About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Saturday, September 1, 2001

ತುಮುಲ


ಸೆಪ್ಟೆಂಬರ್ ೨೦೦೧,
ಮೈಸೂರು.
ತುಮುಲ
***********

ಮಾನವನು ಸ್ವಭಾವತಃ ಭಾವಜೀವಿ. ತನ್ನ ಜೀವನದಲ್ಲಿ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಹುಡುಕುವಾಗ ಅವನು ತನ್ನ ಬುದ್ಧಿಶಕ್ತಿಯನ್ನುಪಯೋಗಿಸಿದರೂ ಕೂಡ ಅವನ ನಿರ್ಣಯಗಳಲ್ಲಿ ಅವನ ಮನಸ್ಸು ಕೂಡ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಬುದ್ಧಿ-ಮನಸ್ಸು ಇವುಗಳಲ್ಲಿ ಯಾವುದನ್ನು, ಯಾವಾಗ, ಯಾಕೆ ಉಪಯೋಗಿಸಬೇಕೆಂಬ ವಿಷಯದಲ್ಲಿ ಒಂದು ನಿರ್ಣಯಕ್ಕೆ ಬರಲು ಅನೇಕರಿಗೆ ಸಾಧ್ಯವಾಗದಿರುವುದೇ ಈ ಲೋಕದಲ್ಲಿ ನಾವು ಕಾಣುವ ಅನೇಕ ದುಃಖಗಳಿಗೆ ಮೂಲ. ಕೆಲವರು ಈ ಗೊಂದಲದ ಪ್ರವಾಹವನ್ನು ಯಶಸ್ವಿಯಾಗಿ ಈಜಿ ಮುನ್ನಡೆಯುತ್ತಾರೆ, ಇನ್ನು ಕೆಲವರು ಇನ್ನಿಲ್ಲದಂತೆ ಕೊಚ್ಚಿಹೋಗುತ್ತಾರೆ. ಈ ಗೊಂದಲದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡವರಲ್ಲಿ ಅವನೂ ಒಬ್ಬ.

ಅವನು ಬಹಳ ಇಕ್ಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡಿದ್ದನು. ತನ್ನಲ್ಲಿರುವ ದ್ವಂದ್ವದ ಬಗ್ಗೆ ಹಗಲಿರುಳೂ ಚಿಂತಿಸಿ ತಲೆ ಹಣ್ಣು ಮಾಡಿದರೂ ಅವನಿಗೆ ಉತ್ತರ ಸಿಕ್ಕಿರಲಿಲ್ಲ. ಯಾರೊಡನೆಯೂ ಹೇಳಿಕೊಳ್ಳಲಾಗದೆ ಅನುಭವಿಸಲೂ ಆಗದೆ ತೊಳಲಾಡುತ್ತಿದ್ದ ಅವನು ಎಲ್ಲರೊಂದಿಗೆ ನಗುಮುಖದೊಂದಿಗೆ ಇರುತ್ತಿದ್ದನಾದರೂ ಅವನ ಹೆಂಡತಿಗೆ ಅನಿಸಿಬಿಟ್ಟಿತ್ತು ಏನೋ ಚಿಂತೆ ಅವನನ್ನು ಕಾಡುತ್ತಿದೆ ಎಂದು. ಒಂದೆರಡು ಬಾರಿ ಕೇಳಿಯೂ ಇದ್ದಳು. ಆದರೆ ಅವನ ಹಾರಿಕೆಯ ಉತ್ತರ ಅವಳನ್ನು ಸುಮ್ಮನಾಗಿಸಿತ್ತು. ಪ್ರತಿಯೊಬ್ಬರಿಗೂ ಅವರದ್ದೇ ಆದ ಗೋಪ್ಯತೆಗಳಿರುತ್ತವೆ, ಸಮಯ ಬಂದಾಗ ತನ್ನೊಡನೆ ಅದನ್ನು ಹಂಚಿಕೊಳ್ಳಬಹುದು ಎಂದು ಅವಳು ಸಮಾಧಾನ ಪಟ್ಟುಕೊಂಡ್ಡಿದ್ದಳು. ಅವರಿಬ್ಬರೂ ಪರಸ್ಪರ ಇಟ್ಟುಕೊಂಡ್ಡಿದ್ದ ವಿಶ್ವಾಸವನ್ನು ಯಾವತ್ತೂ ಕಳೆದುಕೊಳ್ಳದೆ ಸಾಮರಸ್ಯದಿಂದ ಅರ್ಥಪೂರ್ಣವಾದ ಜೀವನ ನಡೆಸುತ್ತಿದ್ದರು. ಈ ನಂಬುಗೆ ವಿಶ್ವಾಸಗಳು ದಿನಗಳು,ವರ್ಷಗಳು ಕಳೆದಂತೆ ಬಲವಾಗಿದ್ದವೇ ಹೊರತು ಕಡಿಮೆಯಾಗಿರಲಿಲ್ಲ. ಜೀವನದ ಮುಖ್ಯವಾದ ವಿಚಾರಗಳನ್ನು ಅವಳೊಡನೆ ಯಾವಾಗಲೂ ಚರ್ಚಿಸುತ್ತಿದ್ದ ಅವನು ಈಗ ತನ್ನನ್ನು ಪೀಡಿಸುವ ಸಮಸ್ಯೆಯನ್ನು ಬೇರೆ ದಾರಿ ಕಾಣದೆ ಅವಳಿಂದ ಮುಚ್ಚಿಟ್ಟಿದ್ದನು.

ಸಣ್ಣ ಹುಡುಗನಾಗಿರುವಾಗಿಂದಲೇ ಅವನು ಬೇರೆ ಹುಡುಗರಿಗಿಂತ ಭಿನ್ನವಾದ ಅಭಿರುಚಿಗಳನ್ನು ಹೊಂದಿದ್ದನು. ತುಂಬಾ ಕಥೆಪುಸ್ತಕಗಳನ್ನು ಓದುತ್ತಿದ್ದ ಅವನು ಅವುಗಳಲ್ಲಿ ಕಂಡುಬರುವ ಆದರ್ಶಗಳಿಂದ ವಿಶೇಷವಾಗಿ ಪ್ರಭಾವಿತನಾಗುತ್ತಿದ್ದನು. ತಾನೂ ಜೀವನದಲ್ಲಿ ಅವುಗಳನ್ನು ಸಾಧ್ಯವದಷ್ಟೂ ಅಳವಡಿಸಬೇಕೆಂದು ಅವನು ಬಯಸಿದನು. ಈ ಮಾರ್ಗದಲ್ಲಿ ಮುಂದುವರಿದು ಅಪಜಯವನ್ನು ಪಡೆದರೂ ಕೂಡ ತನ್ನ ಕರ್ತವ್ಯವನ್ನು ನೆರವೇರಿಸಿ ಕೃತಾರ್ಥತೆಯನ್ನು ಪಡೆಯುವುದು ಅವನ ಪಾಲಿಗೆ ಜೀವನದ ಬಹುದೊಡ್ಡ ಸಾಧನೆಯಾಗಿತ್ತು. ಹೀಗೆ ಅವನು ತನ್ನದೇ ಆದ ರೀತಿಯಲ್ಲಿ ಜೀವನವನ್ನು ಪ್ರೀತಿಸಲು ಶುರುಮಾಡಿದ್ದ. ತನ್ನ ಆದರ್ಶವಾದಗಳ ಜೊತೆಗೇ ಬೆಳೆದ ಅವನು ಕಾಲೇಜಿನ ಮೆಟ್ಟಿಲು ಹತ್ತುವಷ್ಟರಲ್ಲಿ ತನ್ನ ಆದರ್ಶಗಳ ಮಟ್ಟಿಗಂತೂ ಖಂಡಿತವಾದಿಯಾಗಿಬಿಟ್ಟಿದ್ದ. ಒಂದಿಗೇ ತಾನು ಜೀವನದಲ್ಲಿ ಅತಿಮುಖ್ಯವೆಂದು ಪರಿಗಣಿಸಿದ್ದ ತನ್ನ ಆದರ್ಶಗಳನ್ನು ಇತರರ ಮೇಲೆ ಹೇರಲು ಪ್ರಯತ್ನಿಸಿ ವಿಫಲನಾಗಿ ನಿರಾಶನಾಗುತ್ತಿದ್ದ. ಅವನ ಆಲೋಚನಾ ಶಕ್ತಿ, ಚಿಂತನೆಯ ವ್ಯಾಪ್ತಿ ಬೆಳೆದಂತೆ ಅವನು ಅರ್ಥಮಾಡಿಕೊಂಡ- ‘ಇತರ ಹುಡುಗರ ಮನಸ್ಸು ಬೇರೆಯೇ ಲೋಕದಲ್ಲಿ ವಿಹರಿಸುತ್ತದೆ, ಜೀವನಾದರ್ಶಗಳ ಬಗ್ಗೆ ಚಿಂತೆ ನಡೆಸುವ ಮನಸ್ಥಿತಿ ಅವರಲ್ಲನೇಕರಿಗೆ ಇನ್ನೂ ಬಂದಿಲ್ಲ ಎಂದು.’ ಅಲ್ಲಿಂದ ಮುಂದೆ ಅವನು ತನ್ನ ಆಲೋಚನಾ ಲಹರಿಯನ್ನು ಹರಿಯಬಿಡುತ್ತಿದ್ದುದು ಕೇವಲ ಆಪ್ತಮಿತ್ರರೊಂದಿಗೆ ಮಾತ್ರ. ಓದಿನಲ್ಲಿಯೂ ಮುಂದಿದ್ದ ಅವನು ಒಳ್ಳೆಯ ಮಾರ್ಕುಗಳೊಂದಿಗೆ ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿದ. ಪಿತ್ರಾರ್ಜಿತವಾಗಿ ಬಂದ ಆಸ್ತಿ, ಮನೆ ಎಲ್ಲಾ ಇರುವಾಗ ಹಣದ ಬಗ್ಗೆ ಚಿಂತೆ ಮಾಡಬೇಕಾದ ಪರಿಸ್ಥಿತಿ ಅವನಿಗೆ ಎಂದೂ ಒದಗಿ ಬರಲಿಲ್ಲ. ಆದರೂ ದುಡಿಮೆಯ ಹಿರಿಮೆಯ ಮೇಲೆ ನಂಬಿಕೆಯಿದ್ದ ಆತ ಕೆಲಸಕ್ಕೆ ಸೇರಿದ. ತನ್ನ ಜೊತೆಯೇ ಕೆಲಸ ಮಾಡುತ್ತಿದ್ದ ಸುನಂದ ಅವನಿಗೆ ಎಲ್ಲಾ ರೀತಿಯಲ್ಲಿಯೂ ಇಷ್ಟವಾದಳು. ಧೈರ್ಯದಿಂದಲೇ ಅವಳನ್ನು ಈ ಬಗ್ಗೆ ಕೇಳಿದ ಅವನಿಗೆ ಅವಳ ಸಮ್ಮತಿ ದೊರೆತಾಗ ಸ್ವರ್ಗಕ್ಕೆ ಮೂರೇ ಗೇಣು ಉಳಿದಿತ್ತು. ಒಂದೇ ಜಾತಿಯಾಗಿದ್ದುದರಿಂದ ತಂದೆತಾಯಿಯ ಒಪ್ಪಿಗೆಯೂ ಸುಲಭದಲ್ಲಿ ಸಿಕ್ಕಿಬಿಟ್ಟಿತ್ತು. ಇಬ್ಬರೂ ಹುಡುಗುತನದಿಂದ ವರ್ತಿಸದೆ ಗಂಭೀರವಾಗಿ ಭವಿಷ್ಯದ ಬಗ್ಗೆ ಎಲ್ಲಾ ಕೋನಗಳಿಂದ ಚಿಂತಿಸಿಯೇ ತಮ್ಮ ಮದುವೆಯ ನಿರ್ಧಾರಕ್ಕೆ ಬಂದಿದ್ದರು. ಹೀಗೆ ಬೇಗನೆಯೇ ತಾನು ಮೆಚ್ಚಿದ, ತನ್ನನ್ನು ಮೆಚ್ಚಿದ, ಹಿರಿಯರಿಗೆ ಹಿಡಿಸಿದ ಕನ್ಯೆ ಮನೆ,ಮನ ತುಂಬಿದಳು. ಎರಡು ವರ್ಷಗಳ ಬಳಿಕ ಅವರಿಗೆ ಒಬ್ಬಳು ಮಗಳು ಹುಟ್ಟಿದಳು. ಈ ಹೊಸ ವ್ಯಕ್ತಿಯ ಆಗಮನ ಮನೆಗೆ ಹೊಸ ಹರುಷವನ್ನು ತಂದಿತು. ತಿಂಗಳುಗಳು ನಿಮಿಷಗಳಂತೆ, ವರುಷಗಳು ದಿನಗಳಂತೆ ಕಳೆದುಹೋದವು.

ಹೀಗೆ ಸಂಸಾರ ಸುಖದಲ್ಲಿ ತೇಲಾಡುತ್ತಿದ್ದ ಅವನಿಗೆ ಏತನ್ಮಧ್ಯೆ ತನ್ನ ಆಲೋಚನಾ ಧಾಟಿ ನಿಧಾನವಾಗಿ ಬದಲಾಗುತ್ತಿರುವ ರೀತಿ ಅಚ್ಚರಿ ತರಿಸಿತು. ತಾನು ಇದುವರೆಗೆ ನಂಬಿ, ಗೌರವಿಸಿ ಪಾಲಿಸಿದ ಆದರ್ಶಗಳೆಲ್ಲವೂ ಕೃತ್ರಿಮವೆಂದು ಭಾಸವಾಗತೊಡಗಿತು. ತನ್ನ ಇದುವರೆಗಿನ ಆಲೋಚನೆಗಳಲ್ಲಿ ಎಲ್ಲೋ ಲೋಪವಿದೆಯೆಂದು ಆತನಿಗೆ ಅನಿಸತೊಡಗಿತು. ‘ಆದರ್ಶಗಳ ಪರಿಕಲ್ಪನೆಯು ಮಾನವನು ತನ್ನ ಜೀವನದಲ್ಲಿ ಅಳವಡಿಸಿರುವ ಅನೇಕಾನೇಕ ಹೊಂದಾಣಿಕೆಗಳಲ್ಲೊಂದು ಮಾತ್ರ, ಹಾಗೂ ಈ ಎಲ್ಲವೂ ಮಾನವನ ಸ್ವಾರ್ಥಕ್ಕೆ ಒಂದು ಮುಖವಾಡವನ್ನು ತೊಡಿಸಿವೆ. ಜೀವನದಲ್ಲಿರುವ ಆಸೆಯೂ ಸ್ವಾರ್ಥವೇ ತಾನೆ? ನಿಜವೆನಿಸುತ್ತದೆ. ಹಾಗಾದರೆ ಜೀವನಕ್ಕೆ ಯಾಕಿಷ್ಟು ಪ್ರಾಮುಖ್ಯತೆ? ಅದರಲ್ಲಿ ಅಷ್ಟು ಅಮೂಲ್ಯವಾದುದು ಏನಿದೆ? ಸರಿ-ತಪ್ಪುಗಳ ಪರಿಕಲ್ಪನೆಯು ಹುಟ್ಟಿ ಬೆಳೆದಿರುವುದು ಬರೀ ಮಾನವನ ಜೀವನೋತ್ಸಾಹವೆಂಬ ತಳಹದಿಯ ಮೇಲೆ. ಜೀವನದಲ್ಲಿ ಆಸಕ್ತಿಯಿರುವುದು ಅಥವಾ ಇಲ್ಲದಿರುವುದು ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಬಹುಜನರು ಅದರಲ್ಲಿ ಒಂದನ್ನು ಇಷ್ಟಪಡುವ ಕಾರಣ ಅದಕ್ಕೆ ‘ಸರಿ’ ಎಂಬ ಸ್ಥಾನ ದೊರೆತಿದೆ. ಸತ್ಯವು ಹೀಗಿದ್ದಲ್ಲಿ ಸರಿ-ತಪ್ಪುಗಳೆಂಬ ವಿರೋಧಾಭಾಸಗಳಿಗೆ ಅರ್ಥವೇ ಇಲ್ಲ.’ ಎಂದು ಅವನಿಗೆ ತಿಳಿದಾಗ ಅವನಿಗೆ ಭ್ರಮನಿರಸನವಾಯಿತು. ಜೀವನದ ಸತ್ಯವು ಸರಳ ಹಾಗೂ ಸುಂದರವಾಗಿದೆಯೆಂದು ತಿಳಿದುಕೊಂಡಿದ್ದ ಅವನಿಗೆ ಅದೆಷ್ಟು ಕಟು ಎಂದು ಭಾಸವಾಗತೊಡಗಿತು. ಹೀಗೆ ಅವನ ಮನಸ್ಸು ಜೀವನದ ರಹಸ್ಯಗಳ ಕಡೆಗೆ ತಿರುಗಿತು. ‘ನಾನು ಯಾರು? ಯಾಕೆ ಇಲ್ಲಿದ್ದೇನೆ? ’ ಎಂಬ ಪ್ರಶ್ನೆಗಳು ಅವನನ್ನು ಎಡೆಬಿಡದೆ ಕಾಡತೊಡಗಿದುವು. ತನ್ನ ಆದರ್ಶಗಳ ಸತ್ಯತೆ ಅವನಿಗೆ ತಿಳಿದ ಬಳಿಕ ಜೀವನದಲ್ಲಿ ಅವನ ಆಸಕ್ತಿ ತೀರಾ ಕಡಿಮೆಯಾಯಿತು. ಮೊದಲೆಲ್ಲಾ ಬಲವಂತವಾಗಿ ಕೆಲವು ವಿಷಯಗಳನ್ನು ಮನಸ್ಸಿಗೆ ಹೇರುತ್ತಿದ್ದವನು ಈಗ ಮನಸ್ಸಿಗೆ ಹಾಕಿದ್ದ ಲಗಾಮನ್ನು ಸಂಪೂರ್ಣವಾಗಿ ತೆಗೆದುಹಾಕಿದನು. ಈಗ ಅವನ ಕಣ್ಣಮುಂದೆ ಹೊಸದೊಂದು ಲೋಕವಿತ್ತು. ತನ್ನ ಕಣ್ಣಿನ ಮುಂದಿದ್ದ ಪೊರೆಯೊಂದು ಕಳಚಿಬಿದ್ದಂತೆ ಆತನಿಗೆ ಭಾಸವಾಯಿತು. ಆದರೆ ಅದನ್ನು ಆಸ್ವಾದಿಸುವ ಸ್ಥಿತಿಯಲ್ಲಿ ಅವನಿರಲಿಲ್ಲ, ಬದಲಾಗಿ ಲೋಕದಲ್ಲಿ ಎಲ್ಲಿ ನೋಡಿದರೂ ಯಾರಲ್ಲಿ ನೋಡಿದರೂ ಬೇಸರಪಡುವಂತಹ ಸಂಗತಿಗಳು ಅವನನ್ನು ಕಾಡುತ್ತಿದ್ದುವು. ಮನಸ್ಥಿತಿಗೆ ಒಗ್ಗದ ಅನೇಕ ವಿಷಯಗಳಿಗೆ ಆಶಾವಾದ, ತ್ಯಾಗ ಎಂಬಿತ್ಯಾದಿ ಹೆಸರುಗಳನ್ನು ಕೊಟ್ಟು ಅವುಗಳ ಮೂಲಸ್ವರೂಪವನ್ನು ಮುಚ್ಚಿಹಾಕುವುದು ಆತನಿಗೆ ಎಲ್ಲೆಡೆಯೂ ಕಂಡುಬಂತು. ತನಗೆ ತನ್ನ ಪರಿವಾರದ ಮೇಲೆ ಅತಿಯಾದ ಸ್ನೇಹವಿರುವುದು ಅದೆಷ್ಟು ಸ್ವಾಭಾವಿಕವೋ ಅಷ್ಟೇ ಸ್ವಾಭಾವಿಕವಾದ ವಿಷಯವು ಅದರ ವಿರುದ್ಧವೂ ಕೂಡ ಎಂದು ಅವನಿಗೆ ಕಂಡಾಗ ಅವನಿಗೆ ಬುದ್ಧನ ಬಗ್ಗೆ ಅಸೂಯೆ ಉಂಟಾಯಿತು- ‘ಬುದ್ಧನು ಅದೆಷ್ಟು ಸುಲಭವಾಗಿ ಸಂಸಾರಬಂಧನದಿಂದ ತನ್ನನ್ನು ವಿಮುಕ್ತಿಗೊಳಿಸಿಕೊಂಡ! ತನಗೆ ಆ ಮನಸ್ಥಿತಿ ಬರಲಿಲ್ಲವಲ್ಲಾ’ ಎಂದು ಆತ ಮರುಗಿದ. ಪರಿವಾರವನ್ನು ನಡುದಾರಿಯಲ್ಲಿ ಬಿಟ್ಟು ತನ್ನ ಪಾಡಿಗೆ ತಾನು ಮುಂದುವರಿಯುವುದರಲ್ಲಿ ಅವನಿಗೆ ಯಾವ ತಪ್ಪೂ ಕಂಡುಬರಲಿಲ್ಲವಾದರೂ ಅವನಿಗೆ ಅವರ ಮೇಲಿರುವ ಪ್ರೀತಿ ಕಡಿಮೆಯಾಗಲಿಲ್ಲ. ಯಾಕೆಂದರೆ ಅವನಲ್ಲಿದ್ದ ಆ ಪ್ರೀತಿಯು ನಿಸರ್ಗದತ್ತವಾದುದಾಗಿತ್ತು, ಯಾವುದೇ ಬಾಹ್ಯ ಒತ್ತಡದಿಂದ ಇದ್ದಿದ್ದಲ್ಲ. ಈ ಪ್ರೇಮವು ಬಂಧನವೆಂದು ಮನಸ್ಸಿಗೆ ಕಂಡರೂ ಅದು ಸತ್ಯವೆಂದೂ ಅವನಿಗೆ ಗೊತ್ತು. ಈ ಪ್ರೇಮಿಸುವ ಮನಸ್ಸು ತನ್ನಲ್ಲಿ ಇಲ್ಲದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಮನಸ್ಸಿನ ಒಂದು ಭಾಗ ಆಲೋಚಿಸಿದರೆ, ಇನ್ನೊಂದು ಭಾಗ ಈ ಆಲೋಚನಾಧಾಟಿಯನ್ನು ನೋಡಿ ಬೆದರುತ್ತಿತ್ತು. ಒಂದು ಕಡೆ ಪ್ರೀತಿಯ ಪರಿವಾರ, ಇನ್ನೊಂದೆಡೆ ಬದುಕಿನಿಂದ ತನ್ನನ್ನು ದೂರ ತಳ್ಳುವ ವಿಚಾರಗಳು-ಈ ಎರಡರ ಮಧ್ಯೆ ಸಿಲುಕಿ ಆತ ನರಳಿದ. ತನ್ನ ಈ ಆಲೋಚನೆಗಳ ಮೂಲ ತಿಳಿಯಲು ಆತ ಪ್ರಯತ್ನಿಸಿದನಾದರೂ ಆತನಿಗೆ ಕಂಡಿದ್ದು ಸುಖೀ, ತೃಪ್ತ ಸಂಸಾರ ಮಾತ್ರ. ಎಲ್ಲಿಯೂ ಅವನಿಗೆ ತನ್ನ ನಿರಾಶಾವಾದದ ಮೂಲ ಕಂಡುಬರಲಿಲ್ಲ. ತನ್ನ ಎರಡು ವಿರುದ್ಧವಾದ ಆಲೋಚನೆಗಳಲ್ಲಿ ಯಾವುದೂ ಆತನಿಗೆ ಹುಚ್ಚುತನವೆಂದು ಕಾಣಲಿಲ್ಲ. ಬದಲಾಗಿ ಎರಡರಲ್ಲಿಯೂ ಒಂದೇ ಮಟ್ಟದ ಪ್ರಾಮಾಣಿಕತೆಯ ಸೆಲೆಗಳು ಕಂಡುಬಂದುವು. ತನಗೆ ಆಗುತ್ತಿರುವ ಮಾನಸಿಕ ಕಿರುಕುಳವನ್ನು ತಡೆಯಲಾರದೆ ಕೊನೆಗೆ ಅವನು ಮಾನಸಿಕ ತಜ್ಞರನ್ನೂ ಭೇಟಿ ಮಾಡಿದ. ಸತ್ಯದಿಂದ ದೂರವಾದ ಭ್ರಮೆಗಳನ್ನು ಅವರು ಹೋಗಲಾಡಿಸಬಲ್ಲರು , ಆದರೆ ನ್ಯಾಯಬದ್ಧವಾದ ವಿರೋಧಾಭಾಸಗಳು ಒಬ್ಬನಲ್ಲಿಯೇ ಇದ್ದಲ್ಲಿ ಅವರೂ ನಿಸ್ಸಹಾಯಕರು ಎಂದು ಅವನಿಗೆ ಮನವರಿಕೆಯಾಯಿತು. ಹೀಗೆ ಅಲ್ಲಿಯೂ ನಿರಾಶೆಯೇ ಅವನಿಗೆ ಕಾದಿಟ್ಟ ಬುತ್ತಿಯಾಗಿತ್ತು. ಈಗ ಅವನಿಗೆ ಗೊತ್ತಿದ್ದುದು ಒಂದೇ ವಿಷಯ ‘ಎರಡರಲ್ಲಿ ಯಾವ ದಾರಿ ತುಳಿದರೂ ತನಗೆ ನಿರಾಶೆ, ದುಃಖ ತಪ್ಪಿದ್ದಲ್ಲ’ ಎಂದು. ಒಂದು ದಾರಿಯಲ್ಲಿ ಹೋದರೆ ತನಗಾಗುವ ದುಃಖ ಹೆಚ್ಚು ಸಮಯ ಇರಲಾರದಾದರೂ ತನ್ನನ್ನು ಅತಿಯಾಗಿ ಪ್ರೀತಿಸುವ ಪರಿವಾರಕ್ಕೆ, ತನ್ನನ್ನು ಅರ್ಥಮಾಡಿಕೊಂಡು ತನ್ನನ್ನೇ ಅನೇಕ ವಿಷಯಗಳಲ್ಲಿ ಅವಲಂಬಿಸಿರುವ ಪತ್ನಿಗೆ ಅದು ತಡೆಯಲಾರದ ಆಘಾತವಾಗುವುದು, ಇನ್ನೊಂದು ದಾರಿಯನ್ನು ತುಳಿದರೆ ತಾನು ಮಾನಸಿಕವಾಗಿ ತುಂಬಾ ಹಿಂಸೆಯನ್ನು ಅನುಭವಿಸಬೇಕಾಗಬಹುದು, ಆದರೆ ತನ್ನನ್ನು ಪ್ರೀತಿಸುವವರಿಗೆ ಅದರ ಪರಿಣಾಮ ತಟ್ಟಲಾರದು ಎಂದು ಆತ ವಿಚಾರಮಾಡಿದ.

ಓದುಗರೇ, ಕಥೆಗೆ ಅಂತ್ಯ ಕೊಡುವುದು ನನ್ನ ಹಕ್ಕು ತಾನೆ? ಆದರೆ ಇಲ್ಲಿ ನಾನು ಅದನ್ನು ನನ್ನ ಬಳಿ ಇಟ್ಟುಕೊಳ್ಳದೆ ನಿಮಗೆ ನೀಡುತ್ತಿದ್ದೇನೆ, ಯಾಕೆಂದರೆ ಕ್ಲಿಷ್ಟವಾದ ಈ ವಿಚಾರದಲ್ಲಿ ಅಂತ್ಯವು ಎಲ್ಲರಿಗೂ ಸಮಾಧಾನಕರವಾಗಿರಬೇಕೆಂಬುದೇ ನನ್ನ ಆಶಯ.

ಕೃಷ್ಣ ಶಾಸ್ತ್ರಿ ಸಿ.

0 comments:

Post a Comment