About Me

My Photo
ಕೃಷ್ಣ ಶಾಸ್ತ್ರಿ - Krishna Shastry
ಪ್ರಾಣಿ ಹಕ್ಕುಗಳು, ಶುದ್ಧ ಸಸ್ಯಾಹಾರ, ಪರಿಸರ, ಆರೋಗ್ಯ ಇವೆಲ್ಲವನ್ನೂ ಒಳಗೊಂಡ ವೀಗನಿಸಂ ಎಂಬ ತತ್ವದಲ್ಲಿ ನಂಬಿಕೆ ಇಟ್ಟಿರುವ ಒಬ್ಬ ಸರಳ ಕನ್ನಡಿಗ ನಾನು.
ನನ್ನ ಇತರ ಆಸಕ್ತಿಗಳೆಂದರೆ ನೀತಿಶಾಸ್ತ್ರ, ಸಾರ್ವಜನಿಕ ನೀತಿಸಂಹಿತೆಗಳು, ಸಾರ್ವಜನಿಕ ಆರೋಗ್ಯ, ಆವಿಷ್ಕಾರಗಳು, ವಿಜ್ಞಾನ, ಕನ್ನಡ ಭಾಷೆ, ಭಾಷಾನೀತಿಗಳು ಇತ್ಯಾದಿ.

I am a simple Kannadiga following veganism, that cares about animal rights, pure vegetarianism, environment and health.
My other interest include ethics, public healthcare, public policies, innovation, science & technology, Kannada language and linguistic policies.
View my complete profile

Total Pageviews

Saturday, September 1, 2001

ಕೊಲೆ


ಸೆಪ್ಟೆಂಬರ್ ೨೦೦೧,
ಮೈಸೂರು.
ಕೊಲೆ
**************
ಅಂದು ಸುಜಾತಳ ಆತ್ಮೀಯ ಗೆಳತಿಯರಲ್ಲಿ ಒಬ್ಬಳಾದ ಮೀರಾಳ ಮದುವೆ. ಆದರೆ ಸಮಾರಂಭದಲ್ಲಿದ್ದ ಸುಜಾತಳ ಮನಸ್ಸು ಆ ಕಡೆಗೆ ಗಮನವನ್ನೇ ಕೊಟ್ಟಿರಲಿಲ್ಲ. ಅವಳು ಮುಂದೆ ನಡೆಯಲಿರುವುದರ ಬಗ್ಗೆಯೇ ಯೋಚಿಸುತ್ತಿದ್ದಳು. ತನ್ನ ಗಂಡನು ಮನೆಯಲ್ಲಿ ಸತ್ತುಬಿದ್ದಿರುವನೆಂಬ ಆಲೋಚನೆಯೇ ಅವಳನ್ನು ಮುದಗೊಳಿಸಿತ್ತು. ತನ್ನ ಸಂಚು ಯಶಸ್ವಿಯಾಗುವುದೆಂದು ಅವಳು ಖಚಿತವಾಗಿ ನಂಬಿದ್ದರೂ ಕೂಡ ಮನಸ್ಸಿನ ಮೂಲೆಯಲ್ಲಿ ಸ್ವಲ್ಪ ಭಯವಿಲ್ಲದೇ ಇರಲಿಲ್ಲ. ಇಷ್ಟಕ್ಕೂ ಸಂಚು ಬಯಲಾದಲ್ಲಿ ತನ್ನ ಮೇಲೆ ಯಾವುದೇ ರೀತಿಯ ಅನುಮಾನ ಬರುವ ಸಾಧ್ಯತೆಗಳಿಲ್ಲದಂತೆ ವ್ಯವಸ್ಥಿತವಾಗಿ ಅವಳು ಬಲೆಯನ್ನು ಹೆಣೆದಿದ್ದಳು. ಇನ್ನು ಅವನ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ ತನಗೇ ಸೇರಿದ್ದು ಎನ್ನುವ ವಿಚಾರ ಅವಳಿಗೆ ಖುಶಿ ಕೊಟ್ಟಿತ್ತು. ಅದನ್ನು ಇನ್ನೂ ಅವಳಿಗೆ ಅರಗಿಸಿಕೊಳ್ಳಲಾಗಲಿಲ್ಲ.

ತಾನು ಮತ್ತು ಶ್ರೀ ರೂಪಿಸಿದ ಕೊಲೆ ಸಂಚನ್ನು ಪುನಃ ನೆನೆಸಿಕೊಂಡು ಸುಜಾತ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಳು.  ಇನ್ನುಳಿದ ಕೆಲಸವೆಂದರೆ ಮದುವೆ ಮುಗಿಸಿಕೊಂಡು ಸೌಮ್ಯಳನ್ನು ಕರೆದುಕೊಂಡು ಮನೆಗೆ ಹೋಗುವುದು, ಮನೆಯಲ್ಲಿ ಗಂಡನು ಜೀವದೊಂದಿಗೆ ಇಲ್ಲದಿರುವುದನ್ನು ನೋಡಿ ದಿಗ್ಭ್ರಾಂತಳಾಗಿ ಗೋಳಾಡುವುದು. ಗೆಳತಿಯೂ ಜೊತೆಯಲ್ಲಿರುವುದರಿಂದ ಈ ನಾಟಕಕ್ಕೆ ನೈಜತೆಯ ರೂಪ ಸಿಗುತ್ತದೆ. ಆಮೇಲೆ ತಾಳ್ಮೆಯಿಂದ ಕಾದು ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಶ್ರೀಯ ಜೊತೆಗೆ ಮದುವೆಯಾಗಿ ಹಾಯಾಗಿರುವುದು. ಈ ಆಲೋಚನೆಗಳೊಂದಿಗೇ ಅವಳ ಮನಸ್ಸಿನಲ್ಲಿ ಗಂಡನ ಬಗ್ಗೆ ಅನುಕಂಪದ ಒಂದು ಅಲೆ ಎದ್ದಿತು. ಎಷ್ಟಾದರೂ ಹೆಣ್ಣು ಹೃದಯ! ಅದಲ್ಲದೆ ಅವನದ್ದು ತಪ್ಪೇನೂ ಇರಲಿಲ್ಲ, ಇದ್ದರೆ ಒಂದೇ-ಅವಳನ್ನು ಮದುವೆಯಾದದ್ದು. ಗಂಡನ ಬಗ್ಗೆ ಸುಜಾತಳಿಗೆ ಕೋಪವೇನೂ ಇರಲಿಲ್ಲ. ಆದರೆ ಅವನಿಗಿಂತ ಅವಳಿಗೆ ಶ್ರೀಯ ಪ್ರೀತಿಯೇ ಹೆಚ್ಚಾಯಿತು. ಅವಳಿಗರಿವಿಲ್ಲದಂತೆಯೇ ಅವಳು ಶ್ರೀಯನ್ನು ಬಹಳ ಹಚ್ಚಿಕೊಂಡಿದ್ದಳು. ಶ್ರೀ ಕೂಡ ಅವಳನ್ನು ಮತ್ತು ಅವಳ ಗಂಡನ ದುಡ್ಡನ್ನು ಪ್ರೀತಿಸುತ್ತಿದ್ದ. ಸುಜಾತಳಿಗೆ ಅಷ್ಟೇ ಸಾಕಾಗಿತ್ತು, ಮನಸ್ಸನ್ನು ಅಷ್ಟು ಕ್ರೂರವಾಗಿಸಲು. ಶ್ರೀಗೂ ಅವಳಿಗೂ ಪರಿಚಯವಿರುವುದೇ ಯಾರಿಗೂ ಗೊತ್ತಿಲ್ಲದಿರುವುದರಿಂದ ಅವಳು ಈ ಸಾಹಸಕ್ಕೆ ಕೈ ಹಾಕಿದ್ದಳು. ಮನೆಯ ನಕಲಿ ಕೀಯನ್ನು ಮೊದಲೇ ಶ್ರೀಗೆ ಕೊಟ್ಟು ಗೆಳತಿಯ ಮದುವೆಗೆ ಎರಡು ದಿನ ಮೊದಲೇ ಅವಳು ಹೊರಟು ಹೋಗಿದ್ದಳು. ಮದುವೆಯ ಮೊದಲಿನ ದಿನ ರಾತ್ರಿ ಅವಳ ಗಂಡ ಮನೆಗೆ ತಲಪುವ ಮೊದಲೇ ಶ್ರೀ ನಕಲಿ ಕೀಯ ಸಹಾಯದಿಂದ ಮನೆಯೊಳಗೆ ಹೋಗಿ ಅಡುಗೆಮನೆಯಲಿದ್ದ ಹಾಲಿನಲ್ಲಿ ವಿಷ ಹಾಕಿ ಬರುವುದೆಂದು ಶ್ರೀ ಮತ್ತು ಸುಜಾತ ಸಂಚು ಹೂಡಿದ್ದರು. ರಾತ್ರಿ ಮಲಗುವ ಮುನ್ನ ತನ್ನ ಗಂಡ ಹಾಲು ಕುಡಿದೇ ಕುಡಿಯುತ್ತಾನೆ ಎಂದು ಸುಜಾತಳಿಗೆ ತಿಳಿದಿತ್ತು. ಹೀಗಿರುವಾಗ ಪೋಲೀಸರಿಗೆ ತನ್ನ ಮೇಲೆ ಅನುಮಾನ ಪಡಲು ಯಾವುದೇ ಆಧಾರಗಳಿರುವುದಿಲ್ಲವೆಂದು ಅವಳು ನಂಬಿದ್ದಳು. ತನ್ನ ಫ್ಯಾಕ್ಟರಿಯಲ್ಲಿನ ಕೆಲವು ತಾಪತ್ರಯಗಳಿಂದಾಗಿ ಇತ್ತೀಚೆಗೆ ಅವಳ ಗಂಡನ ವರ್ತನೆಯು ತುಂಬಾ ಬದಲಾಗಿತ್ತು, ಹೀಗಾಗಿ ಅವನು ಇದನ್ನೆಲ್ಲಾ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡ ಎಂದು ಪೋಲೀಸರು ಭಾವಿಸಬಹುದೆಂದು ಅವಳು ಅಂದುಕೊಂಡಿದ್ದಳು.

ಈ ಆಲೋಚನೆಗಳಲ್ಲಿ ಮುಳುಗಿದ ಅವಳಿಗೆ ಹೊತ್ತು ಸರಿದದ್ದೇ ತಿಳಿಯಲಿಲ್ಲ. ಅಂತೂ ಸಂಜೆಯಾದಾಗ ಸುಜಾತ ವಧೂವರರಿಗೆ ಶುಭ ಕೋರಿ ಸೌಮ್ಯಳನ್ನು ಕರೆದುಕೊಂಡು ಮನೆಯ ಕಡೆಗೆ ಹೊರಟಳು. ತನ್ನ ಹೊಸ ಮನೆಗೆ ಇದುವರೆಗೂ ಸೌಮ್ಯ ಬರದೇ ಇದ್ದುದನ್ನು ಕಾರಣವಾಗಿಟ್ಟುಕೊಂಡು ಸುಜಾತ ಅವಳನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದಿದ್ದಳು. ಪಾಪ! ಸೌಮ್ಯಳಿಗೇನು ಗೊತ್ತು, ತಾನು ಸುಜಾತಳ ನಾಟಕದಲ್ಲಿ ಒಂದು ಪಾತ್ರ ವಹಿಸಲು ಹೋಗುತ್ತಿದ್ದೇನೆಂದು? ಅಂತೂ ಅವರು ಮನೆಗೆ ತಲುಪಿದರು. ಅಲ್ಲಿ ಸುಜಾತ ಕಂಡಿದ್ದೇನು? ಅವಳ ಎಣಿಕೆ ಸುಳ್ಳಾಗಲಿಲ್ಲ. ಬೆಡ್‍ರೂಮಿನಲ್ಲಿ ಗಂಡ ಸತ್ತುಬಿದ್ದಿದ್ದ. ನಿದ್ರೆಯಲ್ಲಿಯೇ ಜೀವ ಹೋಗಿದ್ದುದರಿಂದ ನರಳಾಡಿದ ಚಿಹ್ನೆಗಳೇನೂ ಇರಲಿಲ್ಲ. ಸರಿ, ನಾಟಕದ ಮುಂದಿನ ಅಂಕವನ್ನು ಸುಜಾತ ಶುರುಮಾಡಿದಳು. ಬೆಡ್‍ರೂಮಿನಿಂದ ಸುಜಾತ ಗಟ್ಟಿಯಾಗಿ ಚೀರಿದ್ದನ್ನು ಕೇಳಿದ ಸೌಮ್ಯ ಒಳಗೆ ಹೋಗಿ ನೋಡಿದಾಗ ಅವಳಿಗೂ ಆಘಾತವಾಗುತ್ತದೆ. ತನ್ನ ಗೆಳತಿಯ ಮನಸ್ಥಿತಿಯನ್ನು ಊಹಿಸಿ ತನ್ನಿಂದಾದಷ್ಟು ಸಮಾಧಾನ ಮಾಡಲು ಅವಳು ಯತ್ನಿಸಿದಳು. ಸುಜಾತ ತನ್ನ ಗೆಳತಿಯನ್ನು ನಂಬಿಸುವುದರಲ್ಲಿ ಸಂಪೂರ್ಣವಾಗಿ ಯಶಸ್ವಿಯಾದಳು. ಬಳಿಕ ಪೋಲೀಸರು ಬಂದಾಗ ಸೌಮ್ಯಳ ಸಾಕ್ಷಿ ಕೂಡ ಮುಖ್ಯಪಾತ್ರ ವಹಿಸಿತು. ತನ್ನ ಉಪಾಯದಂತೆಯೇ ಎಲ್ಲವೂ ಸುಸೂತ್ರವಾಗಿ ನಡೆಯುವುದನ್ನು ನೋಡಿ ಸುಜಾತ ಒಳಗೊಳಗೇ ಸಂತೋಷದಿಂದಿದ್ದಳು. ಮುಂದೆ ಅವಳ ಎಣಿಕೆಯಂತೆ ಶ್ರೀಯ ಜೊತೆಗೆ ಮದುವೆಯೂ ಆಯಿತು.

ಏನು? ಸುಜಾತ ಸಿಕ್ಕಿಬೀಳುತ್ತಾಳೆ, ಅಥವಾ ಇನ್ನಾವುದಾದರೂ ರೀತಿಯಲ್ಲಿ ಅವಳಿಗೆ ತಕ್ಕ ಶಿಕ್ಷೆ ಆಗುವುದೆಂದು ನೀವು ಕಾಯುತ್ತಿದ್ದೀರಾ? ಇಲ್ಲ. ಇದು ಕಲಿಯುಗ ಮಾರಾಯ್ರೇ! ಕೆಟ್ಟವರದ್ದೇ ಕಾಲ. ‘ಇದೇನು  ತಪ್ಪುಗಳ ಸಮರ್ಥನೆ’ ಎಂದು ನೀವು ಅಂದುಕೊಂಡಿರಾ? ಇದು ಬರೀ ಕಥೆ ತಾನೇ, ಹೋಗಲಿಬಿಡಿ.

ಕೃಷ್ಣ ಶಾಸ್ತ್ರಿ ಸಿ.

0 comments:

Post a Comment