂದು. ಕೂಡಲೇ ತಲೆಯ ಹಿಂಭಾಗದ ಅತಿಯಾದ ನೋವು ಅವನ ಮುಂದಿನ ಆಲೋಚನೆಗಳಿಗೆ ತಡೆಯೊಡ್ಡಿತು. ದೂರದಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ಡಾಕ್ಟರನ್ನು ಕರೆಯಲು ಕೈಸನ್ನೆ ಮಾಡಲು ಹೊರಟ ಅವನಿಗೆ ತಿಳಿಯಿತು, ತಾನು ತನ್ನ ದೇಹದ ಒಂದು ಮುಖ್ಯವಾದ ಅಂಗವನ್ನು ಕಳೆದುಕೊಂಡಿರುವೆ ಎಂದು. ಆಘಾತ ತಡೆಯಲಾರದೆ ಅವನಿಗೆ ಪುನಃ ಪ್ರಜ್ಞೆ ತಪ್ಪಿತು.

ಪುನಃ ಎಚ್ಚರವಾದಾಗ ಸುತ್ತಲೂ ತಂದೆತಾಯಿ, ಎಲ್ಲರೂ ಇದ್ದರು. ತನಗೆ ಒದಗಿ ಬಂದ ದುಸ್ಥಿತಿಯನ್ನು ನೆನೆಸಿಕೊಂಡು ಅವನು ತುಂಬಾ ಹೊತ್ತು ಅಳುತ್ತಾ ಕುಳಿತಿದ್ದ. ಸುತ್ತಲೂ ಇದ್ದವರಾದರೂ ಹೇಗೆ ಅವನನ್ನು ಸಮಾಧಾನ ಮಾಡಬಲ್ಲವರಾಗಿದ್ದರು? ಅತ್ತು ಮನಸ್ಸು ಹಗುರ ಮಾಡಿಕೊಳ್ಳಲಿ ಎಂದು ಭಾರವಾದ ಮನಸ್ಸಿನಿಂದ ಸುಮ್ಮನಿದ್ದರು. ಮಗ ಬದುಕಿದ್ದಾನಲ್ಲ ಎಂದು ಕೇಶವಚಂದ್ರ ಮತ್ತವರ ಪತ್ನಿ ಸಮಾಧಾನಪಟ್ಟುಕೊಂಡರು.

ಈ ಘಟನೆಯ ಬಳಿಕ ಅವನು ತೀರಾ ಮೌನಿಯಾಗಿಬಿಟ್ಟ. ಅವನನ್ನು ಈ ಮೌನದ ಸಾಮ್ರಾಜ್ಯದಿಂದ ಹೊರತರಲು ಯಾರಿಗೂ ಸಾಧ್ಯವಾಗಲಿಲ್ಲ. ಆವನಲ್ಲಿ ಆಡಲು ಮಾತುಗಳೇ ಉಳಿದಿರಲಿಲ್ಲ. ತನ್ನ ಆತ್ಮವಿಶ್ವಾಸವನ್ನು ಅವನು ಪೂರ್ತಿಯಾಗಿ ಕಳೆದುಕೊಂಡುಬಿಟ್ಟಿದ್ದ. ಕಳೆದ ಸುಂದರವಾದ ಕ್ಷಣಗಳು ಕೇವಲ ಕನಸಾಗಿ ಅವನಲ್ಲಿ ಉಳಿದಿದ್ದುವು. ತನ್ನ ಸ್ವಂತವಾದ ಕನಸುಗಳು, ತನ್ನ ಬಗ್ಗೆ ತನ್ನ ಹೆತ್ತವರು ಇರಿಸಿಕೊಂಡಿದ್ದ ನಿರೀಕ್ಷೆಗಳನ್ನೆಲ್ಲಾ ತಾನಿನ್ನು ಪೂರೈಸಲಾರೆ ಎಂದು ಅವನು ಪರಿತಪಿಸಿದ. ಬದಲಾಗಿ ತಾನೇ ಅವರನ್ನು ಆವಲಂಬಿಸುವಂತಾಯಿತೇ ಎಂದು ಅವನು ದುಃಖಿಸಿದ. ತನ್ನ ಜೀವನದ ಆ ಕೆಟ್ಟ ದಿನವನ್ನು ನೆನೆಸಿ ನಿಟ್ಟುಸಿರು ಬಿಡುವುದೇ ಅವನ ನಿತ್ಯ ಕಾಯಕವಾಯಿತು.

ಅವನ ಈ ಮೌನದಿಂದ ಅವನ ತಂದೆತಾಯಿ ಮತ್ತಷ್ಟು ಕಂಗಾಲಾದರು. ಅವನಿಗೆ ಆತ್ಮವಿಶ್ವಾಸವನ್ನು ತುಂಬಲು ಕೈಲಾದ ಪ್ರಯತ್ನಗಳೆಲ್ಲವನ್ನೂ ಮಾಡಿನೋಡಿದರು. ಮನೋರೋಗ ತಜ್ಞರನ್ನು ಭೇಟಿ ಮಾಡಿದ್ದೂ ಆಯಿತು. ಆದರೆ ಅವನ ಸ್ಥಿತಿಯಲ್ಲಿ ಯಾವ ಗುರುತರವಾದ ಬದಲಾವಣೆಯೂ ಕಂಡುಬರಲಿಲ್ಲ. ಕೊನೆಗೆ ಎಲ್ಲವನ್ನೂ ವಿಧಿಗೆ ಬಿಟ್ಟುಕೊಟ್ಟು ಅವರು ಸುಮ್ಮನಾದರು.

ಹೀಗಿರಲೊಂದು ದಿನ ಅವನ ತಂದೆ ಈ ವಿಷಯದ ಬಗ್ಗೆ ತಮ್ಮ ಆಪ್ತಮಿತ್ರನಾದ ಮನೋಜ್ ಬಳಿ ಮಾತಾಡುತ್ತಿದ್ದರು. ಎಲ್ಲವನ್ನೂ ಕೇಳಿದ ಅವರು ತಮ್ಮ ಕೈಲಾದ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಅದೇ ಭಾನುವಾರ ಅವರು ಕೇಶವಚಂದ್ರರ ಮನೆಗೆ ಬಂದರು. "ವಾಸೂ ಮನೋಜ್ ಅಂಕಲ್ ಬಂದಿದ್ದಾರೆ ಬಾ ಇಲ್ಲಿ" ಎಂದು  ಕೇಶವಚಂದ್ರರು ಕರೆದಾಗ ನೀರಸವಾದ ಮುಖವನ್ನು ಹೊತ್ತುಕೊಂಡು ವಾಸು ಅಲ್ಲಿಗೆ ಬಂದು ಕುಳಿತ. ಸ್ವಲ್ಪ ಹೊತ್ತು ಅದೂ ಇದೂ ಮಾತನಾಡುತ್ತಾ ಕಾಲಕ್ಷೇಪವಾಯಿತು. ಆಗ ಮನೋಜ್ ಕೇಶವಚಂದ್ರರೊಂದಿಗೆ ಹೇಳಲಾರಂಭಿಸಿದರು- "ಚಂದ್ರ, ಮೊನ್ನೆ ವಾಸುವಿನ ವಿಷಯವಾಗಿ ನಮ್ಮ ಮೆನೇಜರ್ ಬಳಿ ಮಾತಾಡುತ್ತಾ ಇದ್ದೆ. ಆಗ ಅವರು ಹೇಳುತ್ತಾ ಇದ್ದರು ‘ಅಂಗವಿಕಲನಾದ್ರೆ ಏನಾಯ್ತು? ಸಾಧಿಸುವ ಛಲ, ಮನಸ್ಸು, ಧೈರ್ಯ ಇದ್ದಲ್ಲಿ ಏನನ್ನಾದರೂ ಸಾಧಿಸಬಹುದು’ ಎಂದು. ಅದಕ್ಕೆ ನಾನು ಹೇಳಿದೆ ‘ಅದೆಲ್ಲಾ ಬರೀ ಕಥೆ, ಸಿನಿಮಾದಲ್ಲಿ ಮಾತ್ರ. ನಿಜಜೀವನದಲ್ಲಿ ತುಂಬಾ ವಿರಳ’ ಎಂದು. ಅದನ್ನು ಕೇಳಿ ಕೆರಳಿದ ಕೇಶವಚಂದ್ರರು "ಏನೋ ಸ್ನೇಹಿತ ಅಂತ ಉಪಚಾರ ಮಾಡಿದರೆ, ಸ್ವಲ್ಪ ಸಲಿಗೆ ಕೊಟ್ಟರೆ ಹೀಗಾ ಮಾತಾಡುವುದು? ನನ್ನ ಮಗನ ಮೇಲೆ, ಅವನ ಸಾಮರ್ಥ್ಯಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನೀನು ಹೀಗೆ ಅವನ ನೈತಿಕ ಸಾಮರ್ಥ್ಯವನ್ನು ಕುಗ್ಗಿಸುವುದಾದರೆ ಇನ್ನುಮೇಲಿಂದ ಇಲ್ಲಿಗೆ ಬರುವ ಅವಶ್ಯಕತೆಯಿಲ್ಲ." ಎಂದು ಹೇಳಿದರು.ಅದಕ್ಕೆ ಮನೋಜ್ "ಸತ್ಯವನ್ನು ಹೇಳಿದರೆ ಯಾಕೆ ಕೋಪ ಮಾಡಿಕೊಳ್ಳುತ್ತೀಯ ಚಂದ್ರ, ‘ಇದ್ದುದ್ದನ್ನು ಇದ್ದ ಹಾಗೆ ಹೇಳಿದರೆ ಎದೆ ಮೇಲೆ ಒದ್ದಂತೆ’ ಎಂದು ಗಾದೆಯೇ ಇದೆಯಲ್ಲ. ವಾಸು ಈ ಸ್ಥಿತಿಯಲ್ಲಿ ಡಿಗ್ರಿ ಮುಗಿಸುವುದೂ ಸಾಧ್ಯವಿಲ್ಲ. ಇವನನ್ನು ಕಟ್ಟಿಕೊಂಡು ನೀನು ಉದ್ಧಾರವಾದ ಹಾಗೆ" ಎಂದು ಖಾರಾವಾಗಿಯೇ ಹೇಳಿ ಎದ್ದು ಹೊರಟರು. ಇದೆಲ್ಲವನ್ನೂ ಮೌನವಾಗಿ ಗಮನಿಸುತ್ತಿದ್ದ ವಾಸು ಅವರನ್ನು ತಡೆದು "ತಡೆಯಿರಿ ಅಂಕಲ್, ನೀವು ನೀವೇ ಎಲ್ಲಾ ನಿರ್ಧರಿಸಿಬಿಟ್ಟರೆ ಹೇಗೆ? ಈಗ ನನ್ನ ಮಾತು ಕೇಳಿ. ಒಂದು ಕೈ ಹೋದ ಮಾತ್ರಕ್ಕೆ ಪ್ರಪಂಚವೇನೂ ಮುಳುಗಿಹೋಗಲಿಲ್ಲವಲ್ಲ. ನಾನು ತಂದೆ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಹುಸಿಗೊಳಿಸಲಾರೆ. ನೀವೇ ನೋಡುವಿರಂತೆ ನಾನು ಫಸ್ಟ್ ಕ್ಲಾಸಿನಲ್ಲಿ ಡಿಗ್ರಿ ಮುಗಿಸುವುದನ್ನು. ಇದನ್ನು ಒಂದು ಸವಾಲಾಗಿ ನಾನು ತೆಗೆದು ಕೊಳ್ಳುತ್ತೇನೆ. ಆಗದಿದ್ದಲ್ಲಿ ಆಮೇಲೆ ಈ ಮಾತುಗಳನ್ನು ಹೇಳಿಕೊಳ್ಳಿ." ಎಂದನು. ಅವನ ಕಣ್ಣುಗಳಲ್ಲಿ ತುಂಬಿತುಳುಕುವ ಹೊಸ ಆತ್ಮವಿಶ್ವಾಸದ ಬೆಳಕನ್ನು, ತಿರುಗಿ ಬಂದ ಮಾತಿನ ದೃಢತೆಯನ್ನು ಕಂಡು ಕೇಶವಚಂದ್ರರು ಮನದಲ್ಲಿಯೇ ಮಿತ್ರನಿಗೆ ಧನ್ಯವಾದಗಳನ್ನರ್ಪಿಸಿದರು.

ಕೃಷ್ಣ ಶಾಸ್ತ್ರಿ ಸಿ.

0 comments:

Post a Comment